Tag: ಎಚ್.ಡಿ. ದೇವೇಗೌಡ

  • ಗೌಡ್ರ ಪಾರ್ಟಿಗೆ ಜನ್ರು ಮೂರು ನಾಮ ಹಚ್ಚಿದ್ರು: ವೈಎಸ್‍ವಿ ದತ್ತಾ

    ಗೌಡ್ರ ಪಾರ್ಟಿಗೆ ಜನ್ರು ಮೂರು ನಾಮ ಹಚ್ಚಿದ್ರು: ವೈಎಸ್‍ವಿ ದತ್ತಾ

    – ಎಚ್‍ಡಿಡಿ ರಾಜಕೀಯ ಚದುರಂಗದಾಟ ಯಾರಿಗೂ ಗೊತ್ತಾಗಲ್ಲ
    – ಪಕ್ಷ ಸಂಘಟನೆಯ ಮೂರು ತಂತ್ರ ತಿಳಿಸಿದ ದತ್ತಾ

    ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪಕ್ಷಕ್ಕೆ ಜನರು ಮೂರು ನಾಮ ಹಚ್ಚಿದರು ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್‍ವಿ ದತ್ತಾ, ಲೋಕಸಭಾ ಫಲಿತಾಂಶ ನೆನೆದು ಕಿಡಿಕಾರಿದ್ದಾರೆ.

    ನಗರದ ಅರಮನೆ ಮೈದಾನದ ಶಿಷಾ ಮಹಲ್‍ನಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವಿದ್ದರೂ ಸಿಎಂ ಜನರ ಸೇವೆ ಮಾಡುತ್ತಿದ್ದಾರೆ. ಅವರು ಸೋಲುತ ಗೆಲ್ಲುವ ತಂತ್ರ ಅನುಸರಿಸುತ್ತಿದ್ದಾರೆ. ಈ ಮೂಲಕ ರೈತರ ಸಾಲಮನ್ನಾ ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮೈತ್ರಿ ಪಕ್ಷದ ನಾಯಕರ ವಿಶ್ವಾಸ ಪಡೆಯುತ್ತಿದ್ದಾರೆ ಎಂದು ಹೇಳಿದರು.

    ವಿಪಕ್ಷ ನಾಯಕರು ಗ್ರಾಮ ವಾಸ್ತವ್ಯದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಗ್ರಾಮ ವಾಸ್ತವ್ಯ, ಜನತಾ ದರ್ಶನ ಎಂಬ ವಿಶಿಷ್ಟ ಕಾರ್ಯಕ್ರಮ ಪ್ರಾರಂಭ ಮಾಡಿದ್ದು ನಮ್ಮ ಪಕ್ಷ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಇದಕ್ಕೂ ಕೆಲವರು ಕೊಂಕು ಆಡುತ್ತಿದ್ದಾರೆ. ಮುಸ್ಲಿಂಮರಿಗೆ ಮೀಸಲಾತಿ ಕೊಟ್ಟವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು. ಅಹಿಂದ ಎನ್ನುವ ಕಲ್ಪನೆ ತಂದಿದ್ದು ಅವರೇ. ಆದರೆ ಯಾರ್ ಯಾರೋ ಅಹಿಂದಾ ಅಹಿಂದ ಅಂತ ಮಾತನಾಡುತ್ತಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ದೇವೇಗೌಡರ ಕ್ಯಾರಂಬೋರ್ಡ್ ಆಟ ವಿರೋಧ ಪಕ್ಷದವರಿಗೆ ಗೊತ್ತೇ ಆಗದ ರೀತಿ ಇರುತ್ತದೆ. ಅವರು ಯಾವತ್ತೂ ಸೋತು ಮನೆಯಲ್ಲಿ ಕುಳಿತುಕೊಂಡಿಲ್ಲ. ಪಕ್ಷ ಸೋತರೂ ಕಾರ್ಯಕರ್ತರನ್ನು ಜೊತೆ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಜೆಡಿಎಸ್ ಮುಗಿದೇ ಹೋಯಿತು ಎನ್ನುವ ಸಮಯದಲ್ಲೂ ಇಬ್ಬರು ಶಾಸಕರನ್ನು ಇಟ್ಟುಕೊಂಡು ಪಕ್ಷ ಕಟ್ಟಿದರು. ಎಲ್ಲಿ ಕಳೆದುಕೊಳ್ಳುತ್ತೇವೋ ಅಲ್ಲಿಯೇ ಪಡೆಯಬೇಕು ಎನ್ನುವುದು ದೇವೇಗೌಡರ ಹಠ ಎಂದು ವೈಎಸ್‍ವಿ ದತ್ತಾ ತಿಳಿಸಿದರು.

    ನಿಮ್ಮ ಪಕ್ಷಕ್ಕೆ ಸೇರುತ್ತೇವೆ ಎಂದು ಬಿಜೆಪಿಯ ಅನೇಕ ಪದಾಧಿಕಾರಿಗಳು ನಿತ್ಯವೂ ಕರೆ ಮಾಡುತ್ತಿದ್ದಾರೆ. ಪ್ರಾದೇಶಿಕ ಪಕ್ಷ ಪ್ರಬಲವಾಗಿ ಬೆಳೆಯಬೇಕು. ನಾಡಿನ ವಿಚಾರದ ಬಗ್ಗೆ ಹೋರಾಟ ಮಾಡುವುದಕ್ಕೆ ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ ಎನ್ನುವುದು ಅವರ ವಿಚಾರವಾಗಿದೆ. ಹೀಗಾಗಿ ಬಿಜೆಪಿ ಬಿಟ್ಟು ಜೆಡಿಎಸ್‍ಗೆ ಬರುತ್ತೇವೆ ಎನ್ನುತ್ತಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.

    ಮೂರು ತಂತ್ರದಲ್ಲಿ ಪಕ್ಷ ಸಂಘಟನೆ ಮಾಡಬೇಕು ಎಂದು ವೈಎಸ್‍ವಿ ದತ್ತಾ ಅವರು ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಅವುಗಳಲ್ಲಿ ಮೊದಲನೇಯ ತಂತ್ರ ಭಾವ ಸ್ಪರ್ಶಿ. ಸಾಮಾಜಿಕ ಜಾಲತಾಣವನ್ನು ಮತ್ತಷ್ಟು ಬಲ ಪಡಿಸಿ ಪಕ್ಷ ಸಂಘಟನೆ ಮಾಡುವುದು. ತಲಸ್ಪರ್ಶಿ ತಂತ್ರ: ಪಕ್ಷದ ಚರಿತ್ರೆ, ಸರ್ಕಾರದ ಇತಿಹಾಸ, ಸಾಧನೆ ಬಗ್ಗೆ ಜನರಿಗೆ ತಲುಪಿಸಿ ಪಕ್ಷ ಸಂಘಟನೆ ಮಾಡುವುದು. ಬಹು ಸ್ಪರ್ಶಿ ತಂತ್ರ: ಪಕ್ಷ ಸಂಘಟನೆಗೆ ಪಾದಯಾತ್ರೆ ಮಾಡುವುದು ಎಂದು ತಿಳಿಸಿದರು.

    ಸಭೆಯ ನೇತೃತ್ವವನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ವಹಿಸಿಕೊಂಡಿದ್ದರು. ಶಾಸಕ ಗೋಪಾಲಯ್ಯ, ಪರಿಷತ್ ಸದಸ್ಯ ಶರವಣ ಸೇರಿದಂತೆ ಹಲವು ಮಾಜಿ ಶಾಸಕರು ಸಭೆಯಲ್ಲಿ ಉಪಸ್ಥಿತರಿದ್ದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮಧ್ಯಂತರ ಚುನಾವಣೆ ಬರಬಹುದೆಂದು ಗೌಡ್ರು ಯಾಕೆ ಅಂದ್ರು ಗೊತ್ತಿಲ್ಲ- ಪರಮೇಶ್ವರ್

    ಮಧ್ಯಂತರ ಚುನಾವಣೆ ಬರಬಹುದೆಂದು ಗೌಡ್ರು ಯಾಕೆ ಅಂದ್ರು ಗೊತ್ತಿಲ್ಲ- ಪರಮೇಶ್ವರ್

    ಬೆಂಗಳೂರು: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಮಧ್ಯಂತರ ಚುನಾವಣೆ ಬರಬಹುದು ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರು ಹಿರಿಯರು ಯಾವ ಹಿನ್ನೆಲೆಯಲ್ಲಿ ಹಾಗೇ ಹೇಳಿದ್ದಾರೋ ಗೊತ್ತಿಲ್ಲ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮಧ್ಯಂತರ ಚುನಾವಣೆಯ ಬಗ್ಗೆ ದೇವೇಗೌಡರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, 130 ವರ್ಷಗಳಲ್ಲಿ ಅನೇಕ ಏಳು ಬೀಳುಗಳನ್ನು ಕಾಂಗ್ರೆಸ್ ನೋಡಿಕೊಂಡು ಬಂದಿದೆ. ದೇವೇಗೌಡರು ಹಿರಿಯರು, ಅನುಭವಸ್ಥರು, ಪ್ರಧಾನಿ ಆಗಿದ್ದವರು. ಅವರು ಯಾವ ಕಾರಣಕ್ಕಾಗಿ ಹೇಳಿದ್ದಾರೋ ಗೊತ್ತಿಲ್ಲ, ಅದನ್ನು ನಾವು ಗಣನೆಗೆ ತೆಗೆದುಕೊಳ್ಳಬೇಕು. ಅಲ್ಲದೆ ಈ ಕುರಿತು ನಾನು, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಕೂತು ಮಾತಾಡುತ್ತೇವೆ. ಅವರು ಹೇಳಿಕೆ ನೀಡುವಾಗ ಯೋಚನೆ ಮಾಡಿಯೇ ಹೇಳಿರುತ್ತಾರೆ ಎಂದರು.

    ಬಿಜೆಪಿಯನ್ನು ದೂರ ಇಡಲು ಸಮ್ಮಿಶ್ರ ಸರ್ಕಾರ ಮಾಡಿದೆವು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಸೂಚನೆ ಮೇರೆಗೆ ಸರ್ಕಾರ ರಚನೆ ಆಗಿದೆ. ನಾವೇ ಎಚ್‍ಡಿಕೆ ಅವರು ಸಿಎಂ ಆಗಬೇಕು ಅಂತ ಹೇಳಿದೆವು. ಅದರಂತೆ ಸರ್ಕಾರ ರಚನೆ ಆಗಿದೆ. ನೀವೇ ಸರ್ಕಾರ ಮಾಡಿ ಎಂದು ಹೇಳಿದ್ದು ನಿಜ. ಎಚ್‍ಡಿಡಿ ಪುತ್ರನೇ ಸಿಎಂ ಎಂದು ನಾವು ಒಪ್ಪಿಕೊಂಡಿದ್ದೇವೆ. ಸಮ್ಮಿಶ್ರ ಸರ್ಕಾರ ಅಂದರೆ ಸಣ್ಣಪುಟ್ಟ ಸಮಸ್ಯೆ ಇದ್ದೇ ಇರುತ್ತದೆ. ಇದೆಲ್ಲವನ್ನ ನಡೆಸಿಕೊಂಡು ಹೋಗೋದೆ ಮೈತ್ರಿ ಸರ್ಕಾರ ಎಂದು ಅವರು ವಿವರಿಸಿದರು. ಇದನ್ನೂ ಓದಿ: ಮಧ್ಯಂತರ ಚುನಾವಣೆ ಬಗ್ಗೆ ಎಚ್‍ಡಿಡಿ ಹೊಸ ಬಾಂಬ್

    1/3 ನಿಯಮದಲ್ಲೆ ಸರ್ಕಾರ ನಡೆಯುತ್ತಿದೆ. ಯಾರೂ ಅದನ್ನ ಮೀರಿಲ್ಲ. ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ನೀಡಲು ಒಂದು ಅವರೇ ಕೊಟ್ಟಿದ್ದಾರೆ. ಸಿದ್ದರಾಮಯ್ಯ, ಸಿಎಂ ಚರ್ಚೆ ಮಾಡಿಯೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಾವು ಯಾರೂ ಒತ್ತಾಯ ಮಾಡಿ ಸಚಿವ ಸ್ಥಾನ ತಗೊಂಡಿಲ್ಲ ಅಂದರು.

    ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿಲ್ಲ. ನಾವು ಸ್ಟ್ರಾಂಗ್ ಆಗಿಯೇ ಇದ್ದೀವಿ. ಸೋಲು-ಗೆಲುವು ಕಾಂಗ್ರೆಸ್ ನೋಡಿಕೊಂಡು ಬಂದಿದೆ. ಇಂತಹ ಏಳು-ಬೀಳಗಳನ್ನು ಕಾಂಗ್ರೆಸ್ ಸಾಕಷ್ಟು ನೋಡಿದೆ. ಕಾಂಗ್ರೆಸ್ ಮುಳುಗಿ ಹೋಗಿದೆ ಎಂದು ಯಾರಾದ್ರು ಅಂದುಕೊಂಡರೆ ಅದು ತಪ್ಪು. 70 ರ ದಶಕದಲ್ಲಿ ಕಾಂಗ್ರೆಸ್ ನಿರ್ಮಾಣ ಆಯ್ತು ಎಂದು ಹೇಳಿದ್ದಾರೆ. ನಂತರ ಚುನಾವಣೆಯಲ್ಲಿ ಗೆದ್ದಿಲ್ವಾ?. ಕಾಂಗ್ರೆಸ್ ನಿರ್ಣಾಮ ಆಯ್ತು ಅಂದುಕೊಂಡರೆ ಅದು ತಪ್ಪು. ಈಗ ಬಿಜೆಪಿಗೆ ಜನ ಅಧಿಕಾರ ಕೊಟ್ಟಿದ್ದಾರೆ. ಅವರು ಅಧಿಕಾರ ಮಾಡಲಿ. ಮುಂದೆ ಚುನಾವಣೆಯಲ್ಲಿ ನೋಡೋಣ ಎಂದು ಸವಾಲೆಸೆದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಗೊಂದಲಕ್ಕೆ ತೆರೆ

    ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಗೊಂದಲಕ್ಕೆ ತೆರೆ

    ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಕ್ಲೈಮ್ಯಾಕ್ಸ್ ಸೀನ್ ಇಂದು ನಡೆಯಲಿದೆ.

    ರಾಜೀನಾಮೆ ನಿರ್ಧಾರದ ಬಗ್ಗೆ ಅಲೋಚನೆ ಮಾಡಿ ನಿರ್ಧಾರ ತಿಳಿಸಿ ಎಂದಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಇಂದು ತಮ್ಮ ನಿರ್ಧಾರವನ್ನ ಎಚ್. ವಿಶ್ವನಾಥ್ ತಿಳಿಸಲಿದ್ದಾರೆ. ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಶ್ವನಾಥ್ ಮನವೊಲಿಕೆಗೆ ಜೆಡಿಎಸ್ ವರಿಷ್ಠ ದೇವೇಗೌಡ್ರು ಪ್ರಯತ್ನ ಪಟ್ಟಿದ್ದರಾದ್ರು ಇದಕ್ಕೆ ಒಪ್ಪಿರಲಿಲ್ಲ.

    ಮಂಗಳವಾರ ತಮ್ಮ ನಿವಾಸದಲ್ಲಿ ಸುದೀರ್ಘ ಮಾತುಕತೆ ಬಳಿಕವೂ ವಿಶ್ವನಾಥ್ ರಾಜೀನಾಮೆ ವಾಪಸ್ ಪಡೆಯೋ ನಿರ್ಧಾರ ಮಾಡಿರಲಿಲ್ಲ. ಈ ವೇಳೆ ಗುರುವಾರದವರೆಗೆ ಯೋಚನೆ ಮಾಡಿ ತಮ್ಮ ನಿರ್ಧಾರ ತಿಳಿಸಿ ಎಂದು ದೇವೇಗೌಡರು ಹೇಳಿದ್ದರು.

    ಇಂದು ಸ್ವತಃ ದೇವೇಗೌಡರನ್ನ ಭೇಟಿಯಾಗಲಿರುವ ವಿಶ್ವನಾಥ್, ತಮ್ಮ ನಿರ್ಧಾರ ತಿಳಿಸಲಿದ್ದಾರೆ. ದೇವೇಗೌಡರ ಮಾತಿಗೆ ಮಣಿದು ರಾಜೀನಾಮೆ ವಾಪಸ್ ಪಡೆಯುತ್ತಾರಾ ಅಥವಾ ತಮ್ಮ ರಾಜೀನಾಮೆ ನಿರ್ಧಾರಕ್ಕೆ ಬದ್ಧರಾಗಿರುತ್ತಾರಾ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಇದೇ ವೇಳೆ ಇಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ಮಹತ್ವದ ಸುದ್ದಿಗೋಷ್ಟಿ ಕರೆದಿದ್ದು, ಕುತೂಹಲಕ್ಕೆ ಕಾರಣವಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಫಾರೂಕ್‍ಗೆ ಸ್ಥಾನ ಕೊಟ್ಟಿದ್ರೆ ಅಹಿಂದಕ್ಕೆ ಸಚಿವ ಸ್ಥಾನ ಕೊಟ್ಟಂತೆ ಆಗ್ತಿತ್ತು: ಎಚ್ ವಿಶ್ವನಾಥ್

    ಫಾರೂಕ್‍ಗೆ ಸ್ಥಾನ ಕೊಟ್ಟಿದ್ರೆ ಅಹಿಂದಕ್ಕೆ ಸಚಿವ ಸ್ಥಾನ ಕೊಟ್ಟಂತೆ ಆಗ್ತಿತ್ತು: ಎಚ್ ವಿಶ್ವನಾಥ್

    – ಶಿಕ್ಷಣ ಇಲಾಖೆಗೆ ತುರ್ತಾಗಿ ಸಚಿವರು ಬೇಕಿದೆ
    – ಅಪ್ಪ, ಮಗನಿಗೆ ವಿಶ್ವನಾಥ್ ಗುದ್ದು
    – ರಾಜೀನಾಮೆ ವಾಪಸ್ ಪಡೆಯಲ್ಲ

    ಬೆಂಗಳೂರು: ಅಲ್ಪ ಸಂಖ್ಯಾತರಿಗೆ ಅವಕಾಶ ನೀಡಲೇ ಬೇಕಿತ್ತು. ಫಾರೂಕ್‍ಗೆ ಸಚಿವ ಸ್ಥಾನ ಕೊಟ್ಟಿದ್ರೆ, ಒಬ್ಬ ಅಲ್ಪ ಸಂಖ್ಯಾತ, ಹಿಂದುಳಿದ ವರ್ಗ, ದಲಿತರಿಗೆ ಅವಕಾಶ ಕೊಟ್ಟಂತೆ ಆಗುತ್ತಿತ್ತು. ಜೆಡಿಎಸ್ ಒಂದು ಜಾತ್ಯಾತೀತ ಪಕ್ಷ. ಹೀಗಾಗಿ ಎಲ್ಲ ವರ್ಗಕ್ಕೂ ಅವಕಾಶ ನೀಡಬೇಕಿತ್ತು ಎಂದು ಹೇಳುವ ಮೂಲಕ ಖಾತೆ ಹಂಚಿಕೆ ಬಗ್ಗೆ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷೇತರರಿಗೆ ಇನ್ನೂ ಯಾವುದೇ ಖಾತೆ ಹಂಚಿಕೆ ಮಾಡದ ವಿಚಾರ ಸಂಬಂಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ದಲಿತರಿಗೆ, ಹಿಂದುಳಿದವರಿಗೆ ಅವಮಾನ ಮಾಡಬೇಡಿ. ಸಚಿವ ಸ್ಥಾನ ನೀಡಿ ಎಷ್ಟು ದಿನ ಆಯಿತು. ಆದರೆ ಖಾತೆ ಯಾಕೆ ಇನ್ನೂ ಕೊಟ್ಟಿಲ್ಲ. ಇದೊಂದು ರೀತಿಯ ಅವಮಾನ ಮಾಡಿದ ಹಾಗೆ ಎಂದು ಹೇಳಿದರು.

    ಪ್ರಮುಖವಾಗಿ ಶಿಕ್ಷಣ ಇಲಾಖೆಯಲ್ಲಿ ಪಠ್ಯ ಪುಸ್ತಕ ಸೇರಿದಂತೆ ಹತ್ತಾರು ಸಮಸ್ಯೆಗಳಿವೆ. ಮಹೇಶ್ ರಾಜೀನಾಮೆ ಕೊಟ್ಟ ನಂತರ ಇಲಾಖೆಗೆ ಮುಖ್ಯಸ್ಥರೇ ಇಲ್ಲದಂತಾಗಿದೆ. ಈ ಇಲಾಖೆಗೆ ತುರ್ತಾಗಿ ಒಬ್ಬ ಸಚಿವರು ಬೇಕಾಗಿದ್ದಾರೆ. ಸಿಎಂ ಬಳಿ ಅಬಕಾರಿ ಸೇರಿದಂತೆ ಹಲವು ಖಾತೆಗಳಿವೆ. ಕೆಲವನ್ನು ಬೇರೆಯವರಿಗೆ ಹಂಚಿಕೆ ಮಾಡಲಿ ಎಂದು ಸಲಹೆ ನಿಡಿದರು.

    ಇದೇ ವೇಳೆ ಜಿಂದಾಲ್ ಭೂಮಿ ಪರಭಾರೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ವಿಶ್ವನಾಥ್, ಜಿಂದಾಲ್ ವಿಚಾರದಲ್ಲಿ ಸಿದ್ದರಾಮಯ್ಯ ಯಾಕೆ ಮೌನವಾಗಿ ಇದ್ದಾರೆ. ತೊಡೆ ತಟ್ಟಿ 350 ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯ ಈಗ ಏನ್ ಮಾಡ್ತಿದ್ದಾರೆ. ಸರ್ಕಾರದ ಭಾಗವಾಗಿ ಇದ್ದರು ಯಾಕೆ ಮಾತಾಡ್ತಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಾಗಿ ತಮ್ಮ ಕೆಲಸವೇ ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಪಾದಯಾತ್ರೆ ಮಾಡಿ ಗಣಿ ಲೂಟಿ ಹಣ ತರುತ್ತೇನೆ ಎಂದು ಹೇಳಿದ್ರಿ. ನೀವು ಸಿಎಂ ಆದಾಗ ಒಂದು ರೂಪಾಯಿ ಬೊಕ್ಕಸಕ್ಕೆ ತರಲಿಲ್ಲ. ಸಂತೋಷ್ ಹೆಗ್ಡೆ ವರದಿ ಪುಟಗಟ್ಟಲೆ ಇದ್ದರೂ ನಿಮ್ಮಿಂದ ಯಾವ ಕ್ರಮ ತಗೋಳೋಕೆ ಆಗಿಲ್ಲ. ಈಗ ಮೌನವಾಗಿ ಯಾಕೆ ಇದ್ದೀರಿ. ಸಿದ್ದರಾಮಯ್ಯ ಅವರೇ ಜಿಂದಾಲ್ ಬಗ್ಗೆ ಮಾತಾಡಿ. ಸಿದ್ದರಾಮಯ್ಯ ಈ ಸರ್ಕಾರದಲ್ಲಿ ಮಂತ್ರಿಗಳ ಮಂತ್ರಿ, ಅದು ಹೇಗೆ ಸರ್ಕಾರದ ಭಾಗ ಅಲ್ಲ ಎಮದು ಹೇಳುತ್ತೀರಿ. ಅಂದು ತೊಡೆ ತಟ್ಟಿದವರಿಗೆ ಇಂದು ಏನಾಯ್ತು ಎಂದು ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ನಿರ್ಧಾರದಿಂದ ನಾನು ವಾಪಸ್ ಬರುವ ಪ್ರಶ್ನೆಯೇ ಇಲ್ಲ. ರಾಜೀನಾಮೆ ವಾಪಸ್ ಪಡೆಯಲ್ಲ. ನಾನೇ ದೇವೇಗೌಡರಿಗೆ ರಾಜೀನಾಮೆ ಅಂಗಿಕಾರ ಮಾಡುವಂತೆ ಇಂದು ಮನವಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನನ್ನ ನಿರ್ಧಾರದಿಂದ ಹಿಂದೆ ಸರಿಯೋದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

  • ದೇವೇಗೌಡ್ರ ಬೆನ್ನಲ್ಲೇ ಸಿದ್ದರಾಮಯ್ಯರಿಂದ ರಾಹುಲ್ ಭೇಟಿ – ಜೆಡಿಎಸ್ ವಿರುದ್ಧ ದೂರಿಡ್ತಾರಾ ಮಾಜಿ ಸಿಎಂ?

    ದೇವೇಗೌಡ್ರ ಬೆನ್ನಲ್ಲೇ ಸಿದ್ದರಾಮಯ್ಯರಿಂದ ರಾಹುಲ್ ಭೇಟಿ – ಜೆಡಿಎಸ್ ವಿರುದ್ಧ ದೂರಿಡ್ತಾರಾ ಮಾಜಿ ಸಿಎಂ?

    ನವದೆಹಲಿ: ರಾಜ್ಯದಲ್ಲಿ ಈಗ ದೂರು ಪ್ರತಿದೂರಿನ ರಾಜಕೀಯ ಆರಂಭವಾಗಿದೆ. ಮೈತ್ರಿ ಸರ್ಕಾರದ ಮುನಿಸು ಕಾಂಗ್ರೆಸ್ ಹೈಕಮಾಂಡ್ ಬಾಗಿಲು ತಟ್ಟುತ್ತಲೇ ಇದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ದೂರು ಕೊಟ್ಟ ಬೆನ್ನೆಲ್ಲೇ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನ ಭೇಟಿ ಆಗುತ್ತಿದ್ದಾರೆ.

    ಕಳೆದ ವಾರ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಯಾವ ಸುಳಿವನ್ನೂ ಕೊಡದೆ ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿದ್ದರು. ಗೌಪ್ಯವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನ ಭೇಟಿಯಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದರು ಎನ್ನಲಾಗಿತ್ತು. ರಾಜ್ಯದ ಮೈತ್ರಿ ಸರ್ಕಾರದಲ್ಲಿ ಆಗುತ್ತಿರುವ ಮಹತ್ವದ ಬದಲಾವಣೆಗಳು ಹಾಗೂ ಸಿದ್ದರಾಮಯ್ಯ ನಡೆಗಳನ್ನು ರಾಹುಲ್ ಗಾಂಧಿ ಮುಂದೆ ವಿರೋಧಿಸಿದ್ದಲ್ಲದೇ ಅವರ ಓಟಕ್ಕೆ ಬ್ರೇಕ್ ಹಾಕುವಂತೆ ಮನವಿ ಕೂಡ ಮಾಡಿದ್ದರು ಎಂದು ಹೇಳಲಾಗಿತ್ತು.

    ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ದೆಹಲಿಗೆ ದಿಢೀರ್ ಆಗಮಿಸಿದ್ದು, ಇಂದು ರಾಹುಲ್ ಗಾಂಧಿ ಅವರನ್ನ ಭೇಟಿ ಆಗಲಿದ್ದಾರೆ. ರಾಹುಲ್ ಜೊತೆಗೆ ಪಕ್ಷದ ವರಿಷ್ಠರಾದ ಅಹ್ಮದ್ ಪಟೇಲ್, ಗುಲಾಂನಭೀ ಅಜಾದ್, ಎ.ಕೆ ಆಂಟನಿ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರನ್ನು ಕೂಡ ಭೇಟಿ ಮಾಡಲಿದ್ದು ಮೂಲಗಳ ಪ್ರಕಾರ ಜೆಡಿಎಸ್ ಗ್ಯಾಂಗ್ ಮೇಲೆ ಪ್ರತಿದೂರು ದಾಖಲಿಸಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.

    ಮೈತ್ರಿ ವಿಷಯ ಅಥವಾ ಸರ್ಕಾರದ ಆಡಳಿತಾತ್ಮಕ ವಿಷಯ ಯಾವುದೇ ಇರಬಹುದು. ನಾವು ಜೆಡಿಎಸ್ ಪಕ್ಷವನ್ನು ಮತ್ತು ನಾಯಕರನ್ನು ನಿಯಂತ್ರಿಸದಿದ್ದರೆ ಅವರೇ ನಮ್ಮನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಆದುದರಿಂದ ನಾವು ಸದಾ ಜೆಡಿಎಸ್ ಪಕ್ಷದ ವಿರುದ್ಧ ಮೇಲುಗೈ ಸಾಧಿಸಲೇಬೇಕು. ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ರಾಜಕಾರಣದ ದೃಷ್ಟಿಯಿಂದ ಮೈತ್ರಿ ಅನಿವಾರ್ಯ ಎಂಬ ಸಂಗತಿಯನ್ನು ಜೆಡಿಎಸ್ ನಾಯಕರು ದುರುಪಯೋಗಪಡಿಸಿಕೊಳ್ಳಲು ಬಿಡಬಾರದು ಎಂದು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಗಮನಕ್ಕೆ ತರಲಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ಸಿಎಂ ಆಗಿದ್ದಾಗಲೇ ಮೂರು ದಿನ ದೆಹಲಿಯಲ್ಲಿ ಉಳಿಯದ ಸಿದ್ದರಾಮಯ್ಯ ಈಗ ದೆಹಲಿಯಲ್ಲಿ ಠಿಕಾಣಿ ಹೂಡಿದ್ದು ದೊಸ್ತಿ ನಾಯಕರ ವಿರುದ್ಧ ಅದ್ಯಾವ ಅಸ್ತ್ರ ಬಿಡಲಿದ್ದಾರೋ ಕಾದು ನೋಡಬೇಕು.

  • ಫಾರೂಕ್ ಸಚಿವ ಸ್ಥಾನಕ್ಕೆ ಅಡ್ಡಿ ಆರೋಪ – ಸಿಎಂಗೆ ಮತ್ತೊಮ್ಮೆ ವಚನ ಭ್ರಷ್ಟತೆ ಕಳಂಕ

    ಫಾರೂಕ್ ಸಚಿವ ಸ್ಥಾನಕ್ಕೆ ಅಡ್ಡಿ ಆರೋಪ – ಸಿಎಂಗೆ ಮತ್ತೊಮ್ಮೆ ವಚನ ಭ್ರಷ್ಟತೆ ಕಳಂಕ

    – ದೇವೇಗೌಡ್ರ ಹಳೇ ಹೇಳಿಕೆ ಈಗ ವೈರಲ್

    ಬೆಂಗಳೂರು: ಮತ್ತೊಮ್ಮೆ ವಚನ ಭ್ರಷ್ಟತೆ ಆರೋಪಕ್ಕೀಡಾದ್ರಾ ಮುಖ್ಯಮಂತ್ರಿ ಅನ್ನೋ ಪ್ರಶ್ನೆಯೊಂದು ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಮೂಡಿದೆ.

    ಜೆಡಿಎಸ್ ಎಂಎಲ್‍ಸಿ ಬಿ.ಎಂ. ಫಾರೂಕ್‍ಗೆ ಸಚಿವ ಸ್ಥಾನ ಸಿಗಲ್ಲ ಎಂದು ಹೇಳಲಾಗುತ್ತಿದ್ದು, ಈ ಮೂಲಕ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಕೊಡಲು ಮುಖ್ಯಮಂತ್ರಿಗಳೇ ಅಡ್ಡಿಯಾದ್ರಾ ಅನ್ನೋ ಅನುಮಾನ ಮೂಡಿದೆ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಅಲ್ಪಸಂಖ್ಯಾತರು ಕೈಹಿಡಿಯಲಿಲ್ಲ ಎಂಬ ಸಿಟ್ಟಿದ್ದು, ಸಿಎಂ ಅವರು ಈ ಬಗ್ಗೆ ಹಲವು ಬಾರಿ ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿಗಳ ಹಠದಿಂದಲೇ ದೇವೇಗೌಡರು ಫಾರೂಕ್‍ಗೆ ಕೈ ಕೊಟ್ರಾ ಅನ್ನೋ ಪ್ರಶ್ನೆ ಕೂಡ ಮೂಡಿದೆ.

    ಯಾಕಂದರೆ, ಈ ದೇವೇಗೌಡರು ನಂಬಿದವರನ್ನು ಬಿಡಲ್ಲ, ಫಾರೂಕ್‍ರನ್ನ ಯು.ಟಿ ಖಾದರ್ ನಂತೆ ಮಂತ್ರಿ ಮಾಡಿ ಬೆಳೆಸುತ್ತೇನೆ ಎಂದು ಈ ಹಿಂದೆ ದೇವೇಗೌಡರು ಹೇಳಿದ್ದರು. ಕಳೆದ ವರ್ಷ ಫಾರೂಕ್‍ಗೆ ದೇವೇಗೌಡ್ರು ಕೊಟ್ಟಿದ್ದ ಭರವಸೆ ವೀಡಿಯೋ ಈಗ ವೈರಲ್ ಆಗುತ್ತಿದೆ.

    ದೇವೇಗೌಡರು ಹೇಳಿದ್ದೇನು?
    “ಈ ಸಭೆಯಲ್ಲಿ ಒಂದು ಮಾತು ಹೇಳ್ತೀನಿ. ಫಾರೂಕ್ ಅವರನ್ನು ಯು ಟಿ ಖಾದರ್ ಇರೋ ಸಚಿವ ಸ್ಥಾನದ ಜಾಗದಲ್ಲಿ ಕೂರಿಸ್ತೀನಿ. ನಾನು ಬದುಕಿರುವಾಗಲೇ ಈ ಕೆಲಸ ಮಾಡ್ತೀನಿ. ಅವರ ಆಸ್ತಿ ಎಷ್ಟಿದೆ, ಅವರ ಶ್ರೀಮಂತಿಕೆ ಎಷ್ಟಿದೆ ಅನ್ನೋದು ನಮಗೆ ಬೇಡ” ಎಂದು ಎಚ್‍ಡಿಡಿ ಹೇಳಿದ್ದರು.

  • ಸಿದ್ದರಾಮಯ್ಯ ವಿರುದ್ಧ ದೇವೇಗೌಡರಿಂದ ರಾಹುಲ್‍ಗೆ ದೂರು

    ಸಿದ್ದರಾಮಯ್ಯ ವಿರುದ್ಧ ದೇವೇಗೌಡರಿಂದ ರಾಹುಲ್‍ಗೆ ದೂರು

    ಬೆಂಗಳೂರು: ಮೈತ್ರಿ ಸರ್ಕಾರದ ಮೇಲೆ ಗುರು-ಶಿಷ್ಯರ ಪ್ರತಿಷ್ಠೆಯ ಫೈಟ್ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ದೂರು ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಂಪುಟ ಪುನರ್ ರಚನೆಗೆ ಸಿದ್ದರಾಮಯ್ಯ ಕಿರಿಕ್ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಪರಿಸ್ಥಿತಿ ನಿಯಂತ್ರಿಸದಿದ್ದರೆ ಮೈತ್ರಿ ಅಂತ್ಯ ಆಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅಪಾಯ ತಂದೊಡ್ಡುವ ಮಿತ್ರಪಕ್ಷಗಳ ‘ಹಿತಶತ್ರು’ಗಳನ್ನು ನಿವಾರಿಸಿಕೊಳ್ಳಿ ಎಂದು ದೇವೇಗೌಡರು ರಾಹುಲ್ ಗಾಂಧಿ ಹಾಗೂ ಅಹ್ಮದ್ ಪಟೇಲ್‍ಗೆ ದೂರು ಕೊಟ್ಟಿದ್ದಾರೆ. ಈ ಮೂಲಕ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ ಅಡ್ಡಗಾಲಾಗಿದ್ದಾರೆ ಎಂದು ದೂರು ಕೊಟ್ಟಿದ್ದಾರೆ.

    ಜೆಡಿಎಸ್ ಕೋಟಾದ 2 ಸಚಿವ ಸ್ಥಾನ ಪಕ್ಷೇತರರಿಗೆ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಹೇಳಿಕೆಗೆ ಗೌಡರು ಕೆಂಡಾಮಂಡಲರಾಗಿದ್ದು, ಸಚಿವ ಸಂಪುಟ ವಿಸ್ತರಣೆ ವೇಳೆ ಜೆಡಿಎಸ್ ಕೋಟಾ ಬಿಟ್ಟುಕೊಡಲ್ಲ. ಜೆಡಿಎಸ್‍ನಿಂದ ಮುಸ್ಲಿಮರು, ದಲಿತರಿಗೆ ಸಚಿವ ಸ್ಥಾನ ಕೊಡಬೇಕು. ಹಾಗಾಗಿ, ಜೆಡಿಎಸ್ ಕೋಟಾ ಬಿಟ್ಟುಕೊಡಲ್ಲ ಎಂದು ದೇವೇಗೌಡರು ತಿಳಿಸಿದ್ದಾರೆ.

    ಇದೇ ವೇಳೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬಗ್ಗೆಯೂ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಹಿಂದೆ ರಾಹುಲ್‍ಗೆ ಬರೆದಿದ್ದ ಪತ್ರವನ್ನು ನೆನಪಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.

    ರಾಜ್ಯ ಸಚಿವ ಸಂಪುಟ ಬುಧವಾರ ವಿಸ್ತರಣೆಯಾಗುವುದಾಗಿ ನಿಗದಿಯಾಗಿತ್ತು. ಆದರೆ ಸೋಮವಾರ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರ ನಿಧನರಾದ ಹಿನ್ನೆಲೆಯಲ್ಲಿ ಇದೀಗ ಶುಕ್ರವಾರಕ್ಕೆ ಮುಂದೂಡಲಾಗಿದೆ.

  • ಸರ್ಕಾರ ಉಳಿಸೋಕೆ ಜೆಡಿಎಲ್‍ಪಿ ಸಭೆಯಲ್ಲಿ ಶಪಥ

    ಸರ್ಕಾರ ಉಳಿಸೋಕೆ ಜೆಡಿಎಲ್‍ಪಿ ಸಭೆಯಲ್ಲಿ ಶಪಥ

    – ನಾಲ್ಕು ನಿರ್ಣಯಗಳ ಅಂಗೀಕಾರ

    ಬೆಂಗಳೂರು: ಸರ್ಕಾರ ಉಳಿಸಿಕೊಳ್ಳುವ ಶಪಥ ಸೇರಿದಂತೆ ಪ್ರಮುಖ ನಾಲ್ಕು ನಿರ್ಣಯಗಳನ್ನು ಜೆಡಿಎಸ್ ಶಾಸಕಾಂಗ ಪಕ್ಷದ (ಜೆಡಿಎಲ್‍ಪಿ) ಸಭೆಯಲ್ಲಿ ಕೈಗೊಳ್ಳಲಾಗಿದೆ.

    ಬೆಂಗಳೂರಿನ ಜೆಪಿ ನಗರದ ಸಿಎಂ ಕುಮಾರಸ್ವಾಮಿ ಅವರ ನಿವಾಸದಲ್ಲಿ ಮಂಗಳವಾರ ಜೆಡಿಎಲ್‍ಪಿ ಸಭೆ ನಡೆಯಿತು. ಕುಮಾರಸ್ವಾಮಿಯವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಎಚ್.ವಿಶ್ವನಾಥ್ ಸೇರಿದಂತೆ ಪಕ್ಷದ ಸಚಿವರು, ಶಾಸಕರು, ನಾಯಕರು ಭಾಗವಹಿಸಿದ್ದರು.

    ಸರ್ಕಾರವನ್ನು ಉಳಿಸಿಕೊಂಡು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸರ್ಕಾರಕ್ಕೆ ಜೆಡಿಎಸ್ ಶಾಸಕರಿಂದ ಎಲ್ಲಾ ರೀತಿಯ ಬೆಂಬಲ ನೀಡಬೇಕು. ಎಚ್.ವಿಶ್ವನಾಥ್ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ವಿಚಾರ ಪ್ರಸ್ತಾಪ ಸರಿಯಲ್ಲ. ಯಾವುದೇ ಕಾರಣಕ್ಕೂ ವಿಶ್ವನಾಥ್ ರಾಜೀನಾಮೆ ಅಂಗೀಕಾರ ಬೇಡ ಎಂದು ಶಾಸಕರು ಒತ್ತಾಯಿಸಿದ್ದಾರೆ. ಈ ವಿಚಾರ ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರ ವಿವೇಚನೆಗೆ ಬಿಟ್ಟಿದ್ದು ಎಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಲೋಕಸಭಾ ಚುನಾವಣೆ ಫಲಿತಾಂಶ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ. ಅದು ಸರ್ಕಾರದ ಮೇಲೆ ಪರಿಣಾಮ ಬೀರಲ್ಲ. ಹಾಗಾಗಿ ಎಲ್ಲಾ ಶಾಸಕರು ಸರ್ಕಾರಕ್ಕೆ ಬೆಂಬಲ ಕೊಡಬೇಕು. ನಾನು ಗ್ರಾಮವಾಸ್ತವ್ಯ ಮೂಲಕ ಮತ್ತೆ ರಾಜ್ಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಅವರು ಸಭೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಸಂಪುಟ ಪುನಾರಚನೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಶಾಸಕರು ಹೇಳಿದ್ದಾರೆ. ಸಿಎಂ ಕುಮಾರಸ್ವಾಮಿ ಅವರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಅಗತ್ಯವಿದ್ದರೆ ನಾವು ಮಂತ್ರಿಗಿರಿಗೆ ರಾಜೀನಾಮೆ ಕೊಡಲು ಸಿದ್ಧ ಎಂದು ಸಚಿವರು ಬೆಂಬಲ ಸೂಚಿಸಿದ್ದಾರೆ.

    ನಿಮ್ಮ ಏನೇ ಸಮಸ್ಯೆ ಇದ್ದರೂ ಪರಿಹಾರ ಮಾಡೋಣ. ರಾಜೀನಾಮೆ ವಾಪಸ್ ಪಡೆಯಿರಿ. ಈ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ. ಸಮ್ಮಿಶ್ರ ಸರ್ಕಾರವಿರುವಾಗ ಇಂತಹ ನಿರ್ಧಾರಗಳನ್ನು ಕೈಗೊಳ್ಳುವುದು ಸರಿಯಲ್ಲ. ಇದು ನಮ್ಮ ಪಕ್ಷಕ್ಕಲ್ಲದೇ ಮಿತ್ರ ಪಕ್ಷಕ್ಕೂ ಮುಜುಗರ ತರುತ್ತದೆ. ನಿಮ್ಮ ಅಸಮಾಧಾನ ಏನೇ ಇದ್ದರೂ ಸರಿ ಮಾಡೋಣ ಎಂದು ಎಚ್.ಡಿ.ದೇವೇಗೌಡ ಅವರು ಮನವೊಲಿಕೆಗೆ ಯತ್ನಿಸಿದರು ಎನ್ನಲಾಗಿದೆ.

    ಎಚ್.ಡಿ.ದೇವೇಗೌಡರ ಮಾತಿಗೂ ವಿಶ್ವನಾಥ್ ಒಪ್ಪಲಿಲ್ಲ. ಅಷ್ಟೇ ಅಲ್ಲದೆ ಯಾವುದೇ ಪ್ರತಿಕ್ರಿಯೆ ನೀಡದೆ ಕುಳಿತಿದ್ದರಂತೆ. ಇತ್ತ ಶಾಸಕರಿಂದಲೂ ಮನವೊಲಿಕೆಗೆ ಯತ್ನ ನಡೆಯಿತು. ಆದರೆ ವಿಶ್ವನಾಥ್ ಅವರು ಶಾಸಕರ ಮಾತಿಗೂ ಕ್ಯಾರೆ ಎನ್ನದೆ, ತಮ್ಮ ನಿರ್ಧಾರ ವಾಪಸ್ ಪಡೆಯಲು ನಿರಾಕರಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

  • ದೇವೇಗೌಡರನ್ನು ಎದುರಿಸಲು ನನ್ನಿಂದಾಗಲ್ಲ- ಎಚ್ ವಿಶ್ವನಾಥ್

    ದೇವೇಗೌಡರನ್ನು ಎದುರಿಸಲು ನನ್ನಿಂದಾಗಲ್ಲ- ಎಚ್ ವಿಶ್ವನಾಥ್

    – ಯಾರ ಬಳಿಯೂ ಮಂತ್ರಿ ಸ್ಥಾನ ಕೇಳಲ್ಲ
    – ಸುಮಲತಾರಿಗೆ ನಿಂದಿಸಿದ್ದೇ ಸೋಲಿಗೆ ಕಾರಣ
    – ತಂತ್ರಗಾರಿಕೆಯನ್ನ ಹೆಣೆದು ಎಚ್‍ಡಿಡಿಯನ್ನು ಸೋಲಿಸಲಾಯ್ತು

    ಬೆಂಗಳೂರು: ನಾನು ಯಾರನ್ನು ಬೇಕಾದ್ರು ಎದುರಿಸಬಲ್ಲೆ, ಆದರೆ ದೇವೇಗೌಡರನ್ನು ಮಾತ್ರ ಎದುರಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಈಗಾಗಲೇ ಜೆಡಿಎಸ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್ ವಿಶ್ವನಾಥ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪಕ್ಷದವರು ನನಗೆ ಕಾರು ಕೊಟ್ಟಿದ್ದಾರೆ. ಆ ಕಾರಿನಲ್ಲಿ ನಾನು ಜೆಪಿ ಭವನದಲ್ಲಿರುವ ಜೆಡಿಎಸ್ ಕಚೇರಿಗೆ ಹೋಗಿ ರಾಷ್ಟ್ರೀಯ ಅಧ್ಯಕ್ಷರ ಟೇಬಲ್ ಮೇಲೆ ರಾಜೀನಾಮೆ ಪತ್ರ ಇಟ್ಟು ಬರುತ್ತೇನೆ. ಸಂಜೆ ದೇವೇಗೌಡರು ಬಂದು ನೋಡುತ್ತಾರೆ. ಸಂಜೆ ನಾನು ಶಾಸಕರ ಸಭೆಗೆ ಹೋಗುತ್ತೇನೆ ಎಂದಿದ್ದಾರೆ.

    ನಾನು ಯಾರನ್ನು ಬೇಕಾದ್ರು ಎದುರಿಸಬಲ್ಲೆನು. ಆದರೆ ದೇವೇಗೌಡರನ್ನು ಎದುರಿಸಲು ನನ್ನಿಂದ ಆಗಲ್ಲ. ಹೀಗಾಗಿ ನಾನು ಅವರ ಕಚೇರಿಗೆ ತೆರಳಿ ಅವರ ಟೇಬಲ್ ಮೇಲೆ ಪತ್ರವಿಟ್ಟು, ಕಾರನ್ನು ಅಲ್ಲೇ ಬಿಟ್ಟು ಬರುತ್ತೇನೆ ಎಂದು ಹೇಳಿದ್ದಾರೆ.

    ವರಿಷ್ಠರು ಮನಸ್ಸು ಮಾಡಿದ್ದರೆ ಸಮನ್ವಯ ಸಮಿತಿಗೆ ನನ್ನನ್ನು ಸೇರಿಸಬಹುದಿತ್ತು. ದೇವೇಗೌಡರಿಗೆ ತಿರುಗಿ ಮಾತಾಡಲು ನನ್ನಿಂದ ಆಗಲ್ಲ. ಹಾಗಾಗಿ ಮೊದಲು ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಬಳಿಕ ದೇವೇಗೌಡರನ್ನ ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

    ಸಚಿವ ಸಂಪುಟಕ್ಕೆ ಸೇರಿಸಿಕೊಂಡರೆ ಬೇಡ ಎನ್ನುವುದಿಲ್ಲ. ನಾನಾಗಿ ಯಾರ ಬಳಿಯೂ ಮಂತ್ರಿ ಸ್ಥಾನ ಕೇಳುವುದಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಹಿಗ್ಗಾಮುಗ್ಗಾ ಹೊಡೆಸಿಕೊಂಡಿದೆ. ನಾನು ಯಾಕೆ ಬಿಜೆಪಿ ಹೋಗಲಿ ಎಂದು ಹೇಳುವ ಮೂಲಕ ವಿಶ್ವನಾಥ್ ಅವರು ಬಿಜೆಪಿ ಸೇರ್ಪಡೆಯ ವಿಚಾರವನ್ನು ತಳ್ಳಿಹಾಕಿದರು.

    ಸುಮಲತಾ ಮಂಡ್ಯದ ಹೆಣ್ಣು ಮಗಳು. ಯಾರು ಏನೇ ಮಾತಾಡಿದ್ರೂ ನಾನು ಕ್ಷಮೆ ಕೇಳುತ್ತೇನೆ. ಸುಮಲತಾ ಅವರನ್ನು ಜೆಡಿಎಸ್‍ನ ಕೆಲವರು ನಿಂದಿಸಿದ್ದರು. ಅದಕ್ಕೆ ನಾನು ರಾಜ್ಯಾಧ್ಯಕ್ಷನಾಗಿ ಅಂದೇ ಕ್ಷಮೆ ಕೇಳಿದ್ದೇನೆ. ಅವರನ್ನು ನಿಂದಿಸಿದ್ದು ಮಂಡ್ಯ ಸೋಲಿಗೆ ಕಾರಣ ಎಂದ ಅವರು, ನಾನು ಮಧ್ಯಂತರ ಚುನಾವಣೆಯನ್ನ ನಿರೀಕ್ಷೆ ಮಾಡುತ್ತಿಲ್ಲ ಅಂದರು.

    ತಂತ್ರಗಾರಿಕೆಯನ್ನ ಹೆಣೆದು ದೇವೇಗೌಡರನ್ನ ತುಮಕೂರಿನ ಖೆಡ್ಡಾಗೆ ಕೆಡವಲಾಯಿತು. ನಾನು, ಶ್ರೀನಿವಾಸ್ ಪ್ರಸಾದ್ ಒಂದೇ ಕೇರಿಯವರು. ಆದರೆ ರಾಜಕಾರಣ ನಮ್ಮಿಬ್ಬರ ಸ್ನೇಹಕ್ಕೆ ಅಡ್ಡಿ ಬಂದಿಲ್ಲ. ನಾವಿಬ್ಬರೂ ಸಮಾನ ದುಃಖಿಗಳು ಎಂದರು.

  • ಸೋಲಿನಿಂದ ಬೇಸರಗೊಂಡಿರುವ ನಿಖಿಲ್‍ಗೆ ತಾತನಿಂದ ರಾಜಕೀಯ ಪಾಠ

    ಸೋಲಿನಿಂದ ಬೇಸರಗೊಂಡಿರುವ ನಿಖಿಲ್‍ಗೆ ತಾತನಿಂದ ರಾಜಕೀಯ ಪಾಠ

    ಬೆಂಗಳೂರು: ನಿಖಿಲ್ ಎಲ್ಲಿದ್ದಿಯಪ್ಪ ಅನ್ನೋದು ಲೋಕಸಭಾ ಚುನಾವಣಾ ಸಮಯದಲ್ಲಿ ಮಂಡ್ಯ ಅಲ್ಲದೆ ಇಂಡಿಯಾ ಗಡಿ ದಾಟಿ ಹೊರ ದೇಶದಲ್ಲೂ ಫೇಮಸ್ ಆಗಿತ್ತು. ಆದರೆ ಸೋಲಿನ ಆಘಾತದಲ್ಲಿದ್ದ ನಿಖಿಲ್ ಈಗ ಅದರಿಂದ ಹೊರ ಬಂದು ಮುಂದಿನ ರಾಜಕೀಯ ಜೀವನದ ಸಿದ್ಧತೆಯಲ್ಲಿದ್ದಾರೆ. ಅದಕ್ಕಾಗಿ ನಿಖಿಲ್‍ಗೆ ಭಾನುವಾರ ಗುರುಮಂತ್ರ ಭೋದನೆಯಾಗಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ನಿಖಿಲ್ ಗೆ ರಾಜನೀತಿಯ ಪಾಠ ಮಾಡಿದ್ದಾರೆ. ಸೋಲನ್ನ ಹೇಗೆ ಎದುರಿಸಬೇಕು, ಸೋಲಿನಿಂದ ಗೆಲುವಿನ ಕಡೆಗೆ ನಡೆದು ಹೋಗುವುದು ಹೇಗೆ ಎಂಬುದರ ಕುರಿತು ಪಾಠ ಮಾಡಿದ್ದಾರೆ.

    ಸೋಲಿನಿಂದ ಬೇಸರವಾಗಿದ್ದ ನಿಖಿಲ್ ಅವರನ್ನ ಪದ್ಮನಾಭ ನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡಿರುವ ದೇವೇಗೌಡರು ರಾಜನೀತಿ ಬೋಧಿಸಿದ್ದಾರೆ. ಸೋಲು ಗೆಲುವು ಜೀವನದಲ್ಲಿ ಸಾಮಾನ್ಯ. ಎರಡನ್ನೂ ಆತ್ಮವಿಶ್ವಾಸದಿಂದಲೇ ಎದುರಿಸಬೇಕು ಎಂದು ತಮ್ಮ ಮೊಮ್ಮಗನಿಗೆ ರಾಜಪಾಠ ಬೋಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ತಾತನ ಪಾಠ, ಮೊಮ್ಮಗನ ಉತ್ತರ:
    ಚುನಾವಣೆ ಅಂದಮೇಲೆ ಸೋಲು-ಗೆಲುವು ಎಲ್ಲವೂ ಸಹಜ. ಅದನ್ನ ಮನಸ್ಸಿಗೆ ಹಚ್ಚಿಕೊಂಡು ಬೇಸರ ಮಾಡಿಕೊಳ್ಳುವುದಲ್ಲ. ಎಲ್ಲವನ್ನ ಮರೆತು ಮುಂದುವರಿಯಬೇಕು ಎಂದು ಎಚ್‍ಡಿಡಿ ಹೇಳಿದ್ದಾರೆ. ಇದಕ್ಕೆ ನಾನೇನು ಸೋತ ಬೇಸರದಲ್ಲಿಲ್ಲ. ಆದರೆ ನಿಮಗೆ ಹಾಗೂ ಅಪ್ಪನಿಗೆ ಅಷ್ಟೊಂದು ಪ್ರೀತಿ ತೋರಿಸುವ ಮಂಡ್ಯ ಜನ ನನ್ನನ್ನ ಕೈ ಬಿಟ್ಟಿದ್ದು ನನಗೆ ಬೇಜಾರಾಯಿತು ಅಷ್ಟೇ ಎಂದಿದ್ದಾರೆ.

    ಎಲೆಕ್ಷನ್ ಅಂದ ಮೇಲೆ ಸೋಲು-ಗೆಲುವು ಎಲ್ಲಾ ಸಾಮಾನ್ಯ. ಯಾವುದನ್ನೂ ಜಾಸ್ತಿ ಮನಸ್ಸಿಗೆ ಹಚ್ಕೋಬೇಡ. ಮುಂದೆ ಏನು ಮಾಡಬೇಕು ಅನ್ನೋದನ್ನ ನೀನೇ ತೀರ್ಮಾನ ಮಾಡು ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ನಿಖಿಲ್, ಇಲ್ಲ ನಾನು ಮಂಡ್ಯಕ್ಕೆ ಹೋಗಬೇಕು ಮತದಾನ ಮಾಡಿದವರಿಗೆ ಥ್ಯಾಂಕ್ಸ್ ಹೇಳಬೇಕು ಅಂದುಕೊಂಡಿದ್ದೇನೆ. ಒಂದೆರಡು ದಿನದಲ್ಲಿ ಮಂಡ್ಯಕ್ಕೆ ಹೋಗುತ್ತೇನೆ ಎಂದು ಉತ್ತರಿಸಿದ್ದಾರೆ.

    ರಾಜಕಾರಣದಲ್ಲಿ ನಮ್ಮಗುರಿ ಸ್ಪಷ್ಟವಾಗಿರಬೇಕು. ಎಷ್ಟೇ ಕಷ್ಟ ಆದರೂ ಗುರಿ ಮುಟ್ಟುವ ಛಲ ಇರಬೇಕು. ನೀನು ಮಂಡ್ಯದಲ್ಲೇ ರಾಜಕಾರಣ ಮಾಡೋದಾದ್ರೆ ಸ್ಪಷ್ಟವಾದ ತೀರ್ಮಾನ ಮಾಡಿ ಮುಂದುವರಿ. ಮುಂದೆ ಹೋದ ಮೇಲೆ ಹಿಂದೆ ಬರೋ ಹಾಗಿರಬಾರದು ಎಂದು ಎಚ್‍ಡಿಡಿ ಮಾತಿಗೆ ನಿಖಿಲ್, ಇಲ್ಲ ತಾತಾ ಇಷ್ಟು ಮುಂದೆ ಹೋದ ಮೇಲೆ ಹಿಂದೆ ಬರುವ ಪ್ರಶ್ನೆಯೇ ಇಲ್ಲ. ಎಲ್ಲಿ ಸೋತಿದ್ದೀನಿ ಅಲ್ಲೇ ಗೆಲ್ಲಬೇಕು ಗೆಲ್ಲುತ್ತೇನೆ ಎಂದು ತಿಳಿಸಿದ್ದಾರೆ.

    ಯಾರ ವಿರುದ್ಧ ಮಾತನಾಡಬೇಡ. ನಿನ್ನ ಪಾಡಿಗೆ ನೀನು ಕೈಲಾದ ಕೆಲಸ ಮಾಡಿಕೊಂಡು ಹೋಗು. ಜನ ಅವರಾಗಿಯೇ ನಿನ್ನ ಇಷ್ಟ ಪಡಬೇಕು. ಸೋಲಿಸಿದರೂ ನಮ್ಮ ಜೊತೆಗಿದ್ದು ಕಷ್ಟ ಸುಖಕ್ಕೆ ಸ್ಪಂದಿಸಿದ ಅನ್ನಬೇಕು. ಹಾಗೆ ಕೆಲಸ ಮಾಡಬೇಕು ಅದಕ್ಕೆ ಬದ್ಧತೆ ಇರಬೇಕು ಎಂದಿದ್ದಾರೆ. ಇದಕ್ಕೆ ನಾನು ಯಾರ ವಿರುದ್ಧವೂ ಮಾತನಾಡಲ್ಲ. ಮಂಡ್ಯದಲ್ಲೇ ಇದ್ದು ಕೆಲಸ ಮಾಡುತ್ತೇನೆ ಎಂದು ನಿಖಿಲ್ ಉತ್ತರಿಸಿದ್ದಾರೆ.

    ಇನ್ನೊಂದು ವಿಷಯ ತಿಳ್ಕೋ ನೀನು ಮಂಡ್ಯದಲ್ಲಿ ಓಡಾಡೋದು ನಾಳೆ ಇನ್ಯಾರೋ ರಾಮನಗರ, ಮಾಗಡಿ ಅಲ್ಲಿ ನಿಂತ್ರೆ ಸುಲಭವಾಗಿ ಗೆಲ್ಲಬಹುದು ಅಂದ್ರೆ ಅವಾಗ ಇನ್ನೊಂದು ತರ ಯೋಚನೆ ಮಾಡೋ ಹಾಗೆ ಮಾಡ್ಕೋಬೇಡ ಎಂದು ಹೇಳಿದ್ದಕ್ಕೆ ನಿಖಿಲ್, ಖಂಡಿತಾ ಇಲ್ಲ ತಾತಾ ನಾನು ಬೇರೆ ಯೋಚನೆ ಮಾಡಲ್ಲ. ನನಗೆ ನನ್ನ ಸೋಲಿಗಿಂತ ನಿಮ್ಮ ಸೋಲು ಜಾಸ್ತಿ ನೋವಾಯ್ತು ಎಂದು ತಿಳಿಸಿದ್ದಾರೆ.

    ಇದೆಲ್ಲ ಕಾಮನ್ ಏನು ಮಾಡೋಕೆ ಆಗಲ್ಲ. ಎಲ್ಲಾ ದೈವಿಚ್ಛೆ. ನಾನು ಸೋಲಬೇಕು ಎಂದು ದೇವರು ಇಚ್ಛೆ ಪಟ್ಟಾಗ ಯಾರು ಏನು ಮಾಡೋಕೆ ಆಗುತ್ತೆ? ನಾನು ಸೋತೆ ಎಂದು ಮನೆಯಲ್ಲಿ ಕೂರಲ್ಲ. ಮತ್ತೆ ರಾಜ್ಯ ಪ್ರವಾಸ ಮಾಡುತ್ತೇನೆ. ಪಕ್ಷ ಕಟ್ಟೋಕೆ ರಾಜ್ಯ ಪ್ರವಾಸ ಹೋಗ್ತಿನಿ. ನಿನಗೂ ಸಾಕಷ್ಟು ಅನುಭವ ಆಗಿದೆ. ಎಚ್ಚರಿಕೆಯಿಂದ ಹೆಜ್ಜೆ ಇಡು ಎಂದು ಎಚ್‍ಡಿಡಿ ಸಲಹೆ ನೀಡಿದ್ದಾರೆ. ಖಂಡಿತ ತಾತಾ, ನಾನು ಮಂಡ್ಯ ಜೊತೆಗೆ ರಾಜ್ಯದ ಬೇರೆ ಕಡೆಯಲ್ಲೂ ಓಡಾಡುತ್ತೇನೆ. ನಿಮ್ಮ ಜೊತೆ ರಾಜ್ಯ ಸುತ್ತಿ ಪಕ್ಷ ಕಟ್ಟುತ್ತೇನೆ ಎಂದು ತಾತನ ಮಾತಿಗೆ ನಿಖಿಲ್ ದನಿಗೂಡಿಸಿದ್ದಾರೆ.

    ಪ್ರಾದೇಶಿಕ ಪಕ್ಷ ಉಳಿಬೇಕು. ಕೆಲವರು ಪಕ್ಷ ದೇವೇಗೌಡರ ಕುಟುಂಬದ ಆಸ್ತಿ ಅಂತಾರೆ. ಪ್ರಾದೇಶಿಕ ಪಕ್ಷ ಉಳಿಯಬೇಕು. ಕುಟುಂಬದ ಆಸ್ತಿ ಅಲ್ಲ ರಾಜ್ಯದ ಹಿತ ಮುಖ್ಯವಾಗುತ್ತದೆ. ತಾತಾ ಖಂಡಿತ ಪಕ್ಷ ಕಟ್ಟೋಣ. ಇದರಿಂದ ಅಪ್ಪನಿಗೂ ಸಹಾಯ ಮಾಡಿದ ಹಾಗಾಗುತ್ತದೆ. ಅವರು ಸರ್ಕಾರದ ಆಡಳಿತದ ಕಡೆ ಗಮನ ಹರಿಸಲಿ. ನಾನು ನಿಮ್ಮ ಜೊತೆ ಪಕ್ಷದ ಸಂಘಟನೆಗೆ ಕೈ ಜೋಡಿಸ್ತಿನಿ ಎಂದಿದ್ದಾರೆ.

    ಸೋಲಿಗೆ ಎದೆಗುಂದಬೇಡ. ಯಾರಿಗೂ ಬೈಬೇಡ, ಗುರಿ ಸ್ಪಷ್ಟವಾಗಿರಲಿ ರಾಜಕೀಯವಾಗಿ ಮುಂದುವರಿ ಎಂದು ಪಾಠ ಮಾಡಿದ್ದಾರೆ. ಒಟ್ಟಿನಲ್ಲಿ ಇದೀಗ ರಾಜಕೀಯ ಚಾಣಕ್ಯ ದೇವೇಗೌಡರ ಹಿತ ನುಡಿ, ಗುರುಬೋಧನೆಗೆ ನಿಖಿಲ್ ರಿಂದ ಯಾವ ರೀತಿಯ ರಾಜಕೀಯ ನಡೆಗೆ ಕಾರಣವಾಗಬಹುದು ಎಂಬ ಕುತೂಹಲವನ್ನು ಈಗ ಹುಟ್ಟು ಹಾಕಿದೆ.