Tag: ಎಲ್.ಚಂದ್ರಶೇಖರ್

  • ಹೋರಾಟಗಾರ ಅಪ್ಪನಿಗೆ ಹೇಡಿ ಮಗ-ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಎಲ್.ಚಂದ್ರಶೇಖರ್ ವಿರುದ್ಧ ತಂದೆ ವಾಗ್ದಾಳಿ

    ಹೋರಾಟಗಾರ ಅಪ್ಪನಿಗೆ ಹೇಡಿ ಮಗ-ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಎಲ್.ಚಂದ್ರಶೇಖರ್ ವಿರುದ್ಧ ತಂದೆ ವಾಗ್ದಾಳಿ

    – ಬಿಜೆಪಿ ಸೇರಿದ್ದು ಮೊದಲ ತಪ್ಪು, ಚುನಾವಣೆ ವಿಥ್ ಡ್ರಾ ಮಾಡಿದ್ದು ಎರಡನೇ ತಪ್ಪು
    – ಮಗನ ನಿರ್ಧಾರದ ಬಗ್ಗೆ ಮಾತನಾಡಲು ಅಸಹ್ಯ ಆಗ್ತಿದೆ
    – ರಾಜಕೀಯದಲ್ಲಿ ಆತ ಬಲಿಪಶು

    ಬೆಂಗಳೂರು: ರಾಮನಗರ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಚಂದ್ರಶೇಖರ್ ಅವರ ತಂದೆ ಹಾಗು ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಸಿ.ಎಂ.ಲಿಂಗಪ್ಪ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಮಗನ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

    ಮಗ ಬಿಜೆಪಿ ಸೇರಿದ್ದಾಗಿನಿಂದ ನಾನು ಅವನ ಜೊತೆ ಮಾತನಾಡಿಲ್ಲ. ಅವನು ಚುನಾವಣೆಯಿಂದ ಹಿಂದೆ ಸರಿದಿರುವ ವಿಚಾರವೇ ನನಗೆ ಗೊತ್ತಿರಲಿಲ್ಲ. ಈ ರೀತಿ ಪಲಾಯನ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಒಬ್ಬ ಹೋರಾಟಗಾರ ಅಪ್ಪನಿಗೆ ಆತ ಹೇಡಿ ಮಗ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಪುತ್ರನ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.

    ನನ್ನ ರಾಜಕೀಯ ಜೀವನದಲ್ಲಿ ಇಂತಹ ಬೆಳವಣಿಗೆಯನ್ನು ನಾನು ನೋಡಿಲ್ಲ. ಮತದಾನಕ್ಕೆ ಎರಡು ದಿನ ಮಾತ್ರ ಇದೆ. ನನ್ನ ಮಗ ಆಗಲಿ ಅಥವಾ ಯಾವುದೇ ಅಭ್ಯರ್ಥಿ ಈ ರೀತಿಯ ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು. ಚುನಾವಣೆ ನಂತರ ತಮ್ಮ ಅಭಿಪ್ರಾಯವನ್ನು ಪಕ್ಷದ ಮುಖಂಡರ ಮುಂದೆ ಹೇಳಬಹುದಿತ್ತು. ಚುನಾವಣೆಯ ಮೊದಲೇ ಹಿಂದೆ ಬಂದಿರೋದು ಆತ ಸೋಲನ್ನು ಒಪ್ಪಿಕೊಂಡಂತೆ ಆಗುತ್ತದೆ ಎಂದು ಮಗನ ನಿರ್ಣಯದ ಬಗ್ಗೆ ಸಿಎಂ ಲಿಂಗಪ್ಪ ಬೇಸರ ವ್ಯಕ್ತಪಡಿಸಿದರು.

    ಇದೊಂದು ರಾಜಕೀಯ ಆತ್ಮಹತ್ಯೆ:
    ನನ್ನ ರಾಜಕೀಯ ಜೀವನದಲ್ಲಿ ರಾಮನಗರಕ್ಕೆ ದೇವೇಗೌಡರು, ಕುಮಾರಸ್ವಾಮಿ ಬಂದರೂ ಅಂತಾ ನಾನು ಎಲ್ಲಿ ಓಡಿ ಹೋಗಲಿಲ್ಲ. ಅಂಬರೀಶ್ ವಿರುದ್ಧ ನಿಂತಾಗಲೂ ಕೊನೆಯವರೆಗೂ ಹೋರಾಡಿದ್ದೇನೆ. ಚುನಾವಣೆಯಲ್ಲಿ ಫಲಿತಾಂಶ ಬರೋವರೆಗೂ ಹೋರಾಡುವುದು ಶೂರನ ಕರ್ತವ್ಯ. ಹೇಡಿಗಳು ಫಲಿತಾಂಶ ಮೊದಲೇ ಪಲಾಯನ ಮಾಡುತ್ತಾರೆ. ಇಂದು ನನ್ನ ಮಗ ತೆಗೆದುಕೊಂಡಿರುವ ನಿರ್ಧಾರ ಆತ ರಾಜಕೀಯ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಅಸಮಾಧಾನ ಹೊರಹಾಕಿದರು.

    ಕಾಂಗ್ರೆಸ್ ಸೇರುವ ನಿರ್ಧಾರದ ಬಗ್ಗೆ ಚಂದ್ರಶೇಖರ್ ನನ್ನ ಜೊತೆ ಚರ್ಚಿಸಿಲ್ಲ. ಒಂದು ವೇಳೆ ಆತ ನನ್ನ ಸಲಹೆ ಪಡೆದಿದ್ದರೆ ಚುನಾವಣೆಯಿಂದ ಹಿಂದೆ ಸರಿಯಲು ಬಿಡುತ್ತಿರಲಿಲ್ಲ. ಬಿಜೆಪಿಗೆ ಹೋಗಬೇಡ ಅಂತಾ ಮನೆಗೆ ಕರೆಸಿ ಹೇಳಿದ್ರೂ ನನ್ನ ಮತು ಕೇಳಲಿಲ್ಲ. ಕಾಂಗ್ರೆಸ್ ನಮಗೆ ರಕ್ತಗತವಾಗಿದ್ದು, ಬೇರೆ ಪಕ್ಷಗಳು ನಮಗೆ ಇಷ್ಟವಾಗಲ್ಲ. ಎರಡು ದಿನದಲ್ಲಿ ಚುನಾವಣೆಯನ್ನು ಮುಂದಿಟ್ಟು ಪಲಾಯನ ಮಾಡುವುದು ಯಾವ ಸಿದ್ಧಾಂತ? ಅವನ ರಾಜಕೀಯ ಸಿದ್ಧಾಂತಗಳು ಏನೆಂಬುವುದು ನನಗೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಮಗನನ್ನು ಕರೆಸಿಕೊಂಡು ಆತ ಅನುಸರಿಸುವ ಸಿದ್ಧಾಂತಗಳು ಏನು ಅಂತಾ ಮಾಹಿತಿ ಪಡೆದುಕೊಳ್ಳುತ್ತೇನೆ. ಚುನಾವಣೆಯಿಂದ ಪಲಾಯನ ಆಗುವರರನ್ನು ಶೂರರು ಅಂತಾ ಯಾರು ಕರೆಯಲ್ಲ ಎಂದು ವಾಗ್ದಾಳಿ ನಡೆಸಿದರು.

    ಮಗ ಬಲಿಪಶು:
    ಬಿಜೆಪಿಯವರು ಮಗನನ್ನು ಬಲಿಪಶು ಮಾಡಿದರೋ ಏನೋ ಗೊತ್ತಿಲ್ಲ. ರಾಜಕೀಯ ರಂಗದಲ್ಲಿ ನನ್ನ ಮಗ ಬಲಿಪಶು ಆಗಿದ್ದಾನೆ. ಕಳೆದ 25 ವರ್ಷಗಳಿಂದ ಆತ ರಾಜಕೀಯದಲ್ಲಿ ಇದ್ದಾನೆ. ನನ್ನ ನಡೆಯನ್ನು ಆತ ಗಮನಿಸುತ್ತಾ ಬಂದಿದ್ದಾನೆ. ಒಬ್ಬ ಹೋರಾಟಗಾರ ಅಪ್ಪನಿಗೆ ಆತ ಹೇಡಿ ಮಗ. ಯಾವತ್ತು ಆತ ರಾಜಕೀಯದ ಬಗ್ಗೆ ನನ್ನ ಜೊತೆ ಚರ್ಚೆ ನಡೆಸಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಈ ಬಾರಿ ಟಿಕೆಟ್ ನಿನಗೆ ಕೊಡೋದು, ಎಲೆಕ್ಷನ್ ಗೆ ಸಿದ್ಧವಾಗು ಅಂತಾ ಹೇಳಿದ್ರು. ಆದ್ರೆ ಮಗ ಒಪ್ಪಿಕೊಳ್ಳಲಿಲ್ಲ. ಅನಿವಾರ್ಯವಾಗಿ ರಾಮನಗರ ಟಿಕೆಟ್ ಇಕ್ಬಾಲ್ ಹುಸೇನ್ ಅವರಿಗೆ ಸಿಕ್ಕಿತ್ತು. ಮಗನ ಈ ನಡವಳಿಕೆ ನೋಡಿ ನನಗೆ ಅಸಹ್ಯ ಆಗುತ್ತಿದೆ. ಈ ಕುರಿತು ಹೆಚ್ಚು ಮಾತನಾಡಲು ನನಗೆ ಮುಜುಗರ ಆಗ್ತಿದೆ. ಇಲ್ಲಿ ಕಾಂಗ್ರೆಸ್ ನಾಯಕರ ಯಾವುದೇ ಹಸ್ತಕ್ಷೇಪವಿಲ್ಲ. ಮಗ ಬಿಜೆಪಿಗೆ ಹೋಗಿದ್ದು ಮೊದಲನೇ ತಪ್ಪು, ಇವತ್ತು ಚುನಾವಣೆಯಿಂದ ಹಿಂದೆ ಬಂದಿದ್ದು ಎರಡನೇ ತಪ್ಪು. ಬೇರೆ ಯಾವ ಪಕ್ಷದ ನಾಯಕರ ಬಗ್ಗೆಯೂ ನಾನು ಪ್ರತಿಕ್ರಿಯೆ ನೀಡಲ್ಲ. ಮನೆಯಲ್ಲಿಯೂ ಆತ ನನ್ನ ಜೊತೆ ಮಾತನಾಡುತ್ತಿರಲಿಲ್ಲ ಎಂದು ತಿಳಿಸಿದರು.

    ನಾಮಪತ್ರ ಸಲ್ಲಿಸಲು ಹೋಗುವಾಗ ಆತನ ಆಪ್ತರು ನಿಮ್ಮ ತಂದೆಯ ಆಶೀರ್ವಾದ ಪಡೆದುಕೊಂಡು ಬಾ ಅಂತಾ ಸಲಹೆ ನೀಡಿದ್ದರಂತೆ. ಚಂದ್ರಶೇಖರ್ ನನ್ನ ಬಳಿಯೂ ಬರಲಿಲ್ಲ. ಒಂದು ವೇಳೆ ಆತ ಬಂದಿದ್ದರೂ ನನ್ನ ಕಾಲುಗಳನ್ನು ಮುಟ್ಟಲು ಸಹ ನಾನು ಬಿಡುತ್ತಿರಲಿಲ್ಲ ಎಂದು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಡೆಯ ಕ್ಷಣದಲ್ಲಿ ರಾಮನಗರದಲ್ಲಿ ಬಿಜೆಪಿಗೆ ಆಪರೇಷನ್ ನಡೆದಿದ್ದು ಹೇಗೆ?

    ಕಡೆಯ ಕ್ಷಣದಲ್ಲಿ ರಾಮನಗರದಲ್ಲಿ ಬಿಜೆಪಿಗೆ ಆಪರೇಷನ್ ನಡೆದಿದ್ದು ಹೇಗೆ?

    ಬೆಂಗಳೂರು: ರಾಜ್ಯ ಉಪಚುನಾವಣೆ ಘೋಷಣೆ ಆಗುತ್ತಿದಂತೆ ಮತ್ತೆ ಅಧಿಕಾರ ಪಡೆಯುವ ಕನಸು ಕಂಡಿದ್ದ ಬಿಜೆಪಿ ನಾಯಕರಿಗೆ ಪಕ್ಷದ ರಾಮನಗರ ಕ್ಷೇತ್ರದ ಅಭ್ಯರ್ಥಿ ಎಲ್ ಚಂದ್ರಶೇಖರ್ ಕಾಂಗ್ರೆಸ್‍ಗೆ `ಘರ್‌ವಾಪಸಿ’ ಆಗಿದ್ದಾರೆ. ಚುನಾವಣೆಯ ಕೊನೆಯ ಹಂತದಲ್ಲಿ ಬಿಜೆಪಿಗೆ ಅಭ್ಯರ್ಥಿಯನ್ನೇ ವಾಪಸ್ ಕರೆತರುವ ಮೂಲಕ ಡಿಕೆ ಸಹೋದರರು ಶಾಕ್ ನೀಡಿದ್ದು, ಈ ಆಪರೇಷನ್ ಬಿಜೆಪಿಯಲ್ಲಿ ತಳಮಳವನ್ನು ಉಂಟುಮಾಡಿದೆ.

    ರಾಮನಗರದಲ್ಲಿ ಪಕ್ಷದ ವಿರುದ್ಧ ಸಿಡಿದೆದ್ದ ಎಲ್ ಚಂದ್ರಶೇಖರ್ ಅವರು ಬಿಜೆಪಿ ಮಾಜಿ ಶಾಸಕ ಸಿಪಿ ಯೋಗೇಶ್ವರ್ ಅವರ ಮುಂದಾಳತ್ವದಲ್ಲಿ ಯಡಿಯೂರಪ್ಪನವವರನ್ನು ಭೇಟಿ ಮಾಡಿ ಪಕ್ಷ ಸೇರಿದ್ದರು. ಆದರೆ ಚುನಾವಣೆಯಲ್ಲಿ ಚಂದ್ರಶೇಖರ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಬಳಿಕ ಪಕ್ಷದ ಪರ ಪ್ರಚಾರಕ್ಕೆ ರಾಮನಗರಕ್ಕೆ ಬಿಜೆಪಿ ನಾಯಕರು ಆಗಮಿಸಿರಲಿಲ್ಲ. ಇದರಿಂದ ಕಂಗೆಟ್ಟ ಚಂದ್ರಶೇಖರ್ ರಾತ್ರೋ ರಾತ್ರಿ ರಸ್ತೆ ಮಧ್ಯೆ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂಬಂಧ ಬುಧವಾರ ರಾತ್ರಿ 11.30ಕ್ಕೆ ಡಿಕೆ ಸುರೇಶ್‍ಗೆ ಫೋನ್ ಮಾಡಿದ ಚಂದ್ರಶೇಖರ್ ಮಾತುಕತೆ ನಡೆಸಲು ಅವಕಾಶ ಕೋರಿದ್ದರು.

    ಇತ್ತ ಚಂದ್ರಶೇಖರ್ ಮನವಿ ಮೇರೆಗೆ ಮಾತುಕತೆ ನಡೆಸಲು ಸಮ್ಮತಿ ಸೂಚಿಸಿದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ನಗರದ ಕೆಂಗೇರಿ ಬಳಿ ಭೇಟಿ ಮಾಡಿದ್ದರು. ಇಬ್ಬರ ನಡುವೆಯೂ ಸುಮಾರು 4 ಗಂಟೆಯಷ್ಟು ಕಾಲ ಮಾತುಕತೆ ನಡೆದ ಬಳಿಕ ಮತ್ತೆ ಕಾಂಗ್ರೆಸ್ ಸೇರ್ಪಡೆ ಆಗುವ ಕುರಿತು ಚಂದ್ರಶೇಖರ್ ಅವರಿಗೆ ಡಿಕೆ ಸುರೇಶ್ ಆಫರ್ ನೀಡಿದ್ದರು. ಈ ಮಾತಿಗೆ ಒಪ್ಪಿಗೆ ಸೂಚಿಸಿದ ಚಂದ್ರಶೇಖರ್ ಅವರು ಬಿಜೆಪಿಯಲ್ಲಿದ್ದು ಸೋತು ಮೂಲೆಗುಂಪು ಆಗುವುದರ ಬದಲು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದೇ ಉತ್ತಮ ಎಂದು ತಿಳಿಸಿ ಮರಳಿ ಕಾಂಗ್ರೆಸ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಡಿಕೆ ಸುರೇಶ್ ಅವರ ಸಮ್ಮುಖದಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಂದ್ರಶೇಖರ್ ಅವರು ಬಿಜೆಪಿ ನಾಯಕರ ವಿರುದ್ಧ ಆರೋಪಗಳ ಸುರಿಮಳೆಗೈದು, 15 ದಿನಗಳಲ್ಲೇ ಬಿಜೆಪಿ ಪಕ್ಷದಲ್ಲಿನ ಒಳಜಗಳಗಳಿಂದ ತಮಗೆ ಬೇಸರ ಉಂಟಾಗಿದೆ ಎಂದು ಹೇಳಿದ್ದರು. ಅಲ್ಲದೇ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಈ ನಿರ್ಣಯಕೈಗೊಂಡಿದ್ದಾಗಿ ಸ್ಪಷ್ಟನೆ ನೀಡಿದ್ದರು.

    ಇತ್ತ ಎಲ್ ಚಂದ್ರಶೇಖರ್ ಸೇರ್ಪಡೆ ವೇಳೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ ಎಂಬ ಮಾಹಿತಿ ಲಭಿಸಿದ್ದು, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವುದು ಹಾಗೂ ಪ್ರಚಾರ ಸಭೆಯಲ್ಲಿ ಭಾಗವಹಿಸುವ ಕುರಿತು ಹೇಳಿದ್ದಾರೆ ಎನ್ನಲಾಗಿದೆ. ಇತ್ತ ಚಂದ್ರಶೇಖರ್ ಅವರು ಕಣದಿಂದ ಹಿಂದೆ ಸರಿದಿರುವ ಪರಿಣಾಮ ರಾಮನಗರದ ಉಪಚುನಾವಣೆ ತನ್ನ ಕುತೂಹಲವನ್ನು ಕಳೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಣ ಬಲದಿಂದ ಏನ್ ಬೇಕಾದ್ರೂ ಮಾಡ್ಬಹುದು: ಜೆಡಿಎಸ್ ವಿರುದ್ಧ ಬಿ.ವೈ.ರಾಘವೇಂದ್ರ ಕಿಡಿ

    ಹಣ ಬಲದಿಂದ ಏನ್ ಬೇಕಾದ್ರೂ ಮಾಡ್ಬಹುದು: ಜೆಡಿಎಸ್ ವಿರುದ್ಧ ಬಿ.ವೈ.ರಾಘವೇಂದ್ರ ಕಿಡಿ

    ಶಿವಮೊಗ್ಗ: ಹಣ ಬಲದಿಂದ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಕಾಂಗ್ರೆಸ್ ಸೇರ್ಪಡೆ ಆಗಿರುವುದು ಉದಾಹರಣೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

    ರಾಮನಗರ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಈ ಕುರಿತು ಮಾತನಾಡಿದ ಬಿ.ವೈ.ರಾಘವೇಂದ್ರ, ಈ ಹಿಂದೆ ಜೆಡಿಎಸ್ ನಾಯಕರು ಶಿವಮೊಗ್ಗಕ್ಕೆ ಬಂದಾಗ ಕೊನೆ ಗಳಿಗೆ ಏನು ಮಾಡ್ತೀವಿ ಅಂತಾ ಹೇಳಿ, ಈಗ ಅದೇ ರೀತಿ ನಡೆದುಕೊಂಡಿದ್ದಾರೆ. ಇದು ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಿಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಾಠವಾಗಲಿದೆ ಎಂದು ತಿಳಿಸಿದ್ರು.

    ಶಿಕಾರಿಪುರ, ಸೊರಬ, ಸಾಗರದಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲಿದ್ದೇವೆ. ಜೆಡಿಎಸ್ ಮುಖಂಡರು ಹಣ ಮತ್ತು ತೋಳ್ ಬಲದಿಂದ ನಮ್ಮ ಕಾರ್ಯಕರ್ತರನ್ನು ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ನಾಡಿನ ಜನತೆ ಎಲ್ಲವನ್ನು ಗಮನಿಸಿ ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

    ಈ ಮೊದಲು ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಮನಗರ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಅವರನ್ನು ಸಚಿವ ಡಿಕೆ ಶಿವಕುಮಾರ್ ಸಹೋದರರು ದುಡ್ಡು ಕೊಟ್ಟು ಖರೀದಿ ಮಾಡಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಆದರೆ ರಾಮನಗರ ಅಭ್ಯರ್ಥಿ ಬಿಜೆಪಿ ಸೇರ್ಪಡೆ ಆಗಿರುವುದು ಪಕ್ಷದ ಮೇಲೆ ಹಾಗೂ ಉಪಚುನಾವಣೆ ಮೇಲೆ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆಗೆ ಗರಂ ಆದ ಬಿಎಸ್‍ವೈ ಉತ್ತರಿಸದೇ ಮೈಕ್ ತಳ್ಳಿ ಹೋದರು.

    https://www.youtube.com/watch?v=SUz3348T4QA