Tag: ಎಮ್ಮೆ

  • ನಾಪತ್ತೆಯಾಗಿದ್ದ ಎಮ್ಮೆಗಳು ಫೇಸ್‍ಬುಕ್‍ನಿಂದ ಪತ್ತೆಯಾದ್ವು!

    ನಾಪತ್ತೆಯಾಗಿದ್ದ ಎಮ್ಮೆಗಳು ಫೇಸ್‍ಬುಕ್‍ನಿಂದ ಪತ್ತೆಯಾದ್ವು!

    ಚಿಕ್ಕಬಳ್ಳಾಪುರ: ನಾಪತ್ತೆಯಾಗಿದ್ದ ಎಮ್ಮೆಗಳು ಫೇಸ್‍ಬುಕ್ ಪೋಸ್ಟ್ ನಿಂದ ಪತ್ತೆಯಾಗಿರುವ ಅಚ್ಚರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ.

    ಮೂಲತಃ ಬೆಂ.ಗ್ರಾ ಜಿಲ್ಲೆಯ ಈಸ್ತೂರು ಗ್ರಾಮದ ನಾರಾಯಣಸ್ವಾಮಿ ಎಂಬುವರಿಗೆ ಸೇರಿದ ಎರಡು ಎಮ್ಮೆಗಳು ಸೋಮವಾರ ನಾಪತ್ತೆಯಾಗಿದ್ದವು. ಎಮ್ಮೆಗಳು ನಾಪತ್ತೆಯಾಗಿರುವುದು ತಿಳಿದ ಅವರು ಸುತ್ತಲ ಹೊಲ, ಗದ್ದೆ, ಪ್ರದೇಶಗಳಲ್ಲಿ ಹುಡುಕಿ ಕೈಚೆಲ್ಲಿ ಕುಳಿತ್ತಿದ್ದರು.

    ಆದರೆ ನಾಪತ್ತೆಯಾದ ಎಮ್ಮೆಗಳು ಈಸ್ತೂರು ಗ್ರಾಮದಿಂದ ಸುಮಾರು 10 ಕಿ.ಮೀ ದೂರ ಪ್ರಯಾಣಿಸಿ ಕೊಂಡ್ರಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿವೆ. ಅದೇ ಗ್ರಾಮದ ನಿವಾಸಿ ಮೋಹನ್ ಅವರು ಎಮ್ಮೆಗಳಿಗೆ ಹುಲ್ಲು, ಆಹಾರ ನೀಡಿ ಕಟ್ಟಿ ಹಾಕಿದ್ದರು.

    ಎಮ್ಮೆಗಳನ್ನು ಮೂಲ ಮಾಲೀಕರಿಗೆ ಹಿಂದುರುಗಿಸಲು ನಿರ್ಧರಿಸಿದ ಮೋಹನ್ ಅವರು ಎಮ್ಮೆ ಪತ್ತೆಯಾದ ಬಗ್ಗೆ ಮಂಗಳವಾರ ತಮ್ಮ ಫೇಸ್ ಬುಕ್ ಖಾತೆಯಲ್ಲಿ, ಈ ಎಮ್ಮೆಗಳು ಯಾರದ್ದು ನೋಡಿ ಎಂದು ಫೋಟೋ ಸಮೇತ ಸ್ಟೇಟಸ್ ಹಾಕಿ ಪೋಸ್ಟ್ ಮಾಡಿದ್ದರು.

    ಫೇಸ್ ಬುಕ್ ಸ್ಟೇಟಸ್ ನೋಡಿದ ಈಸ್ತೂರು ಗ್ರಾಮದ ಯುವಕ, ಎಮ್ಮೆ ಮಾಲೀಕ ನಾಗೇಶ್ ಅವರಿಗೆ ಮಾಹಿತಿ ನೀಡಿ ಕಳೆದು ಹೋದ ಎಮ್ಮೆಗಳನ್ನು ಮಾಲೀಕನ ಕೈ ತಲುಪುವಂತೆ ಮಾಡಿದ್ದಾರೆ.

     

  • ಎಮ್ಮೆ ಸಿಲುಕಿ ಗಂಟೆಗಟ್ಟಲೆ ಹಳಿಯಲ್ಲೇ ನಿಂತ ಟಿಪ್ಪು ಎಕ್ಸ್ ಪ್ರೆಸ್

    ಎಮ್ಮೆ ಸಿಲುಕಿ ಗಂಟೆಗಟ್ಟಲೆ ಹಳಿಯಲ್ಲೇ ನಿಂತ ಟಿಪ್ಪು ಎಕ್ಸ್ ಪ್ರೆಸ್

    ಮಂಡ್ಯ: ಚಲಿಸುತ್ತಿದ್ದ ರೈಲಿಗೆ ಎಮ್ಮೆ ಸಿಲುಕಿ ಗಂಟೆಗಟ್ಟಲೆ ರಿಪೇರಿಯಾಗದೇ ರೈಲು ಹಳಿಯಲ್ಲೇ ನಿಂತಿದ್ದು, ಬಳಿಕ ಮೈಸೂರಿನಿಂದ ಬದಲಿ ಇಂಜಿನ್ ತಂದು ಅಳವಡಿಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡ ಘಟನೆ ನಡೆದಿದೆ.

    ಟಿಪ್ಪು ಎಕ್ಸ್ ಪ್ರೆಸ್ ರೈಲಿಗೆ ಜಿಲ್ಲೆಯ ಹೊಸಬೂದನೂರು ಗ್ರಾಮದ ಬಳಿ ಎರಡು ಎಮ್ಮೆಗಳು ಅಡ್ಡ ಬಂದಿವೆ. ಇದ್ರಿಂದ ರೈಲು ಚಾಲಕ ಸಡನ್ ಆಗಿ ಬ್ರೇಕ್ ಹಾಕಿದ್ದಾರೆ. ಪರಿಣಾಮ ಒಂದು ಎಮ್ಮೆ ರೈಲಿಗೆ ಸಿಲುಕಿ ಸಾವನ್ನಪ್ಪಿದ್ರೆ, ಮತ್ತೊಂದಕ್ಕೆ ಅಲ್ಪಸ್ವಲ್ಪ ಗಾಯಗಳಾಗಿವೆ. ತಜ್ಞರು ಬಂದು ರಿಪೇರಿ ಮಾಡಲು ಪ್ರಯತ್ನಿಸಿದ್ರೂ ಸಾಧ್ಯವಾಗಿಲ್ಲ. ಇದ್ರಿಂದ ರೈಲಿನಲ್ಲಿದ್ದ ಸಾವಿರಾರು ಪ್ರಯಾಣಿಕರು ಬಿರು ಬಿಸಿಲಿನಲ್ಲಿ ರೈಲ್ವೆ ಹಳಿಯ ಮೇಲೆ ನಿಂತು ಪರದಾಡಿದ್ದರು.

    ಹಳಿಯಿಂದ ಸುಮಾರು ಒಂದೂವೆರ ಕಿಲೋಮೀಟರ್ ದೂರದವರೆಗೆ ಹೆದ್ದಾರಿಯ ಸಂಪರ್ಕ ಇಲ್ಲದ್ದರಿಂದ ಪ್ರಯಾಣಿಕರು ಬದಲಿ ದಾರಿಯಿಲ್ಲದೇ ಸಂಕಟ ಪಡುತ್ತಿದ್ದಾರೆ. ವಿದೇಶಕ್ಕೆ ಪ್ರಯಾಣ ಹೊರಟವರು, ಬೆಂಗಳೂರಿಗೆ ಇಂಟರ್‍ವ್ಯೂಗೆ, ಹೀಗೆ ಹಲವು ಕಾರಣಗಳಿಂದ ಬೆಂಗಳೂರಿಗೆ ಹೊರಟವರು ರೈಲ್ವೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅಧಿಕಾರಿಗಳು ಬದಲಿ ವ್ಯವಸ್ಥೆ ಮಾಡದೇ, ಪ್ರಯಾಣಿಕರಿಗೆ ಸರಿಯಾದ ಉತ್ತರವನ್ನು ನೀಡುತ್ತಿಲ್ಲ. ಹೀಗಾದ್ರೆ ಸಾಮಾನ್ಯ ಪ್ರಯಾಣಿಕರ ಕಷ್ಟ ಯಾರ ಬಳಿ ಹೇಳೋದು ಅಂತಾ ಪ್ರಯಾಣಿಕರು ಆಕ್ರೋಶ ಹೊರಹಾಕಿದರು.

    ಹಳಿಯಲ್ಲೇ 12.30 ಯಿಂದ 2.40ರವರೆಗೆ ನಿಂತಿದ್ದ ರೈಲಿಗೆ ಮೈಸೂರಿನಿಂದ ಬದಲಿ ಇಂಜಿನ್ ತಂದು ಅಳವಡಿಸಿದ ಬಳಿಕ ಸಂಚರಿಸಿದೆ.

  • ಧಾರವಾಡದಲ್ಲೊಂದು ಅಚ್ಚರಿ: ಹಸುವಿನ ಮೂಗಿನಲ್ಲಿ ಬೆಳೆಯುತ್ತಿದೆ ಕೋಡು!

    ಧಾರವಾಡದಲ್ಲೊಂದು ಅಚ್ಚರಿ: ಹಸುವಿನ ಮೂಗಿನಲ್ಲಿ ಬೆಳೆಯುತ್ತಿದೆ ಕೋಡು!

    ಧಾರವಾಡ: ಆಕಳು, ಎಮ್ಮೆ ಇವುಗಳ ತಲೆ ಮೇಲೆ ಸಹಜವಾಗಿ ಕೋಡು ಬೆಳೆಯುತ್ತದೆ. ಆದ್ರೆ ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ರಾಜಶೇಖರ ಚೌಡಿಮನಿ ಎಂಬುವವರ ಜರ್ಸಿ ಆಕಳ ಮೂಗಿನಲ್ಲಿ ಕೋಡು ಬೆಳೆಯುತ್ತಿದ್ದು, ಅಚ್ಚರಿಗೆ ಕಾರಣವಾಗಿದೆ.

    ಕಳೆದ ಎರಡು ವರ್ಷಗಳಿಂದ ಈ ಆಕಳಿನ ಮೂಗಿನಲ್ಲಿ ಕೋಡು ಬೆಳೆಯುತ್ತಿದೆ. ಆದರೆ ರಾಜಶೇಖರ ಕುಟುಂಬವರು ಮಾತ್ರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇತ್ತೀಚೆಗೆ ಅವು ಸ್ವಲ್ಪ ದೊಡ್ಡದಾಗಿ ಬೆಳೆದಿದ್ದರಿಂದ ಜನರ ಕಣ್ಣಿಗೆ ಬಿದ್ದಿದೆ. ಇದೊಂದು ಪವಾಡ ಎಂದು ತಿಳಿದ ಚೌಡಿಮನಿ ಕುಟುಂಬದವರು, ಆಕಳಿಗೆ ಪೂಜೆ ಮಾಡಲು ಆರಂಭಿಸಿದ್ದಾರೆ. ಗ್ರಾಮದ ಜನರಲ್ಲಿ ಕೂಡಾ ಇದು ಅಚ್ಚರಿ ಮೂಡಿಸಿದೆ. ಕಳೆದ 6 ವರ್ಷಗಳ ಹಿಂದೆ ಖರೀದಿ ಮಾಡಿ ತಂದಿದ್ದ ರಾಜಶೇಖರ ಅವರ ಈ ಆಕಳು ಪ್ರತಿ ದಿನ 16 ಲಿಟರ್ ಹಾಲನ್ನ ಕೂಡಾ ಕೊಡುತ್ತಿದೆ.

    ಸದ್ಯ ಈ ಆಕಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ಪಶು ವೈದ್ಯ ಡಾ. ಸಂತಿ ಕೂಡಾ ಇದು ವಿಶೇಷ ಅಂತಾರೆ. ಅನುವಂಶಿಕವಾಗಿ ವಂಶವಾಹಿನಿಯಲ್ಲಿ ಇದು ಅಡಗಿರುತ್ತೆ. ಆದರೆ ಸದ್ಯ ಇದು ಬೆಳೆಯುತ್ತಿದ್ದು, ಈ ಹಸುವಿನ ರಕ್ತ ಮಾದರಿಯನ್ನ ಬೆಂಗಳೂರಿನ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕಳಿಸಿಕೊಡಲು ಮುಂದಾಗಿದ್ದಾರೆ. ಈ ಕೊಡುಗಳು ಮೂಗಿನಲ್ಲಿ ಬೆಳೆಯುವುದರಿಂದ ಹಸುಗೆ ಯಾವುದೇ ರೀತಿಯ ತೊಂದರೆಗಳಾಗಲ್ಲ ಅಂತಾ ವೈದ್ಯರು ಹೇಳಿದ್ದಾರೆ.

    ಒಟ್ಟಿನಲ್ಲಿ ವೈಜ್ಞಾನಿಕವಾಗಿ ಇದನ್ನ ನೋಡಬೇಕೋ ಅಥವಾ ಪವಾಡದ ರೀತಿಯಲ್ಲಿ ನೋಡಬೇಕೊ ಗೊತ್ತಿಲ್ಲ. ಸದ್ಯ ಆಕಳ ಮಾಲೀಕರು ಇದಕ್ಕೆ ಪವಾಡ ಅಂತಾರೆ, ಆದರೆ ವೈದ್ಯರು ಇದು ಸಹಜ ಅಂತಾರೆ. ಏನೇ ಇರಲಿ, ಇಂಥದೊಂದು ಅಚ್ಚರಿಯ ಆಕಳು ನೋಡೊಕೆ ಜನರಂತು ಮುಗಿ ಬೀಳುತ್ತಿದ್ದಾರೆ.