Tag: ಎಚ್.ಡಿ. ದೇವೇಗೌಡ

  • ತಲೆಕೆಡಿಸಿಕೊಳ್ಳದೆ ಆರಾಮವಾಗಿಯೇ ಅಮೆರಿಕ ಪ್ರವಾಸ ಮುಗಿಸಿ ಬಾ- ಸಿಎಂಗೆ ಎಚ್‍ಡಿಡಿ ಸಲಹೆ

    ತಲೆಕೆಡಿಸಿಕೊಳ್ಳದೆ ಆರಾಮವಾಗಿಯೇ ಅಮೆರಿಕ ಪ್ರವಾಸ ಮುಗಿಸಿ ಬಾ- ಸಿಎಂಗೆ ಎಚ್‍ಡಿಡಿ ಸಲಹೆ

    ಬೆಂಗಳೂರು: ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟರೂ ಶಾಂತವಾಗಿರುವಂತೆ ಸಿಎಂಗೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಸಲಹೆ ನೀಡಿದ್ದಾರೆ.

    ಶಾಸಕರ ರಾಜೀನಾಮೆಗೆ ತಲೆಕೆಡಿಸಿಕೊಳ್ಳದೆ ಆರಾಮವಾಗಿಯೇ ಅಮೆರಿಕ ಪ್ರವಾಸ ಮುಗಿಸಿಕೊಂಡು ಬರುವಂತೆ ಹೇಳಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಈ ಸರ್ಕಾರ ನಮಗಿಂತಲೂ ಹೆಚ್ಚು ಬೇಕಿರುವುದು ಕಾಂಗ್ರೆಸ್ಸಿಗೆ. ಅವರೇ ಮುಂದೆ ಬಂದು ಬೆಂಬಲ ನೀಡುತ್ತೇವೆ ಎಂದು ಹೇಳಿರುವುದು. ರಾಜೀನಾಮೆ ಕೊಟ್ಟಿದ್ದು ಅವರ ಶಾಸಕರೇ ಹೊರತು ನಮ್ಮವರಲ್ಲ. ದೇಶದಲ್ಲಿ ಆ ಪಕ್ಷದ ಸ್ಥಿತಿ ಹೀನಾಯವಾಗಿದೆ. ಕರ್ನಾಟಕದಲ್ಲೂ ಇರುವ ಅಧಿಕಾರ ಕಳೆದುಕೊಂಡರೆ ಅವರಿಗೆ ನಷ್ಟ. ಹೀಗಾಗಿ ಅವರ ಪಕ್ಷದೊಳಗಿನ ಬಂಡಾಯವನ್ನ ಅವರೇ ನಿಯಂತ್ರಿಸಲಿ. ನಮ್ಮ ಶಾಸಕರ ಬಗ್ಗೆಯಷ್ಟೇ ನಾವು ತಲೆಕೆಡಿಸಿಕೊಳ್ಳೋಣ ಎಂದು ಮಾಜಿ ಪ್ರಧಾನಿ ಕಿರಿಯ ಮಗನಿಗೆ ಸಲಹೆ ನೀಡಿದ್ದಾರೆ.

    ನಾವು ನಮ್ಮ ಶಾಸಕರ ಬಗ್ಗೆ ಮಾತ್ರ ಚಿಂತೆ ಮಾಡೋಣ. ಹೈಕಮಾಂಡ್ ಜೊತೆ ನಾನು ಮಾತನಾಡುತ್ತೇನೆ. ಮುಂದಿನದು ಕಾಂಗ್ರೆಸ್ ನವರಿಗೆ ಬಿಡೋಣ ಎಂದು ಮಗನಿಗೆ ದೇವೇಗೌಡರು ತಿಳಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ತಲ್ಲಣಗಳ ಹೊರತಾಗಿಯೂ ಸಿಎಂ ಅಮೆರಿಕ ಪ್ರವಾಸ ಮೊಟಕುಗೊಳಿಸಿ ವಾಪಸ್ಸಾಗಿಲ್ಲ ಎನ್ನುವ ವಿಚಾರ ತಿಳಿದು ಬಂದಿದೆ.

    ಇಂದು ಮೂವರ ರಾಜೀನಾಮೆ?
    ಸೋಮವಾರ ವಿಜಯನಗರ ಶಾಸಕ ಆನಂದ್ ಸಿಂಗ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು. ಮೂಲಗಳ ಪ್ರಕಾರ ಇಂದು ಮೂವರು ಶಾಸಕರು, ನಾಳೆ ಮತ್ತಿಬ್ಬರು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇಂದು ರಾಜೀನಾಮೆ ಕೊಡಬಹುದು ಎಂದು ಊಹಿಸಲಾಗಿರುವ ಶಾಸಕರ ಪಟ್ಟಿಯಲ್ಲಿ ಹಿರೇಕೆರೂರು ಶಾಸಕ ಬಿಸಿ ಪಾಟೀಲ್, ಜಾರಕಿಹೊಳಿ ಆಪ್ತ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹೆಸರಿದೆ.

    ಬಳ್ಳಾರಿ ಗ್ರಾಮೀಣ ಶಾಸಕ ಬಿ ನಾಗೇಂದ್ರ, ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್ ಕೂಡಾ ರಾಜೀನಾಮೆ ನೀಡಬಹುದು ಎನ್ನಲಾಗುತ್ತಿದೆ. ಇಷ್ಟು ಮಂದಿಯೂ ರಾಜೀನಾಮೆ ಕೊಟ್ಟರೆ ಆಗ ಪತನ ಆಗಲಿರುವ ಕಾಂಗ್ರೆಸ್‍ನ ವಿಕೆಟ್‍ಗಳ ಸಂಖ್ಯೆ ಏಳಕ್ಕೆ ತಲುಪಲಿದೆ.

  • ಜೆಡಿಎಸ್ ಪಾದಯಾತ್ರೆಗೆ ತಾತನ ಬದ್ಲು ಮೊಮ್ಮಗನ ಸಾರಥ್ಯ

    ಜೆಡಿಎಸ್ ಪಾದಯಾತ್ರೆಗೆ ತಾತನ ಬದ್ಲು ಮೊಮ್ಮಗನ ಸಾರಥ್ಯ

    – ಮಂಡ್ಯದಲ್ಲಿ ನಿಖಿಲ್ ಮನೆ ಪ್ಲಾನ್‍ಗೆ ಆಷಾಢ ಅಡ್ಡಿ

    ಬೆಂಗಳೂರು: ಲೋಕಸಭಾ ಚುನಾವಣೆಯ ಸೋಲಿನ ಆಘಾತದ ಬಳಿಕ ಪಕ್ಷದ ಸಂಘಟನೆಗಾಗಿ ಜೆಡಿಎಸ್ ವರಿಷ್ಠ ದೇವೇಗೌಡರು ಪಾದಯಾತ್ರೆ ತಂತ್ರಕ್ಕೆ ಮೊರೆ ಹೋಗಿದ್ದಾರೆ.

    ಆಗಸ್ಟ್ 20ರಿಂದ ಆರಂಭವಾಗಲಿರುವ ಪಕ್ಷ ಕಟ್ಟುವ ಕಾಲ್ನಡಿಗೆಯ ನೇತೃತ್ವವನ್ನು ಮಾಜಿ ಪ್ರಧಾನಿ ವಹಿಸಿಕೊಳ್ಳುವ ಸಾಧ್ಯತೆ ವಿರಳ. ಬದಲಿಗೆ ಕಿರಿ ಮೊಮ್ಮಗ ನಿಖಿಲ್ ಹೆಗಲಿಗೆ ಹಾಕುವ ಸಾಧ್ಯತೆ ಇದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಆಷಾಢ ಅಡ್ಡಿ:
    ಮೈಸೂರಿನ ನಂಜನಗೂಡಿನಿಂದ ಶುರುವಾಗಲಿರುವ ಪಾದಯಾತ್ರೆ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಕೊನೆಯಾಗಲಿದೆ. ಇತ್ತ ಮಂಡ್ಯದಲ್ಲಿ ನಿಖಿಲ್ ಮನೆ ಮಾಡುವುದು ಇನ್ನೊಂದು ತಿಂಗಳು ತಡವಾಗಲಿದೆ. ಜುಲೈ 2ರಿಂದ ಆಷಾಢ ಶುರುವಾಗಲಿದ್ದು, ಈ ಮಾಸದಲ್ಲಿ ಮನೆ, ಭೂಮಿ ಖರೀದಿ ಮಾಡಬಾರದು ಅನ್ನೋದು ಸಂಪ್ರದಾಯದ ಹಿನ್ನೆಲೆಯಲ್ಲಿ ಮನೆ ಮಾಡುವುದು ತಡವಾಗಲಿದೆ.

    ಪಕ್ಷ ಸಂಘಟನೆಗಾಗಿ ಪಾದಯಾತ್ರೆ:
    ಶನಿವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಕರೆದಿದ್ದ ದೇವೇಗೌಡರು, ಕುಟುಂಬ ರಾಜಕಾರಣದ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದರು. ಒಂದು ತಿಂಗಳಲ್ಲಿ ಪಕ್ಷದಲ್ಲಿರುವ ಘಟಕಗಳನ್ನು ಅಸ್ತಿತ್ವಕ್ಕೆ ತರುತ್ತೇನೆ. ಪಾದಯಾತ್ರೆಯಿಂದ ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರಕ್ಕೆ ಆಪಾಯ ಆಗಬಾರದು. ಇದನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡಬೇಕು. ಪರಸ್ಪರ ಮೈತ್ರಿ ಮಾಡಿಕೊಂಡಿದ್ದೇವೆ. ಇದಕ್ಕೆ ಯಾವುದೇ ರೀತಿಯ ಅಪಾಯ ಬರಬಾರದು. ಪ್ರಾದೇಶಿಕ ಪಕ್ಷಗಳು ಇಲ್ಲದಿದ್ದರೆ, ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಬಹಳ ಉದಾಸೀನವಾಗಿ ಕಾಣುತ್ತಿದ್ದವು. ಹೆಚ್ಚು ತಡ ಮಾಡದೇ ಪಾದಯಾತ್ರೆಯನ್ನು ಪ್ರಾರಂಭಿಸಬೇಕು. ಈಗಲೇ ನಾನು ದೆಹಲಿಗೆ ಹೊರಡುವ ಸನ್ನಿವೇಶ ಇಲ್ಲ. ಪಕ್ಷದ ಕಚೇರಿಯಲ್ಲಿದ್ದು ಎಲ್ಲವನ್ನೂ ಗಮನಿಸುತ್ತೇನೆ ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದರು.

  • ಕುಟುಂಬ ರಾಜಕಾರಣಕ್ಕೆ ಜನ ತಕ್ಕ ಶಿಕ್ಷೆ ನೀಡಿದ್ದಾರೆ: ಎಚ್‍ಡಿಡಿ

    ಕುಟುಂಬ ರಾಜಕಾರಣಕ್ಕೆ ಜನ ತಕ್ಕ ಶಿಕ್ಷೆ ನೀಡಿದ್ದಾರೆ: ಎಚ್‍ಡಿಡಿ

    ಬೆಂಗಳೂರು: ನನ್ನ ರಾಜಕೀಯ ಜೀವನದಲ್ಲೇ ನಾನು ಕುಟುಂಬ ರಾಜಕಾರಣ ಮಾಡಿಲ್ಲ. ಆದರೆ, ಕಳೆದ ಚುನಾವಣೆಯಲ್ಲಿ ನಮ್ಮ ಕುಟುಂಬದಲ್ಲೇ ಮೂವರು ಸ್ಪರ್ಧಿಸಬೇಕಾದ ಪರಿಸ್ಥಿತಿ ಎದುರಾಯಿತು. ಇದಕ್ಕೆ ಜನರೂ ತಕ್ಕ ಶಿಕ್ಷೆ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕುಟುಂಬ ರಾಜಕಾರಣದ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದಾರೆ.

    ಇಂದು ಖಾಸಗಿ ಹೋಟೆಲ್‍ನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಎಂದೂ ಕುಟುಂಬ ರಾಜಕಾರಣ ಮಾಡಿಲ್ಲ. ಆದರೆ ಕಳೆದ ಚುನಾವಣೆಯಲ್ಲಿ ನಮ್ಮ ಕುಟುಂಬದ ಮೂವರು ಚುನಾವಣೆಗೆ ಸ್ಪರ್ಧಿಸಬೇಕಾಯಿತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗಿದ್ದನ್ನು ನೋಡಿದ್ದೇನೆ. ಜನರೂ ತಕ್ಕ ಶಿಕ್ಷೆ ನೀಡಿದ್ದಾರೆ. ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗದವರನ್ನು ಗುರುತಿಸಿಕೊಂಡು ಬಂದೆ. ನಾನು ಚುನಾವಣೆಗೆ ನಿಂತಿದ್ದೂ ಆಕಸ್ಮಿಕ. ಇನ್ನು ನಾನು ಚುನಾವಣೆಗೆ ನಿಲ್ಲುವುದಿಲ್ಲ. ಪಕ್ಷ ಸಂಘಟನೆಗೆ ಸಾಕಷ್ಟು ದುಡಿದಿದ್ದೇನೆ. ನಿಖಿಲ್ ಕುಮಾರಸ್ವಾಮಿ ಒಬ್ಬ ಯುವಕನಾಗಿ ಶಕ್ತಿ ಮೀರಿ ಕೆಲಸ ಮಾಡಿದ್ದಾನೆ. ಒಳ್ಳೆಯ ಹೆಸರು ಪಡೆಯುತ್ತಿದ್ದಾನೆ. ನಿಖಿಲ್ ರಾಜಕೀಯಕ್ಕೆ ಬರುವುದು ಸಹ ಕನಸು ಮನಸಲ್ಲೂ ಗೊತ್ತಿರಲಿಲ್ಲ ಎಂದು ಹೇಳಿ ದೇವೇಗೌಡರು ಭಾವುಕರಾದರು.

    ಒಂದು ತಿಂಗಳಲ್ಲಿ ಪಕ್ಷದಲ್ಲಿರುವ ಘಟಕಗಳನ್ನು ಅಸ್ತಿತ್ವಕ್ಕೆ ತರುತ್ತೇನೆ. ಪಾದಯಾತ್ರೆಯಿಂದ ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರಕ್ಕೆ ಆಪಾಯ ಆಗಬಾರದು. ಇದನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡಬೇಕು. ಪರಸ್ಪರ ಮೈತ್ರಿ ಮಾಡಿಕೊಂಡಿದ್ದೇವೆ. ಇದಕ್ಕೆ ಯಾವುದೇ ರೀತಿಯ ಅಪಾಯ ಬರಬಾರದು. ಪ್ರಾದೇಶಿಕ ಪಕ್ಷಗಳು ಇಲ್ಲದಿದ್ದರೆ, ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಬಹಳ ಉದಾಸೀನವಾಗಿ ಕಾಣುತ್ತಿದ್ದವು. ಹೆಚ್ಚು ತಡ ಮಾಡದೆ ಪಾದಯಾತ್ರೆಯನ್ನು ಪ್ರಾರಂಭಿಸಬೇಕು. ಈಗಲೇ ನಾನು ದೆಹಲಿಗೆ ಹೊರಡುವ ಸನ್ನಿವೇಶ ಇಲ್ಲ. ಪಕ್ಷದ ಕಚೇರಿಯಲ್ಲಿದ್ದು ಎಲ್ಲವನ್ನೂ ಗಮನಿಸುತ್ತೇನೆ ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

    ಮತ್ತೊಮ್ಮೆ ಬಿಜೆಪಿ ಪಕ್ಷ ತಲೆ ಎತ್ತಬಾರದು. ನಾನು ಸತ್ತರೂ ಸಹ ಪಕ್ಷ ಉಳಿಸುತ್ತೇನೆ. ನನ್ನ ಕಾಲ ಮುಗಿಯುತ್ತಾ ಬಂದಿದೆ. ಕೊನೆ ಉಸಿರಿರುವ ವರೆಗೆ ಪಕ್ಷದ ಏಳಿಗೆಗಾಗಿ ದುಡಿಯುತ್ತೇನೆ. ಇನ್ನು ಮುಂದೆ ಮುಂದಿನ ಪೀಳಿಗೆಯ ಜವಾಬ್ದಾರಿ ಎಂದು ದೇವೇಗೌಡ ಅವರು ಕಾರ್ಯಕರ್ತರ ಸಭೆಯಲ್ಲಿ ಭಾವುಕರಾದರು.

  • ಸಾಲಮನ್ನಾ ಹವಾ ಕ್ರಿಯೇಟ್ ಮಾಡಲು ಜೆಡಿಎಸ್‍ನಿಂದ ಅದ್ಧೂರಿ ಪಾದಯಾತ್ರೆ

    ಸಾಲಮನ್ನಾ ಹವಾ ಕ್ರಿಯೇಟ್ ಮಾಡಲು ಜೆಡಿಎಸ್‍ನಿಂದ ಅದ್ಧೂರಿ ಪಾದಯಾತ್ರೆ

    ಬೆಂಗಳೂರು: ‘ಸೋಲು ಗೆಲುವು ಬೇಕಾಗಿಲ್ಲ. ಆದರೆ ಹವಾ ಕ್ರಿಯೇಟ್ ಮಾಡ್ಬೇಕು. ಸಾಲಮನ್ನಾ ಕುರಿತು ಜನರಿಗೆ ಸರ್ಕಾರದ ಸಾಧನೆ ತಿಳಿಸಬೇಕು ಎಂದು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್‍ವಿ ದತ್ತಾ ಹೇಳಿದ್ದಾರೆ.

    ಖಾಸಗಿ ಹೋಟೆಲ್‍ನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅನ್ನ ಭಾಗ್ಯದಿಂದ ರಾಜಕೀಯವಾಗಿ ಲಾಭವಾಯ್ತು. ಆದರೆ, ಸಾಲ ಮನ್ನಾದಿಂದ ರಾಜಕೀಯ ಲಾಭವಾಗಿಲ್ಲ. ಪ್ರಧಾನಿ ಮೋದಿ ವರ್ಷಕ್ಕೆ ಆರು ಸಾವಿರ ನೀಡಿದರೆ ಅವರಿಗೆ ಲಾಭ ಸಿಗುತ್ತದೆ. 46 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದರೂ ನಮಗೇನೂ ಲಾಭವಾಗಿಲ್ಲ. ಸೋಲು ಗೆಲುವು ಬೇಕಾಗಿಲ್ಲ. ಆದರೆ ಹವಾ ಕ್ರಿಯೇಟ್ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

    ಮೊದಲ ಹಂತದಲ್ಲಿ ಕಾವೇರಿಯಿಂದ ತುಂಗಭದ್ರೆಯವರೆಗೆ ಪಾದಯಾತ್ರೆ ನಡೆಯಲಿದೆ. ಎರಡನೇ ಹಂತದ ಪಾದಯಾತ್ರೆ ಕೃಷ್ಣಾದಿಂದ ಮಲಪ್ರಭಾವರೆಗೆ ನಂಜನಗೂಡು, ಮಳವಳ್ಳಿ, ಕೊಳ್ಳೇಗಾಲ, ಬೆಂಗಳೂರು, ಹೊಸಕೋಟೆ, ಚಿಂತಾವಣಿ, ಕುಣಿಗಲ್, ತುಮಕೂರು, ನೆಲಮಂಗಲ, ಮಡಿಕೇರಿ, ಸುಳ್ಯ, ಮಂಗಳೂರು, ಹಾಸನ, ಬೇಲೂರು, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹರಿಹರದವರೆಗೆ ಸುಮಾರು 1,475 ಕಿ.ಮೀ. ಪಾದಯಾತ್ರೆ ಮಾಡಬೇಕು. ಪಾದಯಾತ್ರೆ ಪ್ರಾರಂಭಿಸಿದ್ದೇ ದೇವೇಗೌಡರು. ನಮಗೀಗ ಪ್ರಾದೇಶಿಕ ವಿಷಯಗಳೇ ಹೋರಾಟದ ಅಸ್ತ್ರ. ಇದರಲ್ಲಿ ಕಾವೇರಿ, ಮಹದಾಯಿ, ಬೆಳಗಾವಿ, ರೈಲ್ವೇ ಅನುದಾನಗಳು ಎಲ್ಲಾ ಸೇರುತ್ತವೆ ಎಂದು ಪಾದಯಾತ್ರೆಯ ರೂಪುರೇಷೆಗಳನ್ನು ತಿಳಿಸಿದರು.

    ಆಗಸ್ಟ್ 20ರಿಂದ ಪಾದಯಾತ್ರೆ
    ಮೊದಲ ಹಂತದ ಪಾದಯಾತ್ರೆ ಕಾವೇರಿಯಿಂದ ತುಂಗಭದ್ರಾದವರೆಗೆ ನಡೆಯಲಿದ್ದು, ಆಗಸ್ಟ್ 20ರಂದು ಪಾದಯಾತ್ರೆ ಆರಂಭ ಆಗಲಿದೆ. ದಿ.ದೇವರಾಜು ಅರಸು ಅವರ ಹುಟ್ಟು ಹಬ್ಬ. ಹೀಗಾಗಿ ಅಂದು ನಮ್ಮ ಪಾದಯಾತ್ರೆ ಪ್ರಾರಂಭ ಮಾಡುತ್ತೇವೆ. ಆಗಸ್ಟ್ 20ರಿಂದ ನವೆಂಬರ್‍ವರೆಗೆ ಪಾದಯಾತ್ರೆ ನಡೆಯಲಿದೆ. ಎರಡನೇ ಹಂತದ ಪಾದಯಾತ್ರೆ ಡಿಸೆಂಬರ್‍ನಿಂದ 2020ರ ಫೆಬ್ರವರಿ ವರೆಗೆ ನಡೆಯಲಿದ್ದು, ತುಂಗಭದ್ರಾದಿಂದ-ಕೃಷ್ಣ-ಮಲಪ್ರಭಾ ವರೆಗೆ ನಡೆಯಲಿದೆ ಎಂದು ವೈಎಸ್ ವಿ ದತ್ತ ಮಾಹಿತಿ ನೀಡಿದರು.

    ‘ಕೈ’ ನಿಂದ ಕೊಲೆ ಬೆದರಿಕೆ :
    ಜೆಡಿಎಸ್ ವರಿಷ್ಠರ ಬಳಿ ಅಳಲು ತೋಡಿಕೊಂಡ ಯುವ ಜೆಡಿಎಸ್ ಕಾರ್ಯಕರ್ತರು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರೆ ನಮಗೆ ಕಾಂಗ್ರೆಸ್ಸಿನವರು ಕೊಲೆ ಬೆದರಿಕೆ ಹಾಕುತ್ತಾರೆ. ಈ ಬಗ್ಗೆ ಸ್ಥಳೀಯ ಶಾಸಕರ ಗಮನಕ್ಕೆ ತಂದರೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಸಮಸ್ಯೆಗಳನ್ನು ನಮ್ಮ ಪಕ್ಷದವರೇ ಆಲಿಸಿಲ್ಲ ಅಂದರೆ ನಾವು ಎಲ್ಲಿಗೆ ಹೋಗಬೇಕು ಎಂದು ನಾಗಮಂಗಲ ತಾಲೂಕಿನ ಯುವ ಕಾರ್ಯಕರ್ತ ಜಯಶಂಕರ್ ಅಳಲು ತೋಡಿಕೊಂಡರು.

    ನಿಖಿಲ್ ಕುಮಾರಸ್ವಾಮಿ ಪಾದ ಯಾತ್ರೆ ಮಾಡಿದ್ರೆ 2 ಲಕ್ಷ ಕಾರ್ಯಕರ್ತರನ್ನು ಸೇರಿಸುತ್ತೇವೆ. ಸುಮ್ಮನೆ ಪಾದಯಾತ್ರೆ ಮಾಡುವುದಾದರೆ ಪ್ರಯೋಜನವಿಲ್ಲ. ಪಾದಯಾತ್ರೆಗೆ ಕೇಂದ್ರ ಸರ್ಕಾರ ವಿರುದ್ಧ ಹೋರಾಟ ಎಂಬ ಅಜೆಂಡಾ ಬೇಕು. ರಾಜ್ಯದ ವಿಷಯಗಳ ಬಗ್ಗೆ ಕೇಂದ್ರ ಬಗೆಹರಿಸದ ವಿಷಯಗಳನ್ನು ಅಜೆಂಡಾವಾಗಿ ಮಾಡಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು ಎಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ವರಿಷ್ಠರ ದೇವೇಗೌಡರಿಗೆ ಸಲಹೆ ನೀಡಿದ್ದಾರೆ.

    ಆಕ್ಟೀವ್ ಇಲ್ಲ
    ನಾಗಮಂಗಲದಲ್ಲಿ ಇವತ್ತು ಕೂಡ ಕಾಂಗ್ರೆಸ್ಸಿನ ಚಲುವರಾಯ ಸ್ವಾಮಿಯದ್ದೇ ನಡೆಯುತ್ತಿದೆ. ನಮ್ಮ ಪಕ್ಷದ ಶಾಸಕ ಸುರೇಶ್ ಗೌಡರದ್ದು ಏನು ನಡೆಯುತ್ತಿಲ್ಲ. ಯಾವುದಾದರೂ ಕೆಲಸ ಆಗಬೇಕಿದ್ದರೂ ಚಲುವರಾಯಸ್ವಾಮಿ ಹೇಳಿದರೆ ಮಾತ್ರ ಕ್ಷೇತ್ರದಲ್ಲಿ ನಡೆಯುತ್ತದೆ. ಸುರೇಶ್ ಗೌಡರದ್ದು ಏನು ನಡೆಯುತ್ತಿಲ್ಲ ಎಂದು ಯುವ ಕಾರ್ಯಕರ್ತರು ಈ ವೇಳೆ ದೂರು ನೀಡಿದರು.

  • ಪಾಪ ಗೌಡ್ರೇ ಸೋತು ಮನೇಲಿ ಕೂತಿದ್ದಾರೆ, ಅವರೇನು ಮಾಡೋಕ್ಕಾಗತ್ತೆ- ಎಚ್‍ಡಿ ರೇವಣ್ಣ

    ಪಾಪ ಗೌಡ್ರೇ ಸೋತು ಮನೇಲಿ ಕೂತಿದ್ದಾರೆ, ಅವರೇನು ಮಾಡೋಕ್ಕಾಗತ್ತೆ- ಎಚ್‍ಡಿ ರೇವಣ್ಣ

    – ರೋಡಿನ ಬಗ್ಗೆ ಮಾತ್ರ ನನ್ನಲ್ಲಿ ಹೇಳಿ

    ಮೈಸೂರು: ಕೆಲವರಿಗೆ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡದಿದ್ದರೆ ನಿದ್ರೆ ಬರೋದಿಲ್ಲ. ಅದಕ್ಕೆ ಸುಮ್ಮನೆ ಎಲ್ಲದ್ದಕ್ಕೂ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ದೇವೇಗೌಡರು ನೀರು ಬಿಡಿಸೋಕೆ ಆಗುತ್ತಾ? ಪಾಪ ಅವರೇ ಸೋತು ಮನೆಯಲ್ಲಿ ಕುಳಿತ್ತಿದ್ದಾರೆ. ಹೀಗಾಗಿ ಅವರೇನು ಮಾಡಲು ಆಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಮಂಡ್ಯದಲ್ಲಿ ನೀರಿಗಾಗಿ ರೈತರ ಪ್ರತಿಭಟನೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಿಭಟನಾ ಸ್ಥಳಕ್ಕೆ ಮಂಡ್ಯ ಜೆಡಿಎಸ್ ಜನಪ್ರತಿನಿಧಿಗಳು ಹೋಗಿದ್ದನ್ನ ಸಮರ್ಥಿಸಿಕೊಂಡರು. ಇದೇ ವೇಳೆ ಪ್ರತಿಭಟನಾಕಾರರು ರಾಜಕೀಯ ಮಾಡಿದ್ರು ಎಂದು ಪರೋಕ್ಷವಾಗಿ ಟೀಕಿಸಿದ ಸಚಿವರು, ಸಮಸ್ಯೆ ಗೊತ್ತಿರುವವರ ಬಳಿ ಹೋಗಿ ಮಾತನಾಡಬಹುದು. ಆದರೆ ಸಮಸ್ಯೆ ಗೊತ್ತಿಲ್ಲದವರ ಬಳಿ ಏನ್ ಮಾತನಾಡೋದು? ನೀರು ಬಿಡುವುದು ನಮ್ಮ ಕೈಯಲ್ಲಿ ಇಲ್ಲ. ಮಂಡ್ಯವನ್ನ ಕೈ ಬಿಡುವ ಪ್ರಶ್ನೆಯೇ ಇಲ್ಲ. ನಮಗೆ ಹಾಸನವೂ ಒಂದೇ ಮಂಡ್ಯವು ಒಂದೇ ಎಂದು ಹೇಳಿದ್ದಾರೆ.

    ಒಂದು ಹನಿ ಹೋದ್ರು ನೋಟಿಸ್: ನೀರಾವರಿ ಇಲಾಖೆ ಕಾರ್ಯದರ್ಶಿಗೂ ಗೊತ್ತಾಗದೆ ನಮ್ಮ ಡ್ಯಾಂಗಳಿಗೆ ತಮಿಳುನಾಡು ಅಧಿಕಾರಿಗಳು ಬಂದು ಹೋಗಿದ್ದಾರೆ. ಎಲ್ಲಾ ಡ್ಯಾಂಗಳ ಲೆಕ್ಕ ಬರೆದುಕೊಂಡು ಹೋಗಿದ್ದಾರೆ. ಒಂದು ಹನಿ ನೀರು ಹೊರಗೆ ಹೋದ್ರು ಎಲ್ಲರಿಗೂ ನೋಟಿಸ್ ಬರುತ್ತದೆ. ನಾನು ಕೂಡ ಹೇಮಾವತಿ ಜಲಾಶಯಕ್ಕೆ ಭೇಟಿ ಕೊಟ್ಟೆ. ಅಲ್ಲಿ 15 ದಿನಕ್ಕೆ ಆಗುವಷ್ಟು ನೀರಿದೆ ಅಷ್ಟೇ. ನಮ್ಮ ಡ್ಯಾಂಗಳಲ್ಲಿ ನೀರಿಲ್ಲ. ಇತ್ತೀಚೆಗೆ ಜಲಾಶಯಗಳಿಗೆ ಕೇಂದ್ರ ತಂಡ ಅಲ್ಲ ಅವರು ತಮಿಳುನಾಡಿನ ಅಧಿಕಾರಿಗಳು ಭೇಟಿ ಕೊಟ್ಟಿರೋದು ಎಂದು ತಿಳಿಸಿದ್ದಾರೆ.

    ನಂಗ್ಯಾವ ಪವರ್ ಇಲ್ಲ: ನನಗೆ ಯಾವ ಅಧಿಕಾರವೂ ಇಲ್ಲ. ಯಾರಿಗೆ ಪವರ್ ಇದೆ ಎಂದು ಎಲ್ಲರಿಗೂ ಗೊತ್ತು. ನಾನಗಲಿ, ಜಿ.ಟಿ.ದೇವೇಗೌಡರಾಗಲಿ ಪವರ್ ಫುಲ್ ಅಲ್ಲ. ನಮಗ್ಯಾವ ಪವರ್ ಇದೆ. ನೀರಿನ ವಿಚಾರ, ಮತ್ತೊಂದು ವಿಚಾರ ನನ್ನ ಬಳಿ ಕೇಳಬೇಡಿ. ಅದಕ್ಕಾಗಿಯೇ ಜಲ ಸಂಪನ್ಮೂಲ ಸಚಿವರು, ನೀರಾವರಿ ಸಚಿವರು ಇದ್ದಾರೆ. ಆ ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಳ್ಳುತ್ತಾರೆ ಎಂದರು.

    ನಾನು ರೋಡ್ ಮಿನಿಸ್ಟರ್: ನಾನು ಲೋಕೋಪಯೋಗಿ ಸಚಿವ. ಹೀಗಾಗಿ ನನ್ನ ಬಳಿ ರೋಡ್ ಬಗ್ಗೆ ಮಾತ್ರ ಕೇಳಿ. ನೀರಿನ ವಿಚಾರ ಮತ್ತೊಂದು ವಿಚಾರ ನನ್ನ ಬಳಿ ಕೇಳಬೇಡಿ. ರೋಡಿನ ವಿಚಾರ ಇದ್ದರೆ ಮಾತ್ರ ಹೇಳಿ. ಬೇರೆ ವಿಚಾರ ನನ್ನ ಹತ್ತಿರ ಕೇಳಬೇಡಿ ಎಂದು ತಿಳಿಸಿದರು.

    ಜೆಡಿಎಸ್ ಪಕ್ಷ ಪಾದಯಾತ್ರೆ ಮಾಡುವ ಬಗ್ಗೆ ನಂಗೆ ಗೊತ್ತಿಲ್ಲ. ಅದನ್ನೆಲ್ಲ ನೋಡಿಕೊಳ್ಳುವುದಕ್ಕೆ ಪಕ್ಷದ ಹೈಕಮಾಂಡ್ ಇದೆ. ಪಾದಯಾತ್ರೆ ವಿಚಾರ ನಂಗೆ ಗೊತ್ತಿಲ್ಲ ಎಂದು ನುಡಿದರು.

  • ಮೈತ್ರಿಯಿಂದಲೇ ಸೋಲೆಂದ ಕಾಂಗ್ರೆಸ್‍ಗೆ ದೇವೇಗೌಡರ ಗುದ್ದು

    ಮೈತ್ರಿಯಿಂದಲೇ ಸೋಲೆಂದ ಕಾಂಗ್ರೆಸ್‍ಗೆ ದೇವೇಗೌಡರ ಗುದ್ದು

    ಬೆಂಗಳೂರು: ದೋಸ್ತಿ ನಾಯಕರ ನಡುವಿನ ಮುಸುಕಿನ ಗುದ್ದಾಟ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಕಂಡ ಕಂಡ ಕಡೆಯಲ್ಲೆಲ್ಲಾ ಮೈತ್ರಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮತ್ತೊಮ್ಮೆ ಅಸಮಾಧಾನ ಹೊರ ಹಾಕಿದ್ದಾರೆ.

    ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಸೋಲಲು ಒಕ್ಕಲಿಗರು ಕಾರಣನಾ ಅಂತ ಪ್ರಶ್ನಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೋಗಿದ್ದೇ ಸೋಲಿಗೆ ಕಾರಣ ಅಂತ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಈ ಕ್ಷೇತ್ರಗಳಲ್ಲಿ ಒಕ್ಕಲಿಗರು ಎಷ್ಟಿದ್ದಾರೆ ಎಂದು ಪ್ರಶ್ನಿಸಿ ಗುಡುಗಿದರು.

    ಕೆಲವು ನಾಯಕರು ಇತ್ತೀಚೆಗಷ್ಟೇ ಕಾಂಗ್ರೆಸ್ ಹೈಕಮಾಂಡ್‍ಗೆ ಜೆಡಿಎಸ್ ಸಹವಾಸ ಮಾಡಿ ತಪ್ಪಾಯ್ತು ಅಂತ ಚಾಡಿ ಹೇಳಿದ್ದಾರೆ. ಬೆನ್ನಿಗೆ ಚೂರಿ ಹಾಕಿದ್ದಾರೆ ಎನ್ನುವ ರೀತಿ ಮಾತನಾಡಿದ್ದಾರೆ. ಈ ಎಲ್ಲಾ ವಿದ್ಯಮಾನಗಳು ನೋವು ತಂದಿದೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

    37 ಸೀಟ್ ಇಟ್ಟುಕೊಂಡು ಸಿಎಂ ಸ್ಥಾನ ಕೊಡಿ ಅಂದ್ರೆ ಯಾವ ಧರ್ಮ ಹೇಳಿ? ಕಾಂಗ್ರೆಸಿಗರೇ ಮುಖ್ಯಮಂತ್ರಿ ಆಗಿ ಅಂತ ಹೇಳಿದ್ದಕ್ಕೆ ನಾವು ಸಿಎಂ ಆಗಿದ್ದೇವೆ ಅಂದಿದ್ದಾರೆ. ನನ್ನ ಮಗ ಹೇಗೋ ಸರ್ಕಾರ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಸಿಎಂ ಬಗ್ಗೆ ಎಚ್‍ಡಿಡಿ ಪ್ರಶಂಸೆ ವ್ಯಕ್ತಪಡಿಸಿದರು.

  • ಮಂಡ್ಯ ಸಂಸದರ ಬಗ್ಗೆ ಕಮೆಂಟ್ ಮಾಡಲ್ಲ: ಸುಮಲತಾಗೆ ಎಚ್‍ಡಿಡಿ ಟಾಂಗ್

    ಮಂಡ್ಯ ಸಂಸದರ ಬಗ್ಗೆ ಕಮೆಂಟ್ ಮಾಡಲ್ಲ: ಸುಮಲತಾಗೆ ಎಚ್‍ಡಿಡಿ ಟಾಂಗ್

    – ಪ್ರಜ್ವಲ್ ರೈತನ ಹೊಟ್ಟೆಯಲ್ಲಿ ಹುಟ್ಟಿ ಬಂದವನು

    ಬೆಂಗಳೂರು: ಸಂಸತ್‍ನಲ್ಲಿ ನೀರಿನ ಬಗ್ಗೆ ಮಾತನಾಡದ ಮಂಡ್ಯ ಸಂಸದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸುಮಲತಾ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯ ಸಂಸದರ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ. ನಾನು ಯಾಕೆ ಅವರ ಬಗ್ಗೆ ಕಾಮೆಂಟ್ ಮಾಡಲಿ. ಸಂಸದ ಪ್ರಜ್ವಲ್ ರೇವಣ್ಣ ಮಂಡ್ಯ ಜಿಲ್ಲೆಗೆ ನೀರು ಬಿಡಿ ಎಂದು ಸಂಸತ್‍ನಲ್ಲಿ ಧ್ವನಿ ಎತ್ತಿದ್ದಾನೆ. ರೈತರ ಬೆಳೆಗಳಿಗೆ 2 ಟಿಎಂಸಿ ನೀರು ಕೊಡಿ ಅಂತ ಕೇಳಿಕೊಂಡಿದ್ದಾನೆ ಎಂದು ಹೇಳಿದರು.

    ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ತಂದೆ ಎಚ್.ಡಿ.ರೇವಣ್ಣ ಹಾಗೂ ಚಿಕ್ಕಪ್ಪ ಸಿಎಂ ಹೋರಾಟ ಗೊತ್ತಿದೆ. ಹೀಗಾಗಿ ಸಂಸತ್‍ನಲ್ಲಿ ಭ್ರಷ್ಟ ಸರ್ಕಾರ ಎಂಬ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಅವರ ಮಾತಿಗೆ ಪ್ರಜ್ವಲ್ ಸಮರ್ಥ ಉತ್ತರ ಕೊಟ್ಟಿದ್ದಾನೆ ಎಂದು ಖುಷಿ ವ್ಯಕ್ತಪಡಿಸಿದರು.

    ಪ್ರಜ್ವಲ್ ರೈತನ ಹೊಟ್ಟೆಯಲ್ಲಿ ಹುಟ್ಟಿ ಬಂದವನು. ಅವನ ಊರಲ್ಲಿ ಅತ್ಯುತ್ತಮ ಬೆಳೆ ಬೆಳೆಯುತ್ತಾನೆ. ಈ ಮಾತು ಸುಳ್ಳು ಎನ್ನುವುದಾದರೆ ಬನ್ನಿ ನಾನು ಅಲ್ಲಿಗೆ ಕರೆದುಕೊಂಡು ಹೋಗಿ ತೋರಿಸುತ್ತೇನೆ. ಅವರು ರೈತ ಕೆಲಸ ಮಾಡುತ್ತಿದ್ದಾರೆ. ಈಗ ಸಿಎಂ ಭೂಮಿ ಖರೀದಿ ಮಾಡಿದ್ದಾರೆ. ಈ ಮೂಲಕ ಕೃಷಿ ಚಟುವಟಿಕೆ ನಡೆಸುವ ಆಲೋಚನೆ ಹೊಂದಿದ್ದಾನೆ. ನಿಖಿಲ್ ಕೂಡ ಕೃಷಿ ಮಾಡಲು ಓಡಾಡುತ್ತಿದ್ದಾನೆ ಎಂದು ಹೇಳಿದರು.

  • ಸಿಎಂ ಆರೋಗ್ಯವನ್ನು ರಿಪೇರಿ ಮಾಡಲು ರವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರೇ – ಎಚ್‍ಡಿಡಿ ಕಿಡಿ

    ಸಿಎಂ ಆರೋಗ್ಯವನ್ನು ರಿಪೇರಿ ಮಾಡಲು ರವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರೇ – ಎಚ್‍ಡಿಡಿ ಕಿಡಿ

    – ಯಾಕೆ ಮಾತಾಡ್ತಾರೋ ಗೊತ್ತಿಲ್ಲ
    – ಪಾಪ ಸಿಎಂ ಮುಖ ನೋಡೊಕೆ ಆಗ್ತಾ ಇಲ್ಲ

    ಬೆಂಗಳೂರು: ಸಿಎಂ ಆರೋಗ್ಯವನ್ನು ಬಿಜೆಪಿಯ ಸಿ.ಟಿ.ರವಿ ರಿಪೇರಿ ಮಾಡುತ್ತಾರಾ? ಅವರೇನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಡಾಕ್ಟರಾ? ಯಾಕೆ ಈ ರೀತಿ ಎಲ್ಲಾ ಮಾತನಾಡುತ್ತಾರೋ ಗೊತ್ತಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಿರುಗೇಟು ನೀಡಿದ್ದಾರೆ.

    ಸಿಎಂ ಹತಾಶರಾಗಿ ವರ್ತನೆ ಮಾಡುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಸಿ.ಟಿ.ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಗ್ರಾಮ ವಾಸ್ತವ್ಯ ಸಹಿಸುವುದಕ್ಕೆ ಆಗದೆ, ಯಾವುದೋ ಒಂದು ಶಕ್ತಿ ಮೂಲಕ ಅಡಚಣೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ರಾಯಚೂರು ಜಿಲ್ಲೆಯ ಕರೇಗುಡ್ಡ ಗ್ರಾಮಕ್ಕೆ ತಲುಪುವುದಕ್ಕೂ ಮುನ್ನವೇ ತಡೆದು ನಮ್ಮ ಕೆಲಸ ಈಗಲೇ ಮಾಡಿಕೊಡಿ ಎನ್ನುವುದು ಎಷ್ಟು ಸರಿ? ಅದು ಹೇಗೆ ಸಾಧ್ಯ? ಇದಕ್ಕೆ ಯಾರದ್ದೋ ಪ್ರೇರಣೆ ಇದೆ ಎಂದರು. ಇದನ್ನೂ ಓದಿ: ಕರ್ನಾಟಕದ ಮುಖ್ಯಮಂತ್ರಿ ನೀವಾ, ಇಲ್ಲ ಮೋದಿನಾ? – ಸಿಎಂಗೆ ಪ್ರಶ್ನೆ

    ನನಗೆ ಯಾಕೆ ಹೀಗೆ ಮಾಡುತ್ತೀರಾ? ಲಾಠಿ ಚಾರ್ಜ್ ಮಾಡಿಸಬೇಕಾ ಎಂದು ಸಿಎಂ ಪಾಪ ಪೇಚಾಡುತ್ತಿದ್ದಾರೆ. ಪ್ರತಿಭಟನೆಯನ್ನು ತಡೆದು ತಡೆದು ಪೊಲೀಸರಿಗೂ ಸಾಕಾಗಿದೆ. ಅವರಿಗೂ ತಾಳ್ಮೆ ಇರುತ್ತದೆ. ಈ ಪ್ರತಿಭಟನೆಯಿಂದ ಮುಖ್ಯಮಂತ್ರಿಗಳು ಒದ್ದಾಡುತ್ತಿದ್ದಾರೆ. ಸಿಎಂ ವಿನೂತನ ಗ್ರಾಮ ವಾಸ್ತವ್ಯ ಮಾಡುವುದಕ್ಕೆ ಹೊರಟಿದ್ದಾರೆ. ಆದರೆ ಇದನ್ನು ಸಹಿಸದ ಯಾವುದೋ ಒಂದು ಶಕ್ತಿ ಅದಕ್ಕೆ ಅಡಚಣೆ ಮಾಡಲು ಮುಂದಾಗುತ್ತಿದೆ ಎಂದು ಕಿಡಿಕಾರಿದರು.

    ಪ್ರತಿಭಟನೆಯನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ. ಇದರ ಹಿಂದೆ ಬಿಜೆಪಿಯವರ ಷಡ್ಯಂತ್ರವಿದೆ. ಪಾಪ ಮುಖ್ಯಮಂತ್ರಿಗಳ ಮುಖ ನೋಡುವುದಕ್ಕೆ ಆಗುತ್ತಿಲ್ಲ. ಅವರು ಜನರ ಸಮಸ್ಯೆ ಪರಿಹಾರ ಮಾಡುವುದಕ್ಕೆ ಹೋಗುತ್ತಿದ್ದಾರೆ. ಆದರೆ ದಾರಿ ಮಧ್ಯೆ ಹೀಗೆ ಪ್ರತಿಭಟನೆ ಮಾಡಿದರೆ ಸಿಎಂ ಏನು ಮಾಡಬೇಕು ಎಂದು ಪ್ರಶ್ನಿಸಿದರು.

    ಜೆಡಿಎಸ್ ರಾಜ್ಯಾಧ್ಯಕ್ಷರ ನೇಮಕದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎರಡ್ಮೂರು ದಿನಗಳಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ. ನಮ್ಮ ಪಕ್ಷದಲ್ಲಿ ಆರು ಜನ ಪರಿಶಿಷ್ಟರು ಗೆದ್ದಿದ್ದಾರೆ. ನಮ್ಮನ್ನ ಏನೂ ಮಾಡಿಲ್ಲ ಎನ್ನುವ ಅಸಮಾಧಾನ ಅವರಲ್ಲಿದೆ. ಅದು ನನಗೆ ಗೊತ್ತಾಗುತ್ತದೆ. ಹೀಗಾಗಿ ಪರಿಶಿಷ್ಟರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಚಿಂತಿಸಿದ್ದೇನೆ. ಮಧು ಬಂಗಾರಪ್ಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದಾರೆ. ಅವರಿಗೆ ಪಕ್ಷದ ಜವಾಬ್ದಾರಿಯನ್ನು ನಿಭಾಯಿಸುವ ಶಕ್ತಿ ಇದೆ. ಎಲ್ಲರನ್ನೂ ಕರೆದು ಸಭೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದು ಹೇಳುವ ಮೂಲಕ ಪರಿಶಿಷ್ಟರಿಗೆ ಸಚಿವ ಸ್ಥಾನದ ಸುಳಿವು ಬಿಚ್ಚಿಟ್ಟಿದ್ದಾರೆ.

    ಕಾಂಗ್ರೆಸ್‍ನವರು ಮಾಡಿದ ಅಪಪ್ರಚಾರದಿಂದ ಸಿಎಂ ಕೇವಲ 37 ಸೀಟು ಗೆದ್ದರು. ಆದರೂ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿರುವ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು, ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಜುಲೈ 30ರೊಳಗೆ ಸಾಲ ಮನ್ನಾ ಪ್ರಕ್ರಿಯೆ ಪೂರ್ಣ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಯಾವನೊ ಒಬ್ಬ 10 ಲಕ್ಷ ರೂ. 20 ಲಕ್ಷ ರೂ. ಸಾಲ ತಗೊಂಡರೆ ಪಾಪ ಸಿಎಂ ಇದನ್ನು ತೀರಿಸುವುಕ್ಕೆ ಆಗುತ್ತಾ? ವರ್ಷಕ್ಕೆ 6 ಸಾವಿರ ರೂ. ಕೊಟ್ಟು ಇಡೀ ಹಿಂದೂಸ್ತಾನದಲ್ಲಿ ದೊಡ್ಡ ಪ್ರಚಾರ ಮಾಡುತ್ತೀರಿ. ಸುಮ್ಮನೆ ಮಾತನಾಡಲು ನಮಗೂ ಬರುತ್ತದೆ. ಜನರಿಗೆ ನಾವು ಸದಾ ಕಾಲ ಮೋಸ ಮಾಡುವುಕ್ಕೆ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದರು.

  • ರಾಜ್ಯದ ಆರೋಗ್ಯ ದೃಷ್ಟಿಯಿಂದ ಸಿಎಂ ರಾಜೀನಾಮೆ ನೀಡಲಿ – ಸಿಟಿ ರವಿ

    ರಾಜ್ಯದ ಆರೋಗ್ಯ ದೃಷ್ಟಿಯಿಂದ ಸಿಎಂ ರಾಜೀನಾಮೆ ನೀಡಲಿ – ಸಿಟಿ ರವಿ

    – ಲೋಕಸಭೆ ಫಲಿತಾಂಶದಿಂದ ಸಿಎಂ ಪಾಠ ಕಲಿತಿಲ್ಲ
    – ಅನುದಾನ ಹಂಚಿಕೆಯಲ್ಲಿ ತಾರತಮ್ಯ ಬೇಡ

    ಬೆಂಗಳೂರು: ನೀವು ಹತಾಶರಾಗಿ ಈ ರೀತಿ ವರ್ತನೆ ಮಾಡುತ್ತಿರುವಿರಿ. ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಿಮ್ಮ ಹಾಗೂ ರಾಜ್ಯದ ಆರೋಗ್ಯ ದೃಷ್ಟಿಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ಬಿಜೆಪಿ ಶಾಸಕ ಸಿಟಿ ರವಿ ಹೇಳಿದ್ದಾರೆ.

    ಪ್ರತಿಭಟನಾಕಾರರ ಮೇಲೆ ಆಕ್ರೋಷ ವ್ಯಕ್ತಪಡಿಸಿದ ವಿಚಾರವಾಗಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಲೋಕಸಭೆ ಫಲಿತಾಂಶದಿಂದ ಸಿಎಂ ಪಾಠ ಕಲಿತಿಲ್ಲ. ಸಿಂಗಲ್ ನಂಬರ್ ಕೂಡ ಅವರಿಗೆ ಬೇಕಾಗಿಲ್ಲ ಅಂತ ಅನ್ನಿಸುತ್ತದೆ. ಹೀಗಾಗಿ ಸಿಎಂ ಹೀಗೆಲ್ಲ ಮಾತಾಡಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಮ್ಮ ಮಗನಿಗೆ ರಾಜೀನಾಮೆ ನೀಡುವ ಸಲಹೆ ನೀಡಲಿ. ಈ ಮೂಲಕ ಸಿಎಂ ರಾಜ್ಯದ ಜನರ ಹಿತ ಕಾಪಾಡಲಿ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದ ಮುಖ್ಯಮಂತ್ರಿ ನೀವಾ, ಇಲ್ಲ ಮೋದಿನಾ? – ಸಿಎಂಗೆ ಪ್ರಶ್ನೆ

    ಸಿಎಂ ಅವರಿಗೆ ಅಧಿಕಾರಲ್ಲಿ ಮುಂದುವರೆಯುವ ಯೋಗ್ಯತೆ, ಅರ್ಹತೆ ಏನಿದೆ? ಈ ಬಗ್ಗೆ ರಾಜ್ಯದ ಜನರಿಗೆ ಉತ್ತರ ಕೊಡಲಿ. ಇದು ಕರ್ನಾಟಕ ಸರ್ಕಾರ. ಬಿಜೆಪಿ, ಜೆಡಿಎಸ್ ಸರ್ಕಾರ ಅಂತ ಇರುವುದಿಲ್ಲ. ಸಂವಿಧಾನದತ್ತವಾಗಿ ಸಿಎಂ ಅಧಿಕಾರ ನಿಮಗೆ ನೀಡಲಾಗಿದೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಬೇಡಿ ಎಂದು ಕಿಡಿಕಾರಿದರು.

    ಸಿಎಂ ಇಂದು ಸಣ್ಣತನದ ಮಾತುಗಳನ್ನು ಆಡಿದ್ದಾರೆ. ಶಾಸಕ ಶಿವನಗೌಡ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿರುವ ಹಿನ್ನೆಲೆ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಅವರ ಬಗ್ಗೆಯೂ ಸಿಎಂ ಏಕವಚನದಲ್ಲಿ ಮಾತಾಡಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿಯೋ ಅಥವಾ ಜೆಡಿಎಸ್ ಮುಖ್ಯಮಂತ್ರಿಯೋ? ಸಂವಿಧಾನದ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದಾರಾ? ಅಥವಾ ಜೆಡಿಎಸ್ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

    ಹೋರಾಟಗಾರರು ನಿಮ್ಮ ತಂದೆಯ ಆಸ್ತಿ ಕೇಳಿಲ್ಲ. ರಾಜ್ಯದ ಮುಖ್ಯಮಂತ್ರಿ ಆಗಲು ನಿಮಗೆ ಯೋಗ್ಯತೆ ಇಲ್ಲ. ನೀವು ಜೆಡಿಎಸ್ ಮುಖ್ಯಮಂತ್ರಿಗಳಾಗಿದ್ದರೆ ನಿಮಗೆ ನೀಡುತ್ತಿರುವ ಸೌಲಭ್ಯಗಳನ್ನು ರಾಜ್ಯಪಾಲರು ವಾಪಸ್ ಪಡೆಯಲಿ. ನಿಮ್ಮ ಮಾತು ಅಸಂವಿಧಾನಿಕ ಮಾತು. ಜನರನ್ನ ಕೆರಳಿಸುವ ಮಾತುಗಳನ್ನು ಆಡುತ್ತಿರುವಿರಿ ಎಂದು ಸಿಎಂ ವಿರುದ್ಧ ಗುಡುಗಿದರು.

    ಎಚ್‍ಆರ್ ಬಿಆರ್ ಲೇಔಟ್‍ನಲ್ಲಿ 2006ರಂದು ಬಿಡಿಎ ನಿಂದ ನಿವೇಶನ ಪಡೆದಿದ್ದೆ. ಆದರೆ ಈಗ ಅದನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಬಳಿಕ ಬದಲಿ ನಿವೇಶನಕ್ಕೆ ಮನವಿ ಸಲ್ಲಿಸಿದ್ದೆ. ಆದರೆ ಇಲ್ಲಿಯವರೆಗೂ ನಿವೇಶನ ನೀಡಿಲ್ಲ. ಒಂದು ವಾರದಲ್ಲಿ ಬದಲಿ ನಿವೇಶನ ಕೊಡಿ, ಇಲ್ಲವೇ ನನ್ನ ಹಳೆಯ ನಿವೇಶನ ಕೊಡಿ. ಒಂದು ವೇಳೆ ನೀವು ನಿವೇಶನ ನೀಡದಿದ್ದರೆ ಬಿಡಿಎ ಮುಂದೆ ಧರಣಿ ಮಾಡುತ್ತೇನೆ ಎಂದು ಶಾಸಕರು ಎಚ್ಚರಿಕೆ ಕೊಟ್ಟಿದ್ದಾರೆ.

    ಬಿಡಿಎಯಲ್ಲಿ ದಂಧೆ ನಡೆಯುತ್ತಿದೆ. ಸಿಬ್ಬಂದಿ, ಅಧಿಕಾರಿಗಳು ಶ್ರೀಮಂತರಾಗುತ್ತಿದ್ದಾರೆ. ಬಿಡಿಎ ಮಾತ್ರ ಸಾಲದಲ್ಲಿ ಇದೆ. ಈ ದಂಧೆ ನಿಲ್ಲಿಸುವ ಅಧಿಕಾರಿಯೊಬ್ಬನ್ನು ನೇಮಕವಾಗಬೇಕಿದೆ ಎಂದು ಒತ್ತಾಯಿಸಿದರು.

  • ಕಗ್ಗಂಟಾಗಿದೆ ಜೆಡಿಎಸ್ ನೂತನ ಸಾರಥಿಯ ನೇಮಕ

    ಕಗ್ಗಂಟಾಗಿದೆ ಜೆಡಿಎಸ್ ನೂತನ ಸಾರಥಿಯ ನೇಮಕ

    ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್ ವಿಶ್ವನಾಥ್ ಅವರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದು, ಇದೀಗ ಜೆಡಿಎಸ್‍ನ ಹೊಸ ಸಾರಥಿ ಆಯ್ಕೆ ಮಾಡುವಲ್ಲಿ ಪಕ್ಷ ನಿರತವಾಗಿದೆ.

    ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಅಪ್ಪ-ಮಗನ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ. ತಂದೆ ದೊಡ್ಡಗೌಡ್ರು ಒಬ್ಬರ ಪರ ಬ್ಯಾಟಿಂಗ್ ಮಾಡಿದರೆ ಸಿಎಂಗೆ ಮತ್ತೊಬ್ಬರ ಮೇಲೆ ಪ್ರೀತಿ. ಈ ಹಿನ್ನೆಲೆಯಲ್ಲಿ ಪಕ್ಷದ ಹೊಸ ಸಾರಥಿ ನೇಮಕ ಮಾಡಲು ವರಿಷ್ಠರಿಗೆ ಕಗ್ಗಂಟಾಗಿದೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.

    ಪಕ್ಷದ ವರಿಷ್ಠ ದೇವೇಗೌಡ, ವಿಶ್ವನಾಥ್ ಸೇರಿದಂತೆ ದಳದ ಬಹುತೇಕ ನಾಯಕರಿಗೆ ಹಿಂದುಳಿದ ವರ್ಗದ ನಾಯಕ ಮಧು ಬಂಗಾರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕೆಂಬ ಹಂಬಲವಿದೆ. ಆದರೆ ಸಚಿವ ಸ್ಥಾನ ವಂಚಿತ ಅಲ್ಪಸಂಖ್ಯಾತ ನಾಯಕ ಫಾರೂಖ್ ಅವರನ್ನು ಮಾಡಬೇಕು ಎಂಬುವುದು ಸಿಎಂ ವಾದವಾಗಿದೆ. ಹೀಗಾಗಿ ದೇವೇಗೌಡರು ಯಾರನ್ನು ರಾಜ್ಯಾಧ್ಯಕ್ಷ ಮಾಡೋದು ಅನ್ನೋ ಚಿಂತೆಯಲ್ಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಇತ್ತೀಚೆಗೆ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ದೇವೇಗೌಡರು ಮಧು ಬಂಗಾರಪ್ಪ ಅವರ ಅಭಿಪ್ರಾಯ ಕೇಳಿದ್ದರು. ಈ ವೇಳೆ ಮಧು ನಿಮ್ಮ ಮಾತಿನಂತೆ ನಡೆಯುತ್ತೇನೆ ಎಂದಿದ್ದರು. ವಿಶ್ವನಾಥ್ ಕೂಡ ಬಹಿರಂಗವಾಗಿಯೇ ಮಧು ಬಂಗಾರಪ್ಪ ಪರ ಬ್ಯಾಟಿಂಗ್ ಮಾಡಿದ್ದರು. ಆದರೆ ಸಿಎಂಗೆ ಫಾರೂಖ್ ಮೇಲಿನ ಪ್ರೀತಿಗೆ ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಗೊಂದಲವುಂಟಾಗಿದೆ. ಒಟ್ಟಿನಲ್ಲಿ ದೇವೇಗೌಡರು ಪಕ್ಷ ಸಂಘಟನೆ, ಮುಂಬರುವ ಚುನಾವಣೆ ದೃಷ್ಟಿ ಇಟ್ಟುಕೊಂಡು ರಾಜ್ಯಾಧ್ಯಕ್ಷರನ್ನ ನೇಮಕ ಮಾಡಲಿದ್ದಾರೆ ಎನ್ನಲಾಗಿದೆ.

    ಇತ್ತ ಇಬ್ಬರ ಜಗದಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ದಲಿತ ಶಾಸಕ ಎಚ್.ಕೆ ಕುಮಾರಸ್ವಾಮಿ ಹೆಸರು ರೇಸ್‍ನಲ್ಲಿದೆ. ಒಟ್ಟಿನಲ್ಲಿ ಜೆಡಿಎಸ್‍ಗೆ ನೂತನ ಸಾರಥಿ ಯಾರಾಗ್ತಾರೆ ಅನ್ನೋದು ಸದ್ಯದ ಕುತೂಹಲವಾಗಿದ್ದು, ಇನ್ನೆರಡು ದಿನಗಳಲ್ಲಿ ರಾಜ್ಯಾಧ್ಯಕ್ಷ ನೇಮಕ ಬಹುತೇಕ ಖಚಿತವಾಗಲಿದೆ.