Tag: ಎನ್ ಶಶಿಕುಮಾರ್

  • ಮಂಗಳೂರು ಪಬ್ ಮೇಲೆ ದಾಳಿ ನಡೆದಿಲ್ಲ, ಯಾರೂ ದೂರು ನೀಡಿಲ್ಲ: ಎನ್.ಶಶಿಕುಮಾರ್

    ಮಂಗಳೂರು ಪಬ್ ಮೇಲೆ ದಾಳಿ ನಡೆದಿಲ್ಲ, ಯಾರೂ ದೂರು ನೀಡಿಲ್ಲ: ಎನ್.ಶಶಿಕುಮಾರ್

    ಮಂಗಳೂರು: ಮಂಗಳೂರಿನ ಪಬ್ ಮೇಲೆ ಭಜರಂಗದಳ ದಾಳಿ ವಿಚಾರವಾಗಿ ಯಾರೂ ದೂರು ನೀಡಿಲ್ಲ. ದೂರು ನೀಡಿದರೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.

    ಸೋಮವಾರ ರಾತ್ರಿ ಕಾಲೇಜು ಫೇರ್‌ವೆಲ್ ನೆಪದಲ್ಲಿ ಮಂಗಳೂರಿನ ಪ್ರತಿಷ್ಠಿತ ರಿ-ಸೈಕಲ್ ದಿ ಲಾಂಜ್ ಪಬ್‍ನಲ್ಲಿ ಕಾಲೇಜು ವಿದ್ಯಾರ್ಥಿಗಳು ಪಾರ್ಟಿ ಮಾಡಿದ್ದಾರೆ. ಈ ವೇಳೆ ಏಕಾಏಕಿ ಪಬ್‍ಗೆ ನುಗ್ಗಿದ ಭಜರಂಗದಳ ಕಾರ್ಯಕರ್ತರು ಕೆಲ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಬುದ್ಧಿ ಹೇಳಿ ಪಬ್‍ನಿಂದ ಹೊರಗೆ ಕಳುಹಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.  ಇದನ್ನೂ ಓದಿ: ಇತ್ತೀಚಿನ ನಡೆಯುತ್ತಿರುವ ಕ್ಷುಲ್ಲಕ ಚರ್ಚೆ ನನ್ನನ್ನು ತಲೆ ತಗ್ಗಿಸುವಂತೆ ಮಾಡುತ್ತಿದೆ: ಮಸ್ಕ್

    ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಎನ್.ಶಶಿಕುಮಾರ್ ಅವರು, ನಗರದಲ್ಲಿ ಯಾವುದೇ ಪಬ್ ಮೇಲೆ ದಾಳಿ ಆಗಿಲ್ಲ. ಬಲ್ಮಠದ ಪಬ್ ಮುಂದೆ ಭಾನುವಾರ ರಾತ್ರಿ ಹತ್ತು-ಹನ್ನೆರೆಡು ಮಂದಿ ಜಮಾಯಿಸಿದ್ದರು. ಪಬ್ ಒಳಗೆ ಅಪ್ರಾಪ್ತರು ಮದ್ಯ ಸೇವನೆ ಮಾಡುತ್ತಿದ್ದರು ಎಂಬ ಆರೋಪ ಅವರದ್ದಾಗಿತ್ತು. ಈ ಬಗ್ಗೆ ಬೌನ್ಸರ್ ಜೊತೆ ಸಂಘಟನೆಯೊಂದಕ್ಕೆ ಸೇರಿದ ಯುವಕರು ಮಾತನಾಡಿದ್ದರು. ಬೌನ್ಸರ್ ಪಬ್ ಮ್ಯಾನೇಜರ್ ಜೊತೆ ಮಾತನಾಡಿ ಪಬ್ ಒಳಗಿದ್ದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದಾನೆ. ಇದನ್ನೂ ಓದಿ: ಮಂಗಳೂರಿನ ಪಬ್‍ನಲ್ಲಿ ವಿದ್ಯಾರ್ಥಿಗಳ ಮೋಜು – ಪಾರ್ಟಿಗೆ ಭಜರಂಗದಳದಿಂದ ತಡೆ

    ಇಲ್ಲಿ ಯಾವುದೇ ಅಟ್ಯಾಕ್, ದೈಹಿಕ ಹಲ್ಲೆಗಳು ನಡೆದಿಲ್ಲ. ಪಬ್ ಒಳಗೆ ಯಾರೂ ಪ್ರವೇಶ ಮಾಡಿಲ್ಲ. ತಡರಾತ್ರಿ ನಡೆದ ಘಟನೆಗೂ ಕಿಸ್ ಪಂದ್ಯ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಆ ಪ್ರಕರಣದಲ್ಲಿ ಭಾಗಿಯಾದವರು ಯಾರೂ ನಿನ್ನೆ ಪಬ್‍ನ ಪಾರ್ಟಿಯಲ್ಲಿ ಭಾಗವಹಿಸಿಲ್ಲ. ಇನ್ನೂ ಈ ಬಗ್ಗೆ ಯಾರೂ ದೂರು ನೀಡಿಲ್ಲ. ದೂರು ನೀಡಿದರೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೋಡ್ದಬ್ಬು ದೇಗುಲದ ಆಯದಕಲ್ಲಿಗೆ, ಅಂಗಣದ ಸುತ್ತಲೂ ರಕ್ತ ಸುರಿಸಿ ಓಡಾಟ- ವ್ಯಕ್ತಿ ಅರೆಸ್ಟ್

    ಕೋಡ್ದಬ್ಬು ದೇಗುಲದ ಆಯದಕಲ್ಲಿಗೆ, ಅಂಗಣದ ಸುತ್ತಲೂ ರಕ್ತ ಸುರಿಸಿ ಓಡಾಟ- ವ್ಯಕ್ತಿ ಅರೆಸ್ಟ್

    ಮಂಗಳೂರು: ದೈವಸ್ಥಾನದಲ್ಲಿ ವಿಕೃತಿ ಮೆರೆದ ವ್ಯಕ್ತಿಯೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಸಾಹುಲ್ ಹಮೀದ್(27) ಎಂದು ಗುರುತಿಸಲಾಗಿದೆ. ಮಂಗಳೂರು ನಗರ ಹೊರವಲಯದ ಕೈಕಂಬದ ಕಂದಾವರ ಎಂಬಲ್ಲಿನ ಕಂದಾವರ ಪದವು ಶ್ರೀ ಕೋಡ್ದಬ್ಬು ದೇವಸ್ಥಾನಕ್ಕೆ ಆರೋಪಿ ಅಕ್ರಮವಾಗಿ ಪ್ರವೇಶಿಸಿ ಕೃತ್ಯ ಎಸಗಿದ್ದಾನೆ.

    ರಾತ್ರಿ ಹೊತ್ತು ಅಕ್ರಮವಾಗಿ ಪ್ರವೇಶಿಸಿದ್ದ ಆರೋಪಿ ಆಯದಕಲ್ಲಿಗೆ ಹಾಗೂ ಅಂಗಣದ ಸುತ್ತಲೂ ರಕ್ತ ಸುರಿಸಿ ಓಡಾಡಿದ್ದಾನೆ. ಇತ್ತ ಘಟನೆ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಬಬ್ಬುಸ್ವಾಮಿಯ ದರ್ಶನ ನಡೆಸಿದ್ದರು. ದುಷ್ಕರ್ಮಿ ಪತ್ತೆಯಾಗಬೇಕೆಂದು ಪ್ರಾರ್ಥಿಸಿದರು. ಅಲ್ಲದೆ ಪೊಲೀಸ್ ಠಾಣೆಗೂ ದೂರು ನೀಡಿದರು. ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ ದೇಶದ್ರೋಹಿ ಕಲ್ಲಡ್ಕ ಪ್ರಭಾಕರ ಭಟ್ ಬಂಧನ ಯಾವಾಗ?: ಕಾಂಗ್ರೆಸ್ ಪ್ರಶ್ನೆ

    ದೂರು ದಾಖಲಾದ ಕೆಲವೇ ಗಂಟೆಗಳಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಸಾಹುಲ್ ಹಮೀದ್ ಬಳಲುತ್ತಿರುವುದಾಗಿ ಮಾಹಿತಿ ದೊರಕಿದೆ. ಕೈ ಗಾಯಮಾಡಿಕೊಂಡು ದೈವಸ್ಥಾನಕ್ಕೆ ಪ್ರವೇಶಿಸಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗೋಮಾಂಸ ಸಾಗಿಸುತ್ತಿದ್ದಾನೆಂದು ಶಂಕಿಸಿ ಹಿಗ್ಗಾಮುಗ್ಗಾ ಥಳಿಸಿದ್ರು

    ಪ್ರಕರಣ ಸಂಬಂಧ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಪ್ರತಿಕ್ರಿಯಿಸಿ, ಆರೋಪಿ ಸಾಹುಲ್ ನನ್ನು ಈಗಾಗಲೇ ಬಂಧನ ಮಾಡಿದ್ದೇವೆ. ಘಟನೆಯ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಯುವಕನ ಕೃತ್ಯದ ಬಗ್ಗೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಮೆಡಿಕಲ್ ಟೆಸ್ಟ್ ವೇಳೆ ಆರೋಪಿ ಮಾನಸಿಕ ಅಸ್ವಸ್ಥ ಅಂತಾ ಕಂಡುಬಂದಿಲ್ಲ. ಆರೋಪಿ ಮಾಡಿರುವ ಕೃತ್ಯದ ಉದ್ದೇಶ ಗೊತ್ತಾಗಿಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುವುದರ ಬಗ್ಗೆ ತನಿಖೆ ಮಾಡುತ್ತೇವೆ ಎಂದರು.

  • ಅಪ್ರಾಪ್ತ ಬಾಲಕಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ – ಇಬ್ಬರು ಮಹಿಳೆಯರ ಜೊತೆ ಓರ್ವ ಅರೆಸ್ಟ್

    ಅಪ್ರಾಪ್ತ ಬಾಲಕಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ – ಇಬ್ಬರು ಮಹಿಳೆಯರ ಜೊತೆ ಓರ್ವ ಅರೆಸ್ಟ್

    ಮಂಗಳೂರು: ಕರಾವಳಿ ನಗರಿಯ ಪ್ರತಿಷ್ಠಿತ ಕಾಲೇಜೊಂದರ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರನ್ನು ಇಟ್ಟುಕೊಂಡು ಪೆಂಟ್ ಹೌಸ್ ಒಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಮಹಿಳೆಯರು ಸೇರಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

    ಶಮೀನಾ, ಆಯಿಷಮ್ಮ, ಸಿದ್ದೀಕ್ ಬಂಧಿತ ಆರೋಪಿಗಳು. ಪಿಯುಸಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ನಾಲ್ವರ ರಕ್ಷಣೆ ಮಾಡಲಾಗಿದೆ. ಪೆಂಟ್ ಹೌಸ್‍ನಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ವೇಶ್ಯಾವಾಟಿಕೆಯ ಚಲನವಲನವನ್ನು ಸೆರೆ ಹಿಡಿದಿಟ್ಟುಕೊಂಡ ದೃಶ್ಯಾವಳಿಗಳಿಂದ ಯುವತಿಯೊಬ್ಬಳು ಬಾಲಕಿಯರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಳು. ಇದನ್ನೂ ಓದಿ: ಅಜ್ಮೀರ್ ದರ್ಗಾಕ್ಕೆ ಚಾದರ ಕಳಿಸಿಕೊಟ್ಟ ಪ್ರಧಾನಿ ಮೋದಿ

    ಈ ಕುರಿತು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆ, ಐ.ಟಿ.ಪಿ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕಿಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ- ನೀರು ಅಂತ ಎಣ್ಣೆ ಕಾಯಿಸಿ ಪತ್ನಿ ಮೇಲೆ ಎರಚಿದ್ದವ ಅರೆಸ್ಟ್

    ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸಿ.ಸಿ.ಬಿ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ವಿಭಾಗದ ಡಿ.ಸಿ.ಪಿ ಹರಿರಾಂ ಶಂಕರ್ ಮೇಲುಸ್ತುವಾರಿಯಲ್ಲಿ ಹೆಚ್ಚಿನ ತನಿಖೆ ನಡೆಸಲು ಸೂಚಿಸಿದ್ದಾರೆ.

  • ಮಹಿಳಾ  ಪೊಲೀಸ್ ಠಾಣೆಯಲ್ಲಿ  ಪೊಲೀಸರ ಅಶಿಸ್ತು – 6 ಅಧಿಕಾರಿಗಳ ಅಮಾನತು

    ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಲೀಸರ ಅಶಿಸ್ತು – 6 ಅಧಿಕಾರಿಗಳ ಅಮಾನತು

    ಮಂಗಳೂರು: ಮಂಗಳೂರಿನ ಪಾಂಡೇಶ್ವರದಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ಇತ್ತಿಚೇಗೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಲ್ಲಿ ಅಶಿಸ್ತು, ಗುಂಪುಗಾರಿಕೆ, ಆಂತರಿಕ ಭಿನ್ನಾಭಿಪ್ರಾಯದ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಇದೀಗ 6 ಜನ ಅಧಿಕಾರಿಗಳ ಅಮಾನತು ಸೇರಿದಂತೆ ಠಾಣೆಯ ಎಲ್ಲಾ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ.

    1994ರಲ್ಲಿ ಮಂಗಳೂರಿನ ಪಾಂಡೇಶ್ವರದಲ್ಲಿ ಮಹಿಳಾ ಮತ್ತು ಮಕ್ಕಳ ದೌರ್ಜನ್ಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾರ್ಯಾರಂಭವಾದ ಮಹಿಳಾ ಪೊಲೀಸ್ ಠಾಣೆಯಲ್ಲಿ ಇತ್ತಿಚೇಗೆ ಎರಡು ಪ್ರತ್ಯೇಕ ಪ್ರಕರಣದಲ್ಲಿ ಕರ್ತವ್ಯ ಲೋಪ ಹಾಗೂ ಠಾಣೆಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಅಶಿಸ್ತು ಸಾಬೀತಾಗಿತ್ತು. ಈ ಹಿನ್ನಲೆಯಲ್ಲಿ ಒಟ್ಟು 6 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಆದೇಶಿಸಿದ್ದಾರೆ. ಇದನ್ನೂ ಓದಿ: 1 ಕಿ.ಮೀ ಓಡಿ ಕಳ್ಳನನ್ನು ಹಿಡಿದ ಮಂಗಳೂರು ಪೊಲೀಸ್ ವೀಡಿಯೋ ವೈರಲ್

    ಜುಲೈ 27 ರಂದು ಕಂಕನಾಡಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಮಹಿಳಾ ಪೊಲೀಸ್ ಠಾಣೆಯ ಪಿ.ಎಸ್.ಐ ರೋಸಮ್ಮ ಅಮಾನತ್ತಾಗಿದ್ದಾರೆ. ಇನ್ನೊಂದು ಘಟನೆಯಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿಯೇ ಮದ್ಯಪಾನ ಪಾರ್ಟಿ ಮಾಡಿದ ಆರೋಪದ ಮೇಲೆ ಇಬ್ಬರು ಎಎಸ್‍ಐ, ಒಬ್ಬ ಹೆಡ್ ಕಾನ್‌ಸ್ಟೇಬಲ್ ಇಬ್ಬರು ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟು ಐವರು ಅಮಾನತ್ತು ಆಗಿದ್ದಾರೆ.

    ಈ ಎರಡು ಘಟನೆಗಳ ಬಗ್ಗೆ ಕೇಂದ್ರ ಉಪವಿಭಾಗದ ಎಸಿಪಿ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ರು. ಠಾಣೆಯಲ್ಲಿ ಮದ್ಯಪಾನ ಪಾರ್ಟಿ ನಡೆಸಿರೋದು ಸಿ.ಸಿ ಕ್ಯಾಮೆರಾದಲ್ಲಿಯೂ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ವರದಿ ಆಧರಿಸಿ ಪೊಲೀಸ್ ಕಮೀಷನರ್ ಅಮಾನತು ಆದೇಶ ಹೊರಡಿಸಿದ್ದಾರೆ. ಈ ಎರಡು ಪ್ರತ್ಯೇಕ ಘಟನೆಗಳಲ್ಲಿ ಸಾಬೀತಾದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯ ಲೋಪ, ಠಾಣೆಯಲ್ಲಿ ಅಶಿಸ್ತು, ಗುಂಪುಗಾರಿಕೆ, ಆಂತರಿಕ ಭಿನ್ನಾಭಿಪ್ರಾಯ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಯ ಎಲ್ಲಾ 32 ಅಧಿಕಾರಿ ಸಿಬ್ಬಂದಿಯನ್ನು ವರ್ಗಾವಣೆ ಸಹ ಮಾಡಲಾಗಿದೆ. ಇದರಲ್ಲಿ ಈಗಾಗಲೇ 6 ಜನ ಅಮಾನತ್ತಾಗಿದ್ದು ಉಳಿದ ಅಧಿಕಾರಿ ಸಿಬ್ಬಂದಿಗಳನ್ನು ಬೇರೆ ಬೇರೆ ಠಾಣೆಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಹೊಸದಾಗಿ ಮಹಿಳಾ ಪೊಲೀಸ್ ಠಾಣೆಗೆ 2 ಪಿಎಸ್‍ಐ, 1 ಹೆಚ್‍ಸಿ, 16 ಪಿಸಿಗಳನ್ನು ನಿಯುಕ್ತಿಗೊಳಿಸಲಾಗಿದೆ.  ಇದನ್ನೂ ಓದಿ: ಸರ್ಕಾರಕ್ಕೆ ನಮ್ಮನ್ನು ಬಂಧಿಸುವ ಶಕ್ತಿ ಇಲ್ಲ: ಡಿ.ಕೆ. ಸುರೇಶ್

    ಠಾಣೆಯ ಕರ್ತವ್ಯದಲ್ಲಿ ಗುಣಮಟ್ಟ ಸುಧಾರಣೆ, ನ್ಯಾಯ ಸಮ್ಮತ, ಪಾರದರ್ಶಕ ಕರ್ತವ್ಯ ನಿರ್ವಹಣೆಗೆ ಈ ಕ್ರಮ ಎಂದು ಪೊಲೀಸ್ ಕಮೀಷನರ್ ಹೇಳಿದ್ದಾರೆ. ಒಟ್ಟಿನಲ್ಲಿ ಈ ಬೆಳವಣಿಗೆಯ ಮೂಲಕ ಕಾನೂನಿನಡಿ ಎಲ್ಲರೂ ಸಮಾನ ಎಂಬ ಸಂದೇಶವನ್ನು ಪೊಲೀಸ್ ಇಲಾಖೆ ನೀಡಿದೆ.

  • ಚಾರ್ಜ್ ಶೀಟ್‍ನಲ್ಲಿ ಅನುಶ್ರೀ ಆರೋಪಿಯೆಂದು ಉಲ್ಲೇಖವಾಗಿಲ್ಲ: ಮಂಗಳೂರು ಪೊಲೀಸ್ ಆಯುಕ್ತರ ಸ್ಪಷ್ಟನೆ

    ಚಾರ್ಜ್ ಶೀಟ್‍ನಲ್ಲಿ ಅನುಶ್ರೀ ಆರೋಪಿಯೆಂದು ಉಲ್ಲೇಖವಾಗಿಲ್ಲ: ಮಂಗಳೂರು ಪೊಲೀಸ್ ಆಯುಕ್ತರ ಸ್ಪಷ್ಟನೆ

    ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಲ್ಲಿಕೆಯಾಗಿರುವ ಚಾರ್ಜ್ ಶೀಟ್ ನಲ್ಲಿ ನಿರೂಪಕಿ ಅನುಶ್ರೀ ಆರೋಪಿ ಅಂತ ಉಲ್ಲೇಖ ಆಗಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಕಿಶೋರ್ ಅಮನ್ ಡ್ರಗ್ ಕೇಸ್ ಚಾರ್ಜ್ ಶೀಟ್ ಸಲ್ಲಿಕೆ ವಿಚಾರ ಸಂಬಂಧ ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಚಾರ್ಜ್ ಶೀಟ್ ಬಗ್ಗೆ ಆರೋಪಗಳಿದ್ರೆ ವಕೀಲರ ಮೂಲಕ ಕೋರ್ಟ್ ಗೆ ಹೇಳಬಹುದು. ಜಾರ್ಜ್ ಶೀಟ್ ನಲ್ಲಿ ಅನುಶ್ರೀ ಆರೋಪಿ ಎಂದು ಉಲ್ಲೇಖ ಆಗಿಲ್ಲ. ಕಿಶೋರ್ ಹೇಳಿಕೆಯಲ್ಲಷ್ಟೇ ಅನುಶ್ರೀ ಹೆಸರಿದೆ ಎಂದರು.

    ಕಿಶೋರ್ ಅಮನ್ ಮತ್ತೆ ಕರೆದು ವಿಚಾರಣೆ ನಡೆಸುವ ಅಗತ್ಯವಿಲ್ಲ. ಪ್ರಕರಣದ ಸಂಪೂರ್ಣ ತನಿಖೆ ಪೂರ್ತಿ ಮಾಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದೇವೆ. ಒಂಬತ್ತು ತಿಂಗಳ ಹಿಂದೆಯೇ ಅಂತಿಮ ವರದಿ ಸಲ್ಲಿಸಿದ್ದೇವೆ. ಈಗ ಯಾಕೆ ಈ ವಿಚಾರ ಸುದ್ದಿಯಾಯಿತು ಗೊತ್ತಿಲ್ಲ. ಅನುಶ್ರೀ ಮೇಲೆ ಬಂದ ಆರೋಪಕ್ಕೆ ಪೂರಕ ಸಾಕ್ಷಿಗಳು ಲಭ್ಯವಾಗಿಲ್ಲ. ಆರು ಜನ ಆರೋಪಿಗಳ ಮೇಲೆ ಅಂತಿಮ ವರದಿ ಸಲ್ಲಿಸಿದ್ದೇವೆ. ಐದು ಜನ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಒಬ್ಬ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. 2020 ಸೆಪ್ಟೆಂಬರ್ 19 ಪ್ರಕರಣ ದಾಖಲು ಆಗಿತ್ತು. 2020ರ ಡಿಸೆಂಬರ್ 11ರಂದು ಅಂತಿಮ ವರದಿ ಸಲ್ಲಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಡ್ರಗ್ಸ್ ಪ್ರಕರಣ ಸಂಬಂಧ ಯಾರ ಒತ್ತಡಕ್ಕೂ ಪೊಲೀಸರು ಹಿಂಜರಿಯುವುದಿಲ್ಲ: ಅರಗ ಜ್ಞಾನೇಂದ್ರ

    ಚಾರ್ಜ್ ಶೀಟ್‍ನಲ್ಲಿ ಏನಿದೆ?:
    2007-0ರಲ್ಲಿ ನಾನು ಮತ್ತು ತರುಣ್ ಇಬ್ಬರೂ ಕೂಡಿ ಅನುಶ್ರೀಯವರಿಗೆ ಡ್ಯಾನ್ಸ್ ಕೋರಿಯಾಗ್ರಾಫಿ ಮಾಡಿರುತ್ತೇವೆ. ಅನುಶ್ರೀಯವರು ಡ್ಯಾನ್ಸ್ ಕಾಂಪಿಟೇಶನ್‍ಗೆ ಪ್ರ್ಯಾಕ್ಟೀಸ್ ಮಾಡುವ ಸಮಯದಲ್ಲಿ ತರುಣ್ ಬಾಡಿಗೆ ಮನೆಯಲ್ಲಿ ತಡರಾತ್ರಿ ತನಕ ಪ್ರ್ಯಾಕ್ಟೀಸ್ ಮಾಡುತ್ತಾ ಕೆಲವು ದಿನ ಇದ್ದರು. ಕೆಲವೊಂದು ದಿನಗಳಲ್ಲಿ ನಾನು ಕೂಡ ತರುಣ್ ಜೊತೆಗೆ ಹೋಗಿದ್ದೆ. ಆ ದಿನಗಳಲ್ಲಿ ನಾವು ಮೂರು ಜನ ತರುಣ್‍ನ ಮನೆಯಲ್ಲೇ ಅಡುಗೆ ಮಾಡಿ ಊಟ ಮಾಡುವ ಸಮಯ ಮಾದಕ ವಸ್ತುಗಳಾದ ಎಕ್ಟಸಿ ಮಾತ್ರೆಗಳನ್ನು ಸೇವನೆ ಮಾಡಿರುತ್ತೇವೆ. ಕೆಲವು ದಿನಗಳಲ್ಲಿ ಅನುಶ್ರೀ ಮತ್ತು ತರುಣ್ ಇಬ್ಬರೇ ರೂಂನಲ್ಲಿ ಉಳಿದುಕೊಳ್ಳುತ್ತಿದ್ದರು.  ಇದನ್ನೂ ಓದಿ: Exclusive: ಅನುಶ್ರೀ ವಿರುದ್ಧ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸುಳ್ಳು: ಕಿಶೋರ್ ಅಮನ್ ಶೆಟ್ಟಿ

    ಅನುಶ್ರೀಯವರು ಡ್ಯಾನ್ಸ್ ಕಾಂಪಿಟೇಶನ್‍ನಲ್ಲಿ ವಿನ್ ಆಗಿದ್ದಕ್ಕೆ ನಾನು, ತರುಣ್ ಮತ್ತು ಅನುಶ್ರೀ ಬೆಂಗಳೂರಿನಲ್ಲಿ ಮಾದಕ ವಸ್ತು ಎಕ್ಟಸಿ ಮಾತ್ರೆಗಳನ್ನು ಸೇವಿಸಿ ಡ್ರಗ್ಸ್, ಡ್ರಿಂಕ್ಸ್ ಪಾರ್ಟಿ ಮಾಡಿರುತ್ತೇವೆ. ಮಾದಕ ಸೇವನೆ, ಖರೀದಿಯಲ್ಲಿ ಅನುಶ್ರೀಯವರು ಭಾಗಿಯಾಗಿರುತ್ತಾರೆ. ನಾವು ಡ್ಯಾನ್ಸ್ ಪ್ರ್ಯಾಕ್ಟೀಸ್ ಮಾಡುವ ಸಮಯ ಮತ್ತು ಅನುಶ್ರೀಯವರಿಗೆ ಕೋರಿಯಾಗ್ರಾಫಿಂಗ್ ಪ್ರ್ಯಾಕ್ಟೀಸ್ ಮಾಡುವ ಸಮಯದಲ್ಲಿ ಹಲವಾರು ಬಾರಿ ಮಾದಕ ವಸ್ತು ಎಕ್ಟಸಿ ಮಾತ್ರೆಗಳನ್ನು ಸೇವಿಸಿರುತ್ತೇವೆ. ಅನುಶ್ರೀಯವರು ಪ್ರ್ಯಾಕ್ಟೀಸ್ ಮಾಡಲು ನಮ್ಮ ರೂಂಗೆ ಬರುವಾಗ ಎಕ್ಟಸಿ ಮಾತ್ರೆಗಳನ್ನು ಖರೀದಿಸಿ ತಂದು ನಮಗೆ ನೀಡಿ ನಮ್ಮ ಜೊತೆ ಸೇವೆನೆಯನ್ನೂ ಮಾಡಿರುತ್ತಾರೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣದ ಬಗ್ಗೆ ಅಂದು ಕಣ್ಣೀರಿಟ್ಟು ಅನುಶ್ರೀ ಹೇಳಿದ್ದೇನು?

    ಡ್ಯಾನ್ಸ್ ಮಾಡಲು ಇದು ಹೆಚ್ಚು ತಾಕತ್ತು ಕೊಡುತ್ತದೆ, ಡ್ಯಾನ್ಸ್ ಮಾಡಲು ಖುಷಿ ಸಿಗುತ್ತದೆ, ಪ್ರ್ಯಾಕ್ಟೀಸ್ ಮಾಡಲು ಸುಲಭವಾಗುತ್ತದೆ ಎಂದು ನಾವೆಲ್ಲರೂ ಮಾತಾಡಿಕೊಳ್ಳುತ್ತಿದ್ದೆವು. ಡ್ರಗ್ಸ್ ಯಾರು ನೀಡುತ್ತಾರೆ ಎಂದು ಅನುಶ್ರೀಯವರಿಗೆ ನಮಗಿಂತ ಹೆಚ್ಚು ತಿಳಿದಿದೆ. ಅವರಿಗೆ ಡ್ರಗ್ಸ್ ಪೆಡ್ಲರ್‍ಗಳ ಪರಿಚಯ ಇರುತ್ತದೆ. ಅವರು ಸುಲಭವಾಗಿ ಮಾದಕ ವಸ್ತುಗಳನ್ನು ತರಿಸುತ್ತಾರೆ. ಅವರು ಹೇಗೆ ತರಿಸುತ್ತಾರೆ ಎಂದು ನನಗೆ ತಿಳಿದಿಲ್ಲ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದ್ದು, ಇದಕ್ಕೆ ಕಿಶೋರ್ ಅಮನ್ ಶೆಟ್ಟಿ ಸಹಿ ಕೂಡ ಹಾಕಿರುವ ಪ್ರತಿ ಲಭ್ಯವಾಗಿದೆ.

