Tag: ಎಸ್ ಟಿ ಸೋಮಶೇಖರ್

  • ಮಂತ್ರಿಮಂಡಲ ವಿಸ್ತರಣೆ ಬಗ್ಗೆ ಮಾತಾಡಿದ್ರೆ ನನ್ನ ಮಂತ್ರಿ ಸ್ಥಾನವೂ ಹೋಗುತ್ತೆ: ಸೋಮಶೇಖರ್

    ಮಂತ್ರಿಮಂಡಲ ವಿಸ್ತರಣೆ ಬಗ್ಗೆ ಮಾತಾಡಿದ್ರೆ ನನ್ನ ಮಂತ್ರಿ ಸ್ಥಾನವೂ ಹೋಗುತ್ತೆ: ಸೋಮಶೇಖರ್

    ಮೈಸೂರು: ಮಾಧ್ಯಮದವರ ಮಾತು ಕೇಳಿ ಮಂತ್ರಿಮಂಡಲ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರೆ ನನ್ನ ಮಂತ್ರಿ ಸ್ಥಾನವೂ ಹೋಗುತ್ತೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡೋಕೆ ನನಗೆ ಅಧಿಕಾರ ಇಲ್ಲ. ಮಾಧ್ಯಮದವರು ಅಧಿಕಾರ ಕೊಡಿಸಿದರೆ ಮಾತನಾಡಬಹುದು. ನನಗೆ ಎಷ್ಟು ಅಧಿಕಾರ ಇದೆ ಅಷ್ಟಕ್ಕೆ ಮಾತ್ರ ಉತ್ತರಿಸುತ್ತೇನೆ. ಪದೇ ಪದೆ ಮಂತ್ರಿಮಂಡಲ ವಿಸ್ತರಣೆಯ ಪ್ರಶ್ನೆ ಕೇಳಿಬೇಡಿ. ಅದಕ್ಕೆ ನಾನು ಉತ್ತರ ಕೊಟ್ಟರೆ ಇರೋ ಮಂತ್ರಿ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

    ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಗೆಲ್ಲುತ್ತಾರೆ. ಮುಂಚೆ ಒಂದು ಜಮಾನ ಇತ್ತು. ಕಡಿಮೆ ಮತದಾನವಾದರೆ ಇನ್ನೊಂದು ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಎನ್ನಲಾಗುತ್ತಿತ್ತು. ಆದರೆ ಕೊರೊನಾ ನಡುವೆ ಆರ್‍ಆರ್ ನಗರದಲ್ಲಿ ಉತ್ತಮ ಮತ ಚಲಾವಣೆ ಆಗಿದೆ. ವಿದ್ಯಾವಂತರು ಬಂದು ಮತ ಹಾಕಿದ್ದಾರೆ. ಹೀಗಾಗಿ ನಮ್ಮ ಅಭ್ಯರ್ಥಿ ಆರ್‍ಆರ್ ನಗರ ಕ್ಷೇತ್ರದಲ್ಲಿ ಗೆಲ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

    ಶಿರಾ ಉಪ ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಸೋಲು ಒಪ್ಪಿಕೊಂಡಿದ್ದಾರೆ. ಇವಿಎಂ ಮೇಲೆ ಅವರು ಮಾಡಿರೋ ಆರೋಪ ಸೋಲು ಮತ್ತು ಹತಾಶೆಯ ಸಂಕೇತ. ಫಲಿತಾಂಶ ಬಂದ ಮೇಲೆ ಕಾರಣ ಕೊಡುವುದಕ್ಕಿಂತ, ಟಿ.ಬಿ.ಜಯಚಂದ್ರ ಮುಂಚೆಯೇ ಕಾರಣ ಹುಡುಕಿಕೊಂಡಿದ್ದಾರೆ ಎಂದು ಹರಿಹಾಯ್ದರು.

  • ನಮ್ಮ ಬಗ್ಗೆ ಮಾತಾಡಿದವರಿಗೆ ಪ್ರಮೋಷನ್ ಸಿಗಲಿ: ಡಿಕೆಶಿ

    ನಮ್ಮ ಬಗ್ಗೆ ಮಾತಾಡಿದವರಿಗೆ ಪ್ರಮೋಷನ್ ಸಿಗಲಿ: ಡಿಕೆಶಿ

    ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ನನ್ನ ಬಗ್ಗೆ ಮಾತನಾಡಿದವರಿಗೆ ಬೇಗ ಒಳ್ಳೆಯ ಪ್ರಮೋಷನ್ ಸಿಗಲಿ ಎಂದು ಹೇಳುವ ಮೂಲಕ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

    ಇಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಬಹಳ ಸಂತೋಷ, ಇಷ್ಟು ಬೇಗ ಸಂತೋಷವಾದ ಸುದ್ದಿ ಹೇಳಿದ್ದಾರೆ. ನನ್ನ ಹಾಗೂ ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದರೆ ಮಾಧ್ಯಮದಲ್ಲಿ ಬೆಲೆ ಇದೆ. ನಮ್ಮ ಬಗ್ಗೆ ಮಾತಾಡಿದರೆ ಅವರಿಗೆ ಪ್ರಮೋಷನ್ ಸಿಗುತ್ತೆ ಮತ್ತು ಪಕ್ಷದಲ್ಲಿ ಒಳ್ಳೆಯ ಸ್ಥಾನಮಾನ ಸಿಗುತ್ತದೆ. ಸೋಮಶೇಖರ್, ಸಾಮ್ರಾಟ್ ಅಶೋಕ್, ಸಿ ಟಿ ರವಿ, ಸರ್ವಿಸ್ ಪ್ರವೈಡರ್ ಆಶ್ವಥ್ ಎಲ್ಲ ಮಾತನಾಡ್ತಾ ಇದಾರಲ್ಲ. ಮಾತನಾಡಲಿ ಏನೇನಿದೆಯೋ ಹುಡುಕಾಡಲಿ ಎಂದು ಬಿಜೆಪಿ ನಾಯಕರ ವಿರುದ್ಧ ಮಾತಿನ ಚಾಟಿ ಬೀಸಿದರು.

    ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಈಗ ಅಪ್ರಸ್ತುತವಾಗಿದ್ದು, ನಾವೆಲ್ಲ ಶಾಸಕಾಂಗ ಪಕ್ಷದ ನಾಯಕರ ಜೊತೆ ಇದ್ದೇವೆ. ಮುಂದಿನ ಚುನಾವಣೆಯಲ್ಲಿ ಬಹುಮತ ಬರಲಿ, ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಲಿ. ಆ ವೇಳೆ ಹೈಕಮಾಂಡ್ ಸಿಎಂ ಯಾರೆಂದು ನಿರ್ಧರಿಸುತ್ತದೆ. ಕೋಳಿವಾಡ ಶಿಸ್ತುಪಾಲನೆ ಬಗ್ಗೆ ಹೇಳಿದ್ದಾರೆ. ನಾನು ಕೊಟ್ಟ ಜವಬ್ದಾರಿಯನ್ನ ಅವರು ನಿರ್ವಹಿಸುತ್ತಿದ್ದಾರೆ. ನಾನು ಸೇರಿದಂತೆ ಎಲ್ಲರೂ ಸಿದ್ದರಾಮಯ್ಯ ಜೊತೆ ಇದ್ದೇವೆ. ಅವರು ನಮ್ಮ ಶಾಸಕಾಂಗ ಪಕ್ಷದ ನಾಯಕರು ಎಂದು ಹೇಳಿ ಬಿಜೆಪಿ ನಾಯಕರ ಆರೋಪಗಳಿಗೆ ತಿರುಗೇಟು ನೀಡಿದರು.

    ಎಸ್.ಟಿ.ಸೋಮಶೇಖರ್ ಹೇಳಿದ್ದೇನು?: ಆರ್.ಆರ್. ನಗರ ಉಪ ಚುನಾವಣೆಯಲ್ಲಿ ಮುನಿರತ್ನ ಅವರನ್ನು ಸೋಲಿಸಲು ಸಾಧ್ಯವೇ ಇಲ್ಲ. ಡಿ.ಕೆ.ಶಿವಕುಮಾರ್ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಡಿಕೆಶಿ ಮಾತಿಗೆ ಸಿದ್ದರಾಮಯ್ಯ ಅವರೇ ಬೆಲೆ ಕೊಡುವುದಿಲ್ಲ. ನಾವು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದೇವು. ನಮ್ಮನ್ನು ಪಕ್ಷ ಬಿಡಿಸಿದವರು ಯಾರು? ಶೇ.99 ರಷ್ಟು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಿದ್ದು, ಹೊರಗಡೆಯಿಂದ ಕರೆದುಕೊಂಡು ಬಂದು ಚುನಾವಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

  • ಮೈಸೂರಿನ ಪ್ರವಾಸಿ ತಾಣಗಳು ಓಪನ್: ಎಸ್.ಟಿ ಸೋಮಶೇಖರ್

    ಮೈಸೂರಿನ ಪ್ರವಾಸಿ ತಾಣಗಳು ಓಪನ್: ಎಸ್.ಟಿ ಸೋಮಶೇಖರ್

    ಮೈಸೂರು: ಪ್ರವಾಸಿ ತಾಣಗಳು ಇಂದಿನಿಂದ ಓಪನ್ ಮಾಡುವಂತೆ ಸಚಿವ ಎಸ್ ಟಿ ಸೋಮಶೇಖರ್ ಘೋಷಣೆ ಮಾಡಿದ್ದಾರೆ.

    ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆದೇಶದ ಮೇರೆಗೆ ತೆರೆಯುವಂತೆ ಸಚಿವರು ಘೋಷಿಸಿದ್ದಾರೆ.

    ಚಾಮುಂಡಿ ಬೆಟ್ಟ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ ಅರಮನೆ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ನವೆಂಬರ್ 1 ರವೆಗೂ ಮೈಸೂರು ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮೈಸೂರಿನ ಹಲವು ಸಂಘ ಸಂಸ್ಥೆಗಳು ಈ ಬಗ್ಗೆ ಸಿಎಂಗೆ ಮನವಿ ಮಾಡಿಕೊಂಡವು. ಈ ಮನವಿಗೆ ಸಿಎಂ ಸ್ಪಂದಿಸಿದ್ದು, ಸದ್ಯ ಎಲ್ಲಾ ಪ್ರವಾಸಿತಾಣಗಳು ಪ್ರವಾಸಿಗರಿಗೆ ಮುಕ್ತವಾಗಲಿದೆ.

    ವಿಶ್ವವಿಖ್ಯಾತ ಮೈಸೂರು ದಸರಾಗೆ ಜಯದೇವ ಆಸ್ಪತ್ರೆ ನಿರ್ದೇಶಕ, ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಚಾಲನೆ ನೀಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ 410ನೇ ಮೈಸೂರು ದಸರಾ ಉದ್ಘಾಟನೆ ನೆರವೇರಿದೆ. ಈ ಬಾರಿ ಕೊರೊನಾ ವಾರಿಯರ್ಸ್‍ಗೆ ಆದ್ಯತೆ ನೀಡಲಾಗಿದ್ದು, ವೈದ್ಯರಿಂದ ದಸರಾ ಉದ್ಘಾಟಿಸಲಾಗಿದೆ. ಅಲ್ಲದೆ ಕೊರೊನಾ ವಾರಿಯರ್ಸ್ ಗೆ ಸನ್ಮಾನ ಸಹ ಮಾಡಲಾಗುತ್ತಿದೆ. ಕೊರೊನಾ ಹಿನ್ನೆಲೆ ಅತ್ಯಂತ ಸರಳ, ಸಾಂಪ್ರದಾಯಿಕವಾಗಿ ದಸರಾ ಆಚರಿಸಲಾಗುತ್ತಿದೆ.

    ಮೈಸೂರು ದಸರಾ 2020ಕ್ಕೆ ವೈಭವದ ಚಾಲನೆ ದೊರೆತಂತಾಗಿದ್ದು, ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ನೀಡಲಾಗಿದೆ. ಉದ್ಘಾಟಕರಿಗೆ ಸಿಎಂ ಯಡಿಯೂರಪ್ಪ ಹಾಗೂ ಸಚಿವರು ಜೊತೆಯಾಗಿದ್ದಾರೆ. ಶುಭ ತುಲಾ ಲಗ್ನದಲ್ಲಿ ದಸರಾ 2020 ಉದ್ಘಾಟನೆಗೊಂಡಿದೆ. ಮೊದಲು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಯಾವುದೇ ಸ್ವಾಗತವಿಲ್ಲದೆ ನೇರವಾಗಿ ದೇವಾಲಯಕ್ಕೆ ಸಿಎಂ ತೆರಳಿದರು. ಪ್ರತಿಬಾರಿ ಪೂರ್ಣಕುಂಭ ಸ್ವಾಗತದೊಂದಿಗೆ ಸಿಎಂ ಹಾಗೂ ಉದ್ಘಾಟಕರು ದೇವಾಲಯ ಪ್ರವೇಶಿಸುತ್ತಿದ್ದರು. ಆದರೆ ಈ ಬಾರಿ ಪೂರ್ಣಕುಂಭ ಸ್ವಾಗತ ಮಾಡಲಾಗಿಲ್ಲ.

  • ಡಿಕೆಶಿ ಪಿಳ್ಳೆ ನೆಪ ಹುಡುಕಿಕೊಂಡು ಮಾತಾಡ್ತಿದ್ದಾರೆ: ಎಸ್.ಟಿ ಸೋಮಶೇಖರ್

    ಡಿಕೆಶಿ ಪಿಳ್ಳೆ ನೆಪ ಹುಡುಕಿಕೊಂಡು ಮಾತಾಡ್ತಿದ್ದಾರೆ: ಎಸ್.ಟಿ ಸೋಮಶೇಖರ್

    ಮೈಸೂರು: ಆರ್.ಆರ್ ನಗರದಲ್ಲಿ ಗೆಲ್ಲೋಕಾಗೋಲ್ಲ. ಅದಕ್ಕೆ ಡಿಕೆಶಿ ಪಿಳ್ಳೆನೆಪ ಹುಡುಕಿಕೊಂಡು ಮಾತನಾಡುತ್ತಿದ್ದಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀತಿ ಸಂಹಿತೆ ಯಾರೇ ಉಲ್ಲಂಘನೆ ಮಾಡಿದರೂ ಎಫ್‍ಐಆರ್ ಹಾಕುತ್ತಾರೆ. ಕಳೆದ ಬಾರಿ ಮುನಿರತ್ನ ಮೇಲೂ ಎಫ್‍ಐಆರ್ ಹಾಕಿದ್ದರು. ಸ್ವಲ್ಪ ವ್ಯತ್ಯಾಸ ಆಗಿದ್ದರೆ ಮುನಿರತ್ನ ಜೈಲಿಗೆ ಹೋಗಬೇಕಿತ್ತು. ಈಗ ಕೋರ್ಟ್ ತೀರ್ಪು ಬಂದು ಮತ್ತೆ ಚುನಾವಣೆಗೆ ನಿಲ್ತಿದ್ದಾರೆ. ಹೀಗಾಗಿ ಡಿಕೆಶಿ ಸುಮ್ಮನೆ ಆರೋಪ ಮಾಡ್ತಿದ್ದಾರೆ. ಅವರಿಗೆ ಆರ್ ಆರ್ ನಗರದಲ್ಲಿ ಗೆಲ್ಲೋಕೆ ಆಗೋಲ್ಲ ಅಂತ ಹೀಗೆಲ್ಲ ಮಾತನಾಡುತ್ತಾರೆ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.

    ಜಂಬೂ ಸವಾರಿಗೆ 300 ಮಂದಿಗೆ ಮಾತ್ರ ಅವಕಾಶ:
    ದಸರಾದ ಕೊನೆ ಹಂತದ ಸಿದ್ಧತೆ ಪರಿಶೀಲನೆ ಮಾಡ್ತಿದ್ದೇವೆ. ಟೆಕ್ನಿಕಲ್ ಕಮಿಟಿಯ ಸೂಚನೆ ಮೀರಿ ಒಂದೇ ಒಂದು ಕಾರ್ಯಕ್ರಮವನ್ನ ಮಾಡಿಲ್ಲ. ಜನ ಸೇರಿಸೋ ಪ್ರಶ್ನೆಯೇ ಇಲ್ಲ. ಉದ್ಘಾಟನೆಗೆ 200 ಮಂದಿ, ಜಂಬೂಸವಾರಿಗೆ 300 ಮಂದಿ ಮಾತ್ರ ಇರುತ್ತಾರೆ. ಭಾಗಿಯಾಗುವ ಎಲ್ಲರಿಗೂ ಕೋವಿಡ್ ಟೆಸ್ಟ್ ಕಡ್ಡಾಯವಾಗಿದೆ ಎಂದರು. ಇದನ್ನೂ ಓದಿ: ಕೊರೊನಾ ವಾರಿಯರ್ಸ್‍ಗೆ ಗೌರವ- ಡಾ.ಮಂಜುನಾಥ್‍ರಿಂದ ಮೈಸೂರು ದಸರಾ ಉದ್ಘಾಟನೆ

    ಈ ಬಾರಿ ಎಲ್ಲವು ವರ್ಚುವಲ್ ಆಗಿ ನೇರಪ್ರಸಾರ ಆಗಲಿದೆ. ನಾವು ಆಹ್ವಾನ ಮಾಡಿರುವ ಕೆಲವರು ದಸರಾಗೆ ಬರೋಲ್ಲ. ನಾವು ಬಂದು ಸಮಸ್ಯೆ ಆಗೋದು ಬೇಡ ಅಂತ ಹೇಳಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿ ಯಾವ ಕಾರ್ಯಕ್ರಮವನ್ನು ಮಾಡೋದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

  • ಕೊರೊನಾ ವಾರಿಯರ್ಸ್‍ಗೆ ಗೌರವ- ಡಾ.ಮಂಜುನಾಥ್‍ರಿಂದ ಮೈಸೂರು ದಸರಾ ಉದ್ಘಾಟನೆ

    ಕೊರೊನಾ ವಾರಿಯರ್ಸ್‍ಗೆ ಗೌರವ- ಡಾ.ಮಂಜುನಾಥ್‍ರಿಂದ ಮೈಸೂರು ದಸರಾ ಉದ್ಘಾಟನೆ

    ಮೈಸೂರು: ದಸರಾ-2020 ಉದ್ಘಾಟಕರ ಆಯ್ಕೆ ಅಂತಿಮವಾಗಿದ್ದು, ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ.

    ಈ ಬಾರಿಯ ದಸರಾದಲ್ಲಿ ಕೊರೊನಾ ವಾರಿಯರ್ಸ್‍ಗೆ ಗೌರವ ಸಲ್ಲಿಸಲಾಗುತ್ತಿದ್ದು, ಈ ಹಿನ್ನೆಲೆ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ಅವರನ್ನು ಉದ್ಘಾಟಕರನ್ನಾಗಿ ಆಯ್ಕೆ ಮಾಡಲಾಗಿದೆ. ಕೊರೊನಾ ವಾರಿಯರ್ ಹಿನ್ನೆಲೆ ಡಾ.ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಡಾ.ಮಂಜುನಾಥ್ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಸೋಮಶೇಖರ್ ತಿಳಿಸಿದ್ದಾರೆ.

    ಅಲ್ಲದೆ ಮರಗಮ್ಮ (ಪೌರಕಾರ್ಮಿಕರು), ಡಾ.ನವೀನ್ (ಆರೋಗ್ಯ ಇಲಾಖೆ ವೈದ್ಯಾಧಿಕಾರಿ), ರುಕ್ಮಿಣಿ (ಸ್ಟಾಫ್ ನರ್ಸ್), ನೂರ್ ಜಾನ್ (ಆಶಾ ಕಾರ್ಯಕರ್ತೆ), ಕುಮಾರ್ (ಮೈಸೂರು ನಗರ ಪೊಲೀಸ್ ಪೇದೆ) ಹಾಗೂ ಅಯೂಬ್ ಅಹಮದ್ (ಸಾಮಾಜಿಕ ಕಾರ್ಯಕರ್ತ) ಇವರುಗಳಿಗೆ ಸನ್ಮಾನ ಮಾಡಲಾಗುತ್ತಿದೆ.

    ಟಕ್ನಿಕಲ್ ಕಮಿಟಿ ವರದಿಯಂತೆ ದಸರಾ ಆಚರಣೆ ಮಾಡಲಾಗುವುದು. ಟೆಕ್ನಿಕಲ್ ಕಮಿಟಿ ನೀಡಿರುವ ವರದಿಯಂತೆ ದಸರಾ ಸಿದ್ಧತೆ ಮಾಡಿಕೊಳ್ಳುತ್ತೇವೆ. ಉದ್ಘಾಟನಾ ಕಾರ್ಯಕ್ರಮಕ್ಕೆ 200, ಜಂಬೂಸವಾರಿಗೆ 300 ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 50 ಮಂದಿಗೆ ಅವಕಾಶ ನೀಡಲಾಗಿದೆ. ನಾವು ಸಹ ಇಷ್ಟೇ ಜನಕ್ಕೆ ಅವಕಾಶ ಮಾಡಿಕೊಡುತ್ತೇವೆ. ಟೆಕ್ನಿಕಲ್ ಕಮಿಟಿ ಸಲಹೆ ಬಿಟ್ಟು ಪರ್ಯಾಯ ವ್ಯವಸ್ಥೆ ಮಾಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

    ಮಾಧ್ಯಮದವರು 350 ಮಂದಿ ಇದ್ದಾರೆ. ಇದರಲ್ಲಿ 50 ಜನರಿಗೆ ಮಾತ್ರ ಅವಕಾಶ ಮಾಡಿಕೊಡುತ್ತೇವೆ. ಜನಪ್ರತಿನಿಧಿಗಳು 50 ಜನರ ಇದ್ದಾರೆ. ಈ ಸಂಖ್ಯೆಯನ್ನು ಸಹ 25ಕ್ಕೆ ಇಳಿಸುತ್ತೇವೆ. ಪೊಲೀಸರು 100 ಮಂದಿ ಇದ್ದಾರೆ ಇದನ್ನು ಸಹ ಅರ್ಧಕ್ಕೆ ಇಳಿಸುತ್ತೇವೆ. ಬೆಟ್ಟದಲ್ಲಿ ಸಹ 200 ಮಂದಿಯೊಳಗೆ ಕಾರ್ಯಕ್ರಮ ಮಾಡುತ್ತೇವೆ. ನಗರದಲ್ಲಿ ಎಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ. ಜನ ಗುಂಪು ಸೇರಬಾರದು. ಎಲ್ಲಿಯೂ ಬಹಿರಂಗವಾಗಿ ಕಾರ್ಯಕ್ರಮ ನಡೆಸಬಾರದು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

    ಈ ಬಾರಿಯ ದಸರಾಗೆ ಒಂದು ರೂಪಾಯಿಯನ್ನು ಖರ್ಚು ಮಾಡಿಲ್ಲ. ಇನ್ನೂ ದಸರಾ ಬಜೆಟ್ ಬಗ್ಗೆ ಪ್ಲಾನಿಂಗ್ ಆಗಿಲ್ಲ. ಟೆಕ್ನಿಕಲ್ ಕಮಿಟಿ ವರದಿ ಕೊಟ್ಟಿದೆ. ಅದರ ಸೂಚನೆಯಂತೆ ಕಾರ್ಯಕ್ರಮ ರೂಪಿಸುತ್ತೇವೆ. ಕಾರ್ಯಕ್ರಮಗಳಿಗೆ ಎಷ್ಟು ಹಣ ಬೇಕು ಎಂಬುದನ್ನು ಈಗ ತೀರ್ಮಾನ ಮಾಡುತ್ತೇವೆ. ಕಳೆದ ಬಾರಿ ದಸರಾದ ಹಣ ಬಾಕಿ ಇದೆ. ಸರ್ಕಾರಕ್ಕೆ ಹಣಕಾಸು ಇಲಾಖೆಗೆ ಮನವಿ ಮಾಡಿದ್ದೇವೆ. ಶಿಘ್ರದಲ್ಲೇ ಆ ಹಣವನ್ನು ತಂದು ಬಾಕಿ ಇರುವ ಬಿಲ್ ಪಾವತಿಸುತ್ತೇವೆ ಎಂದು ತಿಳಿಸಿದ್ದಾರೆ.

  • ಸಂಪುಟ ವಿಸ್ತರಣೆ ವಿಚಾರದಲ್ಲಿ ನಾನೊಬ್ಬ ಬಡಪಾಯಿ: ಎಸ್.ಟಿ ಸೋಮಶೇಖರ್

    ಸಂಪುಟ ವಿಸ್ತರಣೆ ವಿಚಾರದಲ್ಲಿ ನಾನೊಬ್ಬ ಬಡಪಾಯಿ: ಎಸ್.ಟಿ ಸೋಮಶೇಖರ್

    ಮೈಸೂರು: ಸಂಪುಟ ವಿಸ್ತರಣೆ ವಿಚಾರ ನನ್ನ ಕೈಯಲ್ಲಿ ಇದ್ದರೆ ಅದು ಬೇರೆ ಮಾತು. ಈ ವಿಚಾರದಲ್ಲಿ ನಾನೊಬ್ಬ ಬಡಪಾಯಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ನಾನೇನು ಹೇಳಲಿ. ಅದರ ಅಧಿಕಾರ ಇರುವವರನ್ನ ಕೇಳಿ ಎಂದಿದ್ದಾರೆ.

    ಇದೇ ವೇಳೆ ಆರ್ ಆರ್ ಕ್ಷೇತ್ರದಿಂದ ಮುನಿರತ್ನಗೆ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುನಿರತ್ನಗೆ ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದೇವೆ. ಅಂತಿಮ ತೀರ್ಮಾನ ಪಕ್ಷದ ಕೋರ್ ಕಮಿಟಿಯಲ್ಲಿ ಆಗುತ್ತದೆ. ನಿಯಮದ ಪ್ರಕಾರದ ಎರಡು ಹೆಸರನ್ನ ರಾಜ್ಯ ಕೋರ್ ಕಮಿಟಿಯಿಂದ ಕಳುಹಿಸಲಾಗಿದೆ. ಮುನಿರತ್ನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ. ನಾವು ಟಿಕೆಟ್ ಕೊಡಿ ಎಂದು ಮನವಿ ಮಾತ್ರ ಮಾಡಬಹುದು. ನಿರ್ಧಾರ ಪಕ್ಷದ ಹೈಕಮಾಂಡ್‍ಗೆ ಬಿಟ್ಟಿದ್ದು ಎಂದು ತಿಳಿಸಿದರು.

    ಮೈಸೂರು ಜಿಲ್ಲಾಧಿಕಾರಿ ದಿಢೀರ್ ವರ್ಗಾವಣೆ ವಿಚಾರದ ಬಗ್ಗೆ ಮಾತನಾಡಿ, ಅದು ಸರ್ಕಾರದ ಆಡಳಿತಾತ್ಮಕ ನಿರ್ಧಾರ. ಇದರಲ್ಲಿ ದಿಢೀರ್ ಎಂಬುದು ಬರುವುದಿಲ್ಲ. ಈ ವಿಚಾರದಲ್ಲಿ ಆಂಧ್ರದವರು, ಕನ್ನಡಿಗರು ಅಂತ ಮಾತಾನಾಡುವುದು ಸರಿಯಲ್ಲ. ಈಗ ಜಿಲ್ಲಾಧಿಕಾರಿ ಆಗಿರೋ ರೋಹಿಣಿ ಸಿಂಧೂರಿ ದಕ್ಷರು, ಪ್ರಾಮಾಣಿಕರು. ಅವರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಗರಂ ಆದರು.

  • ಹೆಸರಿಗೆ ಮಾತ್ರ ಸರಳ ದಸರಾ – ಬಿಡುಗಡೆಯಾಗಿದೆ 15 ಕೋಟಿ ಹಣ

    ಹೆಸರಿಗೆ ಮಾತ್ರ ಸರಳ ದಸರಾ – ಬಿಡುಗಡೆಯಾಗಿದೆ 15 ಕೋಟಿ ಹಣ

    – ಸರಳ ದಸರೆಗೆ 15 ಕೋಟಿ ಯಾಕೆ?
    – ಚರ್ಚೆಗೆ ಗ್ರಾಸವಾಗಿದೆ ಸರ್ಕಾರದ ನಡೆ

    ಮೈಸೂರು: ಕೊರೊನಾ ಭೀತಿಯಲ್ಲಿ ಈ ಬಾರಿ ಅತಿ ಸರಳ ದಸರಾ ನಡೆಸಲು ಸರ್ಕಾರ ಮುಂದಾಗಿದೆ. ಅತಿ ಸರಳ ದಸರಾ ಅಂದರೆ ದಸರಾ ವೆಚ್ಚವೂ ಅತಿ ಕಡಿಮೆ ಆಗಬೇಕು. ಆದರೆ ಸರ್ಕಾರ ಸರಳ ದಸರಕ್ಕೂ ಎಂದಿನಂತೆ 15 ಕೋಟಿ ರೂಪಾಯಿ ವೆಚ್ಚ ಮಾಡಲು ಮುಂದಾಗಿದೆ. ಇದನ್ನೂ ಓದಿ: ಅಕ್ಟೋಬರ್ 17ರಿಂದ ಮೈಸೂರು ದಸರಾ- ದಿನಕ್ಕೊಂದು ಸಾಂಸ್ಕೃತಿಕ ಕಾರ್ಯಕ್ರಮ

    ಸರಳ ದಸರಾಗೆ ರಾಜ್ಯ ಸರ್ಕಾರ 10 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 5 ಕೋಟಿ ರೂಪಾಯಿ ನೀಡುತ್ತಿದೆ. ಅಲ್ಲಿಗೆ ದಸರಾಗೆ 15 ಕೋಟಿ ರೂಪಾಯಿ ಸಿಕ್ಕಿದೆ. ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ದಸರಾ ಉದ್ಘಾಟನೆ, ವಿಜಯದಶಮಿ ದಿನ ಅರಮನೆಯ ಒಳಗೆ ಜಂಬೂ ಸವಾರಿ ಹಾಗೂ ಅರಮನೆ ಆವರಣದಲ್ಲಿ 8 ದಿನ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರ ನಡೆಯಲಿದೆ. ಇಷ್ಟು ಮಾಡಲು 15 ಕೋಟಿ ರೂಪಾಯಿ ಏಕೆ ಎಂಬುದೇ ದೊಡ್ಡ ಪ್ರಶ್ನೆ.ಇದನ್ನೂ ಓದಿ: ಈ ಬಾರಿ ಮೈಸೂರಿನಲ್ಲಿ ಸರಳ ದಸರಾ ಆಚರಣೆ – ಏನಿರುತ್ತೆ? ಏನಿರಲ್ಲ?

    ರಾಜಕಾರಣಿಗಳು, ಅಧಿಕಾರಿಗಳು ಹಣ ಮಾಡಲು ಇಷ್ಟೊಂದು ಪ್ರಮಾಣದಲ್ಲಿ ಹಣ ನಿಗದಿ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬರುತ್ತಿದೆ. ಈ ಬಾರಿ ಯಾವುದೇ ದಸರಾ ಉಪ ಸಮಿತಿಗಳಿಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲ, ದೀಪಾಲಂಕಾರಕ್ಕೂ ಬ್ರೇಕ್ ಬಿದ್ದಿದೆ. ಇವುಗಳು ಇಲ್ಲದೇ ಇರುವಾಗ 15 ಕೋಟಿ ಹಣವನ್ನು ಎಲ್ಲಿ ಹೇಗೆ ಖರ್ಚು ಮಾಡುತ್ತಾರೆ ಎಂಬ ಕುತೂಹಲ ಮೂಡಿದೆ. ಇದನ್ನೂ ಓದಿ: ದಸರಾ ಗಜಪಡೆಯ ನೂತನ ಕ್ಯಾಪ್ಟನ್ ಅಭಿಮನ್ಯು? – ಅರ್ಜುನನಿಗೆ ನಿವೃತ್ತಿ ನಿಶ್ಚಿತ

    ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಸ್ಪಷ್ಟನೆಯೇ ಬೇರೆ ರೀತಿ ಇದೆ. ಸರ್ಕಾರ ಹಣ ನೀಡಿರುವುದು ಕೇವಲ ದಸರಾ ಆಚರಣೆಗೆ ಮಾತ್ರವಲ್ಲ. ಸಮಗ್ರ ಮೈಸೂರು ಅಭಿವೃದ್ಧಿಗಾಗಿ. ಇದರಲ್ಲಿ ರಸ್ತೆ ಸೇರಿದಂತೆ ವಿವಿಧ ಮೂಲಭೂತ ಅಗತ್ಯಗಳಿಗೆ ಹಣ ಬಳಸಲಾಗುತ್ತದೆ. ಒಂದು ರೂಪಾಯಿಯೂ ದುರುಪಯೋಗ ಆಗಲು ಬಿಡುವುದಿಲ್ಲ. ಹಣದ ಬಳಕೆ ಪರಿಪೂರ್ಣ ಲೆಕ್ಕವನ್ನು ದಸರಾ ನಂತರ ನೀಡುತ್ತೇನೆ. ಕೊರೊನಾ ಸಂಕಷ್ಟ ಕಾಲದಲ್ಲೂ ದಸರಾಗೆ ಹಣ ನೀಡಿದೆ. ಇದರ ಸದುಪಯೋಗ ಮಾಡಿಕೊಳ್ಳುತ್ತೀವಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

    ದಸರಾಗೆ ಉಳಿದಿರುವುದು ಇನ್ನೂ 30 ದಿನ ಮಾತ್ರ. ಇನ್ನೂ ರಸ್ತೆ ಕಾಮಗಾರಿಯ ರೂಪುರೇಷೆ ಸಿದ್ಧವಾಗಿಲ್ಲ. ಇದರ ನಡುವೆ ಮಳೆಯೂ ಬರುತ್ತಿದೆ. ಕಾಮಗಾರಿ ನಡೆಸಲು ಮಳೆ ಅಡಿಯಾಗುತ್ತದೆ. ಹೀಗಾಗಿ ಈ ಬಾರಿಯ ದಸರಾಗೆ ಬಿಡುಗಡೆಯಾಗಿರುವ ಹಣದ ಬಗ್ಗೆ ಭಾರೀ ಅನುಮಾನ ಮೂಡಿದೆ.

  • ಅಕ್ಟೋಬರ್ 17ರಿಂದ ಮೈಸೂರು ದಸರಾ- ದಿನಕ್ಕೊಂದು ಸಾಂಸ್ಕೃತಿಕ ಕಾರ್ಯಕ್ರಮ

    ಅಕ್ಟೋಬರ್ 17ರಿಂದ ಮೈಸೂರು ದಸರಾ- ದಿನಕ್ಕೊಂದು ಸಾಂಸ್ಕೃತಿಕ ಕಾರ್ಯಕ್ರಮ

    – ಅರಮನೆ ಅಂಗಳದಲ್ಲಿ ಮಾತ್ರ ಜಂಬೂ ಸವಾರಿ
    – ಚಾಮುಂಡಿ ಬೆಟ್ಟದಲ್ಲಿ ಐವರಿಂದ ದಸರಾ ಉದ್ಘಾಟನೆ
    – ಈ ಬಾರಿ ಅಭಿಮನ್ಯು ಹೊರಲಿದ್ದಾನೆ ಅಂಬಾರಿ
    – ಜಂಬೂ ಸವಾರಿಗೆ ಐದು ಆನೆ ಮಾತ್ರ ಬಳಕೆ

    ಮೈಸೂರು: ಕೊರೊನಾ ನಿಯಮಗಳಿಗೆ ಅನುಗುಣವಾಗಿ ದಸರಾ ಆಚರಿಸಲು ನಿರ್ಧರಿಸಲಾಗಿದ್ದು, ಸಾಧಾರಣ ದಸರಾ ಆಚರಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದ್ದಾರೆ.

    ಮೈಸೂರು ದಸರಾ-2020 ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ನಗರದ ಅರಮನೆ ಮಂಡಳಿಯ ಕಚೇರಿಯಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ದಸರಾ ಸಿದ್ಧತೆ, ರೂಪುರೇಷೆ ಸೇರಿದಂತೆ ವಿವಿಧ ವಿಚಾಗಳ ಕುರಿತು ಚರ್ಚೆ ನಡೆಸಲಾಯಿತು.

    ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಅಕ್ಟೋಬರ್ 17ರಂದು ಬೆಳಗ್ಗೆ 7:45 ರಿಂದ 8:15 ರೊಳಗೆ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನೆರವೇರಲಿದೆ. ಕೊರೊನಾ ವಾರಿಯರ್ಸ್ ಗಳ ಆಯ್ಕೆಯನ್ನು ಆಯಾ ಇಲಾಖೆಯ ಮುಖ್ಯಸ್ಥರಿಗೆ ವಹಿಸಲಾಗಿದೆ. ಅರಮನೆಯಂಗಳದಲ್ಲಿ 9 ದಿನಗಳ ಕಾರ್ಯಕ್ರಮ ಇರಲಿದೆ. 9 ದಿನಗಳ ಕಾಲ ರಾಷ್ಟ್ರೀಯ, ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಕಾರ್ಯಕ್ರಮ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ. ಆದರೆ ಈ ಬಾರಿ ಒಂದು ದಿನಕ್ಕೆ ಒಂದೇ ಕಾರ್ಯಕ್ರಮ ಇರಲಿದೆ ಎಂದರು.

    ಪ್ರತಿ ವರ್ಷ ಮೈಸೂರು ದಸರಾದಲ್ಲಿ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಆದರೆ ಈ ಬಾರಿ ಎಷ್ಟು ಜನ ಭಾಗವಹಿಸಲು ಅವಕಾಶ ನೀಡಬೇಕು ಎಂಬುದರ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಕೇಂದ್ರ ಸರ್ಕಾರದ ಕಾನೂನಿನ ಅನ್ವಯ ಜನ ಸೇರಲು ಅವಕಾಶ ನೀಡಲು ಸಮಿತಿ ನಿರ್ಧರಿಸಿದೆ. ಅಲ್ಲದೆ ಸುಮಾರು ಎರಡು ಸಾವಿರ ಜನ ದಸರಾ ವೀಕ್ಷಿಸಲು ಅನುಮತಿ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಯಾವ ರೀತಿ ಅನುಮತಿ ಕೊಡುತ್ತದೆಯೋ ಆ ರೀತಿ ವೀಕ್ಷಣೆಗೆ ವ್ಯವಸ್ಥೆ ಮಾಡುತ್ತೇವೆ. ಅಲ್ಲದೆ ಮುಖ್ಯ ಕಾರ್ಯದರ್ಶಿಗೆ ಬಂದ ಕೇಂದ್ರದ ಸೂಚನೆಯಂತೆ ಸಿಮೀತ ಪಾಸ್ ವಿತರಣೆ ಮಾಡಲು ತೀರ್ಮಾನಿಸಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯನ್ನು ಐದು ಜನ ನೆರವೇರಿಸಲಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

    ದಸರಾ ಉದ್ಘಾಟಕರು ಯಾರು ಎಂಬುದನ್ನ ಸಿಎಂ ಅಂತಿಮ ನಿರ್ಧಾರ ಮಾಡುತ್ತಾರೆ. ಡಾ.ರವಿ ಅಥವಾ ಡಾ.ಮಂಜುನಾಥ್ ಹೆಸರು ಕೇಳಿ ಬಂದಿದೆ. ಇದನ್ನು ಸಿಎಂ ಅಂತಿಮ ಮಾಡಲಿದ್ದಾರೆ. ಐದು ಜನ ಕೊರೊನಾ ವಾರಿಯರ್ಸ್ ಗಳಲ್ಲಿ ಒಬ್ಬರು ಮಾತ್ರ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದರು.

    ಜಂಬೂ ಸವಾರಿಯನ್ನು ಸಹ ಅರಮನೆಯಂಗಳದಲ್ಲಿ ಮಾತ್ರ ನಡೆಸಲು ತೀರ್ಮಾನಿಸಲಾಗಿದೆ. ಈ ಬಾರಿ ಐದು ಆನೆಗಳನ್ನು ಮಾತ್ರ ಜಂಬೂ ಸವಾರಿಗೆ ಬಳಕೆ ಮಾಡಲಾಗುತ್ತದೆ. ವಿಶೇಷವೆಂದರೆ ಈ ಬಾರಿ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ದಸರಾ ಗಜಪಡೆಗೆ ನೂತನ ಕ್ಯಾಪ್ಟನ್‍ನ್ನು ಇಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಸಾಂಪ್ರದಾಯಿಕವಾಗಿ ಅಕ್ಟೋಬರ್ 2ರಂದು 12:18 ನಿಮಿಷಕ್ಕೆ ಗಜಪಯಣ ಆರಂಭವಾಗಲಿದೆ. ಈ ಬಾರಿ ವೀರನ ಹೊಸಹಳ್ಳಿ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

  • ಪಕ್ಷದ ಪರ ಪ್ರಚಾರ ಮಾಡಿರ್ಬೋದು, ಬಿಜೆಪಿ ಆಕೆಗೆ ಈ ರೀತಿ ಮಾಡಲು ಹೇಳಿತ್ತಾ: ಎಸ್‍ಟಿಎಸ್ ಪ್ರಶ್ನೆ

    ಪಕ್ಷದ ಪರ ಪ್ರಚಾರ ಮಾಡಿರ್ಬೋದು, ಬಿಜೆಪಿ ಆಕೆಗೆ ಈ ರೀತಿ ಮಾಡಲು ಹೇಳಿತ್ತಾ: ಎಸ್‍ಟಿಎಸ್ ಪ್ರಶ್ನೆ

    ಮೈಸೂರು: ಚಂದನವನದ ನಟಿ ರಾಗಿಣಿ ದ್ವಿವೇದಿ ಬಿಜೆಪಿ ಪರ ಪ್ರಚಾರ ನಡೆಸಿರಬಹುದು. ಆದರೆ ಆಕೆಯನ್ನು ಈ ರೀತಿ ಮಾಡುವಂತೆ ಪಕ್ಷ ಹೇಳಿಲ್ಲ. ಹೀಗಾಗಿ ಈ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪ್ರಶ್ನೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

    ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಬೆನ್ನಲ್ಲೇ ಆಕೆ ಬಿಜೆಪಿ ಪರ ಪ್ರಚಾರ ಮಾಡಿದ್ದ ವಿಚಾರ ವೈರಲ್ ಆಗುತ್ತಿದೆ. ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಕೆ ಬಿಜೆಪಿ ಪರ ಪ್ರಚಾರ ಮಾಡಿರಬಹುದು. ಈ ವಿಚಾರದಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪ್ರಶ್ನೆ ಇಲ್ಲ. ಇಲ್ಲಿ ಯಾರು ತಪ್ಪು ಮಾಡಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲೂ ಹೇಳಿದ್ದೇವೆ. ಸಿಎಂ ಪ್ರತಿದಿನ ವರದಿ ತರಿಸಿಕೊಳ್ಳುತ್ತಿದ್ದಾರೆ. ಎಷ್ಟೇ ಪ್ರಭಾವಿಗಳಿದ್ದರೂ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಭರವಸೆ ನೀಡಿದರು.

    ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸೋಮಶೇಖರ್, ಡ್ರಗ್ಸ್ ಹಣದಲ್ಲಿ ಸರ್ಕಾರ ಬೀಳಿಸುವ ಸ್ಥಿತಿ ಬಿಜೆಪಿಗೆ ಬಂದಿಲ್ಲ. ಕುಮಾರಸ್ವಾಮಿ ಈಗ ಮಾಡುತ್ತಿರುವ ಆರೋಪಕ್ಕೆ ಸತ್ಯಕ್ಕೆ ದೂರವಾಗಿದ್ದು. ಆಗ ಅವರೇ ಅಧಿಕಾರದಲ್ಲಿದ್ದರು ಇದನ್ನು ಮಟ್ಟ ಹಾಕಬಹುದಾಗಿತ್ತು. ಆಗ ಸುಮ್ಮನೆ ಇದ್ದು ಈಗ ಮಾತನಾಡಿದರೆ ಹೇಗೆ ಎಂದು ಪ್ರಶ್ನಿಸಿದರು.

    ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಬೆನ್ನಲ್ಲೇ ಮೈಸೂರಿನಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಡ್ರಗ್ ಹಾಗೂ ಗಾಂಜಾ ದಂಧೆ ಪ್ರಕರಣ ಕಂಡು ಬಂದಲ್ಲಿ ಪೊಲೀಸರೇ ಜವಾಬ್ದಾರರು. ಆ ವ್ಯಾಪ್ತಿಯ ಎಸಿಪಿ ಇನ್ಸ್ ಪೆಕ್ಟರ್ ಅವರೇ ನೇರ ಹೊಣೆ. ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಈ ಎಲ್ಲಾ ವಿಚಾರಗಳ ಚರ್ಚೆಗೆ ಸಭೆ ನಿಗದಿ ಮಾಡಲಾಗುವುದು ಎಂದರು.  ಇದನ್ನೂ ಓದಿ: ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿಯಿಂದ ಡ್ರಗ್ಸ್ ಮಾಫಿಯಾ ಹಣ ಬಳಕೆ- ಎಚ್‍ಡಿಕೆ

  • ಸಿದ್ದರಾಮಯ್ಯ, ಡಿಕೆಶಿ ನಡುವೆ ಹೊಂದಾಣಿಕೆ ಇದ್ಯಾ- ಸೋಮಶೇಖರ್ ಪ್ರಶ್ನೆ

    ಸಿದ್ದರಾಮಯ್ಯ, ಡಿಕೆಶಿ ನಡುವೆ ಹೊಂದಾಣಿಕೆ ಇದ್ಯಾ- ಸೋಮಶೇಖರ್ ಪ್ರಶ್ನೆ

    ಹಾವೇರಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧ್ಯೆ ಹೊಂದಾಣಿಕೆ ಇದೆಯಾ? ನೂರಕ್ಕೆ ನೂರರಷ್ಟು ಅವರಿಬ್ಬರ ನಡುವೆ ಹೊಂದಾಣಿಕೆ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

    ಬ್ಯಾಡಗಿ ಪಟ್ಟಣದ ಎಪಿಎಂಸಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಮಂತ್ರಿ ಮಂಡಲದಲ್ಲಿ ಹೊಂದಾಣಿಕೆ ಇಲ್ಲ ಎಂಬ ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ನಮ್ಮಲ್ಲಿ ಎಲ್ಲ ಮಂತ್ರಿಗಳ ನಡುವೆ ಹೊಂದಾಣಿಕೆ ಇದೆ. ಬಿಜೆಪಿ ಸರ್ಕಾರ ಎಲ್ಲ ಮಂತ್ರಿಗಳು ಒಂದಾಗಿ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇವೆ ಎಂದರು.

    ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು. ಕೊರೊನಾ ವಿಚಾರದಲ್ಲಿ ನಾವು ಖರ್ಚು ಮಾಡಿರುವ ಹಣಕ್ಕೂ, ಅವರ ಅವ್ಯವಹಾರ ಆಗಿದೆ ಅಂತಿರುವ ಹಣಕ್ಕೂ ವ್ಯತ್ಯಾಸವಿದೆ. ಖರ್ಚು ಮಾಡಿರುವ ಹಣವೇ ಕಡಿಮೆ. ಹೀಗಿರುವಾಗ ಹೆಚ್ಚಿನ ಹಣದ ಅವ್ಯವಹಾರ ಆಗಿದೆ ಅಂದರೆ ಹೇಗೆ? ಸಿದ್ದರಾಮಯ್ಯ ಪ್ರಚಾರಕ್ಕಾಗಿ ಲೆಕ್ಕಕೊಡಿ, ಲೆಕ್ಕಕೊಡಿ ಅಂತಿದ್ದಾರೆ. ಲೆಕ್ಕ ಕೊಡಲು ನಾವು ಸಿದ್ಧರಿದ್ದರೂ ಲೆಕ್ಕ ತೆಗೆದುಕೊಳ್ಳಲು ಸಿದ್ದರಾಮಯ್ಯ ಸಿದ್ಧರಿಲ್ಲ ಎಂದು ತಿರುಗೇಟು ನೀಡಿದರು.

    ಮಂತ್ರಿ ಮಾಡುವುದು, ಮಂತ್ರಿ ಮಂಡಲದಿಂದ ತೆಗೆಯುವುದು ಸಿಎಂ ಅವರ ಪರಮಾಧಿಕಾರ. ಈಗ ನಾವು ರಾಜೀನಾಮೆ ಕೊಡುವ ಪ್ರಮೇಯ ಬರುವುದಿಲ್ಲ. ರಾಜೀನಾಮೆ ಕೊಟ್ಟ ಕೆಲವರಿಗೆ ಎಂಎಲ್‍ಸಿ ಮಾಡಿದ್ದಾರೆ. ಸಿಎಂ ಯಾರಿಗೆ ಏನು ಮಾಡಬೇಕೋ ಅದನ್ನು ಮಾಡಿದ್ದಾರೆ ಎಂದು ಯಡಿಯೂರಪ್ಪ ಅವರನ್ನು ಸಮರ್ಥಿಸಿಕೊಂಡರು.