Tag: ಎಚ್.ಡಿ. ದೇವೇಗೌಡ

  • ಶಕ್ತಿ ಮೀರಿ ಪ್ರಾದೇಶಿಕ ಪಕ್ಷ ಉಳಿಸಲು ಪ್ರಯತ್ನಿಸುತ್ತೇನೆ- ಎಚ್‍ಡಿಡಿ

    ಶಕ್ತಿ ಮೀರಿ ಪ್ರಾದೇಶಿಕ ಪಕ್ಷ ಉಳಿಸಲು ಪ್ರಯತ್ನಿಸುತ್ತೇನೆ- ಎಚ್‍ಡಿಡಿ

    ಹಾಸನ: ಶಕ್ತಿ ಮೀರಿ ಪ್ರಾದೇಶಿಕ ಪಕ್ಷ ಉಳಿಸಲು ಪ್ರಯತ್ನಿಸುತ್ತೇನೆ. ನನ್ನ ಹಿಂದೆ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಪ್ರತಿನಿತ್ಯ ನಾನು ದೆಹಲಿಗೆ ಹೋಗುತ್ತಿಲ್ಲ. ರಾಷ್ಟ್ರ ರಾಜಕಾರಣ ಮಾತನಾಡಲು ಬೇರೆ ನಾಯಕರು ಕರೆದರು ಸಹ ನಾನು ಹೋಗಿಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.

    ಹೊಳೆನರಸಿಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 15 ದಿನದಿಂದ ಪಕ್ಷದ ಕಚೇರಿಯಲ್ಲಿ ಇದ್ದೇನೆ. ಪ್ರತಿ ಜಿಲ್ಲೆಯಲ್ಲಿ ಪಕ್ಷ ತಳಮಟ್ಟದಿಂದ ಕಟ್ಟಲು ಪದಾಧಿಕಾರಿಗಳು ಮಾಡುವ ಕೆಲಸ ಗುರುತಿಸುತ್ತಿದ್ದೇನೆ ಎಂದರು.

    ವಿಶ್ವನಾಥ್ ಬಿಟ್ಟು ಹೋದ ಮೇಲೆ ಕುಮಾರಸ್ವಾಮಿ ಪಕ್ಷ ನಿಷ್ಠೆಯಿಂದ ಇದ್ದಾರೆ. 6 ಬಾರಿ ಶಾಸಕರಾಗಿದ್ದಾರೆ. ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಈ ಸರ್ಕಾರ ಮೂರು ವರ್ಷ ಎಂಟು ತಿಂಗಳು ನಡೆಯಬಹುದು. ನಮ್ಮ ಯಾವುದೇ ತಕರಾರು ಇಲ್ಲ. ಒಳ್ಳೆಯ ಕೆಲಸ ಮಾಡಿದರೆ ಸಂತೋಷ ಪಡುತ್ತೇವೆ. ಜನರ ಸಮಸ್ಯೆಗಳಿಗೆ ಹೋರಾಡುತ್ತೇವೆ ಎಂದು ಅವರು ತಿಳಿಸಿದರು.

    ಕೇಂದ್ರ ಮತ್ತು ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆ. ಕೇಂದ್ರದಿಂದ ಸಾಕಷ್ಟು ಹಣ ಬಿಡುಗಡೆ ಮಾಡಿಸಲು ಯಡಿಯೂರಪ್ಪ ಶಕ್ತರು ಎನ್ನುವ ಭರವಸೆ ಇದೆ. ವಾಜಪೇಯಿ ಪ್ರಧಾನಿ ಆಗಿದ್ದಾಗ ನಾನು ಬರಕ್ಕಾಗಿ ಅವರ ಬಳಿ ರೈತರನ್ನು ಕರೆದುಕೊಂಡು ದಿಲ್ಲಿಗೆ ಹೋಗಿದ್ದೆನು. ವಿಧಾನಸಭೆ, ಲೋಕಸಭೆ ಇದ್ದರೂ ಇಲ್ಲದಿದ್ದರೂ ನಾನು ನನ್ನ ರಾಜಕಾರಣ ಮಾಡಿದ್ದೇನೆ ಎಂದರು.

    ನಾನೇನು ಕೆಲಸ ಮಾಡಿದ್ದೇನೆ, ಪ್ರಧಾನಿ, ಸಿಎಂ ಆಗಿದ್ದಾಗ ಎಲ್ಲಾ ವಿಚಾರಗಳನ್ನು ಗಮನ ಇಟ್ಟುಕೊಂಡು ಕೆಲಸ ಮಾಡುತ್ತೇನೆ. ಇದರಲ್ಲಿ ದೈವಾನುಗ್ರಹ ಬೇಕು. ಇದಕ್ಕಾಗಿ ಪ್ರತಿವರ್ಷ ದೇವರ ಬಳಿ ಹೋಗುತ್ತೇನೆ ಎಂದು ಹೇಳಿದರು.

    ಇದೇ ವೇಳೆ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ನಿಧನ ಸಂಬಂಧ ಪ್ರತಿಕ್ರಿಯಿಸಿದ ಎಚ್‍ಡಿಡಿ, ಜೇಟ್ಲಿ ನಿಧನವಾಗಿದ್ದು ತೀವ್ರವಾಗಿ ದುಖದ ವಿಚಾರವಾಗಿದೆ. ಒಬ್ಬ ಮುತ್ಸದಿ ನಾಯಕ. ಯಾವುದೇ ಪಕ್ಷವಾಗಲಿ, ಮಂತ್ರಿಗಳಾಗಿ ಹಲವಾರು ಇಲಾಖೆಗಳಲ್ಲಿ ಜವಾಬ್ದಾರಿ ನಿರ್ವಹಣೆ ಮಾಡಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿ ಸಂತಾಪ ಸೂಚಿಸಿದರು.

    ಹಾಸನದಲ್ಲಿ ನಾನು 29 ವರ್ಷ ವಿಧಾನಸಭಾ ಕ್ಷೇತ್ರ ಮತ್ತು 25 ವರ್ಷ ಶಾಸಕನಾಗಿ ನನ್ನ ಕೆಲಸ ಮಾಡಿದ್ದೇನೆ. ನನ್ನ ಜನತೆಗೆ ನೋವು ಇದೆ. ನೀವು ಇಲ್ಲೇ ಚುನಾವಣೆಗೆ ನಿಲ್ಲಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡಿದರು. ಆದರೆ ಕೆಲವೊಮ್ಮೆ ವಿಧಿ ನಮ್ಮ ಕೈಯಲ್ಲಿ ಇರೋದಿಲ್ಲ. ಧರ್ಮರಾಯ ಎಲ್ಲರನ್ನು ಕರೆದುಕೊಂಡು ಬರುತ್ತಾನೆ. ಕಾಲ ಕಳೆಯಲು ಅವಕಾಶ ಇದೆ ಎಂದು ಹೇಳಿ ಜೂಜಿನಲ್ಲಿ ಎಲ್ಲವನ್ನು ಕಳೆದುಕೊಂಡು ದ್ರೌಪದಿ ಶಾಪ ಕೊಟ್ಟಾಗ ಇಂದ್ರಪ್ರಸ್ಥ ತಲುಪುವುದೇ ಇಲ್ಲ. ಒಂದೇ ಆಟ ಎಂದು ಹೇಳಿ ಕೊನೆಯ ಆಟ ಆಡುತ್ತಾನೆ. ಅದೇ ಮೋಸಗಾರನ ಜೊತೆಯಲ್ಲಿಯೇ ಆಡುತ್ತೇನೆ ಎಂದು ಧರ್ಮರಾಯ ಹಸ್ತಿನಾಪುರದ ರಾಜನಿಗೆ ಹೇಳುತ್ತಾನೆ. ಅದೇ ರೀತಿ ನಾನು ಕೂಡ ಮೋಸ ಆಗುವುದು ಗೊತ್ತಿದ್ದರೂ ಚುನಾವಣೆಗೆ ನಿಂತು ಸೋತೆ ಎಂದು ಹೇಳಿದರು.

    ಆಂಗ್ಲ ಪತ್ರಿಕೆಯಲ್ಲಿ ಕೊಟ್ಟ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಮಾತಾಡಿದ ಬಗ್ಗೆ ಈಗ ಯಾಕೆ. ಜನರ ಬಳಿ ಹೋಗೋಣ. ಅವರೇ ತೀರ್ಮಾನಿಸುತ್ತಾರೆ. ಮುಂದೆ ಹೋರಾಟ ಮಾಡುವವನು ನಾನೇ ತಾನೇ, ಹೀಗಾಗಿ ಮುಂದೆ ಮಾತಾಡುತ್ತೇನೆ. ನಾನು ಯಾರನ್ನೂ ನಿಂದನೆ ಮಾಡಿಲ್ಲ. ಸಿದ್ದರಾಮಯ್ಯ ಕುರಿತು ಪದೇ ಪದೇ ಹೇಳಿಕೊಳ್ಳುವ ಅವಶ್ಯಕತೆ ಇಲ್ಲ. ನನಗೆ ಈ ಪಕ್ಷ ಕಟ್ಟುವುದು ದೊಡ್ಡ ವಿಚಾರ. ನನ್ನ ಪಕ್ಷದ ಕಾರ್ಯಕರ್ತರ ಭರವಸೆ ನನಗೆ ಇದೆ ಎಂದು ಗರಂ ಆದರು.

    ರೇವಣ್ಣ ಉತ್ತರ ಕರ್ನಾಟಕ ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿದ್ದಾರೆ. ನಿಖಿಲ್ ಸಹ ಕೆಲಸ ಮಾಡುತ್ತಿದ್ದಾರೆ. ಸೋತರೂ ಸಹ ಕೆಲಸ ಮಾಡುತ್ತೇವೆ. ಜನ ಕೊಟ್ಟ ತೀರ್ಮಾನಕ್ಕೆ ತಲೆಬಾಗಿದ್ದೇವೆ. ಈ ಸರ್ಕಾರ ಎಷ್ಟು ದಿನ ಉಳಿಯುತ್ತದೆ ನೋಡೋಣ ಎಂದರು.

  • ಸರ್ಕಾರ ಬೀಳಲು ಕುಮಾರಸ್ವಾಮಿಯವ್ರೇ ಕಾರಣ- ಜಮೀರ್ ಅಹಮದ್

    ಸರ್ಕಾರ ಬೀಳಲು ಕುಮಾರಸ್ವಾಮಿಯವ್ರೇ ಕಾರಣ- ಜಮೀರ್ ಅಹಮದ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಮಾಜಿ ಸಚಿವ ಜಮೀರ್ ಅಹಮದ್ ಕೂಡ ಸಮ್ಮಿಶ್ರ ಸರ್ಕಾರ ಪತನವಾಗಲು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಯವರೇ ನೇರ ಕಾರಣ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

    ಸಿದ್ದರಾಮಯ್ಯ ಅವರ ಸುದ್ದಿಗೋಷ್ಠಿ ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, ಎಚ್ ಡಿ ದೇವೇಗೌಡರು ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವುದಕ್ಕೆ ಇಂದು ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ದೇವೇಗೌಡರು ಸಿದ್ದರಾಮಯ್ಯ ಅವರಿಂದಲೇ ಸರ್ಕಾರ ಹೋಯಿತು ಎಂದು ಹೇಳಿದ್ದಾರೆ. ಆದರೆ ಯಾವ ಕಾರಣದಿಂದ ಸಿದ್ದರಾಮಯ್ಯರಿಂದಾಗಿ ಸರ್ಕಾರ ಬಿದ್ದಿದೆ ಎಂದು ಹೇಳಿದ್ದಾರೋ ನನಗೆ ಅರ್ಥವಾಗುತ್ತಿಲ್ಲ. ಯಾಕಂದ್ರೆ ನಾನು ಆ ಸರ್ಕಾರದಲ್ಲಿ ಮಂತ್ರಿಯಾಗಿದ್ದೆ. ನನಗೆ ಗೊತ್ತಿದ್ದಂತೆ ಎಲ್ಲ ಶಾಸಕರೂ ಅಸಮಾಧಾನಗೊಂಡಿದ್ದರು. ಇವರ ಜೊತೆಗೆ ಮಂತ್ರಿಗಳು ಕೂಡ ಅಸಮಾಧಾನಿತರಾಗಿದ್ದರು ಎಂದರು.

    ಈ ಹಿಂದೆ ತಾಜ್ ವೆಸ್ಟೆಂಡ್ ಹೋಟೆಲಿನಲ್ಲಿ ಸಭೆ ನಡೆದಾಗ ನಾನು ವೇಣುಗೋಪಾಲ್ ಅವರ ಮುಂದೆಯೇ ಕುಮಾರಸ್ವಾಮಿಯವರಿಗೆ, ಅಣ್ಣ ಈವಾಗಾದ್ರೂ ಸರಿಪಡಿಸಿಕೊಳ್ಳುವ ಮೂಲಕ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡುವ. ಇನ್ನಾದರೂ ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋಣ. ಹೀಗೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರವರ ಇಲಾಖೆಯಲ್ಲಿ ಅವರವರ ಕೆಲಸ ಮಾಡಿಕೊಡಿ ಎಂದು ಹೇಳಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ. ಹೀಗಾಗಿ ಸಿದ್ದರಾಮಯ್ಯರಿಂದ ಸರ್ಕಾರ ಬಿದ್ದಿದ್ದಲ್ಲ ಎಂದು ಅವರು ತಿಳಿಸಿದರು.

    ಜೆಡಿಎಸ್ ನವರು ಮಾಡಿದ ತಪ್ಪಿನಿಂದಾಗಿ ಸರ್ಕಾರ ಹೋಗಿದೆ. ಎಲ್ಲ ಶಾಸಕರು ಹಾಗೂ ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರೆ ಈ ಸರ್ಕಾರ ಯಾವುದೇ ಕಾರಣಕ್ಕೂ ಉರುಳುತ್ತಿರಲಿಲ್ಲ. ಒಟ್ಟಿನಲ್ಲಿ ಅವರು ಮಾಡಿದ ತಪ್ಪಿಗೆ ಬೇರೆಯವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಗರಂ ಆದರು. ಇದನ್ನೂ ಓದಿ: ನೀಚ ರಾಜಕಾರಣ ಅಪ್ಪ, ಮಕ್ಕಳ ಹುಟ್ಟುಗುಣ – ಗೌಡರ ಕುಟುಂಬದ ವಿರುದ್ಧ ಸಿದ್ದು ಗುಟುರು

    ಸಿದ್ದರಾಮಯ್ಯ ಅವರು ಇಂದು ಹೇಳಿರುವುದು ನೂರಕ್ಕೆ ನೂರು ಸತ್ಯ. ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ಬಿಜೆಪಿಯವರು ತಾವು ಅಧಿಕಾರ ನಡೆಸಬೇಕೆಂದು ಪ್ರಯತ್ನ ಮಾಡುತ್ತಲೇ ಬಂದರು. ಇತ್ತ ಶಾಸಕರಲ್ಲಿ ಅಸಮಾಧಾನವಿದ್ದ ಕಾರಣ ಅವರು ತಮ್ಮ ಶಾಸಕ ಸ್ಥಾನಕ್ಕೆ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಒಂದು ವೇಳೆ 17 ಮಂದಿ ಶಾಸಕರನ್ನು ಸಿದ್ದರಾಮಯ್ಯ ಅವರೇ ಕಳುಹಿಸಿರುತ್ತಿದ್ದರೆ ಯಾಕೆ ಅವರನ್ನು ಅನರ್ಹ ಮಾಡುತ್ತಿದ್ದರು. ಇದನ್ನು ದೇವೇಗೌಡರು ಅರ್ಥಮಾಡಿಕೊಳ್ಳಬೇಕು ಎಂದರು.

    ಹೀಗಾಗಿ ಸಿದ್ದರಾಮಯ್ಯ ಅಲ್ಲ ದೇವೇಗೌಡರ ಮಗ ಕುಮಾರಸ್ವಾಮಿ ಮಾಡಿದ ತಪ್ಪಿಗೆ ಈ ಸರ್ಕಾರ ಬಿದ್ದಿದೆ ಅಂದರು.

  • ಫೋನ್ ಕದ್ದಾಲಿಕೆ ಮಾಡೋದು ತಪ್ಪಲ್ಲ: ಹೆಚ್‍ಡಿಡಿ

    ಫೋನ್ ಕದ್ದಾಲಿಕೆ ಮಾಡೋದು ತಪ್ಪಲ್ಲ: ಹೆಚ್‍ಡಿಡಿ

    ಬೆಂಗಳೂರು: ಫೋನ್ ಕದ್ದಾಲಿಕೆ ಮಾಡುವುದು ತಪ್ಪಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೊಸ ವಿಚಾರ ಪ್ರಸ್ತಾಪ ಮಾಡಿದ್ದಾರೆ.

    ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ತನಿಖೆ ಒಪ್ಪಿಸಿದ ಬಳಿಕ ಮೊದಲ ಬಾರಿಗೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್ ಹಿಂದೆ ಕೆಲವೊಂದು ಕೇಸ್ ನಲ್ಲಿ ಪಕ್ಷಾಂತರ ವಿಚಾರದಲ್ಲಿ ಫೋನ್ ಕದ್ದಾಲಿಕೆ ಮಾಡೋದು ತಪ್ಪಲ್ಲ ಎಂದು ಹೇಳಿದೆ ಎಂದು ತಿಳಿಸಿದ್ದಾರೆ. ಆದರೆ, ಯಾವ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿದೆ ಎನ್ನುವುದನ್ನು ತಿಳಿಸಿದೆ ದೇವೇಗೌಡರು ಜಾರಿಕೊಂಡರು.

    ಈ ಮೂಲಕ ತಮ್ಮ ಮಗನ ಪರವಾಗಿ ದೇವೇಗೌಡರು ಧ್ವನಿ ಎತ್ತಿದ್ದಾರೆ. ಇದೇ ವಿಚಾರಕ್ಕೆ ನಿನ್ನೆ ಪ್ರತಿಕ್ರಿಯೆ ನೀಡದೆ ಮಾಧ್ಯಮಗಳ ಮೇಲೆ ದೇವೇಗೌಡರು ಕಿಡಿಕಾರಿದ್ದರು. ಸಿಬಿಐ ತನಿಖೆ ವಿಚಾರವನ್ನು ದೊಡ್ಡದು ಮಾಡೋದು ಬಿಟ್ಟು, ನೆರೆ ಪ್ರದೇಶಗಳ ವಿಚಾರವನ್ನು ಹೆಚ್ಚು ತೋರಿಸಿ. ಮಾಧ್ಯಮಗಳೇ ಈ ಫೋನ್ ಕದ್ದಾಲಿಕೆ ವಿಚಾರವನ್ನು ದೊಡ್ಡದು ಮಾಡುತ್ತಿವೆ ಎಂದು ಮತ್ತೆ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

    ರಾಮಕೃಷ್ಣ ಹೆಗಡೆ ಪ್ರಕರಣ ಬಿಟ್ಟು ಈ ದೇಶದಲ್ಲಿ ಇನ್ಯಾವುದೇ ಪ್ರಕರಣ ಆಗಿಲ್ಲ. ಆದರೀಗ ಇಬ್ಬರು ಅಧಿಕಾರಿಗಳ ಬೀದಿ ಜಗಳದಿಂದ ಈ ವಿಚಾರವನ್ನು ಮಾಧ್ಯಮಗಳು ದೊಡ್ಡದಾಗಿ ಬಿಂಬಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ತನಿಖೆ ಬೇಡವಾ ಸರ್ ಅಂತ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಆಕ್ರೋಶಗೊಂಡ ದೇವೇಗೌಡರು, ನಿಮಗೆ ಇಷ್ಟ ಬಂದ ಹಾಗೇ ಸುದ್ದಿ ಹಾಕಿಕೊಳ್ಳಿ ಎಂದು ಕಿಡಿಕಾರಿದರು. ಅಲ್ಲದೆ, ಫೋನ್ ಟ್ಯಾಪ್ ತನಿಖೆ ಮಾಡಿ ಕಾಲಹರಣ ಮಾಡಬೇಡಿ. ನೆರೆ ಪ್ರದೇಶಗಳ ಅಭಿವೃದ್ಧಿಗೆ ಕೆಲಸ ಮಾಡಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ತನಿಖೆಯೇ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕೇಂದ್ರದ ನಾಯಕರು ಹೇಳಿಲ್ಲ:
    ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೇಂದ್ರದ ನಾಯಕರು ಹೇಳಿಲ್ಲ. ಅವರಿಗೆ ಕಾಶ್ಮೀರದಂತಹ ಸಮಸ್ಯೆಗಳೇ ಇವೆ. ಇವನ್ನೆಲ್ಲ ಹೇಳುವುದಕ್ಕೆ ಸಮಯವಿರುವುದಿಲ್ಲ. ಯಡಿಯೂರಪ್ಪ ಅವರು ರಾಜಕೀಯ ಒತ್ತಡದಿಂದ ಸಿಬಿಐ ತನಿಖೆಗೆ ಮುಂದಾಗಿರಬಹುದು. ಆದರೆ, ಮೋದಿ-ಅಮಿತ್ ಶಾ ಸಿಬಿಐಗೆ ಕೊಡಿ ಅಂತ ಹೇಳಿಲ್ಲ ಎಂದು ಹೇಳುವ ಮೂಲಕ ಸಿಎಂ ಯಡಿಯೂರಪ್ಪ ಮೇಲೆ ಬೊಟ್ಟು ಮಾಡಿ ತೋರಿಸಿದರು. ಇದರೊಂದಿಗೆ ಯಡಿಯೂರಪ್ಪ ಅವರ ಆಪರೇಷನ್ ಕಮಲದ ತನಿಖೆಯೂ ಆಗಲಿ ಎಂದು ದೇವೇಗೌಡರು ಪರೋಕ್ಷವಾಗಿ ಹೇಳಿದರು.

  • ಕಾರ್ಯಾಧ್ಯಕ್ಷರಾದ್ರೂ ಪಕ್ಷ ಸಂಘಟನೆ ಮಾಡ್ತಿಲ್ಲ ಮಧುಬಂಗಾರಪ್ಪ

    ಕಾರ್ಯಾಧ್ಯಕ್ಷರಾದ್ರೂ ಪಕ್ಷ ಸಂಘಟನೆ ಮಾಡ್ತಿಲ್ಲ ಮಧುಬಂಗಾರಪ್ಪ

    ಬೆಂಗಳೂರು: ಸರ್ಕಾರ ಹೋದ ಮೇಲೆ ಜೆಡಿಎಸ್ ಪಕ್ಷ ಕಟ್ಟೋಕೆ ನಾಯಕರು ಅಸಡ್ಡೆ ತೋರುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಎದ್ದಿದೆ. ಯಾಕಂದರೆ ಸರ್ಕಾರ ಹೋದ ಬಳಿಕ ಪಕ್ಷದಿಂದ ಪಕ್ಷ ಕಟ್ಟೋ ನಾಯಕರೇ ದೂರ ಉಳಿದಿದ್ದಾರೆ.

    ಕುಮಾರಸ್ವಾಮಿ ಅವರ ನೀಲಿಕಣ್ಣಿನ ಹುಡುಗ ಮಧು ಬಂಗಾರಪ್ಪ ಸದ್ಯ ಪಕ್ಷದಿಂದ ದೂರವೇ ಉಳಿದಿರುವುದು ಈ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವಾಗಿದೆ. ದೋಸ್ತಿ ಸರ್ಕಾರ ಇದ್ದಾಗ ಜೆಡಿಎಸ್ ಕಾರ್ಯಾಧ್ಯಕ್ಷ ಆಗಿರುವ ಮಧು ಬಂಗಾರಪ್ಪ ಇದೀಗ ಪಕ್ಷ ಸಂಘಟನೆಯಲ್ಲಿ  ತನ್ನನ್ನು ತಾನು ತೊಡಗಿಸಿಕೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಕಾರ್ಯಾಧ್ಯಕ್ಷ ಆದ ಬಳಿಕ ಮಧು ಬಂಗಾರಪ್ಪ ಅವರು ಪಕ್ಷದ ಕಚೇರಿಗೂ ಬಂದಿಲ್ಲ, ಸಭೆಯನ್ನೂ ಮಾಡಿಲ್ಲ. ಹೀಗಾಗಿ ಸರ್ಕಾರ ಹೋದ ಮೇಲೆ ಪಕ್ಷ ಕಟ್ಟೋ ಮನಸ್ಥಿತಿಯೇ ಕಳೆದುಕೊಂಡ್ರಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಜೆಡಿಎಸ್ ವರಿಷ್ಠ ದೇವೇಗೌಡರು ಸರ್ಕಾರ ಹೋದ ಮೇಲೆ ನಿತ್ಯ ಸಭೆ ಮೇಲೆ ಸಭೆ ಮಾಡುತ್ತಿದ್ದು, ಇಳಿ ವಯಸ್ಸಿನಲ್ಲಿಯೂ ಪಕ್ಷ ಕಟ್ಟೋ ದೌಡ್ಡ ಗೌಡ್ರಿಗೆ ಪಕ್ಷದ ಕಾರ್ಯಾಧ್ಯಕ್ಷ ಸಾಥ್ ಕೊಡುತ್ತಿಲ್ಲ ಎಂಬ ಚರ್ಚೆ ನಡೆಯುತ್ತಿದೆ.

    ಮಧು ಬಂಗಾರಪ್ಪ ಅವರು ಈ ಹಿಂದೆ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದರು. ಆದರೆ ಇದೀಗ ಕೊಟ್ಟ ಮಾತೇ ಮರೆತು ಪಕ್ಷದಿಂದ ದೂರ ಉಳಿದಿದ್ದಾರೆ. ಅನೇಕ ನಾಯಕರು ಸರ್ಕಾರ ಹೋದ ಮೇಲೆ ಪಕ್ಷ ಸಂಘಟನೆಗೆ ನಿರಾಸಕ್ತಿ ತೋರಿಸುತ್ತಿದ್ದಾರೆ ಎಂಬ ಮಾತುಗಳು ಜೆಡಿಎಸ್ ವಲಯದಲ್ಲಿ ಕೇಳಿಬರುತ್ತಿದೆ.

  • ಕಾರ್ಯಕರ್ತರಿಗೆ ಸ್ಥಾನಮಾನ ಕೊಡ್ಲಿಲ್ಲವೆಂದು ಎಚ್‍ಡಿಡಿ ಕಣ್ಣೀರು ಹಾಕಿದ್ದಾರೆ: ದತ್ತಾ

    ಕಾರ್ಯಕರ್ತರಿಗೆ ಸ್ಥಾನಮಾನ ಕೊಡ್ಲಿಲ್ಲವೆಂದು ಎಚ್‍ಡಿಡಿ ಕಣ್ಣೀರು ಹಾಕಿದ್ದಾರೆ: ದತ್ತಾ

    – ಸಮಾವೇಶ ಪ್ರಾರಂಭಕ್ಕೆ ಟೈಂ, ಘಳಿಗೆ ನೋಡಿದ ಜೆಡಿಎಸ್
    – ಜೆಡಿಎಸ್ ಪಾದಯಾತ್ರೆ ಎರಡು ತಿಂಗಳು ಮುಂದೂಡಿಕೆ
    – ಪ್ರಾದೇಶಿಕ ಪಕ್ಷ ಬೆಳೆಯಲು ಕುಟುಂಬ ರಾಜಕಾರಣ ಬೇಕು

    ಬೆಂಗಳೂರು: ಪಕ್ಷದ ಕಾರ್ಯಕರ್ತರಿಗೆ ಸ್ಥಾನಮಾನ ನೀಡಲಿಲ್ಲ ಅಂತ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕಣ್ಣೀರು ಹಾಕಿದ್ದಾರೆ ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್‍ವಿ ದತ್ತಾ ಹೇಳಿದ್ದಾರೆ.

    ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಪಕ್ಷ ಇವತ್ತು ಸಂಕಷ್ಟದಲ್ಲಿ ಇದೆ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ. ಮತ್ತೆ ಪಕ್ಷ ಕಟ್ಟೋಣ. ಅಧಿಕಾರಿಕ್ಕೆ ಬಂದಾಗಲೆಲ್ಲ ನಮ್ಮ ಜೊತೆ ಸೇರಿಕೊಂಡವರು ಸರಿಯಾಗಿ ಮೆರೆಯುತ್ತಾರೆ. ಆದರೆ ನಮ್ಮ ಕಾರ್ಯಕರ್ತರಿಗೆ ಏನು ಸಿಗುವುದಿಲ್ಲ. ಆಗಿದ್ದು ಈಗ ಆಗಿ ಹೋಯಿತು. ಮತ್ತೆ ಪಕ್ಷ ಸಂಘಟನೆ ಮಾಡೋಣ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆಕೊಟ್ಟಿದ್ದಾರೆ.

    ರಾಜ್ಯದಲ್ಲಿ ಸಂಪುಟ ರಚನೆ ಮಾಡಲು ಬಿಜೆಪಿ ಹೈಕಮಾಂಡ್‍ಗೆ 15 ದಿನಗಳಿಂದ ಆಗಿಲ್ಲ. ನಮ್ಮ ರಾಜ್ಯದ ಮಂತ್ರಿಗಳು ಯಾರು ಆಗಬೇಕು ಅಂತ ಪ್ರಧಾನಿ ಮೋದಿ ತೀರ್ಮಾನ ಮಾಡುವುದು ಅಂದರೆ ನಮಗೆ ನಾಚಿಕೆ ಆಗಬೇಕು. ಇದು ಕರ್ನಾಟಕಕ್ಕೆ ಅವಮಾನ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅದನ್ನು ನಿಭಾಯಿಸಲು ಯಾವ ಸಚಿವರೂ ಇಲ್ಲ. ಆದರೆ ಜೆಡಿಎಸ್ ರಾಜ್ಯದಿಂದಲೇ ಅಧಿಕಾರ ಮಾಡುತ್ತದೆ. ಹೀಗಾಗಿ ರಾಜ್ಯಕ್ಕೆ ಜೆಡಿಎಸ್ ಬೇಕು ಎಂದು ಬಿಜೆಪಿ ವಿರುದ್ಧ ಗುಡುಗಿದರು.

    ಜೆಡಿಎಸ್ ಪಾದಯಾತ್ರೆಯು ಆಗಸ್ಟ್ 20ರಿಂದ ಆರಂಭವಾಗಬೇಕಿತ್ತು. ಆದರೆ ಮಳೆಗಾಲ, ಹಬ್ಬ ಹರಿದಿನ ಹಿನ್ನೆಲೆಯಲ್ಲಿ ಎರಡು ತಿಂಗಳು ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದರು.

    ಪಕ್ಷ ಬೆಳೆಯಬೇಕಾದರೆ 18ರಿಂದ 35 ವರ್ಷದ ಯುವಕರು ಅವಶ್ಯಕತೆ ಇದೆ. ಅಂತಹ ಯುವಕರು ನಮ್ಮ ಪಕ್ಷಕ್ಕೆ ಸೇರಬೇಕು. ಯುವಕರ ಪಡೆ ನಿರ್ಮಾಣ ಮಾಡಿ ಪಕ್ಷ ಸಂಘಟನೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಟ್ಟರು.

    ಕುಟುಂಬ ರಾಜಕಾರಣ ತಪ್ಪಲ್ಲ. ತಮಿಳುನಾಡು, ಆಂಧ್ರಪ್ರದೇಶ, ಒಡಿಶಾದಲ್ಲಿ ಕುಟುಂಬ ರಾಜಕಾರಣ ಪಕ್ಷ ಆಡಳಿತ ಮಾಡುತ್ತಿಲ್ಲವೇ. ಕುಟುಂಬ ರಾಜಕಾರಣ ಹಣೆ ಪಟ್ಟಿಯನ್ನು ಜೆಡಿಎಸ್‍ಗೆ ಯಾಕೆ ಕೊಡಬೇಕು. ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷ ಬೇಕು. ಪ್ರಾದೇಶಿಕ ಪಕ್ಷ ಬೆಳೆಯಲು ಕುಟುಂಬ ರಾಜಕಾರಣ ಬೇಕು ಎಂದು ದೇವೇಗೌಡರ ಕುಟುಂಬ ರಾಜಕಾರಣ ಪರವಾಗಿ ಬ್ಯಾಟ್ ಬೀಸಿದರು.

    ಪ್ರಾದೇಶಿಕ ಪಕ್ಷಕ್ಕೆ ಕುಟುಂಬ ರಾಜಕಾರಣ ಎಂಬ ಆರೋಪ ಮಾಡುವುದು ಸುಲಭ. ಆದರೆ ಪಕ್ಷ ಕಟ್ಟುವ ಕಷ್ಟ ನಮಗೆ ಗೊತ್ತು. ಬಿಜು ಪಟ್ನಾಯಕ್ ಅವರ ಪುತ್ರ ಹಾಗೂ ಕರುಣಾನಿಧಿ ಅವರ ಮಗ ಅಲ್ಲಿನ ಪ್ರಾದೇಶಿಕ ಪಕ್ಷ ಮುಂದುವರಿಸಬೇಕಾಗಿ ಬಂತು. ತಂದೆ ಕಟ್ಟಿದ ಪಕ್ಷವನ್ನು ಮಕ್ಕಳೇ ಮುಂದುವರಿಸುತ್ತಿದ್ದಾರೆ. ಎಚ್.ಡಿ.ರೇವಣ್ಣ, ಎಚ್.ಡಿ.ಕುಮಾರಸ್ವಾಮಿ ಅವರನ್ನು ಕುಟುಂಬ ರಾಜಕಾರಣ ಎನ್ನುವುದಾ? ಪಕ್ಷ ಕಟ್ಟಲು ಸಂಸದ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಕಳಿಸಿದರೆ ಏನು ಅಂದುಕೊಳ್ಳುತ್ತಾರೋ ಎಂದು ಯೋಚಿಸಬೇಡಿ. ಹೀಗೆ ಯೋಚಿಸಿ ಯಾರನ್ನೋ ಕಳಿಸಿದರೆ ಪಕ್ಷ ಸಂಘಟನೆ ಆಗಲ್ಲ. ಮುಖ ಪರಿಚಯ ಇರುವ ವ್ಯಕ್ತಿಯೇ ಆಗಬೇಕು ಎಂದು ಹೇಳಿದರು.

    ಇಂದು 12 ಗಂಟೆ ನಂತರ ರಾಹುಕಾಲ ಪ್ರಾರಂಭವಾಗುತ್ತಿತ್ತು. ಹೀಗಾಗಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಹಾಗೂ ಮುಖಂಡರು ಬಾರದೇ ಇದ್ದರೂ ದೀಪ ಬೆಳಗಿಸಿ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ಬಳಿಕ ಎಚ್.ಡಿ.ದೇವೇಗೌಡ ಅವರು ಬಂದ ನಂತರ ಕಾರ್ಯಕ್ರಮ ಮುಂದುವರಿಸಲು ನಿರ್ಧಾರ ಮಾಡಲಾಯಿತು.

  • ಎಚ್‍ಡಿಡಿ ಕುಟುಂಬದಲ್ಲಿ ಅಳಿಯ, ಅತ್ತೆ ಮಧ್ಯೆ ಟಿಕೆಟ್ ಲೆಕ್ಕಾಚಾರ ಶುರು

    ಎಚ್‍ಡಿಡಿ ಕುಟುಂಬದಲ್ಲಿ ಅಳಿಯ, ಅತ್ತೆ ಮಧ್ಯೆ ಟಿಕೆಟ್ ಲೆಕ್ಕಾಚಾರ ಶುರು

    ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಅವರ ಕುಟುಂಬದಲ್ಲಿ ಅಳಿಯ ಹಾಗೂ ಅತ್ತೆ ನಡುವೆ ಟಿಕೆಟ್ ಲೆಕ್ಕಾಚಾರ ನಡೆಯುತ್ತಿದೆ.

    ನಿಖಿಲ್ ಜೊತೆಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸಹೋದರಿ ಶೈಲಜಾ ಅವರ ಹೆಸರು ಕೇಳಿ ಬಂದಿದೆ. ನಿಖಿಲ್‍ಗೆ ಮುನ್ನವೇ ಕೆ.ಆರ್ ಪೇಟೆಯಲ್ಲಿ ಅತ್ತೆ ಶೈಲಜಾ ಓಡಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಕ್ಷೇತ್ರದಲ್ಲಿ ಅವಕಾಶ ಸಿಕ್ಕರೆ ಒಂದು ಕೈ ನೋಡೋಣ ಎನ್ನುವುದು ಶೈಲಜಾ ಅವರಿಗೆ ಆಸೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

    ಶೈಲಜಾ ಅವರ ಸ್ಪರ್ಧೆ ಬಗ್ಗೆ ಕಾರ್ಯಕರ್ತರಲ್ಲಿ ದೊಡ್ಡ ಚರ್ಚೆ ಆಗುತ್ತಿದೆ. ಆದರೆ ನಿಖಿಲ್ ಎಂಟ್ರಿಯಿಂದ ಯಾರಿಗೆ ಟಿಕೆಟ್ ಎನ್ನುವುದು ದೊಡ್ಡ ಗೊಂದಲ ಶುರುವಾಗಿದೆ.

    ಕುಮಾರಸ್ವಾಮಿ ಅವರು ಸಹೋದರಿ ಶೈಲಜಾ ಜೊತೆ ಹೆಚ್ಚಿನ ಆತ್ಮೀಯತೆ ಹೊಂದಿದ್ದಾರೆ. ಅಲ್ಲದೆ ಕಷ್ಟ-ಸುಖ ಏನೇ ಇದ್ದರೂ ಸಹೋದರಿ ಶೈಲಜಾ ತಮ್ಮ ಕುಮಾರಸ್ವಾಮಿ ಅವರ ಜೊತೆ ಹಂಚಿಕೊಳ್ಳುತ್ತಿದ್ದರು. ಹೀಗಾಗಿ ಕುಮಾರಸ್ವಾಮಿ ಮಗನಿಗಾಗಿ ಸಹೋದರಿ ಶೈಲಜಾ ಕ್ಷೇತ್ರ ತ್ಯಾಗ ಮಾಡುತ್ತಾರಾ ಎಂಬ ಪ್ರಶ್ನೆ ಶುರುವಾಗಿದೆ.

    ಒಟ್ಟಿನಲ್ಲಿ ರಾಜಕೀಯ ವಲಯದಲ್ಲಿ ಟಿಕೆಟ್ ಲೆಕ್ಕಾಚಾರ ಪ್ರಾರಂಭವಾಗಿದೆ. ಸದ್ಯ ದೇವೇಗೌಡರ ನಿರ್ಧಾರವೇ ಅಂತಿಮವಾಗಿದೆ.

  • ಸಿನಿಮಾ ಎಲ್ಲಾ ಬೇಡ ಅಂತ ನಿಖಿಲ್‍ಗೆ ಹೇಳಿದ್ದೇನೆ: ಎಚ್‍ಡಿಡಿ

    ಸಿನಿಮಾ ಎಲ್ಲಾ ಬೇಡ ಅಂತ ನಿಖಿಲ್‍ಗೆ ಹೇಳಿದ್ದೇನೆ: ಎಚ್‍ಡಿಡಿ

    – ಆರ್‌ಎಸ್‌ಎಸ್, ಬಿಜೆಪಿ ನಡುವೆ ಭಿನ್ನಾಭಿಪ್ರಾಯ ಬಂದಿವೆ

    ಬೆಂಗಳೂರು: ಸಿನಿಮಾ ಎಲ್ಲಾ ಬೇಡ ಅಂತ ನಿಖಿಲ್ ಕುಮಾರಸ್ವಾಮಿಗೆ ಹೇಳಿದ್ದೇನೆ. ಅವನು ಕೂಡ ಡಬ್ಬಿಂಗ್ ಮುಗಿಸುವುದಾಗಿ ಮನವಿ ಮಾಡಿಕೊಂಡಿದ್ದಾನೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಸಂಸದನಾಗಿದ್ದಾನೆ. ಅವನನ್ನು ರಾಜ್ಯ ರಾಜಕಾರಣಕ್ಕೆ ತರುವ ಬಗ್ಗೆ ಚರ್ಚೆ ಮಾಡಿಲ್ಲ. ಪ್ರಜ್ವಲ್ ಹಾಸನ ಮಾತ್ರವಲ್ಲ ರಾಜ್ಯದ ಎಲ್ಲಾ ಜಿಲ್ಲೆಯ ಬಗ್ಗೆ ಚರ್ಚೆ ಮಾಡುತ್ತಿದ್ದಾನೆ. ನಿಖಿಲ್ ಕುಮಾರಸ್ವಾಮಿಗೆ ಯುವ ಜೆಡಿಎಸ್ ಜವಾಬ್ದಾರಿ ನೀಡಿದ್ದೇವೆ. ಅದಕ್ಕೆ ಸಂಬಂಧಿಸಿದ ಕೆಲಸ ಮಾತ್ರ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

    ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಮಾಹಿತಿಯನ್ನು ನಾನು ಪಡೆಯುತ್ತಿದ್ದೇನೆ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಎಲ್ಲವನ್ನೂ ಪ್ರತಿ ದಿನ ಗಮನಿಸುತ್ತಿದ್ದೇನೆ. ಈಗಲೇ ಎಲ್ಲ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ದೋಸ್ತಿ ಮುಂದುವರಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಉಪ ಚುನಾವಣೆ ಕುರಿತು ಕಾಂಗ್ರೆಸ್ ನಾಯಕರು ಗುರುವಾರ ಸಭೆ ನಡೆಸಿದರು. ಅದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ತೀರ್ಪು ಬಂದ ಬಳಿಕ ನಡೆಯುವ 17 ಕ್ಷೇತ್ರಗಳ ಉಪ ಚುನಾವಣೆಗೆ ಮೈತ್ರಿ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತನಾಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಪಣ ತೊಟ್ಟಿರುವುದಾಗಿ ಹೇಳಿದ್ದರು. ಪಾಟ್ನಾದಲ್ಲಿ ಅವರು ಭಾಷಣ ಮಾಡಿದಾಗ ಆರ್‌ಎಸ್‌ಎಸ್ ಮೀಸಲಾತಿ ತೆಗೆದುಹಾಕಬೇಕು ಅಂತ ಒತ್ತಾಯ ಮಾಡಿತ್ತು. ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವೆ ಹಲವಾರು ಭಿನ್ನಾಭಿಪ್ರಾಯಗಳು ಬಂದಿವೆ. 16ನೇ ಲೋಕಸಭೆ ಮುಗಿಯುಲು ಆರು ದಿನ ಇದ್ದಾಗ ಮೀಸಲಾತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆನಪಾಯಿತು. ಮೇಲ್ಜಾತಿ ಬಡವರಿಗೆ ಮೀಸಲಾತಿ ನೀಡಲು ತೀರ್ಮಾನ ಮಾಡಿದರು ಎಂದು ಹೇಳಿದರು.

    ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ಸಣ್ಣ ಸಣ್ಣ ಸಮುದಾಯಕ್ಕೂ ಸರ್ಕಾರ ಹಣ ಮೀಸಲಿಟ್ಟಿದ್ದರು. ಸವಿತಾ ಸಮಾಜಕ್ಕೂ 20 ಲಕ್ಷ ರೂ. ಅನುದಾನ ನೀಡಿದ್ದರು. ಹೀಗಾಗಿ ಅದನ್ನು ನೆನೆದು ಸವಿತಾ ಸಮಾಜದವರು ಇಂದು ಪಕ್ಷಕ್ಕೆ ಸೇರಿದ್ದಾರೆ ಎಂದು ತಿಳಿಸಿದರು.

  • ತಾತನ ಎದ್ರು ಅಪ್ಪ, ಮಕ್ಕಳು ಸ್ಲೋ ಡೌನ್ – ಸರ್ಕಾರ ಪತನದ ನಂತ್ರ ದಳಪತಿಗಳು ಡಲ್

    ತಾತನ ಎದ್ರು ಅಪ್ಪ, ಮಕ್ಕಳು ಸ್ಲೋ ಡೌನ್ – ಸರ್ಕಾರ ಪತನದ ನಂತ್ರ ದಳಪತಿಗಳು ಡಲ್

    ಬೆಂಗಳೂರು: ವಿಶ್ವಾಸ ಮತ ಯಾಚನೆಯಲ್ಲಿ ಹಿನ್ನಡೆ ಕಂಡು ದೋಸ್ತಿ ಸರ್ಕಾರ ಪತನವಾಗಿದ್ದು, ಆ ಬಳಿಕ ದಳಪತಿಗಳು ಡಲ್ ಆಗಿದ್ದಾರೆ.

    ಹೌದು. ಬಿಜೆಪಿ ಸರ್ಕಾರ ರಚನೆಯಾದ ಬಳಿಕ ತಾತನ ಎದುರು ಅಪ್ಪ-ಮಕ್ಕಳು ಸ್ಲೋ ಡೌನ್ ಆಗಿದ್ದಾರೆ. ಹೀಗಾಗಿ ಸರ್ಕಾರ ಪತನವಾಗಿದ್ದಕ್ಕೆ ಜೆಡಿಎಸ್ ನವರು ಡಲ್ ಆದ್ರಾ ಎಂಬ ಪ್ರಶ್ನೆ ಎದ್ದಿದೆ. ಆದರೆ ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡರು ಮಾತ್ರ ತಮ್ಮ ಇಳಿವಯಸ್ಸಿನಲ್ಲಿಯೂ ಏಕಾಂಗಿಯಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ದೇವೇಗೌಡರ ಛಲ ಮಗ ಕುಮಾರಸ್ವಾಮಿ, ಮೊಮ್ಮಗ ನಿಖಿಲ್ ಗೆ ಇಲ್ಲವಾಯ್ತಾ ಅನ್ನೋ ಅನುಮಾನ ಮೂಡಿದೆ.

    ಸರ್ಕಾರ ಹೋದ ಮೇಲೆ ಪಕ್ಷ ಸಂಘಟನೆಯಿಂದ ಎಚ್ ಡಿ ಕುಮಾರಸ್ವಾಮಿ ಅವರು ದೂರವೇ ಉಳಿದಿದ್ದಾರೆ. ಇತ್ತ ಮಗ ನಿಖಿಲ್ ಕೂಡ ಅಪ್ಪನ ಹಾದಿಯೇ ಹಿಡಿದಿದ್ದು, ಯುವ ಘಟಕದ ಅಧ್ಯಕ್ಷರಾಗಿಯೂ ಪಕ್ಷ ಸಂಘಟನೆಯಿಂದ ಮಾತ್ರ ದೂರ ಉಳಿದಿದ್ದಾರೆ.

    ತಾತನಂತೆ ತಾನೂ ಪಕ್ಷ ಕಟ್ಟುತ್ತೇನೆ ಎಂದಿದ್ದ ನಿಖಿಲ್, ಅಧ್ಯಕ್ಷನಾಗಿ ಅಧಿಕಾರವಹಿಸಿಕೊಂಡ ನಂತರ ಪಕ್ಷದಿಂದ ದೂರವೇ ಉಳಿದಿದ್ದಾರೆ. ಯುವ ಘಟಕದ ಅಧಿಕಾರ ಪಡೆದ ನಂತ್ರ ಪಕ್ಷದ ಕಚೇರಿಗೇ ನಿಖಿಲ್ ಬಂದಿಲ್ಲ. ಇದುವರೆಗೂ ಒಂದೇ ಒಂದು ಯುವ ಘಟಕದ ಸಭೆಯೂ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಸರ್ಕಾರ ಹೋದ ಮೇಲೆ ಪಕ್ಷದ ಸಂಘಟನೆಗೆ ಕುಮಾರಸ್ವಾಮಿ ಹಾಗೂ ಮಗ ನಿಖಿಲ್ ನಿರಾಸಕ್ತಿ ತೋರಿಸಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದಾರೆ.

  • ಕಾಂಗ್ರೆಸ್ ನಿರ್ಧಾರದ ಮೇಲೆ ಉಪ ಚುನಾವಣೆಯಲ್ಲಿ ದೋಸ್ತಿ: ಎಚ್‍ಡಿಡಿ

    ಕಾಂಗ್ರೆಸ್ ನಿರ್ಧಾರದ ಮೇಲೆ ಉಪ ಚುನಾವಣೆಯಲ್ಲಿ ದೋಸ್ತಿ: ಎಚ್‍ಡಿಡಿ

    ಬೆಂಗಳೂರು: ಉಪ ಚುನಾವಣೆಯ ಮೈತ್ರಿಯು ಕಾಂಗ್ರೆಸ್ ನಿರ್ಧಾರದ ಮೇಲೆ ನಿಂತಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕರ ರಾಜೀನಾಮೆಯಿಂದ 17 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಪೈಕಿ ಜೆಡಿಎಸ್ 3 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಹೀಗಾಗಿ ದೋಸ್ತಿ ಸಂಬಂಧ ಮಾತನಾಡಲು ಕಾಂಗ್ರೆಸ್ ನಾಯಕರು ಬಂದಿದ್ದರು. ಒಟ್ಟಾಗಿ ಸ್ಪರ್ಧೆ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

    2018ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಸಭೆ ಮಾಡಿದ್ದೇವೆ. ಸುದೀರ್ಘ ಸಭೆಯಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಲಾಯಿತು. ಕಳೆದ ಚುನಾವಣೆ, ಮುಂದಿನ ಯಾವುದೇ ಚುನಾವಣೆ ಬಂದರೂ ಸಮರ್ಥವಾಗಿ ಎದುರಿಸಲು ಸಿದ್ಧರಾಗಿರಬೇಕು ಎಂಬ ಚರ್ಚೆಯಾಗಿದೆ. ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಬೇಡ. ಲೋಕಸಭೆ ಚುನಾವಣೆಯಲ್ಲೂ ನಮಗೆ ಇದರ ಅನುಭವ ಆಗಿದೆ. ರಾಜ್ಯ ಮಟ್ಟದಲ್ಲಿ ನೀವು ಒಂದಾಗಿದ್ದೀರಿ. ಆದರೆ ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಆಗಿಲ್ಲ. ಇದೇ ಸೋಲಿಗೆ ಕಾರಣ ಅಂತ ಸೋತವರು ತಿಳಿಸಿದ್ದಾರೆ ಎಂದು ಎಚ್.ಡಿ.ದೇವೇಗೌಡ ಅವರು ಹೇಳಿದರು.

    ಪಕ್ಷದ ಮೂವರು ಶಾಸಕರ ಅನರ್ಹತೆ ವಿಚಾರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಅಭ್ಯರ್ಥಿಗಳನ್ನು ನೀವೇ ನಿರ್ಧಾರ ಮಾಡಿ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಚುನಾವಣೆ 3 ತಿಂಗಳಿಗೆ ಬರುತ್ತೋ 6 ತಿಂಗಳಿಗೆ ಬರುತ್ತೋ ಗೊತ್ತಿಲ್ಲ. ಎಲ್ಲದ್ದಕ್ಕೂ ಸಿದ್ಧರಾಗಿ ಅಂತ ಸಲಹೆ ನೀಡಲಾಗಿದೆ ಎಂದರು.

    ಹಳೇ ಮೈಸೂರು ಭಾಗ ಮಾತ್ರ ಅಷ್ಟೇ ಅಲ್ಲ. ಇಡೀ ರಾಜ್ಯದಲ್ಲಿ ಪಕ್ಷ ಸಂಘಟನೆ ಆಗಬೇಕು. ಕುಮಾರಸ್ವಾಮಿ ಸರ್ಕಾರದ ಬಗ್ಗೆ ಜನರ ಅಭಿಪ್ರಾಯ ಸಂಗ್ರಹ ಮಾಡಬೇಕಿದೆ. ವಿಧಾನಸಭೆ ಚುನಾವಣೆಗೆ ತಳ ಮಟ್ಟದಿಂದ ಪಕ್ಷ ಸಂಘಟನೆ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲು ಮುಖಂಡರು ನನಗೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

    ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಿರಿಯ ನಾಯಕರು ನಾಳೆ ಸಭೆ ಮಾಡುತ್ತಿದ್ದಾರೆ. ಕೋರ್ ಕಮಿಟಿ, ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರ ನೇಮಕಾತಿಯನ್ನು ಆಗಸ್ಟ್ 6, 7ರಂದು ಮಾಡುತ್ತೇವೆ. ಆಗಸ್ಟ್ 7ರಿಂದ 10ರೊಳಗೆ ಜಿಲ್ಲಾ ಸಮಿತಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವಿಶ್ವನಾಥ್, ನಾರಾಯಣ ಗೌಡ, ಗೋಪಾಲಯ್ಯ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದೇವೆ ಎಂದು ಹೇಳಿದರು.

  • ಸರ್ಕಾರ ರದ್ದು ಪಡಿಸಿದ್ರೂ ಪಕ್ಷದ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಿಸುತ್ತೇವೆ: ಎಚ್‍ಡಿಡಿ

    ಸರ್ಕಾರ ರದ್ದು ಪಡಿಸಿದ್ರೂ ಪಕ್ಷದ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಿಸುತ್ತೇವೆ: ಎಚ್‍ಡಿಡಿ

    ಬೆಂಗಳೂರು: ಟಿಪ್ಪು ಜಯಂತಿಯನ್ನು ಬಿಜೆಪಿ ರದ್ದು ಮಾಡಿದ್ದು, ನಾವು ನಮ್ಮ ಕಚೇರಿಯಲ್ಲೇ ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಿಳಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಜಯಂತಿಯನ್ನು ಬಿಜೆಪಿ ರದ್ದು ಮಾಡಿದೆ. ಆದರೆ, ನಾವು ನಮ್ಮ ಕಚೇರಿಯಲ್ಲೇ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುತ್ತೇವೆ. ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರ ಟಿಪ್ಪು ಜಯಂತಿಯನ್ನು ಜಾರಿಗೆ ತಂದಿತ್ತು. ಮೈತ್ರಿ ಸರ್ಕರದ ನಂತರವೂ ಸಹ ಇದನ್ನು ಮುಂದುವರಿಸಲಾಗಿತ್ತು. ಇದೀಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಅವರು ರದ್ದು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಾವು ಟಿಪ್ಪು ಜಯಂತಿಯನ್ನು ಹಳೆಯ ಜೆಡಿಎಸ್ ಕಚೇರಿಯಲ್ಲಿದ್ದಾಗಿನಿಂದಲೂ ಆಚರಿಸುತ್ತಾ ಬಂದಿದ್ದೇವೆ. ಸಿದ್ದರಾಮಯ್ಯನವರು ಅಧ್ಯಕ್ಷರಾಗಿದ್ದಾಗಲೂ ಆಚರಣೆ ಮಾಡಿದ್ದೇವೆ. ರಾಜಕೀಯಕ್ಕಾಗಿ ಇಂತಹ ನಿರ್ಧಾರ ಕೈಗೊಳ್ಳಬಾರದು. ನಾನು ಮುಖ್ಯಮಂತ್ರಿಯಗಿದ್ದಾಗ ಮತೀಯ ಅಲ್ಪ ಸಂಖ್ಯಾತರಿಗೆ 5 ರೆಶಿಡೆನ್ಸಿಯಲ್ ಶಾಲೆ ಪ್ರಾರಂಭಿಸಿ ಟಿಪ್ಪು ಹೆಸರನ್ನೇ ಇಟ್ಟಿದ್ದೆ. ಹೀಗಾಗಿ ಇನ್ನು ಮುಂದೆಯೂ ಸಹ ನಮ್ಮ ಜೆಡಿಎಸ್ ಕಚೇರಿಯಲ್ಲಿ ಟಿಪ್ಪು ಜಯಂತಿಯನ್ನು ಆಚರಿಸುತ್ತೇವೆ ಎಂದು ತಿಳಿಸಿದ್ದಾರೆ.

    ದ್ವೇಷದ ರಾಜಕಾರಣ ಮಾಡುವುದಿಲ್ಲ, ಎಂದು ಹೇಳುತ್ತಾರೆ. ಆದರೆ, ಇಂತಹ ನಿರ್ಧಾರ ಕೈಗೊಳ್ಳುತ್ತಾರೆ. ಮೂರೇ ದಿನದಲ್ಲಿ ಅವರ ಬಗ್ಗೆ ಏಕೆ ಮಾತನಾಡಬೇಕು. ಇನ್ನೂ ಸಮಯವಿದೆ ಈಗಲೇ ಏಕೆ ವಿರೋಧ ವ್ಯಕ್ತಪಡಿಸಬೇಕು. ಇನ್ನೂ ಮೂರು ವರ್ಷ ಎಂಟು ತಿಂಗಳುಗಳ ಕಾಲ ಆಡಳಿತ ನಡೆಸುತ್ತಾರೆ. ಹೇಗೆ ನಡೆಸುತ್ತಾರೋ ಕಾದು ನೋಡುತ್ತೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಯಡಿಯೂರಪ್ಪನವರ ವಿರುದ್ಧ ಹರಿಹಾಯ್ದರು.

    2016 ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆಯನ್ನು ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೆ ತಂದಿತ್ತು. ಮೊದಲು ಟಿಪ್ಪು ಜಯಂತಿಯನ್ನ ಅಲ್ಪಸಂಖ್ಯಾತ ಇಲಾಖೆಯಿಂದ ಆಚರಣೆ ಮಾಡಲಾಗುತ್ತಿದ್ದು, ಆ ಬಳಿಕ ಕನ್ನಡ ಸಂಸ್ಕೃತಿ ಇಲಾಖೆಯಿಂದ ಜಯಂತಿ ಆಚರಿಸಲಾಗುತ್ತಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರವೂ ಆಚರಣೆಯನ್ನು ಮುಂದುವರಿಸಿತ್ತು.

    2018ರ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿಯನ್ನು ರದ್ದುಗೊಳಿಸುವುದಾಗಿ ಹೇಳಿತ್ತು. ಅಷ್ಟೇ ಅಲ್ಲದೇ ಸರ್ಕಾರದ ವತಿಯಿಂದಲೇ ನಡೆಯುತ್ತಿದ್ದ ಟಿಪ್ಪು ಜಯಂತಿ ಆಚರಿಸುತ್ತಿರುವ ಬಗ್ಗೆ ಬಿಜೆಪಿ ನಾಯಕರು ಪ್ರತಿಭಟಿಸಿದ್ದರು.