ಹುಬ್ಬಳ್ಳಿ: ಮಹಾದಾಯಿ (Mahadayi) ವಿಚಾರದಲ್ಲಿ ಬಿಜೆಪಿ (BJP) ಸುಳ್ಳು ಹೇಳುತ್ತಲೇ ಬಂದಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದಿನಾಂಕವಿಲ್ಲದ, ಸಂಖ್ಯೆ ಇಲ್ಲದ ಕಡತ ಟ್ವೀಟ್ ಮಾಡಿದ್ದರು. ನೀವು ಜನರನ್ನು ಒಮ್ಮೆ ಮೂರ್ಖರನ್ನಾಗಿ ಮಾಡಬಹುದು ಯಾವಾಗಲೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ (H K Patil) ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಬಿಜೆಪಿ ಅಧ್ಯಕ್ಷ, ಕೇಂದ್ರ ಸಚಿವರು ಸುಳ್ಳು ಹೇಳಿದ್ದಾರೆ. ಬಿಜೆಪಿಯ ಸುಳ್ಳುಗಳನ್ನು ಕಾಂಗ್ರೆಸ್ (Congress) ಬಹಿರಂಗಪಡಿಸುತ್ತಲೇ ಬಂದಿದೆ. ಅರ್ಜಿ ಕೊಟ್ಟ ಕೂಡಲೇ ಅನುಮತಿ ಸಿಗುತ್ತದೆ ಎಂದು ಪ್ರಹ್ಲಾದ್ ಜೋಶಿ (Pralhad Joshi), ಸಿಎಂ ಬೊಮ್ಮಾಯಿ (Basavaraj Bommai) ಹೇಳಿದ್ದರು. ಹದಿನೈದು ದಿನದೊಳಗೆ ಕಾಮಗಾರಿ ಆರಂಭಿಸುವುದಾಗಿ ಪ್ರಚಾರ ಮಾಡಿದ್ದರು. ಪ್ರಹ್ಲಾದ್ ಜೋಶಿಯವರು ನನಗೆ ಮತ್ತು ಸಿದ್ದರಾಮಯ್ಯ (Siddaramaiah) ನವರಿಗೆ ಕಣ್ಣು ಕಾಣಿಸುವುದಿಲ್ಲ ಎಂದು ಹೇಳಿದ್ದರು. ನಮ್ಮ ರಾಜಕೀಯ ಸಂಸ್ಕೃತಿಗೆ ಅಪಹಾಸ್ಯ ಮಾಡಿ ಅವಮಾನ ಮಾಡಿದರು ಎಂದರು.
ಕಳಸಾ- ಬಂಡೂರಿ ಯೋಜನೆ (Kalasa-Banduri Nala project) ಜಾರಿಗೆ ಅರಣ್ಯ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಬೇಕಾಗಿದೆ. ಕ್ಲಿಯರೆನ್ಸ್ ಇಲ್ಲದೆ ಕಾಮಗಾರಿ ಪ್ರಾರಂಭಿಸದಂತೆ ಕೋರ್ಟ್ ಆದೇಶ ನೀಡಿದೆ. ಕ್ರಮ ಕೈಗೊಳ್ಳಬೇಕಾದ ರಾಜ್ಯ ಸರ್ಕಾರ ಇದುವರೆಗೆ ಮಲಗಿದೆ. ಎಲ್ಲಿದೆ ನಿಮ್ಮ ಪೌರುಷ. ನಿಮ್ಮ ಹಸಿಸುಳ್ಳು ಬಹಿರಂಗಗೊಂಡಿದೆ ಎಂದು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ (AmitShah), ಮಹಾದಾಯಿ ನಮ್ಮ ಬಿಜೆಪಿಯ ಕೊಡುಗೆ ಎಂದು ಹೇಳುತ್ತಾರೆ. ಈಗ ಅಮಿತ್ ಶಾ ಎಲ್ಲಿದ್ದಾರೆ? ನಿಮಗೆ ಮಹಾದಾಯಿ ಹೆಸರಲ್ಲಿ ಮತ ಕೇಳುವ ನೈತಿಕತೆಯಿಲ್ಲ. ಸುಪ್ರೀಂ (Supreme Court) ತೀರ್ಪು ಬಂದು ನೂರು ತಾಸುಗಳಾಯಿತು. ಆದರೆ ರಾಜ್ಯಸರ್ಕಾರ ಮಾತ್ರ ನಿದ್ರೆ ಮಾಡುತ್ತಿದೆ. ಎಲ್ಲಾ ಅನುಮತಿ ಪಡೆದಿರುವುದಾಗಿ ಹೇಳಿದ್ದರು. ಆದರೆ ಈಗ ಗೋವಾ ವೈಲ್ಡ್ ಲೈಫ್ ಅನುಮತಿ ಬೇಕು ಎಂದು ಕೋರ್ಟ್ ಹೇಳಿದೆ. ಬಿಜೆಪಿಯ ಹಸಿಸುಳ್ಳು ಬಹಿರಂಗಗೊಂಡಿದೆ ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಸಾಹಿತಿ ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ವಿ.ಸೋಮಣ್ಣ, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಸಂತಾಪ ಸೂಚಿಸಿದ್ದಾರೆ.
ಕನ್ನಡದ ಪ್ರಮುಖ ಲೇಖಕ, ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಡಾ.ಸಿದ್ದಲಿಂಗಯ್ಯ ಅವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಸಾಹಿತ್ಯಗಳನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿರುವವರು ಎಂದು ಸ್ಮರಿಸಿದ್ದಾರೆ.
ಡಾ.ಸಿದ್ದಲಿಂಗಯ್ಯ ಅವರು 1954 ರಲ್ಲಿ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ಜನಿಸಿದ್ದರು. ಅವರ ಜಿಲ್ಲೆಯಿಂದಲೇ ನಾನು ರಾಜಕೀಯ ಪ್ರವೇಶ ಮಾಡಿದ್ದು ಎಂಬುದನ್ನು ವಿನಮ್ರತೆಯಿಂದ ಸ್ಮರಿಸಿಕೊಳ್ಳುತ್ತೇನೆ. ಸಿದ್ದಲಿಂಗಯ್ಯನವರ ಸೃಜನಶೀಲ ಸಾಹಿತ್ಯ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ.ಅಂಬೇಡ್ಕರ್ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ, ಬಾಬು ಜಗಜೀವನ ರಾಮ್ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿಗಳು ಸಂದಿವೆ.
ಕವಿ ಡಾ.ಸಿದ್ದಲಿಂಗಯ್ಯ ಅವರು ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ 1988-94, 1995-2001 ರವರೆಗೆ ಎರಡುಬಾರಿ ನಾಮಕರಣಗೊಂಡಿರುವುದರ ಜೊತೆಗೆ 2006-08ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
‘ಆ ಬೆಟ್ಟದಲ್ಲಿ, ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ’ ಗೀತೆಯನ್ನು ಎರಡು ಚಲನಚಿತ್ರಗಳಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಪುಟ್ಟಣ್ಣ ಕಣಗಾಲ್ ಅವರ ಧರಣಿ ಮಂಡಲ ಮಧ್ಯದೊಳಗೆ ಚಿತ್ರದ ‘ಗೆಳತಿ ಓ ಗೆಳತಿ’ ಬಂಡಾಯ ಕವಿಯ ಪ್ರೇಮ ಗೀತೆಗಳು. ಅವರೊಳಗಿದ್ದ ವ್ಯವಸ್ಥೆಯ ಬಗೆಗಿನ ಕಿಚ್ಚಿನ ಜೊತೆಯಲ್ಲೇ ಒಬ್ಬ ಅಪ್ಪಟ ಪ್ರೇಮಿಯು ಇದ್ದ ಎಂಬುದಕ್ಕೆ ಮೇಲಿನ ಗೀತೆಗಳು ಸದಾ ಹಸಿರು. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಅವರ ಸಾಹಿತ್ಯಾಭಿಮಾನಿಗಳಿಗೆ ಭಗವಂತನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ವಸತಿ ಸಚಿವ ವಿ.ಸೋಮಣ್ಣ ಸಹ ಕವಿ ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದು, ಕವಿ ಸಿದ್ದಲಿಂಗಯ್ಯನವರು ತಮ್ಮ `ಹೊಲೆಮಾದಿಗರ ಹಾಡು’ ಕವನ ಸಂಕಲನದ ಮೂಲಕ ದಮನಿತರ, ತುಳಿತಕ್ಕೆ ಒಳಗಾದವರ ನೋವು, ದುಃಖ, ದುಮ್ಮಾನಗಳನ್ನು ಸಮಾಜದ ಮುಂದೆ ಇರಿಸಿದ್ದರು. ತಮ್ಮ ಸಾಹಿತ್ಯದಲ್ಲಿ ಗಾಂಭೀರ್ಯತೆಯ ನಡುವೆಯೂ ಅಸಹಾಯಕರ ನೋವು, ಅವಮಾನಗಳನ್ನು ಮನನೀಯವಾಗಿ ಚಿತ್ರಿಸುತ್ತಿದ್ದರು. ನನ್ನೊಂದಿಗೆ ಆತ್ಮೀಯರಾಗಿದ್ದ ಕವಿ ಸಿದ್ದಲಿಂಗಯ್ಯನವರು ದೂರಾಗಿರುವುದು ಇಡೀ ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಎರಡು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಸದನದ ಭೂಷಣಪ್ರಾಯರಾಗಿ ವಿಷಯಗಳನ್ನು ಚರ್ಚಿಸುತ್ತಿದ್ದರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕನ್ನಡ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಕವಿ ಸಿದ್ದಲಿಂಗಯ್ಯನವರು ಪಾತ್ರರಾಗಿದ್ದನ್ನೂ ಸಚಿವರು ಸ್ಮರಿಸಿಕೊಂಡಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ಹಂಪಿ ಕನ್ನಡ ವಿವಿಯ ನಾಡೋಜ ಪುರಸ್ಕಾರ, ವಿ.ಸೋಮಣ್ಣ ಪ್ರತಿಷ್ಠಾನದ ಪ್ರಥಮ ಜೆ.ಹೆಚ್ ಪಟೇಲ್ ಪ್ರಶಸ್ತಿ, ಪ್ರತಿಷ್ಟಿತ ನೃಪತುಂಗ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಹಿರಿಯ ಕವಿಗಳ ಚೇತನಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಕೋರಿದ್ದಾರೆ.
ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಸಹ ಸಂತಾಪ ಸೂಚಿಸಿದ್ದು, ರಾಜ್ಯದಲ್ಲಿ ದಲಿತ ಚಳವಳಿಯ ಆದ್ವರ್ಯು ಹಾಗೂ ದಲಿತ ಸಾಹಿತ್ಯದ ಮೇರು ಆಗಿದ್ದ ಕವಿ ಸಿದ್ದಲಿಂಗಯ್ಯ ಅವರ ನಿಧನ ಕನ್ನಡ ಸಾರಸ್ವತ ಲೋಕಕ್ಕಾದ ಬಹುದೊಡ್ಡ ನಷ್ಟ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಸಿದ್ದಲಿಂಗಯ್ಯ ಅವರು ಕನ್ನಡದ ಅಗ್ರ ಲೇಖಕರಲ್ಲೊಬ್ಬರು, ‘ದಲಿತ ಕವಿ’ ಎಂದೇ ಪ್ರಸಿದ್ಧರು. ಸಾಮಾಜಿಕ ಸಮಾನತೆಯ ಆಶಯದೊಂದಿಗೆ ಅವರು ರಚಿಸಿದ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಆಧುನಿಕ ಸಾಹಿತ್ಯದಲ್ಲಿ ಅತ್ಯುನ್ನತ ಸ್ಥಾನ ಹೊಂದಿವೆ ಎಂದು ಡಿಸಿಎಂ ಗುಣಗಾನ ಮಾಡಿದ್ದಾರೆ.
ಮೂಲತಃ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ಜನಿಸಿದ ಅವರು, ನೆಲದ ಸೊಗಡನ್ನೂ ತಮ್ಮ ಸಾಹಿತ್ಯದಲ್ಲಿ ಸೊಗಸಾಗಿ ಕಟ್ಟಿಕೊಟ್ಟವರು. ಅಪ್ರತಿಮ ಭಾಷಣಕಾರರು ಆಗಿದ್ದ ಸಿದ್ದಲಿಂಗಯ್ಯ ಅವರು, ವಿಧಾನ ಪರಿಷತ್ ಸದಸ್ಯರಾಗಿಯೂ ಚಿರಸ್ಮರಣೀಯ ಸೇವೆ ಮಾಡಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ, ಬಂಧುಗಳಿಗೆ ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಡಿಸಿಎಂ ಪ್ರಾರ್ಥನೆ ಮಾಡಿದ್ದಾರೆ.
ಎಚ್.ಕೆ.ಪಾಟೀಲ್ ಸಹ ಸಂತಾಪ ಸೂಚಿಸಿ, ಕನ್ನಡದ ಲೇಖಕ ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಡಾ.ಸಿದ್ದಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆ ಬಗ್ಗೆ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ ಮತ್ತು ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿ ನಮ್ಮೊಂದಿಗೆ ಕೆಲಸ ಮಾಡಿದ್ದರು. ತುಂಬಾ ಮೊನಚಾದ ಮಾತು ಹಾಗೂ ಅಷ್ಟೇ ಹಾಸ್ಯಪ್ರಜ್ಞೆ ಅವರಲ್ಲಿತ್ತು. ಸದನದಲ್ಲಿ ಅವರು ಮಾತನಾಡುತ್ತಿದ್ದಾಗ ಹೊಸ ವಿಚಾರಗಳು ಪ್ರಕಟವಾಗುತ್ತಿದ್ದವು ಎಂದಿದ್ದಾರೆ.
ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದವರಾದ ಇವರು, ನಮ್ಮ ಉತ್ತರ ಕರ್ನಾಟಕ ಭಾಷೆಯನ್ನು ಹೆಚ್ಚು ಪ್ರೀತಿಸುತ್ತಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ ಸಾಹಿತ್ಯ ಅಕಾದೆಮಿಯಲ್ಲಿ ಕೆಲಸ ಮಾಡಿದ್ದರು. ಕನ್ನಡದ ಸಾಹಿತ್ಯ, ದಲಿತ-ಬಂಡಾಯ ಚಳುವಳಿಗೆ ಹೊಸ ದಿಕ್ಕನ್ನು ತಂದುಕೊಟ್ಟವರು. ಉತ್ತಮ ಭಾಷಣಕಾರರಾಗಿದ್ದ ಸಿದ್ದಲಿಂಗಯ್ಯನವರು, ಅಂಬೇಡ್ಕರ್, ಪೆರಿಯಾರ್ ಮತ್ತು ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಬೆಳೆದವರು.
ಹೊಲೆ ಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು ಇವರ ದಾಖಲಾರ್ಹ ಕೃತಿಗಳು. ಕನ್ನಡ ಸಾಹಿತ್ಯಕ್ಕೊಂದು ಹೊಸ ತಿರುವನ್ನು ನೀಡಿದ ಹಾಗೂ ಉತ್ತಮ ಸಂಸದೀಯ ಪಟುವಾಗಿದ್ದ ಡಾ.ಸಿದ್ದಲಿಂಗಯ್ಯ ನಿಧನರಾಗಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಕನ್ನಡದ ಉತ್ತಮ ಸಂಸದೀಯ ಪಟುವಾಗಿದ್ದ ಇವರನ್ನು ಕಳೆದುಕೊಂಡು ಕನ್ನಡ ನಾಡು ಬಡವಾಗಿದೆ ಎಂದಿದ್ದಾರೆ.
ಕೋವಿಡ್ ಸಾಂಕ್ರಾಮಿಕ ವೈರಸ್ ನಿಂದಾಗಿ ಹೋರಾಟದ ಸಾಹಿತಿಗಳನ್ನು ಕಳೆದುಕೊಳ್ಳುವಂತಹ ಸ್ಥಿತಿಗೆ ನಾವು ತಲುಪಿದ್ದೇವೆ, ಇದೊಂದು ವಿಪರ್ಯಾಸ. ಇತ್ತಿಚೆಗೆ ನನ್ನ ಕೃತಿಗೆ ಮುನ್ನುಡಿ ಬರೆಯಲು ಕೋರಿದ್ದಾಗ ಪ್ರೀತಿಯಿಂದ ಒಪ್ಪಿ ಬರೆದು ಕೊಡುವುದಾಗಿ ಹೇಳಿದ್ದರು. ಒಬ್ಬ ಸ್ನೇಹಜೀವಿ, ಬುದ್ಧಿಜೀವಿ ಹಾಗೂ ಹೋರಾಟಗಾರನನ್ನು ಕಳೆದುಕೊಂಡಿದ್ದೇವೆ. ಆಗಲಿದ ಸಿದ್ದಲಿಂಗಯ್ಯನವರ ಆತ್ಮಕ್ಕೆ ಶಾಂತಿಯನ್ನು ಹಾಗೂ ಕುಟುಂಬ ವರ್ಗಕ್ಕೆ, ಬಂಧುವರ್ಗಕ್ಕೆ, ಅಭಿಮಾನಿ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಗದಗ: ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಸಿಎಂ ಬಿಎಸ್‍ವೈ ನೀಡಿರುವ ವಿಶೇಷ ಪ್ಯಾಕೇಜ್ ಬಡವರ ಬ್ರೇಕ್ ಫಾಸ್ಟ್ ಗೂ ಸಾಕಗಲ್ಲ ಎನ್ನುವ ಮೂಲಕ ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ ಪಾಟೀಲ್ ಟೀಕೆ ಮಾಡಿದ್ದಾರೆ.
ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಎಚ್.ಕೆ ಪಾಟೀಲ್, ಯಡಿಯೂರಪ್ಪ ಕೊರೊನಾ ಕಷ್ಟಕಾಲದಲ್ಲಿ ಘೋಷಣೆ ಮಾಡಿರುವ ವಿಶೇಷ ಪ್ಯಾಕೇಜ್ ಏನು ಪ್ರಯೋಜನ ಇಲ್ಲ. ಅದರಲ್ಲೂ ಕಲಾ ತಂಡದಲ್ಲಿ ಎಂಟತ್ತು ಜನರಿರುತ್ತಾರೆ ಅವರಿಗೆ 3 ಸಾವಿರ ಯಾವ ಲೆಕ್ಕ ಎಂದು ಹೇಳುವ ಮೂಲಕ ಆರ್ಥಿಕ ಪ್ಯಾಕೇಜ್ ಬಗ್ಗೆ ಪಾಟೀಲ್ ಅಸಮಾಧಾನ ಹೊರಹಾಕಿದ್ದಾರೆ.
ಟೀಕೆ ಬಂದಿದೆ ಎಂದು ನೀವು ಈ ಕುರಿತು ಯೋಚಿಸಿಸುವುದು ಬೇಡ ಯಡಿಯೂರಪ್ಪನವರೇ ವ್ಯವಹಾರಿಕವಾಗಿ ಆಲೋಚಿಸಿ. ಆಗ ನಿಮಗೆ ತಿಳಿಯುತ್ತದೆ. ತಕ್ಷಣವೇ ಬಡವರಿಗೆ ಮೂರು ಪಟ್ಟು ಹಣ ಕೊಡಲು ವ್ಯವಸ್ಥೆ ಮಾಡಿ ಇದನ್ನು ಹೊರತು ಪಡಿಸಿ. ನೀವು ಈಗ ಕೊಟ್ಟಿರುವ ಪ್ಯಾಕೇಜ್‍ನಿಂದ ಜನರಿಗೆ ಯಾವುದೇ ಉಪಯೋಗವಿಲ್ಲ. ನಿರ್ಣಯ ಮಾಡಿದ್ದಕ್ಕಿಂತಲೂ ಮೂರು ಪಟ್ಟು ಹೆಚ್ಚು ಹಣ ಕೊಡಿ. ಆಗಲೇ ಜನರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಗದಗ: ಕಾಂಗ್ರೆಸ್‍ನ ಹಿರಿಯ ಶಾಸಕ, ಮಾಜಿ ಸಚಿವ ಎಚ್.ಕೆ ಪಾಟೀಲ್ ಇಂದು ನಗರದ ಜಿಮ್ಸ್‌ನ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಕೋವಿಡ್ ವಿಷಯದಲ್ಲಿನ ಸಮಸ್ಯೆಗಳ ಕುರಿತು ಸರ್ಕಾರದ ವಿರುದ್ಧ ಹರಿಹಾಯ್ದರು.
ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಆಕ್ಸಿಜನ್, ಬೆಡ್ ಕೊರತೆ ತುಂಬಾನೆ ಎದುರಾಗಲಿದೆ ಸರ್ಕಾರ ಜಾಗೃತವಾಗಿರಲಿ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಸಿ.ಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಜನರ ಜೀವದ ಜೊತೆಗೆ ಸರ್ಕಾರ ಚೆಲ್ಲಾಟ ಆಡುತ್ತಿದೆಯಾ? ಹೆಣಗಳ ಸಾಲು ಇದೆ. ಆಕ್ಸಿಜನ್‍ಗಾಗಿ ಬಾಯಿ ಬಾಯಿ ಬಡೆದುಕೊಳ್ಳುತ್ತಿದ್ದಾರೆ. ಕೆಳಮಟ್ಟದ ಮಾತುಗಳನ್ನಾಡಲು ನಾಚಿಕೆ ಆಗಲ್ವಾ? ವಿಧಾನ ಸಭೆಯಲ್ಲಿ ದಾಖಲಾತಿಗಳಿವೆ ನೋಡಿ, ಟಿವಿ, ಪತ್ರಿಕೆ ನೋಡಿ ಎಚ್ಚರವಾಗುತ್ತೆ ಎಂದು ತಿರುಗೇಟು ನೀಡಿದರು.
ಆಕ್ಸಿಜನ್, ಬೆಡ್ ಬಗ್ಗೆ ಎಚ್ಚರ ವಹಿಸದಿದ್ದರೆ ಕರ್ನಾಟಕ 2ನೇ ಡೆಲ್ಲಿ ಆಗಲಿದೆ. ಸರ್ಕಾರ ಜಾಗೃತಿಯಿಂದ, ಜಾಗರೂಕರಾಗಿ ಕೆಲಸ ಮಾಡಿ ಎಂದು ಸರ್ಕಾರಕ್ಕೆ ಆರೋಗ್ಯದ ಕಿವಿ ಮಾತು ಹೇಳಿದರು.
ಈ ವೇಳೆ ಜಿಮ್ಸ್ ನಿರ್ದೇಶಕ ಪಿ.ಎಸ್ ಭೂಸರೆಡ್ಡಿ, ಸರ್ಜನ್ ಜಿ.ಎಸ್ ಪಲ್ಲೆದ್ ಹಾಗೂ ಇತರೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಆಸ್ಪತ್ರೆ ವಸ್ತು ಸ್ಥಿತಿಯ ಮಾಹಿತಿ ಪಡೆದರು. ಇದೇ ವೇಳೆ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕೆಲವು ಸೋಂಕಿತರೊಂದಿಗೆ ಫೋನ್‍ನಲ್ಲಿ ಮಾತನಾಡಿ ಯೋಗಕ್ಷೇಮ ವಿಚಾರಿಸಿದರು.
– ಟ್ರ್ಯಾಕ್ಟರ್ ರ‍್ಯಾಲಿ ಬಗ್ಗೆ ನಾಯಕರ ನಡುವೆ ಮಾತಿನ ಚಕಮಕಿ
ಗದಗ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹಾಗೂ ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ್ ನಡುವಿನ ವಾಕ್ ಸಮರ ತಾರಕಕ್ಕೇರಿದೆ.
ಟ್ರ್ಯಾಕ್ಟರ್ ರ‍್ಯಾಲಿಯೊಂದಿಗೆ ಡಿಸಿ ಕಚೇರಿಗೆ ನುಗ್ಗಿರುವ ಬಗ್ಗೆ ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ವಿರುದ್ಧ ಸಚಿವ ಸಿ.ಸಿ.ಪಾಟೀಲ್ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದರು. ಇಬ್ಬರೂ ಉತ್ತರಕ್ಕೆ, ಪ್ರತ್ಯುತ್ತರ ನೀಡುವುದು ಜೋರಾಗಿಯೇ ನಡೆಯುತ್ತಿತ್ತು. ಸಿ.ಸಿ.ಪಾಟೀಲ್ ಅವರಿಂದ ಹೆದರಿಸುವ ಪ್ರವೃತ್ತಿ ಆರಂಭವಾಗಿದೆ. ದೆಹಲಿಯಲ್ಲಿ ರೈತರನ್ನು ಪಾಕಿಸ್ತಾನಿ, ಖಲಿಕಿಸ್ತಾನಿ ಅಂದರು. ಅದೇ ಆರೋಪವನ್ನು ಇಲ್ಲಿ ಮಾಡುವ ಪ್ರಯತ್ನವನ್ನು ಸರ್ಕಾರದ ಸಚಿವರು ಮಾಡುತ್ತಿದ್ದಾರೆ ಎಂದು ಎಚ್.ಕೆ.ಪಾಟೀಲ್ ಆರೋಪಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಟ್ರ್ಯಾಕ್ಟರ್ ರ‍್ಯಾಲಿಯಿಂದ ಗದಗವನ್ನು ದೆಹಲಿ ಆಗಲು ಬಿಡಲ್ಲ: ಸಿ.ಸಿ ಪಾಟೀಲ್
ಮನವಿ ನೀಡಲು ಬಂದ ವೇಳೆ ಡಿಸಿ ಇರಲಿಲ್ಲ. ಆ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಬದಲು, ಪೊಲೀಸರಿಗೆ, ಪ್ರತಿಭಟನಾ ನಿರತ ರೈತರನ್ನು ಹೆದರಿಸುತ್ತಿದ್ದಾರೆ. ನಾವು ರೈತರು ಹೆದರಲ್ಲ. ಗದಗಿನ ಗಂಡು ಭೂಮಿಯಿಂದ ಬಂದವರು ಹೆದರಿ ಓಡಿ ಹೋಗುತ್ತಾರೆ ಎಂದುಕೊಂಡಿದ್ದೀರಾ? ಟ್ರ್ಯಾಕ್ಟರ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದರೆ ತಪ್ಪಾ? ಮರಳು ದಂಧೆಕೋರರು, ಮದ್ಯ ಮಾರಾಟಗಾರರು, ಇನ್ಯಾರೋ ಕಾರ್ ತೆಗೆದುಕೊಂಡು ಡಿಸಿ ಕಚೇರಿ ಒಳಗೆ ಬರುತ್ತಾರೆ. ಅದೇ ರೈತರು ಡಿಸಿ ಕಚೇರಿಗೆ ಬರುವುದು ತಪ್ಪಾ ಎಂದು ತಿರುಗೇಟು ನೀಡಿದರು.
ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಸಹ ಹರಿಹಾಯ್ದು, ನನ್ನ ಟೀಕೆಗೆ ಸ್ಪಂದಿಸಿದ್ದಾರೆ ಎಂಬ ಸಮಾಧಾನವಿದೆ. ಆದರೆ ಅರ್ಧ ಟೀಕೆಗೆ ಸ್ಪಂದಿಸುವುದು, ಇನ್ನು ಅರ್ಧ ಟೀಕೆಗೆ ಸ್ಪಂದಿಸದೇ ಇರುವುದು ಸರಿಯಲ್ಲ. ನಿಮ್ಮ ಸರ್ಕಾರ ನುಡಿದಂತೆ ನಡೆಯಲಿಲ್ಲಾ, ಮೋದಿ ಅವರು ವಚನ ಭ್ರಷ್ಠರು ಎಂಬ ಆರೋಪದ ಬಗ್ಗೆ ಸ್ಪಷ್ಟನೆ ನೀಡಲಿಲ್ಲ. ಇದನ್ನು ನೋಡಿದರೆ ನಿಮ್ಮ ಸರ್ಕಾರ ಮಾತು ತಪ್ಪಿದ ಭ್ರಷ್ಠ ಸರ್ಕಾರ ಎಂದು ಒಪ್ಪಿಕೊಂಡಂತೆ ಎಂದು ಹರಿಹಾಯ್ದರು.
ಗದಗ: ಪ್ರಧಾನಿ ಗಡ್ಡ ಹಾಗೂ ವೇಷಭೂಷಣ ಬಗ್ಗೆ ಕಾಂಗ್ರೆಸ್ ನ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಟೀಕಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆ ಹಾಗೂ ನೂತನ ಕೃಷಿ ಕಾಯ್ದೆ ವಿರುದ್ಧ ನಗರದಲ್ಲಿ ಇಂದು ಟ್ರ್ಯಾಕ್ಟರ್ ರ್ಯಾಲಿ ನಂತರ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಅವರೇ, ಗಡ್ಡ ಬಿಟ್ರೆ, ನೀವು ರವೀಂದ್ರನಾಥ ಟ್ಯಾಗೋರ್ ಆಗಲ್ಲ. ಸೈನ್ಯದ ಸಮವಸ್ತ್ರ ಹಾಕಿದರೆ ನೀವು ಸುಭಾಷ್ ಚಂದ್ರ ಭೋಸ್ ಆಗುವುದಿಲ್ಲ. ಕೈ ಎತ್ತಿ ತೋರಿಸಿದರೆ ಬಿ.ಆರ್.ಅಂಬೇಡ್ಕರ್ ಆಗುವುದಿಲ್ಲ. ಹೆಗಲ ಮೇಲೆ ಶಾಲು ಹಾಕಿದರೆ ಸರ್ದಾರ್ ವಲ್ಲಭಭಾಯ್ ಪಟೇಲ್ ಆಗುವುದಿಲ್ಲ. ನಿಮ್ಮ ನಡೆ, ನುಡಿ ಹಾಗೂ ನೀಡಿದ ಭವರಸೆಗಳನ್ನು ಈಡೇರಿಸಿದಾಗ ಜನ ನಿಮ್ಮನ್ನು ನಂಬುತ್ತಾರೆ. ಎಂದು ಕಿಡಿಕಾರಿದರು.
ನೀವು ವಚನ ಭ್ರಷ್ಟರಾಗಿದ್ದೀರಿ. ಇದೇ ರೀತಿ ಸುಳ್ಳು ಹೇಳುತ್ತ ದೇಶದ ಜನರಿಗೆ ಎಷ್ಟು ದಿನ ಮೋಸ ಮಾಡುತ್ತೀರಿ. ನೀವು ಖುರ್ಚಿ ಖಾಲಿ ಮಾಡುವ ಕಾಲ ಬರುತ್ತದೆ. ಲಾಕ್‍ಡೌನ್ ನಿಂದ ಬೆಲೆ ಏರಿಕೆ ನಿಮ್ಮ ಸರ್ಕಾರಕ್ಕೆ ಮಾತ್ರ ಆಗಿದೆನಾ? ಲಾಕ್‍ಡೌನ್ ನಿಂದ ಜನಸಾಮಾನ್ಯರಿಗೆ ತೊಂದರೆ ಆಗಿಲ್ವಾ? ಜನ ಸಾಮಾನ್ಯರಿಗೊಂದು ನ್ಯಾಯ, ಸರ್ಕಾರದ ಆದಾಯಕ್ಕೊಂದು ನ್ಯಾಯನಾ? ಕೊರೊನಾ ಸಂದಿಗ್ಧ ಸಂದರ್ಭದಲ್ಲಿ ಜನರನ್ನ ಯಾಕೆ ಸುಲಿಗೆ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನಾದರೂ ಸುಲಿಗೆ ಮಾಡುವುದನ್ನು ಬಿಡಿ, ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ದಿನಬಳಕೆ ವಸ್ತುಗಳ ಬೆಲೆ ಇಳಿಕೆ ಮಾಡಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್.ಕೆ.ಪಾಟೀಲ್ ಗುಡುಗಿದರು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್ ಪಾಟೀಲ್, ಮಾಜಿ ಶಾಸಕರುಗಳಾದ ಬಿ.ಆರ್ ಯಾವಗಲ್, ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಂಗಳೂರು: ಪೇಜಾವರ ಶ್ರೀಗಳ ಆಗಲಿಕೆಯಿಂದ ಕರ್ನಾಟಕ ರಾಜ್ಯ ಬಡವಾಗಿದೆ ಎಂದು ಶಾಸಕ ಎಚ್ ಕೆ ಪಾಟೀಲ್ ಸಂತಾಪ ಸೂಚಿಸಿದ್ದಾರೆ.
ಇಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪೇಜಾವರ ವಿಶ್ವೇಶತೀರ್ಥ ಶ್ರೀಗಳ ಆಗಲಿಕೆ ನಮಗೆ ಬಹಳ ಅಘಾತ ತಂದಿದೆ. ಪೂಜ್ಯರು ರಾಷ್ಟ್ರದ ಖ್ಯಾತ ಸಂತರು. ದೇಶದಲ್ಲಿ ಯಾವುದೇ ಕ್ಲಿಷ್ಟಕರ ಸಮಸ್ಯೆ ಇರಲಿ, ಧರ್ಮ ವೇದಾಂತದ ವಿಚಾರದಲ್ಲಿ ದಿಟ್ಟತನ ತೋರಿದ ಶ್ರೀಗಳು ಇಂದು ನಮ್ಮನ್ನು ಆಗಲಿದ್ದಾರೆ ಎಂದು ತಿಳಿಸಿದರು.
ಸಮಾನತೆ ಸದ್ಭಾವನೆ ಪ್ರಾರ್ಥನೆ ಮೂಲಕ ಎಲ್ಲರ ಮನ ಗೆದ್ದಂತಹವರು ಶ್ರೀಗಳು. ಆದರೆ ಅವರನ್ನು ಕಳೆದುಕೊಂಡು ಕರ್ನಾಟಕ ರಾಜ್ಯ ಇಂದು ಬಡವಾಗಿದೆ. ನಮ್ಮ ತಂದೆ ಕಾಲದಿಂದಲೂ ಕುಟುಂಬದ ಜೊತೆಗೆ ಶ್ರೀಗಳ ನಂಟಿದೆ. ಸ್ವಾಮೀಜಿಯವರ ಆಶೀರ್ವಾದ ಹಾಗೂ ಮಾರ್ಗದರ್ಶನದಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಯಾರೇ ಆಗಲಿ ಶ್ರೀಗಳು ಅವರಿಗೆ ಸರಿಯಾದ ಮಾರ್ಗದರ್ಶನ ಕೊಡುತ್ತಿದ್ದರು. ಈಗ ಅವರ ಮಾರ್ಗದರ್ಶನದಲ್ಲಿ ನಾವು ನಡೆಯುವ ಮೂಲಕ ಅವರ ಆತ್ಮಕ್ಕೆ ನಾವು ಶಾಂತಿ ತರುವ ಕೆಲಸ ಮಾಡಬೇಕಿದೆ ಎಂದರು.
ಧಾರವಾಡ: ಟಿಪ್ಪು ಸ್ವಾತಂತ್ರ್ಯ ಪ್ರೇಮಿ, ಕನ್ನಡದ ಅಭಿಮಾನಿ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಟಿಪ್ಪುವನ್ನು ಹಾಡಿ ಹೊಗಳಿದ್ದಾರೆ.
ಶಾಲಾ ಪಠ್ಯ ಪುಸ್ತಕದಿಂದ ಟಿಪ್ಪು ಪಠ್ಯವನ್ನು ತೆಗೆಯುವ ಕುರಿತ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಂತ್ರಜ್ಞಾನ, ವಿಜ್ಞಾನವನ್ನು ಅಂದಿನ ಸಂದರ್ಭದಲ್ಲೇ ಹೆಚ್ಚು ಅರಿತವರು. ಟಿಪ್ಪು ಇತಿಹಾಸ ಬಹುದೊಡ್ಡದು. ತನ್ನದೆಯಾದ ನಾಡು ಕಟ್ಟಿ ಬೆಳೆಸುವಾಗ ಕೆಲ ವಿವಾದಗಳು ಆಗಿರಬಹುದು. ಆದರೆ ರಾಜಕೀಯ ಕಾರಣಕ್ಕಾಗಿ ಬಿಜೆಪಿ ಟಿಪ್ಪು ಬಗ್ಗೆ ತೆಗೆದುಕೊಂಡ ನಿರ್ಣಯ ಖಂಡನಾರ್ಹ. ಬಿಜೆಪಿ ಸರ್ಕಾರ ವಿವಾದಾತ್ಮಕ ನಿರ್ಣಯ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಕೇವಲ ರಾಜಕೀಯಕ್ಕೆ ಮಾತ್ರ ಇವರ ಚಿಂತನೆ ಆಗಬಾರದು. ಟಿಪ್ಪು ಬಗ್ಗೆ ಓದಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿನ್ನದ ಮೇಲೆ ಕೇಂದ್ರ ಸರ್ಕಾರ ಹಿಡಿತ ಸಾಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಸ್ವಾಗತಾರ್ಹ ನಿರ್ಧಾರ. ಚಿನ್ನ-ಬೆಳ್ಳಿ ಯಾವುದೇ ಇರಲಿ ಅಕ್ರಮವಾಗಿ ಹೊಂದಲೇಬಾರದು. ಆದರೆ ಕಾನೂನುಗಳನ್ನು ಮಾಡಿದ ನಂತರ ತಪ್ಪು ಬಳಕೆ ಆಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಉಪಚುನಾವಣೆಯಲ್ಲಿ ಮಹಾರಾಷ್ಟ್ರ, ಹರ್ಯಾಣ ರೀತಿಯಲ್ಲಿ ನಮ್ಮ ರಾಜ್ಯದಲ್ಲೂ ಆಶ್ಚರ್ಯಕರ ಫಲಿತಾಂಶ ಬರುತ್ತದೆ. ಪ್ರವಾಹ ಪೀಡಿತ ಪ್ರದೇಶದ ಜನ ಬಿಜೆಪಿ ಸರ್ಕಾರದ ಬಗ್ಗೆ ಬೇಸತ್ತು ಹೋಗಿದ್ದಾರೆ. ಮಹದಾಯಿ ವಿಷಯದಲ್ಲಿ ಪ್ರಧಾನಿ ಮೋದಿ ವಚನ ಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿದರು.
ರಾಜ್ಯೋತ್ಸವ ಪ್ರಶಸ್ತಿಯನ್ನು ಹೊರನಾಡು, ಗಡಿನಾಡು ಕನ್ನಡಿಗರ ಹೆಸರಿನಲ್ಲಿ ತಮಗೆ ಯಾರು ಬೇಕೋ ಅವರಿಗೆ ಕೊಟ್ಟಿದ್ದಾರೆ. ಅವರದೇ ಪಕ್ಷದವರು ಇದನ್ನು ಎತ್ತಿ ತೋರಿಸಿದ್ದಾರೆ. ಆಯ್ಕೆ ಸಮಿತಿಯಲ್ಲಿ ಇದ್ದವರೇ ನಾನು ಐದು ಕೊಡಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆ ಐವರು ಯಾರು ಎನ್ನುವುದನ್ನು ಸಂಸ್ಕೃತಿ ಇಲಾಖೆ ಸಚಿವರು ಸಾರ್ವಜನಿಕವಾಗಿ ಹೇಳಬೇಕು. ಇಲ್ಲದಿದ್ದರೆ ಎಲ್ಲ 60 ಜನ ಪುರಸ್ಕೃತರಿಗೆ ನೋವು ಮಾಡಿದಂತಾಗುತ್ತದೆ. ಪ್ರಶಸ್ತಿ ಪಡೆದವರ ಬಗ್ಗೆ ನಮ್ಮ ಅಗೌರವ ಇಲ್ಲ. ಈ ಕುರಿತು ಸ್ಪಷ್ಟವಾದ ವಿವರಣೆ ಕೊಡಬೇಕು. ಉತ್ತರ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಪ್ರಶಸ್ತಿ ಬರಬೇಕಿತ್ತು ಎಂದರು.
ಹಾವೇರಿ: ಪ್ರವಾಹ ಸಂತ್ರಸ್ತರಿಗೆ ಪರಿಹಾರ ಧನ ನೀಡಿ ಎಂದರೆ ಸರ್ಕಾರದ ಹತ್ತಿರ ನೋಟ್ ಪ್ರಿಂಟ್ ಮಾಡುವ ಮಷಿನ್ ಇಲ್ಲಾ ಎಂದು ಸಿಎಂ ಯಡಿಯೂರಪ್ಪ ಹೇಳುತ್ತಾರೆ. ಆದರೆ ಸ್ವಕ್ಷೇತ್ರ ಶಿವಮೊಗ್ಗ ಜಿಲ್ಲೆಗೆ ಅನುದಾನ ನೀಡಲು ಅವರು ನೋಟ್ ಪ್ರಿಂಟ್ ಮಾಡ್ಕೊಂಡು ಹೋಗಿದ್ದರಾ ಎಂದು ಕಾಂಗ್ರೆಸ್ ಮುಖಂಡ ಹೆಚ್.ಕೆ.ಪಾಟೀಲ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಎಂ ಯಡಿಯೂರಪ್ಪ ಏನು ಕೇಳಿದರೂ ನನ್ನ ಹತ್ತರ ನೋಟ್ ಪ್ರಿಂಟ್ ಮಾಡುವ ಮಷಿನ್ ಇಲ್ಲಾ ಎನ್ನುತ್ತಿದ್ದಾರೆ. ಆದರೆ ಅವರ ಸ್ವಕ್ಷೇತ್ರ ಶಿವಮೊಗ್ಗ ಜಿಲ್ಲೆಗೆ 50 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಅದನ್ನ ಕೊಡಲು ಅವರು ನೋಟ್ ಪ್ರಿಂಟ್ ಮಾಡಿಕೊಂಡು ಹೋಗಿದ್ದರಾ? ನೆರೆ ಸಂತ್ರಸ್ತರು ಕೇವಲ ತಮ್ಮ ಮನೆಗಳನ್ನು ಕಳೆದುಕೊಂಡಿಲ್ಲ. ಬದಲಿಗೆ ಅವರ ಬದುಕನ್ನೇ ಕಳೆದುಕೊಂಡಿದ್ದಾರೆ. ಅವರ ಬದುಕನ್ನು ಕಟ್ಟಿಕೊಡುವ ಕೆಲಸವಾಗಬೇಕು ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರಾಜ್ಯದಲ್ಲಿ ಉಂಟಾದ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ದೆಹಲಿಯಲ್ಲಿ, ಬೆಂಗಳೂರಿನಲ್ಲಿ ಕುಳಿತುಕೊಂಡವರಿಗಾಗಲಿ, ವೈಮಾನಿಕ ವೀಕ್ಷಣೆಯಿಂದಾಗಲಿ ನೆರೆ ಹಾವಳಿಯ ಪೂರ್ಣ ಚಿತ್ರಣ ಸಿಗುವುದಿಲ್ಲ. ಹೀಗಾಗಿ ನೆರೆ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ಸರ್ಕಾರ ಪ್ರಾಧಿಕಾರ ರಚಿಸಬೇಕು ಎಂದು ಎಚ್.ಕೆ.ಪಾಟೀಲ್ ಸರ್ಕಾರಕ್ಕೆ ಸಲಹೆ ನೀಡಿದರು.
ವಿಜಯಪುರ: ಬಿಜೆಪಿಗೆ ಸರ್ಕಾರ ರಚನೆಗೆ ರಾಜ್ಯಪಾಲರ ನಿರ್ಣಯ ಜನರಿಗೆ ಅಸಮಾಧಾನ ನೀಡಿದೆ. ಗವರ್ನರ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆಂದು ರಾಜ್ಯಪಾಲ ವಜೂವಾಯಿ ವಾಲಾ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅಸಮಾಧಾನ ಹೊರಹಾಕಿದ್ದಾರೆ.
ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಿದ್ದರ ಬಗ್ಗೆ ರಾಜ್ಯಪಾಲರು ಜನರಿಗೆ ವಿವರಣೆ ನೀಡಬೇಕು. ಯಡಿಯೂರಪ್ಪವರ ಪ್ರಮಾಣ ವಚನಕ್ಕೆ ತರಾತುರಿ ಯಾಕೆ ಮಾಡಬೇಕಿತ್ತು ಎಂದು ಪ್ರಶ್ನಿಸಿದರು. ಇನ್ನು ರೆಬೆಲ್ ಶಾಸಕರು ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ರೆಬೆಲ್ ಶಾಸಕರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಅವರಿಗೆ ಶಿಕ್ಷೆ ಆಗಬೇಕೆಂದು ಎಚ್.ಕೆ.ಪಾಟೀಲ್ ಆಗ್ರಹಿಸಿದರು.
ಇದೇ ವೇಳೆ ಋಣ ಮುಕ್ತ ಕಾಯ್ದೆ ಜಾಹೀರಾತಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್ ದೂರವಿಟ್ಟಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೀಗೆ ಮಾಡಿದ್ದರೆ ಅದು ತಪ್ಪಾಗುತ್ತದೆ. ಋಣ ಮುಕ್ತ ಕಾನೂನನ್ನು ನಾವು ಸ್ವಾಗತಿಸುತ್ತೇವೆ. ಆದರೆ ಆ ಜಾಹೀರಾತಿನಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಬಿಟ್ಟಿದ್ದು ತಪ್ಪು ಎಂದು ಹೇಳಿದರು.
ಕಾಂಗ್ರೆಸ್ ಬೆಂಬಲದೊಂದಿಗೆ ಋಣ ಮುಕ್ತ ಕಾಯ್ದೆ, ಸಾಲ ಮನ್ನಾ ಆಗಿರುತ್ತದೆ. ಯಾವುದೇ ಕಾಯ್ದೆಯಾದರೂ ಅದು ಕಾಂಗ್ರೆಸ್ ಬಲದಿಂದಲೇ ಆಗಿರುತ್ತದೆ. ಯಾರಾದರು ಈ ಅಚಾತುರ್ಯ ಮಾಡಿರುತ್ತಾರೆ. ಅವರು ಅದನ್ನು ಸರಿ ಪಡೆಸಿಕೊಳ್ಳಬೇಕು ಎಂದು ಉತ್ತರಿಸಿದರು.