Tag: ಎಟಿಎಂ ಕಾರ್ಡ್

  • ಹೊಸ ಎಟಿಎಂ ಕಾರ್ಡ್ ನೀಡುವುದಾಗಿ 1 ಲಕ್ಷ ಪಂಗನಾಮ

    ಹೊಸ ಎಟಿಎಂ ಕಾರ್ಡ್ ನೀಡುವುದಾಗಿ 1 ಲಕ್ಷ ಪಂಗನಾಮ

    ಚಿಕ್ಕಮಗಳೂರು: ಹೊಸ ಎಟಿಎಂ ಕಾರ್ಡ್ ನೀಡುವುದಾಗಿ ಹೇಳಿ 1 ಲಕ್ಷ ರೂ. ಪಂಗನಾಮ ಹಾಕಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದಲ್ಲಿ ನಡೆದಿದೆ.

    ಕೃಷ್ಣೇಗೌಡ ಅವರ ಬ್ಯಾಂಕ್ ಖಾತೆಯಿಂದ ಹಣ ಕದ್ದಿದ್ದಾರೆ. ಓಟಿಪಿ ನಂಬರ್ ನೀಡುವಂತೆ ವಂಚಕನಿಂದ ಕೃಷ್ಣೇಗೌಡರಿಗೆ ಕರೆ ಬಂದಿದೆ. ತನ್ನನ್ನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡ ವಂಚಕ, ಮೊಬೈಲಿಗೆ ಬಂದ ಓಟಿಪಿ ನಂಬರ್ ಹೇಳಿ ಎಂದು ಕೃಷ್ಣೇಗೌಡರನ್ನು ಕೇಳಿದ್ದಾನೆ. ಕೆಲವೇ ಸೆಕೆಂಡುಗಳಲ್ಲಿ ಕೃಷ್ಣೇಗೌಡರ ಖಾತೆಯಿಂದ 1 ಲಕ್ಷ ರೂ. ಹಣ ಡ್ರಾ ಮಾಡಲಾಗಿದೆ. ಇದನ್ನೂ ಓದಿ: ಸೆ.5 ರವರೆಗೆ ರಾಜ್ಯದ ಹಲವೆಡೆ ಮಳೆ – ಯೆಲ್ಲೋ ಅಲರ್ಟ್ ಘೋಷಣೆ

    ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೈಬರ್ ಕ್ರೈಂ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಹಣ ವಾಪಾಸ್ ಸಿಗುವ ಭರವಸೆ ನೀಡಿದ್ದಾರೆ.

  • ಎಟಿಎಂ ಕಾರ್ಡ್ ಮಾಹಿತಿ ಕದ್ದು, ಖಾತೆಗೆ ಕನ್ನ – ಅಂತರಾಷ್ಟ್ರೀಯ ಕಳ್ಳರ ಬಂಧನ

    ಎಟಿಎಂ ಕಾರ್ಡ್ ಮಾಹಿತಿ ಕದ್ದು, ಖಾತೆಗೆ ಕನ್ನ – ಅಂತರಾಷ್ಟ್ರೀಯ ಕಳ್ಳರ ಬಂಧನ

    ತುಮಕೂರು: ಎಟಿಎಂ ಕಾರ್ಡ್ ದತ್ತಾಂಶ ಕದ್ದು ಖಾತೆಗೆ ಕನ್ನ ಹಾಕುತ್ತಿದ್ದ ತುಮಕೂರು ಸಿ.ಇ.ಎನ್ ಪೊಲೀಸರು ಇಬ್ಬರು ಅಂತರಾಷ್ಟ್ರೀಯ ಹೈಟೆಕ್ ಕಳ್ಳರನ್ನು ಬಂದಿಸಿದ್ದಾರೆ.

    ಎಟಿಎಂ ಯಂತ್ರಗಳಿಗೆ ಸ್ಕಿಮ್ಮಿಂಗ್ ಮಷಿನ್ ಅಳವಡಿಸಿ ಹಣ ಡ್ರಾ ಮಾಡುತ್ತಿದ್ದ ಉಗಾಂಡ ಮೂಲದ ಐವಾನ್ ಕಾಂಬೊಂಗೆ, ಕೀನ್ಯಾ ಮೂಲದ ಲಾರೆನ್ಸ್ ಮಾಕಾಮು ಬಂಧಿತರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿದ್ದ ಇಬ್ಬರೂ ಖದೀಮರು ಕಳೆದ ಅಕ್ಟೋಬರ್ ಹಾಗೂ ನವೆಂಬರ್ ನಿಂದ ತುಮಕೂರು ಜಿಲ್ಲೆಯ ಕುಣಿಗಲ್, ತುಮಕೂರು ನಗರ, ಕುಣಿಗಲ್, ಕೆ.ಬಿ ಕ್ರಾಸ್ ಸೇರಿದಂತೆ ಹಲವು ಎಟಿಎಂ ಗಳಲ್ಲಿ ಕಾರ್ಡ್‍ಗಳ ಮಾಹಿತಿ ಕದಿಯುತ್ತಿದ್ದರು. ಚೆನೈ, ದೆಹಲಿ, ಮುಂಬೈ ಸೇರಿದಂತೆ ಹಲವೆಡೆ ನಕಲಿ ಕಾರ್ಡ್ ಬಳಸಿ ಹಣ ಲಪಟಾಯಿಸುತ್ತಿದ್ದರು ಎನ್ನಲಾಗಿದೆ.

    ಕೇಂದ್ರ ವಲಯ ಐಜಿಪಿ ಸೀಮಂತ್ಕುಮಾರ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಬಂಧಿತರಿಂದ ವಿವಿಧ ಬ್ಯಾಂಕ್‍ಗಳ 20 ಎಟಿಎಂ ಕಾರ್ಡ್, ಕೃತ್ಯಕ್ಕೆ ಬಳಸಿದ ಸ್ಕಿಮ್ಮಿಂಗ್ ಮಷಿನ್‍ಗಳು ಸೇರಿದಂತೆ, ಒಂದು ಹೊಂಡಾ ಸಿಆರ್‍ವಿ ಕಾರನ್ನು ವಶಕ್ಕೆ ಪಡೆಯಲಾಗಿದೆ.

    ಈ ಇಬ್ಬರೂ ಖದೀಮರು ವಿದ್ಯಾರ್ಥಿಗಳಾಗಿದ್ದು, ಒಬ್ಬ ಕಾಮರ್ಸ್ ವಿದ್ಯಾರ್ಥಿಯಾಗಿದ್ದು ಮತ್ತೊಬ್ಬ ಫಿಜಿಯೋ ತೆರಪಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಎಟಿಎಂ ಕಾರ್ಡ್ ಗಳು ಗ್ರಾಹಕರ ಬಳಿ ಇದ್ದರೂ ಹಣ ಡ್ರಾ ಆಗಿರೋ ಮೆಸೇಜ್ ಬರುತ್ತಿತ್ತು. ಇದರಿಂದ ಸಾಕಷ್ಟು ಜನ ಹಣ ಕಳೆದುಕೊಂಡಿರುವ ಬಗ್ಗೆ ಸುಮಾರು 60ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದವು. ಪ್ರಕರಣದ ತನಿಖೆ ಆರಂಭಿಸಿದ ಸಿ.ಇ.ಎನ್ ಪೊಲೀಸರು ಈಗಾಗಲೇ ಇಬ್ಬರು ಖದೀಮರನ್ನು ಬಂಧಿಸಿದ್ದು, ಮತ್ತಿಬ್ಬರ ಪತ್ತೆಗಾಗಿ ಬಲೆ ಬೀಸಿದ್ದಾರೆ.

  • ಕೊಲೆ ಆರೋಪಿಗಳ ಸುಳಿವು ನೀಡಿದ ಎಟಿಎಂ ಕಾರ್ಡ್

    ಕೊಲೆ ಆರೋಪಿಗಳ ಸುಳಿವು ನೀಡಿದ ಎಟಿಎಂ ಕಾರ್ಡ್

    – ಡಬಲ್ ಮರ್ಡರ್ ಮಾಡಿದ್ದ 6 ಆರೋಪಿಗಳು ಅಂದರ್

    ಹಾಸನ: ತೋಟದ ಮನೆಯಲ್ಲಿ ವೃದ್ಧ ದಂಪತಿಯ ಜೋಡಿ ಕೊಲೆ ಪ್ರಕರಣರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದು, ಮಂಜಶೆಟ್ಟಿ(23), ಪ್ರಸಾದ್(25), ನಂದನ್ ಕುಮಾರ್(33), ಯೋಗಾನಂದ(29), ಭರತ್(24), ಮಧು(25) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಸುಮಾರು 15 ಲಕ್ಷ ಮೌಲ್ಯದ 316 ಗ್ರಾಂ ಚಿನ್ನ, ಎರಡು ಕೆಜಿ 250 ಗ್ರಾಂ ಬೆಳ್ಳಿ, ಸುಮಾರು 25 ಸಾವಿರ ನಗದು, ಮೂರು ಮೊಬೈಲ್ ಫೋನ್, ಒಂದು ಕಾರು, ಮೂರು ಬೈಕ್ ವಶಕ್ಕೆ ಪಡೆಯಲಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಅವರ ಮಾಹಿತಿ ಮೇರೆಗೆ ಉಳಿದ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳು ದಂಪತಿಯ ಎಟಿಎಂ ಕಾರ್ಡ್‍ನಿಂದ ಹಣ ಪಡೆಯಲು ಹೋಗಿದ್ದರಿಂದ ಆರೋಪಿಗಳ ಹುಡುಕಾಟದಲ್ಲಿದ್ದ ಪೊಲೀಸರಿಗೆ ಸುಳಿವು ಸಿಕ್ಕಿದ್ದು, ಎಟಿಎಂ ಮೂಲಕ ಎಲ್ಲರನ್ನೂ ಬಂಧಿಸಲು ಸಾಧ್ಯವಾಗಿದೆ.

    ಈ ಕುರಿತು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳೆಲ್ಲ ಪೊಲೀಸರ ವಶವಾಗಿದ್ದು, ತನಿಖಾ ತಂಡಕ್ಕೆ ಎಸ್‍ಪಿ ಶ್ರೀನಿವಾಸ್‍ಗೌಡ ಅಭಿನಂದನೆ ಸಲ್ಲಿಸಿದ್ದಾರೆ. ಆಗಸ್ಟ್ 29 ರಂದು ಚನ್ನರಾಯಪಟ್ಟಣ ತಾಲೂಕಿನ, ಆಲಗೊಂಡನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಮುರಳೀಧರ್ ಮತ್ತು ಉಮಾದೇವಿ ದಂಪತಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು.

  • ಎಟಿಎಂ ದೋಚಿ ಐಶಾರಾಮಿ ಜೀವನ ನಡೆಸುತ್ತಿದ್ದ 3 ವಿದೇಶಿಯರು ಸೇರಿ ಐವರು ಅರೆಸ್ಟ್

    ಎಟಿಎಂ ದೋಚಿ ಐಶಾರಾಮಿ ಜೀವನ ನಡೆಸುತ್ತಿದ್ದ 3 ವಿದೇಶಿಯರು ಸೇರಿ ಐವರು ಅರೆಸ್ಟ್

    – ಬಂಧಿತರಿಂದ 2 ಕಾರು, 1.66 ಲಕ್ಷ ರೂ. ನಗದು ವಶಕ್ಕೆ

    ರಾಮನಗರ: ನಕಲಿ ಎಟಿಎಂ ಬಳಸಿ ಹಣ ದೋಚಿ ಐಶಾರಾಮಿ ಜೀವನ ನಡೆಸುತ್ತಿದ್ದ ಮೂವರು ವಿದೇಶಿಯರು ಸೇರಿ ಐವರು ಖತರ್ನಾಕ್ ಕಳ್ಳರನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.

    ನೈಜಿರಿಯಾದ ಎರೆಹ್ಮೆನ್ ಸ್ಮಾರ್ಟ್ ಗೋಡ್ಸನ್ (33), ಉಡೋ ಕ್ರಿಸ್ಟಿಯಾನ್ (26), ತಾಂಜಾನಿಯಾದ ಮಥಿಯಾಸ್ ಎ ಶ್ವಾವಾ (32), ಮಹಾರಾಷ್ಟ್ರದ ಪುಣೆಯ ಪ್ರಶಾಂತ್ ಸುರೇಶ್ ಸವಂತ್ (30) ಹಾಗೂ ಅವಿನಾಶ್ ವಸಂತ್ ರನ್ಸೂರೆ (33) ಬಂಧಿತ ಆರೋಪಿಗಳು. ಬಂಧಿತರಿಂದ 1,66,930 ರೂ. ನಗದು ಸೇರಿದಂತೆ ಕೃತ್ಯಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಪ್ರಕರಣವೊಂದರಲ್ಲಿ ಪುಣೆ ಜೈಲು ಸೇರಿದ್ದ ಎರೆಹ್ಮೆನ್ ಸ್ಮಾರ್ಟ್ ಗೋಡ್ಸನ್ ಜೈಲಿನಲ್ಲಿದ್ದ ಪ್ರಶಾಂತ್‌ಗೆ ಪರಿಚಯವಾಗಿದ್ದರು. ಈ ವೇಳೆ ಗೋಡ್ಸನ್ ಕಳ್ಳತನ ಹೇಗೆ ಮಾಡಬೇಕು ಎಂದು ಪ್ರಶಾಂತ್‌ಗೆ ಕಲಿಸಿಕೊಟ್ಟಿದ್ದ. ಜೈಲಿನಿಂದ ಬಿಡುಗಡೆಯಾದ ಮೇಲೆ ಪ್ರಶಾಂತ್ ತನ್ನ ಗೆಳೆಯ ಅವಿನಾಶ್‌ನನ್ನು ಕರೆದುಕೊಂಡು ಬಂದು ಗೋಡ್ಸನ್ ಟೀಂ ಸೇರಿದ್ದ. ಇತ್ತ ಬೆಂಗಳೂರಿನ ಕಲ್ಯಾಣನಗರದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಉಡೋ ಕ್ರಿಸ್ಟಿಯಾನ್ ಹಾಗೂ ತಾಂಜಾನಿಯಾದ ಕೂಡ ಗೋಡ್ಸನ್ ಗ್ಯಾಂಗ್ ಸೇರಿದ್ದರು.

    ಗೋಡ್ಸನ್ ಅಂಡ್ ಟೀಂ ಎಟಿಎಂ ಸೆಂಟರ್ ಗಳಲ್ಲಿ ಸ್ಕಿಮ್ಮಿಂಗ್ ಮಿಷನ್ ಹಾಗೂ ಕ್ಯಾಮೆರಾ ಅಳವಡಿಸಿ ಡಾಟಾ ಕದ್ದು ನಕಲಿ ಎಟಿಎಂ ತಯಾರಿಸುತ್ತಿದ್ದರು. ಬಳಿಕ ವಿವಿಧ ಎಟಿಎಂ ಸೆಂಟರ್ ಗಳಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದರು. ಆರೋಪಿಗಳು ರಾಮನಗರ, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಇಂತಹ ಕೃತ್ಯ ಎಸಗಿದ್ದಾರೆ. ಇದೇ ರೀತಿ ರಾಮನಗರದಲ್ಲಿ ಗ್ರಾಹಕರೊಬ್ಬರ ಎಟಿಎಂ ನಕಲಿ ಮಾಡಿ, ಹಣ ಡ್ರಾ ಮಾಡಿಕೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ರಾಮನಗರ ಪೊಲೀಸರು ತನಿಖೆ ಆರಂಭಿಸಿದ್ದರು.

    ಆರೋಪಿಗಳು ರಾಮನಗರದ ಎಟಿಎಂ ಸೆಂಟರ್ ನಲ್ಲಿ ಸ್ಕಿಮ್ಮಿಂಗ್ ಮಿಷನ್ ಹಾಗೂ ಕ್ಯಾಮೆರಾ ಅಳವಡಿಸುತ್ತಿದ್ದ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಪಡೆದ ಪೊಲೀಸರು ಆರೋಪಿಗಳಿಗೆ ಬಲೆ ಬೀಡಿದ್ದರು. ಪ್ರಕರಣದ ಆರೋಪಿ ಗೋಡ್ಸನ್ ಅಕ್ಟೋಬರ್ 31ರಂದು ರಾಮನಗರದ ಐಜೂರ್ ವೃತ್ತದ ಬಳಿ ಕಾಣಿಸಿಕೊಂಡಿದ್ದ. ತಕ್ಷಣವೇ ಆತನ ಬಂಧನಕ್ಕಾಗಿ ಪೊಲೀಸರು ಮುಂದಾಗಿದ್ದರು. ಆದರೆ ಗೋಡ್ಸನ್ ಕಾರಿನಿಂದ ಕೆಳಗೆ ಇಳಿಯದೇ ತಪ್ಪಿಸಿಕೊಳ್ಳಲು ಮುಂದಾಗಿದ್ದ. ಈ ವೇಳೆ ಪೊಲೀಸರು ಕಾರನ್ನು ಬೆನ್ನುಹತ್ತಿ ಬೆಂಗಳೂರು-ಮೈಸೂರು ರಸ್ತೆಯ ಕನಕಪುರ ಸರ್ಕಲ್‌ನಲ್ಲಿ ಸುತ್ತುವರಿದು ನಿಂತಿದ್ದರು. ಪರಿಣಾಮ ಜೀವದ ಭಯದಿಂದ ಗೋಡ್ಸನ್ ಪೊಲೀಸರಿಗೆ ಶರಣಾಗಿದ್ದ.

    ಗೋಡ್ಸನ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಉಳಿದ ಆರೋಪಿಗಳ ಬಗ್ಗೆ ಮಾಹಿತಿ ಬಾಯಿಬಿಟ್ಟಿದ್ದ. ಅವರಿಗೂ ಬಲೆ ಬೀಸಿದ ಪೊಲೀಸರು ಎಲ್ಲರನ್ನೂ ಬಂಧಿಸಿದ್ದಾರೆ. ಆರೋಪಿಗಳಿಂದ 2 ಕಾರು, 4 ಮೊಬೈಲ್, 2 ಲ್ಯಾಪ್‌ಟಾಪ್, 11 ಚಾಕು, 2 ಸ್ಕಿಮ್ಮಿಂಗ್ ಮಷಿನ್, 44 ಎಟಿಎಂ ಕಾರ್ಡ್, 8 ಖಾಲಿ ಎಟಿಎಂ ಕಾರ್ಡ್ ಸೇರಿದಂತೆ ಕೃತ್ಯಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕಳ್ಳತನ ಮಾಡಿದ ಹಣದಿಂದ ಬೆಂಗಳೂರಿನಲ್ಲಿ ಎರಡು ಫ್ಲಾಟ್ ಖರೀದಿಸಿ, ಐಶಾರಾಮಿ ಜೀವನ ನಡೆಸುತ್ತಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿಕೊAಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳ ವಿರುದ್ಧ ರಾಮನಗರ ಸೈಬರ್ ಠಾಣೆಯಲ್ಲಿ 13 ಪ್ರಕರಣಗಳು, ಕಗ್ಗಲೀಪುರ ಠಾಣೆಯಲ್ಲಿ 6 ಪ್ರಕರಣ ಹಾಗೂ ಬೆಂಗಳೂರು ನಗರ ಸೈಬರ್ ಕ್ರೈಮ್  ಠಾಣೆಯಲ್ಲಿ 11 ಮತ್ತು ಮೈಸೂರು ನಗರ ಠಾಣೆಯ 5 ಪ್ರಕರಣ ದಾಖಲಾಗಿವೆ.

  • ಶೀಘ್ರವೇ ಬಂದ್ ಆಗಲಿದೆ ಎಸ್‍ಬಿಐ ಎಟಿಎಂ ಕಾರ್ಡ್

    ಶೀಘ್ರವೇ ಬಂದ್ ಆಗಲಿದೆ ಎಸ್‍ಬಿಐ ಎಟಿಎಂ ಕಾರ್ಡ್

    ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಶೀಘ್ರವೇ ಎಟಿಎಂ ಕಾರ್ಡ್ ಗಳಿಗೆ ಗುಡ್‍ಬೈ ಹೇಳಲಿದೆ.

    ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‍ಬಿಐ ಪ್ಲಾಸ್ಟಿಕ್ ಡೆಬಿಟ್ ಕಾರ್ಡ್ ಗಳನ್ನು ನಿಲ್ಲಿಸುವ ನಿಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಡಿಜಿಟಲ್ ಪಾವತಿ ಸೇವೆಯನ್ನು ಉತ್ತೇಜಿಸಲು ಎಸ್‍ಬಿಐ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಯಲ್ಲಿ ಬ್ಯಾಂಕ್ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಎಸ್‍ಬಿಐ ಎಲ್ಲಾ ಎಟಿಎಂ ಕಾರ್ಡ್ ಗಳನ್ನು 18 ತಿಂಗಳ ನಂತರ ಮುಚ್ಚುವ ಗುರಿ ಹೊಂದಿದೆ.

    ದೇಶದಲ್ಲಿ 90 ಕೋಟಿ ಡೆಬಿಟ್ ಕಾರ್ಡ್‍ಗಳು ಮತ್ತು 3 ಕೋಟಿ ಕ್ರೆಡಿಟ್ ಕಾರ್ಡ್‍ಗಳಿವೆ. ಒಂದೂವರೆ ವರ್ಷದ ನಂತರ ಈ ಕಾರ್ಡ್ ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿವೆ. ಈ ಮೂಲಕ ಡಿಜಿಟಲ್ ಪಾವತಿ ಸೇವೆ ಮಾತ್ರ ಕಾರ್ಯನಿರ್ವಹಿಸಲಿದೆ ಎಂದು ಎಸ್‍ಬಿಐ ಅಧ್ಯಕ್ಷ ರಜನೀಶ್ ಕುಮಾರ್ ತಿಳಿಸಿದ್ದಾರೆ.

    ಡೆಬಿಟ್ ಕಾರ್ಡ್ ಮುಕ್ತ ದೇಶವನ್ನಾಗಿ ಮಾಡುವಲ್ಲಿ ಯೋನೊ ಆ್ಯಪ್ (You Only Need one -YONO) ಪ್ರಮುಖ ಪಾತ್ರ ವಹಿಸಲಿದೆ. ಯೋನೊ ಮೂಲಕ ಎಟಿಎಂ ಯಂತ್ರಗಳಿಂದ ಹಣವನ್ನು ಡ್ರಾ ಮಾಡಬಹುದು ಹಾಗೂ ಶಾಪಿಂಗ್ ಕೂಡ ಮಾಡಬಹುದಾಗಿದೆ. ಬ್ಯಾಂಕ್ ಈಗಾಗಲೇ 68,000 ಯೋನೊ ಕ್ಯಾಶ್ ಪಾಯಿಂಟ್‍ಗಳನ್ನು ತೆರೆದಿದೆ ಎಂದು ಮಾಹಿತಿ ನೀಡಿದ್ದಾರೆ.

    ಎಸ್‍ಬಿಐ 2019 ಮಾರ್ಚ್ ನಿಂದಲೇ ಯೋನೊ ಕ್ಯಾಶ್ ಸೇವೆಯನ್ನು ಪ್ರಾರಂಭಿಸಿದೆ. ಇದು ಗ್ರಾಹಕರಿಗೆ ಡೆಬಿಟ್ ಕಾರ್ಡ್ ಇಲ್ಲದೆ ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ. ಇದು ಸುಲಭ ಮತ್ತು ಸುರಕ್ಷಿತವಾಗಿದೆ. ಆರಂಭದಲ್ಲಿ ಈ ಸೌಲಭ್ಯವು 16,500 ಎಟಿಎಂಗಳಲ್ಲಿ ಲಭ್ಯವಿತ್ತು.

     

     

    ಎಸ್‍ಬಿಐ  ಗ್ರಾಹಕರು ತಮ್ಮ ಮೊಬೈಲ್‍ನಲ್ಲಿ ಯೋನೊ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಬಳಿಕ ಅದರಲ್ಲಿರುವ You Only Need one -YONO ನಲ್ಲಿರುವ ಕ್ವಿಕ್ ಲಿಂಕ್ ವಿಭಾಗದಲ್ಲಿ ಯೋನೊ ಕ್ಯಾಷ್ ವಿಭಾಗಕ್ಕೆ ಹೋಗಿ ಹಣ ಪಡೆಯುವ ಪ್ರಕ್ರಿಯೆ ಆರಂಭಿಸಬೇಕು. ಬಳಿಕ 6 ಅಂಕಿಯ ರಹಸ್ಯ ಸಂಖ್ಯೆ(ಯೋನೊ ಕ್ಯಾಷ್ ಪಿನ್) ನಮೂದಿಸಬೇಕು. ಇದಕ್ಕೆ ಪ್ರತಿಯಾಗಿ ಗ್ರಾಹಕರ ಮೊಬೈಲ್‍ಗೆ 6 ಅಂಕಿಯ ಇನ್ನೊಂದು ಸಂದೇಶ (ಓಟಿಪಿ) ಎಸ್‍ಎಂಎಸ್ ಮೂಲಕ ಬರುತ್ತದೆ. ಹತ್ತಿರದಲ್ಲಿರುವ ಯೋನೊ ಕ್ಯಾಷ್ ಪಾಯಿಂಟ್ ಎಟಿಎಂನಲ್ಲಿ ಕ್ಯಾಷ್ ಪಿನ್ ಹಾಗೂ ಎಸ್‍ಎಂಎಸ್ ಮೂಲಕ ಬಂದಿರುವ ಸಂಖ್ಯೆಯನ್ನು ನಮೂದಿಸಿ ಹಣ ಪಡೆಯಬಹುದು.

  • ಎಟಿಎಂ ಕಾರ್ಡ್ ಅಲ್ಲ ಇದು ಮದುವೆ ಆಮಂತ್ರಣ!- ಫೋಟೋ ವೈರಲ್

    ಎಟಿಎಂ ಕಾರ್ಡ್ ಅಲ್ಲ ಇದು ಮದುವೆ ಆಮಂತ್ರಣ!- ಫೋಟೋ ವೈರಲ್

    ಬೆಂಗಳೂರು / ಕೊಪ್ಪಳ: ವಿಭಿನ್ನವಾಗಿ ಮದುವೆ ಆಮಂತ್ರಣ ಮುದ್ರಿಸಲು ಅನೇಕರು ಪ್ಲಾನ್ ಮಾಡುತ್ತಲೇ ಇರುತ್ತಾರೆ. ಹಾಗೇ ಕೊಪ್ಪಳ ಜಿಲ್ಲೆಯ ವ್ಯಕ್ತಿಯೊಬ್ಬರು ತಮ್ಮ ಮದುವೆಯ ಆಮಂತ್ರಣವನ್ನು ಎಟಿಎಂ ಕಾರ್ಡ್ ಮಾದರಿಯಲ್ಲಿ ಮುದ್ರಿಸಿ ಹಂಚುತ್ತಿದ್ದಾರೆ.

    ಕೊಪ್ಪಳ ಜಿಲ್ಲೆ ಕುಷ್ಠಗಿ ತಾಲೂಕು ಹಾಬಲಕಟ್ಟಿ ಗ್ರಾಮದ ದುರ್ಗೇಶ್ ದೊಡ್ಡಮನಿ ಅವರ ವಿವಾಹ ಇದೇ 30ರಂದು ನಡೆಯಲಿದೆ. ಸಂಬಂಧಿಕರು, ಆಪ್ತರು ಹಾಗೂ ಸ್ನೇಹಿತರಿಗೆ ಎಟಿಎಂ ಕಾರ್ಡ್ ನಂತೆ ಕಾಣುವ ಮದುವೆ ಆಮಂತ್ರಣ ಪತ್ರಿಕೆ ನೀಡುತ್ತಿದ್ದಾರೆ. ಅದರಲ್ಲಿ ವಿವಾಹ ಸ್ಥಳ, ದಿನಾಂಕ ಎಲ್ಲವನ್ನೂ ಅಚ್ಚುಕಟ್ಟಾಗಿ ತಿಳಿಸಲಾಗಿದೆ. ಈ ಮದುವೆ ಕಾರ್ಡ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಈ ಬಗ್ಗೆ ಮದುಮಗ ದುರ್ಗೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾನು ಯಾದಗಿರಿ ಜಿಲ್ಲೆಯ ಶಾಹಾಪುರದ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮದುವೆಗೂ ಮುನ್ನ ಇಂಟರ್ ನೆಟ್‍ನಲ್ಲಿ ಇಂತಹ ಕಾರ್ಡ್ ಗಳನ್ನು ನೋಡಿದ್ದೆ. ಹೀಗಾಗಿ ನಾನು ಹೀಗೆ ಆಮಂತ್ರಣ ಮುದ್ರಿಸಿ ಹಂಚಬೇಕು ಎನ್ನುವ ಪ್ಲಾನ್ ಮಾಡಿದ್ದೆ ಎಂದು ತಿಳಿಸಿದ್ದಾರೆ.

    ಕಾರ್ಡ್ ವಿಶೇಷತೆ ಏನು?:
    ಎಟಿಎಂ ಕಾರ್ಡ್ ನಲ್ಲಿರುವ ಯಾವುದೇ ವಿಷಯವನ್ನು ಮದ್ವೆ ಕಾರ್ಡ್ ನಲ್ಲೂ ಕೈಬಿಟ್ಟಿಲ್ಲ. ಕಾರ್ಡ್ ನಲ್ಲಿರುವ ಮಾಹಿತಿಯನ್ನು ಮಾತ್ರ ಬದಲಾಯಿಸಿದ್ದಾರೆ. ವಿಸಾ ಕಾರ್ಡ್ ಹೆಸರಿನ ಜಾಗದಲ್ಲಿ ವಿವಾಹ ಎಂದು, 16 ಸಂಖ್ಯೆಯ ಕಾರ್ಡ್ ನಂಬರ್ ಬದಲಾಗಿ ವಿವಾಹ ದಿನಾಂಕ, ಸಮಯವನ್ನು ತಿಳಿಸಲಾಗಿದೆ.

    ಕಾರ್ಡ್ ನ ಬಲ ಭಾಗದಲ್ಲಿ ನ್ಯೂಲೈಫ್ ಬ್ಯಾಂಕ್ ಅಂತ ಬರೆಯಲಾಗಿದೆ. ಅವಧಿ ಆರಂಭ (3-12-2018) ಹಾಗೂ ಮುಕ್ತಾಯ ಲೈಫ್ ಟೈಮ್. ನಿಮ್ಮ ಹಾಜರಿಕೊಟ್ಟು ಮದುವೆಯ ಸಂಭ್ರಮದಲ್ಲಿ ಭಾಗಿಯಾಗಿ. ಮದುವೆಗೆ ಬರದವರಿಗೆ ಯಾವುದೇ ಕ್ಷಮೆ ಇರುವುದಿಲ್ಲ ಎಂದು ತಿಳಿಸಿ ವಧು-ವರರು ಸಹಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

  • ಯಾಕೆ ಹಳೆ ಎಟಿಎಂ ಕಾರ್ಡ್ ಚೇಂಜ್ ಮಾಡಬೇಕು? ಏನಿದು ಇಎಂವಿ ಚಿಪ್ ಕಾರ್ಡ್? ಎಲ್ಲಿ ಸಿಗುತ್ತೆ?

    ಯಾಕೆ ಹಳೆ ಎಟಿಎಂ ಕಾರ್ಡ್ ಚೇಂಜ್ ಮಾಡಬೇಕು? ಏನಿದು ಇಎಂವಿ ಚಿಪ್ ಕಾರ್ಡ್? ಎಲ್ಲಿ ಸಿಗುತ್ತೆ?

    ಬೆಂಗಳೂರು: ಎಟಿಎಂ ಡೆಬಿಟ್ ಕಾರ್ಡ್ ಬಳಸುವ ಮಂದಿಯ ಮೊಬೈಲ್ ಗೆ ಈಗಾಗಲೇ ಬ್ಯಾಂಕ್ ಗಳು ಮ್ಯಾಗ್ನೆಟಿಕ್ ಸ್ಟ್ರೈಪ್ ಬದಲು ಇಎಂವಿ ಚಿಪ್ ಇರುವ ಎಟಿಎಂ ಕಾರ್ಡ್ ಬಳಸಿ ಎಂದು ಮೆಸೇಜ್ ಕಳುಹಿಸಲು ಆರಂಭಿಸಿವೆ. ಬ್ಯಾಂಕ್ ಕಳುಹಿಸಿದ ಈ ಮಸೇಜ್ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳದೇ ಸ್ಪಾಮ್ ಮೆಸೇಜ್ ಎಂದು ಭಾವಿಸಿಬೇಡಿ. ಈ ಮಸೇಜ್ ನಿರ್ಲಕ್ಷಿಸಿದರೆ ಡಿಸೆಂಬರ್ 31 ರ ನಂತರ ನಿಮ್ಮ ಎಟಿಎಂ ಕಾರ್ಡ್ ನಿಷ್ಕ್ರೀಯವಾಗಲಿದೆ.

    ಹೌದು, ದೇಶದಲ್ಲಿ ಆನ್‍ಲೈನ್ ವಂಚಕರ ಹಾವಳಿ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಎಲ್ಲ ಬ್ಯಾಂಕ್ ಗಳಿಗೆ ಇಎಂವಿ ಚಿಪ್ ಇರುವ ಡೆಬಿಟ್ ಕಾರ್ಡ್ ನೀಡುವಂತೆ ಸೂಚಿಸಿದೆ. ಹೀಗಾಗಿ ಏನಿದು ಇಎಂವಿ ಚಿಪ್? ಹೇಗೆ ಭಿನ್ನ? ಬ್ಯಾಂಕ್ ಖಾತೆಗಳಿಗೆ ಸುರಕ್ಷತೆ ನೀಡುತ್ತಾ ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರ ನೀಡಲಾಗಿದೆ.

    ಏನಿದು ಇಎಂವಿ ಚಿಪ್ ಕಾರ್ಡ್?
    ಸುಲಭವಾಗಿ ಹೇಳುವುದಾದರೆ ಮೊಬೈಲ್ ನಲ್ಲಿ ಕರೆ ಮಾಡಬೇಕಾದರೆ ಒಂದು ಸಿಮ್ ಇರಬೇಕೋ ಹಾಗೆಯೇ ಈ ಇಎಂವಿಯಲ್ಲೂ ಒಂದು ಚಿಪ್ ಇರುತ್ತದೆ. ಯುರೊಪೇ  ಮಾಸ್ಟರ್‌ಕಾರ್ಡು ವೀಸಾ ಹೃಸ್ವ ರೂಪವೇ ಇಎಂವಿ. ಈ ಹಿಂದೆ ಬಳಕೆಯಾಗುತ್ತಿದ್ದ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಗಿಂತ ಈ ಕಾರ್ಡ್ ಹೆಚ್ಚು ರಕ್ಷಣೆ ನೀಡುವ ಕಾರಣ ಎಲ್ಲ ಬ್ಯಾಂಕ್ ಗಳು ಈಗ ಇಎಂವಿ ಚಿಪ್ ಇರುವ ಎಟಿಎಂ ಕಾರ್ಡ್ ಗಳನ್ನೇ ನೀಡುತ್ತಿವೆ.

    ಹಳೆ ಎಟಿಎಂ ಕಾರ್ಡ್ ಅಪಾಯಕಾರಿ ಯಾಕೆ?
    ಕಾರ್ಡ್ ಹಿಂದಿರುವ ಕಪ್ಪು ಬಣ್ಣದ ಮ್ಯಾಗ್ನೆಟಿಕ್ ಸ್ಟ್ರೈಪ್ ನಲ್ಲಿ ಎನ್ ಕ್ರಿಪ್ಟ್ ಆಗಿರುವ ಡೇಟಾಗಳನ್ನು ಕದಿಯುವುದು ಸುಲಭ. ಗ್ರಾಹಕರ ಕಾರ್ಡ್ ಕಳೆದು ಹೋದರೆ ಅಥವಾ ಕಳ್ಳರ ಪಾಲಾದರೆ ಸುಲಭವಾಗಿ ಖಾತೆಯಿಂದಲೇ ಹಣವನ್ನು ಎಗರಿಸಲು ಸಾಧ್ಯವಿದೆ. ಈಗ ನೀವು ಎಟಿಎಂನಲ್ಲಿ ಹಣ ಡ್ರಾ ಮಾಡಿದವರ ಖಾತೆಯಿಂದ ಕಳ್ಳರು ಹಣ ದೋಚಿದ ಸುದ್ದಿಯನ್ನು ನೀವು ಓದಿರಬಹುದು. ಎಟಿಎಂ ಗ್ರಾಹಕರ ಕಾರ್ಡ್ ಕಳೆದು ಹೋದರೆ, ಇಲ್ಲವೇ ಕಳ್ಳರ ಪಾಲಾದರೆ ಸುಲಭವಾಗಿ ಹಣ ದೋಚಲು ಹಳೆಯ ಕಾರ್ಡ್ ಗಳಲ್ಲಿ ಅವಕಾಶವಿದೆ. ಇವಿಎಂ ಚಿಪ್ ಆಧಾರಿತ ಕಾರ್ಡುಗಳು ಗ್ರಾಹಕರನ್ನು ರಕ್ಷಿಸುತ್ತದೆ. ಎಟಿಎಂ ಯಂತ್ರಗಳಿಗೆ ವಂಚಕರು ಪುಟ್ಟ ಸ್ಕಿಮ್ಮಿಂಗ್ ಉಪಕರಣವನ್ನು ಇಟ್ಟು ಕಳವು ಮಾಡುತ್ತಾರೆ. ಇವುಗಳನ್ನು ತಡೆಯಲು ಇಎಂವಿ ಕಾರ್ಡ್ ಸಮರ್ಥವಾಗಿದೆ.

     

    ಭಿನ್ನ ಹೇಗೆ?
    ಹಿಂದಿನ ಎಟಿಎಂ ಕಾರ್ಡ್ ನಲ್ಲಿ ಗ್ರಾಹಕರ ಮಾಹಿತಿಗಳು ಮ್ಯಾಗ್ನೆಟಿಕ್ ಸ್ಟ್ರೈಪ್ ನಲ್ಲಿ ಎನ್ ಕ್ರಿಪ್ಟ್ ಮಾಡಲಾಗಿರುತ್ತದೆ. ಆದರೆ ಇಎಂವಿಯಲ್ಲಿ ಗ್ರಾಹಕರ ಮಾಹಿತಿಗಳು ಚಿಪ್ ಒಳಗಡೆ ಇರುತ್ತದೆ. ಇಎಂವಿ ಚಿಪ್ ಕಾರ್ಡ್ ಮೂಲಕ ನಡೆದ ವಹಿವಾಟಿನ ಪರಿಶೀಲನೆಗೆ ಒಂದು ವಿಶೇಷ ವಹಿವಾಟು ಕೋಡ್ ಇರುತ್ತದೆ. ಈ ಕೋಡ್ ಬಳಕೆದಾರರ ವೆರಿಫಿಕೇಶನ್ ಮಾಡುತ್ತದೆ.

    ಹೊಸ ಎಟಿಎಂ ಎಲ್ಲಿ ಸಿಗುತ್ತೆ?
    ಗ್ರಾಹಕರು ಮೊಬೈಲ್ ಅಪ್ಲಿಕೇಶನ್ ಅಥವಾ ನೆಟ್ ಬ್ಯಾಕಿಂಗ್ ಮೂಲಕ ಹೊಸ ಎಟಿಎಂ ಕಾರ್ಡ್ ಪಡೆದುಕೊಳ್ಳಬಹುದು. ಅಥವಾ ನೇರವಾಗಿ ಬ್ಯಾಂಕ್ ಖಾತೆಗೆ ತೆರಳಿ ಕಾರ್ಡ್ ಗಾಗಿ ಮನವಿ ಸಲ್ಲಿಸಬಹುದು. ಈ ಸೇವೆಗೆ ಯಾವುದೇ ಶುಲ್ಕ ನೀಡುವ ಅಗತ್ಯವಿಲ್ಲ.

     

  • ಕೇಸ್ ಕ್ಲೋಸ್ ಆಗಿಲ್ಲ, ಕಳ್ಳರೂ ಸಿಕ್ಕಿಲ್ಲ, ಆದ್ರೂ ಡ್ರಾ ಆಗಿದ್ದ 20,89,558 ರೂ. ಅಕೌಂಟ್‍ಗೆ ವಾಪಸ್

    ಕೇಸ್ ಕ್ಲೋಸ್ ಆಗಿಲ್ಲ, ಕಳ್ಳರೂ ಸಿಕ್ಕಿಲ್ಲ, ಆದ್ರೂ ಡ್ರಾ ಆಗಿದ್ದ 20,89,558 ರೂ. ಅಕೌಂಟ್‍ಗೆ ವಾಪಸ್

    ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಷಿ ಅವರು ಯೂರೋಪ್ ಪ್ರವಾಸದಲ್ಲಿದ್ದ ವೇಳೆ ಅವರ ಎಟಿಎಂ ಕಾರ್ಡ್ ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಕೇಸ್ ಕ್ಲೋಸ್ ಆಗದಿದ್ದರೂ, ಕಳ್ಳರೂ ಇನ್ನೂ ಸಿಗದಿದ್ದರೂ 20 ಲಕ್ಷದ 89 ಸಾವಿರದ 558 ರೂ. ಅಕೌಂಟ್‍ಗೆ ವಾಪಸ್ ಬಂದಿದ್ದು, ಹಲವು ಅನುಮಾನಗಳು ಹುಟ್ಟಿಕೊಂಡಿದೆ.

    ಕಳಸಾದ ಕರ್ನಾಟಕ ಬ್ಯಾಂಕಿನ ಜೋಷಿ ಅವರ ಅಕೌಂಟಿನಿಂದ ದುಷ್ಕರ್ಮಿಗಳು 20 ಲಕ್ಷಕ್ಕೂ ಅಧಿಕ ಹಣವನ್ನ ಡ್ರಾ ಮಾಡಿಕೊಂಡಿದ್ದರು. ವಿದೇಶದಿಂದ ಹಿಂದಿರುಗಿದ ಭೀಮೇಶ್ವರ ಜೋಷಿ ಕಳಸಾದ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಕಳೆದ 29 ದಿನದಿಂದ ತನಿಖೆ ನಡೆಯುತ್ತಿದೆ. ಕಳ್ಳರಿನ್ನೂ ಅರೆಸ್ಟ್ ಆಗಿಲ್ಲ. ಈ ನಡುವೆ ಅಷ್ಟು ದೊಡ್ಡ ಮೊತ್ತದ ಹಣ ಜೋಷಿಯವರ ಅಕೌಂಟ್‍ಗೆ ಹಿಂದಿರುಗಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಖಾತೆಗೆ ಹಣವನ್ನು ಹಿಂದಿರುಗಿರೋದ್ರಿಂದ ನಿಜಕ್ಕೂ ಹಣ ಡ್ರಾ ಆಗಿತ್ತಾ? ಅಥವಾ ಬ್ಯಾಂಕ್‍ನವರೇ ಲೆಕ್ಕದಲ್ಲಿ ಹೆಚ್ಚು ಕಡಿಮೆ ಮಾಡಿದ್ದಾರಾ? ಕಳ್ಳರು ಸಿಗದೆ ಆ ಹಣ ಹೇಗೆ ಸಿಕ್ತು? ಅನ್ನೋ ಅನುಮಾನ ಮೂಡಿದೆ. ಜನಸಾಮಾನ್ಯರು ಒಂದು ಸಾವಿರ ಕಳೆದುಕೊಂಡರೆ ಅರ್ಜಿ, ಐಡಿ ಪ್ರೂಫ್ ಅಂತೆಲ್ಲಾ 45 ದಿನಕ್ಕೂ ಹೆಚ್ಚು ಕಾಲ ಅಲೆಯಬೇಕು. ಆದರೆ ಕಳ್ಳರೇ ಸಿಗದೆ ಇಷ್ಟು ದೊಡ್ಡ ಮೊತ್ತದ ಹಣ ವಾಪಸ್ ಬರೋಕೆ ಹೇಗೆ ಸಾಧ್ಯ ಎಂದು ಬ್ಯಾಂಕ್ ಸಿಬ್ಬಂದಿಗಳೇ ಸ್ಪಷ್ಟಪಡಿಸಬೇಕಿದೆ.