Tag: ಎಚ್.ಡಿ

  • ಬೆಂಗಳೂರು ಉತ್ತರವನ್ನು ಕಾಂಗ್ರೆಸ್ಸಿಗೆ ಗಿಫ್ಟ್ ಕೊಟ್ಟ ಜೆಡಿಎಸ್!

    ಬೆಂಗಳೂರು ಉತ್ತರವನ್ನು ಕಾಂಗ್ರೆಸ್ಸಿಗೆ ಗಿಫ್ಟ್ ಕೊಟ್ಟ ಜೆಡಿಎಸ್!

    – ದೇವೇಗೌಡರಿಗೆ ಧನ್ಯವಾದ ತಿಳಿಸಿದ ವೇಣುಗೋಪಾಲ್
    – ಕಾಂಗ್ರೆಸ್ಸಿನಿಂದ ಬಿಎಲ್ ಶಂಕರ್ ಕಣಕ್ಕೆ?

    ಬೆಂಗಳೂರು: ಜೆಡಿಎಸ್ ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ಬಿಟ್ಟಕೊಟ್ಟಿದೆ. ಈ ಮೂಲಕ ಜೆಡಿಎಸ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 8ರ ಬದಲಾಗಿ 7 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

    ಬೆಂಗಳೂರು ಉತ್ತರ ಕ್ಷೇತ್ರವನ್ನು ಬಿಟ್ಟುಕೊಟ್ಟ ವಿಚಾರದ ಬಗ್ಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ರಾತ್ರಿ 1 ಗಂಟೆಯ ವೇಳೆ ಟ್ವೀಟ್ ಮಾಡಿ  ದೇವೇಗೌಡರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಎಲ್ ಶಂಕರ್ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

    ಮೈತ್ರಿ ಸೂತ್ರದ ಪ್ರಕಾರ ಜೆಡಿಎಸ್ಸಿಗೆ 8, ಕಾಂಗ್ರೆಸ್ಸಿಗೆ 20 ಕ್ಷೇತ್ರಗಳು ಹಂಚಿಕೆ ಆಗಿತ್ತು. 7 ಕ್ಷೇತ್ರಗಳ ಪೈಕಿ ಬೆಂಗಳೂರು ಉತ್ತರದ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಜೆಡಿಎಸ್ ಹರಸಾಹಸ ಪಡುತಿತ್ತು. ಕೇಂದ್ರ ಸಚಿವ ಡಿವಿಎಸ್ ಎದುರಿಸಲು ಗಟ್ಟಿ ಅಭ್ಯರ್ಥಿಗಳು ದಳದಲ್ಲಿ ಇಲ್ಲದ ಕಾರಣ ಯಾರು ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಕುತೂಹಲ ಮೂಡಿತ್ತು.

    ಈ ನಡುವೆ ದೇವೇಗೌಡರು ತುಮಕೂರು ಮತ್ತು ಬೆಂಗಳೂರು ಉತ್ತರದಿಂದಲೂ ಸ್ಪರ್ಧೆ ಮಾಡುವ ಚಿಂತನೆ ನಡೆದಿದೆ ಎನ್ನುವ ಸುದ್ದಿಯೂ ಬಂದಿತ್ತು. ಸ್ಪರ್ಧೆಯ ವಿಚಾರ ಬಂದಾಗ, ಈಗಾಗಲೇ ನಮ್ಮ ವಿರುದ್ಧ ಕುಟುಂಬ ರಾಜಕೀಯದ ಆರೋಪವಿದೆ. ನಾನು ಎರಡು ಕ್ಷೇತ್ರದಿಂದ ಸ್ಪರ್ಧಿಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅಷ್ಟೇ ಅಲ್ಲದೇ ತುಮಕೂರಿನಲ್ಲಿ ಹಿನ್ನಡೆ ಆಗಬಹುದು. ಇತ್ತ ಬೆಂಗಳೂರಿನ ಕಾಂಗ್ರೆಸ್ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಶಿಷ್ಯರಾಗಿದ್ದಾರೆ. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವುದು ಕಷ್ಟವಾಗುತ್ತದೆ ಎಂದು ಎಚ್.ಡಿ.ದೇವೇಗೌಡ ಅವರು ತಮ್ಮ ಅಭಿಪ್ರಾಯವನ್ನು ಇತರ ನಾಯಕರಿಗೆ ತಿಳಿಸಿದ್ದರು. ಕೊನೆಗೆ ಅಭ್ಯರ್ಥಿಗಳು ಸಿಗದೇ ಇದ್ದಾಗ ಜೆಡಿಎಸ್ ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟಿದೆ.

    ಮಾಜಿ ಶಿಷ್ಯ, ಕಾಂಗ್ರೆಸ್‍ನ ಬಿ.ಎಲ್.ಶಂಕರ್ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ಲಾನ್ ರೂಪಿಸಿದ್ದರು. ಬಿ.ಎಲ್.ಶಂಕರ್ ಅವರು ಸ್ಪರ್ಧೆಗೆ ಒಪ್ಪಿಗೆಯನ್ನೂ ಸೂಚಿಸಿದ್ದರು. ಆದರೆ ಜೆಡಿಎಸ್ ಚಿಹ್ನೆ ಅಡಿ ಸ್ಪರ್ಧಿಸಲು ಹಿಂದೇಟು ಹಾಕಿದ್ದರು.

    ನಾನು ಚುನಾವಣೆಗೆ ಸ್ಪರ್ಧಿಸಲು ಸಿದ್ಧ. ಆದರೆ ಜೆಡಿಎಸ್ ಚಿಹ್ನೆಯ ಅಡಿ ಸ್ಪರ್ಧಿಸುವುದಿಲ್ಲ. ಸ್ಪರ್ಧೆ ಮಾಡಿದರೆ ನಾನು ಕಾಂಗ್ರೆಸ್ ಚಿಹ್ನೆಯ ಅಡಿಯಲ್ಲೇ ಕಣಕ್ಕೆ ಇಳಿಯುತ್ತೇನೆ ಎಂದು ದೋಸ್ತಿ ನಾಯಕರಿಗೆ ಶಂಕರ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರು ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿತ್ತು.

    ಜೆಡಿಎಸ್‍ಗೆ ಭಯ ಯಾಕೆ?
    ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ, ಕೇಂದ್ರ ಸಚಿವ ಸದಾನಂದ ಗೌಡ ಅವರು ಈ ಬಾರಿಯೂ ಈ ಕ್ಷೇತ್ರದಿಂದಲೇ ಕಣಕ್ಕೆ ಇಳಿಯಲಿದ್ದಾರೆ. ಕಳೆದ ಚುನಾವಣೆಯಲ್ಲಿ ಡಿವಿಎಸ್ 2.29 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು. ಡಿವಿಎಸ್ 7,18,326 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಸಿ.ನಾರಾಯಣ ಸ್ವಾಮಿ 4,88,562 ಮತಗಳನ್ನು ಪಡೆದಿದ್ದರು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಅಬ್ದುಲ್ ನಜೀಂ ಕೇವಲ 92,681 ಮತಗಳನ್ನು ಪಡೆದಿದ್ದರು. 1996ರ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ನಾರಾಯಣ ಸ್ವಾಮಿ ಗೆಲುವು ಪಡೆದಿದಿದ್ದರು. ನಂತರ ನಡೆದ ಎರಡು ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಜಾಫರ್ ಷರೀಫ್ ಆಯ್ಕೆ ಆಗಿದ್ದರು. 2004, 2009, 2014ರವರೆಗೆ ನಡೆದ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಬಿಜೆಪಿ ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿತ್ತು.

     

  • ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್ ನೇಮಕ: ಲೋಕಲ್ ಚುನಾವಣೆ ಮೈತ್ರಿಗೆ ಎಚ್‍ಡಿಡಿ ಟ್ವಿಸ್ಟ್

    ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್ ನೇಮಕ: ಲೋಕಲ್ ಚುನಾವಣೆ ಮೈತ್ರಿಗೆ ಎಚ್‍ಡಿಡಿ ಟ್ವಿಸ್ಟ್

    ಬೆಂಗಳೂರು: ಮಾಜಿ ಸಚಿವ ಎಚ್.ವಿಶ್ವನಾಥ್ ಅವರನ್ನು ಸರ್ವಾನುಮತದಿಂದ ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದೇವೆ ಎಂದು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

    ಪಕ್ಷದ ಕಚೇರಿಯಾದ ಜೆಪಿ ಭವನದಲ್ಲಿ ಜೆಡಿಎಸ್ ಬಾವುಟವನ್ನು ಎಚ್.ಡಿ.ಕುಮಾರಸ್ವಾಮಿ ಅವರು ಎಚ್.ವಿಶ್ವನಾಥ್ ಅವರಿಗೆ ಹಸ್ತಾಂತರಿಸಿ, ಅಧಿಕಾರ ಒಪ್ಪಿಸಿದರು.

    ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಒಬ್ಬರೇ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುವುದು ಕಷ್ಟ. ಒಂದೂವರೆ ತಿಂಗಳ ಹಿಂದೆಯೇ ಕುಮಾರಸ್ವಾಮಿಯೂ ರಾಜ್ಯಾಧ್ಯಕ್ಷ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸುವಂತೆ ಕೇಳಿದ್ದರು ಎಂದು ಹೇಳಿದರು.

    ಹಿಂದೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎಂ.ಪಿ.ಪ್ರಕಾಶ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಒಬ್ಬ ವ್ಯಕ್ತಿಗೆ ಒಂದೇ ಸ್ಥಾನ ಎನ್ನುವ ಉದ್ದೇಶದಿಂದ ರಾಜ್ಯಾಧ್ಯಕ್ಷ ಜವಾಬ್ದಾರಿಯನ್ನು ಎಚ್.ವಿಶ್ವನಾಥ್ ಅವರಿಗೆ ವಹಿಸಲಾಗಿದೆ ಎಂದರು.

    ಚುನಾವಣೆ ಮೈತ್ರಿಗೆ ಟ್ವಿಸ್ಟ್:
    ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕಷ್ಟ. ಕಾಂಗ್ರೆಸ್ ಜೊತೆಗೆ ನಮಗೆ ಒಡಂಬಡಿಕೆ ಇದೆ. ಆದರೆ ಸ್ಥಾನಗಳ ಸಂಚಿಕೆಯಲ್ಲಿ ಅವರಿಗೂ ಕಷ್ಟವಾಗುತ್ತದೆ. ಕಾಂಗ್ರೆಸ್ ನಾಯಕರು ಚರ್ಚೆ ಮಾಡಿದ್ದಾರೆ. ಅದರಲ್ಲಿ ಯಾವುದೇ ದೋಷವಿಲ್ಲ. ನಮ್ಮ ಪಕ್ಷವು ಪ್ರತ್ಯೇಕವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಲಿದೆ. ಚುನಾವಣೆಯಲ್ಲಿ ದೋಸ್ತಿ ಪಕ್ಷಗಳ ಮಧ್ಯೆ ತಿಕ್ಕಾಟ ಇರುವುದಿಲ್ಲ ಎಂದು ಟ್ವಿಸ್ಟ್ ನೀಡಿದ್ದಾರೆ.

    ಯುವಕರಿಗೆ ಪಕ್ಷದಲ್ಲಿ ಮಣೆ:
    ಪಕ್ಷದ ಸಂಘಟನೆ ಉದ್ದೇಶದಿಂದ ಹೊಸದಾಗಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಸಂಪೂರ್ಣವಾಗಿ ಯುವಕರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಜೊತೆಗೆ ಹಿಂದುಳಿದವರು, ಮುಸ್ಲಿಂ ಸೇರಿದಂತೆ ಇತರರಿಗೂ ಸ್ಥಾನ, ಜವಾಬ್ದಾರಿ ನೀಡಲಾಗುತ್ತದೆ. ಪಕ್ಷದ ಹಿರಿಯರನ್ನು ನಾವು ಕಡೆಗಣಿಸುತ್ತಿಲ್ಲ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಮುಂದುವರಿಯುತ್ತೇವೆ. ಮುಂದಿನ 10 ದಿನಗಳಲ್ಲಿ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ರಾಷ್ಟ್ರೀಯ ಪಕ್ಷವೊಂದು ಸಾಲಮನ್ನಾ ವಿಚಾರದಲ್ಲಿ ಬೇರೆ ಅರ್ಥ ಕಲ್ಪಿಸಿ, ಗೊಂದಲ ಸೃಷ್ಟಿಸುತ್ತಿದೆ ಎಂದು ಬಿಜೆಪಿ ವಿರುದ್ಧ ದೂರಿದ ಅವರು, ಕುಮಾರಸ್ವಾಮಿ ಬಜೆಟ್ ಮೂರು ಜಿಲ್ಲೆಗೆ ಸೀಮಿತವಾಗಿಲ್ಲ. ಇಂತಹ ಆರೋಪ ತೊಡೆಯಲು ಕಿರುಹೊತ್ತಿಗೆ ಬಿಡುಗಡೆ ಮಾಡಲಾಗುತ್ತದೆ. ಅದನ್ನು ರಾಜ್ಯದ ಮನೆ ಮನೆಗಳಿಗೆ ಹಂಚಿ ಸತ್ಯವನ್ನು ಸಾಬೀತು ಮಾಡುತ್ತೇವೆ ಎಂದು ತಿರುಗೇಟು ನೀಡಿದರು.

    ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ 5 ವರ್ಷ, ನಾನು ಒಂದು ವರ್ಷ ಹಾಗೂ ಕುಮಾರಸ್ವಾಮಿ 20 ತಿಂಗಳು ಮುಖ್ಯಮಂತ್ರಿ ಆಗಿದ್ದೇವೆ. ಯಾರು ಉತ್ತರ ಕರ್ನಾಟಕಕ್ಕೆ ಹೆಚ್ಚು ಕೊಡುಗೆ ನೀಡಿದ್ದಾರೆಂದು ವಿಧಾನಸಭೆಯಲ್ಲಿ ಚರ್ಚೆಯಾಗಲಿ ಎಂದು ಸವಾಲು ಹಾಕಿದರು.