Tag: ಎನ್.ಆರ್.ಸಂತೋಷ್

  • NR ಸಂತೋಷ್‍ಗೆ ಸಿಗದ ಅರಸೀಕೆರೆ ಟಿಕೆಟ್- ಬಿಜೆಪಿ ಬಾವುಟ, ಫ್ಲೆಕ್ಸ್‌ಗಳಿಗೆ ಬೆಂಬಲಿಗರಿಂದ ಬೆಂಕಿ

    NR ಸಂತೋಷ್‍ಗೆ ಸಿಗದ ಅರಸೀಕೆರೆ ಟಿಕೆಟ್- ಬಿಜೆಪಿ ಬಾವುಟ, ಫ್ಲೆಕ್ಸ್‌ಗಳಿಗೆ ಬೆಂಬಲಿಗರಿಂದ ಬೆಂಕಿ

    ಹಾಸನ: ಅರಸೀಕೆರೆ ವಿಧಾನಸಭಾ ಕ್ಷೇತ್ರ (Araseekere Assembly Constituency 2023) ದಿಂದ ಎನ್.ಆರ್ ಸಂತೋಷ್‍ಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಬಾವುಟ ಸುಟ್ಟು ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.

    ಬಿಜೆಪಿ ಪಕ್ಷ (BJP Party) ದ ಫ್ಲೆಕ್ಸ್ ಗಳನ್ನು ಹರಿದು ಹಾಕಿದ ಸಂತೋಷ್ ಬೆಂಬಲಿಗರು, ಯಡಿಯೂರಪ್ಪ (BS Yediyurappa), ವಿಜಯೇಂದ್ರ (BY Vijayendra) ವಿರುದ್ಧ ಘೋಷಣೆಗಳನ್ನು ಕೂಗಿ ಕಿಡಿಕಾರಿದ್ದಾರೆ. ಜಿ.ವಿ ಬಸವರಾಜು 5 ಸಾವಿರ ವೋಟು ಕೂಡ ಪಡೆಯಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಡೀ ಅರಸೀಕೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಹಾಳು ಮಾಡಿದ್ದಾರೆ. ನಾನು ಎನ್.ಆರ್ ಸಂತೋಷ್ ಗೆಲ್ಲಲಿ ಎಂದು ಗಡ್ಡ ಬಿಟ್ಟಿದ್ದೆ. ಈಗ ಅವರಿಗೆ ಟಿಕೆಟ್ ನೀಡಿಲ್ಲ. ನಾಳೆ ಬಿಜೆಪಿ ಸೋಲಲಿ ಎಂದು ಗಡ್ಡ ಬೋಳಿಸಿ ಬೆಂಗಳೂರಿನ ಬಿಜೆಪಿ ಕಚೇರಿಗೆ ಕಳುಹಿಸಿತ್ತೇನೆ ಎಂದು ಎನ್.ಆರ್.ಸಂತೋಷ್ ಬೆಂಬಲಿಗ ರಂಗನಾಥ್ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಟಿಕೆಟ್ ಕೊಟ್ಟಿಲ್ಲವೆಂದ್ರೆ ಅವರಿಗೆ ಬೇರೆ ಜವಾಬ್ದಾರಿ ನೀಡಲಿದೆ ಎಂದರ್ಥ: ಅಣ್ಣಾಮಲೈ

    ಇತ್ತ ಅರಸೀಕೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಎನ್.ಆರ್.ಸಂತೋಷ್ ಬೆಂಬಲಿಗರ ಸಭೆಯಲ್ಲಿ ಕಣ್ಣೀರಿಟ್ಟಿದ್ದಾರೆ. ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಅಭ್ಯರ್ಥಿ ಎಂದು ಸಂಘಟನೆಯಲ್ಲಿ ತೊಡಗಿದ್ದ ಸಂತೋಷ್‍ಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ತಮ್ಮ ಅರಸೀಕೆರೆ ನಿವಾಸದಲ್ಲಿ ಬೃಹತ್ ಸಭೆ ನಡೆಸಿದರು.

    ಕಳೆದ ಮೂರು ವರ್ಷಗಳಿಂದ ಅರಸೀಕೆರೆಯಲ್ಲಿ ಪಕ್ಷ ಸಂಘಟನೆ ಮಾಡಿದ್ದೆ. ಕಡೆ ಗಳಿಗೆಯಲ್ಲಿ ನನಗೆ ಟಿಕೆಟ್ ಕೈ ತಪ್ಪಿದೆ. ಯಾಕೆ ಟಿಕೆಟ್ ತಪ್ಪಿದೆ ಎಂದು ಗೊತ್ತಿಲ್ಲ. ಆದರೆ ಚುನಾವಣೆ ಕಣದಿಂದ ಸರಿಯಲ್ಲ. ಸೋಮವಾರ 50 ಸಾವಿರ ಜನರನ್ನು ಸೇರಿಸಿ ನಾಮಪತ್ರ ಸಲ್ಲಿಸುತ್ತೇನೆ. ಆನಂತರ ಬೇರೆ ಪಕ್ಷದಿಂದ ಸ್ಪರ್ಧಿಸುವುದು ಅಥವಾ ಪಕ್ಷೇತರನಾಗಿ ಸ್ಪರ್ಧಿಸಬೇಕೆಂಬುದನ್ನು ತಿಳಿಸಬಯಸುತ್ತೇನೆ ಎಂದರು.

    ನನ್ನ ಎದುರಾಳಿ ಮಾಜಿ ಶಾಸಕ ಕೆ.ಎಂ.ಶಿವಲಿಂಗೇಗೌಡ (K M Shivalinge Gowda), ಬಿಜೆಪಿ ಕಡಿಮೆ ಮತಗಳನ್ನು ಪಡೆಯಲಿದೆ. ಬಿಜೆಪಿ ಕಾರ್ಯಕರ್ತರೆಲ್ಲಾ ನಮ್ಮ ಜೊತೆ ಇದ್ದಾರೆ ಎಂದರು.

  • ನಮ್ಮ ಸೊಸೈಟಿ ಬಗ್ಗೆ ಮಾತಾಡಲು ನೀನ್ಯಾರು?- ಎನ್.ಆರ್ ಸಂತೋಷ್‍ಗೆ ಗ್ರಾಮಸ್ಥರಿಂದ ತರಾಟೆ

    ನಮ್ಮ ಸೊಸೈಟಿ ಬಗ್ಗೆ ಮಾತಾಡಲು ನೀನ್ಯಾರು?- ಎನ್.ಆರ್ ಸಂತೋಷ್‍ಗೆ ಗ್ರಾಮಸ್ಥರಿಂದ ತರಾಟೆ

    ಹಾಸನ: ಅರಸೀಕೆರೆ ವಿಧಾನ ಕ್ಷೇತ್ರದ ಬಿಜೆಪಿ (BJP) ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S Yediyurappa) ಅವರ ರಾಜಕೀಯ ಮಾಜಿ ಕಾರ್ಯದರ್ಶಿ ಎನ್.ಆರ್ ಸಂತೋಷ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

    ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ಬೆಳಗುಂಬ ಗ್ರಾಮದ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಗೊಲ್ಲರಹಟ್ಟಿಗೆ ಎನ್.ಆರ್ ಸಂತೋಷ್ ತಮ್ಮ ಬೆಂಬಲಿಗರೊಂದಿಗೆ ಪ್ರಚಾರಕ್ಕೆ ಬಂದಿದ್ದ ವೇಳೆ ಸೊಸೈಟಿ ವಿಚಾರವಾಗಿ ಮಾತನಾಡಿದ್ದಾರೆ. ಇದರಿಂದ ಕೆರಳಿದ ಗ್ರಾಮಸ್ಥರು ಎನ್.ಆರ್ ಸಂತೋಷ್‍ರನ್ನು ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಇದನ್ನೂ ಓದಿ: ಮೀನು ಮೃತಪಟ್ಟಿದ್ದಕ್ಕೆ ಮನನೊಂದು 13ರ ಬಾಲಕ ಆತ್ಮಹತ್ಯೆ

    ನಮ್ಮೂರ ಸೊಸೈಟಿ ಬಗ್ಗೆ ಮಾತನಾಡಲು ನೀನ್ಯಾರು, ನಾವೆಲ್ಲ ಕಷ್ಟಪಟ್ಟು ಸೊಸೈಟಿಗೆ ಒಂದು ಕೋಟಿ ದುಡ್ಡು ಹಾಕಿಸಿದ್ದೀವಿ. ಗ್ರಾಮಕ್ಕೆ ಬಂದಿದ್ದೀಯಾ ವೋಟು ಕೇಳಿಕೊಂಡು ಹೋಗು. ನೀನು ಬಂದು ಊರಿಗೆ ಊರನ್ನೇ ಹೊಡೆದಾಡುಸುತ್ತಿದ್ದೀಯಾ ಎಂದು ಹರಿಹಾಯ್ದರು. ನೀನು ಏನು ಒಳ್ಳೆಯ ಕೆಲಸ ಮಾಡಿದ್ದೀಯಾ?, ನಿನಗೆ ನಮ್ಮ ಸೊಸೈಟಿ ಬಗ್ಗೆ ಆಸಕ್ತಿ ಇದ್ದರೆ ನಿನ್ನ ಸ್ವಂತ ಜಾಗ ಕೊಡು. ನಾವ್ಯಾಕೆ ನಿನ್ನ ಜೊತೆ ಬರಬೇಕು, ನಿನ್ನಂತಹವರನ್ನು ಬಹಳ ಜನ ನೋಡಿದ್ದೀವಿ. ಎಲ್ಲಿಂದಲೂ ಬಂದು ನಮ್ಮ ಮೇಲೆ ದೌರ್ಜನ್ಯ ಮಾಡಲು ಬರ್ತಿಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ವೇಳೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿ ಎನ್.ಆರ್ ಸಂತೋಷ್ ಮೇಲೆ ಹಲ್ಲೆ ಮಾಡಲು ಗ್ರಾಮಸ್ಥರು ಮುಂದಾಗಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಗ್ರಾಮಸ್ಥರ ಆಕ್ರೋಶಕ್ಕೆ ಹೆದರಿದ ಎನ್.ಆರ್.ಸಂತೋಷ್ ಸ್ಥಳದಿಂದ ಕಾಲ್ಕಿತ್ತರು.

  • ‘ಆಪರೇಷನ್ ಕಮಲ’ಕ್ಕಾಗಿ 10 ಲಕ್ಷ ರೂಪಾಯಿ ಆಮಿಷ- ಸಿಎಂ ರಾಜಕೀಯ ಕಾರ್ಯದರ್ಶಿ ವಿರುದ್ಧ ದೂರು

    ‘ಆಪರೇಷನ್ ಕಮಲ’ಕ್ಕಾಗಿ 10 ಲಕ್ಷ ರೂಪಾಯಿ ಆಮಿಷ- ಸಿಎಂ ರಾಜಕೀಯ ಕಾರ್ಯದರ್ಶಿ ವಿರುದ್ಧ ದೂರು

    ಹಾಸನ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ವಿರುದ್ಧ ಹಾಸನ ಜಿಲ್ಲೆಯ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಅರಸೀಕೆರೆ ನಗರಸಭೆ ಸದಸ್ಯೆ ಕಲೈರಸಿ ಅವರು ದೂರು ನೀಡಿದ್ದಾರೆ.

    ಅರಸೀಕೆರೆ ನಗರಸಭೆಗೆ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದ ಏಳು ಜನ ಸದಸ್ಯರು ಜೆಡಿಎಸ್‍ಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನಂತರ ತಮ್ಮಬೆಂಬಲ ಬಿಜೆಪಿಗೆ ಇದೆ. ನಮಗೆ ಬೇರೆ ಆಸನ ವ್ಯವಸ್ಥೆ ಮಾಡಿ ಎಂದು ಡಿಸಿಗೆ ಮನವಿ ಮಾಡಿದ್ದರು. ಈ ವಿಚಾರವಾಗಿ ಯೂಟರ್ನ್ ಹೊಡೆದ ಕಲೈರಸಿ, ನನಗೆ ಹತ್ತು ಲಕ್ಷ ನೀಡಿ ಬಿಜೆಪಿಗೆ ಬೆಂಬಲ ನೀಡುವಂತೆ ಬೆದರಿಕೆ ಹಾಕಿದ್ದಾರೆ.

    ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ದೂರವಾಣಿಯಲ್ಲಿ ಬೆದರಿಕೆ ಹಾಕಿದ್ದಾರೆ. ಸಂತೋಷ್ ಆಪ್ತರಾದ ಸಿಖಂದರ್, ಹರ್ಷವರ್ಧನ್ ಎಂಬವರು ನಮ್ಮ ಮನೆಗೆ ಬಂದು 10 ಲಕ್ಷ ಹಣ ಇಟ್ಟು ಬಿಜೆಪಿಗೆ ಸಪೋರ್ಟ್ ಮಾಡುವಂತೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಜಾತಿನಿಂದನೆ ಕೂಡ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

    ಇದೇ ವಿಚಾರವಾಗಿ ನಿನ್ನೆ 10 ಲಕ್ಷ ಹಣದೊಂದಿಗೆ ಶಾಸಕರಾದ ರೇವಣ್ಣ ಮತ್ತು ಶಿವಲಿಂಗೇಗೌಡ ಜಂಟಿ ಸುದ್ದಿಗೋಷ್ಟಿ ನಡೆಸಿದ್ದರು. ಈ ಭವಿಷ್ಯದಲ್ಲಿ ಕೋರ್ಟ್ ಮೆಟ್ಟಿಲೇರುವುದಾಗಿಯೂ ಎಚ್ಚರಿಕೆ ನೀಡಿದ್ದರು.  ಇದನ್ನೂ ಓದಿ: ಹತ್ತು ಲಕ್ಷ ಹಣದೊಂದಿಗೆ ಸುದ್ದಿಗೋಷ್ಠಿ ನಡೆಸಿದ ಹೆಚ್‍ಡಿ.ರೇವಣ್ಣ, ಶಿವಲಿಂಗೇಗೌಡ

  • ಶಿವಲಿಂಗೇಗೌಡರಿಂದ ಗೂಂಡಾಗಿರಿ: ಎನ್.ಆರ್.ಸಂತೋಷ್

    ಶಿವಲಿಂಗೇಗೌಡರಿಂದ ಗೂಂಡಾಗಿರಿ: ಎನ್.ಆರ್.ಸಂತೋಷ್

    ಹಾಸನ: ಅರಸೀಕೆರೆಯಲ್ಲಿ ಮತ್ತೆ ಶಾಸಕ ಶಿವಲಿಂಗೇಗೌಡ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ನಡುವಿನ ಜಗಳ ತಾರಕಕ್ಕೇರುತ್ತಿದ್ದು, ಇಬ್ಬರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಶಾಸಕರು ತಮ್ಮ ಬೆಂಬಲಿಗರ ಮೂಲಕ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಸಂತೋಷ್ ಆರೋಪಿಸಿದ್ದಾರೆ

    ಅರಸೀಕೆರೆಯ ಬೈರಗೊಂಡನಹಳ್ಳಿ ಬೋವಿ ಕಾಲೋನಿಯಲ್ಲಿ ಆನಂದ್ ಮತ್ತು ಉಮೇಶ್ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮೇಶ್ ಜಯಶಾಲಿಯಾಗಿದ್ದರು. ನಂತರ ಜೆಡಿಎಸ್ ಮತ್ತು ಬಿಜೆಪಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿ 20 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಬೆಂಬಲಿಗರ ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಗೆ ಆಗಮಿಸಿದ ಎನ್.ಆರ್.ಸಂತೋಷ್, ಶಾಸಕ ಶಿವಲಿಂಗೇಗೌಡ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಫಲಿತಾಂಶ ಬಂದ ನಂತರ ಬಿಜೆಪಿ ಬೆಂಬಲಿಗರ ಮೇಲೆ ಶಾಸಕರು ಗೂಂಡಾಗಿರಿ ಮಾಡುವ ಕೆಲಸ ಮಾಡಿದ್ದಾರೆ. ನಮ್ಮ ಬೆಂಬಲಿಗರ ಕೈ ಮೂಳೆ ಮುರಿದು, ತಲೆ ಒಡೆದಿದ್ದಾರೆ. ವೈದ್ಯಕೀಯ ಸಿಬ್ಬಂದಿ ಮಾತ್ರ ಡಿಸ್ಚಾರ್ಜ್ ಮಾಡಿ ಏನೂ ಆಗಿಲ್ಲ ಅಂತಿದ್ದಾರೆ. ಅವರಿಗೆ ಸರಿಯಾದ ಆಹಾರ ಒದಗಿಸುತ್ತಿಲ್ಲ. ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ನಾವು ಆಸ್ಪತ್ರೆಗೆ ಬಂದ ನಂತರ ನಮ್ಮ ಮೇಲೂ ಗಲಾಟೆ ಮಾಡುವ ಉದ್ದೇಶದಿಂದ ಶಾಸಕರು ಆಸ್ಪತ್ರೆಗೆ ಬಂದಿದ್ದಾರೆ ಎಂದರು. ನಮ್ಮ ಕಾರ್ಯಕರ್ತರ ಮೇಲೆ ಮತ್ತೆ ಹಲ್ಲೆ ಆದರೆ ಶಾಸಕರ ಮನೆಮುಂದೆ ಧರಣಿ ಕೂರುತ್ತೇನೆ ಎಂದರು.

    ಇತ್ತ ಸಂತೋಷ್ ಆರೋಪಕ್ಕೆ ಶಾಸಕ ಶಿವಲಿಂಗೇಗೌಡ ಬೆಂಬಲಿಗರು ತಿರುಗೇಟು ನೀಡಿದ್ದು, ಗಲಾಟೆ ಮಾಡಿಕೊಂಡವರನ್ನು ಸಮಾಧಾನ ಮಾಡಲು ಶಾಸಕರು ಮುಂದಾಗಿದ್ದರು. ಹೀಗಾಗಿ ಆಸ್ಪತ್ರೆಗೆ ಭೇಟಿ ನೀಡಿದಾಗ ಅದೇ ಸಂದರ್ಭದಲ್ಲಿ ಸಂತೋಷ್ ಬಂದು ದೌರ್ಜನ್ಯ ಮಾಡಿದ್ದಾರೆ. ಏಕಾಏಕಿ ಏಕವಚನದಲ್ಲಿ ನಮ್ಮವರನ್ನೆಲ್ಲ ಬೈದಿದ್ದಾರೆ. ಶಾಸಕರು ನಾವು ಆಚೆ ಬರದಂತೆ ಆಸ್ಪತ್ರೆಯ ಗೇಟ್ ಹಾಕಿ ನಿಂದನೆ ಮಾಡಿದ್ದಾರೆ. ನಮ್ಮ ಕಾರ್ ಅಡ್ಡಹಾಕಿ ಎಂದು ಬೆಂಬಲಿಗರಿಗೆ ಹೇಳಿದ್ದಾರೆ. ಮಾತ್ರೆ ನುಂಗಿದ ನಂತರ ಇವರ ತಲೆಯಲ್ಲಿ ಏನೂ ಇಲ್ಲದಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

  • ಸಂತೋಷ್ ಆರೋಗ್ಯ ಸ್ಥಿರವಾಗಿದ್ದು, ಏನೂ ಸಮಸ್ಯೆ ಇಲ್ಲ- ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್

    ಸಂತೋಷ್ ಆರೋಗ್ಯ ಸ್ಥಿರವಾಗಿದ್ದು, ಏನೂ ಸಮಸ್ಯೆ ಇಲ್ಲ- ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್

    ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್. ಆರ್ ಸಂತೋಷ್ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಎಮ್.ಎಸ್ ರಾಮಯ್ಯ ಆಸ್ಪತ್ರೆ ವೈದ್ಯ ನರೇಶ್ ಶೆಟ್ಟಿ ಹೇಳಿದರು.

    ಸಂತೋಷ್ ಆರೋಗ್ಯ ಸಂಬಂಧ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ಅವರು, ನಿದ್ದೆ ಮಂಪರಿನಲ್ಲೇ ಇರುವ ಸಂತೋಷ್ ಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ನಿನ್ನೆ ರಾತ್ರಿಗಿಂತ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆಯಾಗಿದೆ. ಡಿಸ್ಚಾರ್ಜ್ ಮಾಡುವ ಬಗ್ಗೆ ಯಾವುದೇ ನಿರ್ಧಾರವಿಲ್ಲ. ಮಧ್ಯಾಹ್ನ ನಂತರ ಡಿಸ್ಜಾರ್ಜ್ ಮಾಡಬಹುದು ತಿಳಿಸಿದರು.

    ಸಂತೋಷ್ ಅವರನ್ನು ನಿನ್ನೆ ರಾತ್ರಿ 8.30ರ ಸುಮಾರಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಮಧ್ಯಾಹ್ನ ನಂತರ ಜನರಲ್ ವಾರ್ಡಿಗೆ ಶಿಫ್ಟ್ ಮಾಡುತ್ತೇವೆ. ಅವರು ನಿನ್ನೆ ಬಂದಾಗ ಸ್ವಲ್ಪ ಮಂಕಾಗಿದ್ದರು. ಬೇರೆ ಯಾವುದೇ ಸಮಸ್ಯೆ ಇಲ್ಲ. ಎಷ್ಟು ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡಿದ್ದರು ಅಂತ ಹೇಳೋಕೆ ಆಗಲ್ಲ ಎಂದು ನುಡಿದರು.

    ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರು ನಿನ್ನೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಕುಟುಂಬಸ್ಥರು ಅವರನ್ನು ನಗರ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನಿನ್ನೆ ರಾತ್ರಿಯೇ ಆಸ್ಪತ್ರೆಗೆ ಭೇಟಿ ನೀಡಿ ಸಂತೋಷ್ ಆರೋಗ್ಯ ವಿಚಾರಿಸಿದ್ದಾರೆ. ಆತ್ಮಹತ್ಯೆಗೆ ಯತ್ನ ಮಾಡಿರುವ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 309ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ.

  • ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ ಸಿಎಂ ಆಪ್ತ ಸಂತೋಷ್

    ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ ಸಿಎಂ ಆಪ್ತ ಸಂತೋಷ್

    ಹಾಸನ: ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಸುಳಿವನ್ನು ಸಿಎಂ ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ನೀಡಿದ್ದಾರೆ.

    ಮುಂದಿನ ವಿಧಾನಸಭಾ ಚುನಾವಣೆಗೆ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂ ಟಿಕೆಟ್ ನೀಡಿದ್ರೆ ಖಂಡಿತ ಸ್ಪರ್ಧಿಸುತ್ತೇನೆ. ನಾನು ಅಖಿಲಭಾರತ್ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತ ಆದಾಗನಿಂದ ಅರಸೀಕೆರೆಯಲ್ಲಿ ಓಡಾಟ ಮಾಡುತ್ತಿದ್ದೇನೆ. ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದು, ಅರಸೀಕೆರೆ ವಿಧಾನಸಭೆ ಕ್ಷೇತ್ರದ ಡಿಎಂ ಕುರ್ಕೆಯ ಬೂತ್ ನಂ 42 ರಲ್ಲಿ ನನ್ನ ಮತವಿದೆ. ನಾನು ಇದು ನನ್ನ ಊರು ಎಂದು ವಿಶೇಷ ಗಮನ ಕೊಡುತ್ತಿದ್ದೇನೆ ಎಂದರು.

    ನಾನು ಖಂಡಿತ ಎಂಎಲ್‍ಎ ಚುನಾವಣೆ ಆಕಾಂಕ್ಷಿ ಅಲ್ಲ. ಒಂದು ವೇಳೆ ಪಕ್ಷ ನಾನೇ ಚುನಾವಣೆಗೆ ನಿಲ್ಲಬೇಕು ಎಂದು ಆದೇಶ ಕೊಟ್ಟರೆ ನಿಲ್ಲುತ್ತೇನೆ ಎಂದರು. ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಹಾಸನದ ಅರಸೀಕೆರೆ ಕ್ಷೇತ್ರದಲ್ಲಿ ಎನ್.ಆರ್.ಸಂತೋಷ್ ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಎನ್‍ಆರ್.ಸಂತೋಷ್ ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಅರಸೀಕೆರೆ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.

  • ಫ್ಲೆಕ್ಸ್ ತೆರವು- ಸಿಎಂ ಆಪ್ತ ಸಂತೋಷ್ ಬೆಂಬಲಿಗರಿಂದ ಅಧಿಕಾರಿಗಳಿಗೆ ನಿಂದನೆ

    ಫ್ಲೆಕ್ಸ್ ತೆರವು- ಸಿಎಂ ಆಪ್ತ ಸಂತೋಷ್ ಬೆಂಬಲಿಗರಿಂದ ಅಧಿಕಾರಿಗಳಿಗೆ ನಿಂದನೆ

    ಹಾಸನ: ನಿಯಮಮೀರಿ ಹಾಕಿಸಿದ್ದ ಫ್ಲೆಕ್ಸ್ ತೆರವುಗೊಳಿಸಿದ ಅರಸೀಕೆರೆ ನಗರಸಭೆ ಆಯುಕ್ತರ ವಿರುದ್ಧ ಮುಖ್ಯಮಂತ್ರಿ ಬಿಎಸ್‍ವೈ ಆಪ್ತ ಸಂತೋಷ್ ಬೆಂಬಲಿಗರು ಏಕವಚನದಲ್ಲಿ ನಿಂದಿಸಿದ ಘಟನೆ ನಡೆದಿದೆ.

    ಅರಸೀಕೆರೆ ನಗರಸಭೆ ವ್ಯಾಪ್ತಿಯ ಹಲವೆಡೆ ಎನ್.ಆರ್.ಸಂತೋಷ್‍ಗೆ ಶುಭಾಷಯ ಕೋರಿ ಫ್ಲೆಕ್ಸ್ ಹಾಕಲಾಗಿತ್ತು. ನಿಯಮ ಮೀರಿ ಫ್ಲೆಕ್ಸ್ ಹಾಕಿಸಿದ್ದಾರು. ಅರಸೀಕೆರೆ ನಗರಸಭೆ ಆಯುಕ್ತ ಕಾಂತರಾಜು, ತಡರಾತ್ರಿ ಫ್ಲೆಕ್ಸ್ ತೆರವುಗೊಳಿಸಲು ಮುಂದಾದರು. ಈ ವೇಳೆ ಸ್ಥಳಕ್ಕಾಗಮಿಸಿದ ಸಂತೋಷ್ ಬೆಂಬಲಿಗರು ಫ್ಲೆಕ್ಸ್ ತೆರವುಗೊಳಿಸಿ ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಅಡ್ಡಗಟ್ಟಿದ್ದಲ್ಲದೆ ನಗರಸಭೆ ಅಧಿಕಾರಿಗಳನ್ನು ಏಕವಚನದಲ್ಲಿ ನಿಂದಿಸಿದ್ದಾರೆ.

    ಬೇರೆಯವರು ಫ್ಲೆಕ್ಸ್ ಹಾಕಿದ್ರೆ ಕೇಳಲ್ಲ. ನಾವು ಹಾಕಿಸಿದ್ರೆ ತೆಗೆಸ್ತೀಯಾ? ಈ ಟ್ರ್ಯಾಕ್ಟರ್ ಮುಂದೆ ಹೋಗಲು ಬಿಡಲ್ಲ ಎಂದು ಗಲಾಟೆ ಮಾಡಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಸ್ಥಳದಲ್ಲಿದ್ದ ಪೊಲೀಸರು ಮಾತ್ರ ಮೂಕ ಪ್ರೇಕ್ಷಕರಂತೆ ನಿಂತಿದ್ದಾರೆ. ಈ ಗಲಾಟೆಯೆಲ್ಲ ಗಮನಿಸಿದ ಸಾರ್ವಜನಿಕರು ಮಾತ್ರ ಆಡಳಿ ಪಕ್ಷದದ ಬೆಂಬಲಿಗರು ಏನೂ ಮಾಡಿದ್ರು ಅಧಿಕಾರಿಗಳು ಕೇಳಬಾರದ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ತಡರಾತ್ರಿ ಆರಂಭವಾದ ಫ್ಲೆಕ್ಸ್ ಜಟಾಪಟಿ ಇನ್ನೂ ಕೂಡ ಮುಂದುವರಿದಿದೆ.

  • ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್ ನೇಮಕ

    ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್ ನೇಮಕ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್ ಅವರನ್ನು ನೇಮಕ ಮಾಡಲಿದೆ.

    ಈ ಸಂಬಂಧ ರಾಜ್ಯ ಸರ್ಕಾರದದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದ ಎನ್.ಆರ್.ಸಂತೋಷ್ ಸಿಎಂ ಯಡಿಯೂರಪ್ಪ ಅವರ ಆಪ್ತರಾಗಿದ್ದಾರೆ. ಅದರಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬಿಳಿಸುವಲ್ಲಿ ಸಂತೋಷ್ ಪ್ರಮುಖ ಪಾತ್ರವಹಿಸಿದ್ದರು.

    ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿನ ಅತೃಪ್ತ ಶಾಸಕರನ್ನು ಸಂಪರ್ಕಿಸಿದ್ದ ಬಿಜೆಪಿಯ ನಾಯಕರು, 16 ಅತೃಪ್ತ ಶಾಸಕರನ್ನು ಸೆಳೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸುವಲ್ಲಿ ಸಫಲರಾಗಿದ್ದರು. ಬಳಿಕ ಅವರನ್ನು ಬಿಜೆಪಿ ಹೈಕಮಾಂಡ್ ಸಲಹೆಯಂತೆ ಎನ್.ಆರ್. ಸಂತೋಷ್ ರಾಜ್ಯದಿಂದ ಕರೆದುಕೊಂಡು ಹೋಗಿದ್ದರು. ಆಗ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಸಂತೋಷ್ ಅವರ ವಿರುದ್ಧ ಹರಿಹಾಯ್ದು ಹೇಳಿಕೆಯನ್ನೂ ಕೊಟ್ಟಿದ್ದರು.

    ಕಷ್ಟಕಾಲದಲ್ಲಿ ನೆರವಾದ ಹಾಗೂ ತಾವು ಮತ್ತೆ ಮುಖ್ಯಮಂತ್ರಿಯಾಗಲು ಶ್ರಮಿಸಿದ ಎನ್.ಆರ್. ಸಂತೋಷ್ ಅವರಿಗೆ ಸಿಎಂ ಯಡಿಯೂರಪ್ಪ ಅವರು ಉಡುಗೊರೆ ನೀಡಿದ್ದಾರೆ. ಈಗಾಗಲೇ ಮೂವರು ಸಿಎಂ ಅವರಿಗೆ  ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಇದೀಗ ಯಡಿಯೂರಪ್ಪ ಅವರಿಗೆ 4ನೇ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್ ಅವರು ನೇಮಕವಾಗಿದ್ದಾರೆ.

    ಈಗಾಗಲೇ ಸಿಎಂ ರಾಜಕೀಯ ಕಾರ್ಯದರ್ಶಿಗಳಾಗಿ ಶಾಸಕರಾದ ಎಸ್.ಆರ್.ವಿಶ್ವನಾಥ್, ಎಂ.ಪಿ. ರೇಣುಕಾಚಾರ್ಯ ಮತ್ತು ಶಂಕರ ಗೌಡ ಪಾಟೀಲ್ ಅವರು ನೇಮಕವಾಗಿದ್ದಾರೆ. ಅವರೊಂದಿಗೆ ಇದೀಗ ಎನ್. ಆರ್.ಸಂತೋಷ್ ಕೂಡ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂದಿದ್ದಾರೆ.