Tag: ಎನ್‌ಐಎ ಅಧಿಕಾರಿ

  • ಲಕ್ನೋದ ಹಾಸ್ಟೆಲ್‌ನಲ್ಲಿ ಎನ್‌ಐಎ ಅಧಿಕಾರಿ ಪುತ್ರಿಯ ನಿಗೂಢ ಸಾವು!

    ಲಕ್ನೋದ ಹಾಸ್ಟೆಲ್‌ನಲ್ಲಿ ಎನ್‌ಐಎ ಅಧಿಕಾರಿ ಪುತ್ರಿಯ ನಿಗೂಢ ಸಾವು!

    – 19 ವರ್ಷದ ಕಾನೂನು ವಿದ್ಯಾರ್ಥಿನಿ ಸಾವಿನ ಬಗ್ಗೆ ಪೊಲೀಸರು ಹೇಳಿದ್ದೇನು?

    ಲಕ್ನೋ: 19 ವರ್ಷದ ಕಾನೂನು ವಿದ್ಯಾರ್ಥಿನಿಯೊಬ್ಬರು ಲಕ್ನೋದ ಹಾಸ್ಟೆಲ್‌ (Lucknow Hostel) ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

    ಲಕ್ನೋದ ಆಶಿಯಾನಾ ಪ್ರದೇಶದಲ್ಲಿರುವ ರಾಮ್ ಮನೋಹರ್ ಲೋಹಿಯಾ ಕಾನೂನು ವಿವಿ (Ram Manohar Lohia National Law University) ಹಾಸ್ಟೆಲ್ ಕೊಠಡಿಯಲ್ಲಿ ನೆಲದ ಮೇಲೆ ಕಾನೂನು ವಿದ್ಯಾರ್ಥಿನಿ ಅನಿಕಾ ರಸ್ತೋಗಿ ಶವವಾಗಿ ಪತ್ತೆಯಾಗಿದ್ದಾರೆ. 3ನೇ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿನಿಯಾಗಿರುವ ಅನಿಕಾ, ಪ್ರಸ್ತುತ ದೆಹಲಿ NIA (ರಾಷ್ಟ್ರೀಯ ತನಿಖಾ ಸಂಸ್ಥೆ) ಇನ್ಸ್ಪೆಕ್ಟರ್‌ ಜನರಲ್‌ ಆಗಿ ಸೇವೆ ಸಲ್ಲಿಸುತ್ತಿರುವ ಸಂತೋಷ್‌ ರಸ್ತೋಗಿ ಅವರ ಪುತ್ರಿ.

    ಅನಿಕಾ (Anika Rastogi) ಶನಿವಾರ ತಡರಾತ್ರಿ ಹಾಸ್ಟೆಲ್‌ ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಆಕೆಯನ್ನ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಕೆಯ ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಕೇಸ್‌ ದಾಖಲಿಸಿಕೊಂಡು ಆಶಿಯಾನಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: MUDA Scam | ಕೋರ್ಟ್ ತೀರ್ಮಾನದ ಮೇಲೆ ಸಿಎಂ ಭವಿಷ್ಯ – ಕೋವಿಡ್ ಹಗರಣ ವರದಿಗೆ ಉತ್ತರ ಕೊಡ್ತೇವೆ: ಬೊಮ್ಮಾಯಿ

    ಪ್ರಾಥಮಿಕ ವರದಿಗಳ ಪ್ರಕಾರ, ಅನಿಕಾ ಶನಿವಾರ ಬೇಗನೆ ಹಾಸ್ಟೆಲ್‌ ರೂಮ್‌ ಸೇರಿಕೊಂಡಿದ್ದರು. ಎಷ್ಟು ಬಾರಿ ಫೋನ್‌ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗಲಿಲ್ಲ. ಹಾಸ್ಟೆಲ್‌ ರೂಮ್‌ ಬಾಗಿಲು ಬಡಿದರೂ ಆಕೆ ತೆರೆಯದೇ ಇದ್ದಾಗ ಬಾಗಿಲು ಒಡೆದು ನೋಡಿದ್ದಾರೆ. ಆಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆಕೆಯಿದ್ದ ಕೊಠಡಿಯಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಸಹ ತಿಳಿದುಬಂದಿದೆ. ಇದನ್ನೂ ಓದಿ: Bengaluru | ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಆಯುಕ್ತರಿಗೆ ಡಿಸಿಎಂ 15 ದಿನಗಳ ಗಡುವು

    ಅಲ್ಲದೇ ಅನಿಕಾ ಅವರ ಬಟ್ಟೆ ಯಥಾಸ್ಥಿತಿಯಲ್ಲಿತ್ತು, ಆಕೆ ದೇಹದಲ್ಲೂ ಯಾವುದೇ ಗಾಯಗಳು ಕಂಡುಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಕುಟುಂಬದಿಂದ ಯಾವುದೇ ದೂರು ಸ್ವೀಕರಿಸಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಡುಪಿ | ಸಮುದ್ರದಲ್ಲಿ ಮುಳುಗುತ್ತಿದ್ದ ಮೀನುಗಾರ – ಸತತ 1 ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಣೆ