Tag: ಎಚ್ ಡಿ ಕುಮಾರಸ್ವಾಮಿ

  • ಸಿಎಂ ಕುಮಾರಸ್ವಾಮಿಯವರ ಕರ್ಮಭೂಮಿಯಲ್ಲೇ ಮರಳು ದಂಧೆ!

    ಸಿಎಂ ಕುಮಾರಸ್ವಾಮಿಯವರ ಕರ್ಮಭೂಮಿಯಲ್ಲೇ ಮರಳು ದಂಧೆ!

    ರಾಮನಗರ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರ ಕರ್ಮಭೂಮಿಯಲ್ಲೇ ಮರಳು ದಂಧೆಕೋರರ ಕರ್ಮಕಾಂಡ ಎಗ್ಗಿಲ್ಲದೇ ನಡೆಯುತ್ತಿದ್ದು, ನದಿಪಾತ್ರಗಳಲ್ಲೇ ಅಕ್ರಮ ಮರಳು ಫಿಲ್ಟರ್ ಅಡ್ಡೆ ಮೂಲಕ ಮರಳುಗಾರಿಕೆ ನಡೆಸುತ್ತಿದ್ದಾರೆ.

    ಮಳೆಯಿಂದ ಅರ್ಕಾವತಿ ನದಿ ಪಾತ್ರದಲ್ಲಿಯೇ ನೀರು ಹರಿಯುತ್ತಿದ್ದಂತೆ ದಂಧೆಕೋರರು ಬಾಲ ಬಿಚ್ಚಿದ್ದು, ಅರ್ಕಾವತಿ ನದಿ ಪಾತ್ರದಲ್ಲಿ ಅಡ್ಡೆಗಳನ್ನು ನಿರ್ಮಿಸಿಕೊಂಡು ಮರಳು ಫಿಲ್ಟರ್ ಮಾಡಲಾಗುತ್ತಿದೆ. ಆದರೆ ಅಧಿಕಾರಿಗಳು ರಾಜರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಕ್ಯಾರೇ ಎನ್ನುತ್ತಿಲ್ಲ. ನದಿಯಲ್ಲಿ ಮರಳುಗಾರಿಕೆ ನಡೆಸುವುದರ ಜೊತೆಗೆ ಬೇರೊಂದು ಸ್ಥಳಗಳಿಂದ ಮಣ್ಣು ಮಿಶ್ರಿತ ಮರಳನ್ನು ತಂದು ಅರ್ಕಾವತಿ ನದಿಯಲ್ಲಿ ದಂಧೆಕೋರರು ಫಿಲ್ಟರ್ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ರವಿ ಹೇಳಿದ್ದಾರೆ.

    ಅಕ್ರಮ ಮರಳುಗಾರಿಕೆ ತಡೆಗಟ್ಟುವ ವಿಷಯದಲ್ಲಿ ಸಂಬಂಧಿಸಿದ ಇಲಾಖೆಗಳು ಜಂಟಿ ಕಾರ್ಯಾಚರಣೆ ನಡೆಸೋದನ್ನೇ ಕೈಬಿಟ್ಟಿದೆ. ಹೊಸ ಜಿಲ್ಲಾಧಿಕಾರಿ ಬಂದರೂ ಮರಳುಗಾರಿಕೆಗೆ ತಡೆ ಹಾಕುತ್ತಾರೆ ಅಂದರೆ ಕಚೇರಿ ಬಿಟ್ಟು ಹೊರಗೆ ಬರುವುದೇ ಇಲ್ಲ. ಜಿಲ್ಲಾಧಿಕಾರಿ ಕಚೇರಿಯಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿ ಮರಳುಗಾರಿಕೆ ನಡೆಯುತ್ತಿದ್ದರೂ ತಡೆಗಟ್ಟುವ ಕೆಲಸ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿ ಎಲ್ಲಿಯೂ ಚೆಕ್‍ಪೋಸ್ಟ್ ಗಳಾಗಲಿ, ತಪಾಸಣೆಯಾಗಲಿ ನಡೆಯುತ್ತಿಲ್ಲ. ಅಧಿಕಾರಿಗಳಂತೂ ತಾವಾಯ್ತು, ತಮ್ಮ ಕಚೇರಿಯಾಯ್ತು ಎಂದು ತಿರುಗಾಡುತ್ತಾ ಇರುವುದು ಸ್ಥಳೀಯರ ಕೆಂಗಣ್ಣಿಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾನು ಮತ್ತೆ ಸಿಎಂ ಆಗ್ತೀನಿ- ಕಾಂಗ್ರೆಸ್ಸಿನಲ್ಲಿ ಮತ್ತೆ ಬಣ ರಾಜಕೀಯ: ಯಾರು ಏನು ಹೇಳಿದ್ರು?

    ನಾನು ಮತ್ತೆ ಸಿಎಂ ಆಗ್ತೀನಿ- ಕಾಂಗ್ರೆಸ್ಸಿನಲ್ಲಿ ಮತ್ತೆ ಬಣ ರಾಜಕೀಯ: ಯಾರು ಏನು ಹೇಳಿದ್ರು?

    ಬೆಂಗಳೂರು: ಕುಮಾರಸ್ವಾಮಿ ಸರ್ಕಾರ 100 ದಿನ ಪೂರೈಸಿದ ಬೆನ್ನಲ್ಲೆ ಕೆಲ ಕೈ ಶಾಸಕರು ಬೆಂಬಲವನ್ನು ವಾಪಸ್ ಪಡೆಯುತ್ತಾರೆ ಎನ್ನುವ ವದಂತಿಯ ಹರಿದಾಡುತ್ತಿದ್ದು, ಈಗ ಮಾಜಿ ಸಿಎಂ ಸಿದ್ದರಾಮಯ್ಯ ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರು ಮಾಜಿ ಸಿಎಂ ಪರವಾಗಿ ಹೇಳಿಕೆ ನೀಡಿದರೆ ಡಿಕೆಶಿವಕುಮಾರ್ ಅವರು ಟಾಂಗ್ ನೀಡಿ ಪ್ರತಿಕ್ರಿಯಿಸಿದ್ದಾರೆ.

    ಯಾರು ಏನು ಹೇಳಿದ್ದಾರೆ?
    ದುಷ್ಟರು ಆರಂಭದ ಯುದ್ಧದಲ್ಲಿ ಗೆಲ್ಲಬಹುದು. ಆದರೆ ಅಂತಿಮ ಯುದ್ಧದಲ್ಲಿ ಅಲ್ಲ. ನೀವು ಜನನಾಯಕನಾಗಿರುವ ಕಾರಣ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದೀರಿ. ಬಂಡೆಕಲ್ಲಿನಂತೆ ನಾವು ನಿಮ್ಮ ಜೊತೆ ಇದ್ದೇವೆ ಎಂದು ಸುಧಾಕರ್ ಅವರು ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದಾರೆ.

    ಸಿದ್ದರಾಮಯ್ಯ ಅವರಿಗೆ ಅಧಿಕಾರ ಪಡೆಯಬೇಕು ಎನ್ನುವ ಆಸೆ ಇರಬಹುದು. ಆದರೆ ಎಲ್ಲದಕ್ಕೂ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ಸಮ್ಮಿಶ್ರ ಸರ್ಕಾರ ಬರಲು ಎಐಐಸಿ ಅಧ್ಯಕ್ಷ ರಾಹುಲ್ ಗಾಂಧಿ ಎಲ್ಲ ಮುಖಂಡರ ಜೊತೆ ಚರ್ಚಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿಯೇ 5 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು.

    ನೀವೇ ಸಿಎಂ ಸ್ಥಾನ ತೆಗೆದುಕೊಳ್ಳಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದರು. ಆದರೆ ಪ್ರಾದೇಶಿಕ ಪಕ್ಷವನ್ನು ಉಳಿಸಬೇಕಿದೆ. ಹೀಗಾಗಿ ನಿಮ್ಮವರೇ ಮುಖ್ಯಮಂತ್ರಿಯಾಗಲಿ ಅಂತಾ ನಾವು ಮಾತು ಕೊಟ್ಟಿದ್ದೇವು. ಈಗ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಗೊಂದಲ ಬೇಡ, ಅವರು ಕಾರ್ಯಕರ್ತರಿಗೆ ಧೈರ್ಯ ಹೇಳುವ ಕೆಲಸ ಮಾಡಿರಬಹುದು ಅಷ್ಟೇ ಎಂದು ಡಿಕೆಶಿ ಪ್ರತಿಕ್ರಿಯಿಸಿದರು.

    ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ, ನನಗೆ ಸಂತೋಷವಿದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಮುಖ ತಿರುಗಿಸಿ ಪ್ರತಿಕ್ರಿಯಿಸಿದ್ದಾರೆ.

    ಮಾಜಿ ಸಿಎಂ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಮಾಧ್ಯಮಗಳ ಪ್ರಶ್ನಿಸುತ್ತಿದ್ದಂತೆ ಸ್ಥಳದಿಂದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದರು.

    ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎನ್ನುವುದಕ್ಕೆ ನನ್ನ ಬೆಂಬಲವಿದೆ. ಆದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೆಳಗಿಳಿಸಿ ಅವರು ಸಿಎಂ ಆಗುವುದಿಲ್ಲ. ನಾನು ಮತ್ತು ಸಿದ್ದರಾಮಯ್ಯ 30 ವರ್ಷಗಳಿಂದ ಸ್ನೇಹಿತರು. ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅವರ ಹೇಳಿಕೆ ಬಗ್ಗೆ ಗೊಂದಲ ಮೂಡಿಸದೇ ಸಮ್ಮಿಶ್ರ ಸರ್ಕಾರ ನಡೆಸುವುದಕ್ಕೆ ಬಿಡಿ ಎಂದು ಮಾಧ್ಯಮಗಳ ಮೇಲೆಯೇ ಕಂದಾಯ ಸಚಿವ ಆರ್‍ವಿ. ದೇಶಪಾಂಡೆ ಗರಂ ಆದರು.

    ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯ ಯಾವ ಸಂದರ್ಭದಲ್ಲಿ ಹೇಳಿರುವರೋ ಗೊತ್ತಿಲ್ಲ. ಸಿಎಂ ಸ್ಥಾನವನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಗಾಳಿ ಸುದ್ದಿ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದರು.

    ಸರ್ಕಾರ ಬರುವುದು, ಹೋಗುವುದು ನಿರಂತರ ಪ್ರಕ್ರಿಯೆ. ಹೀಗಾಗಿ ಮುಂದೆ ಮತ್ತೆ ಆಗುತ್ತೇನೆ ಅಂತಾ ಹೇಳಿರಬಹುದು. ಆದರೆ ಅವರ ಹೇಳಿಕೆಯಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಅವರು ಮುಂದೆ ಸಿಎಂ ಆಗಲೂಬಹುದು ಎಂದು ಅರಣ್ಯ ಸಚಿವ ಆರ್.ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉತ್ತರ ಕರ್ನಾಟಕದ ಅನ್ಯಾಯದ ಬಗ್ಗೆ ಮತ್ತೆ ಧ್ವನಿ ಎತ್ತಿದ ಬಿ ಶ್ರೀರಾಮುಲು

    ಉತ್ತರ ಕರ್ನಾಟಕದ ಅನ್ಯಾಯದ ಬಗ್ಗೆ ಮತ್ತೆ ಧ್ವನಿ ಎತ್ತಿದ ಬಿ ಶ್ರೀರಾಮುಲು

    ಗದಗ: ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಬಂದಿದೆ. ಮುಂದೆಯೂ ಅನ್ಯಾಯ ಆಗಲಿದೆ. ಮುಖ್ಯಮಂತ್ರಿಗಳು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಿ ಶ್ರೀರಾಮುಲು ಮತ್ತೊಮ್ಮೆ ಆರೋಪಿಸಿದ್ದಾರೆ.

    ಕೊಡಗು ನೆರೆ ಹಾವಳಿ ಪ್ರಕರಣ ಹಿನ್ನಲೆ ಕುರಿತು ಮಾತನಾಡಿದ ಅವರು ಸರ್ಕಾರ ಮುಂಜಾಗ್ರತ ಕ್ರಮವನ್ನು ಕೈಗೊಳ್ಳಲಿಲ್ಲ. ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಜನರ ಪ್ರಾಣಹಾನಿಯನ್ನು ತಡೆಯಬಹುದಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯ ದಿಂದ ಪ್ರಾಣ ಹಾನಿ, ಪ್ರಾಣಿಗಳ ಹಾನಿ, ಆಸ್ತಿ-ಪಾಸ್ತಿ ಹಾನಿ ಸಂಭವಿಸಿದೆ. ಇಷ್ಟೆಲ್ಲಾ ಘಟನೆ ನಡೆದರೂ ಸಿಎಂ ತಡವಾಗಿ ಭೇಟಿ ನೀಡಿರುವುದು ದುರದೃಷ್ಟಕರ ಎಂದು ವಾಗ್ದಾಳಿ ನಡೆಸಿದರು.

    ಸಚಿವ ಎಚ್.ಡಿ ರೇವಣ್ಣ ಬಿಸ್ಕೆಟ್ ಎಸೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾಜಿ ಪ್ರಧಾನಿ ಮಕ್ಕಳಾದ ರೇವಣ್ಣಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಇರಬೇಕಿತ್ತು. ಸರ್ಕಾರ ಮತ್ತು ಸಚಿವ ಸ್ಥಾನ ಅಹಂಕಾರ ಅವರಲ್ಲಿ ತುಂಬಿಕೊಂಡಿದೆ. ಇದು ಅಧಿಕಾರ ಅಹಂ ಬಹಳ ದಿನ ಉಳಿಯುವುದಿಲ್ಲ. ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಸೂಕ್ತ ಅನುದಾನ ಸಿಗಲಿದ್ದು, ಪ್ರಧಾನಿಗಳು ಕೇರಳ ಹಾಗೂ ಕರ್ನಾಟಕಕ್ಕೆ ಸೂಕ್ತ ಪರಿಹಾರ ನೀಡುತ್ತಾರೆ ಎಂದರು.

    ಸರ್ಕಾರ ಮನಸ್ಸು ಮಾಡಿದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬಹುದು. ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಮನ್ನಾ ಬಗ್ಗೆ ಕುಮಾರಸ್ವಾಮಿ ಅಧಿಕೃತ ಆದೇಶ ಹೊರಡಿಸಲಿ. ರೈತರ ಸಾಲಮನ್ನಾ ವಿಷಯದಲ್ಲಿ ನಾನು ರಾಜಕೀಯ ಮಾಡುವುದಿಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಡಿಕೆಗಿಂತ ಜಾಸ್ತಿ ಮಳೆ, ಕೊಡಗಿಗೆ ಬರಲಿದ್ದಾರೆ ಬಿಬಿಎಂಪಿ ಅಧಿಕಾರಿಗಳು

    ವಾಡಿಕೆಗಿಂತ ಜಾಸ್ತಿ ಮಳೆ, ಕೊಡಗಿಗೆ ಬರಲಿದ್ದಾರೆ ಬಿಬಿಎಂಪಿ ಅಧಿಕಾರಿಗಳು

    ಮಡಿಕೇರಿ: ವಾಡಿಕೆಗಿಂತ ಶೇಕಡಾ 73 ರಷ್ಟು ಮಳೆಯಾಗಿದೆ. ಪ್ರವಾಹ ಸ್ಥಳಗಳಿಂದ ಈಗಾಗಲೇ 3,120 ಜನರನ್ನು ರಕ್ಷಿಸಿ ತರಲಾಗಿದ್ದು, ಇದಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    ವೈಮಾನಿಕ ಸಮೀಕ್ಷೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯನ್ನು ಲೆಕ್ಕ ಹಾಕಲು ಹೆಚ್ಚು ದಿನಗಳು ಬೇಕಾಗುತ್ತದೆ. ಅಲ್ಲಲ್ಲಿ ಗುಡ್ಡ ಕುಸಿತವಾಗಿದೆ, ರಸ್ತೆಗಳು ಬಿರುಕುಬಿಟ್ಟಿವೆ. ಹಿಂದೆಂದು ಕಾಣದ ಅನಾಹುತಗಳು ಆಗುತ್ತಿವೆ. ಇತ್ತ ಸಂತ್ರಸ್ತರ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದರು.

    ಇಂತಹ ಸಂದರ್ಭದಲ್ಲಿ ಕಳ್ಳಾಟ ಆಡುವ ಅಧಿಕಾರಿಗಳ ಅಮಾನತು ಮಾಡಿ, ಸೂಕ್ತ ವ್ಯವಸ್ಥೆ ಮಾಡಲು ಬಿಬಿಎಂಪಿ ಅಧಿಕಾರಿಗಳನ್ನು ಮಡಿಕೇರಿಗೆ ಕರೆಸಿಕೊಳ್ಳಲಾಗುತ್ತದೆ. ಆದರೆ ಕೆಲವರು ರಕ್ಷಣಾ ಕಾರ್ಯನಿರತರ ಮೇಲೆ ಕೆಲವರು ರಾಜಕೀಯ ಪ್ರದರ್ಶಿಸುತ್ತಿದ್ದಾರೆ. ಇದು ಒಳ್ಳೆಯದಲ್ಲ, ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯ ಮೇಲೆ ಒತ್ತಡ ತರುವ ಕೆಲಸ ಮಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದರು.

    ಸಂತ್ರಸ್ತರಿಗೆ ಸರ್ಕಾರವು ಅಗತ್ಯ ಅನುಕೂಲಗಳನ್ನು ಮಾಡಿಕೊಡುತ್ತಿದೆ. ಮೊಬೈಲ್ ಶೌಚಾಲಯ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಒದಗಿಸುತ್ತಿದ್ದಾರೆ. ಕೆಲವು ಅಧಿಕಾರಿಗಳು ಜೀವನದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ಕೆಲವರು ಅವರಿಗೆ ಬೆರಳು ಮಾಡಿ ತೋರಿಸುತ್ತಿದ್ದು, ಸಣ್ಣತನ ಮೆರೆಯುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದರು.


    ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ಕಷ್ಟವಾಗುತ್ತಿದೆ. 40 ಪರಿಹಾರ ಕೇಂದ್ರ ಕೇಂದ್ರಗಳು ವ್ಯವಸ್ಥೆ ಮಾಡಲಾಗಿದ್ದು, ಕೆಲವರು ಪರಿಹಾರ ಕೇಂದ್ರಗಳಲ್ಲಿ ಇರಲು ಇಷ್ಟ ಪಡುತ್ತಿಲ್ಲ. ಹೀಗಾಗಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ. ಮಳೆ ಆರ್ಭಟ ನಿಂತ ತಕ್ಷಣವೇ ಸರ್ಕಾರದ ಭೂಮಿ ಗುರುತು ಮಾಡಿ ಶೆಡ್ ನಿರ್ಮಾಣ, ರಸ್ತೆ ನಿರ್ಮಾಣಕ್ಕೆ ಮುಂದಾಗಲಿದೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಳೆಯೂ ಸಿಎಂ ಕೊಡಗು ಪ್ರವಾಸ ಮುಂದುವರಿಕೆ – ಸಂತ್ರಸ್ತರಿಗೆ ಪರಿಹಾರ ಘೋಷಣೆ

    ನಾಳೆಯೂ ಸಿಎಂ ಕೊಡಗು ಪ್ರವಾಸ ಮುಂದುವರಿಕೆ – ಸಂತ್ರಸ್ತರಿಗೆ ಪರಿಹಾರ ಘೋಷಣೆ

    ಮಡಿಕೇರಿ: ಮಡಿಕೇರಿ ಹಾಗೂ ರಾಜ್ಯದಲ್ಲಿ ಮಳೆಬಾಧಿತ ಪ್ರದೇಶಗಳ ಶನಿವಾರ ಭೇಟಿ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಳೆಯೂ ಪ್ರವಾಸವನ್ನು ಮುಂದುವರಿಸಿದ್ದಾರೆ. ಕೊಡಗಿಗೆ ನೆರವು ನೀಡುವಲ್ಲಿ ರಾಜ್ಯದ ಜನತೆ ಮುಂದಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಸಿಎಂ ಕುಮಾರಸ್ವಾಮಿ ಆಗಸ್ಟ್ 19 ರಂದು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಪ್ರವಾಸಕ್ಕೆ ನಿರ್ಧರಿಸಿದ್ದರು. ಆದರೆ ಅದನ್ನು ರದ್ದು ಪಡಿಸಿ ಕೊಡಗು ಜಿಲ್ಲೆಯ ಪ್ರವಾಸ ಮುಂದುವರೆಸಲಿದ್ದಾರೆ. ವೈಮಾನಿಕ ಸಮೀಕ್ಷೆ ನಡೆಸಿದ ನಂತರ ರಸ್ತೆ ಮೂಲಕ ಮಡಿಕೇರಿಗೆ ತೆರಳಿದ ಕುಮಾರಸ್ವಾಮಿ, ಅಲ್ಲಿನ ಗಂಜಿ ಕೇಂದ್ರವೊಂದಕ್ಕೆ ತೆರಳಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು. ಮಡಿಕೇರಿಯ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿದರು. ಭೂಕುಸಿತದಿಂದ ಸಿಲುಕಿಕೊಂಡಿರುವ ಸುಮಾರು 60 ಜನರನ್ನು ರಕ್ಷಿಸಲು ಸಿಎಂ ಪ್ರಯಾಣಿಸಿದ ಹೆಲಿಕಾಪ್ಟರ್ ಬಳಸಲಾಗುತ್ತಿದೆ. ಹೀಗಾಗಿ ಇಂದು ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿ, ನಾಳೆಯೂ ಕೊಡಗು ಜಿಲ್ಲೆಯ ಪ್ರವಾಸಕ್ಕೆ ನಿರ್ಧರಿಸಿದ್ದಾರೆ. ಜೊತೆಗೆ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.

    ಕೊಡಗಿನಲ್ಲಿ ದೊಡ್ಡ ಪ್ರಮಾಣದ ನಷ್ಟವಾಗಿದ್ದು, ವಾಸಿಸಲು ಅಸಾಧ್ಯವಾದ ಪರಿಸ್ಥಿತಿ ಎದುರಾಗಿದೆ. ಇತ್ತ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ವೈಮಾನಿಕ ಸಮೀಕ್ಷೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸುವುದಾಗಿ ಸಿಎಂ ಹೇಳಿದ್ದಾರೆ.

    ರಾಜ್ಯದ ವಿವಿಧೆಡೆ ಭಾರೀ ಪ್ರಮಾಣದ ಹಾನಿಯಾಗಿದ್ದು, ಉದಾರವಾಗಿ ನೆರವು ನೀಡುವಂತೆ ನಾಡಿನ ಜನರಿಗೆ ಮನವಿ ಮಾಡಿಕೊಂಡರು. ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಿಕೆ, ಕಾಫಿ, ಬೆಳೆ ನಷ್ಟವಾಗಿದೆ. ಬೆಳೆ ನಷ್ಟ ಮಾಹಿತಿಯ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇತ್ತ ಕಾಫಿ ಬೋರ್ಡ್ ಅಧಿಕಾರಿಗಳಿಗೂ ಸೂಚಿಸಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

    ಸಭೆಯ ಮುಖ್ಯಾಂಶಗಳು:
    ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಏಪ್ರಿಲ್‍ನಿಂದ ಇಲ್ಲಿವರೆಗೆ 153 ಮಂದಿ ಮೃತಪಟ್ಟಿದ್ದಾರೆ. 11,427 ಮನೆಗಳು ನಾಶವಾದರೆ, 700ಕ್ಕೂ ಹೆಚ್ಚು ಜಾನುವಾರು ಸಾವನ್ನಪ್ಪಿವೆ. ಕೊಡಗಿನಲ್ಲಿ 7 ಜನ ಮೃತಪ್ಪಿದ್ದಾರೆ ಹಾಗೂ 800ಕ್ಕೂ ಹೆಚ್ಚು ಮನೆ ನಾಶವಾಗಿವೆ. ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿ ಕುಮಾರಸ್ವಾಮಿ ಕೊಡಗು ಜಿಲ್ಲೆಯ ಅಭಿವೃದ್ಧಿಗೆ 100 ಕೋಟಿ ರೂ. ಪರಿಹಾರ ಘೋಷಣೆಯಾಗಿದ್ದು, ಇದರಲ್ಲಿ 30 ಕೋಟಿ ರೂ.ವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇನ್ನು ಮನೆ ಕಳೆದುಕೊಂಡವರಿಗೆ 2 ರಿಂದ 2.50 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಮಹಾಮಳೆಗೆ ತತ್ತರಿಸಿದ ಕೊಡಗು- ಶನಿವಾರ ಸಿಎಂ ಭೇಟಿ

    ಮಹಾಮಳೆಗೆ ತತ್ತರಿಸಿದ ಕೊಡಗು- ಶನಿವಾರ ಸಿಎಂ ಭೇಟಿ

    ಕೊಡಗು: ಮಹಾಮಳೆಗೆ ತತ್ತರಿಸಿರುವ ಕೊಡಗು ಹಾಗೂ ಕರಾವಳಿ ಭಾಗಗಳಿಗೆ ಶನಿವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟ ನೀಡಲಿದ್ದಾರೆ. ಈ ಸಂಬಂಧ ಶುಕ್ರವಾರ ರಾತ್ರಿ ಉಸ್ತುವಾರಿ ಸಚಿವರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಕುಮಾರಸ್ವಾಮಿ ಮಹತ್ವದ ಸಭೆ ನಡೆಸಿದ್ದಾರೆ.

    ಕುಮಾರಸ್ವಾಮಿ ಅವರು ರಕ್ಷಣಾ ಕಾರ್ಯ, ಅಗತ್ಯ ಕ್ರಮದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಪರಿಹಾರ ಕಾರ್ಯದ ಬಗ್ಗೆ ಖುದ್ದು ಪರಿಶೀಲನೆ ಮಾಡಲಿದ್ದಾರೆ. ಜೊತೆಗೆ ಭಾನುವಾರವೂ ಕುಮಾರಸ್ವಾಮಿ ನಂಜನಗೂಡು ಹಾಗೂ ಕಬಿನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

    ಮಳೆಯ ಆರ್ಭಟ ಮತ್ತಷ್ಟು ಹೆಚ್ಚಾಗಿದ್ದು, ಸಂತ್ರಸ್ತರಿಗೆ ಗಂಜಿ ಕೇಂದ್ರಗಳ ಮೂಲಕ ಆಶ್ರಯ ಒದಗಿಸಲಾಗುತ್ತಿದೆ. ಇತ್ತ ರಕ್ಷಣಾ ಪಡೆಯು ಹೆಲಿಕಾಪ್ಟರ್ ಮೂಲಕ ಮಹಿಳೆಯರು, ಮಕ್ಕಳು ಸೇರಿದಂತೆ ಮುಳುಗಡೆ ಆಗುತ್ತಿರುವ ಪ್ರದೇಶಗಳ ಜನರನ್ನು ರಕ್ಷಣೆ ಮಾಡುತ್ತಿದ್ದಾರೆ. ಇದನ್ನು ಓದಿ: ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಿ- ಏನು ಕೊಡಬಹುದು? ಯಾರನ್ನು ಸಂಪರ್ಕಿಸಬಹುದು? ಇಲ್ಲಿದೆ ವಿವರ

    ಕೊಡಗು ಜಿಲ್ಲೆಯ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ಆಶ್ರಯ ಹಾಗೂ ಆಹಾರ ಒದಗಿಸಲು ಕೊಡವ ಸಮುದಾಯವು ಮುಂದಾಗಿದೆ. ಸಂತ್ರಸ್ತರಿಗೆ ಹಾಸಿಗೆ, ಆಹಾರ ಧಾನ್ಯ ಹಾಗೂ ಅಗತ್ಯ ವಸ್ತುಗಳನ್ನು ಒದಗಿಸಲು ಸಹಾಯ ಮಾಡುವಂತೆ ಸಮುದಾಯದ ಮುಖಂಡರು ಮನವಿ ಮಾಡಿಕೊಂಡಿದ್ದಾರೆ. ‘ಡೊನೆಟ್ ಕೊಡಗು’ ಎನ್ನವ ಹೆಸರಿನಲ್ಲಿ ಪರಿಹಾರ ನಿಧಿ ಸಂಗ್ರಹಿಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏರ್ ಶೋ ಉಳಿಸಿಕೊಳ್ಳಲು ಅಖಾಡಕ್ಕೆ ಇಳಿದ ಎಚ್‍ಡಿಕೆ-ಮೋದಿಗೆ ಪತ್ರ

    ಏರ್ ಶೋ ಉಳಿಸಿಕೊಳ್ಳಲು ಅಖಾಡಕ್ಕೆ ಇಳಿದ ಎಚ್‍ಡಿಕೆ-ಮೋದಿಗೆ ಪತ್ರ

    ಬೆಂಗಳೂರು: ಬೆಂಗಳೂರಿನಿಂದ ಲಖ್ನೋಗೆ ಏರ್ ಶೋ ಸ್ಥಳಾಂತರ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಧ್ಯೆ ಸಂಘರ್ಷ ಏರ್ಪಟ್ಟಿದ್ದು, ಬೆಂಗಳೂರಿಗೆ ಆದರ್ಶಪ್ರಾಯವಾಗಿರೋ ಏರ್ ಶೋ ಉಳಿಸಲು ಇದೀಗ ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಖಾಡಕ್ಕೆ ಇಳಿಸಿದ್ದಾರೆ.

    ಕಳೆದ 12 ವರ್ಷಗಳಿಂದ ನಡೆಸುತ್ತಿರುವ ಏರ್ ಶೋವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು. ನೀವೇ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಬೆಂಗಳೂರಿನಲ್ಲಿಯೇ ಏರ್ ಶೋ ನಡೆಸಲು ಅನುವು ಮಾಡಿಕೊಡಬೇಕೆಂದು ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.

    ಕುಮಾರಸ್ವಾಮಿ ಪತ್ರದಲ್ಲಿ ಏನಿದೆ?
    ಬೆಂಗಳೂರಿನಲ್ಲಿ ಏರ್ ಇಂಡಿಯಾ ಶೋ ಆಯೋಜನೆ ಸೂಕ್ತವಾದ ಸ್ಥಳವಾಗಿದೆ. ಇಲ್ಲಿ ನಡೆದಿರುವ ಏರ್ ಶೋ ಜಗತ್ತಿನ ಬಹುದೊಡ್ಡ ಉದ್ಯಮಿಗಳನ್ನು, ಕೈಗಾರಿಕೋದ್ಯಮಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಕಂಪನಿಗಳು ಸಹ ಬೆಂಗಳೂರಿನಲ್ಲಿ ಏರ್ ಶೋ ಆಯೋಜನೆಗೆ ಇಷ್ಟ ಪಡುತ್ತವೆ. ಕಳೆದ 11 ವರ್ಷಗಳಿಂದ ಯಶಸ್ವಿಯಾಗಿ ಏರ್ ಶೋ ನಡೆಸಿಕೊಂಡು ಬರಲಾಗಿದೆ. 51 ದೇಶಗಳ 500ಕ್ಕೂ ಹೆಚ್ಚು ರಾಷ್ಟ್ರೀಯ, ಅಂತರಾಷ್ಟ್ರೀಯ ಕಂಪನಿಗಳು ಪಾಲ್ಗೊಳ್ಳಲಿವೆ.

    ಬೆಂಗಳೂರು ರಕ್ಷಣಾ ಮತ್ತು ವಾಯು ಸೇನೆಯ ಕೇಂದ್ರವಾಗಿದೆ. ರಾಜ್ಯ ಸರ್ಕಾರ ಕೂಡ ಕೆಂದ್ರ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ಕೊಟ್ಟಿದೆ. ಮೂಲಸೌಕರ್ಯ, ರಸ್ತೆ, ಸೇರಿದಂತೆ ಎಲ್ಲ ಸೌಲಭ್ಯವನ್ನು ಒದಗಿಸುವ ಮೂಲಕ ಯಶಸ್ವಿಗೊಳಿಸಿದ್ದೇವೆ. ಹೀಗಾಗಿ ಬೆಂಗಳೂರು ಏರ್ ಶೋ ಆಯೋಜನೆಗೆ ಸೂಕ್ತವಾಗಿದೆ.

    ಕಳೆದ ಬಾರಿ ಸಹ ಏರ್ ಶೋ ಯಶಸ್ವಿಯಾಗಿದೆ. ಬೆಂಗಳೂರಿನ ಹವಾಮಾನವೂ ಕೂಡ ಏರ್ ಶೋ ಪ್ರದರ್ಶನಕ್ಕೆ ಸೂಕ್ತವಾಗಿದೆ. ಮುಖ್ಯಮಂತ್ರಿಯಾಗಿ ಉತ್ತಮ ರೀತಿಯಲ್ಲಿ ಆಯೋಜಿಸಬೇಕೆಂಬ ಬಯಕೆಯಿದ್ದು, ಎಲ್ಲ ರೀತಿಯ ಸಹಕಾರ ನಿಡುತ್ತೇನೆ. ಈ ಹಿನ್ನೆಲೆಯಲ್ಲಿ ಏರ್ ಶೋ ಸ್ಥಳಾಂತರಿಸದೆ ನಿಮ್ಮ ಮಧ್ಯಸ್ಥಿಕೆಯಲ್ಲಿ ಬೆಂಗಳೂರಿನಲ್ಲಿಯೇ ಆಯೋಜಿಸುವಂತೆ ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ಬರೆದು ಪ್ರಧಾನಿ ನರೇಂದ್ರ ಮೋದಿಗೆ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ನಮ್ಮನ್ನು ಬದುಕಲು ಬಿಡಿ, ಜಮೀನು ಕಿತ್ಕೋಬೇಡಿ- ಸಿಎಂ ಬಳಿ ಬೇಡಿಕೊಳ್ತಿರೋ ಚಿಕ್ಕಬಳ್ಳಾಪುರ ರೈತರು

    ನಮ್ಮನ್ನು ಬದುಕಲು ಬಿಡಿ, ಜಮೀನು ಕಿತ್ಕೋಬೇಡಿ- ಸಿಎಂ ಬಳಿ ಬೇಡಿಕೊಳ್ತಿರೋ ಚಿಕ್ಕಬಳ್ಳಾಪುರ ರೈತರು

    ಚಿಕ್ಕಬಳ್ಳಾಪುರ: ಒಂದೆಡೆ ರೈತರಿಗೆ ಆತ್ಮಸ್ಥೈರ್ಯ ತುಂಬಲು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವತಃ ಗದ್ದೆಗಿಳಿದು ಭತ್ತ ನಾಟಿ ಮಾಡಿದ್ರು. ಆದ್ರೆ ಮತ್ತೊಂದೆಡೆ ರೈತರು ನಮ್ಮನ್ನು ರೈತರನ್ನಾಗಿ ಬದುಕಲು ಬಿಡಿ. ಕುಮಾರಸ್ವಾಮಿ ಅವರೇ ನಮ್ಮ ಜಮೀನು ಕಿತ್ತುಕೊಳ್ಳಬೇಡಿ ಎಂದು ಮನವಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಚಿಕ್ಕಬಳ್ಳಾಪುರದ ರೈತರು ನಮ್ಮ ಭೂಮಿ ನಮಗೆ ಉಳಿಸಿಕೊಡಿ. ಸಾಗುವಳಿ ಚೀಟಿ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ. ಇಡೀ ದೇಶದಲ್ಲಿ ನಮಗಿರುವುದು ಇದೊಂದು ತುಂಡು ಭೂಮಿ. ಇಲ್ಲಿಂದ ನಮ್ಮನ್ನು ಒಕ್ಕಲೆಬ್ಬಿಸಬೇಡಿ ಎಂದು ಕೃಷಿ ಸಚಿವರ ತವರಾದ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಅಂಗಲಾಚುತ್ತಿದ್ದಾರೆ.

    ಗೌರಿಬಿದನೂರು ಗಡಿಭಾಗದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಅರಸಾಪುರ ತಾಂಡಾದ ರೈತರು ಗೌರಿಬಿದನೂರಿನ ಹೊಸೂರು ಸಮೀಪದ ಹೊಸಕೋಟೆ ಕ್ರಾಸ್‍ನ ಸರ್ವೆ ನಂ.76 ರಲ್ಲಿ ಹಲವು ವರ್ಷಗಳಿಂದ ಗೋಮಾಳ ಜಮೀನನ್ನು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಈ ಜಮೀನನ್ನು ತಮಗೆ ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಬೇಕು ಎಂದು ಅನೇಕ ಬಾರಿ ಅರ್ಜಿ ಸಲ್ಲಿಸಿದ್ದಾರೆ.

    ಆದರೆ, ಸದ್ಯಕ್ಕೆ ಇದೇ ಭೂಮಿಯನ್ನು ಇಂಟರ್ ನ್ಯಾಷನಲ್ ಸೈನ್ಸ್ ಪಾರ್ಕ್ ನಿರ್ಮಿಸಲು ಅಧಿಕಾರಿಗಳು ಭೂಸ್ವಾಧೀನ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕಂಗಲಾಗಿರುವ ರೈತರು ಭೂಮಿ ಉಳಿಸಿಕೊಳ್ಳಲು ಅಂಗಲಾಚುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಎಲ್ಲದಕ್ಕೂ ವ್ಯಂಗ್ಯ, ಟೀಕೆ ಸರಿಯಲ್ಲ- ಬಳಸುವ ಭಾಷೆ ಬಗ್ಗೆ ಎಚ್ಚರ ಇರಲಿ: ಎ.ಎಚ್.ವಿಶ್ವನಾಥ್

    ಎಲ್ಲದಕ್ಕೂ ವ್ಯಂಗ್ಯ, ಟೀಕೆ ಸರಿಯಲ್ಲ- ಬಳಸುವ ಭಾಷೆ ಬಗ್ಗೆ ಎಚ್ಚರ ಇರಲಿ: ಎ.ಎಚ್.ವಿಶ್ವನಾಥ್

    -ನಾಟಿ ಮಾಡ್ದೆ, ಬಿಜೆಪಿ ಅವ್ರಂತೆ ಸದನದಲ್ಲಿ ಬ್ಲೂ ಫಿಲ್ಮ್ ನೋಡುಕೆ ಆಗುತ್ತಾ?

    ಮೈಸೂರು/ಚಿಕ್ಕಮಗಳೂರು: ಎಲ್ಲದಕ್ಕೂ ವ್ಯಂಗ್ಯ ಟೀಕೆ ಮಾಡೋದು ಸರಿಯಲ್ಲ. ತಾವು ಬಳಸುವ ಭಾಷೆ ಬಗ್ಗೆ ಎಚ್ಚರ ಇರಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎ.ಎಚ್.ವಿಶ್ವನಾಥ್ ಅವರು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷರು, ಸಿಎಂ ನಾಟಿ ಮಾಡೋದರಲ್ಲಿ ತಪ್ಪೇನಿಲ್ಲ. ಬಿಜೆಪಿ ಅವರಿಗೆ ರೈತರ ಕೂಗು ಅರ್ಥ ಆಗಲ್ಲ. ಮೋದಿಯವರಿಗೆ ಕೇವಲ ಅಂಬಾನಿ ಅಂತಹ ದೊಡ್ಡ ವ್ಯಕ್ತಿಗಳ ಮಾತ್ರ ಕಾಣುತ್ತಾರೆ. ಇಂದು ನಾಟಿ ವಿಷಯವಾಗಿ ಬಿಜೆಪಿ ಕುಮಾರಸ್ವಾಮಿಯವರನ್ನ ವ್ಯಂಗ್ಯ ಮಾಡುತ್ತಿಲ್ಲ. ನಾಡಿನ ರೈತರನ್ನು ನೀವು ವ್ಯಂಗ್ಯ ಮಾಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

    ತಮಿಳುನಾಡಿನಲ್ಲಿ ಚಿಕ್ಕ ರಾಜಕಾರಣಿಯಿಂದ ಹಿಡಿದು ಎಲ್ಲ ದೊಡ್ಡ ನಾಯಕರೆಲ್ಲರು ಭಾಷಾಭಿಮಾನ ಹೊಂದಿದ್ದಾರೆ. ಅಲ್ಲಿಯ ಯಾವ ನಾಯಕರು ಭಾಷೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ. ಆದರೆ ಇವತ್ತು ಕನ್ನಡ ನಾಡಿನಲ್ಲಿ ರಾಜಕೀಯ ಪಕ್ಷದ ನಾಯಕರು ನಮ್ಮ ಭಾಷೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಟೀಕೆ ಮಾಡುವಾಗ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಈ ರೀತಿಯಾಗಿ ಮಾತನಾಡೋದು ಯಾರಿಗೂ ಶೋಭೆಯನ್ನು ತರುವುದಿಲ್ಲ. ಹಾಗಾಗಿ ಮಾನ್ಯ ಈಶ್ವರಪ್ಪವರು ಮಾತನಾಡುವಾಗ ಪದ ಪ್ರಯೋಗದ ಎಚ್ಚರಿಕೆ ಇಂದಿರಬೇಕು ಎಂದು ವಿಶ್ವನಾಥ್ ಸಲಹೆ ನೀಡಿದರು.

    ಸಿಎಂ ರೈತನ ಮಗ: ಕುಮಾರಸ್ವಾಮಿ ಅವರು ರೈತನ ಮಗ, ಗದ್ದೆಯಲ್ಲಿ ನಾಟಿ ಮಾಡದೇ ಕ್ಲಬ್ ನಲ್ಲಿ ಡ್ಯಾನ್ಸ್ ಮಾಡೋದಕ್ಕೆ ಆಗತ್ತಾ? ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಧರ್ಮೇಗೌಡ ಹೇಳಿದ್ದಾರೆ.

    ರೈತರೊಂದಿಗೆ ನಾಟಿ ಮಾಡದೇ, ಬಿಜೆಪಿ ಅವರಂತೆ ಸದನದಲ್ಲಿ ಕುಳಿತು ಬ್ಲೂ ಫಿಲ್ಮ್ ನೋಡುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ ಧರ್ಮೇಗೌಡರು, ನಮ್ಮ ಬಗ್ಗೆ ಪ್ರತಿನಿತ್ಯ ಮಾತನಾಡದಿದ್ರೆ ಅವರಿಗೆ ಸಮಾಧಾನ ಆಗಲ್ಲ. ನಾವು ಕೂತು ನಿಂತ್ರು ಅವರು ಮಾತನಾಡುವುದನ್ನು ನಿಲ್ಲುಸುತ್ತಿಲ್ಲ. ನಮ್ಮ ಬಗ್ಗೆ ಮಾತನಾಡದಿದ್ದರೆ ತಿಂದ ಅನ್ನ ಮೈಗೆ ಹತ್ತಲ್ಲ ಅನ್ನಿಸುತ್ತದೆ ಎಂದು ಕಿಡಿಕಾರಿದರು.

    ನಾಟಿ ಕಾರ್ಯ ಕೇವಲ ಶೋ: ಮಂಡ್ಯದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭತ್ತದ ಗದ್ದೆಯಲ್ಲಿ ನಾಟಿ ಮಾಡುತ್ತಿರುವುದು ಹಾಸ್ಯಸ್ಪದ ಸಂಗತಿಯಾಗಿದೆ. ಎಚ್ ಡಿಕೆ ಭತ್ತ ನಾಟಿ ಕಾರ್ಯ ಕೇವಲ ಶೋ ಆಗಿದೆ. ಒಂದೆಡೆ ರೈತರ ವಿಚಾರದಲ್ಲಿ ಶೋ ಮಾಡುತ್ತಿರುವ ಮುಖ್ಯಮಂತ್ರಿಗಳು ರೈತರ ಸಂಕಷ್ಠಗಳಿಗೆ ಸ್ಪಂದಿಸಲೇಬೇಕೆಂದು ಹೇಳುತ್ತಾರೆ. ಇನ್ನೊಂದೆಡೆ ಸಾಲ ಮನ್ನಾ ವಿಚಾರದಲ್ಲಿ ದುಡ್ಡಿನ ಗಿಡಿ ನೆಟ್ಟಿಲ್ಲ ಅಂತಾರೆ. ಒಟ್ಟಿನಲ್ಲಿ ಸಿಎಂ ಅವರು ಈ ರೀತಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಳ್ಳಾರಿಯಲ್ಲಿ ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಶ್ರೀರಾಮುಲರನ್ನು ಎರಡೂ ಕ್ಷೇತ್ರಗಳಲ್ಲಿ ನಿಲ್ಲಿಸಿ ತಪ್ಪು ಮಾಡಿದೆವು- ಬಿಎಸ್‍ವೈ

    ಶ್ರೀರಾಮುಲರನ್ನು ಎರಡೂ ಕ್ಷೇತ್ರಗಳಲ್ಲಿ ನಿಲ್ಲಿಸಿ ತಪ್ಪು ಮಾಡಿದೆವು- ಬಿಎಸ್‍ವೈ

    ಬಳ್ಳಾರಿ: ಶಾಸಕ ಶ್ರೀರಾಮುಲು ಅವರನ್ನು ನಾವೂ ಎರಡೂ ಕ್ಷೇತ್ರಗಳಲ್ಲಿ ನಿಲ್ಲಿಸಿ ತಪ್ಪು ಮಾಡಿದೆವು. ಶ್ರೀರಾಮುಲುರನ್ನು ನಾವು ಬಾದಾಮಿಯಿಂದ ಮಾತ್ರ ಸ್ಪರ್ಧೆ ಮಾಡಿಸಬೇಕಿತ್ತು ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ಯಾರ ವಿಚಾರದಲ್ಲಿ ಸಾಫ್ಟ್ ಕಾರ್ನರ್ ಆಗಿಲ್ಲ. ನನ್ನೊಂದಿಗೆ ಕಾಂಗ್ರೆಸ್ ಶಾಸಕರು ಯಾರು ಸಂಪರ್ಕದಲ್ಲಿಲ್ಲ. ಶಾಸಕ ಶ್ರೀರಾಮುಲು ಅವರನ್ನು ಮುಂದೆ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಉತ್ತಮವಾದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಮೂಲಕ ಮತ್ತೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲಾಗುವುದು. ಅಲ್ಲದೇ ಪ್ರಧಾನಿ ನಮೋ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಇಡೀ ಜಗತ್ತೆ ಬೆರಗಾಗಿದೆ ಅವರ ಅಭಿವೃದ್ಧಿ ಕಾರ್ಯ ನೋಡಿದೆಯೆಂದು ತಿಳಿಸಿದ್ರು.

    ಜಿಲ್ಲಾ ಉಸ್ತುವಾರಿ ನೇಮಕ ತಡವಾಗಿದೆ. ಪ್ರತಿಪಕ್ಷವಾಗಿ ರಾಜ್ಯಪ್ರವಾಸ ಮಾಡಿ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಜನರ ಪಾಲಿಗೆ ಇದ್ದೂ ಇಲ್ಲದಂತಿದೆ. ತುಘಲಕ್ ದರ್ಬಾರ್ ನಡೆಯುತ್ತಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಇಲ್ಲಿವರೆಗಿನ ಅಭಿವೃದ್ಧಿ ಮಾಡಿದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿ. ಹಣಕಾಸಿನ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಲಿ ಅಂತ ಅವರು ಹೇಳಿದ್ರು.

    ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಯಾರೇ ಆಗಲಿ ಅಕ್ರಮಗಳ ವಿರುದ್ಧ ಹೋರಾಟ ಮುಂದುವರಿಸುತ್ತೇನೆ. ಕರ್ನಾಟಕ ಏಕೀಕರಣ ಆದ ಪ್ರತ್ಯೇಕ ರಾಜ್ಯದ ಮಾತು ಆಡಬಾರದು. ಅಖಂಡ ಕರ್ನಾಟಕವೇ ನಮ್ಮ ಧ್ಯೇಯವಾಗಿದೆ. ಏಕೀಕರಣಕ್ಕೆ ಧಕ್ಕೆ ಬರುವ ಮಾತು ಯಾರೂ ಆಡಬಾರದು. ಯಾರೂ ಪ್ರತ್ಯೇಕ ರಾಜ್ಯ ಬಯಸುತ್ತಿಲ್ಲ ಅಂದ ಅವರು ಲೋಕಸಭೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸಕ್ರಿಯ ರಾಜಕಾರಣದ ಕುರಿತು ಪ್ರಕ್ರಿಯಿಸಲು ನಿರಾಕರಿಸಿದ್ರು.

    ಮಂಡ್ಯದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭತ್ತದ ಗದ್ದೆಯಲ್ಲಿ ನಾಟಿ ಮಾಡುತ್ತಿರುವುದು ಹಾಸ್ಯಸ್ಪದ ಸಂಗತಿಯಾಗಿದೆ. ಎಚ್ ಡಿಕೆ ಭತ್ತ ನಾಟಿ ಕಾರ್ಯ ಕೇವಲ ಶೋ ಆಗಿದೆ. ಒಂದೆಡೆ ರೈತರ ವಿಚಾರದಲ್ಲಿ ಶೋ ಮಾಡುತ್ತಿರುವ ಮುಖ್ಯಮಂತ್ರಿಗಳು ರೈತರ ಸಂಕಷ್ಠಗಳಿಗೆ ಸ್ಪಂದಿಸಲೇಬೇಕೆಂದು ಹೇಳುತ್ತಾರೆ. ಇನ್ನೊಂದೆಡೆ ಸಾಲ ಮನ್ನಾ ವಿಚಾರದಲ್ಲಿ ದುಡ್ಡಿನ ಗಿಡಿ ನೆಟ್ಟಿಲ್ಲ ಅಂತಾರೆ. ಒಟ್ಟಿನಲ್ಲಿ ಸಿಎಂ ಅವರು ಈ ರೀತಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಅಂತ ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews