Tag: ಎಚ್ ಡಿ ಕುಮಾರಸ್ವಾಮಿ

  • ಸಚಿವ ಸ್ಥಾನಕ್ಕೆ ಶಿಕ್ಷಣ ಮುಖ್ಯವಲ್ಲ, ಅನುಭವ ಮುಖ್ಯ: ಜಮೀರ್ ಅಹ್ಮದ್

    ಸಚಿವ ಸ್ಥಾನಕ್ಕೆ ಶಿಕ್ಷಣ ಮುಖ್ಯವಲ್ಲ, ಅನುಭವ ಮುಖ್ಯ: ಜಮೀರ್ ಅಹ್ಮದ್

    ತುಮಕೂರು: ಸಚಿವ ಸ್ಥಾನಕ್ಕೆ ಶಿಕ್ಷಣ ಮುಖ್ಯವಲ್ಲ. ಅನುಭವವೇ ಮುಖ್ಯ ಎಂದು ಸಚಿವ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

    ಜಿಲ್ಲೆಯ ಕ್ಯಾತ್ಸಂದ್ರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಮಾಧ್ಯಮದೊಂದಿಗೆ ಮಾತನಾಡಿದ ಜಮೀರ್, ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್‍ಸಿಂಗ್ ಅವರ ಉದಾಹರಣೆ ನೀಡುವ ಮೂಲಕ ಅನುಭವೇ ಎಲ್ಲವನ್ನು ಕಲಿಸಿಕೊಡುತ್ತದೆ ಅಂದ್ರು.

    ತಂದೆ ತಾಯಿ ನನಗೆ ಕನ್ನಡ ಶಾಲೆಗೆ ಹಾಕಿಲ್ಲ. ನಾನು ಇಂಗ್ಲಿಷ್ ಶಾಲೆಯಲ್ಲಿ ಓದಿದ್ದೇನೆ. ಹಾಗಾಗಿ ಕನ್ನಡ ಓದು ಸರಿಯಾಗಿ ಬಂದಿಲ್ಲದೆ ಇಂಗಿಷ್‍ನಲ್ಲಿ ಪ್ರಮಾಣ ವಚನ ಮಾಡಿದೆ. ಇದರಿಂದ ರಾಜ್ಯದ ಜನತೆಗಿಂತ ದುಪ್ಪಟ್ಟು ನೋವು ನನಗಾಗಿದೆ. ನಾನು ಬೇಕಂತಲೇ ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಮಾಡಿದ್ರೆ ನನಗೆ ಗಲ್ಲು ಶಿಕ್ಷೆ ಕೊಡಲಿ ಅಥವಾ ದೇಶದ್ರೋಹಿ ಎನ್ನಲಿ ಎಂದರು.

    ಮಂತ್ರಿ ಸ್ಥಾನದ ಅನುಭವ ನನಗಿಲ್ಲ. ಹೀಗಾಗಿ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದಿದ್ದೆ. ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಬಂದಿದ್ದು ಸಂತೋಷವಾಗಿದೆ. ನನ್ನ ಅವಧಿಯಲ್ಲಿ ಐತಿಹಾಸಿಕ ದಾಖಲೆಯ ಕೆಲಸ ಮಾಡುತ್ತೇನೆ ಎಂದು ಹೇಳಿದರು.

    ಕಾಂಗ್ರೆಸ್ ಹೈಕಮಾಂಡ್ ದೇವೇಗೌಡರ ಮಾತು ಕೇಳ್ತಾರೆ ಎಂಬ ವಿಚಾರದ ಕುರಿತು ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ದೇವೇಗೌಡರ ಮಾತು ಕೇಳೋದ್ರಲ್ಲಿ ತಪ್ಪಿಲ್ಲ. ರಾಜ್ಯದ ಸಮಸ್ಯೆ ಇದ್ದಾಗ ದೇವೇಗೌಡರ ಮಾತೂ ಕೇಳಬೇಕು. ಯಾಕಂದ್ರೆ ಅವರು ಮಾಜಿ ಪ್ರಧಾನಿ. ಖಾತೆ ಹಂಚಿಕೆಯಲ್ಲಿ ದೇವೇಗೌಡರಾಗಲಿ, ಕುಮಾರಸ್ವಾಮಿ ಅವರ ಪ್ರಭಾವ ಇಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.

  • ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವೇ ಸಚಿವ ಸ್ಥಾನಕ್ಕೆ ಮುಳ್ಳಾಯಿತು: ಹೊರಟ್ಟಿ

    ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವೇ ಸಚಿವ ಸ್ಥಾನಕ್ಕೆ ಮುಳ್ಳಾಯಿತು: ಹೊರಟ್ಟಿ

    ಹುಬ್ಬಳ್ಳಿ: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ನಾವು ಹೋರಾಟ ಮಾಡಿದ್ದು ದೊಡ್ಡ ಅಪರಾಧವಾಗಿದೆ. ಕೆಲವು ಉಡಾಫೆ ಸ್ವಾಮೀಜಿಗಳು ಧರ್ಮ ಒಡೆಯುತ್ತಾರೆಂಬ ವದಂತಿ ಹಬ್ಬಿಸಿದರು. ಹೀಗಾಗಿ ಸಚಿವ ಸ್ಥಾನ ಕೈತಪ್ಪಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಪಬ್ಲಿಕ್ ಟಿವಿ ಯೊಂದಿಗೆ ಮಾತನಾಡಿದ ಅವರು, ನಾನು ಲಿಂಗಾಯತ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದೆ. ಪಕ್ಷಕ್ಕೆ ಅಂಟಿಕೊಂಡು ಲಿಂಗಾಯತ ಹೋರಾಟ ಮಾಡಿಲ್ಲ. ಅಲ್ಲದೇ ಈ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ದೇವೇಗೌಡರಿಗೂ ಸ್ಪಷ್ಟಪಡಿಸಿದ್ದೆ. ಸಚಿವ ಸ್ಥಾನ ಹಂಚಿಕೆಯ ಬೆಳವಣಿಗೆ ಗಮನಿಸಿದಾಗ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವೇ ನೇರ ಹೊಣೆ ಎನ್ನುವುದು ಅರ್ಥವಾಗುತ್ತಿದೆ ಎಂದು ವಿಷಾದ ವ್ಯಕ್ತಪಡೆಸಿದರು.

    ಕೆಲವರು ರಂಪಾಟ-ಪ್ರತಿಭಟನೆ ಮಾಡಿ, ಕಾಡಿ-ಬೇಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನನಗೆ ಹಾಗೆ ಮಾಡಲಿಕ್ಕೆ ಮನಸ್ಸು ಬರಲಿಲ್ಲ. ಅನೇಕರು ಫೋನ್ ಕರೆ ಮಾಡಿ, ನಿಮ್ಮಂತ ಅನುಭವಿಗಳು ಸಚಿವ ಸಂಪುಟದಲ್ಲಿ ಇರಬೇಕಿತ್ತೆಂದು ಹೇಳುತ್ತಾರೆ. ಆದರೆ ಸಚಿವ ಸ್ಥಾನ ನೀಡುವವರೇ ನನ್ನನ್ನು ಮಂತ್ರಿ ಮಾಡಿಲ್ಲ. ಪಕ್ಷದ ರಾಷ್ಟ್ರಾಧ್ಯಕ್ಷರಾದ ದೇವೇಗೌಡ ತಿರ್ಮಾನವೇ ಅಂತಿಮ. ವಿಧಾನ ಪರಿಷತ್ ಸಭಾಪತಿ ಮಾಡುವುದು, ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ಎಂದು ಮತ್ತೊಂದು ಆಶಯ ಹೊರ ಹಾಕಿದ್ದಾರೆ.

  • ಉಚಿತ ಬಸ್ ಪಾಸ್, ಲ್ಯಾಪ್‍ಟಾಪ್ ಯೋಜನೆ ಮುಂದುವರಿಸಲು NSUI ಮನವಿ

    ಉಚಿತ ಬಸ್ ಪಾಸ್, ಲ್ಯಾಪ್‍ಟಾಪ್ ಯೋಜನೆ ಮುಂದುವರಿಸಲು NSUI ಮನವಿ

    ಬೆಂಗಳೂರು: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಹಾಗೂ ಉಚಿತ ಲ್ಯಾಪ್‍ಟಾಪ್ ಯೋಜನೆಯನ್ನು ಎಲ್ಲಾ ವಿಭಾಗದ ಕಾಲೇಜು ವಿದ್ಯಾರ್ಥಿಗಳಿಗೆ ವಿಸ್ತರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಎನ್‍ಎಸ್‍ಯುಐ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯರವರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿಯ ಡಾ. ಜಿ ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದಾರೆ.

    ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಹಿಂದಿನ ಸಿದ್ದರಾಮಯ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಮುಂದುವರಿಸಬೇಕೆಂದು ಹಾಗೂ ವಿದ್ಯಾರ್ಥಿಗಳು ಉನ್ನತ ಶೈಕ್ಷಣಿಕ ಉದ್ದೇಶಕ್ಕಾಗಿ ಪಡೆದ ಅರಿವು ಯೋಜನೆಯ ಸಾಲ ಮತ್ತು ಸಹಕಾರಿ ಮತ್ತು ರಾಷ್ಟ್ರೀಯ ಬ್ಯಾಂಕ್ ಗಳಿಂದ ತೆಗೆದುಕೊಂಡಿರುವ ಸಾಲವನ್ನು ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ಮನ್ನಾ ಮಾಡಬೇಕೆಂದು ವಿದ್ಯಾರ್ಥಿಗಳ ಪರವಾಗಿ ಸವಾದ್ ಸುಳ್ಯರವರು ಮನವಿ ನೀಡಿದರು.

    ಸಿದ್ದರಾಮಯ್ಯ ಸರ್ಕಾರ ಹಿಂದಿನ ಬಜೆಟ್ ನಲ್ಲಿ ಘೋಷಿಸಿದ್ದ ವಿಧ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆಯು ಆರ್ಥಿಕ ಹೊರೆಯಾಗುತ್ತದೆ ಎಂಬ ಕಾರಣ ನೀಡಿ ಕರ್ನಾಟಕ ಸಾರಿಗೆ ಇಲಾಖೆಯ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ರದ್ದು ಮಾಡಿದ್ದು ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಈ ಯೋಜನೆಯನ್ನು ಮುಂದುವರಿಸಬೇಕೆಂದು ಎಂದು ಎನ್‍ಎಸ್‍ಐಐ ಮನವಿ ಮಾಡಿದೆ. ಈ ಸಂದರ್ಭದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಟಿ.ಎಂ ಶಹೀದ್ ಉಪಸ್ಥಿತರಿದ್ದರು.

  • ಸ್ವಾಮೀಜಿಗಳ ಮೂಲಕ ಖಾತೆ ಸಿಗದ ಅತೃಪ್ತರ ಓಲೈಕೆಗೆ ಮುಂದಾದ ಹೆಚ್‍ಡಿಕೆ?

    ಸ್ವಾಮೀಜಿಗಳ ಮೂಲಕ ಖಾತೆ ಸಿಗದ ಅತೃಪ್ತರ ಓಲೈಕೆಗೆ ಮುಂದಾದ ಹೆಚ್‍ಡಿಕೆ?

    ಬೆಂಗಳೂರು: ಬಸವರಾಜ್ ಹೊರಟ್ಟಿಗೆ ಸಚಿವ ಸ್ಥಾನ ಸಿಗಲ್ಲ ಎನ್ನುವ ಮಾಹಿತಿಯನ್ನು ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಲಿಂಗಾಯಿತ ಪ್ರಭಾವಿ ಸ್ವಾಮೀಜಿಗಳ ಬಳಿ ಹೇಳಿರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಸ್ವಾಮೀಜಿಗಳ ಮೂಲಕ ಖಾತೆ ಸಿಗದ ಅತೃಪ್ತರ ಓಲೈಕೆಗೆ ಮುಂದಾಗಿದ್ದಾರಾ ಹೆಚ್‍ಡಿಕೆ ಅನ್ನೋ ಪ್ರಶ್ನೆಯೂ ಮೂಡಿದೆ.

    ಲಿಂಗಾಯಿತ ಸಮುದಾಯದವರಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ, ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿ ಕರೆದಿದ್ದರು. ಆದರೆ ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ದೂರವಾಣಿ ಕರೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಸ್ವಾಮೀಜಿ, ಹೊರಟ್ಟಿಗೆ ಸಚಿವ ಸ್ಥಾನ ಕೊಡಲ್ಲ, ಈಗಾಗಲೇ ಅವರನ್ನು ಎಂಎಲ್‍ಸಿ ಮಾಡಿದ್ದೇವೆ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ. ಮೂರು ವರ್ಷ ಬಿಟ್ಟು ನೋಡೋಣ ಅಂದಿದ್ದಾರೆ. ಆಗಲೂ ಕೊಡದೇ ಇದ್ದರೆ ಗಲಾಟೆ ಮಾಡೋಣ ಅಂದಿದ್ದಾರೆ.

    ಈ ಮೊಬೈಲ್ ಸಂಭಾಷಣೆ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು ಈ ಮಾತುಕತೆ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ. ಇನ್ನು ಇದೇ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತಾನಾಡಿದ ಸ್ವಾಮೀಜಿ ಜೆಡಿಎಸ್ ಹಾಗೂ ಕಾಂಗ್ರೆಸ್‍ನಲ್ಲಿ ಒಟ್ಟು ಇಪ್ಪತ್ತು ಜನ ಲಿಂಗಾಯಿತ ಸಮುದಾಯದವರಿದ್ದು, ಹೆಚ್ಚು ಖಾತೆಯನ್ನು ಲಿಂಗಾಯಿತರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.  ಇದನ್ನು ಓದಿ: ನಾನು ನಾಳೆ ಸಚಿವನಾಗಲ್ಲ: ಪರೋಕ್ಷವಾಗಿ ಅಸಮಾಧಾನ ಪ್ರಕಟಿಸಿದ ಹೊರಟ್ಟಿ

  • ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ಬಂತು ಮೊದಲ ನೀರು- ಕುಣಿದು ಕುಪ್ಪಳಿಸಿದ ಕೋಲಾರದ ಮಕ್ಕಳು

    ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ಬಂತು ಮೊದಲ ನೀರು- ಕುಣಿದು ಕುಪ್ಪಳಿಸಿದ ಕೋಲಾರದ ಮಕ್ಕಳು

    ಕೋಲಾರ: ಕೋರಮಂಗಲ ಚೆಲ್ಲಘಟ್ಟ (ಕೆ.ಸಿ.ವ್ಯಾಲಿ) ಏತ ನೀರಾವರಿ ಯೋಜನೆ ಅಡಿ ಕೋಲಾರ ಜಿಲ್ಲೆಯ ನರಸಾಪುರದ ಗ್ರಾಮಕ್ಕೆ ಮೊದಲ ಬಾರಿಗೆ ನೀರು ಬಂದಿದೆ.

    ತಮ್ಮ ಗ್ರಾಮದ ಕೆರೆಗೆ ಕೊನೆಗೂ ನೀರು ಬಂದ ಹಿನ್ನೆಲೆಯಲ್ಲಿ ನರಸಾಪುರ ಹೋಬಳಿಯ ಲಕ್ಷ್ಮೀಪುರ ಮಕ್ಕಳು ಕುಪ್ಪಳಿಸಿದ್ದಾರೆ. ಜೂನ್ 7 ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೆ.ಸಿ.ವ್ಯಾಲಿ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಲಿದ್ದು, ಈ ಹಿನ್ನೆಯಲ್ಲಿ ಲಕ್ಷ್ಮೀಪುರ ಕೆರೆಗೆ ನೀರು ಹರಿಸಲಾಗುತ್ತಿದೆ. ಮೊದಲ ಬಾರಿ ಕೊಳವೆ ಮೂಲಕ ನೀರು ಬರುತ್ತಿರುವುದನ್ನು ಗ್ರಾಮಸ್ಥರು ಹಾಗೂ ಮಕ್ಕಳು ಕುತೂಹಲದಿಂದ ವಿಕ್ಷೀಸಿದರು.

    2016 ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೆ.ಸಿ.ವ್ಯಾಲಿ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದರು. 12 ಸಾವಿರ ಕೋಟಿ ವೆಚ್ಚದಲ್ಲಿ ಜಿಲ್ಲೆಯ 126 ಕೆರೆಗಳಿಗೆ ನೀರು ಹರಿಸುವ ಯೋಜನೆಯ ಉದ್ದೇಶವಾಗಿದೆ. ಸ್ವಾತಂತ್ರ್ಯ ನಂತರ ಬಯಲು ಸೀಮೆ ಕೋಲಾರಕ್ಕೆ ಸಿಕ್ಕ ಮೊದಲ ನೀರಾವರಿ ಯೋಜನೆ ಇದಾಗಿದೆ.

  • ಕುಮಾರಸ್ವಾಮಿ ಪೂರ್ಣಾವಧಿ ಸರ್ಕಾರ ಮಾಡಲಿ – ಪೇಜಾವರಶ್ರೀ ಹಾರೈಕೆ

    ಕುಮಾರಸ್ವಾಮಿ ಪೂರ್ಣಾವಧಿ ಸರ್ಕಾರ ಮಾಡಲಿ – ಪೇಜಾವರಶ್ರೀ ಹಾರೈಕೆ

    ಉಡುಪಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಬ್ಬ ಅನುಭವಿ ರಾಜಕಾರಣಿದ್ದು, ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಪೂರ್ಣಾವಧಿ ಅಧಿಕಾರ ಮಾಡಲಿ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹಾರೈಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ವಿಕೃತಿಯಾಗಿವೆ. ರೆಸಾರ್ಟ್, ಆಪರೇಷನ್ ನಲ್ಲಿ ಜನಪ್ರತಿನಿಧಿಗಳು ತಲ್ಲೀನರಾಗಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳು ನೈತಿಕತೆ ಹೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡೆಸಿದರು.

    ಕರ್ನಾಟಕ ರಾಜಕೀಯ ಪರಿಸ್ಥಿತಿಯಲ್ಲಿ ಗೊಂದಲ ನಿರ್ಮಾಣವಾದರೆ ರಾಷ್ಟ್ರಪತಿ ಆಡಳಿತದ ಬದಲು ಸರ್ವ ಪಕ್ಷ ಸರ್ಕಾರ ಜಾರಿಗೆ ಬರಬೇಕು. ಅಂತಹ ಪ್ರಯೋಗ ರಾಜ್ಯದಲ್ಲಿ ನಡೆಯಬೇಕಿದ್ದು, ಸರ್ವಪಕ್ಷದ ಆದರ್ಶ ಮಂತ್ರಿ ಮಂಡಲ ರಚನೆಯಾಗಬೇಕು. ವಿಪಕ್ಷ ಮುಕ್ತ ಸರ್ಕಾರ ಸರಿಯಲ್ಲ. ಆದರೆ ವಿಪಕ್ಷ ಇರಬೇಕು ಎನ್ನುವುದು ನನ್ನ ವಾದ ಎಂದು ಸ್ವಾಮಿಜಿ ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಪೂರ್ಣ ತೃಪ್ತಿ ತಂದಿಲ್ಲ. ಮೋದಿ ಅವರಿಂದ ಸಾಕಷ್ಟು ಕೆಲಸಗಳಾಗಿವೆ. ಆದರೆ ನಿರೀಕ್ಷೆಯಷ್ಟು ಸಾಧನೆ ಹಾಗೂ ಬದಲಾವಣೆಗಳಾಗಿಲ್ಲ ಎನ್ನುವ ಬೇಸರವಿದೆ. ರಾಮ ಮಂದಿರಕ್ಕಿಂತ ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು, ಗಂಗಾ ನದಿ ಶುದ್ಧೀಕರಣ, ವಿದೇಶದಲ್ಲಿರು ಕಪ್ಪು ಹಣ ದೇಶಕ್ಕೆ ಮರಳಿ ತರುವುದು ಸೇರಿದಂತೆ ಅನೇಕ ಆಶ್ವಾಸನೆಗಳು ಪೂರ್ಣವಾಗಿಲ್ಲ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

  • ಇಂದು ಎಚ್‍ಡಿಕೆಯಿಂದ ರಾಜ್ಯಪಾಲರ ಭೇಟಿ

    ಇಂದು ಎಚ್‍ಡಿಕೆಯಿಂದ ರಾಜ್ಯಪಾಲರ ಭೇಟಿ

    ಬೆಂಗಳೂರು: ಸಚಿವರ ಖಾತೆ ಹಂಚಿಕೆ ಇನ್ನು ಮುಗಿಯದ ಕಗ್ಗಂಟಾಗಿದ್ದು, ಇಂದು ಸಚಿವರ ಪ್ರಮಾಣ ವಚನಕ್ಕೆ ಟೈಮ್ ಫಿಕ್ಸ್ ಆಗಲಿದೆ.

    ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದು, ಮಧ್ಯಾಹ್ನದ ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಕುಮಾರಸ್ವಾಮಿ ಅವರು ಭೇಟಿ ಮಾಡಲಿದ್ದಾರೆ. ಈ ವೇಳೆ ಸಚಿವರ ಪ್ರಮಾಣಕ್ಕೆ ಸಮಯ ಕೇಳಲಿದ್ದಾರೆ.

    ರಾಜ್ಯಪಾಲರನ್ನು ಭೇಟಿ ಮಾಡಿದಾಗ ಸಚಿವರ ಪಟ್ಟಿ ರಾಜ್ಯಪಾಲರಿಗೆ ನೀಡುವ ಸಾಧ್ಯತೆ ಇದೆ. ಇನ್ನು ಭಾನುವಾರ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಿಗದಿಯಾಗುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಇತರೆ ನಾಯಕರುಗಳು ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.  ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ- ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಖಡಕ್ ಸೂಚನೆ!

    ಮಾತುಕತೆ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ಮಾಡುವ ಸಾಧ್ಯತೆ ಇದೆ. ಬಹುತೇಕ ಭಾನುವಾರ ಸಂಪುಟ ವಿಸ್ತರಣೆ ಖಚಿತವಾಗಿದ್ದು, ಜೆಡಿಎಸ್-ಕಾಂಗ್ರೆಸ್‍ಗೆ ಯಾವ್ಯಾವ ಖಾತೆ ಯಾರಿಗೆ?. ಯಾರು ಯಾರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸಿಎಂ ನಿವಾಸಕ್ಕೆ ಡಿಜಿಪಿ ನೀಲಮಣಿ ರಾಜು ಭೇಟಿ – ಖಡಕ್ ಸೂಚನೆ ಕೊಟ್ಟ ಎಚ್‍ಡಿಕೆ

  • ಮುನಿರತ್ನಗೆ ಗೆಲುವು ಜನರು ಕೊಟ್ಟಿದ್ದಲ್ಲ, ಅಧಿಕಾರಿಗಳು ಕೊಟ್ಟಿದ್ದು- ಶೆಟ್ಟರ್

    ಮುನಿರತ್ನಗೆ ಗೆಲುವು ಜನರು ಕೊಟ್ಟಿದ್ದಲ್ಲ, ಅಧಿಕಾರಿಗಳು ಕೊಟ್ಟಿದ್ದು- ಶೆಟ್ಟರ್

    ಧಾರವಾಡ: ಮುನಿರತ್ನ ಅವರಿಗೆ ಇದು ಜನರು ಕೊಟ್ಟ ಗೆಲ್ಲುವಲ್ಲ, ಅಧಿಕಾರಿಗಳು ಕೊಟ್ಟ ಗೆಲುವು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮುನಿರತ್ನ ಅವರು ಗೆಲುವು ಸಾಧಿಸಲು ಕಾಂಗ್ರೆಸ್ ಅಧಿಕಾರಿಗಳನ್ನು ದುರುಪಯೋಗ ಪಡೆಸಿಕೊಂಡಿದೆ ಎಂದು ಆರೋಪಿಸಿದರು.

    ಐಟಿ ಅಧಿಕಾರಿಗಳು ಸೂಕ್ತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸುತ್ತಾರೆ. ಉದ್ದೇಶಪೂರ್ವಕವಾಗಿ ದಾಳಿ ಮಾಡುವುದಿಲ್ಲ. ಕೆಲವರು ನಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ, ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎನ್ನುವ ಆರೋಪ ವ್ಯಕ್ತಪಡಿಸುತ್ತಾರೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇನ್ನು ಹದಿನೈದು ದಿನ ಕಳೆದರೂ ರೈತರ ಸಾಲ ಮನ್ನಾ ಮಾಡುವುದಿಲ್ಲ. ಭರವಸೆ ನೀಡುತ್ತ ಸಮಸ್ಯೆಯಿಂದ ಪಲಾಯನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ಸರ್ಚ್ ವಾರೆಂಟ್‍ಗೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ: ಸಿಎಂ ಕುಮಾರಸ್ವಾಮಿ

    ಸರ್ಚ್ ವಾರೆಂಟ್‍ಗೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ: ಸಿಎಂ ಕುಮಾರಸ್ವಾಮಿ

    ಬೆಂಗಳೂರು: ಶಾಸಕ ಡಿ.ಕೆ.ಶಿವಕುಮಾರ್ ಅವರ ಮೇಲಿನ ಸಿಬಿಐ ಸರ್ಚ್ ವಾರೆಂಟ್‍ಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಡಿಕೆಶಿ ಆಪ್ತರಾದ 11 ಜನರ ವಿರುದ್ಧ ಸಿಬಿಐ ಸರ್ಚ್ ವಾರೆಂಟ್ ಜಾರಿಯಾಗಿರುವ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಷಯದ ಕುರಿತು ಹಲವಾರು ಬಾರಿ ಚರ್ಚೆ ಮಾಡಲಾಗಿದೆ. ರಾಜ್ಯ ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ತಾವೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಾಗಿ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

    ಪ್ರಕರಣವು ಕೇಂದ್ರ ಹಾಗೂ ಡಿಕೆಶಿ ಅವರಿಗೆ ಸಂಬಂಧಿಸಿದ್ದು, ನನ್ನ ವ್ಯಾಪ್ತಿಗೆ ಬರಲ್ಲ. ಅವರು ಸಮರ್ಥರಿದ್ದಾರೆ, ಐಟಿ ದಾಳಿಯನ್ನು ಎದುರಿಸುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.

    ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಜಯಗಳಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಆರ್ ಆರ್ ನಗರದ ಚುನಾವಣೆ ಬಗ್ಗೆ ಏನೂ ತಲೆ ಕೆಡಿಸಿಕೊಂಡಿಲ್ಲ. ನಾವು ಅಥವಾ ಕಾಂಗ್ರೆಸ್ ಗೆಲ್ಲಬೇಕಿತ್ತು. ಅಲ್ಲಿ ಈಗ ಕಾಂಗ್ರೆಸ್ ಗೆದ್ದಿದೆ ಎಂದು ತಿಳಿಸಿದರು.

    ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರ 11 ಮಂದಿ ಆಪ್ತರ ಮೇಲೆ ಸಿಬಿಐ ಕೋರ್ಟ್ ಸರ್ಚ್ ವಾರೆಂಟ್ ಹೊರಡಿಸಿದೆ. ಆದಾಯ ತೆರಿಗೆ ಪ್ರಕರಣದಲ್ಲಿ ಸಿಬಿಐ 82ನೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪುಷ್ಪಾಂಜಲಿ ದೇವಿ ಅವರು ಸರ್ಚ್ ವಾರೆಂಟ್ ಹೊರಡಿಸಿದ್ದಾರೆ. ನಿನ್ನೆ ಕೋರ್ಟ್ ನಲ್ಲಿ ಡಿ.ಕೆ.ಶಿವಕುಮಾರ್ ಹಾಜರಾಗಿದ್ದರು. 11 ಜನರಲ್ಲಿ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಇಬ್ಬರ ಹೆಸರಿಲ್ಲ.

    ಸರ್ಚ್ ವಾರೆಂಟ್ ಹೊರಡಿಸಿದ ವಿಚಾರ ತಿಳಿದು ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ತುರ್ತು ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

    ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಐಟಿ, ಇಡಿ ಮೂಲಕ ನಮ್ಮನ್ನು ಸದೆಬಡಿಯುವ ಪ್ರಯತ್ನ ಮಾಡಲಾಗುತ್ತಿದೆ. ಇಲಾಖೆಗಳನ್ನು ದುರಪಯೋಗ ಮಾಡಿಕೊಂಡ ಕೇಂದ್ರ ಸರ್ಕಾರ ನಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ 11 ಜನರ ಮೇಲೆ ಸಿಬಿಐ ಮತ್ತು ಇಡಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಹೊರಡಿಸಿದ್ದಾರೆ. ಬಿಜೆಪಿಯ ಬೆದರಿಕೆ ಮತ್ತು ಆಮಿಷಗಳಿಗೆ ನಾವು ಬಗ್ಗಲ್ಲ. ಈ ಸಂಬಂಧ ಕಾನೂನು ರೀತಿಯಲ್ಲಿ ನಾವು ಹೋರಾಡುತ್ತೇವೆ. ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿರೋದನ್ನು ನಾವು ಜನರಿಗೆ ತಿಳಿಸಿದ್ದೇವೆ. ಅಧಿಕಾರಿಗಳು ಯಾವ ಪ್ರಕರಣದಡಿಯಲ್ಲಿ ನಮ್ಮನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂಬುವುದು ನಮಗೆ ಗೊತ್ತಾಗಿಲ್ಲ ಎಂದು ಹೇಳಿದ್ದರು.

  • 15 ದಿನಗಳ ಕಾಲಾವಕಾಶ ಕೋರಿದ ಸಿಎಂ: ಸಾಲ ಮನ್ನಾ ಸ್ಕೀಂ ಹೇಗೆ?

    15 ದಿನಗಳ ಕಾಲಾವಕಾಶ ಕೋರಿದ ಸಿಎಂ: ಸಾಲ ಮನ್ನಾ ಸ್ಕೀಂ ಹೇಗೆ?

    ಬೆಂಗಳೂರು: ಸಾಲಮನ್ನಾ ಘೋಷಣೆಯಾಗಿದ್ದು, ಆದ್ರೆ ಅದರ ರೂಪುರೇಷೆಗಳನ್ನು ಸಿದ್ಧಪಡಿಸಿ ಕಾರ್ಯರೂಪಕ್ಕೆ ತರಲು 15 ದಿನಗಳ ಕಾಲಾವಕಾಶ ಬೇಕು ಅಂತ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ವಿಧಾನಸೌಧದದಲ್ಲಿ ರೈತ ಮುಖಂಡರೊಂದಿಗೆ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಲಮನ್ನಾ ಬಗ್ಗೆ ಘೋಷಣೆ ಮಾಡಿದ್ರೂ ಇನ್ನೂ 15 ದಿನ ಕಾಯಬೇಕು. 15 ದಿನಗಳ ಬಳಿಕ ಸರ್ಕಾರದ ರೂಪುರೇಷೆ ಪ್ರಕಟವಾಗಲಿದೆ. 2 ಹಂತಗಳಲ್ಲಿ ಯಾರ ಸಾಲಮನ್ನಾ ಮಾಡಬೇಕು ಅನ್ನೋದರ ಬಗ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಅಂತ ಹೇಳಿದ್ರು.

    ಏಪ್ರಿಲ್ 1, 2009 ರಿಂದ ಡಿಸೆಂಬರ್ 31, 2017 ವರೆಗೆ ಮೊದಲ ಸ್ಕೀಂನಲ್ಲಿ ಚುನಾಯಿತ ಸದಸ್ಯರ, ಕೃಷಿ ಸಾಲ ಪಡೆದು ಉದ್ಯಮಕ್ಕೆ ಬಳಸಿದವರ, ಸತತ 3 ವರ್ಷ 4 ಲಕ್ಷಕ್ಕೆ ಆದಾಯಕ್ಕೆ ತೆರಿಗೆ ಕಟ್ಟಿರುವವರ, ಸಹಕಾರ ಬ್ಯಾಂಕ್ ಪದಾಧಿಕಾರಿಗಳಾಗಿ 3 ಲಕ್ಷ ಆದಾಯ ಇರುವವರ ಸಾಲಮನ್ನಾ ಇಲ್ಲ. ಅಲ್ಲದೇ ನಗರ ಪಾಲಿಕೆ ವ್ಯಾಪ್ತಿ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಸಾಲ ಪಡೆದ ಸಾಲ ಮನ್ನಾ ಇಲ್ಲ ಅಂತ ಹೇಳಿದ್ರು. ಇದರಲ್ಲಿ ವರ್ಷಕ್ಕೆ 4 ಲಕ್ಷ ರೂ. ಆದಾಯ ಹೊಂದಿ ತೆರಿಗೆ ಕಟ್ಟುವವರನ್ನು ಸೇರಿಸಬೇಕಾ ಎಂಬುದರ ಬಗ್ಗೆ ಚರ್ಚೆ ನಡೆಸಲಾಗುವುದು. ಕೃಷಿ ಸಾಲ ಪಡೆದು ಉದ್ಯಮಕ್ಕೆ ಬಂಡವಾಳ ಹಾಕಿರುವವರನ್ನು ಸೇರಿಸಬೇಕೆ? ಸಹಕಾರಿ ಬ್ಯಾಂಕ್ ಗಳಲ್ಲಿ 3 ಲಕ್ಷ ಆದಾಯ ಇರುವವರನ್ನು ಸೇರಿಸಬೇಕೇ? ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳ ನೇಮಕ ಮಾಡಲಾಗುವುದು ಎಂದು ತಿಳಿಸಿದರು.

    ಸ್ಕೀಂ 2ರಲ್ಲಿ ತೋಟಗಾರಿಕೆ, ಯಂತ್ರ ಸಲಕರಣೆ ಸೇರಿದಂತೆ ಇನ್ನಿತರ ಸಾಲದ ಬಗ್ಗೆ ನಿರ್ಧಾರ ಮಾಡಲಾಗುವುದು. ಒಟ್ಟಿನಲ್ಲಿ ಆರ್ಥಿಕ ಶಿಸ್ತಿನಲ್ಲಿ ಸಾಲಮನ್ನಾ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಕೃಷಿಗಾಗಿ ಸಾಲ ಮಾಡಿದವರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು. ಯಾಕಂದ್ರೆ ಅದಕ್ಕೆ ಲಿಮಿಟ್ ಇಲ್ಲ. ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಂಜಾಬ್ ಹಾಗೂ ಮಹಾರಾಷ್ಟ್ರ ಕಡೆಗಳಲ್ಲಿ 1 ಲಕ್ಷ ದಿಂದ ಒಂದೂವರೆ ಲಕ್ಷ ರೂಪಾಯಿವರೆಗೆ ಸಾಲಮನ್ನಾ ಮಾಡುವ ನಿರ್ಧಾರ ಮಾಡಿಕೊಂಡಿದ್ದಾರೆ. ನನ್ನ ಸ್ಕೀಂನಲ್ಲಿ ಒಂದು ಅಥವಾ ಒಂದೂವರೆ ಲಕ್ಷ ಅಂತ ಮಿತಿ ಇಡುತ್ತಿಲ್ಲ. ಎಷ್ಟು ಸಾಲ ಮಾಡಿದ್ರು, ಅಷ್ಟು ಸಾಲವನ್ನು ಸಂಪೂರ್ಣವಾಗಿ ಸಾಲಮನ್ನಾ ಮಾಡುತ್ತೇನೆ ಎಂದರು.

    ಸರ್ಕಾರದ ಬದ್ಧತೆ ಬಗ್ಗೆ ರೈತರಿಗೆ ನಾನು ಹೇಳುತ್ತೇನೆ. ರೈತರಿಗೆ ಆಶಾಕಿರಣ ತುಂಬಲು ರೂಪುರೇಷೆ ಸಿದ್ಧ ಮಾಡಿದ್ದೇನೆ. ಕಾಂಗ್ರೆಸ್ ವಿಶ್ವಾಸ ಇಲ್ಲದೆ ನಾನು ಕೆಲಸ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳ ಜೊತೆ ಎರಡು ಮೂರು ಸುತ್ತು ಸಭೆ ಮಾಡಿದ್ದೇನೆ. ಅನೇಕರು ನಮಗೆ ಶ್ರೀಮಂತ ರೈತ ಸಾಲಮನ್ನಾ ಯಾಕೆ ಮಾಡ್ತೀರಾ ಅಂತ ಪತ್ರ ಬರೆದು ಸಲಹೆಗಳನ್ನ ನೀಡಿದ್ದಾರೆ ಎಂದು ತಿಳಿಸಿದರು.

    ರೈತರನ್ನ ಉಳಿಸಲು ಹೋಗಿ ನಗರ ಪ್ರದೇಶದವರ ಹಣವನ್ನು ಖರ್ಚು ಮಾಡುವುದಿಲ್ಲ. ಜನತೆಯ ಪರ ತೀರ್ಮಾನ ಮಾಡುತ್ತೇವೆ. ನಾಡಿನ ಜನತೆಗೆ ಸಮಸ್ಯೆ ತಿಳಿಯಲು ಈ ಸಭೆ ಕರೆದಿದ್ದೇನೆ. ಬೆಂಗಳೂರು ಅಭಿವೃದ್ಧಿ ಬಗ್ಗೆ ಯಾರು ಆತಂಕ ಪಡುವ ಅಗತ್ಯವಿಲ್ಲ. ಈ ಸರ್ಕಾರ ಐದು ವರ್ಷ ಪೂರ್ಣ ಮಾಡಿದ್ದಾರೆ. ರೈತರನ್ನು ಉಳಿಸಿ ರಾಜ್ಯದ ಖಜಾನೆ ಭದ್ರ ಪಡೆಸುತ್ತೇನೆ. ಎರಡು ದಿನಗಳಲ್ಲಿ 10 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಂತ ಹಂತವಾಗಿ ರೈತರನ್ನ ನಾನು ಉಳಿಸಿಕೊಡುತ್ತೇನೆ. ರಾಜ್ಯದ ಜನತೆಯನ್ನು ನಾನು ಉಳಿಸಿಕೊಡುತ್ತೇನೆ. ನಿಮ್ಮ ಸಲಹೆ ಪಡೆದು ಮುಂದಿನ ನಿರ್ಧಾರ ಮಾಡುತ್ತೇನೆ. ನಿಮ್ಮ ಸಲಹೆ ಮೇರೆಗೆ ನಿರ್ಧಾರ ಮಾಡ್ತೀವಿ ಎಂದರು.

    ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಯುಪಿಎ ಸರ್ಕಾರ 72 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದಾರೆ. ಈಗಿನ ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ನಿಮಗೆ ಗೊತ್ತಿದೆ. ಯುಪಿಎ ಸರ್ಕಾರದ ಸಾಲಮನ್ನಾ ಪ್ರಸ್ತಾಪಿಸಿ ಈಗಿನ ಕೇಂದ್ರ ಸರ್ಕಾರದ ಬಗ್ಗೆ ಸೂಕ್ಷ್ಮವಾಗಿ ತೆಗಳಿದೆ ಅಂದ ಅವರು, ಇದೇ ವೇಳೆ ರಾಹುಕ್ ಗಾಂಧಿಗೆ ಬಹುಪರಾಕ್ ಹಾಕಿದ್ರು.

    ಕಾಂಗ್ರೆಸ್ ಸರ್ಕಾರ ಇದ್ದಾಗ ಅವರು ಬಂದಾಗ ರೈತರ ಸಾಲಮನ್ನಾ ಮಾಡಿದ್ರು. ರಾಹುಲ್ ಗಾಂಧಿ ಕೇಂದ್ರದಲ್ಲಿ ಸರ್ಕಾರ ಬಂದ್ರೆ ರೈತರ ಸಾಲಮನ್ನಾ ಮಾಡೋದಾಗಿ ಹೇಳಿದ್ದಾರೆ. ಇದು ನಿಮ್ಮ ಸರ್ಕಾರ. ರಾಜ್ಯದ ರೈತರ ಸರ್ಕಾರ. ಇದು ಸಮ್ಮಿಶ್ರ ಸರ್ಕಾರ ಅಲ್ಲ, ಜನರ ಸರ್ಕಾರ. ನಿಮ್ಮನ್ನ ನಾವು ಉಳಿಸಿಕೊಡುತ್ತೇವೆ. ನೀವು ನಮ್ಮ ಮೇಲೆ ನಂಬಿಕೆ ಇಡಬೇಕು. ಇಂದು ನಾವು ತೆಗೆದುಕೊಳ್ಳುವ ನಿರ್ಧಾರಕ್ಕೆ ರಾಹುಲ್ ಗಾಂಧಿ ಒಪ್ಪುತ್ತಾರೆ ಅನ್ನೋ ಭರವಸೆ ಇದೆ. ಈ ಸಭೆ ಇವತ್ತೇ ಮುಗಿಯೊಲ್ಲ. ಪ್ರತಿ ತಿಂಗಳು ರೈತರ ಸಭೆ ಮಾಡುತ್ತೇನೆ ಅಂತ ಎಂದು ಎಚ್‍ಡಿಕೆ ತಿಳಿಸಿದರು.