Tag: ಎಚ್ ಡಿ ಕುಮಾರಸ್ವಾಮಿ

  • ನಮ್ಮ ಗದ್ದೆಗೂ ಬಂದು ನಾಟಿ ಕೆಲ್ಸ ಮಾಡಿ- ಬಿಜೆಪಿ ಕಾರ್ಯಕರ್ತ ವ್ಯಂಗ್ಯ

    ನಮ್ಮ ಗದ್ದೆಗೂ ಬಂದು ನಾಟಿ ಕೆಲ್ಸ ಮಾಡಿ- ಬಿಜೆಪಿ ಕಾರ್ಯಕರ್ತ ವ್ಯಂಗ್ಯ

    ಮಂಡ್ಯ: ಗದ್ದೆಯಲ್ಲಿ ಕೃಷಿ ಕೆಲಸಕ್ಕೆ ಮುಂದಾದ ಮುಖ್ಯಮಂತ್ರಿಯನ್ನು ಬಿಜೆಪಿ ಕಾರ್ಯಕರ್ತರೊಬ್ಬರು ಟೀಕಿಸಿದ್ದಾರೆ.

    ಮುಖ್ಯಮಂತ್ರಿಗಳೇ ನೀವು ಬಣ್ಣ ಹಚ್ಚದೇ ನಾಟಕ ಮಾಡುತ್ತಿದ್ದೀರಾ? ಮುಖ್ಯಮಂತ್ರಿಗಳೇ ನಮಗೆ ಕೂಲಿ ಕೊಡುವ ಶಕ್ತಿಯಿಲ್ಲ. ನಮಗೆ ಮುಯ್ಯಾಳಿನ (ಕೆಲಸಗಾರರ) ಕೊರತೆಯಿದೆ. ನಮ್ಮ ಗದ್ದೆಗೂ ಬಂದು ನಾಟಿ ಕೆಲಸ ಮಾಡಿ.. ಮುಯ್ಯಾಳಿನ ರೀತಿ ಕೆಲಸ ಮಾಡಿ ಅಂತ ಕುಮಾರಸ್ವಾಮಿಯವರ ನಡೆಯನ್ನು ವ್ಯಂಗ್ಯವಾಡಿದ್ದಾರೆ.

    ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿ ಗ್ರಾಮದ ಶಿವಕುಮಾರ್ ಆರಾಧ್ಯ ಎಂಬ ಬಿಜೆಪಿ ಕಾರ್ಯಕರ್ತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಈ ರೀತಿ ಟೀಕಿಸಿದ್ದಾರೆ. ಅಲ್ಲದೇ ಈ ಕುರಿತು ಮಂಡ್ಯ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಕೂಡ ಸಲ್ಲಿಸಿದ್ದಾರೆ.

    ಮಂಡ್ಯ ಜಿಲ್ಲೆಯಲ್ಲಿರುವ ಮೈಷುಗರ್ ಕಾರ್ಖಾನೆ, ಕಬ್ಬಿನ ಬಾಕಿ ಹಣ ಸೇರಿ ಹಲವು ಸಮಸ್ಯೆಯಿದೆ. ಹೀಗಾಗಿ ಮೊದಲು ನಾಟಕ ಬಿಟ್ಟು ಮೊದಲು ಅವುಗಳನ್ನು ಬಗೆಹರಿಸಿ. ನಂತರ ನಾಟಿ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ. ಶಿವಕುಮಾರ್ ಅವರು ಕೆರಗೋಡು ವ್ಯಾಪ್ತಿಯ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿದ್ದಾರೆ.

    ಸಿಎಂ ಕಾರ್ಯಕ್ರಮ:
    ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರ ಮತ್ತು ಅರಳಕುಪ್ಪೆ ಗ್ರಾಮದ ವ್ಯಾಪ್ತಿಗೆ ಸೇರಿದ ಗದ್ದೆ ಬಯಲಿಗೆ ನಾಳೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಗದ್ದೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಳಗ್ಗೆ ನಾಟಿ ಕೆಲಸ ಮಾಡಲಿದ್ದಾರೆ. ಸಿಡಿಎಸ್ ನಾಲೆ ಪಕ್ಕದಲ್ಲೇ ಇರುವ ವಿಶಾಲವಾದ ಗದ್ದೆ ಬಯಲಿನಲ್ಲಿ ಸುಮಾರು 5 ಎಕರೆಯಷ್ಟು ಜಾಗವನ್ನು ಮುಖ್ಯಮಂತ್ರಿಗಳ ನಾಟಿ ಕೆಲಸಕ್ಕೆಂದು ತಯಾರಿ ಮಾಡಲಾಗಿದೆ. ರೈತರಾದ ಮಹದೇವಮ್ಮ, ದೇವರಾಜು, ಮಹೇಶ, ಹೇಮಲತ, ಮಾಯಮ್ಮ ಅವರಿಗೆ ಸೇರಿದ ಭತ್ತದ ಗದ್ದೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನಾಟಿ ಮಾಡಲಿದ್ದಾರೆ.

    ಮುಖ್ಯಮಂತ್ರಿಗಳ ಜೊತೆ ರೈತರೂ ಕೂಡ ನಾಟಿ ಕೆಲಸಕ್ಕೆ ಸಾಥ್ ನೀಡಲಿದ್ದಾರೆ. ಸಿಎಂ ಕುಮಾರಸ್ವಾಮಿ ಅವರಿಗೆ 100 ಮಹಿಳೆಯರು ಮತ್ತು 50 ರೈತ ಪುರುಷರು ಸಾಥ್ ಕೊಡಲಿದ್ದಾರೆ. ಜೊತೆಗೆ 25 ಜೋಡಿ ಎತ್ತುಗಳು ಮೂಲಕ ನಾಟಿ ಕೆಲಸ ಮಾಡಲಾಗುತ್ತದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಸಹಕಾರಿ ಸಾಲಮನ್ನಾಕ್ಕೆ ಕ್ಯಾಬಿನೆಟ್ ಸಿಗ್ನಲ್: ಮಾರ್ಗಸೂಚಿ ಏನು?ಯಾರಿಗೆ ಅನ್ವಯ ಆಗಲ್ಲ?

    ಸಹಕಾರಿ ಸಾಲಮನ್ನಾಕ್ಕೆ ಕ್ಯಾಬಿನೆಟ್ ಸಿಗ್ನಲ್: ಮಾರ್ಗಸೂಚಿ ಏನು?ಯಾರಿಗೆ ಅನ್ವಯ ಆಗಲ್ಲ?

    ಬೆಂಗಳೂರು: ಸಾಲಮನ್ನಾ ವಿಚಾರದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ಮೊದಲ ಹಂತದ ಸಾಲಮನ್ನಾಕ್ಕೆ ಅಧಿಕೃತ ಆದೇಶ ಹೊರಡಿಸಿದ್ದಾರೆ. ಇಂದು ನಡೆದ ಸಂಪುಟ ಸಭೆಯಲ್ಲಿ ಸಹಕಾರಿ ಸಂಘಗಳಲ್ಲಿನ ರೈತರ ಚಾಲ್ತಿ ಸಾಲಮನ್ನಾಕ್ಕೆ ಒಪ್ಪಿಗೆ ಪಡೆದಿದ್ದಾರೆ.

    ಒಂದು ಕುಟುಂಬದಲ್ಲಿ ಎಷ್ಟು ಮಂದಿ ಸಾಲಪಡೆದಿರುತ್ತಾರೋ ಅವರ ಸಾಲಮನ್ನಾವನ್ನೂ ಕೂಡ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ. ಶುಕ್ರವಾರದಿಂದಲೇ ಸಾಲಮನ್ನಾ ಯೋಜನೆ ಜಾರಿಯಾಗಲಿದೆ. ರೈತರಿಗೆ ಯಾವುದೇ ಒತ್ತಡ ಹೇರದಂತೆ ಬ್ಯಾಂಕ್‍ಗಳಿಗೆ ಸೂಚನೆ ನೀಡಲಾಗಿದೆ.

    ಒತ್ತಾಯ ಪೂರ್ವಕವಾಗಿ ಮರುಪಾವತಿ ಮಾಡಿದವರಿಗೂ ಹಾಗೂ ಸಾಲ ಕಟ್ಟಿದವರಿಗೂ ಸಾಲಮನ್ನ ಯೋಜನೆ ಅನ್ವಯ ಆಗಲಿದೆ. ಆದರೆ, ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲಮನ್ನಾ ಒಂದು ವಾರ ವಿಳಂಬವಾಗಲಿದೆ. ಆಗಸ್ಟ್ 15 ಅಥವಾ ಗಣೇಶ ಹಬ್ಬಕ್ಕೆ 2ನೇ ಹಂತದ ಸಾಲಮನ್ನಾವಾಗಲಿದೆ ಅಂತ ಕ್ಯಾಬಿನೆಟ್ ನಿರ್ಧರಿಸಿದೆ.  ಇದನ್ನು ಓದಿ: ರಾತ್ರೋರಾತ್ರಿ ಸಾಲಮನ್ನಾ ಹಣವನ್ನ ಜಮೆ ಮಾಡಲು ದುಡ್ಡಿನ ಮರ ಬೆಳೆದಿಲ್ಲ: ಎಚ್‍ಡಿಕೆ

     

     

    ಸಾಲಮನ್ನಾ ಹೇಗೆ?
    ಒಟ್ಟು 20.38 ಲಕ್ಷ ರೈತರ ಸಹಕಾರಿ ಬ್ಯಾಂಕ್‍ನ 1 ಲಕ್ಷ ರೂಪಾಯಿವರೆಗಿನ ರೈತರ ಚಾಲ್ತಿ ಸಾಲ ಮನ್ನಾವಾಗಲಿದೆ. 10,734 ಕೋಟಿ ಸಾಲದಲ್ಲಿ 9,448 ಕೋಟಿ ರೂ. ಸಾಲಮನ್ನಾ ಆಗುತ್ತದೆ.

    ಮಾರ್ಗಸೂಚಿ ಏನು?
    * ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಲ್ಯಾಂಪ್ಸ್, ಡಿಸಿಸಿ ಬ್ಯಾಂಕ್‍ಗಳು, ಪಿಕಾರ್ಡ್ ಬ್ಯಾಂಕ್‍ಗಳು ವಿತರಿಸಿದ ಅಲ್ಪಾವಧಿ ಸಾಲದ ಪೈಕಿ 10.07.2018ಕ್ಕೆ ಹೊಂದಿರುವ ಹೊರಬಾಕಿ ಸಾಲಕ್ಕೆ ಮಾತ್ರ ಅನ್ವಯ
    * ಒಂದು ರೈತ ಕುಟುಂಬಕ್ಕೆ ಗರಿಷ್ಠ 1 ಲಕ್ಷ ರೂ.ವರೆಗಿನ ಸಾಲ ಮಾತ್ರ ಮನ್ನಾ
    * 10.07.2018 ಅವಧಿಯಲ್ಲಿ ಸಾಲ ಪಡೆದು ರೈತ ಮೃತ ಪಟ್ಟಿದ್ದರೆ ವಾರಸುದಾರರಿಗೂ ಈ ಸೌಲಭ್ಯ
    * ಹೊರಬಾಕಿ ಮೊತ್ತವನ್ನು ಪೂರ್ಣವಾಗಿ ಮರುಪಾವತಿಸಿದ್ದಲ್ಲಿ ಮನ್ನಾ ಆಗಬೇಕಾದ ಮೊತ್ತ ರೈತರ ಖಾತೆಗೆ ಜಮೆ
    * ಸಾಲಮನ್ನಾ ಆಗುವ ಅನುದಾನವನ್ನು ಡಿಬಿಟಿ ಮೂಲಕ ರೈತರ ಉಳಿತಾಯ ಖಾತೆಗೆ ಬಿಡುಗಡೆ

    ಯಾರಿಗೆ ಅನ್ವಯ ಆಗಲ್ಲ?
    * ಬೆಳೆಸಾಲ ಪಡೆದ ರೈತರು ಸರ್ಕಾರಿ, ಸಹಕಾರಿ ಇತರೆ ಕ್ಷೇತ್ರದ ನೌಕರರಾಗಿಬಾರದು
    * 20 ಸಾವಿರಕ್ಕಿಂತ ಹೆಚ್ಚಿನ ವೇತನ, ಪಿಂಚಣಿ ಪಡೆಯುತ್ತಿದ್ದಲ್ಲಿ ಅಂಥಹ ರೈತರಿಗೆ ಅನ್ವಯಿಸಲ್ಲ
    * 3 ವರ್ಷಗಳಲ್ಲಿ 1 ವರ್ಷ ಆದಾಯ ತೆರಿಗೆ ಪಾವತಿಸಿದ್ದಲ್ಲಿ ಅಂಥವರಿಗೆ ಅನ್ವಯವಾಗಲ್ಲ
    * ಕೃಷಿ ಉತ್ಪನ್ನ, ಚಿನ್ನಾಭರಣ, ವಾಹನ ಖರೀದಿ, ಪಶು ಭಾಗ್ಯ ಯೋಜನೆ, ಮೀನುಗಾರಿಕೆ ಉದ್ದೇಶಗಳಿಗೆ ನೀಡುವ ಸಾಲಗಳಿಗೆ ಅನ್ವಯ ಆಗಲ್ಲ
    * ಸಹಕಾರ ಸಂಘ, ಬ್ಯಾಂಕ್‍ಗಳಲ್ಲಿ ಒಂದಕ್ಕಿಂತ ಹೆಚ್ಚು ಸಾಲ ಪಡೆದಿವರಿಗೆ ಇದು ಅನ್ವಯಿಸಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರಾತ್ರೋರಾತ್ರಿ ಸಾಲಮನ್ನಾ ಹಣವನ್ನ ಜಮೆ ಮಾಡಲು ದುಡ್ಡಿನ ಮರ ಬೆಳೆದಿಲ್ಲ: ಎಚ್‍ಡಿಕೆ

    ರಾತ್ರೋರಾತ್ರಿ ಸಾಲಮನ್ನಾ ಹಣವನ್ನ ಜಮೆ ಮಾಡಲು ದುಡ್ಡಿನ ಮರ ಬೆಳೆದಿಲ್ಲ: ಎಚ್‍ಡಿಕೆ

    ಬೆಂಗಳೂರು: ರೈತರ ಸಾಲಮನ್ನಾ ಹಣವನ್ನು ರಾತ್ರೋರಾತ್ರಿ ಖಾತೆಗೆ ಜಮೆ ಮಾಡಲು ನಾನು ದುಡ್ಡಿನ ಮರ ಬೆಳೆದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ವಸಂತನಗರ ಅಂಬೇಡ್ಕರ್ ಭವನದಲ್ಲಿ ಆಯೋಜನೆಗೊಂಡಿದ್ದ 24ನೇ ವಿಶ್ವ ಆದಿವಾಸಿ ದಿನಾಚರಣೆ ಹಾಗೂ ಅಲೆಮಾರಿ ಆದಿವಾಸಿಗಳ ಕಲಾಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಲಮನ್ನಾದ 49 ಸಾವಿರ ಕೋಟಿ ರೂ. ಸಿದ್ಧಮಾಡಲು ಕಷ್ಟಪಡುತ್ತಿರುವೆ. ಆದರೆ ಕೆಲವರು ಕುಮಾರಸ್ವಾಮಿ ಇನ್ನು ತಮ್ಮ ಖಾತೆಗೆ ಹಣ ಪಾವತಿ ಮಾಡಲಿಲ್ಲ ಎಂದು ದೂರುತ್ತಿದ್ದಾರೆ. ಹಣವನ್ನು ಹೊಂದಿಸಲು ಅಧಿಕಾರಿಗಳ ಜೊತೆ ಚರ್ಚೆ ಮಾಡಬೇಕು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಗರಂ ಆಗಿ ಹೇಳಿದರು.

    ಸಾಲಮನ್ನಾ ಘೋಷಣೆ ಮಾಡಿದ ದಿನದ ರಾತ್ರಿಯೇ ಖಾತೆಗೆ ಹಣ ಹಾಕಬೇಕು ಅಂದರೇ ಹೇಗೆ? ನಾನು ದುಡ್ಡಿನ ಮರ ಬೆಳೆದಿಲ್ಲ. ನಾನು ಅನುಭವಿಸುತ್ತಿರುವ ಕಷ್ಟ ನನಗೆ ಮಾತ್ರ ಗೊತ್ತು. ಆದರೆ ಇದನ್ನು ಹೇಳಿಕೊಳ್ಳುವಂತಿಲ್ಲ ಎಂದ ಅವರು, ಸರ್ಕಾರಕ್ಕೆ ಗೊತ್ತಿಲ್ಲ, ಗುರಿ ಇಲ್ಲವೆಂದು ಅನೇಕರು ಟೀಕೆ ಮಾಡುತ್ತಿದ್ದಾರೆ. ಅಧಿಕಾರಿಗಳನ್ನು ಒಪ್ಪಿಸದೇ ಹಣ ಹೊಂದಿಸುವುದು ಕಷ್ಟ ಎಂದು ಹೇಳಿದರು.

    ನಾನು ರೈತರ ಸಾಲಮನ್ನಾ ವಿಚಾರದಲ್ಲಿ ಹುಡುಗಾಟಿಕೆ ಆಡುತ್ತಿಲ್ಲ. ಹಣ ಸಿದ್ಧಪಡಿಸುವ ವಿಧಾನ ನನಗೆ ಗೊತ್ತು. ಆದರೆ ಅಧಿಕಾರಿಗಳ ಪಾತ್ರವು ಅಷ್ಟೇ ಅಗತ್ಯವಾಗಿದೆ. ಸಾಲಮನ್ನಾ ಹಣದ ಕುರಿತಾಗಿ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ, ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಹಣ ಪಾವತಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು ತಡವಾಗಲು ಪ್ರಯಾಣಿಕರೇ ಕಾರಣ – ರೈಲ್ವೇ ಅಧಿಕಾರಿಗಳಿಂದ ಸ್ಪಷ್ಟನೆ

    ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು ತಡವಾಗಲು ಪ್ರಯಾಣಿಕರೇ ಕಾರಣ – ರೈಲ್ವೇ ಅಧಿಕಾರಿಗಳಿಂದ ಸ್ಪಷ್ಟನೆ

    ಬೆಂಗಳೂರು/ಹುಬ್ಬಳ್ಳಿ: ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು ತಡವಾಗಲು ಪ್ರಯಾಣಿಕರೇ ಕಾರಣ ಎಂದು ರೈಲ್ವೇ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

    ಈ ಕುರಿತು ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ನೈಋತ್ಯ ರೈಲ್ವೇಯ ಡಿಜಿಎಂ ಇ. ವಿಜಯಾ ಅವರು, ತಾಂತ್ರಿಕ ಕಾರಣದಿಂದ ಸಮಸ್ಯೆ ಆಗಿದ್ದು ನಿಜ. ಆದರೆ ಮೇನ್ ಟ್ರ್ಯಾಕ್ ಸಮಸ್ಯೆ ಇದ್ದಿದ್ದರಿಂದ ಗೂಡ್ಸ್ ಮತ್ತು ರಾಣಿ ಚೆನ್ನಮ್ಮ ರೈಲು ಒಂದೇ ಹಳಿಯಲ್ಲಿ ಚಲಿಸುತ್ತಿದ್ದವು. ಗೂಡ್ಸ್ ರೈಲಿನ ಇಂಜಿನ್ ಕೈ ಕೊಟ್ಟಿತ್ತು. ಹೀಗಾಗಿ ಅದನ್ನ ಹಳಿಯಿಂದ ಸರಿಸಲು ರಾಣಿಚೆನ್ನಮ್ಮ ರೈಲಿನ ಇಂಜಿನ್ ಜೋಡಿಸಲಾಗಿತ್ತು. ರೈಲಿನ ಚಾಲನೆಯಲ್ಲಿ ಕೇವಲ ಒಂದು ಗಂಟೆ ಮಾತ್ರ ತಡವಾಗಿದೆ ಆದರೆ 8 ಗಂಟೆಯಲ್ಲ ಎಂದು ಹೇಳಿದ್ದಾರೆ.

    ಗೂಡ್ಸ್ ರೈಲನ್ನು ಟ್ರ್ಯಾಕ್ ನಿಂದ ಬದಲಿಸಲು ಚೆನ್ನಮ್ಮ ಎಕ್ಸ್ ಪ್ರೆಸ್ ರೈಲಿನ ಎಂಜಿನ್ ಬಳಸಿ ಮಧ್ಯರಾತ್ರಿ 1 ಗಂಟೆಗೆ ಮತ್ತೆ ಚೆನ್ನಮ್ಮ ರೈಲಿಗೆ ಇಂಜಿನ್ ಜೋಡಿಸಲಾಗಿತ್ತು. ಒಂದು ಗಂಟೆ ತಡವಾದ ಹಿನ್ನೆಲೆಯಲ್ಲಿ ಪ್ರಯಾಣಿಕರು, ಪರೀಕ್ಷಾರ್ಥಿಗಳು ರೊಚ್ಚಿಗೆದ್ದಿದ್ದರು. ರೈಲನ್ನು ನಿಲ್ದಾಣದಿಂದ ಬಿಡದೇ ವಿದ್ಯಾರ್ಥಿಗಳು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಅವರನ್ನು ನಿಯಂತ್ರಿಸಿ ರೈಲು ಸಾಗಿದರೂ ಪದೇ ಪದೇ ಅಲಾರಾಮ್ ಚೈನ್ ಎಳೆದಿದ್ದಾರೆ. ನಾವು ಅವರನ್ನು ಸಂತೈಸುವ ಸ್ಥಿತಿಯಲ್ಲಿ ಇರಲಿಲ್ಲ. ಅಲ್ಲದೇ ರೈಲಿಗೆ ಕಲ್ಲು ಹೊಡೆದಿದ್ದಾರೆ. ಎಷ್ಟೇ ತಡವಾಗಿದ್ದರೂ ನಮ್ಮ ಪ್ರಕಾರ ರೈಲು ಇಂದು ಬೆಳಗ್ಗೆ 7 ಗಂಟೆ ಹೊತ್ತಿಗೆ ಬೆಂಗಳೂರು ತಲುಪುತಿತ್ತು. ಪ್ರಯಾಣಿಕರು ಪ್ರತಿಭಟನೆ ಮಾಡಿದ್ದರಿಂದ ತಡವಾಗಿದೆಯೇ ಹೊರತು ನಮ್ಮಿಂದಲ್ಲ ಎಂದು ಸ್ಪಷ್ಟನೆ ನೀಡಿದರು.

    ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ರಾಣಿ ಚನ್ನಮ್ಮ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲೇ ಸುಮಾರು 7 ಗಂಟೆಗಳ ಕಾಲ ನಿಂತ ಹಿನ್ನೆಲೆಯಲ್ಲಿ ಬೆಂಗಳೂರು ತೆರಳಬೇಕಿದ್ದ ಪರೀಕ್ಷಾರ್ಥಿಗಳು ಪರದಾಡಿದಾಡಿದ್ದರು. ಮುಖ್ಯವಾಗಿ ಬೆಳಗಾವಿ ಹಾಗೂ ಧಾರವಾಡ ಭಾಗದಿಂದ ಬೆಂಗಳೂರಿಗೆ ಡಿ.ಆರ್ ಪರೀಕ್ಷೆ ಬರೆಯಲು ಇದೇ ಟ್ರೈನ್ ನಲ್ಲಿ ಬರುತ್ತಿದ್ದ ಇದ್ದ ಸಾವಿರಾರೂ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಬೆಂಗಳೂರು ತಲುಪಲಾಗದೇ ಪರೀಕ್ಷೆಯಿಂದ ವಂಚಿತರಾಗಿದ್ದರು. ಶನಿವಾರ ಮಧ್ಯಾಹ್ನ ಕೊಲ್ಹಾಪುರ ಬಿಟ್ಟ ಈ ಟ್ರೈನ್ ಇಂದು ಬೆಳಗ್ಗೆ 6.45ಕ್ಕೆ ಬೆಂಗಳೂರು ತಲುಪಬೇಕಿತ್ತು. ಆದ್ರೆ 7 ಗಂಟೆಗಳ ಕಾಲ ತಡವಾದ ಹಿನ್ನೆಲೆಯಲ್ಲಿ ಈ ಟ್ರೈನ್‍ಗಾಗಿ ಎಲ್ಲ ನಿಲ್ದಾಣಗಳಲ್ಲಿ ಕಾಯುತ್ತ ನಿಂತ ಪ್ರಯಾಣಿಕರು ರೋಸಿಹೋಗಿದ್ದರು.

    ಈ ವಿಷಯದ ಕುರಿತು ಮಾಹಿತಿ ಪಡೆದ ಸಿಎಂ ಕುಮಾರಸ್ವಾಮಿ ಅವರು, ಡಿಎಆರ್ ಪರೀಕ್ಷೆಯಿಂದ ಕೆಲ ವಿದ್ಯಾರ್ಥಿಗಳ ವಂಚನೆ ವಿಚಾರಕ್ಕೆ ಸಂಬಂಧಿಸಿದಂತೆ ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು ತಡವಾಗಿ ಬೆಂಗಳೂರು ತಲುಪಿದ ಕಾರಣ ಪರೀಕ್ಷೆ ಬರೆಯಲು ಆಗದವರಿಗೆ ಮರುಪರೀಕ್ಷೆಗೆ ಅನುವು ಮಾಡಿಕೊಡುತ್ತೇನೆ. ಹುಬ್ಬಳ್ಳಿ ಪರೀಕ್ಷಾ ಕೇಂದ್ರಕ್ಕೂ ಅವಕಾಶ ಮಾಡುತ್ತೇನೆ. ಮುಂದೆ ಈ ರೀತಿಯ ಘಟನೆಗಳಾಗದಂತೆ ನಿಗಾ ವಹಿಸಲು ರೈಲ್ವೇ ಸಚಿವರ ಜೊತೆಗೆ ನಾನು ಮಾತನಾಡುತ್ತೇನೆ ಎಂದು ತಿಳಿಸಿ ಟ್ವೀಟ್ ಮಾಡಿದ್ದರು.

  • ರೈಲು ವಿಳಂಬ: ಪೊಲೀಸ್ ಮರು ಪರೀಕ್ಷೆಗೆ ಅವಕಾಶ- ಸಿಎಂ ಎಚ್‍ಡಿಕೆ

    ರೈಲು ವಿಳಂಬ: ಪೊಲೀಸ್ ಮರು ಪರೀಕ್ಷೆಗೆ ಅವಕಾಶ- ಸಿಎಂ ಎಚ್‍ಡಿಕೆ

    ಬೆಂಗಳೂರು/ಹುಬ್ಬಳ್ಳಿ: ಸಿಲಿಕಾನ್ ಸಿಟಿಗೆ ಹೊರಟ್ಟಿದ್ದ ರೈಲು 7 ಗಂಟೆ ವಿಳಂಬವಾಗಿದ್ದ ಪರಿಣಾಮ ಪೊಲೀಸ್ ಪರೀಕ್ಷೆ ಎದುರಿಸಲು ಸಾಧ್ಯವಾಗದವರಿಗೆ ಮರು ಪರೀಕ್ಷೆ ಮಾಡಲು ಅವಕಾಶ ಕಲ್ಪಿಸುವುದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ಡಿಎಆರ್ ಪರೀಕ್ಷೆಯಿಂದ ಕೆಲ ವಿದ್ಯಾರ್ಥಿಗಳ ವಂಚನೆ ವಿಚಾರಕ್ಕೆ ಸಂಬಂಧಿಸಿದಂತೆ ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು ತಡವಾಗಿ ಬೆಂಗಳೂರು ತಲುಪಿದ ಕಾರಣ ಪರೀಕ್ಷೆ ಬರೆಯಲು ಆಗದವರಿಗೆ ಮರುಪರೀಕ್ಷೆಗೆ ಅನುವು ಮಾಡಿಕೊಡುತ್ತೇನೆ. ಹುಬ್ಬಳ್ಳಿ ಪರೀಕ್ಷಾ ಕೇಂದ್ರಕ್ಕೂ ಅವಕಾಶ ಮಾಡುತ್ತೇನೆ. ಮುಂದೆ ಈ ರೀತಿಯ ಘಟನೆಗಳಾಗದಂತೆ ನಿಗಾ ವಹಿಸಲು ರೈಲ್ವೆ ಸಚಿವರ ಜೊತೆಗೆ ನಾನು ಮಾತನಾಡುತ್ತೇನೆ ಅಂತ ಅವರು ತಿಳಿಸಿದ್ದಾರೆ.

    https://twitter.com/CMofKarnataka/status/1025978752784711681

    ಇಂದು ಪೊಲೀಸ್ ಪರೀಕ್ಷೆ ಬರೆಯಬೇಕಿದ್ದ 2 ಸಾವಿರ ಅಭ್ಯರ್ಥಿಗಳಿಗೆ ರೈಲು ವಿಳಂಬವಾದ ಹಿನ್ನೆಲೆಯಲ್ಲಿ ಆಘಾತ ಉಂಟಾಗಿದೆ. ಘಟನೆಯ ಬಗ್ಗೆ ಡಿಜಿಪಿಯವರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ನೀಡುವ ಬಗ್ಗೆ ಪೊಲೀಸ್ ಇಲಾಖೆಯಿಂದ ನಿರ್ಧರಿಸಲಾಗುವುದು ಅಂತ ಹುಬ್ಬಳ್ಳಿಯಲ್ಲಿ ಡಿಸಿ ಪಿರೇಣುಕಾ ಸುಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಮಾರ್ಗ ಮಧ್ಯೆಯೇ ನಿಂತ ರಾಣಿ ಚನ್ನಮ್ಮ ಎಕ್ಸ್ ಪ್ರೆಸ್- ಪರೀಕ್ಷಾರ್ಥಿಗಳ ಪರದಾಟ

    ಏನಿದು ಘಟನೆ?:
    ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ರಾಣಿ ಚನ್ನಮ್ಮ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲೇ ಸುಮಾರು 7 ಗಂಟೆಗಳ ಕಾಲ ನಿಂತ ಹಿನ್ನೆಲೆಯಲ್ಲಿ ಬೆಂಗಳೂರು ತೆರಳಬೇಕಿದ್ದ ಪರೀಕ್ಷಾರ್ಥಿಗಳು ಪರದಾಡಿದಾಡಿದ್ದಾರೆ. ಶನಿವಾರ ಮಧ್ಯಾಹ್ನ ಕೊಲ್ಹಾಪುರ ಬಿಟ್ಟ ಈ ಟ್ರೈನ್ ಇಂದು ಬೆಳಗ್ಗೆ 6.45ಕ್ಕೆ ಬೆಂಗಳೂರು ತಲುಪಬೇಕಿತ್ತು. ಆದ್ರೆ 7 ಗಂಟೆಗಳ ಕಾಲ ತಡವಾದ ಹಿನ್ನೆಲೆಯಲ್ಲಿ ಈ ಟ್ರೈನ್‍ಗಾಗಿ ಎಲ್ಲ ನಿಲ್ದಾಣಗಳಲ್ಲಿ ಕಾಯುತ್ತ ನಿಂತ ಪ್ರಯಾಣಿಕರು ರೋಸಿಹೋಗಿದ್ದರು.

    ಬೆಳಗಾವಿ ಹಾಗೂ ಧಾರವಾಡ ಭಾಗದಿಂದ ಬೆಂಗಳೂರಿಗೆ ಡಿ.ಆರ್ ಪರೀಕ್ಷೆ ಬರೆಯಲು ಇದೇ ಟ್ರೈನ್ ನಲ್ಲಿ ಬರ್ತಾ ಇದ್ದ ಸಾವಿರಾರೂ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಬೆಂಗಳೂರು ತಲುಪಲಾಗದೇ ಪರೀಕ್ಷೆಯಿಂದ ವಂಚಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಈಗ ಉತ್ತರ ಕರ್ನಾಟಕ ಭಾಗದ ಸಾವಿರಾರೂ ಅಭ್ಯರ್ಥಿಗಳು ತಮ್ಮ ತಪ್ಪು ಇಲ್ಲದೆ ಡಿ.ಆರ್ ಪರೀಕ್ಷೆಯಿಂದ ವಂಚಿತರಾಗುವಂತಾಗಿದ್ದು, ಈ ಕೂಡಲೇ ಪರೀಕ್ಷೆ ಮುಂದೂಡಬೇಕು. ಇಲ್ಲವೇ ರಾಣಿ ಚನ್ನಮ್ಮ ಟ್ರೈನ್‍ಗೆ ಟಿಕೆಟ್ ತೆಗೆಸಿದ್ದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಮರು ಅವಕಾಶ ಕಲ್ಪಿಸಿಕೊಡಬೇಕು ಅನ್ನೋ ಆಗ್ರಹಗಳು ಕೇಳಿ ಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಹೆಚ್ಚುತ್ತಿದೆ ಬಿಬಿಎಂಪಿ ಬೇಡಿಕೆ ಪಟ್ಟಿ: ದುಬಾರಿ ಕಾರ್ ಆಯ್ತು, ಈಗ ನಿವಾಸ ಬೇಕಂತೆ

    ಹೆಚ್ಚುತ್ತಿದೆ ಬಿಬಿಎಂಪಿ ಬೇಡಿಕೆ ಪಟ್ಟಿ: ದುಬಾರಿ ಕಾರ್ ಆಯ್ತು, ಈಗ ನಿವಾಸ ಬೇಕಂತೆ

    ಬೆಂಗಳೂರು: ದುಬಾರಿ ಕಾರು ಬೇಡಿಕೆ ಬೆನ್ನಲ್ಲೇ ಸಾರ್ವಜನಿಕರನ್ನು ಭೇಟಿ ಮಾಡಲು ಪ್ರತ್ಯೇಕ ನಿವಾಸ ಬೇಕು ಅಂತಾ ಬಿಬಿಎಂಪಿ ಅಧ್ಯಕ್ಷರು ಬೇಡಿಕೆ ಇಟ್ಟಿದ್ದಾರೆ.

    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದುಂದುವೆಚ್ಚ ನಿಯಂತ್ರಣ ಮಾಡುವುದಾಗಿ ಹೇಳಿದ್ದರು. ಆದರೆ ಇತ್ತ ಬಿಬಿಎಂಪಿ ಅಧ್ಯಕ್ಷರು ತಮ್ಮ ದುಬಾರಿ ವೆಚ್ಚದ ಪಟ್ಟಿಯನ್ನು ಹೆಚ್ಚಿಸುತ್ತಿದ್ದಾರೆ. ಸಚಿವರಿಗೆ ಸಿಗುವ ಸವಲತ್ತುಗಳು ನಮಗೂ ಸಿಗಬೇಕೆಂದು ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರು ನಿನ್ನೆಯಷ್ಟೇ ದುಬಾರಿ ವೆಚ್ಚದ ಕಾರಿನ ಬೇಡಿಕೆ ಇಟ್ಟಿದ್ದರು. ಈಗ ಮೇಯರ್, ಉಪ ಮೇಯರ್, ಕಮೀಷನರ್‍ಗಳಿಗೆ ನಿವಾಸಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತಾಗಿ ಬಿಬಿಎಂಪಿ ಮೇಯರ್ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಈಗಾಗಲೇ ಬಿಬಿಎಂಪಿ ನಿವಾಸಕ್ಕೆ ಜಾಗ ಸಿದ್ಧವಾಗಿದೆ. ಇದನ್ನು ಓದಿ: 3 ಕೋಟಿ ರೂ. ವೆಚ್ಚದಲ್ಲಿ 12 ಕಾರು ಖರೀದಿಗೆ ಮುಂದಾದ ಬಿಬಿಎಂಪಿ!

    ಮೇಯರ್ ಹಾಗೂ ಉಪ ಮೇಯರ್ ಬೆಂಗಳೂರು ನಿವಾಸಿಗಳು ಪ್ರತಿ ವರ್ಷವೂ ಬದಲಾಗುತ್ತಾರೆ. ಹೀಗಾಗಿ ನಿವಾಸವನ್ನು ನೀಡಿದರೆ ಸರ್ಕಾರದ ಮೇಲೆ ಲಕ್ಷಾಂತರ ರೂಪಾಯಿ ಹೊರೆ ಬೀಳುತ್ತದೆ. ಹೀಗಾಗಿ ಪ್ರತ್ಯೇಕ ನಿವಾಸದ ಅವಶ್ಯಕತೆ ಇಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅಣ್ಣ ಬಂಡೀಪುರದಲ್ಲಿ ಫ್ಲೈಓವರ್ ಬಗ್ಗೆ ಮಾತನಾಡಿದ್ರೆ, ತಮ್ಮ ಇಲ್ಲ ಅಂದ್ರು!

    ಅಣ್ಣ ಬಂಡೀಪುರದಲ್ಲಿ ಫ್ಲೈಓವರ್ ಬಗ್ಗೆ ಮಾತನಾಡಿದ್ರೆ, ತಮ್ಮ ಇಲ್ಲ ಅಂದ್ರು!

    ಬೆಂಗಳೂರು: ಬಂಡೀಪುರದಲ್ಲಿ ಫ್ಲೈ ಓವರ್ ರಸ್ತೆ ನಿರ್ಮಾಣದ ಕುರಿತು ಚಿಂತನೆ ನಡೆದಿದೆ ಎಂದು ಸಚಿವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅದು ಸುಳ್ಳು, ಸುಮ್ಮನೆ ಈ ಕುರಿತು ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

    ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಬಂಡೀಪುರದ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ಆದರೂ ಏಕೆ ಫ್ಲೈ ಓವರ್ ರಸ್ತೆ ನಿರ್ಮಾಣದ ಕುರಿತು ಸುಮ್ಮನೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ರಾತ್ರಿ ವೇಳೆ ರಸ್ತೆ ಸಂಚಾರ ಪುನರಾರಂಭಕ್ಕೆ ಅವಕಾಶ ನೀಡುವುದು ಹಾಗೂ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಫ್ಲೈ ಓವರ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ ಎನ್ನುವುದು ಸುಳ್ಳು ಮಾಹಿತಿ ಎಂದು ಹೇಳಿದರು.

    ರೇವಣ್ಣ ಹೇಳಿದ್ದು ಏನು?
    ಬಂಡೀಪುರ ರಕ್ಷಿತಾರಣ್ಯದಲ್ಲಿ ರಾತ್ರಿ ವಾಹನ ಸಂಚಾರ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಗುರುವಾರ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದ ಸಚಿವ ರೇವಣ್ಣ, ಈ ಕುರಿತು ಕೇರಳ ಸರ್ಕಾರ ಸುಪ್ರೀಂಗೆ ಹೋಗಿದೆ. ಅದನ್ನು ಗಮನದಲ್ಲಿಟ್ಟು ಇದರ ಕುರಿತು ಸೂಕ್ತವಾಗಿ ಕ್ರಮ ಕೈಗೊಳ್ಳುತ್ತೇವೆ. ಬಂಡೀಪುರ ಅರಣ್ಯದಲ್ಲಿಯೂ ಕೆಲವೆಡೆಗಳಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಕಾಡು ಪ್ರಾಣಿಗಳ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಕಾಮಗಾರಿ ಮಾಡುವ ಕುರಿತು ಚರ್ಚಿಸಲಾಗುವುದು. ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರ ಬಗ್ಗೆ ಇನ್ನು ನಿರ್ಧಾರವಾಗಿಲ್ಲ. ಮುಖ್ಯ ಕಾರ್ಯದರ್ಶಿ ಜೊತೆ ಈ ಕುರಿತು ಸಭೆಯ ನಂತರ ಓಡಾಟದ ಬಗ್ಗೆ ತೀರ್ಮಾನ ಮಾಡಲಾಗುವುದು ಅಂತ ಅವರು ತಿಳಿಸಿದ್ದರು. ಇದನ್ನು ಓದಿ: ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅನುಮತಿ- ಕೇರಳದ ಲಾಬಿಗೆ ಮಣಿದ್ರಾ ಸಿಎಂ? ಏನಿದು ವಿವಾದ?

    ಬಂಡೀಪುರದಲ್ಲಿ ರಾತ್ರಿ 9 ಗಂಟೆಗೆ 6 ವಾಹನ ಸಂಚಾರ ನಿಷೇಧಿಸಲಾಗಿದ್ದು, ಜುಲೈ 18ರಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ನಡೆದ ಸಭೆಯ ವೇಳೆ ಸಿಎಂ ಹಾಗೂ ಸಚಿವ ರೇವಣ್ಣ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಮತ್ತು ಸಾರಿಗೆ ಕಾರ್ಯದರ್ಶಿ ವೈ.ಎಸ್ ಮಲ್ಲಿಕ್ ಜು.21 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪ್ರಕರಣ ಈಗ ಸುಪ್ರೀಂಕೋರ್ಟ್‍ನಲ್ಲಿದ್ದರೂ ಅನುಮತಿ ನೀಡಿರುವುದು ಎಷ್ಟು ಸರಿ ಎಂದು ವನ್ಯಜೀವಿ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

  • ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಭಿನ್ನಮತ

    ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಭಿನ್ನಮತ

    ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿದ್ದು, ಇಲ್ಲಿಯೂ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ದೋಸ್ತಿಯನ್ನು ಮುಂದುವರಿಸುವ ತಂತ್ರ ಹೊಂದಿವೆ. ಆದರೆ ಕೆಲ ನಾಯಕರಿಂದ ಭಿನ್ನಮತ ಕೇಳಿ ಬಂದಿದೆ.

    ರಾಜ್ಯ ವಿಧಾನಸಭೆ ಬಳಿಕ ಸಮ್ಮಿಶ್ರ ಸರ್ಕಾರದ ಹಾದಿ ಹಿಡಿದ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿಗಳಾಗಿದ್ದು, ಇದೇ ಹುಮ್ಮಸ್ಸಿನಲ್ಲಿ 2019ರ ಲೋಕಸಭಾ ಚುನಾವಣೆ ಎದುರಿಸುವ ನಿರ್ಧಾರ ಕೂಡಾ ಕೈಗೊಂಡಿವೆ. ಆದರೆ ಈಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಭಿನ್ನಮತ ಪರಿಣಾಮ ಬೀರಲಿದೆ.

    ನಗರ ಸ್ಥಳೀಯ ಸಂಸ್ಥೆಗೆ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಕೆಲ ಸದಸ್ಯರು ಜಂಟಿ ಆಗುವ ಬಯಕೆ ಹೊಂದಿದ್ದರೆ, ಮತ್ತೆ ಕೆಲವರು ಅಲ್ಲಲ್ಲಿ ಒಂಟಿ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಗುರುವಾರ ಸಂಪುಟ ಸಭೆ ಬಳಿಕ ಒಂದು ಗಂಟೆಗೂ ಹೆಚ್ಚು ಕಾಲ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಂಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಸಚಿವರು ಸೇರಿ ಚರ್ಚೆ ನಡೆಸಿದ್ದರು.

    ಚರ್ಚೆಯಲ್ಲಿ ಬಹುತೇಕ ಕಾಂಗ್ರೆಸ್ ನಾಯಕರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಬೇಕಿಲ್ಲ. ಆದರೆ ಜೆಡಿಎಸ್ ನಾಯಕರಿಂದ ಮೈತ್ರಿಗೆ ಆಸಕ್ತಿ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕ ಸದ್ಯದ ಪರಿಸ್ಥಿತಿ ಹೇಗಿದೆಯಂದರೆ ಬಾಯಿ ಬಿಟ್ಟು ಹೇಳುವಂತಿಲ್ಲ. ಮೌನವಾಗಿ ಇರುವಂತೆಯೂ ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆಯೇ ನೇರ ಪೈಪೋಟಿ ಇದೆ. ಈ ಭಾಗದಲ್ಲಿ ಮೈತ್ರಿ ಮಾಡಿಕೊಂಡರೆ ಪಕ್ಷಕ್ಕೆ ನಷ್ಟವಿಲ್ಲ ಎನ್ನುವುದು ಜೆಡಿಎಸ್ ಲೆಕ್ಕಾಚಾರ. ಆದರೆ ತಮ್ಮ ಹಿಡಿತವಿರುವ ಮತಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟರೆ ಪಕ್ಷದ ಅಸ್ಥಿತ್ವದ ಕಥೆ ಏನು ಎನ್ನುವ ಪ್ರಶ್ನೆ ಕಾಂಗ್ರೆಸ್ಸಿಗರಲ್ಲಿ ಕಾಡುತ್ತಿದೆ. ಅಷ್ಟೇ ಅಲ್ಲದೆ ಬೇರೆ ಮತಕ್ಷೇತ್ರದಲ್ಲಿ ದೋಸ್ತಿ ಬೆಳೆಸಿದರೆ ಪಕ್ಷಕ್ಕೆ ಲಾಭವಿಲ್ಲ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ. ಇದರ ಮಧ್ಯೆ ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡ ಅವರು ಹೈಕಮಾಂಡ್ ಒಪ್ಪಿಸುವ ಕೆಲಸ ಮಾಡುತ್ತಾರೆಯೇ ಎಂಬ ಆತಂಕ ಕೈಪಡೆಗೆ ಎದುರಾಗಿದೆ.

  • 3 ಕೋಟಿ ರೂ. ವೆಚ್ಚದಲ್ಲಿ 12 ಕಾರು ಖರೀದಿಗೆ ಮುಂದಾದ ಬಿಬಿಎಂಪಿ!

    3 ಕೋಟಿ ರೂ. ವೆಚ್ಚದಲ್ಲಿ 12 ಕಾರು ಖರೀದಿಗೆ ಮುಂದಾದ ಬಿಬಿಎಂಪಿ!

    ಬೆಂಗಳೂರು: ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತೇನೆ ಅಂತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಹಿಂದೆ ಹೇಳಿದ್ದರು. ಆದರೆ ಇದನ್ನು ಲೆಕ್ಕಿಸದ ಬಿಬಿಎಂಪಿ ದುಬಾರಿ ಮೌಲ್ಯದ ಹೊಸ ಕಾರು ಖರೀದಿ ಮಾಡಲು ಮುಂದಾಗಿದೆ.

    ಸಚಿವರಂತೆ ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರಿಗೂ ಸರ್ಕಾರಿ ಕಾರ್ ಕ್ರೇಜ್ ಬಂದಿದ್ದು, ಲಕ್ಷುರಿ (ಐಶಾರಾಮಿ) ಕಾರು ಬೇಕೆಂದು ಪಟ್ಟು ಹಿಡಿದಿದ್ದಾರೆ. ಅಧ್ಯಕ್ಷರು ಈಗಾಗಲೇ 12 ಲಕ್ಷ ರೂ. ಮೌಲ್ಯದ ಕಾರಿನಲ್ಲಿ ಓಡಾಡುತ್ತಿದ್ದಾರೆ. ಆದರೆ ಈಗ 12 ಹೊಸ ಕಾರುಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

    ಕಾರಿನ ಮೌಲ್ಯ ಎಷ್ಟು ಗೊತ್ತೆ:
    ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ 25 ಲಕ್ಷ ರೂ. 9 ಇನ್ನೋವಾ ಡೀಸೆಲ್ ಕಾರು ಹಾಗೂ ಅಧಿಕಾರಿಗಳಿಗೆ 12 ಲಕ್ಷ ರೂ. ಮೌಲ್ಯದ 3 ಸಿಯಾಜ್ ಪೆಟ್ರೋಲ್ ಕಾರು. ಎಲ್ಲ 12 ಕಾರುಗಳಿಗೆ 3 ಕೋಟಿ ರೂ. ವೆಚ್ಚ ಮಾಡಲು ಬಿಬಿಎಂಪಿ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆರ್ಥಿಕ ಮತ್ತು ತೆರಿಗೆ ಸ್ಥಾಯಿ ಸಮಿತಿ ಮುಂದೆ ಪ್ರಸ್ತಾವನೆ ಸಲ್ಲಿಸಿದೆ.

  • ಸಿಎಂ ಕುಮಾರಸ್ವಾಮಿಗೆ ಕಾಂಗ್ರೆಸ್ಸಿನಿಂದ ನಿತ್ಯವೂ ಕಿರುಕುಳ: ಸಿ.ಟಿ.ರವಿ

    ಸಿಎಂ ಕುಮಾರಸ್ವಾಮಿಗೆ ಕಾಂಗ್ರೆಸ್ಸಿನಿಂದ ನಿತ್ಯವೂ ಕಿರುಕುಳ: ಸಿ.ಟಿ.ರವಿ

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಕಾಂಗ್ರೆಸ್ಸಿನಿಂದ ನಿತ್ಯವೂ ಕಿರುಕುಳ ಆಗುತ್ತಿದ್ದು, ಅದನ್ನು ತಡೆದುಕೊಳ್ಳಲು ಅವರಿಗೆ ಆಗುತ್ತಿಲ್ಲ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ಸರ್ಕಾರ ಅಧಿಕಾರ ಪೂರೈಸುವ ಬಗ್ಗೆ ಸ್ವತಃ ಕುಮಾರಸ್ವಾಮಿ ಅವರಿಗೆ ವಿಶ್ವಾಸವಿಲ್ಲದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಯಾವುದೇ ಸಮಯದಲ್ಲಿ ಸರ್ಕಾರ ಬಿದ್ದು ಹೋಗುವ ಸಾಧ್ಯತೆ ಇದೆ ಎಂದು ಕಾಲೆಳೆದ ಅವರು, ವಿಧಾನಸಭೆ ಚುನಾವಣೆಯಲ್ಲಿ ತಮಗೆ ಮತ ಹಾಕಲಿಲ್ಲ ಅಂತಾ ಸಿಎಂ ಈಗ ರಾಜ್ಯದ ಜನರ ಮೇಲೆ ಕೋಪ ತೋರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

    ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅನುಭವಿ ಹಾಗೂ ಮುತ್ಸದ್ದಿ ರಾಜಕಾರಣಿ. ಅವರು ಎಲ್ಲವನ್ನೂ ಅರಿತು ಮಾತನಾಡುತ್ತಾರೆ ಎಂದ ಶಾಸಕರು, ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಾಂಗ್ರೆಸ್ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಹೀಗಾಗಿ ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.

    ಮೌನ ಪ್ರತಿಭಟನೆ:
    ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಅತಿವೃಷ್ಠಿಯಿಂದಾಗಿ ಬೆಳೆ ಹಾನಿಯಾಗಿದೆ. ಇದಕ್ಕೆ ಸೂಕ್ತ ಪರಿಹಾರ ಘೋಷಿಸಬೇಕು ಅಂತಾ ಒತ್ತಾಯಿಸಿ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂಭಾಗದಲ್ಲಿ ಶಾಸಕ ಸಿ.ಟಿ.ರವಿ ಹಾಗೂ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಸೇರಿ ಮೌನ ಪ್ರತಿಭಟನೆ ನಡೆಸಿದರು.

    ಚಿಕ್ಕಮಗಳೂರಿನಲ್ಲಿ ಕೆಲವೊಮ್ಮೆ ಒಂದೇ ದಿನಕ್ಕೆ 14 ರಿಂದ 15 ಇಂಚು ಮಳೆಯಾಗಿದ್ದು, ಜಿಲ್ಲೆಯಲ್ಲಿ ಹರಿದು ಹೋಗುವ ನದಿಗಳಿಗೆ ನಿರ್ಮಾಣವಾದ ಡ್ಯಾಂಗಳು ತುಂಬಿವೆ. ಆದರೆ ಮಳೆಯಿಂದಾಗಿ ಕಾಫಿ, ಕರಿಮೆಣಸು ಸೇರಿದಂತೆ ಅನೇಕ ಬೆಳೆಗಳಿಗೆ ಹಾನಿಯಾಗಿದೆ. ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶ ಎಂದು ಘೋಷಣೆ ಮಾಡಬೇಕು ಹಾಗೂ ಪರಿಹಾರ ನೀಡಬೇಕು ಎಂದು ಸಿ.ಟಿ.ರವಿ ಒತ್ತಾಯಿಸಿದರು.

    ಇಂದು ಸಾವಿನ ಮನೆಗೆ ಹೋದರೂ ರಸ್ತೆ ಹಾಳಾಗಿರುವ ಮಾತು ಕೇಳಿ ಬರುತ್ತಿದೆ. ಮಳೆಯಿಂದ ಹಾನಿಯಾದ ರಸ್ತೆ ಹಾಗೂ ಮನೆಗಳ ದುರಸ್ತಿಗೆ ಗ್ರಾಮ ಪಂಚಾಯತ್‍ಗಳಿಗೆ ವಿಶೇಷ ಪ್ಯಾಕೇಜ್ ನೀಡುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.