Tag: ಎಪಿಎಂಪಿ

  • ಅವಳಿ ನಗರದ ಎಪಿಎಂಸಿ ದ್ವಾರದಲ್ಲಿ ಸೋಂಕು ಕಳೆಯುವ ಸುರಂಗ ಸ್ಥಾಪನೆ

    ಅವಳಿ ನಗರದ ಎಪಿಎಂಸಿ ದ್ವಾರದಲ್ಲಿ ಸೋಂಕು ಕಳೆಯುವ ಸುರಂಗ ಸ್ಥಾಪನೆ

    ಹುಬ್ಬಳ್ಳಿ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಸರ್ಕಾರ ಹತ್ತು ಹಲವು ಕ್ರಮ ಕೈಗೊಳ್ಳುತ್ತಿದೆ. ಧಾರವಾಡ ಜಿಲ್ಲಾಡಳಿತ, ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯು ಸ್ಥಳೀಯ ಯಂಗ್ ಇಂಡಿಯಾ(ವೈಐ) ಹಾಗೂ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ) ಸಹಯೋಗದಲ್ಲಿ ಅಮರಗೋಳದ ಎಪಿಎಂಸಿ ಮಹಾದ್ವಾರದ ಬಳಿ ಸೋಂಕು ಕಳೆಯುವ ಸುರಂಗ ನಿರ್ಮಿಸಿದೆ.

    ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ಇಂದು ಬೆಳಿಗ್ಗೆ ಈ ಸುರಂಗದ ರಚನೆ ಹಾಗೂ ನಿರ್ಮಾಣ ಪರಿಶೀಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ರೈತರು, ವ್ಯಾಪಾರಸ್ಥರ ಆರೋಗ್ಯ ರಕ್ಷಣೆಗೆ ಇದು ಸಹಕಾರಿಯಾಗಲಿದೆ. ಜಿಲ್ಲಾಡಳಿತ, ಮಹಾನಗರಪಾಲಿಕೆ ಹಾಗೂ ಸ್ಥಳೀಯ ಸಂಘಟನೆಗಳ ಸಹಭಾಗಿತ್ವದಲ್ಲಿ ಈ ಕಾರ್ಯ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ತಮಿಳುನಾಡಿನ ತಿರುಪ್ಪೂರನಲ್ಲಿ ಅಲ್ಲಿನ ಯಂಗ್ ಇಂಡಿಯಾ ಸಂಸ್ಥೆ ಇಂತಹ ಪ್ರಯತ್ನ ಮಾಡಿರುವದನ್ನು ಕಂಡು, ಹುಬ್ಬಳ್ಳಿಯಲ್ಲಿಯೂ ಅದನ್ನು ಅನುಷ್ಠಾನಗೊಳಿಸುವ ಆಸಕ್ತಿ ಉಂಟಾಯಿತು. ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಅಗತ್ಯ ಸಹಕಾರ ನೀಡಲು ಮುಂದಾದಾಗ ನಮ್ಮ ಉತ್ಸಾಹಕ್ಕೆ ಪ್ರೋತ್ಸಾಹ ದೊರೆಯಿತು. ಪಾರಾದಿ ಅವರಿಂದ ಸ್ಟೀಲ್ ಫ್ರೇಮ್ ಸಿದ್ಧಪಡಿಸಿ, ಹೈ ಪ್ರೆಶರ್ ಉಳ್ಳ ಫಾಗರ್ಸ್, 1 ಅಶ್ವಶಕ್ತಿಯ ಪಂಪ್ ಈ ಸೋಂಕು ಕಳೆಯುವ ಸುರಂಗದಲ್ಲಿ ಅಳವಡಿಸಲಾಗಿದೆ. ಸುರಂಗದ 4 ಅಡಿ ಅಂತರದಲ್ಲಿ ವ್ಯಕ್ತಿಗಳು ಬಂದಾಗ ಸೆನ್ಸಾರ್ ಮೂಲಕ ಕಾರ್ಯ ಆರಂಭವಾಗುತ್ತದೆ. ಮನುಷ್ಯ ತೊಯ್ಯದ ಹಾಗೆ ಸೋಂಕು ನಿವಾರಕ ಸಿಂಪಡಣೆಯಾಗುತ್ತದೆ. ಶೇ. 1ರಷ್ಟು ಸೋಡಿಯಂ ಹೈಪೋಕ್ಲೋರೈಡ್ ಮಿಶ್ರಿತ ದ್ರಾವಣವನ್ನು ಮಹಾನಗರಪಾಲಿಕೆ ನಿರಂತರವಾಗಿ ಒದಗಿಸಲಿದೆ. ಯಂಗ್ ಇಂಡಿಯಾ ಮತ್ತು ಸಿಐಐ 1 ಲಕ್ಷ ರೂ. ವೆಚ್ಚದಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯ ಕೈಗೊಂಡಿದೆ ಎಂದು ಯಂಗ್ ಇಂಡಿಯಾ ಸಂಸ್ಥೆ ಅಧ್ಯಕ್ಷ ಡಾ. ಶ್ರೀನಿವಾಸ್ ಜೋಷಿ ವಿವರಿಸಿದರು.

    ಈ ಬಗ್ಗೆ ಮಹಾನಗರಪಾಲಿಕೆ ಆಯುಕ್ತರು ಮಾತನಾಡಿ, ಹುಬ್ಬಳ್ಳಿ ಎಪಿಎಂಸಿಗೆ ಪ್ರತಿನಿತ್ಯ ಸಾವಿರಾರು ರೈತರು, ವ್ಯಾಪಾರಿಗಳು ಬರುತ್ತಾರೆ. ಅವರಲ್ಲಿ ಸೋಂಕು ಹರಡುವಿಕೆ ತಡೆಯಲು ಈ ಪ್ರಯತ್ನ ಮಾಡಲಾಗಿದೆ. ಸಾರ್ವಜನಿಕರು ಸ್ವಲ್ಪ ತಾಳ್ಮೆಯಿಂದ ವಾಹನದಿಂದ ಇಳಿದು, ಸುರಂಗದಲ್ಲಿ ಒಮ್ಮೆ ಹಾಯ್ದು ಬರುವ ಅಭ್ಯಾಸ ರೂಢಿಸಿಕೊಂಡರೆ ಒಳ್ಳೆಯದು ಎಂದರು.

    ಜಿಲ್ಲಾಧಿಕಾರಿ ದೀಪಾ ಚೋಳನ್, ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್, ಮಹಾನಗರಪಾಲಿಕೆ ಪರಿಸರ ಇಂಜಿನಿಯರ್ ನಯನ, ಪೊಲೀಸ್ ಇನ್ಸ್‌ಪೆಕ್ಟರ್ ಪ್ರಭು ಸೂರಿನ್, ಯಂಗ್ ಇಂಡಿಯಾದ ಸಚಿನ್, ಡಾ. ನಾಗರಾಜನಾಯಕ, ಕಿರಣ ಮಾಳವದೆ, ಸಿಐಐ ಅಧ್ಯಕ್ಷ ವಿ.ಎಸ್.ವಿ.ಪ್ರಸಾದ, ಉಪಾಧ್ಯಕ್ಷ ಅನುಪಮ ಬೇತಾಳ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

  • ಜಾರಕಿಹೊಳಿ ಸಹೋದರರು-ಶಾಸಕಿ ಹೆಬ್ಬಾಳ್ಕರ್ ಜಟಾಪಟಿಗೆ ಸಜ್ಜಾಯ್ತು ಮತ್ತೊಂದು ಚುನಾವಣೆ

    ಜಾರಕಿಹೊಳಿ ಸಹೋದರರು-ಶಾಸಕಿ ಹೆಬ್ಬಾಳ್ಕರ್ ಜಟಾಪಟಿಗೆ ಸಜ್ಜಾಯ್ತು ಮತ್ತೊಂದು ಚುನಾವಣೆ

    -ಶಾಸಕಿ ಬಣದಿಂದ ಮರಾಠಿ ಭಾಷಿಕ ಅಭ್ಯರ್ಥಿಗಳಿಗೆ ಮಣೆ

    ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ಕೈ ನಾಯಕರ ಜಟಾಪಟಿಗೆ ಮತ್ತೊಂದು ಚುನಾವಣೆ ಸಾಕ್ಷಿಯಾಗಲಿದೆ. ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಇದೇ 15ರಂದು ಘೋಷಣೆಯಾಗಿದೆ.

    ಈ ಚುನಾವಣೆ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸಹೋದರರಿಗೆ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಪಿಎಲ್‍ಡಿ ಬ್ಯಾಂಕ್ ಹಾಗೂ ಸ್ಥಳೀಯ ಚುನಾವಣೆಯ ಹೊಗೆ ಎರಡೂ ಬಣಗಳಲ್ಲಿ ಆಡುತ್ತಿದ್ದು, ಇದೇ ವೇಳೆ ಎಪಿಎಂಸಿ ಚುನಾವಣೆ ಘೋಷಣೆಯಾಗಿದೆ.  ಇದನ್ನು ಓದಿ: ಸತೀಶ್ ಜಾರಕಿಹೊಳಿ ಬೆಂಬಲಿಗನಿಗೆ ಚಾಕು ಇರಿದ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗ

    ಪಿಎಲ್‍ಡಿ ಬ್ಯಾಂಕ್ ಚುನಾವಣೆ ಬಳಿಕವೂ ಸ್ಥಳೀಯ ಚುನಾವಣೆಯಲ್ಲಿ ಕೈ ನಾಯಕರು ಪರೋಕ್ಷವಾಗಿ ಕಿಡಿಕಾರಿದ್ದರು. ಬೆಳಗಾವಿ ಕಾಂಗ್ರೆಸ್ ನಾಯಕರ ವಾಗ್ದಾಳಿ ಹೈಕಮಾಂಡ್ ಮಟ್ಟದಲ್ಲಿ ಭಾರೀ ಚರ್ಚೆಯಾಗಿತ್ತು. ಈಗ ಎಪಿಎಂಸಿ ಚುನಾವಣೆ ಜಾರಕಿಹೊಳಿ ಸಹೋದರರು ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಹೀಗಾಗಿ ಕೈ ನಾಯಕರು ಮತ್ತೆ ತಮ್ಮ ಹಳೇ ವರಸೆಯನ್ನು ಮುಂದುವರಿಸುತ್ತಾರೆ ಎನ್ನಲಾಗುತ್ತಿದೆ. ಇದನ್ನು ಓದಿ: ಎಲ್ಲವನ್ನು ಆ ದೇವ್ರು ನೋಡಿಕೊಳ್ತಾನೆ – ಗೆದ್ದ ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ ಚುಟುಕು ಮಾತು

    ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಣದಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮರಾಠಿ ಭಾಷಿಕ ಯುವರಾಜ ಕದಂ, ಸುಧೀರ್ ಗಡ್ಡೆ ಅಭ್ಯರ್ಥಿಗಳಾಗಿದ್ದಾರೆ. ಇತ್ತ ಜಾರಕಿಹೊಳಿ ಸಹೋದರರ ಬಣದಿಂದ ಯಾವುದೇ ಅಭ್ಯರ್ಥಿಗಳ ಹೆಸರು ಫೈನಲ್ ಆಗಿಲ್ಲ. ಇಬ್ಬರು ನಾಯಕರೂ ಸಂಧಾನ ಮಾಡಿಕೊಳ್ಳುತ್ತಾರೋ ಅಥವಾ ಮತ್ತೊಮ್ಮೆ ವಾಗ್ದಾಳಿಗೆ ಮುಂದಾಗುತ್ತಾರೋ ಎನ್ನುವುದು ಜಿಲ್ಲೆಯಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದನ್ನು ಓದಿ: ನಾನು ಸ್ಲಂನಲ್ಲಿ ಹುಟ್ಟಿರ್ಬೋದು, ಸಂಸ್ಕೃತಿ ಎಲ್ಲೆ ಮೀರಿ ಹೋಗಿಲ್ಲ- ರಮೇಶ್‍ಗೆ ಹೆಬ್ಬಾಳ್ಕರ್ ಟಾಂಗ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv