Tag: ಎತ್ತಿನ ಗಾಡಿ

  • ಸರ್ಕಾರಿ ಕಾರ್ಯಕ್ರಮಕ್ಕೆ ಎತ್ತಿನಗಾಡಿ ಏರಿ ಬಂದ ಸುಧಾಕರ್

    ಸರ್ಕಾರಿ ಕಾರ್ಯಕ್ರಮಕ್ಕೆ ಎತ್ತಿನಗಾಡಿ ಏರಿ ಬಂದ ಸುಧಾಕರ್

    ಚಿಕ್ಕಬಳ್ಳಾಪುರ: ತಾಲೂಕಿನ ಹೊಸಹುಡ್ಯ ಗ್ರಾಮದಲ್ಲಿ ಆಯೋಜಿಸಲಾಗಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕರು ಹಾಗೂ ಆರೋಗ್ಯ ಹಾಗೂ ವೈದ್ಯಕೀಯ ಖಾತೆ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎತ್ತಿನಗಾಡಿಯಲ್ಲಿ ಬರುವ ಮೂಲಕ ಗಮನಸೆಳೆದರು.

    ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರು ಇದಕ್ಕೂ ಮುನ್ನ ತಮ್ಮನಾಯಕನಹಳ್ಳಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಭವನಕ್ಕೆ ಚಾಲನೆ ನೀಡಿದರು. ತದನಂತರ ಜಾತವಾರ ಗ್ರಾಮದಲ್ಲಿ ನಿರ್ಮಾಣವಾಗಿರುವ 10 ಲಕ್ಷ ರೂ. ವೆಚ್ಚದ ಗರಡಿ ಹಾಗೂ ಸಮುದಾಯ ಭವನವನ್ನ ಲೋಕಾರ್ಪಣೆ ಮಾಡಿದರು. ಇದನ್ನೂ ಓದಿ: ದರ್ಗಾ ಕಟ್ಟಡಕ್ಕೆ ಹಾನಿಮಾಡಿದ ಆರೋಪಿಗಳು ಪೊಲೀಸರ ಬಲೆಗೆ!

    ತದನಂತರ ಹೊಸಹುಡ್ಯ ಗ್ರಾಮಕ್ಕೆ ಬಂದ ಸುಧಾಕರ್ ಅವರನ್ನು ಅದ್ದೂರಿಯಾಗಿ ಬರ ಮಾಡಿಕೊಂಡರು. ಸಚಿವರನ್ನು ಸೇರಿದಂತೆ ಅಧಿಕಾರಿಗಳನ್ನು ಗ್ರಾಮಸ್ಥರು ಎತ್ತಿನ ಬಂಡಿ ಮೂಲಕ ಗ್ರಾಮಕ್ಕೆ ಕರೆದೊಯ್ದರು. ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಕ್ಕೆ ಸುಧಾಕರ್ ಅವರು ಚಾಲನೆ ನೀಡಿದರು. ಜಿಲ್ಲಾಧಿಕಾರಿಗಳು ಹಾಗೂ ಸಚಿವರು ಸಹ ಇಂದು ರಾತ್ರಿ ಗ್ರಾಮ ವಾಸ್ತವ್ಯ ಮಾಡಿ ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ, ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

  • ಅಂತರಘಟ್ಟೆ ಜಾತ್ರೆಯಲ್ಲಿ ಎತ್ತಿನ ಗಾಡಿಗಳ ಮಧ್ಯೆ ಕಂಗೊಳಿಸಿದ ಟಗರು

    ಅಂತರಘಟ್ಟೆ ಜಾತ್ರೆಯಲ್ಲಿ ಎತ್ತಿನ ಗಾಡಿಗಳ ಮಧ್ಯೆ ಕಂಗೊಳಿಸಿದ ಟಗರು

    ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆಯುತ್ತಿರುವ ಇತಿಹಾಸ ಪ್ರಸಿದ್ಧ ಅಂತರಘಟ್ಟಮ್ಮನ ಜಾತ್ರೆಯಲ್ಲಿ ನೂರಾರು ಎತ್ತಿನಗಾಡಿಗಳ ಮಧ್ಯೆ ಒಂದು ಟಗರಿನ ಗಾಡಿ ಎಲ್ಲರ ಗಮನ ಸೆಳೆದಿದೆ.

    ಕಳೆದೊಂದು ವಾರದಿಂದ ಅಜ್ಜಂಪುರ ತಾಲೂಕಿನ ಅಂತರಘಟ್ಟೆಯಲ್ಲಿ ಅಂತರಘಟ್ಟಮನ ಜಾತ್ರೆ ನಡೆಯುತ್ತಿದೆ. ಈ ಜಾತ್ರೆಗೆ ಸುತ್ತಮುತ್ತಲಿನ ಹಳ್ಳಿ-ತಾಲೂಕು ಹಾಗೂ ಜಿಲ್ಲೆಯ ಜನ ಕೂಡ ಎತ್ತಿನಗಾಡಿಯಲ್ಲಿ ಬಂದು ಅಂತರಘಟ್ಟಮನಿಗೆ ಪೂಜೆ ಸಲ್ಲಿಸಿ ಹೋಗುತ್ತಾರೆ. ಆದರೆ, ನೂರಾರು ಎತ್ತಿನಗಾಡಿಗಳ ಮಧ್ಯೆ ಬಗ್ಗವಳ್ಳಿ ಗ್ರಾಮದ ರೈತ ಲಿಂಗಪ್ಪ, ವಿಶೇಷ ಗಾಡಿ ಮಾಡಿಸಿ ಟಗರಿನ ಗಾಡಿಯಲ್ಲಿ ಜಾತ್ರೆಗೆ ಹೊರಟಿದ್ದಾರೆ. ಇದನ್ನೂ ಓದಿ: ಏಳು ದಿನದ ಟಗರು 2 ಲಕ್ಷಕ್ಕೆ ಮಾರಾಟ!

    ಗಾಡಿ ಕಟ್ಟಿಕೊಂಡು ಸಂಚರಿಸೋದಕ್ಕೆ ಟಗರಿಗೆ ವಿಶೇಷವಾದ ತರಬೇತಿ ಕೂಡ ನೀಡಿದ್ದಾರೆ. ಹಾವೇರಿಯಿಂದ ಟಗರಿನ ಗಾಡಿಯನ್ನು ತರಿಸಿರುವ ಲಿಂಗಪ್ಪ ಟಗರಿನ ಗಾಡಿಯಲ್ಲಿ ಅಂತರಘಟ್ಟಮನ ದರ್ಶನಕ್ಕೆ ಹೊರಟಿದ್ದಾರೆ. ಗಾಡಿ ಹಾಗೂ ಟಗರುಗಳಿಗೆ ನವವಧುವಿನಂತೆ ಶೃಂಗರಿಸಿ ಹೊರಟಿದ್ದಾರೆ. ಈ ಗಾಡಿಯನ್ನು ನೋಡಲು ದಾರಿಯುದ್ಧಕ್ಕೂ ನೂರಾರು ಜನ ನಿಂತಿದ್ದಾರೆ. ರೈತ ಲಿಂಗಪ್ಪನವರ ಈ ಭಕ್ತಿ ಹಾಗೂ ಪ್ರಾಣಿಗಳ ಮೇಲಿನ ಪ್ರೀತಿಗೆ ಸ್ಥಳೀಯರು ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಹಿಜಬ್‌ ನಮಗೆ ಮುಖ್ಯ – ಕಲಬುರಗಿ ಉರ್ದು ಶಾಲೆಗೆ ಗೈರಾದ ವಿದ್ಯಾರ್ಥಿನಿಯರು

    ಈ ಜಾತ್ರೆಗೆ ತರೀಕೆರೆ, ಕಡೂರು, ಬೀರೂರು, ಭದ್ರಾವತಿ, ಹೊಸದುರ್ಗ, ಶಿವಮೊಗ್ಗ, ಅರಸೀಕೆರೆ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ರೈತರು ಬಂದು ಹೋಗುತ್ತಾರೆ. ಅಜ್ಜಂಪುರದ ಅಂತಗಘಟ್ಟೆ ಜಾತ್ರೆ ಅಂದ್ರೆ ಇಡೀ ರಾಜ್ಯಕ್ಕೆ ಚಿರಪರಿಚಿತ. ಈ ಜಾತ್ರೆಯ ವೇಳೆ ತರೀಕೆರೆ-ಅಜ್ಜಂಪುರ ತಾಲೂಕಿನಲ್ಲಿ ಸಾವಿರಾರು ಕುರಿಗಳನ್ನು ಅಂತರಘಟ್ಟಮ್ಮನಿಗೆ ಹರಕೆ ಸಲ್ಲಿಸುವ ವಾಡಿಕೆ ಇದೆ.

     

  • ಬೆಲೆ ಏರಿಕೆಗೆ ವಿರೋಧ – ಎತ್ತಿನ ಗಾಡಿ ಏರಿದ ಕೈ ನಾಯಕರು

    ಬೆಲೆ ಏರಿಕೆಗೆ ವಿರೋಧ – ಎತ್ತಿನ ಗಾಡಿ ಏರಿದ ಕೈ ನಾಯಕರು

    ಬೆಂಗಳೂರು: ಇಂದಿನಿಂದ ಹತ್ತು ದಿನಗಳ ಕಾಲ ವಿಧಾನ ಸಭೆ ಅಧಿವೇಶನ ನಡೆಯಲಿದ್ದು, ಬೆಲೆ ಏರಿಕೆ ಖಂಡಿಸಿ ಸಿದ್ದರಾಮಯ್ಯ, ಡಿಕೆಶಿ ವಿಧಾನಸೌಧಕ್ಕೆ ಎತ್ತಿನ ಗಾಡಿಯಲ್ಲಿ ತೆರಳುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

    DKShivakumar

    ಪ್ರತಿಭಟನೆಗೆ ನಾಲ್ಕುವರೆ ಲಕ್ಷ ರೂಪಾಯಿಯ ಹಳ್ಳಿಕಾರ್ ತಳಿಯ ಜೋಡಿ ರೇಸಿಂಗ್ ಎತ್ತುಗಳು ಬಂದಿದ್ದು, ಇನ್ನುಳಿದ ಎತ್ತುಗಳು ಒಂದೂವರೆ ಲಕ್ಷ ರೂಪಾಯಿ ಬೆಲೆಯುಳ್ಳದಾಗಿದೆ. ಒಟ್ಟು ಸುಮಾರು 8 ಎತ್ತುಗಳನ್ನು ಕಾಂಗ್ರೆಸ್ ಪ್ರತಿಭಟನೆಗೆಂದು ತರಲಾಗಿದೆ. ಸುಮಾರು ಮುನ್ನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮಳೆಗಾಲದ ಅಧಿವೇಶನ ಆರಂಭ- ಕಾಂಗ್ರೆಸ್, ಬಿಜೆಪಿ ಮಧ್ಯೆ ಗದ್ದುಗೆ ಗುದ್ದಾಟ

    ಪ್ರತಿಭಟನೆಯಲ್ಲಿ ಮುಂದೆ ಹೋಗುತ್ತಿದ್ದ ಸಿದ್ದರಾಮಯ್ಯನವರ ಎತ್ತಿನ ಗಾಡಿಯನ್ನು ನಿಲ್ಲಿಸಿ, ಹಿಂದಿನ ಎತ್ತಿನ ಗಾಡಿಯಲ್ಲಿ ಬಂದ ಡಿಕೆಶಿವಕುಮಾರ್, ಒಟ್ಟಿಗೆ ಒಂದೇ ಎತ್ತಿನ ಗಾಡಿಯಲ್ಲಿ ಸಾಗಿದರು. ಈ ವೇಳೆ ಪ್ರೆಸ್ಟಿಜ್ ಅಪಾರ್ಟ್‍ಮೆಂಟ್ ಬಳಿ ರ್ಯಾಲಿಯನ್ನು ಪೊಲೀಸರು ತಡೆದರು. ನಂತರ ನಾಯಕರು ಡಿಸಿಪಿ ಅನುಚೇತ್ ಜೊತೆ ಮಾತನಾಡಿ ಪ್ರತಿಭಟನೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್ ಸುರಿದು ಪತಿಯನ್ನು ಹತ್ಯೆಗೈದು ಚರಂಡಿಗೆ ಶವ ಎಸೆದ್ಳು

    ಪ್ರತಿಭಟನೆ ತಡೆಯಲು ಪೊಲೀಸರು ಮುಂದಾದಾಗ ಕಾಂಗ್ರೆಸ್ ನಾಯಕರು ಬ್ಯಾರಿಕೇಡ್ ನುಗ್ಗಿ ಮುಂದೆ ನಡೆದರೆ, ಕಾಂಗ್ರೆಸ್ ಮಹಿಳಾ ಘಟಕದವರು ಸ್ಥಳದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಕೊನೆಗೆ ತಳ್ಳಾಟ ನೂಕಾಟದಿಂದ ಪೊಲೀಸರು ಶಾಸಕರ ಗಾಡಿ ಬಿಟ್ಟು ಕಳಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರವರು, ನಾನು ದೇಶದ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ಪಿಕ್ ಪಾಕೆಟ್ ನಡೀತಾ ಇದೆ. ಸರ್ಕಾರ ಪಿಕ್ ಪಾಕೆಟ್ ಮಾಡುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಇದನ್ನು ಕ್ರಿಮಿನಲ್ ಆಕ್ಟ್ ಎಂದಿದ್ದರು ಎಂದು ವಾಗ್ದಾಳಿ ನಡೆಸಿದರು.

  • ಎತ್ತಿನ ಗಾಡಿಗೆ ಬಸ್ ಡಿಕ್ಕಿ- ಎತ್ತು, ರೈತ ಸ್ಥಳದಲ್ಲೇ ಸಾವು

    ಎತ್ತಿನ ಗಾಡಿಗೆ ಬಸ್ ಡಿಕ್ಕಿ- ಎತ್ತು, ರೈತ ಸ್ಥಳದಲ್ಲೇ ಸಾವು

    ಗದಗ: ಎತ್ತಿನ ಗಾಡಿ ಹಾಗೂ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಎತ್ತು ಹಾಗೂ ರೈತ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ತಾಲೂಕಿನ ಅಡವಿ ಸೋಮಾಪುರ ಬಳಿ ನಡೆದಿದೆ.

    ಸಂಭಾಪೂರ ಗ್ರಾಮದ ರೈತರು ತಮ್ಮ ಜಮೀನಿನ ಕೆಲಸ ಮೂಗಿಸಿಕೊಂಡು ಮನೆಗೆ ಬರುವ ವೇಳೆ ಬಸ್‍ವೊಂದು ಎತ್ತಿನ ಚಕ್ಕಡಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ 75 ವರ್ಷದ ಹನುಮಪ್ಪ ಮುಳ್ಳೂರ ಹಾಗೂ ಒಂದು ಎತ್ತು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಡಿಯಲ್ಲಿ ಕುಳಿತ್ತಿದ್ದ ಫಕೀರಪ್ಪ ಹಾಗೂ ನಾರಾಯಣಗೆ ಗಂಭೀರ ಗಾಯಗಳಾಗಿವೆ. ಸಾವು ಬದುಕಿ ನಡುವೆ ನರಳಾಡುತ್ತಿದ್ದ ಇಬ್ಬರು ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಗದಗನಿಂದ ಉಪ್ಪಿನ ಬೆಟಗೇರಿಗೆ ಹೊರಟಿದ್ದ ಬಸ್ ವೇಗವಾಗಿ ಬಂದಿದೆ. ಓವರ್‍ಟೆಕ್ ಮಾಡುವ ವೇಳೆ, ಬಸ್ ಚಾಲಕನ ಅಜಾಗರೂಕತೆಯಿಂದ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಜೊತೆಗೆ ಹುಬ್ಬಳ್ಳಿಯಿಂದ ಹೊಸಪೇಟೆವರೆಗೆ ರಾಷ್ಟ್ರೀಯ ಹೆದ್ದಾರಿ 63 ರ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ವಿಳಂಬ ಜೊತೆಗೆ ಸರ್ವಿಸ್ ರಸ್ತೆಯಿಲ್ಲದಿರುವುದರಿಂದ ಇಂತಹ ಅನೇಕ ಘಟನೆಗಳು ನಡೆಯುತ್ತಿವೆ ಎಂಬುದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ ತಡೆದ ಸ್ಥಳೀಯರು ರಸ್ತೆ ನಡುವೆ ಕಲ್ಲು ಇಟ್ಟು ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆದಾರರ ವಿರುದ್ಧ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಸ್ಥಿತಿ ತಿಳಿಗೊಳಿಸಿದರು. ಘಟನೆ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೆರೆಯಲ್ಲಿ ಮುಳುಗಿದ ಎತ್ತಿನ ಗಾಡಿ – ದಂಪತಿ ಸೇರಿ ಇಬ್ಬರು ಮಕ್ಕಳು ದುರ್ಮರಣ

    ಕೆರೆಯಲ್ಲಿ ಮುಳುಗಿದ ಎತ್ತಿನ ಗಾಡಿ – ದಂಪತಿ ಸೇರಿ ಇಬ್ಬರು ಮಕ್ಕಳು ದುರ್ಮರಣ

    ಹಾಸನ: ಕರೆಯಲ್ಲಿ ಎತ್ತಿನ ಗಾಡಿ ಮುಳುಗಿದ ಪರಿಣಾಮ ಜಮೀನಿನ ಕಡೆಗೆ ಹೊರಟಿದ್ದ ರೈತ ದಂಪತಿ ಸೇರಿದಂತೆ ಇಬ್ಬರು ಮಕ್ಕಳು ದುರ್ಮರಣ ಹೊಂದಿರುವ ಘಟನೆ ಹೊಳೆನರಸೀಪುರದದಲ್ಲಿ ನಡೆದಿದೆ.

    ಮೃತ ರೈತ ದಂಪತಿಯನ್ನು ರಾಜೇಗೌಡ (48), ಶಾರದಮ್ಮ (40), ಎಂದು ಗುರುತಿಸಲಾಗಿದೆ. ಬೇಸಿಗೆ ರಜೆ ಎಂದು ಮೈಸೂರಿನಿಂದ ಅಜ್ಜಿ ಮನೆಗೆ ಬಂದಿದ್ದ  ದೃತಿ (5) ಮೃತ  ಎಂಬ ಬಾಲಕಿರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.

    ಬೇಸಿಗೆ ಸಮಯವಾಗಿದ್ದರಿಂದ ಕೆರೆಯ ನೀರಿನ ಪ್ರಮಾಣ ಕಡಿಮೆಯಾಗಿತ್ತು. ನೀರಿಲ್ಲದ ಸಂದರ್ಭದಲ್ಲಿ ಕರೆಯೊಳಗೆ ಎತ್ತಿನ ಗಾಡಿಯಲ್ಲಿ ಹೋಗುತ್ತಿದ್ದರು. ಆದರೆ ಇತ್ತೀಚೆಗೆ ಮಳೆ ಬಂದ ಕಾರಣ ಕೆರೆಯಲ್ಲಿ ನೀರು ತುಂಬಿತ್ತು. ಇಂದು ಈ ದಡದಿಂದ ಆ ದಡಕ್ಕೆ ಹೋಗಲು ಹತ್ತಿರವಾಗುತ್ತೆ ಎಂಬ ಕಾರಣಕ್ಕೆ ನೀರಿನೊಳಗೆ ಎತ್ತಿನಗಾಡಿಯನ್ನು ಹೊಡೆಯಲಾಗಿದೆ. ಆದರೆ ನೀರಿನ ಮಧ್ಯ ಎತ್ತುಗಳು ಗಾಬರಿಗೊಂಡು ಅಲ್ಲಿ ಮುಂಚೆಯೇ ಇದ್ದ ಗುಂಡಿಯೊಳಗೆ ಗಾಡಿ ಬಿದ್ದಿದೆ. ಈ ಪರಿಣಾಮ ಈಜು ಬಾರದ ಒಂದೇ ಕುಟುಂಬದ ಎಲ್ಲರು ಮೃತ ಪಟ್ಟಿದ್ದಾರೆ.

    ಸ್ಥಳಕ್ಕೆ ಭೇಟಿ ನೀಡಿದ ಹಳ್ಳಿ ಮೈಸೂರು ಪೊಲೀಸರು ಶಾರದಮ್ಮ ಮೃತದೇಹ ಮತ್ತು ಎತ್ತಿನ ಗಾಡಿಯನ್ನು ಕೆರೆಯಿಂದ ಹೊರಕ್ಕೆ ತೆಗಿದಿದ್ದಾರೆ. ಇನ್ನುಳಿದ ಮೃತದೇಹಗಳ ಶೋಧಕಾರ್ಯ ಮುಂದುವರೆದಿದೆ. ಎತ್ತುಗಳು ಬಂಡಿಯಿಂದ ಹೊರ ಬಂದು ದಡ ಸೇರಿವೆ. ಈ ಸಂಬಂಧ ಹಳ್ಳಿಮೈಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

  • ಎತ್ತಿನ ಗಾಡಿ ಓಡಿಸಿದ ದರ್ಶನ್

    ಎತ್ತಿನ ಗಾಡಿ ಓಡಿಸಿದ ದರ್ಶನ್

    ಮಂಡ್ಯ: ನಟ ದರ್ಶನ್ ಅವರು ಕಳೆದ ದಿನ ಸುಮಲತಾ ಅಂಬರೀಶ್ ಪರವಾಗಿ ಮಳವಳ್ಳಿ ತಾಲೂಕಿನಲ್ಲಿ ಬರುವ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಇದೇ ವೇಳೆ ನಟ ದರ್ಶನ್ ಎತ್ತಿನ ಗಾಡಿಯ ಮೇಲೆ ಸವಾರಿ ಮಾಡಿದ್ದಾರೆ.

    ನಟ ದರ್ಶನ್ ಮಳವಳ್ಳಿಯ ಕಂದೇಗಾಲದಲ್ಲಿ ಪ್ರಚಾರ ಮಾಡುವ ವೇಳೆ ಎತ್ತಿನ ಗಾಡಿ ಓಡಿಸಿದ್ದಾರೆ. ಕಂದೇಗಾಲದಲ್ಲಿ ದರ್ಶನ್ ಅಭಿಮಾನಿಗಳು ದಾರಿಯ ಮಧ್ಯೆಯೇ ಎತ್ತಿನ ಗಾಡಿ ಸಿದ್ಧಪಡಿಸಿ ಅವರಿಗಾಗಿ ಕಾದು ಕುಳಿತ್ತಿದ್ದರು. ದರ್ಶನ್ ಅವರು ಪ್ರಚಾರಕ್ಕೆಂದು ಕಂದೇಗಾಲ ಕಡೆ ಬರುತ್ತಿದ್ದಂತೆ ಅವರ ಅಭಿಮಾನಿಗಳು ಎತ್ತಿನ ಗಾಡಿ ಓಡಿಸುವಂತೆ ಒತ್ತಾಯ ಮಾಡಿದ್ದಾರೆ.

    ಕೊನೆಗೆ ಅಭಿಮಾನಿಗಳ ಒತ್ತಾಯದ ಮೇರೆಗೆ ನಟ ದರ್ಶನ್ ಅವರು ಕಬ್ಬು ಸಾಗಿಸುವ ಎತ್ತಿನ ಗಾಡಿ ಹತ್ತಿದ್ದಾರೆ. ಬಳಿಕ ಜೋಡೆತ್ತು ಗಾಡಿ ಮೇಲೆ ಹಗ್ಗ ಹಿಡಿದು ನಿಂತು ಹೊಯ್.. ಹೊಯ್.. ಎಂದು ಎತ್ತಿನ ಗಾಡಿ ಸವಾರಿ ಮಾಡಿದ್ದಾರೆ.

    ದರ್ಶನ್ ಅವರಿಗಾಗಿ ಅಭಿಮಾನಿಗಳು ಎತ್ತಿನ ಗಾಡಿಯನ್ನು ವಿಶೇಷವಾಗಿ ಅಲಂಕಾರ ಮಾಡಿದ್ದರು. ಗಾಡಿಗೆ ಕರ್ನಾಟಕದ ಬಾವುಟ ಹಾಕಿದ್ದು, ಜೊತೆಗೆ ಬಾಳೆದಿಂಡು ಕಟ್ಟಿದ್ದರು. ಅಷ್ಟೇ ಅಲ್ಲದೇ ಜೋಡೆತ್ತುಗಳ ಬೆನ್ನಿನ ಮೇಲೆ ರೆಬೆಲ್ ಸ್ಟಾರ್ ಅಂಬಿ ಮತ್ತು ಡಿ ಬಾಸ್ ಎಂದು ಬರೆಯಲಾಗಿತ್ತು.

  • ಎತ್ತಿನ ಗಾಡಿ ಏರಿ ಗುಜರಾತ್ ನಲ್ಲಿ ರಾಹುಲ್ ಗಾಂಧಿ ಪ್ರಚಾರ

    ಎತ್ತಿನ ಗಾಡಿ ಏರಿ ಗುಜರಾತ್ ನಲ್ಲಿ ರಾಹುಲ್ ಗಾಂಧಿ ಪ್ರಚಾರ

    ಗಾಂಧಿನಗರ: ಗುಜರಾತ್ ಸೌರಷ್ಟ್ರದಲ್ಲಿ ತೆರೆದ ವಾಹನದಲ್ಲಿ ಪ್ರಚಾರ ಮಾಡಲು ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಎತ್ತಿನ ಗಾಡಿ ಏರಿ ಪ್ರಚಾರ ಆರಂಭಿಸಿದ್ದಾರೆ.

    ವಿಧಾನಸಭಾ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇಂದಿನಿಂದ ಮೂರು ದಿನಗಳ ಕಾಲ ಗುಜರಾತ್‍ನಲ್ಲಿ ಪ್ರಚಾರ ನಡೆಸಲಿದ್ದಾರೆ. ಆದರೆ ಪೊಲೀಸರು ರಸ್ತೆಯಲ್ಲಿ ತೆರೆದ ವಾಹನದಲ್ಲಿ ಪ್ರಚಾರ ಮಾಡಲು ಅನುಮತಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಎತ್ತಿನ ಗಾಡಿ ಏರಿ ಪ್ರಚಾರ ಕಾರ್ಯ ಆರಂಭಿಸಿದರು.

    ದ್ವಾರಕದ ದೇವಾಲಯದಲ್ಲಿ ರಾಹುಲ್ ಗಾಂಧಿ ಪ್ರಾರ್ಥನೆ ಸಲ್ಲಿಸಿದರು. ದ್ವಾರಕ, ಜಾಮ್‍ನಗರ, ಮೋರ್ಬಿ, ರಾಜ್‍ಕೋಟ್ ಮತ್ತು ಸುರೇಂದ್ರನಗರ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಪ್ರಚಾರವನ್ನು ಮಾಡಲಿದ್ದಾರೆ.

    ಗುಜರಾತ್ ವಿಧಾನಸಭೆಯ ಒಟ್ಟು 182 ಸ್ಥಾನಗಳ ಪೈಕಿ 56 ಸ್ಥಾನಗಳು ಸೌರಾಷ್ಟ್ರದಲ್ಲಿದೆ. ಇಲ್ಲಿ ಪಟೇಲ್ ಸಮುದಾಯದವರು ಪ್ರಬಲರಾಗಿದ್ದು, ಈ ಮತಗಳನ್ನು ಸೆಳೆಯಲು ರಾಹುಲ್ ಗಾಂಧಿ ಇಲ್ಲಿಂದಲೇ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.

    ಆಗಸ್ಟ್‍ನಲ್ಲಿ ನಡೆದ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರ ರಾಜಕೀಯ ಸಲಹೆಗಾರ ಅಹ್ಮದ್ ಪಟೇಲ್ ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ ಎಂದು ಮೊದಲು ನಿರೀಕ್ಷೆ ಮಾಡಲಾಗಿತ್ತಾದರೂ ಕೊನೆಯಲ್ಲಿ ಭಾರೀ ಕಷ್ಟದಿಂದ ಗೆಲುವು ಸಾಧಿಸಿದ್ದರು. ಹಿರಿಯ ನಾಯಕ ಶಂಕರ್ ಸಿಂಗ್ ವಘೇಲಾ ರಾಜೀನಾಮೆ ಜೊತೆ 14 ಮಂದಿ ಶಾಸಕರು ಕಾಂಗ್ರೆಸ್ ಗೆ ಗುಡ್‍ಬೈ ಹೇಳಿದ್ದರು.

    ಮಂಗಳವಾರ ಬೆಳಗ್ಗೆ ರಾಹುಲ್ ಗಾಂಧಿ ತಂಕಾರಾ ಮತ್ತು ವಂಕಾನರ್‍ನಿಂದ ರಾಜ್‍ಕೋಟಾಗೆ ಹೋಗುತ್ತಾರೆ. ಅಲ್ಲಿ ವ್ಯಾಪಾರಿಗಳನ್ನು ಭೇಟಿ ಮಾಡಿ ಹೊಸದಾಗಿ ಜಾರಿಯಾದ ಜಿಎಸ್‍ಟಿ, ಕಳೆದ ನವೆಂಬರ್‍ನಿಂದ ಹಣ್ಣು, ತರಕಾರಿಗಳ ಬೆಲೆ ಏರಿಳಿತ ಇತರೆ ಸಮಸ್ಯೆಗಳ ಬಗ್ಗೆ ಕುರಿತು ಚರ್ಚಿಸಲಿದ್ದಾರೆ.

    ಕೊನೆಯ ದಿನದಂದು ಸುರೇಂದ್ರನಗರದಲ್ಲಿರುವ ಎರಡು ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಮೊದಲು ಚೋಟೈಲ್‍ನಲ್ಲಿರುವ ಬೆಟ್ಟದ ದೇವಸ್ಥಾನ ಮತ್ತು ಎರಡನೆದಾಗಿ ಕಾಗ್ವಾಡದಲ್ಲಿರುವ ಖೊಡಾಲ್ಧಾಮ್ ದೇವಸ್ಥಾನಕ್ಕೆ ತೆರಳುತ್ತಾರೆ. ಇದು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಭಾವಶಾಲಿಯಾದ ದೇವರಾಗಿದೆ.

    ಮೂರು ದಶಕಗಳ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ಹಿರಿಯ ನಾಯಕರು ಮೂರು ದಿನಗಳ ಕಾಲ ಗುಜರಾತ್ ನಲ್ಲಿ ತಡೆರಹಿತ ಪ್ರಚಾರವನ್ನು ನಡೆಸುತ್ತಿದ್ದಾರೆ. 1881ರಲ್ಲಿ ದಿವಂಗತ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರು ಗುಜರಾತ್‍ನಲ್ಲಿ ಎರಡು ದಿನಗಳ ಕಾಲ ಪ್ರಚಾರ ನಡೆಸಿದ್ದರು ಎಂದು ಪಕ್ಷದ ವಕ್ತಾರ ಶಕ್ತಿ ಸಿಂಗ್ ಗೊಹಿಲ್ ಹೇಳಿದ್ದಾರೆ.