Tag: ಎತ್ತಿನ ಹೊಳೆ

  • ಎತ್ತಿನಹೊಳೆ ಯೋಜನೆಗೆ ಆರಂಭದಲ್ಲೇ ವಿಘ್ನ- ನೀರು ಹರಿಸಿದ್ದರಿಂದ ಪೈಪ್‍ನಿಂದ ಸೋರಿಕೆ

    ಎತ್ತಿನಹೊಳೆ ಯೋಜನೆಗೆ ಆರಂಭದಲ್ಲೇ ವಿಘ್ನ- ನೀರು ಹರಿಸಿದ್ದರಿಂದ ಪೈಪ್‍ನಿಂದ ಸೋರಿಕೆ

    ಹಾಸನ: ಕಳೆದ ಏಳು ವರ್ಷಗಳ ಹಿಂದೆ ಆರಂಭಗೊಂಡಿರುವ ರಾಜ್ಯ ಸರ್ಕಾರದ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆ (Ettina Hole Project) ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹಾಸನ (Hassan) ಜಿಲ್ಲೆಯ ಬಹುತೇಕ ಕಡೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು ಗುರುವಾರ ಸಕಲೇಶಪುರ ತಾಲೂಕಿನ ಕಾಡುಮನೆಯ ಬಳಿಯ ಚೆಕ್‍ಡ್ಯಾಂನಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗಿದ್ದು, ಆರಂಭದಲ್ಲೇ ಹಲವು ಹಾನಿ ಉಂಟಾಗಿದೆ. ಭಾರೀ ಪ್ರಮಾಣದಲ್ಲಿ ನೀರು ಹರಿದಿದ್ದರಿಂದ ಹಲವೆಡೆ ಪೈಪ್‍ನಿಂದ ನೀರು ಸೋರಿಕೆಯಾಗಿ ರಸ್ತೆಗೆ ನುಗ್ಗಿದ್ದು ಹಲವು ಪ್ರದೇಶಗಳಿಗೆ ಹಾನಿಯಾಗಿದೆ. ಭೂಮಿಯೊಳಗೆ ಬೃಹತ್ ಗಾತ್ರದ ಪೈಪ್ ಜೋಡಣೆ ಮಾಡಿದ್ದು, ನೀರು ಹರಿದ ರಭಸಕ್ಕೆ ಹಲವೆಡೆ ಭೂಮಿ ಕಂಪಿಸಿದ್ದು ಕೆಲ ಕಾಲ ಜನರು ಆತಂಕಗೊಂಡಿದ್ದರು.

    ಸಕಲೇಶಪುರ (Sakleshpura) ತಾಲೂಕಿನ ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿಹೊಳೆ ಮತ್ತು ಹೊಂಗಡಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ಪ್ರಮಾಣದ ಪ್ರವಾಹ ನೀರನ್ನು ಏಳು ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶದ 6,657 ಗ್ರಾಮಗಳ 75.59 ಲಕ್ಷ ಜನ-ಜಾನುವಾರುಗಳಿಗೆ 13.931 ಟಿಎಂಸಿ ಕುಡಿಯುವ ನೀರು ಒದಗಿಸುವುದು. ಇದರ ಜೊತೆಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ಐದು ಜಿಲ್ಲೆಯ ವ್ಯಾಪ್ತಿಯಲ್ಲಿ 527 ಕೆರೆಗಳಿಗೆ 10.064 ಟಿಎಂಸಿ ಪ್ರಮಾಣದ ನೀರನ್ನು ಕೆರೆಗಳ ಸಾಮಥ್ರ್ಯದ 50% ರಷ್ಟು ತುಂಬಿಸಿ ಅಂತರ್ಜಲ ಮರುಪೂರ್ಣ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. 261 ಕಿ.ಮೀ ನಂತರ ಲಿಫ್ಟ್ ಮೂಲಕ 12.338 ಟಿಎಂಸಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಹಾಗೂ 287 ಕೆರೆಗಳ ಭರ್ತಿಗೆ ನೀರು ಹರಿಸುವ 23,251.66 ಕೋಟಿ ರೂ ವೆಚ್ಚದ ಬೃಹತ್ ಯೋಜನೆಯಾಗಿದೆ. ಇದನ್ನೂ ಓದಿ: Telangana Poll: ಜಿದ್ದಾಜಿದ್ದಿ ಕಣ ತೆಲಂಗಾಣದಲ್ಲಿಂದು ಮತದಾನ – ದಾಖಲೆಯ ಮತದಾನಕ್ಕೆ ಮೋದಿ ಕರೆ

    ಆ.23 ರಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ (DK Shivakumar) ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿರುವ ಸಕಲೇಶಪುರ ತಾಲೂಕಿನ, ಹೆಬ್ಬನಹಳ್ಳಿ, ದೊಡ್ಡನಾಗರ, ಕಾಡುಮನೆ, ದೋಣಿಗಾಲ್ ಬಳಿ ತೆರಳಿ ಪವರ್ ಹೌಸ್ ಹಾಗೂ ಕಾಮಗಾರಿಯನ್ನು ವೀಕ್ಷಿಸಿದ್ದರು. 24 ಸಾವಿರ ಕೋಟಿ ರೂ ವೆಚ್ಚದ ಯೋಜನೆ ಇದಾಗಿದ್ದು, ಈಗಾಗಲೇ 14 ಸಾವಿರ ಕೋಟಿ ಖರ್ಚಾಗಿದ್ದು, ಎತ್ತಿನಹೊಳೆ ಯೋಜನೆಯಿಂದ ಮೊದಲ ಹಂತವಾಗಿ ನೂರು ದಿನದಲ್ಲಿ ನೀರು ಲಿಫ್ಟ್ ಮಾಡಬೇಕೆಂದು ನಮ್ಮ ಅಧಿಕಾರಿಗಳಿಗೆ ಟೈಂ ಫಿಕ್ಸ್ ಮಾಡಿದ್ದರು. ಅದರಂತೆ ನಿನ್ನೆ ಸುಮಾರು ಆರು ಕಿಲೋಮೀಟರ್ ಉದ್ದದ ಪೈಪ್‍ಲೈನ್ ಮೂಲಕ ಕಾಡುಮನೆ ಚೆಕ್‍ಡ್ಯಾಂ ಐದರ ಪಂಪ್‍ನಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗಿದ್ದು, ಮಲ್ಲಾಗದ್ದೆ, ಕಂಬರಡಿ, ದೇಖಲ ಗ್ರಾಮಗಳ ಬಳಿ ಹಾದುಹೋಗಿರುವ ಪೈಪ್‍ನಿಂದ ಭಾರೀ ಪ್ರಮಾಣದಲ್ಲಿ ನೀರು ಸೋರಿಕೆಯಾಗಿದ್ದು, ದೇಖಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದಿದ್ದು, ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು ಜೀಪೊಂದು ಗುಂಡಿಯೊಳಗೆ ಸಿಲುಕಿಕೊಂಡಿದೆ. ನಂತರ ಸ್ಥಳೀಯರು ಜೀಪನ್ನು ಮೇಲೆತ್ತಿದ್ದಾರೆ.

    ಭೂಮಿಯೊಳಗೆ ಜೋಡಣೆ ಮಾಡಿದ ಪೈಪ್‍ನಲ್ಲಿ ನೀರು ರಭಸವಾಗಿ ಹರಿದ ಪರಿಣಾಮ ಭೂಮಿ ಕಂಪಿಸಿದಂತಾಗಿದ್ದು, ದೇಖಲ ಗ್ರಾಮದ ಗ್ರಾಮಸ್ಥರು ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ಧಾರೆ. ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಮೊದಲು ಆಗಿರುವ ಆಸ್ತಿಪಾಸ್ತಿ ದುರಸ್ತಿ ಮಾಡಿ ಇಲ್ಲವಾದಲ್ಲಿ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಮಾತನಾಡಿದ ವಿಶ್ವೇಶ್ವರಯ್ಯ ಜಲನಿಗಮದ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್, ಪೈಪ್ ಅಳವಡಿಸಿ ಐದರಿಂದ ಆರು ವರ್ಷ ಕಳೆದಿದ್ದು ಹಲವೆಡೆ ವೆಲ್ಡಿಂಗ್ ತುಕ್ಕು ಹಿಡಿದು ಬಿರುಕು ಬಿಟ್ಟು ನೀರು ಸೋರಿಕೆಯಾಗುತ್ತಿದೆ. ಹಾಗಾಗಿ ಸಮಸ್ಯೆಯಾಗಿದೆ, ಯಾರೂ ಆತಂಕಪಡಬೇಡಿ ಎಂದಿದ್ದಾರೆ.

    8 ಸಾವಿರ ಕೋಟಿಯಿಂದ ಆರಂಭಗೊಂಡ ಯೋಜನೆ ಇದೀಗ 24 ಸಾವಿರ ಕೋಟಿಗೆ ಪರಿಷ್ಕೃತಗೊಂಡಿದೆ. ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೋಳಿ, ಗೋವಿಂದಕಾರಜೋಳ ಭೇಟಿ ನೀಡಿ ಆದಷ್ಟು ಬೇಗ ಕಾಮಗಾರಿ ಮುಗಿಸಿ ನೀರು ಹರಿಸುತ್ತೇವೆ ಎಂದಿದ್ದರು. ಆದರೂ ಹಲವು ಅಡತಡೆಗಳಿಂದ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದೆ.

  • ತಲೆ ತುಂಬಾ ಕೂದಲಿದ್ದಿದ್ದರಿಂದ ಬೋಳಿಸಿಕೊಳ್ಳುವೆ ಎಂದಿದ್ದೆ, ಈಗ ಕೂದಲಿಲ್ಲ: ಹೆಚ್‍ಡಿಕೆ

    ತಲೆ ತುಂಬಾ ಕೂದಲಿದ್ದಿದ್ದರಿಂದ ಬೋಳಿಸಿಕೊಳ್ಳುವೆ ಎಂದಿದ್ದೆ, ಈಗ ಕೂದಲಿಲ್ಲ: ಹೆಚ್‍ಡಿಕೆ

    ಕೋಲಾರ: ಒಂದು ವರ್ಷದಲ್ಲಿ ಎತ್ತಿನ ಹೊಳೆ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ಳುವೆ ಎಂದಿದ್ದೆ. ಅಂದು ತಲೆ ತುಂಬಾ ಕೂದಲಿತ್ತು, ಇಂದು ಇಲ್ಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮಾತ್ರ ಬ್ರಿಲಿಯಂಟ್ ಅಲ್ಲ. ನನಗೂ ಜ್ಞಾಪಕ ಶಕ್ತಿ ಇದೆ. ನಾನು ಅಂದೆ ಹೇಳಿದ್ದೆ ಕೋಲಾರಕ್ಕೆ ಒಂದು ವರ್ಷದಲ್ಲಿ ಎತ್ತಿನಹೊಳೆ ನೀರು ಬಂದರೆ ತಲೆ ಬೋಳಿಸಿಕೊಳ್ಳುವೆ ಎಂದಿದ್ದೆ. 2014ರಲ್ಲಿ ಅಡಿಪಾಯ ಹಾಕಿ ಇದುವರೆಗೂ ನೀರು ಕೊಟ್ಟಿಲ್ಲ. ಇನ್ನೂ 50 ವರ್ಷ ಆದರೂ ರಾಷ್ಟ್ರೀಯ ಪಕ್ಷಗಳಿಂದ ನೀರು ಕೊಡಲು ಆಗಿಲ್ಲ ಎಂದು ಟೀಕಿಸಿದರು.

    SIDDARAMAIAH

    ನಾಳೆ ಎಸ್‍ಎಸ್‍ಎಸ್‍ಎಲ್‍ಸಿ ಪರೀಕ್ಷೆ ವಿಚಾರವಾಗಿ ಮಾತನಾಡಿ, ಯಾವುದೆ ಸಮಾಜದ ಮಕ್ಕಳಾಗಲಿ ಮುಕ್ತವಾಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರೆಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ವ್ಯಾಪಾರಕ್ಕೆ ನಿರ್ಬಂಧ ವಿಚಾರ, ದೇಶವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದಾರೆ ಎಂದು ಬಿಜೆಪಿಗೆ ಟಾಂಗ್ ನೀಡಿದರು.

    ರಾಜ್ಯಕ್ಕೆ ಈ ರೀತಿಯ ಪರಿಸ್ಥಿತಿ ಬರುತ್ತೆ ಎಂದು ನಾನು ಊಹಿಸಿರಲಿಲ್ಲ. ಶಾಲಾ ಮಕ್ಕಳಲ್ಲಿ ವಿಷ ಬೀಜ ಬಿತ್ತಲಾಗುತ್ತಿದೆ. ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಆದರೂ ರಾಜ್ಯದ ಇವತ್ತಿನ ಪರಿಸ್ಥಿತಿಗೆ ಅವರೆ ಕಾರಣ. ಮೈತ್ರಿ ಸರ್ಕಾರದ ಉಳಿವಿಗಾಗಿ ನಮಗೆ ಇಷ್ಟವಿಲ್ಲದಿದ್ದರೂ ಪ್ರಯತ್ನ ಪಟ್ಟೆ. ಕಾಂಗ್ರೆಸ್, ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮಾಡಿದ್ದೇವೆ. 2004 ರಲ್ಲಿ ಕಾಂಗ್ರೆಸ್‍ಗೆ ಬೆಂಬಲ ಕೊಟ್ಟಿದ್ದವು. ಬಿಜೆಪಿ 104 ಸ್ಥಾನ ಪಡೆಯಲು ಸಿದ್ದರಾಮಯ್ಯ ಕಾರಣ ಎಂದು ವಾಗ್ದಾಳಿ ನಡೆಸಿದರು.

    ಜೆಡಿಎಸ್, ಬಿಜೆಪಿ ಬಿಟೀಂ ಎಂದು ಹೇಳಿಕೆಯಿಂದ ಆ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಯಿತು. ಎರಡು ರಾಷ್ಟ್ರೀಯ ಪಕ್ಷಗಳು ಸಮಾಜದ ಸಾಮರಸ್ಯವನ್ನು ಹಾಳು ಮಾಡುತ್ತಿವೆ. ಎರಡು ರಾಷ್ಟ್ರೀಯ ಪಕ್ಷಗಳಿಂದ ಜನರು ಎಚ್ಚೆತ್ತುಕೊಳ್ಳಬೇಕು ಎಂದು ಸಲಗೆ ನೀಡಿದರು. ಇದನ್ನೂ ಓದಿ: SSLC ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್ : ಬೊಮ್ಮಾಯಿ

    ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಹೊಂದಾಣಿಕೆ ಸಂಬಂಧ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರ ಬಳಿ ಬೇರೆ ಯಾವುದೇ ವಿಷಯ ಇಲ್ಲ, ಅದು ಬಿಟ್ಟು ಅವರದ್ದು ಮುಂದೆ ನಡೆಯಲ್ಲ. ಸಿದ್ದರಾಮಯ್ಯ ಅವರನ್ನು ನಂಬಿ ಮುಸಲ್ಮಾನರು ಸಹ ಬೀದಿಗೆ ಬಂದಿದ್ದಾರೆ. ಅವರಲ್ಲೂ ಸಹ ಮರು ಚಿಂತನೆ ಆರಂಭವಾಗಿದೆ. ಅವಧಿಗೂ ಮುನ್ನ ಚುನಾವಣೆ ನಡೆದರೆ ನಾವು ಸಹ ಚುನಾವಣೆಗೆ ಸಿದ್ಧ ಎಂದರು. ಇದನ್ನೂ ಓದಿ: ಮೂಲ ಕಾಂಗ್ರೆಸ್‍ನವರು ಈ ರೀತಿ ಮಾತಾಡಲ್ಲ, ಸಿದ್ದರಾಮಯ್ಯ ಕನ್ವರ್ಟ್ ಕಾಂಗ್ರೆಸ್: ಬಿ.ಸಿ ನಾಗೇಶ್

    ಇಂದಿನ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಸೈಕಲ್ ಥಾನ್ ವಿಚಾರವಾಗಿ ಮಾತನಾಡಿ, ಕೋಲಾರದಲ್ಲೂ ಕೋಮು ಸಂಘರ್ಷಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಕೋಲಾರ ಶಾಂತಿಯಾಗಿತ್ತು. ಈಗ ಹಾಳು ಮಾಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇದನ್ನೂ ಓದಿ: ಸೋಮವಾರದಿಂದ SSLC ಪರೀಕ್ಷೆ- ಹಿಜಬ್ ನಿಷೇಧ, ಸಮವಸ್ತ್ರ ಕಡ್ಡಾಯ

  • ನಳಿನ್ ಕುಮಾರ್ ಕಟೀಲ್ ಫೋಟೋಗೆ ಮಸಿ

    ನಳಿನ್ ಕುಮಾರ್ ಕಟೀಲ್ ಫೋಟೋಗೆ ಮಸಿ

    ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನೆ ಸಲ್ಲಿಸಿ ಹಾಕಲಾದ ಬ್ಯಾನರ್ ಗೆ ಮಸಿ ಬಳಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮಂಗಳೂರಿನ ಕದ್ರಿ ಪಾರ್ಕ್ ಹಾಗೂ ಇತರ ಕಡೆ ಹಾಕಲಾದ ಬ್ಯಾನರ್ ನಲ್ಲಿ ಸಂಸದ ನಳಿನ್ ಚಿತ್ರಕ್ಕೆ ಮಸಿ ಬಳಿದು ಜೈ ನೇತ್ರಾವತಿ ಅಂತ ಬರೆದಿದ್ದಾರೆ.

    ಎತ್ತಿನ ಹೊಳೆ ಯೋಜನೆಗೆ ರಾಜ್ಯ ಸರಕಾರ ಬಜೆಟ್‍ನಲ್ಲಿ 1,500 ಕೋಟಿ ಬಿಡುಗಡೆ ಮಾಡಿದೆ. ಇದು ಕರಾವಳಿಗರ ಕಣ್ಣು ಕೆಂಪಾಗಿಸಿದೆ. ಈ ಹಿಂದೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಎತ್ತಿನ ಹೊಳೆ ಯೋಜನೆಗೆ ಪ್ರಾರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಎತ್ತಿನ ಹೊಳೆ ಯೊಜನೆ ವಿರುದ್ಧದ ಹೋರಾಟದಲ್ಲಿ ಕೂಡ ಪಾಲ್ಗೊಂಡು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

    ಆದರೆ ಇದೀಗ ಅವರೇ ರಾಜ್ಯಾಧ್ಯಕ್ಷರಾಗಿರುವ ಬಿಜೆಪಿ ಸರ್ಕಾರದ ಬಜೆಟ್‍ನಲ್ಲಿ ಹಣ ಬಿಡುಗಡೆ ಮಾಡಿದರೂ ನಳಿನ್ ಮೌನವಾಗಿದ್ದು, ಜಿಲ್ಲೆಯ ಪರಿಸರವಾದಿಗಳ ಸಹಿತ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವಿಚಾರ ಇಟ್ಟುಕೊಂಡು ಮಸಿ ಬಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾರು ಈ ರೀತಿ ಮಾಡಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಮಸಿ ಬಳಿದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಮತ್ತೆ 1,500ಕೋಟಿ ಬಿಡುಗಡೆ: ಕಟೀಲ್ ದ್ವಿಪಾತ್ರದಲ್ಲಿ ಅಭಿನಯ

  • ಎತ್ತಿನ ಹೊಳೆಗೂ ದಕ್ಷಿಣ ಕನ್ನಡದ ನೀರಿನ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ – ರಮೇಶ್ ಕುಮಾರ್

    ಎತ್ತಿನ ಹೊಳೆಗೂ ದಕ್ಷಿಣ ಕನ್ನಡದ ನೀರಿನ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ – ರಮೇಶ್ ಕುಮಾರ್

    ಕೋಲಾರ: ಎತ್ತಿನ ಹೊಳೆ ನೀರಿನ ಯೋಜನೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ನೀರಿ ಸಮಸ್ಯೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರು ಹೇಳಿದ್ದಾರೆ.

    ಇಂದು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನ ಹೊಳೆ ಯೋಜನೆಗೂ ಮಂಗಳೂರು ಹಾಗೂ ಧರ್ಮಸ್ಥಳದಲ್ಲಿ ಇರುವ ನೀರಿನ ಸಮಸ್ಯೆಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಎತ್ತಿನ ಹೊಳೆ ಯೋಜನೆ ವೇಗವಾಗಿ ಸಾಗುತ್ತಿದ್ದು, ಜೂ.12 ರಂದು ಬಯಲುಸೀಮೆಯ ಎಲ್ಲಾ ಶಾಸಕರು ಕಾಮಗಾರಿಯನ್ನು ಪರಿಶೀಲನೆ ಮಾಡಲಿದ್ದಾರೆ. ಮಂಗಳೂರಲ್ಲಿ ನೀರಿನ ಸಮಸ್ಯೆಗೂ ಎತ್ತಿನ ಹೊಳೆಗೂ ಸಂಬಂಧವಿಲ್ಲ ಕೆಲವರು ಬೇಕಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ವಿರೋಧ ಮಾಡುವರು ನಮ್ಮ ವಿರೋಧಿಗಳಲ್ಲ. ಅವರೆಲ್ಲ ನಮ್ಮ ಅಣ್ಣ ತಮ್ಮಂದಿರು ಅವರಿಗೆ ನಮ್ಮ ಸಮಸ್ಯೆ ಕುರಿತು ಮನವರಿಕೆ ಮಾಡಲಾಗುವುದೆಂದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಆಕಾಶದಿಂದ ಬೀಳುವ ನೀರು ಪಶ್ಚಿಮಘಟ್ಟಗಳ ಮೂಲಕ ಅರಬ್ಬಿ ಸಮುದ್ರಕ್ಕೆ ಸೇರುತಿತ್ತು. 65 ವರ್ಷಗಳ ಇತಿಹಾಸದ ಅಂಕಿ ಅಂಶಗಳ ಪ್ರಕಾರ ಸಕಲೇಶಪುರದ ಕೆಂಪುಹೊಳೆ, ವಾಟೆ ಹೊಳೆ, ಹೊಸ ಹೊಳೆ ಸೇರಿದಂತೆ 7 ಹೊಳೆಗಳಿದ್ದು, ಇಲ್ಲಿ ಸುಮಾರು 400 ರಿಂದ 450 ಟಿಎಂಸಿ ನೀರು ಹರಿದು ಪ್ರತಿ ವರ್ಷ ಅರಬ್ಬಿ ಸಮುದ್ರ ಸೇರುತ್ತಿದೆ. ಇಲ್ಲಿ ಸಣ್ಣದಾದ ಗೋಡೆಯನ್ನು ನಿರ್ಮಿಸಿ 24 ಟಿಎಂಸಿ ನೀರನ್ನು ಬಯಲುಸೀಮೆ ಪ್ರದೇಶಗಳಿಗೆ ಹರಿಸುವುದೇ ಎತ್ತಿನಹೊಳೆ ಯೋಜನೆ ಉದ್ದೇಶ ಎಂದರು.

    ಈ ವಿಚಾರದ ಬಗ್ಗೆ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ಶಾಸಕರುಗಳಿಗೆ ಚಿಕ್ಕ ಆಕ್ಷೇಪವಿತ್ತು. ಅದನ್ನು ದೂರವಾಣಿ ಮೂಲಕ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

  • ಎತ್ತಿನಹೊಳೆ ಯೋಜನೆಯಲ್ಲಿ ರಾಜಕೀಯ ಶುರು – ಇತ್ತ ಚಿತ್ರದುರ್ಗದಲ್ಲಿ ಎತ್ತುಗಳಾದ ರೈತರು

    ಎತ್ತಿನಹೊಳೆ ಯೋಜನೆಯಲ್ಲಿ ರಾಜಕೀಯ ಶುರು – ಇತ್ತ ಚಿತ್ರದುರ್ಗದಲ್ಲಿ ಎತ್ತುಗಳಾದ ರೈತರು

    ಹಾಸನ, ಚಿತ್ರದುರ್ಗ: ಬಹುಚರ್ಚೆಯ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ರಾಷ್ಟ್ರೀಯ ಹಸಿರು ಪೀಠ ಗ್ರೀನ್‍ಸಿಗ್ನಲ್ ನೀಡಿದೆ. ಆದ್ರೆ ಹಾಸನ ಜಿಲ್ಲೆಯಲ್ಲಿ ರಾಜಕೀಯ ಕಚ್ಚಾಟ ಮುಂದುವರಿದಿದೆ.

    ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸೋ ಎತ್ತಿನಹೊಳೆ ಕಾಮಗಾರಿಗೆ ಎನ್‍ಜಿಟಿ ಅಸ್ತು ಎಂದಿದ್ರೂ ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪ ಮುಂದುವರಿದಿದೆ. ಕೋಲಾರ- ಚಿಕ್ಕಬಳ್ಳಾಪುರಕ್ಕೆ ನೀರು ಕೊಟ್ಟೇ ಕೊಡ್ತೀವಿ ಅಂತ ಸರ್ಕಾರದವರು ಹೇಳಿ ಹೊರಟಿದ್ದಾರೆ. ಆದ್ರೆ ಈ ವರ್ಷ ಕೊಡ್ತಾರೋ ಮುಂದಿನ ವರ್ಷ ಕೊಡ್ತಾರೋ ಅಥವಾ ಅದರ ಮುಂದಿನ ವರ್ಷ ಕಾಂಗ್ರೆಸ್ ಸರ್ಕಾರ ಬಂದಾಗ ಕೊಡ್ತಾರೋ ಗೊತ್ತಿಲ್ಲ. ಈ ವರ್ಷ ನೀರು ಕೊಡೋದು ಕಷ್ಟ ಅಂತ ಕಾಣತ್ತೆ ಎಂಬುವುದಾಗಿ ಮಾಜಿ ಪ್ರಧಾನಿ ದೇವೇ ಗೌಡ ಹೇಳಿದ್ದಾರೆ.

    ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಮಂಜು ಎತ್ತಿನಹೊಳೆ ಯೋಜನೆ ವೈಜ್ಞಾನಿಕವಾಗಿಯೇ ಇದೆ. ಮುಂದಿನ ಜನವರಿ ವೇಳೆಗೆ ಮೊದಲ ಹಂತದ ಕಾಮಗಾರಿ ಮುಗಿಸಿ ನೀರನ್ನು ಲಿಫ್ಟ್ ಮಾಡಿ ಬೇಲೂರು ಕಡೆಗೆ ಹರಿಸ್ತೇವೆ ಅಂದ್ರು. ಇದನ್ನು ಮಾಡಲಾಗದವರು ರಾಜಕೀಯಕ್ಕಾಗಿ ಏನೇನೋ ಮಾತಾಡ್ತಿದ್ದಾರೆ ಅಂತ ಕುಟುಕಿದ್ರು.

    ಒಟ್ಟಿನಲ್ಲಿ ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ ಪಶ್ಚಿಮಘಟ್ಟಗಳಲ್ಲಿ ಈ ಬಾರಿ ನಿರೀಕ್ಷಿತ ಮಳೆಯಾಗಿಲ್ಲ. ಜೊತೆಗೆ ಹೇಮಾವತಿ ಜಲಾಶಯ ಕೂಡ ಭರ್ತಿ ಆಗಿಲ್ಲ. ಇನ್ನು ಎತ್ತಿನಹೊಳೆ ಮೂಲಕ ನೀರು ಎಲ್ಲಿಂದ ಹರಿಯಲಿದೆ ಅನ್ನೋದು ಸದ್ಯದ ಪ್ರಶ್ನೆಯಾಗಿದೆ.

    ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಆರೇಳು ವರ್ಷಗಳಿಂದ ಮಳೆಯಿರಲಿಲ್ಲ. ಕೆರೆ-ಕಟ್ಟೆಗಳು ಬರಿದಾಗಿ ಅಂತರ್ಜಲ ಕುಸಿದಿತ್ತು. ಕುಡಿವ ನೀರಿಗೂ ಹಾಹಾಕಾರ ಏರ್ಪಟ್ಟಿತ್ತು. ಇದ್ರಿಂದ ನೊಂದಿದ್ದ ರೈತರು
    ದನಕರು, ಎತ್ತು ಮಾರಾಟ ಮಾಡಿ ಕೃಷಿಯಿಂದ ವಿಮುಖರಾಗಿದ್ರು.

    ಆದ್ರೆ ಈಗ ಪರಿಸ್ಥಿತಿ ಬದಲಾಗಿದೆ. ಉತ್ತಮ ಮಳೆಯಾಗುತ್ತಿದೆ. ಇದು ಮತ್ತೆ ಕೃಷಿ ಚಟುವಟಿಕೆಗೆ ರೈತರನ್ನ ಪ್ರೇರೇಪಿಸಿದೆ. ಎತ್ತುಗಳು ಸಿಗದಿದ್ರೂ ಅನ್ನದಾತ ಉಳುಮೆಗೆ ಮುಂದಾಗಿದ್ದಾನೆ. ಮನೆ ಮಂದಿಯೆಲ್ಲಾ ಸೇರಿ ನೊಗಕ್ಕೆ ಹೆಗಲು ಕೊಟ್ಟು ಉಳುಮೆ ಕಾರ್ಯದಲ್ಲಿ ತೊಡಗಿದ್ದಾರೆ.

    ತಮ್ಮ ಕೈಗಳು ಹೆಪ್ಪುಗಟ್ಟಿದ್ದರೂ ದಿಟ್ಟ ಮನಸ್ಸಿನಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿರೋ ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗೊಲ್ಲರಹಟ್ಟಿ ರೈತರನ್ನ ಕೇಳಿದ್ರೆ, ಹಲವಾರು ವರ್ಷಗಳಿಂದ ಮಳೆಯೇ ಇರಲಿಲ್ಲ. ಈಗ ಕಷ್ಟಪಟ್ಟು ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದೇವೆ ಅಂತ ಹೇಳ್ತಿದ್ದಾರೆ.

  • ಕರಾವಳಿಗರಿಗೆ ಬಿಗ್ ಶಾಕ್- ಎತ್ತಿನಹೊಳೆ ಯೋಜನೆಗೆ ಗ್ರೀನ್ ಸಿಗ್ನಲ್

    ಕರಾವಳಿಗರಿಗೆ ಬಿಗ್ ಶಾಕ್- ಎತ್ತಿನಹೊಳೆ ಯೋಜನೆಗೆ ಗ್ರೀನ್ ಸಿಗ್ನಲ್

    ಬೆಂಗಳೂರು: ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ರಾಷ್ಟೀಯ ಹಸಿರು ನ್ಯಾಯಮಂಡಳಿ(ಎನ್‍ಜಿಟಿ) ಷರತ್ತುಬದ್ಧ ಅನುಮತಿ ನೀಡಿ ಮಹತ್ವದ ಆದೇಶ ಹೊರಡಿಸಿದೆ.

    ಯೋಜನೆಯಲ್ಲಿ ಪರಿಸರ ನಿಯಮಗಳನ್ನು ಉಲ್ಲಂಘಿಸಿ ಕಾಮಗಾರಿ ನಡೆಸಲಾಗುತ್ತಿದೆ ಅಂತಾ ಆರೋಪಿಸಿ ಪರಿಸರ ವಾದಿ ಕೆ.ಎನ್. ಸೋಮಶೇಖರ್ ಸಲ್ಲಿಸಿದ್ದ ಅರ್ಜಿ ಇತ್ಯರ್ಥ ಪಡಿಸಿರುವ ಎನ್‍ಜಿಟಿ ಮುಂದಿನ ಆದೇಶದಲ್ಲಿ ಷರತ್ತು ಮತ್ತು ನಿರ್ದೇಶನಗಳ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದೆ.

    ಸದ್ಯ ಕಾಮಗಾರಿ ಪ್ರಗತಿಯಲ್ಲಿದ್ದು ಅದನ್ನ ಮುಂದುವರೆಸಬಹುದು. ಆದ್ರೆ ಕೆಲ ಷರತ್ತು ಮೇರೆಗೆ ಕಾಮಗಾರಿ ಮುಂದುವರಿಸಲು ಯಾವುದೇ ತಕರಾರು ಇಲ್ಲ ಅಂತ ನ್ಯಾ. ಜಾವೇದ್ ರಹೀಮ್ ಮತ್ತು ನ್ಯಾ. ರಂಜನ್ ಚಟರ್ಜಿ ನೇತೃತ್ವದ ಪೀಠ ಹೇಳಿದೆ. ಆದ್ರೆ ಸದ್ಯದ ಆದೇಶದಲ್ಲಿ ಯಾವುದೇ ಷರತ್ತು ಮತ್ತು ನಿರ್ದೇಶನಗಳ ಬಗ್ಗೆ ಮಾಹಿತಿ ನೀಡಿಲ್ಲ. ಈ ಯೋಜನೆ ವಿರುದ್ಧ ಇನ್ನೂ ಎರಡು ಅರ್ಜಿಗಳು ಬಾಕಿ ಇದ್ದು ಪುರುಷೊತ್ತಮ್ ಚಿತ್ತಾಪುರ ಕುಡಿಯುವ ನೀರಿನ ವಿಚಾರವಾಗಿ ಹಾಗೂ ಕಿಶೋರ್ ಕುಮಾರ್ ಎಂಬುವರು ಯೋಜನೆಯಿಂದ ಜೀವ ವೈವಿಧ್ಯತೆಗೆ ದಕ್ಕೆಯಾಗುತ್ತದೆ ಅಂತ ಆರೋಪಿಸಿ ಅರ್ಜಿ ಸಲ್ಲಿಸಿದ್ರು. ಈ ಅರ್ಜಿಗಳು ಇನ್ನು ವಿಚಾರಣೆ ಹಂತದಲ್ಲಿದೆ.