Tag: ಎಕೆ 47 ಬಂದೂಕು

  • ಭದ್ರತಾ ಸಿಬ್ಬಂದಿಯ ಶಸ್ತ್ರಾಸ್ತ್ರ ಕಸಿದು ಉಗ್ರರು ಪರಾರಿ

    ಭದ್ರತಾ ಸಿಬ್ಬಂದಿಯ ಶಸ್ತ್ರಾಸ್ತ್ರ ಕಸಿದು ಉಗ್ರರು ಪರಾರಿ

    ಶ್ರೀನಗರ: ಕರ್ತವ್ಯ ನಿರತ ಭದ್ರತಾ ಸಿಬ್ಬಂದಿ ಬಳಿ ಶಸ್ತ್ರಾಸ್ತ್ರ ಕಸಿದ ಉಗ್ರರು ಪರಾರಿಯಾದ ಹಿನ್ನೆಲೆಯಲ್ಲಿ ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

    ಸ್ಥಳೀಯ ಪಿಡಿಪಿ ಮುಖಂಡ ಶೇಖ್ ನಾಸಿರ್ ಅವರ ಭದ್ರತೆಗಾಗಿ ನಿಯೋಜಿಸಲಾಗಿದ್ದ ಸಿಬ್ಬಂದಿಯ ಬಳಿ ಉಗ್ರರು ಶಸ್ತ್ರಸ್ತ್ರ ಕಸಿದುಕೊಂಡು ಪರಾರಿಯಾಗಿದ್ದಾರೆ. ಮುಖಂಡನ ಬೆಂಬಲಿಗರ ಗುಂಪಿನಲ್ಲಿ ಸೇರಿಕೊಂಡಿದ್ದ ಶಂಕಿತ ಉಗ್ರರು ಕರ್ತವ್ಯ ನಿರತ ಸಿಬ್ಬಂದಿಯ ಬಂದೂಕು ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಇದೀಗ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗೃತ ಕ್ರಮವಾಗಿ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಮೂಲಗಳು ಪ್ರಕಾರ, ಭದ್ರತಾ ಸಿಬ್ಬಂದಿಯ ಒಂದು ಎಕೆ 47 ಬಂದೂಕನ್ನು ಶಂಕಿತ ಉಗ್ರರು ಕಸಿದುಕೊಂಡು ಓಡಿಹೋಗಿದ್ದಾರೆ. ಬಂದೂಕು ಕಸಿದ ಉಗ್ರರನ್ನು ಸೆರೆಹಿಡಿಯಲು ಭಾರತೀಯ ಸೇನೆ ತೀವ್ರ ಶೋಧ ನಡೆಸುತ್ತಿದೆ. ಅಲ್ಲದೆ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ತಲುಪಿಸಿದ್ದಾರೆ. ಸೈನಿಕರ ಜೊತೆ ಸ್ಥಳೀಯ ಪೊಲೀಸರು ಕೂಡ ಶೋಧಕಾರ್ಯಕ್ಕೆ ಸಾಥ್ ನೀಡಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಇದೀಗ ನಾಕಾಬಂದಿ ಹಾಕಲಾಗಿದೆ.

    ಈ ವರ್ಷದಲ್ಲಿ ಹೀಗೆ ಉಗ್ರರು ಭದ್ರತಾ ಸಿಬ್ಬಂದಿಯ ಬಂದೂಕು ಕಸಿದು ಪರಾರಿಯಾಗಿರುವುದು ಇದು 2ನೇ ಪ್ರಕರಣವಾಗಿದೆ. ಈ ಹಿಂದೆ ಮಾರ್ಚ್ 8ರಂದು ಮುಸುಕುಧಾರಿ ಉಗ್ರರು ಶಾಹಿಗ್ ಮಜಾರ್ ಪ್ರಾಂತ್ಯದ ಪಿಎಸ್‍ಒ ದುಲೀಪ್ ಕುಮಾರ್ ಅವರ ಮನೆಗೆ ನುಗ್ಗಿ, ಅವರ ಬಳಿಯಿದ್ದ ಒಂದು ಎಕೆ 47 ಬಂದೂಕನ್ನು ಕಸಿದಿದ್ದರು. ಅದರ ಜೊತೆಗೆ ಉಗ್ರರು 90 ಬುಲೆಟ್‍ಗಳನ್ನೂ ಕೂಡ ತೆಗೆದುಕೊಂಡು ಓಡಿಹೋಗಿದ್ದರು.

    ಈ ಬಗ್ಗೆ ಕಿಶ್ತ್ವಾರ್ ಡಿಸಿ ಎ.ಎಸ್ ರಾಣಾ ಅವರು ಮಾತನಾಡಿ, ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದೇವೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಜಾಗೃತರಾಗಿರುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದರು.