Tag: ಎತ್ತಿನಹೊಳೆ ಯೋಜನೆ

  • ಎತ್ತಿನಹೊಳೆ ಯೋಜನೆಗೆ ಮತ್ತಷ್ಟು ಹಣ ಬಿಡುಗಡೆ ಮಾಡಲು ಮುಂದಾದ ಸರ್ಕಾರ

    ಎತ್ತಿನಹೊಳೆ ಯೋಜನೆಗೆ ಮತ್ತಷ್ಟು ಹಣ ಬಿಡುಗಡೆ ಮಾಡಲು ಮುಂದಾದ ಸರ್ಕಾರ

    ಬೆಂಗಳೂರು: ಬಯಲು ಸೀಮೆ ಮಂದಿಗೆ ನೀರು ಒದಗಿಸುವ ಎತ್ತಿನಹೊಳೆ ಯೋಜನೆ(Yetthinahole Drinking Water Project) ಕಾಮಗಾರಿ ಆರಂಭವಾಗಿ ಶುರುವಾಗಿ 10 ವರ್ಷ ಕಳೆದಿದೆ. ಆದರೆ ಇದು ಪೂರ್ಣಗೊಳ್ಳುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಆದರೆ ಈ ಯೋಜನೆ ಪೂರ್ಣಗೊಳಿಸಲು ಮತ್ತಷ್ಟು ಹಣ ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರ(Karnataka Government) ಮುಂದಾಗಿದೆ.

    ಕುಂಟುತ್ತಾ ನಡೆಯುತ್ತಿರುವ ಈ ಯೋಜನೆಯ ಶೇ.50ರಷ್ಟು ಕಾಮಗಾರಿ ಇಲ್ಲಿಯವರೆಗೆ ಪೂರ್ಣಗೊಂಡಿಲ್ಲ. ಯೋಜನೆಯ ಮೂಲ ವೆಚ್ಚ 8ಸಾವಿರ ಕೋಟಿ ರೂ. ಆಗಿತ್ತು. ನಂತರ ಇದನ್ನು 13ಸಾವಿರ ಕೋಟಿ ರೂ.ಗೆ ಹೆಚ್ಚಿಸಲಾಗಿತ್ತು. ಆದರೆ ಈ ಮೊತ್ತವೂ ಈಗ ಸಾಕಾಗುತ್ತಿಲ್ಲವಂತೆ. ಹೀಗಾಗಿ ಈ ಯೋಜನೆಗೆ ಮತ್ತೆ ಅನುದಾನ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ.
    ಇದನ್ನೂ ಓದಿ: ಬೆಂಗಳೂರಿನಲ್ಲಿ ಇಮ್ರಾನ್ ಖಾನ್ ಪುಸ್ತಕ ಬಿಡುಗಡೆಗೆ ವಿರೋಧ – ಹಿಂದೂ ಸಂಘಟನೆ ದೂರು, ಕಾರ್ಯಕ್ರಮ ರದ್ದು

    ಈಗ ಎತ್ತಿನ ಹೊಳೆ ಯೋಜನೆಗೆ ಹೊಸ ಹಣಕಾಸು ಪ್ರಸ್ತಾವನೆ ಸಿದ್ದಪಡಿಸಲಾಗಿದೆ. ಯೋಜನೆ ಮುಗಿಸಲು 23,251 ಕೋಟಿ ರೂ. ಬೇಕಾಗುತ್ತದೆ. ಅನುಮತಿ ನೀಡಿ ಎಂದು ಆರ್ಥಿಕ ಇಲಾಖೆಗೆ ಕಡತ ರವಾನಿಸಿದೆ. ಮೂಲಗಳ ಪ್ರಕಾರ ಈ ಮೊತ್ತ ಕೂಡ ಸಾಕಾಗುವುದು ಅನುಮಾನ. ಇದನ್ನು 25 ಸಾವಿರ ಕೋಟಿಗೆ ಹಿಗ್ಗಿಸುವ ಪ್ರಯತ್ನಗಳು ಕೂಡ ನಡೆಯುತ್ತಿದೆ.

    ಸರ್ಕಾರದ ಹೊಸ ಲೆಕ್ಕದ ಪ್ರಕಾರ 1 ಟಿಎಂಸಿ ನೀರನ್ನು ಪಶ್ಚಿಮಘಟ್ಟಗಳಿಂದ ಬಯಲು ಸೀಮೆಗೆ ತರಲು 1 ಸಾವಿರ ಕೋಟಿ ಹಣ ಖರ್ಚಾಗುತ್ತಿದೆ. ಇಂತಹ ದುಬಾರಿ ಯೋಜನೆ ಜನರಿಗೆ ಬೇಕಾ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎತ್ತಿನಹೊಳೆ ಯೋಜನೆ ಜಾರಿ ವಿಚಾರದಲ್ಲಿ ಸರ್ಕಾರಕ್ಕೆ ಬದ್ಧತೆಯೇ ಇಲ್ಲ: ಪರಮೇಶ್ವರ್

    ಎತ್ತಿನಹೊಳೆ ಯೋಜನೆ ಜಾರಿ ವಿಚಾರದಲ್ಲಿ ಸರ್ಕಾರಕ್ಕೆ ಬದ್ಧತೆಯೇ ಇಲ್ಲ: ಪರಮೇಶ್ವರ್

    ತುಮಕೂರು: ಎತ್ತಿನಹೊಳೆ ಯೋಜನೆ ತ್ವರಿತವಾಗಿ ಜಾರಿ ಮಾಡಲು ಸರ್ಕಾರಕ್ಕೆ ಬದ್ಧತೆಯೇ ಇಲ್ಲ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ.  

    ಮಧುಗಿರಿ ಪಟ್ಟಣದ ಹಾಲು ಶೇಖರಣ ಉಪಕೇಂದ್ರ ಆವರಣದಲ್ಲಿ ತುಮುಲ್ ಕಲ್ಯಾಣ ಟ್ರಸ್ಟ್ ಮತ್ತು ತುಮುಲ್‍ನಿಂದ ಕೋವಿಡ್‍ನಿಂದ ಮೃತಪಟ್ಟ ಹಾಲು ಉತ್ಪಾದಕ ಕುಟುಂಬಗಳಿಗೆ ಚೆಕ್ ವಿತರಿಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಕೊರಟಗೆರೆ ತಾಲ್ಲೂಕಿನ ಬೈರಗೊಂಡ್ಲು ಕೆರೆ ನಿರ್ಮಾಣಕ್ಕೆ ಸರ್ಕಾರ ಸಹಕಾರ ನೀಡುತ್ತಿಲ್ಲ. ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಪರಿಹಾರದ ವ್ಯತ್ಯಾಸವನ್ನು ಸರಿಪಡಿಸುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆರೋಪಿಸಿದರು. ಇದನ್ನೂ ಓದಿ:  ಮೋದಿ ಆಪ್ತ ಭೂಪೇಂದ್ರ ಪಟೇಲ್ ಗುಜರಾತಿನ ಮುಂದಿನ ಸಿಎಂ

    ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದ್ದರೂ, ಈವರೆಗೂ ಪರಿಹಾರ ನೀಡಿಲ್ಲ. ಆದರೆ ತುಮುಲ್ ಘೋಷಣೆ ಮಾಡದೇ ಕೋವಿಡ್ ಮೃತರ ಕುಟುಂಬಗಳಿಗೆ 1 ಲಕ್ಷ ಪರಿಹಾರ ನೀಡಿದೆ ಎಂದು ಇದು ಹೆಮ್ಮೆಯ ವಿಷಯ ಎಂದು ಹೇಳಿದರು.  ಇದನ್ನೂ ಓದಿ:ಮೈಸೂರಿನತ್ತ ಪ್ರಯಾಣ ಬೆಳೆಸಿದ ದಸರಾ ಗಜಪಡೆ

     

  • 8 ಸಾವಿರ ಕೋಟಿಯಲ್ಲಿ ಪ್ರಾರಂಭವಾದ ಎತ್ತಿನಹೊಳೆ ಯೋಜನೆ ಈಗ 23 ಸಾವಿರ ಕೋಟಿ ತಲುಪಿದೆ: ಹೆಚ್.ಡಿ.ಕೆ

    8 ಸಾವಿರ ಕೋಟಿಯಲ್ಲಿ ಪ್ರಾರಂಭವಾದ ಎತ್ತಿನಹೊಳೆ ಯೋಜನೆ ಈಗ 23 ಸಾವಿರ ಕೋಟಿ ತಲುಪಿದೆ: ಹೆಚ್.ಡಿ.ಕೆ

    ನೆಲಮಂಗಲ: 8 ಸಾವಿರ ಕೋಟಿಯಲ್ಲಿ ಪ್ರಾರಂಭವಾದ ಎತ್ತಿನಹೊಳೆ ಯೋಜನೆ ಈಗ 23 ಸಾವಿರ ಕೋಟಿ ತಲುಪಿದೆ ಮುಂದೆ 50 ಸಾವಿರ ಕೋಟಿ ಆದರು ಆಶ್ಚರ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

    ನೆಲಮಂಗಲ ತಾಲೂಕು ಕೆಂಗಲ್ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಹಾಗೂ ಶ್ರೀ ಕೃಷ್ಣ ರುಕ್ಮಿಣಿ ಅಮ್ಮನವರ ದೇವಾಲಯದ ಜೀರ್ಣೊದ್ದರ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಅವರು, ಬಯಲು ಸೀಮೆಗೆ ಕುಡಿಯುವ ನೀರು ಸರಬರಾಜು ಮಾಡುವ ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡಿದ ಅವರು, 3 ವರ್ಷದಲ್ಲಿ ಪೂರ್ಣವಾಗ ಬೇಕಿದ್ದ ಯೋಜನೆ 12 ವರ್ಷ ಆದರು ಪೂರ್ಣವಾಗಿಲ್ಲ ಎಂದು ಬೇಸರವನ್ನ ವ್ಯಕ್ತಪಡಿಸಿದ್ದಾರೆ. 8 ಸಾವಿರ ಕೋಟಿಯಲ್ಲಿ ಪ್ರಾರಂಭವಾದ ಎತ್ತಿನಹೊಳೆ ಯೋಜನೆ ಈಗ 23 ಸಾವಿರ ಕೋಟಿ ತಲುಪಿದೆ, ಮುಂದೆ 50 ಸಾವಿರ ಕೋಟಿ ಆದರು ಆಶ್ಚರ್ಯವಿಲ್ಲ ಎಂದರು. ಇದನ್ನೂ ಓದಿ: ಬಳ್ಳಾರಿಗೆ ಗೌಪ್ಯವಾಗಿ ಎಂಟ್ರಿ ಕೊಟ್ರು ಜನಾರ್ದನ ರೆಡ್ಡಿ – ಕುಟುಂಬಸ್ಥರ ಜೊತೆ ವರಮಹಾಲಕ್ಷ್ಮಿ ಹಬ್ಬ ಆಚರಣೆ

    ಎತ್ತಿನಹೊಳೆ ಯೋಜನೆ ಪ್ರಾರಂಭವಾಗಿದ್ದು 8 ಸಾವಿರ ಕೋಟಿಯಲ್ಲಿ. ಮೊದಲಿಗೆ ದೇವರಾಯನದುರ್ಗದಲ್ಲಿ 10 ಟಿಎಂಸಿ ಸಾಮಾಥ್ರ್ಯದ ಜಲಾಶಯ ನಿರ್ಮಾಣದ ಬಗ್ಗೆ ಹೇಳಿದರು, ದೇವರಾಯನದುರ್ಗದಲ್ಲಿ ಜಲಾಶಯ ನಿರ್ಮಾಣ ಕಷ್ಟ ಸಾಧ್ಯವೆಂದು ಕೊರಟಗೆರೆ ಬಳಿಯ ಬೈರಗೊಂಡ್ಲು ಬಳಿ 5 ಟಿಎಂಸಿ ಸಾಮಾಥ್ರ್ಯದ ಜಲಾಶಯವನ್ನ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಇದನ್ನೂ ಓದಿ: 5 ವರ್ಷ ಸ್ವತಂತ್ರ ಸರ್ಕಾರ ಬಂದ್ರೆ ದೇಶ ನೋಡುವಂತ ಕ್ರಾಂತಿಕಾರಿ ಬದಲಾವಣೆ ಆಗುತ್ತೆ: ಎಚ್.ಡಿ.

    ಈಗ 2 ಟಿಎಂಸಿ ಜಲಾಶಯಕ್ಕೆ ಇಳಿಸಿಕೊಂಡಿದ್ದಾರೆ. ಜಲಾಶಯದ ಬಳಿ ಯಾವುದೇ ಕಾಮಾಗಾರಿ ನಡೆಯದಿದ್ದರೂ ಮುಖ್ಯಮಂತ್ರಿ ಬದಲಾಗುವ ಹಿಂದಿನ ದಿನ 1500 ಕೋಟಿಗಳ ಮತ್ತೊಂದು ಯೋಜನೆಗೆ ಅಂಕಿತ ಹಾಕಲಾಗಿದೆ. ನಾನು ಮೊದಲೇ ಹೇಳಿದಂತೆ ಎತ್ತಿನಹೊಳೆ ಯೋಜನೆ ರಾಜಕಾರಣಿಗಳ ಮತ್ತು ಅಧಿಕಾರಿಗಳ ಹಣ ಲೂಟಿ ಮಾಡುವ ಯೋಜನೆಯಾಗಿದೆ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ತರುವುದ್ದಾಗಿ ಹೇಳಿ ಜನಗಳಿಗೆ ಟೋಪಿ ಹಾಕಿ ಹಣವನ್ನ ಲೂಟಿ ಮಾಡಲಾಗುತ್ತಿದೆ. 3 ವರ್ಷದಲ್ಲಿ ಪೂರ್ಣಗೊಳಿಸುವುದ್ದಾಗಿ ಹೇಳಿದರು 12 ವರ್ಷವಾದರು ಕಾಮಾಗಾರಿ ಪೂರ್ಣಗೊಳಿಸುವ ಕೆಲಸ ಮಾಡಿಲ್ಲ, 8 ಸಾವಿರದಿಂದ 23 ಸಾವಿರ ಕೋಟಿಗೆ ಹೋಗಿರುವ ಯೋಜನೆ ಮುಂದೆ 50 ಸಾವಿರ ಕೋಟಿಗೂ ಹೋದರು ಆಶ್ಚರ್ಯ ವಿಲ್ಲ ಎಂದು ಯೋಜನೆಯ ಬಗ್ಗೆ ಬೇಸರವನ್ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.

  • ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನಕ್ಕೆ ಸಚಿವ ಸುಧಾಕರ್ ಒತ್ತಾಯ

    ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನಕ್ಕೆ ಸಚಿವ ಸುಧಾಕರ್ ಒತ್ತಾಯ

    ನವದೆಹಲಿ: ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ನೀಡುವಂತೆ ಆರೋಗ್ಯ ಸಚಿವ ಕೆ. ಸುಧಾಕರ್ ಮನವಿ ಮಾಡಿದ್ದಾರೆ.

    ನವದೆಹಲಿಯಲ್ಲಿ ಇಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಸಚಿವ ಡಾ. ಕೆ ಸುಧಾಕರ್ ಅವರು ಭೇಟಿಯಾಗಿದ್ದಾರೆ. ರಾಜ್ಯದ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳ ಕುರಿತಂತೆ ಮನವಿ ಸಲ್ಲಿಸಿದರು. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಯೋಜನೆ ಸ್ಥಾನಮಾನ ನೀಡುಬೇಕೆಂದು ಮನವಿ ಮಾಡಿದ್ದಾರೆ.

    ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೆರೆಗಳಲ್ಲಿ ಹೂಳೆತ್ತಲು ವಿಶೇಷ ಯೋಜನೆ ರೂಪಿಸಬೇಕು. ಕೃಷ್ಣಾ ನದಿ ನೀರನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದ ಕರ್ನಾಟಕದ ಗಡಿ ಜಿಲ್ಲೆಗಳಿಗೆ ವಿಸ್ತರಿಸಲು ಸಹಕರಿಸುವಂತೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಬಳಿ ಚರ್ಚಿಸಿದ್ದಾರೆ.

  • ಕರಾವಳಿಗೆ ಮೋಸ ಮಾಡಿದ್ರಾ ಬಿಎಸ್‍ವೈ? – ಕಟೀಲ್‍ಗೆ ಮುಖಭಂಗ

    ಕರಾವಳಿಗೆ ಮೋಸ ಮಾಡಿದ್ರಾ ಬಿಎಸ್‍ವೈ? – ಕಟೀಲ್‍ಗೆ ಮುಖಭಂಗ

    – ಅಂದು ವಿರೋಧ, ಇಂದು ಹಣ ಬಿಡುಗಡೆ

    ಬೆಂಗಳೂರು: ಬಜೆಟ್‍ನಲ್ಲಿ ಎತ್ತಿನಹೊಳೆ ಯೋಜನೆಗೆ 1,500 ಕೋಟಿ ಬಿಡುಗಡೆ ಬಗ್ಗೆ ಪ್ರಸ್ತಾಪ ನೋಡಿದಾಗ ಕರಾವಳಿಗರು ಸುಸ್ತೋ ಸುಸ್ತು. ಯಾಕೆಂದರೇ ಇದೇ ಬಿಜೆಪಿಯವರು ಎತ್ತಿನ ಹೊಳೆ ಯೋಜನೆ ವಿರೋಧಿಸಿ 2016ರಲ್ಲಿ ರಥಯಾತ್ರೆ ಮಾಡಿದ್ದರು.

    ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎತ್ತಿನ ಹೊಳೆ ಯೋಜನೆ ವಿರೋಧಿಸಿ ದೊಡ್ಡ ಮಟ್ಟದ ಹೋರಾಟ ಮಾಡಿದ್ದರು. ಅಲ್ಲದೇ ರಥಯಾತ್ರೆ ಮಾಡಿ ಜನರನ್ನು ಎತ್ತಿನ ಹೊಳೆ ವಿರೋಧಿಸಿ ಹೋರಾಟ ಮಾಡುವಂತೆ ಸಂಘಟಿಸಿದ್ದರು. ಆದರೆ ಅಧಿಕಾರಕ್ಕೆ ಬರುತ್ತಿದ್ದ ಹಾಗೆ ಬಿಜೆಪಿ ವರಸೆ ಬದಲಾಗಿದೆ.

    ಅಧಿಕಾರಕ್ಕೆ ಬರುವ ಮೊದಲು ಎತ್ತಿನಹೊಳೆ ವಿರೋಧಿಸಿ ರಥಯಾತ್ರೆ ಮಾಡಿದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎತ್ತಿನ ಹೊಳೆ ಯೋಜನೆಗೆ ಹಣಕಾಸು ಮಂಜೂರು ಮಾಡಿ ಈಗ ಟೀಕೆಗೆ ಒಳಗಾಗಿದೆ. ಎತ್ತಿನ ಹೊಳೆ ಯೋಜನೆ ಜಾರಿ ಮಾಡಲು ನಾವು ಬಿಡಲು ಸಾಧ್ಯವೇ ಇಲ್ಲ ಅಂತಾ ನಳಿನ್ ದೊಡ್ಡ ದೊಡ್ಡ ಭಾಷಣಗಳನ್ನ ಮಾಡಿದ್ದರು. ಆದರೆ ಈಗ ಅವರದ್ದೇ ಸರ್ಕಾರ ಬಂದ ಮೇಲೆ ಯೋಜನೆಗೆ ದುಡ್ಡು ಬಿಡುಗಡೆ ಮಾಡಿದೆ. ಎತ್ತಿನ ಹೊಳೆ ಹೋರಾಟ ಕೇವಲ ಪಾಲಿಟಿಕ್ಸ್ ಗಿಮಿಕ್ ಎಂದು ಕರಾವಳಿಯವರು ಮಾತಾನಾಡಿಕೊಳ್ಳುತ್ತಿದ್ದಾರೆ.

  • ಮಹದಾಯಿಗೆ 500 ಕೋಟಿ, ಎತ್ತಿನಹೊಳೆಗೆ 1500 ಕೋಟಿ – ನೀರಾವರಿಗೆ ಸಿಕ್ಕಿದ್ದು ಏನು?

    ಮಹದಾಯಿಗೆ 500 ಕೋಟಿ, ಎತ್ತಿನಹೊಳೆಗೆ 1500 ಕೋಟಿ – ನೀರಾವರಿಗೆ ಸಿಕ್ಕಿದ್ದು ಏನು?

    – ಅಡಿಕೆ ಬೆಳೆಗಾರರ ಸಾಲಕ್ಕೆ ಬಡ್ಡಿ ವಿನಾಯಿತಿ
    – ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನ

    ಬೆಂಗಳೂರು: ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಒಟ್ಟಾರೆ 32,259 ಕೋಟಿ ರೂ. ಅನುದಾನವನ್ನು ಯಡಿಯೂರಪ್ಪ ನೀಡಿದ್ದು ಸೂಕ್ಷ್ಮ ನೀರಾವರಿಗೆ 627 ಕೋಟಿ ರೂ. ಅನುದಾನ ಪ್ರಕಟಿಸಿದ್ದಾರೆ.

    ಮುಖ್ಯಾಂಶಗಳು
    ರಾಜ್ಯದ ಪ್ರತಿ ಗ್ರಾಮದಲ್ಲಿ “ಜಲಗ್ರಾಮ ಕ್ಯಾಲೆಂಡರ್” ಸಿದ್ಧಪಡಿಸಲು ಕ್ರಮ. ಕರಾವಳಿ ಪ್ರದೇಶದಲ್ಲಿ ಪಶ್ಚಿಮ ಘಟ್ಟದ ನದಿಗಳಿಗೆ ಅಡ್ಡಲಾಗಿ “ಕಿಂಡಿ ಅಣೆಕಟ್ಟು ಯೋಜನೆ”ಗಳ ವ್ಯಾಪಕ ಅನುಷ್ಠಾನಕ್ಕೆ ಮಾಸ್ಟರ್ ಪ್ಲಾನ್.

    ಅಟಲ್ ಭೂ-ಜಲ ಯೋಜನೆಯಡಿ 1202 ಕೋಟಿ ರೂ.ಗಳನ್ನು ಬಳಸಿಕೊಂಡು ರಾಜ್ಯದ ಆಯ್ದ ಜಿಲ್ಲೆಗಳ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ. ರಾಜ್ಯದ ಬೃಹತ್ ನೀರಾವರಿ ಯೋಜನೆಯಡಿಯಲ್ಲಿನ ಅಚ್ಚುಕಟ್ಟು ಪ್ರದೇಶಗಳಲ್ಲಿ ಫ್ಲಡ್ ಇರಿಗೇಷನ್ ಪದ್ಧತಿಯನ್ನು ಇಸ್ರೇಲ್ ಮಾದರಿಯಲ್ಲಿ ಸೂಕ್ಷ್ಮ ನೀರಾವರಿಗೆ ಪರಿವರ್ತಿಸಲು ಕ್ರಮ. ಇದನ್ನೂ ಓದಿ: ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್, ಸಣ್ಣ ರೈತರಿಗೆ 10 ಸಾವಿರ – ಕೃಷಿಗೆ ಸಿಕ್ಕಿದ್ದು ಏನು?

    ಜಲಸಂಪನ್ಮೂಲ ಇಲಾಖೆಯ ಮೂಲಕ ಒಂದು ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ. ಮಹದಾಯಿ ಯೋಜನೆಯಡಿ ಕಳಸಾ ಮತ್ತು ಬಂಡೂರಿ ನಾಲಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 500 ಕೋಟಿ ರೂ. ಅನುದಾನ.

    ಎತ್ತಿನಹೊಳೆ ಯೋಜನೆಗೆ 1500 ಕೋಟಿ ರೂ. ಅನುದಾನ, ಮೊದಲನೆಯ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮುಂದಿನ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸಲು ಕ್ರಮ. ಹೂಳು ತುಂಬಿರುವ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯದ ಕೊರತೆಯನ್ನು ನೀಗಿಸಲು ಪರ್ಯಾಯ ಹರಿವು ನಾಲೆ ಮೂಲಕ ನವಲೆ ಹತ್ತಿರ ಸಮತೋಲನಾ ಜಲಾಶಯ ನಿರ್ಮಾಣದ ವಿಸ್ತೃತ ಯೋಜನಾ ವರದಿ ತಯಾರಿಕೆಗೆ 20 ಕೋಟಿ ರೂ. ಅನುದಾನ

    ರಾಜ್ಯದಲ್ಲಿ 5000 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಏತ ನೀರಾವರಿ ಯೋಜನೆಗಳ ಅನುಷ್ಠಾನ. ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗೆ ಕುಡಿಯುವ ನೀರು ಪೂರೈಕೆಗೆ ತಿಂತಿಣಿ ಬ್ರಿಡ್ಜ್ ಬಳಿ ಕೃಷ್ಣಾ ನದಿಗೆ ಜಲಾಶಯ ನಿರ್ಮಾಣ- ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕ್ರಮ.

    ರಾಮನಗರ ಜಿಲ್ಲೆಯ ಕಣ್ವ ಫಾರ್ಮ್‍ನಲ್ಲಿ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ರೇಷ್ಮೆ ಹುಳು ಸಂಸ್ಕರಣಾ ಘಟಕ ಸ್ಥಾಪನೆಗೆ ಕ್ರಮ. ರಾಜ್ಯದಲ್ಲಿ ಪಶುಸಂಗೋಪನಾ ಆರ್ಥಿಕ ಚಟುವಟಿಕೆಗಳ ವಿಸ್ತರಣೆಗೆ ಸಮೀಕ್ಷೆ ನಡೆಸಿ, ಸಮಗ್ರ ನೀತಿ ರಚನೆ.

    ವಿದೇಶಿ ತಳಿಯ ಹಂದಿಗಳನ್ನು ಆಮದು ಮಾಡಿಕೊಳ್ಳುವ “ಸಮಗ್ರ ವರಾಹ ಅಭಿವೃದ್ಧಿ” ಯೋಜನೆಗೆ ಐದು ಕೋಟಿ ರೂ. ಅನುದಾನ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕುಕ್ಕುಟ ತ್ಯಾಜ್ಯ ಸಂಸ್ಕರಣೆ ಮತ್ತು ಮೌಲ್ಯವರ್ಧನ ಕೇಂದ್ರ ಸ್ಥಾಪನೆ.

    ಲಿಂಗ ನಿರ್ಧಾರಿತ ವೀರ್ಯನಳಿಕೆಗಳಿಂದ ಕೃತಕ ಗರ್ಭಧಾರಣೆ ಮೂಲಕ ಹೆಣ್ಣು ಕರುಗಳ ಜನನ ಹೆಚ್ಚಿಸಲು ಎರಡು ಕೋಟಿ ರೂ. ಅನುದಾನ. ಆಧುನಿಕ ಮೀನುಗಾರಿಕೆ ತಾಂತ್ರಿಕತೆ ಅಳವಡಿಕೆಯ ಉತ್ತೇಜನಕ್ಕೆ 1.5 ಕೋಟಿ ರೂ. ವೆಚ್ಚದಲ್ಲಿ “ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ” ಜಾರಿ.

    “ಮಹಿಳಾ ಮೀನುಗಾರರ ಸಬಲೀಕರಣ” ಯೋಜನೆಯಡಿ 1,000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ಐದು ಕೋಟಿ ರೂ. ಅನುದಾನ. ಮುಲ್ಕಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆ.

    ಮಂಗಳೂರು ತಾಲ್ಲೂಕು ಕುಳಾಯಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಮೀನುಗಾರಿಕೆ ಬಂದರಿನಲ್ಲಿ 12.5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ ಸ್ಥಾಪನೆ. ಉಡುಪಿ ಜಿಲ್ಲೆಯ ಹೆಜಮಾಡಿಕೋಡಿಯಲ್ಲಿ ಪರಿಷ್ಕೃತ ಅಂದಾಜು ವೆಚ್ಚ 181 ಕೋಟಿ ರೂ.ಗಳಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ. ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಂದರು ಅಭಿವೃದ್ಧಿಗೆ 130 ಕೋಟಿ ರೂ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ನಾಲ್ಕು ಕೋಟಿ ರೂ. ಉತ್ತರ ಕನ್ನಡ ಜಿಲ್ಲೆಯ ತೆಂಗಿನಗುಂಡಿ ಬಂದರಿನ ಅಳಿವೆ ಹೂಳೆತ್ತುವ ಕಾಮಗಾರಿಗೆ ಐದು ಕೋಟಿ ರೂ.

    ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಮರವಂತೆಯ ಹೊರ ಬಂದರಿನ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲು 85 ಕೋಟಿ ರೂ. ಅನುದಾನ. ಕೊಡೇರಿ ಮೀನುಗಾರಿಕೆ ಬಂದರಿನ ಅಭಿವೃದ್ಧಿ ಕಾಮಗಾರಿಗಳಿಗೆ ಎರಡು ಕೋಟಿ ರೂ. ಅನುದಾನ.

    ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (DCC), ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (PCARD) ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (PACS) ಗಳಿಂದ ನೀಡಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ. 466 ಕೋಟಿ ರೂ. ನೆರವು. 92 ಸಾವಿರ ರೈತರಿಗೆ ಪ್ರಯೋಜನ.

    ಅಡಿಕೆ ಬೆಳೆಗಾರರ ಪ್ರಾಥಮಿಕ/ ಮಾರುಕಟ್ಟೆ ಸಹಕಾರ ಸಂಘಗಳಲ್ಲಿ ಪ್ರತಿ ರೈತ ಕುಟುಂಬಕ್ಕೆ ನೀಡುವ ದೀರ್ಘಾವಧಿ ಕೃಷಿ ಸಾಲದ ಪೈಕಿ ಗರಿಷ್ಠ ಎರಡು ಲಕ್ಷ ರೂ. ವರೆಗಿನ ಸಾಲಕ್ಕೆ ಶೇ.5 ರಷ್ಟು ಬಡ್ಡಿ ವಿನಾಯಿತಿ

    ಕೃಷಿ ಮೌಲ್ಯ ಸರಪಳಿಯ ಅಭಿವೃದ್ಧಿಗಾಗಿ 100 ಎಫ್‍ಪಿಒ ರಚನೆ, ಈ ಎಫ್‍ಪಿಒ ಗಳ ಮೂಲಕ ಮೌಲ್ಯ ಸರಪಳಿ ಅಭಿವೃದ್ಧಿಗೆ ಎಂಟು ಕೋಟಿ ರೂ. ನೆರವು. ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖರೀದಿಗಾಗಿ ಸ್ಥಾಪಿಸಲಾಗಿರುವ ಕನಿಷ್ಠ ಬೆಂಬಲ ಬೆಲೆ ಆವರ್ತ ನಿಧಿಯ ಮೊತ್ತ ಅಗತ್ಯಕ್ಕೆ ಅನುಗುಣವಾಗಿ 2000 ಕೋಟಿ ರೂ. ವರೆಗೆ ಹೆಚ್ಚಳ.

  • ನನ್ನಷ್ಟು ದೊಡ್ಡ ಒಕ್ಕಲಿಗ ಯಾರು ಇಲ್ಲ, ನಿಜವಾದ ಒಕ್ಕಲಿಗ ನಾನು: ವೀರಪ್ಪ ಮೊಯ್ಲಿ

    ನನ್ನಷ್ಟು ದೊಡ್ಡ ಒಕ್ಕಲಿಗ ಯಾರು ಇಲ್ಲ, ನಿಜವಾದ ಒಕ್ಕಲಿಗ ನಾನು: ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ನಾನು ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಯ ಒಕ್ಕಲಿಗ ಸಮುದಾಯದ ಮೂವರನ್ನು ಮಂತ್ರಿ ಮಾಡಿದ್ದೆ. ಹಾಸನದಲ್ಲೂ ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡಿದ್ದೆ. ಅಷ್ಟು ಮಟ್ಟದಲ್ಲಿ ಒಕ್ಕಲಿಗ ಶಾಸಕರನ್ನು ಸಚಿವರನ್ನಾಗಿ ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.

    ಚಿಕ್ಕಬಳಾಪುರ ವಿಧಾನಸಭಾ ಕ್ಷೇತ್ರದ ಮಂಚನಬಲೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ ಸೇರಿದಂತೆ ಎಲ್ಲಾ ಕಡೆ ಒಕ್ಕಲಿಗರನ್ನ ಮಂತ್ರಿ ಮಾಡಿದ್ದು ನಾನೇ. ಶಾಸಕ ಡಾ.ಸುಧಾಕರ್ ಅವರನ್ನು ಸಹ ಮಂತ್ರಿ ಮಾಡುವುದು ನಾನೇ. ಹೀಗಾಗಿ ಒಕ್ಕಲಿಗ ಸಮುದಾಯಕ್ಕೆ ಅತಿ ಹೆಚ್ಚು ಕೊಡುಗೆ ಕೊಟ್ಟ ನಾನು ನಿಜವಾದ ಒಕ್ಕಲಿಗ. ನನ್ನಷ್ಟು ದೊಡ್ಡ ಒಕ್ಕಲಿಗ ಯಾರು ಇಲ್ಲ ಎಂದು ಹೇಳಿದರು.

    ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಜಾತಿ ಹೆಸರಲ್ಲಿ ನನಗೆ ಮತ ನೀಡದಂತೆ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನೀವು ಜಾತಿ ನೋಡದೇ ನನಗೆ ಮತ ನೀಡಿ. ಈ ಬಾರಿಯೂ ಗೆಲ್ಲಿಸುತ್ತೀರಿ ಎನ್ನುವ ವಿಶ್ವಾಸವಿದೆ ಎಂದು ಮತದಾರರ ಮನವೊಲಿಸಿದರು.

    ಈ ಭಾಗಕ್ಕೆ ಎತ್ತಿನಹೊಳೆ ನೀರು ಹರಿಸಿಯೇ ನಾನು ಪ್ರಾಣ ಬಿಡುತ್ತೇನೆ ಎಂದು ಪುನರುಚ್ಚರಿಸಿದ ಸಂಸದರು, ಇದಕ್ಕೆ ಅನೇಕ ಮಂದಿ ವಿರೋಧಿಸಿದರು. ಆದರೆ ನಾನು ಹೆದರುವುದಿಲ್ಲ. ಈ ಭಾಗಕ್ಕೆ ನೀರು ಹರಿಸದೆ ಸಾಯುವುದಿಲ್ಲ. ಎತ್ತಿನಹೊಳೆ ಯೋಜನೆಯಿಂದ ಕರಾವಳಿ ಭಾಗದ ಜನರು ನನಗೆ ಕಪ್ಪು ಪತಾಕೆ ಹಾರಿಸಿದರು. ನಾನು ಅವರ ವಿರೋಧ ಕಟ್ಟಿಕೊಂಡೆ. ಯಾಕೆ ಸ್ವಂತ ಊರಿನವರ ವಿರೋಧ ಕಟ್ಟಿಕೊಳ್ಳುತ್ತಿಯಾ ಅಂತ ನನ್ನ ಕೆಲ ಹಿತೈಷಿಗಳು ಹೇಳಿದರು. ಆದರೆ ಎತ್ತಿನಹೊಳೆ ನೀರನ್ನು ಈ ಭಾಗಕ್ಕೆ ಹರಿಸುತ್ತೇನೆ ಎಂದು ಚಿಕ್ಕಬಳ್ಳಾಪುರ ಜನರಿಗೆ ಮಾತುಕೊಟ್ಟಿದ್ದೇನೆ. ಹೀಗಾಗಿ ಎತ್ತಿನಹೊಳೆ ಕಾಮಗಾರಿ ಐದು ವರ್ಷದಿಂದ ಭರದಿಂದ ಸಾಗುತ್ತಿದೆ. ಅದಕ್ಕೆ ಅಡ್ಡಿಪಡಿಸುವ ಕೆಲಸವನ್ನು ಈಗಲೂ ಮಾಡುತ್ತಿದ್ದಾರೆ. ನಾನು ಧರ್ಮಸ್ಥಳದ ಮಂಜುನಾಥನ ಪಾದ ತೊಳೆಯುವ ಪರಿಶುದ್ಧವಾದಂತಹ ಎತ್ತಿನಹೊಳೆ ನೀರನ್ನು ಹರಿಸಿಯೇ ಸಿದ್ಧ ಎಂದರು.

  • ಎತ್ತಿನ ಹೊಳೆ ನೀರು ಬಂತು, ಬಂತು..! ಮೊಯ್ಲಿ ಕನಸಿನಲ್ಲಿ: ಬಚ್ಚೇಗೌಡ ವಾಗ್ದಾಳಿ

    ಎತ್ತಿನ ಹೊಳೆ ನೀರು ಬಂತು, ಬಂತು..! ಮೊಯ್ಲಿ ಕನಸಿನಲ್ಲಿ: ಬಚ್ಚೇಗೌಡ ವಾಗ್ದಾಳಿ

    ಚಿಕ್ಕಬಳ್ಳಾಪುರ: ಕ್ಷೇತ್ರ ಹಾಲಿ ಸಂಸದರಾಗಿರುವ ವೀರಪ್ಪ ಮೊಯ್ಲಿ ಅವರು ಕಳೆದ 2 ಅವಧಿಗಳಿಂದ ನೀರು ಬಂತು ಬಂತು ಎಂದು ಜನರಿಗೆ ಸುಳ್ಳು ಹೇಳಿದ್ದಾರೆ. ಎತ್ತಿನ ಹೊಳೆ ನೀರು ಅವರ ಕನಸಿನಲ್ಲಿ ಬಂದಿದೆ ಅಷ್ಟೇ. ಆದರೆ ಈ ಬಾರಿ ಮೋದಿ ಸರ್ಕಾರ ಬರುತ್ತೆ, ನಾನು ನೀರು ತರುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಹೇಳಿದ್ದಾರೆ.

    ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಒರ್ವ ಸುಳ್ಳುಗಾರ, ಎರಡು ಬಾರಿ ಗೆದ್ದು ಸಂಸದರಾದ ವೀರಪ್ಪ ಮೊಯ್ಲಿ ಈ ಭಾಗಕ್ಕೆ ನೀರು ಕೊಡುತ್ತೇನೆ ಎಂದು ಕಾಲ ಕಳೆದಿದ್ದಾನೆ. ಆದರೆ ನಮ್ಮ ಭಾಗಕ್ಕೆ ನೀರು ಕೊಡಲಿಲ್ಲ. 2 ದಿನಗಳ ಹಿಂದೆಯಷ್ಟೇ ಮಾತನಾಡಿ ಮತ್ತೆ ನೀರು ಕೊಡುತ್ತೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ವೀರಪ್ಪಮೊಯ್ಲಿ ಎತ್ತಿನಹೊಳೆ ನೀರು ಬಂತು ಬಂತು ಅಂತಿದ್ದು, ಅವನ ಕನಸಿನಲ್ಲಿ ಎತ್ತಿನಹೊಳೆ ಬಂದಿರಬೇಕು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

    ಕಳೆದ ಬಾರಿ ಚುನಾವಣೆ ವೇಳೆ ಎತ್ತಿನಹೊಳೆ ಯೋಜನೆಗೆ ಭಾರೀ ಪ್ರಮಾಣದಲ್ಲಿ ಪೂಜೆ ಮಾಡಿದ್ದು ಬಿಟ್ಟರೆ ಏನು ಅಭಿವೃದ್ಧಿ ಆಗಿಲ್ಲ. ಎತ್ತಿನಹೊಳೆ ಯೋಜನೆ 5 ವರ್ಷ ಆಗುತ್ತೋ 10 ವರ್ಷ ಆಗುತ್ತೋ ಗೊತ್ತಿಲ್ಲ. ಆದರೆ ಈ ಬಾರಿ ಮೋದಿ ಸರ್ಕಾರ ಬಂದೇ ಬರುತ್ತೆ, ನಾನು ನಿಮಗೆ ನೀರು ಕೊಡುತ್ತೇನೆ ಎಂದು ಆಶ್ವಾಸನೆ ನೀಡಿದರು.

    ಹಾಲಿ ಸಂಸದರಾಗಿರುವ ವೀರಪ್ಪ ಮೊಯ್ಲಿ ಅವರು ನಿನ್ನೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಆಂಧ್ರಪ್ರದೇಶದ ಸರ್ಕಾರ ಕೈಗೊಂಡಿರುವ ನೀರಾವರಿ ಯೋಜನೆ ಮೂಲಕ ಅನಂತಪುರಕ್ಕೆ ಬಂದಿರುವ ಕೃಷ್ಣ ನದಿ ನೀರನ್ನು ಬಯಲು ಸೀಮೆಯ ಜಿಲ್ಲೆಗಳಿಗೆ ಹರಿಸಲು ಕ್ರಮ ಕೈಗೊಳ್ಳುವ ಚಿಂತನೆ ಇದೆ ಎಂದಿದ್ದರು.

  • ನೀರಿಗಾಗಿ ಭೂಮಿ ಕೊಟ್ಟರು-ಭೂಮಿ ಪಡೆದವರು ಪರಿಹಾರ ಕೊಡಲು ಮರೆತ್ರು

    ನೀರಿಗಾಗಿ ಭೂಮಿ ಕೊಟ್ಟರು-ಭೂಮಿ ಪಡೆದವರು ಪರಿಹಾರ ಕೊಡಲು ಮರೆತ್ರು

    ಹಾಸನ: ದೀಪದ ಕೆಳಗೆ ಕತ್ತಲು ಎನ್ನುವಂತಾಗಿದೆ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ. ಪರ ವಿರೋಧಗಳ ಆರಂಭವಾದ ಯೋಜನೆ ಕಾಮಗಾರಿಗೆ ಅಡ್ಡಿ-ಆತಂಕಗಳು ಎದುರಾಗುತ್ತಲೇ ಇವೆ. ಯೋಜನೆಗಾಗಿ ಸ್ವಾಧೀನವಾದ ಭೂಮಿಗೆ ಸೂಕ್ತ ಪರಿಹಾರ ನೀಡದ ಕಾರಣಕ್ಕೆ ರೊಚ್ಚಿಗೆದ್ದಿರುವ ಹಾಸನ ಜಿಲ್ಲೆ ಆಲೂರು ತಾಲೂಕಿನ ನೂರಾರು ರೈತರು, ಕಳೆದೊಂದು ವಾರದಿಂದ ಯೋಜನೆಗೆ ಅಡ್ಡಿ ಪಡಿಸಿದ್ದಾರೆ. ಇದರಿಂದಾಗಿ ಬೃಹತ್ ಕಾಮಗಾರಿ ಆಲೂರು ಭಾಗದಲ್ಲಿ ಸ್ಥಗಿತಗೊಂಡಿದ್ದು, ಪರಿಹಾರ ಕೊಡುವವರೆಗೂ ಕಾಮಗಾರಿ ನಡೆಯಲು ಬಿಡೋದಿಲ್ಲ ಅಂತ ಭೂ ಮಾಲೀಕರು ಪಟ್ಟು ಹಿಡಿದಿದ್ದಾರೆ.

    ಬಯಲುಸೀಮೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಭರವಸೆ ಕೊಟ್ಟಿದ್ದ ಸರ್ಕಾರ ಮಾತು ಬರೀ ಮಾತಾಗಿಯೇ ಉಳಿದಿದೆ. ಹಾಸನದಲ್ಲಿ ಸುಮಾರು 13 ಸಾವಿರ ಕೋಟಿ ರೂಪಾಯಿ ವೆಚ್ಚದ ಎತ್ತಿನಹೊಳೆ ಯೋಜನೆ ಚಾಲನೆ ಪಡೆದು ಈಗಾಗಲೇ ನಾಲ್ಕೈದು ವರ್ಷಗಳೇ ಕಳೆದು ಹೋಗಿವೆ. ಸಕಲೇಶಪುರ ನಂತರ ಆಲೂರು ತಾಲೂಕಿನ ಪಾಳ್ಯ ಹೋಬಳಿ ಮಾರ್ಗವಾಗಿ ಸುಮಾರು 18 ಕಿಲೋ ಮೀಟರ್ ಉದ್ದದ ಎತ್ತಿನಹೊಳೆ ಕಾಲುವೆ ಹಾದು ಹೋಗುತ್ತಿದೆ. ಇದಕ್ಕಾಗಿ 16 ಹಳ್ಳಿಗಳ ವ್ಯಾಪ್ತಿಯ ರೈತರ ಭೂಮಿಯನ್ನು ಪಡೆಯಲಾಗಿದೆ. ಕಾಮಗಾರಿ ಆರಂಭವಾದ 6 ತಿಂಗಳಲ್ಲಿ 1 ಎಕರೆಗೆ 39 ಲಕ್ಷ ರೂಪಾಯಿ, ಖಾಲಿ ಜಮೀನಿಗೆ 24 ಲಕ್ಷ ರೂಪಾಯಿ ಪರಿಹಾರ ಕೊಡ್ತೀವಿ ಅಂದಿದ್ದ ಸರ್ಕಾರ ಇನ್ನೂ ಪರಿಹಾರ ಕೊಟ್ಟಿಲ್ಲ. ಹೀಗಾಗಿ ಪರಿಹಾರ ನೀಡೋವರೆಗೆ ಕಾಮಗಾರಿ ಮುಂದುವರಿಸಲು ಬಿಡಲ್ಲ ಅಂತ ರೈತರು ಪಟ್ಟು ಹಿಡಿದಿದ್ದಾರೆ.

    ಕಾಮಗಾರಿ ವೇಳೆ ಬೃಹತ್ ಬಂಡೆ ಸಿಡಿಸಲು ಸ್ಫೋಟಕ ಬಳಸುತ್ತಿರುವುದರಿಂದ ಹಲವು ಗ್ರಾಮಗಳ ಮನೆಗಳು ಬಿರುಕು ಬಿಟ್ಟಿದ್ದು, ನಿವಾಸಿಗಳು ಆತಂಕದಲ್ಲಿದ್ದಾರೆ. ಅಲ್ಲದೇ ಜೆಸಿಬಿಗಳ ಮೂಲಕ ಕಾಲುವೆ ತೋಡಿರುವುದರಿಂದ ಅಂತರ್ಜಲವೂ ಕುಸಿಯುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೂ ಮನವಿ ಸಲ್ಲಿಸಿದ್ದಾರೆ.

    ಕುಡಿಯುವ ನೀರಿಗಾಗಿ ಜಮೀನು ಕಳೆದುಕೊಂಡಿರುವ ರೈತರು ಅತ್ತ ಪರಿಹಾರವೂ ಇಲ್ಲ. ಇತ್ತ ಉಳುಮೆ ಮಾಡಿ ಜೀವನ ಸಾಗಿಸಲು ಜಮೀನು ಇಲ್ಲದೇ ಪರದಾಡುವಂತಾಗಿದೆ. ಇನ್ನಾದರೂ ರೈತರ ಸಂಕಷ್ಟವನ್ನು ಮನದಟ್ಟು ಮಾಡ್ಕೊಂಡು ಸರ್ಕಾರ ಕೊಟ್ಟ ಮಾತು ಈಡೇರಿಸುತ್ತಾ ಕಾದು ನೋಡಬೇಕಿದೆ.

    https://www.youtube.com/watch?v=z0npOVG11L4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಎತ್ತಿನಹೊಳೆ ಯೋಜನೆಯಲ್ಲಿ ಕರಾವಳಿಗೆ ತೊಂದರೆಯಾದ್ರೆ ಪ್ರತಿಭಟನೆಗೆ ನಾನು ಬರ್ತಿನಿ: ಶಿವರಾಜ್ ಕುಮಾರ್

    ಎತ್ತಿನಹೊಳೆ ಯೋಜನೆಯಲ್ಲಿ ಕರಾವಳಿಗೆ ತೊಂದರೆಯಾದ್ರೆ ಪ್ರತಿಭಟನೆಗೆ ನಾನು ಬರ್ತಿನಿ: ಶಿವರಾಜ್ ಕುಮಾರ್

    ಮಂಗಳೂರು: ಎತ್ತಿನಹೊಳೆ ಯೋಜನೆಯಲ್ಲಿ ಕರಾವಳಿಗೆ ತೊಂದರೆಯಾದ್ರೆ ನಾನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದರ ಜೊತೆ ಕನ್ನಡ ಚಿತ್ರರಂಗ ಕೂಡಾ ಹೋರಾಟ ಕೈಗೆತ್ತಿಕೊಳ್ಳಲು ಹಿಂಜರಿಯಲ್ಲ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.

    ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕ ರಾಜ್ಯವು ಬರದಿಂದ ತತ್ತರಿಸಿದೆ. ಬರ ಬಂದಾಗಷ್ಟೇ ಸರಕಾರ ಎಚ್ಚೆತ್ತುಕೊಳ್ಳುವುದಲ್ಲ. ಬರ ಬರದಂತೆ ತಡೆಯಲು ಸರ್ಕಾರ ಯೋಜನೆ ರೂಪಿಸಬೇಕು. ಸರ್ಕಾರ ಬರ ನಿರ್ವಹಣೆ ಮಾಡಲು ವಿಫಲವಾಗಿದೆ ಎಂದು ಶಿವರಾಜ್ ಕುಮಾರ್ ತಿಳಿಸಿದರು.

    ರಾಜ್ಯದ ಯಾವುದೇ ಭಾಗದಲ್ಲಿಯೂ ತೊಂದರೆಯಾದರೆ ಎಲ್ಲರೂ ಒಗ್ಗಟನಿಂದ ಹೋರಾಟ ಮಾಡೋಣ. ಕಂಬಳಕ್ಕಾಗಿ ರಾಜ್ಯದ ಎಲ್ಲ ಕಡೆಯೂ ಹೋರಟ ನಡೆಯಿತು. ಕಂಬಳ ಕರಾವಳಿ ಜನರ ಗುರುತಾಗಿದೆ. ಕನ್ನಡ ಚಿತ್ರಗಳನ್ನು ಡಬ್ಬಿಂಗ್ ಮಾಡೋದಕ್ಕೆ ನನ್ನ ವಿರೋಧ ಬಹಳ ಹಿಂದಿನಿಂದಲೂ ಇದೆ. ಇಂದಿಗೂ ನಾನು ಡಬ್ಬಿಂಗ್‍ನ್ನು ವಿರೋಧಿಸುತ್ತೇನೆ. ಕನ್ನಡದಲ್ಲೇ ಸಾಕಷ್ಟು ಒಳ್ಳೆಯ ಕಥೆಗಳು ಇದೆ. ಕನ್ನಡಿಗರೂ ಕನ್ನಡ ಕಥೆಗಳನ್ನು ಬೆಂಬಲಿಸುತ್ತಾರೆ ಎಂದು ಶಿವರಾಜ್ ಕುಮಾರ್ ಡಬ್ಬಿಂಗ್‍ಗೆ ವಿರೋಧ ವ್ಯಕ್ತಪಡಿಸಿದರು.

    ಶಿವರಾಜ್ ಕುಮಾರ್ ತುಳು ಭಾಷೆಯ ರಾಜೇಶ್ ಬ್ರಹ್ಮಾವರ್ ನಿರ್ಮಾಣದ ಕೆಂಜ ಚೇತನ್ ಕುಮಾರ್ ನಿರ್ದೇಶನದ ಕಟಪಾಡಿಯ ಕಟ್ಟಪ್ಪ ಎನ್ನುವ ಚಿತ್ರದ ಹಾಡಿನ ಧ್ವನಿಮುದ್ರಣಕ್ಕೆ ಚಾಲನೆ ನೀಡಿದರು. ಹಾಡಿನ ಝಲಕ್ ಗುಂಗುನಿಸುತ್ತಿದ್ದಂತೆ ಶಿವಣ್ಣ ತಲೆದೂಗಿಸಿದ್ರು.