Tag: ಎತ್ತು

  • ವಿದ್ಯುತ್ ತಂತಿ ತಗುಲಿ ಜೋಡೆತ್ತು ಸಾವು

    ವಿದ್ಯುತ್ ತಂತಿ ತಗುಲಿ ಜೋಡೆತ್ತು ಸಾವು

    ಯಾದಗಿರಿ: ಜೆಸ್ಕಾಂ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ತಂತಿ ತಗುಲಿ ಜೋಡೆತ್ತು ಸಾವನ್ನಪ್ಪಿರುವ ಘಟನೆ ಶೇಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.

    ತಾಲ್ಲೂಕಿನ ಶೇಟ್ಟಿಗೇರಿ ಗ್ರಾಮದಲ್ಲಿ ಭೀಮರಾಯ ಜಿನಿಕೇರಿ ರೈತ ಹೊಲದಲ್ಲಿ ಉಳುಮೆ ಮಾಡಿ ಸಂಜೆ ಎತ್ತುಗಳನ್ನು ಬಿಳು ಪ್ರದೇಶದಲ್ಲಿ ಮೇಯಲು ಬಿಟ್ಟಿದ್ದರು. ಈ ವೇಳೆ 11ಕೆ,ವಿ ವಿದ್ಯುತ್ ಕಂಬ ತಂತಿ ಹರಿದು ಬಿದ್ದ ಪರಿಣಾಮ ಜೋಡೆತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಇದನ್ನೂ ಓದಿ: 45 ಕೆಜಿ ತೂಕವಿದ್ದ 2ವರ್ಷದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ಸುಮಾರು ಎರಡು ತಿಂಗಳ ಹಿಂದೆ ಭೀಮರಾಯ ಒಂದು ಲಕ್ಷದ ಹತ್ತು ಸಾವಿರ ರೂಪಾಯಿ ಸಾಲ ಮಾಡಿ ಎರಡು ಎತ್ತಗಳನ್ನು ಖರೀದಿ ಮಾಡಿದ್ದರು. ರೈತ ಮೊದಲೇ ಕೊರೊನಾದಿಂದ ತತ್ತರಿಸಿ ಕೈಸಾಲ ಮಾಡಿ ಎತ್ತು ಖರೀದಿಸಿ ಕೃಷಿ ಮಾಡಲು ಮುಂದಾಗಿದ್ದರು. ಈಗ ಜೆಸ್ಕಾಂ ಅಧಿಕಾರ ನಿರ್ಲಕ್ಷ್ಯದಿಂದ ರೈತನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮನೆಯ ಹಿರಿಮಕ್ಕಳಂತಿದ್ದ ಎತ್ತುಗಳನ್ನು ಕಳೆದುಕೊಂಡ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ. ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಜಮೀನಿನಲ್ಲಿ ಕುಂಟೆ ಎಳೆದ ರೈತ ಹುಡುಗಿಯರು -ಎತ್ತುಗಳನ್ನು ಕೊಡುಗೆ ನೀಡಿದ ನಾಗರಾಜ್ ಛಬ್ಬಿ

    ಜಮೀನಿನಲ್ಲಿ ಕುಂಟೆ ಎಳೆದ ರೈತ ಹುಡುಗಿಯರು -ಎತ್ತುಗಳನ್ನು ಕೊಡುಗೆ ನೀಡಿದ ನಾಗರಾಜ್ ಛಬ್ಬಿ

    ಹುಬ್ಬಳ್ಳಿ: ಎತ್ತುಗಳಿಲ್ಲದೇ ತನ್ನ ಇಬ್ಬರು ಹೆಣ್ಣು ಮಕ್ಕಳ ಕೈಯಲ್ಲಿ ಕುಂಟೆ ಎಳೆಸಿದ್ದ ರೈತನಿಗೆ ಕಾಂಗ್ರೆಸ್ ಮುಖಂಡ, ಮಾಜಿ ಎಂಎಲ್‍ಸಿ ನಾಗರಾಜ್ ಛಬ್ಬಿ ಎತ್ತುಗಳನ್ನು ಕೊಡುಗೆ ನೀಡುವ ಮೂಲಕ ಮಾನವೀಯತೆಯ ಮೆರೆದಿದ್ದಾರೆ. ಇದನ್ನೂ ಓದಿ:  ಟೋಕಿಯೋ ಒಲಿಂಪಿಕ್ಸ್‌ಗೆ ರೈಲ್ವೇ ಕಲೆಕ್ಟರ್ ಆಯ್ಕೆ

    ಕಲಘಟಗಿ ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ಕಲ್ಲಪ್ಪ ಜಾವೂರ ಎಂಬುವರಿಗೆ ಎತ್ತುಗಳನ್ನು ಸಿದ್ದಾರೂಢ ಮಠದ ಆವರಣದಲ್ಲಿ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಎತ್ತುಗಳು ಇಲ್ಲದ್ದಕ್ಕೆ ಕಲ್ಲಪ್ಪ ತನ್ನ ಇಬ್ಬರು ಹೆಣ್ಣು ಮಕ್ಕಳ ಹೆಗಲ ಮೇಲೆ ಕುಂಟೆ ಹಾಕಿ ಹೊಲವನ್ನು ಹರಗಿ ಜಮೀನು ಹದಗೊಳಿಸುವ ದೃಶ್ಯ, ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು ನನ್ನ ಗಮನಕ್ಕೆ ಬಂದಿತು. ಕೃಷಿಕನಿಗೆ ಎತ್ತುಗಳನ್ನು ಕೊಡಿಸಬೇಕೆಂದು ನಿರ್ಧಾರ ಮಾಡಿ ಕಾರ್ಯಕರ್ತರ ಮೂಲಕ ಕಲ್ಲಪ್ಪನಿಗೆ ತಿಳಿಸಲಾಯಿತು. ಅದಕ್ಕೆ ಅವರ ಕುಟುಂಬದವರು ಸಹಮತ ವ್ಯಕ್ತಪಡಿಸಿದರು. ಆ ಹಿನ್ನೆಲೆಯಲ್ಲಿ ಸಿದ್ದಾರೂಢರ ಸನ್ನಿದಾನದಲ್ಲಿ ಎತ್ತುಗಳನ್ನು ಕೊಡಬೇಕೆಂದು ಸಂಕಲ್ಪ ಮಾಡಿಕೊಳ್ಳಲಾಗಿತ್ತು. ಅದರಂತೆ ಕಾಂಗ್ರೆಸ್ ನಾಯಕ ಎಸ್ ಆರ್ ಪಾಟೀಲ್ ಅವರ ಮೂಲಕ ರೈತನಿಗೆ ಎತ್ತುಗಳನ್ನ ಕೊಡುಗೆ ನೀಡಲಾಗಿದೆ ಎಂದು ಮಾಜಿ ಶಾಸಕ ನಾಗರಾಜ್ ಛಬ್ಬಿ ತಿಳಿಸಿದ್ದಾರೆ.

    ಈ ಸಂದರ್ಭದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಮುಖಂಡರಾದ ಅನಿಲ ಪಾಟೀಲ್, ಅಲ್ತಾಫ ಹಳ್ಳೂರ, ನಾಗರಾಜ ಗೌರಿ, ದೀಪಾ ಗೌರಿ, ಕಿರಣ ಪಾಟೀಲ್, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಸೇರಿದಂತೆ ಹಲವರು ಇದ್ದರು.

  • ರಸ್ತೆಯಲ್ಲಿ ಎತ್ತು, ಎಮ್ಮೆ, ಹಸುಗಳ ಮಾರಾಟ ಜೋರು

    ರಸ್ತೆಯಲ್ಲಿ ಎತ್ತು, ಎಮ್ಮೆ, ಹಸುಗಳ ಮಾರಾಟ ಜೋರು

    ಹಾವೇರಿ: ಕೊರೊನಾ ಲಾಕ್‍ಡೌನ್ ಅನ್‍ಲಾಕ್‍ಗೊಳಿಸಿದ ಹಿನ್ನೆಲೆ ಹಾವೇರಿಯ ಶಿವಲಿಂಗೇಶ್ವರ ಮಾರುಕಟ್ಟೆಯಲ್ಲಿ ಜಾನುವಾರುಗಳ ಮಾರಾಟ ಜೋರಾಗಿ ನಡೆದಿದೆ.

    ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಸರ್ಕಾರ ಅನ್ ಲಾಕ್ ಘೋಷಣೆ ಮಾಡಿದೆ. ಇನ್ನು ಅನ್ ಲಾಕ್ ಘೋಷಣೆ ಮಾಡಿ ಹನ್ನೇರಡು ದಿನಗಳು ಆಗಿಲ್ಲ, ಜನರು ಮಾಸ್ಕ್ ಧರಿಸದೇ ಓಡಾಡುವ ಸಂಖ್ಯೆ ಹೆಚ್ಚಾಗಿದೆ.

    ಇಂದು ಹಾವೇರಿಯ ಶಿವಲಿಂಗೇಶ್ವರ ಮಾರುಕಟ್ಟೆಯ ಮುಂದೆ ಎತ್ತು, ಎಮ್ಮೆ ಹಾಗೂ ಹಸುಗಳ ಮಾರಾಟ ಜೋರಾಗಿತ್ತು. ಕೊರೊನಾ ಎರಡನೇ ಅಲೆಯಿಂದಾಗಿ ಬಂದ್ ಆಗಿದ್ದ ಮಾರುಕಟ್ಟೆಯನ್ನು ಎಪಿಎಂಸಿ ಸಿಬ್ಬಂದಿ ಇಂದು ಬೆಳಗ್ಗೆ ಓಪನ್ ಮಾಡಿರಲಿಲ್ಲ. ಹೀಗಾಗಿ ಎತ್ತು, ಎಮ್ಮೆ ಹಾಗೂ ಹಸು ಮಾರಾಟಕ್ಕೆ ಬಂದ ಜನರು ಮಾರುಕಟ್ಟೆಯ ಮುಂದೆ ನಿಲ್ಲಿಸಿ ವ್ಯಾಪಾರ ವಹಿವಾಟು ನಡೆಸಿದ್ದರು.

    ಯಾವುದೇ ಸಾಮಾಜಿಕ ಅಂತರ ಇಲ್ಲದೆ, ಕೆಲವು ಜನರು ಮಾತ್ರ ಮಾಸ್ಕ್ ಧರಿಸಿದ್ದು ಬಿಟ್ಟರೆ, ಇನ್ನೂ ಕೆಲವರು ಮೈಮರೆತು ಓಡಾಡಿದವರ ಸಂಖ್ಯೆ ಹೆಚ್ಚಾತ್ತು. ವ್ಯಾಪಾರಸ್ಥರನ್ನು ಹಾಗೂ ರೈತರನ್ನು ನಿಯಂತ್ರಣ ಮಾಡಲು ಪೊಲೀಸ್ ಸಿಬ್ಬಂದಿ ಕೂಡ ಇರಲಿಲ್ಲ. ಇದನ್ನೂ ಓದಿ: ಕೆಐಎಡಿಬಿ ಕಚೇರಿ ಮೇಲೆ ಎಸಿಬಿ ದಾಳಿ – 70 ಸಾವಿರ ನಗದು, ದಾಖಲೆ ಜಪ್ತಿ

  • 2 ವರ್ಷಗಳ ಹಿಂದೆ ಮಾರಿದ್ದ ಎತ್ತು, ವಧಾಲಯದಲ್ಲಿ ನೋಡಿದ ರೈತ

    2 ವರ್ಷಗಳ ಹಿಂದೆ ಮಾರಿದ್ದ ಎತ್ತು, ವಧಾಲಯದಲ್ಲಿ ನೋಡಿದ ರೈತ

    – ವಾಪಸ್ ತಂದು ಎತ್ತಿನ ಬರ್ತ್ ಡೇ ಆಚರಿಸಿ ಸಂಭ್ರಮ

    ಧಾರವಾಡ: ಎತ್ತುಗಳು ಅಂದ್ರೆ ರೈತರ ಕೃಷಿಯ ಮೂಲ ಆಧಾರ. ಆದರೆ ಬರಗಾಲದಂತಹ ಪರಿಸ್ಥಿತಿಗಳು ಬಂದಾಗ ಅನೇಕ ರೈತರು ತಮ್ಮ ಎತ್ತುಗಳನ್ನು ಸಾಕಲು ಆಗದೇ ಬಂದಷ್ಟು ಬೆಲೆಗೆ ಮಾರಾಟ ಮಾಡಿ ಬಿಡ್ತಾರೆ. ಇಲ್ಲೊಬ್ಬ ರೈತ ಹಾಗೆಯೇ ಎರಡು ವರ್ಷಗಳ ಹಿಂದೆ ತನ್ನ ಎತ್ತನ್ನ ಮಾರಿದ್ದರು. ಅದಾದ ಕೆಲವೇ ದಿನಕ್ಕೆ ಆ ಎತ್ತು ವಧಾಲಯದ ಬಳಿ ಸಿಕ್ಕಿದೆ. ಇನ್ನೇನು ಬಲಿಯಾಗುತ್ತಿದ್ದ ಎತ್ತನ್ನು ರಕ್ಷಿಸಿದ ರೈತ, ಅದಕ್ಕೆ ದುಪ್ಪಟ್ಟು ಬೆಲೆ ನೀಡಿ ಮನೆಗೆ ಕರೆ ತಂದಿದ್ದಾರೆ. ಎತ್ತನ್ನು ಮರಳಿ ತಂದ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸಿ ಸಂಭ್ರಮಿಸಿದ್ದಾರೆ.

    ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದ ನಾಗಪ್ಪ ಓಮಗಣ್ಣವರ್ ಎತ್ತು ವಾಪಸ್ ತಂದ ರೈತ. ಎರಡು ವರ್ಷದ ಹಿಂದೆ ಭೀಕರ ಬರಗಾಲ ಬಂದಾಗ, ಎತ್ತನ್ನು ಸಾಕಲು ಕಷ್ಟವಾಗಿತ್ತು. ಎತ್ತನ್ನು ಪಕ್ಕದ ಊರಿನ ರೈತನಿಗೆ ಮಾರಿದ್ದರು. ಆದರೆ ಮಾರಾಟವಾದ ಎರಡು ವರ್ಷದ ಬಳಿಕ ಧಾರವಾಡ ಕಸಾಯಿ ಖಾನೆ ಪಕ್ಕ ಹಾದು ಹೋಗುವಾಗ ಎತ್ತೊಂದರ ಧ್ವನಿ ಕೇಳಿಸಿದೆ. ಹತ್ತಿರ ಹೋಗಿ ನೋಡಿದರೆ ಅದು ತಮ್ಮದೇ ಎತ್ತು ಎಂದು ಗುರುತಿಸಿದ್ದಾರೆ.

    ನಾಗಪ್ಪ 52 ಸಾವಿರ ರೂಪಾಯಿ ನೀಡಿ ಎತ್ತನ್ನು ಖರೀದಿ ಮಾಡಿದ್ದಾರೆ. ಸದ್ಯ ಮೈಲಾರಿ ಎಂಬ ಈ ಎತ್ತಿನ 19ನೇ ವರ್ಷದ ಜನ್ಮದಿನ ಆಚರಿಸಿ ಇಡೀ ಊರಿಗೆ ಊಟ ಹಾಕಿಸಿದ್ದಾರೆ.

  • ಕಾರ ಹುಣ್ಣಿಮೆಯಂದು ಎತ್ತು ಗುದ್ದಿ, ಸೈನಿಕನಾಗುವ ಕನಸು ಹೊತ್ತ ಯುವಕ ಸಾವು

    ಕಾರ ಹುಣ್ಣಿಮೆಯಂದು ಎತ್ತು ಗುದ್ದಿ, ಸೈನಿಕನಾಗುವ ಕನಸು ಹೊತ್ತ ಯುವಕ ಸಾವು

    ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಕಾರಹುಣ್ಣಿಮೆ ಪ್ರಯುಕ್ತ ಕರಿಹರಿಯುವ ಹಬ್ಬದ ಸಂದರ್ಭದಲ್ಲಿ ಎತ್ತು ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

    ಕೋವಿಡ್-19 ಹಿನ್ನೆಲೆ ಕಾರಹುಣ್ಣಿಮೆ ದಿನ ಎತ್ತುಗಳನ್ನು ಓಡಿಸುವ ಹಬ್ಬ ಆಚರಣೆ ಮಾಡಬಾರದು ಎಂದು ತಾಲೂಕಾಡಳಿತ, ಪೊಲೀಸ್ ಮತ್ತು ಗ್ರಾ.ಪಂ ನವರು ಸೂಚಿಸಿದ್ದರು. ಸರ್ಕಾರದ ನಿಯಮ ಉಲ್ಲಂಘಿಸಿ ಗ್ರಾಮದಲ್ಲಿ ಗುರುವಾರ ಸಂಜೆ ಕರಿ ಹರಿಯುವ ಹಬ್ಬ ಆಚರಣೆ ಮಾಡಿದ್ದರು. ಈ ವೇಳೆ ರಭಸದಿಂದ ಓಡಿ ಬಂದ ಎತ್ತೊಂದು ಗ್ರಾಮದ ಯುವಕ ಕಿರಣಕುಮಾರ್ ಮಲಕಾಜಪ್ಪ ನೆರ್ತಿ (22) ಎಂಬಾತನಿಗೆ ಬಲವಾಗಿ ಗುದ್ದಿದೆ. ತೀವ್ರ ಗಾಯಗೊಂಡ ಯುವಕನನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

    ಮೃತ ಯುವಕ ಪದವೀಧರನಾಗಿದ್ದು, ತಂದೆ ನಿವೃತ್ತ ಸೈನಿಕ. ಯುವಕನೂ ತಂದೆಯ ಸೈನಿಕ ಕೋಟಾದಡಿ ಸೈನ್ಯ ಸೇವೆ ಸೇರಲು ದೈಹಿಕ ಪರೀಕ್ಷೆಯಲ್ಲಿ ಪಾಸಾಗಿ ಲಿಖಿತ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ. ಆದರೆ ವಿಧಿಯ ಆಟಕ್ಕೆ ಸೈನಿಕನಾಗುವ ಕನಸು ಹೊತ್ತ ಯುವಕ ಮಸನ ಸೇರಿದ್ದು ವಿಪರ್ಯಾಸ. ಯುವಕನ ಸಾವಿನ ಸುದ್ದಿ ತಿಳಿದು ಇಡೀ ಊರಿಗೆ ಊರೆ ಶೋಕಸಾಗರದಲ್ಲಿ ಮುಳುಗಿದಂತಿದೆ.

    ಸೂರಣಗಿ ಗ್ರಾಮದ ದೊಡ್ಡ ಆಂಜನೇಯ ದೇವರ ಗುಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ನಿನ್ನೆ ಕೋವಿಡ್ ನಿಯಮ ಉಲ್ಲಂಘಿಸಿ ಎತ್ತುಗಳನ್ನು ಓಡಿಸುವ ಹಬ್ಬವನ್ನು ಆಯೋಜಿಸಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಜನರೂ ಸೇರಿದ್ದರು. ಕರಿ ಹರಿಯುವ ಹಬ್ಬದಲ್ಲಿ ರಭಸದಿಂದ ಓಡಿ ಬಂದ ಎತ್ತು ತನ್ನನ್ನು ಹಿಡಿಯಲು ಪ್ರಯತ್ನಿಸಿದ ಯುವಕ ಕಿರಣ್ ಕುಮಾರ್ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಬಲವಾಗಿ ಗುದ್ದಿದ ಪರಿಣಾಮ, ಯುವಕ ಗಂಭೀರವಾಗಿ ಗಾಯಗೊಂಡಿದ್ದ.

    ಯುವಕ ಸಾವನ್ನಪ್ಪಿದ್ದರಿಂದ ನಿಯಮ ಮೀರಿ ಕರಿ ಹರಿಯುವ ಹಬ್ಬದಲ್ಲಿ ಪಾಲ್ಗೊಂಡಿದ್ದ ಆರೋಪದಲ್ಲಿ ಗ್ರಾಮದ 21 ಜನರ ವಿರುದ್ಧ ಕೋವಿಡ್ ನಿಯಮಾನುಸಾರ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರ ಹುಣ್ಣಿಮೆ ಸಿಂಗಾರಗೊಂಡ ಎತ್ತಿನ ಮೇಲೆ ಮುಂದಿನ ಸಿಎಂ ಸಿದ್ದರಾಮಯ್ಯ ಬರಹ

    ಕಾರ ಹುಣ್ಣಿಮೆ ಸಿಂಗಾರಗೊಂಡ ಎತ್ತಿನ ಮೇಲೆ ಮುಂದಿನ ಸಿಎಂ ಸಿದ್ದರಾಮಯ್ಯ ಬರಹ

    ಗದಗ: ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಕಾಂಗ್ರೆಸ್‍ನಲ್ಲಿ ಮುಂದಿನ ಸಿಎಂ ಕಚ್ಚಾಟ ಜೋರಾಗಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಗಳು ಕಾರ ಹುಣ್ಣಿಮೆಗೆ ಸಿಂಗಾರಗೊಂಡ ಎತ್ತಿನ ಮೇಲೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬರೆದು ಅಭಿಮಾನ ತೋರಿಸಿದ್ದಾರೆ.

    ರಾಜ್ಯದ ವಿವಿಧ ಭಾಗಗಳಲ್ಲಿ ಕಾರ ಹುಣ್ಣಿಮೆಯನ್ನು ಬಹಳ ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ ಈ ಬಾರಿ ಕೊರೊನಾದಿಂದಾಗಿ ಸರಳವಾಗಿ ಆಚರಿಸಲಾಗಿದೆ. ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡುವ ಪ್ರತೀತಿ ಇದೆ. ಈ ಬಾರಿ ಕೂಡ ಸರಳವಾಗಿ ಗ್ರಾಮಸ್ಥರು ಕಾರ ಹುಣ್ಣಿಮೆ ಆಚರಿಸಿದ್ದಾರೆ. ಈ ಬಾರಿ ಎತ್ತಿಗೆ ಸಿಂಗರಿಸುವ ವೇಳೆ ಸಿದ್ದರಾಮಯ್ಯ ಅವರ ಅಭಿಮಾನಿಗಳು ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಕ್ಯಾಂಪೇನ್ ಮಾಡಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಅಭಿಮಾನಿ

    ಗ್ರಾಮದಲ್ಲಿ ಕಾರ ಹುಣ್ಣಿಮೆ ದಿನ ಕರಿ ಹರಿಯುವ ಸಂಪ್ರದಾಯಕ್ಕೆ ತಕ್ಕಂತೆ ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭ ಮೆರವಣಿಗೆಗೆ ಸಿದ್ಧಗೊಳಿಸಿದ್ದ ಎತ್ತಿನ ಮೇಲೆ ಮುಂದಿನ ಸಿಎಂ ಸಿದ್ದರಾಮಯ್ಯ ಬರವಣಿಗೆಯೊಂದು ಎಲ್ಲರ ಗಮನ ಸೆಳೆಯುತ್ತಿತ್ತು. ಇದೀಗ ಸಿಎಂ ಕ್ಯಾಪೇನ್‍ನ ಎತ್ತಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

  • ಅಕ್ರಮ ಗೋವು ಸಾಗಾಟ, ಮಾರಣಾಂತಿಕವಾಗಿ ಲಾರಿಯಲ್ಲಿ ತುಂಬಿದ ಕಟುಕರು- ಇಬ್ಬರ ಬಂಧನ

    ಅಕ್ರಮ ಗೋವು ಸಾಗಾಟ, ಮಾರಣಾಂತಿಕವಾಗಿ ಲಾರಿಯಲ್ಲಿ ತುಂಬಿದ ಕಟುಕರು- ಇಬ್ಬರ ಬಂಧನ

    – ಸಾಗಾಟದ ವೇಳೆ ಎರಡು ಗೋವುಗಳು ಸಾವು

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಅಕ್ರಮವಾಗಿ ಗೋವು ಸಾಗಾಟ ಮುಂದುವರಿದಿದೆ. ಅಮಾನವೀಯವಾಗಿ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಿಸಿ, ಇಬ್ಬರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

    ಹಾಸನ ಜಿಲ್ಲೆಯ ಹೊಳೆನರಸೀಪುರ ನಿವಾಸಿ ನಜೀರುಲ್ಲ ಮತ್ತು ಮೈಸೂರಿನ ರಾಘವೇಂದ್ರ ಬಂಧಿತ ಆರೋಪಿಗಳು. ಮಂಗಳೂರು ನೋಂದಣಿ ಸಂಖ್ಯೆಯ (ಕೆಎ-19 ಎ-1801) 10 ಚಕ್ರದ ಲಾರಿಯಲ್ಲಿ 18 ಗೋವುಗಳನ್ನು ಮಾರಣಾಂತಿಕ ರೀತಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದರು.

    ಸಾಗಾಟದ ವೇಳೆ ಎರಡು ಗೋವುಗಳು ಸಾವನ್ನಪ್ಪಿದ್ದು, ಉಳಿದ 16 ಗೋವುಗಳನ್ನು ರಕ್ಷಿಸಲಾಗಿದೆ. ಖಚಿತ ಮಾಹಿತಿಯ ಆಧಾರದಲ್ಲಿ ಕುಂದಾಪುರ ಡಿವೈಎಸ್‍ಪಿ ಶ್ರೀಕಾಂತ.ಕೆ ಹಾಗೂ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ನೇತೃತ್ವದ ತಂಡ ತ್ರಾಸಿ ಮರವಂತೆಯ ಬಳಿ ಕಾರ್ಯಾಚರಣೆ ನಡೆಸಿದೆ. ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಆರೋಪಿಗಳು ವಾಹನ ಬಿಟ್ಟು ಓಡಿ ಹೋಗಿದ್ದಾರೆ. ಆಗ ಬೆನ್ನಟ್ಟಿ ಬಂಧಿಸಲಾಗಿದೆ. ಬಿಟ್ಟು ಹೋದ ವಾಹನವನ್ನು ಮುಟ್ಟುಗೋಲು ಹಾಕಿದ್ದಾರೆ.

    ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಅಕ್ರಮ ಗೋ ಸಾಗಾಟ ವಾಹನವು ಮಹಾರಾಷ್ಟ್ರದ ಸೊಲ್ಲಾಪುರದಿಂದ ಕಾಸರಗೋಡಿನ ಚೇರ್ಕಳಕ್ಕೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ 2020ರನ್ವಯ ಪ್ರಕರಣ ದಾಖಲಾಗಿದೆ.

  • ಅಗಲಿದ ರಾಮನಿಗೆ ಅದ್ಧೂರಿ ಮೆರವಣಿಗೆ, ಅಂತ್ಯಸಂಸ್ಕಾರ

    ಅಗಲಿದ ರಾಮನಿಗೆ ಅದ್ಧೂರಿ ಮೆರವಣಿಗೆ, ಅಂತ್ಯಸಂಸ್ಕಾರ

    ಹುಬ್ಬಳ್ಳಿ: ಗಣ್ಯ ವ್ಯಕ್ತಿಗಳು ನಿಧನರಾದಾಗ ಊರೆಲ್ಲಾ ಮೆರವಣಿಗೆ ಮಾಡಿ ಅಂತ್ಯ ಸಂಸ್ಕಾರ ಕಾರ್ಯ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ರೈತ ಕುಟುಂಬ ಮನೆಯಲ್ಲಿ 27 ವರ್ಷಗಳ ಕಾಲ ಸಾಕಷ್ಟು ದುಡಿದ ಎತ್ತು ಸಾವನ್ನಪ್ಪಿದ ನಂತರ ಅದ್ಧೂರಿ ಮೆರವಣಿಗೆ ಮಾಡಿ ವಿಧಿ ವಿಧಾನದ ಮೂಲಕ ಅಂತ್ಯಕ್ರೀಯೆ ನೆರವೇರಿಸಿದೆ.

    ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ರೈತ ಅಶೋಕ ಗಾಮನಗಟ್ಟಿ ಅವರ ಕುಟುಂಬ ತಮ್ಮ ಮನೆಯಲ್ಲಿಯೇ ಜನಸಿದ ಕರುವಿಗೆ ರಾಮ ಎಂದು ನಾಮಕರಣ ಮಾಡಿ ಪ್ರತಿವರ್ಷ ಹುಟ್ಟು ಹಬ್ಬವನ್ನು ಆಚರಣೆ ಮಾಡುವ ಮೂಲಕ ಮನೆಯ ಸದಸ್ಯರಲ್ಲಿ ಒಬ್ಬನಂತೆ ನೋಡುತ್ತಿದ್ದರು. ಆದರೆ ಮನೆಯ ಮಗನಂತೆ ಜೋಪಾನ ಮಾಡಿ, 27 ವರ್ಷಗಳ ಕಾಲ ದುಡಿದ ರಾಮ ಇಂದು ಸಾವನ್ನಪ್ಪಿದ ಪರಿಣಾಮ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

    ಹಲವು ವರ್ಷಗಳ ಕಾಲ ಮನೆಯ ಸದಸ್ಯನಾಗಿ ಜಮೀನಿನಲ್ಲಿ ದುಡಿದ ರಾಮ, ಸಾವನಪ್ಪಿದ ಪರಿಣಾಮ ರೈತನ ಕುಟುಂಬ ಸಕಲ ವಾದ್ಯ ಮೇಳದೊಂದಿಗೆ ಊರಲ್ಲಿ ಮೆರವಣಿಗೆ ಮಾಡಿ, ವಿಧಿ ವಿಧಾನಗಳ ಮೂಲಕ ರಾಮನ ಅಂತ್ಯ ಸಂಸ್ಕಾರ ನೆರವೇರಿಸಿ ಮೂಕಪ್ರಾಣಿಗೆ ವಿಶಿಷ್ಟವಾಗಿ ಗೌರವ ಸಲ್ಲಿಸಿದ್ದಾರೆ.

    ಎತ್ತಿನ ಜೊತೆಗೆ ರೈತ ಕುಟುಂಬ ಉತ್ತಮ ಬಾಂಧವ್ಯ ಹೊಂದಿದ್ದನ್ನು ಕಂಡ ಗ್ರಾಮಸ್ಥರಲ್ಲಿಯೂ ರಾಮನ ಸಾವು ಶೋಕವನ್ನುಂಟು ಮಾಡಿದೆ. ಹೀಗಾಗಿ ರಾಮ ಎನ್ನುವ ಎತ್ತಿನ ಅಂತ್ಯಸಂಸ್ಕಾರದಲ್ಲಿ ಗ್ರಾಮಸ್ಥರೂ ಪಾಲ್ಗೊಂಡು ರಾಮ ಅಮರ್ ರಹೇ ಎಂದು ಘೋಷಣೆ ಕೂಗಿದ್ದು, ರೈತನಿಗೆ ಜಾನುವಾರುಗಳ ಮೇಲಿನ ಪ್ರೀತಿ ಅದೆಷ್ಟು ಗಾಢ ಎನ್ನುವುದನ್ನು ಸಾರಿಸಾರಿ ಹೇಳುವಂತಿತ್ತು.

  • ಮಳೆಯಿಂದ ರೈತ ಮಹಿಳೆಯ ಮನೆ ಕುಸಿತ – ಎತ್ತುಗಳಿಗೆ ಗಾಯ, 3 ಮೇಕೆ ಸಾವು

    ಮಳೆಯಿಂದ ರೈತ ಮಹಿಳೆಯ ಮನೆ ಕುಸಿತ – ಎತ್ತುಗಳಿಗೆ ಗಾಯ, 3 ಮೇಕೆ ಸಾವು

    ಹಾಸನ: ನಿರಂತರ ಮಳೆಯಿಂದ ರೈತ ಮಹಿಳೆಯ ಮನೆ ಮತ್ತು ಕೊಟ್ಟಿಗೆ ಕುಸಿದು ಬಿದ್ದಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಪುಟ್ಟಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

    ಮಳೆಗೆ ಸಂಪೂರ್ಣ ಮನೆ ಕುಸಿದು ಬಿದಿದ್ದು, ಈ ವೇಳೆ ಕೊಟ್ಟಿಗೆಯಲ್ಲಿದ್ದ ಮೂರು ಮೇಕೆ ಸಾವನ್ನಪ್ಪಿವೆ ಜೊತೆಗೆ ಎರಡು ಎತ್ತುಗಳಿಗೆ ಗಾಯವಾಗಿದೆ. ಆದರೆ ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಣಾಪಾಯದಿಂದ ಪಾರಾಗಿದ್ದಾರೆ.

    ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗಿದ್ದ ಪರಿಣಾಮ ಶಿಥಿಲಗೊಂಡಂತಾಗಿದ್ದ, ರೈತ ಮಹಿಳೆ ಜಯಮ್ಮ ಅವರ ಮನೆ ಮತ್ತು ಕೊಟ್ಟಿಗೆ ಕುಸಿದು ಬಿದ್ದಿದೆ. ಪರಿಣಾಮ ಕೊಟ್ಟಿಗೆಯೊಳಗಿದ್ದ ಮೂರು ಮೇಕೆ ಸಾವನ್ನಪ್ಪಿವೆ. ಆಶ್ರಯವಾಗಿದ್ದ ಮನೆ ಮತ್ತು ಜೀವನಾಧಾರವಾಗಿದ್ದ ಮೇಕೆಗಳ ಸಾವಿನಿಂದ ರೈತ ಮಹಿಳೆ ಕಂಗಾಲಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ವಿದ್ಯುತ್ ತಂತಿ ಹರಿದು ಬೆಂಕಿ- ಕೊಟ್ಟಿಗೆಯಲ್ಲಿದ್ದ ಏಳು ಜಾನುವಾರು ಸಜೀವ ದಹನ

    ವಿದ್ಯುತ್ ತಂತಿ ಹರಿದು ಬೆಂಕಿ- ಕೊಟ್ಟಿಗೆಯಲ್ಲಿದ್ದ ಏಳು ಜಾನುವಾರು ಸಜೀವ ದಹನ

    ಹಾವೇರಿ: ವಿದ್ಯುತ್ ತಂತಿ ಹರಿದು ಬಿದ್ದಿದರಿಂದ ದನದ ಕೊಟ್ಟಿಗೆಗೆ ಬೆಂಕಿ ತಗುಲಿ ಎತ್ತು, ಎಮ್ಮೆ, ಆಕಳುಗಳು ಸಜೀವ ದಹನವಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

    ಜಿಲ್ಲೆಯ ಹಾನಗಲ್ ತಾಲೂಕಿನ ನಿಸ್ಸೀಮ ಆಲದಕಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು, ರೈತ ಫಕ್ಕೀರಪ್ಪ ಜಾನುಗುಂಡಿ ಅವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿ ಈ ದುರ್ಘಟನೆ ನಡೆದಿದೆ. ದನದ ಕೊಟ್ಟಿಗೆಯಲ್ಲಿದ್ದ ಎರಡು ಎತ್ತು, ಎರಡು ಎಮ್ಮೆ, ಒಂದು ಆಕಳು ಹಾಗೂ ಎರಡು ಕರುಗಳು ಸಜೀವ ದಹನವಾಗಿವೆ.

    ದನದ ಕೊಟ್ಟಿಗೆ ಊರಿನಿಂದ ದೂರ ಇದ್ದು, ಮಾಲೀಕರು ಊರಿನ ಮನೆಯಲ್ಲಿದ್ದಾಗ ಘಟನೆ ಸಂಭವಿಸಿದೆ. ನಿರ್ಜನ ಪ್ರದೇಶವಾಗಿದ್ದರಿಂದ ಬೆಂಕಿ ನಿಯಂತ್ರಿಸುವಲ್ಲಿ ತಡವಾಗಿದೆ. ಕೊಟ್ಟಿಗೆಯಲ್ಲಿ ವಿದ್ಯುತ್ ತಂತಿ ಹರಿದು ಬಿದ್ದಿದ್ದಿದ್ದು, ಬೆಂಕಿ ಹೊತ್ತಿಕೊಂಡು ಅನಾಹುತ ಸಂಭವಿಸಿದೆ. ಎತ್ತು, ಎಮ್ಮೆ, ಆಕಳು ಸಾವನ್ನಪ್ಪಿರುವುದರಿಂದ ರೈತ ಪಕ್ಕೀರಪ್ಪ ಅವರಿಗೆ ಎರಡು ಲಕ್ಷಕ್ಕೂ ಅಧಿಕ ರೂಪಾಯಿ ಹಾನಿಯಾಗಿದೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.