Tag: ಎಚ್.ಎಸ್ ಪ್ರಕಾಶ್

  • ಮಾಜಿ ಶಾಸಕ ಎಚ್.ಎಸ್ ಪ್ರಕಾಶ್ ಅಂತಿಮ ದರ್ಶನ ಪಡೆದ ಸಿಎಂ ಕುಮಾರಸ್ವಾಮಿ

    ಮಾಜಿ ಶಾಸಕ ಎಚ್.ಎಸ್ ಪ್ರಕಾಶ್ ಅಂತಿಮ ದರ್ಶನ ಪಡೆದ ಸಿಎಂ ಕುಮಾರಸ್ವಾಮಿ

    ಹಾಸನ: ಮಂಗಳವಾರದಂದು ನಿಧನರಾದ ಮಾಜಿ ಶಾಸಕ ಎಚ್.ಎಸ್ ಪ್ರಕಾಶ್ ಅವರ ಪ್ರಾರ್ಥಿವ ಶರೀರದ ಅಂತಿಮ ದರ್ಶನವನ್ನು ಸಿಎಂ ಕುಮಾರಸ್ವಾಮಿ ಅವರು ಪಡೆದಿದ್ದಾರೆ.

    ಬೆಳಗ್ಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹಾಸನಕ್ಕೆ ಆಗಮಿಸಿದ ಸಿಎಂ, ಅಗಲಿದ ಹಿರಿಯ ನಾಯಕನಿಗೆ ಕೊನೆಯ ನಮನ ಸಲ್ಲಿಸಿದ್ದಾರೆ. ಈ ವೇಳೆ ಸಿಎಂ ಅವರೊಂದಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಸಚಿವ ಹೆಚ್.ಡಿ.ರೇವಣ್ಣ ಭಾಗಿಯಾಗಿದ್ದರು.

    ಎಚ್.ಎಸ್ ಪ್ರಕಾಶ್ ಅವರು ಒಟ್ಟು 6 ಬಾರಿ ಹಾಸನ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು. ಅದರಲ್ಲಿ 4 ಬಾರಿ ಗೆಲುವನ್ನು ಸಾಧಿಸಿದ್ದರು. ಮೊದಲ ಬಾರಿಗೆ 1994ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ 2004 ರಿಂದ 2018 ರ ವರೆಗೆ ಚುನಾವಣೆಯಲ್ಲಿ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಸೌಮ್ಯ ಸ್ವಭಾವದ ರಾಜಕಾರಣಿಯಾಗಿದ್ದ ಪ್ರಕಾಶ್, ಜನತಾ ದಳ ಪರಿವಾರದ ನಾಯಕರಾದ ದೇವೇಗೌಡರು, ಸಿದ್ದರಾಮಯ್ಯ ಅವರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಈಗ ಎಚ್.ಎಸ್ ಪ್ರಕಾಶ್ ಅವರ ನಿಧನದಿಂದ ಜೆಡಿಎಸ್ ಪಕ್ಷ ಓರ್ವ ಉತ್ತಮ ರಾಜಕಾರಣಿಯನ್ನು ಕಳೆದುಕೊಂಡಿದೆ.

    ಮಾಜಿ ಶಾಸಕ ಎಚ್.ಎಸ್ ಪ್ರಕಾಶ್ ಅವರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನದ ನಂತರ, ಶಾಂತಿ ಗ್ರಾಮ ಹೋಬಳಿ ಕೆ. ಆಲದಹಳ್ಳಿಯ ಅವರ ಜಮೀನಿನಲ್ಲಿ ನೆರವೇರಲಿದೆ. ಇದಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೆಡಿಎಸ್ ಮಾಜಿ ಶಾಸಕ ಎಚ್.ಎಸ್ ಪ್ರಕಾಶ್ ವಿಧಿವಶ

    ಜೆಡಿಎಸ್ ಮಾಜಿ ಶಾಸಕ ಎಚ್.ಎಸ್ ಪ್ರಕಾಶ್ ವಿಧಿವಶ

    ಹಾಸನ: ಜೆಡಿಎಸ್ ಮಾಜಿ ಶಾಸಕ ಎಚ್.ಎಸ್ ಪ್ರಕಾಶ್ ಅನಾರೋಗ್ಯದಿಂದ ನಿಧನರಾಗಿದ್ದಾರೆ.

    ಎಚ್.ಎಸ್ ಪ್ರಕಾಶ್ ಇತ್ತೀಚೆಗೆ ಲಿವರ್ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಪ್ರಕಾಶ್ ಕೃತಕ ಉಸಿರಾಟದಲ್ಲಿದ್ದರು. ಇಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಅಪಾರ ಅಭಿಮಾನಿಗಳು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

    ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಪ್ರಕಾಶ್ ಅವರು ಆಪ್ತರಾಗಿದ್ದರು. ಪ್ರಕಾಶ್ 4 ಬಾರಿ ಹಾಸನ ಕ್ಷೇತ್ರದಿಂದ ಶಾಸಕರಾಗಿದ್ದರು. ಅಲ್ಲದೇ ಕಳೆದ ಬಾರಿ ವಿಧಾನಸಭಾ ಚುಣಾವಣೆಯಲ್ಲಿ ಸೋಲು ಅನುಭವಿಸಿದ್ದರು. ಪ್ರಕಾಶ್ ಅವರು ಜೆಡಿಎಸ್ ಪಕ್ಷದಿಂದ ಸತತವಾಗಿ ಆಯ್ಕೆಯಾಗಿದ್ದರು. ಪ್ರಕಾಶ್ ಅವರು 1994, 2004, 2008 ಹಾಗೂ 2013ರಲ್ಲಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ನಂತರ 2018ರಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ ಗೌಡ ವಿರುದ್ಧ ಸೋಲು ಅನುಭವಿಸಿದ್ದಾರೆ.

    ಎಚ್.ಎಸ್ ಪ್ರಕಾಶ್ ಅವರ ಮೃತದೇಹ ಇಂದು ಹಾಸನಕ್ಕೆ ರವಾನಿಸುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv