Tag: ಎಚ್.ನಾಗೇಶ್

  • ಶನಿವಾರ ಮುಳಬಾಗಿಲು ಶಾಸಕ ಎಚ್.ನಾಗೇಶ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ

    ಶನಿವಾರ ಮುಳಬಾಗಿಲು ಶಾಸಕ ಎಚ್.ನಾಗೇಶ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ

    ಕೋಲಾರ: ಬೆಂಗಳೂರಿನ ಕೆಪಿಸಿಸಿ ಕಚೇರಿ (Bengaluru KPCC Office) ಯಲ್ಲಿ ನಾಳೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ (Congress Party) ಸೇರುವುದಾಗಿ ಮುಳಬಾಗಿಲು ಪಕ್ಷೇತರ ಶಾಸಕ ಎಚ್. ನಾಗೇಶ್ (MLA H Nagesh) ಹೇಳಿದ್ದಾರೆ. ಮುಳಬಾಗಲು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನನಗೆ ರಾಜಕೀಯ ಜೀವನ ಕೊಟ್ಟಿದ್ದು ಕಾಂಗ್ರೆಸ್. ಕಾಂಗ್ರೆಸ್ ಬಾವುಟ ಹಿಡಿದುಕೊಂಡೆ ನಾನು ರಾಜಕೀಯಕ್ಕೆ ಬಂದಿದ್ದು, ಮೊದಲಿನಿಂದಲೂ ನಾನು ಕಾಂಗ್ರೆಸ್ ನಲ್ಲಿದ್ದವನು. ಕಳೆದ ಬಾರಿ ನನಗೆ ಬಿ-ಫಾರಂ ಸಿಕ್ಕಿರಲಿಲ್ಲ ಅದಕ್ಕಾಗಿ ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದೆ, ಸದ್ಯ ನಾನು ಕಾಂಗ್ರೆಸ್ ನಲ್ಲಿರೋಣ ಎಂದುಕೊಂಡಿದ್ದೇನೆ ಎಂದಿದ್ದಾರೆ.

    ನಮ್ಮ ತಾತನವರ ಕಾಲದಿಂದಲೂ ನಾನು ಕಾಂಗ್ರೆಸ್, ನನ್ನ ತಾಲೂಕಿನಲ್ಲಿ ಕೆಲಸ ಕಾರ್ಯಗಳು ಆಗಲಿ ಅನ್ನೋ ಕಾರಣಕ್ಕೆ ಬಿಜೆಪಿ (BJP) ಗೆ ಬೆಂಬಲ ಸೂಚಿಸಿದ್ದೆ. ಪಕ್ಷೇತರನಾಗಿ ಗೆದ್ದು ನನಗೆ ಅನುದಾನಗಳು ಬೇಕು ಅದಕ್ಕಾಗಿ ನಾನು ಶಂಕರ್ ಬಿಜೆಪಿಗೆ ಬೆಂಬಲ ಸೂಚಿಸಿದ್ದೆವು ಎಂದು ಸ್ಪಷ್ಟ ಪಡಿಸಿದ್ರು. ಅಲ್ಲದೆ ಶನಿವಾರ ಬೆಂಗಳೂರಿನ ಕೆಪಿಸಿಸಿ ಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ, ಮಹದೇವ ಪುರ ನಾನು ಹುಟ್ಟು ಬೆಳೆದ ಊರು, ಮಹದೇವಪುರದ ಜನ ನನ್ನನ್ನು ಕರೆಯುತ್ತಾ ಇದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷರನ್ನ ಭೇಟಿ ನೀಡಿ ಮಾತನಾಡಿದ್ದೇನೆ. ನೋಡೋಣಪ್ಪ ಬಾ ಎಂದು ಹೇಳಿದ್ದಾರೆ. ಮೊದಲು ನಾನು ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ ಬಳಿಕ ಪಕ್ಷ ನಿರ್ಧಾರ ಮಾಡಲಿದೆ ಎಂದರು. ಇದನ್ನೂ ಓದಿ: ಮೋದಿ ಬ್ರಹ್ಮಾಸ್ತ್ರದ ನಡುವೆ ಬಿಜೆಪಿ ಮಠದ ರಾಜಕೀಯ ಶುರು

    ಸಿದ್ದರಾಮಯ್ಯ (Siddaramaiah) ಕೋಲಾರಕ್ಕೆ ಬರೋದು ಒಳ್ಳೆಯದು, ಅವರು ನೂರಕ್ಕೆ ನೂರು ಗೆಲ್ಲುತ್ತಾರೆ. ಮಾಜಿ ಮುಖ್ಯಮಂತ್ರಿ ಆಗಿದ್ದವರು ಅವರು ಬಂದ್ರೆ ಬಹಳ ಒಳಿತಾಗುತ್ತೆ. ಬಿಜೆಪಿ ಪಕ್ಷ ಬಿಡೋದು ಅನ್ನೋದಕ್ಕಿಂತ ನನಗೆ ಕೆಲಸ ಆಗಬೇಕಿತ್ತು, ಜನರ ಅಭಿವೃದ್ಧಿ ಮುಖ್ಯ, ಚುನಾವಣೆ (Election) ಸಂದರ್ಭದಲ್ಲಿ ನನಗೂ ಒಂದು ನೆಲೆ ಬೇಕಲ್ಲ. ಪಕ್ಷ ಸೇರ್ಪಡೆಯಾಗಿ ನಾನು ಕಾಂಗ್ರೆಸ್ ಅಭ್ಯರ್ಥಿಯಾದ ಮೇಲೆ ಕೆಲವು ವಿಚಾರಗಳನ್ನ ಮಾತನಾಡುವೆ ಎಂದು ಹೇಳಿದ್ದಾರೆ.

    ಡಾ.ಬಿ.ಆರ್. ಅಂಬೇಡ್ಕರ್ (Dr. B R Ambedkar) ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ಬೆಂಗಳೂರಿನ ಮಹದೇವಪುರದಿಂದ ಸ್ಪರ್ಧಿಸುವಂತೆ ಅಲ್ಲಿನ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಯಾವ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುತ್ತದೆಯೋ ಆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆಯಾದ್ರೆ ನಮ್ಮ ಸ್ನೇಹಿತರಿಗೂ ಸ್ಥಾನ ಸಿಗಲಿದೆ: ಬಿ.ಸಿ.ಪಾಟೀಲ್

    ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆಯಾದ್ರೆ ನಮ್ಮ ಸ್ನೇಹಿತರಿಗೂ ಸ್ಥಾನ ಸಿಗಲಿದೆ: ಬಿ.ಸಿ.ಪಾಟೀಲ್

    – ಸಂಕ್ರಾಂತಿಗೆ ವಿಸ್ತರಣೆ ಆದ್ರೆ ಇಂಧನ ಖಾತೆ ಕೊಟ್ರೆ ಒಳಿತು- ಸಚಿವ ನಾಗೇಶ್

    ಕೋಲಾರ: ಸಿಎಂ ತೆಗದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ನನ್ನ ಖಾತೆ ಬದಲಾವಣೆ ಮಾಡಿದರೂ ಅಡ್ಡಿ ಇಲ್ಲ ಎಂದು ಸಚಿವ ಸಂಪುಟ ವಿಸ್ತರಣೆ ಕುರಿತು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

    ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಆದಷ್ಟು ಬೇಗ ಆಗಬೇಕು. ನಮ್ಮ ಸ್ನೇಹಿತರಿಗೆ ಸಚಿವ ಸ್ಥಾನ ಸಿಗುವ ಭರವಸೆ ಇದೆ. ಇನ್ನೂ ಮುನಿರತ್ನ, ಆರ್.ಶಂಕರ್ ಹಾಗೂ ಎಂಟಿಬಿಗೆ ಸಚಿವ ಸ್ಥಾನ ಸಿಗಬೇಕಿದೆ, ಸಿಗುತ್ತೆ. ವಿಶ್ವನಾಥ್ ಅವರಿಗೂ ಸಿಗುತ್ತೆ ಎಂದರು.

    ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ, ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕೇಳೋದು ಶಾಸಕರ ಹಕ್ಕು. ಸಿಎಂ ಎಲ್ಲ ಶಾಸಕರ ಸಮಸ್ಯೆ ಆಲಿಸಿ ಆರ್ಥಿಕ ಸಂಕಷ್ಟದ ನಡುವೆ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಬಿಜೆಪಿ ಮೇಲೆ ಪ್ರೀತಿ ಹೆಚ್ಚಾಗಿದೆ. ಹೀಗಾಗಿ ನಮ್ಮ ಮೇಲೆ ಸಾಫ್ಟ್ ಕಾರ್ನರ್ ತೋರಿಸುತ್ತಿದ್ದಾರೆ. ಜೆಡಿಎಸ್ ಸಾಫ್ಟ್ ಕಾರ್ನರ್‍ನ್ನು ನಾವು ಸ್ವಾಗತ ಮಾಡುತ್ತೇವೆ. ಬಿಜೆಪಿಗೆ ಸಾಕಷ್ಟು ಸಂಖ್ಯಾಬಲವಿದೆ. ಹೊಂದಾಣಿಕೆ ಅವಶ್ಯಕತೆ ಇಲ್ಲ ಎಂದರು.

    ಬಜೆಟ್ ಮೇಲೆ ನಮ್ಮ ನಿರೀಕ್ಷೆ ಹೆಚ್ಚಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಂಡರೆ 5 ಲಕ್ಷ ಕೊಡಬೇಕು. ಹಾವು ಕಚ್ಚಿ ಸಾವಿಗಿಡಾದರೆ ನೀಡುವ ಪರಿಹಾರವನ್ನು 2 ಲಕ್ಷದಿಂದ 5 ಲಕ್ಷಕ್ಕೆ ಏರಿಸಬೇಕು. ಕೃಷಿ ವಿಶ್ವವಿದ್ಯಾಲಯದಲ್ಲಿ ರೈತರ ಮಕ್ಕಳಿಗಿರುವ ಮೀಸಲಾತಿಯನ್ನು ಶೇ.40ರಿಂದ 50ಕ್ಕೆ ಹೆಚ್ಚಿಸಲು ಮನವಿ ಮಾಡಿದ್ದೇನೆ ಎಂದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಅಬಕಾರಿ ಸಚಿವ ನಾಗೇಶ್, ಸಚಿವ ಸಂಪುಟ ವಿಸ್ತರಣೆ ವೇಳೆ ಸಿಎಂ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ, ನಾಳೆ ನಾಳೆ ಎಂದು ಮುಂದೂಡಲಾಗುತ್ತಿದೆ. ಸಂಕ್ರಾಂತಿ ಮುಗಿದ ಬಳಿಕ ಸಂಪುಟ ವಿಸ್ತರಣೆ ಆಗುವುದರಲ್ಲಿ ಅನುಮಾನವಿಲ್ಲ. ಖಾತೆ ಬದಲಾವಣೆಯಾದರೆ ಇಂಧನ ಖಾತೆ ಕೊಡಲಿ. ಎಲ್ಲರಿಗಿಂತ ಚನ್ನಾಗಿ ನಾನು ನಿಭಾಯಿಸಬಲ್ಲೆ. ಇಂಧನ ಇಲಾಖೆಯಲ್ಲಿ ನನಗೆ 34 ವರ್ಷ ಅನುಭವವಿದೆ. ನನ್ನ ಹಿನ್ನೆಲೆ, ಟ್ರ್ಯಾಕ್ ರೆಕಾರ್ಡ್ ಅಧ್ಯಯನ ಮಾಡಿ ಸಿಎಂ ಇಂಧನ ಖಾತೆ ಕೊಡಲಿ. ಈ ಹಿಂದೆ ಕಾರಣಾಂತರಗಳಿಂದ ನನಗೆ ಇಂಧನ ಖಾತೆ ತಪ್ಪಿತು. ಸಿಎಂಗೂ ನನ್ನ ಬಗ್ಗೆ ಗೊತ್ತಿದೆ ಕೊಟ್ಟರೆ ನಿಭಾಯಿಸುವೆ ಎಂದರು.

  • ನಿಷೇಧಾಜ್ಞೆಯಿಂದಾಗಿ ಹೊಸ ವರ್ಷಕ್ಕೆ 40 ಕೋಟಿ ನಷ್ಟ: ಅಬಕಾರಿ ಸಚಿವ ನಾಗೇಶ್

    ನಿಷೇಧಾಜ್ಞೆಯಿಂದಾಗಿ ಹೊಸ ವರ್ಷಕ್ಕೆ 40 ಕೋಟಿ ನಷ್ಟ: ಅಬಕಾರಿ ಸಚಿವ ನಾಗೇಶ್

    ಕೋಲಾರ: ಕೊರೊನಾ ಹಾಗೂ ಸರ್ಕಾರದ ನಿಷೇಧಾಜ್ಞೆಯಿಂದ ಅಬಕಾರಿ ಇಲಾಖೆಗೆ ಹೊಸ ವರ್ಷದಂದು ಸುಮಾರು 40 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ತಿಳಿಸಿದರು.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಷೇಧಾಜ್ಞೆಯಿಂದಾಗಿ ಹೊಸ ವರ್ಷದಂದು ಅಬಕಾರಿ ಇಲಾಖೆಗೆ ಕೇವಲ 161 ಕೋಟಿ ರೂಪಾಯಿ ಆದಾಯ ಬಂದಿದೆ. ಕಳೆದ ಬಾರಿ ಹೊಸ ವರ್ಷಕ್ಕೆ 200 ಕೋಟಿ ರೂಪಾಯಿ ಆದಾಯ ಬಂದಿತ್ತು. ಆದರೆ ಈ ಬಾರಿ ಹಲವು ಗೊಂದಲಗಳಿಂದ ಸುಮಾರು 40 ಕೋಟಿ ರೂಪಾಯಿಯಷ್ಟು ನಷ್ಟ ಆಗಿದೆ ಎಂದು ಅವರು ಹೇಳಿದರು.

    ಈ ನಷ್ಟಕ್ಕೆ ಸರ್ಕಾರದ ನಿಷೇಧಾಜ್ಞೆ ಜಾರಿ ಮಾಡದ್ದೇ ಕಾರಣ. ಜಿಲ್ಲೆಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿದ್ದಾರೆ, ಹಾಗಾಗಿ ಜಿಲ್ಲೆಯ ಹಲವು ವಿಚಾರಗಳನ್ನ ಚರ್ಚೆ ಮಾಡುವ ನಿಟ್ಟಿನಲ್ಲಿ ಎಲ್ಲ ಶಾಸಕರನ್ನು ಕರೆದು ವಿಚಾರ ಮಾಡುವೆ. ಅಲ್ಲದೆ ಜಿಲ್ಲೆಗೆ ಮೆಡಿಕಲ್ ಕಾಲೇಜು ನೀಡುವುದು ಹಾಗೂ ರಿಂಗ್ ರಸ್ತೆ ಮಾಡುವಂತೆ ಮನವಿ ಮಾಡುವುದಾಗಿ ಅವರು ಹೇಳಿದರು.

  • ಯಡಿಯೂರಪ್ಪರನ್ನು ಕೈ ಬಿಟ್ಟರೆ ಕಾಂಗ್ರೆಸ್, ದಳದವರು ಅಧಿಕಾರಕ್ಕೆ ಬರ್ತಾರೆ: ನಾಗೇಶ್

    ಯಡಿಯೂರಪ್ಪರನ್ನು ಕೈ ಬಿಟ್ಟರೆ ಕಾಂಗ್ರೆಸ್, ದಳದವರು ಅಧಿಕಾರಕ್ಕೆ ಬರ್ತಾರೆ: ನಾಗೇಶ್

    – ಯತ್ನಾಳ್ ಆಗಾಗ ಈ ರೀತಿ ಹೇಳುವುದು ಸಹಜ

    ಕೋಲಾರ: ಯಡಿಯೂರಪ್ಪ ಇಲ್ಲದೆ ಬಿಜೆಪಿಗೆ ಅಸ್ಥಿತ್ವವಿಲ್ಲ, ಅವರು ಪೂರ್ಣಾವಧಿ ಸಿಎಂ ಅಗಿ ಕಾರ್ಯನಿರ್ವಹಿಸುತ್ತಾರೆ ಎಂದು ಕೋಲಾರದಲ್ಲಿ ಅಬಕಾರಿ ಸಚಿವ ಎಚ್ ನಾಗೇಶ್ ಹೇಳಿದ್ದಾರೆ.

    ಇಂದು ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಅವರು ಈ ರೀತಿ ಹೇಳಿಕೆ ನೀಡುವುದು ತಪ್ಪು ಕೋವಿಡ್ ಸಂದರ್ಭದಲ್ಲಿ ಜನರ ಪ್ರಾಣ ಹೋಗವಂತಹ ವೇಳೆ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಜೊತೆಗೆ ಯತ್ನಾಳ್ ಅವರು ಆಗಾಗ ಈ ರೀತಿ ಹೇಳಿಕೆ ನೀಡುವುದು ಸಹಜ. ಅದೊಂದು ಅವರಿಗೆ ಅಭ್ಯಾಸವಾಗಿದೆ ಎಂದು ತಿಳಿಸಿದರು.

    ಅಲ್ಲದೆ ಯಡಿಯೂರಪ್ಪ ಅವರು ಒಂಟಿ ಸಲಗದಂತೆ ಓಡಾಡಿ, ಬಿಜೆಪಿಯನ್ನು ಕಟ್ಟಿ ಬೆಳೆಸಿರುವಂತಹವರು. ಹೀಗಾಗಿ ಯಡಿಯೂರಪ್ಪ ಇಲ್ಲದೆ ಬಿಜೆಪಿಗೆ ಅಸ್ಥಿತ್ವವಿಲ್ಲ. ಜೊತೆಗೆ ಉಳಿಗಾಲವಿಲ್ಲ. ಯಡಿಯೂರಪ್ಪ ಅವರನ್ನು ಕೈ ಬಿಟ್ಟರೆ ಕಾಂಗ್ರೆಸ್ ಹಾಗೂ ದಳದವರು ಅಧಿಕಾರಕ್ಕೆ ಬರುತ್ತಾರೆ. ಹೀಗಾಗಿ ಯತ್ನಾಳ್ ಈ ರೀತಿ ಹೇಳಿಕೆ ನೀಡುವುದು ತಪ್ಪು. ಬಿಜೆಪಿ ಶಿಸ್ತಿನ ಪಕ್ಷ, ಹೀಗಾಗಿ ಯತ್ನಾಳ್ ವಿರುದ್ಧ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿತ್ತೇವೆ ಎಂದರು.

  • ವಿಶ್ವನಾಥ್ ತಾಳ್ಮೆಯಿಂದ ಇದ್ದರೆ ಮುಂದೆ ಒಳ್ಳೆಯ ಭವಿಷ್ಯವಿದೆ: ನಾಗೇಶ್

    ವಿಶ್ವನಾಥ್ ತಾಳ್ಮೆಯಿಂದ ಇದ್ದರೆ ಮುಂದೆ ಒಳ್ಳೆಯ ಭವಿಷ್ಯವಿದೆ: ನಾಗೇಶ್

    ಕೋಲಾರ: ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡುವ ವಿಚಾರದಲ್ಲಿ ವಿಶ್ವನಾಥ್ ಅವರನ್ನು ಬಿಜೆಪಿ ಹೈಕಮಾಂಡ್ ಕೈಬಿಟ್ಟಿರುವುದು ಬೇಸರ ತಂದಿದೆ. ಆದರೆ ಅವರು ತಾಳ್ಮೆಯಿಂದ ಇದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಭವಿಷ್ಯವಿದೆ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ಹೇಳಿದ್ದಾರೆ.

    ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಸಂಬಂದ ಅಧಿಕಾರಿಗಲ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಸಮಯ ರಾಜಕೀಯದಲ್ಲಿ ಏರುಪೇರುಗಳು ಆಗುತ್ತವೆ. ಅದು ಒಬ್ಬರ ನಿರ್ಧಾರ ಅಲ್ಲ. ಮುಖ್ಯಮಂತ್ರಿಗಳಿಗೂ ವಿಶ್ವನಾಥ್ ಅವರಿಗೆ ಟಿಕೆಟ್ ಕೊಡಲು ಒಲವಿತ್ತು, ಆದ್ರೆ ಹೈ ಕಮಾಂಡ್ ಕೈ ಬಿಟ್ಟಿರುವುದು ಬೇಸರ ತಂದಿದೆ ಎಂದರು.

    ಕಾರಣಾಂತರಗಳಿಂದ ವಿಶ್ವನಾಥ್ ಅವರ ಹೆಸರನ್ನ ಕೈ ಬಿಡಲಾಗಿದೆ. ಅವರು ಒಂದು ಪಕ್ಷದ ಅಧ್ಯಕ್ಷರಾಗಿದ್ದವರು, ಅವರ ಆಗಮನ ಬಿಜೆಪಿಗೆ ಆನೆ ಬಲ ಬಂದಂತಾಗಿತ್ತು. ಆದರೆ ಸ್ವಲ್ಪ ತಾಳ್ಮೆಯಿಂದ ಇದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಭವಿಷ್ಯ ಇದೆ ಎಂದರು.

    ಪಕ್ಷಕ್ಕೆ ದುಡಿದವರನ್ನ ಬಿಟ್ಟು, ಮೂಲ ಬಿಜೆಪಿಗರಿಗೆ ಇಬ್ಬರಿಗೆ ಟಿಕೆಟ್ ನೀಡುವ ಮೂಲಕ ಕಾಂಪ್ರಮೈಸಿಂಗ್ ಫಾರ್ಮುಲಾ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವರ ಬಳಿ ಮಾತನಾಡಿ ಮನವೊಲಿಸಲು ಪ್ರಯತ್ನ ಮಾಡುವೆ ಎಂದು ನಾಗೇಶ್ ತಿಳಿಸಿದರು.

    ಬುಧವಾರ ತಡರಾತ್ರಿ ಬಿಜೆಪಿ ತನ್ನ ಮೇಲ್ಮನೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಹೆಚ್. ವಿಶ್ವನಾಥ್ ಬಿಜೆಪಿ ಬಿಗ್ ಶಾಕ್ ನೀಡಿದೆ. ಎಂಟಿಬಿ ನಾಗರಾಜ್, ಆರ್.ಶಂಕರ್, ಸುನಿಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹ ನಾಯಕ್ ಈ ನಾಲ್ವರಿಗೆ ಟಿಕೆಟ್ ಸಿಕ್ಕಿದೆ. ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಎಂಟಿಬಿ ನಾಗರಾಜ್, ಆರ್.ಶಂಕರ್ ಗೆ ನೀಡಿದ ಮಾತನ್ನು ಸಿಎಂ ಯಡಿಯೂರಪ್ಪ ಉಳಿಸಿಕೊಂಡಿದ್ದಾರೆ. ಆದರೆ ವಿಶ್ವನಾಥ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಸಿಎಂ ವಿಫಲವಾಗಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

  • ಮದ್ಯದಗಂಡಿ ತೆರೆಯಲು ಪ್ರಧಾನಿ ಮೋದಿ ನಿರಾಕರಿಸಿದ್ದಾರೆ: ಎಚ್.ನಾಗೇಶ್

    ಮದ್ಯದಗಂಡಿ ತೆರೆಯಲು ಪ್ರಧಾನಿ ಮೋದಿ ನಿರಾಕರಿಸಿದ್ದಾರೆ: ಎಚ್.ನಾಗೇಶ್

    ಕೋಲಾರ: ಮೂರನೇ ತಾರೀಖಿನಿಂದ ಮದ್ಯದಂಗಡಿ ತೆರೆಯುವ ಚಿಂತನೆ ಇತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೆ ಒಪ್ಪಿಲ್ಲ. ಹೀಗಾಗಿ ಸದ್ಯಕ್ಕೆ ಮದ್ಯದಂಗಡಿ ತೆರೆಯೋದು ಸಾಧ್ಯವಿಲ್ಲ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಂದರ್ಭದಲ್ಲಿ ಕೆಲ ರಾಜ್ಯಗಳ ಸಿಎಂಗಳು ಈ ಕುರಿತು ಕೇಳಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯವರು ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ ನಾವು ಮೂರನೇ ತಾರೀಖಿನಿಂದ ಮದ್ಯದಂಗಡಿ ತೆರೆಯುವ ಚಿಂತನೆ ಇದ್ದರೂ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಮೋದಿ ಅವರ ನಿರ್ಧಾರದ ವರೆಗೂ ಮದ್ಯದಂಗಡಿ ತೆರಯಲು ಅವಕಾಶ ಇಲ್ಲ ಎಂದರು.

    ಮದ್ಯ ವ್ಯಸದನಿಗಳು ಮಾನಸಿಕವಾಗಿ ಕುಗ್ಗದೆ ವೈದ್ಯರ ಸಲಹೆ ಹಾಗೂ ಚಿಕಿತ್ಸೆ ಪಡೆಯಲು ಸೂಚನೆ ನೀಡಿದ್ದೇನೆ ಅದರಂತೆ ಒಂದಷ್ಟು ಜನ ನನ್ನ ಮನವಿಯನ್ನು ಪಾಲಿಸುತ್ತಿದ್ದಾರೆ, ಅದು ಖುಷಿ ತಂದಿದೆ. ನಮ್ಮದು ಗಡಿ ಜಿಲ್ಲೆಯಾದ್ದರಿಂದ ಗ್ರೀನ್ ಝೋನ್‍ನಲ್ಲಿದೆ ಎಂದ ಮಾತ್ರಕ್ಕೆ ಸಡಿಲಿಕೆ ನೀಡಲು ಸಾಧ್ಯವಿಲ್ಲ. ಇದರಿಂದ ಅಕ್ಕಪಕ್ಕದ ಜಿಲ್ಲೆಗಳವರು ಹಾಗೂ ಹೊರ ರಾಜ್ಯದವರು ನುಸುಳುತ್ತಾರೆ. ಹೀಗಾಗಿ ಕೆಲ ನಿರ್ಬಂಧಗಳನ್ನು ಹೇರಲಾಗುತ್ತದೆ ಎಂದರು.

    ಗ್ರೀನ್ ಝೋನ್‍ನಲ್ಲಿರುವುದರಿಂದ ಕೋಲಾರದಲ್ಲಿ ಸ್ವಲ್ಪ ಮಟ್ಟಿಗೆ ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದೆ. ಕಾರ್ಖಾನೆಗಳು ನಿಬಂಧನೆಗಳಿಗೆ ಒಳಪಟ್ಟು ತೆರೆಯಲು ಅವಕಾಶ ಮಾಡಿಕೊಡಲಾಗುತ್ತಿದೆ. ಕೈಗಾರಿಕೆಗಳಲ್ಲಿ ಅರ್ಧದಷ್ಟು ಸಿಬ್ಬಂದಿ ಇಟ್ಟುಕೊಂಡು ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಾರ್ಮಿಕರಿಗೆ ಸ್ಥಳೀಯವಾಗಿ ಮೂಲಭೂತ ಸೌಲಭ್ಯಗಳನ್ನು ಉದ್ಯಮದಾರರೇ ಒದಗಿಸಬೇಕಾಗಿದೆ. ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದು, ಅದರಲ್ಲಿ ಕೆಲವು ತಿದ್ದುಪಡಿ ತರಲು ಚಿಂತಿಸಲಾಗಿದೆ. ದೊಂಬಿಯಾಗದಂತೆ ಪ್ರತಿ ದಿನ ಆಲ್ಟರ್ ನೆಟ್ ಶಾಪ್‍ಗಳನ್ನು ತೆರೆಯುವಂತೆ ನಿಯಮ ತರಲಾಗುತ್ತಿದೆ. ಯಾವುದೇ ಕಾರಣಕ್ಕೂ ವಾಹನ ಸಂಚಾರಕ್ಕೆ ಅವಕಾಶ ಇಲ್ಲ. ಹೋಟೆಲ್‍ಗಳಲ್ಲಿ ಕೇವಲ ಪಾರ್ಸೆಲ್‍ಗೆ ಮಾತ್ರ ಅವಕಾಶವಿದೆ, ಉಳಿದಂತೆ ಬೇಕರಿ, ಮಟನ್, ಫಿಶ್ ಅಂಗಡಿಗಳಿಗೆ ಅವಕಾಶವಿದೆ ಎಂದು ತಿಳಿಸಿದರು.

  • ಇನ್ನೂ ಸ್ವಲ್ಪ ಕಾಯಿರಿ, ಎಣ್ಣೆಗಿಂತ ಪ್ರಾಣ ಮುಖ್ಯ: ಸಚಿವ ನಾಗೇಶ್

    ಇನ್ನೂ ಸ್ವಲ್ಪ ಕಾಯಿರಿ, ಎಣ್ಣೆಗಿಂತ ಪ್ರಾಣ ಮುಖ್ಯ: ಸಚಿವ ನಾಗೇಶ್

    ಕೋಲಾರ: ರಾಜ್ಯದಲ್ಲಿ ಲಾಕ್ ಡೌನ್ ನಡುವೆ ಮದ್ಯ ಮಾರಾಟ ಮಾಡಬೇಕಾ, ಬೇಡವಾ ಎನ್ನವ ಗೊಂದಲ ರಾಜ್ಯ ಸರ್ಕಾರಕ್ಕೆ ಎದುರಾಗಿದೆ. ಇನ್ನೊಂದೆಡೆ ಮದ್ಯದಂಗಡಿಗಳು ಓಪನ್ ಆಗುತ್ತವೆ ಎಂದು ಕಾತುರದಿಂದ ಕಾಯುತ್ತಿದ್ದ ಮದ್ಯಪ್ರಿಯರು ಚಿಂತೆಗೀಡಾಗಿದ್ದಾರೆ. ಇದೆಲ್ಲದರ ಮಧ್ಯೆ ಇದೀಗ ಅಬಕಾರಿ ಸಚಿವ ಎಚ್.ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.

    ಬೆಳಗ್ಗೆ, ಸಂಜೆ ವೇಳೆಗೆ ಮದ್ಯ ಮಾರಾಟ ಮಾಡುವ ಸಿದ್ಧತೆ ನಡೆದಿತ್ತು. ಆದರೆ ಮದ್ಯಾಹ್ನದ ಹೊತ್ತಿಗೆ ಅಬಕಾರಿ ಸಚಿವ ನಾಗೇಶ್ ಮಾತು ಬದಲಿಸಿದ್ದಾರೆ. ಬೆಳಗ್ಗೆ ಅಂಬೇಡ್ಕರ್ ಜಯಂತಿ ವೇಳೆ ಸಂಜೆ ವೇಳೆ ಮದ್ಯದಂಗಡಿಗಳನ್ನು ತೆರಯಲಾಗುವುದು ಎಂದಿದ್ದ ನಾಗೇಶ್, ಮಧ್ಯಾಹ್ನವಾಗುತ್ತಿದ್ದಂತೆ ಪ್ರಧಾನಿ ಮೋದಿ ಭಾಷಣದ ನಂತರ ತಮ್ಮ ವರಸೆ ಬದಲು ಮಾಡಿದ್ದಾರೆ.

    ಇದೀಗ ಏಪ್ರಿಲ್ 20ರ ವರೆಗೆ ವಿಸ್ತರಿಸುವ ಚಿಂತನೆ ನಡೆಸಿದ್ದಾರೆ. ಈ ಕುರಿತು ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾಗೇಶ್, ಮದ್ಯದಂಗಡಿ ತೆರೆದರೆ ಜನಸಂದಣಿ ಹೆಚ್ಚಾಗುತ್ತದೆ. ಏಪ್ರಿಲ್ 20ರ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು. ಪ್ರಧಾನಿ ಮೋದಿ ಲಾಕ್‍ಡೌನ್‍ನ್ನು ಕಟ್ಟುನಿಟ್ಟಾಗಿ ಮುಂದುವರೆಸಿ ಎಂದಿದ್ದಾರೆ. ಹೀಗಾಗಿ ಸರ್ಕಾರವನ್ನು ಒತ್ತಾಯ ಮಾಡಲು ಅಗುವುದಿಲ್ಲ. ಇಷ್ಟು ದಿನ ಕಾದಿದ್ದೀರಿ, ಇನ್ನು ಸ್ವಲ್ಪ ದಿನ ಕಾಯಿರಿ ಎಂದು ಸಲೀಸಾಗಿ ಮದ್ಯ ಪ್ರಿಯರಿಗೆ ಶಾಕ್ ನೀಡಿದ್ದಾರೆ. ಅಲ್ಲದೆ ಇನ್ನು ಸ್ವಲ್ಪ ದಿನ ಕಾಯಿರಿ ಎಣ್ಣೆಗಿಂತ ಜನರ ಪ್ರಾಣ ಮುಖ್ಯವಾಗಿದೆ ಎಂದಿದ್ದಾರೆ.

  • ಬೆಂಗ್ಳೂರಿನಲ್ಲಿ ನೀರಾ ಮಾರಾಟದ ಮಾಹಿತಿಯೇ ನನಗಿಲ್ಲ- ಎಚ್.ನಾಗೇಶ್

    ಬೆಂಗ್ಳೂರಿನಲ್ಲಿ ನೀರಾ ಮಾರಾಟದ ಮಾಹಿತಿಯೇ ನನಗಿಲ್ಲ- ಎಚ್.ನಾಗೇಶ್

    ಉಡುಪಿ: ಬೆಂಗಳೂರಿನಲ್ಲಿ ಹತ್ತಕ್ಕೂ ಹಚ್ಚು ಪ್ರದೇಶಗಳಲ್ಲಿ ನೀರಾ ಬಾರ್‌ಗಳಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ಅನುಮತಿ ನೀಡಿದ್ದು ಅಬಕಾರಿ ಸಚಿವ ಎಚ್.ನಾಗೇಶ್ ಅವರಿಗೆ ಈ ಮಾಹಿತಿಯೇ ಗೊತ್ತಿಲ್ವಂತೆ.

    ರಾಜಧಾನಿಯ ನೀರಾ ಬಾರ್ ಬಗ್ಗೆ ಶನಿವಾರ ಉಡುಪಿಯಲ್ಲಿ ಪ್ರಶ್ನಿಸುತ್ತಿದ್ದಂತೆ ಅಬಕಾರಿ ಸಚಿವ ನಾಗೇಶ್ ಅವರು ಅಚ್ಚರಿಗೊಂಡರು. ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಅಧಿಕಾರಿಗಳು ಅನುಮತಿ ನೀಡಿರಬೇಕು. ಬೆಂಗಳೂರು ತಲುಪಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸುತ್ತೇನೆ ಎಂದರು.

    ತೆಂಗು ಬೆಳೆಗಾರರಿಗೆ ಉತ್ತೇಜನ ನೀಡಬೇಕು ಎಂಬ ನಿಟ್ಟಿನಲ್ಲಿ ರಾಜಧಾನಿಯ ಹತ್ತಕ್ಕೂ ಅಧಿಕ ಕಡೆಗಳಲ್ಲಿ ನೀರಾ ಬಾರ್ ತೆರೆಯಲು ಇಲಾಖೆ ಅನುಮತಿ ನೀಡಿದ್ದಾರೆ. ಆದರೆ ಇಲಾಖೆಯ ಈ ಬಗ್ಗೆ ಬೆಂಗಳೂರಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ಪಡೆದು ಮಾಧ್ಯಮಗಳಿಗೆ ಬೆಂಗಳೂರಿನಲ್ಲೇ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದರು.

    ಸಚಿವರಿಗೆ ಮಾಹಿತಿಯೇ ನೀಡದೆ ಅಧಿಕಾರಿಗಳು ಪರವಾನಿಗೆ ಕೊಟ್ರಾ? ರೈತರನ್ನು ಮುಂದಿಟ್ಟು ರಾಜಧಾನಿಯ ನಾಗರೀಕರಿಗೆ ನನೀರಾ ಕುಡಿಸಲು ಹೊರಟ್ರಾ ಎಂಬೂದು ಸದ್ಯ ಇರುವ ಪ್ರಶ್ನೆ.

  • ಎಡವಟ್ಟು `ಎಣ್ಣೆ’ ಸಚಿವರಿಗೆ ಮಹಿಳೆಯರಿಂದ ಸ್ಪೆಷಲ್ ಗಿಫ್ಟ್ ರವಾನೆ

    ಎಡವಟ್ಟು `ಎಣ್ಣೆ’ ಸಚಿವರಿಗೆ ಮಹಿಳೆಯರಿಂದ ಸ್ಪೆಷಲ್ ಗಿಫ್ಟ್ ರವಾನೆ

    ಬೆಂಗಳೂರು: ಮನೆ ಮನೆಗೆ ಎಣ್ಣೆ ಪಾರ್ಸೆಲ್ ಮಾಡುವ ಚಿಂತನೆ ನಡೆಸಲಾಗಿದೆ ಎಂದು ಹೇಳಿ ಇಂದು ಸರ್ಕಾರದ ಮುಂದೆ ಆ ಪ್ರಸ್ತಾಪವೇ ಇಲ್ಲ ಎಂದ ಅಬಕಾರಿ ಸಚಿವ ಎಚ್ ನಾಗೇಶ್ ವಿರುದ್ಧ ಮಹಿಳೆಯರು ಕಿಡಿಕಾರಿದ್ದಾರೆ.

    ಮನೆಯಲ್ಲಿ ಕುಡ್ಕೊಂಡು ಇರಿ. ಮಿನಿಸ್ಟರ್ ಆಗೋಕೆ ತಾವು ಲಾಯಕ್ಕಲ್ಲ ಎಂದು ಕುರುಬರಹಳ್ಳಿ ಮಹಿಳಾ ಸಂಘಟನೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಬಕಾರಿ ಟಾರ್ಗೆಟ್ ಹೆಚ್ಚಳ ಮಾಡಿ ಪರೋಕ್ಷವಾಗಿ ಜನರನ್ನು ಮದ್ಯ ವ್ಯಸನಿಯನ್ನಾಗಿ ಮಾಡಲು ಸಚಿವ ನಾಗೇಶ್ ರೆಡಿಯಾಗಿದ್ದಾರೆ ಎಂದು ಸಿಟ್ಟಿಗೆದ್ದ ಮಹಿಳೆಯರು ಎಣ್ಣೆ ಬಾಟಲಿ ಪಾರ್ಸೆಲ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಮದ್ಯಪಾನ ಮುಕ್ತ ಕರ್ನಾಟಕದ ಕನಸು ನಾವು ಕಾಣುತ್ತಿದ್ದರೆ ಸಚಿವರು ಬಾಯಿಗೆ ಬಂದ ಹಾಗೆ ಮಾತಾನಾಡುತ್ತಿದ್ದಾರೆ. ಇವರ ಪತ್ನಿಯಾದರೂ ಕೊಂಚ ಬುದ್ಧಿ ಹೇಳಲಿ ಎಂದು ಸಂಘಟನಾ ಸದಸ್ಯರು ಕಿಡಿಕಾರಿದ್ದಾರೆ.

    ಮದ್ಯಪಾನ ನಿಷೇಧ ಮಾಡಬೇಕು ಎಂದು ಮಹಿಳೆಯರು ಹಾಗೂ ಕೆಲ ಸ್ವಾಮೀಜಿಗಳು ಒತ್ತಾಯ ಮಾಡುತ್ತಿದ್ದಾರೆ. ಅವರು ಒಳ್ಳೆಯ ದೃಷ್ಟಿಯಿಂದಲೇ ಹೇಳುತ್ತಾರೆ. ಆದರೆ ನಮ್ಮ ರಾಜ್ಯಕ್ಕೆ ಒಳ್ಳೆಯದಾಗಬೇಕಲ್ವ ಎಂದು ಸಚಿವರು ಪ್ರಶ್ನಿಸಿದ್ದರು. ಅಲ್ಲದೆ ಯಾರೋ ಕೆಲವು ಮಹಿಳೆಯರು ಹೇಳಿದ್ದಾರೆ ಎಂದು ಮದ್ಯ ನಿಷೇಧ ಮಾಡಲು ಸಾಧ್ಯವಿಲ್ಲ ಎಂದೂ ಹೇಳಿಕೆ ನೀಡಿದ್ದರು. ಸಚಿವರ ಈ ಹೇಳಿಕೆಯನ್ನು ಮಹಿಳಾ ಹೋರಾಟಗಾರ್ತಿಯರು ಖಂಡಿಸಿದ್ದಾರೆ.

    ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಸಚಿವರು, ಮನೆ ಮನೆಗೆ ಮದ್ಯ ಪಾರ್ಸೆಲ್ ಮಾಡುವ ಚಿಂತನೆಯನ್ನು ಸರ್ಕಾರ ನಡೆಸಿದೆ ಎಂದು ತಿಳಿಸಿದ್ದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆತ್ತ ಅಬಕಾರಿ ಸಚಿವರು ಇಂದು ಮತ್ತೆ ಸುದ್ದಿಗೋಷ್ಠಿ ಕರೆದು ಬಾಯಿ ತಪ್ಪಿನಿಂದ ಹಾಗೆ ಆಗಿದೆ. ಮನೆ ಮನೆಗೆ ಮದ್ಯ ಪೂರೈಕೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಹೇಳಿದ್ದಾರೆ.

  • ಡಿಕೆಶಿ ನನ್ನ ರಾಜಕೀಯ ಗುರು, ಅವರಿಗೆ ದೈವ ಶಕ್ತಿ ಇದೆ – ಎಚ್.ನಾಗೇಶ್

    ಡಿಕೆಶಿ ನನ್ನ ರಾಜಕೀಯ ಗುರು, ಅವರಿಗೆ ದೈವ ಶಕ್ತಿ ಇದೆ – ಎಚ್.ನಾಗೇಶ್

    ಕೋಲಾರ: ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರು ನನ್ನ ರಾಜಕೀಯ ಗುರುಗಳು ಅವರಿಗೆ ದೇವರು ಒಳ್ಳೆಯದು ಮಾಡುತ್ತಾನೆ. ಅವರಿಗೆ ದೈವ ಶಕ್ತಿ ಇದೆ ಎಂದು ಕೋಲಾರದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ.

    ನೂತನ ಸಚಿವರಾದ ನಂತರ ಕೋಲಾರದ ಮುಳಬಾಗಲಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ಎಲ್ಲಾ ದೇವರುಗಳ ಆಶೀರ್ವಾದ ಇದೆ. ಆ ದೈವ ಬಲದಿಂದ ಮುಂದೆ ಅವರಿಗೆ ಒಳ್ಳೆಯದಾಗುತ್ತದೆ ಎಂದು ಭವಿಷ್ಯ ನುಡಿದರು.

    ಡಿಕೆಶಿ ಅವರ ಮೇಲೆ ಇರುವ ಆರೋಪವನ್ನು ನಾನು ನಂಬುವುದಿಲ್ಲ. ವಿಚಾರಣೆ ಮುಗಿಯುವವರೆಗೂ ಊಹಾಪೋಹಗಳು ಇದ್ದೇ ಇರುತ್ತವೆ. ತನಿಖೆಯ ನಂತರ ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ಸಿಗುತ್ತದೆ. ಡಿ.ಕೆ.ಶಿವಕುಮಾರ್ ಅವರು ನನಗೆ ರಾಜಕೀಯ ಗುರುಗಳು, ದೇವರು ಜೊತೆಗೆ ಗಾಡ್ ಫಾದರ್ ಎಲ್ಲವೂ ಆಗಿದ್ದವರು. ಕಷ್ಟದಲ್ಲಿರುವಾಗ ಅವರ ಬಗ್ಗೆ ಟೀಕೆ ಮಾಡುವುದು ಸುಲಭ, ಅವರ ವೈಯುಕ್ತಿಕ ವಿಚಾರಗಳ ಕುರಿತು ಕಷ್ಟದಲ್ಲಿದ್ದಾಗ ಮಾತನಾಡಬಾರದು ಎಂದು ಹೇಳಿದರು.

    ಒಂದು ವೇಳೆ ಶಿವಕುಮಾರ್ ಅವರು ಜೈಲಿಗೆ ಹೋದರೆ ನಾನು ಏನು ಮಾಡುವುದಕ್ಕೆ ಆಗುವುದಿಲ್ಲ. ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಅಷ್ಟೇ ಎಂದರು. ಅಬಕಾರಿ ಇಲಾಖೆಯಲ್ಲಿ ಹೊಸ ಲೈಸೆನ್ಸ್ ಗಳಿಗೆ ಬಹಳ ಬೇಡಿಕೆ ಇದೆ, ಹೀಗಾಗಿ ಮತ್ತಷ್ಟು ಲೈಸೆನ್ಸ್ ಗಳನ್ನು ಕೊಡುವ ವಿಚಾರವನ್ನು ಮುಖ್ಯಮಂತ್ರಿಗಳ ಬಳಿ ಮಾತನಾಡಿ ತೀರ್ಮಾನ ತೆಗೆದುಕೊಳ್ಳುವೆ ಎಂದು ತಿಳಿಸಿದರು.

    ಅದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಆಡಳಿತ ವರ್ಗದಲ್ಲಿದ್ದ ನಾನು ನನ್ನ ಅನುಭವಗಳನ್ನು ಮುಖ್ಯಮಂತ್ರಿಗಳ ಬಳಿ ಹೇಳಿದ್ದೇನೆ ಎಂದ ಅವರು, ರಾಜ್ಯದಲ್ಲಿ ಕಳ್ಳಭಟ್ಟಿ, ಅಕ್ರಮ ಮದ್ಯ ಮಾರಾಟ ಸಂಪೂರ್ಣವಾಗಿ ನಿಲ್ಲಿಸುವಲ್ಲಿ ಕ್ರಮಕೈಗೊಳ್ಳುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಮುಳಬಾಗಿಲು ಪಟ್ಟಣದಲ್ಲಿ ನೂತರ ಪಶು ಆಸ್ಪತ್ರೆ ಕಟ್ಟಡ ಉದ್ಘಾಟನೆ, ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನಡೆಸಿದರು.