Tag: ಎನ್.ಎಚ್ ಶಿವಶಂಕರರೆಡ್ಡಿ

  • ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ

    ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ

    – ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲು ಮಾಡುತ್ತೇನೆ
    – ನೀವು ಸಾಚಾ ಆಗಿದ್ರೆ ನ್ಯಾಯಾಲಯಕ್ಕೆ ಹೋಗಿದ್ದು ಯಾಕೆ?

    ಚಿಕ್ಕಬಳ್ಳಾಪುರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಡಿಸಿಸಿ ಬ್ಯಾಂಕ್‍ನ ಬ್ರಹ್ಮಾಂಡ ಭ್ರಷ್ಟಾಚಾರವನ್ನ ಬಯಲಿಗೆ ಎಳೆಯುತ್ತೇನೆ ಎಂದು ಪರೋಕ್ಷವಾಗಿ ಜೈಲಿಗೆ ಹಾಕಿಸೋವರೆಗೂ ನಾನು ವಿರಮಿಸೋದಿಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸವಾಲು ಹಾಕಿದ್ದಾರೆ.

    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜರಬಂಡಹಳ್ಳಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ಸಾಲ ವಿತರಣಾ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್‍ನ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಮಹಾಭಾರತದಂತಹ ಪುಸ್ತಕ ಬರೆಯಬಹದು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಡಿಸಿಸಿ ಬ್ಯಾಂಕ್ ರಿಂಗ್ ಮಾಸ್ಟರ್ ಆಗಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದೇಗೌಡ ಕೇವಲ ಆಕ್ಟರ್ ಅಷ್ಟೇ. ಶ್ರೀನಿವಾಸಗೌಡರಿಗೂ ಡೈರೆಕ್ಷನ್ ಮಾಡೋಕೆ ಗೊತ್ತಿಲ್ಲ. ಡೈರೆಕ್ಟರ್ ಪ್ರೊಡ್ಯೂಸರ್ ಎಲ್ಲ ರಮೇಶ್ ಕುಮಾರ್ ಎಂದು ಆರೋಪಿಸಿದರು. ಇದನ್ನೂ ಓದಿ:  ಎರಡು ಕ್ಷೇತ್ರಗಳಲ್ಲಿ ಹೆಚ್ಚಿನ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ: ಸಿಎಂ

    ಯಾರೇ ಬಂದ್ರೂ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಕೋಚಿಮುಲ್) ವಿಭಜನೆ ಮಾಡೇ ಮಾಡ್ತೇನೆ. ರಮೇಶ್ ಕುಮಾರ್, ಗೌರಿಬಿದನೂರು ಶಾಸಕ ಹಾಗೂ ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅಂತಹ 100 ಜನ ಬಂದರೂ ನಾನು ಬಿಡಲ್ಲ, ಮಾಡೇ ಮಾಡ್ತೇನೆ. ಇದು ನನ್ನ ಘೋಷಣೆ ಎಂದು ಪ್ರಕಟಿಸಿದರು.

    ಡಿಸಿಸಿ ಬ್ಯಾಂಕ್ ಮೂಲಕ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ರಮೇಶ್ ಕುಮಾರ್ ಯತ್ನಿಸುತ್ತಿದ್ದು, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ಎಂಎಲ್‍ಎಗಳು ಅವರ ಮಾತು ಕೇಳಬೇಕು ಅನ್ನೋದು ಅವರ ಆಸೆ. ಶ್ರೀನಿವಾಸಗೌಡರ ತಲೆ ಕೆಡಿಸಿ ದಳದಿಂದ ಕಾಂಗ್ರೆಸ್ ಗೆ ಕರೆತರುತ್ತಿದ್ದಾರೆ. ಈ ಮೊದಲು ಕಾಂಗ್ರೆಸ್ ನಲ್ಲಿದ್ದವರು ರಮೇಶ್ ಕುಮಾರ್ ಅವರಿಂದಲೇ ದಳಕ್ಕೆ ಹೋಗಿದ್ದವರು. ಈಗ ಮತ್ತೆ ಕಾಂಗ್ರೆಸ್ ಗೆ ಬಂದು ಮಕ್ಮಲ್ ಟೋಪಿ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

    ಡಿಸಿಸಿ ಬ್ಯಾಂಕ್ ನಿಂದ ಕೆಜಿಎಫ್, ಶ್ರೀನಿವಾಸಪುರದಲ್ಲಿ 400-500 ಕೋಟಿ ರೂ. ಸಾಲ ಕೊಡ್ತಾರೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆ ಅವರು ಏನು ಮಾಡಿದ್ರು? ಸಹಕಾರ ಕ್ಷೇತ್ರ ಸರ್ವರಿಗೂ ಸಮಪಾಲು ಸಮಬಾಳು. ಎಲ್ಲರಿಗೂ ಕೊಡಲು ಇರೋದು. ಆದರೆ ಡಿಸಿಸಿ ಬ್ಯಾಂಕನ್ನು ರಾಜಕೀಯ ಬೆರೆಸಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್ ನ್ನ ರಾಜಕೀಯ ವಾಗಿ ದುರ್ಬಳಕೆ ಮಾಡಿಕೊಳ್ಳೋದ್ರಲ್ಲಿ ಮೊದಲ ಬ್ಯಾಂಕ್ ಆಗಿದೆ ಎಂದು ಟೀಕಿಸಿದರು.

    ಪಾರದರ್ಶಕ ತನಿಖೆ ಆಗಬೇಕು

    ನಾನು ಡಿಸಿಸಿ ಬ್ಯಾಂಕ್ ನ ಅವ್ಯವಹಾರಗಳ ಬಗ್ಗೆ ಪಾರದರ್ಶಕ ತನಿಖೆ ಆಗಬೇಕು ಎಂದು ಅಗ್ರಹಿಸಿದ್ದೇನೆ. ಆದರೆ ನ್ಯಾಯಾಲಯಕ್ಕೆ ಹೋಗಿ ತನಿಖೆ ಬೇಡ ಅಂತ ತಡೆಯಾಜ್ಞೆ ತಂದಿದ್ದಾರೆ. ಸತ್ಯ ಹರಿಶ್ಚಂದ್ರ ಆಗಿದ್ರೆ ಯಾಕೆ ತಡೆಯಾಜ್ಞೆ ತಂದ್ರು? ಇದರಲ್ಲಿ ಗೊತ್ತಾಗುದಿಲ್ವೇ ಕಳ್ಳ ಯಾರು ಅಂತ? ನೀವು ಸಾಚಾ ಆಗಿದ್ರೆ ನ್ಯಾಯಾಲಯಕ್ಕೆ ಯಾಕೆ ಹೋಗ್ತಿದ್ರೀ ಎಂದು ಪ್ರಶ್ನೆಗಳನ್ನು ಕೇಳಿದರು. ಇದನ್ನೂ ಓದಿ: ಉತ್ತರಾಖಂಡ್ ಪ್ರವಾಹಪೀಡಿತ ಭಾಗದಲ್ಲಿ 10 ಕನ್ನಡಿಗರಿಗೆ ಸಂಕಷ್ಟ

    ಸತ್ಯ ಆಚೆ ಬಂದರೆ ಜೈಲಿಗೆ ಹೋಗ್ತೀರಿ ಎಂದು ನಿಮಗೆ ಗೊತ್ತಿದೆ. ಅದಕ್ಕೆ ತಡೆಯಾಜ್ಞೆ ತಂದಿದ್ದೀರಿ. ಆದರೆ ನಾನು ಬಿಡೋದಿಲ್ಲ ತಿಳ್ಳೊಳ್ಳಿ, ಸುಧಾಕರ್ ಬಿಡೋದಿಲ್ಲ. ನಿಮ್ಮ ಅನಿಷ್ಟ ಭ್ರಷ್ಟಾಚಾರದ ಕೂಪವನ್ನು ಹೊರೆಗೆ ಎಳೆಯೋವರೆಗೂ ನಾನು ಬಿಡೋದಿಲ್ಲ. ನಾನು ವಿರಮಿಸೋದಿಲ್ಲ ಎಂದು ಸವಾಲು ಹಾಕಿದ್ದಾರೆ.

    ರಮೇಶ್ ಕುಮಾರ್ ಭ್ರಷ್ಟಾಚಾರಕ್ಕೆ ಸಹಕಾರ ಇಲಾಖೆಯ ಅಧಿಕಾರಿಗಳು ಸಹ ಸಾಥ್ ನೀಡಿದ್ದು, ತನಿಖೆಯಾಗಲಿ ಎಂದು ನಾನು ಸಿಎಂ ಬೊಮ್ಮಾಯಿ ಹಾಗೂ ಸಹಕಾರ ಇಲಾಖೆ ಸಚಿವ ಎಸ್.ಟಿ.ಸೋಮಶೇಖರ್ ಬಳಿ ಒತ್ತಾಯಿಸಿದ್ದೇನೆ ಎಂದರು.

