Tag: ಎಚ್ ವಿಶ್ವನಾಥ್

  • ಹಳ್ಳಿ ಹಕ್ಕಿ ಬರಿತಿದೆ ಮೈತ್ರಿ ಸರ್ಕಾರ ಕೆಡವಿದ ಪುಸ್ತಕ

    ಹಳ್ಳಿ ಹಕ್ಕಿ ಬರಿತಿದೆ ಮೈತ್ರಿ ಸರ್ಕಾರ ಕೆಡವಿದ ಪುಸ್ತಕ

    ಮೈಸೂರು: ಮೈತ್ರಿ ಸರ್ಕಾರ ಕೆಡವಿದ ವಿವರವು ಪುಸ್ತಕ ರೂಪದಲ್ಲಿ ಬರಲಿದೆ. ಮಾಜಿ ಸಚಿವ ಎಚ್. ವಿಶ್ವನಾಥ್ ಈ ಪುಸ್ತಕ ಬರೆಯುತ್ತಿದ್ದಾರೆ.

    ಮೈಸೂರಿನಲ್ಲಿ ಮಾತನಾಡಿದ ಎಚ್. ವಿಶ್ವನಾಥ್ ಈ ವಿಷಯ ತಿಳಿಸಿದರು. ಸರ್ಕಾರ ಬೀಳಿಸುವುದಕ್ಕೆ ಯಾರು ಯಾರು ಸಹಾಯ ಮಾಡಿದರು. ಮಾಜಿ ಸಿಎಂ ಆಗಿದ್ದವರು, ಮಾಜಿ ಮಂತ್ರಿ ಆಗಿದ್ದವರು ಹೇಗೆಲ್ಲ ಇದರಲ್ಲಿ ಪಾತ್ರವಹಿಸಿದರು ಎಂಬ ಎಲ್ಲಾ ಮಾಹಿತಿಗಳನ್ನು ಬಯಲು ಮಾಡುತ್ತೇನೆ ಎಂದರು.

    ನಾನು ಇದ್ದದ್ದನ್ನು ಇದ್ದ ಹಾಗೇ ಹೇಳುವ ಮನುಷ್ಯ. ಈಗ ಬರೆಯುತ್ತಿರುವ ಪುಸ್ತಕದಲ್ಲಿ ಸತ್ಯ ದಾಖಲಾಗುತ್ತದೆ. ಎರಡು ತಿಂಗಳಲ್ಲಿ ಪುಸ್ತಕ ಬಿಡುಗಡೆ ಆಗಲಿದೆ. ಸರ್ಕಾರ ಪತನ ಜನ ಅಂದು ಕೊಂಡ ರೀತಿ ಏಕ ಪಾತ್ರ ಅಭಿನಯ ಅಲ್ಲ. ಅದರಲ್ಲಿ ಬಹಳಷ್ಟು ಪಾತ್ರ ಬರುತ್ತವೆ. ಮೇಲ್ನೋಟಕ್ಕೆ ನನಗೆ ಏನೂ ಗೊತ್ತಿಲ್ಲ ಅಂದವರ ಬಣ್ಣವೂ ಇಲ್ಲಿ ಬಯಲಾಗುತ್ತದೆ. ಎಲ್ಲವನ್ನೂ ನೋಟ್ ಮಾಡಿಕೊಂಡಿದ್ದೇನೆ. ನೋಟ್ ಮುಗಿದ ಮೇಲೆ ಬರಹ ಶುರುವಾಗುತ್ತೆ. ಎರಡು ತಿಂಗಳಲ್ಲಿ ಪುಸ್ತಕ ಹೊರ ಬರುತ್ತೆ ಎಂದು ತಿಳಿಸಿದರು.

    ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿ, ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ. ರಾಜಕಾರಣ ನಂಬಿಕೆ, ಆತ್ಮವಿಶ್ವಾಸ, ಆಶಾವಾದದ ಮೇಲೆಯೇ ನಡೆಯಬೇಕು. ನಾನು ಈಗಲೂ ಆಶಾವಾದ ಹೊಂದಿದ್ದೇನೆ. ಸಚಿವ ಸ್ಥಾನ ಸಿಗುವ ನಿರೀಕ್ಷೆ ಹೊಂದಿದ್ದೇನೆ. ಯಡಿಯೂರಪ್ಪ ದೆಹಲಿಗೆ ಹೋಗಿ ಬಂದಿದ್ದಾರೆ. ಯಾರ ಹೆಸರುಗಳು ಇವೆ, ಯಾರು ಇಲ್ಲ ಎಂಬುದು ಯಾರಿಗೂ ಗೊತ್ತಿಲ್ಲ. ಏನಾಗುತ್ತೋ ಕಾದು ನೋಡೋಣ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ನಾಲಿಗೆ ಮೇಲೆ ನಿಂತ ಜನನಾಯಕ ಯಡಿಯೂರಪ್ಪ: ಎಚ್. ವಿಶ್ವನಾಥ್

    ನಾಲಿಗೆ ಮೇಲೆ ನಿಂತ ಜನನಾಯಕ ಯಡಿಯೂರಪ್ಪ: ಎಚ್. ವಿಶ್ವನಾಥ್

    ಬೆಂಗಳೂರು: ಯಡಿಯೂರಪ್ಪ ಎಷ್ಟು ಸರ್ಕಸ್ ಮಾಡುತ್ತಿದ್ದಾರೋ ಆ ಸರ್ಕಸ್‍ನಲ್ಲಿ ಕಾಂಗ್ರೆಸ್, ಜೆಡಿಎಸ್‍ನಿಂದ ಬಂದವರು ಅಷ್ಟೇ ಪಾಲುದಾರರು. ಗೆದ್ದ 24 ಗಂಟೆಯಲ್ಲಿ ಮಿನಿಸ್ಟರ್ ಮಾಡ್ತೀನಿ ಎಂದಿದ್ದ ಯಡಿಯೂರಪ್ಪ ಧನುರ್ ಮಾಸದ ನೆಪವನ್ನ ಹೇಳಿ ಸುಮ್ಮನಿರಿಸಿದ್ರು. ಆದರೆ ಧನುರ್ ಮಾಸ ಮುಗಿಯುತ್ತಿದ್ರೂ ಸಂಪುಟ ವಿಸ್ತರಣೆ ಸುಳಿವು ಸಿಕ್ತಿಲ್ಲ. ಹೈಕಮಾಂಡ್ ಗ್ರೀನ್ ಸಿಗ್ನಲ್‍ಗಾಗಿ ಯಡಿಯೂರಪ್ಪ ಮತ್ತು ಗೆದ್ದ ಶಾಸಕರು ಕಾದು ಕುಳಿತಿದ್ದಾರೆ. ಈ ನಡುವೆ ಮಾತಾಡಂಗಿಲ್ಲ ಬಿಡಂಗಿಲ್ಲ ಅನ್ನೋ ಹಾಗೆ ಯಡಿಯೂರಪ್ಪ ಅವರನ್ನ ಸಮರ್ಥಿಸಿಕೊಳ್ತಿದ್ದಾರೆ ವಲಸೆ ಬಂದ ಹಕ್ಕಿಗಳು.

    ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಗೆ ಆಗಮಿಸಿದ್ದ ಎಚ್.ವಿಶ್ವನಾಥ್‍ಗೆ ಕ್ಯಾಬಿನೆಟ್ ವಿಸ್ತರಣೆ ಬಗ್ಗೆ ಕೇಳಿದಾಗ ಅವರು ಹೇಳಿದ್ದು ನಾಲಿಗೆ ಮೇಲೆ ನಿಂತ ನಾಯಕನ ಡೈಲಾಗ್. ನಮಗೆ ಯಡಿಯೂರಪ್ಪ ಮಾತ್ರ ಗೊತ್ತು, ಬಿಜೆಪಿ ಹೈಕಮಾಂಡ್ ನಲ್ಲಿ ಯಾರೂ ಗೊತ್ತಿಲ್ಲ. ಕರ್ನಾಟಕದಲ್ಲಿ ನಾಲಿಗೆ ಮೇಲೆ ನಿಂತ ಜನನಾಯಕ ಯಾರಾದ್ರೂ ಇದ್ರೆ ಅದು ಯಡಿಯೂರಪ್ಪ ಮಾತ್ರ. ಹಾಗಾಗಿ ಅವರನ್ನ ನಂಬಿದ್ದೇವೆ ಅಂತೇಳಿದ್ರು. ಅಷ್ಟೇ ಅಲ್ಲ ನಮ್ಮನ್ನ ಸಚಿವರನ್ನಾಗಿ ಮಾಡಲೇಬೇಕು ಅಂತಾ ನಾವು ಡಿಮ್ಯಾಂಡ್ ಮಾಡಿಲ್ಲ. ಕರ್ನಾಟಕದಲ್ಲಿ ಜನತಂತ್ರ ಒದ್ದಾಡ್ತಿತ್ತು, ಅದನ್ನ ಉಳಿಸಲು ಯಡಿಯೂರಪ್ಪರನ್ನು ಸಿಎಂ ಮಾಡಿದ್ದೇವೆ. ಎಲ್ಲವೂ ಅವರಿಗೆ ಬಿಟ್ಟಿದ್ದು ಅಂತಾ ಜಾಣ್ಮೆಯ ಉತ್ತರ ಕೊಟ್ಟು ವಿಶ್ವನಾಥ್ ಜಾರಿಕೊಂಡರು.

    ಒಟ್ಟಾರೆಯಾಗಿ ಕಾಂಗ್ರೆಸ್, ಜೆಡಿಎಸ್‍ನಲ್ಲಿದ್ದಾಗ ಅಬ್ಬರಿಸುತ್ತಿದ್ದ ವಲಸೆ ಹಕ್ಕಿಗಳು ಈಗ ಸೈಲೆಂಟ್ ಆಗಿವೆ. ಕ್ಯಾಬಿನೆಟ್ ವಿಸ್ತರಣೆ ಬಗ್ಗೆ ಮಾರ್ಮಿಕವಾಗಿ ಮಾತಾಡ್ತಾರೆ ಹೊರತೇ ಬಹಿರಂಗವಾಗಿ ಮಾತನಾಡದೇ ಜಾಣ್ಮೆ ತೋರುತ್ತಿದ್ದಾರೆ. ಈ ಜಾಣ್ಮೆಯ ನಡೆಗೆ ಯಡಿಯೂರಪ್ಪ ಭರವಸೆ ಕಾರಣ ಎನ್ನಲಾಗಿದ್ದು, ಸಂಕ್ರಾಂತಿ ಬಳಿಕವೂ ಸಂಪುಟ ವಿಸ್ತರಣೆಯಾಗದಿದ್ದರೆ ಗೆಲುವಿನ ನಗೆ ಬೀರಿರುವ ವಲಸೆ ಹಕ್ಕಿಗಳು ಸದ್ದು ಮಾಡುತ್ವಾ.? ಇಲ್ವೋ..? ಅನ್ನೋದನ್ನ ಕಾದುನೋಡಬೇಕಿದೆ.

  • ಜೈಲಿಂದ ಬಂದ್ಮೇಲೆ ಡಿಕೆಶಿ ಬುದ್ಧಿ ಸ್ಥಿಮಿತದಲ್ಲಿಲ್ಲ: ಸಂಸದ ಶ್ರೀನಿವಾಸ್ ಪ್ರಸಾದ್

    ಜೈಲಿಂದ ಬಂದ್ಮೇಲೆ ಡಿಕೆಶಿ ಬುದ್ಧಿ ಸ್ಥಿಮಿತದಲ್ಲಿಲ್ಲ: ಸಂಸದ ಶ್ರೀನಿವಾಸ್ ಪ್ರಸಾದ್

    – ಸೋತವರು, ಸತ್ತವರಿ ಮಂತ್ರಿಗಿರಿ ಇಲ್ಲ
    – ವಿಶ್ವನಾಥ್‍ಗೆ ಶ್ರೀನಿವಾಸ್ ಪ್ರಸಾದ್ ಟಾಂಗ್

    ಚಾಮರಾಜನಗರ: ಮಾಜಿ ಸಚಿವ, ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರು ಜೈಲಿಗೆ ಹೋಗಿ ಬಂದ ಬಳಿಕ ಬುದ್ಧಿ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

    ಯೇಸು ಪ್ರತಿಮೆ ನಿರ್ಮಾಣ ಕುರಿತು ಕೊಳ್ಳೇಗಾಲದಲ್ಲಿ ಮಾತನಾಡಿದ ಸಂಸದರು, ಡಿ.ಕೆ.ಶಿವಕುಮಾರ್ ಅವರು ನೀಡುತ್ತಿರುವ ಹೇಳಿಕೆಗಳಿಗೆ ಹಾಗೂ ಪ್ರತಿಮೆ ನಿರ್ಮಾಣದ ವಿಷಯಕ್ಕೆ ಸಂಬಂಧವೇ ಇಲ್ಲವಾಗಿದೆ. ಸಚಿವರು ಏನು ಹೇಳಲು ಹೊರಟಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದರು.

    ಇದೇ ವೇಳೆ ದೇಶಾದ್ಯಂತ ಹಬ್ಬಿರುವ ಪೌರತ್ವ ತಿದ್ದುಪಡೆ ಕಾಯ್ದೆ ಕಿಚ್ಚಿನ ಕುರಿತು ಮಾತನಾಡಿದ ಅವರು, ಸಿಎಎ ಸಂವಿಧಾನ ವಿರೋಧಿಯಲ್ಲ. ಈ ಕಾಯ್ದೆಯ ಬಗ್ಗೆ ಸಂಸತ್ತಿನಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. ಲೋಕಸಭೆಯಲ್ಲೂ ಚರ್ಚಿಸಲಾಗಿದೆ. ರಾಷ್ಟ್ರಪತಿಗಳ ಅಂಕಿತವೂ ಬಿದ್ದಿದೆ. ಸಿಎಎ ಕಾಯ್ದೆಯಿಂದ ನಮ್ಮ ದೇಶದ ಮುಸ್ಲಿಂ ಮತ್ತು ದಲಿತ ಸಮುದಾಯಗಳಿಗೆ ಯಾವುದೇ ತೊಂದರೆ ಇಲ್ಲ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಬರುವ ವಲಸಿಗರಿಗೆ ಮಾತ್ರ ಸಿಮೀತವಾದದ್ದು ಎಂದು ಹೇಳಿದರು.

    ಪೌರತ್ವ ತಿದ್ದುಪಡೆ ಕಾಯ್ದೆಯಿಂದ ಭಾರತ ದೇಶದ ಯಾವುದೇ ಜನಾಂಗಕ್ಕೂ ಎಳ್ಳಷ್ಟು ಸಮಸ್ಯೆಯಿಲ್ಲ. ದೇಶದ ಭದ್ರತೆ ದೃಷ್ಟಿಯಿಂದ ಈ ಕಾಯ್ದೆ ಅನುಷ್ಠಾನ ಮಾಡಲಾಗುತ್ತಿದೆ. ಸಿಎಎ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್​ಸಿ) ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪರ ಮತ್ತು ವಿರೋಧವಾಗಿ ಮಾತನಾಡುವ ಹಕ್ಕು ಪ್ರಜೆಗಳಿಗೆ ಇದೆ. ಪ್ರತಿಭಟನೆ ಹಿಂಸಾತ್ಮಕ ಮಾರ್ಗ ಹಿಡಿಯಬಾರದು, ಶಾಂತಿಯೂತವಾಗಿ ಹೋರಾಟ ಮಾಡಬೇಕು ಎಂದರು.

    ದೇಶದ ಜನರು ಪ್ರಚೋದನಾತ್ಮಕ ಹೇಳಿಕೆಗಳಿಗೆ ಕಿವಿ ಕೊಡಬಾರದು. ಶಾಂತಿಯುತವಾಗಿ ಹೋರಾಟ ಮಾಡಬೇಕು. ಭಾರತ ದೇಶದಲ್ಲಿರುವ ಮುಸ್ಲಿಂ, ದಲಿತ ಹಾಗೂ ಇನ್ನಿತರೆ ಯಾವುದೇ ಧರ್ಮಕ್ಕೆ ಸಿಎಎಯಿಂದ ತೊಂದರೆಯಿಲ್ಲ ಎಂದು ತಿಳಿಸಿದರು.

    ವಿಶ್ವನಾಥ್‍ಗೆ ಟಾಂಗ್:
    ಉಪಚುನಾವಣೆಯಲ್ಲಿ ಗೆದ್ದವರಿಗೆಲ್ಲ ಮಂತ್ರಿ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ಹೇಳಿದ್ದಾರೆ. ಧನುರ್ಮಾಸ ಮುಗಿದ ಕೂಡಲೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಗೆದ್ದು ಶಾಸಕರಾದ ನಂತರವೇ ಮಂತ್ರಿಯಾಗಬೇಕು ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಹುಣಸೂರು ಉಪಚುನಾವಣೆಯಲ್ಲಿ ಎಚ್.ವಿಶ್ವನಾಥ್ ಅವರು ಸೋತಿದ್ದಾರೆ. ಹೀಗಾಗಿ ಗೆದ್ದವರು ಮಾತ್ರ ಮಂತ್ರಿಯಾಗುತ್ತಾರೆ. ಸೋತವರು, ಸತ್ತವರಿಗೆ ಮಂತ್ರಿಗಿರಿ ಇಲ್ಲ ಎಂದು ಹೇಳಿದರು.

  • ನನಗೆ ಸಚಿವ ಸ್ಥಾನ ನೀಡುವಂತೆ ಶ್ರೀಗಳು ಅಮಿತ್ ಶಾ ಗೆ ಕರೆ ಮಾಡಿದ್ದರು: ಎಚ್. ವಿಶ್ವನಾಥ್

    ನನಗೆ ಸಚಿವ ಸ್ಥಾನ ನೀಡುವಂತೆ ಶ್ರೀಗಳು ಅಮಿತ್ ಶಾ ಗೆ ಕರೆ ಮಾಡಿದ್ದರು: ಎಚ್. ವಿಶ್ವನಾಥ್

    ಮೈಸೂರು: ಪೇಜಾವರ ಶ್ರೀಗಳ ನಿಧನಕ್ಕೆ ಮಾಜಿ ಸಚಿವ ಎಚ್. ವಿಶ್ವನಾಥ್ ಮೈಸೂರಿನಲ್ಲಿ ಸಂತಾಪ ಸೂಚಿಸಿದ್ದಾರೆ. ಪೇಜಾವರ ಶ್ರೀಗಳು ಸರ್ವಜನ ಪ್ರೇಮಿ ಸಂತ. ಭಾರತದ ಉದ್ದಗಲದಲ್ಲು ಅವರ ಹೆಸರಿದೆ. ಅವರ ನಿಧನ ತುಂಬಲಾರದ ನಷ್ಟ ಎಂದು ಅವರು ತಿಳಿಸಿದ್ದಾರೆ.

    ಕನಕದಾಸರ ಬಗ್ಗೆ ಅವರು ಅಪಾರ ಅಧ್ಯಯನ ಮಾಡಿದ್ದರು. ಕನಕಪೀಠ ವಿವಾದವಾದಾಗ ಬೆಂಗಳೂರು ಪ್ರಸ್ ಕ್ಲಬ್‍ಗೆ ಬಂದಿದ್ದರು. ವಿವಾದದ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಬೇಕು ಎಂದು ಜನರ ಮುಂದೆ ಬಂದಿದ್ದರು. ಆಗ ನಾನು ಇಲ್ಲಿಗೆ ನೀವು ಬರಬಾರದಿತ್ತು ಎಂದು ಮನವಿ ಮಾಡಿದ್ದೆ. ಆದರೂ ಅವರು ನನ್ನೊಂದಿಗೆ ಪ್ರಸ್ ಕ್ಲಬ್‍ನಲ್ಲಿ ಚರ್ಚೆ ಮಾಡಿದ್ದರು. ತಳಸ್ಪರ್ಶಿ ಸಮುದಾಯಕ್ಕೆ ಅವರು ಕೆಲಸ ಮಾಡಿದ್ದರು. ಹಿಂದೂ ಧರ್ಮದಲ್ಲಿದ್ದರೂ ಮುಸ್ಲಿಂರನ್ನು ಗೌರವಿಸಿದ್ದರು ಎಂದು ವಿಶ್ವನಾಥ್ ಶ್ರೀಗಳನ್ನು ನೆನಪಿಸಿಕೊಂಡಿದ್ದಾರೆ.

    ನಿಮಗೆ ಗೊತ್ತಿದೇಯೋ ಇಲ್ಲವೋ ಅವರ ಕಾರು ಚಾಲಕ ಒಬ್ಬ ಮುಸ್ಲಿಂ ಆಗಿದ್ದಾನೆ. ನಾವು ಅಂದರೆ ಅವರಿಗೆ ಪ್ರೀತಿ. ನಮಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಬೇಕು ಎಂದು ಅಮಿತ್ ಷಾಗೆ ದೂರವಾಣಿ ಮಾಡಿದ್ದರು. ರಾಜಕಾರಣಿಗಳೆಂದರೆ ಅವರಿಗೆ ಮುಲಾಜಿಲ್ಲ. ಅವರಿಗೆ ಇದ್ದದ್ದು ದೇವರ ಮುಲಾಜು ಮಾತ್ರ ಎಂದು ಹೇಳಿದರು. ಇದನ್ನು ಓದಿ: ಹಿಂದೂ ಧರ್ಮ ಪರಿಚಾರಕ ಶ್ರೀಗಳಿಗೆ ಮುಸ್ಲಿಂ ಡ್ರೈವರ್! – ಆರಿಫ್‍ಗೆ ಕೊನೆಯಾಸೆ ಈಡೇರದ ನೋವು

    ನಾವು ಪ್ರಜಾತಂತ್ರವಾದಿಗಳು ಅನ್ನೋದು ಅವರ ನಂಬಿಕೆಯಾಗಿತ್ತು. ರಾಜಕಾರಣಿ ಮತ್ತು ಒಬ್ಬ ಸಂತ ಇಬ್ಬರು ಕೂಡ ಸಾಮಾಜಿಕ ಜವಾಬ್ದಾರಿಯಲ್ಲಿ ಸಮಾನರು ಎಂದು ಪ್ರತಿಪಾದಿಸಿದ್ದರು. ಅದಕ್ಕೆ ಅವರೆಂದರೆ ನನಗೆ ಗೌರವ ಎಂದು ತಿಳಿಸಿದ್ದಾರೆ.

  • ನನ್ನ ಸೋಲಿಗೆ ಬಿಜೆಪಿಯ ಕೆಲ ನಾಯಕರು ಕೂಡ ಕಾರಣ: ಎಚ್.ವಿಶ್ವನಾಥ್

    ನನ್ನ ಸೋಲಿಗೆ ಬಿಜೆಪಿಯ ಕೆಲ ನಾಯಕರು ಕೂಡ ಕಾರಣ: ಎಚ್.ವಿಶ್ವನಾಥ್

    ಮೈಸೂರು: ನನ್ನ ಸೋಲಿಗೆ ಕೆಲ ಬಿಜೆಪಿ ನಾಯಕರೂ ಕಾರಣ ಎಂದು ಹುಣಸೂರು ಉಪ ಚುನಾವಣೆಯ ಪರಾಜಿತ ಅಭ್ಯರ್ಥಿ ಎಚ್.ವಿಶ್ವನಾಥ್ ಬಹಿರಂಗ ಹೇಳಿಕೆ ನೀಡಿದ್ದಾರೆ.

    ಹುಣಸೂರಿನಲ್ಲಿ ನಡೆದ ಬಿಜೆಪಿ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು, ಜೆಡಿಎಸ್ ನಾಯಕರು ನನ್ನ ಸೋಲಿಸಲು ಒಟ್ಟಾಗಿ ಸೇರಿಕೊಂಡರು. ಇವರ ಜೊತೆಗೆ ಕೆಲ ಬಿಜೆಪಿ ನಾಯಕರೂ ಕೈ ಜೋಡಿಸಿದರು. ಇದೆಲ್ಲವನ್ನೂ ಅನಿವಾರ್ಯವಾಗಿ ಈಗ ಹೇಳಲೇಬೇಕಿದೆ ಎಂದು ಅಸಮಾಧಾನ ಹೊರ ಹಾಕಿದರು.

    ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯೇ ಇಲ್ಲಿ ಮಾರಾಟವಾದರು. ನನ್ನನ್ನು ಮಾರಿಕೊಂಡವನು ಎನ್ನುತ್ತಾರೆ. ಪಾಪ, ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಅವರನ್ನು ಕಾಂಗ್ರೆಸ್‍ಗೆ ಮಾರಾಟ ಮಾಡಿದವರು ಯಾರು? ಪ್ರಶ್ನಿಸಿದ ಎಚ್. ವಿಶ್ವನಾಥ್ ಅವರು, ಸೋಮಶೇಖರ್ ತಮ್ಮ ಮನೆ ದುಡ್ಡು ತಂದು ಚುನಾವಣೆ ಮಾಡಿದರು. ಅವರನ್ನು ಕಾಂಗ್ರೆಸ್‍ಗೆ ಮಾರಾಟ ಮಾಡಿದರು. ನನ್ನನ್ನು ನಾನು ಮಾರಿಕೊಂಡಿಲ್ಲ. ನೀವು ರಾಜ್ಯ ಮಾರಿದ್ದೀರಿ, ಜಾತಿಯನ್ನೂ ಮಾರಿದ್ದೀರಿ ಒಕ್ಕಲಿಗ ವಿರೋಧಿ ನಾನೋ, ನೀವೋ ಈಗ ಹೇಳಿ ಎಂದು ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು.

    ಉಪಚುನಾವಣೆಯಲ್ಲಿ ನನ್ನ ವಿರುದ್ಧ ಅಪಪ್ರಚಾರ ನಡೆಯಿತು. ಮಾರಿಕೊಂಡವರು ಅಂತ ಹೇಳಿದರು. ನಾವು ಮಾರಿಕೊಳ್ಳಲಿಲ್ಲ. ಕರ್ನಾಟಕವನ್ನು ಮಾರಾಟ ಮಾಡುವವರನ್ನು ಕಿತ್ತೊಗೆಯಲು ರಾಜೀನಾಮೆ ನೀಡಿದ್ದೆವು ಎಂದರು.

    ಮೈತ್ರಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರು 700 ಇಂಜಿನಿಯರ್ ಗಳನ್ನು ಅಕ್ರಮವಾಗಿ ನೇಮಿಸಲು ಮುಂದಾಗಿದ್ದರು. 1,750 ಇಂಜಿನಿಯರ್ ಗಳ ವರ್ಗಾವಣೆ ಮಾಡಲು ಸಿದ್ಧತೆ ನಡೆದಿತ್ತು. ಮೈಮುಲ್‍ನಲ್ಲಿರುವ 170 ಸೀಟುಗಳನ್ನು ತಲಾ 50 ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು. ಇದನ್ನು ತಪ್ಪಿಸುವ ಸಲುವಾಗಿ ನಾವು ರಾಜೀನಾಮೆ ನೀಡಿದೆವು ಎಂದು ದೂರಿದರು.

  • ನಾನು ಸೋತಿದ್ದೇನೆ, ಸತ್ತಿಲ್ಲ: ಎಚ್.ವಿಶ್ವನಾಥ್

    ನಾನು ಸೋತಿದ್ದೇನೆ, ಸತ್ತಿಲ್ಲ: ಎಚ್.ವಿಶ್ವನಾಥ್

    ಮೈಸೂರು: ನಾನು ಸೋತಿದ್ದೇನೆ. ಹಾಗಂತ ನಾನು ಸತ್ತಿಲ್ಲ. ರಾಜಕೀಯವಾಗಿ, ಸಾರ್ವಜನಿಕವಾಗಿ, ಅಭಿವೃದ್ಧಿ ವಿಚಾರದಲ್ಲಿ ಬದುಕಿದ್ದೇನೆ ಎಂದು ಹುಣಸೂರು ಉಪಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಹೇಳಿದ್ದಾರೆ.

    ಹುಣಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹುಣಸೂರು ಚುನಾವಣೆ ಸೋಲಿನಿಂದ ತಾನು ಕುಗ್ಗಿಲ್ಲ ಎಂದು ಹೇಳಿದರು. ರಾಜಕೀಯವಾಗಿ ಸೋಲು, ಗೆಲವು ಮಾಮೂಲಿ. ನಾನು ಬೈ ಎಲೆಕ್ಷನ್‍ನಲ್ಲಿ ಸೋತಿದ್ದೇನೆ ಹೊರತು ಸತ್ತಿಲ್ಲ ಎಂದು ಹೇಳುವ ಮೂಲಕ ತಮ್ಮ ರಾಜಕೀಯ ವಿರೋಧಿಗಳಿಗೆ ತಮ್ಮ ಶಕ್ತಿಯ ಸಂದೇಶ ರವಾನಿಸಿದರು.

    ಕೆಲವರು ತಾವು ಬಾರಿ ಸತ್ಯವಂತರು ಅನ್ನೋ ರೀತಿ ನಾನು ಹಣ ತಿಂದೆ ಅಂತಾ ಚುನಾವಣೆಯಲ್ಲಿ ಅಪಪ್ರಚಾರ ಮಾಡಿದರು. ಆದರೆ ನಾನು ತಿಂದವನಲ್ಲ, ತಿನ್ನಿಸಿದವನು. ನಾನು ಯಾರ ಅನ್ನಕ್ಕೂ ಕೈ ಹಾಕಿಲ್ಲ, ನಾನೇ ಲಕ್ಷಾಂತರ ಮಕ್ಕಳಿಗೆ ಅನ್ನ ಕೊಡುವ ಯೋಜನೆ ಮಾಡಿದ್ದೇನೆ. ನನಗೆ ದೊಡ್ಡ ದೂರದರ್ಶಿತ್ವ ಇದೆ ಎಂದು ತಿರುಗೇಟು ನೀಡಿದರು.

    ಹುಣಸೂರು ಉಪಚುನಾವಣೆಯ ಸೋಲಿಗೆ ಕಾರಣ ಏನೂ ಎಂಬುದು ಜನರಿಗೆ, ಮಾಧ್ಯಮದವರಿಗೆ ಗೊತ್ತಿದೆ. ಮಾಧ್ಯಮದವರು ಅದನ್ನು ನೇರವಾಗಿ ಬರೆಯುತ್ತಿಲ್ಲ. ಜನ ಅದನ್ನು ಮಾತನಾಡುತ್ತಿಲ್ಲ ಅಷ್ಟೇ ಎಂದು ವಿಶ್ವನಾಥ್ ಅಸಮಾಧಾನ ಹೊರಹಾಕಿದರು.

  • ಹಳ್ಳಿಹಕ್ಕಿ ಬಗ್ಗೆ ಸಾರಾ ಸಾಫ್ಟ್ – ದಾಖಲೆ ಬಿಡುಗಡೆಗೆ ನಕಾರ

    ಹಳ್ಳಿಹಕ್ಕಿ ಬಗ್ಗೆ ಸಾರಾ ಸಾಫ್ಟ್ – ದಾಖಲೆ ಬಿಡುಗಡೆಗೆ ನಕಾರ

    ಮೈಸೂರು: ಅನರ್ಹ ಶಾಸಕ ಹೆಚ್.ವಿಶ್ವನಾಥ್ ಬಗ್ಗೆ ಮಾಜಿ ಸಚಿವ ಸಾರಾ ಮಹೇಶ್ ಸಾಫ್ಟ್ ಕಾರ್ನಾರ್ ತೋರಿದ್ದು, ವಿಶ್ವನಾಥ್ ಈಗಲೇ ನೋವಿನಲ್ಲಿದ್ದಾರೆ ಬಿಡಿ ವಿಡಿಯೋ ಬಿಡುಗಡೆ ಮಾಡುವುದು ಬೇಡ ಎಂದು ಸಾಗ ಹಾಕಿದ್ದಾರೆ.

    ಮಾಜಿ ಸಚಿವ ಸಾರಾ ಮಹೇಶ್ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಮೂರು ವಿಚಾರಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮಾಜಿ ಸಚಿವ ಎಚ್.ವಿಶ್ವನಾಥ್ ಬಗ್ಗೆ ದಾಖಲೆ ಬಿಡುಗಡೆ, ಜೆಡಿಎಸ್ ನ ಕೆಲ ಶಾಸಕರು ಪಕ್ಷ ಬಿಡುವ ವಿಚಾರ ಹಾಗೂ ಕೆ.ಆರ್.ನಗರದಲ್ಲಿ ನಡೆದಿದ್ದ ಗಲಾಟೆ ಸಂಬಂಧದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆದರೆ ವಿಶ್ವನಾಥ್ ಕುರಿತು ದಾಖಲೆ ಬಿಡುಗಡೆ ಮಾಡುವುದನ್ನು ನಿರಾಕರಿಸಿದ್ದಾರೆ. ಸದ್ಯ ವಿಶ್ವನಾಥ್ ಅವರೇ ನೋವಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ಅದೆಲ್ಲ ಬೇಡ. ಮುಂದೆ ನೋಡೋಣ ಬಿಡಿ ಎಂದು ಹೇಳಿದರು.

    ಸಾಲಿಗ್ರಾಮ ಕೋಮು ಗಲಾಟೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಪ್ರಕರಣ ಸಂಬಂಧ ಇನ್ನೂ ಯಾವುದೇ ಶಾಂತಿ ಸಭೆ ಏರ್ಪಟ್ಟಿಲ್ಲ. ಹೆಸರ ಹಿಂದೆ ಸಾ.ರಾ. ಇದ್ದವರೆಲ್ಲ ನನ್ನ ಸಹೋದರರಾಗಲ್ಲ. ಸಾಲಿಗ್ರಾಮದಲ್ಲಿ ಯಾರ ತಂದೆ ರಾಮೇಗೌಡ ಆಗಿರುತ್ತಾರೋ ಅವರ ಹೆಸರ ಹಿಂದೆ ಸಾ.ರಾ. ಅಂತ ಇರುತ್ತದೆ. ನನ್ನ ಒಬ್ಬ ಸಹೋದರ ಮಾತ್ರ ಪ್ರಕರಣದಲ್ಲಿ ಸಿಲುಕಿದ್ದಾನೆ. ಒಬ್ಬ ಸಹೋದರ ಜಿ.ಪಂ. ಸದಸ್ಯ ಆಗಿದ್ದಾನೆ. ಈಗ ಪ್ರಕರಣದಲ್ಲಿ ಸಿಲುಕಿರುವ ಸಹೋದರ ಯಾರು ಎಂಬುದೇ ಗೊತ್ತಿಲ್ಲ. ಆದರೆ ಈಗ ಎಲ್ಲರಿಗೂ ಆತನ ಬಗ್ಗೆ ಗೊತ್ತಾಗುವಂತೆ ಆಗಿದೆ ಎಂದರು.

    ಇಡೀ ಪ್ರಕರಣವನ್ನು ವಿರೋಧ ಪಕ್ಷದ ಕೆಲವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ಶಾಸಕ ಆಗುವುದಕ್ಕೂ ಮೊದಲಿನಿಂದ ಸಾಲಿಗ್ರಾಮದಲ್ಲಿ ಇಂತಹ ಘಟನೆಗಳು ನಡೆದಿವೆ. ಹಿಂದೆ ಗೋಲಿಬಾರ್ ಸಹ ಆಗಿದೆ. ನನ್ನನ್ನು ಶಾಸಕ ಮಾಡಿದ ಮೇಲೆ ಸ್ವಲ್ಪ ಹತೋಟಿಗೆ ಬಂದಿದೆ. ಎರಡೂ ಕಡೆಯ ಹಲವು ಮಂದಿ ತಲೆ ಮರೆಸಿಕೊಂಡಿದ್ದಾರೆ. ಅವರೆಲ್ಲ ಸಿಕ್ಕ ನಂತರ ಒಂದು ಕಡೆ ಕುಳಿತು ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

    ಜೆಡಿಎಸ್ ನ ಮತ್ತಿಬ್ಬರು ಶಾಸಕರು ಪಕ್ಷಾಂತರ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ಸದ್ಯ ಜೆಡಿಎಸ್ ಪಕ್ಷವನ್ನು ಯಾರೂ ಬಿಟ್ಟು ಹೋಗುತ್ತಿಲ್ಲ. ಇದು ಸತ್ಯಕ್ಕೆ ದೂರವಾದ ವಿಚಾರ. ಎಲ್ಲರೊಂದಿಗೆ ನಿತ್ಯ ಮಾತನಾಡುತ್ತಲೇ ಇದ್ದೇವೆ. ಹಲವರು ನಿನ್ನೆ ಕೂಡ ಕುಮಾರಸ್ವಾಮಿಯವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ನಮ್ಮ ಪಕ್ಷವನ್ನು ಯಾರೂ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

  • ಎಚ್‍ಡಿಕೆ ಮಾತಿಗೆ ಬೆಲೆ ಕೊಟ್ಟು ಜನ ಬಿಜೆಪಿ ಸರ್ಕಾರವನ್ನು ಉಳಿಸಿದ್ದಾರೆ: ಜಿಟಿಡಿ

    ಎಚ್‍ಡಿಕೆ ಮಾತಿಗೆ ಬೆಲೆ ಕೊಟ್ಟು ಜನ ಬಿಜೆಪಿ ಸರ್ಕಾರವನ್ನು ಉಳಿಸಿದ್ದಾರೆ: ಜಿಟಿಡಿ

    – ಕುಮಾರಸ್ವಾಮಿ ನಡೆಯೇ ಬೇರೆ, ನುಡಿಯೇ ಬೇರೆ
    – ವಿಶ್ವನಾಥ್ ಸೋಲಿಗೆ ಯೋಗೀಶ್ವರ್ ಕಾರಣ

    ಮೈಸೂರು: ಮಾಜಿ ಸಿಎಂ ಎಚ್‍ಡಿಕೆ ಮತ್ತು ಅನರ್ಹ ಶಾಸಕ ಹಳ್ಳಿಹಕ್ಕಿ ವಿಶ್ವನಾಥ್ ವಿರುದ್ಧ ಮಾಜಿ ಸಚಿವ ಜಿ.ಟಿ ದೇವೇಗೌಡ ಕಿಡಿಕಾರಿದ್ದಾರೆ.

    ಉಪ ಚುನಾವಣೆಯಲ್ಲಿ ಜೆಡಿಎಸ್ ಗೆ ಶೂನ್ಯ ಸಾಧನೆ ವಿಚಾರ ಹಾಗೂ ಹುಣಸೂರು ಉಪ ಚುನಾವಣೆಯಲ್ಲಿ ತಮ್ಮ ಸೋಲಿಗೆ ಜಿ.ಟಿ. ದೇವೇಗೌಡ ಕಾರಣ ಎಂಬ ಎಚ್. ವಿಶ್ವನಾಥ್ ಹೇಳಿಕೆ ಬಗ್ಗೆ ಮೈಸೂರಿನಲ್ಲಿ ಮಾಜಿ ಸಚಿವ ಜಿ.ಟಿ. ದೇವೇಗೌಡ ಮಾಧ್ಯಮದವರ ಮಾತಾಡಿದ್ದಾರೆ. ಉಪ ಚುನಾವಣೆ ಘೋಷಣೆ ಮುನ್ನವೆ ಎಚ್‍ಡಿಕೆ ಕುಮಾರಸ್ವಾಮಿ ಬಿಜೆಪಿ ಸರಕಾರ ಉಳಿಸುತ್ತೇನೆ ಎಂದು ಹೇಳಿದ್ರು ಹೀಗಾಗಿ ಜನ ಜೆಡಿಎಸ್ ಅನ್ನು ಶೂನ್ಯ ಮಾಡಿ ಸರಕಾರ ಭದ್ರ ಮಾಡಿದ್ದಾರೆ ಇದರಲ್ಲಿ ತಪ್ಪೇನಿದೆ. ಜನ ಎಚ್‍ಡಿಕೆ ಮಾತಿನಂತೆ ನಡೆದು ಕೊಂಡಿದ್ದಾರೆ ಎಂದು ಹೇಳುವ ಮೂಲಕ ಜೆಡಿಎಸ್ ಶೂನ್ಯ ಸಾಧನೆ ವಿಚಾರದಲ್ಲಿ ಎಚ್ಡಿಕೆ ಕಾಲನ್ನು ಜಿಟಿಡಿ ಎಳೆದರು.

    ಕುಮಾರಣ್ಣ ಮುತ್ತಿನಂತ ಮಾತು ಆಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಇತ್ತೀಚೆಗೆ ಅವರು ಆಡುತ್ತಿರುವ ಮಾತುಗಳು ಅಭಿಮಾನಿಗಳನ್ನೇ ಕೆರಳಿಸಿದೆ. ಕುಮಾರಸ್ವಾಮಿ ಅವರ ನಡೆಯೇ ಬೇರೆ, ನುಡಿಯೇ ಬೇರೆ ಆಗಿದೆ. ಇನ್ನಾದರೂ ಅವರು ಬದಲಾಗಬೇಕು. ಆಡುವ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಲಿ ಎಂದು ಎಚ್‍ಡಿಕೆಗೆ ಸಲಹೆ ನೀಡಿದರು.

    ಹುಣಸೂರು ಉಪ ಚುನಾವಣೆಯಲ್ಲಿ ಎಚ್. ವಿಶ್ವನಾಥ್ ಸೋಲಿಗೆ ಸಿ.ಪಿ. ಯೋಗೀಶ್ವರ್ ಕಾರಣ. ಯೋಗೀಶ್ವರ್ ಸಮುದಾಯದ ನಾಯಕರನ್ನು ಟೀಕಿಸಿದ್ದರಿಂದ ಒಕ್ಕಲಿಗರು ವಿಶ್ವನಾಥ್ ವಿರುದ್ಧ ತಿರುಗಿ ಬಿದ್ದರು. ಅವನ್ಯಾರು ದೇವೇಗೌಡ, ಕುಮಾರಸ್ವಾಮಿ, ಜಿ.ಟಿ.ದೇವೇಗೌಡ ಅಂತೆಲ್ಲ ಮಾತನಾಡಿದರು. ದುಡ್ಡು, ಸೀರೆ, ಕುಕ್ಕರ್ ಹಂಚಿ ಗೆಲ್ಲುತ್ತೇವೆ ಎಂಬ ಹುಂಬತನ ಅವರಲ್ಲಿ ಇತ್ತು. ಹೀಗಾಗಿ 5 ಕೋಟಿ ಆಮಿಷ ತೋರಿ ಒಕ್ಕಲಿಗರನ್ನು ಓಲೈಸುವ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಿದರು.

    ಜಿಟಿಡಿ ಪಕ್ಷದ್ರೋಹಿ ಎಂಬ ವಿಶ್ವನಾಥ್ ಹೇಳಿಕೆಗೂ ಜಿ.ಟಿ.ದೇವೇಗೌಡ ತಿರುಗೇಟು ನೀಡಿ, ಹುಣಸೂರಿನಲ್ಲಿ ನಾನು ವಿಶ್ವನಾಥ್ ಬೆಂಬಲಿಸುತ್ತೇನೆ ಎಂದು ಎಲ್ಲಿಯೂ ಹೇಳಿರಲಿಲ್ಲ. ಇಡೀ ಚುನಾವಣೆಯಲ್ಲಿ ನಾನು ಭಾಗವಹಿಸಲ್ಲ ಅಂತ ಮೊದಲೇ ಹೇಳಿದ್ದೆ. ಅಂದ ಮೇಲೆ ಪಕ್ಷದ್ರೋಹಿ ಹೇಗಾಗುತ್ತೆ? ನಾನು ಈಗಲೂ ತಟಸ್ಥನಾಗಿಯೇ ಇದ್ದೇನೆ. ನನ್ನ ಮಗ ಸ್ವತಂತ್ರನಿದ್ದಾನೆ. ಅವನು ಸ್ವತಂತ್ರ ನಿರ್ಧಾರ ಕೈಗೊಂಡಿದ್ದಾನೆ ಎಂದು ಸ್ಪಷ್ಟಪಡಿಸಿದರು.

    ಯೋಗೀಶ್ವರ್ ಟೀಕೆ ನಂತರ ನನ್ನ ಮಗ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಸ್ವಂತ ನಿರ್ಧಾರ ಕೈಗೊಂಡಿದ್ದಾನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಬೆಂಬಲ ವಿಚಾರದಲ್ಲಿ ತಮ್ಮ ಮಗನನ್ನು ಜಿಟಿಡಿ ಸಮರ್ಥಿಸಿಕೊಂಡರು. ವಿಶ್ವನಾಥ್ ಹುಣಸೂರು ಕ್ಷೇತ್ರ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾದರು. ಅವರು ಎಲ್ಲಿಂದಲೋ ಬಂದವರು. ಕಳೆದ ಬಾರಿ ಎಚ್‍ಡಿ ದೇವೇಗೌಡರು, ನಾನು ಒಟ್ಟಿಗೆ ಸೇರಿ ಗೆಲ್ಲಿಸಿಕೊಂಡಿದ್ದೆವು. ಆದರೆ ಅದನ್ನು ಉಳಿಸಿಕೊಳ್ಳಲು ವಿಶ್ವನಾಥ್ ಕೈಯಲ್ಲಿ ಆಗಲಿಲ್ಲ. ಹಳ್ಳಿ ಹಳ್ಳಿಯಲ್ಲಿ ಜನ ಆಕ್ರೋಶ ಹೊರಹಾಕಿದ್ರು. ಗ್ರಾಮಗಳ ಒಳಗೆ ಬಿಟ್ಟು ಕೊಳ್ಳಲಿಲ್ಲ. ಅದು ಅವರ ಸೋಲಿಗೆ ಕಾರಣ ಎಂದರು.

  • ಜೋರಾಗಿದೆ ಉಪಕದನ ಕಲಿಗಳ ಟೆಂಪಲ್ ರನ್

    ಜೋರಾಗಿದೆ ಉಪಕದನ ಕಲಿಗಳ ಟೆಂಪಲ್ ರನ್

    ಮೈಸೂರು: ಉಪಚುನಾವಣೆಯ ಫಲಿತಾಂಶಕ್ಕೆ ಇನ್ನೂ ಒಂದು ದಿನ ಬಾಕಿ ಇದ್ದು, ಕ್ಷೇತ್ರಗಳಲ್ಲಿ ತರಾವರಿ ಲೆಕ್ಕಾಚಾರ ಶುರುವಾಗಿವೆ. ಯಾರು ಸೋಲುತ್ತಾರೆ, ಯಾರು ಗೆಲ್ಲುತ್ತಾರೆ ಎಂಬ ಚರ್ಚೆಗಳು ಜೋರಿದ್ದು, ಈ ನಡುವೆ ಹುಣಸೂರು ಉಪ ಚುನಾವಣೆ ಅಖಾಡದಲ್ಲಿದ್ದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಟೆಂಪಲ್ ರನ್ ನಡೆಸಿದ್ದಾರೆ.

    ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಮಹಾರಾಷ್ಟ್ರದ ಶಿರಡಿಗೆ ತೆರಳಿ ಸಾಯಿಬಾಬಾರಿಗೆ ಪೂಜೆ ಸಲ್ಲಿಸಿದ್ದಾರೆ. ತಮ್ಮ ಗೆಲುವಿಗಾಗಿ ಸಾಯಿಬಾಬಾನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿರಡಿಯ ಸಾಯಿಬಾಬಾನ ದರ್ಶನ ಪಡೆದ ಬಳಿಕ ಮಂತ್ರಾಲಯಕ್ಕೆ ತೆರಳಲಿರುವ ವಿಶ್ವನಾಥ್, ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಪೂಜೆ ಮುಗಿಸಿ ನಾಳೆ ಸಂಜೆ ವೇಳೆಗೆ ಮೈಸೂರಿಗೆ ಆಗಮಿಸಲಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ್ ಸ್ವಾಮಿಗೆ ಪೂಜೆ ಸಲ್ಲಿಸಿದ್ದಾರೆ. ತಮ್ಮ ಗೆಲುವಿಗಾಗಿ ಶ್ರೀ ಮಂಜುನಾಥೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೂ ಜೆಡಿಎಸ್ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್ ಕೂಡ ಹುಣಸೂರು ಕ್ಷೇತ್ರ ವ್ಯಾಪ್ತಿಯಲ್ಲಿನ ದೇವಸ್ಥಾನಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಯಾವ ದೇವರು ಯಾರಿಗೆ ಗೆಲುವಿನ ವರ ಕೊಡುತ್ತಾರೆ ಎಂಬುದು ಸೋಮವಾರ ಸ್ಪಷ್ಟವಾಗಲಿದೆ.

  • ದುಡ್ಡು ಬೇಕಿದ್ದರೆ ಫೋನ್ ಮಾಡಿ, ಕಳಿಸ್ತೀನಿ ಅಂತಾರೆ ಬಿಎಸ್‍ವೈ- ಹೆಚ್‍ಡಿಡಿ ವಾಗ್ದಾಳಿ

    ದುಡ್ಡು ಬೇಕಿದ್ದರೆ ಫೋನ್ ಮಾಡಿ, ಕಳಿಸ್ತೀನಿ ಅಂತಾರೆ ಬಿಎಸ್‍ವೈ- ಹೆಚ್‍ಡಿಡಿ ವಾಗ್ದಾಳಿ

    ಮೈಸೂರು: ಎಲ್ಲ ಅನರ್ಹ ಅಭ್ಯರ್ಥಿಗಳಿಗೆ ಎಷ್ಟು ಹಣ ಬೇಕೋ ಕೇಳಿ. ಎಲ್ಲ ಕಡೆ ಮಂತ್ರಿಗಳನ್ನ ಬಿಟ್ಟು ನೀವು ಚುನಾವಣೆ ಮುಗಿಸಿಯೇ ಬನ್ನಿ. ಮಂತ್ರಿಗಳಿಗೂ ಹಣ ಬೇಕಿದ್ದರೆ ಅಲ್ಲಿಂದಲೇ ಫೋನ್ ಮಾಡಿ ನಾನು ಕಳುಹಿಸ್ತೀನಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ ಎಂದು ಆರೋಪಿಸಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ಎಷ್ಟು ದುಡ್ಡು ಸಾಗಿಸಿದರೂ ಯಾರು ಕೇಳಲ್ಲ. ಅದಕ್ಕೆ 15ಕ್ಕೆ 15 ಗೆಲ್ಲುತ್ತೀನಿ ಅಂತಿದ್ದಾರೆ. ಬಿಎಸ್‍ವೈ ಬಳಿ ಸರ್ಕಾರ, ಗುಪ್ತವಾರ್ತೆ ಇದೆ. ಆರ್ಥಿಕವಾಗಿ ಶಕ್ತಿಯಿದೆ ಎಂದು ಕಿಡಿಕಾರಿದರು.

    ಎಷ್ಟು ಬೇಕು ಹಣ ಹೇಳಿ ಎಂದು ಅನರ್ಹ ಅಭ್ಯರ್ಥಿಗಳಲ್ಲಿ ಬಿಎಸ್‍ವೈ ಹೇಳಿದ್ದಾರೆ. ಎಲ್ಲ ಕಡೆ ಮಂತ್ರಿಗಳನ್ನ ಬಿಟ್ಟು ನೀವು ಚುನಾವಣೆ ಮುಗಿಸಿ ಬನ್ನಿ. ಹಾಗೆಯೇ ಮಂತ್ರಿಗಳಿಗೂ ಹಣ ಬೇಕಿದ್ದರೆ ಫೋನ್ ಮಾಡಿ ನಾನು ಕಳುಹಿಸ್ತಿನಿ ಎಂದಿದ್ದಾರೆ. ಇಷ್ಟೆಲ್ಲ ಇರಬೇಕಾದ್ರೆ ನಾವೇನು ಮಾಡೋಕಾಗುತ್ತದೆ. ಬಿಎಸ್‍ವೈ ದುಡ್ಡಿನಿಂದ ಚುನಾವಣೆ ಮಾಡುತ್ತಿದ್ದಾರೆ ಅಂತ ಮಾಜಿ ಪ್ರಧಾನಿ ಆರೋಪಿಸಿದರು.

    ವಿಶ್ವನಾಥ್ ಒಬ್ಬ ಸೀಸನ್ ಪಾಲಿಟಿಷಿಯನ್. ಹೃದಯದಲ್ಲಿ ಇರುವುದೇ ಬೇರೆ ಜನರ ಮುಂದೆ ಹೇಳೋದೇ ಬೇರೆ. ಇದೆಲ್ಲವೂ ಜನಕ್ಕೆ ಅರ್ಥವಾಗುತ್ತದೆ. ಜನ ಇದನ್ನ ಅರ್ಥ ಮಾಡಿಕೊಳ್ಳದ ಸ್ಥಿತಿಯಲ್ಲಿದ್ದಾರೆ ಅಂದುಕೊಳ್ಳುವುದು ತಪ್ಪು ಎಂದು ಬಿಜೆಪಿ ಅಭ್ಯರ್ಥಿ ಎಚ್ ವಿಶ್ವನಾಥ್‍ಗೆ ಟಾಂಗ್ ನೀಡಿದರು.

    ಅವರು ನನ್ನ ಬಗ್ಗೆಯೂ ಹೊಗಳಿದ್ದಾರೆ. ಸಿದ್ದರಾಮಯ್ಯ ಬಗ್ಗೆಯೂ ಹೊಗಳಿದ್ದಾರೆ. ಮತಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು. ಈಗ ನಮ್ಮಂತ ನಾಯಕರನ್ನ ಟೀಕೆ ಮಾಡಿದ್ರೆ ಅದು ಚುನಾವಣೆ ಮೇಲೆ ಪರಿಣಾಮ ಬಿರುತ್ತದೆ ಅನ್ನೋದು ವಿಶ್ವನಾಥ್‍ಗೆ ಗೊತ್ತಿದೆ. ಹೀಗಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

    ಇದೇ ವೇಳೆ ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಿದ ಹೆಚ್‍ಡಿಡಿ, ದೇಶದ ರಾಜಕೀಯದಲ್ಲಿ ಏನು ಬೇಕಾದ್ರು ಆಗಬಹುದು. ಕರ್ನಾಟಕದ ರಾಜಕಾರಣಕ್ಕೂ ಇದು ಅನ್ವಯವಾಗಲಿದೆ. ಉಪಚುನಾವಣೆ ಫಲಿತಾಂಶ ನಂತರ ಕರ್ನಾಟಕದಲ್ಲಿ ಏನೇನು ಬದಲಾವಣೆ ಆಗುತ್ತೆ ನೋಡೋಣ. ಫಲಿತಾಂಶ ಬಂದ ಮೇಲೆ ಸೋನಿಯಾಗಾಂಧಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ನೋಡೋಣ ಎಂದರು.