Tag: ಎಚ್ ಡಿ ಕುಮಾರಸ್ವಾಮಿ

  • ರಾಜ್ಯ ಕೃಷಿ ಪದ್ಧತಿಗೆ ತಜ್ಞ ಡಾ.ಸ್ವಾಮಿನಾಥನ್‍ರಿಂದ ಸಲಹೆ ಪಡೆದ ಎಚ್‍ಡಿಕೆ

    ರಾಜ್ಯ ಕೃಷಿ ಪದ್ಧತಿಗೆ ತಜ್ಞ ಡಾ.ಸ್ವಾಮಿನಾಥನ್‍ರಿಂದ ಸಲಹೆ ಪಡೆದ ಎಚ್‍ಡಿಕೆ

    ಬೆಂಗಳೂರು: ಖ್ಯಾತ ಕೃಷಿ ತಜ್ಞ ಡಾ.ಸ್ವಾಮಿನಾಥನ್ ಅವರ ಜೊತೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸಿದ್ದು, ಕೃಷಿ ಪದ್ಧತಿ ಬದಲಾವಣೆ ಕುರಿತು ಸಲಹೆ ಪಡೆದಿದ್ದಾರೆ.

    ಸಭೆ ಬಳಿಕ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಹೊಸ ಕೃಷಿ ಪದ್ಧತಿ ಅಳವಡಿಕೆಗೆ ಸ್ವಾಮಿನಾಥನ್ ಅವರಿಂದ ಸಲಹೆ ಪಡೆದಿರುವೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೊಸ ಪದ್ಧತಿ ಜಾರಿಗೆ ತರಲಾಗುವುದು. ಈ ಕುರಿತು ಇನ್ನು ಎರಡು ವಾರಗಳಲ್ಲಿ ಎಲ್ಲಾ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ, ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು.

    ಇಸ್ರೇಲ್ ಕೃಷಿ ಮಾದರಿಗೆ ಸ್ವಾಮಿನಾಥನ್ ಅವರು ಬೆಂಬಲ ಸೂಚಿಸಿದ್ದಾರೆ. ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಹಲವು ಮಾರ್ಪಾಡು ಮಾಡಲಾಗುತ್ತದೆ. ಇಸ್ರೇಲ್ ಮಾತ್ರವಲ್ಲ ಬೇರೆ ರಾಜ್ಯದ ಕೃಷಿ ಪದ್ಧತಿ ಜೊತೆಗೆ ಯಾರಾದರು ಉತ್ತಮ ಸಲಹೆ ಕೊಟ್ಟರೆ ಅದನ್ನು ಕೃಷಿಗೆ ಅಳವಡಿಸಿಕೊಳ್ಳುವುದಾಗಿ ಭರವಸೆ ನೀಡಿದರು.

    ಸಭೆಯಲ್ಲಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ, ತೋಟಗಾರಿಕೆ ಸಚಿವ ಮನುಗುಳಿ ಭಾಗವಹಿಸಿದ್ದರು.

  • ಧಾರವಾಡ ಜೆಡಿಎಸ್ ಸಭೆಯಲ್ಲಿ ಭಿನ್ನಮತ: ಕೈ ಕೈ ಮಿಲಾಯಿಸಿದ ಕಾರ್ಯಕರ್ತರು

    ಧಾರವಾಡ ಜೆಡಿಎಸ್ ಸಭೆಯಲ್ಲಿ ಭಿನ್ನಮತ: ಕೈ ಕೈ ಮಿಲಾಯಿಸಿದ ಕಾರ್ಯಕರ್ತರು

    ಧಾರವಾಡ: ಜಿಲ್ಲಾ ಜೆಡಿಎಸ್ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷದ ಕಾರ್ಯಕರ್ತರು ಕೈ ಕೈ ಮಿಲಾಯಿಸುವ ಹಂತಕ್ಕೆ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ.

    ನಗರದ ನೌಕರ ಭವನದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿರುವ ಹಿನ್ನೆಲೆಯಲ್ಲಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಸಲು ಸಭೆ ಆಯೋಜಿಸಲಾಗಿತ್ತು.

    ಸಭೆ ನಡೆಯುತ್ತಿದ್ದಂತೆ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂದು ಮುಖಂಡ ಗುರುರಾಜ ಹುಣಸಿಮರದ ಅವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದಾಗಿ ಪಕ್ಷದ ರಾಜ್ಯ ಉಪಾಧ್ಯಕ್ಷ ರಾಜಣ್ಣ ಕೊರವಿ ಬೆಂಬಲಿಗರು ಹಾಗೂ ಹುಣಸಿಮರದ ಅವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿದರು. ಇವರ ವರ್ತನೆಯಿಂದಾಗಿ ಬೇಸತ್ತ ಕೆಲ ಸದಸ್ಯರು ಸಭೆ ಹೊರನಡೆದರು.

  • ಇದು ಬಿಬಿಎಂಪಿ ಬಜೆಟಾ, ರಾಜ್ಯ ಬಜೆಟಾ: ಎಚ್.ಕೆ.ಪಾಟೀಲ್ ವಾಗ್ದಾಳಿ

    ಇದು ಬಿಬಿಎಂಪಿ ಬಜೆಟಾ, ರಾಜ್ಯ ಬಜೆಟಾ: ಎಚ್.ಕೆ.ಪಾಟೀಲ್ ವಾಗ್ದಾಳಿ

    ಬೆಂಗಳೂರು: ಇದು ಬಿಬಿಎಂಪಿ ಬಜೆಟ್ಟೋ..? ರಾಜ್ಯದ ಬಜೆಟ್ಟೋ..?. ಇದನ್ನು ನಾವು ಸಹಿಸೋದಕ್ಕೆ ಆಗಲ್ಲ. ತಪ್ಪನ್ನು ಸರಿಪಡಿಸೋದಕ್ಕೆ ಸಮಯ ಇದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಎಚ್.ಕೆ.ಪಾಟೀಲ್ ಕಿಡಿ ಕಾರಿದರು.

    ಕುಮಾರಸ್ವಾಮಿ ಅವರ ಬಜೆಟ್‍ನಲ್ಲಿ ಉತ್ತರ ಕರ್ನಾಟಕ, ಅಲ್ಪಸಂಖ್ಯಾತರನ್ನ ಕಡೆಗಣಿಸಲಾಗಿದೆ ಎನ್ನುವ ಟೀಕೆಯನ್ನು ಇಂದು ಕೂಡಾ ಸದನದಲ್ಲಿ ಹೊರಹಾಕಿದರು.

    ಅಂಕಿ ಅಂಶಗಳ ಮೂಲಕ ಬಜೆಟ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಜೆಟ್‍ನಲ್ಲಿ ಶೇಕಡಾ 82ರಷ್ಟು ಅನುದಾನವನ್ನು ಬೆಂಗಳೂರಿಗೆ ಮೀಸಲಿಡಲಾಗಿದೆ. ಹೀಗಾಗಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಇದರಿಂದ ಸಮ್ಮಿಶ್ರ ಸರ್ಕಾರಕ್ಕೆ ಟೀಕೆಗಳು ಕೇಳಿಬರುತ್ತಿವೆ. ಇದನ್ನು ಸರಿಪಡಿಸಿ ಅಂತಾ ಡಿಸಿಎಂ ಪರಮೇಶ್ವರ್ ಅವರಿಗೆ ಒತ್ತಾಯಿಸಿದರು.

    ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ರಾಜುಗೌಡ, ಬಿಜೆಪಿಯವರಿಗಿಂತ ಜೆಡಿಎಸ್‍ನವರು ನಿಜವಾದ ಹಿಂದೂವಾದಿಗಳು. ರೇವಣ್ಣ ಅವರ ಹೋಮ-ಹವನದಿಂದಲೇ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದು. ಹಾಗಾಗಿ, ಬಜೆಟ್‍ನಲ್ಲಿ ಹೋಮ-ಹವನಕ್ಕೂ 20% ಹಣ ಮೀಸಲಿಡಿ ಎಂದು ವ್ಯಂಗ್ಯವಾಡಿದರು. ಅತ್ತ, ಪರಿಷತ್‍ನಲ್ಲಿ ಮಾತನಾಡಿದ ಆಯನೂರು ಮಂಜುನಾಥ್ ಅವರು ಸಿದ್ದರಾಮಯ್ಯ ಬಜೆಟ್‍ನ ಎಲ್ಲಾ ಯೋಜನೆಗಳನ್ನು ಮುಂದುವರಿಸಿದ್ದೇವೆ ಅಂತ ಸಿಎಂ ಹೇಳುತ್ತಿದ್ದಾರೆ. ಅದ್ಯಾವ ಯೋಜನೆಗಳು ಅಂತ ವಿವರಿಸುತ್ತೀರಾ ಎಂದು ಪ್ರಶ್ನಿಸಿದರು.

  • ಬಿಎಸ್‍ವೈಗಾಗಿ ಕುಳಿತಿದ್ದ ಕುರ್ಚಿ ಬಿಟ್ಟು ಕೊಟ್ರು ಎಚ್‍ಡಿಕೆ- ಮಾಜಿ ಸಿಎಂ ಜೊತೆ ಭೋಜನ- ವಿಡಿಯೋ ನೋಡಿ

    ಬಿಎಸ್‍ವೈಗಾಗಿ ಕುಳಿತಿದ್ದ ಕುರ್ಚಿ ಬಿಟ್ಟು ಕೊಟ್ರು ಎಚ್‍ಡಿಕೆ- ಮಾಜಿ ಸಿಎಂ ಜೊತೆ ಭೋಜನ- ವಿಡಿಯೋ ನೋಡಿ

    ಬೆಂಗಳೂರು: ಸದನದಲ್ಲಿ ಭಾರೀ ಚಕಮುಕಿ ನಡೆಸುವ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮುಖ್ಯಮುಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯ ಮರೆತು ಔತಣಕೂಟದಲ್ಲಿ ಭಾಗವಹಸಿ, ಸಹಕಾರದಿಂದ ನಡೆದುಕೊಂಡಿದ್ದಾರೆ.

    ಇಂದು ಮಧ್ಯಾಹ್ನ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‍ನಲ್ಲಿ ಸಿಎಂ ಕುಮಾರಸ್ವಾಮಿ ಅವರು ಭೋಜನ ಕೂಟ ಆಯೋಜಿಸಿದ್ದರು. ಔತಣಕೂಟಕ್ಕೆ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಆಗಮಿಸುತ್ತಿದಂತೆ ಅವರನ್ನು ಕುಮಾರಸ್ವಾಮಿ ಕೈ ಕುಲುಕಿ ಆಹ್ವಾನಿಸಿ, ತಾವು ಕುಳಿತಿದ್ದ ಕುರ್ಚಿಯನ್ನು ಬಿಟ್ಟುಕೊಟ್ಟರು.

    ಕುಮಾರಸ್ವಾಮಿ ಅವರ ಸ್ಥಾನದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಭೋಜನ ಸವಿದರು. ಕಲಾಪದ ಚರ್ಚೆಗಳನ್ನು, ರಾಜಕೀಯ ಅಸಮಾಧಾನವನ್ನು ಬದಿಗಿಟ್ಟು ಔತಣಕೂಟದಲ್ಲಿ ಭಾಗಿಯಾಗಿದರು. ಯಡಿಯೂರಪ್ಪ, ಸಿದ್ದರಾಮಯ್ಯ ಜೊತೆಯಲ್ಲೇ ಸ್ಪೀಕರ್ ರಮೇಶ್ ಕುಮಾರ್, ಬಸವರಾಜ ಹೊರಟ್ಟಿ ಸಹ ಭೋಜನ ಸವಿದರು.

    https://youtu.be/WnaOqCajyjc

  • ಅನ್ನಭಾಗ್ಯದ ಭಾವನಾತ್ಮಕ ನಂಟು ತೆರೆದಿಟ್ಟು ಎಚ್‍ಡಿಕೆಗೆ ದೀರ್ಘ ಪತ್ರ ಬರೆದ ಮಾಜಿ ಸಿಎಂ

    ಅನ್ನಭಾಗ್ಯದ ಭಾವನಾತ್ಮಕ ನಂಟು ತೆರೆದಿಟ್ಟು ಎಚ್‍ಡಿಕೆಗೆ ದೀರ್ಘ ಪತ್ರ ಬರೆದ ಮಾಜಿ ಸಿಎಂ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕೊಟ್ಟ ಭರವಸೆಯಂತೆ `ನುಡಿದಂತೆ ನಡೆ’ದಿದ್ದಾರೆ.

    ಬಜೆಟ್‍ನಲ್ಲಿ ಅನ್ನಭಾಗ್ಯದ ಅಕ್ಕಿಯ ಪ್ರಮಾಣ ಮತ್ತು ತೈಲ ಬೆಲೆ ಏರಿಕೆಗೆ ಕಾಂಗ್ರೆಸ್‍ನಲ್ಲೇ ಅಸಮಾಧಾನ ಕೇಳಿ ಬಂದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕಾಂಗ ಸಭೆಯಲ್ಲಿ ಶಾಸಕರು ಸಿದ್ದರಾಮಯ್ಯ ಮತ್ತು ಡಿಸಿಎಂ ಪರಮೇಶ್ವರ್ ಮುಂದೆಯೇ ಅಸಮಾಧಾನವನ್ನು ಪ್ರಕಟಿಸಿದ್ದರು.

    ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಈ ವಿಚಾರವನ್ನು ನಾನು ಸರ್ಕಾರಕ್ಕೆ ಮುಟ್ಟಿಸುತ್ತೇನೆ ಎಂದು ಹೇಳಿದ್ದರು. ಅದರಂತೆ ಈಗ ನೇರವಾಗಿಯೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಅನ್ನ ಭಾಗ್ಯದ ಅಕ್ಕಿ ಪ್ರಮಾಣವನ್ನು ಏರಿಸಬೇಕು  ಮತ್ತು ತೈಲ ಬೆಲೆ ಮೇಲಿನ ತೆರಿಗೆಯನ್ನು ಇಳಿಸುವಂತೆ ಮನವಿ ಮಾಡಿದ್ದಾರೆ.

    ಪತ್ರದಲ್ಲಿ ಏನಿದೆ?
    ಅನ್ನಭಾಗ್ಯ ಎನ್ನುವುದು ನನ್ನ ಪಾಲಿಗೆ ಕೇವಲ ಒಂದು ಸರ್ಕಾರಿ ಯೋಜನೆಯಲ್ಲ. ಅದು ಬಡಜನರ ಹಸಿವು ನೀಗಿಸುವ ಪುಣ್ಯದ ಕೆಲಸ ಎಂದು ನಾನು ನಂಬಿದವನು. ಬಡವರ ಹಸಿವಿನ ಭವಣೆಯನ್ನು ಕಣ್ಣಾರೆ ಕಂಡ ನನ್ನ ಅನುಭವವೇ ಈ ಯೋಜನೆಯ ಪ್ರೇರಣೆ. ಇದರ ಜತೆಗೆ ನನಗೆ ಭಾವನಾತ್ಮಕ ಸಂಬಂಧವಿದೆ.

    ನಮ್ಮ ಒಟ್ಟು ಆಯವ್ಯಯ ಪ್ರಮಾಣವನ್ನು ಗಮನಿಸಿದರೆ ಅನ್ನಭಾಗ್ಯ ಯೋಜನೆ ದುಬಾರಿಯೇನಲ್ಲ. ಐದು ವರ್ಷಗಳ ಅವಧಿಯಲ್ಲಿ ಈ ಯೋಜನೆಗೆ ನಮ್ಮ ಸರ್ಕಾರ ನೀಡಿದ್ದ ಒಟ್ಟು ಹಣ 11,564 ಕೋಟಿ ರೂ.. ಇದರ ಫಲಾನುಭವಿಗಳ ಸಂಖ್ಯೆ 3.85 ಕೋಟಿ. ಜಾತಿ, ಧರ್ಮ, ಪ್ರದೇಶದ ಗಡಿಗಳೆನ್ನಲ್ಲ ಮೀರಿ ಅತ್ಯಂತ ಹೆಚ್ಚು ಫಲಾನುಭವಿಗಳನನ್ನು ತಲುಪುತ್ತಿರುವ ಏಕೈಕ ಯೋಜನೆ ಇದು.

    ಇಂದು ನಮ್ಮ ನಾಡಿನಲ್ಲಿ ಯಾರೊಬ್ಬರೂ ಹಸಿದು ಮಲಗುವಂತಹ ಅಸಹಾಯಕ ಪರಿಸ್ಥಿತಿ ಇಲ್ಲ. ಆಹಾರ ಹಕ್ಕನ್ನು ನೀಡಿದ ತೃಪ್ತಿ ನನ್ನದು. ಹಸಿವಿನ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಗೆದ್ದಿದೆ. ಹಸಿವು ಮುಕ್ತ ಕರ್ನಾಟಕ ಸಾಕಾರಗೊಂಡಿದೆ. ಸತತ ಬರಗಾಲ ಹೊರತಾಗಿಯೂ ರೈತರ ಆತ್ಮಹತ್ಯೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಲಸೆ ಕಡಿಮೆಯಾಗಲು ಅನ್ನಭಾಗ್ಯ ಯೋಜನೆ ಮುಖ್ಯ ಕಾರಣವಾಗಿದೆ.

    ನೀವು ಮಂಡಿಸಿದ ಹೊಸ ಬಜೆಟ್‍ನಲ್ಲಿ ಅನ್ನಭಾಗ್ಯದ ಅಕ್ಕಿಯ ಪ್ರಮಾಣವನ್ನು 5 ಕೆಜಿಗೆ ಇಳಿಸಿದ್ದು ತಿಳಿದು ಅಚ್ಚರಿಯಾಯಿತು. ಅನ್ನಭಾಗ್ಯ ಯೋಜನೆಗೆ ನಾವು ಬಜೆಟ್‍ನಲ್ಲಿ ನಿಗದಿಪಡಿಸಿದ್ದ ಸಹಾಯಧನ 2,450 ಕೋಟಿ ರೂ. 2 ಕೆಜಿ ಅಕ್ಕಿ ಕಡಿಮೆ ಮಾಡುವುದರಿಂದ ಹೆಚ್ಚೆಂದರೆ 600-700 ಕೋಟಿ ರೂಪಾಯಿ ಉಳಿತಾಯ ಮಾಡಬಹುದು. ಆದರೆ ಈ ಕಡಿತದಿಂದ ಹೆಚ್ಚಾಗಲಿರುವ ಬಡವರ ಕಷ್ಟದ ಪ್ರಮಾಣವನ್ನು ನೀವು ಊಹಿಸಬಲ್ಲಿರಿ ಎಂದು ನಾನು ನಂಬಿದ್ದೇನೆ. ಈಗಾಗಲೇ ಬೇರೆ ಬೇರೆ ಜಿಲ್ಲೆಗಳ ಜನತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವುದನ್ನು ನಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ನನ್ನ ಗಮನಕ್ಕೆ ತಂದಿದ್ದಾರೆ.

    ಈ ಹಿನ್ನೆಲೆಯಲ್ಲಿ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದ ಪ್ರತಿಯೊಬ್ಬನ ಸದಸ್ಯರಿಗೂ ನೀಡಲಾಗುತ್ತಿದ್ದ ಅಕ್ಕಿಯನ್ನು ತಲಾ 7 ಕೆಜಿ ಯಿಂದ 5 ಕೆಜಿಗೆ ಇಳಿಸುವ ನಿರ್ಧಾರವನ್ನು ಪುನರ್ ಪರಿಶೀಲಿಸಿ ಹಳೆಯ ಪದ್ಧತಿಯನ್ನೇ ಮುಂದುವರೆಸಿಕೊಂಡು ಹೋಗಬೇಕೆಂದು ಕೋರುತ್ತೇನೆ.

    ಹಾಗೆಯೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಿತ್ತು. ತೈಲ ಬೆಲೆ ಏರಿಕೆಯನ್ನು ಪ್ರಮುಖ ವಿಷಯವನ್ನಾಗಿ ಮಾಡಿಕೊಂಡು ನಮ್ಮ ಪಕ್ಷ ವಿಧಾನ ಸಭೆ ಚುನಾವಣೆಯಲ್ಲಿ ಹೋರಾಟ ನಡೆಸಿತ್ತು. ಜೊತೆಗೆ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರೂ ಸಹ ಈ ವಿಷಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

    ಇಂತಹ ಸನ್ನಿವೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ನಿಧಾರವನ್ನು ತಾವು ಘೋಷಣೆ ಮಾಡಿದ್ದೀರಿ. ಇದರಿಂದ ಬೆಲೆ ಏರಿಕೆ ಜೊತೆಗೆ ಜನಸಾಮಾನ್ಯದ ಮೇಲು ಪರಿಣಾಮ ಬೀರಲಿದೆ. ಹೀಗಾಗಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಸುವ ತೀರ್ಮಾನದ ಬಗ್ಗೆಯೂ ಮರು ಪರಿಶೀಲನೆ ಮಾಡಬೇಕೆಂದು ಕೋರುತ್ತೇನೆ.

  • ರೊಚ್ಚಿಗೆದ್ದು ಜನರು ನಕ್ಸಲರಿಗೆ ಶರಣಾಗಬೇಕಾ: ಸರ್ಕಾರ ವಿರುದ್ಧ ಗುಡುಗಿದ ಸಿ.ಟಿ.ರವಿ

    ರೊಚ್ಚಿಗೆದ್ದು ಜನರು ನಕ್ಸಲರಿಗೆ ಶರಣಾಗಬೇಕಾ: ಸರ್ಕಾರ ವಿರುದ್ಧ ಗುಡುಗಿದ ಸಿ.ಟಿ.ರವಿ

    ಬೆಂಗಳೂರು: ಪ್ರಜಾತಂತ್ರದ ಮೇಲೆ ನಂಬಿಕೆಯಿಟ್ಟು ನಕ್ಸಲರಿಗೆ ಬೆಂಬಲಕೊಡಲಿಲ್ಲ. ಜನ ಈಗ ರೊಚ್ಚಿಗೆದ್ದು ನಕ್ಸಲರಿಗೆ ಶರಣಾಗಬೇಕಾ ಹೇಳಿ ಎಂದು ಸದನದಲ್ಲಿ ಸರ್ಕಾರವನ್ನು ಶಾಸಕ ಸಿ.ಟಿ.ರವಿ ತರಾಟೆ ತೆಗೆದುಕೊಂಡರು.

    ಹಾಸನಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದಕ್ಕೆ ನಮಗೆ ಬೇಸರವಿಲ್ಲ. ಆದರೆ ನಮ್ಮನ್ನು ಕಡೆಗಣಿಸಿದ್ದೇಕೆ? ಚಿಕ್ಕಮಗಳೂರು ಜಿಲ್ಲೆಯಲ್ಲಿ 5 ನದಿಗಳು ಹುಟ್ಟುತ್ತವೆ. ಆದರೆ ಬೇಸಿಗೆಯಲ್ಲಿ ನಾವು ನೀರಿಲ್ಲದೆ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನ್ಯಾಯವನ್ನು ನೋಡಿಕೊಂಡಿ ಸುಮ್ಮನಿರಲು ಜನ ನಮ್ಮನ್ನು ಕಳುಹಿಸಿಲ್ಲ. ಚಿಕ್ಕಮಗಳೂರು ಜಿಲ್ಲೆಗೆ ಇಎಸ್‍ಐ ಆಸ್ಪತ್ರೆ ಸೌಲಭ್ಯ ನೀಡಬೇಕು ಹಾಗೂ ಕಾಫಿ ಉದ್ಯಮವನ್ನು ಸೆಮಿ ಕೈಗಾರಿಕೆ ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

    ಕೊಟ್ಟವನು ಕೋಡಂಗಿ, ಇಸ್ಕೊಂಡೋನು ಈರಭದ್ರ ಎಂಬ ಸಾಲದ ಗಾದೆ ಮಾತು ಇದೆ. ಈಗ ಸಾಲ ಕಟ್ಟಿರುವ ರೈತರು ಕೋಡಂಗಿ, ಸಾಲ ಕಟ್ಟದವರು ಈರಭದ್ರ ಎಂಬಂತಾಗಿದೆ. ಇದರಿಂದ ಸಾಲ ಪಾವತಿ ಮಾಡಿರುವ ರೈತರಿಗೂ ಹಣ ಪಾವತಿಯಾಗಬೇಕು. ಬಜೆಟ್‍ನಲ್ಲಿ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಪ್ರಸ್ತಾಪವೇ ಇಲ್ಲ. ಇದು ಸಮದೃಷ್ಟಿಯ ಬಜೆಟ್ ಅಲ್ಲವೇ ಅಲ್ಲ ಎಂದು ಆರೋಪಿಸಿದರು.

  • ಕೆಂಪೇಗೌಡ ಜಯಂತಿ ಮುಂದೂಡುವಂತೆ ಸಿಎಂ ಸೂಚನೆ

    ಕೆಂಪೇಗೌಡ ಜಯಂತಿ ಮುಂದೂಡುವಂತೆ ಸಿಎಂ ಸೂಚನೆ

    ಬೆಂಗಳೂರು: ಜುಲೈ 18 ರಂದು ನಿಗದಿಯಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ರಾಜ್ಯ ಸರ್ಕಾರ ಮತ್ತೇ ಮುಂದೂಡಿಕೆ ಮಾಡಿದೆ.

    ಸಮಯದ ಅಭಾವ ಹಿನ್ನೆಲೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಜುಲೈ 18 ರಂದು ಕಾರ್ಯಕ್ರಮ ಬೇಡ. ಬೇರೊಂದು ದಿನ ಆಚರಣೆ ಮಾಡಿ ಎಂದು ಸೂಚಿಸಿದ್ದಾರೆ.

    ಕೆಂಪೇಗೌಡ ಜಯಂತಿ ನಿಮಿತ್ತ ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಸಿಎಂ ಕುಮಾರಸ್ವಾಮಿ ಅವರ ಸೂಚನೆಯಿಂದಾಗಿ ಕಾರ್ಯಕ್ರಮದ ದಿನಾಂಕವನ್ನು ಮುಂದುಡಲಾಗಿದೆ.

  • ಡಿಕೆಶಿ ಡಿನ್ನರ್ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ!

    ಡಿಕೆಶಿ ಡಿನ್ನರ್ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ!

    ಬೆಂಗಳೂರು: ಸಚಿವ ಡಿಕೆಶಿ ಆಯೋಜಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಭಾಗಿಯಾಗಿ ಅಚ್ಚರಿ ಮೂಡಿಸಿದ್ದಾರೆ.

    ಬೆಂಗಳೂರಿನ ಖಾಸಗಿ ಹೋಟೆಲ್‍ಲ್ಲಿ ಮಂಗಳವಾರ ರಾತ್ರಿ ಜಲ ಸಂಪನ್ಮೂಲ ಸಚಿವ ಡಿಕೆ.ಶಿವಕುಮಾರ್ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಭೋಜನ ಕೂಟ ಏರ್ಪಡಿಸಿದ್ರು.

    ಈ ವೇಳೆ ಸುಧಾಕರ್ ಜೊತೆ ಬಂದ ಗೂಳಿಹಟ್ಟಿ ಶೇಖರ್ ಕೂಡ ಜೊತೆಗಿದ್ರು. ಇವರನ್ನ ನೋಡಿದ ಜೆಡಿಎಸ್, ಕಾಂಗ್ರೆಸ್ ಶಾಸಕರು ಬನ್ನಿ ಬನ್ನಿ ಊಟ ಮಾಡೋದಕ್ಕೆ ಯಾವ ಪಕ್ಷ ಆದರೇನು?. ಊಟ ಮಾಡಿ ಅಂತಾ ಹೇಳಿ ಗೂಳಿಹಟ್ಟಿಯನ್ನು ಪೇಚಿಗೆ ಸಿಲುಕಿಸಿದ್ರು. ನಂತರ ಊಟ ಮಾಡಿದ ಗೂಳಿಹಟ್ಟಿ ಸುಧಾಕರ್ ಅವರ ಕಾರಿನಲ್ಲೆ ವಾಪಾಸಾದ್ರು. ಇದನ್ನೂ ಓದಿ: ಮೊನ್ನೆ ಸಿದ್ದರಾಮಯ್ಯ, ಇಂದು ಡಿಕೆ ಶಿವಕುಮಾರ್ – ಎಂಎಲ್‍ಎ, ಎಂಎಲ್‍ಸಿಗಳಿಗೆ ಡಿನ್ನರ್ ಪಾರ್ಟಿ

    ಆದ್ರೆ ರಾಜಕೀಯ ವಲಯದಲ್ಲಿ ಇದು ಬೇರೆಯೇ ಚರ್ಚೆಗೆ ಗ್ರಾಸವಾಗಿದ್ದು, ಗೂಳಿಹಟ್ಟಿ ಕಾಂಗ್ರೆಸ್ ಸೇರ್ತಾರಾ ಅನ್ನೊ ಅನುಮಾನ ಸೃಷ್ಟಿಸಿದೆ. ಇನ್ನು, ಇದೇ ವೇಳೆ ಸಿಎಂ ಹೆಚ್‍ಡಿಕೆ ಹಾಗೂ ಡಿಕೆಶಿ ಮೂರು ತಾಸು ಮಾತುಕತೆ ನಡೆಸಿದ್ದಾರೆ.

  • ಲೋಕಸಭಾ ಚುನಾವಣೆಗೆ ಸ್ಫರ್ಧಿಸುವ ಬಗ್ಗೆ ಶ್ರೀರಾಮುಲು ಸ್ಪಷ್ಟನೆ

    ಲೋಕಸಭಾ ಚುನಾವಣೆಗೆ ಸ್ಫರ್ಧಿಸುವ ಬಗ್ಗೆ ಶ್ರೀರಾಮುಲು ಸ್ಪಷ್ಟನೆ

    ಮೈಸೂರು: ನಾನು ಮತ್ತೆ ಲೋಕಸಭೆ ಚುನಾವಣೆಗೆ ನಿಲ್ಲೋದಿಲ್ಲ. ನಾನು ಶಾಸಕನಾಗಿಯೇ ಮುಂದುವರಿಯುತ್ತೇನೆ. ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡೋ ಇಂಗಿತ ಇಲ್ಲ ಅಂತ ಬಿಜೆಪಿ ಶಾಸಕ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.

    ನಗರದ ಕೆ.ಆರ್.ಮೋಹಲ್ಲದಲ್ಲಿರುವ ಅರ್ಜುನ್ ಗುರೂಜಿ ನಿವಾಸಕ್ಕೆ ಶಾಸಕ ಶ್ರೀರಾಮುಲು ಭೇಟಿ ನೀಡಿ ಗೌಪ್ಯ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಅವರು, ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸ್ತೇನೆ ಅನ್ನೋದು ಸತ್ಯಕ್ಕೆ ದೂರವಾದದ್ದು ಅಂತ ಅವರು ಹೇಳಿದ್ರು.

    ಇದೇ ವೇಳೆ ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ತಾರತಮ್ಯ ಮಾಡಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಕೇವಲ ಮೂರ್ನಾಲ್ಕು ಜಿಲ್ಲೆಗೆ ಸೀಮಿತಗೊಳಿಸಿ ಬಜೆಟ್ ಮಂಡಿಸಿದ್ದಾರೆ. ಅವರ ಬಜೆಟ್ ಅನ್ನು ಯಾರು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಉತ್ತರ ಕರ್ನಾಟಕ ಜನರು ಪ್ರತ್ಯೇಕ ರಾಜ್ಯ ಕೇಳುತ್ತಿದ್ದಾರೆ. ಬಜೆಟ್‍ನಲ್ಲಿ ಆ ಭಾಗವನ್ನ ಕಡೆಗಣಿಸಿದ್ದು, ಅದಕ್ಕೆ ಪುಷ್ಠಿ ನೀಡಿದಂತಾಗಿದೆ. ಆದ್ರೆ ಯಾವುದೇ ಕಾರಣಕ್ಕೂ ಇದಕ್ಕೆ ನನ್ನ ಸಹಮತ ಇಲ್ಲ. ಈ ಬಗ್ಗೆ ವಿಧಾನಸಭೆಯಲ್ಲಿ ಮಾತಾಡುತ್ತೇನೆ ಅಂದ್ರು.

    ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಬಜೆಟ್‍ನಲ್ಲಿ ಆ ಭಾಗಕ್ಕೆ ಯಾವುದೇ ರೀತಿ ಪ್ಯಾಕೇಜ್ ನೀಡಿಲ್ಲ. ಇದು ಕುಮಾರಸ್ವಾಮಿಯವರ ಆಡಳಿತ ತೋರುತ್ತದೆ. ಕುಮಾರಸ್ವಾಮಿ ಕೇವಲ 2 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದಾರೆ. ಈ ಹಿಂದೆ ಇದ್ದ ಸರ್ಕಾರ 4 ಸಾವಿರ ಕೋಟಿ ಸಾಲಮನ್ನಾ ಬಾಕಿ ಉಳಿಸಿಕೊಂಡಿದೆ. ಈ ವರ್ಷದ ಬಜೆಟ್‍ನಲ್ಲಿ ಎಚ್‍ಡಿಕೆ 6 ಸಾವಿರ ಕೋಟಿ ಮನ್ನಾ ಮಾಡಿದ್ದಾರೆ. ಅಂದ್ರೆ ಇವರು ನಿಜವಾಗಿಯೂ ಮನ್ನಾ ಮಾಡಿದ ಸಾಲ ಕೇವಲ 2 ಸಾವಿರ ಕೋಟಿ. ಇವರು ಕೊಟ್ಟ ಪ್ರಣಾಳಿಕೆ ಏನೂ ಇವರು ಮಾಡಿದ ಸಾಲಮನ್ನವೆಷ್ಟು ಎಂದು ಕುಮಾರಸ್ವಾಮಿಯವರನ್ನ ಪ್ರಶ್ನಿಸಿದ್ರು.

    ರೇವಣ್ಣ, ಕುಮಾರಸ್ವಾಮಿ ವಚನ ಭ್ರಷ್ಟರೆಂದು ರಾಜ್ಯದ ಜನರಿಗೆ ಗೊತ್ತಿದೆ. ಮೊದಲು ಯಡಿಯೂರಪ್ಪನವರಿಗೆ ಅಧಿಕಾರ ಕೊಡದೆ ವಚನ ಭ್ರಷ್ಟರಾದ್ರು. ಇದೀಗ ರೈತರಿಗೆ ಸಾಲಮನ್ನಾ ಮಾಡದೆ ವಚನ ಭ್ರಷ್ಟರಾಗಿದ್ದಾರೆ. ಅದಕ್ಕೆ ರಾಜ್ಯದ ಜನ ಇವರನ್ನು ನಂಬದೆ ಕಾಂಗ್ರೆಸ್-ಜೆಡಿಎಸ್‍ಗೆ ಬಹುಮತ ಕೊಟ್ಟಿಲ್ಲ. ಇವರಿಬ್ಬರಿಗೂ ಪ್ರಧಾನಿ ಮೋದಿ ಲೋಕಸಭೆ ಚುನಾವಣೆಯಲ್ಲೇ ಏಟು ಕೊಡ್ತಾರೆ. ಮತ್ತೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಅಂತ ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ರು.

  • ಕಲಾಪಕ್ಕೆ ಇಂದಿನಿಂದ ಬಜೆಟ್ ಬಿಸಿ – ದೋಸ್ತಿ ಸರ್ಕಾರವನ್ನು ಹಣಿಯಲು ಬಿಜೆಪಿ ಸಜ್ಜು

    ಕಲಾಪಕ್ಕೆ ಇಂದಿನಿಂದ ಬಜೆಟ್ ಬಿಸಿ – ದೋಸ್ತಿ ಸರ್ಕಾರವನ್ನು ಹಣಿಯಲು ಬಿಜೆಪಿ ಸಜ್ಜು

    ಬೆಂಗಳೂರು: ಬಜೆಟ್ ಅಧಿವೇಶನದ 5ನೇ ದಿನವಾದ ಇಂದು ವಿಧಾನಸಭೆಯಲ್ಲಿ ಕದನ ಕುತೂಹಲ ಇದೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಹೆಚ್‍ಡಿಕೆ ಉತ್ತರ ನೀಡಲಿದ್ದು, ವಿರೋಧ ಪಕ್ಷದ ನಾಯಕ ಬಿಎಸ್‍ವೈಗೆ ಟಾಂಗ್ ಕೊಡಲಿದ್ದಾರೆ.

    ಬೆಳಗ್ಗೆ 10.30ಕ್ಕೆ ವಿಧಾನಸಭೆ ಕಲಾಪ ಆರಂಭವಾಗಲಿದ್ದು, ಆರಂಭದಲ್ಲೇ ಹೆಚ್‍ಡಿಕೆ ಉತ್ತರ ನೀಡಲಿದ್ದಾರೆ. ಅಪ್ಪ ಮಕ್ಕಳು, ಅಣ್ಣ ತಮ್ಮಂದಿರ ಸರ್ಕಾರ ಎಂಬ ಬಿಎಸ್‍ವೈ ಅಬ್ಬರಕ್ಕೆ ಮುಯ್ಯಿ ತೀರಿಸಲು ಹೆಚ್‍ಡಿಕೆ ಸಿದ್ಧವಾಗಿದ್ದಾರೆ ಎನ್ನಲಾಗಿದೆ.

    ಇಂದಿನ ವಿಧಾನ ಕಲಾಪ ಕದನ ಕುತೂಹಲ ಮೂಡಿಸಿದ್ದು, ಕುಮಾರಣ್ಣನ ವಾಗ್ಬಾಣದತ್ತ ಎಲ್ಲರ ಚಿತ್ತ ಇದೆ. ಆದ್ರೆ ಇದೇ ವೇಳೆ ಸಂಪೂರ್ಣ ಸಾಲಮನ್ನಾ ಸುಳಿಯಲ್ಲಿ ಹೆಚ್‍ಡಿಕೆ ಸಿಲುಕಿಸಲು ಬಿಎಸ್‍ವೈ ಆಂಡ್ ಬಿಜೆಪಿ ಪ್ಲ್ಯಾನ್ ಮಾಡಿದ್ದು, ಸದನದೊಳಗೆ ಹೋರಾಟ ನಡೆಸುವ ಸಾಧ್ಯತೆ ಹೆಚ್ಚಿದೆ.


    ಸದನದೊಳಗೆ ಬಿಜೆಪಿ ಪ್ರತಿಭಟನೆಗೆ ಸಜ್ಜಾಗಿದ್ರೆ, ಸದನದ ಹೊರಗೆ ರೈತರು ಬೀದಿಗಿಳಿಯಲಿದ್ದಾರೆ. ಸಂಪೂರ್ಣ ಸಾಲ ಮನ್ನಾಗೆ ಆಗ್ರಹಿಸಿ ಮೈತ್ರಿ ಸರ್ಕಾರದ ವಿರುದ್ಧ ಸಾವಿರಾರು ರೈತರು ಇಂದು ಪ್ರತಿಭಟನೆ ನಡೆಸಲಿದ್ದಾರೆ. ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ನಾಯಕತ್ವದಲ್ಲಿ ರಾಜ್ಯದ್ಯಾಂತ ರೈತರು ಬೆಂಗಳೂರಿಗೆ ಬಂದು ಬೆಳಗ್ಗೆ 10 ಗಂಟೆಗೆ ಫ್ರೀಡಂಪಾರ್ಕ್‍ನಿಂದ ಆನಂದ್ ರಾವ್ ವೃತ್ತದವರೆಗೆ ಜಾಥಾ ಬಂದು, ಮೌರ್ಯ ಸರ್ಕಲ್‍ನ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲಿದ್ದಾರೆ.

    ಕೇವಲ ಸುಸ್ತಿ ಬೆಳೆಸಾಲ ಮನ್ನಾ ಅನ್ನುವ ಪ್ರಸ್ತಾಪಕ್ಕೆ ರೈತರು ತೀವ್ರ ವಿರೋಧ ವಿರೋಧ ವ್ಯಕ್ತಪಡಿಸಿದ್ದಾರೆ. ಸುಸ್ತಿ ಬೆಳೆ ಸಾಲ ಹೆಚ್ಚು ಪ್ರಮಾಣದಲ್ಲಿ ಇಲ್ಲ, ಕೆಲವರಿಗಷ್ಟೇ ಅನುಕೂಲವಾಗಲಿದೆ. ಟ್ರಾಕ್ಟರ್ ಸಾಲ, ಬೋರ್‍ವೆಲ್ ಸಾಲ, ಕೃಷಿಗಾಗಿ ಬಂಗಾರ ಇಟ್ಟು ಪಡೆದ ಸಾಲ ಪರಿಗಣಿಸಿಲ್ಲ. ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಸಂಪೂರ್ಣ ಸಾಲ ಮನ್ನಾ ಮಾಡಲು ಆಗ್ರಹ ಹಾಗೂ ಸಾಲ ಮನ್ನಾ ಮಾಡುವ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ. ಇದು ಸರಿಪಡಿಸಬೇಕು ಎಂಬ ಬೇಡಿಕೆಗಳನ್ನಿಟ್ಟು ರೈತರು ಇಂದು ಬೀದಿಗಿಳಿಯಲಿದ್ದಾರೆ.