Tag: ಎಫ್ 16

  • ಪಾಕಿನ F-16 ಯುದ್ಧ ವಿಮಾನವನ್ನು ಭಾರತ ಹೊಡೆದು ಹಾಕಿದ್ಯಾ?

    ಪಾಕಿನ F-16 ಯುದ್ಧ ವಿಮಾನವನ್ನು ಭಾರತ ಹೊಡೆದು ಹಾಕಿದ್ಯಾ?

    ನವದೆಹಲಿ: ಪಾಕಿಸ್ತಾನದ ಎಫ್‌ 16 (F 16) ಯುದ್ಧ ವಿಮಾನವನ್ನು ಭಾರತ (India) ಹೊಡೆದು ಹಾಕಿದ್ಯಾ ಎಂಬ ಪ್ರಶ್ನೆಎದ್ದಿದೆ.

    ಭಾರತೀಯ ಸೇನೆ (Indian Army) ಬಿಡುಗಡೆ ಮಾಡಿದ ಒಂದು ವಿಡಿಯೋದಿಂದ ಈ ಪ್ರಶ್ನೆ ಎದ್ದಿದೆ. ಭಾರತೀಯ ಸೇನೆಯ Western Command ಇಂದು ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಯ ಕೆಲ ವಿಡಿಯೋಗಳನ್ನು ರಿಲೀಸ್‌ ಮಾಡಿದೆ.

    ಈ ವಿಡಿಯೋದಲ್ಲಿ ಆಕಾಶದಿಂದ ದೊಡ್ಡ ವಸ್ತುವೊಂದು ಬೀಳುತ್ತಿರುವುದನ್ನು ನೋಡಬಹುದು. ಬಿದ್ದಂತಹ ವಸ್ತು ಏನು ಎನ್ನುವುದು ತಿಳಿದು ಬಂದಿಲ್ಲ. ಹೀಗಾಗಿ ನೆಟ್ಟಿಗರು ಇದು ಎಫ್‌16 ಯುದ್ಧ ವಿಮಾನ ಆಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ನಂತರ ಡಿಜಿಎಂಒಗಳ ಸುದ್ದಿಗೋಷ್ಠಿ ನಡೆಯಿತು. ಈ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನ ಯುದ್ಧ ವಿಮಾನಗಳನ್ನು ಹೊಡೆದು ಉರುಳಿಸಲಾಗಿದ್ಯಾ ಎಂಬ ಪ್ರಶ್ನೆಯನ್ನು ಪತ್ರಕರ್ತರು ಕೇಳಿದ್ದರು.

    ಈ ಪ್ರಶ್ನೆಗೆ ಏರ್‌ ಮಾರ್ಷಲ್‌ ಎಕೆ ಭಾರ್ತಿ ಉತ್ತರಿಸಿ, ಹೌದು ನಾವು ಕೆಲವೊಂದನ್ನು ಹೊಡೆದು ಉರುಳಿಸಿದ್ದೇವೆ. ಆದರೆ ಅವುಗಳ ಭಾಗಗಳು ನಮ್ಮ ಬಳಿ ಇಲ್ಲ. ಆದರೆ ನನ್ನ ಬಳಿ ಸಂಖ್ಯೆಯಿದೆ. ಈ ಸಂಖ್ಯೆಯನ್ನು ಈಗಲೇ ಹೇಳುವುದು ಸರಿಯಲ್ಲ. ತಾಂತ್ರಿಕವಾಗಿ ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಉತ್ತರಿಸಿದರು.  ಇದನ್ನೂ ಓದಿ: ಪಾಕ್ ಉಗ್ರ ನೆಲೆ ಧ್ವಂಸದ ಮತ್ತೊಂದು ವಿಡಿಯೋ ವೈರಲ್ – ಪ್ರತೀಕಾರವಲ್ಲ ಇದು ನ್ಯಾಯ ಎಂದ ಸೇನೆ!

    ಈ ಉತ್ತರಕ್ಕೆ ಪತ್ರಕರ್ತರು 4ನೇ ತಲೆಮಾರು + ಯುದ್ಧ ವಿಮಾನವೇ ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ, ಯಾಕೆ 4ನೇ ತಲೆಮಾರು? ನಾವು ಅದನ್ನು ಹೈಟೆಕ್‌ ಮಾಡೋಣ ಎಂದು ಉತ್ತರಿಸಿದ್ದರು.

    ಎಫ್‌ 16 ಯುದ್ಧ ವಿಮಾನವನ್ನು ಅಮೆರಿಕದ ಜನರಲ್‌ ಡೈನಾಮಿಕ್ಸ್‌ ಕಂಪನಿ ತಯಾರಿಸಿದೆ. ಭಾರತದ ಮೇಲಿನ ದಾಳಿಗೆ ಪಾಕಿಸ್ತಾನ ಈ ಯುದ್ಧ ವಿಮಾನವನ್ನು ಬಳಸಿದೆ ಎನ್ನಲಾಗುತ್ತಿದೆ. ಬಾಲಾಕೋಟ್‌ ಏರ್‌ ಸ್ಟ್ರೈಕ್‌ ಬಳಿಕ ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತದ ಮೇಲೆ ದಾಳಿ ನಡೆಸಲು ಬಂದಿದ್ದವು. ಈ ವೇಳೆ ಮಿಗ್‌ 21ನಲ್ಲಿದ್ದ ಅಭಿನಂದನ್‌ ವರ್ಧಮಾನ್‌ ಅವರು ಡಾಗ್‌ ಫೈಟ್‌ ಮಾಡಿ ಎಫ್‌ 1 ಯುದ್ಧ ವಿಮಾನವನ್ನು ಬೀಳಿಸಿದ್ದರು.

    ಅಮೆರಿಕ ಈ ಹಿಂದೆ ಪಾಕಿಸ್ತಾನಕ್ಕೆ ಎಫ್‌ 16 ಯುದ್ಧ ವಿಮಾನಗಳನ್ನು ನೀಡಿತ್ತು. ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಮಾತ್ರ ಈ ವಿಮಾನಗಳನ್ನು ಬಳಕೆ ಮಾಡಬೇಕೆಂದು ಅಮೆರಿಕ ಷರತ್ತು ವಿಧಿಸಿತ್ತು. ಹೀಗಿದ್ದರೂ ಈ ವಿಮಾನಗಳನ್ನು ಪಾಕ್‌ ಭಾರತದ ವಿರುದ್ಧ ಕಾರ್ಯಾಚರಣೆಗೆ ಬಳಕೆ ಮಾಡಿತ್ತು.

  • ಬೆಂಗಳೂರಿನಲ್ಲಿ ಎಫ್‌16 ಯುದ್ಧ ವಿಮಾನ ಹಾರಿಸಿದ್ದ ರತನ್‌ ಟಾಟಾ

    ಬೆಂಗಳೂರಿನಲ್ಲಿ ಎಫ್‌16 ಯುದ್ಧ ವಿಮಾನ ಹಾರಿಸಿದ್ದ ರತನ್‌ ಟಾಟಾ

    ಸಾಹಸ ಪ್ರೇಮಿಯಾಗಿದ್ದ ರತನ್‌ ಟಾಟಾ (Ratan Tata) ಅವರು ಬೆಂಗಳೂರಿನಲ್ಲಿ (Bengaluru) ಅಮೆರಿಕದ ಎಫ್‌ 16 ಫಾಲ್ಕನ್‌ (F-16 Fighting Falcon) ಯುದ್ಧ ವಿಮಾನವನ್ನು ಹಾರಿಸಿದ್ದರು. ಅದು 69ರ ವಯಸ್ಸಿನಲ್ಲಿ ಎನ್ನುವುದು ವಿಶೇಷ.

    2007ರಲ್ಲಿ ನಡೆದ ಏರೋ ಇಂಡಿಯಾ (Aero India) ವೈಮಾನಿಕ ಪ್ರದರ್ಶನಲ್ಲಿ ಅಮೆರಿಕದ ಲಾಕ್‌ಹಿಡ್‌ ಮಾರ್ಟಿನ್‌ ಕಂಪನಿ ನಿರ್ಮಿಸಿದ 400 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಎಫ್‌-16 ಯುದ್ಧ ವಿಮಾನ ಭಾಗಿಯಾಗಿತ್ತು. ಈ ಯುದ್ಧ ವಿಮಾನವನ್ನು ರತನ್‌ ಟಾಟಾ ಹಾರಿಸಿದ್ದರು. ಈ ಮೂಲಕ ಎಫ್‌-16 ಹಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಇದನ್ನೂ ಓದಿ: ಹೋಗಿ ಬಾ ನನ್ನ ಗೆಳೆಯ – ರತನ್ ಟಾಟಾ ನಿಧನಕ್ಕೆ ಸ್ನೇಹಿತೆ ಸಿಮಿ ಭಾವುಕ ಪೋಸ್ಟ್​


    ರತನ್‌ ಟಾಟಾ ಅವರು ಜೆಟ್‌, ಹೆಲಿಕಾಪ್ಟರ್‌ ಹಾರಿಸಲು ಪರವಾನಗಿ ಹೊಂದಿದ್ದರು. ಸಹ ಪೈಲೆಟ್‌ ಮಾರ್ಗದರ್ಶನದಲ್ಲಿ ಟಾಟಾ ಅವರು ಸುಮಾರು 40 ನಿಮಿಷ ವಿಮಾನ ಹಾರಿಸಿದರು. ಹಾರಾಟದ ಅವಧಿಯಲ್ಲಿ ಎಫ್‌16 ವಿಮಾನ ಪ್ರತಿ ಗಂಟೆಗೆ 2000 ಕಿ.ಮೀ ವೇಗದಲ್ಲಿ ಸಂಚರಿಸಿತ್ತು. ಇದನ್ನೂ ಓದಿ: ಭಾರತೀಯನಾಗಿರುವುದೇ ಅದೃಷ್ಟ, ಭಾರತ ರತ್ನ ಅಭಿಯಾನವನ್ನು ನಿಲ್ಲಿಸಿ ಎಂದಿದ್ದ ರತನ್‌ ಟಾಟಾ

    ಲ್ಯಾಂಡಿಂಗ್‌ ನಂತರ ಟಾಟಾ ಅವರನ್ನು ಲಾಕ್‌ಹೀಡ್ ಮಾರ್ಟಿನ್ ಅಧಿಕಾರಿಗಳು ರತನ್‌ ಟಾಟಾ ಅವರನ್ನು ಸ್ವಾಗತಿಸಿ F-16 ನ ಚಿಕ್ಕ ಪ್ರತಿಕೃತಿಯನ್ನು ನೀಡಿದರು. ಈ ಸಮಯದಲ್ಲಿ ಅಮೆರಿಕದ ರಕ್ಷಣಾ ದೈತ್ಯ ಲಾಕ್‌ಹಿಡ್‌ ಮಾರ್ಟಿನ್‌ ಭಾರತದೊಂದಿಗೆ ಶತಕೋಟಿ ಡಾಲರ್‌ಗಳ ಪ್ರಮುಖ ರಕ್ಷಣಾ ಒಪ್ಪಂದಕ್ಕಾಗಿ ಸ್ಪರ್ಧಿಸುತ್ತಿತ್ತು.

    ಈ ಪ್ರಯಾಣದ ನಂತರ ಇದೊಂದು ಅದ್ಭುತ ಅನುಭವ ಎಂದು ರತನ್‌ ಟಾಟಾ ಬಣ್ಣಿಸಿದ್ದರು. ಫೈಟರ್‌ ಜೆಟ್‌ ಹಾರಿಸಿದ ಸುಮಾರು 10 ವರ್ಷದ ನಂತರ ಲಾಕ್‌ಹಿಟ್‌ ಮಾರ್ಟಿನ್‌ ಕಂಪನಿಯ ಜೊತೆ ಭಾರತದಲ್ಲಿ F-16 ಬ್ಲಾಕ್ 70 ಅನ್ನು ಉತ್ಪಾದಿಸಲು ಮಹತ್ವದ ಒಪ್ಪಂದಕ್ಕೆ ರತನ್‌ ಟಾಟಾ ಸಹಿ ಹಾಕಿದರು.

     

  • ನಮ್ಮನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ: ಅಮೆರಿಕಗೆ ನೇರವಾಗಿ ಜೈಶಂಕರ್ ತಿರುಗೇಟು

    ನವದೆಹಲಿ: ನೆರೆಯ ಪಾಕಿಸ್ತಾನಕ್ಕೆ (Pakistan) ಅಮೆರಿಕ (America) ನೀಡುತ್ತಿರುವ ಎಫ್-16 (F-16) ಪ್ಯಾಕೇಜ್ ಬಗ್ಗೆ ಭಾರತ ಪ್ರಶ್ನೆ ಎತ್ತಿದೆ. ಅಮೆರಿಕ ನೀಡುತ್ತಿರುವ ಪ್ಯಾಕೇಜ್‌ಗೆ ಪಾಕಿಸ್ತಾನ ಯೋಗ್ಯವಾಗಿದೆಯೇ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (Jaishankar) ಪ್ರಶ್ನಿಸಿದ್ದಾರೆ.

    ಭಾನುವಾರ ವಾಷಿಂಗ್ಟನ್‌ನಲ್ಲಿ ಭಾರತ-ಅಮೆರಿಕ ಸಮುದಾಯ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಜೈಶಂಕರ್, ಇದು ಪಾಕಿಸ್ತಾನಕ್ಕೆ ಉತ್ತಮ ಸೇವೆ ಸಲ್ಲಿಸುವುದರಿಂದ ಅಥವಾ ಅಮೆರಿಕದ ಹಿತಾಸಕ್ತಿಗಳಿಗೆ ಗೌರವ ನೀಡುವುದರಿಂದ ಸಂಬಂಧಗಳು ಗಟ್ಟಿಯಾಗುವುದಿಲ್ಲ ಎಂದು ಟಾಂಗ್ ನೀಡಿದರು.

    ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಸ್ಥಳವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅಮೆರಿಕದಿಂದ ಎಫ್-16 ನಂತಹ ಶಕ್ತಿಶಾಲಿ ವಿಮಾನಗಳನ್ನು (Fighter Jet) ಪಡೆಯುತ್ತಿರುವ ಪಾಕಿಸ್ತಾನದ ಹಿಂದಿನ ಉದ್ದೇಶವನ್ನೂ ನಾವು ಊಹಿಸಬಲ್ಲೆವು. ನೀವು ಈ ವಿಷಯಗಳ ಬಗ್ಗೆ ಏನೇ ಸ್ಪಷ್ಟನೆ ನೀಡಿದರೂ ಯಾರನ್ನೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಜೈಶಂಕರ್ ಖಡಕ್ ಆಗಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಶೀಘ್ರವೇ 5G ಸೇವೆ ಆರಂಭ – ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಅಮೆರಿಕ 2018ರ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನದ ವಾಯುಪಡೆಗೆ ಎಫ್-16 ಯುದ್ಧ ವಿಮಾನದ ಪ್ಯಾಕೇಜ್ ಅನ್ನು ನೀಡಲು ಒಪ್ಪಿಗೆ ನೀಡಿದೆ. ಆದರೆ ಪಾಕಿಸ್ತಾನಕ್ಕೆ ಮಿಲಿಟರಿ ನೆರವನ್ನು ನೀಡಲು ಮುಂದಾಗಿರುವ ಅಮೆರಿಕವನ್ನು ಭಾರತ ಪ್ರಶ್ನಿಸಿತ್ತು. ಇದಕ್ಕೆ ಅಮೆರಿಕ ನಾವು ಪಾಕಿಸ್ತಾನಕ್ಕೆ ನೆರವು ನೀಡುತ್ತಿಲ್ಲ, ಪಾಕಿಸ್ತಾನ ನಮ್ಮಿಂದ ವಿಮಾನದ ಬಿಡಿ ಭಾಗಗಳನ್ನು ಖರೀದಿಸುತ್ತಿದೆ ಎಂದು ತಿಳಿಸಿತ್ತು.

    ಭಾರತದ ವಿರೋಧ ಯಾಕೆ?
    ಭಾರತ 2019 ಫೆ.26 ರಂದು ಪಾಕಿಸ್ತಾನದ ಬಾಲಕೋಟ್ ಮೇಲೆ ಏರ್‌ಸ್ಟ್ರೈಕ್ ಮಾಡಿತ್ತು. ಏರ್‌ಸ್ಟ್ರೈಕ್ ಮಾಡಿದ ಮರುದಿನ ಫೆ.27 ರಂದು ಪಾಕಿಸ್ತಾನ 10 ಎಫ್ 16 ವಿಮಾನಗಳು ಭಾರತದ ಮೇಲೆ ದಾಳಿ ಮಾಡಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ತಮ್ಮ ಮಿಗ್ 21 ವಿಮಾನದ ಮೂಲಕ ಪ್ರತಿರೋಧ ಒಡ್ಡಿದ್ದರು. ಈ ವೇಳೆ ನಡೆದ ಡಾಗ್‌ಫೈಟ್(ಆಕಾಶದಲ್ಲಿ ಯುದ್ಧ ವಿಮಾನಗಳ ಮಧ್ಯೆ ನಡೆಯುವ ಕಾದಾಟ) 1 ಎಫ್ 16 ವಿಮಾನವನ್ನು ಕ್ಷಿಪಣಿ ಪ್ರಯೋಗಿಸಿ ಉರುಳಿಸಿದ್ದರು. ಇದನ್ನೂ ಓದಿ: ಪಾಕ್ ಸೇನಾ ಹೆಲಿಕಾಪ್ಟರ್ ಪತನ – 6 ಸೈನಿಕರು ದುರ್ಮರಣ

    ಎಫ್ 16 ವಿಮಾನವನ್ನು ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಮಾತ್ರ ಬಳಸಬೇಕು ಎಂದು ಅಮೆರಿಕ ಷರತ್ತು ವಿಧಿಸಿತ್ತು. ಹೀಗಿದ್ದರೂ ಭಾರತದ ವಿರುದ್ಧ ಈ ವಿಮಾನಗಳ ಮೂಲಕ ದಾಳಿ ನಡೆಸುವ ಮೂಲಕ ಅಮೆರಿಕದ ಷರತ್ತನ್ನು ಪಾಕಿಸ್ತಾನ ಮುರಿದಿತ್ತು. ಈ ಕಾರಣಕ್ಕೆ ಭಾರತ ಈಗ ಅಮೆರಿಕ ಎಫ್ 16 ವಿಚಾರದಲ್ಲಿ ತೆಗೆದುಕೊಂಡಿರುವ ನಿರ್ಧಾರವನ್ನು ಬಲವಾಗಿ ವಿರೋಧಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಪಾಕಿಸ್ತಾನದ ಮೇಲೆ ಪರಾಕ್ರಮ ಮೆರೆದಿದ್ದ ಭಾರತದ ಮಿಗ್-21 ಫೈಟರ್ ಜೆಟ್ ಸೇನೆಯಿಂದ ನಿವೃತ್ತಿ

    ಪಾಕಿಸ್ತಾನದ ಮೇಲೆ ಪರಾಕ್ರಮ ಮೆರೆದಿದ್ದ ಭಾರತದ ಮಿಗ್-21 ಫೈಟರ್ ಜೆಟ್ ಸೇನೆಯಿಂದ ನಿವೃತ್ತಿ

    ನವದೆಹಲಿ: ಪಾಕಿಸ್ತಾನ (Pakistan) ಶತ್ರು ಪಡೆಗಳ ಮೇಲೆ ಶೌರ್ಯ ಮೆರೆದಿದ್ದ ಮಾಜಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ (Abhinandan Varthaman) (ಪ್ರಸ್ತುತ ಗ್ರೂಪ್‌ ಕ್ಯಾಪ್ಟನ್‌) ಅವರ ಮಿಗ್-21 ಬೈಸನ್ ಫೈಟರ್ ಜೆಟ್ (MiG-21 Fighter Jets) ಇದೇ ಸೆಪ್ಟೆಂಬರ್ 30 ರಂದು ಭಾರತೀಯ ವಾಯುಪಡೆಯಿಂದ (Indian Air Force) ನಿವೃತ್ತಿಯಾಗಲಿದೆ.

    ಮಿಗ್-21 ಬೈಸನ್ 1960 ದಶಕದಲ್ಲಿ ಭಾರತೀಯ ವಾಯುಪಡೆಗೆ (IAF) ಸೇರ್ಪಡೆಗೊಳಿಸಲಾಯಿತು. ಆದರೆ 1980ರ ದಶಕಕದಿಂದ 400ಕ್ಕೂ ಹೆಚ್ಚು ಮಿಗ್-21 ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿವೆ. 200ಕ್ಕೂ ಹೆಚ್ಚು ಪೈಲಟ್‌ಗಳು (Pilots) ಮತ್ತು 60 ನಾಗರಿಕರನ್ನು ಬಲಿ ತೆಗೆದುಕೊಂಡಿವೆ. ಪ್ರಸ್ತುತ 32 ಸ್ಕ್ವಾಡ್ರನ್‌ಗಳಿಗೆ ಇಳಿಕೆಯಾಗಿದೆ. ಭಾರತೀಯ ವಾಯುಪಡೆಯು ಸದ್ಯ 550 ಫೈಟರ್ ಜೆಟ್‌ಗಳ (Fighter Jets) ಸಾಮರ್ಥ್ಯಕ್ಕೆ ಇಳಿದಿದ್ದು, ಇನ್ನೂ 200 ಯುದ್ಧ ವಿಮಾನಗಳ ಕೊರತೆ ಎದುರಿಸುತ್ತಿದೆ. ಇದನ್ನೂ ಓದಿ: ಏರ್‌ಸ್ಟ್ರೈಕ್‌ನಲ್ಲಿ 300 ಉಗ್ರರು ಹತ – ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ

    ಸದ್ಯ ಅಭಿನಂದನ್ ವರ್ಧಮಾನ್ ಅವರ ಮಿಗ್-21 ಫೈಟರ್ ಜೆಟ್ (ಶ್ರೀನಗರ ಮೂಲದ ನಂ.51 ಸ್ಕ್ವಾಡ್ರನ್)ಅನ್ನು ಸೆಪ್ಟೆಂಬರ್ 30 ರಂದು ಸೇನೆಯಿಂದ ನಿವೃತ್ತಿಗೊಳಿಸಲಿದ್ದು, 2025ರ ವೇಳೆಗೆ ಹಂತಹಂತವಾಗಿ ಬದಲಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ 1980 ದಶಕದಲ್ಲಿ ಸೇನೆಗೆ ಸೇರ್ಪಡೆಗೊಂಡ ಜಾಗ್ವಾರ್, ಮಿಗ್-29 ಹಾಗೂ ಮಿರಾಜ್ ನಂತಹ ಯುದ್ಧ ವಿಮಾನಗಳೂ ಹಳೆಯದ್ದಾಗುತ್ತಿದ್ದು, ಅವುಗಳು ಸಹ ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 

    ಪಾಕ್ ವಿರುದ್ಧ ಪರಾಕ್ರಮ ಮೆರೆದಿದ್ದ ಅಭಿನಂದನ್:
    2019ರ ಫೆಬ್ರವರಿ 14ರಂದು 40 ಸಿಆರ್‌ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡಿದ್ದ ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಕಾರವಾಗಿ ಏರ್‌ಸ್ಟ್ರೈಕ್ ನಡೆಸಿ ಭಾರತ ಪ್ರತಿಕಾರ ತೀರಿಸಿಕೊಂಡಿತ್ತು. ಪಾಕಿಸ್ತಾನದ ಖೈಬರ್ ಪಕ್ತುಂಕ್ವಾ ಪ್ರದೇಶದ ಬಾಲಾಕೋಟ್‌ನಲ್ಲಿ ಜೈಷೆ ಮೊಹಮದ್ ಸಂಘಟನೆಗಳ ಉಗ್ರರ ಶಿಬಿರಗಳ ಮೇಲೆ 2019 ರ ಫೆಬ್ರವರಿ 26 ರಂದು ಭಾರತ ವೈಮಾನಿಕ ದಾಳಿ ನಡೆಸಿತ್ತು.

    ಫೆ.26ರ ನಸುಕಿನ ಜಾವ 3.30 ರಿಂದ 3.55ರ ನಡುವೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಜೈಷ್ ಉಗ್ರರ ಶಿಬಿರಗಳ ಮೇಲೆ 12 ಮಿರಾಜ್-2000 ಯುದ್ಧ ವಿಮಾನಗಳು ದಾಳಿ ನಡೆಸಿದ್ದವು. ಗಡಿ ನಿಯಂತ್ರಣ ರೇಖೆ ದಾಟಿ ಸುಮಾರು 85 ಕಿಮೀ ಒಳನುಗ್ಗಿ ಭಾರತೀಯ ವಾಯುಪಡೆ ಈ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸುಮಾರು 300 ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಭಾರತ ತನ್ನ ನೆಲದಲ್ಲಿ ದೊಡ್ಡ ದಾಳಿ ನಡೆಸಿದೆ ಎಂದು ಗೊತ್ತಾದ ತಕ್ಷಣ ಪಾಕ್ ಕೂಡ ಪ್ರತಿ ದಾಳಿ ಮಾಡಿತ್ತು. ಪಾಕ್‌ನ ಪ್ರತಿದಾಳಿಯ ವೇಳೆ ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ವರ್ಧಮಾನ್ ಅವರು ತಮ್ಮ ಮಿಗ್-21 ರಿಂದ ಪಾಕಿಸ್ತಾನದ ಎಫ್-16 ಜೆಟ್ ವಿಮಾನವನ್ನು ಹೊಡೆದುರುಳಿಸಿದ್ದರು. ಅದಾದ ಬಳಿಕ ಪಾಕಿಸ್ತಾನ ಸೇನೆ ಅಭಿನಂದನ್ ಅವರನ್ನು ಬಂಧಿಸಿ ಮಾರ್ಚ್ 1ರ ಮಧ್ಯರಾತ್ರಿ ಬಿಡುಗಡೆ ಮಾಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಇದು ಮಾರಾಟ, ಸಹಾಯ ಅಲ್ಲ – ಪಾಕಿಸ್ತಾನದ ವ್ಯವಹಾರದ ಬಗ್ಗೆ ಸ್ಪಷ್ಟನೆ ನೀಡಿದ ಅಮೆರಿಕ

    ಇದು ಮಾರಾಟ, ಸಹಾಯ ಅಲ್ಲ – ಪಾಕಿಸ್ತಾನದ ವ್ಯವಹಾರದ ಬಗ್ಗೆ ಸ್ಪಷ್ಟನೆ ನೀಡಿದ ಅಮೆರಿಕ

    ವಾಷಿಂಗ್ಟನ್: ಪಾಕಿಸ್ತಾನಕ್ಕೆ ಭದ್ರತಾ ನೆರವನ್ನು ಸ್ಥಗಿತಗೊಳಿಸಿದ್ದ ಡೊನಾಲ್ಡ್ ಟ್ರಂಪ್‌ನ ಆದೇಶವನ್ನು ರದ್ದುಗೊಳಿಸಿ ಇದೀಗ ಜೋ ಬೈಡನ್ ನೇತೃತ್ವದ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ಫೈಟರ್ ಜೆಟ್‌ನ ಬಿಡಿ ಭಾಗಗಳನ್ನು ನೀಡಲು ಮುಂದಾಗಿದೆ. ಆದರೆ ಇದು ಮಾರಾಟವಾಗಿದೆ, ಸಹಾಯ ಅಲ್ಲ ಎಂದು ಅಮೆರಿಕ ಸ್ಪಷ್ಟನೆ ನೀಡಿದೆ.

    ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ಎಫ್-16 ಫೈಟರ್ ಜೆಟ್ ಪಡೆಯ ಸುಸ್ತಿರ ಕಾರ್ಯಕ್ರಮದ ಅಡಿಯಲ್ಲಿ 450 ಮಿಲಿಯನ್ ಡಾಲರ್(3,500 ಕೋಟಿ ರೂ.) ಮೊತ್ತದ ಸೇನಾ ನೆರವು ನೀಡುತ್ತಿರುವುದಾಗಿ ತಿಳಿಸಿತ್ತು. ಇದು ಈಗಾಗಲೇ ಪಾಕಿಸ್ತಾನದಲ್ಲಿ ಅಸ್ತಿತ್ವದಲ್ಲಿರುವ ಎಫ್-16 ಫೈಟರ್ ಜೆಟ್‌ಗಳ ಬಿಡಿ ಭಾಗಗಳ ಮಾರಾಟವಾಗಿದೆ. ಸರ್ಕಾರ ಯಾವುದೇ ಸಹಾಯ ನೀಡಿಲ್ಲ ಎಂದು ಅಮೆರಿಕದ ಉನ್ನತ ರಾಜತಾಂತ್ರಿಕರು ತಿಳಿಸಿದ್ದಾರೆ. ಇದ್ನನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಧರಿಸಿದ್ದ 41 ಸಾವಿರ ರೂ.ನ ಟೀಶರ್ಟ್ ಕುರಿತು ಬಿಜೆಪಿ ವ್ಯಂಗ್ಯ

    ಈ ಬಗ್ಗೆ ಮಾಹಿತಿ ನೀಡಿದ ಅಮೆರಿಕದ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು, ನಾವು ಇತರ ದೇಶಗಳಿಗೆ ಒದಗಿಸಿದ ಸಾಧನಗಳಿಗೆ ಯಾವಾಗಲೂ ಬೆಂಬಲ ನೀಡುವುದು ಅಮೆರಿಕ ಸರ್ಕಾರದ ವಿಶ್ವವ್ಯಾಪಿ ನೀತಿಯಾಗಿದೆ. ಪಾಕಿಸ್ತಾನದ ಬಗ್ಗೆ ಹೇಳಬೇಕೆಂದರೆ, ಇದು ಕೇವಲ ಬಿಡಿ ಭಾಗಗಳು ಹಾಗೂ ನಿರ್ವಹಣೆಯ ಪೂರೈಕೆಯಾಗಿದೆ. ಇದು ಮಾರಾಟವಾಗಿದ್ದು, ಯಾವುದೇ ಸಹಾಯವಲ್ಲ. ಈ ವಿಮಾನಗಳು ವಾಯು ಸುರಕ್ಷತೆಯ ಮಾನದಂಡಗಳನ್ನು ಪೂರೈಸಲು ರೆಕ್ಕೆ ಹಾಗೂ ಸಲಕರಣೆಗಳ ಸೇವೆಯನ್ನು ಒದಗಿಸಲು ಪ್ರಸ್ತಾಪಿಸಿದ್ದೇವೆ ಎಂದರು. ಇದ್ನನೂ ಓದಿ: ಬ್ರಿಟನ್ ರಾಣಿ ನಿಧನ – ಸೆ.11ಕ್ಕೆ ಭಾರತದಾದ್ಯಂತ ಶೋಕಾಚರಣೆ

    ಪಾಕಿಸ್ತಾನದೊಂದಿಗಿನ ನಮ್ಮ ವ್ಯವಹಾರದ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ನಾನು ಇದನ್ನು ಸ್ಪಷ್ಟವಾಗಿ ಹೇಳುತ್ತೇನೆ. ಇದು ಸುರಕ್ಷತೆ ಮತ್ತು ನಿರ್ವಹಣೆಯ ಕಾರ್ಯಕ್ರಮವಾಗಿದೆ. ಯಾವುದೇ ಹೊಸ ವಿಮಾನವನ್ನು, ಹೊಸ ಸಾಮರ್ಥ್ಯ ಮತ್ತು ಹೊಸ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ನಾವು ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎಫ್-16 ಹೊಡೆದು ಹಾಕಿದ್ದು ನಿಜ – ವಾಯುಸೇನೆಯಿಂದ ಸಾಕ್ಷ್ಯ ಬಿಡುಗಡೆ

    ಎಫ್-16 ಹೊಡೆದು ಹಾಕಿದ್ದು ನಿಜ – ವಾಯುಸೇನೆಯಿಂದ ಸಾಕ್ಷ್ಯ ಬಿಡುಗಡೆ

    ನವದೆಹಲಿ: ವಿದೇಶಿ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯನ್ನು ನಂಬಿ ಭಾರತ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದ ಮಂದಿಗೆ ಭಾರತೀಯ ವಾಯುಸೇನೆ ಸಾಕ್ಷ್ಯವನ್ನು ಬಿಡುಗಡೆ ಮಾಡುವ ಮೂಲಕ ಕಪಾಳ ಮೋಕ್ಷ ಮಾಡಿದೆ.

    ಏರ್ ವೈಸ್ ಮಾರ್ಷಲ್ ಆರ್‍ಜಿಕೆ ಕಪೂರ್ ಅವರು ಸುದ್ದಿಗೋಷ್ಠಿ ನಡೆಸಿ, ಫಾಲ್ಕಾನ್ ಏರ್‌ಬಾರ್ನ್ ವಾರ್ನಿಂಗ್ ಆಂಡ್ ಕಂಟ್ರೋಲ್ ಸಿಸ್ಟಂ(ಅವಾಕ್ಸ್) ಸೆರೆ ಹಿಡಿದ ರಾಡಾರ್ ಚಿತ್ರಣವನ್ನು ಬಿಡುಗಡೆ ಮಾಡಿದ್ದಾರೆ.

    ಈ ವೇಳೆ ಪಾಕಿಸ್ತಾನ ಭಾರತದ ಮೇಲೆ ವಾಯು ದಾಳಿ ನಡೆಸಲು ಜೆ – 17 ಮತ್ತು ಎಫ್-16 ವಿಮಾನವನ್ನು ಬಳಸಿದೆ. ಈ ವೇಳೆ ಅಭಿನಂದನ್ ಮಿಗ್ 21 ಮೂಲಕ ಡಾಗ್ ಫೈಟ್ ಮಾಡಿ ಎಫ್ 16 ವಿಮಾನವನ್ನು ಹೊಡೆದು ಉರುಳಿಸಿದ್ದಾರೆ. ಈ ಡಾಗ್ ಫೈಟ್ ನಲ್ಲಿ ಮಿಗ್-21 ಮತ್ತು ಎಫ್-16 ವಿಮಾನ ಪತನಗೊಂಡಿರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸ್ಪಷ್ಟಪಡಿಸಿದರು.

    ಸುದ್ದಿಗೋಷ್ಠಿಯಲ್ಲಿ ನಮ್ಮ ಜೊತೆ ಮತ್ತಷ್ಟು ಗೌಪ್ಯ ಮಾಹಿತಿಗಳು ಇದ್ದು, ಈ ಮಾಹಿತಿಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಏನಿದು ವಿವಾದ?
    ಫೆ.27 ರಂದು ಸಂಜೆ ಭಾರತದ ವಾಯುಸೇನೆಯ ಅಧಿಕಾರಿಗಳು ಪಾಕಿಸ್ತಾನದ ಎಫ್ 16 ವಿಮಾನವನ್ನು ಹೊಡೆದು ಹಾಕಿದೆ. ಈ ಸಂಬಂಧ ಎಎಮ್-ಆರ್ ಎಎಎಮ್ ಕ್ಷಿಪಣಿ ಭಾಗವನ್ನು ಸಾಕ್ಷ್ಯವಾಗಿ ತಿಳಿಸಿದ್ದರು.

    ಭಾರತ ಸಾಕ್ಷ್ಯವನ್ನು ನೀಡಿದ್ದರೂ ಪಾಕಿಸ್ತಾನ ಯಾವುದೇ ಎಫ್ 16 ವಿಮಾನವನ್ನು ಹೊಡೆದು ಹಾಕಿಲ್ಲ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಅಮೆರಿಕದ ಫಾರಿನ್ ಪಾಲಿಸಿ ಅಮೆರಿಕ ನೀಡಿದ ಎಲ್ಲ ಎಫ್ 16 ವಿಮಾನಗಳು ಈಗಲೂ ಪಾಕಿಸ್ತಾನದಲ್ಲಿದೆ. ಭಾರತ ಯಾವುದೇ ಎಫ್ 16 ವಿಮಾನವನ್ನು ಹೊಡೆದು ಹಾಕಿಲ್ಲ ಎಂದು ಅಮೆರಿಕ ರಕ್ಷಣಾ ಅಧಿಕಾರಿಗಳ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿತ್ತು.

    ಈ ವರದಿ ಪ್ರಕಟವಾದ ಬೆನ್ನಲ್ಲೇ ಕೆಲ ವ್ಯಕ್ತಿಗಳು ಭಾರತ ಸರ್ಕಾರ ಸುಳ್ಳು ಹೇಳುತ್ತಿದೆ. ಪ್ರಚಾರಕ್ಕಾಗಿ ಮಿಗ್ 21 ವಿಮಾನ ಎಫ್ 16 ವಿಮಾನವನ್ನು ಹೊಡೆದು ಹಾಕಿದೆ ಎಂದು ಹೇಳುತ್ತಿದೆ ಎಂದು ಆರೋಪಿಸಿದ್ದರು.

    ಫಾರಿನ್ ಪಾಲಿಸಿ ವರದಿಗೆ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ ಸೇನೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಟ್ವೀಟ್ ಮಾಡಿ, ಸತ್ಯಕ್ಕೆ ಯಾವಾಗಲೂ ಜಯವಿದೆ. ಭಾರತಕ್ಕೆ ಇದೀಗ ಸತ್ಯ ಹೇಳುವ ಸಮಯ ಬಂದಿದೆ. ಪಾಕಿಸ್ತಾನ ಹೊಡೆದುರುಳಿಸಿದ ಯುದ್ಧ ವಿಮಾನ ಸೇರಿದಂತೆ ತಮ್ಮ ಕಡೆಯಲ್ಲಿ ಆದ ಸಾವು ನೋವು, ನಷ್ಟಗಳ ಬಗ್ಗೆ ಭಾರತ ನಿಜ ಹೇಳಬೇಕಿದೆ. ಆಕ್ರಮಿತ ಕಾಶ್ಮೀರ ಭಾಗದಲ್ಲಿ ನಡೆಯುವ ಹಿಂಸಾಚಾರದ ಬಗ್ಗೆ ಭಾರತ ಆತ್ಮಾವಲೋಕನ ಮಾಡಿಕೊಳ್ಳಬೇಕು ಆ ಭಾಗದಲ್ಲಿ ಶಾಂತಿ, ಪ್ರಗತಿ ನೆಲೆಸಬೇಕಿದೆ ಎಂದು ಹೇಳಿದ್ದರು.

  • ಪಾಕ್ ಎಫ್ 16 ವಿರುದ್ಧ ಹೋರಾಡಲು ಬೇಕೇಬೇಕು – ರಕ್ಷಣಾ ಸಚಿವಾಲಯದಿಂದ ರಫೇಲ್ ರಹಸ್ಯ ದಾಖಲೆ ಕಳ್ಳತನ: ಕೇಂದ್ರ

    ಪಾಕ್ ಎಫ್ 16 ವಿರುದ್ಧ ಹೋರಾಡಲು ಬೇಕೇಬೇಕು – ರಕ್ಷಣಾ ಸಚಿವಾಲಯದಿಂದ ರಫೇಲ್ ರಹಸ್ಯ ದಾಖಲೆ ಕಳ್ಳತನ: ಕೇಂದ್ರ

    ನವದೆಹಲಿ: ಪಾಕಿಸ್ತಾನದ ಎಫ್ 16 ವಿಮಾನಕ್ಕೆ ತಡೆ ಒಡ್ಡಬೇಕಾದರೆ ಭಾರತಕ್ಕೆ ರಫೇಲ್ ಯುದ್ಧ ವಿಮನ ಅಗತ್ಯವಿದೆ ಎಂದು ಹೇಳಿ, ರಫೇಲ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳ್ಳತನವಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.

    ರಫೇಲ್ ತೀರ್ಪಿನ ಮರುಪರಿಶೀಲನಾ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾ. ರಂಜನ್ ಗೊಗೋಯ್, ನ್ಯಾ. ಸಂಜೀವ್ ಕಿಶನ್ ಕೌಲ್, ನ್ಯಾ. ಕೆಎಂ ಜೋಸೆಫ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು. ಈ ವೇಳೆ ಅರ್ಜಿದಾರರಾದ ಪ್ರಶಾಂತ್ ಭೂಷಣ್ ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿಸಿದರು. ಈ ಸಂದರ್ಭದಲ್ಲಿ ಕೋರ್ಟ್ ಈ ಅರ್ಜಿಗೆ ಸಂಬಂಧಿಸಿದಂತೆ ನಾವು ಯಾವುದೇ ಹೊಸ ದಾಖಲೆಗಳನ್ನು ಪರಿಗಣಿಸುವುದಿಲ್ಲ ಎಂದು ಹೇಳಿತು.

    ನ್ಯಾಯಾಲಯದಿಂದ ಈ ಅಭಿಪ್ರಾಯ ಬಂದ ಕೂಡಲೇ, ಈ ದಾಖಲೆಗಳು ಸೂಕ್ಷವಾಗಿದ್ದು, ರಕ್ಷಣಾ ಸಚಿವಾಲಯದ ಮೂಲಗಳಿಂದ ನಾನು ಪಡೆದಿದ್ದೇನೆ ಪ್ರಶಾಂತ್ ಭೂಷಣ್ ತಿಳಿಸಿದರು. ಈ ಸಂದರ್ಭದಲ್ಲಿ ಅಟಾರ್ನಿ ಜನರಲ್ ಕೆಸಿ ವೇಣುಗೋಪಾಲ್, ರಕ್ಷಣಾ ಸಚಿವಾಲಯದಿಂದ ಕಳ್ಳತನವಾಗಿರುವ ಮಾಹಿತಿಯನ್ನು ಆಧಾರವಾಗಿ ಇಟ್ಟುಕೊಂಡು ಉಲ್ಲೇಖಿಸಿ ವರದಿಯನ್ನು  ಪ್ರಶಾಂತ್ ಭೂಷಣ್ ಹೇಳುತ್ತಿದ್ದಾರೆ. ರಕ್ಷಣಾ ಇಲಾಖೆಯ ಮಾಜಿ ಅಥವಾ ಹಾಲಿ ಉದ್ಯೋಗಿಗಳು ದಾಖಲೆಗಳನ್ನು ಕದ್ದಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

    ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯ ನ್ಯಾ. ರಂಜನ್ ಗೊಗೋಯ್ ಈ ಸಂಬಂಧ ಸರ್ಕಾರ ಏನು ಕ್ರಮವನ್ನು ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ತನಿಖೆ ನಡೆಯುತ್ತಿದೆ ಎಂದು ಎಜೆ ಉತ್ತರಿಸಿದರು.

    ರಫೇಲ್ ಸುದ್ದಿ ಪ್ರಕಟಿಸಿ ವಿಚಾರಣೆ ವೇಳೆ ಪ್ರಭಾವ ಮೂಡಿಸುವ ಯತ್ನ ನಡೆಯುತ್ತಿದೆ. ಈ ಕಾರಣಕ್ಕಾಗಿ ಮಂಗಳವಾರ ಒಂದು ಸುದ್ದಿ ಪ್ರಕಟವಾಗಿದ್ದರೆ ಇಂದು ಇನ್ನೊಂದು ಸುದ್ದಿ ಪ್ರಕಟವಾಗಿದೆ. ಈ ಸುದ್ದಿಯನ್ನು ಆಧಾರವಾಗಿಟ್ಟುಕೊಂಡು ಅರ್ಜಿದಾರರು ವಾದಿಸುತ್ತಿದ್ದಾರೆ. ಅರ್ಜಿದಾರರು ಉಲ್ಲೇಖಿಸಿದ ಮಾಹಿತಿ ಅಧಿಕೃತ ರಹಸ್ಯ ಕಾಯ್ದೆಯ ಅಡಿಯಲ್ಲಿ ಬರುತ್ತದೆ ಮತ್ತು ನ್ಯಾಯಾಂಗದ ಉಲ್ಲಂಘನೆಯಾಗಿದೆ. ಈ ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಾಗಬಾರದು. ಹೀಗಾಗಿ ಇದು ಅಧಿಕೃತ ರಹಸ್ಯ ಕಾಯ್ದೆಯ ಉಲ್ಲಂಘನೆ. ಈ ದಾಖಲೆಗಳನ್ನು ಯಾವುದೇ ಕಾರಣಕ್ಕೆ ಅರ್ಜಿಯ ಜೊತೆ ಪರಿಗಣಿಸಬಾರದು ಎಂದು ವಾದಿಸಿದರು.

    ರಫೇಲ್ ಖರೀದಿ ಪ್ರಕ್ರಿಯೆ ನ್ಯಾಯಾಂಗದ ಪರಾಮರ್ಶೆಯ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ತೀರ್ಪು ಮರುಪರಿಶೀಲನೆ ನಡೆಸಬೇಕೆಂದು ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನು ವಜಾಗೊಳಿಸಬೇಕೆಂದು ಎಜಿ ಮನವಿ ಮಾಡಿದರು.

    ಏರ್ ಸರ್ಜಿಕಲ್ ಸ್ಟ್ರೈಕ್ ನಡೆದ ಬಳಿಕ ಪಾಕ್ ಸೇನೆಯ ದಾಳಿಯನ್ನು ಪ್ರಸ್ತಾಪಿಸಿದ ಎಜೆ, ಒಂದು ವೇಳೆ ಎಫ್ 16 ವಿಮಾನಗಳಿಗೆ ತಡೆ ಒಡ್ಡಬೇಕಾದರೆ ರಫೇಲ್ ದೇಶಕ್ಕೆ ಅಗತ್ಯವಿದೆ. ಈಗಾಗಲೇ ತರಬೇತಿಗಾಗಿ ನಮ್ಮ ಪೈಲಟ್ ಗಳು ಪ್ಯಾರಿಸ್ ಗೆ ತೆರಳಿದ್ದಾರೆ. ಇದೇ ಸೆಪ್ಟೆಂಬರ್ ನಲ್ಲಿ ಹಾರಲು ಸಿದ್ಧವಾಗಿರುವ ಸ್ಥಿತಿಯಲ್ಲಿರುವ ರಫೇಲ್ ವಿಮಾನ ವಾಯುಸೇನೆಗೆ ಸೇರ್ಪಡೆಯಾಗಲಿದೆ ಎಂದು ಹೇಳಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

    ವಿಚಾರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ವಿಚಾರವನ್ನು ಉಲ್ಲಂಘಿಸಿ ಸರ್ಕಾರಿ ದಾಖಲೆಯನ್ನು ಪ್ರಕಟಿಸಿದ್ದಕ್ಕಾಗಿ ಎರಡು ಮಾಧ್ಯಮಗಳ ವಿರುದ್ಧ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಎಜೆ ನ್ಯಾಯಾಲಯಕ್ಕೆ ತಿಳಿಸಿದರು.

    ದೀರ್ಘವಾಗಿ ವಾದ, ಪ್ರತಿವಾದವನ್ನು ಆಲಿಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಮಾರ್ಚ್ 14ರ ಮಧ್ಯಾಹ್ನ 3 ಗಂಟೆಗೆ ಮುಂದೂಡಿತು.

    ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಕೇಂದ್ರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದಾರೆ. ಇದರ ಜೊತೆಯಲ್ಲೇ ಕೇಂದ್ರ ಸರ್ಕಾರ ತೀರ್ಪಿನ ಉಲ್ಲೇಖ ಇರುವ ವಾಕ್ಯದಲ್ಲಿ ಕೆಲವು ತಿದ್ದುಪಡಿಗಳಾಗಬೇಕಿದೆ ಎಂದು ಅಫಿಡವಿಟ್ ಮನವಿ ಸಲ್ಲಿಸಿತ್ತು. ಮಹಾಲೇಖಪಾಲರ ವರದಿ(ಸಿಎಜಿ) ಹಾಗೂ ಪಿಎಸಿಗೆ ಸಂಬಂಧಿಸಿದ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿತ್ತು. ಈ ದಾಖಲೆಗಳ ವಿಷಯವನ್ನು ತಪ್ಪಾಗಿ ವ್ಯಾಖ್ಯಾನ ಮಾಡಲಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೋರ್ಟ್ ಮೊರೆ ಹೋಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತೀಯನೆಂದು ತಮ್ಮ ಎಫ್16 ಪೈಲಟ್‍ನನ್ನೇ ಕೊಂದ ಪಾಕಿಸ್ತಾನಿಗಳು

    ಭಾರತೀಯನೆಂದು ತಮ್ಮ ಎಫ್16 ಪೈಲಟ್‍ನನ್ನೇ ಕೊಂದ ಪಾಕಿಸ್ತಾನಿಗಳು

    ಇಸ್ಲಾಮಾಬಾದ್: ಪಾಕಿಸ್ತಾನ ಭಾರತವನ್ನು ಕೆನಕಿ ಪದೇ ಪದೇ ಹಿನ್ನಡೆ ಅನುಭವಿಸುತ್ತಿದೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ಮುಜುಗುರಕ್ಕೆ ಒಳಗಾಗುತ್ತಿದೆ. ಭಾರತೀಯ ಪೈಲಟ್ ಎಂದು ತಿಳಿದು ತನ್ನ ದೇಶದ ಪೈಲಟ್‍ನನ್ನೇ ಪಾಕ್ ಪ್ರಜೆಗಳು ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

    ಪಾಕಿಸ್ತಾನದ ಶಹಾಜ್-ಉದ್-ದಿನ್ ಹತ್ಯೆಯಾದ ಪಾಕ್ ವಾಯು ಪಡೆಯ ಪೈಲಟ್. ವಿಮಾನ ಪತನಗೊಂಡು ಕೆಳಗೆ ಬಿದ್ದಿದ್ದ ಶಹಾಜ್-ಉದ್-ದಿನ್ ಅನ್ನು ಭಾರತೀಯ ಪೈಲಟ್ ಎಂದು ತಿಳಿದು ಸ್ಥಳೀಯರೇ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

    ಆಗಿದ್ದೇನು?:
    ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ಮಿಗ್-21ನಿಂದ ಪಾಕಿಸ್ತಾನದ ಎಫ್ 16 ವಿಮಾನವೊಂದನ್ನು ಬುಧವಾರ ಬೆಳಗ್ಗೆ ಹೊಡೆದುರುಳಿಸಿದ್ದರು. ತಕ್ಷಣವೇ ಅಭಿನಂದನ್ ಹಾಗೂ ಪಾಕ್ ಪೈಲಟ್ ಶಹಾಜ್-ಉದ್-ದಿನ್ ಪ್ಯಾರಾಚೂಟ್ ಸಹಾಯದಿಂದ ಕೆಳಕ್ಕೆ ಹಾರಿ ಪ್ರಾಣ ಉಳಿಸಿಕೊಂಡಿದ್ದರು.

    ಪಾಕ್ ಪೈಲಟ್ ಶಹಾಜ್-ಉದ್-ದಿನ್ ಪಾಕಿಸ್ತಾನದ ನೌಶೇರ್ ಪ್ರದೇಶದಲ್ಲಿ ಬಿದ್ದಿದ್ದ. ಈ ವೇಳೆ ಶಹಾಜ್ ಬಳಿಗೆ ಬಂದ ಸ್ಥಳೀಯರು ಆತ ಭಾರತೀಯ ಪೈಲಟ್ ಎಂದು ಭಾವಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಪಾಕ್ ಪೈಲಟ್‍ನನ್ನು ವಿಚಾರಿಸಿದೇ ಎಲ್ಲರೂ ಸೇರಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

    ಪಾಕಿಸ್ತಾನ ಯೋಧರು ತಮ್ಮ ಪೈಲಟ್ ರಕ್ಷಣೆಗಾಗಿ ಓಡೋಡಿ ಸ್ಥಳಕ್ಕೆ ಬಂದಿದ್ದಾರೆ. ಆದರೆ ಸ್ಥಳೀಯರು ನಡೆಸಿ ಹಲ್ಲೆಯಿಂದ ಶಹಾಜ್-ಉದ್-ದಿನ್ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಹಾಜ್-ಉದ್-ದಿನ್ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

    ಪೈಲಟ್ ಅಭಿನಂದ್ ಅವರ ತಂದೆ ನಿವೃತ್ತ ಭಾರತೀಯ ವಾಯು ಪಡೆಯ ಅಧಿಕಾರಿ. ಹೀಗೆ ಶಹಾಜ್-ಉದ್-ದಿನ್ ಕುಟುಂಬವು ಪಾಕ್ ವಾಯು ಪಡೆಯಲ್ಲಿ ಸೇವೆ ಸಲ್ಲಿಸಿದೆ. ಶಹಾಜ್-ಉದ್-ದಿನ್ ತಂದೆ ವಾಸೀಮ್-ಉದ್-ದಿನ್ ಕೂಡ ಪಾಕ್ ವಾಯು ಪಡೆಯ ಪೈಲಟ್.

    ವಿಮಾನ ಪತನವಾದ ಕೆಲ ಸಮಯದ ಬಳಿಕ ಪಾಕ್ ಸೇನೆಯ ಅಧಿಕಾರಿ ತಮ್ಮ ಬಳಿ ಇಬ್ಬರು ಭಾರತೀಯ ಪೈಲಟ್‍ಗಳಿದ್ದಾರೆ ಎಂದು ಸುಳ್ಳು ಹೇಳಿತ್ತು. ಸ್ವಲ್ಪ ಸಮಯದ ಬಳಿಕ ಅಭಿನಂದನ್ ಅವರು ಮಾತ್ರ ನಮ್ಮ ಬಂಧನದಲ್ಲಿದ್ದಾರೆ ಎಂದು ಸತ್ಯ ಒಪ್ಪಿಕೊಂಡಿತ್ತು. ಎರಡು ದಿನಗಳ ಕಾಲ ಪಾಕ್ ಸರ್ಕಾರವು ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್ ಕುಟಿಲೋಪಾಯವನ್ನು ಇಂಚಿಂಚು ಬಿಚ್ಚಿಟ್ಟ ಏರ್ ಫೋರ್ಸ್

    ಪಾಕ್ ಕುಟಿಲೋಪಾಯವನ್ನು ಇಂಚಿಂಚು ಬಿಚ್ಚಿಟ್ಟ ಏರ್ ಫೋರ್ಸ್

    -ಜಾಗತಿಕ ಮಟ್ಟದಲ್ಲಿ ಪಾಕ್ ಮಾನ ಹರಾಜು

    ನವದೆಹಲಿ: ಫೆಬ್ರವರಿ 27ರಂದು ನಮ್ಮ ಮಿಗ್ 21 ಬೈಸನ್ ಪಾಕಿಸ್ತಾನದ ಎಫ್-16 ಜೆಟ್ ಹೊಡೆದುರುಳಿಸಿತ್ತು. ಆದರೆ ಪಾಕಿಸ್ತಾನ ಮಾತ್ರ ಇದನ್ನು ಒಪ್ಪಿಕೊಳ್ಳದೆ ನಮ್ಮ ವಿಮಾನವಲ್ಲ ಎಂದು ವಾದ ಮಾಡುತ್ತಿತ್ತು. ಆದರೆ ಈಗ ಈ ಘಟನೆಯ ಮಾಹಿತಿಯನ್ನು ಸಾರ್ವಜನಿಕವಾಗಿ ನಮ್ಮ ಸೇನೆ ಹಂಚಿಕೊಂಡಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕ್ ಮಾನ ಹರಾಜಾಗುವುದು ಖಚಿತವಾಗಿದೆ.

    ಹೌದು. ಪಾಕಿಸ್ತಾನ ನೌಟಂಕಿ, ಕಪಟಿಯ ಕುಟಿಲೋಪಾಯವನ್ನು ಏರ್ ಫೋರ್ಸ್ ಇಂಚಿಂಚು ಬಿಚ್ಚಿಟ್ಟಿದೆ. ಎಫ್-16 ಫೈಟರ್ ಜೆಟ್‍ನ ಫೋಟೋ ಸಮೇತ ಪಾಕಿಸ್ತಾನದ ಮಾನವನ್ನು ಇಂಡಿಯನ್ ಏರ್ ಫೋರ್ಸ್ ಹರಾಜಾಕಿದೆ. ಇದನ್ನೂ ಓದಿ: ಈಗ ಅಧಿಕೃತ, ಭಾರತದ ಹೊಡೆತಕ್ಕೆ ಬಿತ್ತು ಎಫ್ 16 ವಿಮಾನ

    ಅಂದು ಏನಾಯ್ತು?
    ಫೆಬ್ರವರಿ 27ರ ಮುಂಜಾನೆ ಭಾರತದ ಗಡಿಯತ್ತ ಪಾಕ್ ಜೆಟ್ ನುಗ್ಗುತ್ತಿತ್ತು. ಆಗ ಪಾಕ್ ಜೆಟ್ ಎಫ್-16 ಅನ್ನು ರೇಡಾರ್ ಪತ್ತೆ ಹಚ್ಚಿದೆ. ಆ ಪಾಕ್ ಜೆಟ್ ರಜೌರಿಯ ಸುಂದರಬನಿ ಪ್ರದೇಶದಲ್ಲಿ ಗಡಿ ಉಲ್ಲಂಘಿಸಿದೆ. ಎಫ್-16 ಹಿಮ್ಮೆಟ್ಟಲು ಮಿಗ್-21 ಬೈಸನ್, ಸುಖೋಯ್-30 ಎಂಕೆಐ ಹಾಗೂ ಮಿರಾಜ್-2000 ಫೈಟರ್ ಜೆಟ್‍ಗಳನ್ನು ನೇಮಕ ಮಾಡಲಾಗಿತ್ತು.

    ಪಾಕ್ ಜೆಟ್ ಭಾರತದ ಸೇನಾ ಶಿಬಿರಗಳನ್ನು ಟಾರ್ಗೆಟ್ ಮಾಡಿತ್ತು. ಈ ವೇಳೆ ನಮ್ಮ ಏರ್ ಫೋರ್ಸ್ ತಂಡ ಪಾಕ್ ಜೆಟ್ ಎಫ್-16 ಅನ್ನು ಬೆನ್ನಟ್ಟಿದೆ. ಈ ವೇಳೆ ಭೀತಿಯಿಂದ ಪಾಕ್ ಜೆಟ್ ಗಡಿಯಲ್ಲಿ ಬಾಂಬ್ ಡ್ರಾಪ್ ಮಾಡಿ ಹೋಗಲು ಯತ್ನಿಸಿದೆ. ಆದ್ರೆ ವೈಮಾನಿಕ ದಾಳಿಯಲ್ಲಿ ಪಾಕಿಸ್ತಾನದ ಜೆಟ್ ಎಫ್-16 ಅನ್ನು ಮಿಗ್-21 ಬೈಸನ್ ಹೊಡೆದುರುಳಿಸಿದೆ.

    ಪಿಒಕೆ(ಪಾಕ್ ಆಕ್ರಮಿತ ಕಾಶ್ಮೀರ) ದಲ್ಲಿ ಪಾಕಿಸ್ತಾನದ ಜೆಟ್ ಎಫ್-16 ಅವಶೇಷಗಳು ಬಿದ್ದಿದೆ. ಈ ವೈಮಾನಿಕ ಕಾದಾಟದಲ್ಲಿ ಮಿಗ್-21 ವಿಮಾನವನ್ನು ಕಳೆದುಕೊಳ್ಳಬೇಕಾಯಿತು. ಮಿಗ್-21 ಬೈಸನ್ ಜೆಟ್‍ನಲ್ಲಿದ್ದ ಅಭಿನಂದನ್ ಇಜೆಕ್ಟ್ ಆದರು. ಆದರೆ ಪ್ಯಾರಾಚೂಟ್‍ನಲ್ಲಿ ಹೋದ ಪೈಲಟ್ ಅಭಿನಂದನ್ ಪಾಕ್ ಗಡಿಯಲ್ಲಿ ಇಳಿದರು. ಅವರನ್ನು ಸುಳ್ಳು ಹೇಳಿ ಪಾಕಿಸ್ತಾನ ಸೇನೆ ಸೆರೆಹಿಡಿದುಕೊಂಡಿತು ಇದು ನಡೆದ ಘಟನೆಯಾಗಿದೆ. ಇದನ್ನು ನಮ್ಮ ವಾಯುಸೇನೆ ಸಾಕ್ಷಿ ಸಮೇತ ಸಾಬೀತು ಮಾಡಿದೆ.

    ವೈಮಾನಿಕ ದಾಳಿ ಬಳಿಕ ಪಾಕ್ ಗೊಂದಲಕಾರಿ ಹೇಳಿಕೆ ಕೊಟ್ಟಿತ್ತು. ನಮ್ಮ ಬಳಿ ಭಾರತದ ಒಬ್ಬರೇ ಪೈಲಟ್ ಇರುವುದಾಗಿ ಹೇಳಿತ್ತು. ಅಲ್ಲದೆ ಉದ್ದೇಶ ಪೂರ್ವಕವಾಗಿಯೇ ಖಾಲಿ ಪ್ರದೇಶದಲ್ಲಿ ಬಾಂಬ್ ಹಾಕಿದ್ದಾಗಿ ಒಪ್ಪಿಕೊಂಡಿತ್ತು. ಜೊತೆಗೆ ಎಫ್-16 ಯುದ್ದ ವಿಮಾನವನ್ನು ಬಳಸಿರಲಿಲ್ಲ ಅಂತ ಹೇಳಿತ್ತು. ಆದರೆ ಎಫ್-16ನಲ್ಲಿ ಬಳಸಲಾದ ಆಮರಾಮ್‍ನ ಅವಶೇಷಗಳು ಪೂರ್ವ ರಜೌರಿಯಲ್ಲಿ ಪತ್ತೆಯಾಗಿವೆ.

    ಪಾಕ್‍ನ ಎಫ್-16 ಅನ್ನು ನಮ್ಮ ಮಿಗ್ 21 ಬೈಸನ್ ಹೊಡೆದುರುಳಿಸಿತ್ತು. ಈಗ ನಮ್ಮ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಶುಕ್ರವಾರ ಸುರಕ್ಷಿತವಾಗಿ ಹಿಂಪಡೆದಿದ್ದೇವೆ.

    https://www.youtube.com/watch?v=ArvRnqPs81s

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈಗ ಅಧಿಕೃತ, ಭಾರತದ ಹೊಡೆತಕ್ಕೆ ಬಿತ್ತು ಎಫ್ 16 ವಿಮಾನ

    ಈಗ ಅಧಿಕೃತ, ಭಾರತದ ಹೊಡೆತಕ್ಕೆ ಬಿತ್ತು ಎಫ್ 16 ವಿಮಾನ

    ನವದೆಹಲಿ: ಪಾಪಿಸ್ತಾನದ ಮತ್ತೊಂದು ಸುಳ್ಳು ಬಯಲಾಗಿದೆ. ಭಾರತದ ವಾಯುಸೇನೆಯ ಹೊಡೆತ ತಿಂದು ಬಿದ್ದ ಎಫ್ 16 ವಿಮಾನದ ಫೋಟೋಗಳು ಲಭ್ಯವಾಗಿದೆ.

    ಬುಧವಾರ ಮಧ್ಯಾಹ್ನ ಭಾರತ ವಿದೇಶಾಂಗ ಇಲಾಖೆ ಸುದ್ದಿಗೋಷ್ಠಿ ನಡೆಸಿ ಭಾರತದ ಗಡಿ ದಾಟಿ ಬಂದಿದ್ದ ಪಾಕಿಸ್ತಾನ ವಿಮಾನಗಳ ಮೇಲೆ ದಾಳಿ ನಡೆಸಿದ್ದೇವೆ. ನಮ್ಮ ದಾಳಿ ವೇಳೆ ಪಾಕಿಸ್ತಾನ ವಿಮಾನ ಎಫ್ 16 ವಿಮಾನ ಪತನಗೊಂಡಿದೆ ಎಂದು ಹೇಳಿಕೆ ನೀಡಿತ್ತು.

    ಭಾರತ ಅಧಿಕೃತವಾಗಿ ಹೇಳಿಕೆ ನೀಡಿದ್ದರೂ ಪಾಕಿಸ್ತಾನ ಮಾತ್ರ ನಮಗೆ ಏನು ಆಗಿಲ್ಲ. ಯಾವುದೇ ವಿಮಾನ ಪತನವಾಗಿಲ್ಲ ಎಂದು ಹೇಳಿಕೆ ನೀಡಿತ್ತು. ಆದರ ಈಗ ಪಾಕಿಸ್ತಾನ ನೆಲದಲ್ಲಿ ಬಿದ್ದ ಎಫ್ 16 ಫೋಟೋಗಳು ಲಭ್ಯವಾಗಿದೆ.

    ಪಾಕ್ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಈ ವಿಮಾನ ಬಿದ್ದಿದೆ. ಬಿದ್ದ ವಿಮಾನದ ಭಾಗಗಳು ಪಾಕ್ ಸೇನಾಧಿಕಾರಿಗಳು ತರಾತುರಿಯಲ್ಲಿ ಟ್ರಕ್ ಗೆ ತುಂಬಿಸಿದ್ದಾರೆ.

    ಪಾಕಿಸ್ತಾನದ ವಿರುದ್ಧ ಪ್ರತಿದಾಳಿ ನಡೆಸುವ ಸಮಯದಲ್ಲಿ ನಮ್ಮ ಮಿಗ್ ವಿಮಾನ ಪತನವಾಗಿದೆ. ಪೈಲಟ್ ನಾಪತ್ತೆಯಾಗಿದ್ದಾರೆ ಎಂದು ಭಾರತ ಒಪ್ಪಿಕೊಂಡಿತ್ತು. ಆದರೆ ಪಾಕಿಸ್ತಾನ ನಮಗೆ ಏನು ಆಗಿಲ್ಲ ಎಂಬಂತೆ ವರ್ತಿಸಿತ್ತು. ಪತನಗೊಂಡ ಎಫ್ 16 ವಿಮಾನದ ಪೈಲಟ್ ಪ್ಯಾರಾಚೂಟ್ ಮೂಲಕ ಪಾರಾದ ದೃಶ್ಯ ಮಾಧ್ಯಮಗಳಿಗೆ ಸಿಕ್ಕಿತ್ತು.

    ಜಗತ್ತು ಬದಲಾಗುತ್ತಿದೆ ಸುಳ್ಳು ಹೇಳಿದರೂ ಸಿಕ್ಕಿ ಬೀಳುತ್ತೇವೆ ಎನ್ನುವ ಸ್ವಲ್ಪ ಪರಿಜ್ಞಾನ ಇಲ್ಲದಂತೆ ಪಾಕ್ ವರ್ತಿಸುತ್ತಿದೆ. ಬುಧವಾರ ಬೆಳಗ್ಗೆ ಪಾಕಿಸ್ತಾನದ ಮೇಜರ್ ಜನರಲ್ ಅಸಿಫ್ ಗಫೂರ್ ಟ್ವೀಟ್ ಮಾಡಿ ನಮ್ಮ ಬಳಿ ಇಬ್ಬರು ಭಾರತದ ವಾಯು ಸೇನಾ ಪೈಲಟ್ ಗಳು ಇದ್ದಾರೆ ಎಂದು ಹೇಳಿದ್ದರು.

    ಗಫೂರ್ ಟ್ವೀಟ್ ಬೆನ್ನಲ್ಲೇ ರೇಡಿಯೋ ಪಾಕಿಸ್ತಾನದ ಇಬ್ಬರು ಭಾರತದ ಪೈಲಟ್‍ಗಳನ್ನು ನಾವು ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಇಬ್ಬರನ್ನು ಉತ್ತಮವಾಗಿ ನೋಡಿಕೊಳ್ಳುತ್ತೇವೆ. ಒಬ್ಬರಿಗೆ ಉತ್ತಮವಾಗಿ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಗಫೂರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿತ್ತು.

    ಮಧ್ಯಾಹ್ನ ಭಾರತ ಸುದ್ದಿಗೋಷ್ಠಿ ನಡೆಸಿ, ನಮ್ಮ ಒಬ್ಬರು ಪೈಲಟ್ ನಾಪತ್ತೆಯಾಗಿದ್ದಾರೆ ಎಂದು ಹೇಳಿತ್ತು. ಭಾರತದಿಂದ ಅಧಿಕೃತ ಹೇಳಿಕೆ ಬಂದಲ್ಲೇ ಪಾಕಿಸ್ತಾನ ಸಂಜೆ ಉಲ್ಟಾ ಹೊಡೆದು ನಮ್ಮ ಬಳಿ ಒಬ್ಬರು ಪೈಲಟ್ ಕಸ್ಟಡಿಯಲ್ಲಿ ಇದ್ದಾರೆ ಎಂದು ಮೇಜರ್ ಜನರಲ್ ಗಫೂರ್ ಟ್ವೀಟ್ ಮಾಡಿ ತಿಳಿಸಿದ್ದರು. ಆರಂಭದ ಟ್ವೀಟ್ ನಲ್ಲಿ ಅಸಿಫ್ ಗಫೂರ್, ಗಡಿ ನಿಯಂತ್ರಣ ರೇಖೆಯನ್ನು ದಾಟಿದ್ದ ಭಾರತೀಯ ವಾಯು ಪಡೆಯ ಎರಡು ಯುದ್ಧ ವಿಮಾನಗಳನ್ನು ನಾವು ಹೊಡೆದು ಹಾಕಿದ್ದೇವೆ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv