ಬೆಂಗಳೂರು: ಸಚಿವರಾಗುತ್ತಿದ್ದಂತೆಯೇ ಎಚ್.ಡಿ ರೇವಣ್ಣ ಆಪ್ತರಿಗೆ ಹಬ್ಬವೋ ಹಬ್ಬವಾಗಿದ್ದು, ಇದೀಗ ಲೋಕೋಪಯೋಗಿ ಇಲಾಖೆಯಲ್ಲಿ ರೇವಣ್ಣ ಅವರು ಹೇಳಿದ್ದೆ ಫೈನಲ್ ಆಗಿದೆ.
ಎಚ್.ಡಿ ರೇವಣ್ಣ ಅವರು ತಮ್ಮ ಆಪ್ತರಿಗೆ ಎರಡೆರಡು ಹುದ್ದೆ ದಯಪಾಲಿಸಿದ್ದಾರೆ. ಒಂದು ತಿಂಗಳ ಹಿಂದೆ ಪ್ರಮೋಷನ್ ಆದ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‍ಗೆ ಎರೆಡೆರಡು ಜವಾಬ್ದಾರಿ ಹೊರಿಸಲಾಗಿದೆ ಎನ್ನುವ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.
ತಮ್ಮ ಆಪ್ತ ಸಹಾಯಕ ಎಂಜಿನಿಯರ್ ಎ.ಎಂ.ಮಾಲತೀಶ್‍ಗೆ ರೇವಣ್ಣ ಎರೆಡೆರಡು ಹುದ್ದೆ ನೀಡಿದ್ದಾರೆ. ಲೋಕೋಪಯೋಗಿ ನಿರ್ಮಾಣ ವಿಭಾಗದ ಜೊತೆ ವಿಧಾನಸೌಧ, ವಿಕಾಸಸೌಧ, ಶಾಸಕರ ಭವನದ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ಸಿವಿ ನಾಗೇಂದ್ರರಿಂದ ತೆರವಾದ ಜಾಗಕ್ಕೆ ಮಾಲತೇಶ್ ಅವರನ್ನು ರೇವಣ್ಣ ನೇಮಿಸಿದ್ದಾರೆ ಎನ್ನಲಾಗಿದೆ.
ಕಳೆದ ತಿಂಗಳಷ್ಟೆ ಮಾಲತೀಶ್ ಗೆ ಪ್ರಮೋಷನ್ ಆಗಿತ್ತು. ಇದೀಗ ಅನುಭವ ಇಲ್ಲದೇ ಇದ್ರು ಮಾಲತೇಶ್ ಗೆ ಎರೆಡೆರಡು ಜವಾಬ್ದಾರಿ ನೀಡಿರುವುದು ಚರ್ಚೆಗೆ ಒಳಗಾಗಿದೆ.
ಬೆಂಗಳೂರು: ಮುಜರಾಯಿ ಇಲಾಖೆಯಲ್ಲಿ ಈಗ ಇಬ್ಬರು ಮಿನಿಸ್ಟರ್. ಕೆಲವೊಮ್ಮೆ ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿಗೆ ನಮ್ ಮಿನಿಸ್ಟರ್ ಯಾರಪ್ಪ ಅನ್ನೋ ಕನ್‍ಫ್ಯೂಶನ್ ಶುರುವಾಗಿದೆ ಎಂದು ಹೇಳಲಾಗುತ್ತಿದೆ.
ಹೌದು. ಸಚಿವ ರಾಜಶೇಖರ್ ಪಾಟೀಲ್ ಅವರಿಗಿಂತ ಮುಜರಾಯಿ ಇಲಾಖೆಯ ಬಗ್ಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರಂತೆ. ಅಷ್ಟೇ ಅಲ್ಲದೇ ಎಚ್.ಡಿ.ರೇವಣ್ಣ ಮುಜರಾಯಿ ಸಚಿವರಗಿಂತ ಮೊದಲೇ ಅಧಿಕಾರಿಗಳ ಅನೌಪಚಾರಿಕ ಮೀಟಿಂಗ್ ಬೇರೆ ಮಾಡಿದ್ದಾರಂತೆ. ಎಲ್ಲಾ ದೇವಾಲಯದ ಆದಾಯದ ವಿವರ, ಅಲ್ಲಿನ ಅರ್ಚಕರಿಗೆ ಕೊಡುತ್ತಿರುವ ವೇತನದ ಬಗ್ಗೆ ಲಿಸ್ಟ್ ತರುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ.
ಎಲ್ಲ ನಾಯಕರಿಗಿಂತ ಸ್ವಲ್ಪ ಹೆಚ್ಚು ದೈವ ಭಕ್ತರಾಗಿರುವ ರೇವಣ್ಣ, ಕೆಲ ಆಪ್ತ ಮುಜರಾಯಿ ಅರ್ಚಕರ ವೇತನ ಹೆಚ್ಚಿಸಲು ಜೊತೆಗೆ ಹಾಸನ ಕಡೆಯ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಪಡೆಯೋಕೆ ಹೀಗೆಲ್ಲ ಕೆಲಸ ಮಾಡುತ್ತಿದ್ದಾರೆ ಅನ್ನೋ ಗುಸು ಗುಸು ಸುದ್ದಿಯೂ ಹರಿದಾಡುತ್ತಿದೆ. ಎಲ್ಲರ ಲಿಸ್ಟ್ ಹಿಡ್ಕೊಂಡು ಬನ್ನಿ ಮತ್ತೆ ಸಭೆ ಮಾಡ್ತೀನಿ ಅಂತಾ ಅಧಿಕಾರಿಗಳಿಗೆ ಎಚ್.ಡಿ.ರೇವಣ್ಣ ಸೂಚನೆ ನೀಡಿದ್ದಾರೆ ಅಂತ ಮುಜರಾಯಿ ಉನ್ನತ ಇಲಾಖೆಯ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಹಾಸನ: ಅನೇಕ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜೀವನದಿ ಹೇಮಾವತಿ ಜಲಾಶಯ ಭರ್ತಿಯಾಗಿದ್ದು, ಲೋಕೋಪಯೋಗಿ ಸಚಿವ ರೇವಣ್ಣ ದಂಪತಿಯಿಂದ ವಿಶೇಷ ಪೂಜೆ ನೆರವೇರಿದೆ.
ಸತತ ನಾಲ್ಕು ವರ್ಷಗಳಿಂದ ಗೊರೂರಿನಲ್ಲಿರುವ ಹೇಮಾವತಿ ನದಿ ತುಂಬಿರಲಿಲ್ಲ. ಆದರೆ ಮಳೆಯಿಂದಾಗಿ ಹೇಮಾವತಿ ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಎಚ್.ಡಿ. ರೇವಣ್ಣ ದಂಪತಿ ವಿಶೇಷ ಪೂಜೆ ಮಾಡಿದ್ದಾರೆ. ಇದನ್ನೂ ಓದಿ: ಸತತ 4 ವರ್ಷಗಳ ನಂತರ ಹೇಮಾವತಿ ಭರ್ತಿ
ಹೇಮಾವತಿ ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶಯದ ಕ್ರಸ್ಟ್ ಗೇಟ್ ಗಳ ಮೂಲಕ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಹೇಮಾವತಿ ನದಿ ಪಾತ್ರದಲ್ಲಿರುವ ಜನರಿಗೆ ಎಚ್ಚರಿಕೆ ನೀಡಲಾಗಿದೆ. ನಾಲ್ಕು ವರ್ಷಗಳ ನಂತರ ಜಲಾಶಯದಿಂದ ನೀರು ಹರಿಯುತ್ತಿದ್ದು, ಜಲಧಾರೆ ನೋಡಲು ಜನರು ಮುಗಿಬಿದ್ದಿದ್ದಾರೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2,922 ಅಡಿಗಳಾಗಿದ್ದು, ಈಗ ನೀರಿನ ಮಟ್ಟ 2,919.37 ಅಡಿ ಇದೆ. ಜಲಾಶಯದಲ್ಲಿ 24,743 ಕ್ಯೂಸೆಕ್ ಒಳಹರಿವು ಇದೆ.
ಬೆಂಗಳೂರು: ಆಷಾಢ ಮಾಸ ನಿಮಗೆ ಮಾತ್ರ, ನಮಗೆ ಏನು ಇಲ್ಲ. ಈಗಲೇ ನಿಗಮ ಮಂಡಳಿ ನೇಮಕಾತಿ ಆಗಬೇಕು ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಪಟ್ಟು ಹಿಡಿದಿದ್ದಾರೆ.
ಶಾಸಕರಿಗೆ ಸಬೂಬು ಹೇಳಲು ನಮ್ಮಿಂದ ಆಗುತ್ತಿಲ್ಲ. ಹೀಗಾಗಿ ಈ ಮೊದಲೇ ನಿರ್ಧರಿಸಿದಂತೆ ನಿಗಮ ಮಂಡಳಿಯ ಒಟ್ಟು 30 ಸ್ಥಾನಗಳಲ್ಲಿ ಕಾಂಗ್ರೆಸ್ಸಿಗೆ 20 ಹಾಗೂ ಜೆಡಿಎಸ್‍ಗೆ 10 ಸ್ಥಾನ ಹಂಚಿಕೆಯಾಗಬೇಕು. ನೇಮಕ ಪ್ರಕ್ರಿಯೆ ಈಗಲೇ ಆಗಬೇಕು ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಒತ್ತಾಯಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ನಿಗಮ ಮಂಡಳಿ ನೇಮಕದಿಂದ ಮುನಿಸಿಕೊಂಡಿರುವ ಕಾಂಗ್ರೆಸ್ ಶಾಸಕರನ್ನು ಸಮಾಧಾನ ಪಡಿಸಲು ಸಿದ್ದರಾಮಯ್ಯ ಅವರು ನಿರ್ಧರಿಸಿದ್ದಾರೆ. ಹೀಗಾಗಿ ಆಷಾಢದಲ್ಲಿಯೇ ಕಾಂಗ್ರೆಸ್ ಶಾಸಕರಿಗೆ ಬಂಪರ್ ಗಿಫ್ಟ್ ಸಿಗುವ ಸಾಧ್ಯತೆ ಇದೆ.
ಆಷಾಢ ಮುಗಿಯುವವರೆಗೆ ಯಾವುದೇ ನೇಮಕಾತಿ ಬೇಡ ಎಂದು ದೇವೇಗೌಡ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಹೇಳಿದ್ದರು. ಆದರೆ ಈಗ ಸಿದ್ದರಾಮಯ್ಯ ಅವರು ಪಟ್ಟು ಹಿಡಿದಿದ್ದರಿಂದ ಸಮ್ಮಿಶ್ರ ಸರ್ಕಾರಕ್ಕೆ ಮತ್ತೊಂದು ಸವಾಲು ಎದುರಾಗಿದೆ.
ಬೆಂಗಳೂರು: ಬೆಂಗಳೂರಲ್ಲಿ ಮನೆ ಇದ್ರೂ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣನವರು ಪ್ರತಿನಿತ್ಯ ಹೊಳೆನರಸೀಪುರಕ್ಕೆ ಹೋಗಿ ಬರುತ್ತಿರುವುದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿನಿಂದ ಹೊಳೆನರಸೀಪುರ ಸುಮಾರು 170 ಕಿಮೀ ದೂರವಿದೆ. ಆದರೂ ಪ್ರತಿದಿನ ರಾತ್ರಿಯಾಗುತ್ತಿದ್ದಂತೆಯೇ ಹೊಳೆನರಸೀಪುರಕ್ಕೆ ಹೋಗುವ ರೇವಣ್ಣ ಬೆಳಗಾಗುವಷ್ಟರಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಪುನಃ ಬೆಂಗಳೂರಿಗೆ ಹಿಂದಿರುಗುತ್ತಿರುವುದು ಈಗ ಎಲ್ಲರ ಗಮನ ಸೆಳೆದಿದೆ.
ಸಚಿವ ರೇವಣ್ಣರವರು ಜ್ಯೋತಿಷ್ಯವನ್ನು ಅತಿಯಾಗಿ ನಂಬುತ್ತಾರೆ. ಹಾಗಾಗಿ ಜ್ಯೋತಿಷಿಯೊಬ್ಬರು ಅವರಿಗೆ ಸರ್ಕಾರಿ ಬಂಗಲೆ ಸಿಗುವವರೆಗೂ ಹೊಳೆನರಸೀಪುರದಲ್ಲೇ ಉಳಿದುಕೊಳ್ಳದಂತೆ ಸಲಹೆ ನೀಡಿದ್ದಾರೆ. ಹೀಗಾಗಿ ರೇವಣ್ಣ ಪ್ರತಿನಿತ್ಯ 170 ಕಿ.ಮೀ ಸಂಚರಿಸುತ್ತಿದ್ದಾರೆ ಎನ್ನಲಾಗಿದೆ.
ಈ ಮಾತನ್ನು ಅಲ್ಲಗಳೆದಿರುವ ರೇವಣ್ಣರ ಆಪ್ತ ಬಳಗ ಜನರ ಕಷ್ಟ ಕಾರ್ಪಣ್ಯಗಳನ್ನು ಕೇಳಲು ಹಾಗೂ ಜನರ ಅಹವಾಲು ಸ್ವೀಕರಿಸಲು ರೇವಣ್ಣ ಹೀಗೆ ಬೆಂಗಳೂರಿಂದ ಹೊಳೆನರಸೀಪುರಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ.
ಈಗಾಗಲೇ ಸಚಿವ ರೇವಣ್ಣ ಕೋರಿಕೆಯಂತೆ ಅವರಿಗೆ ಬೆಂಗಳೂರಿನ ಶಿವಾನಂದ ವೃತ್ತದ ಬಳಿ ಇರುವ, ಎಚ್ ಸಿ ಮಹದೇವಪ್ಪನವರು ವಾಸವಾಗಿದ್ದ ವಸತಿಗೃಹವನ್ನು ನೀಡಲಾಗಿದೆ. ಆದರೆ ಅವರು ಮನೆ ಖಾಲಿ ಮಾಡುವವರೆಗೆ ಬೆಂಗಳೂರಿನ ಅವರ ಮನೆಯಲ್ಲಿಯೇ ವಾಸ ಮಾಡಬಹುದು. ಆದರೆ ರೇವಣ್ಣ ಮಾತ್ರ ಪ್ರತಿನಿತ್ಯ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಯಾಣ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ರಾತ್ರಿ ಎಷ್ಟೇ ಹೊತ್ತಾದರೂ ರೇವಣ್ಣ ಹೊಳೆನರಸೀಪುರಕ್ಕೆ ತಪ್ಪದೇ ಹೋಗುತ್ತಾರೆ. ಬೆಳಗಿನ ಜಾವ 6 ಗಂಟೆಗೆ ಎದ್ದು ಸಾರ್ವಜನಿಕರ ಅಹವಾಲುಗಳನ್ನು ಕೇಳಲು ತಯಾರಾಗುತ್ತಾರೆ. ಹೊಳೆನರಸೀಪುರ ಕ್ಷೇತ್ರ ಮಾತ್ರವಲ್ಲದೇ ಹಾಸನ ಜಿಲ್ಲೆಯ ಮೂಲೆ ಮೂಲೆ ಗಳಿಂದಲೂ ಸಾವಿರಾರು ಜನ ಅವರ ಮನೆಗೆ ಬರುತ್ತಾರೆ. ಅವರೆಲ್ಲರ ಅಹವಾಲು ಸ್ವೀಕರಿಸಿದ ನಂತರವೇ ರೇವಣ್ಣ ಮತ್ತೆ ಬೆಂಗಳೂರಿಗೆ ಮರಳುತ್ತಾರೆ. ಕ್ಷೇತ್ರದ ಎಲ್ಲ ಜನತೆಯ ಅಹವಾಲು ಕೇಳಬೇಕೆಂಬುದೇ ಈ ಪ್ರಯಾಣಕ್ಕೆ ಪ್ರಬಲ ಕಾರಣ ಎಂದು ರೇವಣ್ಣನವರ ಆಪ್ತ ಮೂಲಗಳು ತಿಳಿಸಿವೆ. ಇದನ್ನು ಓದಿ: ಸೀಟ್ ವಾಸ್ತುಪ್ರಕಾರ ಸರಿಯಾಗಿದೆ, ಮುಂದೆ ಬನ್ನಿ: ನಗೆಗಡಲಲ್ಲಿ ತೇಲಿಸಿದ ಸ್ಪೀಕರ್
ಇದೇ ಮೊದಲಲ್ಲ:
ಈ ಹಿಂದೆ ಬಿಜೆಪಿ-ಜೆಡಿಎಸ್ 20-20 ಸರ್ಕಾರ ಇದ್ದಾಗಲೂ ಸಹ ಸಚಿವರಾಗಿದ್ದ ರೇವಣ್ಣ ಹಾಸನದಿಂದ ಬೆಂಗಳೂರಿಗೆ ಹೋಗಿ ಪುನಃ ಮಧ್ಯಾಹ್ನ ಹಾಸನಕ್ಕೆ ವಾಪಸಾಗುತ್ತಿದ್ದರು. ಮತ್ತೆ ಸಂಜೆ ವೇಳೆಗೆ ಬೆಂಗಳೂರಿಗೆ ತೆರಳುತ್ತಿದ್ದ ರೇವಣ್ಣ, ರಾತ್ರಿ ವೇಳೆಗೆ ಮತ್ತೆ ಹಾಸನಕ್ಕೆ ಬಂದು ವಾಸ್ತವ್ಯ ಹೂಡುತ್ತಿದ್ದರು. ಆದರೆ ಇದೀಗ ಎಲ್ಲವೂ ಉಲ್ಟಾಹೊಡೆದಂತೆ ಕಾಣುತ್ತಿದೆ. ಒಂದು ವೇಳೆ ಜ್ಯೋತಿಷಿಗಳ ಮಾತೇ ರೇವಣ್ಣ ಪ್ರವಾಸಕ್ಕೆ ಕಾರಣ ಎಂದಾದಲ್ಲಿ ಮಹದೇವಪ್ಪನವರು ಸರ್ಕಾರಿ ವಸತಿ ಗೃಹ ಖಾಲಿ ಮಾಡುವವರೆಗೂ ರೇವಣ್ಣನವರು ಪ್ರತಿದಿನ ಪ್ರಯಾಣ ಮಾಡುವುದು ತಪ್ಪುವುದಿಲ್ಲ ಎನ್ನಲಾಗುತ್ತಿದೆ.
ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಇಂದು ಸದನದಲ್ಲಿ ಹಿಂದಿನ ಸಾಲಿನಲ್ಲಿ ಕುಳಿತುಕೊಂಡಿದ್ದರು. ಆಗ ಅದನ್ನು ಗಮನಿಸಿದ ವಿಧಾನಸಭಾ ಸಭಾಪತಿ ರಮೇಶ್ ಕುಮಾರ್ ರೇವಣ್ಣರನ್ನು ಕರೆದು ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದರು.
ತಕ್ಷಣ ಸಭಾಪತಿಗಳ ಮಾತಿಗೆ ಪ್ರತಿಕ್ರಿಯೆ ನೀಡಿದ ರೇವಣ್ಣ, ಮುಂದಿನ ಸೀಟುಗಳನ್ನು ಹಿರಿಯರಿಗೆ ಬಿಟ್ಟಿದ್ದೇನೆ. ಹೀಗಾಗಿ ಇಲ್ಲಿ ಕುಳಿತ್ತಿದ್ದೇನೆ ಎಂದು ಉತ್ತರಿಸಿದರು. ಅದಕ್ಕೆ ಸ್ಪೀಕರ್, ನೀವು ಮುಂದಿನ ಸಾಲಿನಲ್ಲಿ ಕುಳಿತರೇ ಲಕ್ಷಣ. ಬನ್ನಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಿ. ನೀವು ಮುಂದಿನ ಸಾಲಿನಲ್ಲಿ ಕುಳಿತುಕೊಂಡಿದ್ದರೆ ಅದನ್ನು ನೋಡಲು ಲಕ್ಷಣವಾಗಿರುತ್ತೆ. ಅಲ್ಲದೇ ಮುಂದಿನ ಸೀಟ್ ವಾಸ್ತುಪ್ರಕಾರವೂ ಚೆನ್ನಾಗಿದೆ ಎಂದು ಹೇಳಿ ಸದನದಲ್ಲಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು. ಇದನ್ನು ಓದಿ: ವಾಸ್ತು ಪ್ರಕಾರ ಪೂಜೆ ಮಾಡ್ತಿಲ್ಲ ಅಂತಾ ಸಚಿವ ರೇವಣ್ಣರಿಂದ ಅರ್ಚಕರಿಗೆ ಕ್ಲಾಸ್
ಅಲ್ಲದೇ ಈ ಸಂದರ್ಭದಲ್ಲಿ ಎಲ್ಲಿ ಇನ್ನೂ ಇಬ್ಬರು ಸಚಿವರು ಕಾಣ್ತಿಲ್ಲ, ಜಮೀರ್ ಅಹ್ಮದ್ ಮತ್ತು ಯು ಟಿ ಖಾದರ್ ಇನ್ನು ಬಂದಿಲ್ಲ ಅಂತಾ ಸಭಾಪತಿ ರಮೇಶ್ ಕುಮಾರ್ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಗೆ ಪ್ರಶ್ನಿಸಿದರು.
ಹುಬ್ಬಳ್ಳಿ: ನಾನು ಮತ್ತು ಜನಸಂಪನ್ಮೂಲ ಹಾಗೂ ವೈದ್ಯಕೀಯ ಸಚಿವ ಡಿ.ಕೆ ಶಿವಕುಮಾರ್ ಚೆನ್ನಾಗಿದ್ದೀವಿ. ಸುಮ್ಮನೆ ನಮ್ಮ ನಡುವೆ ಜಗಳ ತಂದಿಡುವ ಕೆಲಸ ನಡೆಯುತ್ತಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಲೋಕೋಪಯೋಗಿ ಇಲಾಖೆ ಕೆಲಸ ಮಾತ್ರ ಮಾಡುತ್ತಿರುವುದು. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಕೆಲಸ ಬಿಟ್ಟು ಬೇರೇನೂ ಮಾಡಿಲ್ಲ. ನೀರಾವರಿ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಇದನ್ನ ನಾನು ಕಾಂಗ್ರೆಸ್ ಅಧ್ಯಕ್ಷರಿಗೆ ಬಹಿರಂಗವಾಗಿ ಹೇಳಿದ್ದೇನೆ. ಹಸ್ತಕ್ಷೇಪ ಮಾಡಿದ್ದೇನೆಂದು ಕಾಂಗ್ರೆಸ್ ಅಧ್ಯಕ್ಷರು ಕೇಳಿದ್ರೆ ಉತ್ತರ ಕೊಡುತ್ತೇನೆ. ಪೂರ್ಣ ಬಜೆಟ್, ಪೂರಕ ಬಜೆಟ್ ಬಗ್ಗೆ ನನ್ನ ಸಲಹೆ ಕೇಳಿದರೆ ಹೇಳುತ್ತೇನೆ ಎಂದು ಹೇಳಿದ್ದಾರೆ.
ಉನ್ನತ ಶಿಕ್ಷಣಕ್ಕೆ ಬಸವರಾಜ್ ಹೊರಟ್ಟಿ ಅವರದ್ದೇ ಆದ ಕೊಡುಗೆ ಇದೆ. ಹೊರಟ್ಟಿಯವರು ನಮ್ಮ ನಾಯಕರು, ಯಾವ ಖಾತೆ ಕೊಟ್ಟರೂ ಅವರಿಗೆ ನಿರ್ವಹಿಸುವ ಸಾಮರ್ಥ್ಯವಿದೆ. ಹೊರಟ್ಟಿಯವರಿಗೆ ಸಚಿವ ಸ್ಥಾನ ಕೊಡುವಂತೆ ದೇವೇಗೌಡರು ಕುಮಾರಸ್ವಾಮಿಯವರಿಗೆ ಕೇಳುತ್ತೇನೆ. ರಂಗಪ್ಪರನ್ನು ಸಲಹೆಗಾರರಾಗಿ ನೇಮಕ ಮಾಡುವ ವಿಚಾರ ಮುಖ್ಯಮಂತ್ರಿ ಬಿಟ್ಟಿದ್ದು ಎಂದು ಹೇಳಿದ್ದಾರೆ.
ಹಾಸನ: ಸಮ್ಮಿಶ್ರ ಸರ್ಕಾರ ಇಷ್ಟೇ ದಿನ ಇರುತ್ತೆ ಎಂದು ಹೇಳಲು ಸಾಧ್ಯವಿಲ್ಲ ಎಂದು ರಾಜ್ಯ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಅನುಮಾನ ವ್ಯಕ್ತಪಡಿಸಿದ್ದಾರೆ.
ಸಚಿವ ಸ್ಥಾನ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಹಾಸನ ಜಿಲ್ಲೆಗೆ ಆಗಮಿಸಿದ್ದ ರೇವಣ್ಣ ಅವರು ಬೇಲೂರಿನ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಇಷ್ಟೇ ದಿನ ಸರ್ಕಾರ ಇರುತ್ತೆ ಎಂದು ನಾನು ಹೇಳುವುದಿಲ್ಲ. ಇದ್ದಷ್ಟು ದಿನ ಅಭಿವೃದ್ಧಿ ಕೆಲಸ ಮಾಡುವೆ. ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ಹೇಳುವ ಮೂಲಕ ಪೂರ್ಣವಧಿ ಸರ್ಕಾರದ ಕುರಿತು ಪರೋಕ್ಷವಾಗಿ ಸಂದೇಹದ ಮಾತುಗಳನ್ನಾಡಿದರು.
ಹಾಸನ ಜಿಲ್ಲೆಯ ಜನರು 7 ಸ್ಥಾನಗಳಲ್ಲಿ 6 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಪಕ್ಷಕ್ಕೆ ಮತ ನೀಡಿ ಬೆಂಬಲ ನೀಡಿದ ಮತದಾರರಿಗೆ ಧನ್ಯವಾದ. ಕಳೆದ 10 ವರ್ಷಗಳಿಂದ ಜಿಲ್ಲೆಯಲ್ಲಿ ಉಂಟಾದ ಸಂಕಷ್ಟ ಪರಿಸ್ಥಿತಿಯನ್ನು ಬದಲಾವಣೆ ತಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತೇನೆ. ಇದೇ ವೇಳೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ತಾಕತ್ತಿದ್ದರೆ ರೈತರ ಸಾಲಮನ್ನಾ ಮಾಡಲಿ. ನಾಲ್ಕು ವರ್ಷದ ಅವಧಿಯಲ್ಲಿ ರೈತರಿಗೆ ಯಾವ ಸವಲತ್ತು ನೀಡಿದೆ ಎಂಬುದನ್ನು ರಾಜ್ಯ ಬಿಜೆಪಿ ನಾಯಕರು ತಿಳಿಸಲಿ ಎಂದು ಸವಾಲು ಎಸೆದರು.
ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷದಲ್ಲೂ ಖಾತೆ ಹಂಚಿಕೆ ಕುರಿತು ಅಸಮಾಧಾನ ವ್ಯಕ್ತವಾಗಿದೆ. ಜೆಡಿಎಸ್ ಸಚಿವರಾದ ಸಿಎಸ್ ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ಹಾಗೂ ಡಿಸಿ ತಮ್ಮಣ್ಣ ಅವರಿಗೆ ಸಾರಿಗೆ ಖಾತೆ ನೀಡಿದ್ದರಿಂದ ಹಲವು ಕಾರ್ಯಕರ್ತರು ನಾಯಕರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಉಳಿದಂತೆ ಉನ್ನತ ಶಿಕ್ಷಣ ಖಾತೆ ಪಡೆದಿರುವ ಜಿ.ಟಿ. ದೇವೇಗೌಡ ಅವರ ಖಾತೆಯ ಬಗ್ಗೆ ಪುನರ್ ವಿಮರ್ಶೆ ಮಾಡಬೇಕು ಎಂದು ಜೆಡಿಎಸ್ ಶಾಸಕ ವಿಶ್ವನಾಥ್ ಸಿಎಂ ಬಳಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಕ್ಷೇತ್ರದ ಕಾರ್ಯಕರ್ತರು ಸಹ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸುವುದಾಗಿ ಜಿಟಿಡಿ ಸ್ಪಷ್ಟನೆ ನೀಡಿದ್ದಾರೆ.
ಇತ್ತ ಕಾಂಗ್ರೆಸ್ ಬಂಡಾಯ ಶಮನ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಹಲವು ನಾಯಕರು ಪ್ರಯತ್ನಿಸುತ್ತಿದ್ದರು, ಎಂಬಿ ಪಾಟೀಲ್ ಸೇರಿದಂತೆ ಹಲವು ನಾಯಕರು ಸಚಿವ ಸ್ಥಾನ ದೊರೆಯದ ಕುರಿತ ತಮ್ಮ ಅಸಮಾಧಾನವನ್ನು ಪ್ರದರ್ಶಿಸುತ್ತಿದ್ದಾರೆ. ಇದರ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ತಮ್ಮ ಪಕ್ಷಕ್ಕೆ ಸೇರ್ಪಡೆಯಾಗಲು ಕಾಂಗ್ರೆಸ್ ಜೆಡಿಎಸ್ ಬಂಡಾಯ ಶಾಸಕರು ಸಿದ್ಧರಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಇದರ ಬೆನ್ನಲ್ಲೇ ಇಂದು ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಕಾಂಗ್ರೆಸ್‍ನ ನಾಯಕ ಎಂಬಿ ಪಾಟೀಲ್ ರನ್ನು ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು: ನನ್ನನ್ನ ರೇವಣ್ಣಗೆ ಹೋಲಿಸಬೇಡಿ. ಇಬ್ಬರ ನಡುವೆ ಪವರ್ ಗಲಾಟೆ ಅನ್ನೋದು ತಪ್ಪು. ಅವರು ದೊಡ್ಡ ಕುಟುಂಬದ ಮಕ್ಕಳು ನಾನು ಸಾಮಾನ್ಯ ವ್ಯಕ್ತಿ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಹಣ್ಣು ಪಕ್ವವಾಗಿ ಮರದಲ್ಲಿದ್ದರೆ ಎಲ್ಲಾ ಕಲ್ಲು ಹೊಡಿತಾರೆ. ನೀವು ನೋಡೋಕೆ ಚೆನ್ನಾಗಿದ್ದರೆ ಎಲ್ಲಾ ನೋಡುತ್ತಾರೆ. ಮೋರ್ ಸ್ಟ್ರಾಂಗ್ ಮೋರ್ ಎನಿಮಿಸ್ ಲೆಸ್ ಸ್ಟ್ರಾಂಗ್ ಲೆಸ್ ಎನಿಮಿಸ್. ನನಗು ಹಾಗೆ ಆಗಿದೆ. ನನ್ನ ಕಂಡರೆ ಪ್ರೀತಿ ಜಾಸ್ತಿ ಅದಕ್ಕೆ ನನ್ನ ಮೇಲೆ ಕಣ್ಣು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಕಂಡರೆ ಅಸೂಯೆ ಅದಕ್ಕೆ ಸಿಬಿಐ ಮೂಲಕ ನಿಯಂತ್ರಣ ಮಾಡಲು ಯತ್ನಿಸುತ್ತಿದ್ದಾರೆ. ಸಿಬಿಐ ಅಧಿಕಾರಿಗಳು ಇಲ್ಲಿನ ಅಧಿಕಾರಿಗಳಿಗೆ ಹಿಂಸೆ ಮಾಡುತ್ತಿದ್ದಾರೆ. ಹಣ ವರ್ಗಾವಣೆಯಲ್ಲಿ ಸುರೇಶ್ ಪಾತ್ರ ಇದೆ ಅಂತ ಒಪ್ಪಿಸೋಕೆ ಯತ್ನಿಸಿದ್ದಾರೆ. ನಾನು ಹಳ್ಳಿಯಿಂದ ಬಂದವನು ನಾನೆ ಯಾಕೆ ಟಾರ್ಗೆಟ್ ಗೊತ್ತಿಲ್ಲ. ಅದ್ಯಾಕೆ ನನ್ನ ರಾಶಿಗೆ ಎಂಟ್ರಿ ಆಗಿದಾರೋ ಗೊತ್ತಿಲ್ಲ. ನಾನು ಚೆಸ್ ಪ್ಲೇಯರ್ ಟೈಮ್ ನೋಡಿ ಚಕ್ ಕೊಡುತ್ತೀನಿ ಎಂದು ತಿಳಿಸಿದರು.
ನಾನು ಯಾರಿಗೂ ಅರ್ಜಿ ಹಾಕೊಂಡು ಹೋಗಿಲ್ಲ. ನಾನು ಕಾಂಗ್ರೆಸ್ ಪಾರ್ಟಿಯವನು. ರೇವಣ್ಣ ಅವರಿಗೂ ನನಗೂ ಹೋಲಿಕೆ ಮಾಡಬೇಡಿ. ನನಗೆ ರೇವಣ್ಣ ಸಹವಾಸ ಬೇಡವೇ ಬೇಡ. ರೇವಣ್ಣ ಬೇಕಾದರೆ ಎಲ್ಲಾ ಖಾತೆ ಇಟ್ಟುಕೊಳ್ಳಲಿ ಮುಖ್ಯಮಂತ್ರಿ ಆಗಲಿ ನನಗೇನು? ಅವರ ಪಾರ್ಟಿ ಬೇರೆ. ನಮ್ಮ ಪಾರ್ಟಿ ಬೇರೆ. ಇಬ್ಬರು ಒಟ್ಟಿಗೆ ಸೇರಿ ಸರ್ಕಾರ ರಚನೆ ಮಾಡಿದ್ದೇವೆ. ಇಬ್ಬರು ಒಟ್ಟಿಗೆ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ನಾನು ಬೇಕಾದರೆ ಉಳಿಸಿ ಕೊಳ್ಳುತ್ತಾರೆ. ಎಲ್ಲದಕ್ಕೂ ಸಮಯ ಬರಬೇಕು ಕಾಲ ಕೂಡಿ ಬರಬೇಕು ಎಂದು ಶಿವಕುಮಾರ್ ಹೇಳಿದರು.