Tag: ಎಸಿಬಿ ಅಧಿಕಾರಿಗಳು

  • ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ತಹಶೀಲ್ದಾರ್ – 1.10 ಕೋಟಿ ಹಣ ವಶ

    ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ತಹಶೀಲ್ದಾರ್ – 1.10 ಕೋಟಿ ಹಣ ವಶ

    ಹೈದರಾಬಾದ್: ತಹಶೀಲ್ದಾರ್ ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದವರಿಗೆ (ಎಸಿಬಿ) ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಕೀಸರದ ತಹಶೀಲ್ದಾರ್ ಎರ್ವಾ ಬಲರಾಜು ನಾಗರಾಜು ಎಸಿಬಿ ಬಲೆಗೆ ಬಿದ್ದಿದ್ದಾನೆ. ಇವನು ಬರೋಬ್ಬರಿ 1.10 ಕೋಟಿಗಿಂತ ಹೆಚ್ಚು ಹಣವನ್ನು ಲಂಚವಾಗಿ ಪಡೆದುಕೊಳ್ಳುತ್ತಿದ್ದನು. ಆದರೆ ಶುಕ್ರವಾರ ರಾತ್ರಿ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ.

    ಎಎಸ್ ರಾವ್ ನಗರದ ತಹಶೀಲ್ದಾರ್ ನಿವಾಸದಲ್ಲಿ ದಾಳಿ ಮಾಡಲಾಗಿದೆ. ಆಗ ಬರೋಬ್ಬರಿ 1.10 ಕೋಟಿ ನಗದು ಹಣ ಪತ್ತೆಯಾಗಿದೆ. ಆದರೆ ತಹಶೀಲ್ದಾರ್ ಹೆಚ್ಚಾಗಿ 500 ರೂ. ಮುಖಬೆಲೆಯ ನೋಟುಗಳನ್ನು ಲಂಚವಾಗಿ ಸ್ವೀಕರಿಸಿದ್ದನು. ಹೀಗಾಗಿ ಶುಕ್ರವಾರ ರಾತ್ರಿ ನೋಟುಗಳ ಎಣಿಕೆ ಶುರುವಾಗಿದ್ದು, ಇಂದು ಬೆಳಗ್ಗೆ ತನಕ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

    ರಾಂಪಲ್ಲಿ ದಯಾರದಲ್ಲಿ 28 ಎಕರೆ ಜಮೀನಿನ ವಿವಾದ ಇತ್ತು. ಇದನ್ನು ಅಧಿಕೃತ ಶ್ರೀ ಸತ್ಯ ಡೆವಲಪರ್ ಚೌಲಾ ಶ್ರೀನಾಥ್ ಪರವಾಗಿ ಕೆಲಸ ಮಾಡಿದ್ದಕ್ಕಾಗಿ ಈ ಹಣವನ್ನು ತಹಶೀಲ್ದಾರ್ ಲಂಚವಾಗಿ ಪಡೆದುಕೊಂಡಿದ್ದಾನೆ ಎಂದು ಹೇಳಲಾಗಿದೆ. ಹೀಗಾಗಿ ಚೌಲಾ ಶ್ರೀನಾಥ್, ತಹಶೀಲ್ದಾರ್ ನಾಗರಾಜು ಮತ್ತು ಲ್ಯಾಂಡ್ ಬ್ರೋಕರ್ ಕೆ.ಅಂಜಿ ರೆಡ್ಡಿಯನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ನಾಗರಾಜು ನಿವಾಸದ ಹೊರತಾಗಿ ಆತನ ಕಚೇರಿ ಆವರಣದಲ್ಲಿಯೂ ಎಸಿಬಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಕಂದಾಯ ಅಧಿಕಾರಿ ಬಿ.ಸೈರಾಜ್‍ರನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

  • ಆರ್‌ಟಿಓ ಕಚೇರಿ ಮೇಲೆ ಎಸಿಬಿ ದಾಳಿ – ಮಧ್ಯವರ್ತಿಗಳಿಂದ 1.76 ಲಕ್ಷ ವಶ

    ಆರ್‌ಟಿಓ ಕಚೇರಿ ಮೇಲೆ ಎಸಿಬಿ ದಾಳಿ – ಮಧ್ಯವರ್ತಿಗಳಿಂದ 1.76 ಲಕ್ಷ ವಶ

    ದಾವಣಗೆರೆ: ಇಂದು ನಗರದ ಆರ್‌ಟಿಓ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ನಡೆದಿದ್ದು, 15ಕ್ಕೂ ಹೆಚ್ಚು ಮಧ್ಯವರ್ತಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಸಾರ್ವಜನಿಕರಿಂದ ಡಿಎಲ್, ಎಲ್‍ಎಲ್‍ಆರ್ ಮಾಡಿಸಲು ದುಪ್ಪಟ್ಟು ದರ ಹಾಗೂ ಮತ್ತಿತರ ಕೆಲಸ ಮಾಡಿಸಲು ಸಾವಿರಾರು ರೂಪಾಯಿ ವಸೂಲು ಮಾಡುತ್ತಿದ್ದ ಮಧ್ಯವರ್ತಿಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಮಧ್ಯವರ್ತಿಗಳ ಬಳಿ ಇದ್ದ ಅಪಾರ ಪ್ರಮಾಣದ ದಾಖಲೆಗಳನ್ನು ಮತ್ತು ಹಣವನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮೂಲಕ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದ ಏಜೆಂಟ್‍ಗಳ ಹಾವಳಿಗೆ ಎಸಿಬಿ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.

    ವಶಕ್ಕೆ ಪಡೆದುಕೊಂಡ ಮಧ್ಯವರ್ತಿಗಳ ಮೇಲೆ ಪ್ರಕರಣ ದಾಖಲು ಮಾಡಿದ್ದು, 15 ಜನ ಮಧ್ಯವರ್ತಿಗಳಿಂದ 1,76,855 ರೂಪಾಯಿ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಆರ್‌ಟಿಓ ಅಧಿಕಾರಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಎಸಿಬಿ ಡಿವೈಎಸ್‍ಪಿ ಪರಮೇಶ್ವರಪ್ಪ ನೇತೃತ್ವದ ತಂಡ ಈ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

  • ರೇಷ್ಮಾ ಕೇಸ್ – ಕರ್ನಾಟಕ ಡಿವೈಎಸ್‍ಪಿಯನ್ನು ಹುಡುಕಿಕೊಂಡು ಬಂದ ಮಹಾರಾಷ್ಟ್ರ ಪೊಲೀಸರು

    ರೇಷ್ಮಾ ಕೇಸ್ – ಕರ್ನಾಟಕ ಡಿವೈಎಸ್‍ಪಿಯನ್ನು ಹುಡುಕಿಕೊಂಡು ಬಂದ ಮಹಾರಾಷ್ಟ್ರ ಪೊಲೀಸರು

    ವಿಜಯಪುರ: ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ ಹತ್ಯೆ ಪ್ರಕರಣ ಸಂಬಂಧ ಲಂಚ ಪಡೆದ ಕರ್ನಾಟಕ ಪೊಲೀಸ್ ಅಧಿಕಾರಿಯನ್ನು ಮಹಾರಾಷ್ಟ್ರ ಎಸಿಬಿ ಅಧಿಕಾರಿಗಳು ಹುಡುಕಿಕೊಂಡು ರಾಜ್ಯಕ್ಕೆ ಬಂದಿದ್ದಾರೆ.

    ಆರೋಪಿಗಳ ವಿಚಾರಣೆಗೆ ತೆರಳಿದ್ದ ವೇಳೆ ಲಂಚ ಸ್ವೀಕರಿಸುತ್ತಿದ್ದಾಗ ಬಸವನಬಾಗೇವಾಡಿ ಉಪವಿಭಾಗದ ಡಿವೈಎಸ್‍ಪಿ ಮಹೇಶ್ವರಗೌಡ ಹಾಗೂ ರೈಟರ್ ಮಲ್ಲಿಕಾರ್ಜುನ ಪೂಜಾರಿ ಮಹಾರಾಷ್ಟ್ರ ಎಸಿಬಿ ಬಲೆಗೆ ಬಿದ್ದಿದ್ದರು. ರೇಷ್ಮಾ ಪಡೇಕನೂರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತೌಫಿಕ್ ಪೈಲ್ವಾನ್ ಕುಟುಂಬಸ್ಥರಿಗೆ ಬಸವನಬಾಗೇವಾಡಿ ಉಪವಿಭಾಗದ ಡಿವೈಎಸ್‍ಪಿ ಮಹೇಶ್ವರಗೌಡ ಹಾಗೂ ರೈಟರ್ ಪೂಜಾರಿ ಒಟ್ಟು 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಮಧ್ಯವರ್ತಿ ರಿಯಾಜ್ 1.5 ಲಕ್ಷ ರೂ.ಗೆ ಈ ವ್ಯವಹಾರ ಕುದುರಿಸಿದ್ದ.

    ಈ ಒಪ್ಪಂದಕ್ಕೆ ಪೈಲ್ವಾನ್ ಕುಟುಂಬಸ್ಥರು 1 ಲಕ್ಷ ನೀಡಲು ಒಪ್ಪಿಗೆ ಸೂಚಿಸಿದ್ದರು. ಲಂಚದ ಹಣ ಪಡೆಯಲು ಬಂದಾಗ ಆಗಸ್ಟ್ 22ರಂದು ಸೋಲಾಪುರ ಎಸಿಬಿ ಅಧಿಕಾರಿಗಳು ಪೂಜಾರಿ ಹಾಗೂ ರಿಯಾಜ್ ಇಬ್ಬರನ್ನು ಸೆರೆ ಹಿಡಿದಿದ್ದರು. ಅಲ್ಲದೆ ಡಿವೈಎಸ್‍ಪಿ ಮಹೇಶ್ವರಗೌಡರನ್ನು ಬಂಧಿಸಲು ಒಂದು ತಂಡವನ್ನು ವಿಜಯಪುರಕ್ಕೆ ಕಳುಹಿಸಿರುವುದಾಗಿ ಎಸಿಬಿ ಅಧಿಕಾರಿ ಅಜಿತ್ ಜಾಧವ್ ತಿಳಿಸಿದ್ದರು.

    ಇಬ್ಬರ ಬಂದನ ನಡೆದ ಬಳಿಕ ಡಿವೈಎಸ್‍ಪಿ ಮಹೇಶ್ವರಗೌಡ ನಾಪತ್ತೆಯಾಗಿದ್ದಾರೆ. ಅವರನ್ನು ಬಂಧಿಸಲು ಮಹಾರಾಷ್ಟ್ರದ ಎಸಿಬಿಯ ನಾಲ್ವರು ಅಧಿಕಾರಿಗಳು ಕರ್ನಾಟಕಕ್ಕೆ ಬಂದಿದ್ದು, ವಿಜಯಪುರ ಎಸ್‍ಪಿ ಕಚೇರಿಗೆ ಭೇಟಿ ನೀಡಿದ ಎಸಿಬಿ ಅಧಿಕಾರಿಗಳು ಕೊಲೆ ಪ್ರಕರಣ ಹಾಗೂ ಮಹೇಶ್ವರಗೌಡ ಅವರ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಶೀಘ್ರದಲ್ಲೇ ಮಹೇಶ್ವರಗೌಡ ಅವರನ್ನು ವಶಕ್ಕೆ ಪಡೆಯುವುದಾಗಿ ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

  • ತಹಶೀಲ್ದಾರ್ ಕಚೇರಿ ಮೇಲೆ ಎಸಿಬಿ ದಾಳಿ – ನಕಲಿ ಅಧಿಕಾರಿಯನ್ನು ನೋಡಿ ದಂಗಾದ ಅಧಿಕಾರಿಗಳು

    ತಹಶೀಲ್ದಾರ್ ಕಚೇರಿ ಮೇಲೆ ಎಸಿಬಿ ದಾಳಿ – ನಕಲಿ ಅಧಿಕಾರಿಯನ್ನು ನೋಡಿ ದಂಗಾದ ಅಧಿಕಾರಿಗಳು

    ವಿಜಯಪುರ: ದಾಳಿ ವೇಳೆ ನಕಲಿ ಅಧಿಕಾರಿಯೊಬ್ಬ ಸಿಕ್ಕಿ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.

    ಅಧಿಕಾರಿಗಳು ಕೆಲಸ ಮಾಡಿಕೊಡಲು ಲಂಚ ಕೇಳುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಇಂದು ದೇವರ ಹಿಪ್ಪರಗಿ ತಹಶೀಲ್ದಾರ್ ಕಚೇರಿಗೆ ಎಸಿಬಿ ಅಧಿಕಾರಿಗಳಾದ ಡಿಎಸ್‍ಪಿ ಮಲ್ಲೇಶ್ ಹಾಗೂ ಇನ್ಸ್ ಪೆಕ್ಟರ್ ಸಚಿನ್ ಚಲವಾದಿ ದಾಳಿ ನಡೆಸಿದ್ದಾರೆ. ಈ ವೇಳೆ ಚಂದ್ರಹಾಸ ಹೊಸಮನಿ ನಕಲಿ ಅಧಿಕಾರಿಯಾಗಿ ಅಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ.

    ಸರ್ಕಾರಿ ಸಿಬ್ಬಂದಿಯಂತೆ ತಹಶೀಲ್ದಾರ್ ಕಚೇರಿಯಲ್ಲೇ ಪ್ರತ್ಯೇಕ ಟೇಬಲ್, ಪ್ರತ್ಯೇಕ ತಿಜೋರಿ ಹೊಂದಿದ್ದ ಹೊಸಮನಿ ಸಿಂಧುತ್ವ ನೀಡಲು ಹಣಮಂತ ರೆಡ್ಡಿ ಎಂಬುವರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಹಣಮಂತ ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ದಾಳಿ ನಡೆಸಿ ಪರಿಶೀಲನೆ ಮಾಡಿದಾಗ ನಕಲಿ ಅಧಿಕಾರಿ ಅನ್ನೋದು ಬಯಲಾಗಿದೆ.

    ಸಿಂಧುತ್ವ ವಿಭಾಗದ ಅಧಿಕಾರಿ ಎಂದು ಹೇಳಿಕೊಂಡಿದ್ದ ಹೊಸಮನಿ, ಜನರಿಂದ ಸಿಂಧುತ್ವಕ್ಕಾಗಿ ಹಣ ಪಡೆಯುತ್ತಿದ್ದ. ಈ ಚಂದ್ರಹಾಸ ಹೊಸಮನಿ ಮೂಲಕವೇ ತಹಶೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಸಲಾಗುತಿತ್ತು ಎಂದು ಸಾರ್ವಜನಿಕರ ಆರೋಪ ಮಾಡಿದ್ದಾರೆ. ಹೊಸಮನಿಯನ್ನು ತಹಶೀಲ್ದಾರ್ ಕಚೇರಿಯ ಸರ್ಕಾರಿ ಸಿಬ್ಬಂದಿ ಎಂದು ಭಾವಿಸಿದ್ದ ಜನರು ಮತ್ತು ಎಸಿಬಿ ಅಧಿಕಾರಿಗಳು ನಕಲಿ ಎಂದು ತಿಳಿದು ದಂಗಾಗಿದ್ದಾರೆ.

    ನಕಲಿ ಅಧಿಕಾರಿ ಹೊಸಮನಿಯನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು, 25 ಕ್ಕೂ ಅಧಿಕ ಸಿಂಧುತ್ವ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವಿಚಾರದಲ್ಲಿ ತನಿಖೆ ನಡೆಸಿ ಈತನಿಂದ ಹಣ ಪಡೆಯುತ್ತಿದ್ದ ಅಧಿಕಾರಿಗಳನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲು ಎಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.

  • ಕಡುಭ್ರಷ್ಟ ಟಿಆರ್ ಸ್ವಾಮಿ ಮನೆಯಿಂದ ಎಸೆಯಲ್ಪಟ್ಟ ಕೋಟಿ ಹಣಕ್ಕೆ ಟ್ವಿಸ್ಟ್

    ಕಡುಭ್ರಷ್ಟ ಟಿಆರ್ ಸ್ವಾಮಿ ಮನೆಯಿಂದ ಎಸೆಯಲ್ಪಟ್ಟ ಕೋಟಿ ಹಣಕ್ಕೆ ಟ್ವಿಸ್ಟ್

    ಬೆಂಗಳೂರು: ಕಡುಭ್ರಷ್ಟ ಟಿಆರ್ ಸ್ವಾಮಿ ಮನೆಯಿಂದ ಎಸೆಯಲ್ಪಟ್ಟ ಕೋಟಿ ಹಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, 14ನೇ ಫ್ಲೋರ್ ನಿಂದ ಎಸೆಯಲ್ಪಟ್ಟ 4 ಕೋಟಿ ರೂ. ಸ್ವಾಮಿಯದ್ದಲ್ಲ ಎಂಬುದಾಗಿ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಇದು ಹೆಚ್‍ಡಿಕೆ ಸಂಪುಟದ ಪ್ರಭಾವಿ ಸಚಿವರಿಗೆ ಸೇರಬೇಕಿದ್ದ ಹಣವಾಗಿದೆ. `ಆ’ ಪ್ರಭಾವಿ ಸಚಿವ ದೋಸ್ತಿ ಸರ್ಕಾರದ `ಎಟಿಎಂ ಮಿನಿಸ್ಟರ್’ ಎನ್ನಲಾಗಿದೆ. ಟಿ ಆರ್ ಸ್ವಾಮಿ `ಆ’ ಸಚಿವರಿಗೆ ಹಣ ಸಂದಾಯ ಮಾಡಲು ಕೂಡಿಟ್ಟಿರುವುದಾಗಿ ತಿಳಿದುಬಂದಿದೆ.

    `ಈ ಹಣ ಸಚಿವರದ್ದು.. ನಮ್ ತಂಟೆಗೆ ಬಂದ್ರೆ ಹುಷಾರ್…’ ಎಂದು ಹೇಳಿ ಬೆದರಿಕೆ ಹಾಕುವ ಮೂಲಕ ಸಚಿವರ ಹೆಸರೇಳಿ ತನಿಖಾ ತಂಡವನ್ನು ಬೆದರಿಸಲು ಸ್ವಾಮಿ ಕುಟುಂಬದ ಯತ್ನಿಸಿದೆ. ನೀವು ಬೇಕಿದ್ರೆ ಹೇಳಿಕೆ ರೆಕಾರ್ಡ್ ಮಾಡಿ.. ಕೋರ್ಟ್ ನಲ್ಲಿ ಉಲ್ಟಾ ಹೊಡಿತೀನಿ ಎಂದು ಸ್ವಾಮಿ ಪತ್ನಿ ಹೇಳಿದ್ದಾರೆ. ನಾನು ಕೋರ್ಟ್ ನಲ್ಲಿ ಉಲ್ಟಾ ಹೊಡೆದ್ರೆ ಸಚಿವರು ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತಾರೆ. ಸುಮ್ನೆ ನಮ್ಮೆಜಮಾನ್ರನ್ನು ಸಿಲುಕಿಸಬೇಡಿ. ಸಚಿವರ ಹಣವನ್ನ ತಮ್ಮ ಬಳಿ ಇಟ್ಟುಕೊಂಡಿದ್ರು ಅಷ್ಟೆ. ಆ ಪ್ರಭಾವಿ ಸಚಿವರ ಹಣ ಇಟ್ಟುಕೊಂಡಿದ್ದಕ್ಕೆ ನಮ್ಮ ಯಜಮಾನ್ರಿಗೆ ಯಾಕೆ ಶಿಕ್ಷೆ ಅಂತ ಟಿ ಆರ್ ಸ್ವಾಮಿಯ ಧರ್ಮಪತ್ನಿ ಎಸಿಬಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.

    ಎಸಿಬಿ ದಾಳಿ:
    ಕಳೆದ ಮೇ ತಿಂಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಕೆಐಎಡಿಬಿ ಚೀಫ್ ಎಂಜಿನಿಯರ್ ಟಿಆರ್ ಸ್ವಾಮಿ, ತನ್ನ ಮನೆಯಲ್ಲಿದ್ದ 4 ಕೋಟಿ ಹಣವನ್ನು ಸೂಟ್ ಕೇಸ್ ಗೆ ತುಂಬಿ ಬಳಿಕ ಅದನ್ನು ಅಪಾರ್ಟ್ ಮೆಂಟ್ ನಿಂದ ಬಾಲ್ಕನಿಯಿಂದ ಹೊರಕ್ಕೆ ಎಸೆದಿದ್ದರು. ಕಂತೆ ಕಂತೆ ನೋಟುಗಳಲ್ಲಿ ಅಪಾರ್ಟ್ ಮೆಂಟ್ ಗಾರ್ಡನ್ ನಲ್ಲಿ ಬಿದ್ದಿರುವುದನ್ನು ಕಂಡ ಎಸಿಬಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹಣವನ್ನು ಆಯ್ದುಕೊಂಡು ಬ್ಯಾಗಿಗೆ ತುಂಬಿದ್ದರು. ಬಳಿಕ ಹಣ ಸಮೇತ ಅಪಾರ್ಟ್ ಮೆಂಟ್ ನ 14ನೇ ಮಹಡಿಯಲ್ಲಿದ್ದ ಸ್ವಾಮಿ ಮನೆಗೆ ತೆರಳಿದ್ದರು.

    ಅಧಿಕಾರಿಗಳು ಮನೆಯ ಬಾಗಿಲು ತೆಗೆಯಲು ಹೇಳಿದರೂ ಸುಮಾರು 1 ಗಂಟೆ ಕಾಲ ಬಾಗಿಲು ತೆರೆಯದೇ ಹೈಡ್ರಾಮ ನಡೆಸಿದ್ದರು. ಬಳಿಕ ಹೊರಕ್ಕೆ ಬಂದಿದ್ದು ಅಧಿಕಾರಿಗಳು ತಂದಿದ್ದ ಹಣ ತನ್ನದಲ್ಲ ಎಂದು ವಾದ ನಡೆಸಿದ್ದರು. ಈ ವೇಳೆ ಎಸಿಬಿ ಅಧಿಕಾರಿಗಳು ತಮ್ಮದೇ ವರಸೆಯಲ್ಲಿ ಪ್ರಶ್ನೆ ಮಾಡಿದ ಬಳಿಕ ಸ್ವಾಮಿ ಸುಮ್ಮನಾಗಿದ್ದರು ಎಂದು ತಿಳಿದು ಬಂದಿತ್ತು. ಈ ಹಂತದಲ್ಲಿ ಮನೆ ಪ್ರವೇಶಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮನೆಯ ಯಾವ ಮೂಲೆ ಹುಡುಕಿದರೂ ಸಿಗುತ್ತಿದ್ದ ಕಂತೆ ಕಂತೆ ಹಣ ಕಂಡು ದಂಗಾಗಿದ್ದರು. ಮನೆಯಲ್ಲಿದ್ದ ಟಿವಿ ಕೆಳ ಭಾಗ, ಆಡುಗೆ ಮನೆ, ಕ್ಯಾಬಿನ್, ಹಳೆಯ ಬ್ಯಾಗ್, ಸೋಫಾ ಕೆಳಗೆ, ಬಾತ್ ರೂಂ ಬಕೆಟ್ ಗಳಲ್ಲಿ ಹಣ ತುಂಬಿಡಲಾಗಿತ್ತು. ಇದರೊಂದಿಗೆ ಬೆಂಗಳೂರು, ಮೈಸೂರಿನಲ್ಲಿ ಸೈಟ್‍ಗಳು, ಮಕ್ಕಳ ಹೆಸರಲ್ಲಿ ದುಬಾರಿ ಬೆಲೆಯ ಕಾರುಗಳ ಖರೀದಿ ಮಾಡಿರುವ ಕುರಿತ ದಾಖಲೆಗಳು ಪತ್ತೆಯಾಗಿತ್ತು.

    ಮನೆಯಲ್ಲಿ ಏನೇನು ಸಿಕ್ಕಿತ್ತು?
    ಸ್ವಾಮಿ.ಟಿ.ಆರ್: ಕುಟುಂಬಸ್ಥರ ಮತ್ತು ಸಂಬಂಧಿಕರ ಹೆಸರಿನಲ್ಲಿ 8 ಮನೆ, 10 ನಿವೇಶನಗಳು, ವಿವಿಧೆಡೆ 10 ಎಕರೆ ಕೃಷಿ ಜಮೀನು, 1.6 ಕೆಜಿ ಚಿನ್ನ, 3 ಕಾರು, 4.52 ಕೋಟಿ ರೂ ಪತ್ತೆಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv