Tag: ಎಚ್ ಡಿ ಕುಮಾರಸ್ವಾಮಿ

  • ಅನ್ನಭಾಗ್ಯ ಯೋಜನೆ: ದೋಸ್ತಿಗೆ ತಿರುಗೇಟು ಕೊಟ್ಟ ಸಿಎಂ ಕುಮಾರಸ್ವಾಮಿ

    ಅನ್ನಭಾಗ್ಯ ಯೋಜನೆ: ದೋಸ್ತಿಗೆ ತಿರುಗೇಟು ಕೊಟ್ಟ ಸಿಎಂ ಕುಮಾರಸ್ವಾಮಿ

    ಬೆಂಗಳೂರು: ಅನ್ನಭಾಗ್ಯ ಯೋಜನೆಯ ಅಡಿ 7 ಕೆಜಿ ನೀಡಲಾಗುತ್ತದೆ ಎಂದಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಜಮೀರ್ ಅಹ್ಮದ್ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

    ಅಕ್ಕಿ ಕಡಿತದ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ಬಳಿ ಚರ್ಚೆ ಮಾಡಬೇಕಿತ್ತು. ಆದರೆ ಹಾಗೇ ಮಾಡಲಿಲ್ಲ. ಹೀಗಾಗಿ ಹಿಂದಿನಂತೆ 7 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಸಚಿವ ಜಮೀರ್ ಅಹ್ಮದ್ ಮಂಗಳವಾರ ಹೇಳಿಕೆ ನೀಡಿದ್ದರು.

    ಬಜೆಟ್‍ನಲ್ಲಿ ಕುಮಾರಸ್ವಾಮಿ ಅವರು ಅನ್ನಭಾಗ್ಯ ಯೋಜನೆಯ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದರು. ಆದರೆ ಇದು ಸೂಕ್ತವಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಜೊತೆಗೆ ಅಕ್ಕಿ ಕಡಿತ ಮಾಡದಂತೆ ಪತ್ರದ ಮೂಲಕ ಕುಮಾರಸ್ವಾಮಿಯವರಿಗೆ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದರು. ಆದರೆ, ಕುಮಾರಸ್ವಾಮಿ ಅವರು ಯಾವುದೇ ಒತ್ತಡಗಳಿಗೆ, ಮನವಿಗೆ ಬಗ್ಗದೇ ಅಕ್ಕಿಯ ಕಡಿತವನ್ನು ಹಿಂದಕ್ಕೆ ಪಡೆದಿರಲಿಲ್ಲ.

  • ಅನ್ನಭಾಗ್ಯ ಯೋಜನೆ ಅಕ್ಕಿ ಕಡಿತ ವಿಚಾರದಲ್ಲಿ ದೋಸ್ತಿಗಳ ನಡುವೆಯೇ ಭಿನ್ನಾಭಿಪ್ರಾಯ!

    ಅನ್ನಭಾಗ್ಯ ಯೋಜನೆ ಅಕ್ಕಿ ಕಡಿತ ವಿಚಾರದಲ್ಲಿ ದೋಸ್ತಿಗಳ ನಡುವೆಯೇ ಭಿನ್ನಾಭಿಪ್ರಾಯ!

    ಬೆಂಗಳೂರು: ಅನ್ನಭಾಗ್ಯ ಯೋಜನೆಯ 2 ಕೆಜಿ ಅಕ್ಕಿ ಕಡಿತ ವಿಚಾರದ ಬಗ್ಗೆ ಈಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹ್ಮದ್ ಮಧ್ಯೆ ಇದ್ದ ಭಿನ್ನಾಭಿಪ್ರಾಯ ಬಹಿರಂಗವಾಗಿದೆ.

    ಬಜೆಟ್‍ನಲ್ಲಿ ಕುಮಾರಸ್ವಾಮಿ ಅವರು ಅನ್ನಭಾಗ್ಯ ಯೋಜನೆಯ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದರು. ಇದರಿಂದ ಸರ್ಕಾರದ ಮೇಲಾಗುವ 2 ಸಾವಿರ ಕೋಟಿ ರೂ. ಹೊರೆ ತಡೆಯಬಹುದು ಎಂದು ಲೆಕ್ಕ ಹಾಕಿದ್ದರು. ಅನ್ನ ಭಾಗ್ಯದಲ್ಲಿ ಅಕ್ಕಿ ಕಡಿತಗೊಂಡಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಕ್ಕಿ ಕಡಿತ ಮಾಡದಂತೆ ಪತ್ರದ ಮೂಲಕ ಕುಮಾರಸ್ವಾಮಿಯವರಿಗೆ  ಮನವಿ ಮಾಡಿಕೊಂಡಿದ್ದರು. ಆದರೆ, ಕುಮಾರಸ್ವಾಮಿ ಅವರು ಯಾವುದೇ ಒತ್ತಡಗಳಿಗೆ, ಮನವಿಗೆ ಒಳಗಾಗದೆ ಅಕ್ಕಿಯ ಕಡಿತವನ್ನು ಹಿಂದಕ್ಕೆ ಪಡೆಯಲಿಲ್ಲ. ಈಗ ಆಹಾರ ಸಚಿವ ಜಮೀರ್ ಅಹ್ಮದ್ ಮೊದಲಿನಂತೆ 7 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಎಂದು ಪಟ್ಟು ಹಿಡಿದಿದ್ದಾರೆ.

    ಅಕ್ಕಿ ಕಡಿತದ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ಬಳಿ ಚರ್ಚೆ ಮಾಡಬೇಕಿತ್ತು. ಆದರೆ ಹಾಗೇ ಮಾಡಲಿಲ್ಲ. ಹೀಗಾಗಿ ಹಿಂದಿನಂತೆ 7 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.

    ವಿಧಾನಸೌಧದಲ್ಲಿ ಸಿಎಂ ಜೊತೆ ಅನಿಲ ಭಾಗ್ಯ ಕುರಿತ ಸಭೆ ಬಳಿಕ ಮಾತನಾಡಿದ ಸಚಿವರು, ಅನಿಲ ಭಾಗ್ಯ ಯೋಜನೆಯ ಮೊದಲ ಹಂತವನ್ನು ಇನ್ನೆರಡು ತಿಂಗಳಲ್ಲಿ ಪೂರ್ಣ ಗೊಳಿಸಲಾಗುತ್ತದೆ. ಈಗಾಗಲೆ 32 ಲಕ್ಷ ಅರ್ಜಿಗಳು ಬಂದಿವೆ. ಮೂರು ಹಂತದಲ್ಲಿ ಯೋಜನೆ ಅನುಷ್ಠಾನ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಿದ್ದೇವೆ. ಮೊದಲ ಹಂತದಲ್ಲಿ 10 ಲಕ್ಷ ಫಲಾನುಭವಿಗಳಿಗೆ ಸ್ಟೌವ್, ಗ್ಯಾಸ್ ಸಂಪರ್ಕ ನೀಡಲಾಗುತ್ತದೆ. ನಂತರದ ಎರಡು ಹಂತದಲ್ಲಿ ಉಳಿದ ಫಲಾನುಭವಿಗಳಿಗೆ ಯೋಜನೆ ತಲುಪಲಿದೆ ಎಂದು ತಿಳಿಸಿದರು.

    ಸರ್ಕಾರವು ಒಂದು ಗ್ಯಾಸ್ ಸಂಪರ್ಕ ಕಲ್ಪಿಸಲು 4,200 ರೂ. ಖರ್ಚು ಮಾಡುತ್ತಿದೆ. ಈಗಾಗಲೇ 1 ಲಕ್ಷ ಸ್ಟೌವ್ ಖರೀದಿ ಮಾಡಲಾಗಿದೆ. ಇನ್ನು ಎರಡು ತಿಂಗಳಲ್ಲಿ ಮೊದಲ ಹಂತದ ವಿತರಣೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಅನಿಲ ಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಯೋಜನೆಯ ಸಂಪೂರ್ಣ ಹೊಣೆ ಹೊತ್ತಿದೆ. ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಯೋಜನೆ ವಿಳಂಬ ಆಗಿದೆ ಎಂದು ಸ್ಪಷ್ಟಪಡಿಸಿದರು.

  • ಸಿಎಂ ಎಚ್‍ಡಿಕೆ ಒಮ್ಮೆ ತಮ್ಮ ಪಕ್ಷದ ಪ್ರಣಾಳಿಕೆ ತೆರೆದು ನೋಡ್ಲಿ- ಜಗದೀಶ್ ಶೆಟ್ಟರ್

    ಸಿಎಂ ಎಚ್‍ಡಿಕೆ ಒಮ್ಮೆ ತಮ್ಮ ಪಕ್ಷದ ಪ್ರಣಾಳಿಕೆ ತೆರೆದು ನೋಡ್ಲಿ- ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ಅನುಮಾನವಿದ್ದರೆ, ಸಿ.ಎಂ. ಕುಮಾರಸ್ವಾಮಿ ತಮ್ಮ ಪಕ್ಷದ ಪ್ರಣಾಳಿಕೆ ತೆರೆದು ನೋಡಲಿ ಎಂದು ಮಾಜಿ ಸಿ.ಎಂ. ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರೈತರ ಸಾಲ ಮನ್ನಾದಲ್ಲಿ ಸಾಕಷ್ಟು ಗೊಂದಲ ಮಾಡಿದ್ದಾರೆ. ಚುನಾವಣಾ ಪ್ರಣಾಳಿಕೆಗೆ ಕಿಂಚಿತ್ತೂ ಕಿಮ್ಮತ್ತಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ:  ‘ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ’ ಅನ್ನೋ ಹೆಸರಿನಲ್ಲಿ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ

    ಸಿಎಂ ಕುಮಾರಸ್ವಾಮಿ ಅವರು ಹಸಿಸುಳ್ಳು ಹೇಳುವ ಕೆಲಸ ಮಾಡ್ತಾಯಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ಟು ಅಸಮಾಧಾನ ಇದೆ. ಹೀಗಾಗಿ ಜನಾದೇಶದ ವಿರುದ್ಧವಾದ ಈ ಮೈತ್ರಿ ಸರ್ಕಾರ ಬಹಳ ದಿನ ನಡೆಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

    ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆ ವಿಚಾರವಾಗಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಲೋಕಸಭಾ ಚುನಾವಣೆಗೆ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸುತ್ತೆ ಎಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ಜೆಡಿಎಸ್ ನಲ್ಲಿ ನಿರಂತರವಾಗಿ ಗೊಂದಲ ಮುಂದುವರದಿದ್ದು, ಯಾವುದೇ ಸಂದರ್ಭದಲ್ಲಿ ಅಪಘಾತವಾಗಬಹುದು ಎಂತ ಅವರು ಹೇಳಿದ್ರು. ಇದನ್ನೂ ಓದಿ: ಕಾಂಗ್ರೆಸ್‍ನಿಂದ ಚುನಾವಣಾ ಪ್ರಣಾಳಿಕೆ ರಿಲೀಸ್ – ರಾಜ್ಯದ ಜನತೆಗೆ ಭರವಸೆಗಳ ಮಹಾಪೂರ

  • ತೀಟೆಗಾಗಿ ಹುಟ್ಟಿದ ಶಿಶು ಸಿಎಂ ಕುಮಾರಸ್ವಾಮಿ ಎನ್ನಬೇಕೆ?- ಕೆಪಿಸಿಸಿ ಮಾಜಿ ಸದಸ್ಯನಿಂದ ವಿವಾದಾತ್ಮಕ ಹೇಳಿಕೆ

    ತೀಟೆಗಾಗಿ ಹುಟ್ಟಿದ ಶಿಶು ಸಿಎಂ ಕುಮಾರಸ್ವಾಮಿ ಎನ್ನಬೇಕೆ?- ಕೆಪಿಸಿಸಿ ಮಾಜಿ ಸದಸ್ಯನಿಂದ ವಿವಾದಾತ್ಮಕ ಹೇಳಿಕೆ

    ಬೆಳಗಾವಿ: ತೀಟೆಗಾಗಿ ಹುಟ್ಟಿದ ಶಿಶು ಮುಖ್ಯಮಂತ್ರಿ ಕುಮಾರಸ್ವಾಮಿ ಎನ್ನಬೇಕೆ? ಅಥವಾ ಎಲ್ಲಾ ಸಮುದಾಯವನ್ನು ಮುನ್ನಡೆಸುವ ಸಿಎಂ ಎನ್ನಬೇಕೆ? ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ್ ಮುನವಳ್ಳಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಎಸ್‍ಸಿ, ಎಸ್‍ಟಿ ಮುಂಬಡ್ತಿ ಮೀಸಲಿಗಾಗಿ ಆಗಿರೋ ಅನ್ಯಾಯವನ್ನು ಶೀಘ್ರದಲ್ಲಿ ಸರಿಪಡಿಸಬೇಕು. ರಾಜ್ಯದಲ್ಲಿ ದಲಿತರಿಗೆ ಮೀಸಲಾತಿ ಶೇ.50ಕ್ಕೆ ಹೆಚ್ಚಳ ಮಾಡಬೇಕು. ಇದಕ್ಕೆ ಸ್ಪಂದಿಸದಿದ್ರೆ ಹೋರಾಟದ ಹಾದಿ ತುಳಿಯುತ್ತೇವೆ ಅಂತಾ ಎಚ್ಚರಿಕೆ ನೀಡಿದ್ರು.

    ದಲಿತ ಸಮೂದಾಯಕ್ಕೆ ಸೇರಿದ ಶಾಸಕರೆಲ್ಲರು ಶಂಡರು. ತಮ್ಮ ಬದಕು, ಕುಟುಂಬದ ಬದುಕಿಗಾಗಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ದಲಿತ ಸಮೂದಾಯಕ್ಕೆ ನ್ಯಾಯ ಕೊಡಲು ಅವರು ಶಾಸಕರಾಗಿಲ್ಲ ಅಂತ ಮುನವಳ್ಳಿ ಹೇಳಿಕೆ ನೀಡಿದ್ದು, ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

  • ಮಾಧ್ಯಮದವರನ್ನ ಹೊರಗಿಟ್ಟು ಸಭೆ ನಡೆಸಿದ ಎಚ್‍ಡಿಕೆ

    ಮಾಧ್ಯಮದವರನ್ನ ಹೊರಗಿಟ್ಟು ಸಭೆ ನಡೆಸಿದ ಎಚ್‍ಡಿಕೆ

    ಮಡಿಕೇರಿ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದು, ಸಭೆಗೆ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿತ್ತು.

    ಹಾರಂಗಿ ಡ್ಯಾಂಗೆ ಬಾಗಿನ ಅರ್ಪಿಸಿ, ಬಳಿಕ ಕುಮಾರಸ್ವಾಮಿ ಸಭೆ ನಡೆಸಿ, ಕೊಡಗು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಸಿಎಂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸಾಥ್ ನೀಡಿದರು.

    ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಕೊಡಗಿನ ಮಳೆಹಾನಿ ಪರಿಸ್ಥಿತಿ ತಿಳಿದು ಸ್ಪಂದಿಸಲು ಬಂದಿದ್ದೇನೆ. 35 ವರ್ಷಗಳ ಬಳಿಕ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯ ಜಲಾಶಯ, ಜಲಪಾತಗಳು ಉಕ್ಕಿ ಹರಿಯುತ್ತಿವೆ. ಆದರೆ ಮಳೆಯಿಂದ ಜಿಲ್ಲೆಯ ಜನತೆ ಸಂಕಷ್ಟಕ್ಕೆ ಸಿಲುಕಿರೋದು ಗಮನಕ್ಕೆ ಬಂದಿದ್ದು, ನಾಡಿನ ಜನರಿಗೆ ನೀರುಣಿಸುವ ಕೊಡಗಿನ ಜನರ ಕಷ್ಟಗಳಿಗೆ ಸರ್ಕಾರ ಸ್ಪಂದಿಸಲಿದೆ. ವಿದ್ಯುತ್ ಸಂಪರ್ಕ ಕಡಿತ ಹಿನ್ನೆಲೆ ಪಕ್ಕದ ಮೈಸೂರು, ಹಾಸನ ಜಿಲ್ಲೆಯ ಸಿಬ್ಬಂದಿ ನಿಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

  • ದೆಹಲಿಗೆ ಬಂದ್ರೂ ಸಿಎಂಗೆ ತಪ್ಪಲಿಲ್ಲ ‘ಸೂಪರ್ ಸಿಎಂ’ ಕಾಟ!

    ದೆಹಲಿಗೆ ಬಂದ್ರೂ ಸಿಎಂಗೆ ತಪ್ಪಲಿಲ್ಲ ‘ಸೂಪರ್ ಸಿಎಂ’ ಕಾಟ!

    ನವದೆಹಲಿ: ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಿದ್ದಂತೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರು ಸಹ ಸಮ್ಮಿಶ್ರ ಸರ್ಕಾರದಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಕುಮಾರಸ್ವಾಮಿಯವರು ಎಲ್ಲಿಗೆ ಹೋದರು, ಬಂದರೂ ಅಲ್ಲಿ ರೇವಣ್ಣ ಜೊತೆಯಾಗುತ್ತಿದ್ದಾರೆ.

    ಇಂದು ದೆಹಲಿ ಪ್ರವಾಸದಲ್ಲಿರುವ ಕುಮಾರಸ್ವಾಮಿ ಅವರ ಜೊತೆಗೆ ಸೂಪರ್ ಸಿಎಂ ರೇವಣ್ಣ ಅವರದ್ದೇ ಫುಲ್ ಹವಾ. ಸಿಎಂ ಕಾರ್ಯಕ್ರಮ, ಭೇಟಿ, ಸಭೆ ಎಲ್ಲದರಲ್ಲಿಯೂ ರೇವಣ್ಣ ಭಾಗವಹಿಸಿದ್ರು. ಮಂಗಳವಾರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಇಂದು ಕೃಷಿ ಸಚಿವ ರಾಧಮೋಹನ್ ಸಿಂಗ್, ರೈಲ್ವೆ ಸಚಿವ ಪಿಯೂಷ್ ಗೊಯೇಲ್ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿದ್ದರು. ಐದು ಜನ ಸಚಿವರ ಪೈಕಿ ಮೂವರನ್ನು ಭೇಟಿ ಮಾಡುವ ವೇಳೆ ಸಿಎಂಗೆ ರೇವಣ್ಣ ಸಾಥ್ ನೀಡಿದ್ದರು.

    ಕೃಷಿ ಸಚಿವರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ರಾಜ್ಯದ ಕೃಷಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಚಿವರಿಗೆ ಕೊಟ್ಟ ಮನವಿಗಳಿಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಹಲವು ಜಿಲ್ಲೆಗಳಲ್ಲಿ ಮೆಗಾ ಡೈರಿ ಆರಂಭಕ್ಕೆ 900 ಕೋಟಿ ರೂ. ನೆರವು ನೀಡಲು ಕೇಂದ್ರ ಒಪ್ಪಿಗೆ ನೀಡಿದೆ. ದೆಹಲಿ ಭೇಟಿ ಫಲ ಕೊಟ್ಟಿದೆ ಎಂಬ ತೃಪ್ತಿಯಿದೆ ಎಂದರು.

    ನವದೆಹಲಿಯ ಸೌತ್ ಬ್ಲಾಕ್ ನಲ್ಲಿರುವ ರಕ್ಷಣಾ ಕಚೇರಿಯಲ್ಲಿ ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು, ರಕ್ಷಣಾ ಇಲಾಖೆಗೆ ಸೇರಿದ ಬೆಂಗಳೂರಿನ ಭೂಮಿಯನ್ನು ಮೆಟ್ರೋ ಕಾಮಗಾರಿಗೆ ಬಳಕೆ ಮಾಡಿಕೊಳ್ಳಲು ಅನುಮತಿ ಕೇಳಿದ್ದಾರೆ.

    ಐಫೋನ್ ಗಿಫ್ಟ್ ನೀಡಲು ಆರ್ಥಿಕ ಇಲಾಖೆಯಿಂದ ಹಣ ಬಿಡುಗಡೆ ಮಾಡಿಲ್ಲ. ನನ್ನ ಗಮನಕ್ಕೆ ಬಾರದೆ ಹಣ ಬಿಡುಗಡೆ ಆಗಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೆ ಇದರಲ್ಲಿ ನನ್ನ ಪಾತ್ರವಿಲ್ಲ. ಐಫೋನ್ ಕೊಡುವ ಅವಶ್ಯಕತೆ ಇತ್ತೇ ಅಂತಾ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‍ಗೆ ಕೇಳಿದ್ದೆ. ಅವರು ಕಳೆದ ವರ್ಷವೂ ಕೊಟ್ಟಿದ್ದೆ, ಅದಕ್ಕೆ ಈ ಬಾರಿಯೂ ಕೊಟ್ಟಿದ್ದೇನೆ. ಆದರೆ ಕಳೆದ ಬಾರಿ ಗಿಫ್ಟ್ ನೀಡಿದಾಗ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಹೀಗಾಗಿ ಕೊಟ್ಟಿರುವುದಾಗಿ ಅವರು ಹೇಳಿರುವರು ಎಂದು ಕುಮಾರಸ್ವಾಮಿ ತಿಳಿಸಿದರು.

  • ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ: ಸಿದ್ದರಾಮಯ್ಯ

    ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ: ಸಿದ್ದರಾಮಯ್ಯ

    ಹುಬ್ಬಳ್ಳಿ: ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಅನ್ಯಾಯವಾಗಿಲ್ಲ. ಕಳೆದ ಬಜೆಟ್‍ನಲ್ಲಿಯೇ ಸಾಕಷ್ಟು ಅನುದಾನವನ್ನು ಕೊಟ್ಟಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

    ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೈದ್ರಾಬಾದ್ ಕರ್ನಾಟಕಕ್ಕೆ ಸೇರಿದಂತೆ ಅನೇಕ ನೀರಾವರಿ ಯೋಜನೆಗಳಿಗೆ ಅನುದಾನ ನೀಡಿದ್ದೇವೆ. ಈಗ ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ. ನಾವು ಅಖಂಡ ಕರ್ನಾಟಕದಲ್ಲಿದ್ದೇವೆ. ಅಖಂಡ ಕರ್ನಾಟಕದ ಅಭಿವೃದ್ಧಿಗೆ ಚಿಂತನೆ ನಡೆಯಲಿ ಎಂದು ಸಲಹೆ ನೀಡಿದರು.

    ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಯಾವುದೇ ಒತ್ತಡ ಇಲ್ಲದೆ ಸರ್ಕಾರ ನಡೆಸುತ್ತಿದ್ದಾರೆ. ಕಣ್ಣೀರು ಹಾಕಿರೋದಕ್ಕೆ ಈಗಾಲೇ ಅವರೇ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳಿಗೆ ಸರ್ಕಾರ ನಡೆಸಲು ಯಾವುದೇ ಒತ್ತಡ ಇಲ್ಲ ಎಂದರು.

  • ಸಂಸದರಿಗೆ 50 ಸಾವಿರ ಮೌಲ್ಯದ ಐಫೋನ್ ಕೊಟ್ಟಿದ್ದನ್ನು ಸಮರ್ಥಿಸಿಕೊಂಡ ಡಿಕೆಶಿ

    ಸಂಸದರಿಗೆ 50 ಸಾವಿರ ಮೌಲ್ಯದ ಐಫೋನ್ ಕೊಟ್ಟಿದ್ದನ್ನು ಸಮರ್ಥಿಸಿಕೊಂಡ ಡಿಕೆಶಿ

    ಬೆಂಗಳೂರು: ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಣವಂತರು. ಹೀಗಾಗಿ ಐಫೋನ್ ಗಿಫ್ಟ್ ಅನ್ನು ಮರಳಿಸಿದ್ದಾರೆ. ಬೇರೆಯವರು ಅವರಂತೆ ಶ್ರೀಮಂತರಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

    ರಾಜ್ಯ ಸರ್ಕಾರ ಐಫೋನ್ ಗಿಫ್ಟ್ ನೀಡಿರುವ ಕುರಿತು ಸ್ಪಷ್ಟಿಕರಣ ನೀಡಿರುವ ಸಚಿವರು, ನಾನೇ ಐಫೋನ್ ನೀಡಿದ್ದೇನೆ. ಅದರಲ್ಲೇನು ತಪ್ಪಿದೆ? ನಾನು ಒಳ್ಳೆಯ ಹೃದಯವಂತಿಕೆಯಿಂದ ಗಿಫ್ಟ್ ನೀಡಿರುವೆ. ಮಾಹಿತಿಗಳು ತ್ವರಿತವಾಗಿ ಸಂಸದರಿಗೆ ತಲುಪಲಿ ಎನ್ನುವ ಉದ್ದೇಶದಿಂದ 50 ಸಾವಿರ ರೂ. ಬೆಲೆಯ ಐಫೋನ್ ಕೊಟ್ಟಿರುವೆ ಎಂದರು. ಇದನ್ನು ಓದಿ: ರಾಜ್ಯದ ಸಂಸದರಿಗೆ ಐಫೋನ್ ಗಿಫ್ಟ್: ತಿರಸ್ಕರಿಸಿದ ಬಿಜೆಪಿ ನಾಯಕರು

    ಒಳ್ಳೆಯ ಉದ್ದೇಶದಿಂದ ರಾಜ್ಯದ ಸಂಸದರಿಗೆ ಐಫೋನ್ ಮತ್ತು ಬ್ಯಾಗನ್ನು ನೀಡಿದ್ದೇವೆ. ಬ್ಯಾಗ್ ಮಾತ್ರ ರಾಜ್ಯ ಸರ್ಕಾರ ನೀಡಿದ್ದು, ಐಫೋನ್ ನಾನೇ ವೈಯ್ಯಕ್ತಿಕವಾಗಿ ಕೊಟ್ಟಿರುವೆ. ಅದರಲ್ಲಿ ಕೆಲವರು ವಾಪಾಸ್ ನೀಡಿದ್ದಾರೆ. ಅದಕ್ಕೆ ನಾನು ಏನು ಮಾಡಲಿ? ಕಳೆದ ವರ್ಷವೂ ಐಫೋನ್ ಕೊಡುಗೆ ನೀಡಿದ್ದೆ, ಅದನ್ನು ಸ್ವೀಕರಿಸಿದ ಹಲವು ಬಿಜೆಪಿ ಸಂಸದರು ನನಗೆ ಕರೆ ಮಾಡಿ ಕೃತಜ್ಞತೆ ಸಲ್ಲಿಸಿದ್ದರು. ಈಗ ಆರೋಪಿಸುತ್ತಿರುವವರ ಕಾಮಾಲೆ ಕಣ್ಣಿಗೆ ಎಲ್ಲವೂ ತಪ್ಪು ಕಾಣಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

  • ಜೆಡಿಎಸ್ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದು ಯಾಕೆ: ಸ್ಪಷ್ಟನೆ ಕೊಟ್ಟ ಎಚ್‍ಡಿಕೆ

    ಜೆಡಿಎಸ್ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದು ಯಾಕೆ: ಸ್ಪಷ್ಟನೆ ಕೊಟ್ಟ ಎಚ್‍ಡಿಕೆ

    ನವದೆಹಲಿ: ಪಕ್ಷದ ಕಚೇರಿಯಲ್ಲಿ ನಡೆದಂತಹ ಕಾರ್ಯಕ್ರಮ ಅದು ನನ್ನ ಕುಟುಂಬದ ಕಾರ್ಯಕ್ರಮವಾಗಿತ್ತು. ಆ ಕುಟುಂಬದ ಕಾರ್ಯಕ್ರಮದಲ್ಲಿ ನನ್ನಲ್ಲಿರುವಂತಹ ನೋವುಗಳನ್ನು ಹೇಳುತ್ತಿರಬೇಕಾದ್ರೆ ಭಾವಾನಾತ್ಮಕವಾಗಿ ಕಣ್ಣೀರು ಹಾಕಿದ್ದು ಸಹಜ. ಅದು ನನ್ನ ಹುಟ್ಟು ಗುಣ ಅಂತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜ್ಯದ ಮುಖ್ಯಮಂತ್ರಿ ಎನ್ನುವುದಕ್ಕಿಂತಲೂ ಹೆಚ್ಚಾಗಿ, ನಾನೊಬ್ಬ ಮಾನವೀಯತೆಯ ಮನುಷ್ಯನಾಗಿದ್ದೇನೆ. ಇದನ್ನು ಮೊದಲಿನಿಂದಲೂ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬಂದಿದ್ದೇನೆ. ಅದರ ಹಿನ್ನೆಲೆಯಲ್ಲಿ ನನ್ನ ಕುಟುಂಬದ ಸದಸ್ಯರ ಜೊತೆ ನನ್ನ ಕೆಲವೊಂದು ನೋವಿನ ಕ್ಷಣಗಳನ್ನು ಹಂಚಿಕೊಳ್ಳುತ್ತಿರಬೇಕಾದ್ರೆ ಕಣ್ಣಲ್ಲಿ ನೀರು ಹಾಕಿರುವುದು ಸಹಜ ಅಂದ್ರು.

    ಆ ಕ್ಯಾಸೆಟ್ ನ ರೀವೈಂಡ್ ಮಾಡಿ ಬೇಕಾದ್ರೆ ನೋಡಿ. ಅಲ್ಲಿ ಕಾಂಗ್ರೆಸ್ ಪಕ್ಷ ನನಗೆ ತೊಂದರೆ ಕೊಟ್ಟಿದೆ. ಕಾಂಗ್ರೆಸ್ ನ ನಾಯಕರು ನನಗೆ ತೊಂದರೆ ಕೊಟ್ಟಿದ್ದಾರೆ ಅಂತ ಎಲ್ಲೂ ಹೇಳಿಲ್ಲ. ನಾನು ಇಷ್ಟೆಲ್ಲಾ ಕಷ್ಟದಲ್ಲಿದ್ದು ಸಾಲಮನ್ನಾ ಮಾಡತಕ್ಕಂತಹ ಒಂದು ದಿಟ್ಟ ನಿರ್ಧಾರ ಮಾಡಿ ಕಾರ್ಯಕ್ರಮಗಳನ್ನು ಕೊಡ್ತಾ ಇದ್ದೇನೆ. ಉತ್ತಮವಾದ ಒಂದು ಕೆಲಸವನ್ನು ಮಾಡಲು ಎಲ್ಲೋ ಒಂದು ಕಡೆ ಪ್ರೋತ್ಸಾಹ ದೊರಕುತ್ತಿಲ್ಲ. ಸಾರ್ವಜನಿಕರ ಬಗ್ಗೆ ನನ್ನಲ್ಲಿರುವ ಕಮಿಟ್‍ಮೆಂಟ್ ಗಳ ಬಗ್ಗೆ ರಾಜ್ಯದ ಜನತೆಯಲ್ಲಿ ಎಲ್ಲೋ ಒಂದು ಕಡೆ ಇನ್ನೂ ವಿಶ್ವಾಸ ಮೂಡುತ್ತಿಲ್ಲ ಎನ್ನುವ ಹಿನ್ನೆಲೆಯಲ್ಲಿ ನಾನು ಭಾವನಾತ್ಮಕವಾಗಿ ಮಾತಾಡಿದ್ದೇನೆ ಅಂತ ಅವರು ಸ್ಪಷ್ಟನೆ ನೀಡಿದ್ರು.

    ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರ ಬಗ್ಗೆ ಆ ಸಭೆಯಲ್ಲಿ ನಾನು ಚರ್ಚೆ ಮಾಡಿಲ್ಲ. ಆದ್ರೆ ಈ ವಿಚಾರ ಇಂದು ದೇಶದ ಉದ್ದಗಲಕ್ಕೂ ಚರ್ಚೆಯಾಗುತ್ತಿದೆ ಅಂತ ವಿಷಾದ ವ್ತಕ್ತಪಡಿಸಿದ್ರು.

  • ರಾಜ್ಯದ ಸಂಸದರಿಗೆ ಐಫೋನ್ ಗಿಫ್ಟ್: ತಿರಸ್ಕರಿಸಿದ ಬಿಜೆಪಿ ನಾಯಕರು

    ರಾಜ್ಯದ ಸಂಸದರಿಗೆ ಐಫೋನ್ ಗಿಫ್ಟ್: ತಿರಸ್ಕರಿಸಿದ ಬಿಜೆಪಿ ನಾಯಕರು

    ಬೆಂಗಳೂರು: ಬುಧವಾರ ದೆಹಲಿಯಲ್ಲಿ ರಾಜ್ಯದ ಎಲ್ಲ ಸಂಸದರ ಸಭೆ ಕರೆಯಲಾಗಿದೆ. ಈ ವೇಳೆ ರಾಜ್ಯ ಸರ್ಕಾರವು ಕಿಟ್ ಜೊತೆಗೆ ದುಬಾರಿ ಐಫೋನ್ ನೀಡಿದ್ದನ್ನು ಬಿಜೆಪಿ ಸಂಸದರು ತಿರಸ್ಕರಿಸಿದ್ದಾರೆ.

    ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ಬಿಜೆಪಿ ಸಂಸದರು ರಾಜ್ಯ ಸರ್ಕಾರದ ಗಿಫ್ಟ್ ಅನ್ನು ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲದೆ ದುಬಾರಿ ಫೋನ್ ತಿರಸ್ಕರಿಸಿ ಗಿಫ್ಟ್ ಕೊಡುತ್ತಿರುವ ಔಚಿತ್ಯವನ್ನು ಟ್ವಿಟ್ಟರ್ ಮೂಲಕ ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.

    ಕಾವೇರಿ ಜಲ ವಿವಾದದ ಕುರಿತಾದ ಚರ್ಚೆಗೆ ರಾಜ್ಯದ ಎಲ್ಲ ಸಂಸದರನ್ನು ಸಭೆಗೆ ಕರೆದಿದ್ದಕ್ಕೆ ಧನ್ಯವಾದ. ಆದರೆ ರಾಜ್ಯ ಸರ್ಕಾರ ಏಕೆ ಇಷ್ಟೊಂದು ದುಬಾರಿ ಮೊಬೈಲ್ ನೀಡುತ್ತಿದೆ. ಸಾರ್ವಜನಿಕರ ಹಣದಲ್ಲಿ ಉಡುಗೊರೆ ನೀಡುತ್ತಿದೆ. ಪೌರಕಾರ್ಮಿಕರಿಗೆ ನೀಡಬೇಕಾದ ವೇತನ ನೀಡದೇ ಇಂತಹದಕ್ಕೆ ಖರ್ಚು ಮಾಡುತ್ತಿರವುದು ಸೂಕ್ತವಲ್ಲ ಎಂದು ಬರೆದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಸಂಸದರಿಗೆ 50 ಸಾವಿರ ಮೌಲ್ಯದ ಐಫೋನ್ ಕೊಟ್ಟಿದ್ದನ್ನು ಸಮರ್ಥಿಸಿಕೊಂಡ ಡಿಕೆಶಿ

    ಸಿಎಂ ಪ್ರತಿಕ್ರಿಯೆ ಏನು?
    ಸಂಸದರಿಗೆ ಐಫೋನ್ ಕೊಟ್ಟ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅಷ್ಟಕ್ಕೂ ನಾನು ಐಫೋನ್ ನೀಡುವಂತೆ ಯಾವುದೇ ಸೂಚನೆ ನೀಡಿಲ್ಲ. ಬೇರೆಯವರು ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ನನಗೆ ಈ ಬಗ್ಗೆ ಇರುವುದು ಶೂನ್ಯ ಮಾಹಿತಿ. ಹೀಗಾಗಿ ಇದರ ಬಗ್ಗೆ ತಿಳಿದುಕೊಂಡು ನಂತರ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮಾಧ್ಯಮಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.