  • ಪೊಲೀಸ್ ಇಲಾಖೆಗೆ ಸೇರಲು ಮಂಗಳೂರಿಗರ ಹಿಂದೇಟು – ಹೊಸ ಆಫರ್ ನೀಡಿದ್ರು ಎನ್. ಶಶಿಕುಮಾರ್

    ಪೊಲೀಸ್ ಇಲಾಖೆಗೆ ಸೇರಲು ಮಂಗಳೂರಿಗರ ಹಿಂದೇಟು – ಹೊಸ ಆಫರ್ ನೀಡಿದ್ರು ಎನ್. ಶಶಿಕುಮಾರ್

    ಮಂಗಳೂರು: ದೈಹಿಕವಾಗಿ ಮತ್ತು ಬುದ್ಧಿವಂತಿಕೆಯಲ್ಲಿ ಇತರ ಜಿಲ್ಲೆಯ ಜನರಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯವರು ಒಂದು ಹೆಜ್ಜೆ ಮುಂದೆ ಎಂಬ ಅಭಿಪ್ರಾಯವಿದೆ. ಆದರೆ ಇಲ್ಲಿನ ಜನ ಪೊಲೀಸ್ ಸೇವೆಗೆ ಬರುವುದು ಮಾತ್ರ ಅತ್ಯಂತ ಕಡಿಮೆ. ಹೀಗಾಗಿ ಜಿಲ್ಲೆಯ ಜನರಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಸೂಪರ್ ಆಫರ್ ನೀಡಿದ್ದಾರೆ. ಈ ಆಫರ್ ಗೆ ಇದಿಗ ಉತ್ತಮ ಬೆಂಬಲ ಸಿಕ್ಕಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಯುವಕರು ಪೊಲೀಸ್ ಇಲಾಖೆಗೆ ಸೇರ ಬಯಸುತ್ತಿದ್ದರು. ಆದರೆ ಈಗ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಸೇರುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಹಾಗೂ ಕಾನ್‍ಸ್ಟೇಬಲ್ ಆಗಲು ಬಯಸುವ ಜಿಲ್ಲೆಯ ಯುವಜನತೆಗೆ ಎನ್.ಶಶಿಕುಮಾರ್ ಉತ್ತಮ ಅವಕಾಶವೊಂದನ್ನು ನೀಡಿದ್ದಾರೆ. ಈಗಾಗಲೇ ಪಿ.ಸಿ ಮತ್ತು ಪಿ.ಎಸ್.ಐ ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಉಚಿತವಾಗಿ ಒಂದು ತಿಂಗಳ ಕಾರ್ಯಾಗಾರ ನಡೆಸಲು ನಿರ್ಧರಿಸಿ ಅರ್ಜಿ ಆಹ್ವಾನಿಸಿದ್ದರು. ಕಮಿಷನರ್ ಕರೆಗೆ 710ಕ್ಕೂ ಅಧಿಕ ಮಂದಿ ರೆಸ್ಪಾನ್ಸ್ ಮಾಡಿದ್ದು, ಇದೀಗ ಅದರಲ್ಲಿ ಫಿಲ್ಟರ್ ಮಾಡಿ 200 ಅಭ್ಯರ್ಥಿಗಳನ್ನು ಸೆಲೆಕ್ಟ್ ಮಾಡಿ ತರಬೇತಿ ನೀಡಲಾಗುತ್ತಿದೆ.

    ಪ್ರಾರಂಭದಲ್ಲಿ 100 ಮಂದಿಗೆ ಈ ತರಬೇತಿ ಕಾರ್ಯಗಾರ ಮಾಡುವ ನಿರ್ಧಾರ ಮಾಡಲಾಗಿತ್ತು. ಆದರೆ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾದರಿಂದ ಸ್ಕ್ರೀನಿಂಗ್ ಟೆಸ್ಟ್ ಮಾಡಿ 200 ಮಂದಿಯನ್ನು ಸೆಲೆಕ್ಟ್ ಮಾಡಲಾಗಿದೆ. ಇವರಿಗೆ ನಗರದ ಸೈಂಟ್ ಅಲೋಸಿಯಸ್ ವಿದ್ಯಾಸಂಸ್ಥೆಯಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಇದರಲ್ಲಿ 100 ಅಭ್ಯರ್ಥಿಗಳಿಗೆ ಹಾಸ್ಟೆಲ್‍ಗಳಲ್ಲೇ ಇದ್ದು ತರಬೇತಿ ಪಡೆಯುವ ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಊಟದ ಸೌಲಭ್ಯದೊಂದಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಲಿಖಿತ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಯುವ ಪೊಲೀಸರಿಂದಲೇ ತರಬೇತಿ ನೀಡಲಾಗುತ್ತಿದೆ. ಇದನ್ನೂ ಓದಿ: ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!

    ಕಳೆದ 11 ವರ್ಷಗಳಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ನೇಮಕಾತಿಯಾದವರು 68 ಮಂದಿ ಮಾತ್ರ. ಹೀಗಾಗಿ ಆಯಾ ಜಿಲ್ಲೆಯವರನ್ನೇ ಪೊಲೀಸ್ ಸೇವೆಗೆ ನೇಮಕಾತಿ ಮಾಡಲು ಅಧಿಕಾರಿಗಳು ಮುಂದಾಗುತ್ತಿದ್ದಾರೆ. ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನೀನು ಮಹಿಳೆ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು – ಮಹಿಳಾ ಪತ್ರಕರ್ತೆಗೆ ಗೇಟ್‍ಪಾಸ್

  • ಪೊಲೀಸ್ ಕಮಿಷನರ್ ಮುಂದೆಯೇ ಯುವತಿಯಿಂದ ಕಾಮುಕನಿಗೆ ಪಂಚ್!

    ಪೊಲೀಸ್ ಕಮಿಷನರ್ ಮುಂದೆಯೇ ಯುವತಿಯಿಂದ ಕಾಮುಕನಿಗೆ ಪಂಚ್!

    – ದಿಟ್ಟತನ ತೋರಿದ ಯುವತಿಗೆ ಶಶಿಕುಮಾರ್ ಸನ್ಮಾನ
    – ಬಸ್ಸಿನಲ್ಲಿ ಕಿರುಕುಳ ನೀಡಿದ್ದ ಹುಸೈನ್

    ಮಂಗಳೂರು: ಬಸ್ಸಿನಲ್ಲಿ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಯುವತಿ ಕಾಮುಕನಿಗೆ ಪೊಲೀಸ್ ಕಮಿಷನರ್ ಮುಂದೆಯೇ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಜನವರಿ 14 ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ಬಸ್ಸಿನಲ್ಲಿ ಯುವತಿಗೆ ಕಾಮುಕ ದೈಹಿಕ ಕಿರುಕುಳ ನೀಡಿದ್ದ. ಈ ಸಂಬಂಧ ಆರೋಪಿ ಕಾಸರಗೋಡು ನಿವಾಸಿ ಹುಸೇನ್ (41)ನನ್ನು ನಿನ್ನೆ ಪೊಲೀಸರು ಬಂಧಿಸಿದ್ದರು. ಇಂದು ಮಂಗಳೂರು ಕಮೀಷನರ್ ಎನ್ ಶಶಿಕುಮಾರ್ ಅವರು ಆರೋಪಿ ಹಾಗೂ ಸಂತ್ರಸ್ತೆಯ ಜೊತೆ ಸುದ್ದಿಗೋಷ್ಠಿ ನಡೆಸಿದ್ದರು. ಪ್ರೆಸ್ ಮೀಟ್ ಬಳಿಕ ಯುವತಿ, ಕಮಿಷನರ್ ಮುಂದೆಯೇ ಕಾಮುಕನಿಗೆ ಕಪಾಳ ಮೋಕ್ಷ ಮಾಡಿದ್ದಾಳೆ.

    ಕಾಮುಕನ ನೀಚ ಕೃತ್ಯವನ್ನು ಯುವತಿ ಇನ್ ಸ್ಟಾ ಮೂಲಕ ಬಯಲು ಮಾಡಿದ್ದಳು. ಈ ಹಿನ್ನೆಲೆಯಲ್ಲಿ ದಿಟ್ಟತನ ಮೆರೆದ ಯುವತಿಯನ್ನು ಮಂಗಳೂರು ಕಮಿಷನರ್ ಕಚೇರಿಯಲ್ಲಿ ಶಶಿಕುಮಾರ್ ಸನ್ಮಾನಿಸಿದರು.

    ಏನಿದು ಪ್ರಕರಣ..?:
    ಜನವರಿ 14 ರಂದು ಯುವತಿ ದೇರಳಕಟ್ಟೆಯಿಂದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಯುವತಿ ಕುಳಿತಿದ್ದ ಸೀಟ್ ನಲ್ಲಿ ಕಾಮುಕ ಬಂದು ಕುಳಿತಿದ್ದಾನೆ. ಬಳಿಕ ಆತ ಯುವತಿಗೆ ದೈಹಿಕ ಕಿರುಕುಳ ನೀಡಿದ್ದಾನೆ. ತನಗಾಗುತ್ತಿರುವ ಕಿರುಕುಳದಿಂದ ಬೇಸತ್ತ ಯುವತಿ ವಿರೋಧ ವ್ಯಕ್ತಪಡಿಸಿದ್ದಾಳೆ. ಆಗ ಕಾಮುಕ ಬಸ್ಸಿನಿಂದ ಇಳಿದು ಹೋಗಿದ್ದಾನೆ. ಅಲ್ಲದೆ ಮತ್ತೊಂದು ಬಸ್ಸಿನಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪಕ್ಕದಲ್ಲಿ ಕುಳಿತು ಮತ್ತೆ ಕಿರುಕುಳ ನೀಡಿದ್ದಾನೆ.

    ಈ ವೇಳೆ ಯುವತಿ, ಕಾಮುಕನ ಫೋಟೋ ತೆಗೆದು ವೈರಲ್ ಮಾಡೋದಾಗಿ ಎಚ್ಚರಿಸಿದ್ದಳು. ಯುವತಿ ಫೋಟೋ ತೆಗೆಯುತ್ತಿದ್ದಂತೆಯೇ ಕಾಮುಕ ಕೂಡ ಫೋಟೋಗೆ ಪೋಸ್ ಕೊಟ್ಟಿದ್ದ. ಈ ಮೂಲಕ ಮತ್ತೆ ಅನುಚಿತ ವರ್ತನೆ ತೋರಿದ್ದ. ಜನರ ಎದುರೇ ಕಾಮುಕ ಹುಸೈನ್ ಕಿರುಕುಳ ನೀಡಿದರೂ ಬಸ್ಸಿನಲ್ಲಿದ್ದ ಪ್ರಯಾಣಿಕರು ಮಾತ್ರ ಸುಮ್ಮನಿದ್ದರು. ಯುವತಿ ಕಾಪಾಡುವಂತೆ ಅಂಗಲಾಚಿದರೂ ಬಸ್ ಡ್ರೈವರ್, ನಿರ್ವಾಹಕ ಸುಮ್ಮನಿದ್ದರು. ಈ ಹಿನ್ನೆಲೆಯಲ್ಲಿ ಬಸ್ ಡ್ರೈವರ್ ಮತ್ತು ನಿರ್ವಾಹಕನಿಗೆ ಪೊಲೀಸರು ಸಮನ್ಸ್ ನೀಡಿ ವಿಚಾರಣೆಗೆ ಒಳಪಡಿಸಿದರು.

    ಇತ್ತ ಕಾಮುಕನಿಗೆ ಬುದ್ಧಿ ಕಲಿಸುವ ಸಲುವಾಗಿ ಯುವತಿ, ಕಾಮುಕನ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ವಿವರ ಸಹಿತ ಹಾಕಿದ್ದಳು. ಯುವತಿಯ ಪೋಸ್ಟ್ ಆಧಾರದಲ್ಲಿ ಪೊಲೀಸರು ನಿನ್ನೆ ಕಾಮುಕ ಹುಸೈನನ್ನು ಬಂಧಿಸಿದ್ದಾರೆ. ಅಲ್ಲದೆ ಯುವತಿಯ ದಿಟ್ಟ ಕ್ರಮಕ್ಕೆ ಮಂಗಳೂರು ಕಮಿಷನರ್ ಮೆಚ್ಚುಗೆ ವ್ಯಕ್ತಪಡಿಸಿದರು.

  • ಕಾನೂನು ಪಾಲಕರ ರಕ್ಷಣೆ, ಸಮಾಜ ವಿರೋಧಿಗಳಿಗೆ ಎಚ್ಚರಿಕೆ: ಎನ್. ಶಶಿಕುಮಾರ್

    ಕಾನೂನು ಪಾಲಕರ ರಕ್ಷಣೆ, ಸಮಾಜ ವಿರೋಧಿಗಳಿಗೆ ಎಚ್ಚರಿಕೆ: ಎನ್. ಶಶಿಕುಮಾರ್

    ಮಂಗಳೂರು: ಸರ್ಕಾರ ಹಾಗೂ ಇಲಾಖೆಯ ಆಶಯದಂತೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಒತ್ತು ನೀಡುವ ಉದ್ದೇಶದಿಂದ ಕಾನೂನು ಪಾಲಕರಿಗೆ ರಕ್ಷಣೆ ನೀಡುವ ಜೊತೆಗೆ ಸಮಾಜ ವಿರೋಧಿಗಳು, ಕಾನೂನು ಮೀರಿ ವರ್ತಿಸುವವರಿಗೆ ಹಾಗೂ ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡುವರಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.

    ನಗರದ ಪ್ರೆಸ್‍ಕ್ಲಬ್‍ನಲ್ಲಿ ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ಮೀಡಿಯಾ ಹೆಲ್ತ್ ಕ್ಲಿನಿಕ್‍ಗೆ ಮರು ಚಾಲನೆ ನೀಡಿ ಬಳಿಕ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ಅಧಿಕಾರ ಸ್ವೀಕರಿಸಿದ ಎರಡು ದಿನಗಳಿಂದಲೇ ನಗರದ ಬೀಚ್, ಮೈದಾನಗಳಲ್ಲಿ ರಾತ್ರಿ ಹೊತ್ತು ಮದ್ಯಪಾನ, ಲೌಡ್ ಸ್ಪೀಕರ್ ಹಾಡು, ಗಾಂಜಾ ಸೇವನೆ ಕುರಿತಂತೆ ಕಾರ್ಯಾಚರಣೆ ನಡೆಸಿ ಹಲವರನ್ನು ವಶಕ್ಕೆ ಪಡೆದು ಜಾಗೃತಿ ಮೂಡಿಸುವ ಕೆಲಸ ಇಲಾಖೆಯಿಂದ ಮಾಡಲಾಗಿದೆ. ಇದಕ್ಕೆ ಬಹಳಷ್ಟು ಪ್ರಶಂಸೆ ವ್ಯಕ್ತವಾಗಿರುವ ಜೊತೆಗೆ ಕೆಲವರಿಂದ ಆಕ್ಷೇಪವೂ ವ್ಯಕ್ತವಾಗಿದೆ.

    ಡ್ರಗ್ಸ್ ಸೇವನೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಹಿಂದಿನ ಪ್ರಕರಣಗಳ ಆರೋಪಿಗಳ ಪರೇಡ್ ನಡೆಸಿದ ಸಂದರ್ಭವೂ ಕೆಲವೊಂದು ಆಕ್ಷೇಪಣೆ ವ್ಯಕ್ತವಾಗಿದೆ. ಕಾರ್ಯಾಚರಣೆಯ ಮೇಲೆ ಯಾರಿಗೂ ಅವಮಾನ ಮಾಡುವ ಕೆಲಸವಾಗಲಿ, ಹೊಡೆಯುವ ಕೆಲಸವಾಗಿ ಇಲಾಖೆಯಿಂದ ಆಗಿಲ್ಲ. ಮಾತ್ರವಲ್ಲದೆ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಈ ಕಾರ್ಯಾಚರಣೆಗಳು ಸಮಾಜದಲ್ಲಿ ಬದಲಾವಣೆಗೆ ಕಾರಣವಾಗಲಿದೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಿದೆ ಎಂದು ಅವರು ಹೇಳಿದರು.

    ಬೀಚ್ ಟೂರಿಸಂ ಮಂಗಳೂರಿನ ಪ್ರಮುಖ ಆಕರ್ಷಣೆ. ಆದರೆ ರಾತ್ರಿ ಹೊತ್ತಿನಲ್ಲಿ ಬೀಚ್‍ನಿಂದ ಸುಮಾರು ಒಂದರಿಂದ ಒಂದೂವರೆ ಕಿ.ಮೀ. ದೂರದ ಕತ್ತಲು ಪ್ರದೇಶದಲ್ಲಿ ಮದ್ಯಪಾನ ಮಾಡುವುದು ಅಥವಾ ಹೆಣ್ಣು ಮಕ್ಕಳೊಂದಿಗೆ ಇರುವುದು ಸುರಕ್ಷತೆಯ ದೃಷ್ಟಿಯಿಂದಲೂ ಅಪಾಯಕಾರಿ. ರೈಲು ನಿಲ್ದಾಣಗಳಲ್ಲಿ ನಿರಾಶ್ರಿತರು ಇರುವುದು ಸಹಜ. ಆದರೆ ರೈಲು ಹಳಿಗಳಲ್ಲಿ ರಾತ್ರಿ ಹೊತ್ತು ತಿರುಗಾಡುವುದು, ಮಾದಕ ದ್ರವ್ಯಗಳನ್ನು ಬಳಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

    ನಗರದಲ್ಲಿ ಮಾದಕ ದ್ರವ್ಯಗಳ ಸಮಸ್ಯೆ ಹೆಚ್ಚಿದೆ. ಇದರಿಂದ ಯುವ ಸಮೂಹ ದಿಕ್ಕುತಪ್ಪುವ ಸಾಧ್ಯತೆ ಇರುವುದರಿಂದ ಅದನ್ನು ಬೇರು ಸಹಿತ ಕಿತ್ತು ಹಾಕುವ ಪ್ರಯತ್ನ ಮಾಡಲಾಗುವುದು. ಮಂಗಳೂರಿನಲ್ಲಿ ಪ್ರತಿನಿತ್ಯ ಅಲ್ಲಲ್ಲಿ ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಜನ ರಾತ್ರಿ ಹೊತ್ತಿನಲ್ಲೂ ತಿರುಗಾಡುತ್ತಿರುತ್ತಾರೆ. ಅವರ ಸುರಕ್ಷತೆಯ ದೃಷ್ಟಿಯಿಂದ ಈ ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಇಲಾಖೆಯಿಂದ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.