Tag: ಎಲ್.ಆರ್. ಶಿವರಾಮೇಗೌಡ

  • ಬಿಜಿಎಸ್ ಡೀಮ್ಡ್ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಲು ಸರ್ಕಾರದಿಂದ ಸಹಾಯ: ಸಿಎಂ

    ಬಿಜಿಎಸ್ ಡೀಮ್ಡ್ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಲು ಸರ್ಕಾರದಿಂದ ಸಹಾಯ: ಸಿಎಂ

    ಬೆಂಗಳೂರು: ಬಿಜಿಎಸ್ ಶಿಕ್ಷಣ ಸಂಸ್ಥೆಯನ್ನು ಡೀಮ್ಡ್ ಶಿಕ್ಷಣ ಸಂಸ್ಥೆಯನ್ನಾಗಿ ಘೋಷಣೆ ಮಾಡುವುದಕ್ಕೆ ಅವಶ್ಯವಿರುವ ಸಹಕಾರವನ್ನು ರಾಜ್ಯ ಸರಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

    ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಬಿಜಿಎಸ್ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಸಮೂಹದ 11ನೇ ಸಂಸ್ಥಾಪಕರ ದಿನಾಚರಣೆ ಹಾಗೂ ಬಿಜಿಎಸ್ ಉತ್ಸವ-2018ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಬಿಜಿಎಸ್ ಶಿಕ್ಷಣ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಹಾಗೂ ವಿಶ್ವವಿದ್ಯಾಯವನ್ನಾಗಿ ಘೋಷಣೆ ಮಾಡಲು ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ. ರಾಜ್ಯ ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಖಾಸಗಿ ಶಾಲೆಗಳಂತೆ ಸರಕಾರಿ ಶಾಲೆಗಳಲ್ಲೂ ಉತ್ತಮ ಗುಣಮಟ್ಟವ ಶಿಕ್ಷಣ ನೀಡಲಾಗುತ್ತಿದೆ. ಉತ್ತಮ ಗುಣಮಟ್ಟ ಶಿಕ್ಷಣ ನೀಡಿದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ. ಆದ್ದರಿಂದ ಪೋಷಕರಿಗೆ ಏನೇ ಕಷ್ಟಗಳಿದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ನಾಡಿಗೆ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಂತೆ ಕರೆ ನೀಡಿದರು.

    ಕೇಂದ್ರ ಸಾಂಖ್ಯಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ, ಬಿಜಿಎಸ್ ಶಿಕ್ಷಣ ಸಂಸ್ಥೆಯನ್ನು ಡೀಮ್ಡ್ ವಿಶ್ವವಿದ್ಯಾಲಯವನ್ನಾಗಿ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟರೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ ಸಂಸ್ಕಾರಯುತ ಸಮಾಜ ನಿರ್ಮಾಣಕ್ಕಾಗಿ ಶಿಕ್ಷಣ ಸಂಸ್ಥೆ ಆರಂಭಿಸುವ ಮೂಲಕ ಸಮಾಜ ಪರಿವರ್ತನೆಗೆ ಮುಂದಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಕೊಡುಗೆ ಅಪಾರವಾದದ್ದು. ಪರಿಸರ ಸಂರಕ್ಷಣೆ, ಶಿಕ್ಷಣ, ಆರೋಗ್ಯ, ಧಾರ್ಮಿಕ ಜಾಗೃತಿ ಮೂಡಿಸುವ ಮೂಲಕ ಸ್ವಾಮೀಜಿ ಅವರು ಹಾಕಿಕೊಟ್ಟ ಮಾರ್ಗದರ್ಶವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ನೂತನ ಸಂಸದ ಎಲ್.ಆರ್. ಶಿವರಾಮೇಗೌಡ ಮಾತನಾಡಿ, ಬಿಜಿಎಸ್ ಶಿಕ್ಷಣ ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ತನ್ನದೇ ಆದ ಪಾತ್ರ ವಹಿಸಿದೆ. ಇಲ್ಲಿ ವ್ಯಾಸಂಗ ಪಡೆದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉದ್ಯೋಗ ಗಿಟ್ಟಿಸುವ ಮಟ್ಟಕ್ಕೆ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ ಎಂದು ಶ್ಲಾಘಿಸಿದರು.

    ನಟ ಪ್ರಜ್ವಲ್ ದೇವರಾಜ್ ಮಾತನಾಡಿ, ತೆರೆ ಮೇಲೆ ಹೀರೋ ಆಗಲು ಚಲನಚಿತ್ರಗಳೇ ಬೇಕಾಗಿಲ್ಲ. ನಿಜ ಜೀವನದಲ್ಲೂ ಸಮಾಜ ಸೇವೆ ಮಾಡುವ ಮೂಲಕ ಹೀರೋ ಆಗಬಹುದು ಎಂದರು.

    ಬಿಜಿಎಸ್ ಉತ್ಸವದಲ್ಲಿ ಯಕ್ಷಗಾನ, ಕೂಚುಪುಡಿ, ಭರತನಾಟ್ಯ, ಹುಲಿವೇಶ ಸೇರಿಂದತೆ ಇನ್ನಿತರ ವೈಭವಯುತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಬಿಜಿಎಸ್ ಶಿಕ್ಷಣ ಸಂಸ್ಥೆ ಕೊಡಮಾಡುವ ಸೇವಾ ರತ್ನ ಪ್ರಶಸ್ತಿಯನ್ನು ಎಸ್‍ಜೆಬಿಯ ಪ್ರಾಂಶುಪಾಲ ಪುಟ್ಟರಾಜು ಹಾಗೂ ಕೆ.ಎಸ್. ಕುಮಾರಸ್ವಾಮಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ಎಸ್‍ಜೆಬಿ, ಬಿಜಿಎಸ್ ಗ್ರೂಫ್ ಆಫ್ ಇನ್‍ಸ್ಟಿಟ್ಯೂಷನ್ ಹಾಸ್ಪಿಟಲ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶನಾಥ ಸ್ವಾಮೀಜಿ, ಚಿತ್ರ ನಟ ಪ್ರಜ್ವಲ್ ದೇವರಾಜ್, ಎಂಸಿಐ ಬೋರ್ಡ್ ಆಫ್ ಗವರ್ನರ್ ನಿರ್ದೇಶಕ ಮತ್ತು ಸದಸ್ಯ ಡಾ. ಬಿ.ಎನ್. ಗಂಗಾಧರ್, ಗ್ಲೋಬಲ್ ಆಸ್ಪತ್ರೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ನಿರ್ದೇಶಕ ಡಾ. ರವೀಂದ್ರನಾಥ್ ಕೆ., ಚಿತ್ರ ನಿರ್ಮಾಪಕ ಮಂಜು ಸೇರಿದಂತೆ ಇತರರು ಪಾಲ್ಗೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಬಿಜೆಪಿಯಿಂದ ಸ್ಪರ್ಧೆ – ಕರಪತ್ರದಲ್ಲಿ ಎಡವಟ್ಟು

    ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಬಿಜೆಪಿಯಿಂದ ಸ್ಪರ್ಧೆ – ಕರಪತ್ರದಲ್ಲಿ ಎಡವಟ್ಟು

    ಮಂಡ್ಯ: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಿಂದ ಮಂಡ್ಯ ಉಪಚುನಾವಣೆ ಕಣಕ್ಕೆ ಇಳಿದ ಎಲ್.ಆರ್.ಶಿವರಾಮೇಗೌಡ ಅವರನ್ನು ಬಿಜೆಪಿಯ ಅಭ್ಯರ್ಥಿ ಅಂತಾ ಕರಪತ್ರದಲ್ಲಿ ತಪ್ಪಾಗಿ ಮುದ್ರಿಸಲಾಗಿದೆ.