  • ಮಾಜಿ ಮಂತ್ರಿ ಎನ್.ಎಚ್ ಶಿವಶಂಕರರೆಡ್ಡಿ ವಿರುದ್ಧ ನಿಂದನೆ ಆರೋಪ -ಆಡಿಯೋ ವೈರಲ್

    ಮಾಜಿ ಮಂತ್ರಿ ಎನ್.ಎಚ್ ಶಿವಶಂಕರರೆಡ್ಡಿ ವಿರುದ್ಧ ನಿಂದನೆ ಆರೋಪ -ಆಡಿಯೋ ವೈರಲ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಹಾಲಿ ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಮಂತ್ರಿ ಎನ್.ಎಚ್.ಶಿವಶಂಕರರೆಡ್ಡಿ ಅವರದ್ದು ಎನ್ನಲಾದ ಆಡಿಯೋವೊಂದು ಈಗ ಜಿಲ್ಲೆಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾಸಕರ ಭಾಷೆ ಬಳಕೆಯ ರೀತಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ.

    ಗೌರಿಬಿದನೂರು ತಾಲೂಕಿನ ಮೇಳ್ಯ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ನರಸಿಂಹಮೂರ್ತಿ ಅವರಿಗೆ ಕರೆ ಮಾಡಿರುವ ಶಾಸಕ ಎನ್.ಎಚ್ ಶಿವಶಂಕರರೆಡ್ಡಿ ಸಂಘದ ನಿರ್ಣಯವೊಂದಕ್ಕೆ ಸಹಿ ಹಾಕುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ತನ್ನೊಂದಿಗೆ ಶಾಸಕರೇ ಮಾತಾಡುತ್ತಿದ್ದಾರೆಂದು ಅರಿಯದ ನರಸಿಂಹಮೂರ್ತಿ, ಅವರ ಮಾತಿಗೆ ಒಪ್ಪದೇ ತಿರುಗಿ ಬಿದ್ದಿದ್ದಾರೆ. ಕಾನೂನಿನಂತೆ ಸಭೆ ಸೇರಿ ಕೈಗೊಳ್ಳುವ ನಿರ್ಣಯಕ್ಕಷ್ಟೇ ತಾನು ಸಹಿ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ಶಿವಶಂಕರರೆಡ್ಡಿ ಅವಾಚ್ಯ ಶಬ್ದಗಳಿಂದ ಅವರನ್ನು ನಿಂದಿಸಿ ಸಹಿ ಹಾಕುವಂತೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದನ್ನೂ ಓದಿ: ಬೊಮ್ಮಾಯಿ ಆರ್‌ಎಸ್‍ಎಸ್‍ನವರು ಅಲ್ಲ: ಸಿದ್ದರಾಮಯ್ಯ

    ಯಾವುದಕ್ಕೆ ಸಹಿ?

    ಇಡೀ ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳಲ್ಲಿ ಇದೀಗ ಚಾಲ್ತಿಯಲ್ಲಿರುವ ವಿಷಯವೆಂದರೆ ಕೋಚಿಮುಲ್ ಇಬ್ಭಾಗದ ವಿಷಯ. ಇದೇ ವಿಷಯವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ರಾಜಕೀಯ ಅಜೆಂಡಾವನ್ನಾಗಿ ಮಾಡಿಕೊಂಡಿವೆ. ಸಂಘಗಳು ಸಾಮಾನ್ಯ ಸಭೆಯಲ್ಲಿ ಈ ಕುರಿತು, ತಮ್ಮ ಸಂಘವು ಕೋಚಿಮುಲ್ ವಿಭಜನೆಗೆ ವಿರೋಧ ವ್ಯಕ್ತಪಡಿಸಿ, ಹಾಲು ಉತ್ಪಾದಕ ಸಂಘವು ಉಳಿಯುವ ಬಗ್ಗೆ ಒಲವು ವ್ಯಕ್ತಪಡಿಸಿ ನಿರ್ಣಯ ಕೈಗೊಂಡಂತೆ ಸಹಿ ಹಾಕಲು ಶಾಸಕರು ಒತ್ತಡ ಹೇರಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಕಾರ್ಯದರ್ಶಿ ನರಸಿಂಹಮೂರ್ತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೇ ಶಾಸಕ ಶಿವಶಂಕರರೆಡ್ಡಿ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.

    ಆಡಿಯೋ ಕಳವು!

    ತನ್ನ ಸ್ನೇಹಿತರ ಬಳಿ ಮೊಬೈಲ್ ನೀಡಿದ್ದಾಗ ತನಗೆ ತಿಳಿಯದಂತೆ ನನ್ನ ಮೊಬೈಲ್‍ನಲ್ಲಿದ್ದ ಆಡಿಯೋವನ್ನು ಕಳುವು ಮಾಡಿದ್ದಾರೆ. ತನ್ನ ಹಾಗೂ ಶಾಸಕರ ಸಂಭಾಷಣೆಯ ಆಡಿಯೋವನ್ನು ತನಗಾಗದವರು ಯಾರೋ ಎಡಿಟ್ ಮಾಡಿ ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ನಡಾವಳಿಗೆ ಸಹಿ ಹಾಕುವಂತೆ ಸ್ವತಃ ಶಾಸಕರೇ ಒತ್ತಡ ಹೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಡಿಯೋವನ್ನು ಎಡಿಟ್ ಮಾಡಿ ಹರಿ ಬಿಡಲಾಗಿದೆ ಎಂದು ನರಸಿಂಹಮೂರ್ತಿ ತಿಳಿಸಿದ್ದಾರೆ.

    ತನಗೂ ಶಾಸಕರಿಗೂ 20 ವರ್ಷಗಳ ಪರಿಚಯವಿದ್ದು, ತಾನು ಇದುವರೆಗೂ ಸಂಘದ ಕಾರ್ಯಗಳಲ್ಲಿ ನಿಯಮಬದ್ಧವಾಗಿ ವಿಧೇಯನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಶಾಸಕರು ತನ್ನ ಆಡಿಯೋ ಸಂಭಾಷಣೆಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ:  ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್‍ಡಿಕೆ ಟ್ವೀಟ್ ವಾರ್

    ಈ ಕುರಿತು ಶಾಸಕರು ಇದುವರೆಗೆ ಯಾವುದೇ ಪ್ರತಿಕ್ರಿಯೆಗೆ ನೀಡುತ್ತಿಲ್ಲ. ಆದರೆ ಆಡಿಯೋ ಮಾತ್ರ ಸಖತ್ ವೈರಲ್ ಆಗಿ ಪರ ವಿರೋಧದ ಚರ್ಚೆಗೆ ಗ್ರಾಸವಾಗುತ್ತಿದೆ.

  • ಮಂಚೇನಹಳ್ಳಿ ತಾಲೂಕಿಗೆ ಗೌರಿಬಿದನೂರಿನ ಹಳ್ಳಿಗಳನ್ನ ಸೇರಿಸಿದ್ರೆ ರಕ್ತಕ್ರಾಂತಿ ಆಗುತ್ತೆ: ಶಿವಶಂಕರರೆಡ್ಡಿ

    ಮಂಚೇನಹಳ್ಳಿ ತಾಲೂಕಿಗೆ ಗೌರಿಬಿದನೂರಿನ ಹಳ್ಳಿಗಳನ್ನ ಸೇರಿಸಿದ್ರೆ ರಕ್ತಕ್ರಾಂತಿ ಆಗುತ್ತೆ: ಶಿವಶಂಕರರೆಡ್ಡಿ

    – ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಮಾಜಿ ಸಚಿವರು

    ಚಿಕ್ಕಬಳ್ಳಾಪುರ: ರಾಜ್ಯಸರ್ಕಾರ ಘೋಷಣೆ ಮಾಡಿರುವ ನೂತನ ಮಂಚೇನಹಳ್ಳಿ ತಾಲೂಕಿಗೆ ಗೌರಿಬಿದನೂರಿನ ಹಳ್ಳಿಗಳನ್ನು ಸೇರಿಸಿದರೆ ಸ್ವಾತಂತ್ರ್ಯ ನಂತರ ಭಾರತ-ಪಾಕಿಸ್ತಾನ ವಿಭಜನೆ ಸಮಯದಲ್ಲಾದ ರೀತಿಯಲ್ಲೇ ರಕ್ತಕ್ರಾಂತಿ ಆಗುತ್ತದೆ ಎಂದು ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಗೌರಿಬಿದನೂರು ತಾಲೂಕಿನ ತೊಂಡೆಬಾವಿ, ಡಿ.ಪಾಳ್ಯ, ಬಿ.ಬೊಮ್ಮಸಂದ್ರ ಹಾಗೂ ನಾಮಗೊಂಡ್ಲು ಗ್ರಾಮ ಪಂಚಾಯತ್‌ಗಳನ್ನ ನೂತನ ಮಂಚೇನಹಳ್ಳಿ ತಾಲೂಕಿಗೆ ಸೇರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ತೊಂಡೆಬಾವಿ ಗ್ರಾಮ ಬಂದ್ ಮಾಡಿ ಗೌರಿಬಿದನೂರು-ಬೆಂಗಳೂರು ಮಾರ್ಗದ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದಾರೆ.

    ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಎನ್.ಎಚ್.ಶಿವಶಂಕರರೆಡ್ಡಿ, ಮಂಚೇನಹಳ್ಳಿ ತಾಲೂಕು ಕೇಂದ್ರ ಮಾಡಲು ನಮ್ಮ ವಿರೋಧವಿಲ್ಲ. ಆದರೆ ಮಂಚೇನಹಳ್ಳಿಗೆ ಗೌರಿಬಿದನೂರಿನ ಹಳ್ಳಿಗಳನ್ನು ಸೇರಿಸಲು ವಿರೋಧವಿದೆ. ಈ ಬಗ್ಗೆ ಸರ್ಕಾರಕ್ಕೆ ಆಕ್ಷೇಪಣೆಯನ್ನು ಸಹ ಸಲ್ಲಿಸಿದ್ದೇನೆ. ಅನರ್ಹ ಶಾಸಕ ಸುಧಾಕರ್ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಬೇಕೆಂಬ ಅಧಿಕಾರದ ಮದದಿಂದ ಬಿಜೆಪಿ ಸರ್ಕಾರ ನೂತನ ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿದೆ. ಇದರಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸ್ವತಃ ಸಿಎಂ ಸಹ ಭಾಗಿಯಾಗಿದ್ದಾರೆ ಎಂದು ದೂರಿದರು.

    ಸ್ವತಃ ಮನವಿ ಪತ್ರ ಸ್ವೀಕಾರಕ್ಕೆ ಬಂದಿದ್ದ ಅಪರ ಜಿಲ್ಲಾಧಿಕಾರಿ ಆರತಿ ಅನಂದ್ ಎದುರೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಿವಶಂಕರರೆಡ್ಡಿ, ಈ ವಿಚಾರದಲ್ಲಿ ಸರ್ಕಾರದ ವಿರುದ್ಧ ಎಲ್ಲಿಗೆ ಬೇಕಾದರೂ ಹೋಗುತ್ತೇವೆ. ರಾಜೀ ಪ್ರಶ್ನೆಯೇ ಇಲ್ಲ. ಸ್ವಾತಂತ್ರ್ಯ ನಂತರ ಭಾರತ-ಪಾಕಿಸ್ತಾನ ವಿಭಜನೆಯ ಸಮಯದಲ್ಲಾದ ರಕ್ತಕ್ರಾಂತಿಯೇ ಆದರೂ ಆಗುತ್ತದೆ. ಇದಕ್ಕೆಲ್ಲಾ ಸರ್ಕಾರ ಹಾಗೂ ಜಿಲ್ಲಾಡಳಿತವೇ ಹೊಣೆ ಆಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದುರು.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಮಾಜಿ ಸಚಿವರು, ಕಣ್ಣು ಕಿವಿ ಇಲ್ಲದ ಈ ಸರ್ಕಾರಕ್ಕೆ ಇದೇ ರೀತಿ ಎಚ್ಚರಿಕೆ ಕೊಡಬೇಕು. ನಮ್ಮ ಕೂಗು ಕೇಳದಂತೆ ನಾಟಕ ಮಾಡುತ್ತಿದ್ದಾರೆ. ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

  • ಸತ್ಯ ಹರಿಶ್ಚಂದ್ರನಂತೆ ಮಾತನಾಡೋ ನೀವು ಯಾಕೆ ಬೇರೆ ಪಕ್ಷಕ್ಕೆ ಹೋದ್ರಿ: ರಮೇಶ್ ಕುಮಾರ್‌ಗೆ ಸುಧಾಕರ್ ಪ್ರಶ್ನೆ

    ಸತ್ಯ ಹರಿಶ್ಚಂದ್ರನಂತೆ ಮಾತನಾಡೋ ನೀವು ಯಾಕೆ ಬೇರೆ ಪಕ್ಷಕ್ಕೆ ಹೋದ್ರಿ: ರಮೇಶ್ ಕುಮಾರ್‌ಗೆ ಸುಧಾಕರ್ ಪ್ರಶ್ನೆ

    – ಮಾಜಿ ಸಚಿವ ಶಿವಶಂಕರರೆಡ್ಡಿ ವಿರುದ್ಧವೂ ವಾಗ್ದಾಳಿ

    ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರ ವಿರುದ್ಧ ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಡಾ. ಕೆ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಧಾಕರ್ ಅವರು, ರಮೇಶ್ ಕುಮಾರ್ ಅವರನ್ನು ನಾನು ಸ್ವಾಮಿ ಅಂತ ದೇವರ ಭಾವನೆಯಿಂದ ಕರೆಯುತ್ತಿದ್ದೆ. ಸತ್ಯ ಹರಿಶ್ಚಂದ್ರನಂತೆ ಮಾತನಾಡುವ ರಮೇಶ್ ಕುಮಾರ್ ಅವರೇ ಮಾಜಿ ಸಿಎಂ ದೇವರಾಜು ಅರಸು ಅವರ ಜೊತೆಯಲ್ಲಿದ್ದ ನೀವು ರಾಮಕೃಷ್ಣ ಹೆಗೆಡೆ ಜೊತೆ ಯಾಕೆ ಸೇರಿಕೊಂಡಿರಿ? ನಂತರ ರಾಮಕೃಷ್ಣ ಹೆಗಡೆ ಅವರಿಂದ ಎಚ್.ಡಿ.ದೇವೇಗೌಡರ ಬಳಿ ಯಾಕೆ ಹೋದ್ರಿ? ನಿಮ್ಮನ್ನು 5 ವರ್ಷ ಸ್ಪೀಕರ್ ಆಗಿ ನೇಮಕ ಮಾಡಿದ್ದ ಎಚ್.ಡಿ.ದೇವೇಗೌಡರಿಗೆ ಕೈ ಕೊಟ್ಟು ಕೊನೆಗೆ ಕೆ.ಎಚ್.ಮುನಿಯಪ್ಪ ಹಾಗೂ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಯಾಕೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿರಿ? ಇದು ಪಕ್ಷಾಂತರ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ನೈತಿಕತೆ, ಪಾರದರ್ಶಕತೆ, ಧರ್ಮದ ಬಗ್ಗೆ ಸತ್ಯ ಹರಿಶ್ಚಂದ್ರನಂತೆ ಮಾತನಾಡುವ ನೀವು ಯಾಕೆ ಬೇರೆ ಪಕ್ಷಕ್ಕೆ ಹೋದ್ರಿ ಅಂತ ಹೇಳಿ. ವ್ಯಾಪಾರ ಎಂದು ಆರೋಪಿಸಿರುವ ನೀವು ಈ ಹಿಂದೆ ಮಾಡಿರೋದು ಏನು? ಸದನದಲ್ಲಿ ಹದ್ದುಗಳು ಅಂತ ಕರೆದ್ರಲ್ಲಾ ನೀವು ಯಾರು? ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನಿಮಗೆ ಮಂತ್ರಿ ಸ್ಥಾನ ಕೊಡಲಿಲ್ಲ ಅಂತ ನೀವು ಹೇಗೆ ನಡೆದುಕೊಂಡ್ರಿ? ಅಧಿಕೃತ ವಿರೋಧ ಪಕ್ಷದವರ ತರ ಮಾತನಾಡುತ್ತಿದ್ರಲ್ಲಾ ಮಿನಿಸ್ಟರ್ ಪೋಸ್ಟ್ ಕೊಟ್ಟ ಮೇಲೆ ಸೈಲೆಂಟ್ ಆಗಿದ್ದು ಯಾಕೆ? ಅಧಿಕಾರ ಇಲ್ಲದಾಗ ಒಂದು ರೀತಿ. ಇರುವಾಗ ಮತ್ತೊಂದು ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಕಿಡಿಕಾರಿದರು.

    ನೈತಿಕತೆ ಇದ್ದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ರಾಜೀನಾಮೆ ಕೊಡಿ ಎಂದು ಗೌರಿಬಿದನೂರು ಶಾಸಕ ಎನ್.ಎಚ್ ಶಿವಶಂಕರರೆಡ್ಡಿ ಅವರು, ಅನರ್ಹ ಶಾಸಕ ಸುಧಾಕರ್ ಅವರಿಗೆ ಆಗ್ರಹಿಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸುಧಾಕರ್ ಅವರು, ನನ್ನ ಶಾಸಕ ಸ್ಥಾನದ ಬೆಂಬಲದಿಂದಲೇ ಶಿವಶಂಕರರೆಡ್ಡಿ ಅವರು 14 ತಿಂಗಳು ಮಂತ್ರಿಯಾಗಿ ಅಧಿಕಾರ ಅನುಭವಿಸಿದರು. ಅವರು ಮಂತ್ರಿ ಆಗುವುದಕ್ಕೆ ನನ್ನ ಪಾಲು ಇದೆ. ಹೀಗಾಗಿ ನಾನು ಪಿಸಿಬಿ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಕೆಲವೇ ದಿನಗಳು ಕಳೆದಿವೆ. ಸಮಯ ಬಂದಾಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

    ಗೌರಿಬಿದನೂರು ಕ್ಷೇತ್ರದಲ್ಲಿ ಏನೆಲ್ಲಾ ನಡೆಯುತ್ತಿದೆ ಅಂತ ನನಗೆ ಗೊತ್ತಿದೆ. ನಿಮ್ಮ ಗುರುಗಳು, ತಂದೆ ಸಮಾನರಾದ ದಿವಂಗತ ಅಶ್ವತ್ಥರಾಯಣರೆರಡ್ಡಿ ಅವರ ವಿರುದ್ಧವೇ ಸ್ಫರ್ಧಿಸಿ ಸೋಲಿಸಿದರಲ್ಲಾ ಆಗ ಎಲ್ಲಿ ಹೋಗಿತ್ತು ನಿಮ್ಮ ನೈತಿಕತೆ? ಎಸಿಸಿ ಕಾರ್ಖಾನೆಯ ಜೊತೆ ನಿಮ್ಮ ಒಂಡಬಂಡಿಕೆ ಏನು ಅಂತ ಗೊತ್ತಿದೆ. ಎಸಿಸಿ ಸಿಮೆಂಟ್ ಕಾರ್ಖಾನೆಗೆ ಬೇಕಾಗುವ ಚೀಲ ತಯಾರಿಕಾ ಕಾರ್ಖಾನೆಯನ್ನು ನಿಮ್ಮ ಮಗ ಆರಂಭಿಸಿರುವುದು ಗೊತ್ತಿದೆ. ಸಾದಲಿ ಬಳಿ ಕಲ್ಲು ಗಣಿಗಾರಿಕೆ ಮಾಡುವುಕ್ಕೆ ಮುಂದಾಗಿರುವುದು ಗಮನಕ್ಕೆ ಬಂದಿದೆ ಎಂದು ಶಿವಶಂಕರರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.

  • ಫಲಿತಾಂಶ ನಂತರವೂ ಮೈತ್ರಿ ಸರ್ಕಾರ ಮುಂದುವರಿಯುತ್ತೆ: ಶಿವಶಂಕರರೆಡ್ಡಿ

    ಫಲಿತಾಂಶ ನಂತರವೂ ಮೈತ್ರಿ ಸರ್ಕಾರ ಮುಂದುವರಿಯುತ್ತೆ: ಶಿವಶಂಕರರೆಡ್ಡಿ

    – ಸಂಪೂರ್ಣವಾಗಿ ಎಕ್ಸಿಟ್ ಪೋಲ್ ಒಪ್ಪಿಕೊಳ್ಳಲು ಸಾಧ್ಯವಿಲ್ಲ

    ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಏನೇ ವ್ಯತ್ಯಾಸವಾದರೂ ರಾಜ್ಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ ಹಾಗೂ ಮುಂದುವರಿಯುತ್ತದೆ ಎಂದು ಕೃಷಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ಹೇಳಿದ್ದಾರೆ.

    ನಗರದ ಜಿಲ್ಲಾಡಳಿತ ಭವನದ ಬಳಿ ಮಾತನಾಡಿದ ಸಚಿವರು, 2004 ಹಾಗೂ 2008ರಲ್ಲಿಯೂ ಎಕ್ಸಿಟ್ ಪೋಲ್‍ಗಳ ಭವಿಷ್ಯ ಸುಳ್ಳಾಗಿವೆ. ಹೀಗಾಗಿ ಎಕ್ಸಿಟ್ ಪೋಲ್‍ಗಳ ಫಲಿತಾಂಶವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‍ಗೆ 12ರಿಂದ 14 ಹಾಗೂ ಜೆಡಿಎಸ್‍ಗೆ 3 ರಿಂದ 4 ಸ್ಥಾನಗಳು ಸಿಗಲಿವೆ. ಆದರೆ ಎಕ್ಸಿಟ್ ಪೋಲ್‍ಗಳ ಪ್ರಕಾರ ಬಿಜೆಪಿಗೆ 20 ಸ್ಥಾನ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದರು.

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಪ್ರಾಬಲ್ಯದ ಒಕ್ಕಲಿಗ ಮತಗಳು ಬಿಜೆಪಿ ಅಭ್ಯರ್ಥಿ ಪಾಲಾಗಿದ್ದರೂ ಉಳಿದ ಎಲ್ಲಾ ಸಮುದಾಯಗಳು ಕಾಂಗ್ರೆಸ್ ಅಭ್ಯರ್ಥಿ ಕೈ ಹಿಡಿದಿವೆ. ಹೀಗಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಫೋಟೋ ಫಿನಿಷ್ ಫಲಿತಾಂಶ ಹೊರಹೊಮ್ಮಲಿದ್ದು, 10ರಿಂದ 20 ಸಾವಿರ ಮತಗಳ ಅಂತರದಿಂದ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್-ಜೆಡಿಎಸ್‍ನ ಕೆಲ ಶಾಸಕರಲ್ಲಿ ಈಗಲೂ ಭಿನ್ನಾಭಿಪ್ರಾಯ ಇರುವುದು ನಿಜ. ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ವರಿಷ್ಠರು ಸೂಚನೆ ನೀಡಿದ್ದಾರೆ. ಮೈತ್ರಿ ಸರ್ಕಾರವು 5 ವರ್ಷ ಪೂರೈಸಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯ ನಾಯಕರಿಗೆ ಕಿವಿಮಾತು ಹೇಳಿದ್ದಾರೆ ಎಂದು ತಿಳಿಸಿದರು.

    ತಮ್ಮ ಕ್ಷೇತ್ರದಲ್ಲಿ ಯಾವುದೇ ಕೆಲಸಗಳು ನಡೆದಿಲ್ಲ, ನಮ್ಮ ಮಾತಿಗೆ ಬೆಲೆ ಇಲ್ಲ ಎಂದು ಕೆಲ ಶಾಸಕರು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಅವರು ಪ್ರತಿಯೊಬ್ಬ ಶಾಸಕರ ಜೊತೆಗೆ ಚರ್ಚೆ ಮಾಡಿ, ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಇದೆಲ್ಲದರ ನಡುವೆ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರು ಮೈತ್ರಿ ಸರ್ಕಾರ ವಿಭಜನೆ ಮಾಡುವುದೇ ಲೇಸು ಎಂಬ ಹೇಳಿಕೆ ನೀಡಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ ಎಂದರು.

  • ರಾಜ್ಯದಲ್ಲಿ ಜೂನ್ 15ರಿಂದ ಮೋಡ ಬಿತ್ತನೆ ಆರಂಭ: ಶಿವಶಂಕರರೆಡ್ಡಿ

    ರಾಜ್ಯದಲ್ಲಿ ಜೂನ್ 15ರಿಂದ ಮೋಡ ಬಿತ್ತನೆ ಆರಂಭ: ಶಿವಶಂಕರರೆಡ್ಡಿ

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಜೂನ್ 15ರಿಂದ ಮೋಡ ಬಿತ್ತನೆ ಕಾರ್ಯ ಆರಂಭವಾಗಲಿದೆ ಎಂದು ಕೃಷಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ವಾಡಿಕೆಗಿಂತಲೂ ಈ ಬಾರಿ ಕಡಿಮೆ ಮಳೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ತೀವ್ರ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಅಂತರ್ಜಲಮಟ್ಟವೂ ಕುಸಿಯುತ್ತಿದ್ದು, ಹಲವು ಕಡೆ ಕೊಳವೆಬಾವಿ ಕೊರೆದರೂ ನೀರು ಸಿಗದೇ ಇರುವ ಪರಿಸ್ಥಿತಿ ಇದೆ. ಮಳೆ ಕೊರತೆಯಿಂದಾಗಿ ದನ ಕರುಗಳಿಗೆ ಮೇವು ಸಿಗುತ್ತಿಲ್ಲ ಎಂದು ತಿಳಿಸಿದರು.

    ವಿಧಾನಸಭಾ ಚುನಾವಣೆ ಹಿನ್ನೆಲೆ ಕಳೆದ ವರ್ಷ ಮೋಡ ಬಿತ್ತನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಮೋಡ ಬಿತ್ತನೆಗೆ ಎಲ್ಲಾ ರೀತಿಯ ತಯಾರಿಗಳು ನಡೆದಿವೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಹುಬ್ಬಳ್ಳಿ ಹಾಗೂ ಬೆಂಗಳೂರು ಕೇಂದ್ರಗಳ ಮೂಲಕ ಮೋಡ ಬಿತ್ತನೆ ಕಾರ್ಯವು ಜೂನ್ 15ರಿಂದ ಆರಂಭವಾಗಲಿದೆ ಎಂದರು.

    ಇದೇ ವೇಳೆ ಸಚಿವರು ಚಿಕ್ಕಬಳ್ಳಾಪುರ ಜಿಲ್ಲೆಯ ಅಧಿಕಾರಿಗಳೊಂದಿಗೆ ಬರ ಸಮಸ್ಯೆಗಳ ಕುರಿತು ಸಭೆ ನಡೆಸಿದರು.