Tag: ಎಚ್.ಡಿ. ದೇವೇಗೌಡ

  • ನಾರಾಯಣಗೌಡ, ಚಲುವರಾಯಸ್ವಾಮಿಯವರಿಂದ ಹೇಳಿಸಿಕೊಳ್ಳುವಷ್ಟು ದೇವೇಗೌಡರು ಧೃತಿಗೆಟ್ಟಿಲ್ಲ- ಪುಟ್ಟರಾಜು

    ನಾರಾಯಣಗೌಡ, ಚಲುವರಾಯಸ್ವಾಮಿಯವರಿಂದ ಹೇಳಿಸಿಕೊಳ್ಳುವಷ್ಟು ದೇವೇಗೌಡರು ಧೃತಿಗೆಟ್ಟಿಲ್ಲ- ಪುಟ್ಟರಾಜು

    ಮಂಡ್ಯ: ನಾರಾಯಣಗೌಡರಿಂದ ವಾಗ್ದಾಳಿ ಮಾಡಿಸಿಕೊಳ್ಳುವಷ್ಟು ದೇವೇಗೌಡರು ಧೃತಿಗೆಟ್ಟಿಲ್ಲ. ಅವರಿಂದ ಹೇಳಿಸಿಕೊಳ್ಳುವಷ್ಟರ ಮಟ್ಟಿಗೆ ನಾವಿನ್ನೂ ಬಂದಿಲ್ಲ. ಅಲ್ಲದೆ ಜೆಡಿಎಸ್ ಬಗ್ಗೆ ಮಾತನಾಡುವ ಚಲುವರಾಯಸ್ವಾಮಿ ಯಾವ ಪಕ್ಷ ಎಂದು ಹೇಳಬೇಕು ಎಂದು ಮಾಜಿ ಸಚಿವ ಪುಟ್ಟರಾಜು ವಾಗ್ದಾಳಿ ನಡೆಸಿದ್ದಾರು.

    ಜಿಲ್ಲೆಯ ಪಾಂಡವಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಲುವರಾಯಸ್ವಾಮಿ ಅವರು ಯಾವ ಪಕ್ಷ ಎಂದು ಹೇಳಬೇಕು. ಹಗಲು ಸಿದ್ದರಾಮಯ್ಯ ಅವರ ಪಕ್ಕ ಕುಳಿತುಕೊಂಡು ಯಡಿಯೂರಪ್ಪ ಅವರನ್ನು ಬೈಯುತ್ತಾರೆ. ರಾತ್ರಿ ಯಡಿಯೂರಪ್ಪ ಅವರ ಜೊತೆ ಕೂತು ಊಟ ಮಾಡುತ್ತಾರೆ. ಚಲುವರಾಯಸ್ವಾಮಿ ಮೊದಲು ಯಾವ ಪಕ್ಷ ಎಂದು ಗುರುತಿಸಿಕೊಳ್ಳಬೇಕು ಹರಿಹಾಯ್ದಿದ್ದಾರೆ.

    ದೇವೇಗೌಡರು ಮತ್ತು ಅವರ ಮಕ್ಕಳ ಮೇಲೆ ದ್ವೇಷ ಮಾಡಿದವರು ಮನೆಗೆ ಹೋಗಿದ್ದಾರೆ. ಚಲುವರಾಯಸ್ವಾಮಿ ಬಾಳೆ ಎಲೆ ಆಗಬೇಕೇ ಹೊರತು, ಎಂಜಲು ಎಲೆ ಆಗಬಾರದು. ರಾಜಕೀಯವಾಗಿ ಬೆಳೆಯಬೇಕೆಂದರೆ ಬೆಳೆಯಲಿ. ನನ್ನ ರಾಜಕೀಯ ಇತಿಹಾಸದಲ್ಲಿ ನಾನು ಕುದುರೆಯ ಮೇಲೆ ಇದ್ದೇನೆ. ಜನರೊಟ್ಟಿಗೆ ನಿಂತು ಕೆಲಸ ಮಾಡುತ್ತೀದ್ದೇನೆ. ನಾನು ಮೊದಲಿನಿಂದ ಹೇಗೆ ಇದ್ದೇನೋ ಈಗಲೂ ಹಾಗೇ ಇದ್ದೇನೆ ಎಂದು ಕುಟುಕಿದರು.

    ಶಿವಕುಮಾರ್ ಹಾಗೂ ಕುಮಾರಸ್ವಾಮಿ ಅವರನ್ನು ಬೇರೆ ಮಾಡಲು ಚಲುವರಾಯಸ್ವಾಮಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈಗ ಸರಿಯಾಗಿ ನೆಲೆ ಇಲ್ಲವಲ್ಲ, ಹೀಗಾಗಿ ಅವರ ಬೇಳೆ ಬೇಯಿಸಿಕೊಳ್ಳಬೇಕಿದೆ. ಹೀಗಾಗಿ ಏನೆನೋ ಮಾತನಾಡುತ್ತಿದ್ದಾರೆ. ಡಿಕೆಶಿ- ಕುಮಾರಸ್ವಾಮಿ ಸಂಬಂಧವನ್ನು ಬೇರ್ಪಡಿಸುವ ಹುನ್ನಾರವನ್ನು ಚಲುವರಾಯಸ್ವಾಮಿ ಮಾಡುತ್ತಿದ್ದಾರೆ. ಚಲುವರಾಯಸ್ವಾಮಿ ಚುನಾವಣೆಯಲ್ಲಿ ಸೋತ ಬಳಿಕ ಗುರುತಿಸಿಕೊಳ್ಳಲು ಇಂತಹ ಹೇಳಿಕೆ ಕೊಡುತ್ತಿದ್ದಾರೆ ಎಂದು ದೂರಿದರು.

    ಮಂಡ್ಯದ ಮೈ ಷುಗರ್ ಸಕ್ಕರೆ ಕಾರ್ಖಾನೆ ಆರಂಭಿಸಬೇಕು. ಕಾರ್ಖಾನೆ ಆರಂಭವಾಗದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕಾರ್ಖಾನೆ ಒಂದು ವಾರದಲ್ಲಿ ಆರಂಭವಾಗಬೇಕು. ಇಲ್ಲವಾದಲ್ಲಿ ದಸರಾ ನಡೆಯಲು ಬಿಡುವುದಿಲ್ಲ ಎಂದು ತಿಳಿಸಿದರು. ಇದೇ ವೇಳೆ ನಿಖಿಲ್ ಸೋಲಿನ ಜವಾಬ್ದಾರಿಯನ್ನು ನಾನು ಹೊತ್ತುಕೊಂಡಿದ್ದೇನೆ ಎಂದು ಈಗಾಲೇ ಹೇಳಿದ್ದೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

  • ಹೆಚ್‍ಡಿಕೆ ವಿರುದ್ಧ ಚಲುವರಾಯಸ್ವಾಮಿ ಹೊಸ ಬಾಂಬ್

    ಹೆಚ್‍ಡಿಕೆ ವಿರುದ್ಧ ಚಲುವರಾಯಸ್ವಾಮಿ ಹೊಸ ಬಾಂಬ್

    – ದೇವೇಗೌಡ್ರ ಕುಟುಂಬಕ್ಕೂ ಡಿಕೆಶಿಗೂ ವೈಮನಸ್ಸಿತ್ತು

    ಮಂಡ್ಯ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ದರೋಡೆ ಮಾಡುವುದಕ್ಕೆ ನಾವು ಹೇಳಿದ್ವಾ, ಇದಕ್ಕೆಲ್ಲ ನಾನು ಹೊಣೆಯೇ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ ಎನ್ನುವ ಮೂಲಕ ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಎಲ್ಲರೂ ತಮ್ಮ ಮೊಬೈಲ್ ಸ್ವಿಚ್ಛ್ ಆಫ್ ಮಾಡಿದ್ದರು. ಒಕ್ಕಲಿಗ ಸಮಾಜದ ನಾಯಕರು, ಯುವಕರು ಹಾಗೂ ನಾನು ಆ ಸಭೆಗೆ ಹೋಗಿಲ್ಲ ಎಂದು ನನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ದೂಷಣೆ ಮಾಡುತ್ತಿದ್ದಾರೆ. ಇಂತಹ ದರೋಡೆ ಮಾಡಲು ನಾವು ಹೇಳಿದ್ವಾ. ದರೋಡೆ ಮಾಡಿ ಸಾರ್ವಜನಿಕರಿಗೆ ಹಂಚುತ್ತಾರಾ. ಇದಕ್ಕೆ ನಾನು ಹೊಣೆನಾ..? ನಾನು ಸಭೆಗೆ ಯಾಕೆ ಹೋಗಬೇಕಿತ್ತು..? ಎಂದೆಲ್ಲ ಹೆಚ್‍ಡಿಕೆ ಅವರು ಮಾತನಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಇದು ಎಷ್ಟು ಸತ್ಯ, ಸುಳ್ಳು ಎಂದು ನನಗೆ ಗೊತ್ತಿಲ್ಲ. ಹೀಗಾಗಿ ಸತ್ಯ ಗೊತ್ತಿಲ್ಲದೇ ನಾನು ಮಾತನಾಡುವುದು ತಪ್ಪು ಎಂದು ಗಂಭೀರ ಆರೋಪ ಮಾಡಿ ಯಾರೋ ಹೇಳುತ್ತಿದ್ದಾರೆಂದು ಹೇಳಿ ಚಲುವರಾಯಸ್ವಾಮಿ ಜಾರಿಕೊಂಡಿದ್ದಾರೆ.

