ಕೊಪ್ಪಳ: ಕಳೆದ ಬಾರಿ ಬಿಜೆಪಿಯವರು ಹಂದಿ, ಹಸು, ನಾಯಿ, ನರಿಗಳನ್ನು ಖರೀದಿಸುವಂತೆ ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚನೆ ಮಾಡಿದ್ದಾರೆ. ಈಗ ಆ ಶಾಸಕರೇ ಮತ್ತೆ ಕಾಂಗ್ರೆಸ್ ಬಾಗಿಲು ತಟ್ಟುತಿದ್ದಾರೆ. ಅವರನ್ನು ಪುನಃ ಕಾಂಗ್ರೆಸ್‍ಗೆ ಸೇರಿಸಿಕೊಳ್ಳುವ ಮಾತಿಲ್ಲ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಣ್ಣ ನೋಡಿ ಓಡಿ ಹೋಗಿರುವವರನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್‍ನಲ್ಲಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಸಮಯ ಸಾಧಕರಿಗೆ ಪಕ್ಷದಲ್ಲಿ ಜಾಗವಿಲ್ಲ ಎಂದು ಹೇಳಿದರು.
ಸಂವಿಧಾನಕ್ಕೆ ಅಪಮಾನ, ಬದಲಾವಣೆಗಳಂತಹ ಮಾತುಗಳು ಕೇಳಿಬರುತ್ತಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರಾದರೂ ಸಂವಿಧಾನ ಬದಲಾವಣೆ ಮಾಡಿದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಕ್ತದೋಕುಳಿ ಹರಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ನಿಷೇಧ: ಕಮಲ್ ಪಂತ್
ಚಿತ್ರದುರ್ಗ: ಬ್ರಿಟಿಷರ ಕಪಿಮುಷ್ಠಿಯಿಂದ ಭಾರತವನ್ನು ಮುಕ್ತಿಗೊಳಿಸಿದ ಕಾಂಗ್ರೆಸ್ ಪಕ್ಷ ಜನಮಾನಸದಲ್ಲಿ ಗಟ್ಟಿಯಾಗಿ ಬೇರೂರಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.
ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂದನೂರು, ಮುತ್ತಗದೂರು, ಬಿ.ದುರ್ಗ, ಗುಂಜಿಗನೂರು ಗ್ರಾಮಗಳಲ್ಲಿ ಇಂದು ನಡೆದ ಕಾಂಗ್ರೆಸ್ ಗ್ರಾಮ ಪಂಚಾಯತಿ ಸಮಿತಿ ರಚನಾ ಸಭೆಯಲ್ಲಿ (ಪ್ರಾಜೆಕ್ಟ್ ಪ್ರಜಾಪ್ರತಿನಿಧಿ) ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ 70 ವರ್ಷ ಆಡಳಿತ ನಡೆಸಲು ಜನರು ಅವಕಾಶ ನೀಡಿದ್ದಾರೆ. ಈ ವೇಳೆ ಮಾಜಿ ಪ್ರಧಾನಿಗಳಾದ ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್, ಡಾ.ಮನಮೋಹನ್ ಸಿಂಗ್ ಹೀಗೆ ಅನೇಕ ಮಹನೀಯರು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಶ್ರಮಿಸಿದ್ದಾರೆ ಎಂದರು.
ಕಾಂಗ್ರೆಸ್ ದೇಶಕ್ಕೆ ಹಿತ ಎಂಬ ಬಿರುದನ್ನು ಜನರಿಂದ ಪಡೆದ ಏಕೈಕ ಪಕ್ಷ, ಇದು ನಮ್ಮೆಲ್ಲರ ಹೆಗ್ಗಳಿಕೆ. ಪ್ರಸ್ತುತ ದೇಶ, ರಾಜ್ಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇಂಧನ ಬೆಲೆ 100 ರೂಪಾಯಿ ದಾಟಿದ್ದು, ಸಿಲಿಂಡರ್ ಬೆಲೆ ಸಾವಿರ ರೂ. ದಾಟುವ ಸಮೀಪದಲ್ಲಿದೆ. ಈಗಾಗಲೇ ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿವೆ. ಉದ್ಯೋಗ ಕಳೆದುಕೊಂಡ ಲಕ್ಷಾಂತರ ಜನ ಹಳ್ಳಿ ಸೇರಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ತಾಲಿಬಾನ್‍ನಲ್ಲಿ ಸರ್ಕಾರ ಘೋಷಣೆ – ಮೋಸ್ಟ್ ವಾಂಟೆಡ್ ಉಗ್ರ ಈಗ ಆಂತರಿಕ ಸಚಿವ
ಕೋವಿಡ್ ನಿರ್ವಹಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲಗೊಂಡ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಜೀವ ಕಳೆದುಕೊಂಡಿದ್ದಾರೆ. ಇದರಿಂದಾಗಿ ಕುಟುಂಬಗಳು ಬೀದಿಗೆ ಬಿದ್ದಿವೆ. ಸಂಷ್ಟಕ್ಕೆ ಸಿಲುಕಿದ ಜನರ ಆಸರೆಗೆ ಬಂದಿರುವುದು ಕಾಂಗ್ರೆಸ್ ಸರ್ಕಾರ ಮಾತ್ರ. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಉದ್ಯೋಗ ಖಾತ್ರಿ ಮತ್ತು ಅನ್ನಭಾಗ್ಯ ಯೋಜನೆ ಎಂಬುದು ಜಗಜ್ಜಾಹೀರು. ಆದರೂ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಇವರ ಸಮಸ್ಯೆಗೆ ಸ್ಪಂದಿಸುವ ಹೊಣೆಗಾರಿಕೆ ಕಾಂಗ್ರೆಸ್ ಪಕ್ಷದ ಪ್ರತಿ ಕಾರ್ಯಕರ್ತನದ್ದಾಗಿದೆ. ಈ ಕಾರಣಕ್ಕೆ ಕೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಬದ್ಧರಾಗಬೇಕಿದೆ ಎಂದು ಕರೆ ನೀಡಿದರು.
ಪ್ರಸ್ತುತ ಸನ್ನಿವೇಶದಲ್ಲಿ ಪಕ್ಷದ ನಿಜವಾದ ಆಸ್ತಿ ಆಗಿರುವ ಕಾರ್ಯಕರ್ತರು, ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕಿದೆ. ಈ ಹಿನ್ನೆಲೆಯಲ್ಲಿ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ, ಸಮಿತಿ ರಚಿಸುವ ಮಹತ್ತರ ಕಾರ್ಯ ಕೈಗೊಳ್ಳಲಾಗಿದೆ. ನಿಷ್ಠಾವಂತ ಕಾರ್ಯಕರ್ತರ ರಾಜಕೀಯ ಬೆಳವಣಿಗೆಗೆ ಇದೊಂದು ಭದ್ರ ಬುನಾದಿ ಆಗಲಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರೆಲ್ಲರೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಅಂದನೂರು, ಮುತ್ತಗದೂರು, ಬಿ.ದುರ್ಗ, ಗುಂಜಿಗನೂರು ಗ್ರಾಮಗಳಲ್ಲಿ ಕಾಂಗ್ರೆಸ್ ಗ್ರಾಮ ಪಂಚಾಯತಿ (ಪ್ರಾಜೆಕ್ಟ್ ಪ್ರಜಾಪ್ರತಿನಿಧಿ) ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಸದಸ್ಯರನ್ನು ನೇಮಿಸಲಾಯಿತು. ಸಭೆಯಲ್ಲಿ ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ, ಭರಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದುರುಗೇಶ್ ಪೂಜಾರಿ, ಜಿಪಂ ಮಾಜಿ ಸದಸ್ಯ ಲೋಹಿತ್ ಕುಮಾರ್, ಅಂದನೂರು ಗ್ರಾಮಪಂಚಾಯತಿ ಅಧ್ಯಕ್ಷೆ ಸಾಕಮ್ಮ, ಉಪಾಧ್ಯಕ್ಷ ಪ್ರಶಾಂತ್ ಕುಮಾರ್, ಮುಖಂಡರಾದ ರಂಗಸ್ವಾಮಿ, ಓಂಕಾರಸ್ವಾಮಿ, ರುದ್ರಣ್ಣ, ಲಿಂಗರಾಜು, ಬಸಣ್ಣ, ರಮೇಶ್, ಖಲಂಧರ್, ಮರಳುಸಿದ್ದಪ್ಪ, ಲೋಕೇಶ್, ತಿಪ್ಪೇಸ್ವಾಮಿ ಮೊದಲಾದವರು ಭಾಗವಹಿಸಿದ್ದರು.
ದಾವಣಗೆರೆ: ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುತ್ತಿದೆ. ಪ್ರಧಾನಿಯವರು ಇದನ್ನು ಸರಿಪಡಿಸಬೇಕು ಇಲ್ಲದಿದ್ದರೆ ಬಿಜೆಪಿ ಲೆಸ್ ಭಾರತವಾಗುತ್ತೆ ಎಂಬ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ಪುನರುಚ್ಚರಿಸುವ ಮೂಲಕ ಶಾಸಕ ಶಾಮನೂರು ಶಿವಶಂಕರಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಂವಿಧಾನ ಸಂರಕ್ಷಣೆ ಸಮಿತಿಯಿಂದ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ, ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ಖಂಡಿಸಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮಾತ್ರ ಬಿಜೆಪಿ ಆಡಳಿತದಲ್ಲಿ ಪಾಕ್ ಮೇಲೆ ಬಾಂಬ್ ಹಾಕಿ ದಾಳಿ ಮಾಡುತ್ತಾರೆ. ಆಗ ಮಾತ್ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಾಧ್ಯ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಜಾರ್ಖಂಡ್ ಚುನಾವಣೆ ಒಳ್ಳೆ ಪಾಠ ಕಲಿಸಿದೆ. ಈಗಾಗಲೇ ಬಿಜೆಪಿ ಏಳು ರಾಜ್ಯ ಕಳೆದುಕೊಂಡಿದೆ. ಇಬ್ಬರ ಸರ್ವಾಧಿಕಾರಿ ಧೋರಣೆ ಹೆಚ್ಚು ದಿನ ನಡೆಯಲ್ಲ. ಈ ಕಾಯ್ದೆಯನ್ನ ವಾಪಸ್ ಪಡೆಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಆರ್.ಎಸ್.ಎಸ್ ನವರು ಪಾಲ್ಗೊಂಡಿರಲಿಲ್ಲ, ಅವರೇ ದೇಶ ವಿರೋಧಿಗಳು. ಹೊರದೇಶಗಳಲ್ಲಿ ಹಲವು ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಅಲ್ಲೂ ಸಹ ಇಂಥದೇ ಕಾಯ್ದೆ ಜಾರಿಗಳಿಸಿದರೆ ಅಲ್ಲಿಂದ ವಾಪಸ್ ಬರುವ ಜನರಿಗೆ ಪಕೋಡಾ ಮಾಡೋಕೆ ಹಂಚುತ್ತೀರಾ ಎಂದು ಪ್ರಧಾನಿ ಮೋದಿ ಅವರನ್ನು ಏಕವಚನದಲ್ಲಿ ಲೇವಡಿ ಮಾಡಿದರು.
ದೇಶದ ನಿರುದ್ಯೋಗಿಗಳಿಗೆ ಮೋದಿ, ಉದ್ಯೋಗ ಕಲ್ಪಿಸಿಲ್ಲ. ಆದರೂ ಮೋದಿ ಮೋದಿ ಅಂತ ಬಡ್ಕೋತ್ತಾರೆ. ನಾಚಿಕೆ ಆಗಲ್ವಾ ನಿಮಗೆ ಮಾನ ಮರ್ಯಾದೆ ಇದೆಯಾ ಎಂದು ವಾಗ್ದಾಳಿ ಮಾಡಿದರು.
ಚಿತ್ರದುರ್ಗ: ನಾನು ದಲಿತ ನಾಯಕನೂ ಹೌದು, ಕಾಂಗ್ರೆಸ್ ಮುಖಂಡನೂ ಹೌದು. ವೇದಿಕೆಯಲ್ಲಿದ್ದ ನಾಯಕರನ್ನು ಕರೆಯುವಂತೆ ಸಿದ್ದರಾಮಯ್ಯ ನನಗೆ ಸೂಚಿಸಿದರು ಅಷ್ಟೇ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ತಪ್ಪಾಗಿ ಬಿಂಬಿತವಾಗಿದೆ ಎಂದು ಮಾಜಿ ಸಚಿವ ಎಚ್ ಆಂಜನೇಯ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಚಾರ ಸಭೆಯ ವೇಳೆ ವೇದಿಕೆಯಲ್ಲಿ ಅವಮಾನ ಮಾಡಿದ ಬಗ್ಗೆ ಕೇಳಿದಾಗ ಆಂಜನೇಯ ಗರಂ ಆದರು. ನನ್ನ ಸ್ಪಷ್ಟನೆಯನ್ನು ಮಾಧ್ಯಮಗಳು ಪ್ರಕಟಿಸುತ್ತವೆಂಬ ನಂಬಿಕೆಯಿಲ್ಲ. ಅಲ್ಲಿ ಆಗಿದ್ದೇ ಬೇರೆ. ಆದರೆ ಮಾಧ್ಯಮಗಳಲ್ಲಿ ಪ್ರಚಾರ ಆಗಿರುವುದು ಬೇರೆಯಾಗಿದೆ. ಹೀಗಾಗಿ ಸ್ಪಷ್ಟನೆಯನ್ನು ಪ್ರಸಾರ ಮಾಡಿ ಎಂದು ಮಾಧ್ಯಮಗಳಿಗೆ ಆಂಜನೇಯ ಕಿಡಿಕಾರಿದರು.
ನಾನು ದಲಿತ ನಾಯಕ ಹಾಗೂ ಕಾಂಗ್ರೆಸ್ ಮುಖಂಡನೂ ಹೌದು. ವೇದಿಕೆಯಲ್ಲಿದ್ದ ನಾಯಕರನ್ನು ಕರೆಯುವಂತೆ ಮಾಜಿ ಸಿಎಂ ನನಗೆ ಸೂಚಿಸಿದ್ದರು. ಆದ್ರೆ ಇದೀಗ ಅವರ ಸೂಚನೆ ತಪ್ಪಾಗಿ ಬಿಂಬಿತವಾಗಿದೆ ಎಂದು ಹೇಳಿದರು.
ಮಾಜಿ ಸಿಎಂ ಸಿದ್ಧರಾಮಯ್ಯ ನನ್ನ ಏಳಿಗೆಗೆ ಸಹಕರಿಸುವ ನಾಯಕನಾಗಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವನಾಗಿದ್ದೆ. ಅವರು ನನ್ನ ಖಾತೆಯಲ್ಲಿ ನನಗೆ ಸರ್ವಾಧಿಕಾರ ನೀಡಿದರು ಅಂದ್ರು.
ನಡೆದಿದ್ದೇನು?
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚಿತ್ರದುರ್ಗದಲ್ಲಿ ಭಾಷಣ ಮಾಡುವ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ವೇದಿಕೆಗೆ ಆಗಮಿಸಿದರು. ರಾಹುಲ್ ಗಾಂಧಿಯವರನ್ನು ತಬ್ಬಿಕೊಳ್ಳುವ ಭರದಲ್ಲಿ ಸಿಎಂ ಹಾಗೂ ಮಾಜಿ ಸಿಎಂ ಮಾಜಿ ಸಚಿವ ಆಂಜನೇಯರನ್ನು ಹಿಂದಕ್ಕೆ ತಳ್ಳಿದ ಘಟನೆ ನಡೆದಿತ್ತು.
ವೇದಿಕೆಗೆ ಮಾಜಿ ಸಿಎಂ ಆಗಮಿಸುತ್ತಿದ್ದಂತೆ ರಾಹುಲ್ ಗಾಂಧಿಯವರು ತಮ್ಮ ಭಾಷಣವನ್ನು ಮೊಟಕುಗೊಳಿಸಿ ಸಿದ್ದರಾಮಯ್ಯನವರನ್ನು ತಬ್ಬಿಕೊಂಡರು. ಈ ವೇಳೆ ಕುಮಾರಸ್ವಾಮಿಯವರು ಸಹ ರಾಹುಲ್ ಬಳಿ ಬಂದರು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಮಾಜಿ ಸಚಿವ ಆಂಜನೇಯ ಅವರನ್ನು ತಳ್ಳಿ ವೇಣುಗೋಪಾಲ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕುಮಾರಸ್ವಾಮಿ ಹಾಗೂ ರಾಹುಲ್ ಗಾಂಧಿ ಎಲ್ಲರೂ ಒಂದಾಗಿ ಕೈ ಎತ್ತಿ ಬಲ ಪ್ರದರ್ಶನ ಮಾಡಿದರು. ಆಂಜನೇಯ ಅವರನ್ನು ತಳ್ಳುತ್ತಿದ್ದಂತೆ ಅವರು ಹಿಂದೆ ಸರಿದಿದ್ದರು.
ಸಿದ್ದರಾಮಯ್ಯನವರು ಆಂಜನೇಯನವರಿಗೆ ತಳ್ಳುವ ಮೂಲಕ ದಲಿತರಿಗೆ ಅವಮಾನ ಮಾಡಿದ್ದಾರೆ ಎಂದು ಬರೆದು ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿದ್ದರು.
ಚಿತ್ರದುರ್ಗ: ಯಾರೋ ಹುಟ್ಟಿಸಿದ ಮಗುವಿಗೆ ನಾನು ತಂದೆ ಎಂದು ಹೇಳುವವರು ಬಿಜೆಪಿಯವರು. ಅಭಿವೃದ್ಧಿ ಬಗ್ಗೆ ಬಿಜೆಪಿ ನಾಯಕರಿಗೆ ಕಳಕಳಿ ಇಲ್ಲ ಎಂದು ಮಾಜಿ ಸಚಿವ ಹೆಚ್.ಆಂಜನೇಯ ವಾಗ್ದಾಳಿ ನಡೆಸಿದ್ರು.
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾರೋ ಹುಟ್ಟಿಸಿದ ಮಗುವಿಗೆ ನಾನು ತಂದೆ ಎಂದು ಹೇಳುವವರು ಬಿಜೆಪಿಯವರು. ಅಭಿವೃದ್ಧಿ ಬಗ್ಗೆ ಅವರಿಗೆ ಕಿಂಚಿತ್ತೂ ಕಳಕಳಿ ಇಲ್ಲ. ಭದ್ರಾ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಬಿಜೆಪಿ ಶ್ರಮ ವಹಿಸಿಲ್ಲ. ಮಹದಾಯಿ ಯೋಜನೆ ಜಾರಿಗೊಳಿಸಲು ಬಿಜೆಪಿಗೆ ಬದ್ಧತೆ ಇಲ್ಲ. ಗೋವಾ, ಮಹಾರಾಷ್ಟ್ರದೊಂದಿಗೆ ಮಾತನಾಡಿ ನೀರಿನ ಸಮಸ್ಯೆ ಪರಿಹರಿಸಬೇಕಿತ್ತು. ಭದ್ರಾ ಯೋಜನೆ ತಾಂತ್ರಿಕ ದೋಷದಿಂದ ತಡವಾಗಿದೆ. ಮಾಹಿತಿ ಕೊರತೆಯಿಂದ ಬಿಜೆಪಿ ಇಲ್ಲಸಲ್ಲದ ಆರೋಪ ಸರಿಯಲ್ಲ. ಯೋಜನೆಗೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ರು.
ಏಪ್ರಿಲ್ 13 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಕೋಟೆನಾಡು ಚಿತ್ರದುರ್ಗಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಾರೆ. ಈ ವೇಳೆ ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರ ಬೃಹತ್ ಸಮಾವೇಶದಲ್ಲಿ ಪ್ರಚಾರ ನಡೆಸಲಿದ್ದಾರೆ. ಸಮಾವೇಶದಲ್ಲಿ ಸಿಎಂ ಕುಮಾರಸ್ವಾಮಿ, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಪರಮೇಶ್ವರ್ ಸಚಿವರಾದ ಸತೀಶ್ ಜಾರಕಿಹೊಳಿ, ಡಿಕೆ ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ.
ಸಮಾವೇಶಕ್ಕಾಗಿ ವಿನೂತನ ಜರ್ಮನ್ ಟೆಂಟ್ ಹೌಸ್ ವೇದಿಕೆ ರೆಡಿ ಮಾಡಲಾಗುತ್ತಿದೆ. ವೇದಿಕೆ ಮುಂಭಾಗದಲ್ಲಿ 25000 ಆಸನಗಳ ವ್ಯವಸ್ಥೆ ಮಾಡಲಾಗುತ್ತದೆ. ರಾಹುಲ್ ಗಾಂಧಿಗೆ ಕೋಟೆ ನಾಡನ್ನಾಳಿದ ಪಾಳೆಗಾರ ವೀರ ಮದಕರಿನಾಯಕರ ಪ್ರತಿಮೆ ನೀಡಿ ಸನ್ಮಾನ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದೆ ಅಂದ್ರು.
ಈ ವೇಳೆ ಮೈತ್ರಿ ಅಭ್ಯರ್ಥಿ ಚಂದ್ರಪ್ಪ, ಶಾಸಕ ರಘುಮೂರ್ತಿ, ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
ಚಿತ್ರದುರ್ಗ: ಮಾಜಿ ಸಮಾಜಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಶಾಸಕ ಚಂದ್ರಪ್ಪನ ವಿರುದ್ಧ ಗರಂ ಆಗಿದ್ದು, ಎರಡು ತಿಂಗಳು ನಾನು ಸುಮ್ಮನೆ ಇದ್ದೆ. ಆದರೆ ಇನ್ನು ಮುಂದೆ ಸುಮ್ಮನೆ ಕೈ ಕಟ್ಟಿ ಕೂರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಳು ಹೇಳುವುದೇ ಚಂದ್ರಪ್ಪನ ದೊಡ್ಡ ಕೆಲಸ, ಆತನ ತಲೆಯಲ್ಲಿ ಏನೂ ಇಲ್ಲ ಎಂದು ಏಕವಚನದಲ್ಲೇ ಹಾಲಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾನು ಸೋತಿದ್ದೇನೆ ಎಂದು ಕೈ ಕಟ್ಟಿಕೊಂಡು ಕೂರುವವನಲ್ಲ, ನಾನು ಹೋರಾಟದಿಂದ ಬಂದವನು. ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು, ಎರಡು ತಿಂಗಳಾದರೂ ಸುಮ್ಮನೆ ಇದ್ದೆ, ಆದರೆ ಇನ್ನು ಮುಂದೆ ಸುಮ್ಮನೆ ಕೈ ಕಟ್ಟಿ ಕೂರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಸಚಿವನಾಗಿದ್ದ ಸಮಯದಲ್ಲಿ ಜಾರಿಗೆ ತಂದಿರುವ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು, ಶಾಸಕ ಚಂದ್ರಪ್ಪ ನನ್ನ ಎಲ್ಲಾ ಕಾಮಗಾರಿಗಳನ್ನು ತಡೆಯುತ್ತಿದ್ದಾನೆ. ಆತನಿಗೆ ಜ್ಞಾನ, ತಿಳುವಳಿಕೆ ಇದ್ದರೆ ಯೋಜನೆಗಳನ್ನು ತಡೆಯುವ ಬದಲು, ಮುಂದವರಿಸಬೇಕೆಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಕೋಟಿಗಟ್ಟಲೇ ಬಂದಿದೆ ಎಂದು ಹೇಳುತ್ತಾರೆ, ಆದರೆ ಇಲ್ಲಿಯವರೆಗೂ ಒಂದು ಪೈಸೆಯೂ ಸಹ ಬಂದಿಲ್ಲ. ನಮ್ಮ ಅವಧಿಯಲ್ಲಿ ಆಗಿರುವ ಎಲ್ಲಾ ಯೋಜನೆಗಳು ಮುಂದುವರಿಯಬೇಕು. ಒಂದು ವೇಳೆ ಯಾವುದೇ ಯೋಜನೆಗಳಲ್ಲಿ ತೊಂದರೆಯಾದರೆ ಚಂದ್ರಪ್ಪನ ವಿರುದ್ಧ ಉಗ್ರವಾದ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಚಿತ್ರದುರ್ಗ: ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಳಿಕ ಮೊಟ್ಟ ಮೊದಲ ಬಾರಿಗೆ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿದ್ದ ಈಶ್ವರ ಖಂಡ್ರೆ ಎದುರಲ್ಲೇ ಸಮ್ಮಿಶ್ರ ಸರ್ಕಾರದ ಅಸಮಧಾನದ ಹೊಗೆ ಭುಗಿಲೆದ್ದಿದೆ.
ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ಸನ್ನು ಕಡೆಗಣನೆ ಮಾಡಲಾಗುತ್ತಿದೆ ಎನ್ನುವ ಕೂಗು ಸಭೆಯಲ್ಲಿ ಎದ್ದಿತ್ತು. ಇದನ್ನು ಶಮನಗೊಳಿಸಲು ನೂತನ ಕಾರ್ಯಧ್ಯಕ್ಷ ಖಂಡ್ರೆ ಅವರು, ನಮ್ಮ ಕ್ಷೇತ್ರ, ನಮ್ಮ ಪಕ್ಷ ಅದನ್ನು ಹೇಗೆ ಬಿಟ್ಟು ಕೊಡುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕೈಜೊಡಿಸುವ ಮಾತೇ ಇಲ್ಲ ಎಂದು ಹೇಳಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಗಿದೆ. ಆದರೂ ಸಮ್ಮಿಶ್ರ ಸರ್ಕಾರದಲ್ಲಿ ಬಹುಪಾಲು ನಮ್ಮದಾಗಿದೆ. ನಾವು 2019ರ ಲೋಕಸಭೆ ಚುನಾವಣೆಯಲ್ಲಿ ಪುಟಿದೇಳಬೇಕು. ರಾಜ್ಯದ 28 ಲೋಕಸಭೆ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಥವಾ ಮೈತ್ರಿ ಸರ್ಕಾರದ ಅಭ್ಯರ್ಥಿಗಳು ಗೆಲ್ಲಬೇಕೆಂಬ ಉದ್ದೇಶದಿಂದ ಚುನಾವಣೆ ಮೈತ್ರಿ ಬಗ್ಗೆ ಕಾಂಗ್ರೆಸ್ ವರಿಷ್ಠರು ಶೀಘ್ರದಲ್ಲಿಯೇ ತೀರ್ಮಾನ ಮಾಡಲಿದ್ದಾರೆ. ಸಮನ್ವಯ ಸಮಿತಿ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಅನ್ನಭಾಗ್ಯ ಯೋಜನೆ ಅಡಿ 7 ಕೆಜಿ ಅಕ್ಕಿ ನೀಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮಾಜಿ ಸಚಿವ ಆಂಜನೇಯ ಅವರನ್ನು ಕಡೆಗಣಿಸಲಾಗಿದೆ ಅಂತಾ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಯಶವಂತ್ ಆಕ್ಷೇಪ ವ್ಯಕ್ತಪಡಿಸಿದರು. ಇದೇ ವೇಳೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಟಿಕೆಟ್ ನೀಡುಬೇಕು ಎಂದು ಮಾಜಿ ಜಿಲ್ಲಾಧ್ಯಕ್ಷ ಸೇತುರಾಂ ಕೂಡ ಆಗ್ರಹಿಸಿದರು.
ಬೆಂಗಳೂರು: ನಕಲಿ ಫೇಸ್ ಬುಕ್ ಖಾತೆಯ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಅವರು ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಹಾಗೂ ಮಾಜಿ ಸಂಸದೆ ರಮ್ಯಾ ಪರ ನಿಂತಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ಅವಹೇಳನಕಾರಿ ಟ್ವೀಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರ ವಿರುದ್ಧ ಮಾತಾಡಿ ಸಾಕಾಗಿದೆ. ಬಿಜೆಪಿ ನಡೆಯೇ ಹಾಗೇ. ನನ್ನ ಬಾಯಲ್ಲಿ ಆ ರೀತಿ ಮಾತು ಬರಲ್ಲ. ರಮ್ಯಾ ಬೆಳವಣಿಗೆ ಸಹಿಸದೇ ಈ ಷಡ್ಯಂತ್ರ ರೂಪಿಸಿದ್ದಾರೆ. ಅವರು ನಮ್ಮ ಸಾಮಾಜಿಕ ಜಾಲತಾಣ ಬಲಪಡಿಸಲಿ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: ಫೇಕ್ ಅಕೌಂಟ್ ಪಾಠದ ವಿಡಿಯೋ ಬಗ್ಗೆ ರಮ್ಯಾ ಮೇಡಂ ಹೀಗಂದ್ರು
ಏನದು ಫೇಕ್ ಅಕೌಂಟ್ ಪಾಠ?: ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಮ್ಯಾ ಕಳೆದ ವಾರ ನಕಲಿ ಖಾತೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಪಾಠ ಮಾಡಿದ್ದರು. ಈ ಸಂದರ್ಭದಲ್ಲಿ ಕಾರ್ಯಕರ್ತರೊಬ್ಬರು ಫೇಸ್‍ಬುಕ್ ಫೇಕ್ ಅಕೌಂಟ್ ಬಗ್ಗೆ ಕೇಳಿದ ಪ್ರಶ್ನೆಗೆ ರಮ್ಯಾ, ಒಬ್ಬರಿಗೆ ಮೂರು ನಾಲ್ಕು ಅಕೌಂಟ್ ಗಳಿದ್ದರೆ ತಪ್ಪೇನಿಲ್ಲ. ಆದರೆ ಫೇಕ್ ಅಕೌಂಟ್ ಅಂದ್ರೆ ರೋಬಾಟ್ಸ್ ಅದು ಮಷೀನ್, ಮನುಷ್ಯ ಅಲ್ಲ. ಆದ್ರೆ ಒಬ್ಬರಿಗೆ ಹಲವು ಅಕೌಂಟ್ ಇದ್ರೆ ತಪ್ಪಿಲ್ಲ ಎಂದು ಉತ್ತರಿಸಿದ್ದರು. ಇದನ್ನೂ ಓದಿ: ಮುಗಿಯದ ರಮ್ಯಾ-ಜಗ್ಗೇಶ್ ಟ್ವೀಟ್ ಜಗಳ – ಫೇಕ್ ಪಾಠ ಹಿಡಿದು ಜಗ್ಗಾಡಿದ ನಟ
ಈ ಪಾಠದ ವಿಡಿಯೋ ವೈರಲ್ ಆಗಿದ್ದೆ ತಡ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಅಭಿಮಾನಿಗಳು ನಕಲಿ ಖಾತೆಗಳಿಗೆ ರಮ್ಯಾ ಕುಮ್ಮಕ್ಕು ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್ ಆರಂಭಿಸಿದ್ದಾರೆ.
ಚಿತ್ರದುರ್ಗ: ಮಕ್ಕಳೇ ಸಿಎಂ ಸಿದ್ದರಾಮಯ್ಯ ಯಾರು ಗೊತ್ತಾ? ಅವರು ಓದಿದ್ದು ಹೇಗೆ ಗೊತ್ತಾ.? ಅವರು ಒಂದು, ಎರಡು, ಮೂರು, ನಾಲ್ಕು ಓದಲೇ ಇಲ್ಲ. ಐದನೇ ಕ್ಲಾಸಿಗೆ ಹೋಗಿ ಬಿಎಸ್‍ಸಿ, ಎಲ್‍ಎಲ್‍ಬಿ ಮಾಡಿ ಈಗ ಮುಖ್ಯಮಂತ್ರಿ ಆಗಿದ್ದಾರೆ – ಇದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಆಂಜನೇಯ ಅವರು ಸಿಎಂ ಸಿದ್ದರಾಮಯ್ಯ ಕುರಿತು ಮಕ್ಕಳ ಮುಂದೆ ಆಡಿದ ಮಾತುಗಳು.
ಶುಕ್ರವಾರ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳೇ ನಿಮ್ಮಲ್ಲಿ ಯಾರಾದರು ಮುಖ್ಯಮಂತ್ರಿ ಆಗಿ, ಹಾಗಂತ ಐದನೇ ತರಗತಿಗೆ ನೇರವಾಗಿ ಸೇರಬೇಡಿ. ಒಂದನೇ ತರಗತಿಯಿಂದಲೇ ಶಾಲೆಗೆ ಹೋಗಿ. ಮತ್ತೆ ದನ ಕಾಯೋಕೊ ಹೋದಿರಿ ಹುಷಾರು ಎಂದು ಹೇಳಿದರು.
ಹಿಂದೆ ಜನಪದ ಗೀತೆಗಳು ಬದುಕಿಗೆ ಉತ್ತೇಜನ ನೀಡುತ್ತಿದ್ದವು. ಇಂದಿನ ಸಿನಿಮಾ ಹಾಡುಗಳು ದ್ವಂದ್ವದಿಂದ ಕೂಡಿರುತ್ತವೆ. ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಸಂಗೀತ ಶಿಕ್ಷಕರಿದ್ದಾರೆ ಒಳ್ಳೆಯದು. ಮುಂದಿನ ದಿನಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಶಾಲೆಗಳಿಗೆ ಚಿತ್ರಕಲಾ ಹಾಗೂ ದೈಹಿಕ ಶಿಕ್ಷಕರನ್ನು ನೇಮಕ ಮಾಡುತ್ತೇವೆ ಎಂದರು.
ಇಂದು ಸರ್ಕಾರಿ ಶಾಲೆಗಳು ಅಂದ್ರೆ ಉದಾಸೀನ ಮಾಡುತ್ತಾರೆ. ಸರ್ಕಾರಿ ಶಾಲೆಯಲ್ಲಿ ಓದಿದವರು ಸಂವಿಧಾನ ಬರೆದಿದ್ದಾರೆ. ವಿಜ್ಞಾನಿ ಯು.ಆರ್. ರಾವ್, ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರು ಸರ್ಕಾರಿ ಶಾಲೆಯಲ್ಲಿ ಓದಿದವರು. ಖಾಸಗಿ ಶಾಲೆಯಲ್ಲಿ ಓದುವವರಿಗೆ ಸರಿಸಮಾನವಾಗಿ ನಮ್ಮ ಮಕ್ಕಳನ್ನು ತಯಾರು ಮಾಡಲು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುತ್ತೇವೆ ಎಂದು ತಿಳಿಸಿದರು.
ಚಿತ್ರದುರ್ಗ: ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಮೇಲೆ ಬಿಜೆಪಿಯವರೇ ಒತ್ತಡ ಹಾಕಿರಬಹುದು ಎನ್ನುವ ಸಂಶಯವಿದೆ ಎಂದು ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಜಿಲ್ಲೆಯ ಪಂಚಾಯತ್‍ರಾಜ್ ರಜತ ಮಹೋತ್ಸವದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಸಿಎಂ ಆಯ್ಕೆಯಾಗಲಿದೆ. ಈಗಾಗಲೇ ಸಿ ಫೋರ್ ಸಮೀಕ್ಷೆ ಬಂದಿದೆ. ನಮ್ಮ ಪಕ್ಷದ ಸಮೀಕ್ಷೆಯಲ್ಲಿ ನಾವು 150 ಸ್ಥಾನ ಗೆಲ್ಲುತ್ತೇವೆ ಎನ್ನುವ ಫಲಿತಾಂಶ ಬಂದಿದೆ ಎಂದು ತಿಳಿಸಿದರು.
ಬಿಜೆಪಿಯವರು ಮಿಷನ್ 150 ಎನ್ನುತ್ತಿದ್ದಾರೆ. ಅದ್ಯಾವ ಮಿಷನ್ ನಾವು ನೋಡುತ್ತೇವೆ. ಮುಂದಿನ ಸರ್ಕಾರ ಬಿಜೆಪಿ ರಚಿಸಲು ಮತ ಹಾಕೋದು ಜನ. ಅವರೇ ಹಾಕಿಸಿಕೊಳ್ಳಲು ಬರಲ್ಲ. ನಾವು ನಾಲ್ಕು ವರ್ಷಗಳ ಕಾಲ ಬಡವರಿಗೆ ಸಾಕಷ್ಟು ಕೆಲಸ ಮಾಡಿದ್ದೇವೆ. ಜನ ನಮ್ಮ ಕೈ ಹಿಡಿಯುತ್ತಾರೆ. ಐಟಿ ರೇಡ್ ಆದ ತಕ್ಷಣ ಅಪರಾಧಿ ಆಗಲ್ಲ. ಬಿಜೆಪಿಯವರು ಜೈಲಿಗೆ ಹೋಗಿದ್ದಾರೆ. ದ್ವೇಷ ರಾಜಕಾರಣ ನಾವು ಮಾಡಲ್ಲ. ಅಭಿವೃದ್ಧಿ ಮಾಡುವುದೇ ನಮ್ಮ ಗುರಿ ಎಂದು ಹೇಳಿದರು.