Tag: ಎಲೆಕ್ಷನ್

  • ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸರ್ಕಾರಿ ಕಟ್ಟಡದ ಮೇಲಿನ ಗುಮ್ಮಟ ಕೆಡವುತ್ತೇವೆ – ಬಂಡಿ ಸಂಜಯ್

    ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸರ್ಕಾರಿ ಕಟ್ಟಡದ ಮೇಲಿನ ಗುಮ್ಮಟ ಕೆಡವುತ್ತೇವೆ – ಬಂಡಿ ಸಂಜಯ್

    ಹೈದರಾಬಾದ್: ಈ ಬಾರಿ ತೆಲಂಗಾಣ (Telangana) ರಾಜ್ಯದಲ್ಲಿ ಬಿಜೆಪಿ (BJP) ಅಧಿಕಾರಕ್ಕೆ ಬಂದ್ರೆ ನಿಜಾಮರ ಸಂಸ್ಕೃತಿ ಬಿಂಬಿಸುವ ರಚನೆಗಳನ್ನ ಅಳಿಸಿ ಹಾಕ್ತೇವೆ. ರಾಜ್ಯ ಕಾರ್ಯದರ್ಶಿಗಳ ಭವನದ ಮೇಲೆ ನಿರ್ಮಿಸಿರುವ ಗುಮ್ಮಟವನ್ನೂ ಕೆಡವುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್‌ (Bandi Sanjay Kumar) ಹೇಳಿದ್ದಾರೆ.

    ಇಲ್ಲಿನ ಕುಕಟ್‌ಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಓವೈಸಿ ಅವರನ್ನ ಸಮಾಧಾನಪಡಿಸುವುದಕ್ಕಾಗಿ ಸಿಎಂ ಕೆ.ಚಂದ್ರಶೇಖರ ರಾವ್ (K. Chandrashekar Rao), ಸರ್ಕಾರಿ ಭವನಗಳನ್ನು ತಾಜ್‌ಮಹಲ್‌ನಂತಹ (Taj Mahal) ಸಮಾಧಿ ರೀತಿಯಾಗಿ ಪರಿವರ್ತಿಸಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಕರ್ನಾಟಕಕ್ಕೆ 100 ರೂ. ನೀಡಿದರೆ, ದೇಶಕ್ಕೆ ಕರ್ನಾಟಕ ಸಾವಿರ ರೂ. ನೀಡಲಿದೆ: ತೇಜಸ್ವಿ ಸೂರ್ಯ

    ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ನಿಜಾಮರ ಸಂಸ್ಕೃತಿ ಬಿಂಬಿಸುವ, ನಿಜಾಮ್ ಆಡಳಿತ ಸಂಕೇತಗಳಾಗಿರುವ ಎಲ್ಲಾ ರೀತಿಯ ರಚನೆಗಳನ್ನು ಅಳಿಸಿ ಹಾಕುತ್ತೇವೆ. ಅಲ್ಲದೇ ರಾಜ್ಯ ಕಾರ್ಯದರ್ಶಿ ಆಡಳಿತ ಭವನದ ಮೇಲೆ ನಿರ್ಮಿಸಲಾದ ಗುಮ್ಮಟವನ್ನೂ ಕೆಡವುತ್ತೇವೆ. ಮುಖ್ಯಮಂತ್ರಿಗಳ ಅಧಿಕೃತ ಬಂಗಲೆಯಾದ ಪ್ರಗತಿ ಭವನವನ್ನು ಪ್ರಜಾ ದರ್ಬಾರ್ ಆಗಿ ಬದಲಾಯಿಸುತ್ತೇವೆ ಎಂದು ಘೋಷಣೆ ಮಾಡಿದರು. ಇದನ್ನೂ ಓದಿ: ವಾಲ್ಮೀಕಿ ಜಾತ್ರೆಯಲ್ಲಿ ಕಿಚ್ಚನ ಫ್ಯಾನ್ಸ್ ಗಲಾಟೆ : ಸುದೀಪ್ ಬೆನ್ನಿಗೆ ನಿಂತ ಶಾಸಕ ರಾಜುಗೌಡ

    ಇದೇ ವೇಳೆ `ರಸ್ತೆ ಅಗಲೀಕರಣಕ್ಕೆ ಅಡ್ಡಿ ಉಂಟುಮಾಡುವ ಪ್ರಾರ್ಥನಾ ಮಂದಿರಗಳನ್ನ ಸರ್ಕಾರ ಕೆಡವಲಿದೆ’ ಎಂಬ ಸಿಎಂ ಕೆಸಿಆರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸಾಧ್ಯವಾದರೇ ರಸ್ತೆ ಮಧ್ಯೆ ನಿರ್ಮಿಸಿರುವ ಮಸೀದಿಗಳನ್ನ ಕೆಡವಲಿ ಎಂದು ಸವಾಲು ಹಾಕಿದರು.

    ಹೈದರಾಬಾದ್ ನಗರದ ಕುಕಟ್ ಪಲ್ಲಿಯಲ್ಲಿ ಆಡಳಿತ ಪಕ್ಷದ ನಾಯಕರು ಬಡವರ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಜನರು ಇದರ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೆ ಅವರನ್ನ ಬಂಧಿಸಿ, ಸುಳ್ಳು ಕೇಸ್‌ಗಳನ್ನ ದಾಖಲಿಸಿದ್ದಾರೆ. ಅಂಥಹವರ ವಿರುದ್ಧ ಮೊದಲು ಕ್ರಮ ಕೈಗೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಏಕಕಾಲಕ್ಕೆ 72 ಕ್ಷೇತ್ರ ನಿರ್ವಹಿಸುವ ರಿಮೋಟ್ ಮತಯಂತ್ರ ಪ್ರದರ್ಶನ

    ಏಕಕಾಲಕ್ಕೆ 72 ಕ್ಷೇತ್ರ ನಿರ್ವಹಿಸುವ ರಿಮೋಟ್ ಮತಯಂತ್ರ ಪ್ರದರ್ಶನ

    ನವದೆಹಲಿ: ಮತದಾರರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಹಾಗೂ ಆಂತರಿಕ ವಲಸಿಗರಿಗೆ ಮತದಾನದ ಹಕ್ಕು ಕಲ್ಪಿಸಲು ಕೇಂದ್ರ ಚುನಾವಣಾ ಆಯೋಗ (Election Commission of India) ರಿಮೋಟ್ ಎಲೆಕ್ಟ್ರಾನಿಕ್‌ ಮತಯಂತ್ರ (RVM) ಅಭಿವೃದ್ಧಿಪಡಿಸಿದ್ದು, ಇಂದು ಮತಯಂತ್ರದ ಮೂಲ ಮಾದರಿಯನ್ನ ಜನಪ್ರತಿನಿಧಿಗಳಿಗೆ ಪ್ರದರ್ಶಿಸಿದೆ.