    ಹೆಚ್‍ಡಿಕೆ ಅವರು ಸಿಎಂ ಪಟ್ಟ ಉಳಿಸಲು ಎಲ್ಲರನ್ನೂ ಎದುರಾಕಿಕೊಂಡರು. ಇಂದು ಡಿಕೆಶಿ ಜೊತೆಯಲ್ಲಿ ಕುಮಾರಸ್ವಾಮಿ ನಿಲ್ಲಲಿಲ್ಲ. ಕುಮಾರಸ್ವಾಮಿ ಅವರಿಗೆ ಇಂತಹ ಕಷ್ಟ ಬಂದಿದ್ದರೆ ಡಿಕೆಶಿ ಸ್ಟೇಷನ್ ಹತ್ತಿರನೇ ಕೂರುತ್ತಿದ್ದರು. ಆದರೆ ಡಿಕೆಶಿಗೆ ಮಾನಸಿಕವಾಗಿ ಧೈರ್ಯ ತುಂಬ ಬಹುದಿತ್ತು. ಒಕ್ಕಲಿಗ ಸಂಘಟನೆಗಳಿಂದ ನಡೆದ ಹೋರಾಟಕ್ಕೂ ಸಪೋರ್ಟ್ ಮಾಡಲಿಲ್ಲ. ಅದನ್ನು ಬಿಟ್ಟು ಅಂದು ಚನ್ನಪಟ್ಟಣದಲ್ಲಿ ಕಾರ್ಯಕ್ರಮವನ್ನು ಹಾಕಿಕೊಂಡರು. ಉದ್ದೇಶ ಪೂರ್ವಕವಾಗಿ ಚನ್ನಪಟ್ಟಣಕ್ಕೆ ಹೋಗಿದ್ರಾ ಅಥವಾ ಹೋರಾಟಕ್ಕೆ ಹೋಗುವ ಜನರನ್ನು ಅವೈಡ್ ಮಾಡೋದಕ್ಕೆ ಹೋಗಿದ್ರಾ ಎಂದು ಡಿಕೆಶಿ ಪರ ಒಕ್ಕಲಿಗ ಸಮುದಾಯದ ಹೋರಾಟಕ್ಕೆ ಗೈರಾದ ಹೆಚ್‍ಡಿಕೆಗೆ ಮಾಜಿ ಸಚಿವರು ಪ್ರಶ್ನೆ ಮಾಡಿದರು.

    ಡಿ.ಕೆ.ಶಿವಕುಮಾರ್ ಮಾಡಬಾರದ ಕ್ರೈಮ್ ಮಾಡಿಲ್ಲ. ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆಗೆ ಮಾಡಿಕೊಳ್ಳಲು ಡಿಕೆಶಿ ಬಿಡಲಿಲ್ಲ. ಕಾಂಗ್ರೆಸ್ ರಕ್ಷಣೆ ಮಾಡಿಕೊಳ್ಳಲು ನಿಂತಿದ್ದರು. ಈ ಸಿಟ್ಟು ಡಿಕೆಶಿ ಬಿಜೆಪಿ ನಾಯಕರಿಗೆ ಇತ್ತು. ಹಿಂದೆ ದೇವೇಗೌಡರ ಕುಟುಂಬಕ್ಕೂ ಡಿಕೆಶಿಗೂ ವೈಮನಸ್ಸಿತ್ತು. ಹೀಗೆ ಇಲ್ಲದೆಲ್ಲ ಚರ್ಚೆ ನಡೆಯುತ್ತಿದೆ. ಒಂದಲ್ಲೊಂದು ದಿನ ಸತ್ಯ ಹೊರಗಡೆ ಬರುತ್ತದೆ. ಜಾಣ್ಮೆಯಿಂದಲೇ, ಪರೋಕ್ಷವಾಗಿ ಡಿಕೆಶಿ ಬಂಧನಕ್ಕೆ ದೇವೇಗೌಡರ ಕುಟುಂಬ ಕಾರಣ ಎಂದು ಚಲುವರಾಯಸ್ವಾಮಿ ಆರೋಪ ಮಾಡಿದರು.

    ದೇವೇಗೌಡರು ಹೇಳೋದೆಲ್ಲ ಸುಳ್ಳು. ಅವರಿಂದ ಅನೇಕರಿಗೆ ನೋವಾಗಿದೆ. ಜನರಿಗೆ ಮನವರಿಕೆ ಆಗುವವರೆಗೂ ಇದು ನಡೆಯುತ್ತಲೇ ಇರುತ್ತದೆ. ಜನರಿಗೆ ಅರ್ಥವಾದಾಗ ಎಲ್ಲವೂ ಸರಿಹೋಗುತ್ತದೆ. ಆ ದಿನ ಬೇಗ ಬರುತ್ತದೆ. ಜಿ.ಟಿ ದೇವೇಗೌಡರು ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಶ್ರೀನಿವಾಸ್ ಕೂಡ ಸಿಡಿದೆದ್ದು ಹಲವು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಜೆಡಿಎಸ್ ವರಿಷ್ಠರಿಗೆ ಯಾರೇ ಹೋದರೂ, ಬಂದ್ರೂ ತೆಲೆಕೆಡಿಸಿಕೊಳ್ಳಲ್ಲ. ಈ ಭಾಗದ ಜನ ತಮ್ಮನ್ನು ನಂಬುತ್ತಾರೆ, ಯಾವುದೇ ಸರ್ಕಾರಗಳಲ್ಲಿ ಕಿಂಗ್ ಮೇಕರ್ ಆಗುತ್ತೇವೆ ಅಂದುಕೊಂಡಿದ್ದಾರೆ. ಅಂತಿಮವಾಗಿ ಮತದಾರರೇ ತೀರ್ಮಾನ ಮಾಡಬೇಕು ಎಂದರು.

    ಒಕ್ಕಲಿಗರು ಬೆಳೆಯಲು ದೇವೇಗೌಡರು ಬಿಡಲ್ಲ ಎಂಬ ನಾರಾಯಣಗೌಡ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಬಹಳ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಬಹಳಷ್ಟು ಒಕ್ಕಲಿಗರು ಪರಿಸ್ಥಿತಿ ಎದುರಿಸಿದ್ದಾರೆ. ಮಾಜಿ ಮಂತ್ರಿಯಾಗಿ ಸ್ವಲ್ಪ ಗುರುತಿಸಿಕೊಂಡವರು ಜೆಡಿಎಸ್ ನಲ್ಲಿ ಉಳಿದಿಲ್ಲ. ಜೆಡಿಎಸ್ ಅನ್ನು ಸಾರ್ವತ್ರಿಕ ಪಕ್ಷವಾಗಿ, ರಾಜಕೀಯ ಪಕ್ಷವಾಗಿ ಬೆಳೆಸಲಿಲ್ಲ. ಪಕ್ಷವನ್ನು ಕೇವಲ ಕುಟುಂಬದ ಹಿಡಿತಕ್ಕೆ ಸೀಮಿತಗೊಳಿಸಿದರು. ಆದ್ದರಿಂದ ಯಾರೂ ಬೆಳೆಯಲು ಸಾಧ್ಯವಾಗಲಿಲ್ಲ ಎಂದು ಗರಂ ಆದರು.

  • ಮಕ್ಕಳು, ಮೊಮ್ಮಕ್ಕಳಿಂದಲೇ ದೇವೇಗೌಡರು ಸೋತರು: ಸಿ.ಎಸ್.ಪುಟ್ಟೇಗೌಡ

    ಮಕ್ಕಳು, ಮೊಮ್ಮಕ್ಕಳಿಂದಲೇ ದೇವೇಗೌಡರು ಸೋತರು: ಸಿ.ಎಸ್.ಪುಟ್ಟೇಗೌಡ

    ಹಾಸನ: ಬಡವರ ಮಕ್ಕಳು ಕೆಂಪುಕೋಟೆಗೇರಿಸಿದ್ದ ನಿಮ್ಮನ್ನು ಮತ್ತೆ ಸಂಸದನಾಗದ ಹಾಗೆ ಮಾಡಿದ್ದು ನಿಮ್ಮ ಮಕ್ಕಳು, ಮೊಮ್ಮಕ್ಕಳು ಹಾಗೂ ಸೊಸೆಯಂದಿರು. ನಿಮ್ಮ ತಾಳ್ಮೆ ಅವರಿಗಿಲ್ಲ, ಅವರ ಮಾತನ್ನು ಕೇಳಿ ನಿರ್ಧಾರ ಕೈಗೊಳ್ಳಬೇಡಿ ಎಂದು ಎಚ್.ಡಿ.ದೇವೇಗೌಡರಿಗೆ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಸಲಹೆ ನೀಡಿದ್ದಾರೆ.

    ಜಿಲ್ಲೆಯ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಮಾಡಿದ 2000ನೇ ಇಸವಿಯ ಹಿಂದಿನ ರಾಜಕೀಯ ಈಗಿಲ್ಲ. ವಿನಾಕಾರಣ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಬೆರಳು ಮಾಡಿ ತೋರಿಸಬೇಡಿ. ಕುಟುಂಬ ರಾಜಕಾರಣದಿಂದಲೇ ನೀವು ಎಂಪಿ ಆಗಲಿಲ್ಲ, ನಿಮ್ಮ ಕುಡಿಯೇ ನಿಮ್ಮನ್ನು ಸಂಸದನಾಗಲು ಬಿಡಲಿಲ್ಲ. ಕುಟುಂಬ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ. ಲಾಲೂ ಪ್ರಸಾದ್ ಆದಿಯಾಗಿ ಈವರೆಗೆ ಕುಟುಂಬ ರಾಜಕಾರಣ ಮಾಡಿದವರೆಲ್ಲ ಮಣ್ಣು ಮುಕ್ಕಿದ್ದಾರೆ. ಹೀಗಾಗಿ ಪ್ರಜಾಪ್ರಭುತ್ವಕ್ಕೆ ಬೆಲೆ ನೀಡಿ ಕುಟುಂಬ ರಾಜಕಾರಣವನ್ನು ಮಾಡುವುದನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಎಲ್ಲರೂ ಸಾಲಮನ್ನಾ ಮಾಡಿದ್ದೇವೆ ಎಂದು ಸಾರುತ್ತಿದ್ದೀರಿ, ಯಾರಿಗೆ ನೀವು ಸಾಲಮನ್ನಾ ಮಾಡಿರುವುದು, ಸಾಲಮನ್ನಾ ಆಗಿರುವುದು ಬಡವರಿಗಲ್ಲ. ಸೊಸೈಟಿ ಕಾರ್ಯದರ್ಶಿ, ನಿರ್ದೇಶಕರಿಗೆ ಸಾಲಮನ್ನಾ ಆಗಿದೆ. ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆ ನಡೆಯುತ್ತಿರುವುದು ಕೇವಲ 8 ಕೋಟಿ ರೂ.ಗಳಿಗಾಗಿ. ಆದರೆ ಸೊಸೈಟಿಯಲ್ಲಿ 800 ಕೋಟಿ ರೂ. ದರೋಡೆ ಮಾಡಿದ್ದಾರೆ. ನಮ್ಮ ನಾಯಕರು ಏನೂ ಮಾತನಾಡಬೇಡಿ ಸುಮ್ಮನಿರಿ ಎಂದಿದ್ದರು. ಹೀಗಾಗಿ ಸುಮ್ಮನಿದ್ದೆ. ಈಗ ಮೈತ್ರಿ ಸರ್ಕಾರ ಬಿದ್ದು, ಹೋಗಿದೆ ನಾವು ಬೇರೆಯಾಗಿದ್ದೇವೆ, ಮಾತನಾಡುವ ಸಂದರ್ಭ ಬಂದಿದೆ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ನಿಮ್ಮ ಪಕ್ಷದ ಜಾತಕವನ್ನು ಗುಬ್ಬಿ ಶ್ರೀನಿವಾಸ, ಜಿಟಿ ದೇವೇಗೌಡ ಬಿಚ್ಚಿಡುತ್ತಿದ್ದಾರೆ. ದೇವೇಗೌಡರು ಈಗಲಾದರೂ ಮನವರಿಕೆ ಮಾಡಿಕೊಳ್ಳಬೇಕು. ಕುಟುಂಬ ರಾಜಕಾರಣ ಒಳ್ಳೆಯದಲ್ಲ. ಎಲ್ಲದರಲ್ಲೂ ಕುಟುಂಬದವರನ್ನು ಸೇರಿಸುವುದನ್ನು ಬಿಡಿ. ಡೈರಿ, ಶುಗರ್ ಫ್ಯಾಕ್ಟರಿ, ಜಿ.ಪಂ ಸೇರಿದಂತೆ ಎಲ್ಲ ಕಡೆಯೂ ಅವರ ಕುಟುಂಬದವರೇ ಇದ್ದಾರೆ. ನಿಮಗಿದ್ದ ಸಹನಾ ಶಕ್ತಿ ನಿಮ್ಮ ಮಕ್ಕಳಿಗಿಲ್ಲ. ಡಿ.ಕೆ.ಶಿವಕುಮಾರ್ ನಿಮಗಾಗಿ ಅಷ್ಟು ಹೊಡೆದಾಡಿದರೂ ಕುಮಾರಸ್ವಾಮಿ ಅವರು ಹೋರಾಟಕ್ಕೆ ಬರಲಿಲ್ಲ. ಇನ್ನಾದರೂ ನಿಮ್ಮ ಕುಟುಂಬ ರಾಜಕಾರಣ ಪರಿಶೀಲನೆ ಮಾಡಿಕೊಳ್ಳಿ ಎಂದು ಹರಿಹಾಯ್ದಿದ್ದಾರೆ.

  • ಎಚ್‍ಡಿಕೆ ವಿರುದ್ಧ ಇನ್ನಷ್ಟು ಚೂರಿಗಳು ಬರುವುದು ಬಾಕಿ ಇದೆ- ಸಾರಾ ಮಹೇಶ್

    ಎಚ್‍ಡಿಕೆ ವಿರುದ್ಧ ಇನ್ನಷ್ಟು ಚೂರಿಗಳು ಬರುವುದು ಬಾಕಿ ಇದೆ- ಸಾರಾ ಮಹೇಶ್

    ಮೈಸೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಇನ್ನಷ್ಟು ಚೂರಿಗಳು ಬರುವುದು ಬಾಕಿ ಇದೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಪರೋಕ್ಷವಾಗಿ ಜಿ.ಟಿ.ದೇವೇಗೌಡರ ವಿರುದ್ಧ ಹರಿಹಾಯ್ದಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೀಗ ಅಲ್ಲಲ್ಲಿ ಚೂರಿಗಳ ಮಾತುಗಳು ಕೇಳುತ್ತಿವೆ. ಅವೆಲ್ಲವು ಶೀಘ್ರದಲ್ಲೇ ಹೊರ ಬರಲಿವೆ. ನಮ್ಮ ಪಕ್ಷದಲ್ಲೇ ಚೂರಿಗಳ ಸದ್ದು ಕೇಳಿಸುತ್ತಿದೆ. ಆದರೆ ಎಲ್ಲ ಚೂರಿಗಳನ್ನು ಅರಗಿಸಿಕೊಳ್ಳುವ ಶಕ್ತಿ ಕುಮಾರಸ್ವಾಮಿ ಅವರಿಗಿದೆ ಎಂದು ಹೇಳಿದರು.

    14 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಎಚ್‍ಡಿಕೆ ಉಂಡಷ್ಟು ನೋವು ಯಾರು ಉಣ್ಣಲಿಲ್ಲ. ಬೆಳಗ್ಗೆ ಒಂದು ಗಂಟೆ ಅಧಿಕಾರಿಗಳ ಸಭೆ ಮಾಡಿದರೆ ಮುಗಿಯಿತು. ನಂತರ ಅಸಮಾಧಾನಗೊಂಡ ಶಾಸಕರ ಸಮಾಧಾನದಲ್ಲೇ ಸಮಯ ಕಳೆಯಬೇಕಾಗಿತ್ತು. ಕುಮಾರಸ್ವಾಮಿಯವರ ಹತ್ತಿರವೇ ನಾನಿದ್ದ ಕಾರಣ ಅವರು ಉಂಡ ಎಲ್ಲ ನೋವುಗಳು ನನಗೆ ತಿಳಿದಿದೆ. ಇದೀಗ ಅಧಿಕಾರ ಹೋದ ನಂತರದಲ್ಲಿ ಮತ್ತೆ ಅದೇ ನೋವು ಮುಂದುವರಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನಿನ್ನೆ ಮೈಸೂರಿನಲ್ಲಿ ನಡೆದ ಜೆಡಿಎಸ್ ಸಭೆಗೆ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಗೈರಾಗಿರುವುದರ ಕುರಿತು ಜಿಟಿಡಿ ಹಾಗೂ ದೇವೇಗೌಡರ ನಡುವೆ ವಾಗ್ವಾದ ನಡೆದಿತ್ತು. ಎಚ್‍ಡಿಡಿ ಪ್ರತಿಕ್ರಿಯಿಸಿ ಅವರು ಎಲ್ಲಿಗಾದರೂ ಹೋಗಲಿ ಬಿಡಿ, ಅವರ ಪಾಡಿಗೆ ಅವರನ್ನು ಬಿಡಿ ಎಂದು ಹೇಳಿದ್ದರು. ಇದಕ್ಕೆ ಜಿಟಿಡಿ ಪ್ರತಿಕ್ರಿಯಿಸಿ, ಜೆಡಿಎಸ್ ಸಭೆಗೆ ನನ್ನನ್ನು ಆಹ್ವಾನಿಸಿರಲಿಲ್ಲ. ಹೀಗಾಗಿ ನಾನು ಸಭೆಗೆ ಹೋಗಿಲ್ಲ ಎಂದು ತಿಳಿಸಿದ್ದರು. ಈ ಮಧ್ಯೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಸಾರಾ ಮಹೇಶ್‍ಗೆ ಸಚಿವ ಸ್ಥಾನ ನೀಡಬೇಡಿ ಎಂದು ಜಿಟಿಡಿ ಹೇಳಿದ್ದರು ಎಂದು ಹೇಳಿದ್ದರು. ಇದಕ್ಕೆ ಜಿಟಿಡಿ ಆಕ್ರೋಶ ವ್ಯಕ್ತಪಡಿಸಿ, ಚಾಮುಂಡಿ ತಾಯಿಯಾಣೆ ನಾನು ಸಾರಾ ಮಹೇಶ್‍ಗೆ ಸಚಿವ ಸ್ಥಾನ ನೀಡಬೇಡಿ ಎಂದು ಹೇಳಿಲ್ಲ ಎಂದು ತಿರುಗೇಟು ನೀಡಿದ್ದರು. ಇದೀಗ ಸಾರಾ ಮಹೇಶ್ ಪರೋಕ್ಷವಾಗಿ ಜಿಟಿಡಿ ವಿರುದ್ಧ ಹರಿಹಾಯ್ದಿದ್ದಾರೆ.

  • ಜಿಟಿಡಿ ಜೆಡಿಎಸ್‍ನಲ್ಲಂತೂ ಇರಲ್ಲ, ಎಲ್ಲಿಗೆ ಹೋಗುತ್ತಾರೋ ಗೊತ್ತಿಲ್ಲ – ಹೊರಟ್ಟಿ

    ಜಿಟಿಡಿ ಜೆಡಿಎಸ್‍ನಲ್ಲಂತೂ ಇರಲ್ಲ, ಎಲ್ಲಿಗೆ ಹೋಗುತ್ತಾರೋ ಗೊತ್ತಿಲ್ಲ – ಹೊರಟ್ಟಿ

    ಧಾರವಾಡ: ಮಾಜಿ ಸಚಿವ ಜಿ.ಟಿ.ದೇವೇಗೌಡರು ಎಲ್ಲಿಗೆ ಹೋಗುತ್ತಾರೋ ಗೊತ್ತಿಲ್ಲ. ಆದರೆ ಜೆಡಿಎಸ್ ಪಕ್ಷದಲ್ಲಂತೂ ಅವರು ಇರುವುದಿಲ್ಲ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಬೇಕು. ಅವರು ಜೆಡಿಎಸ್‍ನಲ್ಲಿರುವುದಿಲ್ಲ ಎನ್ನುವುದು ಅವರ ಮಾತಿನಲ್ಲೇ ತಿಳಿಯುತ್ತದೆ. ಮೊದಲೇ ಅವರಿಗೆ ಅಸಮಾಧಾನವಿತ್ತು. ಆಗಲೇ ಅವರು ಪಕ್ಷದಲ್ಲಿ ಉಸಿರುಗಟ್ಟುವ ವಾತಾವಾರಣ ಇದೆ ಎಂದಿದ್ದರು. ಅದು ನನಗೂ ಸರಿ ಅನಿಸಿತ್ತು. ಈಗ ಪರಿಸ್ಥಿತಿ ಇನ್ನೂ ಅತಿರೇಕಕ್ಕೆ ಹೋಗಿದೆ. ಹೀಗಾಗಿ ಅವರು ಪಕ್ಷದಲ್ಲಿ ಇರುವುದಿಲ್ಲ, ಎಲ್ಲಿ ಹೋಗುತ್ತಾರೋ ಗೊತ್ತಿಲ್ಲ ಎಂದರು.

    ಇಂಥವರನ್ನೆಲ್ಲ ಕರೆದು ಮಾತನಾಡುವುದು ಪಕ್ಷದ ವರಿಷ್ಠರ ಧರ್ಮ. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುವುದರಿಂದ ಪಕ್ಷದ ಭವಿಷ್ಯ ಹಾಳಾಗುತ್ತದೆ. ಹೀಗೆ ಮುಂದುವರಿದರೆ ಪಕ್ಷದ ಭವಿಷ್ಯ ಇನ್ನೂ ಕಠಿಣವಾಗುತ್ತದೆ. ಈಗಿನ ಬೆಳವಣಿಗೆ ನೋಡಿದರೆ ಅಪರೇಷನ್ ಕಮಲ ಮತ್ತೆ ನಡೆಯುತ್ತದೆ ಅನಿಸುತ್ತದೆ. ಸರ್ಕಾರ ಇದ್ದಾಗ ನಮ್ಮನ್ನೆಲ್ಲ ಸರಿಯಾಗಿ ನೋಡಿಲ್ಲ ಅಂತ ಬಹಳ ಜನ ಶಾಸಕರು ನೋವು ವ್ಯಕ್ತಪಡಿಸಿದ್ದಾರೆ. ನನಗೂ ಸಾಕಷ್ಟು ನೋವಾಗಿತ್ತು ಆದರೂ ನಾನು ಹೇಳಿಕೊಂಡಿಲ್ಲ. ನಾನು ಶಿಸ್ತಿನಲ್ಲಿರುವ ಕಾರಣ ಹೇಳಿಕೊಂಡಿರಲಿಲ್ಲ. ನನ್ನ ಬಳಿಯೂ ಅನೇಕರು ಮಾತನಾಡಿದ್ದಾರೆ. ಆಗಿನ ಅತೃಪ್ತಿ ಈಗ ಸ್ಫೋಟಗೊಳ್ಳುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

    ಪ್ರಸ್ತುತ ಸರ್ಕಾರದಲ್ಲಿ ಅನುಭವ ಇಲ್ಲದವರೇ ಹೆಚ್ಚಿದ್ದಾರೆ, ಅನುಭವಿಗಳು ಇಲ್ಲ. ಇದ್ದವರು ಎಲ್ಲರೂ ಹೊಟ್ಟೆ ತುಂಬಿದವರು ಆಗಿದ್ದಾರೆ. ಸಚಿವರಾಗಿ ಕಾನೂನು ಪ್ರಕಾರ ಕೆಲಸ ಮಾಡಿದರೆ ಸಾಕು. ಆದರೆ ಅವರಿಗೆ ಇಚ್ಛಾಶಕ್ತಿ ಕೊರತೆಯಿದೆ. ಅಸಮಾಧಾನಗಳು ಕೂಡ ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಹೊರತುಪಡಿಸಿದರೆ ಬೇರೆ ಯಾವ ಮಂತ್ರಿಯೂ ಕೆಲಸ ಮಾಡುತ್ತಿಲ್ಲ. ಪ್ರವಾಹ ಪರಿಸ್ಥಿತಿಯಲ್ಲಿ ಮಂತ್ರಿಗಳು ಹಗಲು ರಾತ್ರಿ ಕೆಲಸ ಮಾಡಬೇಕಿತ್ತು. ಆದರೆ, ಕೇವಲ ಪ್ರವಾಹ ನೋಡಿ ಬರುವುದನ್ನು ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಇದೆಯೋ ಇಲ್ಲವೋ ಎಂಬ ಭಾವನೆ ಜನರಲ್ಲಿದೆ. ವಿಧಾನಸಭೆಯಲ್ಲಿ ಯಾರೊಬ್ಬರೂ ಇರುವುದಿಲ್ಲ. ಜನರ ಬಳಿಯೂ ಇಲ್ಲ. ಹಾಗಾದರೆ ಇವರೆಲ್ಲ ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.

    ಡಿ.ಕೆ.ಶಿವಕುಮಾರ್ ಇಡಿ ಕಸ್ಟಡಿಗೆ ಪಡೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ನಾನು ಹೆಚ್ಚು ಮಾತನಾಡುವುದಿಲ್ಲ ಅದು ಕಾನೂನು ಕೆಲಸ. ಆದರೆ ಅವರು ಎಂದಿಗೂ ವಿಚಾರಣೆ ತಪ್ಪಿಸಿಲ್ಲ ಕರೆದಾಗಲೆಲ್ಲ ಹೋಗಿದ್ದಾರೆ. ಹೀಗಾಗಿ ಅವರನ್ನು ಬಂಧಿಸುವ ಅಗತ್ಯ ಇರಲಿಲ್ಲ ಎಂದು ತಿಳಿಸಿದ್ದಾರೆ.

  • ನಾನು ಪಕ್ಷ ಬಿಟ್ಟು ಹೋದರೆ ಸಾಕೆಂದು ಎಚ್‍ಡಿಕೆ ಕಾಯುತ್ತಿದ್ದಾರೆ- ಜಿಟಿಡಿ

    ನಾನು ಪಕ್ಷ ಬಿಟ್ಟು ಹೋದರೆ ಸಾಕೆಂದು ಎಚ್‍ಡಿಕೆ ಕಾಯುತ್ತಿದ್ದಾರೆ- ಜಿಟಿಡಿ

    ಮೈಸೂರು: ನಾನು ಜೆಡಿಎಸ್ ಬಿಟ್ಟು ಹೋದರೆ ಸಾಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಯುತ್ತಿದ್ದಾರೆ. ನಾನು ಪಕ್ಷ ಬಿಟ್ಟರೆ ಸಾರಾ ಮಹೇಶ್‍ನನ್ನು ಮೈಸೂರಲ್ಲಿ ನಾಯಕನನ್ನಾಗಿ ಬೆಳೆಸಬಹುದು ಎಂಬ ನಿರ್ಧಾರಕ್ಕೆ ಎಚ್‍ಡಿಕೆ ಬಂದಿದ್ದಾರೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

    ಇಂದು ಮೈಸೂರಿನಲ್ಲಿ ಜೆಡಿಎಸ್‍ನ ಚಿಂತನ ಮಂಥನ ಸಭೆ ನಡೆಯಿತು. ಸಭೆಗೆ ಜಿಟಿಡಿ ಗೈರಾಗಿದ್ದರು. ಇದಕ್ಕೆ ಎಚ್.ಡಿ.ದೇವೇಗೌಡರು ಪ್ರತಿಕ್ರಿಯಿಸಿ, ಜಿಟಿಡಿ ಎಲ್ಲಿಗೆ ಹೋಗಬೇಕೋ ಹೋಗಲಿ ಬಿಡಿ ಅವರನ್ನು ಯಾರು ಹಿಡಿದಿಟ್ಟುಕೊಂಡಿದ್ದಾರೆ ಎಂದಿದ್ದರು.

    ಇದಕ್ಕೆ ಪ್ರತಿಯಾಗಿ ಜಿ.ಟಿ.ದೇವೇಗೌಡ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿ, ನಾನು ಪಕ್ಷ ಬಿಟ್ಟು ಹೋಗಲಿ ಎಂಬ ಭಾವನೆ ಅವರಲ್ಲಿ ಇರಬಹುದು. ಆದರೆ ನಾನು ಪಕ್ಷ ಬಿಟ್ಟು ಹೋಗುವುದಿಲ್ಲ. ಅಲ್ಲದೆ, ಚಾಮುಂಡಿ ತಾಯಿ ಅಣೆ ಸಾರಾ ಮಹೇಶ್‍ನನ್ನು ಮಂತ್ರಿ ಮಾಡಿ ಎಂದು ನಾನೇ ಹೇಳಿದ್ದೆ. ಇಂದು ಸಾರಾ ಮಹೇಶ್‍ನನ್ನು ಮಂತ್ರಿ ಮಾಡಬೇಡಿ ಎಂದು ಜಿ.ಟಿ.ದೇವೇಗೌಡ ಹೇಳಿದ್ದರು ಎಂದು ಎಚ್‍ಡಿಕೆ ಸುಳ್ಳು ಹೇಳಿದ್ದಾರೆ. ಕುಮಾರಸ್ವಾಮಿ ಅವರೇ ಸುಳ್ಳು ಹೇಳಬೇಡಿ, ಚಾಮುಂಡಿ ತಾಯಿ ಇದನ್ನು ಕ್ಷಮಿಸುವುದಿಲ್ಲ ಎಂದು ಎಚ್‍ಡಿಕೆಗೆ ತಿರುಗೇಟು ನೀಡಿದರು.

    ದೇವೇಗೌಡರು ನನಗೆ ಗುರುವಲ್ಲ ಎಂದು ಎಲ್ಲಿಯೂ ಹೇಳಿಲ್ಲ. ದೇವೇಗೌಡರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ನಾನು ಅವರು ಗುರು ಅಲ್ಲ ಎಂದು ಹೇಳಿದ್ದರೆ ಇವತ್ತೇ ರಾಜಕೀಯ ಬಿಡುತ್ತೇನೆ. ಇವತ್ತಿನ ಮೈಸೂರು ಸಭೆಗೆ ನನಗೆ ಆಹ್ವಾನವೇ ನೀಡಿಲ್ಲ. ಆಹ್ವಾನವಿಲ್ಲದೆ ಹೋಗುವುದು ಹೇಗೆ, ಬಹಿರಂಗ ಮಾತಾಡುವುದಾದರೆ ಎಚ್‍ಡಿಕೆ ಎಲ್ಲವನ್ನೂ ಬಹಿರಂಗ ಮಾತಾಡಲಿ. ನಾನು ಎಲ್ಲವನ್ನೂ ಮಾತನಾಡುತ್ತೇನೆ ಎಂದು ಸವಾಲು ಹಾಕಿದರು.

    ದಸರಾ ಮಾಡಲು ಬಿಜೆಪಿ ನಾಯಕರ ಜೊತೆ ಸಭೆಗೆ ಹೋಗಿಲ್ಲ. 1995 ರಲ್ಲೆ ದಸರಾ ಮಾಡಿರೋನು ನಾನು, ಈಗ ಏನು ಮಾಡುವುದು ಎಂದು ಎಚ್‍ಡಿಕೆ ವ್ಯಂಗ್ಯ ಮಾಡಿದ್ದಕ್ಕೆ ತಿರುಗೇಟು ನೀಡಿದರು.

    ಮೈಸೂರಿನ ಜೆಡಿಎಸ್ ಚಿಂತನ ಮಂಥನ ಸಭೆಗೆ ನನಗೆ ಆಹ್ವಾನ ಬಂದಿಲ್ಲ. ನನಗೆ ರಾಜಕೀಯ ಗುರುಗಳು ಯಾರೂ ಇಲ್ಲ ಅಂತ ಹೇಳಿದ್ದೇನೆ. ಆದರೆ, ದೇವೇಗೌಡರು ಅಥವಾ ಕುಮಾರಸ್ವಾಮಿ ನನ್ನ ಗುರುಗಳಲ್ಲ ಎಂದು ಹೇಳಿಲ್ಲ. ನಾನು ಸ್ವಂತ ಶಕ್ತಿಯಿಂದ ಬೆಳೆದು ಬಂದವನು. ರಾಜಕೀಯವಾಗಿ ಕುಮಾರಸ್ವಾಮಿ, ಸಾರಾ ಮಹೇಶ್ ನಡೆಸಿಕೊಂಡಿದ್ದು ಸರಿಯಲ್ಲ ಎಂದು ಹೆಚ್‍ಡಿಕೆ ಹಾಗೂ ಸಾರಾ ಮಹೇಶ್ ವಿರುದ್ಧ ಜಿಟಿಡಿ ಆಕ್ರೋಶ ಹೊರಹಾಕಿದ್ದಾರೆ.

    ನನಗೆ ಉಸ್ತುವಾರಿ ಸಚಿವ ಸ್ಥಾನ ಕೊಟ್ಟರು. ಯಾವುದೇ ಕೆಲಸ ಆಗಬೇಕಾದರೂ ನಾನು ಸಾರಾ ಮಹೇಶ್‍ಗೆ ಹೇಳಬೇಕು, ಮಹೇಶ್ ಕುಮಾರಸ್ವಾಮಿಗೆ ಹೇಳಬೇಕು. ಅವರು ನನಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ಕೊಟ್ಟಿದ್ದು ನಿಭಾಯಿಸಲು ಸಾಧ್ಯವಾಗದೆ ವಾಪಸ್ ಹೋಗುತ್ತಾನೆ ಎಂಬ ಉದ್ದೇಶದಿಂದ. ಈ ವಿಚಾರ ನನಗೆ ಗೊತ್ತಾಗಿಯೇ ನಾನು ಉನ್ನತ ಶಿಕ್ಷಣ ಸಚಿವ ಸ್ಥಾನ ನಿಭಾಯಿಸಿದೆ. ನಾನು ಯಾವತ್ತೂ ದ್ವೇಷದ ರಾಜಕಾರಣ ಮಾಡಿಲ್ಲ. ನಾನು ಸಿದ್ದರಾಮಯ್ಯ ರಾಜಕೀಯ ವಿರೋಧಿಗಳಾಗಿದ್ದೆವು. ಆದರೆ, ಎಂದೂ ನಾನು ಸಿದ್ದರಾಮಯ್ಯ ಮನೆಯವರನ್ನು ದ್ವೇಷ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

  • ಡಿಕೆಶಿ ಬಂಧನವಾಗಿರೋದು ನನಗೆ ತುಂಬಾ ನೋವಾಗಿದೆ- ಎಚ್.ಡಿ ದೇವೇಗೌಡ

    ಡಿಕೆಶಿ ಬಂಧನವಾಗಿರೋದು ನನಗೆ ತುಂಬಾ ನೋವಾಗಿದೆ- ಎಚ್.ಡಿ ದೇವೇಗೌಡ

    – ಇಂದು ಮಾತನಾಡಲು ನಿನ್ನೆ ಟ್ವೀಟ್ ಮಾಡಿಲ್ಲ
    – ಬಿಜೆಪಿ ವಿರುದ್ಧ ಕಿಡಿ, ಮೋದಿಗೆ ಎಚ್ಚರಿಕೆ

    ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಬಂಧನ ಮಾಡಿರುವ ವಿಚಾರದಿಂದ ನನಗೆ ತುಂಬಾ ನೋವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡಿಯವರು ಅರೆಸ್ಟ್ ಮಾಡಿದ್ದು, ನಂತರ ಮೆಡಿಕಲ್ ಚೆಕಪ್ ಮಾಡಿಸಲು ಆಸ್ಪತ್ರೆಗೆ ಹೋಗಿದ್ದಾರೆ. ಇಂದು ಮಾತನಾಡುವ ಸಲುವಾಗಿ ನಿನ್ನೆ ನಾನು ಈ ಬಗ್ಗೆ ಟ್ವೀಟ್ ಮಾಡಲು ಹೋಗಿಲ್ಲ ಎಂದರು.

    ನನಗೆ ತುಂಬಾ ನೋವಾಗಿದೆ. ಹೈಕೋರ್ಟಿನಲ್ಲಿ ಪರಿಹಾರ ಸಿಕ್ಕದೆ ಹೋದ ಮೇಲೆ ಇಡಿ ನೊಟೀಸ್ ನೀಡಿತ್ತು. ಡಿಕೆಶಿ ಅವರು ನೊಟೀಸಿಗೆ ಬೆಲೆ ಕೊಟ್ಟು ದೆಹಲಿಗೆ ಹೋದರು. ಇಡಿ ಅವರ ಆಫೀಸಿಗೆ ಹೋಗಿದ್ದರು. ಸತತ ನಾಲ್ಕು ದಿನಗಳ ವಿಚಾರಣೆಗೆ ಅವರು ಸಹಕಾರ ನೀಡಿದ್ದಾರೆ. ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ ಎಂದರು.

    ಗೌರಿ ಹಬ್ಬದ ದಿನ ಅವರು ಪೂಜೆ ಮಾಡೋದು ಸಂಪ್ರದಾಯ. ಆದರೆ ತಂದೆ ಕಾರ್ಯ ಮಾಡಲು ಅವಕಾಶ ಕೇಳಿದ್ದರೂ ಇಡಿ ಅವಕಾಶ ಕೊಟ್ಟಿಲ್ಲ. ಈ ಮೂಲಕ ನಿಷ್ಕರಣೆಯಿಂದ ಇಡಿ ನಡೆದುಕೊಂಡಿದೆ. ಈ ಘಟನೆ ನನಗೆ ತುಂಬಾ ನೋವಾಗಿದೆ. ಇಡಿ ಪೂಜೆಗೆ ಅವಕಾಶ ಕೊಡಬೇಕಿತ್ತು. ಸಂಜೆ ವಾಪಸ್ ವಿಚಾರಣೆ ಮಾಡಿದ್ದರೆ ಏನೂ ಆಗುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಸರಿಯಾಗಿ ಉತ್ತರ ಕೊಟ್ಟಿಲ್ಲ ಎಂದು 4 ದಿನ ಆದ ಮೇಲೆ ಅರೆಸ್ಟ್ ಮಾಡಿದ್ದಾರೆ. ಅವರು ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ಕೊಡಬೇಕು ಅಂತಾರೆ. ಅವರಿಗೆ ಸಮಾಧಾನ ಆಗೋ ಉತ್ತರ ಕೊಡಬೇಕಿತ್ತಾ ಎಂದು ಪ್ರಶ್ನಿಸಿದರು. ಅರೆಸ್ಟ್ ಆದ ಮೇಲೆ ಉತ್ತರ ಕೊಡುವುದಕ್ಕೆ ಮಾನಸಿಕ ಒತ್ತಡ ಕೊಡುವ ಯೋಚನೆ ಇಡಿಯದ್ದಾಗಿರಬಹುದು. ಅವರ ನಿರೀಕ್ಷೆಯಂತೆ ಉತ್ತರ ಕೊಟ್ಟಿಲ್ಲ ಎಂದು ಅರೆಸ್ಟ್ ಮಾಡಿದ್ದಾರೆ. ಬಂಧನ ಮಾಡಿ ಒತ್ತಡ ಹಾಕಿ ಉತ್ತರ ಪಡೆಯೋ ಭಾವನೆ ಇಡಿಗೆ ಇರಬಹುದು. ಇಡಿ ವರ್ತನೆಯನ್ನು ನಾನು ವಿರೋಧಿಸುತ್ತೇನೆ. ಬಂಧಿಸುವುದು ಯೋಗ್ಯವಾದ ವರ್ತನೆ ಅಲ್ಲ. ಅದಕ್ಕೆ ರಾಜ್ಯದಲ್ಲಿ ಪಕ್ಷ ಬೇಧ ಮರೆತು ಪ್ರತಿಭಟನೆ ನಡೆಯುತ್ತಿದೆ. ಇದು ರಾಜಕೀಯ ಪ್ರೇರಿತ ಬಂಧನ ಎಂದು ಕಿಡಿಕಾರಿದರು.

    ಸಮ್ಮಿಶ್ರ ಸರ್ಕಾರ ಇದ್ದಾಗಲೂ ಅನೇಕ ಬಾರಿ ಐಟಿ ದಾಳಿ ನಡೆದಿತ್ತು. ಅವರಿಗೆ ಕಷ್ಟ ಇದ್ದರೂ ಸಮ್ಮಿಶ್ರ ಸರ್ಕಾರದ ಪರವಾಗಿ ಇದ್ದರು. ಆಪರೇಷನ್ ಬಗ್ಗೆ ಬಹಿರಂಗವಾಗಿ ಮಾತಾಡಿದ್ದರು. ಡಿಕೆಶಿ ಹೀಗೆ ಮಾತಾಡಿದ್ದು ದೇಶ ಆಳುವವರಿಗೆ ಕಿರಿಕಿರಿಯಾಗಿರಬಹುದು. ಹೀಗಾಗಿ ಡಿಕೆಶಿ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಮೋದಿ ಹಾಗೂ ಅಮಿತ್ ಶಾ ಅವರ ಹೆಸರು ಹೇಳದೇ ಗರಂ ಆದರು.

    ಕೋರ್ಟಿನಲ್ಲಿ ನ್ಯಾಯ ಸಿಗುವ ಭರವಸೆ ಇದೆ. ದೇಶಾದ್ಯಂತ ತನಿಖಾ ಸಂಸ್ಥೆ ದುರುಪಯೋಗ ಮಾಡಿಕೊಂಡಿರೋದು ಗೊತ್ತಿದೆ. ಡಿಕೆಶಿ ಇದರಿಂದ ಹೊರಬರುತ್ತಾರೆ. ಕೋರ್ಟಿನಿಂದ ಅವರಿಗೆ ನ್ಯಾಯ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಉಪ್ಪು-ತಿಂದವರು ನೀರು ಕುಡಿಯಬೇಕು ಅನ್ನೋ ಬಿಜೆಪಿ ನಾಯಕರ ಹೇಳಿಕೆಗೆ ನಾನು ಉತ್ತರ ಕೊಡೊಲ್ಲ. ಯಡಿಯೂರಪ್ಪ ಹಾಗೂ ನನ್ನ ಮಗ ಒಟ್ಟಿಗೆ ಸರ್ಕಾರ ಮಾಡಿಲ್ವಾ. ಹೀಗಾಗಿ ಅವರ ಬಗ್ಗೆ ಮಾತನಾಡಲು ತುಂಬಾ ಇದೆ. ಬೆಂಗಳೂರಿನಲ್ಲಿ ನಮ್ಮ ಪಕ್ಷದವರು ಕಾಂಗ್ರೆಸ್ ಜೊತೆ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಶಕ್ತಿ ಇರೋ ಕಡೆ ನಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.

    ಮೋದಿಗೆ ಎಚ್ಚರಿಕೆ:
    ಇದೇ ವೇಳೆ ರಾಜ್ಯದ ನೆರೆಗೆ ಪರಿಹಾರ ಕೊಡದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಗೆ ಎಚ್‍ಡಿಡಿ ಎಚ್ಚರಿಕೆ ಕೊಟ್ಟರು. ನಾನು ಹೇಳಿಕೆ ಕೊಡೋದು ಮಾತ್ರ ಅಲ್ಲ. ನನ್ನ ಸ್ವಭಾವ ಎಲ್ಲರಿಗೂ ಗೊತ್ತು. ನಾನು ಹುಟ್ಟು ಹೋರಾಟಗಾರ. ನಾನು ಸೀಮೆ ಎಣ್ಣೆ ಡಬ್ಬ ಇಟ್ಟುಕೊಂಡು ಪ್ರತಿಭಟನೆ ಮಾಡಿದವನು. ಜನರಿಗಾಗಿ ಹೋರಾಟ ಮಾಡೋಕೆ ನಾನು ಸ್ಟೇಟಸ್ ನೋಡಲ್ಲ. ಅಗತ್ಯ ಬಿದ್ದರೆ ರೈತರನ್ನ ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡುವ ಬಗ್ಗೆ ಚಿಂತನೆ ಮಾಡುತ್ತೇನೆ. ಜನರಿಗಾಗಿ ನಾನು ಯಾವ ಹೋರಾಟಕ್ಕೂ ಸಿದ್ಧ. ಈಗಾಗಲೇ ನಾನು ಪತ್ರ ಬರೆದಿದ್ದೇನೆ. ಯಾವುದಕ್ಕೂ ಉತ್ತರ ಬಂದಿಲ್ಲ. ಬೆಂಗಳೂರಿಗೆ ಮೋದಿ ಬಂದಾಗ ನಾನು ಮಾತಾನಾಡಲ್ಲ. ಸಿಎಂ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಸಿಎಂ ಮಾತನಾಡಲಿ. ಅಮೇಲೆ ಏನ್ ಮಾಡೋದು ಎಂದು ನಾನು ನಿರ್ಧಾರ ಮಾಡುವುದಾಗಿ ಎಚ್‍ಡಿಡಿ ಹೇಳಿದ್ದಾರೆ.

  • ಕಾಂಗ್ರೆಸ್ ಮನೆಗೆ ಬಂದು ನಮ್ಮ ವಿರುದ್ಧವೇ ಮಾತನಾಡ್ತಾರೆ – ಸಿದ್ದರಾಮಯ್ಯ ವಿರುದ್ಧ ಎಂಟಿಬಿ ಕಿಡಿ

    ಕಾಂಗ್ರೆಸ್ ಮನೆಗೆ ಬಂದು ನಮ್ಮ ವಿರುದ್ಧವೇ ಮಾತನಾಡ್ತಾರೆ – ಸಿದ್ದರಾಮಯ್ಯ ವಿರುದ್ಧ ಎಂಟಿಬಿ ಕಿಡಿ

    ಕೋಲಾರ: ಇವರ ಆಡಳಿತಾವಧಿಯಲ್ಲಿ ಎಷ್ಟು ಪ್ರಮಾಣಿಕವಾಗಿ ಆಡಳಿತ ಮಾಡಿದ್ದಾರೆಂದು ನಾನು ಹೇಳುತ್ತೇನೆ. ಇವರು ಎಷ್ಟು ಪ್ರಾಮಾಣಿಕರೆಂದು ಯಾವುದೇ ಮಾಧ್ಯಮ ಅಥವಾ ದೇವಸ್ಥಾನದ ಎದುರು ಹೇಳಲು ನಾನು ಸಿದ್ಧ. ತಾಕತ್ ಇದ್ದರೆ ಇವರು ಬಂದು ನನ್ನ ಬಗ್ಗೆ ಹೇಳಲಿ. ಮೈತ್ರಿ ಸರ್ಕಾರ ಬೀಳಲು ದೇವೇಗೌಡ ಹಾಗೂ ಸಿದ್ದರಾಮಯ್ಯ ಇಬ್ಬರೂ ಕಾರಣ ಎಂದು ಹೇಳುವ ಮೂಲಕ ಮೈತ್ರಿ ನಾಯಕರಿಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಬಹಿರಂಗ ಸವಾಲು ಹಾಕಿದ್ದಾರೆ.

    ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ನಾವು ರಾಜಿನಾಮೆ ನೀಡಿ ಹೋಗಿದ್ದಕ್ಕೆ ಕಾರಣ ಮುಖಂಡರು ಕೈಗೊಂಡ ನಿರ್ಧಾರಗಳು. ನಾವು ಮೂಲ ಕಾಂಗ್ರೆಸ್ಸಿಗರು, ನಮ್ಮ ಬಗ್ಗೆ ಮಾತನಾಡುವವರು ಅಧಿಕಾರಕ್ಕಾಗಿ ಕಾಂಗ್ರೆಸ್ಸಿಗೆ ಬಂದವರು. ನಾವು ಕಟ್ಟಿದ ಕಾಂಗ್ರೇಸ್ ಮನೆಯಲ್ಲಿ ಇವರು ಸಂಸಾರ ಮಾಡುತ್ತಿದ್ದಾರೆ. ಜೆಡಿಎಸ್‍ನಲ್ಲಿ ದೇವೇಗೌಡರಿಂದ ಅಧಿಕಾರ ಸಿಗಲಿಲ್ಲ ಎಂದು ನಾವು ಕಟ್ಟಿದ ಕಾಂಗ್ರೆಸ್ ಮನೆಗೆ ಬಂದು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯನವರ ವಿರುದ್ಧ ಹರಿಹಾಯ್ದರು.

    ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿ ಏನು ಮಾಡಲಾಗುತ್ತಿರಲಿಲ್ಲ, ಕುಮಾರಸ್ವಾಮಿ ಹಾಗೂ ರೇವಣ್ಣ ನನ್ನ ವಸತಿ ಖಾತೆಯಲ್ಲಿ ಮೂಗು ತೂರಿಸುತ್ತಿದ್ದರು. ಹೀಗಾಗಿ ರಾಜಿನಾಮೆ ನೀಡುತ್ತೇನೆ ಎಂದು ಮೂರು ಬಾರಿ ಸಿದ್ದರಾಮಯ್ಯನವರಿಗೆ ಹೇಳಿದ್ದೆ. ಉಪ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಬಂದು ನನ್ನ ಕ್ಷೇತ್ರದಲ್ಲಿ ತೊಡೆ ತಟ್ಟಲಿ. ಇಂತಹ ತೊಡೆ ತಟ್ಟುವವರನ್ನು ನಾನು ನೋಡಿದ್ದೇನೆ. ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಬಗ್ಗೆ ಹೇಳುತ್ತೇನೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಸಹ ಹರಿಹಾಯ್ದರು.

    ಅನರ್ಹತೆಯ ಕುರಿತು ಪ್ರತಿಕ್ರಿಯಿಸಿದ ಅವರು, ನ್ಯಾಯಾಲಯಕ್ಕಿಂತ ದೊಡ್ಡದು ಯಾವುದೂ ಇಲ್ಲ. ನ್ಯಾಯಾಲಯದ ಆದೇಶಕ್ಕೆ ತಲೆ ಬಾಗುತ್ತೇನೆ. ಕೊನೆಯದಾಗಿ ಎರಡು ಉದ್ದೇಶಗಳಿವೆ ಒಂದು ರಾಜಕೀಯ ನಿವೃತ್ತಿ, ಇನ್ನೊಂದು ನನಗೆ ಯಾರ ಹಂಗೂ ಬೇಡ ಕಾರ್ಯಕರ್ತರ ಅಭಿಪ್ರಾಯದಿಂದ ಸ್ವತಂತ್ರವಾಗಿ ಸ್ಪರ್ಧೆ ಮಾಡಲು ನಿರ್ಧರಿಸುತ್ತೇನೆ. ಮಧ್ಯಂತರ ಚುನಾವಣೆ ಸದ್ಯಕ್ಕೆ ಬರುವುದಿಲ್ಲ. ಕೇಂದ್ರದಲ್ಲಿ ಸ್ಥಿರವಾದ ಸರ್ಕಾರ ಇದೆ, ರಾಜ್ಯದಲ್ಲಿ ಈಗ ಪ್ರಾರಂಭವಾಗಿದೆ. ಕಾಂಗ್ರೆಸ್ಸಿನವರು ಮಧ್ಯಂತರ ಚುನಾವಣೆ ಬರುತ್ತದೆ ಎಂದು ಹಗಲು ಕನಸು ಕಾಣುತ್ತಿದ್ದಾರೆ ವ್ಯಂಗ್ಯವಾಡಿದರು.

    ರಮೇಶ್ ಕುಮಾರ್ ಅವರು ತಾವೇ ಸತ್ಯ ಹರಿಶ್ಚಂದ್ರ ಅಂದುಕೊಂಡಿದ್ದಾರೆ. ಹರಿಶ್ಚಂದ್ರನಂತೆ ಮಾತನಾಡುತ್ತಾರೆ ಅಷ್ಟೇ. ಸತ್ಯ ಹರಿಶ್ಚಂದ್ರರಾಗಿದ್ದರೆ ಮುನಿಯಪ್ಪ ಅವರನ್ನೇಕೆ ಸೋಲಿಸಿದರು. ಕಾಂಗ್ರೆಸ್‍ಗೆ ತತ್ವ ಸಿದ್ದಾಂತ ಇದ್ದರೆ, ಮೊದಲು ಪಕ್ಷದಿಂದ ರಮೇಶ್ ಕುಮಾರ್ ಅವರನ್ನು ಉಚ್ಛಾಟನೆ ಮಾಡಬೇಕು. ಮುನಿಯಪ್ಪ ಸೋಲುವುದಕ್ಕೆ ಮೂಲವಾಗಿ ರಮೇಶ್ ಕುಮಾರ್ ಅವರೇ ಕಾರಣ. ಕಾಂಗ್ರೆಸ್ ರಾಜ್ಯದಲ್ಲಿ ನೆಲ ಕಚ್ಚಲು ಮುಖಂಡರು ತೆಗದುಕೊಳ್ಳುವ ಏಕಪಕ್ಷೀಯ ನಿರ್ಧಾರಗಳು ಹಾಗೂ ಸ್ವಾರ್ಥ ರಾಜಕಾರಣವೇ ಕಾರಣ ಎಂದು ಹೇಳುವ ಮೂಲಕ ಕಾಂಗ್ರೆಸ್ ನೆಲ ಕಚ್ಚಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರಿಗೆ ಟಾಂಗ್ ನೀಡಿದ್ದಾರೆ.

    ನಾನು ನಿಷ್ಟಾವಂತ ಕಾಂಗ್ರೆಸ್ಸಿಗ. ನನ್ನ ಬಗ್ಗೆ ಸುಳ್ಳು ಅರೋಪ ಮಾಡಿದರೆ ಇವರ ಬಗ್ಗೆ ಬಿಚ್ಚಿಡಬೇಕಾಗುತ್ತದೆ. ಇವರ ಕಥೆಗಳನ್ನು ಹೇಳಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರಿಗೆ ಎಂಟಿಬಿ ನಾಗರಾಜ್ ಅವರು ಎಚ್ಚರಿಕೆ ಹಾಗೂ ಬಹಿರಂಗ ಸವಾಲು ಹಾಕಿದರು.

  • ಗೌಡರ ಕುಟುಂಬ ಪುನರ್ಜನ್ಮ ಪಡೆದರೂ ಸಿದ್ದು ಹೆಸರು ಕೆಡಿಸಲು ಸಾಧ್ಯವಿಲ್ಲ – ಕಾಗಿನೆಲೆ ಶ್ರೀ

    ಗೌಡರ ಕುಟುಂಬ ಪುನರ್ಜನ್ಮ ಪಡೆದರೂ ಸಿದ್ದು ಹೆಸರು ಕೆಡಿಸಲು ಸಾಧ್ಯವಿಲ್ಲ – ಕಾಗಿನೆಲೆ ಶ್ರೀ

    ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯಗೆ ಸರಿಸಾಟಿ ಯಾರೂ ಇಲ್ಲ, ದೇವೇಗೌಡರ ಕುಟುಂಬ ಇನ್ನೊಂದು ಜನ್ಮ ಹುಟ್ಟಿ ಬಂದರೂ ಸಿದ್ದರಾಮಯ್ಯನವರ ಹೆಸರು ಕೆಡಿಸಲು ಸಾಧ್ಯವಿಲ್ಲ ಎಂದು ಕಾಗಿನೆಲೆ ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಗುಡುಗಿದ್ದಾರೆ.

    ಬಾಗಲಕೋಟೆ ಜಿಲ್ಲೆ ಮುಧೋಳ ನಗರದಲ್ಲಿ ಮಾತನಾಡಿದ ಅವರು, ಅಪುತ್ರಸ್ಯ ಗತಿರ್ನಾಸ್ತಿ ಎನ್ನುವ ಮಾತಿದೆ. ಅಂದರೆ ಗಂಡು ಮಕ್ಕಳಾಗದೇ ಮೋಕ್ಷವಿಲ್ಲ ಎಂದರ್ಥ. ಬಹುಶಃ ದೇವೇಗೌಡರಿಗೆ ಅರೆ ವಯಸ್ಸು, 80 ವರ್ಷ ಆಯ್ತು, ಮಕ್ಕಳು ಆಡಿದ ಹಾಗೆ ಆಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಯಾರೂ ಸರಿ ಸಾಟಿ ಇಲ್ಲ ಎಂದು ಹೇಳುವ ಮೂಲಕ ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯನವರೇ ಕಾರಣ ಎಂಬ ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

    ಮಾಜಿ ಪ್ರಧಾನಿಗಳ ಬಗ್ಗೆ ಗೌರವ ಇದೆ. ವಯಸ್ಸಾದ ಮೇಲೆ ಮಕ್ಕಳಂತೆ ಆಡುತ್ತಾರೆ. ಹೀಗಾಗಿ ಅವರು ಮಕ್ಕಳಂತಾಗಿದ್ದಾರೆ. ಮಕ್ಕಳು ಹೇಗೆ ಆಡುತ್ತಾರೆ ಎಂದು ತಿಳಿದಿದೆಯಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರನ್ನು ತಿವಿದರು.

    ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾದರೆ ಬಹಳ ಖುಷಿ, ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಸಿದ್ದರಾಮಯ್ಯ ಸರ್ಕಾರದಲ್ಲಿ, ಸಚಿವ ಸಂಪುಟವೇ ಬಸವಣ್ಣನವರ ಅನುಭವ ಮಂಟಪದಂತಿತ್ತು. ಸದ್ಯದ ಸರಕಾರದ ಬಗ್ಗೆ ಏನೂ ಹೇಳುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

    ಕಾರು ಮನೆ ಬೇಕಾದವರು ವಿರೋಧ ಪಕ್ಷದ ನಾಯಕರಾಗಲು ಪ್ರಯತ್ನಿಸುತ್ತಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು. ನಾನು ಇತ್ತೀಚೆಗೆ ಟಿವಿ, ಪತ್ರಿಕೆ ಗಮನಿಸಿಲ್ಲ. ಆ ರೀತಿ ಪರೋಕ್ಷವಾಗಿ ಮಾತನಾಡುವುದು ಸರಿಯಲ್ಲ. ಒಬ್ಬ ಪ್ರಬುದ್ಧ ರಾಜಕಾರಣಿ ಆಗಿ ಅವರೇ ಅರ್ಥ ಮಾಡಿಕೊಳ್ಳಬೇಕು ಎಂದರು.

  • ಮೈತ್ರಿ ಸರ್ಕಾರದಲ್ಲಿ ‘ಎಫ್‍ಡಿಎ ಕ್ಲರ್ಕ್’ ಆಗಿದ್ದೆ- ಸಿದ್ದರಾಮಯ್ಯ ವಿರುದ್ಧ ಎಚ್‍ಡಿಕೆ ಗುಡುಗು

    ಮೈತ್ರಿ ಸರ್ಕಾರದಲ್ಲಿ ‘ಎಫ್‍ಡಿಎ ಕ್ಲರ್ಕ್’ ಆಗಿದ್ದೆ- ಸಿದ್ದರಾಮಯ್ಯ ವಿರುದ್ಧ ಎಚ್‍ಡಿಕೆ ಗುಡುಗು

    ಬೆಂಗಳೂರು: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆಗೈದ ಬೆನ್ನಲ್ಲೇ ಇದೀಗ ಪುತ್ರ ಎಚ್ ಡಿ ಕುಮಾರಸ್ವಾಮಿ ಅವರು ಕೂಡ ಟಗರಿಗೆ ಗುದ್ದು ನೀಡಿದ್ದಾರೆ.

    ಮೈತ್ರಿ ಸರ್ಕಾರದಲ್ಲಿ ಸಿಎಂ ಅಲ್ಲ, `ಎಫ್‍ಡಿಎ (ಫಸ್ಟ್ ಡಿವಿಷನ್) ಕ್ಲರ್ಕ್’ ಆಗಿದ್ದೆ ಎಂದು ಹೇಳಿಕೆ ನೀಡುವ ಮೂಲಕ ಮಾಜಿ ಸಿಎಂ ವಿರುದ್ಧ ನೇರ ಕದನಕ್ಕಿಳಿದಿದ್ದಾರೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

    ಎಚ್‍ಡಿಕೆ ಆರೋಪಗಳೇನು?
    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ಜೆಡಿಎಸ್ಸೇ ಮೊದಲ ವೈರಿಯಾಗಿತ್ತು. ಮೈತ್ರಿ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಅವರು ಖುಷಿ ಆಗಿರಲಿಲ್ಲ ಎಂದು ಎಚ್‍ಡಿಕೆ ಆರೋಪ ಮಾಡಿದ್ದಾರೆ.

    ಕುಮಾರಸ್ವಾಮಿಯಿಂದ ಕಾಂಗ್ರೆಸ್‍ಗೆ ತೊಂದರೆ ಅನ್ನೋದು ಸಿದ್ದರಾಮಯ್ಯ ವಾದವಾಗಿತ್ತು. ಆದರೆ ಪ್ರತಿನಿತ್ಯ ಸಿದ್ದರಾಮಯ್ಯರಿಂದ ಸರ್ಕಾರ ಅಸ್ಥಿರಗೊಳಿಸಲು ಯತ್ನ ನಡೆಯುತ್ತಿತ್ತು. ಸಿಎಂ ಆಗಿದ್ದಾಗ ನನ್ನ ನೈತಿಕತೆಯನ್ನು ಕುಗ್ಗಿಸಲು ಸಿದ್ದರಾಮಯ್ಯ ಯತ್ನಿಸುತ್ತಿದ್ದರು. ಸಿದ್ದರಾಮಯ್ಯ ಬೆಂಬಲಿಗರು ಸಿದ್ದರಾಮಯ್ಯರೇ ಮತ್ತೆ ಸಿಎಂ ಆಗಬೇಕು ಎಂದು ಹೇಳುತ್ತಲೇ ಇದ್ದರು. ಒಂದು ವೇಳೆ ಸಿದ್ದರಾಮಯ್ಯ ಸಿಎಂ ಆಗಿ ವಾಪಸ್ ಆದರೆ ಮಾತ್ರ ನಮ್ಮ ಬೆಂಬಲ ಎಂದು ಅತೃಪ್ತ ಶಾಸಕರು ಹೇಳಿದ್ದರು. ಅವರ ಮಾತಿನ ಅರ್ಥ ಏನು..? ಅತೃಪ್ತರ ಶಾಸಕರನ್ನು ಸಿದ್ದರಾಮಯ್ಯ ನಿಯಂತ್ರಣದಲ್ಲಿಟ್ಟುಕೊಳ್ಳಬೇಕಿತ್ತು ತಾನೇ..? ಆದರೆ ಸಿದ್ದರಾಮಯ್ಯ ಹಾಗೇ ಮಾಡಲಿಲ್ಲ ಎಂದು ಗರಂ ಆಗಿದ್ದಾರೆ.

    ಒಂದು ವೇಳೆ ಯಡಿಯೂರಪ್ಪ ಸರ್ಕಾರ ನಡೆಸಲು ವಿಫಲರಾಗಿ ಸರ್ಕಾರ ಪತನವಾದರೆ ಈಗ ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ತಾವು ಮತ್ತೆ ಸಿಎಂ ಆಗಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಸಿದ್ದರಾಮಯ್ಯ ನಮ್ಮವರೇ ಆಗಿದ್ದು, ಅವರ ಬೆನ್ನಿಗೆ ನಾವು ಚೂರಿ ಇರಿದಿಲ್ಲ. ಜೆಡಿಎಸ್‍ನಲ್ಲಿದ್ದಾಗ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಪಕ್ಷಕ್ಕೆ ಪರ್ಯಾಯವಾಗಿ ಅಹಿಂದ ಸಂಘಟನೆ ನಡೆಸಿ ಜೆಡಿಎಸ್ ಬೆಳವಣಿಗೆಗೆ ಅಡ್ಡಿ ಆದರು. ಈ ಮೂಲಕ ಜೆಡಿಎಸ್‍ಗೆ ಮೋಸ ಮಾಡಿದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಜೆಡಿಎಸ್‍ನಿಂದ ಅವರನ್ನು ಉಚ್ಛಾಟನೆ ಮಾಡಿದೆವು ಎಂದಿದ್ದಾರೆ.

    ನಾನು ಸಿಎಂ ಆಗಿದ್ದಾಗ ಕಾಂಗ್ರೆಸ್‍ನವರ ಒತ್ತಡದಲ್ಲಿ ಕೆಲಸ ಮಾಡಬೇಕಿತ್ತು. ಕಾಂಗ್ರೆಸ್ ನನ್ನ ಮೇಲೆ ಸವಾರಿ ಮಾಡಿತು. ವರ್ಗಾವಣೆಯಲ್ಲೂ ಅವರು ಹೇಳಿದ್ದನ್ನೇ ಮಾಡಬೇಕಿತ್ತು. ಡಿಸಿ ವರ್ಗಾವಣೆಯಲ್ಲೂ ನನಗೆ ಸ್ವಾತಂತ್ರ್ಯ ಇರಲಿಲ್ಲ. ವರ್ಗಾವಣೆ ನನ್ನ ವ್ಯಾಪ್ತಿಗೆ ಬಂದರೂ ನಾನು ಕಾಂಗ್ರೆಸ್‍ನವರು ಏನ್ ಹೇಳ್ತಾರೋ ಅದನ್ನೇ ಮಾಡ್ಬೇಕಿತ್ತು. ಇವತ್ತು ಒಳ್ಳೆಯ ವ್ಯಕ್ತಿಗಳಿಗೆ ರಾಜಕೀಯ ಅಲ್ಲ. ನನ್ನ ರಾಜಕೀಯ ಭವಿಷ್ಯದ ಬಗ್ಗೆಯೇ ನನಗೆ ಗ್ಯಾರಂಟಿ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.