Tag: ಎಚ್ ಡಿ ಕುಮಾರಸ್ವಾಮಿ

  • ಸಮ್ಮಿಶ್ರ ಸರ್ಕಾರದಲ್ಲಿ ಮತ್ತೊಂದು ಸುತ್ತಿನ ವಾರ್-ಉಸ್ತುವಾರಿ ನೇಮಕ ಕಾದಾಟದಲ್ಲಿ ಮಾಜಿ ಸಿಎಂ ಫುಲ್ ಗರಂ

    ಸಮ್ಮಿಶ್ರ ಸರ್ಕಾರದಲ್ಲಿ ಮತ್ತೊಂದು ಸುತ್ತಿನ ವಾರ್-ಉಸ್ತುವಾರಿ ನೇಮಕ ಕಾದಾಟದಲ್ಲಿ ಮಾಜಿ ಸಿಎಂ ಫುಲ್ ಗರಂ

    ಬೆಂಗಳೂರು: ಮೊದಲ ಹಂತದ ಮಂತ್ರಿ ಸ್ಥಾನ ಹಂಚಿಕೆ, ಬಜೆಟ್ ಮುಗಿತು, ಈಗ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿಗೆ ಸಂಬಂಧಸಿದಂತೆ ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನ ಬುಗಿಲೆದ್ದಿದ್ದು, ವಿಧಾನಸಭೆಯ ಚುನಾವಣೆಯ ಪೈಪೋಟಿಯ ಕಾವು ಮತ್ತೆ ಮರುಕಳಿಸಿದೆ.

    ಮಂಗಳವಾರ ಸಮ್ಮಿಶ್ರ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಣಕ್ಕೆ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಮೈಸೂರು ಜಿಲ್ಲಾ ಉಸ್ತುವಾರಿಯನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರಿಗೆ ನೀಡಿದ್ದಕ್ಕೆ ಸಿದ್ದರಾಮಯ್ಯ ಅವರು ಗರಂ ಆಗಿದ್ದಾರಂತೆ.

    ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಂಡದ ಯೋಜನೆಯಂತೆಯೇ ಜಿಲ್ಲಾ ಉಸ್ತುವಾರಿ ನೇಮಕ ನಡೆದಿದೆ ಎನ್ನಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತಕ್ಷೇತ್ರದಿಂದ ಭಾರೀ ಪೈಪೋಟಿ ನೀಡಿ, ಜಯಗಳಿಸಿದ್ದ ಜಿ.ಟಿ.ದೇವೇಗೌಡ ಹಾಗೂ ಸಿದ್ದರಾಮಯ್ಯ ನಡುವೆ ಅಸಮಾಧಾನದ ಹೊಗೆ ಇನ್ನು ಶಮನಗೊಂಡಿಲ್ಲ. ಕಳೆದ ಕೆಲವು ದಿನಗಳಿಂದ ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿಯೂ ಇಬ್ಬರ ನಾಯಕರ ಮಧ್ಯೆ ಶೀತಲ ಸಮರ ಏರ್ಪಟ್ಟಿತ್ತು. ಈಗ ಮೈಸೂರು ಜಿಲ್ಲಾ ಉಸ್ತುವಾರಿಯೂ ಜಿ.ಟಿ.ದೇವೇಗೌಡರು ಅಂದು ಕೊಂಡಂತೆ ಆಗಿದೆ.

    ತಮ್ಮ ಆಪ್ತ ಹಾಗೂ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಗೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕೊಟ್ಟಿರೋದಕ್ಕೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯವರ ಮಾತನ್ನೇ ಕೇಳುತ್ತಿಲ್ಲವಂತೆ. ಈಗ ಜಿಲ್ಲಾ ಉಸ್ತವಾರಿ ನೇಮಕದ ನಡೆ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಹಂಚಿಕೆ ಅಸಮಾಧಾನಕ್ಕೆ ಕಾರಣವಾಗಿದೆ.

  • ಉ.ಕರ್ನಾಟಕದವರು ವೋಟ್ ಹಾಕಿಲ್ಲ ಅಂತ ಸಿಎಂ ಹೇಳಿದ್ದು ತಪ್ಪು- ಮಾಜಿ ಸಚಿವ ಬೆಳ್ಳುಬ್ಬಿ

    ಉ.ಕರ್ನಾಟಕದವರು ವೋಟ್ ಹಾಕಿಲ್ಲ ಅಂತ ಸಿಎಂ ಹೇಳಿದ್ದು ತಪ್ಪು- ಮಾಜಿ ಸಚಿವ ಬೆಳ್ಳುಬ್ಬಿ

    ವಿಜಯಪುರ: ಬಜೆಟ್ ನಲ್ಲಿ ಸಿಎಂ ಅವರು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿಲ್ಲ. ಆದ್ರೆ ಜೆಡಿಎಸ್‍ಗೆ ಉತ್ತರ ಕರ್ನಾಟಕದವರು ವೋಟ್ ಹಾಕಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದು ತಪ್ಪು. ಆ ರೀತಿ ಅವರು ಹೇಳಬಾರದಿತ್ತು ಅಂತ ಸ್ವಪಕ್ಷೀಯ ನಾಯಕ, ಮಾಜಿ ಸಚಿವ ಬೆಳ್ಳುಬ್ಬಿ ಹೇಳಿದ್ದಾರೆ.

    ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ಹಮ್ಮಿಕೊಂಡಿದ್ದ ಅಖಂಡ ಕರ್ನಾಟಕ ಅಭಿಯಾನದ ಪ್ರತಿಭಟನೆ ನಂತರ ಮಾತನಾಡಿದ ಅವರು, ಪ್ರತ್ಯೇಕ ರಾಜ್ಯದ ವಿಷಯದಲ್ಲಿ ಸ್ವಾಮೀಜಿಗಳು ಭಾಗಿಯಾಗುವುದು ಸರಿಯಲ್ಲ. ಸ್ವಾಮೀಜಿಗಳು ತಮ್ಮ ಮಠಗಳಿಗೆ ಅನುದಾನ ಹೆಚ್ಚಿಸಲು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸ್ವಾಮಿಜಿಗಳು ಧರ್ಮ ರಕ್ಷಣೆ ಬಿಟ್ಟು ರಾಜಕೀಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿ ಟಾಂಗ್ ನೀಡಿದರು.

    ಇದೇ ವೇಳೆ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಒಪ್ಪಿಗೆ ನೀಡಿದ್ರೆ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆಯಿಂದ ಲೋಕಸಭೆಗೆ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದರು.

  • 35 ವರ್ಷಗಳಲ್ಲಿ ಉ-ಕ ಭಾಗಕ್ಕೆ ನಿಮ್ಮ ಕೊಡುಗೆ ಏನು: ಹೊರಟ್ಟಿಗೆ ದಿಂಗಾಲೇಶ್ವರ ಶ್ರೀ ಸವಾಲು

    35 ವರ್ಷಗಳಲ್ಲಿ ಉ-ಕ ಭಾಗಕ್ಕೆ ನಿಮ್ಮ ಕೊಡುಗೆ ಏನು: ಹೊರಟ್ಟಿಗೆ ದಿಂಗಾಲೇಶ್ವರ ಶ್ರೀ ಸವಾಲು

    ಹುಬ್ಬಳ್ಳಿ: 35 ವರ್ಷಗಳ ರಾಜಕೀಯ ಜೀವನದಲ್ಲಿ ಹೊರಟ್ಟಿ ಅವರು ಉತ್ತರ ಕರ್ನಾಟಕ ಭಾಗಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೌರವಯುತ ಸ್ಥಾನದಲ್ಲಿರುವ ಹೊರಟ್ಟಿ ತಮ್ಮ ಘನತೆಗೆ ತಕ್ಕ ಹಾಗೇ ನಾಲಿಗೆ ಮೇಲೆ ಹಿಡಿತ ಇರಬೇಕು. ಪದೇ ಪದೇ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ. ಅವರು ಯಾಕೆ ನಮ್ಮ ತೇಜೋವಧೆ ಮಾಡುತ್ತಾರೆ ಎಂಬುದನ್ನು ಬಹಿರಂಗ ಪಡಿಸಲಿ. ಇದಕ್ಕೂ ಮುನ್ನ ಅವರ 35 ವರ್ಷದ ರಾಜಕೀಯ ಜೀವನದಲ್ಲಿ ಈ ಭಾಗಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಸವಾಲು ಹಾಕಿದರು.

    ಇದೇ ವೇಳೆ ಲಿಂಗಾಯತ ಧರ್ಮವನ್ನು ಒಡೆಯಲು ಒಂದ ರಾಜಕಾರಣಿಗಳು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಯಾಕೆ ಒಂದಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು ಆಡಳಿತರೂಢ ಸರ್ಕಾರದ ಮಲತಾಯಿ ಧೋರಣೆಯೇ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಕಾರಣ. ಈ ಕೂಗು ನನ್ನದೊಬ್ಬನದ್ದಲ್ಲ, ಈ ಭಾಗದ ಜನರ ಕೂಗು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿಗೆ ನನ್ನ ಬೆಂಬಲವೂ ಇದೆ ಎಂದು ಸ್ಪಷ್ಟಪಡಿಸಿದರು.

    ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ಭಾನುವಾರ ಮಾತನಾಡಿದ್ದ ಬಸವರಾಜ್ ಹೊರಟ್ಟಿ ಅವರು, ದಿಂಗಾಲೇಶ್ವರ ಸ್ವಾಮೀಜಿಗೆ ಮಾಡಲು ಕೆಲಸವಿಲ್ಲ. ಅದಕ್ಕಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ವಿಚಾರದಲ್ಲಿ ಮೂಗು ತೋರಿಸುತ್ತಿದ್ದಾರೆ. ಇನ್ನು ಕೆಲವು ಸ್ವಾಮೀಜಿಗಳು ಅವರ ಹಾಗೆಯೇ ಮಾಡುತ್ತಿದ್ದಾರೆ. ಸ್ವಾಮೀಜಿಗಳಿಗೆ ಏಕೆ ರಾಜಕೀಯ ಬೇಕು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಸಂಪೂರ್ಣ ನನ್ನ ವಿರೋಧವಿದೆ. ಅಖಂಡ ಕರ್ನಾಟಕ ನಿರ್ಮಾಣಕ್ಕೆ ಅನೇಕ ನಾಯಕರು, ಹೋರಾಟಗಾರರು ಶ್ರಮಿಸಿದ್ದಾರೆ. ಈಗ ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ ಎಂದು ಹೇಳಿದ್ದರು.

  • ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಹೊರಟ್ಟಿ ಕಿಡಿ

    ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಹೊರಟ್ಟಿ ಕಿಡಿ

    ವಿಜಯಪುರ: ರಾಜಕೀಯ ವಿಚಾರಗಳಲ್ಲಿ ಸ್ವಾಮೀಜಿಗಳು ಭಾಗಿಯಾಗಬಾರದು ಎಂದು ಹಂಗಾಮಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

    ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ಮಾತನಾಡಿದ ಅವರು, ದಿಂಗಾಲೇಶ್ವರ ಸ್ವಾಮೀಜಿಗೆ ಮಾಡಲು ಕೆಲಸವಿಲ್ಲ. ಅದಕ್ಕಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ವಿಚಾರದಲ್ಲಿ ಮೂಗು ತೋರಿಸುತ್ತಿದ್ದಾರೆ. ಇನ್ನು ಕೆಲವು ಸ್ವಾಮೀಜಿಗಳು ಅವರ ಹಾಗೆಯೇ ಮಾಡುತ್ತಿದ್ದಾರೆ. ಸ್ವಾಮೀಜಿಗಳಿಗೆ ಏಕೆ ಬೇಕು ರಾಜಕೀಯ ಎಂದು ಪ್ರಶ್ನಿಸಿದರು.

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಸಂಪೂರ್ಣ ನನ್ನ ವಿರೋಧವಿದೆ. ಅಖಂಡ ಕರ್ನಾಟಕ ನಿರ್ಮಾಣಕ್ಕೆ ಅನೇಕ ನಾಯಕರು, ಹೋರಾಟಗಾರರು ಶ್ರಮಿಸಿದ್ದಾರೆ. ಈಗ ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ. ಈ ಕುರಿತು ನಿನ್ನೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆಗೆ ಚರ್ಚೆ ಮಾಡಿರುವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಮುಂದಿನ ಕೆಲವು ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಸಭೆ ಕರೆಯುವ ನಿರ್ಧಾರ ಕೈಗೊಂಡಿದ್ದಾರೆ. ಆಗ ತಮ್ಮ ನಿರ್ಧಾರವನ್ನು ತಿಳಿಸಲಿದ್ದಾರೆ ಎಂದು ಹೇಳಿದರು.

    ವಿಜಯಪುರ, ಹುಬ್ಬಳ್ಳಿ ಅಥವಾ ಬೆಳಗಾವಿಯಲ್ಲಿ ಸಭೆಯನ್ನು ನಡೆಸುವ ನಿರ್ಧಾರ ಮಾಡಲಾಗುತ್ತದೆ. ಸಭೆಯಲ್ಲಿ ಹೋರಾಟಗಾರು, ಮಠಾಧೀಶರು ಭಾಗವಹಿಸುತ್ತಾರೆ. ಆಗ ಚರ್ಚಿಸಿ, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದ್ದು ನಿಜವಾದರೆ ಸರಿಪಡಿಸುವ ಕ್ರಮ ಕೈಗೊಳ್ಳಲಾಗುವುದು. ಆದರೆ ವೈಯಕ್ತಿಕ ರಾಜಕಾರಣಕ್ಕಾಗಿ ಪ್ರತ್ಯೇಕ ರಾಜ್ಯ ಬಗ್ಗೆ ವಿಚಾರ ಮಾಡಬಾರದು ಎಂದು ತಿಳಿಸಿದರು.

  • ರಾಜ್ಯ ಸಿಎಂ ಕುಮಾರಸ್ವಾಮಿಯವರ ಅಪ್ಪನ ಮನೆ ಆಸ್ತಿಯಲ್ಲ: ನಡಹಳ್ಳಿ

    ರಾಜ್ಯ ಸಿಎಂ ಕುಮಾರಸ್ವಾಮಿಯವರ ಅಪ್ಪನ ಮನೆ ಆಸ್ತಿಯಲ್ಲ: ನಡಹಳ್ಳಿ

    ವಿಜಯಪುರ: ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಪ್ಪನ ಮನೆಯ ಆಸ್ತಿಯಲ್ಲ, ಇದು ಕನ್ನಡಿಗರ ಆಸ್ತಿ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ವಾಗ್ದಾಳಿ ನಡೆಸಿದ್ದಾರೆ.

    ತಾಳಿಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ಬೆಂಗಳೂರಿನಿಂದ ಬರುವ ಆದಾಯದಲ್ಲಿ ಶೇಕಡಾ 60ರಷ್ಟು ಉತ್ತರ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಹಾಗಾದರೆ ಬೆಂಗಳೂರು ಅವರ ಆಸ್ತಿಯೇ, ಕನ್ನಡಿಗರಿಗೆ ಸೇರಿಲ್ಲವೇ ಎಂದು ಪ್ರಶ್ನಿಸಿ, ಉತ್ತರ ಕರ್ನಾಟಕದ ಸುಮಾರು 12 ಲಕ್ಷ ಜನರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

    ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಧರ್ಮಸಿಂಗ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಲು ನಾನೇ ಕಾರಣವೆಂದು ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಅವರಷ್ಟೇ ಅಲ್ಲದೆ ಉತ್ತರ ಕರ್ನಾಟಕದ ಅನೇಕ ನಾಯಕರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿದರು.

    ಅಭಿವೃದ್ಧಿಯಾಗಬೇಕೆಂದು ಜನತೆ ಕೇಳಿದ್ದು ಕುಮಾರಸ್ವಾಮಿಯನ್ನಲ್ಲ, ನಾಡಿನ ಮುಖ್ಯಮಂತ್ರಿಯನ್ನು. ಆದರೆ ಇದಕ್ಕೆ ಸೂಕ್ತ ಉತ್ತರ ನೀಡದೆ, ಉತ್ತರ ಕರ್ನಾಟಕದ ಜನತೆ ನಮಗೆ ಮತ ಹಾಕಿಲ್ಲವೆಂದು ಅವರು ಹೇಳಿದ್ದು ಸರಿಯಲ್ಲ. ಹೀಗೆ ಮಾತನಾಡುವ ಮೂಲಕ ಪ್ರತ್ಯೇಕತೆ ಬೇಡಿಕೆಗೆ ಕುಮ್ಮಕ್ಕು ನೀಡುತ್ತಿದ್ದು, ತಮ್ಮ ಮನಸ್ಸಿನಲ್ಲಿರುವ ಕರ್ನಾಟಕ ಇಬ್ಭಾಗವಾಗಬೇಕೆಂಬ ಆಸೆಯನ್ನು ಹೊರಹಾಕಿದ್ದಾರೆ ಎಂದು ಆರೋಪಿಸಿದರು.

  • ಎಚ್‍ಡಿಕೆ ಮಾತು ತಪ್ಪಿದ ಮಗ, ಡಿಕೆಶಿ ದಾರಿ ತಪ್ಪಿದ ಮಗ: ತೇಜಸ್ವಿನಿ ಗೌಡ ವಾಗ್ದಾಳಿ

    ಎಚ್‍ಡಿಕೆ ಮಾತು ತಪ್ಪಿದ ಮಗ, ಡಿಕೆಶಿ ದಾರಿ ತಪ್ಪಿದ ಮಗ: ತೇಜಸ್ವಿನಿ ಗೌಡ ವಾಗ್ದಾಳಿ

    -ರಾಮನಗರ ಇಂದು ರಾವಣನಗರ ಆಗಿದೆ

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತು ತಪ್ಪಿದ ಮಗ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ದಾರಿ ತಪ್ಪಿದ ಮಗ. ಇಬ್ಬರೂ ದುರ್ಯೋಧನ, ದುಶ್ಯಾಸನ ಇದ್ದ ಹಾಗೆ ಎಂದು ಬಿಜೆಪಿ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿ ಪಾದಯಾತ್ರೆ ಅಂತ್ಯದ ನಂತರ ಫ್ರೀಡಂಪಾರ್ಕ್ ಸಮೀಪದ ರಸ್ತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದುರ್ಯೋಧನ ಹಾಗೂ ದುಶ್ಯಾಸನ ಮಹಾ ಪರಾಕ್ರಮಿಗಳು. ಆದರೆ ಅವರಲ್ಲಿ ಧರ್ಮ ಇರಲಿಲ್ಲ, ಹೀಗಾಗಿ ಸೋತರು. ದಾರಿ ತಪ್ಪಿದ ಮಗ ಹಾಗೂ ಮಾತು ತಪ್ಪಿದ ಮಗ ಇಬ್ಬರು ಸೇರಿದ್ದಾರೆ ಏನಾಗುತ್ತದೆ ನೋಡಬೇಕು ಎಂದು ವ್ಯಂಗ್ಯವಾಡಿದರು.

    ನೀವು ತೊಡೆ ತಟ್ಟಿದ್ದು ನನಗೂ ನೆನಪಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ ನಾಯಕರು ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು. ಆಗ ಬಿಜೆಪಿ ನಿಮಗೆ ನೀರು, ಭದ್ರತೆ ಸೇರಿದಂತೆ ಅನೇಕ ವ್ಯವಸ್ಥೆ ಮಾಡಿತ್ತು. ನೀವು ಕದ್ದು ಕದ್ದು ಪಾದಯಾತ್ರೆ ಮಾಡಿದ್ದು ನನಗೂ ಗೊತ್ತು ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸಿದರು.

    ನಿಮಗೆ ಪಾದಯಾತ್ರೆಯ ಬಗ್ಗೆ ಅರಿವು ಇಲ್ಲ, ಹೀಗಾಗಿ ಹಗುರವಾಗಿ ಮಾತನಾಡುತ್ತಿರುವಿರಿ. ಅನುಪಮ ಜೋಡಿಗಳಾದ ನೀವು 57 ಕಿ.ಮೀ. ಪಾದಯಾತ್ರೆ ಮಾಡಿ, ಕಾಲಿನಲ್ಲಿ ಹೇಗೆ ಬೊಬ್ಬೆ ಬರುತ್ತವೆ ಎನ್ನುವುದು ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಸವಾಲು ಹಾಕಿದರು.

    ಕುಮಾರಸ್ವಾಮಿ ರಾಮನಗರ ಮತಕ್ಷೇತ್ರವನ್ನು ಕೈಬಿಟ್ಟಿದ್ದಾರೆ. ಇದರಿಂದ ಶಾಸಕರಿಲ್ಲದೇ ರಾಮನಗರ ಸದ್ಯ ರಾವಣನ ನಗರವಾಗಿದೆ. ಕಾಂಗ್ರೆಸ್ ಉದ್ಧಾರಕ್ಕಾಗಿ ಏನನ್ನು ಡಿ.ಕೆ.ಶಿವಕುಮಾರ್ ಮಾಡಲಿಲ್ಲ. ಸಚಿವ ಸ್ಥಾನಕ್ಕಾಗಿ ಕುಮಾರಸ್ವಾಮಿಗೆ ಎಲ್ಲವನ್ನು ಮಾಡಿದರು ಎಂದು ವ್ಯಂಗ್ಯವಾಡಿದರು.

    ಕಾಂಗ್ರೆಸ್ ಶಲ್ಯ ಹಾಕಿದವರೆಲ್ಲರೂ ಕಾಂಗ್ರೆಸ್ಸಿಗರಾ, ರಾಮರಾಜ್ಯ ಆಗಬೇಕು ಎಂದು ಗಾಂಧೀಜಿ ಅವರು ಕಾಂಗ್ರೆಸ್ ಶಲ್ಯ ಹಾಕಿದ್ದರು. ಆದರೆ ನೀವು ಕೆರೆ, ಹೊಲ, ಮನೆ ಅತಿಕ್ರಮಣ ಮಾಡಿ ಗಾಂಧೀಜಿಯವರ ಉದ್ದೇಶವನ್ನು ಮರೆತು ಬಿಟ್ಟಿರುವಿರಿ ಎಂದು ಹಸಿರು ಶಲ್ಯ ಹಾಕಿದವರು ರೈತರಲ್ಲ ಎಂದಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟರು.

  • ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಸಿಎಂ- ರಾಜ್ಯದ ಒಳಿತು ಕೋರಿ ಪೂಜೆ ಅಂದ್ರು ಎಚ್‍ಡಿಕೆ

    ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಸಿಎಂ- ರಾಜ್ಯದ ಒಳಿತು ಕೋರಿ ಪೂಜೆ ಅಂದ್ರು ಎಚ್‍ಡಿಕೆ

    ಬೆಂಗಳೂರು: ಇಂದು ಶತಮಾನದ ಸುದೀರ್ಘ ರಕ್ತ ಚಂದ್ರಗ್ರಹಣ ಸಂಭವಿಸಲಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು ಇದೀಗ ಅಷ್ಟೇ ಸಿಎಂ ಕುಮಾರಸ್ವಾಮಿ ಅವರು ಕೂಡ ಕುಟುಂಬ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

    ಸುಪ್ರಭಾತ ಸೇವೆ ಮತ್ತು ತೋಮಾಲಾ ಸೇವೆಯಲ್ಲಿ ಸಿಎಂ ಕುಮಾರಸ್ವಾಮಿ ದಂಪತಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಪತ್ನಿ ಸಮೇತರಾಗಿ ಪಾಲ್ಗೊಂಡಿದ್ರು. ಈ ವೇಳೆ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರನ್ನು ಟಿಟಿಡಿ ವತಿಯಿಂದ ರೇಷ್ಮೇ ಶಾಲು ಹೊದಿಸಿ ಸನ್ಮಾನಿಸಲಾಯ್ತು.

    ತಿಮ್ಮಪ್ಪನ ದರುಶನ ಬಳಿಕ ಮಾತನಾಡಿದ ಕುಮಾರಸ್ವಾಮಿ, ತಿರುಪತಿ ಭೇಟಿ ಹಿಂದೆ ವಿಶೇಷವೇನೂ ಇಲ್ಲ. ರಾಜ್ಯದ ಒಳಿತು ಕೋರಿ ತಿಮ್ಮಪ್ಪನಿಗೆ ವಿಶೆಷ ಪೂಜೆ ಸಲ್ಲಿಸಿರುವೆ ಅಂತಾ ಹೇಳಿದ್ರು.

    ನಿನ್ನೆ ಒಂದೇ ದಿನ ಬರೋಬ್ಬರಿ 6.28 ಕೋಟಿ ರೂಪಾಯಿ ಸಂಗ್ರಹವಾಗಿದ್ದು ದಾಖಲೆಯಾಗಿದೆ. ಇನ್ನು 2012 5.73 ಕೋಟಿ ರೂಪಾಯಿ ಸಂಗ್ರಹವಾಗಿದ್ದೆ ಅತ್ಯಧಿಕ ಮೊತ್ತವಾಗಿತ್ತು.

  • ಅನ್ನಭಾಗ್ಯ ಗುದ್ದಾಟದ ಮಧ್ಯೆಯೇ ಒಂದಾಗಿ ಶೋ ರೂಮ್ ಉದ್ಘಾಟಿಸಿದ ಎಚ್‍ಡಿಕೆ-ಜಮೀರ್

    ಅನ್ನಭಾಗ್ಯ ಗುದ್ದಾಟದ ಮಧ್ಯೆಯೇ ಒಂದಾಗಿ ಶೋ ರೂಮ್ ಉದ್ಘಾಟಿಸಿದ ಎಚ್‍ಡಿಕೆ-ಜಮೀರ್

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಆಹಾರ ಹಾಗೂ ನಾಗರೀಕ ಸಚಿವ ಜಮೀರ್ ಅಹ್ಮದ್ ಕಳೆದ ಕೆಲವು ದಿನಗಳಿಂದ ಒಬ್ಬರಿಗೊಬ್ಬರು ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ ಇಂದು ಇಬ್ಬರು ಒಂದಾಗಿಯೇ ಶೋ ರೂಮ್ ಒಂದನ್ನು ಉದ್ಘಾಟನೆ ಮಾಡಿದ್ದಾರೆ.

    ನಗರದ ಚಾಮರಾಜಪೇಟೆಯಲ್ಲಿ ನಿಸಾರ್ ಮೆಟಲ್ಸ್‍ನ ಹೊಸ ಶೋ ರೂಮ್ ಅನ್ನು ಕುಮಾರಸ್ವಾಮಿ ಹಾಗೂ ಜಮೀರ್ ಅಹ್ಮದ್ ಒಟ್ಟಾಗಿ ರಿಬ್ಬನ್ ಕಟ್ ಮಾಡಿ, ಉದ್ಘಾಟಿಸಿದ್ದಾರೆ.

    ಅಕ್ಕಿ ಕಡಿತದ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ಬಳಿ ಚರ್ಚೆ ಮಾಡಬೇಕಿತ್ತು. ಆದರೆ ಹಾಗೇ ಮಾಡಲಿಲ್ಲ. ಹೀಗಾಗಿ ಹಿಂದಿನಂತೆ 7 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಸಚಿವ ಜಮೀರ್ ಅಹ್ಮದ್ ಮಂಗಳವಾರ ಹೇಳಿಕೆ ನೀಡಿದ್ದರು. ಇದಕ್ಕೆ ಖಾರವಾಗಿಯೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಕುಮಾರಸ್ವಾಮಿ, ಜಮೀರ್ ಅಹ್ಮದ್ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ತಿರುಗೇಟು ಕೊಟ್ಟಿದ್ದರು.

  • ಸಿಎಂ ಹೆಚ್‍ಡಿಕೆ ಆಡಳಿತದಲ್ಲಿ ಸೂಪರ್ ಸಿಎಂ ರೇವಣ್ಣ ಅವರ ಫೋಟೋ ಮಾಯ!

    ಸಿಎಂ ಹೆಚ್‍ಡಿಕೆ ಆಡಳಿತದಲ್ಲಿ ಸೂಪರ್ ಸಿಎಂ ರೇವಣ್ಣ ಅವರ ಫೋಟೋ ಮಾಯ!

    ಬೆಂಗಳೂರು: ವಿಧಾನಸೌಧದಲ್ಲಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಕೊಠಡಿಯಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಫೋಟೋ ಮಾಯವಾಗಿದೆ.

    ಜೆಡಿಎಸ್ ಅಪ್ಪ, ಮಕ್ಕಳ ಪಕ್ಷ ಎಂದು ಅನೇಕ ಬಿಜೆಪಿ ನಾಯಕರು ಹಿಂದಿನಿಂದ ಆರೋಪಿಸುತ್ತಲೇ ಬಂದಿದ್ದಾರೆ. ಮುಂದೆ ಈ ಆರೋಪ ಮಾಡದೇ ಇರಲಿ ಎಂದು ಪಕ್ಷದ ಕೊಠಡಿಯಲ್ಲಿದ್ದ ಸಚಿವ ಎಚ್.ಡಿ.ರೇವಣ್ಣ ಅವರ ಫೋಟೋವನ್ನು ದೇವೇಗೌಡರು ಸಿಬ್ಬಂದಿಗೆ ಹೇಳಿ ತೆಗೆಸಿದ್ದಾರೆ ಎನ್ನಲಾಗಿದೆ.

    ಪಕ್ಷದ ಕೊಠಡಿಯಲ್ಲಿ ಹಲವು ವರ್ಷಗಳಿಂದಲೂ ರೇವಣ್ಣ ಅವರ ಫೋಟೋವನ್ನು ಹಾಕಲಾಗಿತ್ತು. ಆದರೆ ಈಗ ಜಯಪ್ರಕಾಶ್ ನಾರಾಯಣ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಫೋಟೋ ಮಾತ್ರ ಕೊಠಡಿಯಲ್ಲಿ ಕಾಣುತ್ತಿದೆ.

  • ಲೋಕಸಭೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ ವಿಚಾರ ಪ್ರಸ್ತಾಪ

    ಲೋಕಸಭೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ ವಿಚಾರ ಪ್ರಸ್ತಾಪ

    ನವದೆಹಲಿ: ಲೋಕಸಭೆ ಕಲಾಪದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಣ್ಣೀರು, ಗಾಲಿ ಜನಾರ್ದನ ರೆಡ್ಡಿ ಭ್ರಷ್ಟಾಚಾರದ ಬಳಿಕ ಮಂಗಳವಾರ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ವಿಷಯವೂ ಪ್ರಸ್ತಾಪವಾಯಿತು.

    ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಭಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳಿಗೆ 350 ಕ್ಕೂ ಹೆಚ್ಚು ದೂರುಗಳನ್ನು ನೀಡಿದ್ದೇನೆ. ಆದರೆ ಕರ್ನಾಟಕದ ಎಸಿಬಿ ಮುಖ್ಯಸ್ಥರು ಸಿದ್ದರಾಮಯ್ಯ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಿಲ್ಲ. ಕಾರಣ ಅವರು ಸಿದ್ದರಾಮಯ್ಯ ಅಧೀನದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಆರೋಪಿಸಿದರು. ಇದಕ್ಕೆ ಕಾಂಗ್ರೆಸ್ ಸಂಸದರು ಭಾರೀ ಆಕ್ಷೇಪ ವ್ಯಕ್ತಪಡಿದರು.

    ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಐಟಿ ದಾಳಿ ವಿಷಯವನ್ನು ಪ್ರಸ್ತಾಪಿಸಿದ ಆಂಧ್ರಪ್ರದೇಶದ ಟಿಡಿಪಿ ಸಂಸದ ಕೃಷ್ಟಪ್ಪ ನಿಮ್ಮಲ, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು. ಇನ್ನು ರಾಜಸ್ಥಾನ ಆಳ್ವಾರ್ ಜಿಲ್ಲೆಯಲ್ಲಿ ಗೋವು ಕಳ್ಳನೆಂದು ಭಾವಿಸಿ ಅಕ್ಬರ್ ಎಂಬಾತನ ಮೇಲೆ ಸಾಮೂಹಿಕ ಹಲ್ಲೆ ನಡೆಸಿದ್ದ ಪ್ರಕರಣ ಸಂಸತ್ತಿನ ಉಭಯ ಸದನಗಳಲ್ಲೂ ಪ್ರಸ್ತಾಪವಾಯಿತು.

    ಗೃಹಸಚಿವ ರಾಜನಾಥ್ ಸಿಂಗ್, ಸಾಮೂಹಿಕ ಹಲ್ಲೆ ಪ್ರಕರಣಗಳ ತನಿಖೆಗಾಗಿ ಉನ್ನತ ಮಟ್ಟದ ತಂಡ ರಚಿಸಲಾಗಿದೆ. ಅಗತ್ಯವಿದ್ದಲ್ಲಿ ಕಾನೂನು ಜಾರಿಗೆ ಗಮನ ಹರಿಸಲಾಗುವುದು ಎಂದರು. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಈ ಮಧ್ಯೆ, ಸಂಸತ್ ಆವರಣದಲ್ಲಿ ಕೋತಿಗಳ ಕಾಟ ಹೆಚ್ಚಾಗಿದೆ ಅಂತಲೂ ಚರ್ಚೆ ನಡೆಯಿತು.