Tag: ಎಚ್.ಡಿ. ದೇವೇಗೌಡ

  • ಪಕ್ಷ ಬಿಡದಂತೆ ಜಿಟಿಡಿಗೆ ಎಚ್‍ಡಿಡಿ ಮನವೊಲಿಕೆ

    ಪಕ್ಷ ಬಿಡದಂತೆ ಜಿಟಿಡಿಗೆ ಎಚ್‍ಡಿಡಿ ಮನವೊಲಿಕೆ

    ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಶತಾಯಗತಾಯ ಪಕ್ಷವನ್ನ ಅಧಿಕಾರಕ್ಕೆ ತರಲು ಅನೇಕ ಪ್ಲ್ಯಾನ್ ರೂಪಿಸುತ್ತಿದೆ. ಖುದ್ದು ಅಖಾಡಕ್ಕೆ ಇಳಿದಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಪಕ್ಷದಿಂದ ಒಂದು ಹೆಜ್ಜೆ ಹೊರಗೆ ಇಟ್ಟಿರುವ ನಾಯಕರನ್ನು ಮನವೊಲಿಸಲು ಕಸರತ್ತು ನಡೆಸಿದ್ದಾರೆ. ಪಕ್ಷದಿಂದ ಹೊರ ಹೋಗಲು ಮನಸು ಮಾಡಿರುವ ನಾಯಕರನ್ನು ಉಳಿಸಿಕೊಳ್ಳಲು ಮುಂದಾಗಿದ್ದು, ಮುನಿಸಿಕೊಂಡ ನಾಯಕರಿಗೆ ದೂರವಾಣಿ ಕರೆ ಮಾಡಿ ಪಕ್ಷ ಬಿಟ್ಟು ಹೋಗದಂತೆ ಮನವೊಲಿಕೆ ಮಾಡುತ್ತಿದ್ದಾರೆ.

    ಇದರ ಭಾಗವಾಗಿ ಇದೀಗ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮೇಲೆ ಮುನಿಸಿಕೊಂಡಿರುವ ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಪಕ್ಷದಿಂದ ಒಂದು ಹೆಜ್ಜೆ ಹೊರಗೆ ಇಟ್ಟಿದ್ದಾರೆ. ಇದನ್ನು ಸರಿಪಡಿಸಲು ಜೆಡಿಎಸ್ ವರಿಷ್ಠ ದೇವೇಗೌಡರೇ ಮುಂದಾಗಿದ್ದು, ಜಿ.ಟಿ.ದೇವೇಗೌಡರಿಗೆ ದೂರವಾಣಿ ಕರೆ ಮಾಡಿ, ಮಾತನಾಡಿ ಮನವೊಲಿಕೆ ಮಾಡಿದ್ದಾರೆ. ಈ ಮೂಲಕ ಬಿರುಕು ಬಿಟ್ಟಿರುವ ಪಕ್ಷವನ್ನು ಸಂಧಾನದ ಮೂಲಕ ಒಂದು ಗೂಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನೂ ಓದಿ: ಇನ್ನೊಂದು ವಾರದಲ್ಲಿ ಮುನಿರತ್ನ ಮಂತ್ರಿಯಾಗಲಿದ್ದಾರೆ: ಸೋಮಣ್ಣ ಭವಿಷ್ಯ

    ಎರಡು ದಿನಗಳ ಹಿಂದೆ ಜಿ.ಟಿ.ದೇವೇಗೌಡರಿಗೆ ಕರೆ ಮಾಡಿದ್ದ ಮಾಜಿ ಪ್ರಧಾನಿ ದೇವೇಗೌಡರು, ಪಕ್ಷ ಬಿಡುವ ಆಲೋಚನೆ ಮಾಡಬೇಡ ಎಂದು ಮನವೊಲಿಸಿದ್ದಾರೆ. ಏನೇ ಬೇಸರ ಇದ್ದರೂ ಕುಳಿತು ಮಾತನಾಡೋಣ. ಯಾವುದೇ ಆತುರದ ನಿರ್ಧಾರ ಮಾಡದಂತೆ ಮನವಿ ಮಾಡಿದ್ದಾರೆ. ಒಂದು ಪಕ್ಷದಲ್ಲಿ ಸಣ್ಣ ಪುಟ್ಟ ಅಸಮಾಧಾನ ಸಹಜ. ಹಾಗಂತ ಪಕ್ಷ ಬಿಟ್ಟು ಹೋಗೋ ಚಿಂತನೆ ಮಾಡಬೇಡ. ನಿನ್ನನ್ನು ಯಾವತ್ತೂ ಕೈ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

    ಏನೇ ಭಿನ್ನಾಭಿಪ್ರಾಯ ಇದ್ದರೂ, ಮಾತನಾಡಿ ಸರಿ ಮಾಡಿಕೊಳ್ಳೋಣ, ನಿನಗೆ ಮತ್ತು ನಿನ್ನ ಮಗನಿಗೆ ಅನ್ಯಾಯ ಆಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ದೇವೇಗೌಡರ ಮಾತನ್ನು ಸಮಾಧಾನದಿಂದಲೇ ಆಲಿಸಿರುವ ಜಿ.ಟಿ.ದೇವೇಗೌಡರು, ಅವರ ಮಾತಿಗೆ ಸಕಾರಾತ್ಮಕವಾಗಿಯೇ ಉತ್ತರಿಸಿದ್ದಾರೆ ಎನ್ನಲಾಗಿದೆ. ಹಾಗಾದರೆ ದೇವೇಗೌಡರ ಮನವೊಲಿಕೆಗೆ ಜಿ.ಟಿ.ದೇವೇಗೌಡರು ಒಪ್ಪಿಕೊಳ್ಳುತ್ತಾರಾ? ಎಲ್ಲ ಭಿನ್ನಾಭಿಪ್ರಾಯ ಮರೆತು ಪಕ್ಷದಲ್ಲೇ ಉಳಿಯುತ್ತಾರಾ? ದೊಡ್ಡಗೌಡರ ಸಂಧಾನ ತಂತ್ರ ಫಲ ಕೊಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

  • ಮಾಜಿ ಪ್ರಧಾನಿ ದೇವೇಗೌಡರಿಗೆ ಕೊರೊನಾ ನೆಗೆಟಿವ್: ವೈದ್ಯರ ಸ್ಪಷ್ಟನೆ

    ಮಾಜಿ ಪ್ರಧಾನಿ ದೇವೇಗೌಡರಿಗೆ ಕೊರೊನಾ ನೆಗೆಟಿವ್: ವೈದ್ಯರ ಸ್ಪಷ್ಟನೆ

    – ಪತ್ನಿ ಚೆನ್ನಮ್ಮಗೆ ಮಾತ್ರ ಪಾಸಿಟಿವ್

    ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕೋವಿಡ್ ಆರ್‍ಟಿಪಿಸಿಆರ್ ಟೆಸ್ಟ್ ಫಲಿತಾಂಶ ನೆಗೆಟಿವ್ ಬಂದಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ಅವರು ಸ್ಪಷ್ಟನೆ ನೀಡಿದ್ದಾರೆ.

    ಇಂದು ಬೆಳಗ್ಗೆ ನನಗೆ ಹಾಗೂ ಪತ್ನಿ ಚೆನ್ನಮ್ಮಗೆ ಕೋವಿಡ್ ಪಾಸಿಟಿವ್ ಎಂದು ಮಾಜಿ ಪ್ರಧಾನಿ ದೇವೇಗೌಡರು ಟ್ವೀಟ್ ಮಾಡಿದ್ದರು. ಜೊತೆಗೆ ನಮ್ಮ ಸಂಪರ್ಕಕ್ಕೆ ಬಂದವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿಯನ್ನೂ ಮಾಡಿದ್ದರು.

    ಈ ಬಗ್ಗೆ ಸಂಜೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯ ಡಾ. ಸುದರ್ಶನ್ ಬಲ್ಲಾಳ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಕೊರೊನಾ ನೆಗೆಟಿವ್ ಇದೆ. ಜ್ವರ ಇರುವುದಕ್ಕೆ ಮಾತ್ರ ಅಡ್ಮಿಟ್ ಆಗಿದ್ದಾರೆ. ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಮಾತ್ರ ಪಾಸಿಟಿವ್ ಇದೆ. ಮಣಿಪಾಲ್ ಆಸ್ಪತ್ರೆಯಲ್ಲೇ ಹೆಚ್‍ಡಿಡಿ, ಚೆನ್ನಮ್ಮ ಅವರಿಗೆ ಚಿಕಿತ್ಸೆ ನೀಡಲಾಗುವುದು. ಜ್ವರದಿಂದ ಬಳಲುತ್ತಿರುವ ಹೆಚ್‍ಡಿಡಿ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

    ದೇವೇಗೌಡರ ಆರ್ ಟಿಪಿಸಿಆರ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿದ್ದು, ಸಿಟಿ ಸ್ಕ್ಯಾನ್‍ನಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ಸಿಟಿ ಸ್ಕ್ಯಾನಿಂಗ್‍ನಲ್ಲಿ ವ್ಯತ್ಯಾಸ ಕಂಡು ಬಂದಿರುವುದರಿಂದ ಕೋವಿಡ್ ಚಿಕಿತ್ಸೆ ಕೊಡಬೇಕಾಗುತ್ತದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ.

    ಇದಕ್ಕೂ ಮುನ್ನ ದೇವೇಗೌಡರು ಹಾಗೂ ಚೆನ್ನಮ್ಮ ಅವರಿಗೆ ಪಾಸಿಟಿವ್ ಬಂದಿದೆ ಎಂಬ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಸಂಪರ್ಕದಲ್ಲಿದ್ದ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಾಥಮಿಕ ಸಂಪರ್ಕದಲ್ಲಿ ನಾಲ್ವರು, ದ್ವಿತೀಯ ಸಂಪರ್ಕದಲ್ಲಿ 21 ಜನರು ಇದ್ದು, ಒಟ್ಟು 25 ಜನರ ಗಂಟಲು ದ್ರವದ ಮಾದರಿಯನ್ನು ಪಾಲಿಕೆಯ ಆರೋಗ್ಯಾಧಿಕಾರಿಗಳು ಸಂಗ್ರಹಿಸಿದ್ದಾರೆ. ಇವರ ಟ್ರಾವೆಲ್ ಹಿಸ್ಟರಿ ದೆಹಲಿ ಎಂದು ತಿಳಿದು ಬಂದಿದೆ.

  • ಖರ್ಗೆಗೆ ಸಿಎಂ ಸ್ಥಾನ ತಪ್ಪಿಸಿದ್ದು ನಾನಲ್ಲ, ದೇವೇಗೌಡರಿಗೆ ಗೊತ್ತಿದ್ರೆ ಹೆಸರು ಹೇಳಲಿ- ಸಿದ್ದು ಸವಾಲು

    ಖರ್ಗೆಗೆ ಸಿಎಂ ಸ್ಥಾನ ತಪ್ಪಿಸಿದ್ದು ನಾನಲ್ಲ, ದೇವೇಗೌಡರಿಗೆ ಗೊತ್ತಿದ್ರೆ ಹೆಸರು ಹೇಳಲಿ- ಸಿದ್ದು ಸವಾಲು

    – ದೇವೇಗೌಡರು ಪಾಪ ಎಂದ ಸಿದ್ದರಾಮಯ್ಯ

    ಮೈಸೂರು: ಸಿಎಂ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ತಿರಸ್ಕರಿಸಿದ್ದು ನಾನಂತೂ ಅಲ್ಲ. ಯಾರು ಅವರ ಹೆಸರು ತಿರಸ್ಕಾರ ಮಾಡಿದರು ಎಂದು ಮಾಜಿ ಪ್ರಧಾನಿ ದೇವೇಗೌಡರೇ ಹೇಳಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

    ಖರ್ಗೆ ಸಿಎಂ ಆಗುವ ಅವಕಾಶ ಇತ್ತು ಎಂಬ ದೇವೇಗೌಡರ ಹೇಳಿಕೆ ಪ್ರತಿಕ್ರಿಸಿದ ಸಿದ್ದರಾಮಯ್ಯ, ನಾನಂತು ಖರ್ಗೆ ಹೆಸರು ತಿರಸ್ಕಾರ ಮಾಡಿಲ್ಲ. ಯಾರು ಮಾಡಿದರು ಎಂದು ನನಗೆ ಗೊತ್ತಿಲ್ಲ. ದೇವೇಗೌಡರಿಗೆ ಗೊತ್ತಿದ್ದರೆ ಹೆಸರು ಹೇಳಲಿ ಎಂದು ಸವಾಲು ಎಸೆದರು.

    ಸಿದ್ದರಾಮಯ್ಯ ಪಕ್ಷ ಕಟ್ಟಿಲ್ಲ ಎಂಬ ದೇವೇಗೌಡರ ಹೇಳಿಕೆ ಕುರಿತು ಮಾತನಾಡಿ, ದೇವೇಗೌಡರು ಪಾಪ, ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಬಾರದು ಅಂದುಕೊಂಡಿದ್ದೇನೆ. 1999ರಲ್ಲಿ ಜೆಡಿಎಸ್ ಅಧ್ಯಕ್ಷರಾಗಿದ್ದು ಯಾರು? 6 ವರ್ಷಗಳ ಕಾಲ ಜೆಡಿಎಸ್ ಅಧ್ಯಕ್ಷನಾಗಿದ್ದು ನಾನು. ಹಾಗಾದರೆ ನಾನು ಅಧ್ಯಕ್ಷನಾಗಿದ್ದು ವ್ಯರ್ಥನಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

    ಕುರುಬರನ್ನು ಎಸ್‍ಟಿ ಮೀಸಲಾತಿ ಪಟ್ಟಿಗೆ ಸೇರಿಸಬೇಕೆಂದು ಡಿಸೆಂಬರ್ 29ಕ್ಕೆ ಮೈಸೂರಿನಲ್ಲಿ ನಡೆಯುತ್ತಿರುವ ಹೋರಾಟ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೋರಾಟದ ಅಗತ್ಯವೇ ಇಲ್ಲ. ಇದು ಕುರುಬರನ್ನು ಇಬ್ಭಾಗ ಮಾಡುವ ಹುನ್ನಾರ. ನಾನು ಸಿಎಂ ಆಗಿದ್ದಾಗಲೇ ಕುಲಶಾಸ್ತ್ರ ಅಧ್ಯಯನಕ್ಕೆ ಶಿಫಾರಸು ಮಾಡಿದ್ದೆ. ಈಶ್ವರಪ್ಪ, ವಿಶ್ವನಾಥ್ ಇಬ್ಬರೂ ಬಿಜೆಪಿ ಸರ್ಕಾರದಲ್ಲಿದ್ದಾರೆ. ಎರಡೂ ಕಡೆ ಅವರದ್ದೇ ಸರ್ಕಾರ ಇದೆ. ಅವರು ಕುಲಶಾಸ್ತ್ರ ಅಧ್ಯಯನ ವರದಿ ಪಡೆದು ಕೇಂದ್ರಕ್ಕೆ ಶಿಫಾರಸು ಮಾಡಿಸಲಿ. ಇದು ಕುರುಬರನ್ನ ಇಬ್ಭಾಗ ಮಾಡುವ ಆರ್‍ಎಸ್‍ಎಸ್ ಹುನ್ನಾರವಾಗಿದೆ. ಇದಕ್ಕೆ ಹೋರಾಟದ ಅಗತ್ಯ ಇಲ್ಲ. ಯಾರ ವಿರುದ್ಧ ಹೋರಾಟ ಮಾಡುತ್ತಾರೆ? ಅವರದ್ದೇ ಸರ್ಕಾರದ ವಿರುದ್ಧ ಹೋರಾಟ ಯಾಕೆ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

    ಗ್ರಾ.ಪಂ ಚುನಾವಣೆ ಹಿನ್ನೆಲೆ ವರುಣಾ ಹೋಬಳಿಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿಗೆ ಆಗಮಿಸಿ ಸಿದ್ದರಾಮಯ್ಯ ಮತಚಲಾಯಿಸಿದರು. ಮಾಸ್ಕ್ ಧರಿಸಿ ಸಿದ್ದರಾಮನಹುಂಡಿ ಸರ್ಕಾರಿ ಶಾಲೆ ಮತಗಟ್ಟೆ ಸಂಖ್ಯೆ 138ರಲ್ಲಿ ಮತ ಚಲಾವಣೆ ಮಾಡಿದರು.

  • ದೇವೇಗೌಡರ ರಾಜಕಾರಣ, ಆಲೋಚನೆ ಈಗ ನಡೆಯಲ್ಲ: ಬಸವರಾಜ ಹೊರಟ್ಟಿ

    ದೇವೇಗೌಡರ ರಾಜಕಾರಣ, ಆಲೋಚನೆ ಈಗ ನಡೆಯಲ್ಲ: ಬಸವರಾಜ ಹೊರಟ್ಟಿ

    ಹುಬ್ಬಳ್ಳಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ರಾಜಕಾರಣ, ಆಲೋಚನೆಗಳು ಈಗ ನಡೆಯುವುದಿಲ್ಲ. ಹೀಗಾಗೇ ಅವರಷ್ಟಕ್ಕೆ ಇರಲು ಹೇಳಿದ್ದೇವೆ. ನಾವು ಮಾಡೋದನ್ನು ಮಾಡುತ್ತೇವೆ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ತಿಳಿಸಿದರು.

    ನಗರದಲ್ಲಿಂದು ಬಿಜೆಪಿ ಜೊತೆಗಿನ ಮೈತ್ರಿ, ದೇವೇಗೌಡರ ರಾಜಕೀಯದ ಬಗ್ಗೆ ಮಾತನಾಡಿದ ಅವರು, ಮಾಮೂಲಿಯಾಗಿ ಮೈತ್ರಿ ಆಗುತ್ತೆ. ಈ ಬಾರಿ ಮೈತ್ರಿ ಗಟ್ಟಿಯಾಗಿರುತ್ತೆ. ಇದು ಪಾಲುಗಾರಿಕೆಯ ಮೈತ್ರಿ ಆಗುತ್ತೆ. ಮೈತ್ರಿ ಮುರಿದರೆ ಏನಾಗುತ್ತೆ ಎಂದು ಬಿಜೆಪಿಯವರಿಗೂ ಗೊತ್ತಾಗಿದೆ. ಹೀಗಾಗೇ ನಿಮ್ಮಷ್ಟಕ್ಕೆ ನೀವಿರಿ ಅಂತ ದೇವೇಗೌಡರಿಗೆ ಹೇಳಿದ್ದೇವೆ. ಅವರ ವಿಚಾರ, ಆಲೋಚನೆಗಳು ಈಗ ನಡೆಯಲ್ಲ. ಅವರ ರಾಜಕಾರಣವೇ ಬೇರೆ, ಅವರು ಹೇಳುವುದನ್ನ ಹೇಳುತ್ತಾರೆ. ಕೇಳುವುದು ಬಿಡುವುದು ನಮಗೆ ಬಿಟ್ಟದ್ದು. ನಾವು ಮಾಡೋದನ್ನ ಮಾಡುತ್ತೇವೆ ಎಂದು ಹೊರಟ್ಟಿ ಹೇಳಿದರು.

    ಇದೇ ವೇಳೆ ಸಿದ್ದರಾಮಯ್ಯ ಸೋಲಿನ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‍ನವರನ್ನು ಕಾಂಗ್ರೆಸ್‍ನವರೇ ಸೋಲಿಸಿದ್ದಾರೆ. ಇದರಲ್ಲಿ ಜೆಡಿಎಸ್ ಪಾತ್ರ ಇಲ್ಲ ಅನ್ನೋದು ಸ್ಪಷ್ಟವಾಯಿತು. ಅಲ್ಲದೆ ವಿಪಕ್ಷದಲ್ಲಿದ್ದಾಗ ಸೋಲಿಸುವುದೇ ಧರ್ಮ ಎಂದರು.

  • ಸಿದ್ದರಾಮಯ್ಯ ವ್ಯಕ್ತಿತ್ವ ಇನ್ನೂ ದೊಡ್ಡದಾಗಲಿ: ದೇವೇಗೌಡ

    ಸಿದ್ದರಾಮಯ್ಯ ವ್ಯಕ್ತಿತ್ವ ಇನ್ನೂ ದೊಡ್ಡದಾಗಲಿ: ದೇವೇಗೌಡ

    ಹಾಸನ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವ್ಯಕ್ತಿತ್ವ ಇನ್ನೂ ದೊಡ್ಡದಾಗಲಿ. ಅವರ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ .ದೇವೇಗೌಡ ಸೂಕ್ಷ್ಮವಾಗಿ ತಿವಿದರು.

    ನಗರದ ಸಂಸದರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಬಗ್ಗೆ ಟೀಕೆ ಮಾಡಿದ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು. ಸಿದ್ದರಾಮಯ್ಯನವರು ತುಂಬಾ ದೊಡ್ಡವರಿದ್ದಾರೆ ಅವರಿಗೆ ಇನ್ನೂ ಸಾಕಷ್ಟು ಸಮಯವಿದೆ. ಅವರ ವ್ಯಕ್ತಿತ್ವ ಇನ್ನೂ ದೊಡ್ಡದಾಗಲಿ. ಏನು ಬೇಕಾದರೂ ಮಾತನಾಡುವ ಸ್ವಾತಂತ್ರ್ಯ ಅವರಿಗಿದೆ. ನಾನು ಅವರ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ಈ ಬಗ್ಗೆ ಜನ ತೀರ್ಪು ಕೊಡುತ್ತಾರೆ ಎಂದು ಹೇಳಿದರು.

    ಸದ್ಯದ ಆರೋಗ್ಯ ಪರಿಸ್ಥಿತಿಯಲ್ಲಿ ನಾನು ಎಲ್ಲೂ ಓಡಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಾನು ಯಾವ ಸಭೆಯನ್ನೂ ಕರೆದಿಲ್ಲ. ಕುಮಾರಸ್ವಾಮಿ ಹಾಗೂ ಬಂಡೆಪ್ಪ ಕಾಶೆಂಪೂರ್ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ. ಬಿಜೆಪಿಯೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ. ಅದರ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಪ್ರತಿ ಕಾರ್ತಿಕಮಾಸದಲ್ಲಿ ನಮ್ಮ ಮನೆ ದೇವರಿಗೆ ಪೂಜೆ ಸಲ್ಲಿಸುತ್ತೇನೆ ಕೊರೊನಾ ಕಾರಣದಿಂದ ಶ್ರಾವಣಮಾಸ ಮಾಡಲು ಸಾಧ್ಯವಾಗಲಿಲ್ಲ. ಕಾರ್ತಿಕ ಮಾಸದ ಅಂತ್ಯದಲ್ಲಿ ಪೂಜೆ ಸಲ್ಲಿಸಲು ಬಂದಿದ್ದೇನೆ. ಆರೋಗ್ಯ ಸುಧಾರಣೆ ಆಗುವವರೆಗೂ ರಾಜಕೀಯವಾಗಿ ಓಡಾಡುವುದಿಲ್ಲ. ಸದ್ಯ ಆಯುರ್ವೇದ ಚಿಕಿತ್ಸೆಗೆ ಒಳಗಾಗಿದ್ದೇನೆ. ಚಿಕಿತ್ಸೆಯ ನಂತರ ರಾಜಕೀಯ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದರು.

  • ಹೆಚ್‍ಡಿಡಿ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ

    ಹೆಚ್‍ಡಿಡಿ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ

    ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ಎಚ್‍ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಹಿರಿಯ ಪುತ್ರ ಸೂರಜ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ.

    ಎಚ್.ಡಿ.ರೇವಣ್ಣ ಹಿರಿಯ ಪುತ್ರ ಡಾ.ಸೂರಜ್ ರೇವಣ್ಣ ಹಾಸನದ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಇದೀಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಡಾ.ಸೂರಜ್ ರೇವಣ್ಣ ಹೊಳೆನರಸೀಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಅವರ ವಿರುದ್ಧ ಯಾರೊಬ್ಬರೂ ನಾಮಪತ್ರ ಸಲ್ಲಿಸದಿದ್ದರಿಂದ ಸೂರಜ್ ರೇವಣ್ಣ ಹೆಚ್‍ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

    ಡಿಸಿಸಿ ಬ್ಯಾಂಕ್ ನಿರ್ದೇಶಕರಾಗುವ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ನೇರವಾಗಿ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಟ್ಟಿದೆ. ಪ್ರಜ್ವಲ್ ರೇವಣ್ಣ ಬಳಿಕ ಸೂರಜ್ ರೇವಣ್ಣ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  • ರಾಜ್ಯಸಭೆಗೆ ನಾಲ್ವರು ಅವಿರೋಧ ಆಯ್ಕೆ- ಮತ್ತೆ ಸಂಸತ್‍ಗೆ ಎಚ್‍ಡಿಡಿ, ಖರ್ಗೆ ಎಂಟ್ರಿ

    ರಾಜ್ಯಸಭೆಗೆ ನಾಲ್ವರು ಅವಿರೋಧ ಆಯ್ಕೆ- ಮತ್ತೆ ಸಂಸತ್‍ಗೆ ಎಚ್‍ಡಿಡಿ, ಖರ್ಗೆ ಎಂಟ್ರಿ

    ನವದೆಹಲಿ: ರಾಜ್ಯಸಭೆ ಚುನಾವಣಾ ಕಣದಲ್ಲಿ ರಾಜ್ಯದ 4 ಅಭ್ಯರ್ಥಿಗಳು ಮಾತ್ರ ಇದ್ದಿದ್ದರಿಂದ ಅವಿರೋಧ ಆಯ್ಕೆ ಮಾಡಲಾಗಿದೆ. ಈ ಮೂಲಕ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್‍ಗೆ ಮತ್ತೆ ಪ್ರವೇಶ ಮಾಡಿದ್ದಾರೆ.

    ಬಿಜೆಪಿಯ ಅಶೋಕ್ ಗಸ್ತಿ, ಈರಣ್ಣ ಕಡಾಡಿ, ಕಾಂಗ್ರೆಸ್‍ನ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್ ಎಚ್.ಡಿ. ದೇವೇಗೌಡ ಅವರು ಅಷ್ಟೇ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆ ವಿಧಾನಸಭೆ ಕಾರ್ಯದರ್ಶಿ, ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅವರು ಅಧಿಕೃತವಾಗಿ ಈ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಘೋಷಿಸಿದರು.

    ಅವಿರೋಧವಾಗಿ ಆಯ್ಕೆಯಾದ ಅಧಿಕೃತ ಘೋಷಣಾ ಪತ್ರವನ್ನು ಕಾಂಗ್ರೆಸ್‍ನ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಅಭ್ಯರ್ಥಿಗಳಾದ ಅಶೋಕ್ ಗಸ್ತಿ, ಈರಣ್ಣ ಕಡಾಡಿ ಅವರು ಪಡೆದುಕೊಂಡಿದ್ದಾರೆ.

    ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ನನ್ನ ಮೇಲೆ ನಂಬಿಕೆ ಇಟ್ಟು ರಾಜ್ಯಸಭೆಗೆ ಕಳುಹಿಸಿದ್ದಾರೆ. ಅವರಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ರಾಜ್ಯದ, ದೇಶದ ಸಮಸ್ಯೆಗಳನ್ನು ಸಮರ್ಥವಾಗಿ ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.

    ಹಿಂಭಾಗಿಲಿನ ಮೂಲಕ ರಾಜ್ಯಸಭೆಗೆ ಪ್ರವೇಶಿಸಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿ ನೀಡಿದ ಅವರು, ನನ್ನಷ್ಟು ವರ್ಷ ವಿಧಾನಸಭೆಗೆ ಆಯ್ಕೆಯಾದವರು ಬಿಜೆಪಿಯಲ್ಲಿ ಯಾರಿದ್ದಾರೆ? ಬಿಜೆಪಿಯವರು ನನ್ನಷ್ಟು ವರ್ಷ ರಾಜಕಾರಣ ಮಾಡಲಿ ನೋಡೋಣ. ಅವರ ಪಕ್ಷ ಅವಕಾಶ ನೀಡುತ್ತೋ ಇಲ್ಲವೋ ನೊಡೋಣ. ಒಬ್ಬರ ಮೇಲೋಬ್ಬರು ರಾಜಕಾರಣ ಮಾಡೊದು ಬೇಡ ಎಂದು ಕುಟುಕಿದರು.

    2019ರ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡ ಅವರು ಹಾಸನ ಕ್ಷೇತ್ರವನ್ನು ಮೊಮಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟು ತುಮಕೂರಿನಿಂದ ಸ್ಪರ್ಧಿಸಿದ್ದರು. ಆದರೆ ಅಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರ ವಿರುದ್ಧ ಸೋಲು ಕಂಡಿದ್ದರು. ಇತ್ತ ಮಲ್ಲಿಕಾರ್ಜುನ ಖರ್ಗೆ ಅವರು ಡಾ.ಉಮೇಶ್ ಜಾಧವ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಸದ್ಯ ರಾಜ್ಯಸಭಾ ಚುನಾವಣೆ ಮೂಲಕ ಈ ಇಬ್ಬರು ನಾಯಕರು ಸಂಸತ್ ಪ್ರವೇಶ ಮಾಡಿದ್ದಾರೆ.

  • ಮೈಸೂರಲ್ಲಿರೋ ಕೆಲ ಹಾವುಗಳಿಂದ ದೂರ ಇರಬೇಕು: ಸಾ.ರಾ. ಮಹೇಶ್

    ಮೈಸೂರಲ್ಲಿರೋ ಕೆಲ ಹಾವುಗಳಿಂದ ದೂರ ಇರಬೇಕು: ಸಾ.ರಾ. ಮಹೇಶ್

    ಮೈಸೂರು: ಜಿಲ್ಲೆಯಲ್ಲಿ ಕೆಲ ಹಾವುಗಳಿವೆ. ಅಂತಹ ಹಾವುಗಳಿಂದ ಹುಷಾರಾಗಿರಬೇಕು ಎಂದು ಮೈಸೂರು ಹಾಲು ಒಕ್ಕೂಟ ನಿ.(ಮೈಮುಲ್)ದ ಕುರಿತು ಶಾಸಕ ಸಾ.ರಾ.ಮಹೇಶ್ ವ್ಯಂಗ್ಯವಾಗಿ ಮಾತನಾಡಿದ್ದಾರೆ.

    ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಮೈಸೂರಿನಲ್ಲಿ ಕೆಲ ಹಾವುಗಳಿವೆ ಅವುಗಳಿಂದ ಹುಷಾರಾಗಿ ಇರಬೇಕು. ಕೆಲವು ಕಚ್ಚಿದ್ರೆ ವಿಷ, ಇನ್ನೂ ಕೆಲವು ಮೂಸಿದರೆ ವಿಷ ಇದೆ. ಅಂತಹ ಹಾವುಗಳಿಂದ ಹುಷಾರಾಗಿ ಇರಬೇಕು. ಚಾಮರಾಜನಗರ ಹಾಲು ಒಕ್ಕೂಟದ ಬಗ್ಗೆ ಜಂಟಿ ಸಮಿತಿ ವರದಿ ನೀಡಿದ್ದು, ಅಲ್ಲಿನ ಆಡಳಿತ ಮಂಡಳಿಯನ್ನು ಅಮಾನತು ಮಾಡಿ ಎಂದು ಹೇಳಿದೆ. ಅಲ್ಲಿನ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ಇರಲಿಲ್ಲ ಎಂದೂ ಹೇಳಿದೆ. ಅಲ್ಲಿ ಪರೀಕ್ಷೆ ನಡೆಸಿದ ಸಂಸ್ಥೆಯೇ ಮೈಮುಲ್‍ನಲ್ಲಿ ಪರೀಕ್ಷೆ ನಡೆಸಿದೆ. ಅಲ್ಲಿ ಅಕ್ರಮ ಮಾಡಿರುವ ಸಂಸ್ಥೆಯನ್ನು ಇಲ್ಲಿ ಒಪ್ಪಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

    ನಮಗೆ ನ್ಯಾಯ ಸಿಗುವ ಭರವಸೆ ಇದೆ. ಅದಕ್ಕಾಗಿ ಹೋರಾಟ ಮಾಡ್ತಿದ್ದೇನೆ. ಆದರೆ ಕೆಲ ಹಾವುಗಳು ಮೈಸೂರಿನಲ್ಲಿ ಇವೆ. ಅಂತಹ ಹಾವುಗಳಿಂದ ಹುಷಾರಾಗಿ ಇರಬೇಕು ಎಂದು ವ್ಯಂಗ್ಯವಾಡಿದ್ದಾರೆ.

    ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಮಾತನಾಡಿದ ಅವರು, ದೇವೇಗೌಡರು ರಾಜ್ಯಸಭೆಗೆ ಸ್ಪರ್ಧಿಸುವಂತೆ ನಾವೆಲ್ಲ ಒತ್ತಾಯಿಸಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನ. ನಾಳೆಯೂ ದೇವೇಗೌಡರನ್ನು ಮನವೊಲಿಸುತ್ತೇವೆ. ಒಪ್ಪಲಿಲ್ಲ ಎಂದರೆ ಮಂಗಳವಾರ ಎಲ್ಲ ಜೆಡಿಎಸ್ ಶಾಸಕರು ಹೆಚ್‍ಡಿಡಿ ಮನೆಗೆ ಭೇಟಿ ನೀಡಿ ಒಪ್ಪುವಂತೆ ಮಾಡುತ್ತೇವೆ. ದೇವೇಗೌಡರು ಒಪ್ಪಿದರೆ ಬಾಕಿ ಬೇಕಾಗಿರುವ ಮತಗಳಿಗೆ ಯಾರ ಬಳಿ ಹೋಗಬೇಕು ಎಂದು ಚರ್ಚೆ ಮಾಡುತ್ತೇವೆ ಎಂದರು.

  • ಎಚ್‍ಡಿಡಿ ಸ್ಪರ್ಧೆ ಬಗ್ಗೆ ನಮ್ಮೊಂದಿಗೆ ಯಾರೂ ಚರ್ಚಿಸಿಲ್ಲ- ಡಿಕೆಶಿ

    ಎಚ್‍ಡಿಡಿ ಸ್ಪರ್ಧೆ ಬಗ್ಗೆ ನಮ್ಮೊಂದಿಗೆ ಯಾರೂ ಚರ್ಚಿಸಿಲ್ಲ- ಡಿಕೆಶಿ

    ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಸ್ಪರ್ಧೆ ಬಗ್ಗೆ ಇದುವರೆಗೆ ನಮ್ಮ ಜೊತೆ ಯಾರೂ ಚರ್ಚೆ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ನಮ್ಮ ಹೈಕಮಾಂಡ್ ಸೋನಿಯಾ ಗಾಂಧಿ ಅವರು ಎಚ್.ಡಿ.ದೇವೇಗೌಡ ಅವರಿಗೆ ಬೆಂಬಲ ನೀಡುವ ಬಗ್ಗೆ ತೀರ್ಮಾನ ಮಾಡುತ್ತಾರೆ. ಹೈ ಕಮಾಂಡ್, ಪಾರ್ಟಿ ಏನು ತೀರ್ಮಾನ ಮಾಡುತ್ತೋ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

    ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಜೂನ್ 8ರಂದು ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಆದರೆ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸುವಾಗ ಪಕ್ಷದ ಯಾವ ಕಾರ್ಯಕರ್ತರು ಬರಬಾರದು. ಶಾಸಕರು ಕೆಲವು ಮುಖಂಡರುಗಳಷ್ಟೇ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

    ಇದೇ ವೇಳೆ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ ಡಿ.ಕೆ.ಶಿವಕುಮಾರ್, ಯಾರೋ ಮೆಂಟಲ್‍ಗಳು ಎಲ್ಲಾ ಇದ್ದಾರೆ. ಏನೇನೋ ಮಾತಾಡ್ತಾರೆ. ಕಾಂಗ್ರೆಸ್‍ನಿಂದ 20 ಜನ, 30 ಜನ, 40 ಜನರನ್ನು ಬಿಜೆಪಿಗೆ ಕರೆದುಕೊಂಡು ಹೋಗುತ್ತೇನೆ ಅಂತಾರೆ. ಅದೇನು ಕಡ್ಲೆಪುರಿ ವ್ಯಾಪಾರ ಅಲ್ಲ. ಶಾಸಕರುಗಳಿಗೆ ಅಗೌರವ ತರೋದು ಬೇಡ ಎಂದು ವಾಗ್ದಾಳಿ ನಡೆಸಿದರು.

    ಯಾವ್ಯಾವ ಸಚಿವರು ಏನೇನು ಮಾತಾಡಿದಾರೆ ಗಮನಿಸುತ್ತಿರುವೆ. ಯಾರು ಯಾರೆಲ್ಲಾ ಎಲ್ಲಿ ಏನು ಸಭೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತು. ನಿನ್ನೆ ರಾತ್ರಿ ಯಾರು ಯಾವ ಹೋಟೆಲ್‍ನಲ್ಲಿ ಸೇರಿಕೊಂಡಿದ್ದರು ಅಂತ ತಿಳಿದಿದೆ. ಯಾರು ಯಾರನ್ನ ಕಾಯ್ತಾ ಕೂತಿದ್ದರು ಅನ್ನೋದು ಗೊತ್ತಿದೆ ಎಂದು ಗುಡುಗಿದರು.

    ಲೆಕ್ಕಾಚಾರ:
    ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಬಲ 68. ಒಬ್ಬರು ಅಭ್ಯರ್ಥಿ ಆಯ್ಕೆಯಾಗುವುದಕ್ಕೆ 45 ಮತಗಳು ಸಾಕು. ಆದ್ದರಿಂದ ಮಲ್ಲಿಕಾರ್ಜುನ ಖರ್ಗೆ ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ. ಕರ್ನಾಟಕದ ಹಿರಿಯ ನಾಯಕರಿಗೆ ಪಕ್ಷ ರಾಜ್ಯಸಭಾ ಸದಸ್ಯರಾಗುವ ಅವಕಾಶವನ್ನು ನೀಡಿದೆ.

    ಇತ್ತ ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಬೇಕಾದರೆ ಕಾಂಗ್ರೆಸ್ ಹೆಚ್ಚುವರಿ ಮತಗಳ ಅಗತ್ಯವಿದೆ. ರಾಜ್ಯಸಭೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಲು 45 ಮತಗಳ ಅಗತ್ಯವಿದೆ. ಕಾಂಗ್ರೆಸ್ ಬಳಿ 23 ಹೆಚ್ಚುವರಿ ಮತಗಳಿದ್ದು, ಜೆಡಿಎಸ್ ಬಳಿ 34 ಮತಗಳಿವೆ. ಈ ಎರಡೂ ಪಕ್ಷಗಳ ಒಟ್ಟು 54 ಮತಗಳನ್ನು ಜೆಡಿಎಸ್‍ಗೆ ನೀಡಿದರೆ ದೇವೇಗೌಡ ಅವರು ಗೆಲ್ಲಲಿದ್ದಾರೆ.

  • ತಾತ-ಅಜ್ಜಿಗೆ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಕೋರಿದ ನಿಖಿಲ್

    ತಾತ-ಅಜ್ಜಿಗೆ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಕೋರಿದ ನಿಖಿಲ್

    ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಮತ್ತು ಪತ್ನಿ ಚೆನ್ನಮ್ಮ ದಂಪತಿ ಇಂದು ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

    ಎಚ್.ಡಿ.ದೇವೇಗೌಡರು ಮತ್ತು ಪತ್ನಿ ಚೆನ್ನಮ್ಮ ದಂಪತಿ ತಮ್ಮ 66ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದ ಮೂಲಕ ತಾತಾ-ಅಜ್ಜಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯನ್ನು ಕೋರಿದ್ದಾರೆ.

    “ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 66 ವಸಂತಗಳನ್ನು ಪೂರೈಸಿರುವ ನಾಡಿನ ಆದರ್ಶ ದಂಪತಿಗಳಾಗಿರುವ ಪ್ರೀತಿಯ ತಾತ ಎಚ್.ಡಿ.ದೇವೇಗೌಡರು ಹಾಗೂ ಅಜ್ಜಿ ಚೆನ್ಮಮ್ಮ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು” ಎಂದು ನಿಖಿಲ್ ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ. ಜೊತೆಗೆ ತಾತ-ಅಜ್ಜಿಯ ಫೋಟೋವನ್ನು ಶೇರ್ ಮಾಡಿದ್ದಾರೆ.

    ಎಚ್.ಡಿ.ದೇವೇಗೌಡರು 1954 ರಲ್ಲಿ ಚೆನ್ನಮ್ಮರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ನಾಲ್ವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

    ಲಾಕ್‍ಡೌನ್ ನಡುವೆಯೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಏಪ್ರಿಲ್ 17 ರಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿನ ಎಚ್‍.ಡಿ ಕುಮಾರಸ್ವಾಮಿ ಫಾರ್ಮ್ ಹೌಸ್‍ನಲ್ಲಿ ನಟ ನಿಖಿಲ್, ರೇವತಿ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಿಖಿಲ್ ಹಾಗೂ ರೇವತಿ ಮದುವೆಯಲ್ಲಿ ಎರಡು ಕುಟುಂಬದವರ ಮತ್ತು ಆಪ್ತರಷ್ಟೆ ಭಾಗಿಯಾಗಿದ್ದರು.