Tag: ಎಡೆಸ್ನಾನ

  • ಕೃಷ್ಣಮಠದಲ್ಲಿ ಎಡೆಸ್ನಾನವೂ ಇಲ್ಲ ಮಡೆಸ್ನಾನವೂ ಇಲ್ಲ- ಪಲಿಮಾರು ಶ್ರೀ

    ಕೃಷ್ಣಮಠದಲ್ಲಿ ಎಡೆಸ್ನಾನವೂ ಇಲ್ಲ ಮಡೆಸ್ನಾನವೂ ಇಲ್ಲ- ಪಲಿಮಾರು ಶ್ರೀ

    ಉಡುಪಿ: ದೇಶಾದ್ಯಂತ ಸುಬ್ರಹ್ಮಣ್ಯ ಷಷ್ಠಿಯನ್ನು ಆಚರಣೆ ಮಾಡಲಾಗುತ್ತಿದೆ. ಷಷ್ಠಿಗೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಡೆಸ್ನಾನವೋ.., ಮಡೆಸ್ನಾನ ಇರುತ್ತದೆ. ಆದರೆ ಈ ಬಾರಿ ನೂರಾರು ವರ್ಷದ ಸಂಪ್ರದಾಯವನ್ನು ಮುರಿದು ಕೃಷ್ಣಮಠದಲ್ಲಿ ಷಷ್ಠಿ ಆಚರಿಸಲಾಯಿತು.

    ಮಠದೊಳಗಿನ ನಾಗರಾಜ ಗುಡಿಯ ಸುತ್ತ ಪ್ರತಿ ವರ್ಷ ಎಂಜಲೆಲೆಯ ಮೇಲೆ ಹರಕೆ ಹೇಳಿದ ಭಕ್ತರು ಉರುಳು ಸೇವೆ ಮಾಡುತ್ತಿದ್ದರು. ಮೂರು ವರ್ಷದಲ್ಲಿ ದೇವರ ಪ್ರಸಾದದ ಮೇಲೆ ಉರುಳುಸೇವೆ ಮಾಡಿದ್ದರು. ಆದರೆ ಈಗಿನ ಪರ್ಯಾಯ ಪಲಿಮಾರು ಸ್ವಾಮೀಜಿ ಎಡೆಸ್ನಾನದ ವ್ಯವಸ್ಥೆಯನ್ನೂ ಮಾಡಿಲ್ಲ. ಷಷ್ಠಿ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆದವು. ಸಾವಿರಾರು ಭಕ್ತರು ತಮ್ಮ ಹರಕೆ ತೀರಿಸಿದ್ದಾರೆ.

    ದೇವರ ಪ್ರಸಾದ ಅಥವಾ ಎಂಜಲೆಲೆಯ ಮೇಲೆ ಉರುಳು ಸೇವೆ ಮಾಡಿಲ್ಲ. ವಿವಾದಗಳು ಬೇಡ ಎಂಬ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ. ಭಕ್ತರು ಮಧ್ವಸರೋವರದಲ್ಲಿ ಸ್ನಾನ ಮಾಡಿ ಉರುಳು ಸೇವೆಯೋ, ಆಶ್ಲೇಷ ಬಲಿಯೋ ಮಾಡಿಸಿದ್ದಾರೆ. ಆದರೆ ಚರ್ಚೆಗೆ ಎಡೆ ಮಾಡಿಕೊಡುವ ಎಡೆಸ್ನಾನ ಅಥವಾ ಮಡೆಸ್ನಾನವನ್ನು ಮಾಡಿಲ್ಲ ಎಂದು ಶ್ರೀಗಳು ಹೇಳಿದರು.

    ಅತ್ತ ಉಡುಪಿಯ ಮುಚ್ಲಕೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಡೆಸ್ನಾನ ನಡೆಯಿತು. ಪೇಜಾವರ ಮಠದ ಅಧೀನಕ್ಕೊಳಪಟ್ಟ ದೇವಸ್ಥಾನದಲ್ಲಿ ಕಳೆದ ಎರಡು ವರ್ಷಗಳಿಂದ ಮಡೆ ಮಡಸ್ನಾನದ ಬದಲಿಗೆ ಎಡೆ ಮಡೆಸ್ನಾನ ನಡೆಯುತ್ತಿದೆ. ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯವರು ಎಂಜಲೆಲೆಯ ಮೇಲೆ ಉರುಳಾಡುವ ಬದಲು ದೇವರಿಗಿಟ್ಟ ನೈವೇಧ್ಯದ ಮೇಲೆ ಉರುಳು ಸೇವೆ ಮಾಡುವ ನಿರ್ಧಾರಕ್ಕೆ ಬಂದಿದ್ದರು.

    ಅವರ ಆದೇಶದಂತೆ ಈ ಬಾರಿ ಕೂಡ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ದೇವರಿಗಿಟ್ಟ ಪ್ರಸಾದವನ್ನು ದೇವಸ್ಥಾನದ ಪ್ರಾಂಗಣದಲ್ಲಿ ಬಡಿಸಲಾಯ್ತು. ಮಡಸ್ನಾನ ಮಾಡಲು ಹರಕೆ ಹೊತ್ತ 9 ಮಂದಿ ಭಕ್ತರು ದೇವರ ಪ್ರಸಾದದಲ್ಲಿ ಉರುಳು ಸೇವೆ ಮಾಡಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪೇಜಾವರಶ್ರೀಗಳು, ಮಡೆಸ್ನಾನವನ್ನು ಮೂರು ವರ್ಷದಿಂದ ಕೈಬಿಟ್ಟಿದ್ದೇವೆ. ಎಡೆಸ್ನಾನ ಹರಕೆಯನ್ನು ಹೇಳಿಕೊಂಡು ಬರುವ ಭಕ್ತರ ಸಂಖ್ಯೆಯೂ ಇಳಿಮುಖವಾಗುತ್ತಿದೆ. ಚರ್ಚೆಗೆ ಕಾರಣವಾಗುವ ಆಚರಣೆಗಳನ್ನು ಕೈಬಿಡಲಾಗಿದೆ. ದೇವರಿಗಿಟ್ಟ ನೈವೇದ್ಯದ ಮೇಲೆ ಉರುಳು ಸೇವೆ ಮಾಡಿದರೆ ತಪ್ಪಿಲ್ಲ ಎಂದು ಹೇಳಿದರು.

  • ಮಡೆಸ್ನಾನವೂ ಇಲ್ಲ – ಎಡೆಸ್ನಾನವೂ ಇಲ್ಲ ಪಲಿಮಾರುಶ್ರೀ ದಿಟ್ಟ ನಿರ್ಧಾರ

    ಮಡೆಸ್ನಾನವೂ ಇಲ್ಲ – ಎಡೆಸ್ನಾನವೂ ಇಲ್ಲ ಪಲಿಮಾರುಶ್ರೀ ದಿಟ್ಟ ನಿರ್ಧಾರ

    ಉಡುಪಿ: ಕೃಷ್ಣಮಠದ ಇತಿಹಾಸದಲ್ಲೇ ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿಗಳು ಕ್ರಾಂತಿಕಾರಿ ಮತ್ತು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ಈ ಬಾರಿಯಿಂದ ಷಷ್ಠಿಯಂದು ಮಠದ ಸುಬ್ರಹ್ಮಣ್ಯ ಗುಡಿಯ ಮುಂದೆ ಎಂಜಲೆಲೆಯ ಮಡೆಸ್ನಾನವೂ ಹಾಗೂ ದೇವರ ಪ್ರಸಾದ ಎಡೆಸ್ನಾನಕ್ಕೆರಡಕ್ಕೂ ವಿದಾಯ ಹೇಳಿದ್ದಾರೆ.

    ಪರ್ಯಾಯ ಪಲಿಮಾರು ಮಠಾಧೀಶರ ಮಹತ್ವದ ನಿರ್ಧಾರ ಇದಾಗಿದೆ. ಆಸಕ್ತ ಭಕ್ತರಿಂದ ಈ ಬಾರಿ ಕೇವಲ ಉರುಳುಸೇವೆ ಮಾತ್ರ ನಡೆದಿದೆ. ಉರುಳು ಸೇವೆ ಮಾಡಿದವರ ಸಂಖ್ಯೆಯೂ ಕಡಿಮೆಯಾಗಿತ್ತು. ಕಳೆದ ನಾಲ್ಕು ವರ್ಷದಿಂದ ಪೇಜಾವರ ಶ್ರೀಗಳ ಸಲಹೆಯಂತೆ ಮಠದಲ್ಲಿ ಎಡೆಸ್ನಾನ ನಡೆಯುತ್ತಿತ್ತು. ಆಗಲೇ ಭಕ್ತರ ಸಂಖ್ಯೆ ಕುಸಿದಿತ್ತು.

    ಈ ಕುರಿತು ಪ್ರತಿಕ್ರಿಯಿಸಿರುವ ಪರ್ಯಾಯ ಪಲಿಮಾರು ಸ್ವಾಮೀಜಿಗಳು, ಅನಗತ್ಯ ವಿವಾದ ಬೇಡವೆಂದು ಈ ನಿರ್ಧಾರಕ್ಕೆ ಬಂದಿದ್ದೇವೆ. ಭಕ್ತರು ದೇವರಿಗೆ ಪ್ರದಕ್ಷಿಣೆ ಬಂದು ಅರ್ಚನೆ ಪೂಜೆ ಸಲ್ಲಿಸಲಿ. ಎಡೆಸ್ನಾನದಿಂದಲೂ ಕೆಲವರಿಗೆ ಬೇಸರವಾಗಿದೆ. ತಿನ್ನುವ ಅನ್ನದ ಮೇಲೆ ಉರುಳು ಸೇವೆ ಕೆಲವರಿಗೆ ಇಷ್ಟವಿಲ್ಲ. ಕೃಷ್ಣಮಠದ ಭೋಜನ ಶಾಲೆಯಲ್ಲೇ ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

    ಪಲಿಮಾರು ಸ್ವಾಮಿಗಳ ನಿರ್ಧಾರವನ್ನು ಪೇಜಾವರ ಶ್ರೀಗಳು ಸ್ವಾಗತಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ಪಲಿಮಾರು ಸ್ವಾಮಿಗಳ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಜಾತಿಯ ಹೆಸರಲ್ಲಿ ವಿರೋಧ ಬಂದ್ರೆ ಸಂಘರ್ಷವಾಗುತ್ತದೆ. ದೇವಸ್ಥಾನದಲ್ಲಿ ಮಡೆಸ್ನಾನ – ಎಡೆಸ್ನಾನ ಅನಿವಾರ್ಯ ಅಲ್ಲ. ಹಿಂದೂ ಧರ್ಮಕ್ಕೆ ಇದರಿಂದ ಯಾವುದೇ ಹಾನಿಯಿಲ್ಲ. ದೇವಸ್ಥಾನದ ಉತ್ಸವ ಪೂಜೆ ಶಾಸ್ತ್ರಬದ್ಧವಾಗಿ ನಡೆದರೆ ಸಾಕು. ವಿವಾದ ಭಿನ್ನಾಭಿಪ್ರಾಯದ ಆಚರಣೆಗಳು ನಿಂತರೆ ಹಿಂದೂ ಧರ್ಮಕ್ಕೆ ನಷ್ಟವಿಲ್ಲ. ಇಂತಹ ಆಚರಣೆ ನಡೆಯಬೇಕಾಗಿಲ್ಲವೆಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv