Tag: ಎಚ್ ವಿಶ್ವನಾಥ್

  • ವಿಶ್ವನಾಥ್‍ಗೆ ಪಕ್ಷದ ಸಿದ್ಧಾಂತ ಗೊತ್ತಿಲ್ಲ, ಕರೆದು ತಿಳಿ ಹೇಳುತ್ತೇವೆ: ಕಟೀಲ್

    ವಿಶ್ವನಾಥ್‍ಗೆ ಪಕ್ಷದ ಸಿದ್ಧಾಂತ ಗೊತ್ತಿಲ್ಲ, ಕರೆದು ತಿಳಿ ಹೇಳುತ್ತೇವೆ: ಕಟೀಲ್

    ರಾಯಚೂರು: ಎಚ್. ವಿಶ್ವನಾಥ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರು ಇತ್ತೀಚೆಗೆ ನಮ್ಮ ಪಾರ್ಟಿಗೆ ಸೇರಿದ್ದಾರೆ. ಅವರನ್ನು ಕರೆದು ನಮ್ಮ ಪಕ್ಷದ ಸಿದ್ಧಾಂತದ ಬಗ್ಗೆ ತಿಳಿ ಹೇಳುತ್ತೇವೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

    ರಾಯಚೂರಿನಲ್ಲಿ ವೃಕ್ಷಾರೋಪಣ ಕಾರ್ಯಕ್ರಮ ಹಾಗೂ ಬಿಜೆಪಿ ಕಾರ್ಯಾಲಯ ಉದ್ಘಾಟನೆಗೆ ಆಗಮಿಸಿದ್ದ ಕಟೀಲ್, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಊಹಾಪೋಹಗಳ ಮೂಲಕ ನಾನು ಉತ್ತರ ಕೊಡೋಕೆ ಆಗಲ್ಲ. ಎಲ್ಲರ ಹತ್ತಿರ ನಾನೂ ಮಾತನಾಡಿದ್ದೇನೆ, ಅರುಣ್ ಸಿಂಗ್ ಮಾತನಾಡಿದ್ದಾರೆ ಎಂದರು.

    ಅರವಿಂದ್ ಬೆಲ್ಲದ್ ಫೋನ್ ಕದ್ದಾಲಿಕೆ ವಿಚಾರ ತನಿಖಾ ಹಂತದಲ್ಲಿದೆ ಸರ್ಕಾರ ಅದನ್ನ ನೋಡಿಕೊಳ್ಳುತ್ತದೆ. ನಾನು ಉತ್ತರ ಕೊಡುವುದು ಸರಿಯಲ್ಲ. ಪ್ರತಿ ಜನಪ್ರತಿನಿಧಿಗೂ ಸ್ವಾತಂತ್ರ್ಯವಿದೆ. ಅವರು ಯಾವ ಮಸೀದಿ, ದೇವಸ್ಥಾನ, ಮಠಕ್ಕೂ ಹೋಗಬಹುದು ಅಂತ ಹೇಳಿದರು. ಫಡ್ನವಿಸ್ ಜಾರಕಿಹೊಳಿ ಭೇಟಿ ವಿಚಾರವಾಗಿ ಮಾತನಾಡಿದ ಕಟಿಲ್, ಅವರು ನಮ್ಮ ಪಕ್ಷದ ನಾಯಕರನ್ನು ಭೇಟಿಯಾಗಿದ್ದಾರೆ. ಫಡ್ನವಿಸ್-ರಮೇಶ್ ಜಾರಕಿಹೊಳಿಯದ್ದು ಸಾಮಾನ್ಯ ಭೇಟಿ ಅದಕ್ಕೆ ಬೇರೆ ಅರ್ಥಗಳನ್ನ ಕಲ್ಪಿಸುವ ಅಗತ್ಯವಿಲ್ಲ ಎಂದರು. ಇದನ್ನೂ ಓದಿ: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ

    ಇವತ್ತು ಪ್ರಶ್ನೆ ಮಾಡಬೇಕಾಗಿರುವುದು ಸೋತು ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಬಗ್ಗೆ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಜಗಳ ಪ್ರಾರಂಭ ಮಾಡಿದ್ದಾರೆ. ಪಕ್ಷದಲ್ಲಿ ಖುರ್ಚಿ ಹೋರಾಟ ಪ್ರಾರಂಭವಾಗಿದೆ. ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಾಕಿದ ಜೈಲಿನಲ್ಲಿದ್ದವನನ್ನೇ ಸಸ್ಪೆಂಡ್ ಮಾಡಲು ಆಗಲಿಲ್ಲ. ಪಕ್ಷದ ಪದಾಧಿಕಾರಿಗಳನ್ನ ಆಯ್ಕೆ ಮಾಡಲು ಹೈಕಮಾಂಡಗೆ ಹೋಗಿ ಗಲಾಟೆ ಮಾಡಿ ಹೈಕಮಾಂಡ್ ಅದನ್ನ ನಿಲ್ಲಿಸುವಂತ ಕೆಲಸಗಳಾಗಿವೆ. ಕಾಂಗ್ರೆಸ್ ನಲ್ಲಿ ನಾಯಕತ್ವದ ಪ್ರಶ್ನೆಗಳಿವೆ. ಗುಂಪುಗಾರಿಕೆ ಇರುವಂತಹದ್ದು ಕಾಂಗ್ರೆಸ್‍ನಲ್ಲಿ, ಒಡಂಬಡಿಕೆಯಿಲ್ಲದಿರುವುದು ಕಾಂಗ್ರೆಸ್‍ನಲ್ಲಿ. ಮುಂದಿನ ಸರ್ಕಾರ ನಮ್ಮದೇ ಬರುತ್ತೆ ಆದ್ರೆ ಕಾಂಗ್ರೆಸ್ ನವರು ಈಗಲೇ ಗಲಾಟೆ ಶುರು ಮಾಡಿಕೊಂಡಿದ್ದಾರೆ. ಮೂಲ ವಲಸಿಗ ತಿಕ್ಕಾಟ ಕಾಂಗ್ರೆಸ್‍ನಲ್ಲಿ ಶುರುವಾಗಿದೆ ಅಂತ ಹೇಳಿದರು.

    ಮಸ್ಕಿ ಉಪಚುನಾವಣೆ ಸೋಲಿನ ಬಗ್ಗೆ ಅವಲೋಕನ ಮಾಡುತ್ತಿದ್ದೇವೆ. ಬೆಳಗಾವಿಯಲ್ಲಿ ಕೆಲವಡೆ ಹಿನ್ನೆಡೆಯಾಗಿರುವ ಬಗ್ಗೆಯೂ ಅವಲೋಕನ ನಡೆಸಿದೆ. ಪಕ್ಷದ ಕಾರ್ಯಕರ್ತರ ಸಭೆ ಮೂಲಕ ಚರ್ಚೆ ಮಾಡುತ್ತಿದ್ದೇವೆ ಅಂತ ನಳಿನ್ ಕುಮಾರ್ ಕಟೀಲ್ ಹೇಳಿದರು.

  • ವಿಶ್ವನಾಥ್​ರನ್ನು ಪಕ್ಕದಲ್ಲಿ ಕೂರಿಸಿಕೊಳ್ಳಲು ಸಾರಾ ಹಿಂದೇಟು

    ವಿಶ್ವನಾಥ್​ರನ್ನು ಪಕ್ಕದಲ್ಲಿ ಕೂರಿಸಿಕೊಳ್ಳಲು ಸಾರಾ ಹಿಂದೇಟು

    – ಕುಳಿತ ಬಳಿಕ ಉಭಯ ಕುಶಲೋಪರಿ ನಡೆಸಿದ ನಾಯಕರು

    ಮೈಸೂರು: ಪರಸ್ಪರ ಟೀಕೆ, ಪ್ರತಿ ಟೀಕೆಯಲ್ಲಿ ಮುಳುಗಿರುವ ಕೆ.ಆರ್.ನಗರ ಶಾಸಕ ಸಾರಾ ಮಹೇಶ್ ಮತ್ತು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಕ್ಕ ಪಕ್ಕದಲ್ಲಿ ಕೂರುವ ಪ್ರಸಂಗ ಬಂದಾಗ ಆದಷ್ಟು ಅವರನ್ನು ಬೇರೆ ಕಡೆ ಕೂರಿಸುವ ಪ್ರಯತ್ನವನ್ನು ಸಾರಾ ಮಹೇಶ್ ಮಾಡಿದ್ದು ಕ್ಯಾಮಾರ ಕಣ್ಣಲ್ಲಿ ಸೆರೆಯಾಯಿತು.

    ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಸಭೆಯಲ್ಲಿ ಸಾರಾ ಮಹೇಶ್ ಅವರ ಪಕ್ಕದ ಕುರ್ಚಿಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಕುಳಿತಿದ್ದರು. ಸಭೆಗೆ ಎಚ್.ವಿಶ್ವನಾಥ್ ತಡವಾಗಿ ಬಂದರು.ವಿಶ್ವನಾಥ್ ಸಭೆಯ ವೇದಿಕೆಗೆ ಬಂದ ತಕ್ಷಣ ಶಾಸಕ ಅನಿಲ್ ಚಿಕ್ಕಮಾದು ಕುರ್ಚಿ ಬಿಟ್ಟುಕೊಡಲು ಮುಂದಾದರು. ಆಗ ಕುರ್ಚಿ ಬಿಟ್ಟು ಕೊಡದಂತೆ ಸಾರಾ ಮಹೇಶ್, ಅನಿಲ್ ಚಿಕ್ಕಮಾದು ಕೈ ಹಿಡಿದುಕೊಂಡರು.

    ಸಾರಾ ಮಹೇಶ್ ಕೈ ಎಳೆದರೂ ಪಕ್ಕಕ್ಕೆ ಸರಿದ ಅನಿಲ್ ಚಿಕ್ಕಮಾದು, ವಿಶ್ವನಾಥ್ ಅವರಿಗೆ ತಮ್ಮ ಕುರ್ಚಿ ಬಿಟ್ಟು ಕೊಟ್ಟರು. ಆಗ ವಿಧಿ ಇಲ್ಲದೆ ವಿಶ್ವನಾಥ್ ಪಕ್ಕದಲ್ಲೇ ಸಾರಾ ಮಹೇಶ್ ಕುಳಿತುಕೊಳ್ಳಬೇಕಾಯಿತು. ಪಕ್ಕ ಕುಳಿತ ವಿಶ್ವನಾಥ್ ಜೊತೆ ಸಾರಾ ಮಹೇಶ್ ಉಭಯ ಕುಶಲೋಪರಿ ನಡೆಸಿದರು.

  • ವಿಶ್ವನಾಥ್ ಬಗ್ಗೆ ಮಾತನಾಡಲ್ಲ, ಶಿಸ್ತು ಕ್ರಮ ತೆಗೆದುಕೊಳ್ಳಬೇಕು – ಹೈಕಮಾಂಡ್‍ಗೆ ಸಿಎಂ ಮನವಿ

    ವಿಶ್ವನಾಥ್ ಬಗ್ಗೆ ಮಾತನಾಡಲ್ಲ, ಶಿಸ್ತು ಕ್ರಮ ತೆಗೆದುಕೊಳ್ಳಬೇಕು – ಹೈಕಮಾಂಡ್‍ಗೆ ಸಿಎಂ ಮನವಿ

    ಬೆಂಗಳೂರು: ವಿಶ್ವನಾಥ್ ಬಗ್ಗೆ ನಾನೇನು ಮಾತನಾಡುವುದಿಲ್ಲ. ಹೈಕಮಾಂಡ್‍ಗೆ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವನಾಥ್ ವಿರುದ್ಧವಾಗಿ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ – ವಿಶ್ವನಾಥ್ ಆರೋಪ

    ವಿಶ್ವನಾಥ್ ರಿಂದ ವಿಜಯೇಂದ್ರ ಹಸ್ತಕ್ಷೇಪ ಆರೋಪ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಆಧಾರ ರಹಿತವಾಗಿರುವ ಆರೋಪವಾಗಿದೆ. ಅನಾವಶ್ಯಕವಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಅಂತಹ ಯಾವುದೇ ಹಸ್ತಕ್ಷೇಪ ಆಗಿಲ್ಲ. ನೀರಾವರಿ ಕಿಕ್ ಬ್ಯಾಕ್ ಆರೋಪ ಅದಕ್ಕೆ ನೀರಾವರಿ ಎಂಡಿ ಪ್ರತಿಕ್ರಿಯೆ ಕೊಡ್ತಾರೆ. ಶಿಸ್ತು ಕ್ರಮದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಂಜೆ ಕೋರ್ ಕಮಿಟಿ ಇದೆ. ಕೋರ್ ಕಮಿಟಿಯಲ್ಲಿ ಚರ್ಚೆ ಮಾಡೋಕೆ ಅಜೆಂಡಾ ಫಿಕ್ಸ್ ಆಗಿಲ್ಲ. ಎಲ್ಲಾ ವಿಚಾರದ ಬಗ್ಗೆ ಚರ್ಚೆ ಮಾಡ್ತೀವಿ. ಪ್ರವಾಹ, ರಾಜಕೀಯ ವಿಚಾರಗಳು ಸೇರಿದಂತೆ ಎಲ್ಲಾ ವಿಚಾರ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ಬಗ್ಗೆ ಮಾತನಾಡಿದ್ರೆ ನನ್ನ ಬಾಯಿ ಹೊಲಸಾಗುತ್ತೆ: ರೇಣುಕಾಚಾರ್ಯ

    ವಿಶ್ವನಾಥ್ ಆರೋಪ ಏನು?
    ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ಎಲ್ಲಾ ಸಚಿವರು ಮಾತನಾಡುತ್ತಿದ್ದಾರೆ. ಯಾವ ಸಚಿವರು ಸಮಾಧಾನದಿಂದ ಇದ್ದಾರೆ ಹೇಳಿ? ಯಡಿಯೂರಪ್ಪ ಮಕ್ಕಳಿಂದ ಮೊದಲು ಜೈಲಿಗೆ ಹೋಗಿದ್ದರು. ಎರಡನೇ ಬಾರಿಗೆ ಹೀಗಾಗಬಾರದು ಅನ್ನೋದು ನಮ್ಮ ಆಶಯ. ಯಡಿಯೂರಪ್ಪನವರದು ಇ.ಡಿಯಲ್ಲಿ ಕೇಸಿಲ್ವಾ ಎಂದು ಪ್ರಶ್ನಿಸಿದ್ದಾರೆ. ರೇಣುಕಾಚಾರ್ಯ ಜಯಲಕ್ಷ್ಮಿ ನರ್ಸ್ ಕಥೆ ಏನಾಯ್ತು? ಊಟಕ್ಕೆ ಕರೆದ ಸ್ನೇಹಿತನ ಹೆಂಡತಿಯನ್ನು ಅತ್ಯಾಚಾರ ಮಾಡಲು ಹೋಗಿ ಹಾಲಪ್ಪ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದಾನೆ ಎಂದು ಎಚ್.ವಿಶ್ವನಾಥ್ ಬಹಿರಂಗವಾಗಿ ಕಿಡಿಕಾರಿದ್ದಾರೆ.

    ನಾನು ನಿನ್ನೆ ಅರುಣ್ ಸಿಂಗ್ ಭೇಟಿ ಮಾಡಿ ರಾಜ್ಯದಲ್ಲಿ ಪಕ್ಷದ ರಾಜಕಾರಣ ಹಾಗೂ ಸರ್ಕಾರದ ಆಡಳಿತದ ಬಗ್ಗೆ ಹೇಳಿದ್ದೇನೆ. ಇನ್ನು 22 ತಿಂಗಳು ಮಾತ್ರ ಬಾಕಿ ಉಳಿದಿದೆ. ಮುಂದಿನ ದಿನಗಳಲ್ಲಿ ಹೀಗೆ ಹೋದರೆ ಹಿನ್ನಡೆ ಆಗುತ್ತೆ ಅಂತ ಹೇಳಿದ್ದೇನೆ. ಅಲ್ಲದೆ 2024 ರ ಲೋಕಸಭೆ ಚುನಾವಣೆಗೂ ಎಫೆಕ್ಟ್ ಆಗುತ್ತೆ ಅಂತ ಹೇಳಿದ್ದೇನೆ. ಇದಕ್ಕೆಲ್ಲ ನಾಯಕತ್ವವೇ ಕಾರಣ, 75 ವರ್ಷ ಮೀರಿದವರ ಬಗ್ಗೆ ನಮ್ಮ ಪಕ್ಷದಲ್ಲೇ ಲಕ್ಣ್ಮಣ ರೇಖೆ ಇದೆ. ಅದು ದಾಟಿದ ಮೇಲೆ ವಯಸ್ಸು ಸಹಕರಿಸಲ್ಲ. ಯಡಿಯೂರಪ್ಪ ನವರಿಗೆ ಮೊದಲು ಶಕ್ತಿ ಇತ್ತು ಈಗ ಇಲ್ಲ. ಶಕ್ತಿ ಪೀಠದ ಪ್ರಭಾವಳಿ ಕಡಿಮೆ ಆಗುತ್ತಿದೆ. ಪಕ್ಷದ ಸಿದ್ಧಾಂತ ಹಾಗೂ ಕಾರ್ಯಕ್ರಮದ ವಿರುದ್ದ ಮಾತನಾಡಿಲ್ಲ ಎಂದು ಎಚ್.ವಿಶ್ವನಾಥ್ ಗುಡುಗಿದ್ದಾರೆ.

     

  • ವಿಶ್ವನಾಥ್ ಬಗ್ಗೆ ಮಾತನಾಡಿದ್ರೆ ನನ್ನ ಬಾಯಿ ಹೊಲಸಾಗುತ್ತೆ: ರೇಣುಕಾಚಾರ್ಯ

    ವಿಶ್ವನಾಥ್ ಬಗ್ಗೆ ಮಾತನಾಡಿದ್ರೆ ನನ್ನ ಬಾಯಿ ಹೊಲಸಾಗುತ್ತೆ: ರೇಣುಕಾಚಾರ್ಯ

    ಬೆಂಗಳೂರು: ಸಿಎಂ ಯಡಿಯೂರಪ್ಪ ಹಾಗೂ ಅವ್ರ ಕುಟುಂಬ ವಿರುದ್ದ ಮಾತನಾಡಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಿರುದ್ದ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ:  ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ – ವಿಶ್ವನಾಥ್ ಆರೋಪ

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ನಾಲಿಗೆ ಸಂಸ್ಕೃತಿ ಸರಿಯಿಲ್ಲ. ನಿನ್ನೆ ಸಿಎಂ ಯಡಿಯೂರಪ್ಪ ವಿರುದ್ಧ ಮಾತನಾಡಿದಾಗ ನಾವೆಲ್ಲಾ ಸ್ವಯಂ ಪ್ರೇರಣೆಯಿಂದ ವಿಶ್ವನಾಥ್ ವಿರುದ್ದ ಮಾತಾಡಿದ್ದೇವೆ. ಅವರಿಗೆ ಎಲೆಕ್ಷನ್‍ಗೆ ನಿಲ್ಲಬೇಡಿ ಅಂದ್ರೂ ಅವರು ನಿಂತರು. ಸೋತ ಮೇಲೆ ಸಿಎಂ ಯಡಿಯೂರಪ್ಪ ಅವರನ್ನ ಎಂಎಲ್‍ಸಿ ಮಾಡಿದರು. ಆದರೂ ಸಿಎಂ ವಿರುದ್ಧ, ಅವರ ಕುಟುಂಬದ ವಿರುದ್ಧ ಮಾತನಾಡಬಾರದು ಅಂತಾ ಹೇಳಿದ್ದೇವೆ. ರಾಜಕಾರಣದಲ್ಲಿ ಹಿರಿಯರು, ಆದರೆ ಅವರ ನಾಲಿಗೆ ಸಂಸ್ಕೃತಿ ಸರಿಯಿಲ್ಲ. ಎಚ್. ವಿಶ್ವನಾಥ್ ಆಡಿಯೋ ವೀಡಿಯೋ ಎಲ್ಲಾ ಇದೆ. ಅದನ್ನ ಕೇಳಿಸಿಕೊಂದರೆ ಸಾಕು ಅವರು ಎಂತಹವರು ಅಂತ ಗೊತ್ತಾಗುತ್ತದೆ. ಅವರ ಬಗ್ಗೆ ಮಾತನಾಡಿದ್ರೆ ನಮ್ಮ ಬಾಯಿ ಹೊಲಸಾಗುತ್ತೆದೆ ಎಂದು ಕಿಡಿಕಾರಿದ್ದಾರೆ.

    ಎಲ್ಲೋ ಇದ್ದ ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಬಂದು ಅಧ್ಯಕ್ಷಗಿರಿ ಕೊಟ್ಟ ದೇವೇಗೌಡರು, ಕುಮಾರಸ್ವಾಮಿ ವಿರುದ್ಧವೇ ಮಾತನಾಡುತ್ತಾರೆ. ಈಗ ಯಡಿಯೂರಪ್ಪ, ಅವರ ಕುಟುಂಬದ ಬಗ್ಗೆ ಮಾತನಾಡ್ತಾರೆ ಅಂತ ಆಕ್ರೋಶ ಹೊರ ಹಾಕಿದ್ದಾರೆ.

    ವಿಜಯೇಂದ್ರ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ವಿಶ್ವನಾಥ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಯಾವುದೇ ಕಿಕ್ ಬ್ಯಾಕ್ ಪಡೆದಿಲ್ಲ. ಪಾರದರ್ಶಕವಾಗಿ ಟೆಂಡರ್ ಆಗಿದೆ. ಎಲ್ಲಾ ವಿವರವೂ ವೆಬ್‍ಸೈಟ್ ನಲ್ಲಿರುತ್ತೆ. ಅದನ್ನ ನೋಡಿದ್ರೆ ಎಲ್ಲರಿಗೂ ಗೊತ್ತಾಗುತ್ತದೆ. ಹತಾಶೆಯಿಂದ ವಿಶ್ವನಾಥ್ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.

  • ಬಿಎಸ್‍ವೈ ಬಳಿಕ ಉತ್ತರ ಕರ್ನಾಟಕದ ವೀರಶೈವರಿಗೆ ಸಿಎಂ ಸ್ಥಾನ ನೀಡಿದ್ರೆ ಸೂಕ್ತ: ಎಚ್.ವಿಶ್ವನಾಥ್

    ಬಿಎಸ್‍ವೈ ಬಳಿಕ ಉತ್ತರ ಕರ್ನಾಟಕದ ವೀರಶೈವರಿಗೆ ಸಿಎಂ ಸ್ಥಾನ ನೀಡಿದ್ರೆ ಸೂಕ್ತ: ಎಚ್.ವಿಶ್ವನಾಥ್

    – ಸಿಎಂ ಸ್ಥಾನಕ್ಕೆ ಮೂವರ ಹೆಸರನ್ನ ಸೂಚಿಸಿದ ವಿಶ್ವನಾಥ್
    – ಯಡಿಯೂರಪ್ಪನವರ ರಾಜೀನಾಮೆ ನಿರ್ಧಾರ ಅನಿರೀಕ್ಷಿತವೇನಲ್ಲ

    ಮೈಸೂರು: ಹೈಕಮಾಂಡ್ ಸೂಚಿಸಿದರೆ ಪದತ್ಯಾಗ ಮಾಡಲು ಸಿದ್ಧ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿರುವುದು ಸರಿ ಇದೆ. ಆದರೆ ಯಡಿಯೂರಪ್ಪನವರ ಬಳಿಕ ಉತ್ತರ ಕರ್ನಾಟಕದ ವೀರಶೈವ ನಾಯಕರೇ ಮುಖ್ಯಮಂತ್ರಿಯಾದರೆ ಸೂಕ್ತ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದೀಗ ವೀರಶೈವ ಸಮುದಾಯದ ಮುಖ್ಯಮಂತ್ರಿ ನಿರ್ಗಮಿಸುತ್ತಿರುವುದರಿಂದ ಮತ್ತೆ ಅದೇ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡುವುದು ಸೂಕ್ತ. ಅದರಲ್ಲೂ ಉತ್ತರ ಕರ್ನಾಟಕದವರಿಗೇ ನೀಡಬೇಕು. ಬಸವರಾಜ್ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ ಇಲ್ಲವೇ ವೀರಶೈವರಲ್ಲಿ ಯಾವದೇ ನಾಯಕರಿಗೆ ಸಿಎಂ ಸ್ಥಾನ ಕೊಟ್ಟರೂ ಸರಿಯಾಗುತ್ತದೆ ಎಂದರು.

    ಇದು ಯಡಿಯೂರಪ್ಪನವರು ತೆಗೆದುಕೊಂಡಿರುವ ತೀರ್ಮಾನ, ರಾಜೀನಾಮೆ ಕುರಿತು ಸಿ.ಪಿ.ಯೋಗೇಶ್ವರ್ ಇಲ್ಲವೇ ಇನ್ನೊಬ್ಬರಾಗಲಿ ಕೇವಲ ಕಾಕತಾಳೀಯ ಮಾತ್ರ. ಇದು ಯಡಿಯೂರಪ್ಪನವರ ನಿರ್ಧಾರವೇ ಆಗಿದೆ. ಯೋಗೇಶ್ವರ್ ಸೇರಿದಂತೆ ಇನ್ಯಾರಿಗೇ ಆಗಲಿ ಯಡಿಯೂರಪ್ಪನವರನ್ನು ತೆಗೆಯುವ ಶಕ್ತಿ ಇಲ್ಲವೇ ಇಲ್ಲ ಎಂದು ಹೇಳಿದರು.

    ಅನಿರೀಕ್ಷಿತವೇನಲ್ಲ, ನಿರೀಕ್ಷಿತ:
    ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವರ ಕುರಿತು ಹೇಳಿಕೆ ನೀಡಿರುವುದು ಅನಿರೀಕ್ಷಿತವೇನಲ್ಲ, ನಿರೀಕ್ಷಿತವೇ. ಹೈ ಕಮಾಂಡ್ ಸೂಚನೆ ನೀಡಿದರೆ ನಾನು ಪದತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿರುವುದು ನಿಜ. ಬಿಜೆಪಿ ಹೈಕಮಾಂಡ್ ಆಧಾರಿತ ಪಕ್ಷ, ಅವರ ಮಾತುಗಳೇ ನಡೆಯುವುದು. ದೆಹಲಿ ಹೈಕಮಾಂಡ್ ಹೇಳಿದ್ದನ್ನು ನಾವು ಕೇಳಲೇಬೇಕು. ಇಂದಿನ ಪರಿಸ್ಥಿತಿಯಲ್ಲಿ ಬಿ.ಎಸ್.ಯಡಿಯೂರಪ್ಪನವರು ತೆಗೆದುಕೊಂಡಿರುವ ನಿರ್ಧಾರ ತುಂಬಾ ಸಮಂಜಸವಾಗಿದೆ. ಕೊರೊನಾ ಅಟ್ಟಹಾಸ, ಆರ್ಥಿಕ ಸಂಕಷ್ಟ, ಅತಿವೃಷ್ಟಿ ಸೇರಿದಂತೆ ನೂರಾರು ಸಂಕಷ್ಟಗಳು ಎದುರಾಗಿವೆ. ಇದೆಲ್ಲದರ ನಡುವೆ ಯಡಿಯೂರಪ್ಪನವರು ಯೋಚಿಸಿರುವುದು ಸರಿ ಇದೆ. ರಾಜ್ಯದ ಶಕ್ತಿ ಪೀಠ ಯಾಕೋ ಮುಸುಕಾಗುತ್ತಿದೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಇದನ್ನೂ ಅರ್ಥೈಸಿಕೊಂಡು ರಾಜ್ಯದ ಅಭಿವೃದ್ಧಿ, ಬಿಜೆಪಿ ಸಂಘಟನೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದು ಸಂತೋಷ ತಂದಿದೆ ಎಂದರು.

    ಪರಿಸ್ಥಿತಿ ತುಂಬಾ ವಿಷಮವಾಗುತ್ತಿದೆ:
    ಹೈಕಮಾಂಡ್ ಒತ್ತಡವೇನಿಲ್ಲ, ತುಂಬಾ ಸೂಕ್ಷ್ಮವಾಗಿ ನಿಭಾಯಿಸುತ್ತಿದೆ. 75 ವರ್ಷಗಳ ನಂತರ ಜವಾಬ್ದಾರಿ ಸ್ಥಾನದಲ್ಲಿ ಇರುವುದು ಬೇಡ ಎಂಬುದು ಪಕ್ಷದ ನಿಯಮ. ಅಡ್ವಾಣಿಯವರಿಗೂ ಇದೇ ರೀತಿ ಗೆರೆ ಹಾಕಿದ್ದರು. ಆದರೆ ರಾಜ್ಯದಲ್ಲಿ ಬಿಜೆಪಿ ಬೆಳೆಸಿದ ಕೀರ್ತಿ ಯಡಿಯೂರಪ್ಪನವರಿಗೆ ಇದೆ. ಇಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದಕ್ಕೆ ಕಾರಣ ಯಡಿಯೂರಪ್ಪನವರು. ಈ ಎಲ್ಲ ಸಂಶಗಳನ್ನು ಮನಗಂಡು 75 ವರ್ಷಗಳು ಆದರೂ ಪರವಾಗಿಲ್ಲ, ಸಿಎಂ ಆಗಿ ನೀವೇ ಮುಂದುವರಿಯಿರಿ ಎಂದು ಪಕ್ಷ ಹೇಳಿತು. ಆದರೆ ಈಗ ಪರಿಸ್ಥಿತಿ ತುಂಬಾ ವಿಷಮವಾಗುತ್ತಿದೆ. ಅವರ ವಯಸ್ಸು, ಆರೋಗ್ಯ, ಮನಸ್ಸಿನ ಸಂಘರ್ಷ ನಿಭಾಯಿಸುವ ಸ್ಪಿರಿಟ್ ಕಡಿಮೆಯಾಗಿದೆ ಎಂದು ತಮ್ಮ ಅನಿಸಿಕೆ ತಿಳಿಸಿದರು.

    ನಾವೆಲ್ಲ ಪರಿಸ್ಥಿತಿಯ ಶಿಶುಗಳು, ಹೀಗಾಗಿ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂಬ ಸಂದೇಶವನ್ನು ಹೈಕಮಾಂಡ್‍ಗೆ ರವಾನಿಸಿದ್ದಾರೆ. ಎಲ್ಲ ನಾಯಕರಿಗೂ ತಮ್ಮ ತಪ್ಪುಗಳು ಕಾಣುತ್ತವೆ. ಆ ತಪ್ಪುಗಳನ್ನು ಒಪ್ಪಿಕೊಂಡು ಮುಂದುವರಿಯಬೇಕಿರುವುದು ತುಂಬಾ ಮುಖ್ಯ. ಈ ದೊಡ್ಡತನವನ್ನೇ ಯಡಿಯೂರಪ್ಪನವರು ಇಂದು ಪ್ರದರ್ಶಿಸುತ್ತಿದ್ದಾರೆ ಎಂದು ತಿಳಿಸಿದರು.

    ಎಲ್ಲವನ್ನು ಎದುರಿಸುವ ನಾಯಕ ಬರಬೇಕು:
    ಮುಖ್ಯಮಂತ್ರಿಗಳ ಜೊತೆಗೆ ಸಚಿವರೂ ಬದಲಾಗಬೇಕೆಂಬುದು ಹೊಸ ಮುಖ್ಯಮಂತ್ರಿ ಬಂದ ನಂತರದ ವಿಚಾರ. ಮುಂದೆ ಬರುವ ಮುಖ್ಯಮಂತ್ರಿ ಸರಿಯಾದ ಸಚಿವರನ್ನು ಆಯ್ಕೆ ಮಾಡಿಕೊಂಡು ಇಂದು ನಡೆಯುತ್ತಿರುವ ಯುದ್ಧವನ್ನು ಎದುರಿಸಬೇಕು. ಮಲ್ಲಯುದ್ಧಕ್ಕೆ ಯಾರನ್ನು ಬಿಡಬೇಕು, ಬಿಲ್ಲು, ಬಾಣ ಯಾರಿಗೆ ಕೊಡಬೇಕು, ಸೈನಿಕರನ್ನು ಯಾರು ನಿರ್ವಹಿಸಬೇಕು ಎಂಬುದನ್ನು ಕೃಡೀಕರಿಸಿ, ಎಲ್ಲವನ್ನು ಎದುರಿಸುವ ನಾಯಕ ಬರಬೇಕು ಎಂದು ತಿಳಿಸಿದರು.

  • ಎಲ್ಲದಕ್ಕೂ ಮೂಹೂರ್ತ ಇಟ್ಟಿದ್ದು ಇಲ್ಲೇ, ಈಗಲೂ ಇಟ್ಟಿದ್ದೇವೆ: ಎಚ್. ವಿಶ್ವನಾಥ್

    ಎಲ್ಲದಕ್ಕೂ ಮೂಹೂರ್ತ ಇಟ್ಟಿದ್ದು ಇಲ್ಲೇ, ಈಗಲೂ ಇಟ್ಟಿದ್ದೇವೆ: ಎಚ್. ವಿಶ್ವನಾಥ್

    ಮೈಸೂರು: ಎಲ್ಲದಕ್ಕೂ ಮುಹೂರ್ತ ಇಟ್ಟಿದ್ದು ಶ್ರೀನಿವಾಸ್ ಪ್ರಸಾದ್ ಮನೆಯಲ್ಲಿ ಈಗಲೂ ಮುಹೂರ್ತ ಇಟ್ಟಿದ್ದೇವೆ. ಯಾವುದಕ್ಕೆ ಎಂದು ಹೇಳುವುದಿಲ್ಲ ಎನ್ನುವ ಮೂಲಕ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕುತೂಹಲ ಮೂಡಿಸಿದ್ದಾರೆ.

    ಮೈಸೂರಿನಲ್ಲಿ ಇಂದು ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿದ್ದ ಎಚ್. ವಿಶ್ವನಾಥ್ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ಮನೆಯಲ್ಲಿ ಹಲವು ವಿಚಾರಕ್ಕೆ ಮೂಹೂರ್ತ ಇಟ್ಟಿದ್ದೇವೆ. ಸಿದ್ದರಾಮಯ್ಯ ಸೋಲಿಗೂ ಇಲ್ಲೇ ಮುಹೂರ್ತ ಇಟ್ಟಿದ್ದು. ಸಮ್ಮಿಶ್ರ ಸರ್ಕಾರ ಪತನಕ್ಕೂ ಇಲ್ಲೇ ಮುಹೂರ್ತ ಇಟ್ಟಿದ್ದು. ಯಡಿಯೂರಪ್ಪ ಸಿಎಂ ಆಗುವುದಕ್ಕೂ ಮುಹೂರ್ತ ಇಟ್ಟಿದ್ದು ಇಲ್ಲಿಯೇ. ನಂತರದ ಹಲವು ಬೆಳವಣಿಗೆ ಪ್ರಸಾದ್ ಮನೆ ಸಾಕ್ಷಿ ಆಗಿದೆ. ಈಗಲೂ ಪ್ರಸಾದ್ ಭೇಟಿಯ ಜೊತೆ ರಾಜಕೀಯ ಹಾಗೂ ಜಿಲ್ಲೆಯ ವಿದ್ಯಮಾನದ ಬಗ್ಗೆ ಮಾತನಾಡಿದ್ದೇವೆ ಎಂದರು. ಇದನ್ನೂ ಓದಿ: ಮತ್ತೆ ಡಿಸಿಗೆ ಪ್ರಶ್ನೆ ಕೇಳಿದ ಪ್ರತಾಪ್ ಸಿಂಹ – ಇನ್ಮುಂದೆ ಮಾತಾಡಲ್ಲವೆಂದು ಕದನ ವಿರಾಮ ಘೋಷಣೆ!

    ಸದ್ಯಕ್ಕೆ ಯಾವ ವಿಚಾರಕ್ಕೆ ಮುಹೂರ್ತ ಎಂದು ಹೇಳುವುದಿಲ್ಲ. ಕಾದು ನೋಡೋಣ. ಸಿಎಂ ಯಡಿಯೂರಪ್ಪ ಅವರಿಗೆ ಆರೋಗ್ಯ ಸರಿಯಿಲ್ಲ. ಅವರ ಆರೋಗ್ಯ ಸರಿಯಾಗಬೇಕು. ಅದರ ಜೊತೆ ರಾಜ್ಯದ ಆಡಳಿತದ ಆರೋಗ್ಯವು ಸರಿಯಾಗಬೇಕು. ಇದಕ್ಕಾಗಿ ಹೈಕಮಾಂಡ್ ಶೀಘ್ರವೇ ಒಂದು ತೀರ್ಮಾನ ಕೈಗೊಳ್ಳಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ನಾಯಕತ್ವ ಬದಲಾವಣೆಗೆ ಪುಷ್ಠಿ ಕೊಟ್ಟಂತೆ ಹೇಳಿಕೆ ನೀಡಿದರು.

    ರಾಜ್ಯ ರಾಜಕಾರಣದಲ್ಲಿ ಸ್ವಲ್ಪ ಗೊಂದಲ ಇದೆ. ಕೆಲವರು ದೆಹಲಿಗೆ ಹೋಗಿದ್ದಾರೆ. ಇನ್ನು ಕೆಲವರು ಹೇಳಿಕೆ ಕೊಡುತ್ತಿದ್ದಾರೆ. ಈ ಮಧ್ಯೆ ಯಡಿಯೂರಪ್ಪನವರು ಏನೂ ಮಾತನಾಡುತ್ತಿಲ್ಲ. ಯಾರು ಏನೇ ಮಾಡಿದ್ರು ತೀರ್ಮಾನ ಮಾಡೋದು ಹೈಕಮಾಂಡ್. ಹಾಗಾಗಿ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡುತ್ತದೆ ಎಂಬ ವಿಶ್ವಾಸ ಹೊಂದಿದ್ದೇವೆ ಎಂದರು.

  • ಅರ್ಧ ಲಾಕ್‍ಡೌನ್ ಪ್ರಯೋಜನವಿಲ್ಲ, ಮುಖ್ಯಮಂತ್ರಿಗಳೇ ಫುಲ್ ಲಾಕ್ ಮಾಡಿ: ವಿಶ್ವನಾಥ್

    ಅರ್ಧ ಲಾಕ್‍ಡೌನ್ ಪ್ರಯೋಜನವಿಲ್ಲ, ಮುಖ್ಯಮಂತ್ರಿಗಳೇ ಫುಲ್ ಲಾಕ್ ಮಾಡಿ: ವಿಶ್ವನಾಥ್

    ಮೈಸೂರು: ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ನಿಯಂತ್ರಣಕ್ಕೆ ಸಿಗುತ್ತಿಲ್ಲ. ಅರ್ಧ ಲಾಕ್‍ಡೌನ್ ಮಾಡಿರುವುದರಿಂದ ಕೊರೊನಾ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಪೂರ್ತಿ ಲಾಕ್‍ಡೌನ್ ಮಾಡಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ತಡೆಗಟ್ಟುವ ಬದಲು ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಸಂಪೂರ್ಣ ಲಾಕ್‍ಡೌನ್ ಮಾಡಿ. ಬೆಳಗ್ಗೆ 6 ರಿಂದ 10 ಗಂಟೆ ವರೆಗೆ ಅಗತ್ಯ ವಸ್ತುಗಳು, ಮದ್ಯಕೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದ ಜನರು ಗುಂಪು ಗುಂಪಾಗಿ ಹೊರ ಬರುತ್ತಿದ್ದಾರೆ. ಇದು ಕೊರೊನಾ ಹರಡಲು ಕಾರಣವಾಗುತ್ತಿದೆ. ಕೊರೊನಾ ಕಡಿವಾಣ ಹಾಕಲು ರಾಜ್ಯದಲ್ಲಿ ಸಂಪೂರ್ಣ ಲಾಕ್‍ಡೌನ್ ಜಾರಿಯಾಗಲೇಬೇಕು. ಲಾಕ್‍ಡೌನ್ ಆದರೆ ರೋಗಿಗಳಿಗೆ ಬೇಕಾದ ಅಗತ್ಯ ಸೌಲಭ್ಯ ಮಾಡಿಕೊಂಡು ಕಂಟ್ರೋಲ್ ಮಾಡಬಹುದು ಎಂದರು.

    ಭಾರತದ ಕೊರೊನಾ ಪರಿಸ್ಥಿತಿಯನ್ನು ವಿದೇಶಿ ಮಾಧ್ಯಮಗಳು ಅಣಕು ಮಾಡುತ್ತಿವೆ. ಡಬ್ಲ್ಯೂಎಚ್‍ಓ ಸೇರಿ ವಿವಿಧ ಸಂಸ್ಥೆಗಳು ಭಾರತಕ್ಕೆ ಸಹಾಯ ಮಾಡಲು ಮುಂದೆ ಬಂದಿರುವುದು ಸ್ವಾಗತಾರ್ಹ ವಿಚಾರ. ಆದರೆ ಪರಿಸ್ಥಿತಿ ಹೀಗೆ ಬಿಟ್ಟರೆ ಮುಂದೆ ತೊಂದರೆ ಆಗಲಿದೆ. ಮುಖ್ಯಮಂತ್ರಿಗಳೇ ಕೂಡಲೇ ಕರ್ನಾಟಕದಲ್ಲಿ ಲಾಕ್‍ಡೌನ್ ಜಾರಿ ಮಾಡಿ ಎಂದು ವಿಶ್ವನಾಥ್ ಒತ್ತಾಯಿಸಿದ್ದಾರೆ.

  • ಕಾಂಚಾಣಕ್ಕಾಗಿ ಸರ್ಕಾರದಲ್ಲಿ ಫೈಲ್‍ಗಳು ಕಾಯುತ್ತಿವೆ- ಸಚಿವರ ವಿರುದ್ಧ ವಿಶ್ವನಾಥ್ ವಾಗ್ದಾಳಿ

    ಕಾಂಚಾಣಕ್ಕಾಗಿ ಸರ್ಕಾರದಲ್ಲಿ ಫೈಲ್‍ಗಳು ಕಾಯುತ್ತಿವೆ- ಸಚಿವರ ವಿರುದ್ಧ ವಿಶ್ವನಾಥ್ ವಾಗ್ದಾಳಿ

    ಮೈಸೂರು: ಕಾಂಚಾಣಕ್ಕಾಗಿ ಸರ್ಕಾರದಲ್ಲಿ ಫೈಲ್‍ಗಳು ಕಾಯುತ್ತಿವೆ. ಒಂದು ಸಣ್ಣ ಸಹಿಗಾಗಿ ಫೈಲ್‍ಗಳು ತಿಂಗಳುಗಟ್ಟಲೇ ಸಚಿವರ ಮುಂದೆ ಬಿದ್ದಿವೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಮ್ಮದೇ ಸರ್ಕಾರದ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಿ.ಟಿ.ರವಿ ಬಳಿ ಕೆಲ ಬಿಜೆಪಿ ಶಾಸಕರು ಹೇಳಿರುವುದು ಸತ್ಯ. ಸರ್ಕಾರದಲ್ಲಿ ಫೈಲ್ ಮೂವ್ಮೆಂಟ್ ವಿಳಂಬ ಆಗುತ್ತಿದೆ. ಅದು ಸ್ವಪಕ್ಷ, ಪರಪಕ್ಷ ಅಂತೇನಿಲ್ಲ. ನನ್ನವೇ ಎಷ್ಟೋ ಫೈಲ್‍ಗಳು ಇನ್ನೂ ಕಾಯುತ್ತ ಕುಳಿತಿವೆ. ಫೈಲ್‍ಗಳು ಮುಂದಕ್ಕೆ ಹೋಗದೆ ಇರೋದರ ಅರ್ಥವೇನು? ವಾಟ್ ಈಸ್ ಇಟ್ ಮೀನ್ಸ್? ಇದರ ಉದ್ದೇಶ ಕಾಂಚಾಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಕೆಲವು ಸಚಿವರಿಂದ ಇದು ನನಗು ಅನುಭವ ಆಗಿದೆ. ತಿಂಗಳಾನುಗಟ್ಟಲೇ ಮಂತ್ರಿಗಳು ಫೈಲ್‍ಗಳನ್ನ ಕೊಳೆಸೋದು ಸರಿಯಲ್ಲ. ಮಂತ್ರಿಗಳು ಇದರಿಂದ ಎಚ್ಚೆತ್ತುಕೊಳ್ಳಬೇಕು. ನಾವೂ ಮಂತ್ರಿಗಿರಿ ಮಾಡಿದ್ದೇವೆ. ಯಾವ ಫೈಲ್, ಎಷ್ಟು ದಿನ, ಯಾರ ಬಳಿ ಇರಬೇಕು ಎಂದು ನಮಗೂ ಗೊತ್ತಿದೆ. ಇದೆಲ್ಲವೂ ಯಡಿಯೂರಪ್ಪನವರಿಗೆ ಗೊತ್ತಿದೆ. ಅವರ ಕೈಯಲ್ಲೂ ಇದನ್ನು ಸರಿ ಮಾಡಲು ಆಗುತ್ತಿಲ್ಲ. ಸಿ.ಟಿ.ರವಿ ಇದನ್ನು ಹೈಕಮಾಂಡ್ ಗಮನಕ್ಕೆ ತರುತ್ತಾರೆ ಎಂದರು.

    ಫೈಲ್ ಮೂವ್ಮೆಂಟ್ ವಿಚಾರ ಸಿದ್ದರಾಮಯ್ಯ ಕಾಲದಿಂದಲೂ ಕೈ ಮಿರಿದೆ. ಸಿದ್ದರಾಮಯ್ಯ ಯಾವ ಮಂತ್ರಿಗೂ ಲಗಾಮು ಹಾಕಿರಲಿಲ್ಲ. ಅದರ ಮುಂದುವರಿದ ಭಾಗವೇ ಇದು ಎಂದು ಸಿದ್ದರಾಮಯ್ಯ ವಿರುದ್ಧ ಸಹ ಎಚ್.ವಿಶ್ವನಾಥ್ ಹರಿಹಾಯ್ದಿದ್ದಾರೆ.

  • ಬಿಜೆಪಿ ಸರ್ಕಾರದಲ್ಲಿ ಶೇ.60ಕ್ಕೂ ಹೆಚ್ಚು ಸಚಿವರು ಜೆಡಿಎಸ್ ಮೂಲದವರೆ: ಕೋನರೆಡ್ಡಿ

    ಬಿಜೆಪಿ ಸರ್ಕಾರದಲ್ಲಿ ಶೇ.60ಕ್ಕೂ ಹೆಚ್ಚು ಸಚಿವರು ಜೆಡಿಎಸ್ ಮೂಲದವರೆ: ಕೋನರೆಡ್ಡಿ

    ಧಾರವಾಡ: ನಮ್ಮ ಪಕ್ಷದಲ್ಲಿ ಬೆಳೆದು ಹೋದವರೆಲ್ಲ ನಮ್ಮ ಪಕ್ಷವನ್ನೇ ಬೈಯುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಶೇ. 60ಕ್ಕೂ ಹೆಚ್ಚು ಜನ ಜೆಡಿಎಸ್ ಮೂಲದವರೇ ಸಚಿವರಿದ್ದಾರೆ ಎಂದು ಜೆಡಿಎಸ್ ಮಾಜಿ ಶಾಸಕ ಎನ್.ಎಚ್.ಕೊನರಡ್ಡಿ ತಿಳಿಸಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿಯೂ ನಮ್ಮವರೇ ಇದ್ದಾರೆ. ಜೆಡಿಎಸ್ ಒಂದು ರೀತಿ ಪ್ರೊಡಕ್ಷನ್ ಫ್ಯಾಕ್ಟರಿ ಆಗಿದೆ. ಎಲ್ಲ ಪಕ್ಷಗಳಲ್ಲೂ ನಮ್ಮ ಪಕ್ಷದಿಂದ ಹೋದವರೇ ಹೆಚ್ಚಿದ್ದಾರೆ ಎಂದು ಹೇಳಿದರು.

    ಜೆಡಿಎಸ್ ಬಗ್ಗೆ ಎಚ್.ವಿಶ್ವನಾಥ್ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‍ನವರು ವಿಶ್ವನಾಥ್ ಅವರಿಂದ ಕಲಿಯಬೇಕಾಗಿಲ್ಲ. ವಿಶ್ವನಾಥ್ ಈಗ ದೊಡ್ಡ ರಾಷ್ಟ್ರೀಯ ಪಕ್ಷ ಸೇರಿದ್ದಾರೆ. ಸಣ್ಣ ಪಕ್ಷಗಳ ಬಗ್ಗೆ ಮಾತನಾಡಬಾರದು. ಜೆಡಿಎಸ್ ಅಧಿಕಾರಕ್ಕಾಗಿ ಯಾರ ಜೊತೆಯೋ ಹೋಗುತ್ತಿದೆ ಎಂದು ವಿಶ್ವನಾಥ ಹೇಳಿದ್ದಾರೆ. ಹಾಗಾದರೆ ಅವರು ಯಾವ ವಿಚಾರಕ್ಕೆ ಬಿಜೆಪಿ ಸೇರಿದರು? 17 ಜನ ಎಲ್ಲರೂ ಸ್ವಾರ್ಥ ಇಲ್ಲದೆಯೇ ಬಿಜೆಪಿಗೆ ಹೋದರಾ ಎಂದು ಪ್ರಶ್ನಿಸಿದರು.

    ಪಾಪ ವಿಶ್ವನಾಥ್ ಅವರು ಈಗ ಮಂತ್ರಿಯೂ ಆಗದಂತೆ ಆಗಿದೆ, ಇದರ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜೆಡಿಎಸ್ ಬಗ್ಗೆ ದಯವಿಟ್ಟು ಅವರು ಮಾತನಾಡಬಾರದು. ಬಿಟ್ಟು ಹೋದ ಪಕ್ಷದ ಬಗ್ಗೆ ಮಾತನಾಡಬೇಡಿ, ವಿಶ್ವನಾಥ್ ಅಧಿಕಾರಕ್ಕಾಗಿ ಆ ಪಕ್ಷಕ್ಕೆ ಬಗ್ಗಿ ಹೋಗಿದ್ದಾರೆ ಎಂದು ಕಿಡಿಕಾರಿದರು.

    ಮಹದಾಯಿ ಈಗ ಮುಗಿದು ಹೋದ ಅಧ್ಯಾಯ, ಮಹದಾಯಿ ಕಾಮಗಾರಿ ಆರಂಭಿಸಬೇಕಿದೆ. ಸಿಎಂ ಮತ್ತು ಸಚಿವ ರಮೇಶ ಜಾರಕಿಹೊಳಿ ಸುಮ್ಮನೆ ಕುಳಿತಿದ್ದಾರೆ, ಇವರು ಸುಮ್ಮನೆ ಕುಳಿತಿದ್ದಕ್ಕೆ ಗೋವಾದವರು ಎದ್ದು ಕುಳಿತಿದ್ದಾರೆ ಎಂದು ಕೊನರಡ್ಡಿ ಹೇಳಿದರು.

  • ಅಧಿದೇವತೆ ಶಾಪ, ನ್ಯಾಯ ದೇವತೆ ತೀರ್ಪಿನಿಂದ ವಿಶ್ವನಾಥ್‍ಗೆ ಸಚಿವ ಸ್ಥಾನ ಸಿಕ್ಕಿಲ್ಲ: ಸಾರಾ ಮಹೇಶ್

    ಅಧಿದೇವತೆ ಶಾಪ, ನ್ಯಾಯ ದೇವತೆ ತೀರ್ಪಿನಿಂದ ವಿಶ್ವನಾಥ್‍ಗೆ ಸಚಿವ ಸ್ಥಾನ ಸಿಕ್ಕಿಲ್ಲ: ಸಾರಾ ಮಹೇಶ್

    – ಬಿಎಸ್‍ವೈ ಟೀಕಿಸುವ ಸಣ್ಣ ನೈತಿಕತೆಯೂ ಅವರಿಗಿಲ್ಲ

    ಚಾಮರಾಜನಗರ: ಅಧಿದೇವತೆ ಶಾಪ, ನ್ಯಾಯ ದೇವತೆ ತೀರ್ಪಿನಿಂದ ವಿಶ್ವನಾಥ್ ಗೆ ಸಚಿವ ಸ್ಥಾನ ಸಿಕ್ಕಿಲ್ಲ. ಸಿಎಂ ಯಡಿಯೂರಪ್ಪ ಟೀಕಿಸುವ ಸಣ್ಣ ನೈತಿಕತೆಯೂ ಇವರಿಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೆಸರು ಹೇಳದೆ ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂವಿಧಾನಿಕ ಸ್ಥಾನ ಹೊಂದಬಾರದು ಎಂಬ ಹೈಕೋರ್ಟ್ ತೀರ್ಪಿದ್ದರೂ ನೀವು ಪರಿಷತ್ ಸದಸ್ಯರಾಗಿರೋದು ತಪ್ಪು. ವಿಶ್ವನಾಥ್ ಅವರನ್ನು ನಲವತ್ತು ವರ್ಷ ಕಾಂಗ್ರೆಸ್ ಮದ್ವೆಯಾಗಿತ್ತು. ನಾವು ಕೂಡುವಳಿ ಮಾಡ್ಕೊಂಡಿದ್ವಿ, ನೀವು ದಿನದ ವ್ಯಾಪಾರಕ್ಕೆ ತೆಗೆದುಕೊಂಡಿದ್ದೀರಿ, ನಿಮ್ಮ ಕತೆ ಏನಾಗುತ್ತೋ ಎಂದು ಆಗಲೇ ಬಿಜೆಪಿಗೆ ಎಚ್ಚರಿಸಿದ್ದೆ ಎಂದು ಪರೋಕ್ಷವಾಗಿ ವಿಶ್ವನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಈಗ ವಿಶ್ವನಾಥ್ ಕೋಗಿಲೆ ಅಲ್ಲ ಕಾಗೆ ಅನ್ನೋದು ರಾಜ್ಯದ ಜನತೆಗೆ ಗೊತ್ತಾಗಿದೆ. ರಾಜಕೀಯವಾಗಿ ಮೂಲೆಗುಂಪಾಗಿದ್ದ ವ್ಯಕ್ತಿಯನ್ನು ತನು, ಮನ, ಧನ ನೀಡಿ ಆಶ್ರಯ ಕೊಟ್ಟ ಜೆಡಿಎಸ್ ಗೆ ದ್ರೋಹ ಮಾಡಿದ್ದೀರಿ. ಜೆಡಿಎಸ್ ಕಾರ್ಯಕರ್ತರ ನಿಟ್ಟುಸಿರು ನಿಮ್ಮನ್ನ ಸುಮ್ಮನೆ ಬಿಡುತ್ತಾ ಎಂದು ಪ್ರಶ್ನಿಸಿದರು.

    ಯಡಿಯೂರಪ್ಪ ಮಾತಿಗೆ ತಪ್ಪಿದವರೆಂದು ಹೇಳಲು ಇವರಿಗೆ ನೈತಿಕತೆ ಇಲ್ಲ. ಬಿಜೆಪಿಗೆ ಹೋಗಿದ್ದ ಹದಿನೇಳು ಜನರಲ್ಲಿ ಹದಿನಾರು ಜನರಿಗೆ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಹೈಕೋರ್ಟ್ ತೀರ್ಪಿಗಿಂತ ಯಡಿಯೂರಪ್ಪ ದೊಡ್ಡವರಲ್ಲ. ಅಧಿಕಾರ ಇಲ್ಲದೇ ನಾನೂ ಬಿಜೆಪಿಯಲ್ಲಿ ಬಿಎಸ್‍ವೈ ಅವರೊಂದಿಗೆ ಬಾವುಟ ಕಟ್ಟಿದ್ದೇನೆ. ಅಲ್ಲೇನು ನಡೆಯುತ್ತೆ ನನಗೂ ಗೊತ್ತು ಎಂದು ಹೇಳಿದರು.

    ನನ್ನ ಉಸಿರು ಇರೋ ತನಕ ಅವರ ಹೆಸರು ಹೇಳಲ್ಲ, ಅದಕ್ಕೇ ಪರೋಕ್ಷವಾಗಿ ಟೀಕೆ ಮಾಡಿದ್ದೇನೆ. ದೇವೇಗೌಡರು ದೇವರಾದರೆ, ಕುಮಾರಸ್ವಾಮಿ ರಾಕ್ಷಸರಾಗಿ ಬಿಟ್ಟರೆ ಎಂದು ಪ್ರಶ್ನಿಸಿದ ಅವರು, ಹುಣಸೂರು ಉಪ ಚುನಾವಣೆಯಲ್ಲಿ ಬಿಜೆಪಿ ದುಡ್ಡು ಕೊಟ್ಟಿರಲಿಲ್ಲವಾ, ವಿಶ್ವನಾಥ್ ಒಬ್ಬ ದುರಂತ ನಾಯಕ ಎಂದು ಕುಟುಕಿದರು.