Tag: ಎನ್.ಡಿ.ಆರ್.ಎಫ್

  • ಮಾಂಜ್ರಾನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

    ಮಾಂಜ್ರಾನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

    ಬೀದರ್: ಸ್ನೇಹಿತರ ಜೊತೆ ಈಜಲು ಹೋಗಿ ಮಾಂಜ್ರಾನದಿ ಪಾಲಾಗಿದ್ದ ಯುವಕನ ಮೃತದೇಹ ತಡರಾತ್ರಿ ಪತ್ತೆಯಾಗಿದೆ.

    ಪರಮೇಶ್ವರ್ ಬೋರಾಳೆ (22) ಈಜಲು ಹೋಗಿದ್ದ ಯುವಕ. ನೀರಿನಲ್ಲಿ ಮುಳಗಿ ನಿನ್ನೆ ನಾಪತ್ತೆಯಾಗಿದ್ದು ತಡರಾತ್ರಿ ಮೃತದೇಹ ಪತ್ತೆಯಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ನುರಿತ ಈಜುಗಾರರು ಹಲವು ಗಂಟೆಗಳಿಂದ ಸತತವಾಗಿ ಶೋಧ ಕಾರ್ಯ ಮಾಡಿದ್ದು, ತಡರಾತ್ರಿ ಯುವಕನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಹೆಸರಿನಲ್ಲಿ ಅಶ್ಲೀಲ ವೀಡಿಯೋ ಪೋಸ್ಟ್: ದೂರು ದಾಖಲು

    ಜಿಲ್ಲೆಯ ಭಾಲ್ಕಿ ತಾಲೂಕಿನ ತಳವಾಡ ಎಂ ಗ್ರಾಮದಲ್ಲಿ ಘಟನೆ ನಡೆದಿದೆ. ಒಂದು ವೇಳೆ ಮೃತದೇಹ ಸಿಗದೆ ಇದ್ದಿದ್ದರೆ, ಯುವಕನ ಹುಡುಕಾಟಕ್ಕೆ ಇಂದು ಎನ್.ಡಿ.ಆರ್.ಎಫ್ ತಂಡ ಭಾಲ್ಕಿಗೆ ಬರುವ ಸಾಧ್ಯತೆ ಇತ್ತು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಹೆಸರಿನಲ್ಲಿ ಅಶ್ಲೀಲ ವೀಡಿಯೋ ಪೋಸ್ಟ್: ದೂರು ದಾಖಲು

    ಈ ಕುರಿತು ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸತತ ಶೋಧ ಕಾರ್ಯ ಮಾಡಿ ಯುವಕನ ಮೃತದೇಹ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ – ಕಾರ್ಯಾಚರಣೆ ಸ್ಥಗಿತ?

    ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ – ಕಾರ್ಯಾಚರಣೆ ಸ್ಥಗಿತ?

    ಮಡಿಕೇರಿ: ಕೊಡಗಿನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿದು ಇಬ್ಬರು ನಾಪತ್ತೆಯಾಗಿ 15 ದಿನಗಳೇ ಕಳೆದಿವೆ. ಈ ಇಬ್ಬರ ಹುಡುಕಾಟಕ್ಕಾಗಿ ಎನ್.ಡಿ.ಆರ್.ಎಫ್, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸೇರಿದ್ದಂತೆ 100ಕ್ಕೂ ಹೆಚ್ಚು ಜನರು ನಿರಂತರ ಹುಡುಕಾಟ ನಡೆಸುತ್ತಲೇ ಇದ್ದಾರೆ.

    ಭೂಕುಸಿತದಲ್ಲಿ ಕಣ್ಮರೆಯಾಗಿದ್ದ ಕೇರಳದ ಶ್ರೀನಿವಾಸ್ ಮತ್ತು ನಾರಾಯಣ ಆಚಾರ್ ಅವರ ಪತ್ನಿ ಶಾಂತಾ ಈ ಇಬ್ಬರು ಇನ್ನೂ ಪತ್ತೆಯಾಗಿಲ್ಲ. ಹುಡುಕಾಟ ನಡೆಸಿರುವ ಎನ್.ಡಿ.ಆರ್.ಎಫ್ ತಂಡದ ಕಮಾಂಡರ್ ಇದುವರೆಗೆ ಎಷ್ಟು ಸಾಧ್ಯವೋ ಅಷ್ಟು ಹುಡುಕಿದ್ದೇವೆ. ಮಳೆ ಕೂಡ ಬಿಟ್ಟು ಬಿಟ್ಟು ಬರುತ್ತಲೇ ಇದ್ದು, ಭಾರೀ ಪ್ರಮಾಣದ ಮಂಜು ಸುರಿಯುತ್ತಿದೆ. ಹೀಗಾಗಿ ಇನ್ನೂ ಹುಡುಕಾಡುವುದು ಸವಾಲಿನ ಕೆಲಸ ಎನ್ನುತ್ತಿದ್ದಾರೆ.

    ಒಂದು ವೇಳೆ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಲ್ಲಿ ಕಳೆದ ಎರಡು ವರ್ಷಗಳಲ್ಲಿ ಭೂಕುಸಿತದಲ್ಲಿ ಕಣ್ಮರೆ ಆಗಿರುವವರನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ ರೀತಿಯಲ್ಲಿ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗುವುದು ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಬ್ರಹ್ಮಗಿರಿ ಬೆಟ್ಟ ಕುಸಿದು ಐದು ಜನರು ಕಣ್ಮರೆಯಾಗಿದ್ದರು. ಬಳಿಕ ಅರ್ಚಕ ನಾರಾಯಣ ಆಚಾರ್ ಅವರ ಸಹೋದರ ಆನಂದತೀರ್ಥ ಮತ್ತು ಸಹಾಯಕ ಅರ್ಚಕ ರವಿಕಿರಣ್ ಅವರ ಮೃತದೇಹಗಳು ಪತ್ತೆಯಾಗಿದ್ದವು. ಇನ್ನುಳಿದ ಇಬ್ಬರಿಗಾಗಿ ರಕ್ಷಣಾ ತಂಡಗಳು ನಿರಂತರ ಹುಡುಕಾಟ ನಡೆಸುತ್ತಿದ್ದವು. ಅದರೆ ಇಂದಿಗೂ ಮೃತ ದೇಹ ದೊರಕ್ಕಿಲ್ಲ. ಹೀಗಾಗಿ ಬಹುತೇಕ ಇಂದು ಸಂಜೆಯಿಂದ ಕಾರ್ಯಚರಣೆ ಸ್ಥಗಿತ ಮಾಡುವುದಾಗಿ ಎನ್.ಡಿ.ಆರ್.ಎಫ್ ತಿಳಿಸಿದೆ.

  • ಪ್ರಾಣಭಯ ಬಿಟ್ಟು ಪ್ರವಾಹದಲ್ಲೂ ನದಿ ದಾಟುತ್ತಿದ್ದಾರೆ ಜನ

    ಪ್ರಾಣಭಯ ಬಿಟ್ಟು ಪ್ರವಾಹದಲ್ಲೂ ನದಿ ದಾಟುತ್ತಿದ್ದಾರೆ ಜನ

    ರಾಯಚೂರು: ಕೃಷ್ಣಾ ನದಿಯಲ್ಲಿ 9.08 ಲಕ್ಷ ಕ್ಯೂಸೆಕ್ ನೀರು ಹರಿವಿನ ಪ್ರವಾಹದಲ್ಲೂ ಜನ ಪ್ರಾಣ ಭಯ ಬಿಟ್ಟು ದಾಟುತ್ತಿದ್ದಾರೆ.

    ರಾಯಚೂರಿನ ಕುರ್ವಕುಲ, ಕುರ್ವಕುರ್ದ ನಡುಗಡ್ಡೆ ಜನ ಆಹಾರ ಸಾಮಾಗ್ರಿ, ಔಷಧಿಗಾಗಿ ನಡುಗಡ್ಡೆಯಿಂದ ಹೊರ ಬರುತ್ತಿದ್ದಾರೆ. ಅಧಿಕಾರಿಗಳ ಕಣ್ಣು ತಪ್ಪಿಸಿ ಅರಗೋಲಿನಲ್ಲಿ ಓಡಾಟ ನಡೆಸಿದ್ದಾರೆ. ಪ್ರವಾಹವನ್ನೂ ಲೆಕ್ಕಿಸದೇ ಆತ್ಕೂರು, ಡಿ.ರಾಂಪುರಕ್ಕೆ ಜನ ಬಂದು ಹೋಗುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ.

    ಎನ್.ಡಿ.ಆರ್.ಎಫ್ ಹಾಗೂ ಪೊಲೀಸರು ನಮ್ಮನ್ನು ಓಡಾಡಲು ಬಿಡುತ್ತಿಲ್ಲ ಎಂದು ಜನರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶೇಷ ಬೋಟ್ ಸೌಲಭ್ಯವನ್ನೂ ಮಾಡುತ್ತಿಲ್ಲ, 15 ದಿನಗಳಿಂದ ಹೊರ ಬಂದವರು ನಡುಗಡ್ಡೆಗೆ ಹೋಗಿಲ್ಲ. ಜಿಲ್ಲಾಧಿಕಾರಿ ಆದೇಶ ಹಿನ್ನೆಲೆಯಿಂದಾಗಿ ನದಿಯಲ್ಲಿ ಅರಗೋಲು ಓಡಾಟ ನಿಷೇಧ ಮಾಡಲಾಗಿದೆ. ಆದರೂ ನಮ್ಮನ್ನು ಹೋಗಲು ಬಿಡಿ ಎಂದು ಜನ ಪಟ್ಟುಹಿಡಿದಿದ್ದಾರೆ.

    ಇಷ್ಟು ನೀರಲ್ಲಿ ಹಿಂದೆಲ್ಲ ಓಡಾಡಿದ್ದೇವೆ ಎಂದು ಜನರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಡುಗಡ್ಡೆಯಿಂದ ಹೊರಬಂದವರು ಮರಳಿ ಹೋಗಲು ಪರದಾಡುತ್ತಿದ್ದಾರೆ. ಎರಡೂ ನಡುಗಡ್ಡೆಗಳು ಸೇರಿ 180 ಮನೆಗಳಿದ್ದು ಸುಮಾರು 2,100 ಮಂದಿ ವಾಸವಾಗಿದ್ದಾರೆ.

  • ಮಹಾಮಳೆಗೆ ತತ್ತರಿಸಿದ ಉತ್ತರ ಕರ್ನಾಟಕ- ಲಾರಿ ಕೆಳಗೆ ರಕ್ಷಣೆ ಪಡೆದ ಜನ

    ಮಹಾಮಳೆಗೆ ತತ್ತರಿಸಿದ ಉತ್ತರ ಕರ್ನಾಟಕ- ಲಾರಿ ಕೆಳಗೆ ರಕ್ಷಣೆ ಪಡೆದ ಜನ

    ಬೆಳಗಾವಿ: ಮಹಾಮಳೆಗೆ ಉತ್ತರ ಕರ್ನಾಟಕ ಅಕ್ಷರಶಃ ತತ್ತರಿಸಿ ಹೋಗಿದೆ. ಬಿಡದೆ ಸುರಿಯುತ್ತಿರುವ ಮಳೆಯಿಂದ ರಕ್ಷಣೆ ಪಡೆಯಲು ಜನರು ನಿಂತಿರುವ ಲಾರಿ ಕೆಳಗೆ ಕಳಿತುಕೊಳ್ಳುವ ಪರಿಸ್ಥಿತಿ ಬಂದಿದೆ.

    ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಎನ್.ಡಿ.ಆರ್.ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ) ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ 10ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಿದ್ದಾರೆ. ಇದರಲ್ಲಿ ಪುಟ್ಟ ಕಂದಮ್ಮಗಳು ಇದ್ದು, ಮಕ್ಕಳ ಜೊತೆ ದಡ ಸೇರಿದ ತಾಯಂದಿರು ಕಣ್ಣೀರು ಹಾಕಿದ್ದಾರೆ.

    ಕೃಷ್ಣೆಯ ಆರ್ಭಟಕ್ಕೆ ಕೇವಲ ಮನುಷ್ಯ ಸಂಕುಲ ಮಾತ್ರ ನಲುಗಿ ಹೋಗಿಲ್ಲ. ಸಾಕಷ್ಟು ಮೂಕ ಪ್ರಾಣಿಗಳು ಕೂಡ ನೆರೆಯಲ್ಲಿ ತಮ್ಮ ನೆಲೆ ಕಂಡುಕೊಳ್ಳಲು ಹರಸಾಹಸ ಪಡುತ್ತಿವೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ಪ್ರವಾಹದಲ್ಲಿ ಸಿಲುಕಿ ಕಂಗಾಲಾಗಿ ಪ್ರಾಣ ಕಳೆದುಕೊಳ್ಳುವ ಭಯದಲ್ಲಿದ್ದ ಮೊಲವೊಂದನ್ನು ಯುವಕರು ರಕ್ಷಿಸಿ ಅಭಯ ನೀಡಿದ್ದಾರೆ.

    ಉತ್ತರ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚಾರಿ ರಸ್ತೆಗಳು ಸಾವಿಗೆ ಆಹ್ವಾನ ನೀಡುತ್ತಿವೆ. ಕಳೆದ 15 ದಿನಗಳಿಂದ ಸುರಿಯುತ್ತಿರುವ ಆಶ್ಲೇಷ ಮಳೆಯ ಹೊಡೆತಕ್ಕೆ, ರಸ್ತೆಗಳ ಅವಷೇಶಗಳು ಮಾತ್ರ ಉಳಿದುಕೊಂಡಿವೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಂಚರಿಸುವಾಗ ರಸ್ತೆಗಳ ಸ್ಥಿತಿ-ಗತಿ ಬಗ್ಗೆ ಮಾಹಿತಿ ಪಡೆಯದೆ ಮುಂದೆ ಸಾಗಬೇಡಿ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

  • ನಾರಾಯಣಪುರ ಡ್ಯಾಂನಿಂದ ನದಿಗೆ ನೀರು – ಆಹಾರಕ್ಕಾಗಿ ಗ್ರಾಮಸ್ಥರ ಪರದಾಟ

    ನಾರಾಯಣಪುರ ಡ್ಯಾಂನಿಂದ ನದಿಗೆ ನೀರು – ಆಹಾರಕ್ಕಾಗಿ ಗ್ರಾಮಸ್ಥರ ಪರದಾಟ

    ರಾಯಚೂರು: ನಾರಾಯಣಪುರ ಜಲಾಶಯದಿಂದ ನದಿಗೆ ಹೆಚ್ಚು ನೀರು ಬಿಟ್ಟ ಹಿನ್ನೆಲೆ ರಾಯಚೂರಿನ ನಡುಗಡ್ಡೆಗಳ ಜನ ಆಹಾರ ಪದಾರ್ಥಗಳಿಗಾಗಿ ನದಿ ದಾಟಲು ಆಗದೆ ಪರದಾಡುತ್ತಿದ್ದಾರೆ.

    ನದಿಯಲ್ಲಿ ನೀರು ಹೆಚ್ಚಾಗುತ್ತಿದ್ದರೂ, ಅಗತ್ಯ ವಸ್ತುಗಳಿಗಾಗಿ ಕುರ್ವಕುರ್ದ ಮತ್ತು ಕುರ್ವಕುಲ ನಡುಗಡ್ಡೆಗಳ ಜನ ಅರಗೋಲಿನಲ್ಲೇ ನದಿ ಪಕ್ಕದ ಡೊಂಗರಾಂಪುರಕ್ಕೆ ಬರುತ್ತಿದ್ದಾರೆ. ಜಿಲ್ಲಾಡಳಿತ ಡಂಗೂರ ಸಾರುವ ಮೂಲಕ ಜನರನ್ನು ಶಿಫ್ಟ್ ಆಗುವಂತೆ ಸೂಚನೆ ನೀಡಿತ್ತು. ಸ್ಥಳಾಂತರಗೊಳ್ಳಲು ಒಪ್ಪದ ಗ್ರಾಮಸ್ಥರು ತೆಪ್ಪದಲ್ಲೇ ಓಡಾಡುತ್ತಿದ್ದಾರೆ.

    ಜೀವ ರಕ್ಷಕ ಜಾಕೆಟ್‍ಗಳನ್ನು ನೀಡಿ ಗ್ರಾಮಸ್ಥರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ. ನಡುಗಡ್ಡೆಗಳ ಜನರ ಸುರಕ್ಷತೆಗಾಗಿ ಎನ್.ಡಿ.ಆರ್.ಎಫ್ ತಂಡ ಸ್ಥಳದ ವೀಕ್ಷಣೆಯನ್ನೂ ನಡೆಸಿದೆ. ಇನ್ನೂ ಕುರ್ವಕುಲ ದತ್ತಾತ್ರೇಯ ಪೀಠಕ್ಕೆ ಭಕ್ತರು ಅರಗೋಲಿನಲ್ಲೇ ಬಂದು ಹೋಗುತ್ತಿದ್ದಾರೆ. ಭಕ್ತರು ಸೆಫ್ಟಿ ಜಾಕೆಟ್ ಹಾಕಿಕೊಂಡು ಪೊಲೀಸ್ ಭದ್ರತೆಯಲ್ಲಿ ದೇವರ ದರ್ಶನ ಪಡೆದು ಹೋಗುತ್ತಿದ್ದಾರೆ. ನದಿಯಲ್ಲಿ ನೀರು ಹೆಚ್ಚಾಗಿರುವುದರಿಂದ ಬೋಟ್ ವ್ಯವಸ್ಥೆ ಮಾಡಬೇಕು ಎಂದು ನಡುಗಡ್ಡೆಗಳ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.