Tag: ಎಸ್‍ಎಸ್ ಮೆಡಿಕಲ್ ಕಾಲೇಜ್

  • ಎಸ್‍ಎಸ್ ಮೆಡಿಕಲ್ ಕಾಲೇಜ್‍ಗೆ ನವೀನ್ ಮೃತದೇಹ ದಾನ

    ಎಸ್‍ಎಸ್ ಮೆಡಿಕಲ್ ಕಾಲೇಜ್‍ಗೆ ನವೀನ್ ಮೃತದೇಹ ದಾನ

    ದಾವಣಗೆರೆ: ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಮೃತದೇಹ ಇಂದು ತಾಯ್ನಾಡಿಗೆ ಆಗಮಿಸಿದ್ದು, ಇದೀಗ ಅದನ್ನು ಎಸ್‍ಎಸ್ ಮೆಡಿಕಲ್ ಕಾಲೇಜ್‍ಗೆ ದಾನ ಮಾಡಲಾಗಿದೆ.

    ಹಾವೇರಿ ಸ್ವಗ್ರಾಮ ಚಳಗೇರೆಯಿಂದ ಎಸ್‍ಎಸ್ ಮೆಡಿಕಲ್ ಕಾಲೇಜ್‍ಗೆ ಪೊಲೀಸರ ಭದ್ರತೆಯಲ್ಲಿ ಮೃತದೇಹ ಆಗಮಿಸಿದೆ. ನಂತರ ಅದನ್ನು ಎಸ್‍ಎಸ್ ಮೆಡಿಕಲ್ ಕಾಲೇಜ್ ಅನಾಟಮಿ ಡಿಪಾರ್ಟ್‌ ಮೆಂಟ್‌ ಹಸ್ತಾಂತರಿಸಲಾಯಿತು. ಹಸ್ತಾಂತರಕ್ಕೂ ಮುನ್ನ ತಾಯಿ ವಿಜಯಲಕ್ಷ್ಮಿ, ಸಹೋದರ ಹರ್ಷ ಪೂಜೆ ಮಾಡಿದರು. ಇದನ್ನೂ ಓದಿ: ನವೀನ್ ಮೃತದೇಹ ರಾಜ್ಯಕ್ಕೆ ಆಗಮನ – ಕುಟುಂಬಕ್ಕೆ ಹಸ್ತಾಂತರಿಸಿದ ಸಿಎಂ

    ಮಗನ ಮೃತದೇಹದ ಮುಂದೆ ತಾಯಿ ಹಾಗೂ ಸಹೋದರ ಕಣ್ಣೀರಿಟ್ಟರು. ಅಲ್ಲದೆ ಮಗನಿಗೆ ಲಟಿಕೆ ತೆಗೆದು ತಾಯಿ ಕೈ ಮುಗಿದರೆ, ಸಹೋದರ ನವೀನ್ ಮೃತದೇಹಕ್ಕೆ ಮುತ್ತಿಟ್ಟರು. ಇತ್ತ ಎಸ್‍ಎಸ್ ಮೆಡಿಕಲ್ ಕಾಲೇಜು ಉಪನ್ಯಾಸಕರು ಹಾಗೂ ಸಿಬ್ಬಂದಿ ಕೂಡ ನವೀನ್ ಮೃತದೇಹಕ್ಕೆ ಪೂಜೆ ಸಲ್ಲಿಸಿದರು. ಮಗನ ಮೃತದೇಹದ ಮೇಲೆಯೇ ಬಿದ್ದು ತಾಯಿ ಅತ್ತ ದೃಶ್ಯ ಕಣ್ಣೀರು ತರಿಸುವಂತಿತ್ತು. ಪೂಜೆ ವೇಳೆ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

    ತಾಯಿ ಹಾಗೂ ಸಹೋದರ ದೇಹದಾನದ ಪ್ರಕ್ರಿಯೆಗೆ ಸಹಿ ಹಾಕಿದರು. ಎಸ್ ಎಸ್ ಮೆಡಿಕಲ್ ಕಾಲೇಜು ಪ್ರಿನ್ಸಿಪಲ್ ಡಾ ಪ್ರಸಾದ್ ಸಂತಾಪ ಸೂಚಿಸಿ ದೇಹದಾನದ ಪತ್ರವನ್ನು ತೋರಿಸಿದರು. ಇದೇ ವೇಳೆ ಡಾ. ಪ್ರಸಾದ್ ಹಸ್ತಾಂತರ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ವೈದ್ಯರು ನವೀನ್ ತಾಯಿಗೆ ಧನ್ಯವಾದ ತಿಳಿಸಿದ ಪ್ರಮಾಣ ಪತ್ರ ನೀಡಿದರು.