    ಮಂಡ್ಯ ಲೋಕಸಭೆ ಉಪಚುನಾವಣೆ ಪ್ರಚಾರದ ಕರ ಪತ್ರದಲ್ಲಿ ಎಡವಟ್ಟು ಮಾಡಲಾಗಿದ್ದು, ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೀಗಾಗಿ ಕರಪತ್ರ ಮುದ್ರಿಸಿದ ಸಾಮಾಜಿಕ ನ್ಯಾಯ ಪರಿಷತ್ ರಾಜ್ಯಾಧ್ಯಕ್ಷ ಅನಂತರಾಯಪ್ಪ ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪತ್ರದಲ್ಲಿ ಏನಿದೆ?:
    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ದಲಿತರ ಹಾಗೂ ರೈತರ ಪರ ಕಾಳಜಿಯನ್ನು ಬೆಂಬಲಿಸುವುದಕ್ಕಾಗಿ ಬಿಜೆಪಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಅವರಿಗೆ ಮತ ನೀಡಲು ಮನವಿ ಎಂದು ಅನಂತರಾಯಪ್ಪ ಅವರು ಮುದ್ರಿಸಿದ್ದಾರೆ. ಇದನ್ನು ನೋಡಿದ, ಬಿಜೆಪಿ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ್ದಾರೆ. ಇದೇ ಕರಪತ್ರದಲ್ಲಿ ಬಿಜೆಪಿ ಅನೈತಿಕ ರಾಜಕಾರಣ ಮಾಡುತ್ತಿದೆ ಹಾಗೂ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಮುಖಭಂಗ ಅನುಭವಿಸಿದ್ದಾರೆ ಎಂದು ಲೇವಡಿ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೆಡಿಎಸ್ ಗೆ ಬೆಂಬಲ ನೀಡಲೂ ಸಾಧ್ಯವೇ ಇಲ್ಲ- ಕಾಂಗ್ರೆಸ್ ಸಭೆಯಲ್ಲಿ ಭುಗಿಲೆದ್ದ ಭಿನ್ನಮತ

    ಜೆಡಿಎಸ್ ಗೆ ಬೆಂಬಲ ನೀಡಲೂ ಸಾಧ್ಯವೇ ಇಲ್ಲ- ಕಾಂಗ್ರೆಸ್ ಸಭೆಯಲ್ಲಿ ಭುಗಿಲೆದ್ದ ಭಿನ್ನಮತ

    -ಮೈಕ್ ಎಸೆದು ಅಸಮಾಧಾನ ಹೊರಹಾಕಿದ ಚಲುವರಾಯಸ್ವಾಮಿ

    ಮಂಡ್ಯ: ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಶಿವರಾಮೇಗೌಡರಿಗೆ ಸಹಕಾರ ನೀಡಲು ಆಗಲ್ಲ ಎಂದು ಗಲಾಟೆ ಮಾಡುತ್ತಿದ್ದ ಬೆಂಬಲಿಗರ ವಿರುದ್ಧ ಅಸಮಾಧಾನಗೊಂಡು ಮಾಜಿ ಸಚಿವ ಚಲುವರಾಯಸ್ವಾಮಿ ಆಕ್ರೋಶದಿಂದ ಮೈಕ್ ಎಸೆದ ಘಟನೆ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.

    ಜೆಡಿಎಸ್ ಪಕ್ಷದ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸದ ಚಲುವರಾಯಸ್ವಾಮಿ ಇಂದು ನಾಗಮಂಗಲದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದರು. ಸಭೆಗೆ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರು ಕೂಡ ಆಗಮಿಸಿದ್ದರು. ಸಭೆಯಲ್ಲಿ ವರಿಷ್ಠರ ಮಾತಿನಂತೆ ಜೆಡಿಎಸ್ ಪಕ್ಷಕ್ಕೆ ಸಹಕಾರ ನೀಡಿ ಎನ್ನುತ್ತಿದ್ದಂತೆ ಜೋರು ಧ್ವನಿಯಲ್ಲಿ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಕಾರ್ಯಕರ್ತರು ಅದು ನಮ್ಮಿಂದ ಸಾಧ್ಯವಿಲ್ಲ ಎಂದು ಸಿಟ್ಟು ಹೊರಹಾಕಿದರು. ಈ ವೇಳೆ ಸುಮ್ಮನಿರಿ ಎಂದು ಎಷ್ಟೇ ಹೇಳಿದರು ಬೆಂಬಲಿಗರು ತಮ್ಮ ಮಾತು ಕೇಳದಿದ್ದಾಗ ಚಲುವರಾಯಸ್ವಾಮಿ ಸಿಟ್ಟಿನಿಂದ ಮೈಕ್ ಕೆಳಕ್ಕೆ ಎಸೆದು ಅಸಮಾಧಾನ ಹೊರಹಾಕಿದರು.

    ಕಾರ್ಯಕರ್ತರನ್ನು ಸಮಾಧಾನ ಮಾಡಿದ ಚಲುವರಾಯಸ್ವಾಮಿ ಜೆಡಿಎಸ್ ಪಕ್ಷದಿಂದ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಆಗುತ್ತಿರುವ ತೊಂದರೆ ಬಗ್ಗೆ ನನಗೂ ಅರಿವಿದೆ. ನಮ್ಮ ವಿಷಯದಲ್ಲಿ ಜೆಡಿಎಸ್ ನಡೆದುಕೊಳ್ಳುತ್ತಿರುವುದು ರಾಜ್ಯದ ಅಧ್ಯಕ್ಷರು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಹೀಗಾಗಿ ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದಾರೆ. ಹಳೆಯ ಮೈಸೂರಿನವರಿಗೆ ಸಮನ್ವಯ ಸಮಿತಿ ಕರೆದು ಮಾತನಾಡುತ್ತೇನೆ. ಅದು ಆದ ನಂತರವೂ ಮುಂದುವರಿದರೆ ಕಡೆಗಣಿಸಲು ಸಾಧ್ಯವಿಲ್ಲ. ಹಾಗಾಗಿ ನಾಗಮಂಗಲದಿಂದ ಆರಂಭಿಸಿ ಏಳು ತಾಲೂಕುಗಳಲ್ಲಿ ಸಭೆ ನಡೆಸಲಾಗುವುದು. ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.

    ಚುನಾವಣೆಯ ಬಳಿಕ ಜೆಡಿಎಸ್ ನಲ್ಲಿ ಬದಲಾವಣೆ ಆಗದಿದ್ರೆ ಮುಂದಿನ ಚುನಾವಣೆ ಬಹಳ ದೂರವಿಲ್ಲ. ಆಗ ನಿರ್ಧಾರ ತೆಗೆದುಕೊಳ್ಳೋಣ. ಒಮ್ಮೆ ಸಪೋರ್ಟ್ ಮಾಡಿ ಪರಿಸ್ಥಿತಿ ನೋಡೋಣ ಎಂದು ಕಾರ್ಯಕರ್ತರನ್ನು ಸಮಾಧಾನ ಮಾಡಿದ್ರು. ಇದೇ ವೇಳೆ ಸಚಿವ ಪುಟ್ಟರಾಜು ತಮ್ಮ ವಿರುದ್ಧ ನೀಡಿದ್ದ ಡೆಡ್ ಹಾರ್ಸ್ ಹೇಳಿಕೆ ನೆನಪಿಸಿಕೊಂಡ ಚಲುವರಾಯಸ್ವಾಮಿ, ಅವರು ಹೇಳಿದ್ದು ಸತ್ಯ. ನಮ್ಮ ಜನ ನಮ್ಮನ್ನು ರಕ್ಷಣೆ ಮಾಡಿಕೊಳ್ಳದಿದ್ದಾಗ ಬೇರೆಯವರನ್ನು ಯಾಕೆ ದೂರಬೇಕು. ಕನಕಪುರದಲ್ಲಿ ಡಿಕೆ.ಶಿವಕುಮಾರ್ ಬೇಕು ಅನ್ನುವ ರೀತಿ ನೀವು ನಾಗಮಂಗಲದಲ್ಲಿ ಚಲುವರಾಯಸ್ವಾಮಿ ಬೇಕು ಎನ್ನಬೇಕಿತ್ತು. ಹಾಗೇ ನಡೆದುಕೊಂಡಿದ್ರೆ ಪುಟ್ಟರಾಜು ಯಾಕೆ ಡೆಡ್ ಹಾರ್ಸ್ ಅಂತಿದ್ರು. ನಾನು ಶಿವರಾಮೇಗೌಡ ಅಥವಾ ಕುಮಾರಸ್ವಾಮಿ ಅವರಿಂದ ನಿರೀಕ್ಷೆ ಇಟ್ಟುಕೊಂಡು ಚುನಾವಣೆ ಮಾಡುತ್ತಿಲ್ಲ. ಪಕ್ಷ ಹೇಳಿದಂತೆ ಚುನಾವಣೆ ಮಾಡುತ್ತಿದ್ದೇವೆ ಅಷ್ಟೆ. ವರಿಷ್ಠರ ತೀರ್ಮಾನದಂತೆ ನಡೆದುಕೊಳ್ಳಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಡ್ಯ ಲೋಕಸಭಾ ಉಪಚುನಾವಣೆ: ಜೆಡಿಎಸ್ ಟಿಕೆಟ್‍ಗೆ ಬೆಂಗ್ಳೂರಿಗೆ ದೌಡಾಯಿಸಿದ ಶಿವರಾಮೇಗೌಡ

    ಮಂಡ್ಯ ಲೋಕಸಭಾ ಉಪಚುನಾವಣೆ: ಜೆಡಿಎಸ್ ಟಿಕೆಟ್‍ಗೆ ಬೆಂಗ್ಳೂರಿಗೆ ದೌಡಾಯಿಸಿದ ಶಿವರಾಮೇಗೌಡ

    ಮಂಡ್ಯ: ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಉಪಚುನಾವಣೆ ದಿನಾಂಕ ಪ್ರಕಟಿಸಿದ ಬೆನ್ನಲ್ಲೇ ಮಂಡ್ಯ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ತಾನು ಮಂಡ್ಯ ಲೋಕಸಭೆಯ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎಂದು ಎಲ್.ಆರ್ ಶಿವರಾಮೇಗೌಡ ತಿಳಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರು ನನಗೆ ಪಕ್ಷದ ವತಿಯಿಂದ ಉತ್ತಮ ಅವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾನು ಟಿಕೆಟ್ ಕೇಳಿದ್ದೇನೆ ಎಂದು ತಿಳಿಸಿದರು.

    ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ವೇಳೆ ಉಪಚುನಾವಣೆ ನಡೆಸುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಸಮಯದಲ್ಲಿ ಚುನಾವಣೆ ಅಗತ್ಯವಿರಲಿಲ್ಲ. ಇದರಿಂದ ಜನರ ತೆರಿಗೆ ಹಣ ವ್ಯರ್ಥವಾಗುತ್ತದೆ. 6 ತಿಂಗಳ ಹಿಂದೆಯೇ ಚುನಾವಣೆ ನಡೆಯುವ ನಿರೀಕ್ಷೆ ಇತ್ತು. ಆದರೆ ಇಂದು ಚುನಾವಣೆ ಘೋಷಣೆಯಾಗಿದ್ದು ಪಕ್ಷದ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ. ಈ ಕುರಿತು ವರಿಷ್ಠರೊಂದಿಗೆ ಮಾತನಾಡಲು ಬೆಂಗಳೂರಿಗೆ ಹೋಗುತ್ತಿದ್ದು, ನಾಳೆ ಬೆಳಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡುತ್ತೇನೆ. ಅವರು ಕಸ ಗುಡಿಸು ಎಂದರೂ ಗುಡಿಸುತ್ತೇನೆ. ಆದರೆ ನನಗೆ ಟಿಕೆಟ್ ಕೊಡುವ ಸಂಪೂರ್ಣ ಭರವಸೆ ಇದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಇದನ್ನು ಓದಿ: ಪಂಚ ‘ವಾರ್’ ರಾಜ್ಯಗಳ ಕದನಕ್ಕೆ ಮುಹೂರ್ತ ಫಿಕ್ಸ್

    ಒಂದೊಮ್ಮೆ ಚುನಾವಣೆಯ ಟಿಕೆಟ್ ಲಭಿಸದೇ ಇದ್ದರೆ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ನಾನು ಬೆಂಬಲಿಸುತ್ತೇನೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಧಿಕಾರದಲ್ಲಿದ್ದು, ಈ ಚುನಾವಣೆಯಲ್ಲಿ ಪಕ್ಷದ ಗೆಲುವು ಖಚಿತ. ಸದ್ಯ ಸಮ್ಮಿಶ್ರ ಸರ್ಕಾರ ಮೈತ್ರಿ ರಾಜಕಾರಣದಲ್ಲಿ ನಡೆಯುತ್ತಿದ್ದು, ಈಗಾಗಲೇ ಪಕ್ಷದಲ್ಲಿ ಲೋಕಸಭಾ ಚುನಾವಣೆ ಮೈತ್ರಿ ಮಾಡುವ ತೀರ್ಮಾನ ಮಾಡಲಾಗಿದೆ. ಪಕ್ಷದ ವರಿಷ್ಠರು ಯಾವುದೇ ನಿರ್ಣಯ ಕೈಗೊಂಡರೂ ನನ್ನ ಬೆಂಬಲವಿದೆ ಎಂದರು. ಇದನ್ನು ಓದಿ: ಕರ್ನಾಟಕ ಉಪ ಚುನಾವಣಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಂತಿದೆ

  • ಜೆಡಿಎಸ್ ಅಂದ್ರೆ ಎಚ್‍ಡಿಡಿ ಕೃಪಾಪೋಷಿತ ನಾಟಕ ಮಂಡಳಿ ಎಂದು ಬಣ್ಣಿಸಿದ ಶಿವರಾಮೇಗೌಡ!

    ಜೆಡಿಎಸ್ ಅಂದ್ರೆ ಎಚ್‍ಡಿಡಿ ಕೃಪಾಪೋಷಿತ ನಾಟಕ ಮಂಡಳಿ ಎಂದು ಬಣ್ಣಿಸಿದ ಶಿವರಾಮೇಗೌಡ!

    ಮಂಡ್ಯ: ಜೆಡಿಎಸ್ ಅಂದರೆ ಎಚ್.ಡಿ.ದೇವೇಗೌಡ ಕೃಪಾಪೋಷಿತ ನಾಟಕ ಮಂಡಳಿ, ನಾವು ಅದರ ಸದಸ್ಯರು ಎಂದು ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಹೇಳಿದ್ದಾರೆ.

    ನಾಗಮಂಗಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ನನ್ನು ಮಂಡ್ಯ ಕ್ಷೇತ್ರ ಆಯ್ಕೆ ಮಾಡುತ್ತಿದ್ದಾರೆ. ಹೀಗಾಗಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಕುಟುಂಬದವರು ಮಂಡ್ಯದಿಂದ ಸ್ಪರ್ಧೆಗೆ ಇಳಿದರೆ ನಾನು ಸ್ಥಾನ ಬಿಟ್ಟುಕೊಟ್ಟು, ಸ್ವಾಗತಿಸುತ್ತೇನೆ. ಆದರೆ ಮಂಡ್ಯ ಲೋಕಸಭೆ ಕ್ಷೇತ್ರದಿಂದ ನಾನು ಜೆಡಿಎಸ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿರುವೆ ಎಂದು ಟಾಂಗ್ ಕೊಟ್ಟಿದ್ದಾರೆ.

    ಪ್ರಜ್ವಲ್ ರೇವಣ್ಣ ಮಂಡ್ಯ ಕ್ಷೇತ್ರದಿಂದ ಕಣಕ್ಕೆ ಇಳಿಯದಿದ್ದರೆ ನನಗೆ ಅವಕಾಶ ಕೊಡಲಿ ಎಂದು ಕೇಳಿದ್ದೇನೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಎಲ್ಲವನ್ನು ತ್ಯಾಗ ಮಾಡಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಪಕ್ಷದಲ್ಲಿ ಈಗಾಗಲೇ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಸಮ್ಮಿಶ್ರ ಸರ್ಕಾರ ನಡೆಸುತ್ತಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಹೊಂದಾಣಿಕೆ ಸಾಧ್ಯವೋ ಅಲ್ಲಿ ಎರಡು ಪಕ್ಷಗಳ ನಾಯಕರು ಸೇರಿ ಚರ್ಚೆ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಎಂದರು.