Tag: ಎಲ್.ಕೆ.ಅಡ್ವಾಣಿ

  • 2 ದಶಕದ ಬೇಡಿಕೆ ಈಡೇರಿಕೆ – ಏನಿದು ಸಿಡಿಎಸ್? ಭಾರತದ ಸೈನ್ಯಕ್ಕೆ ಯಾಕೆ ಬೇಕು?

    2 ದಶಕದ ಬೇಡಿಕೆ ಈಡೇರಿಕೆ – ಏನಿದು ಸಿಡಿಎಸ್? ಭಾರತದ ಸೈನ್ಯಕ್ಕೆ ಯಾಕೆ ಬೇಕು?

    ನವದೆಹಲಿ: ಮೂರು ಸೇನಾ ಪಡೆಗಳ ಮಧ್ಯೆ ಸಮನ್ವಯತೆ ತರುವುದಕ್ಕಾಗಿ ಮುಖ್ಯ ಸೇನಾ ಸಿಬ್ಬಂದಿ(ಸಿಡಿಎಸ್) ನೇಮಕ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮೋದಿ ಅವರು, ಭೂ, ವಾಯು ಹಾಗೂ ನೌಕಾ ಪಡೆಗಳು ನಮ್ಮ ಹೆಮ್ಮೆ. ಈ ಮೂರೂ ಸೇನಾ ಪಡೆಗಳ ಮಧ್ಯೆ ಸಮನ್ವಯತೆ ತರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ನೇಮಕ ಮಾಡಲಾಗುತ್ತದೆ ಎಂದು ಐತಿಹಾಸಿಕ ಘೋಷಣೆ ಮಾಡಿದ್ದಾರೆ.

    ಸಿಡಿಎಸ್ ನೇಮಕಕ್ಕಾಗಿ ದೀರ್ಘಕಾಲದಿಂದ ಸೇನಾ ಅಧಿಕಾರಿಗಳು ಒತ್ತಾಯಿಸುತ್ತಾ ಬಂದಿದ್ದಾರೆ. ಸದ್ಯ ನಾವು ಅದನ್ನು ಕಾರ್ಯಗತಕ್ಕೆ ತರಲು ನಿರ್ಧಸಿದ್ದೇವೆ. ಈ ನೇಮಕವು ಮೂರು ಪಡೆಗಳ ಉನ್ನತ ಮಟ್ಟದಲ್ಲಿ ಪರಿಣಾಮಕಾರಿ ನಾಯಕತ್ವವನ್ನು ನೀಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

    ಸಿಡಿಎಸ್ ವಿಶೇಷತೆ ಏನು?:
    ಭೂ, ವಾಯು ಹಾಗೂ ನೌಕಾ ಪಡೆಗಳಿಗೆ ಪ್ರತ್ಯೇಕ ಮುಖ್ಯಸ್ಥರಿದ್ದಾರೆ. ರಾಷ್ಟ್ರಪತಿಗಳು ನೇತೃತ್ವ, ಆದೇಶದಂತೆ ಮೂರು ಪಡೆಗಳು ಕಾರ್ಯನಿರ್ವಹಿಸುತ್ತಿವೆ.ಕೇಂದ್ರ ಸರ್ಕಾರ ಹಾಗೂ ಮೂರು ಪಡೆಗಳ ಮಧ್ಯೆ ಸಮನ್ವಯ ತರುವ ಕೆಲಸವನ್ನು ಸಿಡಿಎಸ್ ಮಾಡಲಿದ್ದಾರೆ. ಈ ಹುದ್ದೆಗೆ ಆಯ್ಕೆ ಆಗಲಿರುವ ಅವರು 5 ಸ್ಟಾರ್ ಹೊಂದಿರುವ ಮಿಲಿಟರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ.

    ಮುಖ್ಯ ಸೇನಾಧಿಕಾರಿಯು ಪ್ರಸ್ತುತ ಇರುವ ಸೇನೆಯ ಮೂರು ವಿಭಾಗದ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವ ಏಕೈಕ ಸಮನ್ವ ಅಧಿಕಾರಿಯಾಗಿರುತ್ತಾರೆ. ಭಾರತದ ಭೂ ಸೇನೆ, ನೌಕಾದಳ ಮತ್ತು ವಾಯುದಳಕ್ಕೆ ಸಂಬಂಧಿಸಿದ ಸಲಹೆಯನ್ನು ಸರ್ಕಾರಕ್ಕೆ ನೀಡುವ ಸಿಂಗಲ್ ಪಾಯಿಂಟ್ ಅಧಿಕಾರ ಅವರದ್ದಾಗಿರುತ್ತದೆ.

    ಮುಖ್ಯ ಸೇನಾಧಿಕಾರಿ ನೇಮಕವು ಈಗಿನ ಮಾತಲ್ಲ. 20 ವರ್ಷಗಳ ಹಿಂದೆಯೇ ಈ ವಿಚಾರ ಪ್ರಸ್ತಾಪವಾಗಿತ್ತು. ಆದರೆ ಕಾರ್ಯರೂಪಕ್ಕೆ ಬಾರದೇ ಹಾಗೆ ಉಳಿದಿತ್ತು. ಸದ್ಯ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಮುಖ್ಯ ಸೇನಾಧಿಕಾರಿ ನೇಮಕ ನಿರ್ಧಾರವನ್ನು ಮತ್ತೆ ಪ್ರಸ್ತಾಪಿಸಿದೆ.

    ಕಾರ್ಗಿಲ್ ಯುದ್ಧದ ನಂತರ ಭದ್ರತಾ ಲೋಪ ಮತ್ತು ಸೇನಾಪಡೆಗಳ ನಡುವೆ ಇರುವ ಅಂತರಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲು 1999ರಲ್ಲಿ ಸಂಸತ್ತಿನ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ನೇತೃತ್ವವನ್ನು ಅಂದಿನ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ವಹಿಸಿಕೊಂಡಿದ್ದರು. ಸುದೀರ್ಘ ಅಧ್ಯಯನ ನಡೆಸಿದ ಸಮಿತಿಯು, ಮೂರೂ ಸೇನಾಪಡೆಗಳ ನಡುವೆ ಹಲವೆಡೆ ಸಂವಹನ ಮತ್ತು ಹೊಂದಾಣಿಕೆಯ ಕೊರತೆಯಾಗಿದ್ದನ್ನು ಗುರುತಿಸಿತ್ತು. ಹೀಗಾಗಿ ಮೂರೂ ಸೇನಾಪಡೆಗಳು ಸೇರಿ ಓರ್ವ ಮುಖ್ಯಸ್ಥರನ್ನು ನೇಮಿಸುವಂತೆ ವರದಿ ನೀಡಿತ್ತು. ಆದರೆ ಬದಲಾದ ರಾಜಕೀಯ ಹಾಗೂ ಅಧಿಕಾರಿಗಳ ಆಕ್ಷೇಪದಿಂದಾಗಿ ಸಮಿತಿಯ ಶಿಫಾರಸು ಕಾರ್ಯರೂಪಕ್ಕೆ ಬಂದಿರಲಿಲ್ಲ.

    https://www.youtube.com/watch?v=XWI-1Nqwnxc&feature=youtu.be

    ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಸೇನೆಯ ಸಾರಥ್ಯವನ್ನು ಹೊತ್ತಿದ್ದ ನಿವೃತ್ತ ಜನರಲ್ ವೇದ್ ಮಲ್ಲಿಕ್ ಅವರು ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ. ಈ ನಿರ್ಧಾರದಿಂದ ಸೇನೆ ಮಧ್ಯೆ ಸಮನ್ವಯ ಸಾಧಿಸಲು ನೆರವಾಗುತ್ತದೆ ಎಂದು ಹೇಳಿದ್ದಾರೆ.

    2012 ರಲ್ಲಿ ನರೇಶ್ ಚಂದ್ರಾ ನೇತೃತ್ವದ ಟಾಸ್ಕ್ ಫೋರ್ಸ್, 2016 ರಲ್ಲಿ ಲೆಫ್ಟಿನೆಂಟ್ ಜನರಲ್ ಡಿಬಿ ಶೇಕ್ತ್‍ಕಾರ್ ಸಮಿತಿ ಸಿಡಿಎಸ್ ನೇಮಕವಾಗಬೇಕೆಂದು ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು. ಮೂರು ಸೇನೆಯ ಪ್ಲಾನಿಂಗ್, ಬಜೆಟ್, ಸಂಗ್ರಹಣೆ, ಶಸ್ತ್ರಾಸ್ತ್ರ ಖರೀದಿ, ತರಬೇತಿ ವಿಚಾರದ ಬಗ್ಗೆ ಸಿಡಿಎಸ್ ಗಮನ ಹರಿಸಿ ಕೇಂದ್ರ ರಕ್ಷಣಾ ಇಲಾಖೆಯ ಜೊತೆ ಸೇತುವೆಯಾಗಿ ಕೆಲಸ ಮಾಡುತ್ತದೆ.

  • ಅಡ್ವಾಣಿ ನಿವಾಸದಲ್ಲಿಲ್ಲ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ

    ಅಡ್ವಾಣಿ ನಿವಾಸದಲ್ಲಿಲ್ಲ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ

    ನವದೆಹಲಿ: ರಾಜಕೀಯ ಭೀಷ್ಮ, ಕೇಸರಿ ಪಡೆಯ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರ ನಿವಾಸದಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮ ರದ್ದಾಗಿದೆ.

    ಹೌದು. 91 ವರ್ಷದ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕಳೆದ 5 ದಿನದಿಂದ ಅವರು ವೈರಲ್ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿರುವ ಅಡ್ವಾಣಿ ನಿವಾಸದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಇರುವುದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

    ಆಗಸ್ಟ್ 7 ರಂದು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನರಾದ ಸಂದರ್ಭದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದರು. ಆ ವೇಳೆ ಸುಷ್ಮಾರನ್ನು ನೆನೆದು ಅವರು ತೀವ್ರ ದುಃಖಿತರಾಗಿದ್ದರು.

  • ಹುಟ್ಟುಹಬ್ಬಕ್ಕೆ ನನ್ನಿಷ್ಟದ ಚಾಕೊಲೇಟ್ ತರುತ್ತಿದ್ದುದನ್ನು ಮರೆಯಲು ಸಾಧ್ಯವಿಲ್ಲ- ಅಡ್ವಾಣಿ

    ಹುಟ್ಟುಹಬ್ಬಕ್ಕೆ ನನ್ನಿಷ್ಟದ ಚಾಕೊಲೇಟ್ ತರುತ್ತಿದ್ದುದನ್ನು ಮರೆಯಲು ಸಾಧ್ಯವಿಲ್ಲ- ಅಡ್ವಾಣಿ

    ನವದೆಹಲಿ: ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಸಾವು ತುಂಬಾ ನೋವಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಇಂದು ಬೆಳಗ್ಗೆ ಬೇಸರ ವ್ಯಕ್ತಪಡಿಸಿದ್ದು, ಅಂತಿಮ ದರ್ಶನದ ವೇಳೆ ಅವರೊಂದಿಗಿನ ಒಡನಾಟ ನೆನೆದು ಕಣ್ಣೀರು ಹಾಕಿದ್ದಾರೆ.

    ಸುಷ್ಮಾ ಸ್ವರಾಜ್ ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕುವ ಮೂಲಕ ಸಂತಾಪ ವ್ಯಕ್ತಪಡಿಸಿರುವ ಅವರು, ರಾಜಕೀಯ ಜೀವನದಲ್ಲಿ ಸುಷ್ಮಾ ಅವರು ತಮಗೆ ಮಾಡಿದ ಪ್ರೀತಿಯ ಮಾರ್ಗದರ್ಶನವನ್ನು ಸಹ ಇದೇ ಸಂದರ್ಭದಲ್ಲಿ ನೆನೆದಿದ್ದಾರೆ.

    91 ವರ್ಷದ ಅಡ್ವಾಣಿ ಅವರ ಪುತ್ರಿ ಪ್ರತಿಭಾ ಸಹ ಸುಷ್ಮಾ ಸ್ವರಾಜ್ ಅವರ ಪುತ್ರಿ ಬನ್ಸೂರಿ ಅವರನ್ನು ತಬ್ಬಿಕೊಂಡು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

    ಸುಷ್ಮಾ ಪ್ರತಿ ಬಾರಿ ತಮ್ಮ ಜನ್ಮದಿನದಂದು ನೆಚ್ಚಿನ ಚಾಕೊಲೇಟ್ ಹಾಗೂ ಕೇಕ್ ತರುತ್ತಿದ್ದರು. ಅವರು ತರದೇ ಇದ್ದ ಒಂದು ವರ್ಷವನ್ನೂ ನೆನಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಅಡ್ವಾಣಿ ಅವರು ಭಾವುಕರಾಗಿದ್ದಾರೆ.

    ಸುಷ್ಮಾ ಸ್ವರಾಜ್ ಅವರು ಬಿಜೆಪಿಯಿಂದಲೇ ತಮ್ಮ ಶ್ರೇಷ್ಠ ರಾಜಕಾರಣದ ಇನ್ನಿಂಗ್ಸ್ ಪ್ರಾರಂಭಿಸಿದ್ದರು. ಅಲ್ಲದೆ, ಅಡ್ವಾಣಿ ಅವರೊಂದಿಗೆ ಹೆಚ್ಚು ಕೆಲಸ ಮಾಡಿದ್ದರು. ಅಡ್ವಾಣಿಯವರ ತಂಡದಲ್ಲಿ ಸೇರ್ಪಡೆಗೊಳ್ಳುವ ಯುವ ಕಾರ್ಯಕರ್ತೆಯಾಗಿ ಸುಷ್ಮಾ ಗುರುತಿಸಿಕೊಂಡಿದ್ದರು.

    ವರ್ಷಗಳ ಕಾಲ ಪಕ್ಷದ ಅತ್ಯಂತ ಜನಪ್ರಿಯ ಮತ್ತು ಪ್ರಮುಖ ನಾಯಕಿಯರಲ್ಲಿ ಒಬ್ಬರಾಗಿದ್ದರು. ಮಹಿಳಾ ನಾಯಕಿಯರಿಗೆ ಆದರ್ಶರಾಗಿದ್ದರು. ಅದ್ಭುತ ವಾಗ್ಮಿ, ಯಾವುದೇ ಘಟನೆ ಕುರಿತು ನೆನಪಿಸಿಕೊಳ್ಳುವ, ಅವುಗಳನ್ನು ಅತ್ಯಂತ ಸ್ಪಷ್ಟತೆ ಮತ್ತು ವಾಕ್ ಚಾತುರ್ಯದಿಂದ ಪ್ರಸ್ತುತ ಪಡಿಸುವ ಅವರ ಸಾಮಥ್ರ್ಯವನ್ನು ಕಂಡು ನಾನು ಆಗಾಗ ಆಶ್ಚರ್ಯಚಿಕಿತನಾಗುತ್ತಿದ್ದೆ ಎಂದು ಅವರು ನೆನಪಿಸಿಕೊಂಡರು.

    ಸುಷ್ಮಾ ಜೀ ಅವರು ಉತ್ತಮ ಮಾನವೀಯ ಮೌಲ್ಯ ಉಳ್ಳವರಾಗಿದ್ದರು. ಮೃದು ಮತ್ತು ಸಹಾನುಭೂತಿ ಸ್ವಭಾವದಿಂದ ಎಲ್ಲರನ್ನು ಮುಟ್ಟಿದ್ದರು. ಜನ್ಮದಿನದಂದು ನನ್ನ ನೆಚ್ಚಿನ ಚಾಕೊಲೇಟ್ ಕೇಕ್‍ನ್ನು ತರುವುದನ್ನು ಒಂದು ಸಲವೂ ತಪ್ಪಿಸಿದ ನೆನಪುಗಳೇ ಇಲ್ಲ ಎಂದು ನೆನಪಿಸಿಕೊಂಡಿದ್ದಾರೆ.

    ಸುಷ್ಮಾ ಅವರ ನಿಧನ ನನಗೆ ವೈಯಕ್ತಿಕವಾಗಿ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಸುಷ್ಮಾ ಅವರ ಉಪಸ್ಥಿತಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದ್ದಾರೆ.

    ಸುಷ್ಮಾ ಸ್ವರಾಜ್ ಅವರು ಹೃದಯಾಘಾತವಾಗಿ ನಿನ್ನೆ ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ವರ್ಷದಿಂದಲೂ ಸುಷ್ಮಾ ಅವರು ಸಾರ್ವಜನಿಕ ಜೀವನದಿಂದ ದೂರ ಇದ್ದರು. ಅಲ್ಲದೆ, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.

  • ಗುರು ಅಡ್ವಾಣಿಗೆ ಪಂಚ್ ನೀಡಿದ ಬಾಕ್ಸರ್ ಮೋದಿ: ರಾಹುಲ್ ಗಾಂಧಿ

    ಗುರು ಅಡ್ವಾಣಿಗೆ ಪಂಚ್ ನೀಡಿದ ಬಾಕ್ಸರ್ ಮೋದಿ: ರಾಹುಲ್ ಗಾಂಧಿ

    ಚಂಡೀಗಢ: ಬಾಕ್ಸ್ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ರಾಜಕೀಯ ಗುರು, ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರಿಗೆ ಪಂಚ್ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

    ಖ್ಯಾತ ಬಾಕ್ಸರ್ ಅವರ ವಿಜೇಂದ್ರ ಸಿಂಗ್ ಸೇರಿದಂತೆ ಅನೇಕ ಬಾಕ್ಸರ್ ಗಳನ್ನು ಭಾರತಕ್ಕೆ ಹರ್ಯಾಣದ ಭಿವಾನಿ ಲೋಕಸಭಾ ಕ್ಷೇತ್ರ ನೀಡಿದೆ. ಇಲ್ಲಿ ಇಂದು ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ, ಬಾಕ್ಸಿಂಗ್, ಪಂಚ್, ರಿಂಗ್ ಪದಗಳ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಹರ್ಯಾಣದ ಭಿವಾನಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಭ್ರಷ್ಟಾಚಾರ ಹಾಗೂ ನಿರುದ್ಯೋಗ ಕಿತ್ತುಹಾಕುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದರು. ಅವರು ಬಾಕ್ಸಿಂಗ್ ರಿಂಗ್ ಪ್ರವೇಶಿಸುತ್ತಿದ್ದಂತೆ ಕೋಚ್ ಅಡ್ವಾಣಿ ಜಿ, ನಿತೀನ್ ಗಡ್ಕರಿ ಹಾಗೂ ತಂಡದ ಸದಸ್ಯರಿದ್ದರು. ಈ ಮೂಲಕ ಮೊದಲ ಪಂಚ್ ಮೂಲಕ ಕೋಚ್ ಅಡ್ವಾಣಿ ಅವರನ್ನು ರಿಂಗ್‍ನಿಂದ ಹೊರಹಾಕಿದ್ದಾರೆ ಎಂದು ಲೇವಡಿ ಮಾಡಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ನಾಯಕರನ್ನು ಸೈಡ್‍ಲೈನ್ ಮಾಡುವ ಮೂಲಕ ಅವಮಾನ ಮಾಡಿದ್ದಾರೆ. ಬಾಕ್ಸರ್ ಮೋದಿ ಅವರು ಜಿಎಸ್‍ಟಿ ಮೂಲಕ ಸಣ್ಣ ವರ್ತಕರರನ್ನು ಚಚ್ಚಿದರು ಎಂದು ಹೇಳಿದರು.

    ಎಲ್.ಕೆ.ಅಡ್ವಾಣಿ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಕೈತಪ್ಪಿಸಿದ್ದಕ್ಕೆ ರಾಹುಲ್ ಗಾಂಧಿ ಅವರು ಈ ಹಿಂದೆಯೂ ವಾಗ್ದಾಳಿ ನಡೆಸಿದ್ದರು. ಹರ್ಯಾಣದ ಭಿವಾನಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಂಸದೆ ಶ್ರುತಿ ಚೌಧರಿ ಕಣಕ್ಕೆ ಇಳಿದಿದ್ದಾರೆ. ಇತ್ತ ಬಿಜೆಪಿಯಿಂದ ಹಾಲಿ ಸಂಸದ ಧರಂವೀರ್ ಸ್ಪರ್ಧಿಸುತ್ತಿದ್ದಾರೆ.

  • ಅಡ್ವಾಣಿ, ಎಂಎಂ ಜೋಷಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಕಾರಣ ಕೊಟ್ಟ ಅಮಿತ್ ಶಾ

    ಅಡ್ವಾಣಿ, ಎಂಎಂ ಜೋಷಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಕಾರಣ ಕೊಟ್ಟ ಅಮಿತ್ ಶಾ

    ನವದೆಹಲಿ: ಬಿಜೆಪಿ ಪಕ್ಷದಲ್ಲಿ 75 ವರ್ಷದ ಮೇಲ್ಪಟ್ಟವರಿಗೆ ಟಿಕೆಟ್ ನೀಡದಿರಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

    ಮ್ಯಾಗಜಿನ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ಬಿಜೆಪಿ ಪಕ್ಷದ ನೀತಿ, ನಿಯಮ ಪ್ರಕಾರ 75 ವರ್ಷದ ತುಂಬಿದ ಹಿರಿಯ ನಾಯಕರಿಗೆ ಟಿಕೆಟ್ ನೀಡದಿರಲು ತೀರ್ಮಾನಿಸಲಾಗಿದೆ. ಈ ಹಿನ್ನೆಯಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಮುರುಳಿ ಮನೋಹರ್ ಜೋಶಿಗೆ ಟಿಕೆಟ್ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

    ಬಿಜೆಪಿ ಪಕ್ಷವನ್ನು ಬೆಳೆಸಿದ ಹಿರಿಯ ನಾಯಕರಿಗೆ ಟಿಕೆಟ್ ತಪ್ಪಿದರ ಬಗ್ಗೆ ಮಾಧ್ಯಮಗಳು ದೊಡ್ಡ ವಿಷಯ ಮಾಡಿವೆ. ಪಕ್ಷದಲ್ಲೇ ಯಾವುದೇ ಅಸಮಾಧಾನ ಇಲ್ಲ. ಬಿಜೆಪಿ ಪಕ್ಷದಲ್ಲಿ ಇನ್ನು ಮುಂದೆ 75 ವರ್ಷ ತುಂಬಿದ ಯಾರಿಗೂ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದರು.

    ಅಡ್ವಾಣಿ ಅವರು ಸ್ಪರ್ಧಿಸುತ್ತಿದ್ದ ಗಾಂಧಿನಗರ ಕ್ಷೇತ್ರದ ಬಗ್ಗೆ ಮಾತನಾಡಿ, ನಾನು 25 ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯನಾಗಿದ್ದು, ಜನರ ಸೇವೆ ಮಾಡುತ್ತಾ ಬಂದಿದ್ದೇನೆ. ನಾನು ರಾಜ್ಯಸಭೆ ಮೂಲಕ ಸಂಸತ್ತಿಗೆ ಈ ಬಾರಿ ಹೋಗುತ್ತಿಲ್ಲ. ಜನರಿಂದ ಆಯ್ಕೆಯಾಗಿ ಹೋಗುತ್ತಿದ್ದೇನೆ ಎಂದು ಹೇಳಿದರು.

    ಇದೇ ವೇಳೆ ಮಾತನಾಡಿ, ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ರಾಷ್ಟ್ರಿಯ ಭದ್ರತೆ ವಿಚಾರದ ದೃಷ್ಟಿಯಿಂದ ತೆಗದುಕೊಂಡ ಪ್ರಮುಖ ವಿಷಯಗಳು ನಮಗೆ ಈ ಲೋಕಸಭೆ ಚುನಾವಣೆಯಲ್ಲಿ ಸಹಕಾರಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮೋದಿ ಭಯೋತ್ಪಾದನೆಯ ಬಗ್ಗೆ ದಿಟ್ಟ ನಿಲುವು ತೆಗೆದುಕೊಂಡಿದ್ದರಿಂದ ಸರ್ಜಿಕಲ್ ಸ್ಟೈಕ್, ಹಾಗೂ ವಾಯುದಾಳಿಗಳು ಯಶಸ್ವಿಯಾದವು. ಬಾಲಾಕೋಟ್ ಮೇಲಿನ ವಾಯುದಾಳಿ ನಡೆದಿದೆ ಎನ್ನುವುದನ್ನು ಅಲ್ಲಿನ ಅಧ್ಯಕ್ಷರೇ ಒಪ್ಪಿಕೊಂಡಿದ್ದಾರೆ. ಆದರೆ ನಮ್ಮ ದೇಶದ ವಿರೋಧ ಪಕ್ಷಗಳು ಸತ್ತಿರುವ ಉಗ್ರರ ಹೆಣಗಳ ಲೆಕ್ಕ ಕೇಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇದೇ ವೇಳೆ ರಾಮಮಂದಿರ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಳಿದ ಪ್ರಶ್ನೆಗೆ, ಇದೊಂದು ಸೂಕ್ಷ್ಮ ವಿಚಾರ. ಈ ವಿಷಯ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ತೀರ್ಪು ಬಂದ ನಂತರ ಮುಂದಿನ ಸ್ಪಷ್ಟ ಚಿತ್ರಣ ದೊರೆಯಲಿದೆ. ರಾಮಮಂದಿರವನ್ನು ಪವಿತ್ರ ಕ್ಷೇತ್ರದಲ್ಲೇ ನಿರ್ಮಾಣ ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಈ ಬಗ್ಗೆ ದಿಟ್ಟ ನಿಲುವು ತೆಗದುಕೊಳ್ಳುವುದಾಗಿ ಭರವಸೆ ನೀಡಿದರು.

  • ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಹೆಸರಿಲ್ಲ

    ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಹೆಸರಿಲ್ಲ

    ನವದೆಹಲಿ: ಉತ್ತರ ಪ್ರದೇಶದ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರಿಗೆ ಸ್ಥಾನ ನೀಡಿಲ್ಲ.

    ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಗಾಗಿ ಪ್ರಚಾರ ಮಾಡಲು ಬಿಜೆಪಿಯು 40 ಜನ ತಾರಾ ಪ್ರಚಾರಕರನ್ನು ಆಯ್ಕೆ ಮಾಡಿದೆ. ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಉಪಾಧ್ಯಕ್ಷೆ ಉಮಾ ಭಾರತಿ, ಗೃಹಸಚಿವ ರಾಜನಾಥ್ ಸಿಂಗ್, ಸಚಿವರಾದ ನಿತಿನ್ ಗಡ್ಕರಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಸ್ಥಾನ ಪಡೆದಿದ್ದಾರೆ. ಈಗ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಜೋಶಿ ಮತ್ತು ಅಡ್ವಾಣಿಯವರಿಗೆ ಸ್ಥಾನ ನೀಡಿಲ್ಲ.

    ಬಿಜೆಪಿ ಹೈಕಮಾಂಡ್ 75 ವರ್ಷಕ್ಕಿಂತ ಹೆಚ್ಚು ವಯಸ್ಸಾದ ನಾಯಕರನ್ನು ರಾಷ್ಟ್ರೀಯ ಚುನಾವಣೆಗೆ ನಿಲ್ಲದಂತೆ ಸೂಚಿಸಿದೆ. ಈ ಬಗ್ಗೆ ಕಾನ್ಪುರ ಜನತೆಗೆ ಪತ್ರ ಬರೆದಿರುವ ಮುರಳಿ ಮನೋಹರ್ ಜೋಶಿ ಅವರು, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಅವರು ನನ್ನನ್ನು ಭೇಟಿ ಮಾಡಿ, ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸದಿರುವಂತೆ ಸೂಚಿಸಿದ್ದಾರೆ. ಕಾನ್ಪುರ ಮಾತ್ರವಲ್ಲ ಬೇರೆ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಬಾರದು ಎಂದು ಹೇಳಿದ್ದಾರೆ. ಆದರಿಂದ ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಮೇಲೆ 75 ವರ್ಷ ಮೇಲ್ಪಟ್ಟ ಬಿಜೆಪಿ ನಾಯಕರಿಗೆ ಮಾರ್ಗದರ್ಶಕ ಮಂಡಳಿಯಲ್ಲಿ ಸ್ಥಾನ ನೀಡಲಾಗಿತ್ತು. ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ, ಮುರಳಿ ಮನೋಹರ್ ಜೋಷಿ ಈ ಮಾರ್ಗದರ್ಶನ ಮಂಡಳಿಯಲ್ಲಿ ಸ್ಥಾನ ಪಡೆದಿದ್ದರು.

    91 ವರ್ಷದ ಅಡ್ವಾಣಿ ಅವರು ಗುಜರಾತ್‍ನ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಿ 5 ಬಾರಿ ಸಂಸತ್ ಪ್ರವೇಶಿಸಿದ್ದರು. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಅಡ್ವಾಣಿ ಅವರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಸಂಸತ್ ಸದಸ್ಯರಾಗಿ ಅಡ್ವಾಣಿ ಅವರು ಕಳೆದ ಐದು ವರ್ಷಗಳಲ್ಲಿ ಶೇ.92 ರಷ್ಟು ಹಾಜರಾತಿಯನ್ನು ಹೊಂದಿದ್ದಾರೆ. ಆದರೆ ಕೇವಲ 365 ಪದಗಳನ್ನು ಮಾತ್ರವೇ ಸಂಸತ್‍ನಲ್ಲಿ ಮಾತನಾಡಿದ್ದಾರೆ. ಈ ಬಾರಿ ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಣಕ್ಕೆ ಇಳಿದಿದ್ದಾರೆ.

    1991ರಿಂದಲೂ ಗುಜರಾತ್‍ನ ಗಾಂಧಿನಗರದಿಂದ ಅಡ್ವಾಣಿ ಸತತ 5 ಬಾರಿ ಆಯ್ಕೆಯಾಗಿದ್ದರು. ಅಲ್ಲದೇ 2014ರ ವರೆಗೂ ಕೂಡ ಅಧಿಕ ಮತಗಳಿಂದ ಜಯಗಳಿಸಿದ ಸ್ಥಾನದಲ್ಲಿ ಅಡ್ವಾಣಿ ಮೊದಲಿಗರು. ವಿಶೇಷ ಏನೆಂದರೆ 1998ರಲ್ಲಿ 2.77 ಲಕ್ಷ ಮತಗಳಿಂದ ಗೆಲುವು ಪಡೆದಿದ್ದರು. ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ 7,73,539 ಮತ ಪಡೆದಿದ್ದರು. ಅಲ್ಲದೇ ಎದುರಾಳಿ ಕಾಂಗ್ರೆಸ್ ಪಕ್ಷದ ಈಶ್ವರಭಾಯಿ ಪಟೇಲ್ ಕೇವಲ 2,90,419 ಮತಗಳನ್ನು ಮಾತ್ರ ಪಡೆದಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅಮಿತ್ ಶಾ ಗಾಂಧೀನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸರ್ಕೇಜ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದರು.

  • ನನ್ನದು ಬಿಡಿ ಪರವಾಗಿಲ್ಲ, ಅಡ್ವಾಣಿಜೀಗೆ ಮೋಸವಾಯ್ತು: ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ

    ನನ್ನದು ಬಿಡಿ ಪರವಾಗಿಲ್ಲ, ಅಡ್ವಾಣಿಜೀಗೆ ಮೋಸವಾಯ್ತು: ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ

    ನವದೆಹಲಿ: ನನಗೆ ಟಿಕೆಟ್ ಸಿಕ್ಕಿಲ್ಲ ಅಂದ್ರೆ ಪರವಾಗಿಲ್ಲ. ಆದ್ರೆ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಪಕ್ಷ ದೊಡ್ಡ ಅನ್ಯಾಯವನ್ನು ಮಾಡಿದೆ ಎಂದು ಟಿಕೆಟ್ ವಂಚಿತ, ಬಿಜೆಪಿ ಹಾಲಿ ಸಂಸದ ಶತ್ರುಘ್ನ ಸಿನ್ಹಾ ಪರೋಕ್ಷವಾಗಿ ಹೈಕಮಾಂಡ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಬಿಜೆಪಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದೆ. ಬಿಹಾರದ 17 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಾಟ್ನಾ ಸಂಸದ ಶತ್ರುಘ್ನ ಸಿನ್ಹಾರಿಗೆ ಟಿಕೆಟ್ ನೀಡಿಲ್ಲ. ಅಂತೆಯೇ ಬಿಜೆಪಿಯ ಭೀಷ್ಮ ಎಲ್.ಕೆ.ಅಡ್ವಾಣಿ ಸ್ಪರ್ಧಿಸುತ್ತಿದ್ದ ಗುಜರಾತ್ ರಾಜ್ಯದ ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಣಕ್ಕಿಳಿಯಲಿದ್ದಾರೆ.

    ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿನ್ಹಾ, ನ್ಯೂಟನ್ ನಿಯಮದಂತೆ ಕ್ರಿಯೆಗೆ ಪ್ರತಿಕ್ರಿಯೆ ಮುಂದಿನ ದಿನಗಳಲ್ಲಿ ಸಿಗಲಿದೆ. ಇಂದಿನವರೆಗೂ ಬಿಜೆಪಿಯಲ್ಲಿಯೇ ಇದ್ದೇನೆ, ನಂತರ ಏನು ಆಗುತ್ತೆ ಎಂಬುದನ್ನು ಕಾದು ನೋಡಿ ಎಂದು ಹೇಳುವ ಮೂಲಕ ಬಿಜೆಪಿ ತೊರೆಯುವ ಸುಳಿವನ್ನು ನೀಡಿದ್ದಾರೆ.

    ಅಡ್ವಾಣಿಜೀ ಬಿಜೆಪಿಯ ಬಹುತೇಕ ನಾಯಕರ ರಾಜಕೀಯ ಗುರುವಾಗಿದ್ದಾರೆ. ಆದ್ರೆ ಅವರಿಗೆ ಪಕ್ಷ ಅನ್ಯಾಯ ಮಾಡಿದೆ. ಈ ಮೊದಲು ಯಶವಂತ್ ಸಿನ್ಹಾ, ಜಸ್ವಂತ್ ಸಿನ್ಹಾ ಮತ್ತು ಅರುಣ್ ಶೌರಿ ಅವರಿಗೆ ಇದೇ ರೀತಿ ಮೋಸವಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

    ಅಡ್ವಾಣಿಗೆ ಅನ್ಯಾಯ:
    ಪಕ್ಷದ ಹಿರಿಯ ನಾಯಕರಿಗೆ ಈ ರೀತಿ ಅನ್ಯಾಯವಾಗಿದ್ದನ್ನು ನಾನು ಖಂಡಿಸುತ್ತೇನೆ. ನೀವು ಅವರಿಂದ ಏನೇ ಬರೆದುಕೊಂಡು ಬಂದು ತೋರಿಸಿದರೂ ಜನರು ನಂಬಲ್ಲ. ಕೇವಲ ನಿಮ್ಮ ಬಲವಂತಕ್ಕಾಗಿ ಬರೆದುಕೊಡಬಹುದೇ ಹೊರತು, ಮನಸ್ಸಿನಿಂದ ಬರೆದುಕೊಡಲ್ಲ. ಅಡ್ವಾಣಿಜೀಯನ್ನು ರಾಷ್ಟ್ರಪತಿಗಳನ್ನು ಮಾಡಲು ಹಿಂದೇಟು ಹಾಕುವ ಮೂಲಕ ಯಾವ ಪದವಿಗೂ ಅವರು ಸೂಕ್ತವಲ್ಲ ಎಂಬ ಸಂದೇಶವನ್ನು ರವಾನಿಸುತ್ತೀರಿ. ಅಡ್ವಾಣಿ ಅವರೊಂದಿಗೆ ಪಕ್ಷ ಈ ರೀತಿ ನಡೆದುಕೊಳ್ಳಬಾರದಿತ್ತು. ನನ್ನ ವಿಚಾರ ಬಿಡಿ, ನಾನು ಹೇಗೋ ಮುಂದಿನ ದಿನಗಳಲ್ಲಿ ಸುಧಾರಿಸಿಕೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸಿದರು.

  • ಶಿಷ್ಯನ ಸಾವಿಗೆ ಕಂಬನಿ ಮಿಡಿದ ಬಿಜೆಪಿಯ ಭೀಷ್ಮ

    ಶಿಷ್ಯನ ಸಾವಿಗೆ ಕಂಬನಿ ಮಿಡಿದ ಬಿಜೆಪಿಯ ಭೀಷ್ಮ

    ನವದೆಹಲಿ: ಬಿಜೆಪಿಯ ಭೀಷ್ಮನೆಂದೇ ಕರೆಯುವ ಎಲ್.ಕೆ.ಅಡ್ವಾಣಿಯವರು ತಮ್ಮ ನೆಚ್ಚಿನ ಶಿಷ್ಯ ಅನಂತಕುಮಾರ್ ರವರ ಅಕಾಲಿಕ ಸಾವಿಗೆ ಕಂಬನಿ ಮಿಡಿದಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಕೇಂದ್ರ ಸಚಿವ ಅನಂತಕುಮಾರ್ ರವರ ಅಕಾಲಿಕ ಸಾವಿನ ಸುದ್ದಿ ಕೇಳಿ ನನಗೆ ತುಂಬಾ ಆಘಾತವಾಗಿದೆ. ಅವರು ಬಡವರ ಮತ್ತು ಕೆಳವರ್ಗದ ನಾಯಕರೆಂದು ಹೆಚ್ಚು ಪ್ರಸಿದ್ಧರಾಗಿದ್ದರು. ಅನಂತಕುಮಾರ್ ಸಾವು ನಮಗೆ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಅನಂತಕುಮಾರ್ ಅವರು ಅಡ್ವಾಣಿ ಶಿಷ್ಯರೆಂದೇ ಹೆಸರು ಪಡೆದುಕೊಂಡಿದ್ದರು. ಅಲ್ಲದೇ ಎಲ್ಲರೂ ಅವರನ್ನು ಅಡ್ವಾಣಿಯವರ ಮನೆ ಮಗನೆಂದೂ ಕರೆಯುತ್ತಿದ್ದರು. ಆಡ್ವಾಣಿ ಅವರ ರಥಯಾತ್ರೆಯ ಸಮಯದಲ್ಲಿ ಕರ್ನಾಟಕದಲ್ಲಿ ಹೆಚ್ಚು ಅನಂತ್ ಕುಮಾರ್ ಸಂಚರಿಸಿದ್ದರು.

    ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತ್ ಸೋಮವಾರ ನಸುಕಿನ ಜಾವ ಎರಡು ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ, ಕರ್ನಾಟಕ ಬಿಜೆಪಿಯ ಹಿರಿಯ ಮುಖಂಡ ಎಚ್.ಎನ್. ಅನಂತಕುಮಾರ್ ಅವರಿಗೆ 59 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ತೀವ್ರ ಅನಾರೋಗ್ಯ ಪೀಡಿತರಾಗಿದ್ದ ಅವರನ್ನು ಕಳೆದ ಎರಡು ದಿನಗಳಿಂದ ಬೆಂಗಳೂರಿನ ಶಂಕರ್ ಕ್ಯಾನ್ಸರ್ ಆಸ್ಪತ್ರೆಯ ವೆಂಟಿಲೇಟರ್‍ನಲ್ಲಿ ಇಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅನಂತ್ ಕುಮಾರ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews