ಹಾಸನ: ಎತ್ತಿನ ಹೊಳೆ ಯೋಜನೆಯ ಕಾಮಗಾರಿಗೆ ತೆಗೆದಿದ್ದ ಗುಂಡಿಯಲ್ಲಿ ಬಿದ್ದು ಬಾಲಕ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿಡಿಗಳಲೆ ಗ್ರಾಮದ 13 ವರ್ಷದ ಋತ್ವಿಕ್ ಮೃತ ದುರ್ದೈವಿ. ದನ ಮೇಯಿಸಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಎತ್ತಿನ ಹೊಳೆ ಅವೈಜ್ಞಾನಿಕ ಕಾಮಗಾರಿಯೇ ಬಾಲಕನ ಸಾವಿಗೆ ಕಾರಣ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಇಂದು ಬೆಳಗ್ಗೆ ಋತ್ವಿಕ್ ದನ ಮೇಯಿಸಲು ಹೋಗಿದ್ದ ವೇಳೆ ಎತ್ತಿನಹೊಳೆ ಯೋಜನೆಯ ಪವರ್ ಪ್ಲಾಂಟ್ ಹೈಟೆನ್ಷನ್ ಯೋಜನೆಯ ತಂತಿ ಹಾದು ಹೋಗಲು ಟವರ್ ನಿರ್ಮಾಣಕ್ಕೆಂದು ತೆಗೆದಿದ್ದ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಎತ್ತಿನ ಹೊಳೆ ಯೋಜನೆಗಾಗಿ ಅವೈಜ್ಞಾನಿಕ ಕಾಮಗಾರಿ ನಡೆಸಲಾಗುತ್ತಿದೆ. ಹೀಗಾಗಿ ನೀರು ತುಂಬಿದ್ದ ಗುಂಡಿಗೆ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ.
ಪೋಷಕರು ಮಗುವಿನ ಮೃತದೇಹ ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಇಷ್ಟಾದರೂ ಯಾರೂ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೃತ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಹಾಸನ: ಆಹಾರ, ನಾಗರೀಕ ಸರಬರಾಜು ಮಾತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ಅವರು ಇಂದು ಎತ್ತಿನ ಹೊಳೆ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೊಂದು ಬಯಲು ಸೀಮೆಗೆ ನೀರು ಪೂರೈಸುವ ಮಹತ್ವದ ಯೋಜನೆ ಆದಷ್ಟು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಯೋಜನೆ ಉದ್ದೇಶಕ್ಕೆ ಸ್ವಾದೀನ ಪಡಿಸಿಕೊಂಡ ಜಮೀನಿಗೆ ಬಾಕಿ ಇರುವ ಪರಿಹಾರವನ್ನು ಸಹ ಶೀಘ್ರವಾಗಿ ವಿತರಿಸಿ ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಅರ್.ಗಿರೀಶ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್ ಉಪ ವಿಭಾಗಾಧಿಕಾರಿ ಗಿರಿಶ್ ನಂದನ್, ಎತ್ತಿನ ಹೊಳೆ ಯೋಜನೆ ಕಾರ್ಯಪಾಲಕ ಅಭಿಯಂತರರಾದ ಜಯಣ್ಣ, ತಹಶೀಲ್ದಾರ್ ಮಂಜುನಾಥ್, ಮಾಜಿ ಶಾಸಕರಾದ ಹೆಚ್.ಎಂ ವಿಶ್ವನಾಥ್ ಮತ್ತಿತರರು ಹಾಜರಿದ್ದರು.
-ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿಯೂ ನೀರಿಗೆ ಹಾಹಾಕಾರ
-ಬರ ಜಿಲ್ಲೆಯ ಜನತೆಗೆ ಆಘಾತ ನೀಡಿದ ಪ್ರಕಟಣೆ
-ಮುದುಕೃಷ್ಣ ಚಿಕ್ಕಬಳ್ಳಾಪುರ : ಶ್ರೀ ಧರ್ಮಸ್ಥಳದ ಮಂಜುನಾಥನ ಸನ್ನಿಧಾನದಲ್ಲೇ ನೀರಿಗೆ ಬರ ಬಂದಿದ್ದು, ಮಂಜುನಾಥ ಸ್ವಾಮಿಯನ್ನೇ ನಂಬಿದ್ದ ಕೋಲಾರ-ಚಿಕ್ಕಬಳ್ಳಾಪುರ ಜನತೆಗೆ ಈಗ ಎಲ್ಲಿಲ್ಲದ ಭಯ ಶುರುವಾಗಿದೆ.
ಇಷ್ಟು ದಿನ ಇಂದಲ್ಲ ನಾಳೆ ಎತ್ತಿನಹೊಳೆಯ ನೀರು ಬರಬಹುದು ಅಂತ ಆಶಾವಾದದಿಂದ ಇದ್ದ ಕೋಲಾರ-ಚಿಕ್ಕಬಳ್ಳಾಪುರ ಜನತೆಗೆ ಈಗ ಎಲ್ಲಿಲ್ಲದ ಆತಂಕ ಶುರುವಾಗಿದೆ. ಕಷ್ಟ ಕಾಲಕ್ಕೆ ಶ್ರೀ ಧರ್ಮಸ್ಥಳದ ಶ್ರೀ ಮಂಜುನಾಥ ತಮ್ಮನ್ನ ಕೈ ಹಿಡಿಯಬಹುದು ಅಂತ ಬಲವಾಗಿ ನಂಬಿದ್ದರು. ಈಗ ಮಂಜುನಾಥನ ಸನ್ನಿಧಾನದಲ್ಲೇ ನೀರಿಗೆ ಬರ ಬಂದಿರೋದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಯ ಎತ್ತಿನಹೊಳೆ ಎಂಬ ಕನಸಿನ ಆಶಾಗೋಪುರ ಕಳಚಿ ಬೀಳುವಂತೆ ಮಾಡಿದೆ.
ಕರಾವಳಿ ಭಾಗದ ನೇತ್ರಾವತಿ ನದಿಯ ಎತ್ತಿನಹೊಳೆಯ ನೀರನ್ನ ತಂದು ಕೋಲಾರ-ಚಿಕ್ಕಬಳ್ಳಾಪುರ ಸೇರಿದಂತೆ ಬರಪೀಡಿತ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಕೊಡ್ತೀವಿ ಅಂತ ಸರ್ಕಾರ ಎತ್ತಿನಹೊಳೆ ಯೋಜನೆಯನ್ನ ಆರಂಭಿಸಿದೆ. ಈಗಾಗಲೇ 13,000 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಅರಂಭವಾಗಿದ್ದರೂ. ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಎತ್ತಿನಹೊಳೆ ಹೆಸರಲ್ಲಿ ಪರ-ವಿರೋಧದ ಹೋರಾಟಗಳು ಯೋಜನೆ ಅರಂಭದಿಂದಲೂ ನಡೆದುಕೊಂಡೇ ಬರುತ್ತಿವೆ.
ಇದೆಲ್ಲದರ ನಡುವೆ ಎತ್ತಿನಹೊಳೆ ಯೋಜನೆಯ ರೂವಾರಿ ಕಾಂಗ್ರೆಸ್ ಮುಖಂಡ ಎಂ. ವೀರಪ್ಪ ಮೊಯ್ಲಿ ಇಗೋ ಬಂತು, ಅಗೋ ಬಂತು ಅಂತ ಎರಡು ಬಾರಿ ಸಂಸದರಾಗಿ ಮೂರನೇ ಬಾರಿ ಗೆಲ್ಲುವ ವಿಶ್ವಾಸದಲ್ಲಿಯೂ ಇದ್ದಾರೆ. ಅದರೆ ಪರ ವಿರೋಧ ಏನೇ ಇದ್ರೂ ಇಂದಲ್ಲ ನಾಳೆ ನಮ್ಮ ಭಾಗಕ್ಕೆ ಕರಾವಳಿ ಭಾಗದ ನೇತ್ರಾವತಿ ನದಿಯ ಎತ್ತಿನಹೊಳೆ ನೀರು ಬಂದೇ ಬರುತ್ತೆ ಅಂತ ಎಲ್ಲೋ ಒಂದು ಕಡೆ ಆತ್ಮವಿಶ್ವಾಸದಿಂದ ಇದ್ದ ಜನತೆಗೆ ಧರ್ಮಸ್ಥಳದ ಧರ್ಮಾಧಿಕಾರಿಯವರ ಪ್ರಕಟಣೆ ಅಘಾತ ಉಂಟುಮಾಡಿದೆ.
ನೇತ್ರಾವತಿ ನದಿಯ ಒಡಲು ಬತ್ತಿ ಹೋದ್ರೇ ಅಲ್ಲಿನ ಎತ್ತಿನಹೊಳೆಯ ನೀರು ಕೋಲಾರ-ಚಿಕ್ಕಬಳ್ಳಾಪುರ ಭಾಗಕ್ಕೆ ಹರಿಯುವುದೇ ಸಂಶಯದ ಪ್ರಶ್ನೆ ಈಗ ಅವಳಿ ಜಿಲ್ಲೆಗಳ ಜನರಲ್ಲಿ ಮನೆ ಮಾಡುವಂತೆ ಮಾಡಿದೆ. ವಿರೇಂದ್ರ ಹೆಗೆಡೆಯವರ ಪ್ರಕಟಣೆ ಅದೆಷ್ಟೋ ಮಂದಿ ಭಕ್ತರಿಗೆ ಭಯ ತಂದಿದಿಯೋ ಇಲ್ಲವೋ ಕೋಲಾರ-ಚಿಕ್ಕಬಳ್ಳಾಪುರ ಜನರಿಗಿಂತೂ ಭಯ ತಂದಿದೆ. ಸತತ 8 ವರ್ಷಗಳಿಂದ ಬರದಿಂದ ಬಾಯಾರಿರೋ ಜನ ಮಂಜುನಾಥನ ಕರುಣೆಯಿಂದಾದಾರೂ ಕುಡಿಯುವ ನೀರು ಸಿಗಬಹುದು ಅನ್ನೋ ಭರವಸೆ ಹೊಂದಿದ್ದರು. ಆ ದೇವರಿಗೆ ಸಂಕಷ್ಟ ಬಂದೊದಗಿದ್ದು ಈ ಬಡಪಾಯಿಗಳ ಬದುಕಿಗೆ ಇನ್ಯಾರು ದಿಕ್ಕು ಅಂತ ಜನ ಚಿಂತೇಗೀಡಾಗುವಂತೆ ಮಾಡಿದೆ.
ಯೋಜನೆಯಿಂದ ನಿರೀಕ್ಷಿತ 24 ಟಿಎಂಸಿ ಪ್ರಮಾಣ ನೀರು ಸಿಗುವುದಿಲ್ಲ ಅನ್ನೋ ಕೂಗು ಹೋರಾಟಗಾರರು ಹಾಗೂ ಪರಿಸರವಾದಿಗಳಿಂದ ಕೇಳಿ ಬರುತ್ತಲೇ ಇತ್ತು. ಅದ್ರೆ ನೀರು ಸಿಕ್ಕೆ ಸಿಗುತ್ತೆ ಅಂತ ಸಮರ್ಥನೆ ಮಾಡಿಕೊಳ್ಳುತ್ತಿದ್ದ ಎರಡೇ ವರ್ಷದಲ್ಲಿ ನೀರು ಕೊಡ್ತೀವಿ ಅಂತ ಆರು ವರ್ಷಗಳ ಕಾಲ ತಳ್ಳಿಕೊಂಡೆ ಬಂತು. ಈಗ ಧರ್ಮಸ್ಥಳದಲ್ಲೇ ನೀರಿನ ಬರ ಅಭಾವ ಪರಿಸ್ಥಿತಿ ಪರಿಸರವಾದಿಗಳು ಹೋರಾಟಗಾರರ ಮಾತು ಸತ್ಯ ಎಂಬಂತಾಗುತ್ತಿದೆ.
ವೈರಲ್ ಆದ ಪ್ರಕಟಣೆ:
ಕರಾವಳಿ ಭಾಗದ ಹಾಗೂ ಮಂಜುನಾಥನ ಭಕ್ತರಲ್ಲಿ ಈ ಪ್ರಕಟಣೆ ಅತಂಕ ತಂದಿತೋ ಇಲ್ಲವೋ ಕೋಲಾರ-ಚಿಕ್ಕಬಳ್ಳಾಪುರ ಭಾಗದ ಜನರಿಗಂತೂ ಅತಂಕ ತಂದಿತ್ತು. ಸೋಶಿಯಲ್ ಮೀಡಿಯಾದ ವಾಟ್ಸಾಫ್-ಫೇಸ್ ಬುಕ್ ಎಲ್ಲೂ ನೋಡಿದರೂ ಇದೇ ಪ್ರಕಟಣೆ. ಪ್ರತಿಯೊಬ್ಬರೂ ತಮ್ಮ ತಮ್ಮ ವಾಟ್ಸಾಫ್ ಖಾತೆಗಳಿಗೆ ಸ್ಟೇಟಸ್ ಅಗಿ ಪ್ರಕಟಣೆ ಪೋಸ್ಟ್ ಮಾಡಿಕೊಂಡರು. ಇರೋ ಬರೋ ಗ್ರೂಪ್ ಗಳೆಲ್ಲಾ ಇದೇ ಪ್ರಕಟಣೆ ಹರಿಬಿಟ್ಟರು. ಫೇಸ್ ಬುಕ್‍ನಲ್ಲಿ ಸಹ ಇದೇ ಪ್ರಕಟಣೆಯ ಪೋಸ್ಟ್ ಗಳು. ಹೀಗಾಗಿ ಕರಾವಳಿ ಭಾಗದ ಜನರಿಗಿಂತೂ ಇದು ಕೋಲಾರ-ಚಿಕ್ಕಬಳ್ಳಾಪುರ ಭಾಗದ ಜನರನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು.
ಮೊಯ್ಲಿ ವಿರುದ್ಧ ಅಸಮಧಾನ:
ಧರ್ಮಸ್ಥಳದಲ್ಲೇ ನೀರಿಗೆ ಬರ ಪ್ರಕಟಣೆ ಕಂಡ ಜೆಡಿಎಸ್ ಪಕ್ಷದ ಮಾಜಿ ಶಾಸಕ ಹಾಗೂ ಮುಖಂಡರೇ ಯೋಜನೆ ವಿರುದ್ಧ ಅಪಸ್ವರ ಎತ್ತಿದ್ದು ಎತ್ತಿನಹೊಳೆ ನೀರು ಕನಸು ಅಂತ ವೀರಪ್ಪಮೊಯ್ಲಿ ವಿರುದ್ದವೇ ಅಸಮಾಧಾನ ಹೊರಹಾಕಿದ್ದಾರೆ. ಮೊದಲಿನಿಂದಲೂ ನಾವು ಹೇಳುತ್ತಿದ್ದೀವಿ ನೀರು ಬರಲ್ಲ ಅಂತ ಈಗ ಸತ್ಯ ಅಗುತ್ತಿದೆ. ಇನ್ನಾದ್ರೂ ಬೇರೆ ಮೂಲಗಳಿಂದ ನೀರು ಹುಡುಕುವ ಪ್ರಯತ್ನ ಮಾಡಬೇಕು. ಇಲ್ಲವಾದಲ್ಲಿ ಇನ್ನೆರೆಡು ವರ್ಷಗಳಲ್ಲಿ ಜನ ನೀರಿಗಾಗಿ ಬಡಿದಾಡಿಕೊಂಡು ಸಾಯಬೇಕಾಗುತ್ತೆ ಆಕ್ರೋಶ ಹೊರಹಾಕುತ್ತಿದ್ದಾರೆ.
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರ ತೀವ್ರಗತಿಯಲ್ಲಿ ಅಭಿವೃದ್ದಿ ಹೊಂದುತ್ತಿದ್ದು, ಮುಂದಿನ ದಿನಗಳಲ್ಲಿ ಉಪನಗರವಾಗಿ ಚಿಕ್ಕಬಳ್ಳಾಪುರ ಬೆಳೆಯಿಲಿದೆ. ಹೀಗಾಗಿ ಜಿಲ್ಲಾ ಕೇಂದ್ರಕ್ಕೆ ಮೆಟ್ರೋ ರೈಲು ವಿಸ್ತರಣೆ ಮಾಡುವುದಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಆಶ್ವಾಸನೆ ನೀಡಿದ್ದಾರೆ.
ಮತದಾನಕ್ಕೆ ಕೆಲ ದಿನಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ವೀರಪ್ಪ ಮೊಯ್ಲಿ ಅವರು ಬಿಡುವಿಲ್ಲದ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇಂದು ಚಿಕ್ಕಬಳ್ಳಾಪುರ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ರೋಡ್ ಶೋ ನಡೆಸಿ ಮಾತನಾಡಿದ ವೀರಪ್ಪಮೊಯ್ಲಿ ಅವರು, ಎರಡು ಬಾರಿ ಚಿಕ್ಕಬಳ್ಳಾಪುರದ ಜನ ನನ್ನ ಕೈ ಹಿಡಿದಿದ್ದಾರೆ. ಮುಂದಿನ 5 ವರ್ಷಗಳಲ್ಲಿ ನಾನು ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ರೈಲು ವಿಸ್ತರಣೆ ಮಾಡುವುದಾಗಿ ಆಶ್ವಾಸನೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಕಾಮಗಾರಿ ಭರದಿಂದ ಸಾಗಿದೆ. ಮತ್ತೊಂದೆಡೆ ಕೃಷ್ಣಾ ನದಿಯ ನೀರನ್ನ ಸಹ ಬಾಗೇಪಲ್ಲಿ ಭಾಗದಿಂದ ಈ ಕ್ಷೇತ್ರಕ್ಕೆ ತರುವುದಾಗಿ ತಿಳಿಸಿದರು. ಅಲ್ಲದೇ ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ಮಾರ್ಗದಲ್ಲಿ ಕೈಗಾರಿಕಾ ವಲಯ ಗುರುತಿಸಿ, ಈಗಾಗಲೇ ಬಜೆಟ್ ನಲ್ಲಿ ಘೋಷಣೆಯಾಗಿರುವ ಮೊಬೈಲ್ ಬಿಡಿಭಾಗಗಳ ಉತ್ಪಾದನಾ ಘಟಕ ಆರಂಭಿಸುವುದಾಗಿ ಪ್ರಚಾರ ಭಾಷಣದಲ್ಲಿ ಹೇಳಿದರು.
ಮನೆ ಮನೆಗೆ ಕುಡಿಯುವ ನೀರು, ಹೊಲ ಹೊಲಕ್ಕೆ ಜಲ, ಮನೆ ಮನೆಗೆ ಯುವಕರಿಗೆ ಉದ್ಯೋಗ ನೀಡುವುದೇ ತಮ್ಮ ಸಂಕಲ್ಪ ಎಂದು ವೀರಪ್ಪ ಮೊಯ್ಲಿ ಘೋಷಣೆ ಮಾಡಿದರು. ಇದೆಲ್ಲದರ ನಡುವೆ ಚರ್ಚ್‍ಗಳಿಗೆ ಭೇಟಿ ನೀಡಿದ ವೀರಪ್ಪ ಮೊಯ್ಲಿ ಪ್ರಾರ್ಥನೆ ಸಲ್ಲಿಸಿ, ಮತಯಾಚನೆ ಮಾಡಿದರು.