Tag: ಎತ್ತಿನಗಾಡಿ

  • ಆರ್.ಅಶೋಕ್ ಗ್ರಾಮ ವಾಸ್ತವ್ಯ- ಎತ್ತಿನ ಗಾಡಿಯಲ್ಲಿ ಸಂಚಾರ

    ಆರ್.ಅಶೋಕ್ ಗ್ರಾಮ ವಾಸ್ತವ್ಯ- ಎತ್ತಿನ ಗಾಡಿಯಲ್ಲಿ ಸಂಚಾರ

    ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ ನಡೆಸಿದ್ದು, ಗ್ರಾಮದಲ್ಲಿ ಎತ್ತಿನಗಾಡಿಯಲ್ಲಿ ಸಂಚರಿಸುವ ಮೂಲಕ ಗಮನ ಸೆಳೆದಿದ್ದಾರೆ.

    ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದು, ಗ್ರಾಮಕ್ಕೆ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ್‍ಗೆ ಪೂರ್ಣ ಕುಂಭ, ಜಾನಪದ ಕಲಾತಂಡಗಳೊಂದಿಗೆ ಗ್ರಾಮಸ್ಥರು ಸ್ವಾಗತ ಕೋರಿದ್ದಾರೆ. ಎತ್ತಿನಗಾಡಿಯಲ್ಲೇ ವಾಸ್ತವ್ಯದ ಸ್ಥಳಕ್ಕೆ ತೆರಳಿದ್ದು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಚಿವ ಆರ್.ಅಶೋಕ್‍ಗೆ ಶಾಸಕ ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಶ್ರೀನಿವಾಸ್, ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಸೇರಿದಂತೆ ಹಲವು ಅಧಿಕಾರಿಗಳು ಸಾಥ್ ನೀಡಿದ್ದಾರೆ.

    ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬುದು ಸಚಿವ ಆರ್.ಅಶೋಕ್ ಕನಸಿನ ಕಾರ್ಯಕ್ರಮವಾಗಿದ್ದು, ಇದನ್ನು ನೆಲಮಂಗಲ ತಾಲೂಕಿನ ಹೊನ್ನರಾಯನಹಳ್ಳಿಯಲ್ಲಿ ಉದ್ಘಾಟನೆ ಮಾಡಲಾಯಿತು. ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ವಿನೂತನ ಕಾರ್ಯಕ್ರಮ ಇದಾಗಿದೆ. ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದು, ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮವಾಸ್ತವ್ಯ ನಡೆಸಲಾಗುತ್ತಿದೆ.

  • ಅಂಬುಲೆನ್ಸ್ ತಲುಪಲು ಎತ್ತಿನಗಾಡಿಯಲ್ಲಿ ಬಂದ ರೋಗಿಗಳು!

    ಅಂಬುಲೆನ್ಸ್ ತಲುಪಲು ಎತ್ತಿನಗಾಡಿಯಲ್ಲಿ ಬಂದ ರೋಗಿಗಳು!

    ಭುವನೇಶ್ವರ: ಸರಿಯಾದ ರಸ್ತೆ ಇಲ್ಲದ ಕಾರಣ ರೋಗಿಗಳನ್ನು ಅಂಬುಲೆನ್ಸ್ ಗೆ ತಲುಪಿಸಲು 5 ಕಿಲೋಮೀಟರ್ ಎತ್ತಿನ ಗಾಡಿಯಲ್ಲಿ ಕರೆದುಕೊಂಡು ಹೋಗಿರುವ ಘಟನೆ ಓಡಿಶಾದ ನಬರಂಗ್‍ಪುರ ಜಿಲ್ಲೆಯ ಚಂದಹಂಡಿ ಬ್ಲಾಕ್‍ನ ಅಡಿಯಲ್ಲಿರುವ ಪಟಖಲಿಯಾ ಪ್ರದೇಶದ ನಡೆದಿದೆ.

    ಈ ಗ್ರಾಮದಲ್ಲಿ ಅತಿಸಾರ ಮತ್ತು ವಾಂತಿಯಿಂದ ಮೂವರು ರೋಗಿಗಳು ಬಳಲುತ್ತಿದ್ದರು. ಗ್ರಾಮಕ್ಕೆ ಬರಲು ಪಕ್ಕಾ ರಸ್ತೆ ಇಲ್ಲದ ಕಾರಣ ಅಂಬುಲೆನ್ಸ್ ಬರಲು ಸಾಧ್ಯವಾಗಲಿಲ್ಲ. ಆಗ ಸ್ಥಳೀಯರು ಸೇರಿಕೊಂಡು 5ಕಿ.ಮೀ ಎತ್ತಿನಗಾಡಿಯಲ್ಲಿ ರೋಗಿಗಳನ್ನು ಕರೆದುಕೊಂಡು ಬಂದು ಅಂಬುಲೆನ್ಸ್ ಇರುವಲ್ಲಿಗೆ ತಲುಪಿಸಿದ್ದಾರೆ.

    ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಸ್ಥಳೀಯರು ಅಂಬುಲೆನ್ಸ್ ಸೇವೆ ಮೋರೆ ಹೋಗಿದ್ದಾರೆ. ಆದರೆ ರೋಗಿಗಳನ್ನು ಸಂಪರ್ಕಿಸುವ ರಸ್ತೆಗಳ ಕಳಪೆ ಸ್ಥಿತಿಯಲ್ಲಿತ್ತು. ಹೀಗಾಗಿ ಅಂಬುಲೆನ್ಸ್ ಬಂದು ಗ್ರಾಮವನ್ನು ತಲುಪಲು ಸಾಧ್ಯವಾಗಲಿಲ್ಲ. ಆಗ ಈ ಊರಿಗೆ ಬೇರೆ ದಾರಿಯಿಲ್ಲದ ಕಾರಣ ಮೂವರು ರೋಗಿಗಳನ್ನು ಎತ್ತಿನ ಬಂಡಿಯಲ್ಲಿ ಕೂರಿಸಿಕೊಂಡು 5 ಕಿ.ಮೀ ದೂರದಲ್ಲಿರುವ ಅಂಬುಲೆನ್ಸ್ ಬಳಿ ಕರೆದುಕೊಂಡು ಹೋಗಿದ್ದಾರೆ.

    ನಂತರ ಅಂಬುಲೆನ್ಸ್ ನಲ್ಲಿ ರೋಗಿಗಳನ್ನು ಕರೆದುಕೊಂಡು ಹೋಗಿ ಹತ್ತಿರದ ಚಂದಹಂಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಮೂವರು ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಮಾಹಿತಿ ನೀಡಿದ್ದಾರೆ.

    ಅಂಬುಲೆನ್ಸ್ ನ ಬೇಡಿಕೆಯನ್ನು ಪೂರೈಸುವ ಸಲುವಾಗಿ, ಸಿಎಂ ನವೀನ್ ಪಟ್ನಾಯಕ್ ಅವರು ರಾಜ್ಯದಲ್ಲಿ ಆರೋಗ್ಯ ಸೇವೆಗಳನ್ನು ಬಲಪಡಿಸಲು ಹೆಚ್ಚುವರಿ 108 ಮತ್ತು 102 ಅಂಬುಲೆನ್ಸ್ ಗಳನ್ನು ಸೇರಿಸುತ್ತಿದ್ದಾರೆ. ಆದರೂ ಗ್ರಾಮೀಣ ಭಾಗಗಳಲ್ಲಿ ಇದನ್ನು ಅನುಷ್ಠಾನಗೊಳಿಸುವುದು ಒಂದು ಕಳವಳವಾಗಿದೆ.

  • ಹಣ, ಆಭರಣ ಬದ್ಲು ಪುಸ್ತಕ ಕೇಳಿದ ಮಗಳು- ಎತ್ತಿನಗಾಡಿ ತುಂಬಾ ತಂದೆಯಿಂದ ಬುಕ್ಸ್ ಗಿಫ್ಟ್

    ಹಣ, ಆಭರಣ ಬದ್ಲು ಪುಸ್ತಕ ಕೇಳಿದ ಮಗಳು- ಎತ್ತಿನಗಾಡಿ ತುಂಬಾ ತಂದೆಯಿಂದ ಬುಕ್ಸ್ ಗಿಫ್ಟ್

    – ಮಗಳ ಮದ್ವೆಗೆ 2,400 ಪುಸ್ತಕ ಗಿಫ್ಟ್ ಕೊಟ್ಟ ತಂದೆ
    – ವಿವಿಧ ದೇಶ ಸುತ್ತಾಡಿ ಪುಸ್ತಕ ಸಂಗ್ರಹಣೆ

    ಗಾಂಧಿನಗರ: ಸಾಮಾನ್ಯವಾಗಿ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ಪೋಷಕರು ಹಣ, ಆಭರಣ ಅಥವಾ ಮಗಳಿಗೆ ಇಷ್ಟವಾಗುವ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಗುಜರಾತ್‍ನಲ್ಲಿ ತಂದೆಯೊಬ್ಬರು ಮದುವೆಯಾದ ಮಗಳಿಗೆ ಎತ್ತಿನಗಾಡಿಯಲ್ಲಿ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಈ ಅಪರೂಪದ ಘಟನೆ ರಾಜ್‍ಕೋಟ್‍ನಲ್ಲಿ ನಡೆದಿದೆ. ವಧು ಕಿನ್ನರಿ ತಮ್ಮ ತಂದೆ ಹರ್ದೇವ್ ಸಿಂಗ್ ಬಳಿ ನನ್ನ ಮದುವೆಗೆ ಹಣ, ಆಭರಣ ಕೊಡುವ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡಿ ಎಂದು ಕೇಳಿಕೊಂಡಿದ್ದಳು. ಮಗಳ ಇಷ್ಟದಂತೆ ತಂದೆ ದೇಶದ ವಿವಿಧ ನಗರಗಳಲ್ಲಿ ಸಂಚರಿಸಿ ಪುಸ್ತಕಗಳನ್ನು ಸಂಗ್ರಹಿಸಿ ಎತ್ತಿನಗಾಡಿಯಲ್ಲಿ ಉಡುಗೊರೆಯಾಗಿ ನೀಡಿದ್ದಾರೆ.

    ಹರ್ವೇದ್ ಸಿಂಗ್ ವೃತ್ತಿಯಿಂದ ಶಿಕ್ಷಕ. ಇವರು ದೆಹಲಿ, ಕಾಶಿ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ದೀರ್ಘಕಾಲ ಸುತ್ತಾಡಿ ತಮ್ಮ ಮಗಳಿಗೆ ಪುಸ್ತಕಗಳನ್ನು ಸಂಗ್ರಹಿಸಿದ್ದರು. ಒಟ್ಟಾರೆ ತಮ್ಮ ಮಗಳು ಕಿನ್ನರಿಗೆ 2400 ಪುಸ್ತಕಗಳನ್ನು ಮದುವೆಯ ದಿನ ಎತ್ತಿಗಾಡಿಯಲ್ಲಿ ತುಂಬಿ ಉಡುಗೊರೆಯಾಗಿ ನೀಡಿದ್ದಾರೆ. ಕಿನ್ನರಿ ಸ್ವಲ್ಪ ಪುಸ್ತಕಗಳನ್ನು ತನ್ನೊಂದಿಗೆ ಪತಿಯ ಮನೆಗೆ ತೆಗೆದುಕೊಂಡು ಹೋಗಲಿದ್ದಾಳೆ. ಇತರ ಪುಸ್ತಕಗಳನ್ನು ವಿವಿಧ ಶಾಲೆಗಳಿಗೆ ನೀಡಲಾಗುವುದು.

    ನನ್ನ ಮಗಳು ಬಾಲ್ಯದಿಂದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದಳು. ಹೀಗಾಗಿ ಮದುವೆಗೆ ಪುಸ್ತಕಗಳನ್ನ ಉಡುಗೊರೆಯಾಗಿ ನೀಡಬೇಕೆಂದು ಕೇಳಿಕೊಂಡಿದ್ದಳು. ಅದರಂತೆಯೇ ಪುಸ್ತಕಗಳನ್ನು ಕೊಡಿಸಿದ್ದೇನೆ. ನಮ್ಮ ಮನೆಯಲ್ಲಿ ಒಂದು ಪ್ರತ್ಯೇಕ ಗ್ರಂಥಾಲಯ ನಿರ್ಮಾಣ ಮಾಡಿದ್ದಾಳೆ ಎಂದು ತಂದೆ ಸಂತಸದಿಂದ ಮಗಳ ಬಗ್ಗೆ ಹೇಳಿಕೊಂಡಿದ್ದಾರೆ.

    ಭಾರತದ ಇತಿಹಾಸ, ಮಹಾಭಾರತ, ವಿಷ್ಣುಪುರಾಣದ ಜೊತೆಗೆ ಗುಜರಾತಿ ಹಾಗೂ ಇಂಗ್ಲೀಷ್‍ನ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಪ್ರಸ್ತುತ ಜನರು ಪುಸ್ತಕಗಳಿಂದ ದೂರವಾಗುತ್ತಿವಾಗ ಕಿನ್ನರಿ ತಮ್ಮ ಮದುವೆಯಲ್ಲಿ ವರದಕ್ಷಿಣೆ ಎಂದು ಚಿನ್ನ, ಬೆಳ್ಳಿ  ಮತ್ತು ಆಭರಣಗಳ ಬದಲು ಪೋಷಕರಿಂದ ಪುಸ್ತಕಗಳನ್ನು ತೆಗೆದುಕೊಂಡಿದ್ದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಎತ್ತಿನಗಾಡಿಯಲ್ಲಿ ಬಂದ ನೂತನ ಸಚಿವ ಸುಧಾಕರ್

    ಎತ್ತಿನಗಾಡಿಯಲ್ಲಿ ಬಂದ ನೂತನ ಸಚಿವ ಸುಧಾಕರ್

    – ಜಿಲ್ಲಾ ಉಸ್ತುವಾರಿ ಸಚಿವರು ಶೀಘ್ರದಲ್ಲೇ ನೇಮಕ

    ಚಿಕ್ಕಬಳ್ಳಾಪುರ: ಇತ್ತೀಚೆಗೆ ತಾನೇ ಖಾತೆ ಹಂಚಿಕೆಯಾಗಿದ್ದು, ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಆಗಲಿದೆ ಅಂತ ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ ಕೆ.ಸುಧಾಕರ್ ಹೇಳಿದರು.

    ಕೃಷಿಮೇಳ 2020 ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಸುಧಾಕರ್, ಬಜೆಟ್ ಮಂಡನೆಗಾಗಿ ವಿಧಾನಸಭೆ ಅಧಿವೇಶನ ಇರುವ ಕಾರಣ ರಾಜ್ಯಪಾಲರ ಭಾಷಣ ಇರುತ್ತದೆ. ಹೀಗಾಗಿ ಮುಖ್ಯಮಂತ್ರಿಗಳು ಆ ಕಾರ್ಯದಲ್ಲಿ ಸ್ವಲ್ಪ ಬ್ಯುಸಿ ಇರಬಹುದು. ಹೀಗಾಗಿ ಅದಷ್ಟು ಶೀಘ್ರದಲ್ಲೇ ನೂತನ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ತಮ್ಮ ಸ್ವಂತ ಜಿಲ್ಲೆ ಚಿಕ್ಕಬಳ್ಳಾಪುರ ಆಗಿರುವ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಭೌಗೋಳಿಕವಾಗಿ ಹಾಗೂ ಜಿಲ್ಲೆಯ ಎಲ್ಲಾ ಸಮಸ್ಯೆಗಳ ಬಗ್ಗೆ ಸ್ಪಷ್ಟ ಅರಿವು ಕಾರಣ ತಮಗೆ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನೀಡಿದರೇ ಒಳ್ಳೆಯದಾಗುತ್ತದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಸಹಕಾರಿಯಾಗಲಿದೆ ಅಂತ ಜಿಲ್ಲೆಯ ಉಸ್ತುವಾರಿ ಮಂತ್ರಿ ಸ್ಥಾನದ ಇಂಗಿತ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ವೇದಿಕೆ ಭಾಷಣದಲ್ಲಿ ಮಾತನಾಡುವ ವೇಳೆ ತಾವೇ ಜಿಲ್ಲೆಯ ಉಸ್ತುವಾರಿ ಸಚಿವರಾಗಲಿದ್ದು, ಮುಂದಿನ ದಿನಗಳಲ್ಲಿ ಯಾವುದೇ ತಾರತಮ್ಯ ಮಾಡದೇ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.

    ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಕೃಷಿಮೇಳ 2020 ರ ಸಿರಿಧಾನ್ಯಮೇಳ ಹಾಗೂ ಫಲಪುಷ್ಪಪ್ರದರ್ಶನಕ್ಕೆ ಎತ್ತಿನಗಾಡಿಯಲ್ಲಿ ಬರುವ ಮೂಲಕ ಗಮನ ಸೆಳೆದರು. ನಗರದ ಸರ್ ಎಂ ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕೃಷಿಮೇಳಕ್ಕೆ ಬಿಬಿ ರಸ್ತೆಯಿಂದ ಸರಿ ಸುಮಾರು ಅರ್ಧ ಕಿಲೋಮೀಟರ್ ದೂರದ ಕ್ರೀಡಾಂಗಣಕ್ಕೆ ಎತ್ತಿನಬಂಡಿಯಲ್ಲೇ ಬಂದ ಸಚಿವರು ಆಕರ್ಷಣೀಯ ಕೇಂದ್ರವಾಗಿದ್ದರು.

    ಕ್ರೀಡಾಂಗಣದಲ್ಲಿ ನಿರ್ಮಿಸಿಲಾಗಿದ್ದ ನರೇಗಾ ಕಾಮಗಾರಿಗಳ ಪ್ರಾತಕ್ಷಿತೆ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಟೇಪ್ ಕಟ್ ಮಾಡಿ ಚಾಲನೆ ನೀಡಿದ ಸಚಿವರು, ಗುಲಾಬಿ ಹೂಗಳಿಂದ ಅರಳಿ ನಿಂತಿದ್ದ ಹಂಪಿ ಕಲ್ಲಿನ ರಥದ ಎದುರು ಫೋಟೋ ತೆಗೆಸಿಕೊಂಡು ಗುಲಾಬಿ ಹೂಗಳ ಹಂಪಿಯ ಕಲ್ಲಿನ ರಥಧಾಕೃತಿಗೆ ಸಂತಸ ವ್ಯಕ್ತಪಡಿಸಿದರು. ತದನಂತರ ರೈತರ ಉಪಯೋಗಕ್ಕೆ ಬರುವ ವಿವಿಧ ಅಂಗಡಿ ಮಳಿಗೆಗಳನ್ನು ಕೃಷಿ ಮೇಳದಲ್ಲಿ ಆರಂಭಿಸಲಾಗಿದ್ದು, ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

    ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸದ ಬಚ್ಚೇಗೌಡ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ನರಸಿಂಹಯ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ಅಧಿಕಾರಿ ಸಿಬ್ಬಂದಿ ಸೇರಿದಂತೆ ರೈತ ಸಂಘಟನೆಗಳ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿ ಸಿರಿಧಾನ್ಯಗಳಿಗೆ ಮಾರುಕಟ್ಟೆ ವೃದ್ಧಿಯಾಗಿದ್ದು, ಅತಿ ಕಡಿಮೆ ನೀರಿನಲ್ಲೂ ಅಂದರೆ ಮಳೆಗಾಲದಲ್ಲೂ ಸಹ ಬೆಳೆಯಬಹುದಾದ ಸಿರಿಧಾನ್ಯಗಳನ್ನ ಉತ್ಪಾದನೆಗೆ ರೈತರು ಮುಂದಾಗಬೇಕು, ರಸಗೊಬ್ಬರಗಳ ಬಳಕೆಯನ್ನ ಕಡಿಮೆ ಮಾಡಿ ಸಾವಯುವ ಪದ್ದತಿಯಲ್ಲಿ ಬೇಸಾಯ ಮಾಡುವತ್ತ ಮರಳಿ ರೈತರು ಬರಬೇಕಿದೆ ಅಂತ ಮನವಿ ಮಾಡಿಕೊಂಡರು.

  • ಕಾರಿಗೆ ಎತ್ತಿನಗಾಡಿ ಡಿಕ್ಕಿ – ಪಲ್ಟಿ ಹೊಡೆದ ರಾಸುಗಳು

    ಕಾರಿಗೆ ಎತ್ತಿನಗಾಡಿ ಡಿಕ್ಕಿ – ಪಲ್ಟಿ ಹೊಡೆದ ರಾಸುಗಳು

    ಚಿಕ್ಕಮಗಳೂರು: ಜಾತ್ರೆ ಮುಗಿಸಿಕೊಂಡು ಊರಿಗೆ ಹಿಂದಿರುಗುವ ವೇಳೆ ವೇಗವಾಗಿದ್ದ ಎತ್ತಿನಗಾಡಿ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎತ್ತುಗಳು ಕಾರಿನ ಮೇಲಿಂದ ಹಾರಿ ಪಲ್ಟಿಯಾಗಿ ಬಿದ್ದಿವೆ.

    ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಂತರಘಟ್ಟೆ ಜಾತ್ರಾ ಮಹೋತ್ಸವದಲ್ಲಿ ಈ ಅವಘಡ ನಡೆದಿದ್ದು, ಭಾರೀ ಅನಾಹುತ ಕೂದಲೆಳೆ ಅಂತರದಲ್ಲಿ ಪಾರಾದಂತಾಗಿದೆ. ಚಿಕ್ಕಮಗಳೂರು-ಚಿತ್ರದುರ್ಗ ಗಡಿ ಭಾಗದ ಸುಪ್ರಸಿದ್ಧ ಅಂತಘಟ್ಟೆ ಜಾತ್ರೆಯಲ್ಲಿ ಈ ಘಟನೆ ನಡೆದಿದ್ದು, ಎರಡು ಜೋಡೆತ್ತುಗಳು ಗಂಭೀರವಾಗಿ ಗಾಯಗೊಂಡಿವೆ.

    ಜಾತ್ರೆ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಸ್ಪರ್ಧೆಗೆ ಬಿದ್ದ ಎರಡು ಎತ್ತಿನಗಾಡಿ ಚಾಲಕರು ವೇಗವಾಗಿದ್ದ ಎತ್ತಿನ ಬಾಲವನ್ನು ತಿರುವಿ ಎತ್ತುಗಳನ್ನು ಬೆದರಿಸಿದರು. ಪರಿಣಾಮ ವೇಗದಲ್ಲಿದ್ದ ಎತ್ತುಗಳು ಗಾಬರಿಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿವೆ.

    ಈ ವೇಳೆ ನೊಗದ ಹಗ್ಗಕ್ಕೆ ಸಿಲುಕಿ ಪಲ್ಟಿ ಹೊಡೆದಿದ್ದ ಎತ್ತುಗಳನ್ನು ಕುಣಿಕೆಯಿಂದ ಬಿಡಿಸಿ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದರೆ ಕಾರಿನ ಮುಂಭಾಗದ ಗಾಜು ಸಂಪೂರ್ಣ ಪುಡಿಪುಡಿಯಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಕಳೆದ ನಾಲ್ಕೈದು ದಿನಗಳಿಂದ ಜಾತ್ರೆಗೆ ಸಾವಿರಾರು ಜೋಡೆತ್ತಿನ ಗಾಡಿಗಳಲ್ಲಿ ಭಕ್ತರು ಆಗಮಿಸಿದ್ದರು. ಈ ಜಾತ್ರೆಗೆ ಎಷ್ಟೇ ಶ್ರೀಮಂತರಾಗಿದ್ರು ಕೆಲವರು ಗಾಡಿಯಲ್ಲೇ ಬಂದು ಇಲ್ಲೇ ವಾಸ್ತವ್ಯ ಹೂಡಿ ಜಾತ್ರೆಯಲ್ಲಿ ಪಾಲ್ಗೊಳ್ತಾರೆ. ಜಾತ್ರೆ ಮುಗಿಸಿ ಹಿಂದಿರುಗುವಾಗ ನಡೆದ ಅಪಘಾತಕ್ಕೆ ಜನ ಆತಂಕಕ್ಕೀಡಾಗಿದ್ದಾರೆ.

  • ಟಿಸಿ ಹೊತ್ತು ನೀರಿನಲ್ಲಿ ಈಜಿದ ಎತ್ತುಗಳು

    ಟಿಸಿ ಹೊತ್ತು ನೀರಿನಲ್ಲಿ ಈಜಿದ ಎತ್ತುಗಳು

    ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಮಲದಿನ್ನಿಯಲ್ಲಿ ಬಂಡಿ ಜೋಡಿಸಿದ ಎತ್ತುಗಳೊಂದಿಗೆ ರೈತರು ಸಾಹಸ ಮೆರೆದಿದ್ದಾರೆ. ಎತ್ತಿನ ಬಂಡಿಯಲ್ಲಿ ಟಿಸಿಯನ್ನು ಕೃಷ್ಣ ನದಿಯ ದಡ ಸೇರಿಸಿದ್ದಾರೆ.

    ಪ್ರಾಣ ಒತ್ತೆ ಇಟ್ಟು ಎತ್ತುಗಳಿಂದ ವಿದ್ಯುತ್ ಪರಿವರ್ತಕ (ಟಿ.ಸಿ)ಯನ್ನು ಸ್ಥಳಾಂತರ ಮಾಡಲಾಗಿದೆ. ಕೃಷ್ಣಾ ನದಿಯ ಪ್ರವಾಹದ ನೀರಿನಲ್ಲಿ ಮುಳುಗಿ ಸುಟ್ಟುಹೋಗಿದ್ದ ಟಿಸಿಯನ್ನು ಇದೀಗ ಪ್ರವಾಹ ಕಡಿಮೆ ಆಗಿದ್ದರಿಂದ ಟಿಸಿ ದುರಸ್ತಿಗೆ ರೈತರು ತೆಗೆದುಕೊಂಡು ಹೋಗಿದ್ದಾರೆ.

    ಟಿಸಿ ಸ್ಥಳಾಂತರಿಸಲು ರೈತರು, ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಈ ಸಾಹಸ ಮಾಡಿದ್ದಾರೆ. ಕೃಷ್ಣಾ ನದಿ ಪ್ರವಾಹದಿಂದ ಸಂಗ್ರಹಗೊಂಡ ಹಳ್ಳದ ನೀರಿನಲ್ಲಿ ಎತ್ತಿನ ಬಂಡಿ ಸಮೇತ ಟಿಸಿಯನ್ನು ರೈತರು ಹೊತ್ತೊಯ್ಯುದಿದ್ದಾರೆ. ನೀರಲ್ಲಿ ಪೂರ್ತಿ ಮುಳುಗಿದ್ದರೂ ಎತ್ತುಗಳು ಬಂಡಿಯನ್ನು ಈಜಿಕೊಂಡು ದಡ ಸೇರಿಸಿವೆ. ತಂಗಡಗಿ ಶಾಖೆಯ ಸೆಕ್ಷನ್ ಅಧಿಕಾರಿ ಎಂ.ಎಸ್.ತೆಗ್ಗಿನಮಠ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

  • ಎತ್ತಿನಗಾಡಿ ಓಡಿಸುವಾಗ ಪೈಪೋಟಿಗೆ ಇಳಿದ ಇಬ್ಬರು ರೈತರ ಸಾವು

    ಎತ್ತಿನಗಾಡಿ ಓಡಿಸುವಾಗ ಪೈಪೋಟಿಗೆ ಇಳಿದ ಇಬ್ಬರು ರೈತರ ಸಾವು

    ಮೈಸೂರು: ಎತ್ತಿನಗಾಡಿ ಓಡಿಸುವಾಗ ಪೈಪೋಟಿಗೆ ಇಳಿದು ಇಬ್ಬರು ರೈತರು ಸಾವನ್ನಪ್ಪಿರುವ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಕಾರ್ಯ ಸಿದ್ದೇಶ್ವರ ಬೆಟ್ಟದಲ್ಲಿ ನಡೆದಿದೆ.

    ಈ ಘಟನೆಯಲ್ಲಿ ದೇಬೂರು ಗ್ರಾಮದ ನಿವಾಸಿಗಳಾದ ಕೆಂಪರಾಜು(27) ಹಾಗೂ ಚೇತನ್(22) ಮೃತಪಟ್ಟಿದ್ದಾರೆ. ಎತ್ತಿನಗಾಡಿ ಓಡಿಸುವಾಗ ಇಬ್ಬರು ಪೈಪೋಟಿಗೆ ಇಳಿದಿದ್ದಾರೆ. ಈ ವೇಳೆ ವೇಗವಾಗಿ ಓಡುತ್ತಿದ್ದ ಎತ್ತಿನಗಾಡಿ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ.

    ಗ್ರಾಮಸ್ಥರೆಲ್ಲ ಸೇರಿ ಸುಮಾರು 15 ಗಾಡಿಗಳಲ್ಲಿ ಕಾರ್ಯ ಸಿದ್ದೇಶ್ವರ ಬೆಟ್ಟಕ್ಕೆ ಪೂಜೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಾಲೀಕರ ಸೂಚನೆಯಿಲ್ಲದೆ ಚಕ್ಕಡಿಗಾಡಿ ಹೊತ್ತು ಸಾಗಿದ ಎತ್ತುಗಳು: ವಿಡಿಯೋ ವೈರಲ್

    ಮಾಲೀಕರ ಸೂಚನೆಯಿಲ್ಲದೆ ಚಕ್ಕಡಿಗಾಡಿ ಹೊತ್ತು ಸಾಗಿದ ಎತ್ತುಗಳು: ವಿಡಿಯೋ ವೈರಲ್

    ತುಮಕೂರು: ಮಾಲೀಕರ ಸೂಚನೆ ಇಲ್ಲದೆ ಎತ್ತುಗಳು ತಮ್ಮ ಪಾಡಿಗೆ ತಾವೇ ಚಕ್ಕಡಿಗಾಡಿ ಹೊತ್ತು ಸಾಗಿದ ದೃಶ್ಯವೊಂದು ತುಮಕೂರು ಜಿಲ್ಲೆಯ ಪಾವಗಡ- ಚೆಳ್ಳಕೆರೆ ರಸ್ತೆಯಲ್ಲಿ ನಡೆದಿದೆ.

    ಒಟ್ಟು ಮೂರು ಜೋಡಿಯ ಎತ್ತುಗಳು ಮಾಲೀಕರ ಸೂಚನೆ ಇಲ್ಲದೆ ರಸ್ತೆಯಲ್ಲಿ ತಮ್ಮ ಪಾಡಿಗೆ ನಡೆದುಕೊಂಡು ಹೋಗಿದೆ. ಎತ್ತುಗಳು ತಮ್ಮ ಪಾಡಿಗೆ ಹೋಗುತ್ತಿದ್ದರೆ, ಎತ್ತಿನಗಾಡಿಯ ಹಿಂಬದಿಯಲ್ಲಿ ರೈತರು ನಿದ್ದೆ ಮಾಡುತ್ತಿರುವುದು ಕಂಡು ಬಂದಿದೆ.

    ವೈರಲ್ ಆಗಿರುವ ಈ ವಿಡಿಯೋದಲ್ಲಿ ಯಾರು ಕೂಡ ಮೂಗು ದಾರ ಹಿಡಿದು ಎತ್ತುಗಳನ್ನು ಓಡಿಸುತ್ತಿಲ್ಲ. ಎತ್ತುಗಳ ಜೋಡಿ ತಮ್ಮ ಪಾಡಿಗೆ ರಸ್ತೆ ಒಂದು ಬದಿಯಲ್ಲಿ ನಡೆದುಕೊಂಡು ಹೋಗುತ್ತಿದೆ. ರಸ್ತೆಯಲ್ಲಿ ಬಸ್, ಲಾರಿ ಹಾಗೂ ಬೈಕ್‍ಗಳು ಬಂದರೂ ಕ್ಯಾರೆ ಎನ್ನದೇ ಎತ್ತುಗಳು ರಸ್ತೆಯಲ್ಲಿ ಸಾಗಿವೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಮೀನಿಗೆ ಹೋಗ್ತಿದ್ದಾಗ ಎತ್ತಿನಗಾಡಿಗೆ ಖಾಸಗಿ ಬಸ್ ಡಿಕ್ಕಿ- ರೈತ ಮಹಿಳೆ ಸಾವು

    ಜಮೀನಿಗೆ ಹೋಗ್ತಿದ್ದಾಗ ಎತ್ತಿನಗಾಡಿಗೆ ಖಾಸಗಿ ಬಸ್ ಡಿಕ್ಕಿ- ರೈತ ಮಹಿಳೆ ಸಾವು

    ಮಂಡ್ಯ: ಜಮೀನಿಗೆ ಹೋಗುತ್ತಿದ್ದ ಎತ್ತಿನಗಾಡಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತಿನಗಾಡಿ ಹಳ್ಳಕ್ಕೆ ಮಗುಚಿ ಬಿದ್ದು ಮಹಿಳೆ ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ 40 ವರ್ಷದ ಜವನಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಶಂಕರ್ ಎಂಬುವರು ಗಾಯಗೊಂಡಿದ್ದಾರೆ. ಇದೇ ವೇಳೆ ಎತ್ತುಗಳು ಕೂಡ ಗಾಯಗೊಂಡಿವೆ. ಕೆಲಸಕ್ಕೆಂದು ಜಮೀನಿಗೆ ಹೋಗುತ್ತಿದ್ದ ವೇಳೆ ಖಾಸಗಿ ಬಸ್ ಎತ್ತಿನಗಾಡಿಯ ನೊಗಕ್ಕೆ ತಾಗಿದ್ದು, ಎತ್ತಿನಗಾಡಿ ಮಗುಚಿ ಬಿದ್ದು ಈ ಅವಘಡ ಸಂಭವಿಸಿದೆ.

    ಈ ಬಗ್ಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.