Tag: ಎನ್‌ಟಿಎ

  • NEET-UG 2025 ಫಲಿತಾಂಶ ಪ್ರಕಟ; ರಾಜಸ್ಥಾನದ ಅಭ್ಯರ್ಥಿ ಟಾಪರ್‌, ಕರ್ನಾಟಕದ ನಿಖಿಲ್‌ಗೆ 17ನೇ ರ‍್ಯಾಂಕ್‌

    NEET-UG 2025 ಫಲಿತಾಂಶ ಪ್ರಕಟ; ರಾಜಸ್ಥಾನದ ಅಭ್ಯರ್ಥಿ ಟಾಪರ್‌, ಕರ್ನಾಟಕದ ನಿಖಿಲ್‌ಗೆ 17ನೇ ರ‍್ಯಾಂಕ್‌

    – ರಾಜಸ್ಥಾನದ ಅಭ್ಯರ್ಥಿ ಮಹೇಶ್‌ಗೆ ಮೊದಲ ರ‍್ಯಾಂಕ್‌

    ನವದೆಹಲಿ: ನೀಟ್‌-ಯುಜಿ 2025 ಪರೀಕ್ಷೆಯ (NEET UG) ಫಲಿತಾಂಶವನ್ನು ಶನಿವಾರ ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ (NTA) ಪ್ರಕಟಿಸಿದೆ.

    ಪರೀಕ್ಷೆಯಲ್ಲಿ ರಾಜಸ್ಥಾನದ ಮಹೇಶ್‌ ಕುಮಾರ್‌ ಮೊದಲ ರ‍್ಯಾಂಕ್‌ ಬಂದಿದ್ದಾರೆ. ಕರ್ನಾಟಕದ ನಿಖಿಲ್‌ ಸೊನ್ನಾಡ್‌ ದೇಶದಲ್ಲೇ 17ನೇ ರ‍್ಯಾಂಕ್‌ ಹಾಗೂ ರುಚಿರ್‌ ಗುಪ್ತಾ 22ನೇ ರ‍್ಯಾಂಕ್‌ ಪಡೆದಿದ್ದಾರೆ. ತೇಜಸ್ ಶೈಲೇಶ್ ಘಾಟ್ಗಾಲ್ಕರ್ 38ನೇ ರ‍್ಯಾಂಕ್‌ ಗಳಿಸಿದ್ದಾರೆ.

    ಮೊದಲ ರ‍್ಯಾಂಕ್‌ ಪಡೆದ ಅಭ್ಯರ್ಥಿ 99.9999547% ಪಡೆದುಕೊಂಡಿದ್ದಾರೆ. ಅಭ್ಯರ್ಥಿಗಳು ತಮ್ಮ ಅಧಿಕೃತ ಫಲಿತಾಂಶವನ್ನು neet.nta.nic.in ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.

    ದೇಶಾದ್ಯಂತ ಒಟ್ಟು 22,76,069 ಅಭ್ಯರ್ಥಿಗಳು ಪರೀಕ್ಷೆಗೆ ರಿಜಿಸ್ಟರ್ ಮಾಡಿಕೊಂಡಿದ್ದರು. ಅವರ ಪೈಕಿ 22,09,318 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಒಟ್ಟಾರೆ 12,36,531 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

    ಕರ್ನಾಟಕದಲ್ಲಿ 1,47,782 ಅಭ್ಯರ್ಥಿಗಳು ಎಕ್ಸಾಂಗೆ ರಿಜಿಸ್ಟರ್ ಆಗಿದ್ದರು. ಈ ಪೈಕಿ 1,42,369 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. 83,582 ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ.

  • NEET-UG ಕೇಂದ್ರವಾರು ಫಲಿತಾಂಶ ಪ್ರಕಟ

    NEET-UG ಕೇಂದ್ರವಾರು ಫಲಿತಾಂಶ ಪ್ರಕಟ

    ನವದೆಹಲಿ: ನೀಟ್‌-ಯುಜಿ 2024 ಪರೀಕ್ಷೆ (NEET-UG) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಇಂದು ಪ್ರಕಟಿಸಿದೆ. ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ನಗರ ಮತ್ತು ಕೇಂದ್ರವಾರು ಫಲಿತಾಂಶ ಪ್ರಕಟಿಸಿದೆ.

    ಪರೀಕ್ಷೆ ಬರೆದ ಅಭ್ಯರ್ಥಿಗಳು ಎನ್‌ಟಿಎ NEET ನ ಅಧಿಕೃತ ವೆಬ್‌ಸೈಟ್‌ exams.nta.ac.in/NEET/ ಮತ್ತು neet.ntaonline.in ನಲ್ಲಿ ಫಲಿತಾಂಶಗಳನ್ನು ಪರಿಶೀಲಿಸಬಹುದು. ಇದನ್ನೂ ಓದಿ: ಜುಲೈ 20ರಂದು NEET-UG ಫಲಿತಾಂಶ ಪ್ರಕಟಿಸಿ – ಎನ್‌ಟಿಎಗೆ ಸುಪ್ರೀಂ ಆದೇಶ

    ನೀಟ್‌ ಯುಜಿ ಫಲಿತಾಂಶವನ್ನು ಜು.20 ರಂದು ಮಧ್ಯಾಹ್ನ ಒಳಗೆ ಪ್ರಕಟಿಸಬೇಕು ಎಂದು ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ಗುರುವಾರ ನಿರ್ದೇಶನ ನೀಡಿತ್ತು. ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ. ಆದರೆ ವಿದ್ಯಾರ್ಥಿಗಳ ಹೆಸರನ್ನು ಬಹಿರಂಗಪಡಿಸಬಾರದು ಎಂದು ನ್ಯಾಯಾಲಯ ಆದೇಶಿಸಿತ್ತು.

    ಸಿಜೆಐ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಶನಿವಾರದ ಮಧ್ಯಾಹ್ನದೊಳಗೆ ನಗರ ಮತ್ತು ಕೇಂದ್ರವಾರು ಪ್ರತ್ಯೇಕವಾಗಿ ಫಲಿತಾಂಶಗಳನ್ನು ಪ್ರಕಟಿಸಲು ಆದೇಶಿಸಿತ್ತು. ಇದನ್ನೂ ಓದಿ: NEET: ಪರೀಕ್ಷಾ ಮಂಡಳಿ ಟ್ರಂಕ್‌ನಿಂದ ಪ್ರಶ್ನೆಪತ್ರಿಕೆ ಕದ್ದಿದ್ದ ಎಂಜಿನಿಯರ್‌ ಬಂಧನ

    ಮೇ 5 ರಂದು 14 ವಿದೇಶಿ ಸೇರಿದಂತೆ 571 ನಗರಗಳ 4,750 ಕೇಂದ್ರಗಳಲ್ಲಿ ನೀಟ್‌-ಯುಜಿ ಪರೀಕ್ಷೆ ನಡೆಸಲಾಗಿತ್ತು. 23.33 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಸುಮಾರು 1,563 ಅಭ್ಯರ್ಥಿಗಳು ಮರು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂತು. ಇದರ ವಿರುದ್ಧ ದೇಶಾದ್ಯಂತ ಅಭ್ಯರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.

  • NEET-UG ಮರು ಪರೀಕ್ಷೆ ನಮ್ಮ ಕೊನೆಯ ಆಯ್ಕೆ, ಪೇಪರ್‌ ಸೋರಿಕೆ ಬಗ್ಗೆ ತನಿಖೆ ನಡೆಸಬೇಕು: ಸುಪ್ರೀಂ

    ನವದೆಹಲಿ: ಮರು ಪರೀಕ್ಷೆ ನಡೆಸುವುದು ನಮ್ಮ ಕೊನೆಯ ಆಯ್ಕೆ. ಮರು ಪರೀಕ್ಷೆಯನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ 23 ಲಕ್ಷ ವಿದ್ಯಾರ್ಥಿಗಳೊಂದಿಗೆ ನಾವು ವ್ಯವಹರಿಸುತ್ತಿರುವ ಕಾರಣ ಸೋರಿಕೆಯ ವ್ಯಾಪ್ತಿಯ ಬಗ್ಗೆ ನಾವು ಜಾಗೃತರಾಗಿರಬೇಕು ಎಂದು ಸುಪ್ರೀಂಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (CJI DY Chandrachud) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    NEET-UG ಪ್ರಶ್ನೆ ಪತ್ರಿಕೆ ಸೋರಿಕೆ, ಮರು ಪರೀಕ್ಷೆ ಕೋರಿ ಸಲ್ಲಿಕೆಯಾಗಿದ್ದ 30ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ ನಡೆಸಿದ ಸಿಜೆಐ ಚಂದ್ರ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಮೂರು ಪ್ರಮುಖ ಪ್ರಶ್ನೆಗಳನ್ನು ಕೇಂದ್ರ ಸರ್ಕಾರ, ಸಿಬಿಐ ಮತ್ತು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ (NTA) ಮುಂದಿಟ್ಟಿದೆ.‌  ಇದನ್ನೂ ಓದಿ: ವಿಶ್ವ ಚಾಂಪಿಯನ್ಸ್‌ಗೆ 125 ಕೋಟಿ ರೂ. ಬಹುಮಾನ – ರೋಹಿತ್‌, ಕೊಹ್ಲಿ, ದ್ರಾವಿಡ್‌ಗೆ ಸಿಕ್ಕಿದ್ದೆಷ್ಟು?

    ವಕೀಲರ ವಾದ ಆಲಿಸಿದ ಬಳಿಕ ಮಧ್ಯಂತರ ಆದೇಶ ನೀಡಿದ ಪೀಠ, ವಕೀಲರು ಮಂಡಿಸಿದ ವಾದದಲ್ಲಿ 2020 ರಲ್ಲಿ ಒಬ್ಬ ವಿದ್ಯಾರ್ಥಿ, 2021 ರಲ್ಲಿ 3 ಮತ್ತು 2022 ರಲ್ಲಿ 1, 2023 ರಲ್ಲಿ 2 ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ಗಳಿಸಿದ್ದಾರೆ. 2024 ರಲ್ಲಿ 720 ವಿದ್ಯಾರ್ಥಿಗಳು ಗರಿಷ್ಠ ಅಂಕಗಳನ್ನು ಪಡೆದಿದ್ದಾರೆ. ಫಲಿತಾಂಶದಲ್ಲಿ ಆಮೂಲಾಗ್ರ ಹೆಚ್ಚಳ ಕಂಡು ಬಂದಿದೆ. ಪ್ರಸ್ತುತ ಹಂತದಲ್ಲಿ ಪಾಟ್ನಾ, ದೆಹಲಿ, ಗುಜರಾತ್, ಜಾರ್ಖಂಡ್ ಮತ್ತು ರಾಜಸ್ಥಾನದಲ್ಲಿ ಎಫ್‌ಐಆರ್ ದಾಖಲಾಗಿರುವುದನ್ನು ನ್ಯಾಯಾಲಯವು ಅನುಮೋದಿಸಿದೆ.

    ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಎಫ್‌ಐಆರ್‌ಗಳು ಕೇವಲ ಪಾಟ್ನಾಕ್ಕೆ ಸೀಮಿತವಾಗಿದೆಯೇ ವಿವರಕ್ಕೆ ಕಾಯಬೇಕಾಗಿದೆ. ಪರೀಕ್ಷೆಯನ್ನು ಸುಮಾರು 23 ಲಕ್ಷ ವಿದ್ಯಾರ್ಥಿಗಳನ್ನು ಒಳಗೊಂಡ ವ್ಯಾಪಕ ಶ್ರೇಣಿಯಲ್ಲಿ ನಡೆಸಲಾಗಿದೆ. ಪೇಪರ್ ಲೀಕ್ ವ್ಯವಸ್ಥಿತ ಮಟ್ಟದಲ್ಲಿ ನಡೆದಿದೆಯೇ?, ಅಕ್ರಮ ಸಂಪೂರ್ಣ ಪರೀಕ್ಷಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಿದೆಯೇ?, ವಂಚನೆಯ ಫಲಾನುಭವಿಗಳನ್ನು ಕಳಂಕರಹಿತ ವಿದ್ಯಾರ್ಥಿಗಳಿಂದ ಪ್ರತ್ಯೇಕಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕಾಗಿದೆ. ವಂಚನೆಯ ಫಲಾನುಭವಿಗಳನ್ನು ಇತರರಿಂದ ಪ್ರತ್ಯೇಕಿಸಲು ಸಾಧ್ಯವಾಗದಿದ್ದಲ್ಲಿ ಮರು-ಪರೀಕ್ಷೆಯನ್ನು ಮಾಡುವುದು ಅಗತ್ಯವಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಇದನ್ನೂ ಓದಿ: ಋತುಚಕ್ರದ ವೇಳೆ ಮಹಿಳೆಯರಿಗೆ ರಜೆ ನೀಡೋದು ಸರ್ಕಾರದ ನೀತಿಯ ವಿಷಯ- ವಿಚಾರಣೆ ನಡೆಸಲು ಸುಪ್ರೀಂ ನಕಾರ

    ಪ್ರಶ್ನೆ ಪತ್ರಿಕೆ ಸೋರಿಕೆಯ ಸ್ವರೂಪ, ಪ್ರಶ್ನೆ ಪತ್ರಿಕೆ‌ ಸೋರಿಕೆಯಾದ ಸ್ಥಳಗಳು, ಸೋರಿಕೆ ಮತ್ತು ಪರೀಕ್ಷೆಯ ನಡವಳಿಕೆಯ ನಡುವಿನ ಸಮಯದ ವಿಳಂಬ ಈ ಅಂಶದ ಮೇಲೆ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ತನಿಖಾಧಿಕಾರಿ ತನಿಖೆಯ ಪ್ರಸ್ತುತ ಸ್ಥಿತಿಗತಿಯ ವರದಿಯನ್ನು ಸಲ್ಲಿಸಬೇಕು ಎಂದು ಸಿಬಿಐಗೆ ಸೂಚಿಸಿತು.

    ಪ್ರಶ್ನೆ ಪತ್ರಿಕೆ ಸೋರಿಕೆಯ ಫಲಾನುಭವಿಗಳನ್ನು ಗುರುತಿಸಲು ತೆಗೆದುಕೊಂಡ ಕ್ರಮಗಳನ್ನು ನ್ಯಾಯಾಲಯಕ್ಕೆ ತಿಳಿಸಬೇಕು, ಸೋರಿಕೆಯಾದ ಕೇಂದ್ರಗಳು/ನಗರಗಳನ್ನು ಗುರುತಿಸಲು NTA ತೆಗೆದುಕೊಂಡ ಕ್ರಮಗಳು, ಸೋರಿಕೆಯ ಫಲಾನುಭವಿಗಳನ್ನು ಗುರುತಿಸಲು ಅನುಸರಿಸಿದ ವಿಧಾನಗಳು, ಸೋರಿಕೆಯನ್ನು ಹೇಗೆ ಪ್ರಸಾರ ಮಾಡಲಾಯಿತು ಎಲ್ಲಾ ಮಾಹಿತಿಯನ್ನು ಒದಗಿಸುವಂತೆ ಕೋರ್ಟ್ ಎನ್‌ಟಿಎ, ಕೇಂದ್ರ ಸರಕಾರ ಮತ್ತು ಸಿಬಿಐ ಸೂಚಿಸಿದೆ. ಬುಧವಾರ ಸಂಜೆ 5 ಗಂಟೆ ಒಳಗೆ ಅಫಿಡವಿಟ್ ಸಲ್ಲಿಸಬೇಕು ಎಂದು ಸೂಚಿಸಿ ಜುಲೈ 11ಕ್ಕೆ ವಿಚಾರಣೆಯನ್ನು ಮುಂದೂಡಿತು.

     

  • ನೀಟ್‌ ಚರ್ಚೆಗೆ ಅವಕಾಶ ಮಾಡಿಕೊಡಿ – ಪ್ರಧಾನಿ ಮೋದಿಗೆ ರಾಹುಲ್‌ ಗಾಂಧಿ ಪತ್ರ!

    ನೀಟ್‌ ಚರ್ಚೆಗೆ ಅವಕಾಶ ಮಾಡಿಕೊಡಿ – ಪ್ರಧಾನಿ ಮೋದಿಗೆ ರಾಹುಲ್‌ ಗಾಂಧಿ ಪತ್ರ!

    ನವದೆಹಲಿ: ʻನೀಟ್‌ʼ ಪರೀಕ್ಷಾ ಅಕ್ರಮದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಲು ಅವಕಾಶ ಮಾಡಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಖುದ್ದು ಪತ್ರ ಬರೆದಿದ್ದಾರೆ. ಈ ಪತ್ರವನ್ನು ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

    ಜುಲೈ 1ರಂದು ರಾಷ್ಟ್ರಪತಿಗಳ (President Of India) ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ್ದ ರಾಹುಲ್‌ ಗಾಂಧಿ ನೀಟ್‌ ಕುರಿತು ಚರ್ಚೆಗೆ (NEET Debate) ಅವಕಾಶ ಕೋರಿದ್ದರು. ಆದರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸದನದ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲೇಖಿಸಿ ಚರ್ಚೆಗೆ ಅವಕಾಶ ನಿರಾಕರಿಸಿದ್ದರು. ಇದಾದ ಮರುದಿನವೇ ರಾಹುಲ್‌ ಗಾಂಧಿ ಅವರು ಪತ್ರ ಬರೆದಿದ್ದಾರೆ.

    ರಾಹುಲ್‌ ಗಾಂಧಿ ಬರೆದ ಪತ್ರದಲ್ಲಿ ಏನಿದೆ?
    ಈ ಪತ್ರವು ನಿಮ್ಮನ್ನು ಚೆನ್ನಾಗಿ ಕಂಡುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. NEET ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಮನವಿ ಮಾಡುವಂತೆ ಕೋರಿ ಪತ್ರ ಬರೆಯುತ್ತಿದ್ದೇನೆ. ಜೂನ್‌ 28ರಂದು ಸಂಸತ್ತಿನ ಉಭಯ ಸದನಗಳಲ್ಲಿ ನೋಟ್‌ ಕುರಿತು ಚರ್ಚೆ ನಡೆಸಬೇಕು ಎಂಬ ವಿರೋಧ ಪಕ್ಷಗಳ ಮನವಿಯನ್ನು ನಿರಾಕರಿಸಲಾಯಿತು. ಜೂನ್‌ 30 ರಂದು ಸಹ ವಿಪಕ್ಷಗಳು ಮತ್ತೊಮೆ ಚರ್ಚೆಗೆ ಮನವಿ ಮಾಡಿದೆ. ಆದ್ರೆ ಲೋಕಸಭೆಯ ಗೌರವಾನ್ವಿತ ಸ್ಪೀಕರ್‌ ಅವರು ಈ ಬಗ್ಗೆ ಸರ್ಕಾರದ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದ್ದರು. ಆದ್ದರಿಂದ ಮುಂದಿನ ದಾರಿ ಕಂಡುಕೊಳ್ಳಲು ರಚನಾತ್ಮಕವಾಗಿ ತೊಡಗಿಸಿಕೊಳ್ಳುವುದು ನಮ್ಮ ಗುರಿಯಾಗಿದೆ.

    ಈ ಕ್ಷಣದಲ್ಲಿ ದೇಶಾದ್ಯಂತ ಸುಮಾರು 24 ಲಕ್ಷ ನೀಟ್‌ ಆಕಾಂಕ್ಷಿಗಳ ರಕ್ಷಣೆ ಮಾಡುವುದು ಮಾತ್ರ ನಮ್ಮ ಕಾಳಜಿಯಾಗಿದೆ. ಲಕ್ಷಾಂತರ ಕುಟುಂಬಗಳು ತಮ್ಮ ಮಕ್ಕಳಿಗಳಿಗೆ ಅನೇಕ ತ್ಯಾಗ ಮಾಡಿದ್ದಾರೆ. ಆದ್ರೆ ಪ್ರಶ್ನೆ ಪತ್ರಿಕೆ ಸೋರಿಕೆ ಎಷ್ಟೋ ಜನರ ಜೀವನದ ಕನಸನ್ನೇ ನುಚ್ಚುನೂರು ಮಾಡಿದೆ. ಈ ನಿಟ್ಟಿನಲ್ಲಿ ನೊಂದ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬದವರು ಜನಪ್ರತಿನಿಧಿಗಳಾದ ನಮ್ಮ ಮೇಲೆ ನಂಬಿಕೆಯಿಟ್ಟಿದ್ದಾರೆ. ನಾವು ಏನು ಕ್ರಮ ಕೈಗೊಳ್ಳುತ್ತೇವೆ ಎಂಬುದನ್ನು ಎದುರು ನೋಡುತ್ತಿದ್ದಾರೆ.

    ನೀಟ್‌ ಪರೀಕ್ಷಾ ಅಕ್ರಮವು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿನ ಹುಳುಕನ್ನು ಬಹಿರಂಗಪಡಿಸಿದ್ದು, ತಕ್ಷಣದ ಚರ್ಚೆಗೆ ಅರ್ಹವಾದ ವಿಚಾರವಾಗಿದೆ. ಕಳೆದ 7 ವರ್ಷಗಳಲ್ಲಿ 70ಕ್ಕೂ ಹೆಚ್ಚು ಪೇಪರ್‌ ಸೋರಿಕೆಯಾಗಿದ್ದು, 2 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. ಆದ್ರೆ ಇತರ ಪರೀಕ್ಷೆಗಳನ್ನು ಮುಂದೂಡುವುದು, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಮಹಾನಿರ್ದೇಶಕರನ್ನು ಬದಲಾಯಿಸುವ ಸರ್ಕಾರದ ಕ್ರಮ ಕೇವಲ ಕ್ರಮವನ್ನು ಮುಚ್ಚಿಹಾಕುವ ಪ್ರಯತ್ನದ ಭಾಗವಾಗಿದೆ.

    ನಮ್ಮ ವಿದ್ಯಾರ್ಥಿಗಳು ಈ ಸಮಸ್ಯೆಗಳಿಗೆ ಸರ್ಕಾರದಿಂದ ಸೂಕ್ತ ಉತ್ತರ ಕಂಡುಕೊಳ್ಳಲು ಅರ್ಹರಾಗಿದ್ದಾರೆ. ಸಂಸತ್ತಿನ ಚರ್ಚೆಯು ಅವರ ನಂಬಿಕೆಯನ್ನು ಮರುಸ್ಥಾಪಿಸಲು ಮೊದಲ ಹೆಜ್ಜೆಯಾಗಿದೆ. ಆದ್ದರಿಂದ ನೀಟ್‌ ವಿಚಾರವನ್ನು ತುರ್ತು ವಿಷಯವನ್ನಾಗಿ ಪರಿಗಣಿಸಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೀವು ಈ ಚರ್ಚೆಯನ್ನು ಮುನ್ನಡೆಸಿದರೆ ಅದು ಸೂಕ್ತವಾಗಿರುತ್ತದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

  • UGC-NET 2024: ಹೊಸ ದಿನಾಂಕ ಪ್ರಕಟಿಸಿದ ಎನ್‌ಟಿಎ

    UGC-NET 2024: ಹೊಸ ದಿನಾಂಕ ಪ್ರಕಟಿಸಿದ ಎನ್‌ಟಿಎ

    ನವದೆಹಲಿ: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ಯುಜಿಸಿ-ನೆಟ್‌, ಜಂಟಿ ಸಿಎಸ್‌ಐಆರ್‌ ಯುಜಿಸಿ ನೆಟ್‌, ಎನ್‌ಸಿಇಟಿ ಪರೀಕ್ಷೆಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಹೊಸ ದಿನಾಂಕಗಳನ್ನು ಪ್ರಕಟಿಸಿದೆ.

    UGC NET ಜೂನ್ 2024 ಪರೀಕ್ಷೆಗಳನ್ನು ಆಗಸ್ಟ್ 21 ಮತ್ತು ಸೆಪ್ಟೆಂಬರ್ 4 ರ ನಡುವೆ ನಡೆಸಲಾಗುವುದು. ಜಂಟಿ CSIR UGC NET ಅನ್ನು ಜುಲೈ 25 ರಿಂದ ಜುಲೈ 27 ರವರೆಗೆ ಮತ್ತು NCET ಪರೀಕ್ಷೆಗಳನ್ನು ಜುಲೈ 10 ರಂದು ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿಯನ್ನು ನಾವು ನಿರ್ಮಿಸಿಲ್ಲ, 2009 ರಲ್ಲಿ ಬೇರೊಂದು ಕಂಪನಿ ನಿರ್ಮಿಸಿದೆ: L&T ಸ್ಪಷ್ಟನೆ

    ಅಖಿಲ ಭಾರತ ಆಯುಷ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆ (AIAPGET) 2024 ಈಗಾಗಲೇ ನಿಗದಿಪಡಿಸಿದಂತೆ ಜುಲೈ 6ರಂದು ನಡೆಯಲಿದೆ. ಯುಜಿಸಿ-ನೆಟ್ ಪರೀಕ್ಷೆ ಸೇರಿದಂತೆ ಎಲ್ಲಾ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತವಾಗಿರುತ್ತವೆ. ಈ ಹಿಂದೆ, ಯುಜಿಸಿ ನೆಟ್ ಜೂನ್ 2024 ಪರೀಕ್ಷೆ ಆಫ್‌ಲೈನ್‌ನಲ್ಲಿ ನಡೆದಿತ್ತು.

    ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ದೆಹಲಿಯ ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮುಂಬರುವ ಬಜೆಟ್‍ನಲ್ಲಿ ಹೆಜ್ಜಾಲ -ಚಾಮರಾಜನಗರ ರೈಲ್ವೆ ಮಾರ್ಗ ಯೋಜನೆ ಸೇರ್ಪಡೆ: ಅಶ್ವಿನಿ ವೈಷ್ಣವ್

  • CSIR-UGC-NET ಪರೀಕ್ಷೆ ಮಂದೂಡಿಕೆ

    CSIR-UGC-NET ಪರೀಕ್ಷೆ ಮಂದೂಡಿಕೆ

    ನವದೆಹಲಿ: ನೀಟ್, ನೆಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಶಂಕೆ ಬೆನ್ನಲ್ಲೇ CSIR-UGC-NET ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಮುಂದೂಡಿದೆ.

    ಜೂನ್ 25 ಮತ್ತು ಜೂನ್ 27 ರಂದು ಪರೀಕ್ಷೆಗಳು ನಡೆಯಬೇಕಿತ್ತು. ಲಾಜಿಸ್ಟಿಕ್ ಸಮಸ್ಯೆಗಳಿಂದ ಪರೀಕ್ಷೆ (Exam) ಮುಂದೂಡಲಾಗುತ್ತಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಅಧಿಕೃತ ವೆಬ್‌ಸೈಟ್ ಮೂಲಕ ತಿಳಿಸಲಾಗುವುದು ಎಂದು ಎನ್‌ಟಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

     

    ಯುಜಿಸಿ ನಿಗದಿಪಡಿಸಿದ ಅರ್ಹತಾ ಮಾನದಂಡಗಳಿಗೆ ಅನುಗುಣವಾಗಿ ಜೂನಿಯರ್ ರಿಸರ್ಚ್ ಫೆಲೋಶಿಪ್ (JRF), ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳು ಮತ್ತು ಪಿಎಚ್‌ಡಿ ಪ್ರವೇಶಗಳಿಗೆ ಳ ಅರ್ಹತೆಯನ್ನು ನಿರ್ಧರಿಸಲು ಈ ಪರೀಕ್ಷೆ ನಡೆಸಲಾಗುತ್ತದೆ. ಇದನ್ನೂ ಓದಿ: 31 ತಿಂಗಳ ನಂತರ ಈಡೇರಿತು ಪ್ರತಿಜ್ಞೆ- ಮುಖ್ಯಮಂತ್ರಿಯಾಗಿ ವಿಧಾನಸಭೆಗೆ ಕಾಲಿಟ್ಟ ಚಂದ್ರಬಾಬು ನಾಯ್ಡು

    CSIR-UGC-NET ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ಜೂನ್ ಮತ್ತು ಡಿಸೆಂಬರ್‌ನಲ್ಲಿ ನಡೆಸಲಾಗುತ್ತದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಪರೀಕ್ಷೆಯಲ್ಲಿ 1.75 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರೆ ಈ ವರ್ಷ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

     

  • ಪರೀಕ್ಷೆ ನಡೆದ ಮರುದಿನವೇ UGC-NET ಎಕ್ಸಾಂ ರದ್ದು

    ಪರೀಕ್ಷೆ ನಡೆದ ಮರುದಿನವೇ UGC-NET ಎಕ್ಸಾಂ ರದ್ದು

    ನವದೆಹಲಿ: UGC-NET (ವಿಶ್ವವಿದ್ಯಾಲಯ ಅನುದಾನ ಆಯೋಗ – ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಪರೀಕ್ಷೆಯನ್ನು ನಡೆಸಿದ ಮರುದಿನವೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರದ್ದುಗೊಳಿಸಲು ನಿರ್ಧರಿಸಿದೆ.

    ಪರೀಕ್ಷೆಯಲ್ಲಿನ ಅಕ್ರಮ ನಡೆದಿದೆ ಎಂಬ ದೂರು ಬಂದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೂನ್ 18ರ ಮಂಗಳವಾರದಂದು UGC-NET ಪರೀಕ್ಷೆಯನ್ನು ದೇಶದಾದ್ಯಂತ 317 ನಗರಗಳಲ್ಲಿ 1205 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. 11 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

    ಮಂಗಳವಾರ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಲು ಶಿಕ್ಷಣ ಸಚಿವಾಲಯವು UGC-NET ಜೂನ್ 2024 ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ.

    ಪರೀಕ್ಷೆಯನ್ನು ಹೊಸದಾಗಿ ನಡೆಸಲಾಗುವುದು. ಅದರ ಮಾಹಿತಿಯನ್ನು ಪ್ರತ್ಯೇಕವಾಗಿ ಹಂಚಿಕೊಳ್ಳಲಾಗುತ್ತದೆ. ಅಲ್ಲದೆ ಪ್ರಕರಣವನ್ನು ಸಮಗ್ರ ತನಿಖೆಗಾಗಿ ಸಿಬಿಐಗೆ ಹಸ್ತಾಂತರಿಸಲಾಗಿದೆ ಎಂಬುದಾಗಿ NTA ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಯ ಫಲವನ್ನು ಆರ್ಥಿಕ ಸ್ಥಿತಿವಂತರು ಬಿಡಬೇಕು :ಸಚಿವ ಮಂಕಾಳು ವೈದ್ಯ

    ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಮತ್ತು/ಅಥವಾ ಜೂನಿಯರ್ ರಿಸರ್ಚ್ ಫೆಲೋಶಿಪ್ (JRF) ಹುದ್ದೆಗೆ ಅರ್ಹತೆಯನ್ನು ನಿರ್ಧರಿಸಲು UGC-NET ಅನ್ನು ನಡೆಸಲಾಗುತ್ತದೆ.