    2019ರ ಸಾರ್ವತ್ರಿಕ ಚುನಾವಣೆಗಳಲ್ಲಿ (Election) ಮತದಾನದ ಪ್ರಮಾಣವು ಶೇ.67.4 ರಷ್ಟಾಗಿತ್ತು. ಈ ಚುನಾವಣೆಯಲ್ಲಿ ಸುಮಾರು 30 ಕೋಟಿ ಮತದಾರರು ಮತದಾನದ ಹಕ್ಕು ಕಳೆದುಕೊಂಡಿದ್ದರು. ಈ ಬಗ್ಗೆ ಚುನಾವಣಾ ಆಯೋಗ ಕಳವಳ ವ್ಯಕ್ತಪಡಿಸಿತ್ತು. ಆದ್ದರಿಂದ ದೇಶದ ಆಂತರಿಕ ವಲಸೆಗರಿಗೂ ಮತದಾನದ ಹಕ್ಕು ಕಲ್ಪಿಸಲು ಆಯೋಗ ಈ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ಅಕ್ರಮ ಸಂಬಂಧ ನಿರಾಕರಿಸಿದ್ದಕ್ಕೆ ಮಹಿಳೆಗೆ ಚಾಕು ಇರಿದ ಆಟೋ ಚಾಲಕ

    `ಹಲವು ಕಾರಣಗಳಿಂದ ಮತದಾರನು ಹೊಸ ವಾಸಸ್ಥಳದಲ್ಲಿ ನೋಂದಾಯಿಸಲಾಗುತ್ತಿಲ್ಲ. ಇದರಿಂದ ಮತದಾನದ ಹಕ್ಕನ್ನೇ ಕಳೆದುಕೊಳ್ಳುತ್ತಿದ್ದಾನೆ. ಈ ರಿಮೋಟ್ ಮತಯಂತ್ರವು ದೇಶೀಯ ವಲಸಿಗರು ಮತದಾನ ಮಾಡಲು, ಜೊತೆಗೆ ಮತದಾನದ ಪ್ರಮಾಣ ಹೆಚ್ಚಿಸಲು ಅನುಕೂಲವಾಗುತ್ತದೆ’ ಎಂಬುದನ್ನು ಚುನಾವಣಾ ಆಯೋಗ ಒತ್ತಿ ಹೇಳಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ಆಂತರಿಕ‌ ಕಚ್ಚಾಟ ತಾರಕಕ್ಕೆ – ಯತ್ನಾಳ್ ವಾಗ್ದಾಳಿ ಹಿಂದಿನ ಅಸಲಿಯತ್ತೇನು..?

    ಏನಿದರ ಅನುಕೂಲ?
    ರಿಮೋಟ್ ಎಲೆಕ್ಟ್ರಾನಿಕ್‌ ವೋಟಿಂಗ್ ಮಿಷಿನ್ (RVM) ಜಾರಿಗೆ ತರೋದ್ರಿಂದ ವಲಸೆ ಕಾರ್ಮಿಕರು ಮತದಾನ ಮಾಡಲು ತಮ್ಮ ತವರು ಕ್ಷೇತ್ರಕ್ಕೆ ಹೋಗುವ ಅಗತ್ಯವೇ ಇರುವುದಿಲ್ಲ. ಇದ್ದಲ್ಲಿಯೇ ಮತದಾನ ಮಾಡಬಹುದು. ಸಾರ್ವಜನಿಕ ವಲಯದ ಉದ್ಯಮದಿಂದ ಅಭಿವೃದ್ಧಿಪಡಿಸಲಾಗಿರುವ ರಿಮೋಟ್ ಇವಿಎಂ (EVM) ಇದಾಗಿದ್ದು, ಒಂದೇ ಮತಗಟ್ಟೆಯಿಂದ 72 ಕ್ಷೇತ್ರಗಳನ್ನು ನಿರ್ವಹಿಸಬಹುದಾಗಿದೆ. ರಿಮೋಟ್ ಮತದಾನವು ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಬಲಪಡಿಸುವ ಪರಿವರ್ತನೆಯ ಉಪಕ್ರಮವಾಗಿದೆ’ ಎಂದು ಕೇಂದ್ರ ಚುನಾವಣಾ ಆಯೋಗದ ಆಯುಕ್ತರು ಈ ಹಿಂದೆ ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಸೆಂಬ್ಲಿ ಎಲೆಕ್ಷನ್ ಮೇಲೆ ಬಿಜೆಪಿ ಚಾಣಾಕ್ಯನ ಕಣ್ಣು- ಇಂದಿನಿಂದ ಅಮಿತ್ ಶಾ ರಾಜ್ಯ ಪ್ರವಾಸ

    ಅಸೆಂಬ್ಲಿ ಎಲೆಕ್ಷನ್ ಮೇಲೆ ಬಿಜೆಪಿ ಚಾಣಾಕ್ಯನ ಕಣ್ಣು- ಇಂದಿನಿಂದ ಅಮಿತ್ ಶಾ ರಾಜ್ಯ ಪ್ರವಾಸ

    ಮಂಡ್ಯ: ಇಂದಿನಿಂದ ಕೇಂದ್ರ ಗೃಹಸಚಿವ ಅಮಿತ್ ಶಾ (AmitShah) 3 ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ರಾಜ್ಯ ಬಿಜೆಪಿ (BJP) ಶಾ ಪ್ರವಾಸದಿಂದಲೇ ಚುನಾವಣಾ ರಣತಂತ್ರವನ್ನು ಆರಂಭಿಸಿದೆ. ಮಂಡ್ಯದಿಂದಲೇ ಅಮಿತ್ ಶಾ ಚುನಾವಣೆಗೆ ರಣಕಹಳೆ ಊದಲಿದ್ದಾರೆ.

    ಚುನಾವಣೆ (Election) ಹೊಸ್ತಿಲಲ್ಲಿ ರಾಜ್ಯ ಬಿಜೆಪಿ ಮತಬೇಟೆ ಆರಂಭಿಸಿದೆ. ಇಂದಿನಿಂದ ಅಮಿತ್ ಶಾ ಮೂರು ದಿನಗಳ ಕಾಲ ರಾಜ್ಯಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ. ಇಂದು ಬೆಂಗಳೂರಿಗೆ ಅಮಿತ್ ಶಾ ಬರಲಿದ್ದು, ನಾಳೆ ಸಕ್ಕರೆನಾಡಲ್ಲಿ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಮಾವೇಶದಲ್ಲಿ ಬರೋಬ್ಬರಿ 1 ಲಕ್ಷ ಮಂದಿಯನ್ನು ಸೇರಿಸಿ ಚುನಾವಣಾ ಕಹಳೆ ಮೊಳಗಿಸಲು ವೇದಿಕೆ ಸಿದ್ಧವಾಗಿದೆ.

    2018ರ ಚುನಾವಣೆ ವೇಳೆ ಬೂತ್ ಮಟ್ಟದ ಸಭೆ ನಡೆಸಿದ್ದ ಅಮಿತ್ ಶಾ 2023ರ ಚುನಾವಣೆಗೂ ಅದೇ ರೀತಿ ಬೂತ್ ಮಟ್ಟದ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ನಾಳೆ ಮಂಡ್ಯಕ್ಕೆ ಭೇಟಿ ನೀಡಲಿರುವ ಶಾ ಮಂಡ್ಯದ ಪಕ್ಷದ ನಾಯಕರೊಂದಿಗೆ ಚರ್ಚಿಸಲಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ಚಂದ್ರಬಾಬು ನಾಯ್ಡು ರ‍್ಯಾಲಿಯಲ್ಲಿ ಕಾಲ್ತುಳಿತ – ಎಂಟು ಮಂದಿ ಸಾವು

    ಅಮಿತ್ ಶಾ ಕಾರ್ಯತಂತ್ರವೇನು….?: 2018ರ ಚುನಾವಣೆ ವೇಳೆ ಬೂತ್ ಮಟ್ಟದ ಸಭೆ ನಡೆಸಿದ್ದ ಅಮಿತ್ ಶಾ, ಕಾರ್ಯಕರ್ತರಿಗೆ 10 ಅಂಶಗಳ ಎಲೆಕ್ಷನ್ ಟಾಸ್ಕ್ ಕೊಟ್ಟಿದ್ದರು. 2023ರ ಚುನಾವಣೆಗೂ ರಣಕಹಳೆ ಊದಲಿದ್ದು, ಈ ಹಿನ್ನೆಲೆಯಲ್ಲಿ ಅಮಿತ್ ಶಾ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ.

    ನಾಳೆ ಮಂಡ್ಯ ಜಿಲ್ಲೆಯಲ್ಲಿ ಪಕ್ಷದ ನಾಯಕರ ಮಹತ್ವದ ಸಭೆ ನಡೆಸಲಿದ್ದಾರೆ. ನಾಡಿದ್ದು ಬೆಂಗಳೂರಲ್ಲಿ ಬಿಜೆಪಿ ಬೂತ್ ಅಧ್ಯಕ್ಷರ ಜೊತೆ ಮೀಟಿಂಗ್ ನಡೆಸಲಿದ್ದು, ಈ ಬಾರಿಯೂ ಎಲೆಕ್ಷನ್ ಟಾಸ್ಕ್ ಕೊಡೋ ಸಾಧ್ಯತೆ ಇದೆ. ಮಂಡ್ಯಕ್ಕೆ ಎಂಟ್ರಿ ಕೊಡೋ ಮೂಲಕ ಹಳೇ ಮೈಸೂರು ಭಾಗದಿಂದ ರಾಜ್ಯ ಪ್ರವಾಸ ಆರಂಭಿಸಿರುವ ಅಮಿತ್ ಶಾ 2023ರ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ. ನಾಳೆ ಮಂಡ್ಯದಲ್ಲಿ ಅಮಿತ್ ಶಾ ಭೇಟಿ ಮೂಲಕ ಬಿಜೆಪಿ ತಂತ್ರಗಾರಿಕೆ ಶುರು ಮಾಡಿದೆ.

    ಅಮಿತ್ ಶಾ ಬಂದು ಹೋದ ನಂತರ ಮುಂದಿನ ತಿಂಗಳು ಅಂದ್ರೆ ಜನವರಿಯಲ್ಲಿ ಬೆಂಗಳೂರು- ಮೈಸೂರು ಹೈವೇ ಉದ್ಘಾಟನೆಗೆ ಪ್ರಧಾನಿ ಮೋದಿ ಕೂಡ ಆಗಮಿಸೋ ಸಾಧ್ಯತೆ ಇದೆ. ಈ ವೇಳೆ ಪ್ರಧಾನಿ ರೋಡ್ ಶೋಗೂ ಬಿಜೆಪಿ ಪ್ಲ್ಯಾನ್ ಮಾಡಿಕೊಂಡಿದೆ. ಈ ಮೂಲಕ ಹಳೆ ಮೈಸೂರು ಭಾಗದಲ್ಲಿ ಹಿಡಿತಕ್ಕೆ ಬಿಜೆಪಿ ಮುಂದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಯೋಗರಾಜ್ ಭಟ್ ಬರೆದ ‘ಜೈ ಎಲೆಕ್ಷನ್ ಧನ್ ಧನಾ ಧನ್’ ಹಾಡಿಗೆ ದನಿಯಾದ ರಿಯಲ್ ಸ್ಟಾರ್

    ಯೋಗರಾಜ್ ಭಟ್ ಬರೆದ ‘ಜೈ ಎಲೆಕ್ಷನ್ ಧನ್ ಧನಾ ಧನ್’ ಹಾಡಿಗೆ ದನಿಯಾದ ರಿಯಲ್ ಸ್ಟಾರ್

    ವೃತ್ತಿಯಲ್ಲಿ ವೈದ್ಯರಾಗಿರುವ ವರದರಾಜು ಡಿ.ಎನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡಿರುವ ‘ಪ್ರಜಾರಾಜ್ಯ’ ಚಿತ್ರಕ್ಕಾಗಿ ಯೋಗರಾಜ್ ಭಟ್  ‘ಜೈ ಎಲೆಕ್ಷನ್ ಧನ್ ಧನಾ ಧನ್’ ಎಂಬ ಹಾಡನ್ನು ಬರೆದಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಈ   ಹಾಡಿದ್ದಾರೆ. ವಿಜೇತ್ ಮಂಜಯ್ಯ ಸಂಗೀತ ನೀಡಿದ್ದಾರೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಇತ್ತೀಚೆಗೆ ಈ ಹಾಡನ್ನು ಉಪೇಂದ್ರ ಅವರೆ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

    ‘ಯೋಗರಾಜ್ ಭಟ್ ಹಾಡನ್ನು ತುಂಬಾ ಚೆನ್ನಾಗಿ ಬರೆದಿದ್ದಾರೆ. ಅಷ್ಟೇ ಚೆನ್ನಾಗಿ  ಸಂಗೀತ ನಿರ್ದೇಶಕರು ಟ್ಯೂನ್ ಮಾಡಿದ್ದಾರೆ. ಎಲೆಕ್ಷನ್ ಕುರಿತಾದ ಈ ಹಾಡು ಸೊಗಸಾಗಿದೆ. ನೀವು ನಿಮ್ಮ ಮತವನ್ನು ದೇಶ, ರಾಜ್ಯಕ್ಕಾಗಿ ಎನ್ನುವುದಕ್ಕಿಂತ,  ನನ್ನ ಮನೆ, ನನ್ನ ಮಕ್ಕಳು ಹಾಗೂ ನನ್ನ ಜೀವನಕ್ಕೆ ಬಹಳ ಮುಖ್ಯ ಎಂದು ಎಲ್ಲರೂ ಮತದಾನ ಮಾಡಿ’ ಎಂದು ಉಪೇಂದ್ರ ಹೇಳಿದ್ದಾರೆ. ಇದನ್ನೂ ಓದಿ: ನನ್ನ- ಮಹೇಶ್ ಬಾಬು ನಡುವಿನ ಜಗಳಕ್ಕೆ ಕಾರಣ ಯಾರು ಎಂದು ಬಿಚ್ಚಿಟ್ಟ ನಮ್ರತಾ ಶಿರೋಡ್ಕರ್

    ನಿರ್ಮಾಪಕ ವರದರಾಜು, ನಿರ್ದೇಶಕ ವಿಜಯ್ ಭಾರ್ಗವ್ ಹಾಗೂ ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ ಹಾಡು ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡೈನಾಮಿಕ್ ಸ್ಟಾರ್ ದೇವರಾಜ್, ನಾಗಾಭರಣ, ಅಚ್ಯತಕುಮಾರ್, ಸುಧಾರಾಣಿ, ಶೋಭ್ ರಾಜ್, ವಿಜಯ್ ಭಾರ್ಗವ, ದಿವ್ಯ ಗೌಡ, ತಬಲನಾಣಿ, ಸುಧಾ ಬೆಳವಾಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತರೀಕೆರೆ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ, ಬಿಜೆಪಿಗೆ ಮುಖಭಂಗ

    ತರೀಕೆರೆ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ, ಬಿಜೆಪಿಗೆ ಮುಖಭಂಗ

    ಚಿಕ್ಕಮಗಳೂರು: ಎರಡೂವರೆ ವರ್ಷಗಳ ಬಳಿಕ ನಡೆದ ಜಿಲ್ಲೆಯ ತರೀಕೆರೆ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದ್ದು ಬಿಜೆಪಿಗೆ ಮುಖಭಂಗವಾಗಿದೆ.

    23 ವಾರ್ಡ್‍ಗಳ ತರೀಕೆರೆ ಪಟ್ಟಣದಲ್ಲಿ ಒಂದು ವಾರ್ಡ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದಂತೆ 22 ವಾರ್ಡ್‍ಗಳಿಗೆ ಇದೇ 3ರಂದು ಮತದಾನದ ನಡೆದಿದ್ದು, ಇಂದು ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಜಯಭೇರಿ ಭಾರಿಸಿದೆ. 23 ವಾರ್ಡ್‍ಗಳಲ್ಲಿ ಕಾಂಗ್ರೆಸ್ 15, ಪಕ್ಷೇತರರು 7 ಹಾಗೂ ಬಿಜೆಪಿ ಒಂದು ಸ್ಥಾನದಲ್ಲಿ ಗೆಲುವು ಕಂಡಿದೆ. ಆಡಳಿತ ಪಕ್ಷ ಬಿಜೆಪಿ ಕೇವಲ ಒಂದು ಸ್ಥಾನದಲ್ಲಿ ಗೆದ್ದು ತೀವ್ರ ಮುಖಭಂಗ ಅನುಭವಿಸಿದೆ. 15 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಅಕ್ರಮವಾಗಿ ನೆಲೆಸಿರುವ ವಿದೇಶಿ ನಾಗರಿಕರ ಮೇಲೆ ಹೆಚ್ಚಿನ ನಿಗಾ: ಆರಗ ಜ್ಞಾನೇಂದ್ರ

    ಎಂಎಲ್‍ಎ ಎಲೆಕ್ಷನ್‍ಗೆ ದಿಕ್ಸೂಚಿಯೇ?:
    ಖಂಡಿತಾ ಇಲ್ಲ ಅನ್ನೋದು ತರೀಕೆರೆ ಪುರಸಭಾ ವ್ಯಾಪ್ತಿಯ ಮತದಾರರ ಅಂತರಾಳ. ಯಾಕಂದರೆ, ಈ ಲೋಕಲ್ ಫೈಟ್ ಸ್ನೇಹ, ಸಂಬಂಧ, ವಿಶ್ವಾಸದ ಆಧಾರದ ಮೇಲೆ ನಡೆಯುವ ಚುನಾವಣೆ. ಇಲ್ಲಿ ಬಿಜೆಪಿಯವರು ಕಾಂಗ್ರೆಸ್‍ಗೆ ವೋಟ್ ಹಾಕಿರುತ್ತಾರೆ. ಕಾಂಗ್ರೆಸ್ಸಿಗರು ಬಿಜೆಪಿಗೆ ವೋಟ್ ಹಾಕಿರುತ್ತಾರೆ. ಕಾಂಗ್ರೆಸ್-ಬಿಜೆಪಿ ಇಬ್ಬರೂ ಪಕ್ಷೇತರರಿಗೆ ಮತ ನೀಡಿರುತ್ತಾರೆ. ಇಲ್ಲಿ ಪಕ್ಷದ ಚಿಹ್ನೆಯಡಿ ಎಲೆಕ್ಷನ್ ನಡೆದರೂ ಕೂಡ ಪಕ್ಷಕ್ಕಿಂತ ಸ್ನೇಹ, ಸಂಬಂಧ, ವಿಶ್ವಾಸ ದೊಡ್ಡದಿರುತ್ತದೆ. ಹಾಗಾಗಿ, ಈ ಎಲೆಕ್ಷನ್ ಮುಂದಿನ ಎಂಎಲ್‍ಎ ಚುನಾವಣೆಯ ದಿಕ್ಸೂಚಿಯೇ ಅಲ್ಲ ಎಂದು ಮತದಾರರೇ ವಿಶ್ಲೇಷಿಸಿದ್ದಾರೆ.

    ಜಾತಿ ಆಧಾರದಲ್ಲಿ ನೋಡುವುದಾರರೆ ತರೀಕೆರೆ ಪಟ್ಟಣದಲ್ಲಿ ಕುರುಬ ಹಾಗೂ ಮುಸ್ಲಿಂ ಮತದಾರರು ಹೆಚ್ಚಿದ್ದಾರೆ. ಹಾಗಾಗಿ, ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆದ್ದಿದೆ ಎಂದು ಮತದಾರರು ತಮ್ಮ ಅನುಭವ ಹಂಚಿಕೊಂಡಿದ್ದು, ಈ ಫಲಿತಾಂಶ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಆಗಲ್ಲ ಎಂದು ತರೀಕೆರೆ ಮತದಾರರೇ ಹೇಳಿದ್ದಾರೆ. ಇದನ್ನೂ ಓದಿ: ಬೌಲರ್‌ಗಳ ಭರ್ಜರಿ ಆಟ – ಭಾರತಕ್ಕೆ 157 ರನ್‍ಗಳ ಗೆಲುವು

    ಪಟ್ಟಣದಲ್ಲಿ ಲಿಂಗಾಯಿತರ ಪ್ರಾಬಲ್ಯ ಕಡಿಮೆ ಇದ್ದು, ಕುರುಬ ಹಾಗೂ ಮುಸ್ಲಿಮರ ಪ್ರಾಬಲ್ಯ ಹೆಚ್ಚಿಗಿರುವುದರಿಂದ ಪುರಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ತಾಲೂಕಿನಲ್ಲಿ ಲಿಂಗಾಯಿತರ ಪ್ರಾಬಲ್ಯ ಹೆಚ್ಚಿದ್ದು ಲಿಂಗಾಯಿತ ಸಮುದಾಯದ ಸುರೇಶ್ ಶಾಸಕರಾಗಿದ್ದಾರೆ. ಹಾಗಾಗಿ, ಈ ಚುನಾವಣೆ ಫಲಿತಾಂಶ ಎಂಎಲ್‍ಎ ಎಲೆಕ್ಷನ್ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ತರೀಕೆರೆ ಜನ ಅಭಿಪ್ರಾಯಪಟ್ಟಿದ್ದಾರೆ.

    ತರೀಕೆರೆ ಪುರಸಭೆಯಲ್ಲಿ ಇತಿಹಾಸದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. 2002ರಲ್ಲಿ ಎರಡು ಸ್ಥಾನ ಗೆದ್ದದ್ದು ಹೊರತುಪಡಿಸಿದರೆ, 2013ರಲ್ಲಿ ಶಾಸಕ ಸುರೇಶ್ ಕೆಜೆಪಿ ಸೇರಿದ ಬಳಿಕ ಎರಡು ಸ್ಥಾನ ಕೆಜೆಪಿ ಯಿಂದ ಗೆದ್ದಿತ್ತು. ಉಳಿದಂತೆ ಈ ಬಾರಿ ಒಂದು ಸ್ಥಾನದಲ್ಲಿ ಗೆದ್ದಿದೆ. ಹಾಗಾಗಿ, ಈ ಫಲಿತಾಂಶ ಕೇವಲ ಪುರಸಭೆಗಷ್ಟೇ ಮೀಸಲು ಹೊರತು ಎಂಎಲ್‍ಎ ಎಲೆಕ್ಷನ್‍ಗೆ ಅಲ್ಲ ಅನ್ನೋದು ಸ್ಥಳಿಯರ ಅಭಿಪ್ರಾಯ. ಇದನ್ನೂ ಓದಿ: ಕೋವಿಡ್ ಇತಿಮಿತಿಯಲ್ಲಿ ನಮ್ಮ ಶ್ರಮಕ್ಕೆ ಸಮಾಧಾನಕರ ಫಲಿತಾಂಶ ಬಂದಿದೆ: ಡಿಕೆಶಿ

  • ಪಾಲಿಕೆ ಚುನಾವಣೆ- ಒಂದೇ ಕುಟುಂಬದ ಮೂವರ ಗೆಲುವು

    ಪಾಲಿಕೆ ಚುನಾವಣೆ- ಒಂದೇ ಕುಟುಂಬದ ಮೂವರ ಗೆಲುವು

    ಹುಬ್ಬಳ್ಳಿ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಯಾಗಿದೆ. ಒಂದೇ ಮನೆತನದ ಮೂವರು ಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ.

    ಮಹಾನಗರ ಪಾಲಿಕೆಯ ವಾರ್ಡ ಸಂಖ್ಯೆ 52ರಲ್ಲಿ ಪಕ್ಷೇತರ ಅಭ್ಯರ್ಥಿ ಚೇತನ ಹಿರೇಕೆರೂರ 314 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಪಪ್ರಚಾರಕ್ಕೆ ಜನ ಉತ್ತರಿಸಿದ್ದಾರೆ: ಕೋಟ

    ಚೇತನ ಹಿರೇಕೆರೂರ ಸಹೋದರಿ ಶೃತಿ ಚಲವಾದಿ ವಾರ್ಡ್ ನಂಬರ್ 58 ರಿಂದ ಬಿಜೆಪಿಯ ಮಹೇಂದ್ರ ಕೌತಾಳರನ್ನ ಸೋಲಿಸಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸುವಲ್ಲಿ ಯಶ್ವಸಿಯಾಗಿದ್ದಾರೆ.  ಭಾರತೀಯ ಜನತಾ ಪಕ್ಷದ 42ನೇ ವಾರ್ಡ್ ನಿಂದ ಗೆದ್ದು ಬಂದಿರುವ ಮಹದೇವಪ್ಪ ನರಗುಂದ ಚೇತನ ಹಿರೇಕೆರೂರರ ತಾತ ಆಗಿದ್ದಾರೆ.ಇದನ್ನೂ ಓದಿ: ತುಂಡುಡುಗೆ ತೊಟ್ಟು ಕಡಲ ತೀರದಲ್ಲಿ ನಿಂತ ಶ್ವೇತಾ ಶ್ರೀವಾತ್ಸವ್

    ಒಂದೇ ಕುಟುಂಬದ ಮೂವರು ಸದಸ್ಯರು ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ರಾಗಿ ಸ್ಪರ್ಧಿಸಿ ಮೂವರು ವಾರ್ಡ್ ವಿಂಗಡನೆಯಾದ ನಂತರ ಮೊದಲ ಬಾರಿಗೆ ಪ್ರವೇಶ ಪಡೆದಿರುವುದು ವಿಶೇಷವಾಗಿದೆ.

  • ಮಸ್ಕಿಯಲ್ಲಿ ಮಾಜಿ ಶಾಸಕ ಎನ್.ಎಸ್.ನಂದೀಶ್ ಹಣ ಹಂಚಿಕೆ

    ಮಸ್ಕಿಯಲ್ಲಿ ಮಾಜಿ ಶಾಸಕ ಎನ್.ಎಸ್.ನಂದೀಶ್ ಹಣ ಹಂಚಿಕೆ

    ರಾಯಚೂರು: ಮಸ್ಕಿ ಉಪ ಚುನಾವಣಾ ಸಮರ ದಿನೇ ದಿನೇ ರಂಗೇರುತ್ತಿದೆ. ಇದರ ಮಧ್ಯೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡಗೆ ಮತ ನೀಡುವಂತೆ ಬಿಜೆಪಿ ಮಾಜಿ ಶಾಸಕ ಎನ್.ಎಸ್. ನಂದೀಶ್ ಹಣ ಹಂಚಿಕೆ ಮಾಡಿದ್ದಾರೆ. ಹಣ ಹಂಚಿಕೆ ಮಾಡಿದವರ ಹಾಗೂ ಹಣ ಪಡೆದವರ ವಿರುದ್ಧ ಮಸ್ಕಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

    ಬಿಜೆಪಿ ಕಾರ್ಯಕರ್ತ ಅಮಿತ್, ಚಿಟ್ಟಿಬಾಬು, ಹಣ ಪಡೆದ ವೃದ್ದೆ ತಾಯಮ್ಮ ಮೂವರನ್ನು ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಿಳೆಯರಿಗೆ ಹಾಗೂ ಮಕ್ಕಳಿಗೆ 1 ಸಾವಿರ ನೀಡುತ್ತಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪೊಲೀಸರು ವಿಡಿಯೋ ಆಧಾರಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಏಪ್ರಿಲ್ 10 ರಂದು ಹರ್ವಾಪುರದಲ್ಲಿ ಹಣ ಹಂಚಿದ ಆರೋಪದಡಿ ಕವಿತಾಳ ಪೊಲೀಸ್ ಠಾಣೆಯಲ್ಲಿ ಅನಾಮಧೇಯ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.

  • ಇಂದು ಪುದುಚೇರಿ ಸೇರಿದಂತೆ 4 ರಾಜ್ಯಗಳಲ್ಲಿ ಚುನಾವಣೆ

    ಇಂದು ಪುದುಚೇರಿ ಸೇರಿದಂತೆ 4 ರಾಜ್ಯಗಳಲ್ಲಿ ಚುನಾವಣೆ

    ಬೆಂಗಳೂರು: ಒಂದು ಕೇಂದ್ರಾಡಳಿತ ಪ್ರದೇಶ, ನಾಲ್ಕು ರಾಜ್ಯಗಳಲ್ಲು ಚುನಾವಣೆ ಹಬ್ಬ ನಡೆಯಲಿದೆ. ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳ ಅಸ್ಸಾಂ ಮತ್ತು ಪುದುಚೇರಿಯಲ್ಲಿ ಮತದಾನ ನಡೆಯಲಿದೆ. ಕೇರಳ ಮತ್ತು ತಮಿಳುನಾಡು, ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ನಡೆಯಲಿದೆ.

    ಕೇರಳದ 140 ಹಾಗೂ ತಮಿಳುನಾಡಿನ 234 ಪುದುಚೇರಿಯ 30 ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಸೇರಲಿದೆ. ಕೇರಳದಲ್ಲಿ ಎಲ್‍ಡಿಎಫ್, ಯುಡಿಎಫ್ ಮತ್ತು ಎನ್‍ಡಿಎ ಒಕ್ಕೂಟದ ನಡುವೆ ತ್ರಿಕೋನ ಸ್ಪರ್ಧೆ ಇದೆ. ಇತ್ತ ತಮಿಳುನಾಡಿನಲ್ಲಿ ಡಿಎಂಕೆ ವರ್ಸಸ್ ಎಐಎಡಿಎಂ ನಡುವೆ ನೇರ ಪೈಪೋಟಿ ನಡೆಯುತ್ತಿದೆ. ಪುದುಚೇರಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಂಘರ್ಷ ಏರ್ಪಟ್ಟಿದೆ. ಎರಡನೇ ಬಾರಿಗೆ ಸಿಎಂ ಆಗಲು ಪಿಣರಾಯಿ ವಿಜಯನ್ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಪ್ರಯತ್ನದಲ್ಲಿದ್ದಾರೆ.

    ಕೇರಳ:
    ಮಂಗಳವಾರ ಕೇರಳದ ಎಲ್ಲ 140 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ವೋಟಿಂಗ್ ನಡೆಯಲಿದೆ. ಒಟ್ಟು 2,74,46,039 ಮತದಾರರಿದ್ದಾರೆ. ಸಿಪಿಐ(ಎಂ) ನೇತೃತ್ವದಲ್ಲಿ ಎಲ್‍ಡಿಎಫ್, ಕಾಂಗ್ರೆಸ್ ನೇತೃತ್ವದಲ್ಲಿ ಯುಡಿಎಫ್, ಮತ್ತು ಬಿಜೆಪಿ ನೇತೃತ್ವದಲ್ಲಿ ಎನ್‍ಡಿಎ ಮಿತ್ರ ಪಕ್ಷಗಳ ಸ್ಪರ್ಧೆ ಮಾಡಿವೆ. ಸಿಪಿಐ (ಎಂ) ಕಳೆದ ಬಾರಿ 91 ಸ್ಥಾನಗಳೊಂದಿಗೆ ಅಧಿಕಾರ ರಚಿಸಿತ್ತು. ಕಾಂಗ್ರೆಸ್ 46 ಸ್ಥಾನಗಳೊಂದಿಗೆ ವಿರೋಧ ಪಕ್ಷದಲ್ಲಿತ್ತು. ಹಾಗಾಗಿ ಸಿಪಿಐ (ಎಂ) ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿದೆ.

    ಕಳೆದ ಬಾರಿ ಒಂದೇ ಸ್ಥಾನ ಗೆದ್ದಿದ್ದ ಬಿಜೆಪಿಯಿಂದ 10 ಸ್ಥಾನ ಗೆಲ್ಲುವ ಪ್ರಯತ್ನಕ್ಕೆ ಮುಂದಾಗಿದೆ. ಈಗಾಗಲೇ ಎಲ್ಲ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ. ಲೋಕಸಭೆಯಲ್ಲಿ 20 ರ ಪೈಕಿ 18 ಸ್ಥಾನಗಳು ಗೆದ್ದಿದ್ದ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಈ ಬಾರಿ ಅಧಿಕಾರ ರಚಿಸುವ ಪ್ರಯತ್ನದಲ್ಲಿದೆ. ಸಿ – ವೋಟರ್ ಸಮೀಕ್ಷೆ ಪ್ರಕಾರ 140 ಸದಸ್ಯರ ವಿಧಾನಸಭೆಯಲ್ಲಿ 82 ಸ್ಥಾನಗಳನ್ನು ಪಿಣರಾಯಿ ವಿಜಯನ್ ನೇತೃತ್ವದ ಎಲ್‍ಡಿಎಫ್, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮತ್ತೊಮ್ಮೆ 56 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ.

    ತಮಿಳುನಾಡು:
    ಒಟ್ಟು 234 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ತಮಿಳುನಾಡಿನ 88,937 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. ಒಟ್ಟು 3,998 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದು, ಕರೂರು ಒಂದೇ ಕ್ಷೇತ್ರದಿಂದ 77 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 537 ಮತಗಟ್ಟೆಗಳನ್ನು ನಿರ್ಣಾಯಕ ಮತ್ತು 10,813 ದುರ್ಬಲ ಎಂದು ಗುರುತಿಸಲಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ 23,200 ಸಿಬ್ಬಂದಿ, 16,350 ಗೃಹರಕ್ಷಕರು ಮತ್ತು ಇತರ ರಾಜ್ಯಗಳ ಮಾಜಿ ಸೈನಿಕರು, ತಮಿಳುನಾಡಿನ 12,411 ಗೃಹರಕ್ಷಕರು ಮತ್ತು ರಾಜ್ಯ ಪೊಲೀಸರು 74,162 ಮಂದಿ ಸೇರಿ ಒಟ್ಟು 1,58,263 ಪೊಲೀಸ್ ಮತ್ತು ಪೊಲೀಸ್ ರಹಿತ ಪಡೆಗಳು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

    ಡಿಎಂಕೆ ಜೊತೆಗೆ ಕಾಂಗ್ರೆಸ್, ಎಐಎಡಿಎಂಕೆ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ನಟ ಕಮಲ ಹಾಸನ್ ನೇತೃತ್ವದಲ್ಲಿ 154 ಸ್ಥಾನಗಳಲ್ಲಿ ಎಂಎನ್‍ಎಂ ಸ್ಪರ್ಧೆ ಮಾಡಿದೆ. 2016 ರಲ್ಲಿ 178 ರಲ್ಲಿ ಸ್ಪರ್ಧಿಸಿ 89, 41 ರಲ್ಲಿ ಸ್ಪರ್ಧಿಸಿ 8 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಎಐಎಡಿಎಂಕೆ 136 ಸ್ಥಾನಗಳು ಗೆಲ್ಲುವ ಮೂಲಕ 2016 ರಲ್ಲಿ ಅಧಿಕಾರ ರಚಿಸಿತ್ತು. ಮಾಜಿ ಸಿಎಂಗಳಾದ ಕರುಣಾನಿಧಿ ಮತ್ತು ಜಯಲಲಿತಾ ಇಲ್ಲದೇ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದಾಗಿದ್ದು, ಬಿಜೆಪಿ ಈ ಬಾರಿ ಗರಿಷ್ಠ ಸೀಟುಗಳಿಗೆ ಪ್ರಯತ್ನ ಮಾಡಿದೆ.

    ಪುದುಚೇರಿ:
    30 ಸ್ಥಾನಗಳ ಪೈಕಿ ರಂಗಸಾಮಿಯ ಎಐಎನ್‍ಆರ್‍ಸಿ 16, 9 ಬಿಜೆಪಿ ಮತ್ತು ನಾಲ್ಕು ಕ್ಷೇತ್ರಗಳಿಂದ ಎಐಎಡಿಎಂಕೆ ಸ್ಪರ್ಧೆ ಮಾಡಿದೆ. ಕಾಂಗ್ರೆಸ್ 14 ಮತ್ತು ಡಿಎಂಕೆ 13 ಸ್ಪರ್ಧೆ, ಮೂವರು ಸ್ವತಂತ್ರ ಅಭ್ಯರ್ಥಿಗಳಿಗೆ ಬೆಂಬಲ ನೀಡಿದೆ. 10,04,197 ಮತದಾರರನ್ನು ಪುದುಚೇರಿ ಹೊಂದಿದೆ. ಎನ್‍ಡಿಎಗೆ ಸುಮಾರು 17-20 ಸ್ಥಾನಗಳು, ಕಾಂಗ್ರೆಸ್ ನೇತೃತ್ವದ ಎಸ್‍ಡಿಎ ಸುಮಾರು 9-11 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಸಮೀಕ್ಷೆಗಳು ಹೇಳಿವೆ. ಆಡಳಿರೂಢ ಕಾಂಗ್ರೆಸ್ ಸೋಲಲಿದೆ ಎಂದು ಸಮೀಕ್ಷೆಗಳು ಹೇಳಿವೆ

    ಅಸ್ಸಾಂ
    ಮೂರನೇ ಹಂತದ 40 ಕ್ಷೇತ್ರಗಳಲ್ಲಿ 337 ಮಂದಿ ಕಣದಲ್ಲಿದ್ದಾರೆ. ಬಿಜೆಪಿ 20 ಸ್ಥಾನಗಳಲ್ಲಿ, ಅದರ ಮಿತ್ರರಾಷ್ಟ್ರಗಳಾದ ಅಸ್ಸಾಂ ಗಣ ಪರಿಷತ್ 9, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ 8 ಯುಪಿಪಿಎಲ್ 03 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿವೆ. ಕಾಂಗ್ರೆಸ್ 24, ಮಿತ್ರ ಪಕ್ಷಗಳಾದ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಎಂಟು, ಸಿಪಿಐ (ಎಂ) ಒಂದು ಸೇರಿದ ಉಳಿದ ಮಿತ್ರ ಪಕ್ಷಗಳಿಗೆ ಸ್ಥಾನ ಹಂಚಿಕೆ ಮಾಡಿಕೊಂಡಿವೆ.

    11,401 ಬೂತ್ ಗಳ ನಿರ್ಮಾಣ ಮಾಡಿದ್ದು, 79,19,641 ಮತದಾರರಿದ್ದಾರೆ. ಭದ್ರತೆಗೆ 320 ಸಶಸ್ತ್ರ ಪಡೆಗಳ ನೇಮಕ ಮಾಡಲಾಗಿದೆ. ಹಿರಿಯ ಸಚಿವ ಹಿಮಂತ ಬಿಸ್ವಾ ಶರ್ಮಾ ಸೇರಿ ಐವರು ಸಚಿವರು ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಂಜೀತ್ ಕುಮಾರ್ ದಾಸ್ ಭವಿಷ್ಯವನ್ನು ನಿರ್ಧಾರವಾಗಲಿದೆ. ಸಿಎಂ ರೇಸ್ ನಲ್ಲಿರುವ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ, ಕಾಂಗ್ರೆಸ್, ಬಿಜೆಪಿ ಮತ್ತು ಎಐಯುಡಿಎಫ್ ಸೇರಿ ಒಟ್ಟು 20 ಮಂದಿ ಹಾಲಿ ಶಾಸಕರ ಸ್ಪರ್ಧೆಯಲ್ಲಿದ್ದಾರೆ.

    ಪಶ್ಚಿಮ ಬಂಗಾಳ
    ಮೂರು ಜಿಲ್ಲೆಯ 31 ಕ್ಷೇತ್ರಗಳಿಗೆ ಮತದಾನ ಇಂದು ನಡೆಯಲಿದೆ. 78,52,425 ಮಂದಿ ಮತದಾರರಿಂದ 205 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಹಿಂದುತ್ವದ ಅಲೆ ಇರುವ ಮೂರು ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ. ಇಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್, ಸ್ಮೃತಿ ಇರಾನಿ ಭರ್ಜರಿ ಪ್ರಚಾರ ನಡೆಸಿದ್ದರು. ಖುದ್ದು ಪ್ರಚಾರಕ್ಕೆ ಇಳಿದಿದ್ದ ದೀದಿ, ಎಡ ಪಕ್ಷಗಳಿಂದ ಮನೆ ಮನೆ ಪ್ರಚಾರ ನಡೆಸಿದ್ದರು. ಮೋದಿ ಮತ್ತು ದೀದಿ ನಡುವೆ ನೇರ ಸಂಘರ್ಷಕ್ಕೆ ಮೂರು ಜಿಲ್ಲೆಗಳಲ್ಲಿ ನಡೆಯುವ ಸಾಧ್ಯತೆಯಿದೆ.

  • ಮತದಾರರ ಪಟ್ಟಿಯಲ್ಲಿರೋದು 90 ಹೆಸ್ರು – ವೋಟ್ ಹಾಕಿದ್ದು 171 ಜನ

    ಮತದಾರರ ಪಟ್ಟಿಯಲ್ಲಿರೋದು 90 ಹೆಸ್ರು – ವೋಟ್ ಹಾಕಿದ್ದು 171 ಜನ

    – ಐವರು ಚುನಾವಣಾ ಅಧಿಕಾರಿಗಳ ಅಮಾನತು
    – ಬೂತ್ ಮರು ಚುನಾವಣೆಗೆ ಆಗ್ರಹ

    ದಿಸ್ಪುರ್: ಅಸ್ಸಾಂನಲ್ಲಿ ಎರಡನೇ ಹಂತದ ಮತದಾನದ ವೇಳೆ ಬೂತ್ ಮತದಾರರ ಪಟ್ಟಿಯಲ್ಲಿರೋ ಸಂಖ್ಯೆಗಿಂತ ಹೆಚ್ಚಿನ ವೋಟಿಂಗ್ ನಡೆದಿದೆ. ಮತದಾರರ ಪಟ್ಟಿಯಲ್ಲಿ 90 ಹೆಸರುಗಳಿದ್ರೆ, ಬರೋಬ್ಬರಿ 171 ಜನರು ಮತದಾನ ಮಾಡಿರುವ ಬಗ್ಗೆ ವರದಿಯಾಗಿದೆ. ಈಗಾಗಲೇ ಚುನಾವಣಾ ಆಯೋಗ ಕರ್ತವ್ಯದಲ್ಲಿದ್ದ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಅದೇಶ ಹೊರಡಿಸಿದೆ.

    ಹಸಾಓ ಜಿಲ್ಲೆಯ ಹಾಫಲೋಂಗ್ ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಸೋಮವಾರ ಘಟನೆ ಬೆಳಕಿಗೆ ಬಂದಿದೆ. ಅಸ್ಸಾಂನಲ್ಲಿ ಏಪ್ರಿಲ್ 1ರಂದು 39 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಸದ್ಯ ಚುನಾವಣಾ ಆಯೋಗ ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದೆ.

    ಮತದಾನ ಕೇಂದ್ರಕ್ಕೆ ನುಗ್ಗಿದ ಗ್ರಾಮದ ಕೆಲ ಮುಖಂಡರು ತಮ್ಮದೇ ಆದ ಪಟ್ಟಿ ಜೊತೆ ಆಗಮಿಸಿದ್ದರು. ಅದರಲ್ಲಿರುವ ಹೆಸರಿನ ಪ್ರಕಾರವೇ ವೋಟಿಂಗ್ ನಡೆಯಬೇಕೆಂದು ಗಲಾಟೆ ಮಾಡಿ ಮತದಾನ ಮಾಡಿದ್ದಾರೆ ಎನ್ನಲಾಗಿದೆ. ಆದ್ರೆ ಚುನಾವಣಾ ಅಧಿಕಾರಿಗಳಿಗೆ ನೀಡಿದ ಪಟ್ಟಿ ಕೇವಲ 90 ಮತದಾರರ ಹೆಸರು ಒಳಗೊಂಡಿತ್ತು. ಅಂತಿಮವಾಗಿ ಅಧಿಕಾರಿಗಳು ಗ್ರಾಮಸ್ಥರ ನೀಡಿದ ಪಟ್ಟಿಯಂತೆ ಮತದಾನ ನಡೆಸಿ, ಶೇ.70ರಷ್ಟು ವೋಟಿಂಗ್ ಎಂದು ದಾಖಲಿಸಿದ್ದರು. ಸದ್ಯ ಈ ಬೂತ್ ನಲ್ಲಿ ಮರು ಮತದಾನ ನಡೆಯಬೇಕೆಂದು ಸ್ಪರ್ಧಿಗಳು ಆಗ್ರಹಿಸಿದ್ದಾರೆ.

  • ಈ ಬಾರಿ ನಾನು ಚುನಾವಣೆಗೆ ನಿಲ್ಲಲ್ಲ: ದೇವೇಗೌಡ

    ಈ ಬಾರಿ ನಾನು ಚುನಾವಣೆಗೆ ನಿಲ್ಲಲ್ಲ: ದೇವೇಗೌಡ

    ಹಾಸನ: ನಾನು ಈ ಬಾರಿ ಹಾಸನದಲ್ಲಿ ಚುನಾವಣೆಗೆ ನಿಲ್ಲಲ್ಲ. ನಾನು ಸ್ಪರ್ಧೆ ಮಾಡಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಹೇಳಿದ್ದಾರೆ.

    ಹಾಸನದ ಹೊಳೆನರಸೀಪುರ ತಾ. ಮೂಡಲಹಿಪ್ಪೆಯಲ್ಲಿ ಕಾರ್ಯಕ್ರಮಕ್ಕೆ ದೇವೇಗೌಡರು ಆಗಮಿಸಿದರು. ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, “ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತೀರ್ಮಾನಿಸಿದ್ದೇನೆ. ಇನ್ನೂ 28 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್‍ಗೆ ಎಷ್ಟು ಹಾಗೂ ಜೆಡಿಎಸ್‍ಗೆ ಎಷ್ಟು ಎಂಬುದು ತೀರ್ಮಾನ ಆಗಿಲ್ಲ. ಅಂತಿಮವಾದ ಬಳಿಕ ಮಾರ್ಚ್ 15 ರಂದು ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.

    ಸದ್ಯ ರಾಹುಲ್ ಗಾಂಧಿ ಅವರು ಪ್ರಚಾರದಲ್ಲಿ ನಿರತಾಗಿದ್ದಾರೆ. ಕೇರಳ, ತಮಿಳುನಾಡು, ಒಡಿಸ್ಸಾದಲ್ಲಿ ಚುನಾವಣಾ ಪ್ರಚಾರದಲ್ಲಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ರಾಹುಲ್ ಗಾಂಧಿ ಜೊತೆ ಮತ್ತೊಮ್ಮೆ ಸಭೆ ಸೇರುತ್ತೇವೆ. ಶುಭ ಕಾರ್ಯಕ್ಕೂ ಮುನ್ನ ನಾವು ದೇವರ ದರ್ಶನ ಮಾಡುವುದು ವಾಡಿಕೆ. ರೇವಣ್ಣ ಅವರು ಯಾವಾಗಲೂ ದಿನಶುದ್ಧಿ ಬಗ್ಗೆ ಯೋಚನೆ ಮಾಡುತ್ತಾರೆ. ಇಂದು ಮೂಡಲಹಿಪ್ಪೆ ಗ್ರಾಮದಿಂದ ಪ್ರಚಾರವನ್ನು ಆರಂಭ ಮಾಡಿದ್ದೇನೆ ಎಂದು ದೇವೇಗೌಡರು ಹೇಳಿದರು.

    ಸದ್ಯ ದೇವೇಗೌಡರು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲವಾ ಅಥವಾ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲವೇ ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv