Tag: ಎಎಪಿ

  • ಇಬ್ಬರ ಜಗಳ 3ನೇಯವರಿಗೆ ಲಾಭ; ಕಾಂಗ್ರೆಸ್‌-ಆಪ್‌ ಕಿತ್ತಾಟ ಬಿಜೆಪಿಗೆ ವರದಾನ ಆಗಿದ್ಹೇಗೆ?

    ಇಬ್ಬರ ಜಗಳ 3ನೇಯವರಿಗೆ ಲಾಭ; ಕಾಂಗ್ರೆಸ್‌-ಆಪ್‌ ಕಿತ್ತಾಟ ಬಿಜೆಪಿಗೆ ವರದಾನ ಆಗಿದ್ಹೇಗೆ?

    ನವದೆಹಲಿ: ಆಮ್ ಆದ್ಮಿ ಪಕ್ಷದ (AAP) 10 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿ, ಬಿಜೆಪಿ ದೆಹಲಿಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ದಿಲ್ಲಿ ಕಾಂಗ್ರೆಸ್‌ನ ಏಕಾಂಗಿ ಸ್ಪರ್ಧೆಯು ಆಪ್‌ಗೆ ದೊಡ್ಡ ಪೆಟ್ಟು ನೀಡಿದೆ. ವಿರೋಧ ಪಕ್ಷದ ಮತಗಳನ್ನು ವಿಭಜಿಸಿ ಬಿಜೆಪಿಗೆ ಗೆಲುವಿನ ಹಾದಿಯನ್ನು ಸುಗಮಗೊಳಿಸಿತೆ? ಎಂಬ ಚರ್ಚೆ ದಿಲ್ಲಿ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ.

    ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಎಎಪಿ ಶೇ.43 ರಷ್ಟು ಮತಗಳನ್ನು ಪಡೆದರೆ, ಬಿಜೆಪಿ ಶೇ. 45 ರಷ್ಟು ಮತಗಳನ್ನು ಪಡೆದುಕೊಂಡಿತು. ಕಾಂಗ್ರೆಸ್ ಶೇ. 6 ರಷ್ಟು ಮತಗಳನ್ನು ಪಡೆದರೂ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಚುನಾವಣೆಯಲ್ಲಿ ಎಎಪಿ-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೆ, ಬಿಜೆಪಿಯನ್ನು (BJP) ವಿರೋಧ ಪಕ್ಷದಲ್ಲಿ ಉಳಿಸಬಹುದಿತ್ತು. ಎರಡೂ ಪಕ್ಷಗಳು ಒಪ್ಪಂದ ಮಾಡಿಕೊಳ್ಳದೇ ಇದ್ದದ್ದು, ದೆಹಲಿ ಚುನಾವಣೆಯಲ್ಲಿ (Delhi Election Results) ಬಹುದೊಡ್ಡ ಬೆಲೆ ತೆರುವುದಕ್ಕೆ ಕಾರಣವಾಯಿತು ಎಂಬುದು ಸದ್ಯದ ವಿಶ್ಲೇಷಣೆ.

    ರಾಜ್ಯದ 11 ಪ್ರಮುಖ ಕ್ಷೇತ್ರಗಳ ಫಲಿತಾಂಶ ಗಮನಿಸಿದರೆ, ಎಎಪಿ ನಾಯಕರು ಬಿಜೆಪಿ ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗಮನಾರ್ಹ ಮತಗಳನ್ನು ಗಳಿಸಿದೆ. ಇದನ್ನೂ ಓದಿ: ಕೇಜ್ರಿವಾಲ್ ನಶೆ ಇಳಿಸಿದ ದೆಹಲಿ ಜನ, ಎಣ್ಣೆ ಏಟಿಗೆ ಎಎಪಿಗೆ ಸೋಲಿನ `ಕಿಕ್’

    ನವದೆಹಲಿ: ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ನವದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ 4,089 ಮತಗಳ ಅಂತರದಲ್ಲಿ ಸೋತರು. ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರ ಕಾಂಗ್ರೆಸ್‌ನ (Congress) ಸಂದೀಪ್ ದೀಕ್ಷಿತ್ 4,568 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು. ಎಎಪಿ ಮತ್ತು ಕಾಂಗ್ರೆಸ್ ಈ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದರೆ, ಕೇಜ್ರಿವಾಲ್ ಅಲ್ಪ ಮತಗಳ ಗೆಲುವು ಸಾಧಿಸುತ್ತಿದ್ದರು.

    ಜಂಗ್‌ಪುರ: ಮಾಜಿ ಉಪಮುಖ್ಯಮಂತ್ರಿ ಮತ್ತು ‘ಎಎಪಿ ನಂಬರ್ 2’ ಮನೀಶ್ ಸಿಸೋಡಿಯಾ ಅವರು ಬಿಜೆಪಿಯ ತರ್ವೀಂದರ್‌ ಸಿಂಗ್ ಮಾರ್ವಾ ವಿರುದ್ಧ ಕೇವಲ 675 ಮತಗಳ ಅಂತರದಿಂದ ಸೋತರು. ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದರೆ ಕಾಂಗ್ರೆಸ್‌ನ ಫರ್ಹಾದ್ ಸೂರಿ 7,350 ಮತಗಳನ್ನು ಪಡೆದಿದ್ದಾರೆ. ಒಂದು ವೇಳೆ ಕಾಂಗ್ರೆಸ್‌-ಎಎಪಿ ಮೈತ್ರಿಯಾಗಿದ್ದರೆ, ಈ ಮತಗಳನ್ನು ಸಿಸೋಡಿಯಾ ಅವರಿಗೆ ವರ್ಗಾಯಿಸಿ ಅವರ ಆರಾಮದಾಯಕ ಗೆಲುವನ್ನು ಖಚಿತಪಡಿಸಬಹುದಿತ್ತು.

    ಗ್ರೇಟರ್ ಕೈಲಾಶ್: ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಎಎಪಿಗೆ ಸುರಕ್ಷಿತ ಸ್ಥಾನವೆಂದೇ ಪರಿಗಣಿಸಲ್ಪಟ್ಟಿತ್ತು. ಮೂರು ಬಾರಿ ಶಾಸಕ ಮತ್ತು ಸಚಿವ ಸೌರಭ್ ಭಾರದ್ವಾಜ್ ಸುಲಭವಾಗಿ ಗೆಲ್ಲುತ್ತಾರೆ ಎಂದು ಹಲವರು ಆಶಿಸಿದ್ದರು. ಆದರೆ ಬಿಜೆಪಿಯ ಶಿಖಾ ರಾಯ್, ಭಾರದ್ವಾಜ್ ಅವರನ್ನು 3,188 ಮತಗಳ ಅಂತರದಿಂದ ಸೋಲಿಸಿದರು. ಕಾಂಗ್ರೆಸ್‌ನ ಗರ್ವಿತ್ ಸಿಂಘ್ವಿ 6,711 ಮತಗಳನ್ನು ಪಡೆದರು. ಮೈತ್ರಿಯಾಗಿ ಸ್ಪರ್ಧಿಸಿದ್ದರೆ ಭಾರದ್ವಾಜ್ ಆ ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿತ್ತು. ಇದನ್ನೂ ಓದಿ: ಕೇಜ್ರಿ`ವಾಲ್’ ಛಿದ್ರಗೊಳಿಸಿದ ಮೋದಿ-ಶಾ ಜೋಡಿಯ ಸಾಮ, ದಾನ, ಬೇಧ, ದಂಡ ತಂತ್ರ?

    ಮಾಳವೀಯ ನಗರ: ಮಾಳವೀಯ ನಗರದಲ್ಲಿಯೂ ಇದೇ ರೀತಿಯಾಗಿದೆ. ಅಲ್ಲಿ ಬಿಜೆಪಿಯ ಸತೀಶ್ ಉಪಾಧ್ಯಾಯ ಮೂರು ಬಾರಿ ಶಾಸಕರಾಗಿದ್ದ ಸೋಮನಾಥ್ ಭಾರ್ತಿ ಅವರನ್ನು 2,131 ಮತಗಳ ಅಂತರದಿಂದ ಸೋಲಿಸಿದರು. ಕಾಂಗ್ರೆಸ್‌ನ ಜಿತೇಂದರ್ ಕುಮಾರ್ ಕೊಚಾರ್ 6,770 ಮತಗಳನ್ನು ಪಡೆದು ಎಎಪಿ ಅಭ್ಯರ್ಥಿಯ ಗೆಲುವಿಗೆ ಅಡ್ಡಿಯಾದರು.

    ಬದ್ಲಿ: ಬದ್ಲಿಯಲ್ಲಿ ಬಿಜೆಪಿಯ ಆಹಿರ್ ದೀಪಾಲ್ ಚೌಧರಿ ಅವರು ಎಎಪಿಯ ಅಜೇಶ್ ಯಾದವ್ ಅವರನ್ನು 15,163 ಮತಗಳಿಂದ ಸೋಲಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ದೇವೇಂದ್ರ ಯಾದವ್ 41,071 ಮತಗಳನ್ನು ಗಳಿಸಿದ್ದಾರೆ. ಮೈತ್ರಿ ಇದ್ದಿದ್ದರೆ ಎಎಪಿ ಸುಗಮವಾಗಿ ಗೆಲ್ಲಬಹುದಿತ್ತು.

    ತಿಮಾರ್ಪುರ: ಬಿಜೆಪಿಯ ಸೂರ್ಯ ಪ್ರಕಾಶ್ ಖತ್ರಿ ಅವರು ತಿಮಾರ್ಪುರ ಕ್ಷೇತ್ರದಲ್ಲಿ 1,168 ಮತಗಳ ಅಂತರದಿಂದ ಗೆದ್ದರು. ಎಎಪಿಯ ಸುರೀಂದರ್ ಪಾಲ್ ಸಿಂಗ್ ಅವರನ್ನು ಸೋಲಿಸಿದರು. ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಲೋಕೇಂದ್ರ ಕಲ್ಯಾಣ್ ಸಿಂಗ್ 8,361 ಮತಗಳನ್ನು ಗಳಿಸಿದರು. ಇದು ಬಿಜೆಪಿಗೆ ಅನುಕೂಲವಾಗುವಂತೆ ಕೆಲಸ ಮಾಡಿತು. ಇದನ್ನೂ ಓದಿ: ಶೀಷ್‌ ಮಹಲ್‌ನಿಂದ ಹೊಸ ಅಬಕಾರಿ ನೀತಿ ಹಗರಣ ವರೆಗೆ – ದೆಹಲಿಯಲ್ಲಿ ಆಪ್‌ ಸೋತಿದ್ದೇಕೆ?

    ನಂಗ್ಲೋಯಿ ಜಾಟ್: ಬಿಜೆಪಿಯ ಮನೋಜ್ ಕುಮಾರ್ ಶೋಕೀನ್ 26,251 ಮತಗಳ ಅಂತರದಿಂದ ಎಎಪಿಯ ರಘುವಿಂದರ್ ಶೋಕೀನ್ ಅವರನ್ನು ಮಣಿಸಿದರು. ಕಾಂಗ್ರೆಸ್‌ನ ರೋಹಿತ್ ಚೌಧರಿ 32,028 ಮತಗಳನ್ನು ಪಡೆದು ಆಪ್‌ಗೆ ಹೋಗುತ್ತಿದ್ದ ವಿರೋಧ ಪಕ್ಷದ ಮತಗಳನ್ನು ತಪ್ಪಿಸಿದರು.

    ರಾಜಿಂದರ್ ನಗರ: ಹಿರಿಯ ಎಎಪಿ ನಾಯಕ ದುರ್ಗೇಶ್ ಪಾಠಕ್ ಬಿಜೆಪಿಯ ಉಮಾಂಗ್ ಬಜಾಜ್ ವಿರುದ್ಧ 1,231 ಮತಗಳ ಅಂತರದಿಂದ ಸೋತರು. 4,105 ಮತಗಳನ್ನು ಪಡೆದ ಕಾಂಗ್ರೆಸ್‌ನ ವಿನೀತ್ ಯಾದವ್, ಎಎಪಿ ಸೋಲಿಗೆ ಕಾರಣರಾಗಿದ್ದಾರೆ.

    ಛತ್ತರ್‌ಪುರ: ದಕ್ಷಿಣ ದೆಹಲಿಯ ಛತ್ತರ್‌ಪುರದಲ್ಲಿ, ಬಿಜೆಪಿಯ ಕರ್ತಾರ್ ಸಿಂಗ್ ತನ್ವರ್ ಅವರು ಎಎಪಿಯ ಬ್ರಹ್ಮ್ ಸಿಂಗ್ ತನ್ವರ್ ಅವರನ್ನು 6,239 ಮತಗಳ ಅಂತರದಿಂದ ಸೋಲಿಸಿದರು. ಕಾಂಗ್ರೆಸ್‌ನ ರಾಜೇಂದರ್ ಸಿಂಗ್ ತನ್ವರ್ ಅವರು ಸೋಲಿನ ಅಂತರಕ್ಕಿಂತ ಹೆಚ್ಚು 6,601 ಮತಗಳನ್ನು ಪಡೆದಿದ್ದಾರೆ. ಇದು ಬಿಜೆಪಿಗೆ ಅನುಕೂಲವಾಗುವಂತೆ ಕೆಲಸ ಮಾಡಿತು. ಇದನ್ನೂ ಓದಿ: Delhi Election Results | ಬಜೆಟ್ ಡೇ ಸೂಪರ್ ಓವರ್‌ನಲ್ಲಿ ಸೀತಾರಾಮನ್ ʻಸಿಕ್ಸ್‌ʼ – ಬಿಜೆಪಿ ಚಾಂಪಿಯನ್‌!

    ಸಂಗಮ್ ವಿಹಾರ್: ಬಿಜೆಪಿಯ ಚಂದನ್ ಕುಮಾರ್ ಚೌಧರಿ ಇಡೀ ದಿಲ್ಲಿಯಲ್ಲಿ ಅತಿ ಕಡಿಮೆ ಅಂತರದಿಂದ ಚುನಾವಣೆ ಗೆದ್ದಿದ್ದಾರೆ. ಎಎಪಿಯ ದಿನೇಶ್ ಮೊಹಾನಿಯಾ ಅವರನ್ನು ಕೇವಲ 344 ಮತಗಳಿಂದ ಮಣಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹರ್ಷ್ ಚೌಧರಿ 15,863 ಮತಗಳನ್ನು ಪಡೆದು ಎಎಪಿಗೆ ಪೆಟ್ಟು ನೀಡಿದ್ದಾರೆ.

    ತ್ರಿಲೋಕ್‌ಪುರಿ: ಪೂರ್ವ ದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ರವಿಕಾಂತ್ ಕೇವಲ 392 ಮತಗಳ ಅಂತರದಿಂದ ಗೆದ್ದರು. ಎಎಪಿಯ ಅಂಜನಾ ಪರ್ಚಾ ಬಿಜೆಪಿ ವಿರುದ್ಧ ಸೋತರು. 6,147 ಮತಗಳನ್ನು ಗಳಿಸಿದ ಕಾಂಗ್ರೆಸ್‌ನ ಅಮರ್‌ದೀಪ್ ಮತ ವಿಭಜನೆಗೆ ಕಾರಣರಾದರು.

  • ಬಿಜೆಪಿ ಆಯ್ಕೆ ಮಾಡಿ ಜನರು ಆಪ್ ತಿರಸ್ಕರಿಸಿದ್ದಾರೆ: ಈರಣ್ಣ ಕಡಾಡಿ

    ಬಿಜೆಪಿ ಆಯ್ಕೆ ಮಾಡಿ ಜನರು ಆಪ್ ತಿರಸ್ಕರಿಸಿದ್ದಾರೆ: ಈರಣ್ಣ ಕಡಾಡಿ

    ನವದೆಹಲಿ: ದೆಹಲಿ ಜನತೆ ಬಿಜೆಪಿ ಆಯ್ಕೆ ಮಾಡಿ ಆಪ್‌ ತಿರಸ್ಕರಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ (Eranna Kadadi) ತಿಳಿಸಿದ್ದಾರೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿಯನ್ನು ಬಾರಿ ಬಹುಮತದಿಂದ ಗೆಲ್ಲಿಸುವ ಮೂಲಕ ಆಮ್ ಆದ್ಮಿ ಪಕ್ಷವನ್ನು ತಿರಸ್ಕರಿಸಿದ್ದು, ಆ ಪಕ್ಷದ ನೇತಾರ ಮಾಜಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಮತ್ತು ಉಪಮುಖ್ಯಮಂತ್ರಿ ಮನಿಷ್ ಸೀಸೋಡಿಯಾ ಸೋಲುವ ಮೂಲಕ ಬಾರಿ ಹಿನ್ನೆಡೆ ಉಂಟಾಗಿದೆ. ಹೀಗಾಗಿ, ಬಿಜೆಪಿಗೆ ಆಶೀರ್ವದಿಸಿದ ಮತದಾರ ಬಂಧುಗಳಿಗೆ ಹಾಗೂ ಬಿಜೆಪಿಯನ್ನು ಗೆಲ್ಲಿಸುವಲ್ಲಿ ವಿಶೇಷ ಶ್ರಮವಹಿಸಿದ ದೆಹಲಿ ಬಿಜೆಪಿ ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯವರ ಅಭಿವೃದ್ಧಿ ಆಡಳಿತ ನೋಡಿ ಜನ ಬಿಜೆಪಿ ಗೆಲ್ಲಿಸಿದ್ದಾರೆ: ಬೊಮ್ಮಾಯಿ

    ದೆಹಲಿ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಅಣ್ಣಾ ಹಜಾರೆ ಮತ್ತು ಅವರ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷದ ಸಚಿವ ಸಂಪುಟದ ಹಲವಾರು ಸಚಿವರು ಭ್ರಷ್ಟಾಚಾರ ಕಳಕಿಂತರಾಗಿ ಜೈಲು ಪಾಲಾಗಿರುವುದು ಅತ್ಯಂತ ವಿಪರ್ಯಾಸದ ಸಂಗತಿ. ಸುಳ್ಳಿನ ಅರಮನೆಯನ್ನೇ ನಿರ್ಮಿಸಿ ಅಧಿಕಾರಕ್ಕೆ ಬಂದ ಅರವಿಂದ್ ಕ್ರೇಜಿವಾಲ್ ಅವರನ್ನು ದೆಹಲಿ ಜನ ತಿರಸ್ಕರಿಸಿದ್ದಾರೆ.‌ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಜನ ಆಯ್ಕೆ ಮಾಡುವ ಮೂಲಕ ದೆಹಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಲಿದೆ ಎಂದರು.

    ಈ ಗೆಲುವಿಗೆ ಕಾರಣೀಭೂತರಾದ ದೆಹಲಿ ಮತದಾರ ಬಂಧುಗಳಿಗೂ ಹಾಗೂ ಗೆಲುವಿಗೆ ಪರಿಶ್ರಮ ವಹಿಸಿದ ಬಿಜೆಪಿ ದೆಹಲಿ ಕಾರ್ಯಕರ್ತರಿಗೂ ಹೃತ್ಪೂರ್ವಕವಾದ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯನ್ನು ಗೆಲ್ಲಿಸಿದ ರಾಹುಲ್‌ಗೆ ಅಭಿನಂದನೆಗಳು: ಕೆ.ಟಿ ರಾಮ್ ರಾವ್

  • ದೆಹಲಿಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು – ಮಂಗಳೂರಲ್ಲಿ ಕಾರ್ಯಕರ್ತರ ಸಂಭ್ರಮ

    ದೆಹಲಿಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು – ಮಂಗಳೂರಲ್ಲಿ ಕಾರ್ಯಕರ್ತರ ಸಂಭ್ರಮ

    ಮಂಗಳೂರು: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ (Delhi Election Results) ಬಿಜೆಪಿ ಭರ್ಜರಿ ಜಯಗಳಿಸಿರುವ ಹಿನ್ನೆಲೆಯಲ್ಲಿ ಮಂಗಳೂರಲ್ಲಿ (Mangaluru) ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ.

    ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಶನಿವಾರ ವಿಜಯೋತ್ಸವ ಆಚರಿಸಿದ್ದಾರೆ. ಬಿಜೆಪಿ ಜಿಲ್ಲಾ ಕಚೇರಿಯ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ನಶೆ ಇಳಿಸಿದ ದೆಹಲಿ ಜನ, ಎಣ್ಣೆ ಏಟಿಗೆ ಎಎಪಿಗೆ ಸೋಲಿನ `ಕಿಕ್’

    ಶಾಸಕ ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ, ಮೇಯರ್ ಮನೋಜ್ ಕುಮಾರ್ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು.

    27 ವರ್ಷಗಳ ಬಳಿಕ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದ ಜಯ ಸಾಧಿಸಿದೆ. ಒಂದು ದಶಕ ಆಡಳಿತ ನಡೆಸಿದ ಎಎಪಿ ಹೀನಾಯ ಸೋಲನುಭವಿಸಿದೆ. ಕೇಜ್ರಿವಾಲ್ ಸೇರಿದಂತೆ ಪಕ್ಷದ ಘಟನಾನುಘಟಿ ನಾಯಕರು ಮಕಾಡೆ ಮಲಗಿದ್ದಾರೆ. ಇದನ್ನೂ ಓದಿ: ದೆಹಲಿ ಚುನಾವಣಾ ಫಲಿತಾಂಶ ಬಿಜೆಪಿ ಮೇಲಿನ ನಂಬಿಕೆ ವೃದ್ಧಿಸಿದೆ: ಸುಧಾಕರ್ ರೆಡ್ಡಿ

    ಸದ್ಯದ ಟ್ರೆಂಡ್ ಪ್ರಕಾರ ಬಿಜೆಪಿ 48, ಎಎಪಿ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಮೂರನೇ ಬಾರಿಯೂ ಶೂನ್ಯ ಸಾಧನೆ ಮಾಡಿದೆ.

  • ಕೇಜ್ರಿವಾಲ್ ನಶೆ ಇಳಿಸಿದ ದೆಹಲಿ ಜನ, ಎಣ್ಣೆ ಏಟಿಗೆ ಎಎಪಿಗೆ ಸೋಲಿನ `ಕಿಕ್’

    ಕೇಜ್ರಿವಾಲ್ ನಶೆ ಇಳಿಸಿದ ದೆಹಲಿ ಜನ, ಎಣ್ಣೆ ಏಟಿಗೆ ಎಎಪಿಗೆ ಸೋಲಿನ `ಕಿಕ್’

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ (Dehli Assembly Election) ಬಿಜೆಪಿ 27 ವರ್ಷಗಳ ಬಳಿಕ ಗೆಲವು ಸಾಧಿಸಿದೆ. ಈ ಮೂಲಕ ದೆಹಲಿ ಜನ ಕೇಜ್ರಿವಾಲ್ ನಶೆ ಇಳಿಸುವುದರ ಜೊತೆಗೆ ಎಣ್ಣೆ ಏಟಿಗೆ ಎಎಪಿ (AAP) ಪಕ್ಷಕ್ಕೆ ಸೋಲಿನ ಕಿಕ್ ನೀಡಿದ್ದಾರೆ.

    2014ರ ಲೋಕಸಭೆ ಚುನಾವಣೆ ವೇಳೆ ದೆಹಲಿಯಲ್ಲಿ ಎಎಪಿ ಒಂದು ಸೀಟನ್ನು ಗೆದ್ದರಲಿಲ್ಲ. ಆದರೆ 2015ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಪ್ 70ರಲ್ಲಿ 67 ಸೀಟುಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲೂ ಒಂದು ಸೀಟು ಗೆಲ್ಲದ ಎಎಪಿ 2020ರ ವಿಧಾನಸಭೆ ಚುನಾವಣೆಯಲ್ಲಿ 63 ಸೀಟುಗಳನ್ನು ಗೆದ್ದು ಬೀಗಿತ್ತು.ಇದನ್ನೂ ಓದಿ: ಜನರ ತೀರ್ಪು ಸ್ವಾಗತಿಸುತ್ತೇವೆ.. ಸೋಲನ್ನ ಹೀನಾಯ ಸೋಲು ಎಂದು ಹೇಳಲ್ಲ: ಮುಖ್ಯಮಂತ್ರಿ ಚಂದ್ರು

    ಈ ಸಂದರ್ಭದಲ್ಲಿ ದೆಹಲಿ ಜನತೆ ಕೇಂದ್ರಕ್ಕೆ ಬಿಜೆಪಿ ಮತ್ತು ಸ್ಥಳೀಯವಾಗಿ ಎಎಪಿ ಎಂಬ ತೀರ್ಮಾನಿಸಿದೆ ಎನ್ನಲಾಗಿತ್ತು. ಆದರೆ ಇದೀಗ 2025ರ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಎಲ್ಲವೂ ತಿರುಗಿ ಬಿದ್ದಿದೆ.

    ಕಳೆದೆರಡು ವರ್ಷಗಳಲ್ಲಿ ಎಎಪಿ ಪಕ್ಷಕ್ಕೆ ಹಗರಣದ ಅಲೆಗಳು ಅಪ್ಪಳಿಸಿದ್ದವು. ಮದ್ಯ ಹಗರಣದಲ್ಲಿ ಡಿಸಿಎಂ ಮನೀಷ್ ಸಿಸೋಡಿಯಾ, ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್, ಸಿಎಂ ಅರವಿಂದ್ ಕೇಜ್ರಿವಾಲ್ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಆರೋಪಿಗಳಾಗಿ ಜೈಲು ಸೇರಿದ್ದರು. ಈ ಮೂಲಕ ಸಚಿವರು ಸಾಲು ಸಾಲಾಗಿ ಹಗರಣದಲ್ಲಿ ಸಿಲುಕಿ ಜೈಲು ಸೇರಿ ಆಮ್ ಆದ್ಮಿ ಪಕ್ಷದ ವಿಶ್ವಾಸಾರ್ಹತೆಗೆ ಹಾನಿ ಎಸಗಿದರು.

    ಈ ನಡುವೆ `ಜೈಲ್ ಕಾ ಜವಾಬ್ ವೋಟ್ ಸೇ’ ಎಂದು ದೆಹಲಿಯಲ್ಲಿ ಪ್ರಚಾರ ನಡೆಸಿದ್ದರು. ಆದರೂ ಕೇಜ್ರಿವಾಲ್ ಅನುಕಂಪದ ಕ್ಯಾಂಪೇನ್‌ಗೆ ದೆಹಲಿ ಜನರು ಕರಗಲಿಲ್ಲ. ಕಡೆಗೂ ಎಣ್ಣೆ ಏಟಿಗೆ ಕೇಜ್ರಿವಾಲ್ ತಂಡ ನರಳಿ, ಕಿಕ್ ಇಳಿಸುವ ಮೂಲಕ ಮೋದಿ ತಂಡ ಗೆದ್ದು ಬೀಗಿದೆ.ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಶಾಕ್- ನಾಳೆಯಿಂದಲೇ ದರ ಏರಿಕೆ ಜಾರಿ – ಎಷ್ಟು ಕಿ.ಮೀಗೆ ಎಷ್ಟು ದರ?

     

  • ಜನರ ತೀರ್ಪು ಸ್ವಾಗತಿಸುತ್ತೇವೆ.. ಸೋಲನ್ನ ಹೀನಾಯ ಸೋಲು ಎಂದು ಹೇಳಲ್ಲ: ಮುಖ್ಯಮಂತ್ರಿ ಚಂದ್ರು

    ಜನರ ತೀರ್ಪು ಸ್ವಾಗತಿಸುತ್ತೇವೆ.. ಸೋಲನ್ನ ಹೀನಾಯ ಸೋಲು ಎಂದು ಹೇಳಲ್ಲ: ಮುಖ್ಯಮಂತ್ರಿ ಚಂದ್ರು

    ಬೆಂಗಳೂರು: ರಾಷ್ಟ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಆಡಳಿತಾರೂಢ ಎಎಪಿ ಸೋಲಿನ ಬಗ್ಗೆ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪ್ರತಿಕ್ರಿಯೆ ನೀಡಿದ್ದಾರೆ.

    ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಕಂಡಿದ್ದ ಆಮ್‌ ಆದ್ಮಿ ಪಾರ್ಟಿ ಈ ಸಲ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.‌ ಈ ಬಗ್ಗೆ ಮುಖ್ಯಮಂತ್ರಿ ಚಂದ್ರು ಅವರು ಮಾತನಾಡಿ, ಈ ಸೋಲನ್ನ ಹೀನಾಯ ಸೋಲು ಅಂತ ಹೇಳುವುದಿಲ್ಲ ಎಂದಿದ್ದಾರೆ.

    ಗೆದ್ದಿರೋರಿಗೆ ಮೊದಲು ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಪಕ್ಷ ಸೋತಿರೋದು ನಿಜ. ಅದರೆ, ಇದು ಸಂಪೂರ್ಣವಾದ ಸೋಲಲ್ಲ. ನಮ್ಮ ಪಕ್ಷದವರನ್ನೂ ಜನ ಗೆಲ್ಲಿಸಿದ್ದಾರೆ. ಜನರಲ್ಲಿ ನಮ್ಮ ಪಕ್ಷದ ಮೇಲೆ‌ ನಂಬಿಕೆ ಇದೆ ಎಂದಿದ್ದಾರೆ.

    ಬಿಜೆಪಿ ಇಡೀ ಸರ್ಕಾರವೇ ದೆಹಲಿಯ ಚುನಾವಣೆಯಲ್ಲಿ ನಿಂತಿತ್ತು. ಜೊತೆಗೆ ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರೋ ಸಂಸ್ಥೆಗಳನ್ನ ಬಳಸಿಕೊಂಡು ನಮ್ಮ ಪಕ್ಷವನ್ನ ಹೇಗಾದ್ರು ಮಾಡಿ ನಿರ್ನಾಮ ಮಾಡಬೇಕು ಅಂತ ಪಣ ತೊಟ್ಟಿದ್ದರು. ಐಟಿ, ಇಡಿ, ಚುನಾವಣಾ ಆಯೋಗವನ್ನ ಬಳಿಸಿಕೊಂಡರು ಎಂದು ಆರೋಪಿಸಿದ್ದಾರೆ.

    ಹಣ ಬಲ, ತೋಳ್ಬಲದಿಂದ ಬಿಜೆಪಿ ಗೆದ್ದಿದೆ. ಗೆದ್ದ ಪಕ್ಷ ಜನರಿಗೆ ನೀಡಿರುವ ಭರವಸೆಯನ್ನ ಈಡೇರಿಸಬೇಕು. ಅಭಿವೃದ್ಧಿ ಕಾರ್ಯಗಳನ್ನ ಮಾಡಬೇಕು. ಸೋಲನ್ನು ನಾವು ಸ್ವೀಕಾರ ಮಾಡುತ್ತೇವೆ ಎಂದು ಎಂದು ತಿಳಿಸಿದ್ದಾರೆ.

  • ಕೇಜ್ರಿ`ವಾಲ್’ ಛಿದ್ರಗೊಳಿಸಿದ ಮೋದಿ-ಶಾ ಜೋಡಿಯ ಸಾಮ, ದಾನ, ಬೇಧ, ದಂಡ ತಂತ್ರ?

    ಕೇಜ್ರಿ`ವಾಲ್’ ಛಿದ್ರಗೊಳಿಸಿದ ಮೋದಿ-ಶಾ ಜೋಡಿಯ ಸಾಮ, ದಾನ, ಬೇಧ, ದಂಡ ತಂತ್ರ?

    – ಮಿಡ್ಲ್ ಕ್ಲಾಸ್ ಹಾರ್ಟ್ ಗೆದ್ದ ಮೋದಿ ಟೀಂ

    ಮಿಡ್ಲ್ ಕ್ಲಾಸ್ ‌ಹಾರ್ಟ್ ಗೆದ್ದವರೇ ದಿಲ್ಲಿ ಗದ್ದುಗೆ ಗೆದ್ದು ಬಿಟ್ಟರಾ? 27 ವರ್ಷಗಳ ಕಾಲ‌ ಅಧಿಕಾರ ಹಿಡಿಯಲು ತಿಣುಕಾಡಿದ್ದ ಬಿಜೆಪಿ (BJP) ಈಗ ಕ್ಯಾಪಿಟಲ್ ಕ್ಯಾಪ್ಟನ್. ಮೋದಿ-ಶಾ (Modi – Amit Shah) ಜೋಡಿಯ ಚತುರೋಪಾಯಗಳು ದೈತ್ಯ ಕೇಜ್ರಿʻವಾಲ್ʼ ಕೆಡವಿ ಮಕಾಡೆ ಮಲಗಿಸಿಬಿಟ್ಟಿವೆ. ಹಾಗಾದ್ರೆ ಡೆಲ್ಲಿಯಲ್ಲಿ ಏನಾಯ್ತು? ಗೆಲುವಿನ ಸರದಾರರ ಒಳ ರಹಸ್ಯಗಳೇನು? ಇನ್ ಸೈಡ್ ಡಿಟೇಲ್ಸ್ ಇಲ್ಲಿದೆ.

    50ರ ತನಕ ಮೋದಿಗೆ ಜಾಗವಿಲ್ಲ ಎಂದಿದ್ದ ಆಪ್ ಮಲಗಿತು ಮಕಾಡೆ:
    ಅಂದು ಭ್ರಷ್ಟಾಚಾರ ವಿರೋಧಿ ಆಂದೋಲನವೇ ಎಎಪಿ ಉದಯಕ್ಕೆ ಕಾರಣ. ಆದ್ರೆ ಇಂದು ಭ್ರಷ್ಟಾಚಾರ ಆರೋಪವೇ ಎಎಪಿ ಪತನಕ್ಕೆ ನಾಂದಿ. ಅವರದೇ ಕಸಪೊರಕೆಯಿಂದ ಎಎಪಿ ಗುಡಿಸಿ ಗುಡ್ಡೇ ಹಾಕಿದೆ ಬಿಜೆಪಿ. ಇದನ್ನ ಭಾರತದ ಪ್ರಜಾಪ್ರಭುತ್ವದ ಬ್ಯೂಟಿ ಅನ್ನಬೇಕೋ? ಚುನಾವಣಾ ಚದುರಂಗದಾಟದ ಫಲಿತಾಂಶ ಅನ್ನಬೇಕೋ..? ಆದ್ರೆ ಗೆಲುವು ಗೆಲುವೇ. ಇದನ್ನೂ ಓದಿ: Delhi Election Results | ಬಜೆಟ್ ಡೇ ಸೂಪರ್ ಓವರ್‌ನಲ್ಲಿ ಸೀತಾರಾಮನ್ ʻಸಿಕ್ಸ್‌ʼ – ಬಿಜೆಪಿ ಚಾಂಪಿಯನ್‌!

    ಮೋದಿ-ಶಾ ಚತುರೋಪಾಯಗಳೇ ಡೆಲ್ಲಿ ಗೆಲ್ಲಿಸಿತಾ?
    ಅಂದಹಾಗೆ ಡೆಲ್ಲಿ ಚುನಾವಣೆಯಲ್ಲಿ ಸಾಮ, ದಾನ, ಭೇದ, ದಂಡ‌ ಮಂತ್ರಗಳನ್ನ ಬಿಜೆಪಿ ಪಠಿಸಿದಂತೆ ಕಾಣುತ್ತೆ. ಡೆಲ್ಲಿಯನ್ನ ಗೆದ್ದೇ ಗೆಲ್ಲಬೇಕೆಂಬ ಹಠ ಮೋದಿ ಅವರಿಗಿತ್ತು. ಆ ಕಾರಣಕ್ಕಾಗಿಯೇ ಕೇಜ್ರಿವಾಲ್ ವಿರುದ್ಧ ಎಲ್ಲ ಶಕ್ತಿಗಳನ್ನ ಒಟ್ಟುಗೂಡಿಸಿದ್ದು ಮೋದಿ, ಶಾ. ಲೋಕಸಭೆಯಲ್ಲಿ ದೂರಾಗಿದ್ದವರಿಗೂ ಮಣೆ ಹಾಕುವುದರ ಜೊತೆಗೆ ಜಾತಿ ಆಧಾರಿತ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ತಂತ್ರ ಫಲಿಸಿದೆ. ಕೇಜ್ರಿವಾಲ್ ಸುತ್ತ ಗಿರಕಿ ಹೊಡೆದ ಎಎಪಿಗೆ ಮೋದಿ ಟೀಂನಿಂದ ಬಿಟ್ಟ ಭ್ರಷ್ಟಾಚಾರ ಬಾಣ ನಾಟಿರುವುದು ಸ್ಪಷ್ಟ. ಇದನ್ನೂ ಓದಿ: ಜನರ ಆದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ: ಕೇಜ್ರಿವಾಲ್‌

    ಡೆಲ್ಲಿ ವಾರ್.. ಬಿಜೆಪಿಯೇ ಸ್ಟಾರ್ – ಎಎಪಿ ಢಮಾರ್:
    ಯೆಸ್, ಎಎಪಿಯನ್ನ ಮಣಿಸಲು ಬಿಜೆಪಿ ಮಾಡಿದ ಹಲವು ಕ್ಯಾಂಪೇನ್‌ಗಳು ಸಕ್ಸಸ್ ಆದಂತೆ ಕಾಣ್ತಿದೆ. ಎಎಪಿ ವಿರುದ್ಧ ಭ್ರಷ್ಟಾಚಾರ ಕ್ಯಾಂಪೇನ್, ಡೆಲ್ಲಿ ಜಾತಿ ಸಮೀಕರಣ ತಂತ್ರ, ಟ್ಯಾಕ್ಸ್ ರಿಲ್ಯಾಕ್ಸ್ -ಮಿಡ್ಲ್ ಕ್ಲಾಸ್ ಟಾರ್ಗೆಟ್, ಪ್ರಧಾನಿ ನರೇಂದ್ರ ಫೇಸ್+ಡೆವಲಪ್ಮೆಂಟ್ ವಿಶನ್, ಕುಂಭಮೇಳ ಮತ್ತು ಧರ್ಮಾಧಾರಿತ ವಿಷಯಗಳನ್ನು ಬಿಜೆಪಿ ಕ್ಯಾಂಪೇನ್ ಮಾಡಿತ್ತು. ಆದ್ರೆ ಎಎಪಿ ಆಯ್ಕೆ ಕೇಜ್ರಿವಾಲ್ ಜೈಲಿನ ಅನುಂಕಪ ನೆಚ್ಚಿಕೊಳ್ಳುವುದರ ಜೊತೆಗೆ ಭ್ರಷ್ಟಾಚಾರ ಕೂಪದ ಆರೋಪದಿಂದ ಹೊರಬರಲು ವಿಲವಿಲ ಎನ್ನುವಂತಾಯ್ತು ಎಂಬುದು ರಾಜಕೀಯ ಪಡಸಾಲೆಯ ಚರ್ಚೆ. ಇದನ್ನೂ ಓದಿ: ಶೀಷ್‌ ಮಹಲ್‌ನಿಂದ ಹೊಸ ಅಬಕಾರಿ ನೀತಿ ಹಗರಣ ವರೆಗೆ – ದೆಹಲಿಯಲ್ಲಿ ಆಪ್‌ ಸೋತಿದ್ದೇಕೆ?

    ಒಟ್ಟಿನಲ್ಲಿ ಡೆಲ್ಲಿ ಪೊಲಿಟಿಕಲ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೋದಿ-ಶಾ ರಕ್ಷಣಾತ್ಮಕ ಜೊತೆಯಾಟದಿಂದ ಎಎಪಿ ಕಟ್ಟಿದ ಕೇಜ್ರಿ ‘ವಾಲ್’ ಛಿದ್ರ ಛಿದ್ರವಾಗಿದ್ರೆ, ಬಜೆಟ್ ಡೇ ಸೂಪರ್ ಓವರ್ ನಲ್ಲಿ ನಿರ್ಮಲಾ ಸೀತಾರಾಮನ್ ಸೂಪರ್ ಸಿಕ್ಸ್ ನಿಂದ ಬಿಜೆಪಿಗೆ ಬೂಸ್ಟ್ ಸಿಕ್ಕಿ 27 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕೇರಿದೆ. ಆದ್ರೆ ಎಎಪಿ ಟೀಂನಲ್ಲಿ ಕ್ಯಾಪ್ಟನ್ ತಂತ್ರ ಕೈ ಕೊಡುವುದರ ಜೊತೆಗೆ ಹಿಟ್ ವಿಕೆಟ್ ಗಳು ಜಾಸ್ತಿ ಆಗಿ, ಚಾಂಪಿಯನ್ ಪಟ್ಟದಿಂದ ಎಎಪಿ ಔಟ್ ಆಗಿದ್ರೆ, ‘ಕೈ’ ಜಾರಿದ ಮೈತ್ರಿ ಕ್ಯಾಚ್ ನಿಂದ ಕಂಗೆಟ್ಟಿದ್ದ ಟೀಂ ಕಾಂಗ್ರೆಸ್ ಕಳಪೆ ಪ್ರದರ್ಶನನಿಂದ ಮತ್ತೆ ಡಕ್ ಔಟ್ ಆಗಿರೋದಂತೂ ಸತ್ಯ.  ಇದನ್ನೂ ಓದಿ: ಕಾಂಗ್ರೆಸ್‌ ಹ್ಯಾಟ್ರಿಕ್‌ ಸಾಧನೆ ಮಾಡಿದೆ, ಡಿಕೆಶಿ ಗ್ಯಾರಂಟಿ ಠುಸ್‌ ಪಟಾಕಿ ಆಗಿದೆ: ವಿಜಯೇಂದ್ರ ವ್ಯಂಗ್ಯ

  • ಶೀಷ್‌ ಮಹಲ್‌ನಿಂದ ಹೊಸ ಅಬಕಾರಿ ನೀತಿ ಹಗರಣ ವರೆಗೆ – ದೆಹಲಿಯಲ್ಲಿ ಆಪ್‌ ಸೋತಿದ್ದೇಕೆ?

    ಶೀಷ್‌ ಮಹಲ್‌ನಿಂದ ಹೊಸ ಅಬಕಾರಿ ನೀತಿ ಹಗರಣ ವರೆಗೆ – ದೆಹಲಿಯಲ್ಲಿ ಆಪ್‌ ಸೋತಿದ್ದೇಕೆ?

    ನವದೆಹಲಿ: ಬಿಜೆಪಿಯ ‘ಶೀಷ್‌ ಮಹಲ್‌’ (Sheesh Mahal) ಆರೋಪ, ಹೊಸ ಅಬಕಾರಿ ನೀತಿ (Liquor Policy) ಹಗರಣದಲ್ಲಿ ಘಟಾನುಘಟಿ ನಾಯಕರೇ ಜೈಲುಪಾಲು.. ಹೀಗೆ ಆಡಳಿತಾವಧಿಯಲ್ಲಿ ಕೊನೇ ಘಳಿಗೆಯಲ್ಲಿ ಎದುರಾದ ಆರೋಪಗಳೇ ದೆಹಲಿಯಲ್ಲಿ ಆಪ್‌ ಸೋಲಿಗೆ ಪ್ರಮುಖ ಕಾರಣಗಳು ಎಂದು ವಿಶ್ಲೇಷಿಸಲಾಗಿದೆ.

    ದೆಹಲಿಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ? ಆಡಳಿತಾರೂಢ ಎಎಪಿ ಸೋಲಿಗೆ ಕಾರಣಗಳೇನು? ಇದನ್ನೂ ಓದಿ: ಪ್ರಧಾನಿ ಮೋದಿಯವರ ಅಭಿವೃದ್ಧಿ ಆಡಳಿತ ನೋಡಿ ಜನ ಬಿಜೆಪಿ ಗೆಲ್ಲಿಸಿದ್ದಾರೆ: ಬೊಮ್ಮಾಯಿ

    ಆಡಳಿತ ವಿರೋಧಿ
    2015 ಮತ್ತು 2020 ರ ಚುನಾವಣೆಗಳಲ್ಲಿ ದೆಹಲಿಯಲ್ಲಿ ಎಎಪಿ ದೊಡ್ಡ ಗೆಲುವು ಸಾಧಿಸಿತು. ಎರಡು ಅವಧಿಗಳಲ್ಲಿ ಆರೋಗ್ಯ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಅಭೂತಪೂರ್ವ ಕೆಲಸಗಳು ಆದವು. ವಿದ್ಯುತ್ ಮತ್ತು ನೀರಿನ ಸಬ್ಸಿಡಿಗಳು ಮತದಾರರನ್ನು ಸಂತೋಷಪಡಿಸಿದವು. ಈ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದರೂ, ವಿಧಾನಸಭಾ ಚುನಾವಣೆಯ ಸಮಯದಲ್ಲಿ ನೆಲ ಕಂಡುಕೊಳ್ಳಲು ಹೆಣಗಾಡಿತು.

    ಕಾಲಾನಂತರದಲ್ಲಿ, ದೆಹಲಿಯ ವಾಯುಮಾಲಿನ್ಯ ಸೇರಿದಂತೆ ಈಡೇರದ ಭರವಸೆಗಳು ದೆಹಲಿ ನಿವಾಸಿಗಳನ್ನು ಕಾಡಲು ಪ್ರಾರಂಭಿಸಿದವು. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತನ್ನ ಕಾರ್ಯನಿರ್ವಹಣೆಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು ಆಡಳಿತಾರೂಢ ಎಎಪಿ ಆರೋಪಿಸಿತು. ಆದರೆ, 10 ವರ್ಷ ಆಡಳಿತ ನಡೆಸಿದ ಎಎಪಿ ನೆಪವಾಗಿ ಹೀಗೆ ಆರೋಪ ಮಾಡುತ್ತಿದೆ ಎಂದೇ ಜನರು ಭಾವಿಸಿದರು. ಕೇಂದ್ರದೊಂದಿಗೆ ಎಎಪಿಯ ನಿರಂತರ ಜಟಾಪಟಿ ಹೊತ್ತಿನಲ್ಲೇ ಬಿಜೆಪಿಯ ‘ಡಬಲ್ ಎಂಜಿನ್’ ಭರವಸೆ ಜನಸಾಮಾನ್ಯರಿಗೆ ಇಷ್ಟವಾಯಿತು. ಅದೀಗ, ಫಲಿತಾಂಶದಲ್ಲಿ ಕಂಡುಬಂದಿದೆ. ಇದನ್ನೂ ಓದಿ: Delhi Election Results | ಬಜೆಟ್ ಡೇ ಸೂಪರ್ ಓವರ್‌ನಲ್ಲಿ ಸೀತಾರಾಮನ್ ʻಸಿಕ್ಸ್‌ʼ – ಬಿಜೆಪಿ ಚಾಂಪಿಯನ್‌!

    ಶೀಷ್‌ ಮಹಲ್‌
    ಚುನಾವಣೆ ಸಮೀಪದ ಹೊತ್ತಲ್ಲೇ, ಕೇಜ್ರಿವಾಲ್‌ ಮತ್ತು ದೆಹಲಿ ಸಿಎಂ ಅತಿಶಿ ಅವರಿಗೆ ನೀಡಿದ್ದ ಬಂಗ್ಲೆ (ಶೀಷ್‌ ಮಹಲ್)‌ ವಿಚಾರವಾಗಿ ಎಎಪಿ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆಯಿತು. ಈ ಶೀಷ್‌ ಮಹಲ್‌ಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಗಂಭೀರ ಆರೋಪ ಹೊರಿಸಲಾಯಿತು. ಚುನಾವಣೆ ಹೊತ್ತಲ್ಲೇ ಬಿಜೆಪಿಯ ಗಂಭೀರ ಆರೋಪವು ಎಎಪಿಗೆ ನುಂಗಲಾರದ ತುತ್ತಾಗಿತ್ತು.

    ದೆಹಲಿ ಮುಖ್ಯಮಂತ್ರಿ ಕಚೇರಿ ನಿರ್ಮಾಣಕ್ಕೆ 33 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಮೂರು ಬಾರಿ ದುಬಾರಿ ವಸ್ತುಗಳನ್ನು ಬಳಸಿಯೇ ಈ ಮನೆ ನವೀಕರಣ ಮಾಡಲಾಗಿದೆ ಎಂದು ಬಿಜೆಪಿ ಆರೋಪ ಮಾಡಿತ್ತು. ಇದು ಕೂಡ ದೆಹಲಿ ಚುನಾವಣಾ ಫಲಿತಾಂಶದಲ್ಲಿ ಪರಿಣಾಮ ಬೀರಿದೆ. ಇದನ್ನೂ ಓದಿ: ದೆಹಲಿಯಲ್ಲಿ ಸುಳ್ಳಿನ ಆಳ್ವಿಕೆ ಕೊನೆಗೊಂಡಿದೆ: ಅಮಿತ್ ಶಾ

    ಬಿಜೆಪಿಯ ‘ಶೀಷ್‌ ಮಹಲ್’ ಆರೋಪಕ್ಕೆ ‘ರಾಜಮಹಲ್’ ಎಂಬ ಪ್ರತ್ಯಾರೋಪವನ್ನು ಎಎಪಿ ಆಗ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಶ್ರೀಮಂತ ಜೀವನಶೈಲಿ ನಡೆಸುತ್ತಿದ್ದಾರೆಂದು ಪ್ರತಿದಾಳಿ ನಡೆಸಿತ್ತು. ಆದರೆ, ಬಿಜೆಪಿಯ ನಿರಂತರ ಪ್ರಚಾರವು ಮತದಾರರ ಮೇಲೆ ಪ್ರಭಾವ ಬೀರಿದೆ.

    ಹೊಸ ಅಬಕಾರಿ ನೀತಿ ಹಗರಣ
    ದೆಹಲಿ ಆಡಳಿತಾವಧಿಯಲ್ಲಿ ಎಎಪಿ ವಿರುದ್ಧ ಕೇಳಿಬಂದ ಆರೋಪ ಅಬಕಾರಿ ನೀತಿ ಹಗರಣ. ದೆಹಲಿಯಲ್ಲಿ ಈಗ ರದ್ದುಗೊಂಡಿರುವ ಮದ್ಯ ನೀತಿಯ ಸುತ್ತಲಿನ ಭ್ರಷ್ಟಾಚಾರ ಆರೋಪಗಳು ಎಎಪಿಯಲ್ಲಿ ಕೋಲಾಹಲ ಸೃಷ್ಟಿಸಿತು. ಹೊಸ ನೀತಿಯು ಮದ್ಯದ ಬಾಟಲಿಗಳ ಮೇಲೆ ‘ಒಂದನ್ನು ಖರೀದಿಸಿದರೆ, ಮತ್ತೊಂದು ಉಚಿತ’ ಎಂದು ಬರೆದು ನೀಡುತ್ತಿದೆ. ಕೇಜ್ರಿವಾಲ್ ಸರ್ಕಾರವು ‘ದೆಹಲಿಯನ್ನು ಕುಡುಕರ ನಗರವನ್ನಾಗಿ ಪರಿವರ್ತಿಸುತ್ತಿದೆ’ ಎಂದು ಬಿಜೆಪಿ ಆರೋಪಿಸಿತ್ತು. ಅಲ್ಲದೇ, ಮದ್ಯ ನೀತಿ ಹಗರಣದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದೆ ಎಂದು ಬಿಜೆಪಿ ದೂರಿತ್ತು. ಇದನ್ನೂ ಓದಿ: ಮುಸ್ಲಿಮ್‌ ಬಾಹುಳ್ಯ ಇರೋ ಮುಸ್ತಫಾಬಾದ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

    ಕೇಂದ್ರ ಸಂಸ್ಥೆಗಳ ತನಿಖೆಗಳು ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಸೇರಿದಂತೆ ಉನ್ನತ ನಾಯಕರನ್ನು ಬಂಧಿಸಲು ಕಾರಣವಾಯಿತು. ಸಿಸೋಡಿಯಾ ಬಂಧನದ ಬಳಿಕ ಉಪಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರು. ಎಎಪಿ ತನ್ನ ಸಂಪುಟವನ್ನು ಪುನರ್ರಚಿಸಬೇಕಾಯಿತು. ನಂತರ ಕೇಜ್ರಿವಾಲ್ ಅವರನ್ನು ಬಂಧಿಸಲಾಯಿತು. ಐದು ತಿಂಗಳು ಜೈಲಿನಲ್ಲಿಯೇ ಇದ್ದರು. ಪ್ರಮುಖ ನಾಯಕರ ಬಂಧನವು ಎಎಪಿ ಪ್ರಬಲ್ಯ ಕಳೆದುಕೊಳ್ಳಲು ಕಾರಣವಾಯಿತು.

    ಈ ಎಲ್ಲಾ ಕಾರಣಗಳು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಕುರ್ಚಿ ಕಳೆದುಕೊಳ್ಳಲು ಕಾರಣವಾಯಿತು. ಆಪ್‌ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿ ಚುನಾವಣೆ ಪ್ರಣಾಳಿಕೆಯಲ್ಲಿ ದೆಹಲಿ ಜನತೆಗೆ ಬಿಜೆಪಿ ನೀಡಿದ ಭರವಸೆಗಳು ಕೆಲಸ ಮಾಡಿವೆ. ದೇಶದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿಯಲ್ಲಿ ಮಧ್ಯಮ ವರ್ಗದ ಜನರಿದ್ದಾರೆ. ಬಜೆಟ್‌ ಸಂದರ್ಭದಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ನೀಡಿದ್ದು, ಬಿಜೆಪಿಗೆ ವರದಾನವಾಗಿದೆ. ಇದನ್ನೂ ಓದಿ: ಜನಶಕ್ತಿಯೇ ಸರ್ವಶ್ರೇಷ್ಠ – ಅಭಿವೃದ್ಧಿ, ಉತ್ತಮ ಆಡಳಿತ ಗೆಲ್ಲುತ್ತದೆ: ಮೋದಿ

  • ದೆಹಲಿ ಚುನಾವಣೆಯಲ್ಲಿ ಸೋತ AAPಯನ್ನು ಕೌರವರಿಗೆ ಹೋಲಿಸಿದ ಸ್ವಾತಿ ಮಲಿವಾಲ್‌

    ದೆಹಲಿ ಚುನಾವಣೆಯಲ್ಲಿ ಸೋತ AAPಯನ್ನು ಕೌರವರಿಗೆ ಹೋಲಿಸಿದ ಸ್ವಾತಿ ಮಲಿವಾಲ್‌

    – ವೈರಲ್‌ ಆಯ್ತು ‘ದ್ರೌಪದಿ ವಸ್ತ್ರಾಪಹರಣ’ ಪೋಸ್ಟ್‌

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ (Delhi Election Results) ಹೀನಾಯ ಸೋಲನುಭವಿಸಿದ ಎಎಪಿಯನ್ನು ಕೌರವರಿಗೆ ಹೋಲಿಸಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ (Swati Maliwal) ಟಾಂಗ್‌ ಕೊಟ್ಟಿದ್ದಾರೆ.

    ರಾಷ್ಟ್ರ ರಾಜಧಾನಿಯಲ್ಲಿ ತನ್ನ ದಶಕದ ಆಳ್ವಿಕೆಯ ಅಂತ್ಯವನ್ನು ಎಎಪಿ ಕಂಡಿದೆ. ಆಪ್‌ ಸೋಲಿಗೆ ಟಕ್ಕರ್‌ ಕೊಡಲು ಸ್ವಾತಿ ಮಲಿವಾಲ್ ಹಾಕಿರುವ ‘ದ್ರೌಪದಿ’ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಮುಸ್ಲಿಮ್‌ ಬಾಹುಳ್ಯ ಇರೋ ಮುಸ್ತಫಾಬಾದ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

    ಮಹಾಕಾವ್ಯ ಮಹಾಭಾರತದ ದ್ರೌಪದಿಯ ‘ಚೀರ್‌ಹರನ್’ (ವಸ್ತ್ರಾಪಹರಣ) ಚಿತ್ರಿಸುವ ವರ್ಣಚಿತ್ರವನ್ನು ಒಳಗೊಂಡ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಮಲಿವಾಲ್‌ ಹಂಚಿಕೊಂಡಿದ್ದಾರೆ.

    ಎಎಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನವದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಸೋತಿದ್ದಾರೆ. 27 ವರ್ಷಗಳ ನಂತರ ಬಿಜೆಪಿ ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ.

    ಒಂದು ಕಾಲದಲ್ಲಿ ಕೇಜ್ರಿವಾಲ್ ಅವರ ನಿಕಟವರ್ತಿಯಾಗಿದ್ದ ಮಲಿವಾಲ್ ಇತ್ತೀಚಿನ ದಿನಗಳಲ್ಲಿ ಅವರ ಅತ್ಯಂತ ಕಟು ಟೀಕಾಕಾರರಲ್ಲಿ ಒಬ್ಬರಾಗಿದ್ದಾರೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದ ಅವರು, ಕೇಜ್ರಿವಾಲ್ ಅವರ ನಾಯಕತ್ವ ಮತ್ತು ಅವರ ಪಕ್ಷದ ನಡೆಯನ್ನು ಸಾರ್ವಜನಿಕವಾಗಿ ಟೀಕಿಸಿದ್ದರು. ಇದನ್ನೂ ಓದಿ: ಕಾಂಗ್ರೆಸ್‌ ಹ್ಯಾಟ್ರಿಕ್‌ ಸಾಧನೆ ಮಾಡಿದೆ, ಡಿಕೆಶಿ ಗ್ಯಾರಂಟಿ ಠುಸ್‌ ಪಟಾಕಿ ಆಗಿದೆ: ವಿಜಯೇಂದ್ರ ವ್ಯಂಗ್ಯ

    2024ರ ಮೇ ತಿಂಗಳಲ್ಲಿ ಸಿಎಂ ಅಧಿಕೃತ ನಿವಾಸದಲ್ಲಿ ಕೇಜ್ರಿವಾಲ್‌ ಅವರ ಆಪ್ತ ಸಹಾಯಕ ಬಿಭಾವ್‌ ಕುಮಾರ್‌ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಮಲಿವಾಲ್ ಆರೋಪಿಸಿದ್ದರು. ತುರ್ತು ಸಮಸ್ಯೆಗಳನ್ನು ಚರ್ಚಿಸಲು ಭೇಟಿ ನೀಡಿದ್ದರು. ಆಗ ಕೇಜ್ರಿವಾಲ್‌ ನಿವಾಸದಲ್ಲಿ ಇರಲಿಲ್ಲ. ಈ ವೇಳೆ ಬಿಭಾವ್‌ ನನ್ನ ಮೇಲೆ ದೌರ್ಜನ್ಯ ಎಸಗಿದ್ದರೆಂದು ಮಲಿವಾಲ್‌ ಬೇಸರ ಹೊರಹಾಕಿದ್ದರು. ಈ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು.

  • ದೆಹಲಿ ಸಿಎಂ ಅತಿಶಿಗೆ ಗೆಲುವು – ಕಲ್ಕಾಜಿ ಕ್ಷೇತ್ರ ಉಳಿಸಿಕೊಂಡ ಆಪ್ ನಾಯಕಿ

    ದೆಹಲಿ ಸಿಎಂ ಅತಿಶಿಗೆ ಗೆಲುವು – ಕಲ್ಕಾಜಿ ಕ್ಷೇತ್ರ ಉಳಿಸಿಕೊಂಡ ಆಪ್ ನಾಯಕಿ

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಲ್ಕಾಜಿ ಕ್ಷೇತ್ರದಿಂದ ಸಿಎಂ ಅತಿಶಿ ಗೆಲುವಿನ ನಗೆ ಬೀರಿದ್ದಾರೆ.

    ಕಲ್ಕಾಜಿ ಕ್ಷೇತ್ರವು ಯಾರ ಪಾಲಾಗಲಿದೆ ಎಂಬುದು ಕೊನೆ ವರೆಗಿನ ಕುತೂಹಲವಾಗಿತ್ತು. ಮತ ಎಣಿಕೆಯಲ್ಲಿ ಬಿಜೆಪಿ ಮತ್ತು ಎಎಪಿ ನಡುವೆ ತೀವ್ರ ಪೈಪೋಟಿ ಇತ್ತು. ಆರಂಭದಲ್ಲಿ ದೆಹಲಿ ಸಿಎಂ ಅತಿಶಿ ಹಿನ್ನಡೆ ಅನುಭವಿಸಿದ್ದರು.

    2020ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಅತಿಶಿ ಗೆದ್ದಿದ್ದರು. ಈ ಬಾರಿ ಬಿಜೆಪಿಯ ರಮೇಶ್‌ ಬಿಧುರಿ ಹಾಗೂ ಕಾಂಗ್ರೆಸ್‌ನ ಅಲ್ಕಾ ಲಂಬಾ ವಿರುದ್ಧ ಕಣಕ್ಕಿಳಿದಿದ್ದರು. ಬಿಜೆಪಿ ಅಭ್ಯರ್ಥಿ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿದ್ದರು.

    ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಯ ಭರ್ಜರಿ ಗೆಲುವು ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಉನ್ನತ ನಾಯಕರ ಆಘಾತಕಾರಿ ಸೋಲುಗಳ ಹೊರತಾಗಿಯೂ ಮುಖ್ಯಮಂತ್ರಿ ಅತಿಶಿ ದಕ್ಷಿಣ ದೆಹಲಿಯ ಕಲ್ಕಾಜಿ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಎಎಪಿ ನಾಯಕರಾದ ಅರವಿಂದ್‌ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾ ಜೈಲು ಸೇರಿದಾಗ, ಸರ್ಕಾರವನ್ನು ಅತಿಶಿ ಮುನ್ನಡೆಸಿದ್ದರು. ಕೇಜ್ರಿವಾಲ್‌ ಜೈಲಿಂದ ಹೊರಬಂದಾಗ, ನಾಯಕಿ ಅತಿಶಿ ಅವರು ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

  • ದೆಹಲಿ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾಗೆ ಹೀನಾಯ ಸೋಲು

    ದೆಹಲಿ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾಗೆ ಹೀನಾಯ ಸೋಲು

    – ದಿಲ್ಲಿ ಸರ್ಕಾರದ 18 ಖಾತೆಗಳನ್ನು ನಿರ್ವಹಿಸಿದ್ದ ನಾಯಕನ ಸೋಲಿಸಿದ ಬಿಜೆಪಿ ಅಭ್ಯರ್ಥಿ

    ನವದೆಹಲಿ: ದೆಹಲಿ ವಿಧಾನಸಭಾ (Delhi Election Results) ಚುನಾವಣೆಯಲ್ಲಿ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾ (Manish Sisodia) ಹೀನಾಯ ಸೋಲನುಭವಿಸಿದ್ದಾರೆ.

    ಜಂಗ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಸೋಡಿಯಾ ವಿರುದ್ಧ ಬಿಜೆಪಿ ಅಭ್ಯರ್ಥಿ ತರ್ವೀಂದರ್‌ ಸಿಂಗ್‌ ಗೆಲುವು ಸಾಧಿಸಿದ್ದಾರೆ. ಕೇವಲ 636 ಮತಗಳ ಅಂತರದಿಂದ ಎಎಪಿ ಹಿರಿಯ ನಾಯಕ ಮುಖಭಂಗ ಅನುಭವಿಸಿದ್ದಾರೆ. ಇದನ್ನೂ ಓದಿ: ನಮ್ಮನ್ನು ಸೋಲಿಸಲು ಮೋದಿಗೆ ಇನ್ನೊಂದು ಜನ್ಮ ಬೇಕು ಎಂದಿದ್ದ ಕೇಜ್ರಿವಾಲ್‌ಗೆ ಸೋಲು

    ಜಂಗ್‌ಪುರ ಕ್ಷೇತ್ರದಲ್ಲಿ ಸಿಂಗ್‌ ಸಮುದಾಯ ಪ್ರಾಬಲ್ಯ ಹೊಂದಿದೆ. ಅದೇ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಬಿಜೆಪಿ ರೂಪಿಸಿದ್ದ ತಂತ್ರಗಾರಿಕೆ ಕೆಲಸ ಮಾಡಿದೆ. ಇದೇ ಮೊದಲ ಬಾರಿಗೆ ಸ್ಪರ್ಧಿಸಿ ತರ್ವೀಂದರ್‌ ಸಿಂಗ್‌ ಗೆದ್ದು ಬೀಗಿದ್ದಾರೆ.

    ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಮನೀಶ್‌ ಸಿಸೋಡಿಯಾ ಜೈಲು ಪಾಲಾಗಿದ್ದರು. ಹಲವು ತಿಂಗಳು ಜೈಲಲ್ಲಿ ಕಳೆದು ನಂತರ ರಿಲೀಸ್‌ ಆಗಿದ್ದರು. ದೆಹಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆಗಳನ್ನು ತಂದ ಶ್ರೇಯ ಸಿಸೋಡಿಯಾಗೆ ಸಲ್ಲುತ್ತದೆ. ಆದರೆ, ನಂತರದ ದಿನಗಳಲ್ಲಿ ದೆಹಲಿ ಸರ್ಕಾರದ ವಿರುದ್ಧ ಕೇಳಿಬಂದ ಹಗರಣಗಳ ಆರೋಪವು ಎಎಪಿ ಮುಳುವಿಗೆ ಕಾರಣವಾಯಿತು. ಇದನ್ನೂ ಓದಿ: ದೆಹಲಿ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾಗೆ ಹೀನಾಯ ಸೋಲು

    ಕೇಜ್ರಿವಾಲ್‌ ನೇತೃತ್ವದ ಸರ್ಕಾರದಲ್ಲಿ ಗೃಹ, ಹಣಕಾಸು, ಶಿಕ್ಷಣ, ಆರೋಗ್ಯ, ಲೋಕೋಪಯೋಗಿ ಇಲಾಖೆ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಸೇರಿದಂತೆ 18 ಪ್ರಮುಖ ಖಾತೆಗಳನ್ನು ಸಿಸೋಡಿಯಾ ನಿರ್ವಹಿಸುತ್ತಿದ್ದರು. ಸರ್ಕಾರವನ್ನು ತಮ್ಮ ಹೆಗಲ ಮೇಲೆ ಹೊತ್ತು ಯಶಸ್ವಿಯಾಗಿ ನಿರ್ವಹಿಸಿದ್ದರು. ಕೇಜ್ರಿವಾಲ್ ಅವರ ಅತ್ಯಂತ ವಿಶ್ವಾಸಾರ್ಹ ಸಹಾಯಕ ಆಗಿದ್ದರು.