Tag: ಎಸ್ ಟಿ ಸೋಮಶೇಖರ್

  • ಉಚ್ಚಾಟನೆಯನ್ನು ನಿರೀಕ್ಷಿಸಿದ್ದೆವು, ಒಳ್ಳೆಯದಾಯ್ತು: ಎಸ್‌ಟಿ ಸೋಮಶೇಖರ್

    ಉಚ್ಚಾಟನೆಯನ್ನು ನಿರೀಕ್ಷಿಸಿದ್ದೆವು, ಒಳ್ಳೆಯದಾಯ್ತು: ಎಸ್‌ಟಿ ಸೋಮಶೇಖರ್

    ಬೆಂಗಳೂರು: ಬಿಜೆಪಿಯಲ್ಲಿ ರೇಪ್ ಮಾಡಿದವರನ್ನು ಉಚ್ಚಾಟನೆ ಮಾಡುವುದಿಲ್ಲ. ನಮ್ಮಂತವರನ್ನು ಉಚ್ಚಾಟನೆ ಮಾಡ್ತಾರೆ ಎಂದು ಯಶವಂತಪುರದ ಬಿಜೆಪಿಯ ಉಚ್ಚಾಟಿತ ಶಾಸಕ ಎಸ್‌ಟಿ ಸೋಮಶೇಖರ್ (S T Somashekar) ಹೇಳಿದರು.

    ಬಿಜೆಪಿಯ (BJP) ಯಶವಂತಪುರದ ಶಾಸಕ ಎಸ್‌ಟಿ ಸೋಮಶೇಖರ್ ಹಾಗೂ ಯಲ್ಲಾಪುರದ ಶಾಸಕ ಶಿವರಾಂ ಹೆಬ್ಬಾರ್ (Shivaram Hebbar) ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ. ಈ ಬಗ್ಗೆ `ಪಬ್ಲಿಕ್ ಟಿವಿ’ಗೆ ಪ್ರತಿಕ್ರಿಯೆ ನೀಡಿದ ಎಸ್‌ಟಿ ಸೋಮಶೇಖರ್ ಅವರು, ಉಚ್ಚಾಟನೆಯನ್ನು ನಿರೀಕ್ಷಿಸಿದ್ದೆವು. ಒಳ್ಳೆಯದಾಯ್ತು ಎಂದರು. ಇದನ್ನೂ ಓದಿ: ಸಾಲು ಸಾಲು ಉಚ್ಛಾಟನೆ, ತಾಂತ್ರಿಕವಾಗಿ ಬಿಜೆಪಿ ಬಲಾಬಲ ಕುಸಿತ

    1% ಸಹ ಬೇಸರ, ಅಸಮಾಧಾನ ಇಲ್ಲ. ಉಚ್ಚಾಟನೆ ಮಾಡಿದ್ದು ಖುಷಿ ಇದೆ. ಬಿಜೆಪಿಯಲ್ಲಿ ನನ್ನ ಪರವಾಗಿ ಮಾತನಾಡಲು ಯಾರಿಗೂ ಧೈರ್ಯ ಇಲ್ಲ. ಬಿಜೆಪಿಯಲ್ಲಿ ಮಾಡಬಾರದ್ದನ್ನ ಮಾಡಿರೋರು ಯರ‍್ಯಾರೋ ಇದ್ದಾರೆ. ಅತ್ಯಾಚಾರದ ಆರೋಪ ಹೊತ್ತಿರೋರು ಇದ್ದಾರೆ. ಅವರೆಲ್ಲರನ್ನೂ ಬಿಟ್ಟು ನನ್ನ ಉಚ್ಛಾಟನೆ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯಿಂದ ಎಸ್‌ಟಿ ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಉಚ್ಚಾಟನೆ

    ಉಚ್ಚಾಟನೆ ಯಾಕೆ ಮಾಡಿದ್ದೀರಿ ಅಂತಾನೂ ಕೇಳೋದಿಲ್ಲ. ನಾನು ಈಗ ಫ್ರೀ ಬರ್ಡ್ ಆಗಿದ್ದೀನಿ. ಇನ್ನು ಫ್ರೀ ಬರ್ಡ್ ಆಗಿ ಓಡಾಡುತ್ತೇನೆ. ಕಾಂಗ್ರೆಸ್ ಇಲ್ಲ, ಬಿಜೆಪಿ ಇಲ್ಲ ಆರಾಮಾಗಿ ಇದ್ದೇವೆ. ಮುಂದಿನ ನಡೆ ಬಗ್ಗೆ ಈಗ ಯೋಚನೆ ಮಾಡಿಲ್ಲ ಎಂದರು.

  • ಮುಡಾ ಸೈಟ್ ಪಡೆದ ಶಾಸಕರ ಹೆಸರು ಹೇಳಿ: ಎಸ್‌ಟಿಎಸ್‌ಗೆ ಪ್ರತಾಪ್ ಸಿಂಹ ಸವಾಲ್

    ಮುಡಾ ಸೈಟ್ ಪಡೆದ ಶಾಸಕರ ಹೆಸರು ಹೇಳಿ: ಎಸ್‌ಟಿಎಸ್‌ಗೆ ಪ್ರತಾಪ್ ಸಿಂಹ ಸವಾಲ್

    ಬೆಂಗಳೂರು: ಎಸ್.ಟಿ.ಸೋಮಶೇಖರ್ (S T Somashekhar) ಅವರು ಗಾಳಿಯಲ್ಲಿ ಗುಂಡು ಹೊಡೆಯೋದು ಬಿಟ್ಟು ಮೈಸೂರಿನಲ್ಲಿ ಮುಡಾದಿಂದ (MUDA) ನೂರಾರು ಸೈಟ್‌ಗಳನ್ನು ಪಡೆದಿರುವ ಶಾಸಕರ ಹೆಸರು ಹೇಳಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Prathap Simha) ಸವಾಲೆಸೆದರು.

    ಸಿದ್ದರಾಮಯ್ಯ (Siddaramaiah) ಮೇಲೆ ಮಾತ್ರ ತನಿಖೆ ಏಕೆ, ನೂರಾರು ಸೈಟ್ ಪಡೆದ ಮೈಸೂರಿನ (Mysuru) ಶಾಸಕರ ಮೇಲೆ ತನಿಖೆ ಯಾಕಿಲ್ಲ ಎಂದು ಎಸ್.ಟಿ.ಸೋಮಶೇಖರ್ ನಿನ್ನೆ ಹೇಳಿಕೆ ಕೊಟ್ಟಿದ್ದರು. ಈ ಬಗ್ಗೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯಿಸಿದ ಅವರು, ಮುಡಾದಲ್ಲಿ 14 ಸೈಟ್ ಸಿದ್ದರಾಮಯ್ಯ ಪಡೆದಾಗ ಇದೇ ಸೋಮಶೇಖರ್ ಮೈಸೂರು ಉಸ್ತುವಾರಿ ಸಚಿವರಾಗಿದ್ದರು. ಸೋಮಶೇಖರ್ ಅವರು ಮುಡಾದಲ್ಲಿ ಎಂಎಲ್‌ಎ, ಎಂಎಲ್‌ಸಿಗಳು ನೂರಾರು ಸೈಟ್‌ಗಳನ್ನು ತೆಗೆದುಕೊಂಡಿದ್ದಾರೆ ಅಂದಿದ್ದಾರಲ್ಲಾ. ಅವರು ಯಾರೆಲ್ಲಾ ಎಂದು ಅವರಿಗೇ ಗೊತ್ತಿರಬೇಕಲ್ಲ. ಅವರ ಹೆಸರು ಹೇಳಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ ಕಾನೂನು ಮಾಡಿದ್ರೆ ಸಂಸತ್ತು ಭವನವನ್ನು ಮುಚ್ಚಬೇಕು: ಬಿಜೆಪಿ ಎಂಪಿ ನಿಶಿಕಾಂತ್‌ ದುಬೆ

    ಸೋಮಶೇಖರ್ ಯಾರಿಗೆಲ್ಲಾ ಕೊಡಿಸಿದ್ರು ಅಂತ ಅವರಿಗೇ ಗೊತ್ತಿರುತ್ತೆ. ಸೋಮಶೇಖರ್ ಇರುವಾಗಲೇ ಸಿದ್ದರಾಮಯ್ಯಗೆ 14 ಸೈಟು ಕೊಟ್ರಲ್ಲ. ಹಾಗಾದ್ರೆ ಪ್ರಕರಣದಲ್ಲಿ ಸೋಮಶೇಖರ್ ಸಹ ಭಾಗಿಯಾಗಿದ್ರು ಅಂತ ಹೇಳೋಕ್ಕಾಗುತ್ತಾ? ಸೋಮಶೇಖರ್ ಅವರಿಗೆ ವಿಚಾರ ಗೊತ್ತಿದ್ರೆ ಇಂತಿಂಥ ಶಾಸಕರು, ಪರಿಷತ್ ಸದಸ್ಯರು ಮುಡಾ ಸೈಟ್ ಪಡೆದಿದ್ದಾರೆ ಎಂದು ಹೆಸರು ಹೇಳಲಿ. ಸೋಮಶೇಖರ್ ಅವರು ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಜನಿವಾರ ತೆಗೆಸಿರುವುದು ಜನರ ನಂಬಿಕೆ ಮೇಲೆ ಪ್ರಹಾರ: ಪ್ರಹ್ಲಾದ್ ಜೋಶಿ

    ಎಸ್.ಟಿ.ಸೋಮಶೇಖರ್ ನಮ್ಮ ಪಕ್ಷದ ಚಿಹ್ನೆಯಲ್ಲೇ ಗೆದ್ದವರು. ಅವರು ಚನ್ನಪಟ್ಟಣದಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್ ವೇದಿಕೆಗೆ ಹೋಗಿದ್ದರು. ರಾಜ್ಯಸಭೆ, ಎಂಎಲ್‌ಸಿ ಎಲೆಕ್ಷನ್ ನಡೆದರೆ ಕಾಂಗ್ರೆಸ್ ಕಡೆ ಕೈ ಎತ್ತುತ್ತಾರೆ. ಈ ರೀತಿ ಸೋಮಶೇಖರ್ ನೈತಿಕ ಅಧಃಪತನದತ್ತ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ಕೇಂದ್ರೀಯ ಶಿಸ್ತು ಸಮಿತಿಗೆ ಮಾತ್ರ ಶಾಸಕರ ವಿರುದ್ಧ ಕ್ರಮದ ಅಧಿಕಾರ: ಸಿ.ಟಿ ರವಿ

    ಕೇಂದ್ರೀಯ ಶಿಸ್ತು ಸಮಿತಿಗೆ ಮಾತ್ರ ಶಾಸಕರ ವಿರುದ್ಧ ಕ್ರಮದ ಅಧಿಕಾರ: ಸಿ.ಟಿ ರವಿ

    ಬೆಂಗಳೂರು: ಎಸ್.ಟಿ.ಸೋಮಶೇಖರ್ (ST Somashekar), ಶಿವರಾಮ ಹೆಬ್ಬಾರ್ ಅವರು ಶಾಸಕರಾಗಿದ್ದಾರೆ. ಆದ್ದರಿಂದ ಅವರಿಗೆ ಸಂಬಂಧಿಸಿ ಕ್ರಮ ತೆಗೆದುಕೊಳ್ಳುವ ಅಧಿಕಾರ ಕೇಂದ್ರೀಯ ಶಿಸ್ತು ಸಮಿತಿಗೆ ಮಾತ್ರ ಇದೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ (CT Ravi) ಅವರು ತಿಳಿಸಿದ್ದಾರೆ.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ರಾಜ್ಯ ಕೋರ್ ಕಮಿಟಿ ಸಭೆಯ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಈ ಹಿಂದಿನ ಬೆಳವಣಿಗೆ ಮತ್ತು ಅವರ ನಡವಳಿಕೆ ಕುರಿತು ಕೋರ್ ಕಮಿಟಿ ಶಿಫಾರಸು ಮಾಡಬಹುದು ಎಂದು ತಿಳಿಸಿದರು. ಉಳಿದ ನಿರ್ಣಯವನ್ನು ಅವರೇ ತೆಗೆದುಕೊಳ್ಳಬೇಕು, ಹಾಗಾಗಿ ಶಿಫಾರಸು ಮಾಡುವ ಕೆಲಸವನ್ನು ಕೋರ್ ಕಮಿಟಿ ಮಾಡಬಹುದು ಎಂದರು.

    ಗರ್ಭಿಣಿಯರು, ಹಸುಳೆಗಳ ಸರಣಿ ಸಾವು; ಸರ್ಕಾರಿ ಪ್ರಾಯೋಜಿತ ಕೊಲೆ
    ಬಳ್ಳಾರಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯದಿಂದ ಆಗಿರುವ ಸಾವನ್ನು ಸರ್ಕಾರಿ ಪ್ರಾಯೋಜಿತ ಕೊಲೆ ಎಂದೇ ಕರೆಯಬೇಕಾಗುತ್ತದೆ. ಆಸ್ಪತೆಗಳಲ್ಲಿ ಅಗತ್ಯ ಇರುವ ಔಷಧಿ ಸಿಗುತ್ತಿಲ್ಲ, ಸರಬರಾಜೇ ಮಾಡುತ್ತಿಲ್ಲ, ಇದಕ್ಕೆ ಏನು ಕಾರಣ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು – ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲು

    ಗರ್ಭಿಣಿಯರು ಮತ್ತು ಹಸುಳೆಗಳ ಸರಣಿ ಸಾವು ಸಂಭವಿಸುತ್ತಿದೆ. ಇದು ಸಾಮಾನ್ಯ ಸಂಗತಿಯಲ್ಲ. ಈ ಸಾವಿಗೆ ನೈತಿಕ ಹೊಣೆಯನ್ನು ಆಡಳಿತ ನಡೆಸುವ ಸರಕಾರವೇ ಹೊತ್ತುಕೊಳ್ಳಬೇಕು. ಇಲಾಖೆ ಸಚಿವರೇ ನೈತಿಕ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು. ಬ್ಲಾಕ್‌ ಲಿಸ್ಟ್‌ನಲ್ಲಿ ಸೇರಿಸಿದ ಕಂಪನಿಯ ಔಷಧವನ್ನು ಮತ್ತೆ ಇಲ್ಲಿ ಸರಬರಾಜು ಮಾಡಿದ್ದು, ಇದರ ಹಿನ್ನೆಲೆ ಏನು? ಎಂದು ಕೇಳಿದರು.

    113 ಡ್ರಗ್ ಇನ್‍ಸ್ಪೆಕ್ಟರ್‌ಗಳಲ್ಲಿ ಈಗ ಕರ್ತವ್ಯದಲ್ಲಿರುವುದು 11 ಜನ ಮಾತ್ರ. 102 ಜನ ಇಲ್ಲ, ಈ ಎಲ್ಲ ಪ್ರಶ್ನೆಗಳನ್ನು ವಿಧಾನಸೌಧದಲ್ಲಿ ಎತ್ತುತ್ತೇವೆ ಸಿ.ಟಿ ರವಿ ಹೇಳಿದರು. ಇದನ್ನೂ ಓದಿ: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಜಾರಿಯಾದ್ರೆ ರಕ್ತಪಾತವಾಗುತ್ತೆ: ಸುರೇಶ್ ಬಾಬು

  • ನಾನು ಉಸ್ತುವಾರಿ ಸಚಿವನಿದ್ದಾಗಲೇ ಮುಡಾದಲ್ಲಿ ಅವ್ಯವಹಾರ ನಡೆದಿತ್ತು – ಎಸ್‌ಟಿಎಸ್‌ ಬಾಂಬ್‌

    ನಾನು ಉಸ್ತುವಾರಿ ಸಚಿವನಿದ್ದಾಗಲೇ ಮುಡಾದಲ್ಲಿ ಅವ್ಯವಹಾರ ನಡೆದಿತ್ತು – ಎಸ್‌ಟಿಎಸ್‌ ಬಾಂಬ್‌

    – ಮುಡಾ ಸಭೆಯಲ್ಲಿ ಶಾಸಕರ ಫೈಲ್‌ಗಳೇ ಇರುತ್ತಿತ್ತು ಎಂದ ಶಾಸಕ

    ಮೈಸೂರು: ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MUDA) ಅವ್ಯವಹಾರದ ವಿಚಾರ ನನ್ನ ಗಮನಕ್ಕೆ ಬಂದಿತ್ತು ಎಂದು ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ (ST Somashekhar) ಬಾಂಬ್‌ ಸಿಡಿಸಿದ್ದಾರೆ.

    ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಉಸ್ತುವಾರಿ ಸಚಿವರಾಗಿದ್ದಾಗ ಈ ಅವ್ಯವಹಾರ ವಿಚಾರ ನನ್ನ ಗಮನಕ್ಕೆ ಬಂದಿತ್ತು. ಆಯುಕ್ತರು ಸಭೆ ಮಾಡದೆಯೇ ಸೈಟ್‌ಗಳನ್ನು ನೀಡಿದ್ದಾರೆ. 50:50 ಅನುಪಾತದಡಿ ನಿವೇಶನ ಕೊಡುವಾಗ ಸಭೆಯಲ್ಲಿ ಚರ್ಚೆಗೆ ತಂದು ಕೊಡಬೇಕು. ಆದ್ರೆ ಈ ನಿಯಮಗಳನ್ನು ಅಂದಿನ ಆಯುಕ್ತರು ಅನುಸರಿಸಿಲ್ಲ. ಹೀಗಾಗಿ ಅಂದಿನ ಆಯುಕ್ತರನ್ನ ಬದಲಾಯಿಸುವಂತೆ ಸರ್ಕಾರಕ್ಕೆ (Karnataka Govt) ಹೇಳಿದ್ದೆ. ಆದರೆ ಜಾತಿಯ ಪ್ರಭಾವದಿಂದ ಅವರು ಉಳಿದುಕೊಂಡರು. ಅವತ್ತಿನ ದಿನ ಸರಿಯಾದ ಕ್ರಮ ಆಗಿದ್ದರೇ ಇಂದು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿರಲಿಲ್ಲ, ಈಗಲಾದರೂ ಈ ಬಗ್ಗೆ ವ್ಯವಸ್ಥಿತವಾಗಿ ತನಿಖೆಯಾಗಲಿ ಎಂದು ಮನವಿ ಮಾಡಿದ್ದಾರೆ. ಇದನ್ನೂ  ಓದಿ: ಸಿಎಂ ಸರ್ಕಾರಕ್ಕೆ ಸೈಟ್ ವಾಪಸ್ ಕೊಡದಿದ್ದರೆ‌ ಭ್ರಷ್ಟಾಚಾರ ಚಿರಸ್ಥಾಯಿಯಾಗಿ ಉಳಿಯುತ್ತೆ: ಹೆಚ್. ವಿಶ್ವನಾಥ್

    ನನ್ನ ಹೆಸರಲ್ಲಿ ಸೈಟಿದ್ದರೆ ರಾಜೀನಾಮೆ:
    ಅನಗತ್ಯವಾಗಿ ಮುಡಾ ಹಗರಣ (MUDA Scam) ವಿಚಾರದಲ್ಲಿ ನನ್ನ ಹೆಸರು ತರಬೇಡಿ. ಮುಡಾದಲ್ಲಿ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಒಂದೇ ಒಂದು ನಿವೇಶನ ನನ್ನ ಹೆಸರಿನಲ್ಲಿ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಯಾವುದೇ ನಿವೇಶನ ತೆಗದುಕೊಂಡಿಲ್ಲ. ಯಾರಿಗೂ ನಾನು ಒತ್ತಡ ಹೇರಿ ನಿವೇಶನ ಕೊಡಿಸಿಲ್ಲ. ಈ ವಿಚಾರದಲ್ಲಿ ನನ್ನ ಹೆಸರು ತರಬೇಡಿ ಎಂದು ಹೇಳಿದ್ದಾರೆ. ಇದನ್ನೂ  ಓದಿ: ಮುಡಾ ಹಗರಣ – ಸರ್ಕಾರಕ್ಕೆ 1,000 ಕೋಟಿಗೂ ಹೆಚ್ಚು ಆರ್ಥಿಕ ನಷ್ಟ; ಸ್ಫೋಟಕ ಮಾಹಿತಿ ಲಭ್ಯ!

    ಶಾಸಕರ ಫೈಲ್‌ಗಳೇ ಇರುತ್ತಿತ್ತು:
    ಮುಡಾದ ಪ್ರತಿ ಸಭೆಯಲ್ಲೂ ಸ್ಥಳೀಯ ಶಾಸಕರ ಫೈಲ್‌ಗಳೇ ಇರುತ್ತಿತ್ತು. ಶಾಸಕರ ಹೆಸರಿನ ಫೈಲ್‌ಗಳು ಚರ್ಚೆಯಾಗದೇ ಪಾಸ್‌ ಆಗುತ್ತಿತ್ತು. ಮುಡಾ ಸಭೆಯ ಬಹುತೇಕ ಫೈಲ್‌ಗಳು ಶಾಸಕರಿಗೇ ಸೇರಿದ್ದವು. ಅದಕ್ಕಾಗಿಯೇ ಮುಡಾ ಸದಸ್ಯರಾಗಲು ಬೇರೆ ಜಿಲ್ಲೆಯ ಪರಿಷತ್ ಸದಸ್ಯರು ವಾಸ ಸ್ಥಳವನ್ನ ಮೈಸೂರಿಗೆ ಕೊಡುತ್ತಿದ್ದರು. ಈ ಮಟ್ಟಕ್ಕೆ ಇಲ್ಲಿಯ ಶಾಸಕರಗಳು ಲಾಭಿ ಮಾಡುತ್ತಾರೆ. ಮುಡಾ ಇರುವುದು ಜನ ಸಾಮಾನ್ಯರ ಅಭಿವೃದ್ಧಿಗೋಸ್ಕರ. ಆದರೆ ಇಲ್ಲಿ ಆಗುತ್ತಿರುವುದು ಏನು? ಈ ಬೋರ್ಡ್ ವ್ಯವಸ್ಥೆ ಬದಲಾಗಬೇಕು ಎಂದು ಸೋಮಶೇಖರ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ  ಓದಿ: MUDA Scam| ಭೈರತಿ ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ, ಬರೀ ಬೊಗಳೆ ಬಿಡ್ತಾನೆ: ಹೆಚ್‌ವಿಶ್ವನಾಥ್‌

  • ಕಾಂಗ್ರೆಸ್ ಅಭ್ಯರ್ಥಿಗೆ ಎಸ್‌ಟಿಎಸ್ ಬಹಿರಂಗ ಬೆಂಬಲ ಘೋಷಣೆ

    ಕಾಂಗ್ರೆಸ್ ಅಭ್ಯರ್ಥಿಗೆ ಎಸ್‌ಟಿಎಸ್ ಬಹಿರಂಗ ಬೆಂಬಲ ಘೋಷಣೆ

    ಬೆಂಗಳೂರು: ಯಶವಂತಪುರ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಬಿಜೆಪಿಗೆ ಮತ್ತೊಂದು ಶಾಕ್ ನೀಡಿದ್ದಾರೆ.

    ಬೆಂಗಳೂರು ಉತ್ತರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಎಸ್.ಟಿ ಸೋಮಶೇಖರ್ (ST Somashekhar) ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ. ರಾಜೀವ್ ಗೌಡ ಪರ ಮನೆಮನೆ ಹೋಗಿ ಮತ ಕೇಳೋದಾಗಿ ಘೋಷಿಸಿದ್ದಾರೆ. ಯಶವಂತಪುರ ಕ್ಷೇತ್ರದಲ್ಲಿ ಬೆಂಬಲಿಗರ ಸಭೆ ನಡೆಸಿದ ಶಾಸಕ ಎಸ್. ಟಿ ಸೋಮಶೇಖರ್, ಈ ಘೋಷಣೆ ಮಾಡಿದ್ದಾರೆ.

    ಸಭೆ ಬಳಿಕ ಮಾತಾಡಿದ ಎಸ್ ಟಿ ಎಸ್‌, ಬಿಜೆಪಿಯಿಂದ (BJP) ಲೋಕಸಭೆ ಅಭ್ಯರ್ಥಿ ಘೋಷಣೆಯಾದರೂ, ಇದುವರೆಗೂ ಯಾರೊಬ್ಬರೂ ನನ್ನನ್ನ ಬೆಂಬಲ ಕೊಡಿ ಎಂದು ಕೇಳಿಲ್ಲ. ನನ್ನ ಕ್ಷೇತ್ರದಲ್ಲಿ 7-8 ಬಾರಿ ಪ್ರಚಾರ ಮಾಡಿದ್ದಾರೆ. ಆದರೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಯಾರು ನನ್ನನ್ನ ಸಂಪರ್ಕ ಮಾಡದೆ ಇದ್ದದ್ದಕ್ಕೆ ಸಭೆ ಕರೆದಿದ್ದೇನೆ. ಇಷ್ಟೆಲ್ಲಾ ಆದ ಮೇಲೆ ಸುಮ್ಮನೆ ಇದ್ದರೆ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತೆ.‌ ನನ್ನ ಕ್ಷೇತ್ರಕ್ಕೆ ಯಾರು ಸಹಾಯ ಮಾಡುತ್ತಾರೋ ಅವರಿಗೆ ಬೆಂಬಲ ನೀಡುತ್ತೇನೆ.‌ ಅವರ ಕೈಲಿ ಏನ್ ಮಾಡೋಕಾಗುತ್ತೋ ಮಾಡ್ಲಿ ಎಂದು ಸವಾಲು ಹಾಕಿದ್ರು. ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ – ಶ್ರೀನಿವಾಸ ಪೂಜಾರಿಗೆ ಕೋರ್ಟ್‌ ಸಮನ್ಸ್‌

    ರಾಜ್ಯ ನಾಯಕರು ಮಾತ್ರವಲ್ಲ, ಕೇಂದ್ರ ನಾಯಕರು ನನ್ನ ಸಂಪರ್ಕಿಸಿಲ್ಲ. ಮೊನ್ನೆ ಅಮಿತ್ ಶಾ ಬಂದ್ರೂ ಕೂಡ ನನಗೆ ಆಹ್ವಾನ ನೀಡಿಲ್ಲ. ನೆನ್ನೆವರೆಗೂ ಕಾದಿದ್ದೆ, ಯಾರೂ ಪ್ರಚಾರಕ್ಕೆ ಕರೆದಿಲ್ಲ.‌ ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದೇನೆ ಎಂದು ಸೋಮಶೇಖರ್ ಸ್ಪಷ್ಟನೆ ನೀಡಿದರು.

    ಇದೇ ವೇಳೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ (Shobha Karandlaje) ವಿರುದ್ಧ ಕಿಡಿಕಾರಿದ ಎಸ್‌ಟಿಎಸ್‌, ಚಿಕ್ಕಮಂಗಳೂರಿಂದ ಗೋ ಬ್ಯಾಕ್ ಎಂದು ಹೊರ ಹಾಕಿದವರನ್ನು ತಂದು ಚುನಾವಣೆಗೆ ನಿಲ್ಲಿಸಿದ್ದಾರೆ. ಅಂತಹವರನ್ನ ಬೆಂಗಳೂರಿನವರು ಸ್ವಾಗತಿಸಬೇಕಾ ಎಂದು ಪ್ರಶ್ನಿಸಿದರು.

  • ರಾಜಕಾರಣದ ವ್ಯಭಿಚಾರ ಮಾಡೋರು ಎಲ್ಲಾ ಕಡೆ ಸಲ್ಲುತ್ತಾರೆ: ಸಿ.ಟಿ ರವಿ ಗರಂ

    ರಾಜಕಾರಣದ ವ್ಯಭಿಚಾರ ಮಾಡೋರು ಎಲ್ಲಾ ಕಡೆ ಸಲ್ಲುತ್ತಾರೆ: ಸಿ.ಟಿ ರವಿ ಗರಂ

    ಚಿಕ್ಕಮಗಳೂರು: ರಾಜಕಾರಣದ ವ್ಯಭಿಚಾರ ಮಾಡೋರು ಎಲ್ಲಾ ಕಡೆ ಸಲ್ಲುತ್ತಾರೆ. ಅಲ್ಲದೆ ಇವರು ಎಲ್ಲಾ ಕಡೆ ಹೋಗಿ ಸುಲಭವಾಗಿ ಸೆಟ್ ಆಗುತ್ತಾರೆ ಎಂದು ಮಾಜಿ ಶಾಸಕ ಸಿ.ಟಿ.ರವಿ (CT Ravi) ವಾಗ್ದಾಳಿ ನಡೆಸಿದ್ದಾರೆ.

    ರಾಜ್ಯಸಭೆ ಚುನಾವಣೆಯಲ್ಲಿ ಎಸ್.ಟಿ.ಸೋಮಶೇಖರ್ (ST Somashekhar) ಅಡ್ಡ ಮತದಾನದ ಕುರಿತು ಪ್ರತಿಕ್ರಿಯಿಸಿದ ಅವರು, ವ್ಯಕ್ತಿ ಸಂಬಂಧಕ್ಕೋಸ್ಕರ ರಾಜೀ ರಾಜಕಾರಣ ಒಳ್ಳೆಯದಲ್ಲ. ಅವಕಾಶವಾದಿಗಳಿಗೆ ಸಪೋರ್ಟ್ ಮಾಡೋದು ಅನೈತಿಕ ರಾಜಕಾರಣಕ್ಕೆ ವೇದಿಕೆ ಸೃಷ್ಠಿಸಿದಂತೆ. ಪಕ್ಷ-ಪಕ್ಷ ಅನ್ನೋ ನಾವು ಪ್ರಶ್ನೆಗಳಿಗೆ ಒಳಗಾಗುತ್ತೇವೆ ಎಂದರು. ಇದನ್ನೂ ಓದಿ: ಸೋಮಶೇಖರ್ ವಿರುದ್ಧ ಸ್ಪೀಕರ್‌ಗೆ ದೂರು: ದೊಡ್ಡನಗೌಡ ಪಾಟೀಲ್

    ರಾಜಕೀಯ ವ್ಯಭಿಚಾರ ಮಾಡೋರು ಎಲ್ಲಾ ಕಡೆ ಹೋಗಿ ಸುಲಭವಾಗಿ ಸೆಟ್ ಆಗ್ತಾರೆ. ಹಾರ್ಡ್ ಕೋರ್, ಸಿದ್ಧಾಂತಕ್ಕೆ ರಾಜಕಾರಣ ಮಾಡೋರು ನಿಷ್ಠೂರಕ್ಕೆ ಒಳಗಾಗುತ್ತಾರೆ. ಇಂಥವರು ನಮ್ಮ ಪಕ್ಷದ ಸಿಎಂ ಬೇರೆ ಪಕ್ಷದ ಸಿಎಂ ಬಳಿಯೂ ಚೆನ್ನಾಗಿರುತ್ತಾರೆ. ವ್ಯಭಿಚಾರದ ರಾಜಕಾರಣಕ್ಕೆ ಯಾರೂ ಮಣೆ ಹಾಕಬಾರದು. ಪಕ್ಷದೊಳಗಿದ್ದು ರಾಜಕೀಯ ವ್ಯಭಿಚಾರ ಮಾಡೋದು ಶೂನ್ಯ ಸಹನೆ ಎಂದು ಸಿ.ಟಿ ರವಿ ಕಿಡಿಕಾರಿದರು.

    ಎಸ್‌ಟಿಎಸ್‌ ಅಡ್ಡಮತದಾನ: ರಾಜ್ಯಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಟಿ ಸೋಮಶೇಕರ್ ಅವರು ಅಡ್ಡಮತದಾನದ ಮೊರೆ ಹೋಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜಿ.ಸಿ.ಚಂದ್ರಶೇಖರ್ ಪರ ಮತ ಎಸ್‍ಟಿಎಸ್ ಚಲಾಯಿಸಿದ್ದಾರೆ. ಹೀಗಾಗಿ ಎಸ್‍ಟಿಎಸ್ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.

  • ಭೇಟಿಯಾಗಿ ಭರವಸೆ ಕೊಟ್ಟವರಿಗೆ ಮತ ಹಾಕ್ತೀನಿ: ಸೋಮಶೇಖರ್

    ಭೇಟಿಯಾಗಿ ಭರವಸೆ ಕೊಟ್ಟವರಿಗೆ ಮತ ಹಾಕ್ತೀನಿ: ಸೋಮಶೇಖರ್

    ಬೆಂಗಳೂರು: ನಾನು ಯಾರನ್ನೂ ಭೇಟಿ ಮಾಡಲ್ಲ. ನನ್ನನ್ನು ಭೇಟಿ ಮಾಡಿ, ಭರವಸೆ ಕೊಟ್ಟರೆ ಅವರಿಗೆ ಮತ ಹಾಕುತ್ತೇನ ಎಂದು ಮಾಜಿ ಸಚಿವ ಎಸ್.ಟಿ ಸೋಮಶೇಖರ್ (ST Somashekhar) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿದ್ದಾಗ ಬಿಜೆಪಿಗೆ, ಕಾಂಗ್ರೆಸ್‍ನಲ್ಲಿದ್ದಾಗ ಕಾಂಗ್ರೆಸ್‍ಗೆ ವೋಟ್ ಹಾಕಿದ್ದೇನೆ. ಕಳೆದ ಬಾರಿ ನಿರ್ಮಲಾ ಸೀತಾರಾಮನ್‍ಗೆ ಹಾಕಿ ಎಂದರು. ಆದರೆ ಎಲೆಕ್ಷನ್ ಮುಗಿದ ಮೇಲೆ ನಿರ್ಮಲಾ ಸೀತಾರಾಮನ್ (Nirmala Sitaraman) ಭೇಟಿಗೆ ಅವಕಾಶವೇ ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಯಾರು ನನ್ನ ಕ್ಷೇತ್ರಕ್ಕೆ ಅನುದಾನ ಕೊಡ್ತಾರೆ ಅವರಿಗೆ ನನ್ನ ಮತ ಕೊಡುತ್ತೇನೆ. ನಾನು ಯಾರನ್ನೂ ಭೇಟಿ ಮಾಡಲ್ಲ. ನನ್ನನ್ನು ಭೇಟಿ ಮಾಡಿ, ಭರವಸೆ ಕೊಟ್ಟರೆ ಅವರಿಗೆ ಮತ ಹಾಕುತ್ತೇನೆ. ನನ್ನ ಕ್ಷೇತ್ರಕ್ಕೆ ಸರ್ಕಾರಿ ಶಾಲೆಗೆ ಯಾರು ಅನುದಾನ ಕೊಡ್ತಾರೆ ಅವರಿಗೆ ಮತ ನೀಡುತ್ತೇನೆ. 5-6 ಸಾರಿ ರಾಜ್ಯಸಭೆಗೆ ಅವರು ಹೇಳಿದಂತೆ ಹಾಕಿದ್ದೀನಿ. ಪಕ್ಷ ಹೇಳಿದಂತೆ ಕೇಳಿದ್ದೇನೆ. ಸಿಎಂ ಸ್ಥಾನಕ್ಕಾಗಿ ಅವರು ಅವಕಾಶವಾದಿಗಳಲ್ವಾ ಎಂದು ಹೆಚ್‍ಡಿಕೆಗೆ ಟಾಂಗ್ ಕೊಟ್ಟರು.

    ಸಿಎಂ ಆದ್ಮೇಲೆ ಒಂದು, ಆಗೋ ಮುಂಚೆ ಒಂದಾ..? ವೋಟ್ ಹಾಕಿದ ಮೇಲೆ ನಮಗೆ ವ್ಯಾಲ್ಯೂ ಇಲ್ವಾ..?. ರಾಜ್ಯಸಭೆ ಅಭ್ಯರ್ಥಿಗೆ ಅನುದಾನ ಬರುತ್ತೇ.. ಆ ಅನುದಾನ ನನ್ನ ಕ್ಷೇತ್ರಕ್ಕೆ ಕೊಡೊರಿಗೆ ನಾನು ಮತ ಹಾಕುತ್ತೇನೆ ಎಂದು ಎಸ್‍ಟಿಎಸ್ ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಿಂತ ಒಗ್ಗಟ್ಟು ತೋರಿಸಬೇಕು: ಹೆಚ್‌ಡಿಕೆ

  • ಡಿಕೆಶಿ, ಡಿ.ಕೆ ಸುರೇಶ್‍ಗೆ ಎಸ್.ಟಿ ಸೋಮಶೇಖರ್ ಅಭಿನಂದನೆ

    ಡಿಕೆಶಿ, ಡಿ.ಕೆ ಸುರೇಶ್‍ಗೆ ಎಸ್.ಟಿ ಸೋಮಶೇಖರ್ ಅಭಿನಂದನೆ

    ಬೆಂಗಳೂರು: ಇಂದು ಎರಡನೇ ಹಂತದಲ್ಲಿ ಆರ್.ಆರ್ ನಗರ ಮತ್ತು ಯಶವಂತಪುರ ಕ್ಷೇತ್ರಗಳನ್ನ ಒಳಗೊಂಡ ಜನಸ್ಪಂದನಾ ಕಾರ್ಯಕ್ರಮ ನಡೆಯುತ್ತಿದ್ದು, ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಹಾಗೂ ಸಂಸದ ಡಿಕೆ ಸುರೇಶ್‍ಗೆ (DK Suresh) ಎಸ್.ಟಿ ಸೋಮಶೇಖರ್ (ST Somashekar) ಅಭಿನಂದನೆ ಸಲ್ಲಿಸಿದ್ದಾರೆ.

    ಬೆಂಗಳೂರು ವಿಶ್ವವಿದ್ಯಾಲಯದ ಬಿಪಿಎಡ್ ಗ್ರೌಂಡ್ ನಲ್ಲಿ ನಡೆಯುತ್ತಿರೋ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್‍ಟಿಎಸ್, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಜನಸ್ಪಂದನಾ ಕಾರ್ಯಕ್ರಮ ನಡೆಯುತ್ತಿದೆ. ಜನಸ್ಪಂದನಾದಲ್ಲಿ ಸಲ್ಲಿಕೆಯಾಗದ ಅರ್ಜಿಗೆ ಉತ್ತರ ಸಿಕ್ತಿದೆ ಅಂತಾ ಗೊತ್ತಾಗ್ತಿದೆ. ಎಲ್ಲಾ ಕಡೆ ಇದೇ ಉತ್ತರ ಸಿಕ್ತಿದೆ. ನಿಜಕ್ಕೂ ಜನಸ್ಪಂದನಾ ಕಾರ್ಯಕ್ರಮ ಒಳ್ಳೆದಾಗ್ತಿದೆ ಎಂದರು.

    ನನ್ನ ಕ್ಷೇತ್ರದಲ್ಲಿ ಕಸದ ಘಟಕಗಳ ಸಮಸ್ಯೆ ಇತ್ತು ಅದನ್ನ ಬಗೆಹರಿಸಿದ್ದಾರೆ. ಬಜೆಟ್‍ನಲ್ಲಿ ಕಸದ ಘಟಕಗಳನ್ನು ಬದಲಾವಣೆ ಮಾಡಿದ್ದಾರೆ. ಅದಕ್ಕೆ ಡಿ.ಕೆ ಶಿವಕುಮಾರ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿದ್ದಾರೆ. ಕನಕಪುರದ ನೈಸ್ ಜಂಕ್ಷನ್ ನಲ್ಲಿ ನಾಲ್ಕು ರಸ್ತೆಗಳನ್ನ ಮಾಡುವ ಕೆಲಸವನ್ನ ಡಿ.ಕೆ ಸುರೇಶ್ ಅವರು ಮಾಡಿದ್ದಾರೆ. ಹೀಗಾಗಿ ಅವರಿಗೂ ಧನ್ಯವಾದ ಸಲ್ಲಿಸುತ್ತೆನೆ ಎಂದು ಹೇಳಿದರು. ಇದನ್ನೂ ಓದಿ: ಟಾಪ್‌ 5 ಸಿಎಂಗಳ ಪೈಕಿ ಯೋಗಿ ಆದಿತ್ಯನಾಥ್‌ಗೆ 2 ನೇ ಸ್ಥಾನ- ಮೊದಲನೇಯವರು ಯಾರು?

    ಕೆಂಪೇಗೌಡ ಬಡಾವಣೆಯಲ್ಲಿ ಕುಡಿಯುವ ನೀರು, ಯುಜಿಟಿ ಮಾಡಿಸಬೇಕಿದೆ. 40% ಸೈಟ್ ವಿತರಣೆ ಆಗಬೇಕಿದೆ. ಹೇರೋಹಳ್ಳಿಯಲ್ಲಿ ಅಕ್ರಮವಾಗಿ ಲೇ ಔಟ್ ಮಾಡ್ತಾ ಇದ್ದಾರೆ ಅದರ ಬಗ್ಗೆ ಗಮನ ಹರಿಸಬೇಕಿದೆ. ಕೆಂಗೇರಿ ಬ್ರಿಡ್ಜ್ ಭಾರೀ ವೀಕ್ ಆಗಿದೆ, ಅದನ್ನ ಸರಿಪಡಿಸಿ ಅಂತಾ ಬಜೆಟ್ ಅಲ್ಲಿ ಕೊಟ್ಟಿದ್ದೇನೆ. ಕುಡಿಯುವ ನೀರಿನ ಘಟಕಗಳು ತರುವ ಕೆಲಸ ಪ್ರಾಮಾಣಿಕವಾಗಿ ಮಾಡ್ತಾ ಇದ್ದೇವೆ. 100ಕ್ಕೆ 99 ಘಟಕಗಳು ನಿಂತು ಹೋಗಿವೆ. ಯಾಕೆ ಥರ ಇಲ್ಲಿಗಲ್ ಆಗಿ ಮಾಡುತ್ತಿದ್ದೀರಿ. ಘಟಕಗಳ ನಿರ್ಮಾಣದಲ್ಲಿ ನಮ್ಮ ಅಭಿಪ್ರಾಯ ತಗೋಳ್ತಾ ಇಲ್ಲ. ಅಂತಹ ದುರಹಂಕಾರದಲ್ಲಿ ಅಧಿಕಾರಿಗಳು ಇದ್ದಾರೆ. ನಾನು ಎಂಜಿನಿಯರ್ ಇದ್ದೇನೆ ಯಾವ ಜನಪ್ರತಿನಿಧಿ ಅಭಿಪ್ರಾಯ ಬೇಡ ಅಂತಾರಂತೆ. ದಯವಿಟ್ಟು ಗಮನ ಹರಿಸಬೇಕಿದೆ ಎಂದು ಇದೇ ವೇಳೆ ಎಸ್‍ಟಿಎಸ್ ಮನವಿ ಮಾಡಿಕೊಂಡರು.

  • ರಾಜ್ಯ ಬಜೆಟ್‌ನ್ನು ಹಾಡಿ ಹೊಗಳಿದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್

    ರಾಜ್ಯ ಬಜೆಟ್‌ನ್ನು ಹಾಡಿ ಹೊಗಳಿದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಬಜೆಟ್‌ನ್ನು ಬಿಜೆಪಿ (BJP) ಶಾಸಕ ಎಸ್.ಟಿ ಸೋಮಶೇಖರ್ (S.T Somashekar) ಹಾಡಿ ಹೊಗಳಿದ್ದಾರೆ. ಈ ಬಜೆಟ್ 7 ಕೋಟಿ ಜನರ ಬಜೆಟ್ ಆಗಿದೆ. ನಾನು ಸಿಎಂ ಮತ್ತು ಡಿಸಿಎಂ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದಿದ್ದಾರೆ.

    ನಗರದಲ್ಲಿ (Be ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಬಗ್ಗೆ ಮಾತ್ರ ನಾನು ಮಾತಾನಾಡುತ್ತೇನೆ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ 5 ಕಸದ ಘಟಕಗಳು ಇದ್ದವು. ಅವುಗಳನ್ನ ಹೊರಗೆ ಹಾಕುವ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಜನರ ಸಂಕಷ್ಟ ನಿವಾರಣೆಗೆ ಸಿಎಂ ಕ್ರಮ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಶಾಲಾ-ಕಾಲೇಜುಗಳ ಅಭಿವೃದ್ಧಿಗೆ 850 ಕೋಟಿ ರೂ. ಅನುದಾನ; ಸಿಎಂಗೆ ಮಧು ಬಂಗಾರಪ್ಪ ಅಭಿನಂದನೆ

    110 ಹಳ್ಳಿಗಳಿಗೆ ಕಾವೇರಿ ನೀರಿನ ಸೌಲಭ್ಯ ಮಾಡುವ ಭರವಸೆ ನೀಡಿದ್ದಾರೆ. ಸಂಚಾರ ಸಮಸ್ಯೆ ನಿವಾರಣೆ ಬಗ್ಗೆ ಹೇಳಿದ್ದಾರೆ. ವೈಟ್ ಟ್ಯಾಪಿಂಗ್ ಕ್ಲಿಯರ್ ಮಾಡುವ ಬಗ್ಗೆ ಬಜೆಟ್‌ನಲ್ಲಿ ತಿಳಿಸಿದ್ದಾರೆ. ಇನ್ನೂ ಬೆಂಗಳೂರು ಬಿಟ್ಟು ಹೊರಗೆ ಏನಿದೆ ಎಂದು ನೋಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಜೆಟ್ ಮೊತ್ತ ನೋಡಿ ಬಿಜೆಪಿಗರಿಗೆ ಕುಳಿತುಕೊಳ್ಳಲು ಆಗದೆ ಕೈ ಹಿಸುಕಿಕೊಂಡಿದ್ದಾರೆ: ಡಿಕೆಶಿ

  • ತಾಳಿ ಒಬ್ಬರ ಹತ್ತಿರ ಕಟ್ಟಿಸಿಕೊಂಡು ಸಂಸಾರ ಇನ್ನೊಬ್ಬರ ಜೊತೆ ಮಾಡ್ಬಾರ್ದು: ಈಶ್ವರಪ್ಪ ಕಿಡಿ

    ತಾಳಿ ಒಬ್ಬರ ಹತ್ತಿರ ಕಟ್ಟಿಸಿಕೊಂಡು ಸಂಸಾರ ಇನ್ನೊಬ್ಬರ ಜೊತೆ ಮಾಡ್ಬಾರ್ದು: ಈಶ್ವರಪ್ಪ ಕಿಡಿ

    ರಾಯಚೂರು: ಶಾಸಕ ಎಸ್.ಟಿ ಸೋಮಶೇಖರ್ (ST Somashekahr) ಹಾಗೂ ಹೆಬ್ಬಾರ್ ತಾಳಿ ಒಂದು ಕಡೆ ಕಟ್ಟಿಸಿಕೊಂಡು ಸಂಸಾರ ಇನ್ನೊಬ್ಬರ ಜೊತೆ ಮಾಡಬಾರದು ಅಂತ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (KS Eshwarappa) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಅವರನ್ನ ಚುನವಾಣೆಯಲ್ಲಿ ನಿಲ್ಲಿಸಿ, ಗೆಲ್ಲಿಸಿ ಮಂತ್ರಿ ಮಾಡಾಯ್ತು, ಈಗ ಮತ್ತೆ ಗೆದ್ದಾಯ್ತು. ಈಗ ಸಿದ್ದರಾಮಯ್ಯ, ಡಿಕೆಶಿ ಕಡೆ ಒಲವಾಗಿದೆ. ಬಿಜೆಪಿ (BJP) ಅಲ್ಲಿ ಇಉವ ಹಾಗಿದ್ರೆ ಇರಿ, ಇಲ್ಲಾ ಹೋಗಿ. ತಾಳಿ ಒಬ್ಬರತ್ರ ಕಟ್ಟಿಸಿಕೊಂಡು ಸಂಸಾರ ಮತ್ತೊಬ್ಬರ ಜೊತೆ ಮಾಡಬಾರದು. ಅದು ನಮ್ಮ ಸಂಸ್ಕೃತಿ ಅಲ್ಲ. ಅವರಿಂದ ವೈಯಕ್ತಿಕವಾಗಿ ನೊಂದಿದ್ದೇನೆ ಅಂತ ಈಶ್ವರಪ್ಪ ಹೇಳಿದರು.

    ಇದೇ ವೇಳೆ ಜ್ಞಾನವ್ಯಾಪಿಯ (Gyanavapi) ವೈಜ್ಞಾನಿಕ ಸಮೀಕ್ಷೆಗೆ ಮುಸಲ್ಮಾನ ಸಮುದಾಯ ಸಲ್ಲಿಸಿದ್ದ ಅರ್ಜಿ ವಜಾ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಎರಡು ಕನಸು ಈಗ ಈಡೇರಿದೆ. ಅಯೋದ್ಯಯಲ್ಲಿ ರಾಮಮಂದಿರ, ಆರ್ಟಿಕಲ್ 370 ಕಿತ್ತು ಬೀಸಾಕಾಯ್ತು ಎಂದರು. ಇದನ್ನೂ ಓದಿ: ಅಶಿಸ್ತಿನ ವರ್ತನೆ, 49 ಸಂಸದರ ಅಮಾನತು – ಇಲ್ಲಿಯವರೆಗೆ 149 ಮಂದಿ ಸಸ್ಪೆಂಡ್‌

    ಕಾಶಿ ವಿಶ್ವನಾಥನ ಸರ್ವೇಗೆ ರಿಪೋರ್ಟ್ ಬಂದಿತ್ತು. ಕಾಶಿ ವಿಶ್ವನಾಥ ದೇವಸ್ಥಾನ, ಮಥುರೈ ಶ್ರೀಕೃಷ್ಣನ ದೇವಸ್ಥಾನ ಒಡೆದು ಮಸೀದಿ ಕಟ್ಟಲಾಗಿದೆ ಎಂದಿದ್ದೆ. ಹೊಸ ಮಸೀದಿಗಳನ್ನ ಒಡೆಯಲ್ಲ, ಸ್ವಾತಂತ್ರ್ಯ ಬಂದ ಮೇಲೆ ಮುಸಲ್ಮಾನರು ಹೊಸ ಮಸೀದಿ ಕಟ್ಟಿಕೊಂಡು ನಮಾಜ್ ಮಾಡ್ತಿದ್ದಾರೆ ಅದಕ್ಕೆ ಗೌರವ ಕೊಡ್ತೇವೆ. ವಯಸ್ಸಿಗೆ ಬಂದ ಮಗು ಹೇಳುತ್ತೆ ಕೃಷ್ಣ ಹುಟ್ಟಿದ ಸ್ಥಳ ಯಾವುದು ಅಂದ್ರೆ ಮಥುರಾ ಅಂತ. ಕಾಶಿ ವಿಶ್ವನಾಥ ದೇವಸ್ಥಾನ ಹಿಂದೂಗಳದ್ದು ಅಂತಾರೆ. ರಾಮ ಹುಟ್ಟಿದ ಜಾಗ ಅಯೋಧ್ಯೆ ಅಂತಾರೆ. ಆದ್ರೆ ಕಾಂಗ್ರೆಸ್, ಸಿದ್ದರಾಮಯ್ಯಗೆ ಅರ್ಥ ಆಗಲ್ಲ. ರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದಕ್ಕೆ ಸಾಕ್ಷಿ ಕೊಡಿ ಅಂತಾರೆ ಅಂತ ಈಶ್ವರಪ್ಪ ಅಸಮಾಧಾನ ಹೊರಹಾಕಿದರು.