Tag: ಎನ್.ಆರ್.ಸಿ

  • ನಾನು ನೇರ 5ನೇ ಕ್ಲಾಸ್‍ಗೆ ಹೋದವ: ಸಿದ್ದರಾಮಯ್ಯ

    ನಾನು ನೇರ 5ನೇ ಕ್ಲಾಸ್‍ಗೆ ಹೋದವ: ಸಿದ್ದರಾಮಯ್ಯ

    ಚಿಕ್ಕಮಗಳೂರು: ನಾನು ನೇರವಾಗಿ ಐದನೇ ತರಗತಿಗೆ ಸೇರಿಕೊಂಡವನು. ನನಗೆ ನನ್ನ ಡೇಟ್ ಆಫ್ ಬರ್ತ್ ಗೊತ್ತಿಲ್ಲ. ಆ ಮೇಷ್ಟ್ರು ಬರೆದುಕೊಟ್ಟಿದ್ದರು ಅದನ್ನೇ ನಾನು ಹುಟ್ಟಿದ ದಿನ ಎಂದು ಹೇಳಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

    ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ನಡೆದ ಸಿಎಎ ಹಾಗೂ ಎನ್.ಆರ್.ಸಿ ಜಾರಿಗೆ ತಂದ ಕೇಂದ್ರ ಸರ್ಕಾರದ ವಿರುದ್ಧದ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮಪ್ಪ ಐದನೇ ತರಗತಿಗೆ ಸೇರಿಸಿದರು. ಆ ರಾಜಪ್ಪ ಮೇಷ್ಟರು ಪಾಪ, ಅವರು ನನ್ನನ್ನ ಅಡ್ಮಿಟ್ ಮಾಡಿಕೊಳ್ಳದಿದ್ದರೆ ನಾನು ಲಾಯರ್ ಆಗುತ್ತಿರಲಿಲ್ಲ. ಇಲ್ಲಿ ಭಾಷಣನೂ ಮಾಡುತ್ತಿರಲಿಲ್ಲ. ಮುಖ್ಯಮಂತ್ರಿ ಆಗಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ ಎಂದರು.

    ಇದೇ ವೇಳೆ, ನಾನು ಮನೆಯಲ್ಲೇ ಹುಟ್ಟಿದ್ದು. ಆಸ್ಪತ್ರೆಯಲ್ಲಿ ಹುಟ್ಟಿಲ್ಲ. ನಮ್ಮಪ್ಪ ಅವ್ವನಿಗೆ ನನ್ನ ಡೇಟ್ ಆಫ್ ಬರ್ತ್ ಹೇಗೆ ಗೊತ್ತು. ನನ್ನ ಕೇಳಿದರೆ ಅಪ್ಪ-ಅವ್ವನದ್ದು ಏನ್ ಹೇಳಲಿ. ನಂದೇ ಬರಲ್ಲ. ಅವರ ಡೇಟ್ ಆಫ್ ಬರ್ಥ್ ಎಲ್ಲಿಂದ ಹೇಳಲಿ. ಹಾಗಾದರೆ ನನ್ನನ್ನ ಡೌಟ್‍ಫುಲ್ ಎಂದು ಹೇಳುತ್ತೀರಾ ಎಂದು ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.

    ಸಂವಿಧಾನ ರಚನೆ ಬಗ್ಗೆ ಹುಟ್ಟಿಕೊಂಡಿರುವ ವಿವಾದದ ಬಗ್ಗೆ ಮಾತನಾಡಿ, ಬಿಜೆಪಿ ಹಾಗೂ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಭಾರತೀಯ ಜನತಾ ಪಾರ್ಟಿಯವರೇ, ಸಂವಿಧಾನ ತಿರುಚಲು ಹೊರಟ್ಟಿದ್ದೀರಲ್ಲ ನಿಮಗೆ ನಾಚಿಕೆ ಆಗಲ್ವಾ? ಮಾತೆತ್ತಿದರೆ ಭಾರತ ಮಾತೆ ಅಂತೀರಾ. ಭಾರತ ಮಾತೆ ಇದೇನಾ ಹೇಳಿಕೊಟ್ಟಿರೋದು. ಇನ್ಮುಂದೆ ಅವರಿಗಿಂತ ಜೋರಾಗಿ ಭಾರತ ಮಾತೆ ಎಂದು ನಾವು-ನೀವು ಹೇಳೋಣ ಎಂದು ನೆರೆದಿದ್ದವರಿಗೆ ಸಲಹೆ ನೀಡಿದರು. ಭಾರತ ಮಾತೆ ಅನ್ನೋದು ಬಿಜೆಪಿಯವರಿಗೆ ಗುತ್ತಿಗೆ ಕೊಟ್ಟಿದ್ದೇವಾ ಎಂದು ವ್ಯಂಗ್ಯವಾಡಿದರು.

    ಬಾಬಾ ಸಾಹೇಬ್ ಅಂಬೇಡ್ಕರ್ ಅವತ್ತೇ ಎಚ್ಚರಿಕೆ ಕೊಟ್ಟು ಹೋಗಿದ್ದಾರೆ. ಈ ಸಂವಿಧಾನ ಫೇಲಾದರೆ ಅದು ನೇಚರ್ ಯಿಂದ ಆಗುವುದಿಲ್ಲ. ಸಂವಿಧಾನ ಫೇಲಾದರೆ ಈ ದೇಶದ ಮತಾಂದರಿಂದ ಫೇಲಾಗುತ್ತೆ ಎಂದು ಹೇಳಿದ್ದಾರೆ. ಸಿಎಎ ಹಾಗೂ ಎನ್.ಆರ್.ಸಿಯ ಯಾವ ಕಾನೂನುಗಳನ್ನು ಈ ದೇಶದಲ್ಲಿ ಆಚರಣೆ ಮಾಡಲು ಸಾಧ್ಯವಿಲ್ಲ ಎಂದು ಸಿದ್ದು ಗುಡುಗಿದರು.

  • ಕೊಳ್ಳಿ ಹಿಡಿದು ಬೀದಿಗಿಳಿದ ಪ್ರತಿಭಟನಾಕಾರರು – ಉಡುಪಿಯಲ್ಲಿ ಕೇಂದ್ರದ ವಿರುದ್ಧ ಪೌರತ್ವದ ಕಿಚ್ಚು

    ಕೊಳ್ಳಿ ಹಿಡಿದು ಬೀದಿಗಿಳಿದ ಪ್ರತಿಭಟನಾಕಾರರು – ಉಡುಪಿಯಲ್ಲಿ ಕೇಂದ್ರದ ವಿರುದ್ಧ ಪೌರತ್ವದ ಕಿಚ್ಚು

    ಉಡುಪಿ: ಕೇಂದ್ರ ಸರ್ಕಾರದ ಎನ್.ಆರ್.ಸಿ, ಸಿಎಎ, ಎನ್.ಪಿ.ಆರ್ ಕಾಯ್ದೆಯ ವಿರುದ್ಧ ಉಡುಪಿಯಲ್ಲಿ ಜನಾಕ್ರೋಶದ ಪ್ರತಿಭಟನೆ ನಡೆಯಿತು. ದೇಶಾದ್ಯಂತ ಪೌರತ್ವದ ಕಿಚ್ಚು ಶುರುವಾಗಿದ್ದು, ಇಲ್ಲಿ ಪಂಜು ಹಿಡಿದೇ ಜನ ಬೀದಿಗಿಳಿದರು.

    ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಕಿ ಪ್ರತಿಭಟನೆಯ ಕರೆ ನೀಡಿತ್ತು. ಉಡುಪಿಯ ಸಮಾನ ಮನಸ್ಕ ಸಂಘಟನೆಗಳು ಕೈಜೋಡಿಸಿ ಪ್ರತಿಭಟನೆ ಮಾಡಿದವು. ಕೋಮು ಸೌಹಾರ್ದ ವೇದಿಕೆ, ಮುಸಲ್ಮಾನ ಸಂಘಟನೆ, ಪ್ರಗತಿಪರ ಸಂಘದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

    ನೂರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಗರದ ಅಜ್ಜರಕಾಡು ಹುತಾತ್ಮ ಸೈನಿಕರ ಯುದ್ಧ ಸ್ಮಾರಕ ಬಳಿ ಜಮಾಯಿಸಿದ ಜನ ಕೊಳ್ಳಿ ಹಿಡಿದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಪಂಜಿನ ಮೆರವಣಿಗೆಗೆ ಚಾಲನೆ ನೀಡಿ, ನಗರದ ಪುರಭವನ ರಸ್ತೆಯವರೆಗೆ ಪಂಜು ಹಿಡಿದು ಮೆರವಣಿಗೆ ಮಾಡಿದರು. ರಸ್ತೆಗಿಳಿಯಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು.

    ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲೇ ಕಾಯ್ದೆ ವಿರೋಧಿ ಹೋರಾಟ ಆರಂಭವಾಗಿದ್ದು, ಪ್ರತಿಭಟನೆ ಅಲ್ಲಲ್ಲಿ ನಿರಂತರವಾಗಿ ನಡೆಯಲಿದೆ ಎಂದು ಸಂಘಟನೆಗಳು ಎಚ್ಚರಿಕೆ ನೀಡಿದವು.

    ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸುವ ಸಿದ್ಧತೆ ನಡೆದಿತ್ತು, ಪೊಲೀಸ್ ಇಲಾಖೆ ಅವಕಾಶ ಕೊಡದ ಕಾರಣ ಇಷ್ಟಕ್ಕೆ ಸೀಮಿತ ಮಾಡಬೇಕಾಯ್ತು ಅಂತ ಪ್ರತಿಭಟನಾಕಾರ ರಮೇಶ್ ಕಾಂಚನ್ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ವ್ಯವಸ್ಥೆ ಪ್ರತಿಭಟಿಸುವ ಹಕ್ಕನ್ನೂ ಕಿತ್ತುಕೊಂಡಿದೆ. ಜನಾಕ್ರೋಶ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತದೆ ಎಂದು ಹೇಳಿದರು.

  • ಸಿಎಎ ವಿರೋಧಿಸಿ ರಕ್ತದಲ್ಲಿ ಪತ್ರ ಬರೆದು ಸಹಿ ಸಂಗ್ರಹ- ಸಿಂಧನೂರಿನಲ್ಲಿ ಬೃಹತ್ ಸಮಾವೇಶ

    ಸಿಎಎ ವಿರೋಧಿಸಿ ರಕ್ತದಲ್ಲಿ ಪತ್ರ ಬರೆದು ಸಹಿ ಸಂಗ್ರಹ- ಸಿಂಧನೂರಿನಲ್ಲಿ ಬೃಹತ್ ಸಮಾವೇಶ

    ರಾಯಚೂರು: ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ವಿರೋಧಿಸಿ ಜಿಲ್ಲೆಯ ಸಿಂಧನೂರು ನಗರದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿತ್ತು. ನಗರದ ಆರ್ ಜಿಎಂ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ನೂರಾರು ಯುವಕರು ರಕ್ತದಲ್ಲಿ ಪತ್ರ ಬರೆದು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ರವಾನೆ ಮಾಡಲಾಯಿತು.

    ಎನ್.ಆರ್.ಸಿ ಹಾಗೂ ಸಿಎಎ ವಿರೋಧಿಸಿ ನಡೆದ ರಕ್ತದ ಪತ್ರ ಚಳುವಳಿಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದ ಯುವಕರು ತಮ್ಮ ರಕ್ತದಲ್ಲಿ ಪತ್ರ ಬರೆದರು. ಈ ವೇಳೆ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಬಿಜೆಪಿ ಪಕ್ಷ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

    ಸೇವೆ ಮಾಡುತ್ತೇವೆ ಎಂದು ತಲೆ ಸವರಿದರೆ, ನೀವು ನಂಬಿಕೆಗೆ ಯೋಗ್ಯವಾದ ಜನ ಅಲ್ಲ. ಬಿಜೆಪಿ ಅಂದ್ರೆ ಬೇಡ ಅನ್ನಲ್ಲ, ಬಿಜೆಪಿಯನ್ನ ನಡೆಸುವ ಆಂತರಿಕ ಸಂಘಟನೆಗಳನ್ನ ನಾವು ಒಪ್ಪಲ್ಲ. ಬಸವಣ್ಣನನ್ನು ಕೊಂದವರು, ಅವತ್ತು ಗಾಂಧಿಯನ್ನ ಕೊಂದವರು, ಬುದ್ಧನನ್ನು ಕೊಂದವರು ನಮ್ಮನ್ನು ಉಳಿಸ್ತಾರಾ ಅಂತ ಪ್ರಶ್ನಿಸಿದರು. ಯಡಿಯೂರಪ್ಪ ಸ್ವತಂತ್ರವಾಗಿ ಸರ್ಕಾರ ನಡೆಸಲು ಆಗುತ್ತಿಲ್ಲ. ಯಡಿಯೂರಪ್ಪ ಮತ್ತು ಸಚಿವರಿಗೆ ಸ್ವತಂತ್ರ ಕೊಟ್ಟಿದ್ದೀರಾ? ಸರ್ಕಾರ ನಡಸೋದಿಕ್ಕೆ ಯಾವುದೇ ಸ್ವಾತಂತ್ರ್ಯ ಇಲ್ಲ ಅಂತ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

    ಇನ್ನೂ ಸಮಾವೇಶದಲ್ಲಿ ಮಹಿಳಾ ಹೋರಾಟಗಾರ್ತಿ ಕೆ.ನೀಲಾ, ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ, ಸೇರಿದಂತೆ ಹಲವಾರು ಸಂಘಟನೆಗಳ ಮುಖಂಡರು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸಮಾವೇಶಕ್ಕೆ ಬಂದಿದ್ದರು.

  • ದೆಹಲಿ ಚುನಾವಣೆ – ಸಿಎಎ, ಎನ್.ಆರ್.ಸಿ ವಿಚಾರದಲ್ಲಿ ಆಪ್ ಗಪ್ ಚುಪ್

    ದೆಹಲಿ ಚುನಾವಣೆ – ಸಿಎಎ, ಎನ್.ಆರ್.ಸಿ ವಿಚಾರದಲ್ಲಿ ಆಪ್ ಗಪ್ ಚುಪ್

    ನವದೆಹಲಿ: ದೇಶದ್ಯಾಂತ ವಿವಾದಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿಚಾರದಲ್ಲಿ ಆಮ್ ಆದ್ಮಿ ಪಕ್ಷ ಅಂತರ ಕಾಯ್ದುಕೊಳ್ಳುತ್ತಿದೆ. ವಿಪಕ್ಷಗಳ ಸಭೆಯಿಂದ ದೂರ ಉಳಿದಿದ್ದ ಆಮ್ ಅದ್ಮಿ ಚುನಾವಣಾ ಪ್ರಚಾರಗಳಲ್ಲೂ ಈ ಬಗ್ಗೆ ಸೊಲ್ಲೇತ್ತುತ್ತಿಲ್ಲ.

    ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಆಪ್ ಎಚ್ಚರಿಕೆ ಹೆಜ್ಜೆ ಇಡಲು ಆರಂಭಿಸಿದೆ. ಸಿಎಎ ಮತ್ತು ಎನ್.ಆರ್.ಸಿ ವಿಚಾರದಲ್ಲಿ ತಟಸ್ಥವಾಗುವ ಮೂಲಕ ತನ್ನ ಮತಗಳನ್ನು ಕ್ರೋಡಿಕರಿಸುವ ಕೆಲಸಕ್ಕೆ ಮುಂದಾಗಿದೆ. ಬಿಜೆಪಿ ಸಿಎಎ ಎನ್.ಆರ್.ಸಿಯನ್ನೆ ಬಂಡವಾಳ ಮಾಡಿಕೊಂಡು ಮತ ಬೇಟೆಗೆ ಇಳಿದಿದೆ. ಇತ್ತ ಕಾಂಗ್ರೆಸ್ ಈ ಎರಡು ಅಂಶಗಳನ್ನು ತೀವ್ರವಾಗಿ ವಿರೋಧಿಸಿದೆ. ಆಪ್ ಮಾತ್ರ ತಟಸ್ಥ ನೀತಿ ಅನುಸರಿಸುವ ಮೂಲಕ ಎರಡು ಬದಿಯ ಮತಗಳನ್ನು ಸೆಳೆಯುವ ತಂತ್ರ ಮಾಡುತ್ತಿದೆ.

    ಸಿಎಎ ಮತ್ತು ಎನ್.ಆರ್.ಸಿ ವಿರೋಧದಿಂದ ದೆಹಲಿಯಲ್ಲಿರುವ ಹೆಚ್ಚಿನ ಸಂಖ್ಯೆಯ ಜಾಟ್, ಗುಜ್ಜರ್, ಪಂಜಾಬಿ ಮತ್ತು ಪೂರ್ವಾಂಚಲ ಮತಗಳಲ್ಲಾಗುವ ಬದಲಾವಣೆಗಳನ್ನು ಊಹಿಸಲು ಕ್ಲಿಷ್ಟವಾಗಿದ್ದರಿಂದ ಆಪ್ ಪಕ್ಷವು ಸಿಎಎ ಮತ್ತು ಎನ್.ಆರ್.ಸಿ ಕುರಿತು ಪರ-ವಿರೋಧದ ನಿಲುವು ತಾಳದೆ ತಟಸ್ಥವಾಗಿದೆ. ಸಿಎಎ ತಿದ್ದುಪಡಿ ಕಾಯ್ದೆ ಜಾರಿ ಆದ ನಂತರ ನಡೆದ ಜಾರ್ಖಂಡ್ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡರು ಮತಗಳಿಕೆಯಲ್ಲಿ ಕಳೆದ ಬಾರಿಗಿಂತ ಈ ಚುನಾವಣೆಯಲ್ಲಿ ಏರಿಕೆ ಕಂಡಿದೆ. ಇದೇ ಕಾರಣದಿಂದ ಆಪ್ ಈ ನಿಲುವು ತಾಳಿದೆ ಎನ್ನಲಾಗಿದೆ.

    ಸಿಎಎ ಎನ್.ಆರ್.ಸಿ ತಟಸ್ಥ ನೀತಿಯಿಂದ ದೆಹಲಿಯಲ್ಲಿರುವ ಮುಸ್ಲಿಂ ಹಾಗೂ ಹಿಂದೂಳಿದ ವರ್ಗಗಳ ಮತಗಳನ್ನು ಸೆಳೆಯಬಹುದು. ಜೊತೆಗೆ ಆಪ್ ಸರ್ಕಾರವನ್ನು ಶ್ಲಾಘಿಸುವ ಮೇಲ್ವರ್ಗದ ವೋಟ್‍ಗಳು, ದೆಹಲಿ ಹೊರ ವಲಯದಲ್ಲಿರುವ ನಿರಾಶ್ರಿತರ ವೋಟ್‍ಗಳನ್ನು ಗಳಿಸಬಹುದು ಎಂಬುದು ಆಪ್ ಲೆಕ್ಕಾಚಾರ. ಸಿಎಎ ಅಥವಾ ಎನ್.ಆರ್.ಸಿ ವಿಚಾರದಲ್ಲಿ ಯಾವುದಾದರೂ ಒಂದು ನಿರ್ಧಾರಕ್ಕೆ ಬಂದಲ್ಲಿ ವೋಟ್ ಬ್ಯಾಂಕ್‍ಗೆ ಧಕ್ಕೆ ಆಗಬಹುದು ಎನ್ನುವ ಲೆಕ್ಕಾಚಾರದಲ್ಲಿ ಎಚ್ಚರಿಯ ಹೆಜ್ಜೆ ಇಡುತ್ತಿದೆ.

  • ಭಾರತವನ್ನ ಹಿಂದೂ ರಾಷ್ಟ್ರವಾಗಲು ಬಿಡಲ್ಲ: ಸಿದ್ದರಾಮಯ್ಯ

    ಭಾರತವನ್ನ ಹಿಂದೂ ರಾಷ್ಟ್ರವಾಗಲು ಬಿಡಲ್ಲ: ಸಿದ್ದರಾಮಯ್ಯ

    ಬೆಂಗಳೂರು: ಭಾರತ ಒಂದು ಜಾತ್ಯಾತೀತ ರಾಷ್ಟ್ರವಾಗಿದ್ದು ಅದನ್ನು ಹಿಂದೂ ರಾಷ್ಟ್ರವನ್ನಾಗಿಸಲು ಬಿಡುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಿಎಎ ಮತ್ತು ಎನ್‍.ಆರ್.ಸಿ ಕಾರ್ಯಾಗಾರದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಪೌರತ್ವ ಕಾಯ್ದೆ, ಎನ್.ಪಿ.ಆರ್, ಎನ್‍.ಆರ್.ಸಿ ಎಲ್ಲವೂ ಒಂದೇ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಮೋದಿ ಈ ಬಗ್ಗೆ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

    ಎನ್‍ಪಿಆರ್ ಹಿಂದೆ ರಾಕ್ಷಸಿ ಉದ್ದೇಶವಿದೆ. ಸಂವಿಧಾನ ವಿರೋಧಿ ಕಾಯ್ದೆ ಇದಾಗಿದೆ. ಅಕ್ರಮ ವಲಸಿಗರನ್ನು ಸಕ್ರಮ ಗೊಳಿಸಲು ನಮ್ಮ ವಿರೋಧ ಇಲ್ಲ. ಆದರೆ ಮುಸ್ಲಿಮರನ್ನು ಹೊರಗಿಟ್ಟಿರುವುದು ಯಾಕೆ? ಮುಸ್ಲಿಮರೂ ನಮ್ಮ ದೇಶಕ್ಕೆ ಬಂದಿದ್ದಾರೆ. ಬಾಂಗ್ಲಾ, ಪಾಕಿಸ್ತಾನ, ಅಫ್ಘಾನಿಸ್ಥಾನ ಬಿಟ್ಟು ಇತರ ನೆರೆ ರಾಜ್ಯಗಳಿಂದಲೂ ಹಲವರು ವಲಸೆ ಬಂದಿದ್ದಾರೆ. ಅವರನ್ನು ಏಕೆ ಕಾಯ್ದೆಯಿಂದ ಹೊರಗಿಡಲಾಗಿದೆ ಎಂದು ಪ್ರಶ್ನಿಸಿದರು.

    ನಿಮ್ಮ ಉದ್ದೇಶ ದೇಶವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂಬುದು ಅಷ್ಟೇ. ಇದು ಬಿಜೆಪಿಯ ಹಿಡನ್ ಅಜೆಂಡಾ ಆಗಿದೆ. ಜಾತ್ಯಾತೀತತೆ ಸಂವಿಧಾನದ ಮೂಲ ಆಶಯವಾಗಿದ್ದು ಅದನ್ನು ಉಲ್ಲಂಘಿಸಲಾಗುತ್ತಿದೆ. ಬಹುಮತ ಇರುವ ಪಕ್ಷ ಕಾನೂನು ಮಾಡಲಿ, ಆದರೆ ಅದು ನ್ಯಾಯಬದ್ಧ ಇಲ್ಲವಾದರೆ ಅದನ್ನು ವಿರೋಧಿಸಿ ಎಂದು ಗಾಂಧೀಜಿ ಹೇಳಿದ್ದರು. ಈ ಕಾಯ್ದೆ ನಮಗೆ ಬೇಕಾಗಿದೆಯಾ? ದೇಶದಲ್ಲಿ ಸಮಾಜ ಕಿತ್ತು ತಿನ್ನುವ ಸಮಸ್ಯೆಗಳಿದ್ದು ಈ ಬಗ್ಗೆ ನೀವು ಮಾತನಾಡುತ್ತಿಲ್ಲ ಎಂದು ಬಿಜೆಪಿಯವರನ್ನು ತರಾಟೆಗೆ ತೆಗೆದುಕೊಂಡರು.

    ಪ್ರಣಾಳಿಕೆಯಲ್ಲೇ ನೀವು ಎನ್‍.ಆರ್.ಸಿ ತರುತ್ತೇವೆ ಎಂದು ಹೇಳಿದ್ದು ಅದಕ್ಕೆ ತಂದಿದ್ದೀರ. ಬೇರೆ ವಿಚಾರ ಬಗ್ಗೆಯೂ ಪ್ರಣಾಳಿಕೆಯನ್ನು ಹೇಳಿದ್ದೀರಿ. ಅದನ್ನು ಏಕೆ ಜಾರಿ ಮಾಡುತ್ತಿಲ್ಲ? ಬಹುಮತ ಇದ್ದರೂ ಜನವಿರೋಧಿ ಕಾನೂನು ತರಬಾರದು. ಅದು ಪ್ರಜಾಪ್ರಭುತ್ವ. ಇದನ್ನು ನಾವು ವಿರೋಧ ಮಾಡಲೇ ಬೇಕು ಎಂದರು.

    ಕೇಂದ್ರ ಸರ್ಕಾರ ತಂದಿರುವ ಕಾನೂನು ಸಂವಿಧಾನ ವಿರೋಧಿ ಮಾತ್ರವಲ್ಲ, ಮಾನವೀಯತೆಯ ವಿರೋಧಿ ಆಗಿದೆ. ಮನುಷ್ಯತ್ವದ ವಿರೋಧಿಯಾಗಿದೆ. ಈ ಕಾಯ್ದೆಯಿಂದ ಎಲ್ಲರಿಗೂ ಅನ್ಯಾಯವಾಗುತ್ತದೆ. ದಲಿತರಿಗೆ, ಆದಿವಾಸಿಗಳಿಗೆ ಎಲ್ಲರಿಗೂ ಅನ್ಯಾಯ ಆಗುತ್ತದೆ. ರೈತರು, ನಿರುದ್ಯೋಗಿಗಳು ಆತ್ಮಹತ್ಯೆ ಮಾಡುತ್ತಿದ್ದಾರೆ. ಅದರ ಬಗ್ಗೆ ನೋಡಿಯೇ ನಾವು ದೇಶವನ್ನು ಹಿಂದೂ ರಾಷ್ಟ್ರ ಆಗಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

  • ಸಿಎಎ ಬಗ್ಗೆ ಜಾಗೃತಿಗಾಗಿ ಜನವರಿ 11ರಂದು ಬೃಹತ್ ಜಾಥಾ – ಮಾಲೀಕಯ್ಯ ಗುತ್ತೇದಾರ

    ಸಿಎಎ ಬಗ್ಗೆ ಜಾಗೃತಿಗಾಗಿ ಜನವರಿ 11ರಂದು ಬೃಹತ್ ಜಾಥಾ – ಮಾಲೀಕಯ್ಯ ಗುತ್ತೇದಾರ

    ಕಲಬುರಗಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲಿಸಿ ಹಾಗೂ ಜನರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲು ಇದೇ ತಿಂಗಳು 11 ರಂದು ಕಲಬುರಗಿಯಲ್ಲಿ ಬೃಹತ್ ಜನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಮಾಲೀಕಯ್ಯ ಗುತ್ತೇದಾರ್ ಹೇಳಿದರು.

    ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುತ್ತೇದಾರ್, ಸಿಎಎ ಹಾಗೂ ಎನ್.ಆರ್.ಸಿ ಬಗ್ಗೆ ಬಹತೇಕ ಜನರಿಗೆ ಗೊತ್ತೇ ಇಲ್ಲ, ವಿರೋಧ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಿ ತಪ್ಪು ದಾರಿಗೆ ಎಳೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅದಕ್ಕಾಗಿ ಜನರಿಗೆ ಸಿಎಎ ಹಾಗೂ ಎನ್.ಆರ್.ಸಿ ಬಗ್ಗೆ ಅರಿವು ಮೂಡಿಸಲು ಜ.11 ರಂದು ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದ್ದು, ಈ ಜಾಥಾವು ಕಲಬುರಗಿ ನಗರದ ನಗರೇಶ್ವರ ಶಾಲೆಯಿಂದ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ನಡೆಯಲಿದೆ ಎಂದರು. ಜಾಥಾದಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

  • ಮೋದಿ, ಅಮಿತ್  ಶಾ ಬಳಿ ತಂದೆಯ ದಾಖಲೆ ಇದ್ಯಾ – ಜಮೀರ್ ಪ್ರಶ್ನೆ

    ಮೋದಿ, ಅಮಿತ್ ಶಾ ಬಳಿ ತಂದೆಯ ದಾಖಲೆ ಇದ್ಯಾ – ಜಮೀರ್ ಪ್ರಶ್ನೆ

    – ಪಾಕಿಸ್ತಾನದಲ್ಲಿ ಅಲ್ಲ ನಮಗೆ ಭಾರತದಲ್ಲೇ ಹಿಂಸೆ
    – ಮೋದಿಗೆ ಎಲ್ಲಿ ಹೇಗೆ ಮಾತನಾಡಬೇಕು ಅನ್ನೋದು ಗೊತ್ತಿಲ್ಲ

    ಬೆಂಗಳೂರು: ಸಿಎಎ ಹಾಗೂ ಎನ್.ಆರ್.ಸಿ ಕಾಯ್ದೆ ವಿರೋಧಿಸಿ ಇವತ್ತು ಮೈಸೂರ್ ರಸ್ತೆಯ ಈದ್ಗಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯ್ತು. ಶಾಸಕ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾವಿರಾರು ಅಲ್ಪಸಂಖ್ಯಾತರು ಸೇರಿ, ಸಿಎಎ ಹಾಗೂ ಎನ್.ಆರ್.ಸಿ ವಿರುದ್ಧ ಗುಡುಗಿದರು.

    ಪ್ರತಿಭಟನೆಯಲ್ಲಿ ಮಾಜಿ ಸಚಿವ ಜಮೀರ್ ಮಾತನಾಡಿ, ಪೌರತ್ವ ಕಾಯ್ದೆಯನ್ನು ಮೊದಲು ವಾಪಸ್ ಪಡೆಯಿರಿ. ನಾವು ಇರುವುದು ಹಿಂದೂಸ್ತಾನದಲ್ಲಿ. ನಾವು ನಮ್ಮ ಪೌರತ್ವವನ್ನ ರುಜುವಾತು ಪಡಿಸಬೇಕಿಲ್ಲ. ನಮ್ಮ ತಾತ, ಮುತ್ತಾತ ಎಲ್ಲರೂ ಇಲ್ಲಿಯೇ ಹುಟ್ಟಿದವರು. ಕಾಯ್ದೆಯ ಹೆಸರಿನಲ್ಲಿ ಧರ್ಮ ಎತ್ತಿಕಟ್ಟೋಕೆ ನಾವು ಬಿಡಲ್ಲ. ಇವತ್ತು ಇಡೀ ದೇಶದಲ್ಲಿ ಪ್ರತಿಭಟನೆ ನಡೆಯುತ್ತಿದೆ. ವಿವಿಗಳಲ್ಲೂ ವಿದ್ಯಾರ್ಥಿಗಳು ಧರಣಿ ನಡೆಸ್ತಿದ್ದಾರೆ ಎಂದು ಹೇಳಿದರು.

    ಈ ಕಾಯ್ದೆ ವಿರುದ್ಧ ಎಲ್ಲಾ ಕಡೆಯೂ ಹೋರಾಟ ನಡೆಯುತ್ತಿದೆ. ಬಿಜೆಪಿ ಆಡಳಿತವಿರುವ ಕಡೆಯೂ ವಿರೋಧ ವ್ಯಕ್ತವಾಗಿದೆ. ಕಾಯ್ದೆ ಜಾರಿಗೆ ಅವಕಾಶವಿಲ್ಲವೆಂದು ಹೇಳಿದ್ದಾರೆ. ನಿತೀಶ್ ಕುಮಾರ್ ಜಾರಿ ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಒಡಿಶಾದಲ್ಲೂ ಕಾಂಗ್ರೆಸ್‍ಯೇತರ ಸರ್ಕಾರವಿದ್ದು ಅಲ್ಲಿಯೂ ಕಾಯ್ದೆಗೆ ವಿರೋಧವಿದೆ. ಸಿದ್ದಗಂಗಾ ಮಠಕ್ಕೆ ಪ್ರಧಾನಿ ಭೇಟಿ ನೀಡಿದ್ದರು, ಮಕ್ಕಳ ಮುಂದೆ ರಾಜಕೀಯ ಹೇಳಿಕೆ ಕೊಟ್ಟಿದ್ದಾರೆ. ಪಾಕಿಸ್ತಾನದ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಚಿಕ್ಕ ಮಕ್ಕಳ ಮೇಲೆ ಇದೆಂಥ ಪರಿಣಾಮ ಬೀರಬಹುದು? ಪ್ರಧಾನಿಯವರಿಗೆ ಎಲ್ಲಿ ಹೇಗೆ ಮಾತನಾಡಬೇಕೆಂದು ಗೊತ್ತಿಲ್ಲ ಎಂದು ಮೋದಿ ವಿರುದ್ಧ ಕಿಡಿಕಾರಿದರು.

    ಅಂಬೇಡ್ಕರ್ ಬರೆದಿರುವ ಸಂವಿಧಾನ ನಮ್ಮದು, ಅದರಲ್ಲಿ ಸೆಕ್ಯೂಲರ್ ತತ್ವಕ್ಕೆ ಒತ್ತು ಕೊಟ್ಟಿದ್ದಾರೆ. ಸಂವಿಧಾನಕ್ಕಾದರೂ ಬೆಲೆ ಕೊಡಬೇಕಲ್ಲವೆ? ಅಂಬೇಡ್ಕರ್ ಸಂವಿಧಾನವನ್ನೇ ವಿರೋಧಿಸುವ ಮನಸ್ಸು ನಿಮ್ಮದು. ಬಿಹಾರ, ಒರಿಸ್ಸಾದಲ್ಲೇ ಕಾಯ್ದೆ ತರಲ್ಲ ಎಂದು ಹೇಳಿದ್ದಾರೆ. ಅದರೂ ಪ್ರಧಾನಿಯವರೇ ಕಾಯ್ದೆ ತರುತ್ತೇನೆ ಅನ್ನೋದು ಸರಿಯೇ. ಹುಟ್ಟಿದ ದಾಖಲೆ ಕೊಡಿ ಅಂದರೆ ಎಲ್ಲಿ ತರೋದು. ನನ್ನದೇ ಹುಟ್ಟಿದ ದಾಖಲೆ ಇರಲಿಲ್ಲ. ಮೊದಲು ಮೋದಿಯವರದ್ದು ದಾಖಲೆ ಇದೆಯೇ ಎಂದು ಕೇಳಬೇಕು, ಅವರ ಅಪ್ಪನದು ಆ ನಂತರ ನೋಡೋಣ ಎಂದು ಗುಡುಗಿದರು.

    ನಾನ್ಯಾಕೆ ದಾಖಲೆ ಕೊಡಬೇಕು. ನಾನು ಇಲ್ಲೇ ಹುಟ್ಟಿರೋನು, ಇದೇ ನಮ್ಮ ದೇಶ. ಯಾರ ಹತ್ತಿರ ದಾಖಲೆ ಇದೆ ತೋರಿಸಿ. ವೇದಿಕೆ ಮೇಲೆ ಕೂರಲಿಲ್ಲವೇಕೆ ಎಂಬ ವಿಚಾರಕ್ಕೆ, ನನಗೆ ಯಾವ ಮೋದಿಯವರ ಹೆದರಿಕೆಯೂ ಇಲ್ಲ. ಐಟಿ ಇಲಾಖೆ ಬಗ್ಗೆಯೂ ನನಗೆ ಹೆದರಿಕೆಯಿಲ್ಲ. ಕೂರಲಿಲ್ಲ ಅಂದರೆ ಹೆದರಿಕೆ ಅಂತಾನಾ ನಾನು ಯಾರಿಗೂ ಹೆದರುವವನಲ್ಲ. ಪಾಕ್ ನಲ್ಲಿ ತೊಂದರೆಯಾದರೆ ನಮಗೇನು ಸಂಬಂಧ? ದೇಶದಲ್ಲಿ ಮುಸಲ್ಮಾನರಿಗೆ ಚಿತ್ರ ಹಿಂಸೆಯಾಗ್ತಿದೆ. ಯುಪಿಯಲ್ಲಿ 14 ಜನ ಮುಸ್ಲಿಮರು ಸತ್ತಿದ್ದಾರೆ. ಮಂಗಳೂರಿನಲ್ಲಿ ನಮ್ಮ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಪಾಕ್‍ನಲ್ಲಿ ಅಲ್ಲ ನಮಗೆ ಇಲ್ಲಿ ಚಿತ್ರ ಹಿಂಸೆ ಆಗುತ್ತಿದೆ ಎಂದು ಜಮೀರ್ ಆರೋಪ ಮಾಡಿದರು.

  • ಭಾರತ್ ಮಾತಾಕೀ ಜೈ ಎನ್ನುವುದಿಲ್ಲ – ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲಿಯಾಸ್ ಮಹ್ಮದ್ ತುಂಬೆ

    ಭಾರತ್ ಮಾತಾಕೀ ಜೈ ಎನ್ನುವುದಿಲ್ಲ – ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲಿಯಾಸ್ ಮಹ್ಮದ್ ತುಂಬೆ

    – ಕರ್ನಾಟಕ, ಉತ್ತರ ಪ್ರದೇಶದಲ್ಲಿ ಪೊಲೀಸರದ್ದು ಪೂರ್ವಯೋಜಿತ ಕೃತ್ಯ

    ಕಾರವಾರ: ನಾವು ಯಾವುದೇ ಕಾರಣಕ್ಕೂ ಭಾರತ್ ಮಾತಾಕೀ ಜೈ ಎನ್ನುವುದಿಲ್ಲ ಎಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲಿಯಾಸ್ ಮಹ್ಮದ್ ತುಂಬೆ ಹೇಳಿದ್ದಾರೆ.

    ಸಿ.ಎ.ಎ ಮತ್ತು ಎನ್.ಆರ್.ಸಿ ವಿರುದ್ಧ ಪ್ರತಿಭಟಿಸುತಿದ್ದ ಜನರ ಮೇಲೆ ಮಂಗಳೂರಿನಲ್ಲಿ ಲಾಠಿ ಚಾರ್ಜ್ ಹಾಗೂ ಗೋಲಿಬಾರ್ ನಲ್ಲಿ ಇಬ್ಬರ ಜೀವ ಬಲಿಯಾಗಿದ್ದು ಹಲವಾರು ಜನರು ಗಾಯಗೊಂಡಿರುವ ಘಟನೆ ನಾಗರೀಕ ಸಮಾಜವನ್ನು ತೀವ್ರ ಘಾಸಿ ಗೊಳಿಸಿದೆ ಎಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲಿಯಾಸ್ ಮಹ್ಮದ್ ತುಂಬೆ ಬೇಸರ ವ್ಯಕ್ತಪಡಿಸಿದರು.

    ಇಂದು ಕಾರವಾರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಹತ್ತು ದಿನಗಳಿಂದ ದೆಹಲಿಯಲ್ಲಿ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ವಿಪರ್ಯಾಸ ಅಂದ್ರೆ ಕೇಂದ್ರ ಸರ್ಕಾರಕ್ಕೆ ಕಣ್ಣು ಕಿವಿ ಸರಿಯಾಗಿಲ್ಲ. ಕೇವಲ ಬಿಜೆಪಿ ಆಡಳಿತದಲ್ಲಿರುವ ರಾಜ್ಯದಲ್ಲಿ ಮಾತ್ರ ಹಿಂಸಾಚಾರಗಳು ನಡೆಯುತ್ತಿವೆ. ಸಾವಿರಾರು ಮಂದಿ ಆಸ್ಪತ್ರೆ ಸೇರುವಂತಾಗಿದೆ ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ ಪೊಲೀಸರು ಯಾವುದೇ ಹಿಂಸಾಚಾರವನ್ನೂ ನಡೆಸಿಲ್ಲ ಎಂದು ತಿಳಿಸಿದರು.

    ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾವು ಪ್ರತಿಕಾರ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಇದು ಏನನ್ನ ಸೂಚಿಸುತ್ತದೆ. ನಮ್ಮ ಪ್ರಜಾಪ್ರಭುತ್ವ ರಾಷ್ಟ್ರ, ಕಾನೂನಿನ ಪ್ರಕಾರ ದೇಶದ ಎಲ್ಲರೂ ಸಮಾನರು, ಸಂವಿಧಾನವನ್ನು ಕಾಲಡಿ ಹಾಕಿ ತುಳಿಯುವಂತೆ ನಿಯಮಗಳನ್ನು ರೂಪಿಸುವುದನ್ನು ವಿರೋಧಿಸುವವರನ್ನ ಹತ್ತಿಕ್ಕುವ ಕೆಲಸವನ್ನ ಸರ್ಕಾರವೇ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ಮೇಲೆ ಕಿಡಿಕಾರಿದರು.

    ಸೆಕ್ಷನ್ 144ನ್ನ ತರಾತುರಿಯಲ್ಲಿ ರಾತ್ರಿ ವೇಳೆ ಜಾರಿ ಮಾಡಿದ್ದರು, ಮಂಗಳೂರಿನಲ್ಲಿ ಪ್ರತಿಭಟನೆಗೆ ಮೊದಲೇ ಅನುಮತಿ ಪಡೆದುಕೊಂಡಿದ್ದು ಹಿಂದಿನ ರಾತ್ರಿ ನಿಷೇಧಾಜ್ಞೆ ಜಾರಿ ಮಾಡಿದ್ದು ಸಾಕಷ್ಟು ಪ್ರತಿಭಟನಾಕಾರರಿಗೆ ಗೊತ್ತಿರಲಿಲ್ಲ. ಈ ವೇಳೆ ಸಿಂಡಿಕೇಟ್ ಬ್ಯಾಂಕ್ ವೃತ್ತದಲ್ಲಿ ಏನೂ ಅರಿಯದೇ ನಿಂತಿದ್ದವರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನೆಗೆ ಬಂದವರು ಕಲ್ಲು ತೂರಾಟ ಮಾಡದೇ ಬೇರೆ ದಾರಿ ಇರಲಿಲ್ಲ. ಈ ಹಿಂದೆ ನಿಷೇಧಾಜ್ಞೆ ಇದ್ದಾಗ ಸಾಕಷ್ಟು ಕಡೆ ಪ್ರತಿಭಟನೆಗಳಾಗಿವೆ, ಮೆರವಣಿಗೆಗಳು ನಡೆದಿವೆ. ಆದರೆ ಯಾವ ಕಡೆಗಳಲ್ಲೂ ಈ ರೀತಿ ಗುಂಡಿನ ದಾಳಿ ಲಾಠಿ ಚಾರ್ಜ್ ನಡೆದಿಲ್ಲ. ಮಂಗಳೂರಿನಲ್ಲಿ ಮಾತ್ರ ಯಾಕೆ? ಎಂದು ಪ್ರಶ್ನೆ ಮಾಡಿದರು.

    ಪೊಲೀಸರು ಬಂದರು ರಸ್ತೆಯಲ್ಲಿ ನಿಂತಿದ್ದವರ ಮೇಲೆ ಎದೆಗೆ ಗುಂಡು ಹೊಡೆದು ಸಾಯಿಸುತ್ತೇನೆ ಎಂದು ಹೇಳಿಕೊಂಡು ಗುಂಡು ಹಾರಿಸಿದ್ದಾರೆ. ನಮ್ಮಲ್ಲಿ ಇಬ್ಬರು, ಉತ್ತರ ಪ್ರದೇಶದಲ್ಲಿ 23ಕ್ಕೂ ಅಧಿಕ ಮಂದಿಯ ಮೇಲೆ ಗುಂಡು ಹಾರಿಸಿದ್ದಾರೆ. ಹೈಲ್ಯಾಂಡ್ ಆಸ್ಪತ್ರೆ ಒಳಹೊಕ್ಕು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಈ ರೀತಿ ಹಿಂಸಾಚಾರ ನೋಡಿದ್ದೆವು, ಮಂಗಳೂರನಲ್ಲಿ ಇಂತಹ ಘಟನೆ ನೋಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಮೃತರ ಮನೆಗೆ ಭೇಟಿ ನೀಡಿದ ಸಿಎಂ ಸಾಂತ್ವನ ಹೇಳಿ 5 ಲಕ್ಷ ಪರಿಹಾರ ಘೋಷಣೆ ಮಾಡಿದರು. ಆದರೆ ಬೆಂಗಳೂರಿಗೆ ಹೋದ ಬಳಿಕ ಪರಿಹಾರ ಕೊಡಲ್ಲ ಎಂದು ಮಾತು ಬದಲಿಸಿದ್ದಾರೆ. ಯಾರಾದರೂ ಕಕ್ಕಿದ್ದನ್ನ ವಾಪಸ್ ತಿಂತಾರಾ? ಎಂದು ಮುಖ್ಯಮಂತ್ರಿಗಳ ನಡೆಗೆ ಅಕ್ರೋಶ ವ್ಯಕ್ತಪಡಿಸಿದರು. ಮೂರು ಪೊಲೀಸ್ ಅಧಿಕಾರಿಗಳ ದಡ್ಡತನ, ದರ್ಪದಿಂದ ಈ ರೀತಿ ಹಿಂಸಾಚಾರ ನಡೆಯುವಂತಾಗಿದೆ. ಆದರೆ ಯಾವುದೇ ಗುಂಡುಗಳಿಂದ ಲಾಠಿ ಚಾರ್ಜ್ ನಿಂದ ಜನರ ಪ್ರತಿಭಟನೆಗಳನ್ನ ಹತ್ತಿಕ್ಕಲು ಸಾಧ್ಯವಿಲ್ಲ. ನಮ್ಮ ಆಸ್ತಿತ್ವದ ಪ್ರಶ್ನೆ ಬಂದಾಗ ಸುಮ್ಮನೆ ಕೂರುವುದು ಸಾಧ್ಯವಿಲ್ಲ ಇಂತಹ ಸರ್ಕಾರವನ್ನು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

    ಎನ್.ಆರ್.ಸಿ ಯನ್ನು ದೇಶದಾದ್ಯಂತ ಜಾರಿ ಮಾಡ್ತೀವಿ ಎಂದು ಅಮಿತ್ ಶಾ ಹೇಳ್ತಾರೆ. ಆದರೆ ಪ್ರಧಾನಿ 2014-19 ರ ಅವಧಿಯಲ್ಲಿ ನಾವು ಎನ್.ಆರ್.ಸಿ ಬಗ್ಗೆ ಮಾತನಾಡಿಲ್ಲ ಅಂತಾರೆ. ಗೃಹಮಂತ್ರಿಗಳು ನಾವು ಕರ್ನಾಟಕದಲ್ಲಿ ಮೊದಲು ಎನ್.ಆರ್.ಸಿ ಜಾರಿ ಮಾಡ್ತೀವಿ ಅಂತಾರೆ. ಒಬ್ಬ ವ್ಯಕ್ತಿ ಎಷ್ಟು ಬಾರಿ ಸುಳ್ಳು ಹೇಳಿ ನಂಬಿಸಲು ಸಾಧ್ಯವಿದೆ. ಇದು ಕೇವಲ ಮುಸ್ಲಿಮರ ಪ್ರಶ್ನೆಯಲ್ಲ, ಬುಡಕಟ್ಟು, ದಲಿತರು, ಬಡವರಿಗೂ ತೊಂದರೆಯಾಗುತ್ತದೆ. ಇದು ದೇಶದ ಮತ್ತೊಂದು ಸ್ವಾತಂತ್ರ್ಯ ಸಮರ ಪ್ರಾರಂಭವಾಗಿದೆ. ನಾವು ಈ ನಿಟ್ಟಿನಲ್ಲೇ ಹೋರಾಟ ಮುಂದುವರೆಸುತ್ತೇವೆ ಎಂದರು.

    ಭಾರತ ಮಾತಕೀ ಜೈ ಎನ್ನುವುದಿಲ್ಲ
    ಅಲ್ಲಾಹು ಅಕ್ಬರ್ ಎನ್ನುವ ಜೊತೆ ಭಾರತ್ ಮಾತಾಕೀ ಜೈ ಎನ್ನಬಹುದಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲಿಯಾಸ್ ಮಹ್ಮದ್ ತುಂಬಿ ನಾವು ಯಾವುದೇ ಕಾರಣಕ್ಕೂ ಭಾರತ್ ಮಾತಾಕೀ ಜೈ ಎನ್ನುವುದಿಲ್ಲ ಎಂದರು. ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಗಾಗಿ ತಂದಿದ್ದ ಪತಂಜಲಿ ನೀರಿನ ಬಾಟಲ್ ನಲ್ಲಿ ಇದ್ದ ಪತಾಂಜಲಿ ದಿವ್ಯ ಜಲ್ ಎಂಬ ಲೇಬಲ್ ಅನ್ನು ಹರಿದುಹಾಕಿ ನಂತರ ನೀರನ್ನು ಕುಡಿಯುವ ಮೂಲಕ ಪರೋಕ್ಷವಾಗಿ ಧಾರ್ಮಿಕ ಮುಖಂಡರ ವಿರುದ್ಧ ಕಿಡಿ ಕಾರಿದರು.

  • ಸುಸಜ್ಜಿತವಾಗಿ ನಿರ್ಮಾಣವಾಗಿದೆ ಅಕ್ರಮ ವಲಸಿಗರ ಬಂಧನ ಕೇಂದ್ರ

    ಸುಸಜ್ಜಿತವಾಗಿ ನಿರ್ಮಾಣವಾಗಿದೆ ಅಕ್ರಮ ವಲಸಿಗರ ಬಂಧನ ಕೇಂದ್ರ

    ನೆಲಮಂಗಲ: ದೇಶದಲ್ಲಿ ಹೀಗಾಗಲೇ ಎನ್.ಆರ್.ಸಿ ಹಾಗೂ ಪೌರತ್ವದ ಕಿಚ್ಚು ಹೆಚ್ಚಾಗಿದ್ದು, ಇದೇ ವೇಳೆ ಅಕ್ರಮವಾಗಿ ನೆಲೆಸಿರುವ ವಲಸಿಗರ ಕೇಂದ್ರ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಸೊಂಡೆಕೊಪ್ಪ ಗ್ರಾಮದ ಬಳಿ ಸುಸಜ್ಜಿತವಾಗಿ ನಿರ್ಮಾಣವಾಗಿದೆ.

    ನಿರ್ಮಾಣವಾಗಿರುವ ಹೊಸ ಕೇಂದ್ರಕ್ಕೆ ಆರು ಮಂದಿ ಸಿಬ್ಬಂದಿ ಹಾಗೂ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ. ಈ ಕೇಂದ್ರದಲ್ಲಿ ಮೂರು ಕೊಠಡಿಗಳು, ಅಡುಗೆ ಗೃಹ, ಶೌಚಾಲಯ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಹೈಫೈ ರೀತಿಯಲ್ಲಿ ಒದಗಿಸಲಾಗಿದೆ.

    ಇಲ್ಲಿ ಬಂಧನಕ್ಕೆ ಒಳಗಾದವರಿಗೆ ಊಟ ಉಪಚಾರ ಬಿಸಿ ನೀರಿನ ವ್ಯವಸ್ಥೆ, ಸೋಲಾರ್, 24 ಗಂಟೆಗಳ ವಿದ್ಯುತ್ ನೀರಿನ ಸೌಕರ್ಯಗಳನ್ನು ಒದಗಿಸಲಾಗಿದೆ. ಇತ್ತ ಯಾವುದೇ ತೊಂದರೆಯಾಗದಂತೆ ಭದ್ರತೆ ದೃಷ್ಟಿಯಿಂದ ಕೇಂದ್ರದ ಸುತ್ತಲೂ ಎತ್ತರದ ಕಟ್ಟಡದ ಕಾಂಪೌಂಡ್ ಮತ್ತು ತಂತಿ ವ್ಯವಸ್ಥೆಯನ್ನು ಈ ಕೇಂದ್ರಕ್ಕೆ ನೀಡಿದ್ದು ಶೀಘ್ರದಲ್ಲೇ ಉದ್ಘಾಟನೆ ಕೂಡ ಆಗಲಿದೆ ಎನ್ನಲಾಗಿದೆ.

    ಈ ಕೇಂದ್ರ ಹಿಂದೆ ವಿದ್ಯಾರ್ಥಿ ನಿಲಯವಾಗಿತ್ತು, ನಂತರದಲ್ಲಿ ಈ ಕಟ್ಟಡಕ್ಕೆ ಹೊಸ ವಿನ್ಯಾಸ ನೀಡಿದ್ದು ಉತ್ತಮ ರೀತಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. ನೆಲಮಂಗಲ ಉಪ ವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಈ ಅಕ್ರಮ ಬಂಧನ ವಲಸಿಗರ ಕೇಂದ್ರ ಸೇರಿದೆ.

  • ವಿಧಾನಸೌಧದ ಮುಂದೆ NRC ಗೆಜೆಟ್ ಕಾಪಿ ಸುಟ್ಟುಹಾಕಿದ ವಕೀಲರು

    ವಿಧಾನಸೌಧದ ಮುಂದೆ NRC ಗೆಜೆಟ್ ಕಾಪಿ ಸುಟ್ಟುಹಾಕಿದ ವಕೀಲರು

    ಬೆಂಗಳೂರು: ಎನ್‍.ಆರ್.ಸಿ ಕಾಯ್ದೆ ವಿರೋಧಿಸಿ ವಕೀಲರು ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಪೌರತ್ವ ನೊಂದಣಿ ಕಾಯ್ದೆಯ ಗೆಜೆಟ್ ಪ್ರತಿಯನ್ನು ಸುಟ್ಟು ಹಾಕಿದ ವಕೀಲರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

    ವಿಧಾನಸೌಧ ಸುತ್ತ ಮುತ್ತ 144 ಸೆಕ್ಷನ್ ಜಾರಿಯಲ್ಲಿದೆ. ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ಹೇಳಿದ್ದರು ಕೂಡ ಕ್ಷಣಾರ್ಧದಲ್ಲಿ ಗೆಜೆಟ್ ಕಾಪಿ ಸುಟ್ಟು ಹಾಕಿದರು. ಪೊಲೀಸರು ಪ್ರತಿಭಟನಾ ನಿರತ ವಕೀಲರನ್ನು ಬಲವಂತವಾಗಿ ಅಲ್ಲಿಂದ ಸಾಗಹಾಕಿದರು. ಅಲ್ಪಸಂಖ್ಯಾತರ ವಿರೋಧಿಯಾದ ಈ ಕಾಯ್ದೆ ವಿರುದ್ಧ ಸಾಂಕೇತಿವಾಗಿ ಗೆಜೆಟ್ ಪ್ರತಿ ಸುಟ್ಟು ಪ್ರತಿಭಟನೆ ಮಾಡಿದ್ದೇವೆ ಎಂದು ವಕೀಲರು ಹೇಳಿದರು.

    ಈ ಕಾಯ್ದೆ ಜಾರಿಗೆ ತರುವ ಮೂಲಕ ಅಂಬೇಡ್ಕರ್ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. 144 ಸೆಕ್ಷನ್ ಜಾರಿಯಲ್ಲಿದೆ ಎಂದು ಸುಮ್ಮನಿರೋಕೆ ಆಗೊಲ್ಲ. ಅನ್ಯಾಯವನ್ನು ಸಹಿಸಿಕೊಂಡು ಇರೋದು ದೇಶದ್ರೋಹದ ಕೆಲಸವಾಗುತ್ತೆ ಎಂದು ಗಾಂಧಿಜೀಯೇ ಹೇಳಿದ್ದಾರೆ. ನಾನು ದೇಶದ್ರೋಹಿಯಾಗಲಾರೆ ಹಾಗಾಗಿ ಅನ್ಯಾಯವನ್ನ ಪ್ರತಿಭಟಿಸಿದ್ದೇನೆಂದು ಹಿರಿಯ ವಕೀಲ ಎಸ್ ಬಾಲನ್ ತಿಳಿಸಿದ್ದಾರೆ.