Tag: ಎಐಸಿಸಿ ಅಧ್ಯಕ್ಷ

  • ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ – ಮತದಾರರ ಪಟ್ಟಿಗಾಗಿ ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಭಿನ್ನಮತ

    ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ – ಮತದಾರರ ಪಟ್ಟಿಗಾಗಿ ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಭಿನ್ನಮತ

    ನವದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಭಿನ್ನಮತ ಶುರುವಾಗಿದ್ದು, ಮೂವರು ಹಿರಿಯ ಸಂಸದರು ಮತದಾರರ ಪಟ್ಟಿಯನ್ನು ಬಹಿರಂಗಗೊಳಿಸುವಂತೆ ಹೈಕಮಾಂಡ್ ನಾಯಕರಿಗೆ ಸಾರ್ವಜನಿಕವಾಗಿ ಒತ್ತಾಯಿಸಿದ್ದಾರೆ.

    ಜಿ 23 ನಾಯಕ ಆನಂದ್ ಶರ್ಮಾ ಮೊದಲು ಈ ಬೇಡಿಕೆಯನ್ನು ಇಟ್ಟಿದ್ದರು. ಭಾನುವಾರ ನಡೆದ ಸಿಡಬ್ಲೂಸಿ ಸಭೆಯಲ್ಲಿ ಮತದಾರರ ಪಟ್ಟಿ ನೀಡುವಂತೆ ಒತ್ತಾಯಿಸಿದ್ದರು. ಇದಾದ ಬಳಿಕ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಾಗಿ ಪಟ್ಟಿ ನೀಡಬೇಕು. ಇದು ಅಭ್ಯರ್ಥಿಗಳಿಗೆ ಸಹಾಯವಾಗಲಿದೆ ಎಂದು ಮನೀಷ್ ತಿವಾರಿ ಹೇಳಿದ್ದರು. ಈ ಹೇಳಿಕೆಗೆ ಸಂಸದ ಶಶಿ ತರೂರ್ ಹಾಗೂ ಕಾರ್ತಿ ಚಿದಂಬರಂ ಕೂಡಾ ಬೆಂಬಲ ನೀಡಿದ್ದಾರೆ. ಇದನ್ನೂ ಓದಿ: ಮದುವೆಯಾಗೋ ನೆಪದಲ್ಲಿ ಕಾರ್ಯಕರ್ತೆ ಮೇಲೆ ತೆಲಂಗಾಣದ ಕಾಂಗ್ರೆಸ್ ಮುಖಂಡನಿಂದ ಅತ್ಯಾಚಾರ

    ಈ ಬಗ್ಗೆ ಪ್ರತಿಕ್ರಿಯಿಸಿದ ಎಐಸಿಸಿ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ, ಪಿಸಿಸಿ ಪ್ರತಿನಿಧಿಗಳು ಮತದಾರರ ಪಟ್ಟಿಯನ್ನು ರಾಜ್ಯ ಪ್ರಧಾನ ಕಚೇರಿಯಲ್ಲಿ ವೀಕ್ಷಿಸಬಹುದು, ಕ್ರೋಢೀಕೃತ ಪಟ್ಟಿಯನ್ನು ಅಭ್ಯರ್ಥಿಗಳಿಗೆ ನೀಡಲಾಗುವುದು ಎಂದರು.

    ಎಐಸಿಸಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಮತದಾರರ ಪಟ್ಟಿಗಳನ್ನು ಪ್ರಕಟಿಸುವ ಬೇಡಿಕೆಯನ್ನು ತಿರಸ್ಕರಿಸಿದರು. ಇದು ಮನೆಯೊಳಗಿನ ಕಾರ್ಯವಿಧಾನವಾಗಿದ್ದು, ಇದನ್ನು ಎಲ್ಲರಿಗೂ ನೋಡುವಂತೆ ಪ್ರಕಟಿಸಬಾರದು. ಅಂತಹ ಯಾವುದೇ ಅಭ್ಯಾಸ ಪಕ್ಷದಲ್ಲಿಲ್ಲ, ನಾವು ಹಳೆಯ ಪದ್ಧತಿಯನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

    ಹೈಕಮಾಂಡ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಮನೀಷ್ ತಿವಾರಿ, ಸಾರ್ವಜನಿಕವಾಗಿ ಲಭ್ಯವಿರುವ ಮತದಾರರ ಪಟ್ಟಿಯಿಲ್ಲದೇ ನ್ಯಾಯಯುತ ಮತ್ತು ಮುಕ್ತ ಚುನಾವಣೆ ಹೇಗೆ ನಡೆಯುತ್ತದೆ? ನ್ಯಾಯಯುತ ಮತ್ತು ಮುಕ್ತ ಪ್ರಕ್ರಿಯೆಯ ಮೂಲತತ್ವವೆಂದರೆ ಮತದಾರರ ಹೆಸರುಗಳು ಮತ್ತು ವಿಳಾಸಗಳು “ಯಾರು ಮತದಾರರು ಎಂದು ತಿಳಿಯಲು ಯಾಕೆ ಪ್ರತಿ ಪಿಸಿಸಿ ಕಚೇರಿಗೆ ಏಕೆ ಹೋಗಬೇಕು ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪಂದ್ಯ ಸೋತ್ರೂ ರೋಮ್ಯಾಂಟಿಕ್ ಮೂಡ್- ಗೆಳತಿಗೆ ಪ್ರಪೋಸ್ ಮಾಡಿದ ಕ್ರಿಕೆಟಿಗ

    ಯಾರು ನಾಮ ನಿರ್ದೇಶನ ಮಾಡಬಹುದು ಮತ್ತು ಯಾರಿಗೆ ಮತ ಹಾಕಬಹುದು ಎಂಬುದು ಎಲ್ಲರಿಗೂ ತಿಳಿದಿರಬೇಕು. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಶಶಿ ತರೂರ್ ಹೇಳಿದರು. ಸುಧಾರಣಾವಾದಿಗಳು ಬಂಡುಕೋರರಲ್ಲ ಎಂದು ಟ್ವೀಟ್ ಮಾಡಿದ ಕಾರ್ತಿ ಚಿದಂಬರಂ, “ಪ್ರತಿ ಚುನಾವಣೆಗೆ ಉತ್ತಮವಾಗಿ ವ್ಯಾಖ್ಯಾನಿಸಲಾದ ಮತ್ತು ಸ್ಪಷ್ಟವಾದ ಎಲೆಕ್ಟೋರಲ್ ಕೊಲೇಜು ಬೇಕು ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಕಚೇರಿ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ ‘ಕೈ’ ಕಾರ್ಯಕರ್ತ

    ಕಾಂಗ್ರೆಸ್ ಕಚೇರಿ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ ‘ಕೈ’ ಕಾರ್ಯಕರ್ತ

    – ರಾಜೀನಾಮೆ ನಿರ್ಧಾರ ಕೈಬಿಡಿ ರಾಹುಲ್ ಗಾಂಧಿಗೆ ಒತ್ತಾಯ

    ನವದೆಹಲಿ: ರಾಜೀನಾಮೆ ನಿರ್ಧಾರ ಕೈಬಿಡುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಒತ್ತಾಯಿಸಿ ಕಾರ್ಯಕರ್ತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

    ದೆಹಲಿಯ ಕಾಂಗ್ರೆಸ್ ಕಚೇರಿಯ ಎದುರಿಗೆ ಇದ್ದ ಮರಕ್ಕೆ ಕಾಂಗ್ರೆಸ್ ಕಾರ್ಯಕರ್ತ ನೇಣು ಹಾಕಿಕೊಳ್ಳಲು ಮುಂದಾಗಿದ್ದ. ಇದನ್ನು ನೋಡಿದ ಪೊಲೀಸರು ತಕ್ಷಣವೇ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಕಾರ್ಯಕರ್ತ ಮರವನ್ನು ಹಿಡಿದು ಜೋತು ಬಿದ್ದಿದ್ದ. ಹೀಗಾಗಿ ಸ್ಥಳೀಯರ ಸಹಾಯದಿಂದ ಆತನನ್ನು ಪೊಲೀಸರು ರಕ್ಷಿಸಿದ್ದಾರೆ.

    ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರ ರಾಜೀನಾಮೆ ವಿರೋಧಿಸಿ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಹಾಗೂ ರಾಜಸ್ಥಾನದ ಸಹ-ಉಸ್ತುವಾರಿ ತರುಣ್ ಕುಮಾರ್ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

    ಪಕ್ಷವು ನನಗೆ 2017ರಲ್ಲಿಯೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಿದೆ. ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಮುನ್ನಡೆ ಸಾಧಿಸಿ, ಸರ್ಕಾರ ರಚನೆ ಮಾಡಿದ್ದೇವೆ. ಲೋಕಸಭಾ ಚುನಾವಣೆ ವೇಳೆಯೂ ಉತ್ತಮ ರೀತಿಯಲ್ಲಿ ಪ್ರಚಾರ ಹಾಗೂ ಪಕ್ಷ ಸಂಘಟನೆ ಮಾಡಿದ್ದೇವು. ಆದರೆ ಫಲಿತಾಂಶ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಪಕ್ಷದ ಸೋಲನ್ನು ಸಂಪೂರ್ಣವಾಗಿ ನೀವು ಹೊತ್ತು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವಿರಿ. ಈ ಸೋಲಿಗೆ ನಾವು ಕೂಡ ಜವಾಬ್ದಾರರಾಗಿದ್ದೇವೆ. ಹೀಗಾಗಿ ನಿಮಗೆ ರಾಜೀನಾಮೆ ಪತ್ರ ನೀಡುತ್ತಿರುವೆ ಎಂದು ತರುಣ್ ಕುಮಾರ್, ರಾಹುಲ್ ಗಾಂಧಿ ಅವರಿಗೆ ತಿಳಿಸಿದ್ದರು.

    ರಾಹುಲ್ ಗಾಂಧಿ ಅವರೇ ಪಕ್ಷವನ್ನು ಮುನ್ನಡೆಸಬೇಕು ಎಂದು ಅನೇಕ ಯುವಕರು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್‍ನ ಹಿರಿಯ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.

    ಕಾಂಗ್ರೆಸ್‍ನ ಮಧ್ಯಪ್ರದೇಶ ಘಟಕದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದೀಪಕ್ ಬಬಾರಿಯಾ ಮತ್ತು ಗೋವಾ ಕಾಂಗ್ರೆಸ್ ಘಟಕ ಅಧ್ಯಕ್ಷ ಗಿರೀಶ್ ಚೊಡನ್‍ಕರ್ ಅವರು ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ಎಐಸಿಸಿ ಪ್ರಧಾನ ಕಚೇರಿಗೆ ಭೇಟಿ ನೀಡಿದ 300ಕ್ಕೂ ಹೆಚ್ಚು ಯುವ ನಾಯಕರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

  • ವೀರ ಸಾವರ್ಕರ್ ಹೇಡಿ: ರಾಹುಲ್ ಗಾಂಧಿ ವಿರುದ್ಧ ದೂರು

    ವೀರ ಸಾವರ್ಕರ್ ಹೇಡಿ: ರಾಹುಲ್ ಗಾಂಧಿ ವಿರುದ್ಧ ದೂರು

    ನವದೆಹಲಿ: ವೀರ ಸಾವರ್ಕರ್ ಅವರನ್ನು ಹೇಡಿ ಎಂದು ಕರೆದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಹಾರಾಷ್ಟ್ರದ ಪುಣೆಯಲ್ಲಿ ದೂರು ದಾಖಲಾಗಿದೆ.

    ನವದೆಹಲಿಯಲ್ಲಿ ಇತ್ತೀಚೆಗೆ ನಡೆದಿದ್ದ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು, ವೀರ ಸಾವರ್ಕರ್ ಅವರನ್ನು ಹೇಡಿ ಅಂತ ಅವಮಾನಿಸಿದ್ದಾರೆ. ಅಷ್ಟೇ ಅಲ್ಲದೆ ಅವಿಧೇಯ ಭಾಷೆ ಬಳಸಿ ಸಾರ್ವಜನಿಕರ ಭಾವನೆಗೆ ಧಕ್ಕೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಇಂತಹ ಹೇಳಿಕೆ ವಿಚಾರವಾಗಿ ರಾಹುಲ್ ಗಾಂಧಿ ಅವರ ವಿರುದ್ಧ ದೂರು ದಾಖಲಾಗುತ್ತಿರುವುದು ಇದು ಮೊದಲೇನಲ್ಲ. ಕಳೆದ ವರ್ಷ ನವೆಂಬರ್ ನಲ್ಲಿ ಛತ್ತೀಸ್‍ಗಢ ಚುನಾವಣಾ ರ‍್ಯಾಲಿ ಭಾಷಣದಲ್ಲಿ, ವೀರ ಸಾವರ್ಕರ್ ಅವರು 1911ರಲ್ಲಿ ಅಂಡಮಾನ್‍ನ ಸೆಲ್ಯುಲಾರ್ ಜೈಲಿನಿಂದ ಹೊರಬರಲು ಬ್ರಿಟಿಷರ ಮುಂದೆ ಅಂಗಲಾಚಿದ್ದರು ಎಂದು ಹೇಳಿಕೆ ನೀಡಿದ್ದರು.

    ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ವೀರ ಸಾವರ್ಕರ್‍ರ ಮೊಮ್ಮಗ ರಂಜಿತ್ ಸಾವರ್ಕರ್ ಎಐಸಿಸಿ ದೂರು ದಾಖಲಿಸಿದ್ದರು. ನಮ್ಮ ಅಜ್ಜ ವೀರ ಸಾರ್ವಕರ್ ಅವರು 27 ವರ್ಷಗಳ ಕಾಲ ಜೈಲಿನಲ್ಲಿದ್ದರು. ಆದರೆ ರಾಹುಲ್ ಗಾಂಧಿ ಹೇಳಿಕೆಯಿಂದ ಸುಳ್ಳಾಗಿದ್ದು, ಅವರ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದೇನೆ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಫೇಲ್ ಒಪ್ಪಂದದಲ್ಲಿ 30 ಸಾವಿರ ಕೋಟಿ ಕಳ್ಳತನ: ರಾಹುಲ್ ಗಾಂಧಿ

    ರಫೇಲ್ ಒಪ್ಪಂದದಲ್ಲಿ 30 ಸಾವಿರ ಕೋಟಿ ಕಳ್ಳತನ: ರಾಹುಲ್ ಗಾಂಧಿ

    – ನಾನು ಬಡಬಡಿಸುತ್ತಿದ್ದೇನೆ ಅಂತ ನಿಮಗೆ ಅನಿಸುತ್ತಿದೆಯೇ?
    – ಮೋದಿ ವಿರುದ್ಧ ಮತ್ತೆ ಕಿಡಿಕಾರಿದ ರಾಹುಲ್ ಗಾಂಧಿ

    ನವದೆಹಲಿ: ರಫೇಲ್ ಡಿಲ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 30 ಸಾವಿರ ಕೋಟಿ ರೂ. ಕಳ್ಳತನ ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಫೇಲ್ ಹಗರಣದಲ್ಲಿ ಪ್ರಧಾನಿ ಮೋದಿ ಮತ್ತು ಪ್ರಧಾನ ಮಂತ್ರಿ ಕಚೇರಿ ಭಾಗಿಯಾಗಿದೆ ಎಂಬ ಮಾಧ್ಯಮವೊಂದರ ತನಿಖಾ ವರದಿಯನ್ನು ಇಟ್ಟುಕೊಂಡು ಆರೋಪಿಸಿದ್ದಾರೆ. ಇದನ್ನು ಓದಿ: ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡಲು ಆಗದವರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡುತ್ತಾರೆ: ಮೋದಿ 

    ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿದೆ ಅಂತ ಸುಮಾರು ದಿನಗಳಿಂದ ಆರೋಪ ಮಾಡುತ್ತಾ ಬಂದಿದ್ದೇವೆ. ಮಾಧ್ಯಮದ ವರದಿಯ ಪ್ರಕಾರ ಪ್ರಧಾನಿ ಮೋದಿ ವಂಚನೆ ಮಾಡಿರುವುದು ಸ್ಪಷ್ಟವಾಗುತ್ತದೆ. ಅದನ್ನು ಉದ್ಯಮಿ ಅನಿಲ್ ಅಂಬಾನಿ ಅವರಿಗೆ ನೀಡಿದ್ದಾರೆ. ಈ ಒಪ್ಪಂದಲ್ಲಿ ಪ್ರಧಾನಿ ಮೋದಿ ಏಕೆ ಭಾಗಿಯಾಗಿದ್ದಾರೆ. ಉದ್ಯಮಿ ಅನಿಲ್ ಅಂಬಾನಿ ಅವರಿಗಾಗಿಯೇ ಭಾಗಿಯಾಗಿದ್ದಾರೇ ಹೊರತು, ದೇಶದ ಜನತೆ, ಸೈನಿಕರಿಗಾಗಿ ಅಲ್ಲ. ಈ ಮೂಲಕ ಚೌಕಿದಾರ ಒಬ್ಬ ಕಳ್ಳ ಎನ್ನುವುದು ಸಾಬೀತಾಗುತ್ತದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ಮೋದಿ ಅವರು ಸುಳ್ಳು ಹೇಳುತ್ತಲೇ ಇದ್ದಾರೆ ಎಂದು ಕುಟುಕಿದರು.

    ಪ್ರಧಾನಿ ಮೋದಿ ಅವರು ಫ್ರಾನ್ಸ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಆದರೆ ನಮ್ಮ ದೇಶದ ವಾಯು ಪಡೆಯ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿಲ್ಲ. ಅನಿಲ್ ಅಂಬಾನಿ ಅವರಿಗೆ ಗುತ್ತಿಗೆ ಸಿಗಬೇಕು ಅಂತ ಹೇಳಿದ್ದಾರೆ ಎಂದು ಫ್ರಾನ್ಸ್ ನ ಮಾಜಿ ಅಧ್ಯಕ್ಷರು ಬಹಿರಂಗಪಡಿಸಿದ್ದಾರೆ ಎಂದು ರಾಹುಲ್ ಗಾಂಧಿ ಅಂತಾ ಹೇಳಿದರು.

    ಎನ್‍ಡಿಎ ಅಧಿಕಾರ ಅವಧಿಯಲ್ಲಿ ಒಂದೇ ಒಂದು ರಕ್ಷಣಾ ಒಪ್ಪಂದ ಪ್ರಾಮಾಣಿಕವಾಗಿ ನಡೆದಿಲ್ಲ. ಗೋವಾ ಸಿಎಂ ಮನೋಹರ್ ಪರೀಕರ್ ಭೇಟಿ ಮಾಡಿದಾಗ ರಫೆಲ್ ಒಪ್ಪಂದದ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಅವರ ಆರೋಗ್ಯ ವಿಚಾರಿಸಿ ಬಂದೆ. ನಾನು ಬಡಬಡಿಸುತ್ತಿದ್ದೇನೆ ಅಂತ ನಿಮಗೆ ಅನಿಸುತ್ತಿದೆಯೇ? ನನ್ನಲ್ಲಿರುವ ಗುಣಗಳನ್ನು ಹಾಗೂ ಪ್ರಧಾನಿ ಮೋದಿ ಅವರ ಗುಣಗಳನ್ನು ನೋಡಿ. ಯಾರು ಬಡಬಡಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತದೆ ಎಂದು ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತ್ರಿವಳಿ ತಲಾಖ್ ರದ್ದು: ರಾಹುಲ್ ಗಾಂಧಿ

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತ್ರಿವಳಿ ತಲಾಖ್ ರದ್ದು: ರಾಹುಲ್ ಗಾಂಧಿ

    – ನರೇಂದ್ರ ಮೋದಿ ಕಿಂಗ್ ಇಮೇಜ್ ಮುಕ್ತಾಯವಾಯಿತು

    ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತ್ರಿವಳಿ ತಲಾಖ್ ಕಾನೂನನ್ನು ರದ್ದು ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    ನಗರದ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದಿದ್ದ ಎಐಸಿಸಿ ಅಲ್ಪಸಂಖ್ಯಾತ ವಿಭಾಗ ರಾಷ್ಟ್ರೀಯ ಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಕಿಡಿಕಾರಿದ ಅವರು, ಆರ್‍ಎಸ್‍ಎಸ್ ನಾಗ್ಪುರದಿಂದ ದೇಶವನ್ನು ಆಡಳಿತ ಮಾಡಲು ಮುಂದಾಗುತ್ತಿದೆ. ನರೇಂದ್ರ ಮೋದಿ ಅದರ ಮುಖವಾಗಿದ್ದು, ಮೋಹನ್ ಭಾಗವತ್ ರಿಮೋಟ್ ಕಂಟ್ರೋಲ್ ಹಿಡಿದಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನು ಓದು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲಮನ್ನಾ : ರಾಹುಲ್ ಗಾಂಧಿ

    ಭಾರತೀಯ ಸಂಸ್ಥೆಗಳು ಯಾವುದೇ ಪಕ್ಷಕ್ಕೆ ಒಳಪಟ್ಟಿಲ್ಲ. ದೇಶದ ಜನರನ್ನು ರಕ್ಷಿಸುವುದು ಆ ಸಂಸ್ಥೆಗಳ ಕೆಲಸವಾಗಿದೆ. ಅಂತಹ ಸಂಸ್ಥೆಗಳನ್ನು ಕಾಂಗ್ರೆಸ್ ಅಥವಾ ಬೇರೆ ಯಾವುದೇ ಪಕ್ಷವಾಗಿದ್ದರೂ ರಕ್ಷಿಸಬೇಕಾಗುತ್ತದೆ ಎನ್ನುವ ಮೂಲಕ ರಾಹುಲ್ ಗಾಂಧಿ ಅವರು, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪರ ಬ್ಯಾಟ್ ಬೀಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರ ಕಿಂಗ್ ಇಮೇಜ್ ಮುಕ್ತಾಯವಾಯಿತು. ಅವರನ್ನು ನನ್ನ ಮುಂದೆ 10 ನಿಮಿಷ ಕಳುಹಿಸುವಂತೆ ಬಿಜೆಪಿಯವರಿಗೆ ಕೇಳಿಕೊಳ್ಳುತ್ತೇನೆ. ಮೋದಿ ಅವರು ರಾಷ್ಟ್ರೀಯ ಭದ್ರತೆ, ರಾಫೇಲ್ ಹಗರಣದ ಬಗ್ಗೆ ಮಾತನಾಡುತ್ತಾರೆ. ನಮ್ಮ ಜೊತೆಗೆ ಐದೇ ಐದು ನಿಮಿಷ ಚರ್ಚೆ ಮಾಡಿದರೆ ನೀರಿಗೆ ನೀರು, ಹಾಲಿಗೆ ಹಾಲು ಸಿಗುತ್ತದೆ ಎಂದು ಕುಟುಕಿದರು.

    ಬಿಜೆಪಿಯವರು ಕಳೆದ ಮೂರು ತಿಂಗಳಿಂದ ತಾವೇ ಉನ್ನತ ಸ್ಥಾನದಲ್ಲಿದ್ದಾರೆ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಬಹಿರಂಗಗೊಳಿಸಿದೆ. ಅವರು ಸುದ್ದಿಗೋಷ್ಠಿ ನಡೆಸುವುದಿಲ್ಲ. ದೇಶದ ಎಲ್ಲಾ ವಿಪಕ್ಷಗಳು ಸೇರಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅರವರನ್ನು ಸೋಲಿಸಲು ಮುಂದಾಗಿವೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೋದಿ ಜೊತೆ ಹೋರಾಡುತ್ತೇನೆ ಹೊರತು ದ್ವೇಷಿಸಲ್ಲ- ರಾಹುಲ್ ಗಾಂಧಿ

    ಮೋದಿ ಜೊತೆ ಹೋರಾಡುತ್ತೇನೆ ಹೊರತು ದ್ವೇಷಿಸಲ್ಲ- ರಾಹುಲ್ ಗಾಂಧಿ

    ಭುವನೇಶ್ವರ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಳೆದ ಕೆಲವು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಈ ಸಂಬಂಧ ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಪಷ್ಟನೆ ನೀಡಿದ್ದಾರೆ.

    ನರೇಂದ್ರ ಮೋದಿ ಅವರು ಮುಂದಿನ ಅವಧಿಗೆ ಪ್ರಧಾನಿ ಆಗುವುದಿಲ್ಲ ಅಂತ ಸಾಬೀತು ಮಾಡುತ್ತಿದ್ದೇನೆ. ಈ ನಿಟ್ಟಿನಲ್ಲಿ ಹೋರಾಡುತ್ತಿದ್ದೇನೆಯೇ ಹೊರತು ಅವರನ್ನು ದ್ವೇಷಿಸುತ್ತಿಲ್ಲ. ಅವರು ನನ್ನನ್ನು ಒಪ್ಪುವುದಿಲ್ಲ. ನಾನು ಅವರನ್ನು ಒಪ್ಪುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ನನ್ನನ್ನು ದ್ವೇಷಿಸುವಾಗ ಅವರನ್ನು ತಬ್ಬಿಕೊಳ್ಳಬೇಕು ಅಂತ ಅನಿಸುತ್ತದೆ. ಮೋದಿ ಅವರು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅವರ ನಡೆ ನನಗೆ ಅರ್ಥವಾಗಿದೆ. ಆದರೂ ನಾವು ಅವರ ಮೇಲೆ ಕೋಪ ಮಾಡಿಕೊಳ್ಳುವುದಿಲ್ಲ ಎಂದು ಕುಟುಕಿದರು.

    ಬಿಜೆಪಿ ಹಾಗೂ ಅದಕ್ಕೆ ಸಿದ್ಧಾಂತಗಳ ನೀಡಿದ ಆರ್‍ಎಸ್‍ಎಸ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿಂದನೆ ಎಂಬ ದೊಡ್ಡ ಉಡುಗೊರೆ ಕೊಟ್ಟಿದೆ. ಬಿಜೆಪಿಯಿಂದ ನಾನು ಪಡೆದ ಅತ್ಯಂತ ದೊಡ್ಡ ಗಿಫ್ಟ್ ಎಂದರೆ ಅದು ನಿಂದನೆ ಎಂದು ವ್ಯಂಗ್ಯವಾಡಿದರು.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಆರ್‍ಎಸ್‍ಎಸ್ ಅಧೀನದಲ್ಲಿದೆ. ಅವರು ಹೇಳಿದಂತೆ ಬಿಜೆಪಿ ನಾಯಕರು ಕೇಳುತ್ತಾರೆ ಎಂದ ಅವರು, ಮೋದಿ ಅವರು ಸರ್ಕಾರಿ ಸಂಸ್ಥೆಗಳನ್ನು ತಮ್ಮ ಅಧೀನದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಟಲಿಗೆ ವಾಪಸ್ ಹೋಗಿ – ರಾಹುಲ್ ಗಾಂಧಿ ವಿರುದ್ಧ ಯುಪಿ ರೈತರು ಕಿಡಿ

    ಇಟಲಿಗೆ ವಾಪಸ್ ಹೋಗಿ – ರಾಹುಲ್ ಗಾಂಧಿ ವಿರುದ್ಧ ಯುಪಿ ರೈತರು ಕಿಡಿ

    ಲಕ್ನೋ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವಾದ ಉತ್ತರ ಪ್ರದೇಶದ ಅಮೇಠಿಯ ರೈತರು ಗೋ ಬ್ಯಾಕ್ ಇಟಲಿ ಚಳುವಳಿ ಆರಂಭಿಸಿದ್ದಾರೆ.

    ಅಮೇಠಿ ಜಿಲ್ಲೆಯ ಗೌರಿಗಂಜ್ ನಗರದಲ್ಲಿ ಸಾವಿರಾರು ರೈತರು ಬುಧವಾರ ರಾಹುಲ್ ಗಾಂಧಿ ವಿರುದ್ಧ ಘೋಷಣೆ ಕೂಗಿದರು. ಬಳಿಕ ರಾಜೀವ್ ಗಾಂಧಿ ಫೌಂಡೇಷನ್‍ಗೆ ಪಡೆದ ಭೂಮಿಯನ್ನು ರೈತರಿಗೆ ಮರಳಿಸಿ, ಇಲ್ಲವೇ ಅವರಿಗೆ ಉದ್ಯೋಗ ಒದಗಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಲೋಕಸಭಾ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಬುಧವಾರ ರಾಹುಲ್ ಗಾಂಧಿ ಅಮೇಠಿಗೆ ಭೇಟಿ ನೀಡಿದ್ದರು. ಈ ವೇಳೆ ರೈತರು ರಾಜೀವ್ ಗಾಂಧಿ ಅವರು ಉದ್ಘಾಟಿಸಿದ್ದ ಸಾಮ್ರಾಟ್ ಸೈಕಲ್ ಫ್ಯಾಕ್ಟರಿಯ ಬಳಿ ನಿಂತು ಪ್ರತಿಭಟನೆ ನಡೆಸಿದರು.

    ರಾಹುಲ್ ಗಾಂಧಿ ನಮ್ಮ ಭೂಮಿಯನ್ನು ಕಬಳಿಸಿದ್ದಾರೆ. ಅವರು ಇಲ್ಲಿ ಇರಲು ಯಾವುದೇ ಅರ್ಹತೆ ಹೊಂದಿಲ್ಲ. ಅವರು ಭಾರತದಲ್ಲಿ ಇರುವುದು ಬೇಡ, ಇಟಲಿಗೆ ವಾಪಸ್ ಹೋಗಲಿ ಎಂದು ಪ್ರತಿಭಟನಾನಿರತ ಸಂಜಯ್ ಸಿಂಗ್ ಆಕ್ರೋಶ ಹೊರಹಾಕಿದ್ದಾರೆ.

    ರೈತರ ಆಕ್ರೋಶಕ್ಕೆ ಕಾರಣ ಏನು?
    ಜೈನ್ ಸಹೋದರರ ಸೈಕಲ್ ಕಂಪನಿಯ ಫ್ಯಾಕ್ಟರಿ ಘಟಕ ತೆರೆಯಲು ಉತ್ತರ ಪ್ರದೇಶ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ(ಯುಪಿಎಸ್‍ಐಡಿಸಿ) 1980 ರಲ್ಲಿ 65.57 ಎಕ್ರೆ ಜಾಗವನ್ನು ಗುತ್ತಿಗೆ ನೀಡಿತ್ತು. ಮಾರುಕಟ್ಟೆಯಲ್ಲಿ ನಷ್ಟ ಉಂಟಾಗಿ ಫ್ಯಾಕ್ಟರಿ 1986 ರಲ್ಲಿ ಮುಚ್ಚಲ್ಪಟ್ಟಿತ್ತು. 2014 ರಲ್ಲಿ ಡೆಟ್ ರಿಕವರಿ ಟ್ರಿಬ್ಯೂನಲ್ ಸಾಲವನ್ನು ಭರಿಸಲು ಈ ಜಾಗವನ್ನು ಹರಾಜು ಹಾಕಲು ಆದೇಶಿಸಿತ್ತು.

    ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ 1.50 ಲಕ್ಷ ರೂ. ಮೂಲ ಠೇವಣಿ ಇಟ್ಟು ಈ ಜಾಗವನ್ನು ಹರಾಜಿನ ಮೂಲಕ ಖರೀದಿಸಿತ್ತು. ಆದರೆ ಗೌರಿಗಂಜ್ ಎಸ್‍ಡಿಎಂ ಕೋರ್ಟ್ ಹರಾಜು ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಿ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿ ಸೈಕಲ್ ಕಂಪನಿಯ ಜಾಗವನ್ನು ಯುಪಿಎಸ್‍ಐಡಿಸಿಗೆ ಹಸ್ತಾಂತರಿಸಬೇಕೆಂದು ಆದೇಶಿಸಿತ್ತು. ಈ ಆದೇಶದ ಬಳಿಕ ದಾಖಲೆಗಳಲ್ಲಿ ಮಾತ್ರ ಯುಪಿಎಸ್‍ಐಡಿಸಿ ಹೆಸರಿದ್ದರೆ ಈಗಲೂ ಈ ಜಾಗ ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ವಶದಲ್ಲಿದೆ.

    ಈ ಹಿಂದೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಹುಲ್ ಗಾಂಧಿ ತಮ್ಮ ಟ್ರಸ್ಟ್ ಗ ರೈತರಿಂದ ಭೂಮಿ ಪಡೆದು ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡೆದಾಡುವ ದೇವರು ಬೇಗ ಗುಣಮುಖರಾಗಲಿ – ರಾಹುಲ್ ಪ್ರಾರ್ಥನೆ

    ನಡೆದಾಡುವ ದೇವರು ಬೇಗ ಗುಣಮುಖರಾಗಲಿ – ರಾಹುಲ್ ಪ್ರಾರ್ಥನೆ

    ನವದೆಹಲಿ: ನಡೆದಾಡುವ ದೇವರು, ಸಿದ್ದಗಂಗಾ ಮಠದ ಡಾ.ಶಿವಕುಮಾರ ಶ್ರೀಗಳು ಅನಾರೋಗ್ಯದಿಂದ ಬಳಲುತ್ತಿರುವುದು ಅತೀವ ನೋವನ್ನುಂಟು ಮಾಡಿದೆ. ಶ್ರೀಗಳು ಬೇಗ ಗುಣಮುಖರಾಗಲಿ ಅಂತ ಪ್ರಾರ್ಥಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    ರಾಹುಲ್ ಗಾಂಧಿ ಅವರು ತಮ್ಮ ಫೇಸ್‍ಬುಕ್ ಖಾತೆಯ ಮೂಲಕ ಕನ್ನಡದಲ್ಲಿಯೇ ಶ್ರೀಗಳಿಗೆ ಆರೋಗ್ಯ ಹಾಗೂ ಆಯಸ್ಸು ನೀಡಲಿ ಎಂದು ದೇವರಿಗೆ ಬೇಡಿಕೊಂಡಿದ್ದಾರೆ. ಬಸವ ತತ್ವಗಳಿಗೆ ಜೀವ ತುಂಬಿದ ತ್ರಿವಿಧ (ಅನ್ನ/ಅಕ್ಷರ/ಜ್ಞಾನ) ದಾಸೋಹಿ, ಅಸಂಖ್ಯ ಭಕ್ತರ ಬದುಕಿನ ಬೆಳಕು ನಡೆದಾಡುವ ದೇವರು, ಶತಾಯುಷಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ದರ್ಶನ ಮಾಡಿ ಆಶೀರ್ವಾದ ಪಡೆದಿದ್ದೆ ಎಂದು ತಿಳಿಸಿದ್ದಾರೆ.

    ತುಮಕೂರು ಸಮೀಪದ ಸಿದ್ದಗಂಗಾ ಮಠಕ್ಕೆ ಅನೇಕರು ಗಣ್ಯರು ಹಾಗೂ ಭಕ್ತರು ಭೇಟಿ ನೀಡಿ ಶ್ರೀಗಳ ದರ್ಶನ ಪಡೆಯುತ್ತಿದ್ದಾರೆ. ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕು ಎನ್ನುವ ಕೂಡು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕಾಂಗ್ರೆಸ್ ಶಾಸಕ ಬಿ.ಎಸ್.ಪಾಟೀಲ್ ಸೇರಿದಂತೆ ಅನೇಕ ನಾಯಕರು ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ಕುಂಭರಾಮ್’ ಬದ್ಲು `ಕುಂಭಕರ್ಣ’ ಎಂದ ರಾಹುಲ್ – ಹೆಸರು ಹೇಳಲಾಗದವ್ರು ಅಧಿಕಾರಕ್ಕೆ ಬಂದು ಏನು ಮಾಡ್ತಾರೆ ಮೋದಿ ಟಾಂಗ್

    `ಕುಂಭರಾಮ್’ ಬದ್ಲು `ಕುಂಭಕರ್ಣ’ ಎಂದ ರಾಹುಲ್ – ಹೆಸರು ಹೇಳಲಾಗದವ್ರು ಅಧಿಕಾರಕ್ಕೆ ಬಂದು ಏನು ಮಾಡ್ತಾರೆ ಮೋದಿ ಟಾಂಗ್

    ಜೈಪುರ: ರಾಜಸ್ಥಾನ ಸೇರಿದಂತೆ ತೆಲಂಗಾಣ ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಇಂದು ಅಂತಿಮ ದಿನವಾಗಿದ್ದು, ಪ್ರಧಾನಿ ಮೋದಿ ರಾಹುಲ್ ಗಾಂಧಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

    ರಾಜಸ್ಥಾನದ ಪಾಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯದ ಪ್ರಮುಖ ಮುಖಂಡರ ಹೆಸರು ಹೇಳಲುಬಾರದ ನಾಯಕರು ಅಧಿಕಾರಕ್ಕೆ ಬಂದು ಏನು ಮಾಡುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

    ರಾಜಸ್ಥಾನ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕ ಹಾಗೂ ಜಾಟ್ ಸಮುದಾಯದ ಪ್ರಮುಖ ನಾಯಕರಾಗಿದ್ದ `ಕುಂಭರಾಮ್’ ಅವರ ಹೆಸರಿನಲ್ಲಿ ನಿರ್ಮಿಸಲಾಗಿದ್ದ ಏತ ನೀರಾವರಿ ಯೋಜನೆ ಬಗ್ಗೆ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದರು. ಆದರೆ ಆ ವೇಳೆ ಕುಂಭರಾಮ್ ಬದಲಾಗಿ ಕುಂಭಕರ್ಣ ಎಂದು ಹೇಳಿ ನಗೆಪಾಟಲಿಗೀಡಾಗಿದ್ದರು. ಈ ವಿಡಿಯೋವನ್ನು ಬಿಜೆಪಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ರಾಹುಲ್‍ರ ತಪ್ಪನ್ನೇ ಪ್ರಮುಖ ಆಸ್ತ್ರವಾಗಿ ಪ್ರಯೋಗಿಸಿದ ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ನಾಯಕನಿಗೆ ರೈತ ನಾಯಕ ಮತ್ತು ಜಾಟ್ ಸಮುದಾಯದ ಮುಖಂಡರ ಹೆಸರೇ ಗೊತ್ತಿಲ್ಲ. ಹೀಗಿರುವ ಇವರು ಅಧಿಕಾರಕ್ಕೆ ಬಂದು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಕುಂಭಕರ್ಣ ಹೇಗೆ ತಮ್ಮ ದೀರ್ಘ ನಿದ್ದೆಗೆ ಖ್ಯಾತಿ ಪಡೆದಿದ್ದರೋ ಅಂತೆಯೇ 60 ವರ್ಷ ದೇಶದಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಪಕ್ಷ ನಿದ್ದೆಯಲ್ಲಿತ್ತು ಎಂದು ಟೀಕಿಸಿದ್ದಾರೆ.

    ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಹೆಸರು ಪ್ರಸ್ತಾಪ ಮಾಡದೆ ವಾಗ್ದಾಳಿ ನಡೆಸಿದ ಮೋದಿ, ಭ್ರಷ್ಟಾಚಾರದ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಇರುವ ಜನರಿಗೆ ರಾಜಸ್ಥಾನದ ಅಧಿಕಾರ ನೀಡುವುದು ಬೇಡ. ಅದಕ್ಕಾಗಿ ಬಿಜೆಪಿಗೆ ಮತ ನೀಡಿ  ಎಂದು ಜನರಲ್ಲಿ ಮನವಿ ಮಾಡಿದರು.

    ರಾಜಸ್ಥಾನದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಇಚ್ಛಿಸಿರುವ ಬಿಜೆಪಿ ಮುಖಂಡರು ಮತ್ತೆ ಸಿಎಂ ವಸುಂಧರಾ ರಾಜೆ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಡಿಸೆಂಬರ್ 7 ರಂದು ರಾಜಸ್ಥಾನ ಹಾಗೂ ತೆಲಂಗಾಣದಲ್ಲಿ ಚುನಾವಣೆಯ ಮತದಾನ ನಡೆಯಲಿದೆ.

    ಅಂದಹಾಗೇ 1914 ರಲ್ಲಿ ಪಟಿಯಲಾದಲ್ಲಿ ಜನಿಸಿದ ಚೌಧರಿ ಕುಂಭರಾಮ್ ಆರ್ಯ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. ಅಲ್ಲದೇ ರೈತರ ಪರ ಹೋರಾಟಗಳನ್ನು ನಡೆಸಿ ರೈತ ನಾಯಕರಾಗಿದ್ದರು. ಇವರಿಗೆ ರಾಜಸ್ಥಾನದಲ್ಲಿ ಹೆಚ್ಚಿನ ಅಭಿಮಾನಿಗಳು ಇದ್ದು, ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, 1995 ರಲ್ಲಿ ಮೃತಪಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್ ಮಹಿಳಾ ಘಟಕದ ಉಪಾಧ್ಯಕ್ಷೆ 6 ವರ್ಷ ಪಕ್ಷದಿಂದ ಔಟ್

    ಕಾಂಗ್ರೆಸ್ ಮಹಿಳಾ ಘಟಕದ ಉಪಾಧ್ಯಕ್ಷೆ 6 ವರ್ಷ ಪಕ್ಷದಿಂದ ಔಟ್

    ಜೈಪುರ್: ರಾಜಸ್ಥಾನದ ಮಹಿಳಾ ಘಟಕದ ಉಪಾಧ್ಯಕ್ಷೆಯನ್ನು ಪಕ್ಷದಿಂದ ಆರು ವರ್ಷ ವಜಾಗೊಳಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆದೇಶ ಹೊರಡಿಸಿದ್ದಾರೆ.

    ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಸ್ಪರ್ಧಾ ಚೌಧರಿ ಅವರು ಈ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಮೂಲಕ ಸ್ಪರ್ಧಾ ಚೌದರಿ ಮಹಿಳಾ ಘಟಕದ ಉಪಾಧ್ಯಕ್ಷೆ ಸ್ಥಾನ ಹಾಗೂ ಪಕ್ಷದಿಂದ ವಜಾಗೊಂಡಿದ್ದಾರೆ ಎಂದು ವರದಿಯಾಗಿದೆ.

    ಆಗಿದ್ದೇನು?:
    ಸ್ಪರ್ಧಾ ಚೌದರಿ ಅವರು ಪುಲೇರಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಮೊದಲ ಪಟ್ಟಿಯಲ್ಲಿಯೇ ವಿದ್ಯಾಧರ್ ಚೌಧರಿ ಅವರಿಗೆ ಕಾಂಗ್ರೆಸ್ ಅವಕಾಶ ನೀಡಿತ್ತು. ಇದನ್ನು ಖಂಡಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ದೆಹಲಿ ನಿವಾಸದ ಮುಂಭಾಗದಲ್ಲಿ ಇಂದು ಬೆಳಗ್ಗೆ ಚೌಧರಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು.

    ಕಾಂಗ್ರೆಸ್‍ನ ರಾಜಸ್ಥಾನ ರಾಜ್ಯಾಧ್ಯಕ್ಷ ಸಚಿನ್ ಪೈಲಟ್ ಅವರು ಟಿಕೆಟ್ ಹಂಚಿಕೆಯಲ್ಲಿ ಹಣ ಪಡೆಯುತ್ತಿದ್ದಾರೆ. ಹೀಗಾಗಿ ನನ್ನನ್ನು ಕಡೆಗಣಿಸಿ ವಿದ್ಯಾಧರ್ ಚೌಧರಿ ಅವರಿಗೆ ಟಿಕೆಟ್ ನೀಡಿದ್ದಾರೆ ಎಂದು ಸ್ಪರ್ಧಾ ಚೌಧರಿ ದೂರಿದ್ದರು.

    ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದ್ದ ರಾಹುಲ್ ಗಾಂಧಿ ಹಾಗೂ ಹೈಕಮಾಡ್ ಸ್ಪರ್ಧಾ ಚೌಧರಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ರಾಜಸ್ಥಾನ ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ನವೆಂಬರ್ 19ರಂದು ಮುಕ್ತಾಯವಾಗಲಿದೆ. ಕಾಂಗ್ರೆಸ್ 32 ಜನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಈ ಮೂಲಕ ಮುಖ್ಯಮಂತ್ರಿ ವಸುಂದರಾ ರಾಜೇ ಅವರಿಗೆ ಶಾಕ್ ಕೊಟ್ಟು, ಮಾನವೇಂದ್ರ ಅವರನ್ನು ಕಣಕ್ಕೆ ಇಳಿಸಿದೆ. ಡಿಸೆಂಬರ್ 7ರಂದು ಮತದಾನ ನಡೆಯಲಿದ್ದು, ವರ್ಷಾಂತ್ಯದಲ್ಲಿಯೇ ರಾಜಸ್ಥಾನದಲ್ಲಿ ಹೊಸ ಸರ್ಕಾರ ಆಡಳಿತದ ಚುಕ್ಕಾನೆ ಹಿಡಿಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews