Tag: ಎಐಸಿಸಿ ಅಧ್ಯಕ್ಷ

  • ಲೋಕಸಭಾ ಚುನಾವಣೆ- ರಾಹುಲ್ ಗೆ ಸಿದ್ದರಾಮಯ್ಯ ಮನವಿ

    ಲೋಕಸಭಾ ಚುನಾವಣೆ- ರಾಹುಲ್ ಗೆ ಸಿದ್ದರಾಮಯ್ಯ ಮನವಿ

    ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಸೀಟು ಹಂಚಿಕೆ ವಿಚಾರದಲ್ಲಿ ಮೈತ್ರಿ ಸರ್ಕಾರದಲ್ಲಿ ಗೊಂದಲ ನಿರ್ಮಾಣವಾಗಿದೆ.

    ಮಂಡ್ಯ, ಹಾಸನ ಆಯ್ತು ಈಗ ಮೈಸೂರು ಬೇಕು ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಎದುರು ಪಟ್ಟು ಹಿಡಿದಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಪಕ್ಷದ ಮೂಲಗಳಿಂದ ಮಾಹಿತಿ ಲಭಿಸಿದೆ.

    ಮೈಸೂರು ಲೋಕಸಭೆ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಸಿದ್ದರಾಮಯ್ಯ ಅವರು ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಬೇಡಿಕೆ ಇಟ್ಟಿದ್ದಾರೆ. ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಿದೆ ಎಂದು ಬಿಟ್ಟು ಕೊಡುವುದು ಬೇಡ. ಮೈಸೂರಿನಲ್ಲಿ ಇದುವರೆಗೂ ಲೋಕಸಭೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿಲ್ಲ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಗೆ ಮೈಸೂರು ಕ್ಷೇತ್ರ ಬಿಟ್ಟು ಕೊಡದಂತೆ ಮನವಿ ಮಾಡಿಕೊಂಡಿದ್ದಾರೆ.

    ಒಟ್ಟಿನಲ್ಲಿ ತವರು ಕ್ಷೇತ್ರವನ್ನು ಉಳಿಸಿಕೊಳ್ಳು ಮಾಜಿ ಸಿಎಂ ಹಠಕ್ಕೆ ಬಿದ್ದಿದ್ದಾರೆ.

  • ಸಚಿವ ಸಂಪುಟ, ಖಾತೆ ಸಂಪುಟ ವಿಸ್ತರಣೆ- ದೆಹಲಿಯಲ್ಲಿ ಮಹತ್ವದ ಮಾತುಕತೆ

    ಸಚಿವ ಸಂಪುಟ, ಖಾತೆ ಸಂಪುಟ ವಿಸ್ತರಣೆ- ದೆಹಲಿಯಲ್ಲಿ ಮಹತ್ವದ ಮಾತುಕತೆ

    ನವದೆಹಲಿ: ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ಇಂದು ದೆಹಲಿಯಲ್ಲಿ ಮಹತ್ವದ ಮಾತುಕತೆ ನಡೆಯಲಿದೆ.

    ಇತ್ತೀಚೆಗಷ್ಟೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆಗೆ ರಾಜ್ಯ ಕಾಂಗ್ರೆಸ್ ನಾಯಕರು ನಡೆಸಿದ ಸಭೆಯಲ್ಲಿ ಒಮ್ಮತದ ನಿರ್ಧಾರ ಬಾರದ ಹಿನ್ನೆಲೆಯಲ್ಲಿ ಇಂದು ಮತ್ತೊಂದು ಹಂತದ ಚರ್ಚೆ ನಡೆಯಲಿದೆ. ಸಚಿವ ಸ್ಥಾನ, ಖಾತೆ ಹಂಚಿಕೆ ರಾಜ್ಯ ಉಸ್ತುವಾರಿ ನೀಡುವ ಬಗ್ಗೆ ಹಾಗೂ ಪೂರ್ಣಾವಧಿಗೆ ಕುಮಾರಸ್ವಾಮಿ ಸಿಎಂ ಆಗುವ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಮಹತ್ವದ ಸಭೆ ನಡೆಯುವ ಸಾಧ್ಯತೆ ಇದೆ.

    ಇತ್ತೀಚೆಗೆ ನಡೆದ ಸಭೆಯಲ್ಲಿ ಕೆಲ ಗೊಂದಲಗಳು ಉಂಟಾದ ಹಿನ್ನೆಲೆ ಕುಮಾರಸ್ವಾಮಿ ಜೊತೆಗೆ ಮತ್ತೊಂದು ಹಂತದ ಸಭೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬರುವಂತೆ ರಾಹುಲ್ ಗಾಂಧಿ ಸೂಚಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಜಿ ಪರಮೇಶ್ವರ್, ರಾಜ್ಯ ಚುನಾವಣಾ ಉಸ್ತುವಾರಿ ಕೆ ವೇಣುಗೋಪಾಲ್ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಲವು ನಾಯಕರು ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

    ಇತ್ತ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿಗಾಗಿ ಎಚ್‍ಡಿಕೆ ದೆಹಲಿಗೆ ತೆರಳಲಿದ್ದು, ಈ ವೇಳೆ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಈ ವೇಳೆ ಗೊಂದಲಗಳನ್ನು ಬಗೆಹರಿಸಿಕೊಂಡು ಬಳಿಕ ರಾಹುಲ್ ಗಾಂಧಿಯೊಂದಿಗೆ ಅಂತಿಮವಾಗಿ ಚರ್ಚಿಸಲು ತೀರ್ಮಾನಿಸಲಾಗಿದೆ. ಸದ್ಯ ರಾಹುಲ್ ಗಾಂಧಿ ವಿದೇಶ ಪ್ರವಾಸದ ಹಿನ್ನೆಲೆಯಲ್ಲಿ ಸಚಿವ ಸಂಪುಟದ ಸರ್ಕಸ್ ಇನ್ನೂ ಒಂದು ವಾರಗಳ ಕಾಲ ಮುಂದುವರೆಯಲಿದ್ದು, ರಾಹುಲ್ ಪ್ರವಾಸದ ಬಳಿಕ ಸಚಿವರ ಪಟ್ಟಿ ಅಂತಿಮವಾಗಲಿದೆ.

    ಕಾಂಗ್ರೆಸ್ ಮೂಲಗಳ ಪ್ರಕಾರ 16ರಿಂದ 18 ಹಾಗೂ 10 ಜನ ಜೆಡಿಎಸ್ ಶಾಸಕರು ಮಂತ್ರಿಗಳಾಗಿ ಶುಕ್ರವಾರ ಅಥವಾ ಸೋಮವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

  • ಇಂದಿನಿಂದ ರಾಗಾ ವಿದೇಶ ಪ್ರವಾಸ- ಸಂಪುಟ ವಿಸ್ತರಣೆಯಲ್ಲಿ ಮತ್ತಷ್ಟು ವಿಳಂಬ

    ಇಂದಿನಿಂದ ರಾಗಾ ವಿದೇಶ ಪ್ರವಾಸ- ಸಂಪುಟ ವಿಸ್ತರಣೆಯಲ್ಲಿ ಮತ್ತಷ್ಟು ವಿಳಂಬ

    ನವದೆಹಲಿ: ಮೈತ್ರಿ ಸರಕಾರದ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಕಸರತ್ತು ಮುಂದುವರೆದಿದೆ. ಹೈಕಮಾಂಡ್‍ನೊಂದಿಗೆ ರಾಜ್ಯ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ರೂ ಅಂತಿಮ ತಿರ್ಮಾನಕ್ಕೆ ಬರುವಲ್ಲಿ ಸಫಲವಾಗಿಲ್ಲ.

    ಸಚಿವ ಸ್ಥಾನ ಮತ್ತು ಖಾತೆ ಹಂಚಿಕೆ ವಿಚಾರವಾಗಿ ಶನಿವಾರ ಸಂಜೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯೊಂದಿಗೆ ರಾಜ್ಯ ಕಾಂಗ್ರೆಸ್ ನಾಯಕರು ಸಭೆ ನಡೆಸಿದ್ರು. ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ರಾಜ್ಯ ಚುನಾವಣಾ ಉಸ್ತುವಾರಿ ಕೆ.ವೇಣುಗೋಪಾಲ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಸಭೆಯಲ್ಲಿ ಭಾಗವಹಿಸಿದ್ದರು.

    ಚರ್ಚೆ ವೇಳೆ ಕೆಲ ಜಿಲ್ಲೆಗಳಲ್ಲಿ ಸಚಿವ ಸ್ಥಾನ ಹಂಚಿಕೆ ಹಾಗೂ ಜಿಲ್ಲಾ ಉಸ್ತುವಾರಿ ನೀಡುವ ಬಗ್ಗೆ ಕೆಲ ಗೊಂದಲಗಳು ಸೃಷ್ಟಿಯಾಗಿದ್ದು, ಗೊಂದಲಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ಮಾಡಲು ದೆಹಲಿಗೆ ಬರುವಂತೆ ರಾಹುಲ್ ಗಾಂಧಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಬುಲಾವ್ ನೀಡಿದ್ರು. ಆದರೆ ಸಿಎಂ ವಿಧಾನಸೌಧದಲ್ಲಿ ನಡೆಯಲಿರುವ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಹಿನ್ನೆಲೆ ದೆಹಲಿಗೆ ತೆರಳಿಲ್ಲ ಅಂತಾ ಮೂಲಗಳು ಸ್ವಷ್ಟಪಡಿಸಿವೆ.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಇಂದು ಮಧ್ಯಾಹ್ನದಿಂದ ಮೂರು ದಿನಗಳ ಕಾಲ ವಿದೇಶ ಪ್ರವಾಸಕ್ಕೆ ತೆರಳುತ್ತಿರುವ ಹಿನ್ನೆಲೆ ಸಂಪುಟ ಸರ್ಕಸ್ ಇನ್ನು ಮೂರು ದಿನ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಇರುವ ಕಾರಣ ರಾಹುಲ್ ಗಾಂಧಿಯೊಂದಿಗೆ ಇಂದು ಬೆಳಗ್ಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಯೂ ಇದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

  • ದೂರದಿಂದ್ಲೇ ಗುರಿಯಿಟ್ಟು ರಾಹುಲ್ ಕೊರಳಿಗೆ ಹಾರ ಎಸೆದ ಅಭಿಮಾನಿ- ವಿಡಿಯೋ ಫುಲ್ ವೈರಲ್

    ದೂರದಿಂದ್ಲೇ ಗುರಿಯಿಟ್ಟು ರಾಹುಲ್ ಕೊರಳಿಗೆ ಹಾರ ಎಸೆದ ಅಭಿಮಾನಿ- ವಿಡಿಯೋ ಫುಲ್ ವೈರಲ್

    ತುಮಕೂರು: ಚುನಾವಣೆಯ ದಿನ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅಭಿಮಾನಿಯೋರ್ವ ದೂರದಿಂದಲೇ ಗುರಿಯಿಟ್ಟು ಕೊರಳಿಗೆ ಹೂವಿನ ಹಾರ ಹಾಕಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ಬುಧವಾರ ತುಮಕೂರಿನ ಬಿಎಚ್ ರಸ್ತೆಯ ರೋಡ್ ಶೋ ವೇಳೆ ಈ ಘಟನೆ ನಡೆದಿದೆ. ಅಭಿಮಾನಿ ಹಾರ ಎಸೆದ ದೃಶ್ಯವನ್ನು ಆತನ ಹಿಂದುಗಡೆಯಿದ್ದ ವ್ಯಕ್ತಿಯೊಬ್ಬರು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರಾಹುಲ್ ಗಾಂಧಿಯವರು ವಾಹನದ ಮೇಲೇರಿ ಜನಸಾಮಾನ್ಯರತ್ತ ಕೈ ಬೀಸಿ ಬರುತ್ತಿದ್ದಂತೆಯೇ ರಸ್ತೆಬದಿ ನಿಂತಿದ್ದ ಅಭಿಮಾನಿ ರಾಹಲ್ ನತ್ತ ಹೂವಿನ ಹಾರ ಎಸೆದಿದ್ದಾರೆ. ಈ ಹಾರ ನೇರವಾಗಿ ರಾಹುಲ್ ಅವರ ಕೊರಳಿಗೆ ಬಿದ್ದಿದೆ. ಕೂಡಲೇ ಅವರು ಕೊರಳಿಂದ ಹಾರ ತೆಗೆದು ತನ್ನ ಭದ್ರತಾ ಸಿಬ್ಬಂದಿ ಕೈಗೆ ನೀಡಿದ್ದಾರೆ.

    ಭದ್ರತೆಯ ದೃಷ್ಟಿಯಿಂದ ಎಸ್‍ಪಿಇಜಿಯವರು ರಾಹುಲ್ ಗಾಂಧಿಯವರಿಗೆ ಹಾರ ಹಾಕಲು ಗಣ್ಯರಿಗೂ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಭಿಮಾನಿ ಕಾರ್ಯಕರ್ತನೋರ್ವ ದೂರದಿಂದಲೇ ರಾಹುಲ್ ಕೊರಳಿಗೆ ಹಾರ ಎಸೆಯುವ ಮೂಲಕ ತನ್ನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

  • ಚುನಾವಣೆ ಗೆಲ್ಲಲು ಹಿರಿಯ ನಾಯಕರ ಸಲಹೆ, ಆಶೀರ್ವಾದ ಪಡೆಯಲು ಮುಂದಾದ್ರಾ ರಾಹುಲ್ ಗಾಂಧಿ?

    ಚುನಾವಣೆ ಗೆಲ್ಲಲು ಹಿರಿಯ ನಾಯಕರ ಸಲಹೆ, ಆಶೀರ್ವಾದ ಪಡೆಯಲು ಮುಂದಾದ್ರಾ ರಾಹುಲ್ ಗಾಂಧಿ?

    ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ಬಾರಿಯ ಚುನಾವಣೆ ಗೆಲ್ಲಲು ರಾಜ್ಯ ಕಾಂಗ್ರೆಸ್‍ನ ಹಿರಿಯ ನಾಯಕರ ಸಲಹೆ ಮತ್ತು ಆಶೀರ್ವಾದ ಪಡೆಯೋಕೆ ಮುಂದಾದ್ರಾ ಎಂಬ ಪ್ರಶ್ನೆಯೊಂದು ಇದೀಗ ರಾಜಕೀಯವಲಯದಲ್ಲಿ ಎದ್ದಿದೆ.

    ರಾಹುಲ್ ಗಾಂಧಿಯವರು ರಾಜ್ಯದ ಎಲ್ಲಾ ಹಿರಿಯ ನಾಯಕರನ್ನು ಮಾತನಾಡಿಸಿ ಸಮಾಧಾನಪಡಿಸಿ ಅಂತ ತಂಡವೊಂದನ್ನು ರಚಿಸಿದ್ದಾರೆ ಎಂಬ ಮಾಹಿತಿಯೊಂದು ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.

    ಹಿಂದೆ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ, ಹಾಲಿ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ ಹೆಗಲಿಗೆ ಹಿರಿಯರನ್ನು ಮಾತನಾಡಿಸಿ ಸಮಾಧಾನಪಡಿಸುವ ಜವಾಬ್ದಾರಿ ಕೊಟ್ಟಿದ್ದಾರೆ. ಟಿಕೆಟ್ ಹಂಚಿಕೆ ಸೇರಿದಂತೆ ಸಾಕಷ್ಟು ವಿಷಯಗಳ ಬಗ್ಗೆಯೂ ಹಿರಿಯರ ಸಲಹೆ ಪಡೆದು ಅದನ್ನು ಪಾಲಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ; ಬಿಜೆಪಿ ಹಿಂದುತ್ವ ಅಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ – ಜನಾರ್ದನ ಪೂಜಾರಿ ಸದ್ಬಳಕೆಗೆ ಮೆಗಾ ಪ್ಲಾನ್

    ಈ ಹಿನ್ನೆಲೆಯಲ್ಲಿ ಜಾಫರ್ ಶರೀಫ್, ಜನಾರ್ದನ ಪೂಜಾರಿ, ಎಂ.ವಿ.ರಾಜಶೇಖರನ್, ಹನುಮಂತಪ್ಪ, ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರನ್ನು ರಾಜ್ಯ ಭೇಟಿ ಸಂದರ್ಭದಲ್ಲಿ ಮಾತನಾಡಿಸಲು ಮಧುಸೂದನ್ ಮಿಸ್ತ್ರಿ ಮುಂದಾಗಿದ್ದಾರೆ. ಮಿಸ್ತ್ರಿಗೆ ರಾಜ್ಯದ ಹಿರಿಯ ನಾಯಕರೊಂದಿಗೆ ಆತ್ಮೀಯ ಒಡನಾಟವಿದ್ದು, ಪಕ್ಷದ ಪರವಾಗಿ ಹಿರಿಯರ ಮನವೊಲಿಕೆ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಕುದ್ರೋಳಿಯಲ್ಲಿ ಮನಸ್ಸಿನ ನೋವನ್ನು ರಾಹುಲ್ ಬಳಿ ತೋಡಿಕೊಂಡ ಪೂಜಾರಿ!

    ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಹಾಗೂ ಹಿರಿಯರ ವಿವಾದಾತ್ಮಕ ಹೇಳಿಕೆ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಮುಳುವಾಗಬಹುದು. ಆದ್ದರಿಂದ ಸ್ಕ್ರೀನಿಂಗ್ ಕಮಿಟಿ ಮುಖ್ಯಸ್ಥರನ್ನೇ ಹಿರಿಯ ನಾಯಕರ ಸಮಾಧಾನಕ್ಕಾಗಿ ಫೀಲ್ಡಿಗಿಳಿಸಲು ರಾಹುಲ್ ಗಾಂಧಿ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

  • ಶೃಂಗೇರಿ ಮಠದಲ್ಲಿ ಪಂಚೆ-ಶಲ್ಯದಲ್ಲಿ ದರ್ಶನ ಪಡೆದ ರಾಹುಲ್ – ಕಾಂಗ್ರೆಸ್ ಅಧ್ಯಕ್ಷರಿಗೆ ಹಳೆಯದನ್ನ ನೆನಪಿಸಿದ ಭಾರತೀತೀರ್ಥ ಶ್ರೀ

    ಶೃಂಗೇರಿ ಮಠದಲ್ಲಿ ಪಂಚೆ-ಶಲ್ಯದಲ್ಲಿ ದರ್ಶನ ಪಡೆದ ರಾಹುಲ್ – ಕಾಂಗ್ರೆಸ್ ಅಧ್ಯಕ್ಷರಿಗೆ ಹಳೆಯದನ್ನ ನೆನಪಿಸಿದ ಭಾರತೀತೀರ್ಥ ಶ್ರೀ

    ಚಿಕ್ಕಮಗಳೂರು: ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದಾರೆ.

    ಚಿಕ್ಕಮಗಳೂರಿನ ಶೃಂಗೇರಿ ಮಠಕ್ಕೆ ಭೇಟಿ ನೀಡಿದ ರಾಹುಲ್ ಅವರು ಮಠದ ಭಾರತೀತೀರ್ಥ ಸ್ವಾಮೀಜಿ ಜೊತೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ರಾಹುಲ್ ಸ್ವಾಮೀಜಿ ಅವರನ್ನು ಭೇಟಿ ಮಡುವ ಸಂದರ್ಭದಲ್ಲಿ ಉಳಿದ ಕಾಂಗ್ರೆಸ್ ನಾಯಕರನ್ನು ಹೊರಗೆ ಕಳುಹಿಸಿದ್ದು, ಈ ವೇಳೆ ರಾಹುಲ್ ಗೆ ಶ್ರೀಗಳು ಆಶೀರ್ವಚನ ನೀಡಿದ್ದಾರೆ.

    ಇದೇ ವೇಳೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಭೇಟಿಯ ಬಗ್ಗೆ ಶ್ರೀಗಳು ಮೆಲುಕು ಹಾಕಿದ್ರು. 1975ರಲ್ಲಿ ಅಜ್ಜಿ ಇಂದಿರಾ ಗಾಂಧಿ ಭೇಟಿ ನೀಡಿದ್ದರ ಬಗ್ಗೆ ಶ್ರೀಗಳು ರಾಹುಲ್‍ಗೆ ಮಾಹಿತಿ ನೀಡಿದ್ರು. ಅಲ್ಲದೇ ಇಂದಿರಾ ಗಾಂಧಿ ತಮ್ಮ ಭೇಟಿ ವೇಳೆ ಆಡಿದ್ದ ಮಾತುಗಳ ಬಗ್ಗೆ ಉಲ್ಲೇಖಿಸಿದರು ಎನ್ನಲಾಗಿದೆ.


    ಬಳಿಕ ಯಾವುದರ ರಕ್ಷಣೆಗೆ ಕಟಿಬದ್ಧರಾಗಿರಬೇಕು ಎಂದು ಶ್ರೀಗಳು ಧರ್ಮಬೋಧನೆ ಮಾಡಿದ್ರು. ನಿಮಗೆ ಉಜ್ವಲ ಭವಿಷ್ಯ ಇದೆ. ಆದರೆ ಅದಕ್ಕೆ ಇನ್ನಷ್ಟು ಕಷ್ಟಪಡಬೇಕು. ಹಿಂದೂ ಧರ್ಮದ ರಕ್ಷಣೆಗೆ ಸದಾ ಕಟಿಬದ್ಧರಾಗಿರಿ. ಯಾವುದೇ ರೀತಿಯಲ್ಲೂ ಧರ್ಮ ವಿರೋಧಿ ಕೆಲಸಕ್ಕೆ ಅವಕಾಶ ನೀಡಬೇಡಿ. ನಿಮಗೆ ಒಳ್ಳೆದಾಗಲಿ, ನಿಮ್ಮ ಸಕಲ ಇಷ್ಟಾರ್ಥ ಸಿದ್ಧಿಸಲಿ ಅಂತ ರಾಹುಲ್ ಗಾಂಧಿ ಶಿರದ ಮೇಲೆ ಕೈ ಇಟ್ಟು ಭಾರತೀತೀರ್ಥ ಸ್ವಾಮೀಜಿ ಹರಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ನಂತರ ಸ್ವಾಮೀಜಿಯವರು ರಾಹುಲ್ ಅವರಿಗೆ ಶಾಲು ಹೊದಿಸಿ, ಫಲ-ತಾಂಬೂಲ ಕೊಟ್ಟು ಆಶೀರ್ವಾದ ನೀಡಿದ್ದಾರೆ.

  • ಮಂಗ್ಳೂರಲ್ಲಿ ರಾಹುಲ್ ಗಾಂಧಿ ಯಾತ್ರೆ- ಪೊಲೀಸ್ ಜೀಪ್ ಹತ್ತಿ ಕೈ ಕಾರ್ಯಕರ್ತರ ದರ್ಬಾರ್

    ಮಂಗ್ಳೂರಲ್ಲಿ ರಾಹುಲ್ ಗಾಂಧಿ ಯಾತ್ರೆ- ಪೊಲೀಸ್ ಜೀಪ್ ಹತ್ತಿ ಕೈ ಕಾರ್ಯಕರ್ತರ ದರ್ಬಾರ್

    ಮಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯಾತ್ರೆಯಲ್ಲಿ ಕಾರ್ಯಕರ್ತರು ಪುಂಡಾಟ ಮೆರೆದಿದ್ದಾರೆ. ಮಂಗಳವಾರ ಮಂಗಳೂರಿನ ಜ್ಯೋತಿ ವೃತ್ತದಿಂದ ಯಾತ್ರೆ ತೆರಳುತ್ತಿದ್ದಾಗ ರಾಹುಲ್ ಬೆಂಗಾವಲಿಗಿದ್ದ ಪೊಲೀಸ್ ಜೀಪ್ ಮೇಲೇರಿ ಯಾತ್ರೆ ನಡೆಸಿದ್ದಾರೆ.

    ಪೊಲೀಸರು ಜೀಪಿನಿಂದ ಇಳಿಯಲು ಸೂಚಿಸಿದರೂ, ಕಾರ್ಯಕರ್ತರು ಯಾರ ಮಾತನ್ನೂ ಕೇಳುತ್ತಿರಲಿಲ್ಲ. ತಮ್ಮದೇ ಆಡಳಿತ, ತಮ್ಮದೇ ದಾರಿ ಎನ್ನುವಂತೆ ಪೊಲೀಸ್ ಜೀಪು ಎಂಬ ಭಾವನೆ ಬಿಟ್ಟು ಯಾರದೋ ವಾಹನ ಎಂಬಂತೆ ವರ್ತಿಸಿದ್ದಾರೆ.

    ಮಂಗಳೂರಿನ ಹಂಪನಕಟ್ಟೆ ವೃತ್ತದಿಂದ ಕ್ಲಾಕ್ ಟವರ್ ವರೆಗೂ ಜನಜಂಗುಳಿ ಮಧ್ಯೆ ಈ ಪುಂಡಾಟ ನಡೆದಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಅಲ್ಲದೆ, ಆ ಸನ್ನಿವೇಶದ ಫೋಟೊ, ವಿಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪುಂಡಾಟ ಮೆರೆದ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.

    ಇದಲ್ಲದೆ ಯಾತ್ರೆ ಉದ್ದಕ್ಕೂ ಭದ್ರತೆಗೆ ನಿಯೋಜಿಸಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಲಾಠಿ, ಹಿಡಿದುಕೊಂಡಿದ್ದ ಹಗ್ಗವನ್ನು ಎಳೆದಾಡಿದ್ದಾರೆ. ಪೊಲೀಸರು ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಕ್ಕೆ ಹಿಂದೇಟು ಹಾಕಿದ್ದಾರೆ.

    ಮಂಗಳವಾರ ರಾತ್ರಿ ಉಳ್ಳಾಲದಲ್ಲಿ ರಸ್ತೆ ಮಧ್ಯೆ ತಳ್ಳಾಟ ನಡೆಸಿದ ಕಾರ್ಯಕರ್ತರಿಗೆ ಲಾಠಿಚಾರ್ಜ್ ಮಾಡಿದರೆಂಬ ಕಾರಣಕ್ಕೆ ಪೊಲೀಸ್ ಪೇದೆಯನ್ನು ತಕ್ಷಣವೇ ಸಸ್ಪೆಂಡ್ ಮಾಡಲಾಗಿದೆ. ಹಾಗಾದ್ರೆ ಪುಂಡಾಟಿಕೆ ಮೆರೆದಿರುವ ವಿಡಿಯೋ ಸಾಕ್ಷ್ಯ ಇದ್ದರೂ ಅವರ ಮೇಲೇಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಇಲ್ಲ ಎನ್ನುವ ಪ್ರಶ್ನೆ ಕೇಳಿಬಂದಿದೆ.

  • ಶಿಷ್ಟಾಚಾರ ಮುರಿದು ಶಾಲೆಗೆ ಭೇಟಿಕೊಟ್ಟ ರಾಹುಲ್ ಗಾಂಧಿ

    ಶಿಷ್ಟಾಚಾರ ಮುರಿದು ಶಾಲೆಗೆ ಭೇಟಿಕೊಟ್ಟ ರಾಹುಲ್ ಗಾಂಧಿ

    ಉಡುಪಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ರಾಜ್ಯದ ಮೂರನೇ ಜನಾಶೀರ್ವಾದ ಯಾತ್ರೆ ಬಿರುಸಿನಿಂದ ನಡೆದಿದೆ. ಉಡುಪಿ ಜಿಲ್ಲೆ ಕಾಪು ತಾಲೂಕಿನ ಎರ್ಮಾಳು ಸರ್ಕಾರಿ ಶಾಲೆಯ ಮೈದಾನದಲ್ಲಿ ಇಳಿದ ರಾಹುಲ್ ಗಾಂಧಿ ಮೊದಲು ರಾಜ್ಯ, ಕೇಂದ್ರ ನಾಯಕರಿಂದ ಗೌರವ ಸ್ವೀಕರಿಸಿದರು.

    ಇದಾದ ಬಳಿಕ ಶಾಲೆಯ ಜಗಲಿಗೆ ಬಂದ ರಾಹುಲ್ ಗಾಂಧಿ, ಮಕ್ಕಳ ಜೊತೆ ಬೆರೆತರು. ಶಿಕ್ಷಣ ಮತ್ತು ಊಟದ ಬಗ್ಗೆ ವಿಚಾರಿಸಿದರು. ಶಿಕ್ಷಕಿಯ ಜೊತೆ ಮಾತುಕತೆ ಮಾಡಿದರು. ಹೇಗಿದ್ದೀರಿ? ಚೆನ್ನಾಗಿದ್ದಿರಾ? ಊಟ ಮಾಡಿದ್ರಾ? ಅಂತ ಎಲ್ಲರನ್ನು ವಿಚಾರಿಸುತ್ತಾ ಎಲ್ಲಾ ಮಕ್ಕಳ ಕೈ ಕುಲುಕಿದರು.

    ಕೈ ಕುಲುಕುತ್ತಿದ್ದಂತೆ ಸಂಭ್ರಮಿಸಿದ ಮಕ್ಕಳು ರಾಹುಲ್ ಗಾಂಧಿ ಅವರನ್ನು ಅಪ್ಪಿಕೊಂಡರು. ಎರ್ಮಾಳು ತೆಂಕದ ಸರ್ಕಾರಿ ಹೈಸ್ಕೂಲು ಮಕ್ಕಳು ರಾಹುಲ್ ಗಾಂಧಿಯವರನ್ನು ಹತ್ತಿರದಿಂದ ಕಂಡು ಖುಷಿಪಟ್ಟರು. ಅಲ್ಲಿಂದ ಎರ್ಮಾಳ್ ಗೆ ಆಗಮಿಸಿದ ರಾಹುಲ್ ಗಾಂಧಿ, ಮೀನು ಬೆಳೆಗಾರರ ಜೊತೆ ಸಂವಾದ ನಡೆಸಿದರು. ರಾಹುಲ್ ಸುಮಾರು 15 ರಿಂದ 20 ನಿಮಿಷ ಮಾತುಕತೆ ನಡೆಸಿದ ರಾಹುಲ್ ಮೀನು ಬೆಳೆಗಾರರ ಜೊತೆ ಎಳನೀರು ಸೇವಿಸಿದರು.

    ರಾಹುಲ್ ಗಾಂಧಿಗೆ ನೀರು ದೋಸೆ, ಮೀನಿನ ಖಾದ್ಯದ ವ್ಯವಸ್ಥೆ ಮಾಡಲಾಗಿತ್ತು. ನಂತರ ರಾಜಕೀಯ ತರಬೇತಿ ಕೇಂದ್ರವನ್ನು ಉದ್ಘಾಟನೆ ಮಾಡಿ ಮಾತನಾಡಿ, ದೇಶದಲ್ಲಿ ಜನ ಯೋಚಿಸುವ ರೀತಿ ಬದಲಾಗಿದೆ. ಜನರ ಅಪೇಕ್ಷೆಗೆ ತಕ್ಕಂತೆ ನಡೆದುಕೊಳ್ಳಬೇಕಾಗಿದೆ. ಸೇವಾದಳ ಸಂಸ್ಥೆ ರಾಜಕೀಯ ತರಬೇತಿ ನೀಡಲಿದ್ದು, ರಾಜ್ಯದ ಮೊದಲ ಟ್ರೈನಿಂಗ್ ಸೆಂಟರ್ ಎಂಬ ಹೆಗ್ಗಳಿಕೆಗೆ ರಾಗ್ನಾ ಪಾತ್ರವಾಗಿದೆ ಅಂದ್ರು. ರೋಡ್ ಶೋ ನಡೆಸಿದ ರಾಹುಲ್ ರಸ್ತೆ ಬದಿ ನಿಂತಿದ್ದ ಜನಕ್ಕೆ ಕೈ ಬೀಸಿದರು.

     

  • ನಾಳೆ ರಾಹುಲ್ ಗಾಂಧಿ ಕರಾವಳಿ ಪ್ರವಾಸ – ರಾಜಕೀಯ ತರಬೇತಿ ಕೇಂದ್ರ ಉದ್ಘಾಟಿಸಿ ರೋಡ್ ಶೋ

    ನಾಳೆ ರಾಹುಲ್ ಗಾಂಧಿ ಕರಾವಳಿ ಪ್ರವಾಸ – ರಾಜಕೀಯ ತರಬೇತಿ ಕೇಂದ್ರ ಉದ್ಘಾಟಿಸಿ ರೋಡ್ ಶೋ

    ಉಡುಪಿ: ಉತ್ತರ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲಿ ಜನಾಶೀರ್ವಾದ ಯಾತ್ರೆ ನಡೆಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರದಿಂದ ಕರಾವಳಿ ಪ್ರವಾಸ ಕೈಗೊಳ್ಳಲಿದ್ದಾರೆ.

    ಮಾರ್ಚ್ 20 ಮತ್ತು 21 ರಂದು ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಎರಡನೇ ಹಂತದ ಯಾತ್ರೆ ನಡೆಸಲಿದ್ದಾರೆ. ಪಕ್ಷದ ಮೀಟಿಂಗ್- ಸಾರ್ವಜನಿಕ ಸಭೆಯ ಜೊತೆ ರಾಗಾ ಹಿಂದೂ ಕ್ರಿಶ್ಚಿಯನ್ ಮತ್ತು ಮುಸಲ್ಮಾನ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೂ ಭೇಟಿ ಕೊಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷರನ್ನು ಮೊದಲ ಬಾರಿಗೆ ಕರಾವಳಿಗೆ ಸ್ವಾಗತಿಸಲು ಕಾಂಗ್ರೆಸ್ ಸಜ್ಜಾಗಿದೆ.

    ನಾಳೆ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ರಾಹುಲ್, ಎರಡು ದಿನ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಉಡುಪಿ ಜಿಲ್ಲೆಯ ತೆಂಕ ಎರ್ಮಾಳು ಎಂಬಲ್ಲಿ ರಾಜೀವ್ ಗಾಂಧಿ ರಾಜಕೀಯ ತರಬೇತಿ ಸಂಸ್ಥೆ ಉದ್ಘಾಟನೆ ಮಾಡಲಿದ್ದಾರೆ. ಸುಮಾರು 350 ಮಂದಿ ಸೇವಾದಳದ ಕಾರ್ಯಕರ್ತರನ್ನು ಉದ್ದೇಶಿಸಿ ರಾಗಾ ಮಾತನಾಡಲಿದ್ದಾರೆ. ಬಳಿಕ ಪಡುಬಿದ್ರೆ ತನಕ ಸುಮಾರು ನಾಲ್ಕು ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ಪಡುಬಿದ್ರೆ ಜಂಕ್ಷನ್ ನಲ್ಲಿ ಸುಮಾರು 15 ಸಾವಿರ ಜನರನ್ನು ಉದ್ದೇಶಿಸಿ ರಾಹುಲ್ ಮತ್ತು ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಗ್ರಾಮ ಮಟ್ಟದ ಸಭೆಗಳನ್ನು ಮಾಡಿದ್ದೇವೆ. ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಕಾರ್ಯಕರ್ತರನ್ನು ಜೋಡಣೆ ಮಾಡುವ ಕೆಲಸಕಾರ್ಯಗಳು ಆಗಿದೆ. ಪಡುಬಿದ್ರೆಯಲ್ಲಿ 15 ಸಾವಿರಕ್ಕೂ ಹೆಚ್ಚು ಜನ ಕಾರ್ನರ್ ಮೀಟಿಂಗ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಬಂದೋಬಸ್ತ್ ಮೀಟಿಂಗ್ ಆಗಿದೆ. 1983ರಲ್ಲಿ ರಾಜೀವ್ ಗಾಂಧಿ ನನ್ನ ಕ್ಷೇತ್ರ ಪುತ್ತೂರಲ್ಲಿ ಪ್ರಚಾರ ಭಾಷಣ ಉದ್ಘಾಟಿಸಿದ್ದರು. ಈಗ ರಾಹುಲ್ ಗಾಂಧಿ ಅವರು ನನ್ನ ಕಾಪು ಕ್ಷೇತ್ರಕ್ಕೆ ಬರುತ್ತಿರುವುದು ಸುಯೋಗ ಅಂತ ಹೇಳಿದ್ರು.

    ರಾಹುಲ್ ಕರಾವಳಿ ಪ್ರವಾಸದ ಹೊತ್ತಿಗೇ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುವ ಸುದ್ದಿ ಜೋರಾಗಿ ಚರ್ಚೆಯಾಗುತ್ತಿದೆ. ಇದೇ ತಿಂಗಳಾಂತ್ಯಕ್ಕೆ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎನ್ನಲಾಗುತ್ತಿದೆ. ಆದ್ರೆ ಇದನ್ನು ಸಾರಾ ಸಗಟಾಗಿ ಅಲ್ಲಗಳೆದಿರುವ ಅವರು ನಾನೇ ರಾಹುಲ್ ಗಾಂಧಿಯವರನ್ನು ಸ್ವಾಗತಿಸುವುದರಲ್ಲಿ ಮೊದಲಿಗ. ಸುಳ್ಳು ಅಪಪ್ರಚಾರಗಳಿಗೆ ಜನ ಕಿವಿಗೊಡಬಾರದು. ರಾಹುಲ್ ಗಾಂಧಿ ಕರಾವಳಿಗೆ ಬರುತ್ತಿರುವುದು ಯುವಕರಲ್ಲಿ ಉತ್ಸಾಹ ಹೆಚ್ಚಿಸಿದೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

    ರಾಜಕೀಯ ಸಮಾವೇಶದ ಜೊತೆ ಮಂಗಳೂರಿನ ಕುದ್ರೋಳಿ ಗೋಕರ್ಣಾಥೇಶ್ವರ ದೇವಸ್ಥಾನ, ರೋಜಾರಿಯೋ ಚರ್ಚ್, ಉಳ್ಳಾಲ ದರ್ಗಾಕ್ಕೆ ಭೇಟಿಯಾಗಲಿದ್ದಾರೆ. ಒಟ್ಟಿನಲ್ಲಿ ಕರಾವಳಿ ಜಿಲ್ಲೆಯಲ್ಲಿ ರಾಹುಲ್ ಪ್ರವಾಸ ಯುವಕರಲ್ಲಿ ಚೈತನ್ಯ ಹುಟ್ಟಿಸಿದೆ.

  • ಪ್ರಧಾನಿಗಳು ಜೈಲಿಗೆ ಹೋದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ: ಸಿಎಂ ಸಿದ್ದರಾಮಯ್ಯ

    ಪ್ರಧಾನಿಗಳು ಜೈಲಿಗೆ ಹೋದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ: ಸಿಎಂ ಸಿದ್ದರಾಮಯ್ಯ

    ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿಯವರು ಜೈಲಿಗೆ ಹೋಗಿ ಬಂದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆಂದು ಬಿಜೆಪಿಯವರ ಬಗ್ಗೆ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯನವರು ವಾಗ್ದಾಳಿ ನಡೆಸಿದರು.

    ಬೆಳಗಾವಿಯ ಅಥಣಿಯಲ್ಲಿ ನಡೆದ ಜನಾಶೀರ್ವಾದ ಯಾತ್ರೆ ವೇಳೆ ಮಾತನಾಡಿದ ಅವರು, ಪ್ರಧಾನಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಪಕ್ಕದಲ್ಲಿ ಕೂತಿರುವವರು ಜೈಲಿಗೆ ಹೋಗಿದ್ದವರು ಎಂಬುವುದು ತಿಳಿದಿಲ್ಲವಾ ಎಂದು ಪ್ರಶ್ನಿಸಿದರು.

    ರಾಜ್ಯದ ಜನತೆಗೆ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ. ನೀವು (ಬಿಜೆಪಿ) ಕೇಂದ್ರದಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದಿರಾ? ಪ್ರಧಾನಿಗಳೇ ಬನ್ನಿ ಅಭಿವೃದ್ಧಿ ಬಗ್ಗೆ ಮಾತಾಡೋಣವೆಂದು ಎಂದು ಸವಾಲು ಎಸೆದರು.

    ಉದ್ಯಮಿಗಳ ಸಾಲಮನ್ನಾ: ಕೇಂದ್ರ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡಿ ಎಂದರೆ ಉದ್ಯಮಿಗಳ ಸಾಲ ಮನ್ನಾ ಮಾಡುತ್ತಿದ್ದಾರೆ. ನಿಮಗೆ ನಾಚಿಕೆಯಾಗಬೇಕು. ರೈತರ ಸಾಲ ಮನ್ನಾ ಮಾಡಿ ಎಂದರೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಹಣ ನೀಡಿಲ್ಲ ಎಂದು ಹೇಳುತ್ತಾರೆ ಎಂದರು.

    ನಮ್ಮ ಸರ್ಕಾರ ಹಲವು ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದೆ. ಅಮಿತ್ ಶಾ, ಮೋದಿ ಅವರು ನೂರು ಬಾರಿ ರಾಜ್ಯಕ್ಕೆ ಬಂದು ತಿಪ್ಪರಲಾಗಾ ಹಾಕಿದರೂ ಬಿಜೆಪಿ ಗೆಲುವುದಿಲ್ಲ. ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಇಡೀ ದೇಶದಲ್ಲಿ ಕರ್ನಾಟಕ ಮಾದರಿ ರಾಜ್ಯವಾಗಿದೆ. ಸಮಾವೇಶದಲ್ಲಿ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದೀರಾ, ಇದನ್ನು ನೋಡಿದರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸಹ ರಾಜ್ಯಕ್ಕೆ ಬಂದರು ಕೇಂದ್ರದ ಸಾಧನೆಗಳನ್ನು ಹೇಳುತ್ತಿಲ್ಲ. ಅದರ ಬದಲಾಗಿ ರಾಜ್ಯ ಸರ್ಕಾರದ ಮೇಲೆ ಆಧಾರರಹಿತ, ಸುಳ್ಳು ಆರೋಪ ಮಾಡ್ತಿದ್ದಾರೆಂದು ಆರೋಪಿಸಿದರು.

    ರಾಜ್ಯ ಸರ್ಕಾರದ ವಿರುದ್ಧದ ಆರೋಪಗಳಿಗೆ ದಾಖಲೆ ನೀಡಲು ಮೋದಿ ಅವರು ವಿಫಲರಾಗಿದ್ದಾರೆ. ಅವರು ಪ್ರಧಾನಿ ಆಗಲು ಆರ್ಹರಲ್ಲ. ಪಿಎನ್ ಬಿ ಬ್ಯಾಂಕಿಗೆ ನೀರವ್ ಮೋದಿಯವರು ವಂಚನೆ ಮಾಡಿ ಓಡಿ ಹೋಗಿದ್ದಾರೆ. ಪ್ರಧಾನಿಗಳ ಬೆಂಬಲ ಇಲ್ಲದೇ ನೀರವ್ ದೇಶ ಬಿಟ್ಟು ಹೋಗಲು ಆಗುತ್ತಿತ್ತ ಎಂದು ಪ್ರಶ್ನಿಸಿದರು. ಇದಕ್ಕೂ ಮುನ್ನ ಸಾಧನ ಸಮಾವೇಶ ಯಾತ್ರೆಯನ್ನು ಯಶ್ವಸಿಯಾಗಿ ಏರ್ಪಡಿಸಿದ್ದ ಜಿಲ್ಲೆಯ ನಾಯಕರಿಗೆ ಅಭಿನಂದನೆ ಸಲ್ಲಿಸಿದರು.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಕಳೆದ ಬಾರಿ ಪ್ರವಾಸದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಯಾತ್ರೆ ಮಾಡಿದ್ದರು. ಈ ಬಾರಿ ಮುಂಬೈ ಕರ್ನಾಟಕದಲ್ಲಿ ಯಾತ್ರೆ ಮುಂದುವರೆಸಿದ್ದಾರೆ. ಇದರ ಭಾಗವಾಗಿ ಇಂದು ಬೆಳಗಾವಿಯ ಅಥಣಿಯಲ್ಲಿ ಯಾತ್ರೆಯನ್ನು ಆರಂಭಿಸಿದರು. ರಾಹುಲ್ ಅವರನ್ನು ನೋಡಲು ಜಿಲ್ಲೆಯ ಹಲವು ಭಾಗಗಳಿಂದ ಹೆಚ್ಚು ಜನರು ಭಾಗವಹಿಸಿದ್ದರು.

    https://www.youtube.com/watch?v=rzVirCafVr4