Tag: ಎಚ್.ಡಿ. ದೇವೇಗೌಡ

  • ಶಿವರಾಮೇಗೌಡ ಮಂಡ್ಯದ ಗೌರವ ಹಾಳು ಮಾಡಿದ್ದಾರೆ: ಎಚ್.ವಿಶ್ವನಾಥ್ ಕಿಡಿ

    ಶಿವರಾಮೇಗೌಡ ಮಂಡ್ಯದ ಗೌರವ ಹಾಳು ಮಾಡಿದ್ದಾರೆ: ಎಚ್.ವಿಶ್ವನಾಥ್ ಕಿಡಿ

    – ಸಂಸದರ ವಿರುದ್ಧ ಕ್ರಮಕೈಗೊಳ್ಳುತ್ತೇನೆ
    – ಮೋದಿ ಜಿಯೋ ಅಂಬಾಸಿಡರ್
    – ಕುಟುಂಬ ರಾಜಕಾರಣ ಜಗತ್ತಿನ ವಿಶೇಷ
    – ಯುದ್ಧದ ಹೆಸರಿನಲ್ಲಿ ಮೋದಿ ರಾಜಕೀಯ ಮಾಡುತ್ತಿದ್ದಾರೆ
    – ಬೋಫೋರ್ಸ್ ಹಗರಣದಿಂದ ಕಾಂಗ್ರೆಸ್ ಬಿತ್ತು, ರಫೇಲ್‍ನಿಂದ ಬಿಜೆಪಿ ಬೀಳುತ್ತೆ

    ಬೆಂಗಳೂರು: ಸಂಸದ ಶಿವರಾಮೇಗೌಡ ಅವರು ಮಂಡ್ಯದಲ್ಲಿ ಜಾತಿ ಬಗ್ಗೆ ಪ್ರಸ್ತಾಪ ಮಾಡಬಾರದಿತ್ತು. ಈ ಮೂಲಕ ಸಂಸದರು ತಮ್ಮ ಹೇಳಿಕೆ ಮೂಲಕ ಮಂಡ್ಯದ ಗೌರವ ಹಾಳು ಮಾಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

    ನಗರದ ಪ್ರೆಸ್‍ಕ್ಲಬ್‍ನಲ್ಲಿ ಮಾಧ್ಯಮ ಸಂವಾದ ನಡೆಸಿ ಮಾತನಾಡಿದ ಅವರು, ಮಂಡ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರು ಇದ್ದಾರೆ. ಆದರೂ ಅವರು ಯಾವತ್ತೂ ಜಾತಿವಾದ ಮಾಡಿಲ್ಲ. ಸಂಸದರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಪಕ್ಷದ ಅಧ್ಯಕ್ಷನಾಗಿ ನಾನು ಅವರ ವಿರುದ್ಧ ಕ್ರಮಕೈಗೊಳ್ಳುತ್ತೇನೆ. ಸುಮಲತಾ ಅಂಬರೀಶ್ ಮಂಡ್ಯದ ಸೊಸೆ. ಅಂಬರೀಶ್ ಹೆಂಡತಿ. ಅವರ ಬಗ್ಗೆ ಯಾರು ಜಾತಿ ವಿಚಾರದಲ್ಲಿ ಮಾತನಾಡಬಾರದು ಎಂದು ತಿಳಿಸಿದರು.

    ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾದ ಬಳಿಕ ಸಂಭ್ರಮಕ್ಕಿಂತ ಸಂಘರ್ಷವೇ ಹೆಚ್ಚಾಗಿದೆ. ಆರೋಗ್ಯ ಸರಿಯಿಲ್ಲದ ಕಾರಣ ನನಗೆ ಬಿಡುಗಡೆ ಕೊಡಿ ಅಂತ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಬಳಿ ಕೇಳಿಕೊಂಡೆ. ಆದರೆ ಅವರು ಒಪ್ಪಲಿಲ್ಲ. ನೀವೇ ಮುಂದುವರಿಯಬೇಕು ಎಂದು ಹೇಳಿದರು. ಹೀಗಾಗಿ ನಾನೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿರುವೆ ಎಂದರು.

    ದೇಶದಲ್ಲಿ ಲೋಕಸಭಾ ಚುನಾವಣೆ ಜೋರಾಗಿ ನಡೆಯುತ್ತಿದೆ. ಜನತಂತ್ರ ವ್ಯವಸ್ಥೆಯ ಜಾತ್ರೆ ದೇಶದಲ್ಲಿ ನಡೆಯುತ್ತಿದೆ. ಈ ಚುನಾವಣೆ ನಕಲಿ ರಾಷ್ಟ್ರೀಯವಾದಿ ಮತ್ತು ಭಾರತದ ಬಹುತ್ವದ ಬಗೆಗಿನ ನಡುವಿನ ಸಂಘರ್ಷವಾಗಿದೆ. ನಕಲಿ ರಾಷ್ಟ್ರವಾದಿ ಬಿಜೆಪಿಯನ್ನು ಹೊಗಳಿದವರು ದೇಶಪ್ರೇಮಿಗಳು. ಇಲ್ಲ ಅಂದ್ರೆ ಅವರು ದೇಶ ವಿರೋಧಿಗಳು. ಇಂತಹ ಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತಂದಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಪ್ರಧಾನಿ ಮೋದಿ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆ ಈಡೇರಿಸಿಲ್ಲ. ಅವರು ದೇಶಕ್ಕೆ ಕೊಟ್ಟ ವಚನ ಏನಾಯಿತು? ಇದಕ್ಕೆ ಪ್ರಧಾನಿ ಮೋದಿ ಉತ್ತರ ಕೊಡಬೇಕು. ಹೀಗೆ ಪ್ರಶ್ನೆ ಮಾಡಿದರೆ ಅವರು ದೇಶ ವಿರೋಧಿಗಳಾಗುತ್ತಾರೆ. ಹೀಗಾಗಿ ಬಿಜೆಪಿ ನಕಲಿ ರಾಷ್ಟ್ರವಾದಿ ಎಂದು ಹೇಳಿದರು.

    ಪ್ರಧಾನಿ ಮೋದಿ ಅವರು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಈ ಮೂಲಕ ಅವರು 5 ವರ್ಷಗಳಲ್ಲಿ 10 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ಈವರೆಗೆ ಕೇವಲ 27 ಲಕ್ಷ ಜನರಿಗೆ ಮಾತ್ರ ಉದ್ಯೋಗ ಸೃಷ್ಟಿಯಾಗಿದೆ. ಬಿಎಸ್‍ಎನ್‍ಎಲ್ ಸಂಸ್ಥೆ ಇವತ್ತು ಅವನತಿ ಹೊಂದುತ್ತಿದೆ. ಈ ಮೂಲಕ ಅಲ್ಲಿನ 50 ಸಾವಿರ ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ನರೇಂದ್ರ ಮೋದಿ ಅವರು ಖಾಸಗಿ ಕಂಪನಿ ಜಿಯೋಗೆ ಅಂಬಾಸಿಡರ್ ಆಗಿದ್ದಾರೆ ಎಂದು ದೂರಿದರು.

    ಕುಟುಂಬ ರಾಜಕಾರಣ ಜಗತ್ತಿನ ವಿಶೇಷವಾಗಿದೆ. ಈಗಿನ ಲೋಕಸಭೆಯ ಸಂಸದರಲ್ಲಿ ಸುಮಾರು 150 ಜನ ಕುಟುಂಬ ರಾಜಕಾರಣದಿಂದಲೇ ಬಂದಿದ್ದಾರೆ. ಬಿಹಾರದ ಆರ್‍ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಹಾಗೂ ಉತ್ತರ ಪ್ರದೇಶದಲ್ಲಿ ಎಸ್‍ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಕುಟುಂಬದಲ್ಲಿ 5ರಿಂದ 6 ಜನರು ಸ್ಪರ್ಧಿಸುತ್ತಿದ್ದಾರೆ. ಒಂದೇ ಕುಟುಂಬದಿಂದ ಮೂರು ಜನ ಸ್ಪರ್ಧಿಸುವುದು ತಪ್ಪೇ? ಎಚ್.ಡಿ.ದೇವೇಗೌಡರ ಕುಟುಂಬವನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಗೆಲ್ಲುವ ಅಭ್ಯರ್ಥಿ ಅಂತಾನೆ ಮಂಡ್ಯ ಲೋಕಸಭಾ ಕಣಕ್ಕೆ ಇಳಿಸಿದ್ದೇವೆ ಎಂದು ಹೇಳಿದರು.

    ಜನ್ ಧನ್ ಅಕೌಂಟ್ ಇವತ್ತು ಜಿರೋ ಬ್ಯಾಲೆನ್ಸ್ ಆಗಿಯೇ ಇದೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಯೋಜನಾ ಆಯೋಗ ಜಾರಿಗೆ ತಂದಿದ್ದರು. ಅದರೆ ಅದನ್ನು ಪ್ರಧಾನಿ ಮೋದಿ ತೆಗೆದು ಹಾಕಿ, ನೀತಿ ಆಯೋಗ ತಂದರು. ಆದರೆ ಇಂದು ನೀತಿ ಆಯೋಗ ಏನಾಗಿದೆ? ಅದನ್ನು ಕೂಡ ಮೋದಿ ಹಾಳು ಮಾಡಿದ್ದಾರೆ ಎಂದು ದೂರಿದರು.

    ಯುದ್ಧ ಭಾರತಕ್ಕೆ ಹೊಸದೇನಲ್ಲ. ಅನೇಕ ಯುದ್ಧಗಳನ್ನು ಭಾರತ ನೋಡಿದೆ. ಆದರೆ ಬಿಜೆಪಿಯವರು ಯುದ್ಧವನ್ನೇ ದೊಡ್ಡ ವಿಚಾರವಾಗಿ ಮಾಡಿಕೊಂಡರು. ಅಷ್ಟೇ ಅಲ್ಲದೆ ಪ್ರಧಾನಿ ಮೋದಿ ಅವರೇ ನೇರವಾಗಿ ಪಾಕಿಸ್ತಾನಕ್ಕೆ ಹೋಗಿ ಉಗ್ರರನ್ನು ಹೊಡೆದು ಬಂದಿದ್ದಾರೆ ಎನ್ನುವಂತೆ ಬಿಂಬಿಸಲಾಯಿತು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಭಾರತೀಯ ಸೈನಿಕರು ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ್ದರು. ಇದು ಯಾಕೆ ನಿಮಗೆ ನೆನಪು ಬರುತ್ತಿಲ್ಲ. ಯುದ್ಧದ ಹೆಸರಿನಲ್ಲಿ ಮೋದಿ ರಾಜಕೀಯ ಮಾಡುತ್ತಿದ್ದಾರೆ ಕಿಡಿಕಾರಿದರು.

    ಪ್ರಧಾನಿ ಮೋದಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಅಂದಿದ್ದರು. ಆದರೆ ರಫೇಲ್ ಡೀಲ್‍ನಲ್ಲಿ ದೊಡ್ಡ ಭ್ರಷ್ಟಾಚಾರವೇ ನಡೆದಿದೆ. ರಫೇಲ್ ಡೀಲ್‍ನ ಕಡತಗಳೇ ನಾಪತ್ತೆಯಾಗಿವೆ. ಇದಕ್ಕಿಂತ ದೊಡ್ಡ ಭ್ರಷ್ಟಾಚಾರ ಬೇಕಾ ಎಂದು ಪ್ರಶ್ನಿಸಿದರು.

    2014ರಲ್ಲಿ ನರೇಂದ್ರ ಮೋದಿ ಬಗ್ಗೆ ಜನ ಅಭಿಮಾನ, ನಂಬಿಕೆ ಇಟ್ಟುಕೊಂಡು ಬಹುಮತ ಕೊಟ್ಟಿದ್ದರು. ಬೋಫೋರ್ಸ್ ಹಗರಣದಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದ ಇತಿಹಾಸವಿದೆ. ಹಾಗೆ ರಫೇಲ್ ಡೀಲ್‍ನ ಹಗರಣದಿಂದ ಬಿಜೆಪಿ ಸರ್ಕಾರ ಪತನವಾಗುತ್ತದೆ ಎಂದು ಭವಿಷ್ಯ ನುಡಿದರು.

    ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವು ರೈತರ ಪರ ಕೆಲಸ ಮಾಡುತ್ತಿದೆ. ಆದರೆ ಕೇಂದ್ರ ಬಿಜೆಪಿ ಸರ್ಕಾರ ರೈತರನ್ನು ಮರೆತಿದೆ. ರೈತರ ಖಾತೆಗೆ ಎರಡು ಸಾವಿರ ರೂ.ನಂತೆ ಒಟ್ಟು 6 ಸಾವಿರ ರೂ. ನೀಡುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಸಿಎಂ ಕುಮಾರಸ್ವಾಮಿ ಎಷ್ಟೇ ಕಷ್ಟ ಇದ್ದರು ಸಾಲಮನ್ನಾ ಜಾರಿಗೆ ತಂದಿದ್ದಾರೆ ಎಂದರು.

    ನಮ್ಮದು ಪ್ರಾದೇಶಿಕ ಪಕ್ಷ. ದೇಶಕ್ಕೆ ಪ್ರಧಾನಿಯನ್ನ ಕೊಟ್ಟಿದ್ದೇವೆ. ದೇಶದ ಅಭಿವೃದ್ಧಿ ಮತ್ತು ರಾಜ್ಯದ ಅಭಿವೃದ್ಧಿ ನಾವು ಆದ್ಯತೆ ನೀಡುತ್ತೇವೆ ಎಂದು ವಿಶ್ವನಾಥ್ ಹೇಳಿದರು.

  • ದೇವೇಗೌಡರನ್ನ ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ್ದು ಯಾಕೆ: ಕಾಂಗ್ರೆಸ್‍ಗೆ ಸಿ.ಟಿ.ರವಿ ಪ್ರಶ್ನೆ

    ದೇವೇಗೌಡರನ್ನ ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ್ದು ಯಾಕೆ: ಕಾಂಗ್ರೆಸ್‍ಗೆ ಸಿ.ಟಿ.ರವಿ ಪ್ರಶ್ನೆ

    – ನಿಮ್ಮ ಅಜ್ಜಿ, ತಾಯಿ ರಾಜ್ಯದಿಂದ ಗೆದ್ದು ಇಲ್ಲಿಗೆ ಕೊಟ್ಟಿದ್ದೇನು?
    – ರಾಹುಲ್ ಗಾಂಧಿ ವಿರುದ್ಧ ಸಿಟಿ ರವಿ ವಾಗ್ದಾಳಿ

    ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗೆ ಇಳಿಸಿದ್ದು ಯಾಕೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಕಾಂಗ್ರೆಸ್‍ಗೆ ಪ್ರಶ್ನೆ ಮಾಡಿದ್ದಾರೆ.

    ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಡೆದಾಡುವ ಸುಳ್ಳಿನ ಯಂತ್ರ. ಅವರ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಗರೀಬಿ ಹಠಾವೋ ಅಂತ ಹೇಳಿದರು. ಕಾಂಗ್ರೆಸ್‍ಗೆ ಬಡವರು ಚುನಾವಣಾ ಸರಕು. ಬಡವರ ಹೆಸರಿನಲ್ಲಿ ಕಾಂಗ್ರೆಸ್ ತನ್ನ ಬಡತನವನ್ನ ನಿವಾರಿಸಿಕೊಂಡಿದ್ದಾರೆ. ಕಾಂಗ್ರೆಸ್ ಬದುಕಿಕೊಳ್ಳಲು ನ್ಯಾಯ್ ಯೋಜನೆ ಆಶ್ವಾಸನೆ ಕೊಟ್ಟಿದೆ. ಎಲ್ಲ ಕಾಲದಲ್ಲೂ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಅಜ್ಜಿ ಇಂದಿರಾ ಗಾಂಧಿ, ಅಪ್ಪ ರಾಜೀವ್ ಗಾಂಧಿ, ಅಮ್ಮ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಎಲ್ಲರೂ ಜನರನ್ನು ಮೂರ್ಖರನ್ನಾಗಿ ಮಾಡಿದ್ದರು. ಆದರೆ ನೀವು ಈಗ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟರು.

    ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಭಾರತವನ್ನು ನಿರ್ಲಕ್ಷಿಸಿದ್ದಾರೆ ಎಂದು ಕಾಂಗ್ರೆಸ್‍ನವರು ಆರೋಪ ಮಾಡುತ್ತಾರೆ. ಆದರೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಇಂದಿರಾ ಗಾಂಧಿ ಹಾಗೂ ಬಳ್ಳಾರಿಯಿಂದ ಗೆದ್ದು ಹೋದ ಸೋನಿಯಾ ಗಾಂಧಿ ಅವರು ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ. ದಕ್ಷಿಣ ಭಾರತದ ನಾಯಕರಾದ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್, ನೀಲಂ ಸಂಜೀವ್ ರೆಡ್ಡಿ, ದೇವರಾಜ್ ಅರಸು ಅವರನ್ನು ಕಾಂಗ್ರೆಸ್‍ನವರು ಏನು ಮಾಡಿದರು? ಎಚ್.ಡಿ.ದೇವೇಗೌಡರನ್ನ ಪ್ರಧಾನಿ ಸ್ಥಾನದಿಂದ ಕೆಳಗೆ ಇಳಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.

  • ಮುನಿಸು ಮರೆತ್ರಾ ದೇವೇಗೌಡ, ಸಿದ್ದರಾಮಯ್ಯ- ಗುರು, ಶಿಷ್ಯರಿಂದ ಜಂಟಿ ಪ್ರಚಾರ!

    ಮುನಿಸು ಮರೆತ್ರಾ ದೇವೇಗೌಡ, ಸಿದ್ದರಾಮಯ್ಯ- ಗುರು, ಶಿಷ್ಯರಿಂದ ಜಂಟಿ ಪ್ರಚಾರ!

    ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ನಡುವೆ ದೋಸ್ತಿ ಆದ್ರೂ ಕೆಳಮಟ್ಟದ ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡಿಲ್ಲ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅದನ್ನ ಸರಿಪಡಿಸಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಟಿಯಾಗಿ ಪ್ರಚಾರಕ್ಕೆ ಹೋಗಲು ನಿರ್ಧರಿಸಿದ್ದಾರೆ.

    ಹೌದು. 28 ಕ್ಷೇತ್ರಗಳಿಗೆ ಗೌಡರು ಹಾಗೂ ಸಿದ್ದರಾಮಯ್ಯ ಜೋಡಿ ಜೊತೆಯಲ್ಲಿ ಸಾಗಲಿದೆ. ಆ ಮೂಲಕ ದಶಕಗಳ ಕಾಲ ಒಬ್ಬರನ್ನೊಬ್ಬರು ದ್ವೇಷಿಸಿದ್ದ ಅವರಿಬ್ಬರೇ ಮೈತ್ರಿ ಸೂತ್ರ ಪಾಲನೆಗೆ ಒಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅವರಿಬ್ಬರು ಒಂದಾಗಿದ್ದಾರೆ ಇನ್ನು ನಮ್ಮದೇನು ಎಂದು ಕಾರ್ಯಕರ್ತರ ಮನವೂ ಈ ಮೂಲಕ ಪರಿವರ್ತನೆ ಆಗಬಹುದು ಎಂಬುದು ದೋಸ್ತಿ ನಾಯಕರ ಲೆಕ್ಕಾಚಾರವಾಗಿದೆ. ಆದ್ದರಿಂದ ಜಂಟಿ ಚುನಾವಣಾ ಪ್ರಚಾರದ ರೂಪುರೇಷೆ ಸಿದ್ಧವಾಗಿದ್ದು ಎಲ್ಲಾ ಕ್ಷೇತ್ರಗಳಲ್ಲೂ ಹಳೆಯ ಗುರು ಶಿಷ್ಯರಾದ ದೇವೇಗೌಡರು ಹಾಗೂ ಸಿದ್ದರಾಮಯ್ಯ ಜೊತೆ ಜೊತೆಯಲ್ಲಿ ಪ್ರಚಾರ ನಡೆಸಲಿದ್ದಾರೆ.

    ಹೀಗೆ ಎರಡೂ ಪಕ್ಷದ ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡಿಸಲು ಇಂತಹ ಮಾಸ್ಟರ್ ಸ್ಟ್ರೋಕ್ ಒಂದನ್ನ ದೋಸ್ತಿ ಪಕ್ಷ ಪ್ರಯೋಗಿಸಿದೆ. ಮೈತ್ರಿ ಸೂತ್ರ ಪಾಲನೆಗಾಗಿ ದೇವೇಗೌಡರು ಹಾಗೂ ಸಿದ್ದರಾಮಯ್ಯ ತಮ್ಮ ಹಳೆ ಮುನಿಸು ಮರೆಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನೊಂದು ಕಡೆ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಸಹಾ ಜಂಟಿ ಪ್ರವಾಸ ಮಾಡಿ ಸರ್ಕಾರದ ಸಾಧನೆಯನ್ನ ಜನರ ಮುಂದಿಡಲಿದ್ದಾರೆ. ಸಿಎಂ ,ಡಿಸಿಎಂ ಜಂಟಿ ಪ್ರವಾಸಕ್ಕಿಂತಲೂ ಮಾಜಿ ಪಿಎಂ ಹಾಗೂ ಮಾಜಿ ಸಿಎಂ ಜಂಟಿ ಪ್ರವಾಸವೇ ಈಗ ರಾಜ್ಯ ರಾಜಕಾರಣದ ಬಹುಚರ್ಚಿತ ವಿಷಯವಾಗಿದೆ.

    ಎಲ್ಲೆಲ್ಲಿ ಪ್ರಚಾರ:
    ಗುರು-ಶಿಷ್ಯರ ಜಂಟಿ ಪ್ರಚಾರಕ್ಕೆ ಮುಹೂರ್ತ ನಿಗದಿಯಾಗಿದ್ದು, 5 ದಿನಗಳಲ್ಲಿ ಸಿದ್ದರಾಮಯ್ಯ ಹಾಗೂ ದೇವೇಗೌಡರಿಂದ ಜೊತೆ ಜೊತೆಯಾಗಿ ಕ್ಯಾಂಪೇನ್ ನಡೆಯಲಿದೆ. ಏಪ್ರಿಲ್ 9 ಮೈಸೂರು, ಏಪ್ರಿಲ್ 10 ತುಮಕೂರು, ಏಪ್ರಿಲ್ 11 ಹಾಸನ, ಏಪ್ರಿಲ್ 12 ಮಂಡ್ಯ, ಏಪ್ರಿಲ್ 13 ಬೆಂಗಳೂರಲ್ಲಿ ಸಮಾವೇಶ ಹಾಗೂ ರೋಡ್ ಶೋ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

  • ನೀರು ಕೊಟ್ಟಿಲ್ಲವೆಂಬ ಆರೋಪಕ್ಕೆ ದೇವೇಗೌಡ್ರು ಸ್ಪಷ್ಟನೆ

    ನೀರು ಕೊಟ್ಟಿಲ್ಲವೆಂಬ ಆರೋಪಕ್ಕೆ ದೇವೇಗೌಡ್ರು ಸ್ಪಷ್ಟನೆ

    ತುಮಕೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ತುಮಕೂರಿಗೆ ಹೇಮಾವತಿ ನೀರು ಕೊಟ್ಟಿಲ್ಲ ಅನ್ನೋ ಆರೋಪಕ್ಕೆ ಖುದ್ದು ದೇವೇಗೌಡರೇ ತಿರುಗೇಟು ಕೊಟ್ಟಿದ್ದಾರೆ.

    ತುಮಕೂರು ಮಾಧ್ಯಮ ಕೇಂದ್ರಕ್ಕೆ ಭೇಟಿ ಕೊಟ್ಟು ಮಾತನಾಡಿದ ಅವರು, ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸೋದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ರಾಷ್ಟ್ರದಲ್ಲಿ ಪ್ರಥಮ ಆದ್ಯತೆ ಕುಡಿಯುವ ನೀರಿಗೆ ಕೊಡೋದು ಎಂದು ಹೇಳಿದ್ದಾರೆ.

    ಕೆಲವರು ತಮ್ಮನ್ನು ವಿನಾಕಾರಣ ದೂಷಿಸುತ್ತಾರೆ. ಆದ್ರೆ ವಾಸ್ತವ ಬೇರೆ ಇದೆ. ಈ ಹಿಂದೆ ಇಂದಿರಾಗಾಂಧಿ ಇದ್ದಾಗ ನಾನು ನೀರಾವರಿ ಮಂತ್ರಿಯಾಗಿದ್ದೆನು. ಆ ಸಂದರ್ಭದಲ್ಲಿ ಎರಡು ದಿನ ಚರ್ಚೆಯಾಯ್ತು. ಇಡೀ ಹಿಂದೂಸ್ಥಾನದ ನೀರಾವರಿ ಖಾತೆ ಹೊಂದಿದ ಮಂತ್ರಿಗಳು ಸಭೆ ನಡೆಸಿದ್ರು.

    ನೀರಿನ ಬಳಕೆ ಹಾಗೂ ಎಲ್ಲಾ ನದಿಗಳ ಜೋಡಣೆ ಬಗ್ಗೆ ಅಭಿಪ್ರಾಯ ಕುರಿತು ಇಂದಿರಾಗಾಂಧಿ ಅವರು 2 ಕಮಿಟಿ ಮಾಡಿದ್ರು. ನದಿಗಳ ನೀರು ಎಲ್ಲಿ ಹೆಚ್ಚು ಪ್ರವಾಹ ಹರಿಯುತ್ತೋ, ಅಂತಹ ನದಿಗಳಿಂದ ನೀರು ಸಂಗ್ರಹದ ಬಗ್ಗೆ ಕಮಿಟಿಯಲ್ಲಿ ಚಿಂತನೆ ನಡೆದಿತ್ತು. ಆದ್ರೆ ತುಮಕೂರಿಗೂ ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಏನಿಲ್ಲ ಎಂದು ಗೌಡರು ಸ್ಪಷ್ಟನೆ ನೀಡಿದ್ದಾರೆ.

  • ಹಾಸನದಲ್ಲಿ ಬ್ರಿಟೀಷರ ಆಡಳಿತ, ಸ್ವಾತಂತ್ರ್ಯಕ್ಕೆ ಬಿಜೆಪಿಗೆ ಮತ ನೀಡಿ: ಎ.ಮಂಜು

    ಹಾಸನದಲ್ಲಿ ಬ್ರಿಟೀಷರ ಆಡಳಿತ, ಸ್ವಾತಂತ್ರ್ಯಕ್ಕೆ ಬಿಜೆಪಿಗೆ ಮತ ನೀಡಿ: ಎ.ಮಂಜು

    ಹಾಸನ: ಹಾಸನ ಜಿಲ್ಲೆಯಲ್ಲಿ ಬ್ರಿಟೀಷರ ಆಡಳಿತದಂತೆ ಅಧಿಕಾರ ನಡೆಯುತ್ತಿದೆ. ಹೀಗಾಗಿ ಜನರಿಗೆ ಸ್ವಾತಂತ್ರ್ಯ ಸಿಗಬೇಕೆಂಬ ಉದ್ದೇಶದಿಂದ ಸ್ಪರ್ಧೆ ಮಾಡಿದ್ದೇನೆ ಎಂದು ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಎ.ಮಂಜು ಹೇಳಿದ್ದಾರೆ.

    ಹಾಸನದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಎಚ್.ಡಿ.ದೇವೇಗೌಡರ ವಿರುದ್ಧವೇ ನಾನು 4.9 ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ದೆ. ಈಗ ಅಹಿಂದ ವರ್ಗದ ಜೊತೆಗೆ ಸೇರಿ ಕುಟುಂಬ ರಾಜಕಾರಣ ಕೊನೆಗಾಣಿಸಲು ತೀರ್ಮಾನ ಮಾಡಿದ್ದೇನೆ. ಅಧಿಕಾರ ಶಾಶ್ವತವಲ್ಲ. ಹೀಗಾಗಿ ಅಧಿಕಾರದಲ್ಲಿ ಇರುವಾಗ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ದೇವೇಗೌಡರು ಇಲ್ಲಿನ ಜನರಿಂದ ವೋಟ್ ಮಾತ್ರ ಹಾಕಿಸಿಕೊಳ್ಳುತ್ತಾರೆ. ಆದರೆ ಅಧಿಕಾರವನ್ನು ಮಕ್ಕಳು ಮೊಮ್ಮಕ್ಕಳು, ಸೊಸೆಯಂದಿರು, ಬೀಗರಿಗೆ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ದೇವೇಗೌಡರು ಹಾಸನ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಕೊಡುವ ಬದಲು ಪಕ್ಷದ ಕಾರ್ಯಕರ್ತರಿಗೆ ಕೊಡಬಹುದಿತ್ತು. ರಾಜಕೀಯವಾಗಿ ಇವರನ್ನು ತೆಗೆದು ಹಾಕಿದರು ಎಲ್ಲಾ ಪಕ್ಷಗಳ ಕೆಳಹಂತದ ನಾಯಕರು ಉಳಿಯುತ್ತಾರೆ ಎಂದ ಅವರು, ನಾನು ಸ್ಪರ್ಧಿಸದಂತೆ ದೊಡ್ಡ ದೊಡ್ಡವರಿಂದ ಒತ್ತಡ ಹಾಕಿಸಿದರು. ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುತ್ತೇವೆ. ಬೆಂಗಳೂರು ಉತ್ತರ ಲೋಕಸಭಾ ಟಿಕೆಟ್ ಕೊಡುತ್ತೇವೆ ಎಂದು ಆಮಿಷ ಒಡ್ಡಿದ್ದರು. ಆದರೆ ನಾನು ಒಪ್ಪಿಲ್ಲ. ಜಿಲ್ಲೆಯ ಜನರ ಪರವಾಗಿ ಹೋರಾಟ ಮಾಡಲು ಬಂದಿದ್ದೇನೆ ಎಂದು ತಿಳಿಸಿದರು.

    ಲೋಕಸಭಾ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಲಿದೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬರಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂಪ್ಪ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದರು.

  • ದೋಸ್ತಿ ಸರ್ಕಾರದಿಂದ ಸಿದ್ದರಾಮಯ್ಯ ಕಡೆಗಣನೆ!

    ದೋಸ್ತಿ ಸರ್ಕಾರದಿಂದ ಸಿದ್ದರಾಮಯ್ಯ ಕಡೆಗಣನೆ!

    ಬೆಂಗಳೂರು: ದೋಸ್ತಿ ಸರ್ಕಾರದ ಇಂದಿನ ಬೃಹತ್ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಡೆಗಣಿಸಲಾಗಿದ್ಯಾ ಎನ್ನುವ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

    ಇಂದು ಬೆಂಗಳೂರು ಹೊರವಲಯ ನೆಲಮಂಗಲ ಸಮೀಪ ಇರುವ ಮಾದಾವರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ದೋಸ್ತಿಗಳು ಜಂಟಿಯಾಗಿ ಬೃಹತ್ ಸಮಾವೇಶವನ್ನು ಆಯೋಜಿಸಿವೆ. ಈ ಕುರಿತು ಹಾಕಲಾದ ಬ್ಯಾನರ್, ಫ್ಲೆಕ್ಸ್ ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಇಲ್ಲ. ಹೀಗಾಗಿ ಅವರನ್ನು ಕಡೆಗಣಿಸಿದ್ದಾರಾ ಅಥವಾ ಬೇಕಂತಲೇ ಅವರ ಫೋಟೋ ಹಾಕಿಲ್ವಾ ಅನ್ನೋ ಅನುಮಾನ ಮೂಡಿದೆ.

    ಮಾದಾವರದ ಬಿಐಇಸಿ ಮೈದಾನದಲ್ಲಿ ಹಾಕಿರುವ ಯಾವುದೇ ಫ್ಲೆಕ್ಸ್ ನಲ್ಲಿ ಸಿದ್ದರಾಮಯ್ಯನವರ ಫೋಟೋ ಕಾಣಿಸುತ್ತಿಲ್ಲ. ಹೀಗಾಗಿ ಈ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದೆ ಸಿದ್ದರಾಮಯ್ಯರನ್ನು ಡಮ್ಮಿ ಎಂದು ಬಿಂಬಿಸುವ ಪ್ರಯತ್ನ ನಡೀತಿದ್ಯಾ ಅನ್ನೋ ಪ್ರಶ್ನೆ ಕೂಡ ಕಾಡುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯನ ಭಾವಚಿತ್ರ ಹಾಕದೇ ಇರಲು ಯಾರಾದ್ರೂ ಖಡಕ್ ಸೂಚನೆ ಕೊಟ್ಟಿದ್ದಾರಾ ಅಥವಾ ಕಣ್ತಪ್ಪಿನಿಂದ ಈ ಎಡವಟ್ಟು ಆಗಿದೆಯಾ ಎಂದು ಅಲ್ಲಿನ ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

    ಒಟ್ಟಿನಲ್ಲಿ ಇಂದು ಸಂಜೆ 4 ಗಂಟೆ ಸುಮಾರಿಗೆ ನಡೆಯುವ ಕಾರ್ಯಕ್ರಮದಲ್ಲಿ ರಾಹುಲ್ ಗಾಂದಿ ಹಾಗೂ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಪ್ರಧಾನಿ ಮೋದಿ ವಿರುದ್ಧ ಘರ್ಜಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 5 ಲಕ್ಷ ಕಾರ್ಯಕರ್ತರು ಬರುವ ನಿರೀಕ್ಷೆ ದೋಸ್ತಿ ಸರ್ಕಾರಕ್ಕಿದೆ.

  • ಎಚ್‍ಡಿಡಿ ಬಗ್ಗೆ ಗೌರವವಿದೆ, ನಂಬಿಕೆ ಇಲ್ಲ: ವಿ.ಶ್ರೀನಿವಾಸ್ ಪ್ರಸಾದ್

    ಎಚ್‍ಡಿಡಿ ಬಗ್ಗೆ ಗೌರವವಿದೆ, ನಂಬಿಕೆ ಇಲ್ಲ: ವಿ.ಶ್ರೀನಿವಾಸ್ ಪ್ರಸಾದ್

    – ಐಟಿ ರೇಡ್ ಮತದಾರರ ಮೇಲೆ ಪರಿಣಾಮ ಬಿರಲ್ಲ

    ಮೈಸೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಬಗ್ಗೆ ತುಂಬಾ ಗೌರವವಿದೆ. ಆದರೆ ನಂಬಿಕೆ ಇಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳ ದಾಳಿ ವಿಚಾರವಾಗಿ ದೇವೇಗೌಡರು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದರು. ರಾಜಕೀಯವಾಗಿ ಅವರು ನಂಬಿಕೆ ಉಳಿಸಿಕೊಂಡಿಲ್ಲ. ಮಾಜಿ ಪ್ರಧಾನಿಯಾಗಿರುವ ಎಚ್.ಡಿ.ದೇವೇಗೌಡ ಅವರು ರಾಷ್ಟದ ಹಿರಿಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ತಮ್ಮ ಸ್ಥಾನಕ್ಕೆ ತಕ್ಕಂತೆ ನಂಬಿಕೆ ಬರುವ ಹಾಗೆ ಜನರಲ್ಲಿ ಭಾವನೆ ಉಳಿಸಿಕೊಂಡಿಲ್ಲ ಎಂದರು.

    ಐಟಿ ಇಲಾಖೆಯ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಕೇಂದ್ರ ಸಂಸ್ಥೆಯಾಗಿರುವ ಐಟಿ ಇಲಾಖೆ ತನ್ನದೇ ಆದ ಜವಬ್ದಾರಿ ಹೊಂದಿದೆ. ಐಟಿ ಅಧಿಕಾರಿಗಳು ಮಾಹಿತಿ ಆಧರಿಸಿ ದಾಳಿ ಮಾಡುತ್ತಾರೆ. ಅದನ್ನು ಪ್ರಶ್ನಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡುವುದು ಸರಿಯಲ್ಲ. ಅದರಲ್ಲೂ ಮುಖ್ಯಮಂತ್ರಿ ಸ್ಥಾನದಲ್ಲಿರುವ ಎಚ್.ಡಿ.ಕುಮಾರಸ್ವಾಮಿ ಪ್ರತಿಭಟನೆ ಮಾಡಿದ್ದು ಅಕ್ಷಮ್ಯ ಎಂದರು.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ನಾಯಕರು ಐಟಿ ದಾಳಿ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ಇಲಾಖೆಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದು ಸೂಕ್ತವಲ್ಲ. ಐಟಿ ರೇಡ್ ಮತದಾರರ ಮೇಲೆ ಪರಿಣಾಮ ಬಿರುವುದಿಲ್ಲ ಎಂದು ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.

  • ನಮ್ಮಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಎಂಬ ಭೇದಭಾವವಿಲ್ಲ: ಬಿಎಸ್‍ವೈ

    ನಮ್ಮಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಎಂಬ ಭೇದಭಾವವಿಲ್ಲ: ಬಿಎಸ್‍ವೈ

    – ತೇಜಸ್ವಿನಿ, ರಮೇಶ್ ಕತ್ತಿಗೆ ಸೂಕ್ತ ಸ್ಥಾನಮಾನ ಕೊಡಲಾಗುತ್ತೆ
    – ಮೊದಲು ತುಮಕೂರಿನಲ್ಲಿ ಗೆದ್ದು ಬನ್ನಿ, ಆಮೇಲೆ ಮಾತಾಡಿ

    ಬೆಂಗಳೂರು: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ರಮೇಶ್ ಕತ್ತಿ ಅವರಿಗೆ ಟಿಕೆಟ್ ಕೊಡುವಲ್ಲಿ ವ್ಯತ್ಯಾಸವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ.

    ನಗರದ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಬಿಜೆಪಿ, ಆರ್‍ಎಸ್‍ಎಸ್ ಅಂತ ಭೇದಭಾವ ಮಾಡುವುದಿಲ್ಲ. ಟಿಕೆಟ್ ಹಂಚಿಕೆಯಲ್ಲಿ ಚಿಕ್ಕೋಡಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ವ್ಯತ್ಯಾಸವಾಗಿದೆ. ಇದರ ಹೊರತಾಗಿ 26 ಕ್ಷೇತ್ರಗಳಲ್ಲಿ ರಾಜ್ಯ ಬಿಜೆಪಿ ಘಟಕ ಶಿಫಾರಸು ಮಾಡಿರುವ ನಾಯಕರಿಗೆ ಟಿಕೆಟ್ ಸಿಕ್ಕಿದೆ. ಲೋಕಸಭಾ ಟಿಕೆಟ್ ವಂಚಿತರಾಗಿರುವ ತೇಜಸ್ವಿನಿ ಅನಂತ್‍ಕುಮಾರ್ ಮತ್ತು ರಮೇಶ್ ಕತ್ತಿ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕೊಡಲಾಗುತ್ತದೆ ಎಂದು ತಿಳಿಸಿದರು.

    ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತಲೆ ಎತ್ತಲು ಬಿಡುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಆದರೆ ಅವರು ತಮ್ಮ ಕುಟುಂಬ ಮಕ್ಕಳು, ಮೊಮ್ಮಕ್ಕಳಿಗೆ ಆದ್ಯತೆ ಕೊಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಒಡಕಿಗೆ ಕಾರಣವಾದರು. ತುಮಕೂರಿನಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಇಬ್ಬರು ಕಾಂಗ್ರೆಸ್ ಮುಖಂಡರ ಕೈಕಾಲು ಕಟ್ಟಿ ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಮಾಡಿದರು. ಮೊದಲು ತುಮಕೂರಿನಲ್ಲಿ ಗೆದ್ದು ಬನ್ನಿ. ಆಮೇಲೆ ಮಾತಾಡಿ ಎಂದು ಬಿ.ಎಸ್.ಯಡಿಯೂರಪ್ಪ, ದೇವೇಗೌಡರಿಗೆ ಸವಾಲು ಹಾಕಿದರು.

    ಎಂತಹ ಅತಿರಥ ಮಹಾರಥರೇ ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಕಿತ್ತು ಹಾಕಲು ಪ್ರಯತ್ನ ಪಟ್ಟರು. ಆದರೆ ಅವರಿಂದ ಏನು ಮಾಡಲಿಲ್ಲಕ್ಕೆ ಆಗಲಿಲ್ಲ. ನೀವು ಭರವಸೆಗಳ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಸೀಟು ತೆಗೆದುಕೊಂಡಿದ್ದೀರಿ. ಕರ್ನಾಟಕದಲ್ಲಿ ನಿಮ್ಮ ವಿಳಾಸವೇ ಇಲ್ಲ. ಅಂತಹದ್ರಲ್ಲಿ ಬಿಜೆಪಿ ಅಡ್ರೆಸ್ ಇಲ್ಲದಂತೆ ಮಾಡುತ್ತೇವೆ ಎನ್ನುವುದು ಹಾಸ್ಯಾಸ್ಪದವಾಗಿದೆ. ಹಗುರ ಮಾತು ಬಿಟ್ಟು ಮಾಜಿ ಪ್ರಧಾನಿ ಹಾಗೆ ನಡೆದುಕೊಳ್ಳಿ ಎಂದು ಎಚ್.ಡಿ.ದೇವೇಗೌಡರಿಗೆ ತಿರುಗೇಟು ನೀಡಿದರು.

    ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಹ್ವಾನ ಕೊಟ್ಟಿದ್ದರು ಎಂದು ಎಚ್.ಡಿ.ದೇವೇಗೌಡರು ಹೇಳಿದ್ದಾರೆ. ಇಷ್ಟು ದಿನ ಯಾಕೆ ಇದರ ಬಗ್ಗೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.

  • ಕೃಷ್ಣ ಬೈರೇಗೌಡರನ್ನ ಗೆಲ್ಲಿಸೋ ಜವಾಬ್ದಾರಿ ನಮ್ಮದು: ಎಚ್‍ಡಿಡಿ

    ಕೃಷ್ಣ ಬೈರೇಗೌಡರನ್ನ ಗೆಲ್ಲಿಸೋ ಜವಾಬ್ದಾರಿ ನಮ್ಮದು: ಎಚ್‍ಡಿಡಿ

    ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಾವು ತೆಗೆದುಕೊಂಡಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

    ನಗರದ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಅವರು, ಉಡುಪಿ-ಚಿಕ್ಕಮಗಳೂರು, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಮೈತ್ರಿ ಪಕ್ಷದ ಅಭ್ಯರ್ಥಿಗಳು ನಮ್ಮವರೇ ಎಂದು ತಿಳಿದಿದ್ದೇವೆ. ಹೀಗಾಗಿ ಅವರ ಗೆಲುವಿಗೆ ನಮ್ಮ ಪಕ್ಷದ ಕಾರ್ಯಕರ್ತರು ಚಾಚೂ ತಪ್ಪದೇ ಕೆಲಸ ಮಾಡುತ್ತಾರೆ. ಈ ನಿಟ್ಟಿನಲ್ಲಿ ನಾವು ಕಾಯ-ವಾಚಾ ಕೆಲಸ ಮಾಡ್ತೇವೆ ಎಂದು ತಿಳಿಸಿದರು.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಎರಡು ಪಕ್ಷದ ನಾಯಕರು ಪರಸ್ಪರ ಸಹಕಾರ ನೀಡುತ್ತಿದ್ದಾರೆ. ಲೋಕಸಭಾ ಚುನಾವಣೆ ವಿಚಾರವಾಗಿ ನಾಳೆ ಎರಡು ಪಕ್ಷಗಳ ಅಧ್ಯಕ್ಷರು, ಮುಖಂಡರು ಸಭೆ ನಡೆಸುತ್ತೇವೆ. ಜೆಡಿಎಸ್ ಕಚೇರಿಯಲ್ಲಿ ಇಂದು ಕೂಡ ಸಭೆ ನಡೆಸಿದ್ದು, ಸಾಕಷ್ಟು ಜನರು ಬಂದಿದ್ದಾರೆ ಎಂದರು.

    ಸಭೆ ಕುಂಟ್ಕೊಂಡು ಬಂದ, ನಡ್ಕೊಂಡು ಬಂದ ಎಂದು ಏನು ಬೇಕಾದ್ರು ಹಾಕಿಕೊಳ್ಳಿ. ಆದರೆ ನಾವು ಮಾತ್ರ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಎಚ್.ಡಿ.ದೇವೇಗೌಡ ಅವರು ಮಾಧ್ಯಮಗಳ ವಿರುದ್ಧ ಗುಡುಗಿದರು.

    ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಶಾಸಕರು ಹಾಗೂ ಮುಖಂಡರು ಭಾಗಿಯಾಗಿದ್ದರು. ಜೊತೆಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರು ಕೂಡ ಉಪಸ್ಥಿತರಿದ್ದರು.

  • ಎಚ್‍ಡಿಡಿ ಮತ್ತೊಮ್ಮೆ ಪ್ರಧಾನಿ? ಎಂ.ಟಿ.ಕೃಷ್ಣಪ್ಪ

    ಎಚ್‍ಡಿಡಿ ಮತ್ತೊಮ್ಮೆ ಪ್ರಧಾನಿ? ಎಂ.ಟಿ.ಕೃಷ್ಣಪ್ಪ

    ತುಮಕೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ದೈವಭಕ್ತರು. ಹೀಗಾಗಿ ದೈವ ಶಕ್ತಿಯಿಂದ ದೆಹಲಿಯಲ್ಲಿ ಉನ್ನತ ಸ್ಥಾನ ಅಲಂಕರಿಸಲಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಪರೋಕ್ಷವಾಗಿ ದೇವೇಗೌಡರು ಪ್ರಧಾನಿ ಆಗಬಹುದು ಎಂದು ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಮಾಜಿ ಶಾಸಕರು, ಎಚ್.ಡಿ.ದೇವೇಗೌಡ ಅವರು ತುಮಕೂರು ಕ್ಷೇತ್ರದಲ್ಲಿ ಹೆಚ್ಚು ಮತಗಳ ಅಂತರದಲ್ಲಿ ಜಯಗಳಿಸಿ ಸಂಸತ್‍ಗೆ ಹೋದರೆ ಒಂದು ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿದೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕಾರ್ಯಕರ್ತರು ದೇವೇಗೌಡರ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿಕೊಂಡರು.

    ಹೇಮಾವತಿ ನದಿಯ ನೀರು ಹಂಚಿಕೆ ವಿಚಾರದಲ್ಲಿ ದೇವೇಗೌಡರಿಂದ ತುಮಕೂರಿಗೆ ಯಾವುದೇ ರೀತಿ ಅನ್ಯಾಯವಾಗಿಲ್ಲ. ಹೇಮಾವತಿಯ ನೀರು ಸರಿಯಾಗಿ ಹಂಚಿಕೆ ಆಗುತ್ತಿರಲಿಲ್ಲ. ಹೀಗಾಗಿ ಹೋರಾಟ ಮಾಡುತ್ತಿದ್ದೇವು. ಸುಖಾಸುಮ್ಮನೆ ಎಚ್.ಡಿ.ದೇವೇಗೌಡರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.

    ಹೇಮಾವತಿ ನದಿ ನೀರು ಹಂಚಿಕೆಯಲ್ಲಿ ಹಾಸನದ ರಾಜಕಾರಣಿಗಳಿಂದಲೂ ಯಾವುದೇ ರೀತಿಯ ತೊಂದರೆ ಆಗುತ್ತಿರಲಿಲ್ಲ. ಎರಡು ಜಿಲ್ಲೆಯ ಅಧಿಕಾರಿಗಳೇ ನಿರ್ಲಕ್ಷ್ಯ ತೋರುತ್ತಿದ್ದರು. ಹೀಗಾಗಿ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೆವು. ಈಗ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಯಥೇಚ್ಛವಾಗಿ ಹರಿಯುತ್ತಿದೆ ಎಂದು ಎಂ.ಟಿ.ಕೃಷ್ಣಪ್ಪ ಅವರು, ದೇವೇಗೌಡರನ್ನು ಸಮರ್ಥಿಸಿಕೊಂಡರು.